ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
ನವೆಂಬರ್ 6-12
ಬೈಬಲಿನಲ್ಲಿರುವ ರತ್ನಗಳು | ಆಮೋಸ 1-9
“ಯೆಹೋವನನ್ನು ಹುಡುಕಿರಿ, ಬದುಕುವಿರಿ”
jd 90-91 ¶16-17
ಯೆಹೋವನ ಉನ್ನತ ಮಟ್ಟಗಳಿಗನುಸಾರ ಆತನ ಸೇವೆ ಮಾಡಿ
16 ಒಳ್ಳೇದು ಮತ್ತು ಕೆಟ್ಟದ್ದರ ಬಗ್ಗೆ ಯಾರ ಮಟ್ಟಗಳು ಉತ್ತಮ ಎಂಬ ವಿಷಯದಲ್ಲಿ ಮೊದಲ ಮನುಷ್ಯನಾದ ಆದಾಮನು ಮೂರ್ಖತನದ ಆಯ್ಕೆ ಮಾಡಿದನು. ನಾವು ಯಾವ ಆಯ್ಕೆ ಮಾಡುತ್ತೇವೆ? ಇದರ ಬಗ್ಗೆ ಆಮೋಸನು ನಮಗೆ, “ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೇದನ್ನು ಪ್ರೀತಿಸಿರಿ” ಎಂಬ ಬಲವಾದ ಎಚ್ಚರಿಕೆಯನ್ನು ನೀಡಿದ್ದಾನೆ. (ಆಮೋಸ 5:15) ಚಿಕಾಗೊದಲ್ಲಿನ ವಿಶ್ವವಿದ್ಯಾನಿಲಯದಲ್ಲಿ ಯೆಹೂದಿ ಭಾಷೆಗಳ ಮತ್ತು ಸಾಹಿತ್ಯದ ಪ್ರೊಫೆಸರರಾಗಿದ್ದ ವಿಲ್ಯಮ್ ರೇನೀ ಹಾರ್ಪರ್ ಎಂಬವರು ಈ ವಚನದ ಬಗ್ಗೆ ಹೀಗೆ ಹೇಳಿದ್ದಾರೆ: “ಒಳ್ಳೇದು ಮತ್ತು ಕೆಟ್ಟದ್ದರ ಬಗ್ಗೆ [ಆಮೋಸನ] ಮನಸ್ಸಿನಲ್ಲಿದ್ದ ಮಟ್ಟ ಯಾಹ್ವೆಯ ಚಿತ್ತಕ್ಕೆ ಹೊಂದಿಕೆಯಲ್ಲಿತ್ತು.” 12 ಪ್ರವಾದಿಗಳಿಂದ ನಾವು ಕಲಿಯಬಹುದಾದ ಬಹು ಮುಖ್ಯ ವಿಷಯ ಇದೇ ಆಗಿದೆ. ಒಳ್ಳೇದು ಮತ್ತು ಕೆಟ್ಟದ್ದರ ಬಗ್ಗೆ ಯೆಹೋವನ ಮಟ್ಟಗಳನ್ನು ನಾವು ಒಪ್ಪಿಕೊಳ್ಳುತ್ತೇವಾ? ಈ ಉನ್ನತ ಮಟ್ಟಗಳ ಬಗ್ಗೆ ನಮಗೆ ಬೈಬಲಿನಲ್ಲಿ ತಿಳಿಸಲಾಗಿದೆ. ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ’ ಭಾಗವಾಗಿರುವ ಪ್ರೌಢ ಮತ್ತು ಅನುಭವಸ್ಥ ಕ್ರೈಸ್ತರು ಈ ಮಟ್ಟಗಳನ್ನು ನಮಗೆ ವಿವರಿಸಿ ತಿಳಿಸುತ್ತಾರೆ.—ಮತ್ತಾಯ 24:45-47.
17ನಾವು ಕೆಟ್ಟದ್ದನ್ನು ದ್ವೇಷಿಸುವುದಾದರೆ ದೇವರಿಗೆ ಮೆಚ್ಚದ ವಿಷಯಗಳಿಂದ ದೂರವಿರಲು ಸಾಧ್ಯವಾಗುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಗೆ ಇಂಟರ್‌ನೆಟ್‌ನಲ್ಲಿ ಅಶ್ಲೀಲ ಸಾಹಿತ್ಯವನ್ನು ನೋಡುವುದರ ಅಪಾಯಗಳ ಬಗ್ಗೆ ಗೊತ್ತಿರಬಹುದು. ಹಾಗಾಗಿ ಅವನು ಅದನ್ನು ನೋಡುವುದರಿಂದ ದೂರವಿರಬಹುದು. ಆದರೆ ಅಶ್ಲೀಯ ಸಾಹಿತ್ಯದ ವೆಬ್‌ಸೈಟಿನ ಬಗ್ಗೆ ಆ ವ್ಯಕ್ತಿಯ “ಆಂತರ್ಯದಲ್ಲಿ” ಎಂಥ ಭಾವನೆ ಇದೆ? (ಎಫೆಸ 3:16) ಆಮೋಸ 5:15 ರಲ್ಲಿರುವ ದೈವಿಕ ಸಲಹೆಯನ್ನು ಅನ್ವಯಿಸುವುದಾದರೆ ಆ ವ್ಯಕ್ತಿಗೆ ಕೆಟ್ಟದ್ದನ್ನು ದ್ವೇಷಿಸಲು ಸುಲಭವಾಗುತ್ತದೆ. ಹೀಗೆ ಅವನು ತನ್ನ ಆಧ್ಯಾತ್ಮಿಕ ಹೋರಾಟದಲ್ಲಿ ಜಯ ಸಾಧಿಸಬಲ್ಲನು.
ನವೆಂಬರ್ 13-19
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
jd 112 ¶4-5
ಇತರರ ಜೊತೆ ದೇವರು ಬಯಸುವ ರೀತಿಯಲ್ಲಿ ವ್ಯವಹರಿಸಿ
4 ಇಸ್ರಾಯೇಲಿನ ಹತ್ತಿರದಲ್ಲಿದ್ದ ಎದೋಮನ್ನು ದೇವರು, “ನಿನ್ನ ತಮ್ಮನ ದುರ್ದಿನದಲ್ಲಿ, ಅವನ ಅಪಾಯಕಾಲದಲ್ಲಿ ನೀನು ಸುಮ್ಮನೆ ನೋಡುತ್ತಿರಬಾರದಾಗಿತ್ತು ; ಯೆಹೂದ್ಯರ ನಾಶನದಿವಸದಲ್ಲಿ ಹಿಗ್ಗಬಾರದಾಗಿತ್ತು” ಎಂದು ಖಂಡಿಸಿದನು. (ಓಬದ್ಯ 12) ಇದರಿಂದ ನಾವು ಒಂದು ಪಾಠವನ್ನು ಕಲಿಯಬಹುದು. ತೂರಿನವರು ವ್ಯಾಪಾರ ಸಂಬಂಧದಲ್ಲಿ ‘ಸಹೋದರನಂತೆ’ ಇದ್ದರು. ಆದರೆ ಎದೋಮ್ಯರು ನಿಜವಾಗಿಯೂ ಇಸ್ರಾಯೇಲ್ಯರ ‘ಸಹೋದರರಾಗಿದ್ದರು.’ ಯಾಕೆಂದರೆ ಅವರು ಯಾಕೋಬನ ಅವಳಿ ಅಣ್ಣನಾದ ಏಸಾವನ ವಂಶಜರಾಗಿದ್ದರು. ಯೆಹೋವನು ಸಹ ಎದೋಮ್ಯರನ್ನು ಇಸ್ರಾಯೇಲ್ಯರ ‘ಸಹೋದರರು’ ಎಂದು ಕರೆದನು. (ಧರ್ಮೋಪದೇಶಕಾಂಡ 2:1-4) ಆದ್ದರಿಂದ, ಯೆಹೂದ್ಯರು ಬಾಬೆಲಿನವರಿಂದ ಕಷ್ಟಕ್ಕೆ ಗುರಿಯಾದಾಗ ಎದೋಮ್ಯರು ಸಂತೋಷಿಸಿದ್ದು ನಿಜವಾಗಿಯೂ ತಪ್ಪಾಗಿತ್ತು.—ಯೆಹೆಜ್ಕೇಲ 25:12-14.
5 ಎದೋಮ್ಯರು ಯೆಹೂದಿಗಳಾಗಿದ್ದ ತಮ್ಮ ಸಹೋದರರ ಜೊತೆ ವ್ಯವಹರಿಸಿದ ರೀತಿ ದೇವರಿಗೆ ಇಷ್ಟವಾಗಲಿಲ್ಲ ಎನ್ನುವುದು ಸ್ಪಷ್ಟ. ಹಾಗಾಗಿ, ‘ನಾನು ನನ್ನ ಸಹೋದರರ ಜೊತೆ ವ್ಯವಹರಿಸುವ ರೀತಿಯ ಬಗ್ಗೆ ದೇವರಿಗೆ ಏನನಿಸುತ್ತದೆ?’ ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕು. ಮುಖ್ಯವಾಗಿ, ಒಬ್ಬ ಸಹೋದರನ ಜೊತೆ ಸಮಸ್ಯೆಯಾದಾಗ ನಾವು ಅವರ ಬಗ್ಗೆ ಯಾವ ರೀತಿ ಯೋಚಿಸುತ್ತೇವೆ ಮತ್ತು ಅವರೊಂದಿಗೆ ಹೇಗೆ ನಡೆದುಕೊಳ್ಳುತ್ತೇವೆ? ಉದಾಹರಣೆಗೆ, ಒಬ್ಬ ಕ್ರೈಸ್ತ ಸಹೋದರನು ನಿಮಗೆ ನೋವು ಮಾಡಿದನು ಅಥವಾ ಅವನಿಗೆ ನಿಮ್ಮ ಸಂಬಂಧಿಕರಲ್ಲಿ ಒಬ್ಬರೊಂದಿಗೆ ಸಮಸ್ಯೆ ಇದೆ ಮತ್ತು ಅವನ ಮೇಲೆ ‘ದೂರುಹೊರಿಸಲು ಕಾರಣವಿದೆ’ ಎಂದು ಭಾವಿಸಿ. ಆಗ ಅವುಗಳನ್ನು ಲಕ್ಷ್ಯಕ್ಕೇ ತೆಗೆದುಕೊಳ್ಳದೆ ಇರುವ ಅಥವಾ ಮಾತಾಡಿ ಸಮಾಧಾನ ಮಾಡುವ ಬದಲು ನೀವು ದ್ವೇಷವನ್ನು ಬೆಳೆಸಿಕೊಳ್ಳುತ್ತೀರಾ? (ಕೊಲೊಸ್ಸೆ 3:13; ಯೆಹೋಶುವ 22:9-30; ಮತ್ತಾಯ 5:23, 24) ಇದು ನೀವು ಆ ಸಹೋದರನೊಂದಿಗೆ ವ್ಯವಹರಿಸುವ ರೀತಿಯ ಮೇಲೆ ಪ್ರಭಾವ ಬೀರುತ್ತದೆ. ನೀವು ಜಗಳವಾಡದೆ ಇದ್ದರೂ ಅವರಿಂದ ದೂರವಿರಲು ಪ್ರಯತ್ನಿಸಬಹುದು ಅಥವಾ ಅವನ ಬಗ್ಗೆ ಬೇರೆಯವರ ಹತ್ತಿರ ತಪ್ಪಾಗಿ ಮಾತಾಡಬಹುದು. ಒಂದು ವೇಳೆ ಆ ಸಹೋದರನು ಸಮಯಾನಂತರ ಯಾವುದೋ ಒಂದು ತಪ್ಪು ಮಾಡಿ ಅವನಿಗೆ ಸಭೆಯ ಹಿರಿಯರಿಂದ ಸಲಹೆ ಅಥವಾ ಶಿಸ್ತು ಸಿಕ್ಕಿತು ಎಂದು ಭಾವಿಸಿ. (ಗಲಾತ್ಯ 6:1) ಆಗ ನೀವು ಎದೋಮ್ಯರಂತೆ ಆ ಸಹೋದರನಿಗೆ ಕಷ್ಟ ಎದುರಾದದ್ದಕ್ಕಾಗಿ ಸಂತೋಷಿಸುತ್ತೀರಾ? ನೀವು ಹೇಗೆ ನಡಕೊಳ್ಳಬೇಕೆಂದು ದೇವರು ಬಯಸುತ್ತಾನೆ?
ನವೆಂಬರ್ 20-26
ಬೈಬಲಿನಲ್ಲಿರುವ ರತ್ನಗಳು | ಮೀಕ 1-7
“ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?”
w12 11/1 22 ¶4-7
“ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?”
“ನ್ಯಾಯವನ್ನು ಆಚರಿಸುವದು.” ಒಂದು ಉಲ್ಲೇಖಕ್ಕನುಸಾರ “ನ್ಯಾಯ” ಎನ್ನುವುದಕ್ಕಿರುವ ಹೀಬ್ರು ಪದ “ಸಮುದಾಯದಲ್ಲಿ ಸರಿಯಾದ ಮತ್ತು ನ್ಯಾಯೋಚಿತ ಸಂಬಂಧಗಳನ್ನು ಸಹ ಸೂಚಿಸುತ್ತದೆ.” ನಾವು ಇತರರೊಂದಿಗೆ ದೇವರ ಮಟ್ಟಗಳಿಗನುಸಾರ ಸರಿಯಾಗಿ ಮತ್ತು ನ್ಯಾಯವಾಗಿ ವರ್ತಿಸಬೇಕು ಎಂದು ಆತನು ನಮ್ಮಿಂದ ಕೇಳಿಕೊಳ್ಳುತ್ತಾನೆ. ನಾವು ಇತರರೊಂದಿಗೆ ನಿಷ್ಪಕ್ಷಪಾತದಿಂದ, ನೀತಿಯಿಂದ ಮತ್ತು ಪ್ರಾಮಾಣಿಕವಾಗಿ ನಡೆಯುವ ಮೂಲಕ ನ್ಯಾಯದಿಂದ ವರ್ತಿಸುತ್ತೇವೆ. (ಯಾಜಕಕಾಂಡ 19:15; ಯೆಶಾಯ 1:17; ಇಬ್ರಿಯ 13:18) ನಾವು ಇತರರೊಟ್ಟಿಗೆ ನ್ಯಾಯವಾಗಿ ವರ್ತಿಸುವಾಗ ಅವರು ನಮ್ಮ ಜೊತೆ ಕೂಡ ನ್ಯಾಯವಾಗಿ ವರ್ತಿಸುತ್ತಾರೆ.—ಮತ್ತಾಯ 7:12.
“ಕರುಣೆಯಲ್ಲಿ (ದಯೆ, NW) ಆಸಕ್ತನಾಗಿರು.” ನಾವು ಕೇವಲ ಕರುಣೆಯನ್ನು ತೋರಿಸುವುದಲ್ಲ ಬದಲಿಗೆ ಅದನ್ನು ಪ್ರೀತಿಸಬೇಕು ಎಂದು ದೇವರು ನಮ್ಮಿಂದ ಬಯಸುತ್ತಾನೆ. “ಕರುಣೆ” (ಚೇಸಧ್) ಎಂದು ಅನುವಾದಿಸಲಾದ ಹೀಬ್ರು ಪದವು “ಪ್ರೀತಿಪೂರ್ವಕ ದಯೆ” ಅಥವಾ “ನಿಷ್ಠಾವಂತ ಪ್ರೀತಿ.” ಒಬ್ಬ ಬೈಬಲ್ ವಿದ್ವಾಂಸ ಹೀಗೆ ಹೇಳುತ್ತಾರೆ: “(ಚೇಸಧ್) ಎಂಬ ಪದವನ್ನು ಪ್ರೀತಿ, ದಯೆ ಅಥವಾ ಕರುಣೆ ಎಂದು ಭಾಷಾಂತರಿಸಿದರೆ ಅದು ಸಂಪೂರ್ಣ ಅರ್ಥ ಕೊಡುವುದಿಲ್ಲ. ಈ ಪದದ ಅರ್ಥ ಇವುಗಳಲ್ಲಿ ಯಾವುದೇ ಒಂದು ಗುಣವಲ್ಲ ಬದಲಿಗೆ ಮೂರೂ ಗುಣಗಳು ಸೇರಿದ್ದಾಗಿದೆ.” ನಾವು ಕರುಣೆಯನ್ನು ಪ್ರೀತಿಸಿದರೆ ಅದನ್ನು ಸ್ವಇಚ್ಛೆಯಿಂದ ತೋರಿಸುತ್ತೇವೆ. ಅಗತ್ಯವಿರುವವರಿಗೆ ಸಹಾಯಮಾಡಲು ನಾವು ಸಂತೋಷಿಸುತ್ತೇವೆ. ಪರಿಣಾಮ, ಕೊಡುವುದರಲ್ಲಿ ನಾವು ಹೆಚ್ಚಿನ ಸಂತೋಷವನ್ನು ಕಂಡುಕೊಳ್ಳುತ್ತೇವೆ.—ಅಪೊಸ್ತಲರ ಕಾರ್ಯಗಳು 20:35.
“ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು.” ಬೈಬಲಿನಲ್ಲಿ “ನಡೆ” ಎಂಬ ಪದದ ಅರ್ಥ “ಒಂದು ನಿರ್ದಿಷ್ಟ ಕ್ರಮವನ್ನು ಅನುಸರಿಸುವುದು” ಎಂದಾಗಿದೆ. ದೇವರು ಬೈಬಲಿನಲ್ಲಿ ವಿವರಿಸಿರುವ ಜೀವನ ರೀತಿಯನ್ನು ಅನುಸರಿಸುವ ಮೂಲಕ ನಾವು ಆತನೊಂದಿಗೆ ನಡೆಯುತ್ತೇವೆ. ಅದನ್ನು ಪಾಲಿಸುವಾಗ ನಾವು ‘ನಮ್ರರಾಗಿರಬೇಕು.’ ಹೇಗೆ? ನಾವು ನಮ್ರರಾಗಿದ್ದರೆ ದೇವರ ಮುಂದೆ ನಮ್ಮ ಸ್ಥಾನ ಯಾವುದು ಎಂದು ಪರೀಕ್ಷಿಸುತ್ತೇವೆ ಮತ್ತು ನಮ್ಮ ಇತಿಮಿತಿಗಳನ್ನು ಗುರುತಿಸುತ್ತೇವೆ. ಆದ್ದರಿಂದ, ‘ನಮ್ರವಾಗಿ ನಡೆಯುವುದು’ ಅಂದರೆ ಆತನು ನಮ್ಮಿಂದ ಏನು ಬಯಸುತ್ತಾನೆ ಮತ್ತು ಆತನಿಗೆ ನಾವು ಏನನ್ನು ಕೊಡಬಹುದು ಎನ್ನುವುದರ ಬಗ್ಗೆ ನೈಜ ದೃಷ್ಟಿಕೋನವನ್ನು ಹೊಂದಿರುವುದೇ ಆಗಿದೆ.
ಯೆಹೋವನು ನಮ್ಮಿಂದ ಕೊಡಲು ಸಾಧ್ಯವಾಗುವುದಕ್ಕಿಂತ ಹೆಚ್ಚಿನದ್ದನ್ನು ಎಂದಿಗೂ ಕೇಳುವುದಿಲ್ಲ. ಆತನ ಸೇವೆ ಮಾಡಲು ನಾವು ಹಾಕುವ ಶ್ರಮವನ್ನು ಮೆಚ್ಚುತ್ತಾನೆ. (ಕೊಲೊಸ್ಸೆ 3:23) ನಮ್ಮ ಇತಿಮಿತಿಗಳನ್ನು ಅರ್ಥಮಾಡಿಕೊಳ್ಳುತ್ತಾನೆ. (ಕೀರ್ತನೆ 103:14) ಇದನ್ನು ನಾವು ನಮ್ರತೆಯಿಂದ ಒಪ್ಪಿಕೊಳ್ಳಲು ಕಲಿತಾಗ ದೇವರೊಂದಿಗೆ ನಡೆಯುವುದರಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತೇವೆ. ದೇವರೊಂದಿಗೆ ನಡೆಯಲು ಶುರು ಮಾಡುವುದು ಹೇಗೆಂದು ಕಲಿಯಿರಿ. ಇಂಥ ಜೀವನ ರೀತಿಯಿಂದ ಹೇರಳ ಆಶೀರ್ವಾದಗಳು ಸಿಗುತ್ತವೆ.—ಜ್ಞಾನೋಕ್ತಿ 10:22.