ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಕೋಪಗೊಂಡ ಮನೆಯವನೊಂದಿಗೆ ಸಮಾಧಾನದಿಂದಿರಿ
ಏಕೆ ಪ್ರಾಮುಖ್ಯ: ಸೇವೆಯಲ್ಲಿ ನಾವು ಭೇಟಿಯಾಗುವ ತುಂಬ ಜನರು ಸಮಾಧಾನದಿಂದ ಮಾತಾಡುತ್ತಾರೆ. ಆದರೆ ಯೇಸು ಹೇಳಿದಂತೆ ನಮ್ಮನ್ನು ದ್ವೇಷಿಸುವ ಜನರೂ ಇರುತ್ತಾರೆ. (ಯೋಹಾ. 17:14) ಹಾಗಾಗಿ ಯಾರಾದರೂ ಕೋಪ ಮಾಡಿಕೊಂಡರೆ ಆಶ್ಚರ್ಯಪಡುವ ಅಗತ್ಯ ಇಲ್ಲ. ಅಂಥ ಸಂದರ್ಭದಲ್ಲಿ ಯೆಹೋವನಿಗೆ ಇಷ್ಟವಾಗುವ ರೀತಿಯಲ್ಲಿ ಅಂದರೆ ಸಮಾಧಾನವಾಗಿ ನಡೆದುಕೊಳ್ಳಬೇಕು. ಕಾರಣ, ನಾವು ಯೆಹೋವನನ್ನು ಪ್ರತಿನಿಧಿಸುವ ಜನರಾಗಿದ್ದೇವೆ. (ರೋಮ. 12:17-21; 1 ಪೇತ್ರ 3:15) ಹೀಗೆ ಮಾಡಿದರೆ ಪರಿಸ್ಥಿತಿ ಕೈ ಮೀರಿ ಹೋಗದಂತೆ ತಡೆಯುತ್ತೇವೆ. ಜೊತೆಗೆ ನಮ್ಮ ನಡತೆಯಿಂದ ಮನೆಯವನಿಗೂ ಮತ್ತು ನಮ್ಮನ್ನು ಗಮನಿಸುತ್ತಿರುವ ಇತರರಿಗೂ ಸಾಕ್ಷಿ ಕೊಡುತ್ತೇವೆ. ಇದರಿಂದ ಮುಂದೊಂದು ದಿನ ಅವರು ಸುವಾರ್ತೆಗೆ ಕಿವಿಗೊಡಬಹುದು.—2 ಕೊರಿಂ. 6:3.
ಹೇಗೆ ಮಾಡುವುದು:
• ಸಮಾಧಾನದಿಂದಿರಿ, ಸ್ನೇಹಭಾವ ತೋರಿಸಿ. ಈ ಗುಣಗಳನ್ನು ತೋರಿಸಿದರೆ ಪರಿಸ್ಥಿತಿಯನ್ನು ಶಾಂತಗೊಳಿಸಲು ಸಾಧ್ಯವಾಗುತ್ತದೆ. ಮನೆಯವನು ಏನಾದರೂ ಅಂದಾಗ ಅದಕ್ಕೆ ಕೋಪ ಮಾಡಿಕೊಳ್ಳಬೇಡಿ. (ಪ್ರಸಂ. 7:9) ಯಾಕೆಂದರೆ, ಅವನು ತನ್ನ ಸಮಸ್ಯೆ ಬಗ್ಗೆ ಚಿಂತಿಸುತ್ತಿದ್ದಾಗಲೋ ಅಥವಾ ಬೇಜಾರಾಗಿರುವಾಗಲೋ ನಾವು ಮಾತಾಡಿಸಿದ್ದಿರಬಹುದು. ಒಂದುವೇಳೆ ಅವನು ನಾವು ಮಾತಾಡಿದ ವಿಷಯ ಕೇಳಿ ಕೋಪಗೊಂಡಿದ್ದರೂ ನಾವು ಸಮಾಧಾನದಿಂದಿರಬೇಕು. ಕಾರಣ, ಅವನು ನಮ್ಮ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಂಡಿರಬಹುದು.—2 ಕೊರಿಂ. 4:4.
• ಮೃದುವಾಗಿ, ಗೌರವದಿಂದ ಮಾತಾಡಿ. (ಜ್ಞಾನೋ. 15:1) ನೀವು ಅವರ ಮನೆಗೆ ಹೋಗಿದ್ದರಿಂದ ಅವರ ನಿದ್ದೆಗೆ ಅಥವಾ ಕೆಲಸಕ್ಕೆ ಅಡಚಣೆಯಾಗಿದ್ದರೆ ಕ್ಷಮೆ ಕೇಳಿ. ಸುವಾರ್ತೆ ಸಾರಲು ಹೋಗಿದ್ದಕ್ಕಾಗಿ ನಾವು ಕ್ಷಮೆ ಕೇಳುವುದಿಲ್ಲ. ಆದರೆ ತಪ್ಪಾದ ಸಮಯದಲ್ಲಿ ಅವರ ಮನೆಗೆ ಹೋಗಿದ್ದಕ್ಕಾಗಿ ಕ್ಷಮೆ ಕೇಳುವುದು ಒಳ್ಳೆಯದು. ನಮ್ಮ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಕೇಳಿ ಮನೆಯವನು ಕೋಪಗೊಂಡಿದ್ದಾನಾ? ಹಾಗಾದರೆ, “ನಿಮ್ಮ ಕೋಪ ನನಗೆ ಅರ್ಥ ಆಗುತ್ತೆ ಸರ್. ಆದರೆ ನಮ್ಮ ಬಗ್ಗೆ ಕೆಲವರು ತಪ್ಪಾಗಿ ತಿಳಿದುಕೊಂಡಿದ್ದಾರೆ. ನೀವು ಅನುಮತಿ ಕೊಟ್ಟರೆ ನಿಜ ಏನಂತ ಹೇಳಬಹುದಾ?” ಎಂದು ಕೇಳಬಹುದು. ಬಹಿಷ್ಕಾರ ಮತ್ತು ರಕ್ತದ ವಿಷಯದಲ್ಲಿ ನಮ್ಮ ನೋಟದ ಕುರಿತು ಮನೆಯವನು ಕೋಪಗೊಂಡಿದ್ದಾನಾ? ಹಾಗಾದರೆ, “ನಿಮ್ಮ ಥರನೇ ಬೇರೆಯವರಿಗೂ ಅನಿಸಿದೆ ಸರ್. ಆದರೆ ನೀವು ಅನುಮತಿ ಕೊಟ್ಟರೆ ನಾವು ಯಾಕೆ ಹಾಗೆ ಮಾಡುತ್ತೇವೆ ಅಂತ ಬೈಬಲಿನಿಂದ ತೋರಿಸುತ್ತೀನಿ” ಎಂದು ಹೇಳಬಹುದು.
• ಒಂದುವೇಳೆ ಆ ವ್ಯಕ್ತಿಯ ಕೋಪ ನೆತ್ತಿಗೇರಿದೆ ಅಂತ ನಿಮಗನಿಸಿದರೆ ಏನೂ ಮಾತಾಡದೆ ಅಲ್ಲಿಂದ ಬಂದುಬಿಡುವುದೇ ಒಳ್ಳೆಯದು. ‘ಯೆಹೋವನ ಸಾಕ್ಷಿಗಳು ಇನ್ನು ಮುಂದೆ ನಮ್ಮ ಮನೆಗೆ ಬರಲೇಬಾರದು’ ಎಂದು ಹೇಳಿದರೆ, ಗೌರವದಿಂದ ‘ಆಯ್ತು’ ಎಂದು ಹೇಳಿ.
ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ:
• ಮನೆಯವನು ಕೋಪಗೊಂಡಾಗ ಏನು ಮಾಡಬಹುದು, ಏನು ಮಾಡಬಾರದು ಅಂತ ನಿಮ್ಮ ಕುಟುಂಬ ಆರಾಧನೆಯಲ್ಲಿ ಅಭಿನಯಿಸಿ.
• ಕೋಪಗೊಂಡ ವ್ಯಕ್ತಿಯ ಮನೆಯಿಂದ ಹೊರಬಂದ ನಂತರ ಆ ಪರಿಸ್ಥಿತಿಯಲ್ಲಿ ಹೇಗೆ ಇನ್ನೂ ಚೆನ್ನಾಗಿ ನಡೆದುಕೊಳ್ಳಬಹುದಿತ್ತು ಅಂತ ನಿಮ್ಮ ಜೊತೆ ಪ್ರಚಾರಕನನ್ನು ಕೇಳಿ.