ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr23 ಜನವರಿ ಪು. 1-9
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2023
  • ಉಪಶೀರ್ಷಿಕೆಗಳು
  • ಜನವರಿ 2-8
  • ಜನವರಿ 9-15
  • ಜನವರಿ 16-22
  • ಜನವರಿ 23-29
  • ಜನವರಿ 30–ಫೆಬ್ರವರಿ 5
  • ಫೆಬ್ರವರಿ 6-12
  • ಫೆಬ್ರವರಿ 13-19
  • ಫೆಬ್ರವರಿ 20-26
  • ಫೆಬ್ರವರಿ 27–ಮಾರ್ಚ್‌ 5
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2023
mwbr23 ಜನವರಿ ಪು. 1-9

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

ಜನವರಿ 2-8

ಬೈಬಲಿನಲ್ಲಿರುವ ನಿಧಿ | 2 ಅರಸು 22-23

“ನಾವ್ಯಾಕೆ ದೀನರಾಗಿರಬೇಕು?”

ಕಾವಲಿನಬುರುಜು00 9/15 ಪುಟ 29-30

ದೀನನಾದ ಯೋಷೀಯನು ಯೆಹೋವನ ಅನುಗ್ರಹವನ್ನು ಹೊಂದಿದ್ದನು

ಮುಂಜಾನೆಯಿಂದಲೇ, ದುರಸ್ತಿಮಾಡುವ ಕೆಲಸಗಾರರು ಶ್ರಮಪಟ್ಟು ದೇವಾಲಯದ ಕೆಲಸವನ್ನು ಮಾಡುತ್ತಾರೆ. ನಿಜವಾಗಿಯೂ, ಯೋಷೀಯನು ಯೆಹೋವನಿಗೆ ಕೃತಜ್ಞನಾಗಿದ್ದಾನೆ. ಏಕೆಂದರೆ, ತನ್ನ ಕೆಲವು ದುಷ್ಟ ಪೂರ್ವಿಕರು ದೇವಾಲಯಕ್ಕೆ ಮಾಡಿದ ಹಾನಿಯನ್ನು, ಕೆಲಸಗಾರರು ಈಗ ಸರಿಪಡಿಸುತ್ತಿದ್ದಾರೆ. ಕೆಲಸವು ಪ್ರಗತಿಯಾಗುತ್ತಿದ್ದಂತೆ, ಶಾಫಾನ ಒಂದು ವರದಿಯನ್ನು ನೀಡಲು ಬರುತ್ತಾನೆ. ಆದರೆ ಅವನ ಕೈಯಲ್ಲಿರುವುದೇನು? ಹೌದು, ಅವನು ಒಂದು ಸುರುಳಿಯನ್ನು ತೆಗೆದುಕೊಂಡು ಬರುತ್ತಿದ್ದಾನೆ! ಅವನು, “ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟಿದ್ದ ಯೆಹೋವನ ಧರ್ಮೋಪದೇಶದ ಗ್ರಂಥವು ಯಾಜಕನಾದ ಹಿಲ್ಕೀಯನಿಗೆ ಸಿಕ್ಕಿತು” ಎಂಬುದಾಗಿ ವಿವರಿಸುತ್ತಾನೆ. (2 ಪೂರ್ವಕಾಲ 34:12-18) ನಿಜವಾಗಿಯೂ, ಅದು ಎಂಥ ಒಂದು ಆವಿಷ್ಕಾರವಾಗಿತ್ತು! ಏಕೆಂದರೆ, ಅದು ಧರ್ಮೋಪದೇಶದ ಮೂಲಪ್ರತಿಯಾಗಿತ್ತು ಎಂಬುದರಲ್ಲಿ ಸಂದೇಹವೇ ಇಲ್ಲ.

ಯೋಷೀಯನು ಆ ಗ್ರಂಥದಲ್ಲಿದ್ದ ಪ್ರತಿಯೊಂದು ಶಬ್ದವನ್ನು ಕೇಳಿಸಿಕೊಳ್ಳಲು ತವಕವುಳ್ಳವನಾಗಿದ್ದಾನೆ. ಶಾಫಾನನು ಓದುತ್ತಿರುವಾಗ, ಪ್ರತಿಯೊಂದು ನಿಯಮವು ತನಗೆ ಮತ್ತು ಜನರಿಗೆ ಯಾವ ರೀತಿಯಲ್ಲಿ ಅನ್ವಯಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅರಸನು ಪ್ರಯತ್ನಿಸುತ್ತಾನೆ. ವಿಶೇಷವಾಗಿ, ನಿಜ ಆರಾಧನೆಯ ಕುರಿತು ಗ್ರಂಥವು ಹೇಗೆ ಒತ್ತನ್ನು ನೀಡುತ್ತದೆ ಮತ್ತು ಸುಳ್ಳುಧರ್ಮದಲ್ಲಿ ಜನರು ಒಳಗೂಡುವುದಾದರೆ ಅವರ ಮೇಲೆ ಬಂದೆರಗುವ ಉಪದ್ರವಗಳನ್ನು ಮತ್ತು ಅದರ ನಂತರ ಬರಲಿರುವ ಸೆರೆಯ ಕುರಿತು ಮುಂತಿಳಿಸಿರುವಂಥ ವಿಷಯಗಳು ಅವನ ಮನಸ್ಸನ್ನು ನಾಟುತ್ತವೆ. ದೇವರ ಎಲ್ಲಾ ಆಜ್ಞೆಗಳಿಗನುಸಾರ ತಾನು ನಡೆದುಕೊಂಡಿಲ್ಲ ಎಂಬುದು ಈಗ ಅವನ ಅರಿವಿಗೆ ಬಂದಾಗ, ಯೋಷೀಯನು ತನ್ನ ಬಟ್ಟೆಗಳನ್ನು ಹರಿದುಕೊಳ್ಳುತ್ತಾನೆ. ಹಿಲ್ಕೀಯ, ಶಾಫಾನ ಮತ್ತು ಇನ್ನಿತರರಿಗೆ ಆಜ್ಞೆಯನ್ನು ಕೊಡುತ್ತಾನೆ. ‘ನಮ್ಮ ಪೂರ್ವಿಕರು ನಮಗೆ ಸಿಕ್ಕಿರುವ ಈ ಗ್ರಂಥವಾಕ್ಯಗಳಿಗೆ ಕಿವಿಗೊಡದೆ . . . ಹೋದದರಿಂದ ನಾವು ಯೆಹೋವನ ಉಗ್ರಕೋಪಕ್ಕೆ ಪಾತ್ರರಾಗಿದ್ದೇವೆ. ಆದದರಿಂದ, . . . ಯೆಹೋವನ ಬಳಿಗೆ ಹೋಗಿ ಈ ಗ್ರಂಥವಾಕ್ಯಗಳ ವಿಷಯವಾಗಿ ವಿಚಾರಿಸಿರಿ.’—2 ಅರಸು 22:11-13; 2 ಪೂರ್ವಕಾಲ 34:19-21.

ಕಾವಲಿನಬುರುಜು00 9/15 ಪುಟ 30 ಪ್ಯಾರ 2

ದೀನನಾದ ಯೋಷೀಯನು ಯೆಹೋವನ ಅನುಗ್ರಹವನ್ನು ಹೊಂದಿದ್ದನು

ಯೋಷೀಯನ ಸಂದೇಶಕರು ಯೆರೂಸಲೇಮಿನಲ್ಲಿರುವ ಪ್ರವಾದಿನಿಯಾದ ಹುಲ್ದಳ ಬಳಿಗೆ ಹೋಗುತ್ತಾರೆ ಮತ್ತು ಅಲ್ಲಿಂದ ವರದಿಯೊಂದಿಗೆ ಹಿಂದಿರುಗುತ್ತಾರೆ. ಹುಲ್ದಳು ಯೆಹೋವನ ಸಂದೇಶವನ್ನು ಹೇಳುತ್ತಾಳೆ. ಅದೇನೆಂದರೆ, ಹೊಸದಾಗಿ ಸಿಕ್ಕಿರುವ ಗ್ರಂಥವಾಕ್ಯದಲ್ಲಿ ದಾಖಲಾಗಿರುವ ಎಲ್ಲಾ ಶಿಕ್ಷೆಗಳು ಧರ್ಮಭ್ರಷ್ಟ ಜನಾಂಗದ ಮೇಲೆ ಬಂದೆರಗುವವು ಎಂಬುದಾಗಿ ಸೂಚಿಸುತ್ತಾಳೆ. ಆದರೆ, ಯೋಷೀಯನು ಯೆಹೋವ ದೇವರ ಮುಂದೆ ತನ್ನನ್ನು ತಗ್ಗಿಸಿಕೊಂಡಿದ್ದರಿಂದ, ಆ ದೇಶಕ್ಕೆ ಯೆಹೋವನು ಬರಮಾಡುವ ಶಿಕ್ಷೆಗಳಲ್ಲಿ ಒಂದನ್ನೂ ಅವನು ನೋಡಬೇಕಾಗಿರುವುದಿಲ್ಲ. ಅವನು ಸಮಾಧಾನದಿಂದ ಮೃತಹೊಂದಿ ತನ್ನ ಪೂರ್ವಿಕರೊಂದಿಗೆ ಸೇರಿಸಲ್ಪಡುವನು.—2 ಅರಸು 22:14-20; 2 ಪೂರ್ವಕಾಲ 34:22-28.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು01 4/15 ಪುಟ 26 ಪ್ಯಾರ 3-4

ಬಾಲ್ಯ ಹೇಗಿದ್ದರೂ ನೀವು ಯಶಸ್ವಿಯಾಗಬಹುದು

ವೇದನಾಭರಿತ ಪರಿಸ್ಥಿತಿಗಳ ಮಧ್ಯೆ ತನ್ನ ಬಾಲ್ಯವನ್ನು ಕಳೆದಿದ್ದರೂ ಯೋಷೀಯನು ಯೆಹೋವನ ದೃಷ್ಟಿಯಲ್ಲಿ ಯಾವುದು ಒಳ್ಳೆಯದಾಗಿತ್ತೋ ಅದನ್ನೇ ಮಾಡಿದನು. ಇದರಿಂದಾಗಿ ಅವನ ಆಳ್ವಿಕೆಯು ಎಷ್ಟೊಂದು ಯಶಸ್ವಿಕರವಾಗಿತ್ತೆಂದರೆ, ಬೈಬಲು ಹೇಳುವುದು: “ಯೆಹೋವನ ಕಡೆಗೆ ತಿರುಗಿಕೊಂಡು ಪೂರ್ಣಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬಲದಿಂದಲೂ ಮೋಶೆಯ ಧರ್ಮಶಾಸ್ತ್ರವನ್ನು ಅನುಸರಿಸಿದ ಯೋಷೀಯನಿಗೆ ಸಮಾನನಾದ ಅರಸನು ಮುಂಚೆಯೂ ತರುವಾಯವೂ ಇರಲಿಲ್ಲ.”—2 ಅರಸುಗಳು 23:19-25.

ಭೀಕರವಾದ ಬಾಲ್ಯವನ್ನು ಸಹಿಸಿಕೊಳ್ಳಬೇಕಾಗಿದ್ದವರಿಗೆ ಯೋಷೀಯನು ಎಂಥ ಪ್ರೋತ್ಸಾಹದಾಯಕ ಮಾದರಿಯಾಗಿದ್ದಾನೆ! ಯೋಷೀಯನ ಮಾದರಿಯಿಂದ ನಾವೇನನ್ನು ಕಲಿಯಬಲ್ಲೆವು? ಸರಿಯಾದ ಮಾರ್ಗವನ್ನು ಆಯ್ದುಕೊಳ್ಳಲು ಮತ್ತು ಅದೇ ಮಾರ್ಗದಲ್ಲಿ ಮುಂದುವರಿಯಲು ಯೋಷೀಯನಿಗೆ ಸಹಾಯಮಾಡಿದ್ದು ಯಾವುದು?

ಜನವರಿ 9-15

ಬೈಬಲಿನಲ್ಲಿರುವ ನಿಧಿ | 2 ಅರಸು 24-25

“ಸಮಯ ತುಂಬ ಕಮ್ಮಿ ಅನ್ನೋದನ್ನ ಯಾವಾಗಲೂ ಮನಸ್ಸಲ್ಲಿಡಿ”

ಕಾವಲಿನಬುರುಜು01 2/15 ಪುಟ 12 ಪ್ಯಾರ 2

ಯೆಹೋವನ ನ್ಯಾಯತೀರ್ಪಿನ ದಿನವು ಹತ್ತಿರವಿದೆ!

2 ಚೆಫನ್ಯನ ಪ್ರವಾದನೆಯು, ಯೆಹೂದದಲ್ಲಿದ್ದ ಅಶುದ್ಧ ಆರಾಧನೆಯನ್ನು ಸಂಪೂರ್ಣವಾಗಿ ಅಳಿಸಿಬಿಡಬೇಕೆಂಬ ಯೋಷೀಯನ ಅರಿವನ್ನು ಇನ್ನೂ ಬಲಪಡಿಸಿತು ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೂ, ಈ ದೇಶದಿಂದ ಸುಳ್ಳಾರಾಧನೆಯನ್ನು ಅಳಿಸಿಬಿಡಲಿಕ್ಕಾಗಿ ಯೋಷೀಯನು ಕೈಗೊಂಡ ಕ್ರಮಗಳು, ಜನರ ಮಧ್ಯದಲ್ಲಿದ್ದ ಎಲ್ಲ ದುಷ್ಟತನವನ್ನು ತೆಗೆದುಹಾಕಲಿಲ್ಲ; ಅಥವಾ ‘ಯೆರೂಸಲೇಮನ್ನು ನಿರಪರಾಧರಕ್ತದಿಂದ ತುಂಬಿಸಿದ್ದ’ ಅವನ ಅಜ್ಜನಾದ ಅರಸ ಮನಸ್ಸೆಯ ಪಾಪಗಳಿಗಾಗಿ ಪ್ರಾಯಶ್ಚಿತ್ತವನ್ನು ಸಹ ಒದಗಿಸಲಿಲ್ಲ. (2 ಅರಸುಗಳು 24:3, 4; 2 ಪೂರ್ವಕಾಲವೃತ್ತಾಂತ 34:3) ಆದುದರಿಂದ, ಅವರ ಮೇಲೆ ಯೆಹೋವನ ನ್ಯಾಯತೀರ್ಪಿನ ದಿನವು ಖಂಡಿತವಾಗಿಯೂ ಬರಲಿಕ್ಕಿತ್ತು.

ಕಾವಲಿನಬುರುಜು07 4/1 ಪುಟ 11 ಪ್ಯಾರ 10

ಯೆರೆಮೀಯ ಪುಸ್ತಕದ ಮುಖ್ಯಾಂಶಗಳು

ಅರಸ ಚಿದ್ಕೀಯನ ಆಳ್ವಿಕೆಯ 11ನೆಯ ವರ್ಷ ಅಂದರೆ ಸಾ.ಶ.ಪೂ. 607ಕ್ಕೆ ಮುಂಚೆ 18 ತಿಂಗಳುಗಳ ಕಾಲ ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನು ಯೆರೂಸಲೇಮಿಗೆ ಮುತ್ತಿಗೆಹಾಕಿದನು. ನೆಬೂಕದ್ನೆಚ್ಚರನ ಆಳ್ವಿಕೆಯ 19ನೇ ವರ್ಷದ ಐದನೇ ತಿಂಗಳಿನ ಏಳನೆಯ ದಿನದಲ್ಲಿ, ಅರಸನ ಅಧಿಪತಿಯಾದ ನೆಬೂಜರದಾನನೆಂಬವನು ಯೆರೂಸಲೇಮಿಗೆ ‘ಬಂದನು.’ (2 ಅರಸುಗಳು 25:8) ಅವನು ನಗರದ ಗೋಡೆಯ ಹೊರಗೆ ಪಾಳೆಯಹೂಡಿ ಬಹುಶಃ ಸನ್ನಿವೇಶದ ಸಮೀಕ್ಷೆ ನಡೆಸುತ್ತಾ ತನ್ನ ಕಾರ್ಯಾಚರಣೆಯ ಬಗ್ಗೆ ಯೋಜನೆಗಳನ್ನು ಮಾಡಿದನು. ಇದಾದ ಮೂರು ದಿನಗಳ ಬಳಿಕ ಅಂದರೆ ಐದನೇ ತಿಂಗಳಿನ ಹತ್ತನೆಯ ದಿನ ಅವನು ಯೆರೂಸಲೇಮ್‌ ನಗರದೊಳಗೆ ‘ಬಂದನು’ ಅಥವಾ ಪ್ರವೇಶಿಸಿದನು. ಅವನು ಮುಂದುವರಿದು ಪಟ್ಟಣಕ್ಕೆ ಬೆಂಕಿ ಹಚ್ಚಿ ಸುಟ್ಟುಬಿಟ್ಟನು.—ಯೆರೆಮೀಯ 52:12, 13.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು05 8/1 ಪುಟ 12 ಪ್ಯಾರ 1

ಎರಡನೇ ಅರಸುಗಳು ಪುಸ್ತಕದ ಮುಖ್ಯಾಂಶಗಳು

24:3, 4. ಮನಸ್ಸೆಯ ರಕ್ತಾಪರಾಧದಿಂದಾಗಿ ಯೆಹೋವನು ಯೆಹೂದವನ್ನು ‘ಕ್ಷಮಿಸದೇ ಹೋದನು.’ ದೇವರು ನಿರ್ದೋಷಿಗಳ ರಕ್ತವನ್ನು ಗೌರವಿಸುತ್ತಾನೆ. ಅದನ್ನು ಸುರಿಸಲು ಕಾರಣರಾದವರನ್ನು ನಾಶಮಾಡುವ ಮೂಲಕ ಯೆಹೋವನು ನಿರ್ದೋಷ ರಕ್ತಕ್ಕೆ ಮುಯ್ಯಿ ತೀರಿಸುವನೆಂದು ನಾವು ದೃಢಭರವಸೆಯಿಂದ ಇರಬಲ್ಲೆವು.—ಕೀರ್ತನೆ 37:9-11; 145:20.

ಜನವರಿ 16-22

ಬೈಬಲಿನಲ್ಲಿರುವ ನಿಧಿ | 1 ಪೂರ್ವಕಾಲವೃತ್ತಾಂತ 1-3

“ಬೈಬಲ್‌ ಕಟ್ಟುಕಥೆಯ ಪುಸ್ತಕ ಅಲ್ಲ”

ಕಾವಲಿನಬುರುಜು09-E 9/1 ಪುಟ 14 ಪ್ಯಾರ 1

ಆದಾಮ ಹವ್ವ ನಿಜವಾಗಲೂ ಇದ್ರಾ?

ಒಂದನೇ ಪೂರ್ವಕಾಲವೃತ್ತಾಂತ 1ರಿಂದ 9ನೇ ಅಧ್ಯಾಯಗಳಲ್ಲಿ ಮತ್ತು ಲೂಕ 3ನೇ ಅಧ್ಯಾಯದಲ್ಲಿ ವಂಶಾವಳಿ ಪಟ್ಟಿಗಳಿವೆ. ಒಂದು ಪಟ್ಟಿಯಲ್ಲಿ 48 ಪೀಳಿಗೆಗಳ ಬಗ್ಗೆ ಮತ್ತು ಇನ್ನೊಂದರಲ್ಲಿ 75 ಪೀಳಿಗೆಗಳ ಬಗ್ಗೆ ಇದೆ. ಲೂಕ ಪುಸ್ತಕದಲ್ಲಿ ಯೇಸುವಿನ ವಂಶಾವಳಿ ಬಗ್ಗೆ ಇದೆ. ಪೂರ್ವಕಾಲವೃತ್ತಾಂತ ಪುಸ್ತಕದಲ್ಲಿ ಇಸ್ರಾಯೇಲ್ಯ ರಾಜರ ಮತ್ತು ಪುರೋಹಿತರ ವಂಶಾವಳಿ ಬಗ್ಗೆ ಇದೆ. ಈ ಎರಡೂ ಪಟ್ಟಿಗಳಲ್ಲೂ ಸೊಲೊಮೋನ, ದಾವೀದ, ಯಾಕೋಬ, ಇಸಾಕ, ಅಬ್ರಹಾಮ ಮತ್ತು ನೋಹನಂಥ ಪ್ರಸಿದ್ಧ ವ್ಯಕ್ತಿಗಳ ಹೆಸರಿದೆ. ಇವರೆಲ್ಲ ನಿಜವಾಗಲೂ ಇದ್ರು. ಆ ವಂಶಾವಳಿ ಪಟ್ಟಿಗಳ ಕೊನೆಯಲ್ಲಿ ಆದಾಮನ ಹೆಸರೂ ಇದೆ. ಇದರರ್ಥ ಆದಾಮ ಕೂಡ ನಿಜವಾಗಲೂ ಇದ್ದ.

ಕಾವಲಿನಬುರುಜು08 7/1 ಪುಟ 17 ಪ್ಯಾರ 4

ನೋಹ ಮತ್ತು ಜಲಪ್ರಳಯ ಸತ್ಯವೋ ಮಿಥ್ಯೆಯೋ?

ಬೈಬಲಿನಲ್ಲಿರುವ ಎರಡು ವಂಶಾವಳಿ ದಾಖಲೆಗಳು ನೋಹನು ಒಬ್ಬ ನಿಜ ವ್ಯಕ್ತಿಯಾಗಿದ್ದನೆಂದು ರುಜುಪಡಿಸುತ್ತವೆ. (1 ಪೂರ್ವಕಾಲವೃತ್ತಾಂತ 1:4; ಲೂಕ 3:36) ಈ ವಂಶಾವಳಿಗಳನ್ನು ಸಂಕಲಿಸಿದ ಬೈಬಲ್‌ ಲೇಖಕರಾದ ಎಜ್ರ ಮತ್ತು ಲೂಕ ಶ್ರದ್ಧೆಯುಳ್ಳ ಸಂಶೋಧಕರಾಗಿದ್ದರು. ಲೂಕನು ಯೇಸು ಕ್ರಿಸ್ತನ ವಂಶಾವಳಿಯನ್ನು ನೋಹನ ತನಕ ಪತ್ತೆಹಚ್ಚಿ ತಿಳಿಸಿದ್ದಾನೆ.

ಕಾವಲಿನಬುರುಜು09-E 9/1 ಪುಟ 14-15

ಆದಾಮ ಹವ್ವ ನಿಜವಾಗಲೂ ಇದ್ರಾ?

ಉದಾಹರಣೆಗೆ, ನಾವೀಗ ಬಿಡುಗಡೆ ಬೆಲೆಯ ಬಗ್ಗೆ ನೋಡೋಣ. ಇದು ಚರ್ಚಿಗೆ ಹೋಗೋ ಕ್ರೈಸ್ತರಿಗೂ ತುಂಬ ಮುಖ್ಯವಾದ ಬೋಧನೆಯಾಗಿದೆ. ಮನುಷ್ಯರನ್ನ ಪಾಪದಿಂದ ಬಿಡಿಸೋಕೆ ಯೇಸು ಭೂಮಿಗೆ ಬಂದು ತನ್ನ ಪರಿಪೂರ್ಣ ಜೀವವನ್ನ ಬಿಡುಗಡೆ ಬೆಲೆಯಾಗಿ ಕೊಟ್ಟನು ಅಂತ ಆ ಬೋಧನೆ ಹೇಳುತ್ತೆ. (ಮತ್ತಾಯ 20:28; ಯೋಹಾನ 3:16) “ಬಿಡುಗಡೆ ಬೆಲೆ” ಅನ್ನೋ ಪದದ ಅರ್ಥ ಏನು? ನಾವು ಏನನ್ನಾದ್ರೂ ಬಿಡಿಸಿಕೊಳ್ಳೋಕೆ ಅಥವಾ ಮತ್ತೆ ಖರೀದಿಸೋಕೆ ಕೊಡೋ ಬೆಲೆನೇ ಬಿಡುಗಡೆ ಬೆಲೆ. ಇದು ನಾವು ಕಳಕೊಂಡ ವ್ಯಕ್ತಿಯ ಅಥವಾ ವಸ್ತುವಿನ ಬೆಲೆಗೆ ಸಮವಾಗಿರುತ್ತೆ. ಅದಕ್ಕೆ ಬೈಬಲ್‌, ಯೇಸುವನ್ನ “ಸರಿಸಮವಾದ ಬಿಡುಗಡೆ ಬೆಲೆ” ಅಂತ ಹೇಳುತ್ತೆ. (1 ತಿಮೊತಿ 2:6) ಆ ಬೆಲೆ ಯಾವುದಕ್ಕೆ ಸರಿಸಮವಾಗಿತ್ತು? “ಆದಾಮನಿಂದ ಎಲ್ರೂ ಸತ್ತಿರೋ ಹಾಗೇ ಕ್ರಿಸ್ತನಿಂದ ಎಲ್ರೂ ಬದುಕ್ತಾರೆ” ಅಂತ ಬೈಬಲ್‌ ಹೇಳುತ್ತೆ. (1 ಕೊರಿಂಥ 15:22) ಅಂದ್ರೆ ಆದಾಮ ಕಳಕೊಂಡ ಪರಿಪೂರ್ಣ ಜೀವಕ್ಕೆ ಯೇಸುವಿನ ಪರಿಪೂರ್ಣ ಜೀವ ಸರಿಸಮವಾಗಿತ್ತು. (ರೋಮನ್ನರಿಗೆ 5:12) ಒಂದುವೇಳೆ ಆದಾಮನೇ ಇರಲಿಲ್ಲ ಅಂದಿದ್ರೆ ಯೇಸು, ಬಿಡುಗಡೆ ಬೆಲೆಯನ್ನ ಕೊಡಬೇಕಾದ ಅವಶ್ಯಕತೆನೇ ಇರಲಿಲ್ಲ.

ಬೈಬಲಿನಲ್ಲಿರುವ ರತ್ನಗಳು

it-1-E ಪುಟ 911 ಪ್ಯಾರ 3-4

ವಂಶಾವಳಿ

ಸ್ತ್ರೀಯರ ಹೆಸರು. ಇತಿಹಾಸದಲ್ಲಿ ನಡೆದ ಘಟನೆಗಳನ್ನ ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ ವಂಶಾವಳಿ ಪಟ್ಟಿಯಲ್ಲಿ ಕೆಲವು ಸ್ತ್ರೀಯರ ಹೆಸರುಗಳಿವೆ. ಉದಾಹರಣೆಗೆ, ಆದಿಕಾಂಡ 11:29, 30ರಲ್ಲಿ ಸಾರಯಳ (ಸಾರ) ಹೆಸರಿದೆ. ಯಾಕಂದ್ರೆ ಅಬ್ರಹಾಮನಿಗೆ ಯೆಹೋವ ಮಾತುಕೊಟ್ಟ ಸಂತತಿ ಅವನ ಬೇರೆ ಹೆಂಡತಿಯರಿಂದ ಅಲ್ಲ ಸಾರಳಿಂದ ಬಂತು ಅಂತ ತಿಳ್ಕೊಳ್ಳೋಕೆ ಇದು ಸಹಾಯ ಮಾಡುತ್ತೆ. ವಂಶಾವಳಿ ಪಟ್ಟಿಯಲ್ಲಿರೋ ಇನ್ನೊಂದು ಹೆಸರು ಮಿಲ್ಕ. ಇವಳು ರೆಬೆಕ್ಕಳ ಅಜ್ಜಿ. ಇದರಿಂದ, ಇಸಾಕ ಮದುವೆಯಾಗಿದ್ದು ಬೇರೆ ಜನಾಂಗದ ಸ್ತ್ರೀಯನ್ನಲ್ಲ, ಅಬ್ರಹಾಮನ ಸಂಬಂಧಿಕಳನ್ನೇ ಅಂತ ಗೊತ್ತಾಗುತ್ತೆ. (ಆದಿ 22:20-23; 24:2-4) ಆದಿಕಾಂಡ 25:1ರಲ್ಲಿ ಅಬ್ರಹಾಮನ ಎರಡನೇ ಹೆಂಡತಿ ಕೆಟೂರಳ ಹೆಸರಿದೆ. ಯಾಕಂದ್ರೆ ಸಾರ ತೀರಿಹೋದ ಮೇಲೆ ಅಬ್ರಹಾಮ ಕೆಟೂರಳನ್ನ ಮದುವೆಯಾದ. ಇಸಾಕ ಹುಟ್ಟಿ 40 ವರ್ಷ ಆಗಿದ್ರೂ ಅಬ್ರಹಾಮನಿಗೆ ಮಕ್ಕಳಾಗೋ ಸಾಮರ್ಥ್ಯ ಇನ್ನೂ ಇತ್ತು. (ರೋಮ 4:19) ಬೈಬಲ್‌ ದಾಖಲೆಗಳ ಪ್ರಕಾರ, ಮಿದ್ಯಾನ್ಯರು ಮತ್ತು ಅರೇಬಿಯರ ಕುಲಗಳವರು ಕೆಟೂರಳಿಗೆ ಹುಟ್ಟಿದವರು. ಇವರೆಲ್ಲರೂ ಇಸ್ರಾಯೇಲ್ಯರಿಗೆ ಸಂಬಂಧಿಕರು ಅಂತ ಗೊತ್ತಾಗುತ್ತೆ.

ಲೇಯ, ರಾಹೇಲ ಮತ್ತು ಯಾಕೋಬನ ಉಪಪತ್ನಿಯರ ಹೆಸರೂ ವಂಶಾವಳಿ ಪಟ್ಟಿಯಲ್ಲಿದೆ. (ಆದಿ 35:21-26) ಇದು ಯೆಹೋವ ಯಾಕೋಬನ ಮಕ್ಕಳ ಜೊತೆ ಯಾಕೆ ಬೇರೆಬೇರೆ ತರ ನಡಕೊಂಡನು ಅಂತ ಅರ್ಥಮಾಡಿಕೊಳ್ಳೋಕೆ ಸಹಾಯ ಮಾಡುತ್ತೆ. ಅಷ್ಟೇ ಅಲ್ಲ, ಸ್ತ್ರೀಯರ ಹೆಸರುಗಳನ್ನ ಕೊಟ್ಟಿರೋದರಿಂದ ಅವರ ಕುಟುಂಬಕ್ಕೆ ಸಿಗಬೇಕಾದ ಆಸ್ತಿ ಕೈಬಿಟ್ಟು ಹೋಗಲಿಲ್ಲ ಅಂತ ಗೊತ್ತಾಗುತ್ತೆ. (ಅರ 26:33) ತಾಮಾರ, ರಾಹಾಬ ಮತ್ತು ರೂತ್‌ ಯೆಹೋವನ ಮೇಲೆ ನಂಬಿಕೆ ಇಟ್ಟಿದ್ದರು ಮತ್ತು ಅವರಿಗೆ ಮೆಸ್ಸೀಯನಾದ ಯೇಸು ಕ್ರಿಸ್ತನ ಪೂರ್ವಜರಾಗೋ ಅವಕಾಶವನ್ನ ದೇವರು ಕೊಟ್ಟನು. (ಆದಿ 38; ರೂತ್‌ 1:3-5; 4:13-15; ಮತ್ತಾ 1:1-5)

ಜನವರಿ 23-29

ಬೈಬಲಿನಲ್ಲಿರುವ ನಿಧಿ | 1 ಪೂರ್ವಕಾಲವೃತ್ತಾಂತ 4-6

“ನಾನು ಮಾಡೋ ಪ್ರಾರ್ಥನೆ ನಾನು ಎಂಥ ವ್ಯಕ್ತಿ ಅಂತ ತೋರಿಸುತ್ತೆ?”

ಕಾವಲಿನಬುರುಜು11 4/1 ಪುಟ 23 ಪ್ಯಾರ 3-7

‘ಪ್ರಾರ್ಥನೆಯನ್ನು ಕೇಳುವಾತನು’

ಯಾಬೇಚ ಪ್ರಾರ್ಥನಾಸಕ್ತ ವ್ಯಕ್ತಿ. ವೃತ್ತಾಂತದಲ್ಲಿನ ತನ್ನ ಪ್ರಾರ್ಥನೆಯಲ್ಲಿ ಮೊದಲಾಗಿ ದೇವರ ಆಶೀರ್ವಾದಕ್ಕಾಗಿ ಬೇಡಿಕೊಂಡನು. ನಂತರ ಮೂರು ವಿನಂತಿಗಳನ್ನು ಮಾಡಿದನು. ಅವು ಯಾಬೇಚನ ಬಲವಾದ ನಂಬಿಕೆಯನ್ನು ತೋರಿಸುತ್ತವೆ.

ಮೊದಲನೆಯದಾಗಿ ಯಾಬೇಚನು ‘ನನ್ನ ಪ್ರಾಂತವನ್ನು ವಿಸ್ತರಿಸು’ ಎಂದು ದೇವರ ಬಳಿ ಬೇಡಿಕೊಂಡನು. (ವಚನ 10) ಈ ಘನವಂತ ವ್ಯಕ್ತಿ ಜಮೀನು-ಕಬಳಿಸುವ ವ್ಯಕ್ತಿಯಾಗಿರಲಿಲ್ಲ, ಇತರರಿಗೆ ಸೇರಿದ ಜಮೀನು ತನ್ನದಾಗಬೇಕೆಂದು ಆಸೆಪಡುತ್ತಿರಲಿಲ್ಲ. ಅವನ ವಿನಂತಿಯು ಜಮೀನಿಗಿಂತಲೂ ಹೆಚ್ಚಾಗಿ ಜನರಿಗೆ ಸಂಬಂಧಪಟ್ಟಿದ್ದಿರಬಹುದು. ತನ್ನ ಪ್ರಾಂತವನ್ನು ಶಾಂತಿಭರಿತವಾಗಿ ವಿಸ್ತರಿಸಲಿಕ್ಕಾಗಿ ಆತನು ಪ್ರಾಯಶಃ ಕೇಳುತ್ತಿದ್ದನು. ಯಾಕೆಂದರೆ ಅವನು ಹೆಚ್ಚು ಸತ್ಯ ದೇವರ ಆರಾಧಕರನ್ನು ಸೇರಿಸಿಕೊಳ್ಳಲಾಗುವಂತೆ ಇಚ್ಛಿಸುತ್ತಿದ್ದನು.

ಎರಡನೆಯದಾಗಿ ದೇವರು ತನ್ನ “ಹಸ್ತ”ದಿಂದ ತನ್ನನ್ನು ಹಿಡಿಯುವಂತೆ ಯಾಬೇಚನು ಯಾಚಿಸಿದನು. ದೇವರ ಸಾಂಕೇತಿಕ ಕೈ ಆತನು ಪ್ರಯೋಗಿಸುವ ಶಕ್ತಿ ಆಗಿದೆ. ತನ್ನ ಆರಾಧಕರಿಗೆ ಸಹಾಯಮಾಡಲು ಆತನು ಇದನ್ನು ಬಳಸುತ್ತಾನೆ. (1 ಪೂರ್ವಕಾಲವೃತ್ತಾಂತ 29:12) ತನ್ನಲ್ಲಿ ನಂಬಿಕೆಯಿಡುವವರ ಕಡೆಗೆ ಯೆಹೋವನು “ಮೋಟುಗೈ”ಯವನಲ್ಲ. ಆದ್ದರಿಂದ ಯಾಬೇಚನು ತನ್ನ ಮನದಾಳದ ವಿನಂತಿಗಳನ್ನು ಪೂರೈಸುವಂತೆ ಆ ದೇವರಲ್ಲೇ ಭರವಸೆಯಿಟ್ಟನು.—ಯೆಶಾಯ 59:1.

ಮೂರನೆಯದಾಗಿ ಯಾಬೇಚನು “ಯಾವ ವೇದನೆಯೂ ಉಂಟಾಗದಂತೆ ನನ್ನನ್ನು ರಕ್ಷಿಸಬಾರದೇ” ಎಂದು ಪ್ರಾರ್ಥಿಸಿದನು. ‘ವೇದನೆ ಉಂಟಾಗದಂತೆ’ ಎಂಬ ಪದಗಳು, ಯಾಬೇಚನು ತನಗೆ ಆಪತ್ತುಗಳು ಬರದಂತೆ ಅಲ್ಲ ಬದಲಾಗಿ ಕೆಡುಕಿನಿಂದಾಗುವ ಪರಿಣಾಮಗಳಿಂದ ತಾನು ದುಃಖಿತನಾಗದಂತೆ ಇಲ್ಲವೆ ಕುಗ್ಗಿಹೋಗದಂತೆ ರಕ್ಷಿಸಲಿಕ್ಕಾಗಿ ದೇವರಿಗೆ ಪ್ರಾರ್ಥಿಸಿದನೆಂದು ಸೂಚಿಸುತ್ತಿರಬಹುದು.

ಯಾಬೇಚನ ಪ್ರಾರ್ಥನೆ ಅವನಿಗೆ ಸತ್ಯಾರಾಧನೆಯ ಬಗ್ಗೆ ಇದ್ದ ಕಳಕಳಿ ಮತ್ತು ಪ್ರಾರ್ಥನೆಯನ್ನು ಕೇಳುವಾತನಲ್ಲಿ ಅವನಿಗಿದ್ದ ನಂಬಿಕೆ, ಭರವಸೆಯನ್ನು ತೋರಿಸಿತು. ಯೆಹೋವನು ಈ ಪ್ರಾರ್ಥನೆಗೆ ಹೇಗೆ ಪ್ರತಿಕ್ರಿಯಿಸಿದನು? “ದೇವರು ಅವನ ಮೊರೆಯನ್ನು ಲಾಲಿಸಿದನು” ಎನ್ನುತ್ತಾ ಆ ಚುಟುಕಾದ ವೃತ್ತಾಂತ ಕೊನೆಗೊಳ್ಳುತ್ತದೆ.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು05 10/1 ಪುಟ 9 ಪ್ಯಾರ 7

ಒಂದನೇ ಪೂರ್ವಕಾಲವೃತ್ತಾಂತ ಪುಸ್ತಕದ ಮುಖ್ಯಾಂಶಗಳು

5:10, 18-22. ರಾಜ ಸೌಲನ ದಿನಗಳಲ್ಲಿ, ಯೊರ್ದನ್‌ ಹೊಳೆಯ ಪೂರ್ವದಿಕ್ಕಿನ ಪ್ರಾಂತಗಳಲ್ಲಿ ವಾಸಿಸುತ್ತಿದ್ದ ಕುಲಗಳವರು, ತಮ್ಮ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚಾಗಿದ್ದ ಹಗ್ರೀಯರನ್ನು ಸೋಲಿಸಿಬಿಟ್ಟರು. ಈ ಕುಲಗಳ ರಣವೀರರು ಯೆಹೋವನಲ್ಲಿ ಭರವಸವಿಟ್ಟದ್ದರಿಂದ ಮತ್ತು ಸಹಾಯಕ್ಕಾಗಿ ಆತನ ಮರೆಹೊದದ್ದರಿಂದ ಈ ಜಯವನ್ನು ಸಾಧಿಸಲು ಸಾಧ್ಯವಾಯಿತು. ಬಹುಸಂಖ್ಯಾತ ಶತ್ರುಗಳ ವಿರುದ್ಧವಾದ ನಮ್ಮ ಆಧ್ಯಾತ್ಮಿಕ ಕಾಳಗದಲ್ಲೂ ನಾವು ಯೆಹೋವನಲ್ಲಿ ಪೂರ್ಣ ಭರವಸೆಯುಳ್ಳವರಾಗಿರೋಣ.—ಎಫೆಸ 6:10-17.

ಜನವರಿ 30–ಫೆಬ್ರವರಿ 5

ಬೈಬಲಿನಲ್ಲಿರುವ ನಿಧಿ | 1 ಪೂರ್ವಕಾಲವೃತ್ತಾಂತ 7-9

“ಯೆಹೋವನ ಸಹಾಯ ಇದ್ರೆ ಎಂಥಾ ನೇಮಕ ಸಿಕ್ಕಿದ್ರೂ ಮಾಡಕ್ಕಾಗುತ್ತೆ!”

ಕಾವಲಿನಬುರುಜು05 10/1 ಪುಟ 9 ಪ್ಯಾರ 8

ಒಂದನೇ ಪೂರ್ವಕಾಲವೃತ್ತಾಂತ ಪುಸ್ತಕದ ಮುಖ್ಯಾಂಶಗಳು

9:26, 27. ಲೇವಿಯರಾದ ದ್ವಾರಪಾಲಕರಿಗೆ ತುಂಬ ಜವಾಬ್ದಾರಿಯುತವಾದ ಒಂದು ನೇಮಕವು ಕೊಡಲ್ಪಟ್ಟಿತು. ದೇವಾಲಯದ ಪವಿತ್ರ ಸ್ಥಳಗಳಿಗೆ ನಡಿಸುವ ದ್ವಾರಗಳ ಕೀಲಿಕೈ ಅವರ ಬಳಿ ಇರುತ್ತಿತ್ತು. ಪ್ರತಿ ದಿನ ದ್ವಾರಗಳನ್ನು ತೆರೆಯುವ ವಿಷಯದಲ್ಲಿ ಅವರು ಭರವಸಾರ್ಹರಾಗಿದ್ದರು. ನಮ್ಮ ಕ್ಷೇತ್ರದಲ್ಲಿರುವ ಜನರನ್ನು ಭೇಟಿಮಾಡಿ, ಯೆಹೋವನನ್ನು ಆರಾಧಿಸಲು ಬರುವಂತೆ ಅವರಿಗೆ ಸಹಾಯಮಾಡುವ ಜವಾಬ್ದಾರಿಯು ನಮಗೆ ಕೊಡಲ್ಪಟ್ಟಿದೆ. ನಾವು ಸಹ ಆ ಲೇವಿಯರಾದ ದ್ವಾರಪಾಲಕರಷ್ಟೇ ಭರವಸಾರ್ಹರೂ ವಿಶ್ವಾಸಾರ್ಹರೂ ಆಗಿರಬೇಕಲ್ಲವೇ?

ಕಾವಲಿನಬುರುಜು11 9/15 ಪುಟ 32 ಪ್ಯಾರ 8

ಫೀನೆಹಾಸನಂತೆ ಸವಾಲುಗಳನ್ನು ಎದುರಿಸಿರಿ

ಪ್ರಾಚೀನ ಇಸ್ರಾಯೇಲಿನಲ್ಲಿ ಫೀನೆಹಾಸನಿಗೆ ಭಾರಿ ಜವಾಬ್ದಾರಿಯಿತ್ತು. ಅದನ್ನು ನಿರ್ವಹಿಸುವಾಗ ಎದುರಾದ ಸವಾಲುಗಳನ್ನು ಅವನು ಧೈರ್ಯ, ಒಳನೋಟ ಹಾಗೂ ದೇವರಲ್ಲಿನ ಭರವಸೆಯಿಂದ ಯಶಸ್ವಿಯಾಗಿ ನಿಭಾಯಿಸಿದನು. ದೇವರ ಸಭೆಯನ್ನು ಹೀಗೆ ಶ್ರದ್ಧೆ, ಕಾಳಜಿಯಿಂದ ನೋಡಿಕೊಂಡ ಅವನು ಯೆಹೋವನ ಅನುಗ್ರಹಕ್ಕೆ ಪಾತ್ರನಾದನು. ಸುಮಾರು 1,000 ವರ್ಷಗಳ ಬಳಿಕ ಅವನ ಕುರಿತು ಎಜ್ರನು ದೇವಪ್ರೇರಣೆಯಿಂದ ಹೀಗೆ ಬರೆದನು: “ಆಗ ಎಲ್ಲಾಜಾರನ ಮಗನಾದ ಫೀನೆಹಾಸನು ಅವರ ನಾಯಕನಾಗಿದ್ದನು; ಯೆಹೋವನು ಇವನ ಸಂಗಡ ಇದ್ದನು.” (1 ಪೂರ್ವ. 9:20) ಈ ಮಾತುಗಳು, ಇಂದು ದೇವಜನರ ಮಧ್ಯೆ ಮುಂದಾಳುತ್ವ ವಹಿಸುವವರ ವಿಷಯದಲ್ಲೂ ನಿಜವಾಗಲಿ. ಮಾತ್ರವಲ್ಲ ನಿಷ್ಠೆಯಿಂದ ದೇವರಿಗೆ ಸೇವೆಸಲ್ಲಿಸುವ ಪ್ರತಿಯೊಬ್ಬ ಕ್ರೈಸ್ತನ ವಿಷಯದಲ್ಲೂ ನಿಜವಾಗಲಿ.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು10 12/15 ಪುಟ 21 ಪ್ಯಾರ 6

ಯೆಹೋವನಿಗೆ ಹಾಡಿರಿ!

6 ಹೌದು, ಗೀತೆಗಳಿಂದ ತನ್ನನ್ನು ಸ್ತುತಿಸಬೇಕೆಂದು ಯೆಹೋವನು ತಾನೇ ಪ್ರವಾದಿಗಳ ಮೂಲಕ ತನ್ನ ಆರಾಧಕರಿಗೆ ಆಜ್ಞಾಪಿಸಿದ್ದನು. ಗೀತೆ ರಚನೆಗೆ ಮತ್ತು ಪ್ರಾಯಶಃ ಸಂಗೀತದ ಪೂರ್ವಾಭ್ಯಾಸಕ್ಕೆ ಸಾಕಷ್ಟು ಸಮಯವನ್ನು ಕೊಡಲಾಗುವಂತೆ ಲೇವಿಯರು ಮಾಡಬೇಕಿದ್ದ ಸೇವೆಗಳಿಂದ ಗಾಯಕರಾದ ಲೇವಿಯರಿಗೆ ವಿನಾಯಿತಿ ಕೂಡ ದೊರೆಯುತ್ತಿತ್ತು.—1 ಪೂರ್ವ. 9:33.

ಫೆಬ್ರವರಿ 6-12

ಬೈಬಲಿನಲ್ಲಿರುವ ನಿಧಿ | 1 ಪೂರ್ವಕಾಲವೃತ್ತಾಂತ 10-12

“ದೇವರಿಗೆ ಇಷ್ಟ ಆಗೋ ತರ ನಡ್ಕೊಬೇಕು ಅನ್ನೋ ಆಸೆಯನ್ನು ಜಾಸ್ತಿ ಮಾಡಿಕೊಳ್ಳಿ”

ಕಾವಲಿನಬುರುಜು12 11/15 ಪುಟ 6 ಪ್ಯಾರ 12-13

“ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು”

12 ದಾವೀದನು ನಡೆದುಕೊಂಡ ರೀತಿಯಿಂದಲೂ ನಾವು ಕಲಿಯಬಹುದು. ಅವನು ನಿಯಮಗಳನ್ನಷ್ಟೇ ಅಲ್ಲ ಅವುಗಳ ಹಿಂದಿರುವ ತತ್ವಗಳನ್ನು ಅರಿತುಕೊಂಡನು. ಅವುಗಳಿಗೆ ಅನುಸಾರವಾಗಿ ಜೀವಿಸಲು ಬಯಸಿದನು. ಈ ಸಂದರ್ಭವನ್ನು ಪರಿಗಣಿಸಿ. ಒಮ್ಮೆ ದಾವೀದ “ಬೇತ್ಲೆಹೇಮ್‌ ಊರಿನ . . . ಬಾವಿಯ ನೀರನ್ನು” ಕುಡಿಯಲು ಹಂಬಲಿಸಿದನು. ಆದರೆ ಬೇತ್ಲೆಹೇಮ್‌ ಫಿಲಿಷ್ಟಿಯರ ವಶದಲ್ಲಿತ್ತು. ಆದರೂ ದಾವೀದನ ಮೂವರು ಶೂರರು ತಮ್ಮ ಜೀವವನ್ನು ಒತ್ತೆಯಿಟ್ಟು ಫಿಲಿಷ್ಟಿಯ ದಂಡಿನೊಳಗೆ ನುಗ್ಗಿಹೋಗಿ ನೀರನ್ನು ತಂದರು. ಆದರೆ ದಾವೀದನು “ನಾನು ಇದನ್ನು ಕುಡಿಯುವದೇ ಇಲ್ಲ ಎಂದು ಹೇಳಿ ಅದನ್ನು ಯೆಹೋವನ ಮುಂದೆ ಹೊಯ್ದನು.” ಕಾರಣ? “ತಮ್ಮ ಜೀವವನ್ನು ಸಮರ್ಪಿಸಿದ [ಒತ್ತೆಯಿಟ್ಟು, NW] ಈ ಪುರುಷರ ರಕ್ತವನ್ನು ನಾನು ಕುಡಿಯಲೋ! ನನ್ನ ದೇವರು ಈ ಕಾರ್ಯವನ್ನು ನನಗೆ ದೂರಮಾಡಲಿ. ಅವರು ತಮ್ಮ ಜೀವವನ್ನೇ ಸಮರ್ಪಿಸಿ [ಒತ್ತೆಯಿಟ್ಟು, NW] ಇದನ್ನು ತಂದು ಕೊಟ್ಟರು” ಎಂದನು ದಾವೀದ.—1 ಪೂರ್ವ. 11:15-19.

13 ರಕ್ತವನ್ನು ತಿನ್ನಬಾರದು ಅದನ್ನು ‘ಯೆಹೋವನ ಮುಂದೆ ಹೊಯ್ದುಬಿಡಬೇಕೆಂಬ’ ಧರ್ಮಶಾಸ್ತ್ರದ ನಿಯಮ ದಾವೀದನಿಗೆ ಗೊತ್ತಿತ್ತು. ಆ ನಿಯಮ ಏಕಿದೆ ಎನ್ನುವುದನ್ನು ಕೂಡ ಅರ್ಥಮಾಡಿಕೊಂಡಿದ್ದನು. “ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರ” ಎನ್ನುವುದು ಅವನಿಗೆ ತಿಳಿದಿತ್ತು. ಆದರೆ ಶೂರರು ತಂದಿದ್ದು ನೀರು. ರಕ್ತ ಅಲ್ವಲ್ಲಾ! ಹಾಗಾದರೆ ಅದನ್ನು ಕುಡಿಯಲು ದಾವೀದನು ನಿರಾಕರಿಸಿದ್ದೇಕೆ? ಅವನು ರಕ್ತದ ಕುರಿತಾದ ನಿಯಮದ ಹಿಂದಿರುವ ಮೂಲತತ್ವವನ್ನು ಗೌರವಿಸಿದನು. ಆ ಮೂವರು ಶೂರರು ತಮ್ಮ ಪ್ರಾಣದ ಹಂಗನ್ನು ತೊರೆದು ನೀರನ್ನು ತಂದಕಾರಣ ಆ ನೀರು ಅವರ ರಕ್ತದಷ್ಟೇ ಅಮೂಲ್ಯವಾಗಿತ್ತು. ಆ ನೀರನ್ನು ಕುಡಿಯಲು ಯೋಚಿಸುವುದು ಕೂಡ ದಾವೀದನಿಗೆ ಅಸಾಧ್ಯವಾಗಿತ್ತು. ಹಾಗಾಗಿ ಅದನ್ನು ಕುಡಿಯುವ ಬದಲು ನೆಲದ ಮೇಲೆ ಸುರಿದುಬಿಟ್ಟನು.—ಯಾಜ. 17:11; ಧರ್ಮೋ. 12:23, 24.

ಕಾವಲಿನಬುರುಜು18.06 ಪುಟ 17 ಪ್ಯಾರ 5-6

ನಿಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಡಿ

5 ನಮಗೆ ದೇವರ ನಿಯಮಗಳಿಂದ ಸಹಾಯ ಸಿಗಬೇಕಾದರೆ ಅವುಗಳನ್ನು ಓದಿದರೆ ಅಥವಾ ಅವುಗಳ ಬಗ್ಗೆ ತಿಳಿದುಕೊಂಡರೆ ಸಾಕಾಗಲ್ಲ. ಅವುಗಳನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು. “ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೇದನ್ನು ಪ್ರೀತಿಸಿರಿ” ಎಂದು ಬೈಬಲ್‌ ಹೇಳುತ್ತದೆ. (ಆಮೋ. 5:15) ಇದನ್ನು ನಾವು ಹೇಗೆ ಮಾಡಬಹುದು? ನಾವು ಯೆಹೋವನ ದೃಷ್ಟಿಕೋನದಿಂದ ವಿಷಯಗಳನ್ನು ನೋಡಲು ಕಲಿಯಬೇಕು. ಒಂದು ಉದಾಹರಣೆ ಗಮನಿಸಿ. ನಿಮಗೆ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲ. ಅದಕ್ಕೆ ಡಾಕ್ಟರ್‌ ನಿಮಗೆ, ಆರೋಗ್ಯಕ್ಕೆ ಒಳ್ಳೇದಾದ ಆಹಾರ ತಿನ್ನಬೇಕು, ಚೆನ್ನಾಗಿ ವ್ಯಾಯಾಮ ಮಾಡಬೇಕು, ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಬೇಕು ಎಂದು ಹೇಳುತ್ತಾರೆ. ಅವರು ಹೇಳಿದ್ದನ್ನೆಲ್ಲ ನೀವು ಮಾಡುತ್ತೀರಿ. ಆಗ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ. ನಿಮಗೆ ಒಳ್ಳೇ ಸಲಹೆಗಳನ್ನು ಕೊಟ್ಟ ಆ ಡಾಕ್ಟರ್‌ ಬಗ್ಗೆ ಹೇಗನಿಸುತ್ತದೆ?

6 ಅದೇ ರೀತಿ, ನಮ್ಮ ಸೃಷ್ಟಿಕರ್ತನು ನಮಗೆ ನಿಯಮಗಳನ್ನು ಕೊಟ್ಟಿದ್ದಾನೆ. ಅವು ನಮ್ಮನ್ನು ಪಾಪದ ಕೆಟ್ಟ ಪರಿಣಾಮಗಳಿಂದ ಕಾಪಾಡಿ ಉತ್ತಮ ರೀತಿಯಲ್ಲಿ ಜೀವನ ಮಾಡಲು ಸಹಾಯ ಮಾಡುತ್ತವೆ. ಉದಾಹರಣೆಗೆ ಸುಳ್ಳು ಹೇಳಬಾರದು, ಮೋಸ, ಕಳ್ಳತನ, ಅನೈತಿಕತೆ ಮಾಡಬಾರದು, ಕ್ರೂರಿಗಳಾಗಿ ಇರಬಾರದು, ಮಾಟಮಂತ್ರ ಮಾಡಬಾರದು ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 6:16-19 ಓದಿ; ಪ್ರಕ. 21:8) ಯೆಹೋವನು ಹೇಳಿದಂತೆ ಮಾಡಿ ನಾವು ಒಳ್ಳೇ ಫಲಿತಾಂಶಗಳನ್ನು ಪಡೆದಾಗ ಆತನ ಮೇಲೆ ಮತ್ತು ಆತನ ನಿಯಮಗಳ ಮೇಲೆ ನಮಗೆ ಪ್ರೀತಿ ಹೆಚ್ಚಾಗುತ್ತದೆ.

ಬೈಬಲಿನಲ್ಲಿರುವ ರತ್ನಗಳು

it-1-E ಪುಟ 1058 ಪ್ಯಾರ 5-6

ಹೃದಯ

‘ಪೂರ್ಣ ಹೃದಯದಿಂದ’ ಆರಾಧನೆ ಮಾಡೋದು. ಒಬ್ಬ ವ್ಯಕ್ತಿ “ಎರಡು ಮನಸ್ಸಿನವನೂ” ಆಗಿರುತ್ತಾನೆ ಅಂತ ಬೈಬಲ್‌ ಹೇಳುತ್ತೆ. (ಅಕ್ಷರಾರ್ಥ, ಒಂದು ಹೃದಯ ಇನ್ನೊಂದು ಹೃದಯ) ಇಂಥವರು ಇಬ್ಬರು ಯಜಮಾನರಿಗೆ ಸೇವೆ ಮಾಡಿದ ಹಾಗಿರುತ್ತೆ. ಇವರು ಮನಸ್ಸಲ್ಲೊಂದು ಇಟ್ಕೊಂಡು ಬಾಯಲ್ಲಿ ಇನ್ನೊಂದು ಹೇಳಿ ಬೇರೆಯವರನ್ನ ವಂಚಿಸುತ್ತಾರೆ. (1ಪೂರ್ವ 12:33 ಪಾದಟಿಪ್ಪಣಿ; ಕೀರ್ತ 12:2) ಇಂಥವರನ್ನೇ ಯೇಸು ಕಪಟಿಗಳು ಅಂತ ಬೈದನು.—ಮತ್ತಾ 15:7, 8.

ನಾವು ಎರಡು ಮನಸ್ಸಿನವರಾಗಿದ್ದರೆ ಯೆಹೋವನಿಗೆ ಇಷ್ಟ ಆಗಲ್ಲ. ಅದಕ್ಕೆ ನಾವು ಆತನನ್ನ ಪೂರ್ಣ ಹೃದಯದಿಂದ ಆರಾಧನೆ ಮಾಡಬೇಕು. (1ಪೂರ್ವ 28:9) ಇದನ್ನ ಮಾಡೋದು ಅಷ್ಟೊಂದು ಸುಲಭ ಅಲ್ಲ. ಯಾಕಂದ್ರೆ ನಮ್ಮ ‘ಹೃದಯ ಕೆಟ್ಟದನ್ನೇ ಆಸೆಪಡುತ್ತೆ’ ಮತ್ತು ಅದನ್ನ ಮಾಡೋಕೆ ‘ಹಿಂದೆ ಮುಂದೆ ನೋಡಲ್ಲ.’ (ಯೆರೆ 17:9, 10; ಆದಿ 8:21) ಹಾಗಾದ್ರೆ ನಾವು ಪೂರ್ಣ ಹೃದಯನ ಕಾಪಾಡಿಕೊಳ್ಳೋಕೆ ಏನು ಮಾಡಬೇಕು? ನಾವು ಯೆಹೋವನ ಹತ್ರ ಬೇಡಿಕೊಳ್ಳಬೇಕು, (ಕೀರ್ತ 119:145; ಪ್ರಲಾ 3:41) ದಿನಾಲೂ ಬೈಬಲನ್ನ ಓದಬೇಕು, (ಎಜ್ರ 7:10; ಜ್ಞಾನೋ 15:28) ಸಿಹಿಸುದ್ದಿ ಸಾರೋಕೆ ನಮ್ಮಿಂದ ಆದಷ್ಟು ಪ್ರಯತ್ನ ಮಾಡಬೇಕು (ಯೆರೆ 20:9 ಹೋಲಿಸಿ) ಮತ್ತು ಯಾರು ಯೆಹೋವನನ್ನ ಪೂರ್ಣ ಹೃದಯದಿಂದ ಆರಾಧನೆ ಮಾಡ್ತಾರೋ ಅಂಥವರ ಜೊತೆ ಸಹವಾಸ ಮಾಡಬೇಕು.—2ಅರ 10:15, 16 ಹೋಲಿಸಿ.

ಫೆಬ್ರವರಿ 13-19

ಬೈಬಲಿನಲ್ಲಿರುವ ನಿಧಿ | 1 ಪೂರ್ವಕಾಲವೃತ್ತಾಂತ 13-16

“ಏನೇ ಮಾಡಿದ್ರೂ ಯೆಹೋವ ಹೇಳಿದ ತರಾನೇ ಮಾಡಿ”

ಕಾವಲಿನಬುರುಜು03 5/1 ಪುಟ 10-11

“ಯೆಹೋವನು ಎಲ್ಲಿ” ಎಂದು ನೀವು ಕೇಳುತ್ತೀರೋ?

12 ಮಂಜೂಷವು ಇಸ್ರಾಯೇಲಿಗೆ ತರಲ್ಪಟ್ಟು, ಕಿರ್ಯತ್ಯಾರೀಮಿನಲ್ಲಿ ಅನೇಕ ವರ್ಷಗಳ ವರೆಗೆ ಇಡಲ್ಪಟ್ಟ ಬಳಿಕ, ಅರಸನಾದ ದಾವೀದನು ಅದನ್ನು ಯೆರೂಸಲೇಮಿಗೆ ರವಾನಿಸಲು ಬಯಸಿದನು. ಅವನು ಗೋತ್ರಪ್ರಮುಖರನ್ನು ಸಂಪರ್ಕಿಸಿ, ‘ಅವರಿಗೆ ಒಳ್ಳೇದಾಗಿ ಕಂಡುಬರುವುದಾದರೆ ಮತ್ತು ಅದು ಯೆಹೋವನಿಗೆ ಸ್ವೀಕಾರಾರ್ಹವಾಗಿರುವುದಾದರೆ’ ಮಂಜೂಷವನ್ನು ಅಲ್ಲಿಂದ ಸ್ಥಳಾಂತರಿಸಬೇಕೆಂದು ಹೇಳಿದನು. ಆದರೆ ಈ ವಿಷಯದಲ್ಲಿ ಯೆಹೋವನ ಚಿತ್ತವೇನು ಎಂಬುದನ್ನು ವಿಚಾರಿಸಿ ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನವನ್ನು ಮಾಡಲು ಅವನು ತಪ್ಪಿಹೋದನು. ಅವನು ಹಾಗೆ ಮಾಡುತ್ತಿದ್ದಲ್ಲಿ, ಮಂಜೂಷವು ಎಂದೂ ಒಂದು ಕಮಾನುಬಂಡಿಗೆ ಏರಿಸಲ್ಪಡುತ್ತಿರಲಿಲ್ಲ. ಅದಕ್ಕೆ ಬದಲಾಗಿ, ದೇವರು ಸ್ಪಷ್ಟವಾಗಿ ಸೂಚನೆ ನೀಡಿದ್ದಂತೆಯೇ, ಕೆಹಾತ್ಯ ಲೇವಿಯರು ಅದನ್ನು ತಮ್ಮ ಹೆಗಲುಗಳ ಮೇಲೆ ಹೊತ್ತುಕೊಂಡುಹೋಗುತ್ತಿದ್ದರು. ದಾವೀದನು ಅನೇಕಬಾರಿ ಯೆಹೋವನ ಬಳಿ ವಿಚಾರಿಸಿದ್ದನಾದರೂ, ಈ ಸಂದರ್ಭದಲ್ಲಿ ಯೋಗ್ಯವಾದ ರೀತಿಯಲ್ಲಿ ಹಾಗೆ ಮಾಡಲು ತಪ್ಪಿಹೋಗಿದ್ದನು. ಇದರ ಫಲಿತಾಂಶ ವಿಪತ್ಕಾರಕವಾಗಿತ್ತು. ಸಮಯಾನಂತರ ದಾವೀದನು ಒಪ್ಪಿಕೊಂಡಿದ್ದು: “ಧರ್ಮವಿಧಿಗನುಸಾರ ನಾವು ಯೆಹೋವನ ಬಳಿ ವಿಚಾರಿಸದ ಕಾರಣ, ಆತನು ನಮ್ಮಲ್ಲಿ ಒಬ್ಬನನ್ನು ಸಂಹರಿಸಿದನು.”—1 ಪೂರ್ವಕಾಲವೃತ್ತಾಂತ 13:1-3; 15:11-13, NW; ಅರಣ್ಯಕಾಂಡ 4:4-6, 15; 7:1-9.

ಕಾವಲಿನಬುರುಜು03 5/1 ಪುಟ 11 ಪ್ಯಾರ 13

“ಯೆಹೋವನು ಎಲ್ಲಿ” ಎಂದು ನೀವು ಕೇಳುತ್ತೀರೋ?

13 ಕಟ್ಟಕಡೆಗೆ ಲೇವಿಯರು ಮಂಜೂಷವನ್ನು ಓಬೇದೆದೋಮನ ಮನೆಯಿಂದ ಯೆರೂಸಲೇಮಿಗೆ ಕೊಂಡೊಯ್ದಾಗ, ದಾವೀದನಿಂದ ರಚಿಸಲ್ಪಟ್ಟ ಒಂದು ಕೀರ್ತನೆಯು ಹಾಡಲ್ಪಟ್ಟಿತು. ಇದರಲ್ಲಿ ಹೃತ್ಪೂರ್ವಕವಾದ ಈ ಜ್ಞಾಪನವು ಒಳಗೂಡಿತ್ತು: “ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿರಿ [“ಹುಡುಕಿರಿ,” NW]; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ. ಆತನ ಅದ್ಭುತಕೃತ್ಯ ಮಹತ್ಕಾರ್ಯ ನ್ಯಾಯ ನಿರ್ಣಯಗಳನ್ನು ನೆನಪುಮಾಡಿಕೊಳ್ಳಿರಿ.”—1 ಪೂರ್ವಕಾಲವೃತ್ತಾಂತ 16:11, 12.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು14 1/15 ಪುಟ 10 ಪ್ಯಾರ 14

ನಿತ್ಯತೆಯ ಅರಸನಾದ ಯೆಹೋವನನ್ನು ಆರಾಧಿಸಿ

14 ದಾವೀದನು ಪವಿತ್ರವಾದ ಒಡಂಬಡಿಕೆಯ ಮಂಜೂಷವನ್ನು ಯೆರೂಸಲೇಮಿಗೆ ತಂದ ಸಂತೋಷ ಸಡಗರದ ಸಂದರ್ಭದಲ್ಲಿ ಲೇವಿಯರು ಹಾಡಿದ ಸ್ತುತಿಗೀತೆಯಲ್ಲಿ ಗಮನಾರ್ಹ ಹೇಳಿಕೆಯೊಂದಿದೆ. ಆ ಮಾತು 1 ಪೂರ್ವಕಾಲವೃತ್ತಾಂತ 16:31ರಲ್ಲಿದೆ: “ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆಂದು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.” ಆದರೆ ನೀವು ಕೇಳಬಹುದು, ‘ಯೆಹೋವನು ನಿತ್ಯತೆಯ ಅರಸನು ಅಲ್ಲವೇ? ಹೀಗಿರುವಾಗ ಆ ಸಮಯದಲ್ಲಿ ಆತನು ರಾಜ್ಯಾಧಿಕಾರ ವಹಿಸಿದ್ದಾನೆ ಎಂದು ಹೇಳುವುದು ಹೇಗೆ?’ ಅದು ಹೇಗೆಂದರೆ, ಒಂದು ನಿರ್ದಿಷ್ಟ ಸಮಯದಲ್ಲಿ ಇಲ್ಲವೆ ಒಂದು ಸನ್ನಿವೇಶವನ್ನು ನಿಭಾಯಿಸಲಿಕ್ಕಾಗಿ ಯೆಹೋವನು ತನ್ನ ರಾಜತ್ವವನ್ನು ತೋರ್ಪಡಿಸಿದರೆ ಅಥವಾ ತನ್ನ ಪ್ರತಿನಿಧಿಯಾಗಿ ಒಬ್ಬನನ್ನು ನೇಮಿಸಿದರೆ ಆತನು ರಾಜ್ಯಾಧಿಕಾರವನ್ನು ವಹಿಸಿಕೊಂಡನು ಎಂದರ್ಥ. ಯೆಹೋವನು ಈ ರೀತಿ ರಾಜತ್ವ ನಡೆಸುವುದು ದೂರದ ಭವಿಷ್ಯತ್ತಿನ ವರೆಗೂ ಮಹತ್ವಾರ್ಥವನ್ನು ಹೊಂದಿದೆ. ದಾವೀದನು ಸಾಯುವುದಕ್ಕೆ ಮುಂಚೆ ಯೆಹೋವನು ಅವನಿಗೆ ಅವನ ರಾಜತ್ವವು ನಿತ್ಯನಿರಂತಕ್ಕೂ ಮುಂದುವರಿಯುವುದೆಂದು ಮಾತುಕೊಟ್ಟನು. “ನಿನ್ನಿಂದ ಹುಟ್ಟುವವನನ್ನು ನೆಲೆಗೊಳಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು” ಎಂದು ಹೇಳಿದನು. (2 ಸಮು. 7:12, 13) ಈ ವಾಗ್ದಾನಕ್ಕನುಸಾರ ದಾವೀದನಿಂದ ‘ಹುಟ್ಟುವವನು’ 1,000ಕ್ಕೂ ಹೆಚ್ಚು ವರ್ಷಗಳ ಬಳಿಕ ಬಂದನು. ಅವನು ಯಾರು? ಅವನು ಯಾವಾಗ ರಾಜನಾದನು?

ಫೆಬ್ರವರಿ 20-26

ಬೈಬಲಿನಲ್ಲಿರುವ ನಿಧಿ |1 ಪೂರ್ವಕಾಲವೃತ್ತಾಂತ 17-19

“ಬೇಜಾರು ಮಾಡ್ಕೊಬೇಡಿ, ನಿಮ್ಮಿಂದ ಆಗೋದನ್ನ ಖುಷಿಯಿಂದ ಮಾಡಿ”

ಕಾವಲಿನಬುರುಜು06 8/1 ಪುಟ 12 ಪ್ಯಾರ 1

ಯೆಹೋವನ ಸಂಘಟನೆಯ ಒಳ್ಳೇ ಸಂಗತಿಗಳ ಮೇಲೆ ಗಮನ ಕೇಂದ್ರೀಕರಿಸಿ

ಪುರಾತನಕಾಲದ ಇಸ್ರಾಯೇಲ್‌ ಜನಾಂಗದವನಾಗಿದ್ದ ದಾವೀದನು, ಹೀಬ್ರು ಶಾಸ್ತ್ರಗಳಲ್ಲಿ ಚರ್ಚಿಸಲ್ಪಟ್ಟಿರುವ ಅತಿ ಗಮನಾರ್ಹ ವ್ಯಕ್ತಿಗಳಲ್ಲಿ ಒಬ್ಬನು. ಒಬ್ಬ ಕುರುಬನು, ಸಂಗೀತಕಾರನು, ಪ್ರವಾದಿ ಮತ್ತು ರಾಜನಾಗಿದ್ದ ಇವನು ಯೆಹೋವ ದೇವರಲ್ಲಿ ಸಂಪೂರ್ಣ ಭರವಸೆಯನ್ನಿಟ್ಟಿದ್ದನು. ಯೆಹೋವನೊಂದಿಗೆ ಅವನಿಗಿದ್ದ ಗಾಢವಾದ ಆಪ್ತ ಸಂಬಂಧವು, ದೇವರಿಗಾಗಿ ಒಂದು ಆಲಯವನ್ನು ಕಟ್ಟಬೇಕೆಂಬ ಆಸೆಯನ್ನು ಅವನಲ್ಲಿ ಚಿಗುರಿಸಿತು. ಆ ಆಲಯವು ಇಸ್ರಾಯೇಲಿನಲ್ಲಿ ಸತ್ಯಾರಾಧನೆಯ ಕೇಂದ್ರವಾಗಿರಲಿತ್ತು. ಆ ಆಲಯ ಮತ್ತು ಅಲ್ಲಿ ನಡೆಯುವ ಕೆಲಸವು ದೇವಜನರಿಗೆ ಆನಂದವನ್ನೂ ಆಶೀರ್ವಾದಗಳನ್ನೂ ತರಲಿದ್ದವೆಂದು ದಾವೀದನಿಗೆ ತಿಳಿದಿತ್ತು. ಆದುದರಿಂದಲೇ ಅವನು ಹಾಡಿದ್ದು: “ನೀನು ಆಯ್ದುಕೊಂಡು ನಿನ್ನ ಬಳಿಗೆ ಬರಮಾಡಿಕೊಳ್ಳುವವನು ಧನ್ಯನು; ಏಕೆಂದರೆ ನಿನ್ನ ಅಂಗಳಗಳಲ್ಲಿ ಅವನು ವಾಸವಾಗಿರುವನು; ನಿನ್ನ ಪರಿಶುದ್ಧ ಮಂದಿರವಾದ ನಿನ್ನ ಆಲಯದ ಒಳ್ಳೆಯ ಸಂಗತಿಗಳಿಂದ ನಾವು ತೃಪ್ತರಾಗುವೆವು.”—ಕೀರ್ತನೆ 65:4, NIBV.

ಕಾವಲಿನಬುರುಜು21.08 ಪುಟ 22-23 ಪ್ಯಾರ 11

ಇರೋ ನೇಮಕವನ್ನ ಖುಷಿಯಿಂದ ಮಾಡಿ

11 ಯೆಹೋವನ ಸೇವೆಲಿ ನಿಮಗೆ ಸಿಗೋ ಕೆಲಸನ ಕಷ್ಟಪಟ್ಟು ಚೆನ್ನಾಗಿ ಮಾಡಿ. ಆಗ ನಿಮ್ಮ ಖುಷಿ ಇನ್ನೂ ಜಾಸ್ತಿ ಆಗುತ್ತೆ. “ಜಾಸ್ತಿ ಸಮಯ” ಸಿಹಿಸುದ್ದಿ ಸಾರಿ, ಸಭೆ ಕೆಲಸಗಳಲ್ಲಿ ಬಿಜ಼ಿ ಆಗಿರಿ. (ಅ. ಕಾ. 18:5; ಇಬ್ರಿ. 10:24,25) ಕೂಟಗಳಿಗೆ ಚೆನ್ನಾಗಿ ತಯಾರಿಮಾಡಿ. ಒಳ್ಳೇ ಉತ್ತರಗಳನ್ನ ಕೊಡಿ. ವಾರಮಧ್ಯದ ಕೂಟದಲ್ಲಿ ವಿದ್ಯಾರ್ಥಿ ನೇಮಕನ ಚೆನ್ನಾಗಿ ಮಾಡಿ. ಕೊಟ್ಟ ಕೆಲಸನ ಹೇಳಿದ ಸಮಯಕ್ಕೆ ನಿಯತ್ತಾಗಿ ಮಾಡಿ. ‘ಒಂದು ಚಿಕ್ಕ ಕೆಲಸಕ್ಕೆ ಅಷ್ಟೊಂದು ಸಮಯ ಕೊಡಬೇಕಾ?’ ಅಂತ ನೆನಸಬೇಡಿ. ಒಂದು ಕೆಲಸನಾ ಚೆನ್ನಾಗಿ ಮಾಡೋಕೆ ಕಲಿಯಿರಿ. (ಜ್ಞಾನೋ. 22:29) ಯೆಹೋವನ ಸೇವೆನ ಕಷ್ಟಪಟ್ಟು ಚೆನ್ನಾಗಿ ಮಾಡಿದ್ರೆ ನಿಮ್ಮ ಮತ್ತು ಯೆಹೋವನ ಸ್ನೇಹ ಚೆನ್ನಾಗಿರುತ್ತೆ, ನಿಮ್ಮ ಖುಷಿ ಇನ್ನೂ ಜಾಸ್ತಿ ಆಗುತ್ತೆ. (ಗಲಾ. 6:4) ಅಷ್ಟೇ ಅಲ್ಲ, ನೀವು ಇಷ್ಟಪಡೋ ಸುಯೋಗ ಬೇರೆಯವರಿಗೆ ಸಿಕ್ಕಿದಾಗ ನೀವು ಬೇಜಾರು ಮಾಡಿಕೊಳ್ಳಲ್ಲ, ಖುಷಿಯಾಗಿ ಇರ್ತೀರ.—ರೋಮ. 12:15; ಗಲಾ. 5:26.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು20.02 ಪುಟ 12, ಚೌಕ

ಯೆಹೋವನನ್ನು ನಾವು ತುಂಬ ಪ್ರೀತಿ ಮಾಡ್ತೇವೆ

ಯೆಹೋವನು ನನ್ನನ್ನು ನೋಡ್ತಾನಾ?

‘ಈ ಭೂಮಿಯಲ್ಲಿ ಇಷ್ಟೊಂದು ಕೋಟಿಗಟ್ಟಲೆ ಜನ್ರಿರುವಾಗ ಯೆಹೋವನು ನನ್ನನ್ನು ಯಾಕೆ ನೋಡ್ತಾನೆ?’ ಅಂತ ನಿಮಗೆ ಯಾವತ್ತಾದ್ರೂ ಅನ್ಸಿದ್ಯಾ? ದಾವೀದನಿಗೂ ಅದೇ ರೀತಿ ಅನ್ಸಿತ್ತು. ಆತನು, “ಯೆಹೋವನೇ, ಮನುಷ್ಯನು ಎಷ್ಟು ಮಾತ್ರದವನು? ಅವನನ್ನು ನೀನು ಯಾಕೆ ನೆನಸಬೇಕು? ಮಾನವನು ಎಷ್ಟರವನು? ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು?” ಅಂತ ಬರೆದನು. (ಕೀರ್ತ. 144:3) ತನ್ನ ಬಗ್ಗೆ ಯೆಹೋವನಿಗೆ ಚೆನ್ನಾಗಿ ಗೊತ್ತಿದೆ ಅನ್ನೋ ದೃಢಭರವಸೆ ದಾವೀದನಿಗಿತ್ತು. (1ಪೂರ್ವ. 17:16-18) ಇಂದು ನೀವು ಯೆಹೋವನಿಗೆ ತೋರಿಸೋ ಪ್ರೀತಿಯನ್ನ ಆತನು ಗಮನಿಸ್ತಿದ್ದಾನೆ ಅಂತ ತನ್ನ ವಾಕ್ಯ ಮತ್ತು ಸಂಘಟನೆಯ ಮೂಲಕ ಆಶ್ವಾಸನೆ ಕೊಡ್ತಿದ್ದಾನೆ. ಆತನ ಈ ಆಶ್ವಾಸನೆಯ ಮೇಲೆ ಭರವಸೆ ಇಡೋಕೆ ಸಹಾಯ ಮಾಡುವಂಥ ಕೆಲವು ವಚನಗಳನ್ನ ಈಗ ಗಮನಿಸಿ:

• ನೀವು ತಾಯಿಯ ಗರ್ಭದಲ್ಲಿರುವಾಗಲೇ ಯೆಹೋವನು ನಿಮ್ಮನ್ನು ನೋಡಿದ್ದಾನೆ.—ಕೀರ್ತ. 139:16.

• ನಿಮ್ಮ ಹೃದಯದಲ್ಲೇನಿದೆ, ನೀವು ಏನು ಯೋಚಿಸ್ತೀರಿ ಅನ್ನೋದು ಯೆಹೋವನಿಗೆ ಗೊತ್ತಿದೆ.—1ಪೂರ್ವ. 28:9.

• ನಿಮ್ಮಲ್ಲಿ ಒಬ್ಬೊಬ್ರು ಮಾಡೋ ಪ್ರಾರ್ಥನೆಯನ್ನೂ ಯೆಹೋವನು ಕಿವಿಗೊಟ್ಟು ಕೇಳ್ತಾನೆ.—ಕೀರ್ತ. 65:2.

• ನೀವು ನಡ್ಕೊಳ್ಳೋ ರೀತಿಯಿಂದ ಒಂದೋ ಯೆಹೋವನಿಗೆ ಖುಷಿ ಆಗುತ್ತೆ, ಇಲ್ಲಾ ದುಃಖ ಆಗುತ್ತೆ.—ಜ್ಞಾನೋ. 27:11.

• ಯೆಹೋವನೇ ನಿಮ್ಮನ್ನ ತನ್ನ ಕಡೆಗೆ ಸೆಳೆದಿದ್ದಾನೆ.—ಯೋಹಾ. 6:44.

• ಯೆಹೋವನಿಗೆ ನಿಮ್ಮ ಬಗ್ಗೆ ಎಷ್ಟು ಚೆನ್ನಾಗಿ ಗೊತ್ತಿದೆ ಅಂದ್ರೆ ನೀವು ಸತ್ರೂ ನಿಮ್ಮನ್ನ ಪುನರುತ್ಥಾನ ಮಾಡ್ತಾನೆ. ಆಗ ಯೆಹೋವನು ನಿಮ್ಗೆ ಹೊಸ ದೇಹ ಕೊಡ್ತಾನೆ. ನಿಮ್ಮ ನೆನಪುಗಳು, ಸ್ವಭಾವ ಎಲ್ಲನೂ ಈಗ ಇರೋ ತರನೇ ಇರುತ್ತೆ.—ಯೋಹಾ. 11:21-26, 39-44; ಅ.ಕಾ. 24:15.

ಫೆಬ್ರವರಿ 27–ಮಾರ್ಚ್‌ 5

ಬೈಬಲಿನಲ್ಲಿರುವ ನಿಧಿ | 1 ಪೂರ್ವಕಾಲವೃತ್ತಾಂತ 20-22

“ಯೆಹೋವನ ಸೇವೆನ ಚೆನ್ನಾಗಿ ಮಾಡೋಕೆ ಯುವ ಜನರಿಗೆ ಸಹಾಯ ಮಾಡಿ”

ಕಾವಲಿನಬುರುಜು17.01 ಪುಟ 29 ಪ್ಯಾರ 8

ನಂಬಿಗಸ್ತ ಪುರುಷರಿಗೆ ಜವಾಬ್ದಾರಿ ವಹಿಸಿಕೊಡಿ

8 ಒಂದನೇ ಪೂರ್ವಕಾಲವೃತ್ತಾಂತ 22:5 ಓದಿ. ಸೊಲೊಮೋನ ಇನ್ನೂ ಚಿಕ್ಕ ಹುಡುಗ, ಅವನಿಂದ ಇಷ್ಟು ದೊಡ್ಡ ಕೆಲಸವನ್ನು ಹೇಗೆ ಮಾಡಲಿಕ್ಕಾಗುತ್ತೆ ಎಂದು ದಾವೀದ ಯೋಚಿಸಿರಬೇಕು. ಯಾಕೆಂದರೆ ಸೊಲೊಮೋನ ‘ಎಳೇ ಪ್ರಾಯದವನಾಗಿದ್ದ,’ ಅವನಿಗೆ ಹೆಚ್ಚು ಅನುಭವ ಇರಲಿಲ್ಲ. ಆದರೆ ಆಲಯವನ್ನು ‘ಅಧಿಕ ಶೋಭಾಯಮಾನವಾಗಿ’ ಕಟ್ಟಬೇಕಿತ್ತು. ಈ ವಿಶೇಷ ಕೆಲಸವನ್ನು ಮಾಡಿ ಮುಗಿಸಲು ಯೆಹೋವನು ಸೊಲೊಮೋನನಿಗೆ ಸಹಾಯ ಮಾಡುತ್ತಾನೆಂದು ದಾವೀದ ಅರ್ಥಮಾಡಿಕೊಂಡನು. ಸೊಲೊಮೋನ ಇಷ್ಟು ಬೃಹತ್ತಾದ ಕೆಲಸವನ್ನು ಮಾಡಿ ಮುಗಿಸಲು ದಾವೀದನು ತನ್ನಿಂದಾದ ಸಹಾಯವನ್ನು ಮಾಡಿದನು.

ಕಾವಲಿನಬುರುಜು17.01 ಪುಟ 29 ಪ್ಯಾರ 7

ನಂಬಿಗಸ್ತ ಪುರುಷರಿಗೆ ಜವಾಬ್ದಾರಿ ವಹಿಸಿಕೊಡಿ

7 ದಾವೀದನು ಯೆಹೋವನಿಗೆ ಒಂದು ಆಲಯವನ್ನು ಕಟ್ಟಲು ತುಂಬ ಆಸೆಪಟ್ಟನು. ಆದರೆ ದೇವರ ಯೋಚನೆ ಬೇರೆ ಅಂತ ತಿಳಿದಾಗ ತುಂಬ ದುಃಖ ಆಗಿರಬೇಕು. ಆದರೂ ತನ್ನ ಮಗ ಕಟ್ಟಲಿದ್ದ ಆಲಯದ ಕೆಲಸಕ್ಕೆ ಸಂಪೂರ್ಣ ಬೆಂಬಲ ಕೊಟ್ಟನು. ಈ ಕೆಲಸದಲ್ಲಿ ಯಾರೆಲ್ಲಾ ಪಾಲ್ಗೊಳ್ಳಬೇಕೆಂದು ಪಟ್ಟಿಮಾಡಿದನು. ಆಲಯದಲ್ಲಿ ಉಪಯೋಗಿಸಲಿಕ್ಕಾಗಿ ಕಬ್ಬಿಣ, ತಾಮ್ರ, ಬೆಳ್ಳಿ, ಚಿನ್ನ, ಮರವನ್ನು ರಾಶಿರಾಶಿಯಾಗಿ ಶೇಖರಿಸಿದನು. ಈ ಆಲಯವನ್ನು ಕಟ್ಟಿದ ಕೀರ್ತಿ ತನಗೆ ಬರಲ್ಲ ಎಂದು ದಾವೀದನಿಗೆ ಗೊತ್ತಿತ್ತು. ಅದನ್ನು ಮುಂದೆ ಸೊಲೊಮೋನ ಕಟ್ಟಿದ ಆಲಯ ಎಂದೇ ಕರೆಯಲಾಯಿತು. ತನಗೆ ಕೀರ್ತಿ ಸಿಗಲ್ಲ ಅಂತ ಗೊತ್ತಿದ್ದರೂ ದಾವೀದ ಸೊಲೊಮೋನನಿಗೆ, “ನನ್ನ ಮಗನೇ, ನೀನು ಕೃತಾರ್ಥನಾಗುವಂತೆಯೂ ನಿನ್ನ ದೇವರಾದ ಯೆಹೋವನು ನಿನ್ನ ವಿಷಯದಲ್ಲಿ ಮಾಡಿದ ವಾಗ್ದಾನದ ಪ್ರಕಾರ ನೀನು ದೇವಾಲಯವನ್ನು ಕಟ್ಟುವಂತೆಯೂ ಆತನು ನಿನ್ನ ಸಂಗಡ ಇರಲಿ” ಎಂದು ಹೇಳಿ ಪ್ರೋತ್ಸಾಹಿಸಿದನು.—1 ಪೂರ್ವ. 22:11, 14-16.

ಕಾವಲಿನಬುರುಜು18.03 ಪುಟ 11-12 ಪ್ಯಾರ 14-15

ಹೆತ್ತವರೇ, ದೀಕ್ಷಾಸ್ನಾನ ಪಡೆಯಲು ನಿಮ್ಮ ಮಕ್ಕಳಿಗೆ ಸಹಾಯ ಮಾಡುತ್ತಿದ್ದೀರಾ?

14 ಯೆಹೋವನ ಸೇವೆಯಲ್ಲಿ ಇಡಬಹುದಾದ ಗುರಿಗಳ ಬಗ್ಗೆ ಹಿರಿಯರು ಮಕ್ಕಳೊಂದಿಗೆ ಸಕಾರಾತ್ಮಕವಾಗಿ ಮಾತಾಡುವಾಗ ಹೆತ್ತವರಿಗೆ ಸಹಾಯವಾಗುತ್ತದೆ. ಒಬ್ಬ ಸಹೋದರಿಗೆ ಆರು ವರ್ಷ ಇದ್ದಾಗ ಸಹೋದರ ರಸಲ್‌ ಅವರೊಂದಿಗೆ ಮಾತಾಡಿದ್ದರ ಬಗ್ಗೆ ಹೇಳುತ್ತಾರೆ. “ನನ್ನ ಆಧ್ಯಾತ್ಮಿಕ ಗುರಿಗಳೇನು ಎಂದು ತಿಳಿದುಕೊಳ್ಳಲು ಅವರು ನನ್ನ ಜೊತೆ 15 ನಿಮಿಷ ಮಾತಾಡಿದರು.” ಫಲಿತಾಂಶ? ಆ ಸಹೋದರಿ ಮುಂದೆ ಪಯನೀಯರ್‌ ಆದರು. 70 ವರ್ಷ ಪಯನೀಯರ್‌ ಸೇವೆ ಮಾಡಿದರು! ಸಕಾರಾತ್ಮಕವಾದ ಮಾತುಗಳು ಮತ್ತು ಪ್ರೋತ್ಸಾಹ ಒಬ್ಬರ ಇಡೀ ಜೀವನದ ಮೇಲೆ ಪ್ರಭಾವ ಬೀರುತ್ತದೆ ಅನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. (ಜ್ಞಾನೋ. 25:11) ರಾಜ್ಯ ಸಭಾಗೃಹದಲ್ಲಿ ನಡೆಯುವ ಕೆಲಸಗಳಲ್ಲಿ ಕೈಜೋಡಿಸುವಂತೆ ಸಹ ಹಿರಿಯರು ಹೆತ್ತವರನ್ನು ಮತ್ತು ಮಕ್ಕಳನ್ನು ಕರೆಯಬಹುದು. ಮಕ್ಕಳ ವಯಸ್ಸು ಮತ್ತು ಸಾಮರ್ಥ್ಯಕ್ಕನುಸಾರ ಅವರಿಗೆ ಕೆಲಸಗಳನ್ನು ಕೊಡಬಹುದು.

15 ಸಭೆಯಲ್ಲಿರುವ ಬೇರೆಯವರು ಹೇಗೆ ಮಕ್ಕಳಿಗೆ ಸಹಾಯ ಮಾಡಬಹುದು? ವೈಯಕ್ತಿಕ ಆಸಕ್ತಿ ತೋರಿಸುವ ಮೂಲಕ ಇದನ್ನು ಮಾಡಬಹುದು. ಉದಾಹರಣೆಗೆ, ಆಧ್ಯಾತ್ಮಿಕವಾಗಿ ಪ್ರಗತಿ ಮಾಡುತ್ತಿರುವ ಲಕ್ಷಣಗಳು ಯುವಜನರಲ್ಲಿ ಕಂಡುಬಂದ ಕೂಡಲೆ ಅಂಥ ವಿಷಯಗಳಿಗೆ ಗಮನ ಕೊಡಬೇಕು. ಒಬ್ಬ ಹುಡುಗ ಅಥವಾ ಹುಡುಗಿ ಕೂಟದಲ್ಲಿ ಒಂದು ಒಳ್ಳೇ ಉತ್ತರ ಕೊಟ್ಟಿರಬಹುದು ಅಥವಾ ಮಧ್ಯವಾರದ ಕೂಟದಲ್ಲಿ ಒಂದು ಭಾಗವನ್ನು ನಿರ್ವಹಿಸಿರಬಹುದು. ಶಾಲೆಯಲ್ಲಿ ಸಾಕ್ಷಿ ಕೊಟ್ಟಿರಬಹುದು ಅಥವಾ ಪ್ರಲೋಭನೆ ಬಂದಾಗ ಅದನ್ನು ಎದುರಿಸಿ ನಿಂತಿರಬಹುದು. ಇಂಥ ವಿಷಯಗಳು ನಿಮ್ಮ ಗಮನಕ್ಕೆ ಬಂದ ಕೂಡಲೆ ಮಕ್ಕಳನ್ನು ಶ್ಲಾಘಿಸಲು ಮರೆಯಬೇಡಿ. ಕೂಟದ ಮುಂಚೆ ಮತ್ತು ನಂತರ ಅವರೊಂದಿಗೆ ಮಾತಾಡಲು ಸಮಯ ಮಾಡಿಕೊಳ್ಳಿ. ನಾವಿದನ್ನು ಮಾಡಿದರೆ ಮಕ್ಕಳಿಗೂ ತಾವು “ಮಹಾಸಭೆಯ” ಭಾಗವಾಗಿದ್ದೇವೆ ಎಂದು ಅನಿಸುತ್ತದೆ. (ಕೀರ್ತ. 35:18) ಆದರೆ ನಾವು ವೈಯಕ್ತಿಕ ಆಸಕ್ತಿ ತೋರಿಸುವಾಗ ಯೋಗ್ಯವಾದ ರೀತಿಯಲ್ಲಿ ನಡಕೊಳ್ಳಬೇಕು.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು05 10/1 ಪುಟ 11 ಪ್ಯಾರ 6

ಒಂದನೇ ಪೂರ್ವಕಾಲವೃತ್ತಾಂತ ಪುಸ್ತಕದ ಮುಖ್ಯಾಂಶಗಳು

21:13-15. ಯೆಹೋವನು ತನ್ನ ಜನರಿಗಾಗುವ ನರಳಾಟದ ವಿಷಯದಲ್ಲಿ ಸೂಕ್ಷ್ಮಗ್ರಾಹಿಯಾಗಿರುವುದರಿಂದ, ಆ ವ್ಯಾಧಿಯನ್ನು ನಿಲ್ಲಿಸಿಬಿಡುವಂತೆ ತನ್ನ ದೂತನಿಗೆ ಅಪ್ಪಣೆಕೊಟ್ಟನು. ವಾಸ್ತವದಲ್ಲಿ, “ಆತನು ಕೃಪಾಪೂರ್ಣನು.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ