ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಪುನರ್ಭೇಟಿಗಾಗಿ ತಳಪಾಯ ಹಾಕಿ
ಏಕೆ ಪ್ರಾಮುಖ್ಯ: ನಾವು ಸುವಾರ್ತೆ ಸಾರುವಾಗ ಯಾರಾದರೂ ಆಸಕ್ತಿ ತೋರಿಸಿದರೆ ಅವರನ್ನು ಪುನರ್ಭೇಟಿ ಮಾಡಲು ಪ್ರಯತ್ನಿಸುತ್ತೇವೆ. ನಾವು ಬಿತ್ತಿದ ಸತ್ಯವೆಂಬ ಬೀಜಕ್ಕೆ ನೀರು ಹಾಕುವ ಉದ್ದೇಶದಿಂದ ಅವರಿಗೆ ಬಿಡುವಿರುವಾಗ ಭೇಟಿ ಮಾಡುತ್ತೇವೆ. (1ಕೊರಿಂ.3:6) ಆದರೆ ಹಾಗೆ ಮಾಡಲಿಕ್ಕಾಗಿ ಒಂದೊಳ್ಳೆ ತಳಪಾಯ ಹಾಕಬೇಕಾಗಿ ಬರುತ್ತದೆ. ಇದನ್ನು ಮಾಡಲು, “ಮತ್ತೆ ಯಾವಾಗ ಬರಲಿ” ಎಂದು ಕೇಳಿ. ಮುಂದಿನ ಬಾರಿ ಚರ್ಚಿಸಲಿಕ್ಕೆ ಒಂದು ಪ್ರಶ್ನೆಯನ್ನು ಕೇಳಿ ಬಂದರೆ ಇನ್ನೂ ಉತ್ತಮವಾಗಿರುತ್ತದೆ. ಹೀಗೆ ಮಾಡುವಾಗ ಮನೆಯವನು ನಮ್ಮ ಭೇಟಿಗಾಗಿ ಎದುರು ನೋಡುತ್ತಿರುತ್ತಾನೆ. ನಾವು ಕೊಟ್ಟ ಸಾಹಿತ್ಯದಲ್ಲೇ ಆ ಪ್ರಶ್ನೆಗೆ ಉತ್ತರ ಇರುವುದಾದರೆ ಅದನ್ನು ಮನೆಯವನು ಬೇಗ ಓದಿಬಿಡುತ್ತಾನೆ. ಪುನರ್ಭೇಟಿಗಾಗಿ ತಳಪಾಯ ಹಾಕುವುದಾದರೆ ಮುಂದಿನ ಭೇಟಿಯಲ್ಲಿ ಯಾವುದರ ಬಗ್ಗೆ ಚರ್ಚಿಸುತ್ತೇವೆಂದು ನಮಗೂ ಮನೆಯವನಿಗೂ ಮೊದಲೇ ಗೊತ್ತಿರುತ್ತದೆ. ಇದರಿಂದ ಪುನರ್ಭೇಟಿ ಮಾಡಲು ಸುಲಭವಾಗುತ್ತದೆ. ಪುನಃ ಅವರನ್ನು ಭೇಟಿ ಮಾಡಿದಾಗ “ಹೋದ ಸಲ ನಾನು ಕೇಳಿದ ಪ್ರಶ್ನೆಯ ಬಗ್ಗೆ ಮಾತಾಡಲು ಬಂದಿದ್ದೇನೆ” ಎಂದು ಹೇಳಿ ನಮ್ಮ ಸಂಭಾಷಣೆಯನ್ನು ಮುಂದುವರಿಸಬಹುದು.
ಹೇಗೆ ಮಾಡುವುದು:
• ಮನೆ-ಮನೆ ಸೇವೆಗಾಗಿ ನಿರೂಪಣೆಗಳನ್ನು ತಯಾರಿಸುವಾಗಲೇ ಪುನರ್ಭೇಟಿ ಮಾಡಲು ಯಾವ ಪ್ರಶ್ನೆಯನ್ನು ಕೇಳಬಹುದು ಎನ್ನುವುದನ್ನೂ ತಯಾರಿಸಿ. ನೀವು ಕೇಳುವ ಪ್ರಶ್ನೆ, ಆ ದಿನ ಯಾವ ಸಾಹಿತ್ಯ ಕೊಡುತ್ತೀರೋ ಅದರ ಮೇಲೆ ಆಧರಿತವಾಗಿರಬೇಕು ಅಥವಾ ಬೈಬಲ್ ಅಧ್ಯಯನಕ್ಕೆಂದು ಇರುವ ಸಾಹಿತ್ಯದ ಮೇಲೆ ಆಧರಿತವಾಗಿರಬೇಕು. ನೀವು ಬೈಬಲ್ ಅಧ್ಯಯನಕ್ಕೆ ಸಂಬಂಧ ಪಟ್ಟಂಥ ಸಾಹಿತ್ಯದಿಂದ ಪ್ರಶ್ನೆ ಕೇಳುವುದಾದರೆ ಮುಂದಿನ ಭೇಟಿಯಲ್ಲಿ ಆ ಸಾಹಿತ್ಯವನ್ನು ಪರಿಚಯಿಸಲು ಸುಲಭವಾಗುತ್ತದೆ.
• ನೀವು ಆಸಕ್ತ ವ್ಯಕ್ತಿಯೊಂದಿಗೆ ಮಾತಾಡಿ ಮುಗಿಸುವಾಗ, ಪುನಃ ಅವರೊಂದಿಗೆ ಮಾತಾಡಲು ಬಯಸುತ್ತೀರೆಂದು ತಿಳಿಸಿ ಮತ್ತು ಮೊದಲೇ ತಯಾರಿಸಿದ ಪ್ರಶ್ನೆಯನ್ನೂ ಕೇಳಿ. ಕೆಲವೊಂದು ಸೇವಾಕ್ಷೇತ್ರಗಳಲ್ಲಿ ವಾಸಿಸುವ ಜನರಿಗೆ ಬಿಡುವೇ ಇಲ್ಲದಿರುವುದರಿಂದ ನೀವು ಪುನಃ ಭೇಟಿಯಾಗುವುದು ಅವರಿಗೆ ಇಷ್ಟವಾಗದಿರಬಹುದು. ಹಾಗಿರುವುದಾದರೆ, “ಇದರ ಬಗ್ಗೆ ಚರ್ಚಿಸಲು ನಾನು ಮುಂದಿನ ವಾರದಲ್ಲಿ ಯಾವಾಗ ಬಂದರೆ ಚೆನ್ನಾಗಿರುತ್ತದೆ?” ಅಂತ ಕೇಳಿ. [ಉತ್ತರಕ್ಕಾಗಿ ಕಾಯಿರಿ.] “ನಾನು ಬಂದಾಗ ಇದರ ಬಗ್ಗೆ 5-10 ನಿಮಿಷ ಮಾತಾಡುತ್ತೇನೆ. ಅಕಸ್ಮತ್ತಾಗಿ ನಿಮಗೆ ತುಂಬ ಕೆಲಸ ಇರುವುದಾದರೆ ಹೇಳಿ, ಪರವಾಗಿಲ್ಲ. ನಿಮಗೆ ಬಿಡುವಿದ್ದಾಗಲೇ ಬರುತ್ತೇನೆ” ಎಂದು ತಿಳಿಸಿ.
• ನಿರ್ದಿಷ್ಟ ಸಮಯಕ್ಕೆ ಬರುತ್ತೀರೆಂದು ಮನೆಯವನಿಗೆ ಮಾತುಕೊಟ್ಟಿರುವುದಾದರೆ ಅದೇ ಸಮಯಕ್ಕೆ ಹೋಗಿ. (ಮತ್ತಾ. 5:37) ಪುನರ್ಭೇಟಿಯ ಕೊನೆಯಲ್ಲಿ ಮುಂದಿನ ಭೇಟಿಗಾಗಿ ತಳಪಾಯ ಹಾಕಿಬನ್ನಿ.
ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ:
• ನಿರೂಪಣೆಗಳನ್ನು ತಯಾರಿಸುವಾಗಲೇ ಪುನರ್ಭೇಟಿಗಾಗಿ ಒಂದು ಪ್ರಶ್ನೆಯನ್ನೂ ತಯಾರಿಸಿ. ನಿಮ್ಮ ಜೊತೆ ಸೇವೆ ಮಾಡುವ ಪ್ರಚಾರಕರಿಗೆ ಅದನ್ನು ತಿಳಿಸಿ.