ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು
© 2022 Watch Tower Bible and Tract Society of Pennsylvania
ಮಾರ್ಚ್ 6-12
ಬೈಬಲಿನಲ್ಲಿರುವ ನಿಧಿ | 1 ಪೂರ್ವಕಾಲವೃತ್ತಾಂತ 23–26
“ಆರಾಧನೆಗಾಗಿ ಆಲಯದಲ್ಲಿ ಒಳ್ಳೇ ವ್ಯವಸ್ಥೆ ಮಾಡಲಾಯಿತು”
it-2-E ಪುಟ 241
ಲೇವಿಯರು
ದಾವೀದನ ಸಮಯದಲ್ಲಿ ಲೇವಿಯರ ಕೆಲಸ ತುಂಬ ಸಂಘಟಿತವಾಗಿ ನಡೆಯುತ್ತಿತ್ತು. ಲೇವಿಯರನ್ನು ಮೇಲ್ವಿಚಾರಕರಾಗಿ, ಅಧಿಕಾರಿಗಳಾಗಿ, ನ್ಯಾಯಾಧೀಶರಾಗಿ, ಬಾಗಿಲು ಕಾಯುವವರನ್ನಾಗಿ ಮತ್ತು ಖಜಾನೆಗಳನ್ನು ನೋಡಿಕೊಳ್ಳುವವರಾಗಿ ದಾವೀದನು ನೇಮಿಸಿದನು. ಅಷ್ಟೇ ಅಲ್ಲ ಪುರೋಹಿತರಿಗೆ ಆಲಯದ ಕೆಲಸದಲ್ಲಿ ಲೇವಿಯರು ಸಹಾಯ ಮಾಡುತ್ತಿದ್ದರು. ಅಂಗಳದ ಕೆಲಸ, ಶುದ್ಧೀಕರಿಸುವ ಕೆಲಸ, ಊಟದ ಕೋಣೆಗಳಲ್ಲಿರೋ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಅವರು ಬಲಿಗಳನ್ನು ನೋಡಿಕೊಳ್ಳುವ ಮತ್ತು ಅರ್ಪಿಸುವ ಕೆಲಸ ಮಾಡುತ್ತಿದ್ದರು. ಇದರ ಜೊತೆ ಶುದ್ಧೀಕರಣ ಕೆಲಸ, ತೂಕ ಹಾಗೂ ಅಳತೆ ಮಾಡೋದು ಮತ್ತು ಇನ್ನಿತರ ಕಾಯುವ ಕೆಲಸ ಸಹ ಅವರಿಗಿತ್ತು. ಪುರೋಹಿತರ ದಳದ ಹಾಗೇ ನಿಪುಣ ಸಂಗೀತಗಾರರಾಗಿದ್ದ ಲೇವಿಯರನ್ನು 24 ಗುಂಪುಗಳಾಗಿ ವಿಂಗಡಿಸಲಾಗಿತ್ತು. ಇವರು ಒಬ್ಬರಾದ ನಂತರ ಒಬ್ಬರು ತಮ್ಮ ಕೆಲಸಗಳನ್ನು ಮಾಡುತ್ತಿದ್ದರು. ಇವರನ್ನ ಚೀಟು ಹಾಕಿ ಆಯ್ಕೆ ಮಾಡುತ್ತಿದ್ದರು.—1ಪೂರ್ವ 23, 25, 26; 2ಪೂರ್ವ 35:3-5, 10.
it-2-E ಪುಟ 686
ಪುರೋಹಿತ
ಪುರೋಹಿತರ ಕೆಲಸಗಳನ್ನು ನೋಡಿಕೊಳ್ಳಲು ಅಧಿಕಾರಿಗಳನ್ನ ನೇಮಿಸಲಾಗಿತ್ತು. ನಿರ್ದಿಷ್ಟ ಕೆಲಸಗಳನ್ನ ಮಾಡಲು ಪುರೋಹಿತರನ್ನ ಚೀಟಿ ಹಾಕಿ ಆಯ್ಕೆ ಮಾಡಲಾಯಿತು. ಪುರೋಹಿತರನ್ನು 24 ಗುಂಪುಗಳಾಗಿ ವಿಂಗಡಿಸಲಾಗಿತ್ತು ಮತ್ತು ಪ್ರತಿಯೊಂದು ದಳದವರು ವರ್ಷಕ್ಕೆ ಎರಡು ಸಲ, ಒಂದೊಂದು ವಾರ ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಹಬ್ಬಗಳು ಬಂದಾಗ ಎಲ್ಲಾ ಪುರೋಹಿತರು ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಯಾಕೆಂದರೆ ಜನರು ಸಾವಿರಾರು ಬಲಿಗಳನ್ನು ಅರ್ಪಿಸುತ್ತಿದ್ದರು.—1ಪೂರ್ವ 24:1-18, 31; 2ಪೂರ್ವ 5:11; 2ಪೂರ್ವ 29:31-35; 30:23-25; 35:10-19 ಹೋಲಿಸಿ.
ಕಾವಲಿನಬುರುಜು94 5/1 ಪುಟ 10-11 ಪ್ಯಾರ 8
ಯೆಹೋವನಿಗೆ ಸುತ್ತಿಗಳನ್ನು ಹಾಡಿರಿ
ವಾಸ್ತವದಲ್ಲಿ, ದೇವಾಲಯದ ಆರಾಧನೆಯಲ್ಲಿ ಹಾಡುವುದು ಎಷ್ಟೊಂದು ಪ್ರಮುಖ ಭಾಗವಾಗಿತ್ತೆಂದರೆ, ಗಾಯನ ಸೇವೆಗಾಗಿ ನಾಲ್ಕು ಸಾವಿರ ಲೇವಿಯರು ಪ್ರತ್ಯೇಕಿಸಲ್ಪಟ್ಟಿದ್ದರು. (1 ಪೂರ್ವಕಾಲವೃತ್ತಾಂತ 23:4, 5) ಅವರು ಹಾಡುಗಾರರೊಂದಿಗೆ ಜೊತೆಗೂಡಿದರು. ಸಂಗೀತ, ವಿಶೇಷವಾಗಿ ಹಾಡುಗಾರರು—ನಿಯಮಶಾಸ್ತ್ರದ ಪ್ರಾಮುಖ್ಯ ವಿಷಯಗಳನ್ನು ತುಂಬುವ ಅಗತ್ಯಕ್ಕಾಗಿ ಅಲ್ಲ, ಆದರೆ ಆರಾಧನೆಗಾಗಿ ಯೋಗ್ಯವಾದ ಹುರುಪನ್ನು ಒದಗಿಸಲಿಕ್ಕಾಗಿ—ಆರಾಧನೆಯಲ್ಲಿ ಪ್ರಮುಖ ಸ್ಥಾನವನ್ನು ವಹಿಸಿಕೊಂಡಿದ್ದರು. ಯೆಹೋವನನ್ನು ಹುರುಪಿನಿಂದ ಆರಾಧಿಸಲು ಇದು ಇಸ್ರಾಯೇಲ್ಯರಿಗೆ ಸಹಾಯಮಾಡಿತು. ಈ ವೈಶಿಷ್ಟ್ಯಕ್ಕಾಗಿ ಮೀಸಲಾಗಿಡಲ್ಪಟ್ಟ ವಿವರಣೆಯ ಗಮನ ಮತ್ತು ಸಿದ್ಧತೆಯನ್ನು ಗಮನಿಸಿ: “ಇವರೂ ಯೆಹೋವಕೀರ್ತನೆಗಳನ್ನು ಕಲಿತ ಇವರ ಸಹೋದರರೂ ಒಟ್ಟು ಇನ್ನೂರ ಎಂಭತ್ತೆಂಟು ಮಂದಿ; ಇವರೆಲ್ಲರೂ ಗಾಯನಪ್ರವೀಣರು.” (1 ಪೂರ್ವಕಾಲವೃತ್ತಾಂತ 25:7) ಯೆಹೋವನಿಗೆ ಸ್ತುತಿ ಹಾಡುವುದನ್ನು ಅವರು ಎಷ್ಟೊಂದು ಗಂಭೀರವಾಗಿ ತೆಗೆದುಕೊಂಡರೆಂಬುದನ್ನು ಗಮನಿಸಿ. ಅವರು ಗಾಯನದಲ್ಲಿ ತರಬೇತಿ ಹೊಂದಿದ್ದರು ಮತ್ತು ಪ್ರವೀಣರಾಗಿದ್ದರು!
it-1-E ಪುಟ 898
ಕಾವಲುಗಾರ
ದೇವಾಲಯದಲ್ಲಿ. ದಾವೀದನ ಸಮಯದಲ್ಲಿ ದೇವಾಲಯದ ಬಾಗಿಲು ಕಾಯೋಕೆ ಸುಮಾರು 4,000 ಕಾವಲುಗಾರರು ಇದ್ದರು. ಇವರನ್ನ ಒಂದೊಂದು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ಗುಂಪು ಏಳು ದಿನ ಕೆಲಸ ಮಾಡುತ್ತಿತ್ತು. ಯೆಹೋವನ ಮಂದಿರವನ್ನು ಕಾಯೋದ್ರ ಜೊತೆಗೆ ಸರಿಯಾದ ಸಮಯದಲ್ಲಿ ಆಲಯದ ಬಾಗಿಲು ತೆಗೆಯಲಾಗುತ್ತಿದೆಯಾ ಮತ್ತು ಮುಚ್ಚಲಾಗುತ್ತಿದೆಯಾ ಅಂತ ನೋಡಿಕೊಳ್ಳೋದು ಇವರ ಕೆಲಸ ಆಗಿತ್ತು. (1ಪೂರ್ವ 9:23-27; 23:1-6) ಅಷ್ಟೇ ಅಲ್ಲ ಜನರು ಆಲಯಕ್ಕೆ ತರುತ್ತಿದ್ದ ಕಾಣಿಕೆಗಳನ್ನು ಸಹ ಇವರು ನೋಡಿಕೊಳ್ಳುತ್ತಿದ್ದರು. (2ಅರ 12:9; 22:4) ಯುವರಾಜನಾದ ಯೆಹೋವಾಷನನ್ನು ದುಷ್ಟ ರಾಣಿ ಅತಲ್ಯಳಿಂದ ಕಾಪಾಡಲು ವಿಶೇಷ ಕಾವಲುಗಾರರನ್ನು ನೇಮಿಸಲಾಯಿತು. (2ಅರ 11:4-8) ರಾಜ ಯೋಷೀಯ ಮೂರ್ತಿಗಳನ್ನ ನಾಶ ಮಾಡಿದಾಗ ಆಲಯದಲ್ಲಿ ಬಾಳನ ಆರಾಧನೆಯನ್ನು ತೆಗೆದು ಹಾಕಲು ಈ ಕಾವಲುಗಾರರು ಸಹಾಯ ಮಾಡಿದರು.—2ಅರ 23:4.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು22.03 ಪುಟ 22 ಪ್ಯಾರ 10
ಸತ್ಯ ಆರಾಧನೆಯಿಂದ ಸಂತೋಷವಾಗಿ ಇರ್ತೀರ
10 ಹಾಡು. (ಕೀರ್ತ 28:7) ಆರಾಧನೆ ಮಾಡುವಾಗ ಯೆಹೋವನನ್ನು ಹಾಡಿ ಹೊಗಳೋದು ತುಂಬ ಮುಖ್ಯ ಅಂತ ಇಸ್ರಾಯೇಲ್ಯರಿಗೆ ಗೊತ್ತಿತ್ತು. ದೇವರ ಆಲಯದಲ್ಲಿ ಹಾಡು ಹಾಡೋಕೆ ಅಂತಾನೇ ರಾಜ ದಾವೀದ 288 ಲೇವಿಯರನ್ನ ನೇಮಿಸಿದ್ದ. (1ಪೂರ್ವ 25:1, 6-8) ಈಗ ನಮಗೂ ಹಾಡೋ ಅವಕಾಶ ಇದೆ. ನಾವು ಹಾಡುವಾಗ ಯೆಹೋವನನ್ನು ಎಷ್ಟು ಪ್ರೀತಿಸುತ್ತೀವಿ ಅಂತ ತೋರಿಸೋಕೆ ಆಗುತ್ತೆ. ‘ನನ್ನದು ಕಾಗೆ ಕಂಠ. ಅಷ್ಟು ಚೆನ್ನಾಗಿ ಹಾಡೋಕೆ ಬರಲ್ಲ’ ಅಂತ ಅನಿಸಬಹುದು. ಉದಾಹರಣೆಗೆ, ನಾವು ಮಾತಾಡುವಾಗ ತಡವರಿಸುತ್ತೀವಿ, “ತುಂಬ ಸಲ ತಪ್ಪು ಮಾಡ್ತೀವಿ.” ಹಾಗಂತ ನಾವು ಮಾತಾಡೋದನ್ನ ಅಥವಾ ಬೇರೆಯವರಿಗೆ ಸಿಹಿಸುದ್ದಿ ಸಾರೋದನ್ನ ಬಿಟ್ಟುಬಿಟ್ಟಿದ್ದೀವಾ? (ಯಾಕೋ 3:2) ಅದೇ ತರ ನಮಗೆ ಚೆನ್ನಾಗಿ ಹಾಡೋಕೆ ಬರದೇ ಇದ್ರೂ ಯೆಹೋವನನ್ನು ಹಾಡಿ ಹೊಗಳೋದನ್ನ ನಿಲ್ಲಿಸಬಾರದು.
ಮಾರ್ಚ್ 13-19
ಬೈಬಲಿನಲ್ಲಿರುವ ನಿಧಿ | 1 ಪೂರ್ವಕಾಲವೃತ್ತಾಂತ 27–29
“ತಂದೆ ಮಗನಿಗೆ ಕೊಟ್ಟ ಪ್ರೀತಿಯ ಕಿವಿಮಾತು”
ಕಾವಲಿನಬುರುಜು05 2/15 ಪುಟ 19 ಪ್ಯಾರ 9
ನಮ್ಮ ಕ್ರೈಸ್ತ ಗುರುತನ್ನು ಕಾಪಾಡಿಕೊಳ್ಳುವುದು
9 ಬೈಬಲ್ ಸತ್ಯವನ್ನು ಸ್ವತಃ ನಿಮಗೇ ರುಜುಪಡಿಸಿಕೊಳ್ಳಿರಿ. ಯೆಹೋವನ ಸೇವಕರಾಗಿರುವ ನಮ್ಮ ಗುರುತಿನ ಕುರಿತಾದ ಪ್ರಜ್ಞೆಯು ಒಂದುವೇಳೆ ಶಾಸ್ತ್ರವಚನಗಳ ಜ್ಞಾನದ ಮೇಲೆ ಬಲವಾಗಿ ಆಧರಿಸಲ್ಪಟ್ಟಿರದಿದ್ದರೆ ದುರ್ಬಲವಾಗಬಲ್ಲದು. (ಫಿಲಿಪ್ಪಿ 1:9, 10) ವೃದ್ಧರಾಗಿರಲಿ, ಯುವ ಪ್ರಾಯದವರಾಗಿರಲಿ, ಪ್ರತಿಯೊಬ್ಬ ಕ್ರೈಸ್ತನು ತಾನೇನು ನಂಬುತ್ತಿದ್ದೇನೊ ಅದು ನಿಜವಾಗಿಯೂ ಬೈಬಲಿನಲ್ಲಿರುವ ಸತ್ಯವಾಗಿದೆ ಎಂಬುದನ್ನು ಸ್ವತಃ ತನಗೇ ತೃಪ್ತಿಯಾಗುವ ವರೆಗೆ ರುಜುಪಡಿಸಿಕೊಳ್ಳಬೇಕಾಗಿದೆ. ಪೌಲನು ಜೊತೆ ವಿಶ್ವಾಸಿಗಳನ್ನು ಹೀಗೆ ಉತ್ತೇಜಿಸಿದನು: “ಎಲ್ಲವನ್ನೂ ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.” (1 ಥೆಸಲೊನೀಕ 5:21) ದೇವಭಯವುಳ್ಳ ಕುಟುಂಬಗಳಿಗೆ ಸೇರಿದವರಾಗಿರುವ ಯುವ ಕ್ರೈಸ್ತರು, ತಮ್ಮ ಹೆತ್ತವರ ನಂಬಿಕೆಯಿಂದ ತಾವು ಸತ್ಕ್ರೈಸ್ತರಾಗಿ ಉಳಿಯಲಾರೆವು ಎಂಬುದನ್ನು ಗ್ರಹಿಸಲೇಬೇಕು. ಸೊಲೊಮೋನನ ತಂದೆಯಾದ ದಾವೀದನೇ ಅವನಿಗೆ, “ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು” ಎಂದು ಬುದ್ಧಿವಾದ ಕೊಟ್ಟನು. (1 ಪೂರ್ವಕಾಲವೃತ್ತಾಂತ 28:9) ತನ್ನ ತಂದೆಯು ಯೆಹೋವನಲ್ಲಿ ಹೇಗೆ ನಂಬಿಕೆಯನ್ನು ಕಟ್ಟುತ್ತಿದ್ದಾನೆಂಬುದನ್ನು ಬರೀ ಗಮನಿಸುವುದು ಯುವ ಸೊಲೊಮೋನನಿಗೆ ಸಾಕಾಗುತ್ತಿರಲಿಲ್ಲ. ಅವನು ಸ್ವತಃ ಯೆಹೋವನನ್ನು ಅರಿತುಕೊಳ್ಳಬೇಕಿತ್ತು, ಮತ್ತು ಅವನದನ್ನು ಮಾಡಿದನು. ಅವನು ದೇವರ ಬಳಿ ಹೀಗೆ ಯಾಚಿಸಿದನು: “ನಾನು ಈ ಜನರ ನಾಯಕನಾಗಿ ಹೋಗುತ್ತಾ ಬರುತ್ತಾ ಇರುವದಕ್ಕೋಸ್ಕರ ನನಗೆ ಜ್ಞಾನವಿವೇಕಗಳನ್ನು ಅನುಗ್ರಹಿಸಬೇಕು.”—2 ಪೂರ್ವಕಾಲವೃತ್ತಾಂತ 1:10.
ಕಾವಲಿನಬುರುಜು12 4/15 ಪುಟ 16 ಪ್ಯಾರ 13
ಸಂಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡಿ
13 ಪಾಠ ಸುಸ್ಪಷ್ಟ. ನಾವು ತಪ್ಪದೆ ಕೂಟಗಳಲ್ಲಿ ಹಾಜರಿರುವುದು, ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವುದು ನಿಜಕ್ಕೂ ಶ್ಲಾಘನೀಯ ವಿಷಯ. ಆದರೆ ಸಂಪೂರ್ಣ ಹೃದಯದಿಂದ ಯೆಹೋವನನ್ನು ಸೇವಿಸುವುದರಲ್ಲಿ ಇನ್ನೂ ಹೆಚ್ಚಿನ ವಿಷಯ ಸೇರಿದೆ. (2 ಪೂರ್ವ. 25:1, 2, 27) ಒಬ್ಬ ಕ್ರೈಸ್ತನು “ಹಿಂದೆ ಇರುವ ವಿಷಯಗಳನ್ನು” ಅಂದರೆ ಲೋಕದ ವಿಷಯಗಳನ್ನು ತನ್ನ ಹೃದಯದಾಳದಲ್ಲಿ ಪ್ರೀತಿಸುತ್ತಾ ಇರುವುದಾದರೆ, ದೇವರೊಂದಿಗಿರುವ ಸುಸಂಬಂಧವನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾನೆ. (ಲೂಕ 17:32) ನಾವು ‘ಕೆಟ್ಟದ್ದನ್ನು ಹೇಸಿ, ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳುವಲ್ಲಿ’ ಮಾತ್ರ ‘ದೇವರ ರಾಜ್ಯಕ್ಕೆ ತಕ್ಕವರು.’ (ರೋಮ. 12:9; ಲೂಕ 9:62) ಆದಕಾರಣ, ನಾವು ಸಂಪೂರ್ಣ ಹೃದಯದಿಂದ ದೇವರ ಸೇವೆ ಮಾಡುವುದನ್ನು ಸೈತಾನನ ಲೋಕ ತಡೆಯದಂತೆ ನೋಡಿಕೊಳ್ಳೋಣ. ಸೈತಾನನ ಲೋಕದ ವಿಷಯ ಎಷ್ಟೇ ಉಪಯುಕ್ತವಾಗಿ, ಆಹ್ಲಾದಕರವಾಗಿ ಕಂಡುಬಂದರೂ ಅದಕ್ಕಾಗಿ ನಮ್ಮ ಹೃದಯ ಹಂಬಲಿಸುವಂತೆ ಬಿಡದಿರೋಣ.—2 ಕೊರಿಂ. 11:14; ಫಿಲಿಪ್ಪಿ 3:13, 14 ಓದಿ.
ಕಾವಲಿನಬುರುಜು17.09 ಪುಟ 32 ಪ್ಯಾರ 20-21
“ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು”
20 ಸೊಲೊಮೋನನು ಆಲಯವನ್ನು ಕಟ್ಟಿ ಮುಗಿಸುವ ತನಕ ಯೆಹೋವನು ಅವನ ಸಂಗಡ ಇರುವನೆಂದು ರಾಜ ದಾವೀದನು ಅವನಿಗೆ ನೆನಪುಹುಟ್ಟಿಸಿದನು. (1 ಪೂರ್ವ. 28:20) ಸೊಲೊಮೋನನು ಖಂಡಿತವಾಗಿ ಈ ಮಾತುಗಳ ಬಗ್ಗೆ ಧ್ಯಾನಿಸಿರಬೇಕು. ತನ್ನ ಚಿಕ್ಕ ಪ್ರಾಯ ಅಥವಾ ಅನುಭವದ ಕೊರತೆ ಈ ಕೆಲಸಕ್ಕೆ ಅಡ್ಡಿಯಾಗುವಂತೆ ಬಿಡಲಿಲ್ಲ. ಅವನು ತುಂಬ ಧೈರ್ಯ ತೋರಿಸುತ್ತಾ ಏಳೂವರೆ ವರ್ಷಗಳಲ್ಲಿ ಆ ಭವ್ಯ ಆಲಯವನ್ನು ಯೆಹೋವನ ಸಹಾಯದಿಂದ ಕಟ್ಟಿ ಮುಗಿಸಿದನು.
21 ಯೆಹೋವನು ಸೊಲೊಮೋನನಿಗೆ ಸಹಾಯಮಾಡಿದನು. ಹಾಗೆಯೇ ನಮಗೂ ಧೈರ್ಯದಿಂದಿದ್ದು, ಕುಟುಂಬದಲ್ಲಿ ಹಾಗೂ ಸಭೆಯಲ್ಲಿ ನಮ್ಮ ಕೆಲಸವನ್ನು ಪೂರೈಸಲು ಆತನು ಸಹಾಯಮಾಡುವನು. (ಯೆಶಾ. 41:10, 13) ಯೆಹೋವನ ಸೇವೆಮಾಡುವಾಗ ನಾವು ಧೈರ್ಯ ತೋರಿಸಿದರೆ, ಆತನು ಈಗಲೂ ಭವಿಷ್ಯದಲ್ಲೂ ನಮ್ಮನ್ನು ಆಶೀರ್ವದಿಸುವನೆಂಬ ನಿಶ್ಚಯ ನಮಗಿದೆ. ಹಾಗಾಗಿ ‘ಧೈರ್ಯದಿಂದಿದ್ದು, ಕೆಲಸಕ್ಕೆ ಕೈಹಾಕಿ.’
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು17.03 ಪುಟ 29 ಪ್ಯಾರ 6-7
ಆಪತ್ಕಾಲಕ್ಕೆ ಆದವನೇ ನಿಜವಾದ ಸ್ನೇಹಿತ
ದಾವೀದ ಕಷ್ಟದಲ್ಲಿದ್ದಾಗ ಬೇರೆ ಸ್ನೇಹಿತರೂ ಸಹಾಯಮಾಡಿದರು, ಅವನಿಗೆ ನಿಷ್ಠೆ ತೋರಿಸಿದರು. ಅವರಲ್ಲಿ ಒಬ್ಬ ಹೂಷೈ. ಅವನನ್ನು “ದಾವೀದನ ಸ್ನೇಹಿತ” ಎಂದು ಬೈಬಲ್ ಕರೆಯುತ್ತದೆ. (2 ಸಮು. 16:16; 1 ಪೂರ್ವ. 27:33) ಅವನು ಆಸ್ಥಾನದ ಅಧಿಕಾರಿಯೂ ಆಗಿದ್ದಿರಬಹುದು. ದಾವೀದನ ಆಪ್ತ ಸ್ನೇಹಿತನಾಗಿದ್ದು ಅವನ ಜೊತೆಯಲ್ಲೇ ಇರುತ್ತಿದ್ದನು. ಕೆಲವೊಮ್ಮೆ ದಾವೀದ ಅವನಿಗೆ ಗುಟ್ಟಾಗಿ ಕೊಡುತ್ತಿದ್ದ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಿದ್ದನು.
ಅಬ್ಷಾಲೋಮನು ದಾವೀದನ ಸಿಂಹಾಸನವನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಅನೇಕ ಇಸ್ರಾಯೇಲ್ಯರು ಅವನ ಪಕ್ಷ ಸೇರಿಕೊಂಡರು. ಆದರೆ ಹೂಷೈ ಹಾಗೆ ಮಾಡಲಿಲ್ಲ. ಅಬ್ಷಾಲೋಮನಿಂದ ದಾವೀದ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಹೂಷೈ ಅವನನ್ನು ಭೇಟಿಯಾಗಲು ಹೋದನು. ದಾವೀದನು ತನ್ನ ಸ್ವಂತ ಮಗ ಮತ್ತು ಆಪ್ತ ಸ್ನೇಹಿತರೇ ದ್ರೋಹ ಮಾಡುತ್ತಿದ್ದಾರಲ್ಲಾ ಎಂದು ತುಂಬ ನೊಂದುಕೊಂಡಿದ್ದನು. ಇಂಥ ಸಮಯದಲ್ಲಿ ಹೂಷೈ ಅವನಿಗೆ ನಿಷ್ಠನಾಗಿದ್ದನು. ದಾವೀದನ ವಿರುದ್ಧ ನಡೆಯುತ್ತಿದ್ದ ಸಂಚನ್ನು ವಿಫಲಮಾಡಲು ತನ್ನ ಪ್ರಾಣವನ್ನು ಅಪಾಯಕ್ಕೊಡ್ಡಿದನು. ತಾನೊಬ್ಬ ಆಸ್ಥಾನ ಅಧಿಕಾರಿ ಎಂದು ಬರೀ ಕರ್ತವ್ಯ ಪ್ರಜ್ಞೆಯಿಂದ ಇದನ್ನು ಮಾಡಲಿಲ್ಲ. ಒಬ್ಬ ನಿಷ್ಠಾವಂತ ಸ್ನೇಹಿತನಾಗಿ ಇದನ್ನೆಲ್ಲ ಮಾಡಿದನು.—2 ಸಮು. 15:13-17, 32-37; 16:15–17:16.
ಮಾರ್ಚ್ 20-26
ಬೈಬಲಿನಲ್ಲಿರುವ ನಿಧಿ | 2 ಪೂರ್ವಕಾಲವೃತ್ತಾಂತ 1–4
“ರಾಜ ಸೊಲೊಮೋನ ಮಾಡಿದ ತಪ್ಪು ನಿರ್ಣಯ”
it-1-E ಪುಟ 174 ಪ್ಯಾರ 5
ಸೈನ್ಯ
ಸೊಲೊಮೋನ ತನ್ನ ಸೈನ್ಯಕ್ಕಾಗಿ ಕೂಡಿಸಿಕೊಂಡಷ್ಟು ರಥಗಳು ಮತ್ತು ಕುದುರೆಗಳು ಹಿಂದೆ ಇದ್ದ ಇಸ್ರಾಯೇಲಿನ ಬೇರೆ ಯಾವ ರಾಜರಿಗೂ ಇರಲಿಲ್ಲ. ಅವನ ಹತ್ತಿರ ಇದ್ದ ಹೆಚ್ಚಿನ ಕುದುರೆಗಳನ್ನ ಈಜಿಪ್ಟಿನಿಂದ ತರಿಸಲಾಗಿತ್ತು. ಇದಕ್ಕಾಗಿ ಇಸ್ರಾಯೇಲಿನಲ್ಲಿ ತುಂಬ ಪಟ್ಟಣಗಳನ್ನೇ ಕಟ್ಟಬೇಕಾಯ್ತು. (1ಅರ 4:26; 9:19; 10:26, 29; 2ಪೂರ್ವ 1:14-17) ಆದರೆ ಸೊಲೊಮೋನ ಮಾಡಿದ ಈ ಹೊಸ ಏರ್ಪಾಡಿನ ಮೇಲೆ ಯೆಹೋವ ದೇವರ ಆಶೀರ್ವಾದ ಖಂಡಿತ ಇರಲಿಲ್ಲ.—ಯೆಶಾ 31:1.
it-1-E ಪುಟ 427
ರಥ
ಸೊಲೊಮೋನನ ಸೈನ್ಯಕ್ಕೆ ಇದ್ದಷ್ಟು ರಥಗಳು ಹಿಂದೆ ಇದ್ದ ಇಸ್ರಾಯೇಲಿನ ಬೇರೆ ಯಾವ ರಾಜರಿಗೂ ಇರಲಿಲ್ಲ. ಯಾಕೆಂದರೆ ರಾಜರು ಹೆಚ್ಚು ಕುದುರೆಗಳನ್ನು ಇಟ್ಟುಕೊಳ್ಳಬಾರದು ಅಂತ ಯೆಹೋವ ಮುಂಚೆನೇ ಹೇಳಿದ್ದನು. ಒಂದುವೇಳೆ ಒಬ್ಬ ರಾಜ ಹೆಚ್ಚು ಕುದುರೆಗಳನ್ನು ಇಟ್ಟುಕೊಂಡ್ರೆ ಅವನು ರಾಷ್ಟ್ರದ ಭದ್ರತೆಗಾಗಿ ಅವುಗಳ ಮೇಲೆ ನಂಬಿಕೆ ಇಟ್ಟಿದ್ದಾನೆ ಅಂತ ತೋರಿಸಿ ಕೊಡುತ್ತಿತ್ತು. ಕುದುರೆಗಳನ್ನು ರಥ ಓಡಿಸಲು ಬಳಸುತ್ತಾ ಇದ್ದಿದ್ದರಿಂದ ಕಡಿಮೆ ಕುದುರೆ ಇದ್ದಷ್ಟು ಕಡಿಮೆ ರಥಗಳು ಇರುತ್ತಿದ್ದವು. (ಧರ್ಮೋ 17:16)
ರಾಜ ಸೊಲೊಮೋನನು ತನ್ನ ಸೈನ್ಯದ ಬಲವನ್ನ ಹೆಚ್ಚು ಮಾಡಿದಾಗ ರಥಗಳ ಸಂಖ್ಯೆ 1,400ಕ್ಕೆ ಏರಿತು. (1ಅರ 10:26, 29; 2ಪೂರ್ವ 1:14, 17) ಯೆರೂಸಲೇಮ್ ಮತ್ತು “ರಥಗಳ ಪಟ್ಟಣ” ಅನ್ನೋ ಹೆಸರಿದ್ದ ಬೇರೆ ಪಟ್ಟಣಗಳಲ್ಲಿ ಕುದುರೆಗಳನ್ನ ಮತ್ತು ರಥಗಳನ್ನ ನೋಡಿಕೊಳ್ಳೋಕೆ ಬೇಕಾದ ಎಲ್ಲಾ ವ್ಯವಸ್ಥೆಗಳು ಇದ್ದವು.—1ಅರ 9:19, 22; 2ಪೂರ್ವ 8:6, 9; 9:25.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು05 12/1 ಪುಟ 19 ಪ್ಯಾರ 6
ಎರಡನೇ ಪೂರ್ವಕಾಲವೃತ್ತಾಂತ ಪುಸ್ತಕದ ಮುಖ್ಯಾಂಶಗಳು
1:11, 12. ಸೊಲೊಮೋನನ ವಿನಂತಿಯು ಯೆಹೋವನಿಗೆ, ವಿವೇಕ ಮತ್ತು ಜ್ಞಾನವನ್ನು ಪಡೆದುಕೊಳ್ಳುವುದು ಅವನ ಕಡುಬಯಕೆಯಾಗಿತ್ತು ಎಂಬುದನ್ನು ತೋರಿಸಿಕೊಟ್ಟಿತು. ಹೌದು, ದೇವರಿಗೆ ನಾವು ಮಾಡುವ ಪ್ರಾರ್ಥನೆಗಳು, ನಮ್ಮ ಕಡುಬಯಕೆಗಳೇನು ಎಂಬುದನ್ನು ತಿಳಿಯಪಡಿಸುತ್ತವೆ. ನಮ್ಮ ಪ್ರಾರ್ಥನೆಗಳಲ್ಲಿ ಏನು ಒಳಗೂಡಿದೆ ಎಂಬುದನ್ನು ವಿಶ್ಲೇಷಿಸುವುದು ವಿವೇಕಯುತವಾದದ್ದಾಗಿದೆ.
ಮಾರ್ಚ್ 27–ಏಪ್ರಿಲ್ 2
ಬೈಬಲಿನಲ್ಲಿರುವ ನಿಧಿ | 2 ಪೂರ್ವಕಾಲವೃತ್ತಾಂತ 5-7
‘ನಾನು ಯಾವಾಗ್ಲೂ ಜೋಪಾನ ಮಾಡ್ತೀನಿ’
ಕಾವಲಿನಬುರುಜು02 11/15 ಪುಟ 5 ಪ್ಯಾರ 1
ಸಭೆಯಾಗಿ ಕೂಡಿಬರುವುದನ್ನು ಬಿಟ್ಟು ಬಿಡಬೇಡಿರಿ
ಸಮಯಾನಂತರ ದಾವೀದನು ಯೆರೂಸಲೇಮಿನಲ್ಲಿ ರಾಜನಾಗಿದ್ದಾಗ, ಯೆಹೋವನ ಮಹಿಮೆಗಾಗಿ ಒಂದು ಖಾಯಂ ಆಲಯವನ್ನು ಕಟ್ಟುವ ತೀವ್ರಾಪೇಕ್ಷೆಯನ್ನು ವ್ಯಕ್ತಪಡಿಸಿದನು. ಆದರೂ ದಾವೀದನು ಯುದ್ಧವೀರನಾಗಿದ್ದರಿಂದ ಯೆಹೋವನು ಅವನಿಗೆ ಹೇಳಿದ್ದು: “ನೀನು . . . ನನ್ನ ಹೆಸರಿಗಾಗಿ ಆಲಯವನ್ನು ಕಟ್ಟಬಾರದು.” ಅದಕ್ಕೆ ಬದಲಾಗಿ, ಯೆಹೋವನು ದಾವೀದನ ಮಗನಾಗಿದ್ದ ಸೊಲೊಮೋನನು ದೇವಾಲಯವನ್ನು ಕಟ್ಟುವಂತೆ ಆಯ್ಕೆಮಾಡಿದನು. (1 ಪೂರ್ವಕಾಲವೃತ್ತಾಂತ 22:6-10) ಸುಮಾರು ಏಳೂವರೆ ವರ್ಷಗಳ ನಿರ್ಮಾಣಕಾರ್ಯದ ಬಳಿಕ, ಸಾ.ಶ.ಪೂ. 1026ರಲ್ಲಿ ಸೊಲೊಮೋನನು ದೇವಾಲಯವನ್ನು ಪ್ರತಿಷ್ಠಾಪಿಸಿದನು. ಈ ಕಟ್ಟಡವನ್ನು ಅಂಗೀಕರಿಸುತ್ತಾ ಯೆಹೋವನು ಹೇಳಿದ್ದು: “ನನ್ನ ನಾಮಮಹತ್ತು ನೀನು ಕಟ್ಟಿಸಿದ ಆಲಯದಲ್ಲಿ ಸದಾ ಇರುವಂತೆ ಅದನ್ನು ನನಗೋಸ್ಕರ ಪ್ರತಿಷ್ಠಿಸಿಕೊಂಡಿದ್ದೇನೆ; ನನ್ನ ದೃಷ್ಟಿಯೂ ಮನಸ್ಸೂ ಪ್ರತಿದಿನವೂ ಅದರ ಮೇಲಿರುವವು.” (1 ಅರಸುಗಳು 9:3) ಇಸ್ರಾಯೇಲ್ಯರು ನಂಬಿಗಸ್ತರಾಗಿ ಉಳಿದಿರುವಷ್ಟು ಸಮಯ, ಯೆಹೋವನು ಆ ಆಲಯದ ಕಡೆಗೆ ತನ್ನ ಅನುಗ್ರಹವನ್ನು ತೋರಿಸಲಿದ್ದನು. ಆದರೂ, ಯಾವುದು ಸರಿಯಾಗಿದೆಯೋ ಅದರಿಂದ ಅವರು ವಿಮುಖರಾದಲ್ಲಿ, ಯೆಹೋವನು ಆ ಸ್ಥಳದಿಂದ ತನ್ನ ಅನುಗ್ರಹವನ್ನು ಹಿಂದೆಗೆದುಕೊಳ್ಳಲಿದ್ದನು, ಮತ್ತು ‘ಆ ಆಲಯವು ಅವಶೇಷಗಳ ರಾಶಿಯಾಗಲಿತ್ತು.’—1 ಅರಸುಗಳು 9:4-9, NW; 2 ಪೂರ್ವಕಾಲವೃತ್ತಾಂತ 7:16, 19, 20.
it-2-E ಪುಟ 1077-1078
ದೇವಾಲಯ
ಇತಿಹಾಸ. ಇಸ್ರಾಯೇಲ್ಯರು ಯೆಹೋವ ದೇವರಿಂದ ದೂರ ಹೋದಾಗ ಬೇರೆ ದೇಶದವರು ಆಲಯದ ಖಜಾನೆಯನ್ನ ಲೂಟಿ ಮಾಡುವಂತೆ ಆತನು ಅನುಮತಿಸಿದನು. ಉದಾಹರಣೆಗೆ ಈಜಿಪ್ಟಿನ ರಾಜ ಶೀಶಕ ಕ್ರಿ.ಪೂ. 993ರಲ್ಲಿ ಯೆಹೋವನ ಆಲಯವನ್ನ ಲೂಟಿ ಮಾಡಿದ. ಆಗ ಸೊಲೊಮೋನನ ಮಗನಾದ ರೆಹಬ್ಬಾಮ ರಾಜನಾಗಿದ್ದ ಮತ್ತು ಆಲಯದ ಉದ್ಘಾಟನೆ ಆಗಿ ಕೇವಲ 33 ವರ್ಷ ಕಳೆದಿತ್ತು. (1ಅರ 14:25, 26; 2ಪೂರ್ವ 12:9) ಸಮಯ ಕಳೆದಂತೆ ಬಾಬೆಲಿನ ರಾಜನಾದ ನೆಬೂಕದ್ನೆಚ್ಚರ ಕ್ರಿ.ಪೂ. 607ರಲ್ಲಿ ಆಲಯವನ್ನ ಸಂಪೂರ್ಣವಾಗಿ ನಾಶ ಮಾಡಿದ.—2ಅರ 25:9; 2ಪೂರ್ವ 36:19; ಯೆರೆ 52:13.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು11 4/1 ಪುಟ 19 ಪ್ಯಾರ 7
‘ಮನುಷ್ಯರ ಹೃದಯಗಳನ್ನು ಬಲ್ಲಾತನು’
ಸೊಲೊಮೋನನ ಪ್ರಾರ್ಥನೆಯಿಂದ ನಾವು ಸಾಂತ್ವನ ಪಡೆಯಬಹುದು. ನಮ್ಮ ಅಂತರಂಗದ ಭಾವನೆಗಳನ್ನು ಅಂದರೆ ನಮ್ಮ ‘ಉಪದ್ರವ ಮತ್ತು ದುಃಖ’ ಜೊತೆಮಾನವರಿಗೆ ಅರ್ಥವಾಗದಿರಬಹುದು. (ಜ್ಞಾನೋಕ್ತಿ 14:10) ಆದರೆ ಯೆಹೋವನು ನಮ್ಮ ಹೃದಯವನ್ನು ಬಲ್ಲಾತನು. ಆತನಿಗೆ ನಮ್ಮ ಬಗ್ಗೆ ಅಪಾರ ಕಾಳಜಿಯಿದೆ. ಪ್ರಾರ್ಥನೆಯ ಮುಖಾಂತರ ನಾವು ಆತನಲ್ಲಿ ನಮ್ಮ ಹೃದಯ ತೋಡಿಕೊಳ್ಳುವಲ್ಲಿ, ನಮ್ಮ ಹೊರೆಗಳನ್ನು ಹೊರಲು ಹೆಚ್ಚು ಸುಲಭವಾಗುವುದು. “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ” ಎನ್ನುತ್ತದೆ ಬೈಬಲ್.—1 ಪೇತ್ರ 5:7.
ಏಪ್ರಿಲ್ 10-16
ಬೈಬಲಿನಲ್ಲಿರುವ ನಿಧಿ | 2 ಪೂರ್ವಕಾಲವೃತ್ತಾಂತ 8-9
“ವಿವೇಕವನ್ನು ಅಮೂಲ್ಯ ಅಂತ ನೆನಸಿದಳು”
ಕಾವಲಿನಬುರುಜು99 11/1 ಪುಟ 20 ಪ್ಯಾರ 4
ಉದಾರಭಾವವು ತುಂಬಿತುಳುಕುವಾಗ
ಸೊಲೊಮೋನನನ್ನು ಭೇಟಿಮಾಡಲಿಕ್ಕಾಗಿ ಶೆಬದ ರಾಣಿಯು ಸಮಯ ಹಾಗೂ ಪ್ರಯತ್ನದಲ್ಲಿ ಬಹು ದೊಡ್ಡ ತ್ಯಾಗವನ್ನು ಮಾಡಿದಳು ಎಂಬುದು ನಿಶ್ಚಯ. ಆಧುನಿಕ ದಿನದ ರಿಪಬ್ಲಿಕ್ ಆಫ್ ಯೆಮನ್‌ನ ಕ್ಷೇತ್ರದಲ್ಲಿ ಶೆಬ ದೇಶವು ಇತ್ತೆಂಬುದು ಸುವ್ಯಕ್ತ; ಆದುದರಿಂದ, ಒಂಟೆಗಳ ಮೇಲೆ ಸಾಮಾನುಗಳನ್ನು ಹೇರಿಕೊಂಡು ದೊಡ್ಡ ಪರಿವಾರದೊಡನೆ ರಾಣಿಯು ಸುಮಾರು 1,600 ಕಿಲೊಮೀಟರುಗಳಷ್ಟು ದೂರ ಪ್ರಯಾಣಿಸಿ ಯೆರೂಸಲೇಮಿಗೆ ಬಂದು ಮುಟ್ಟಿದ್ದಳು. ಯೇಸು ಹೇಳಿದಂತೆ ಅವಳು “ಭೂಮಿಯ ಕಟ್ಟಕಡೆಯಿಂದ ಬಂದಳು.” ಶೆಬದ ರಾಣಿಯು ಇಷ್ಟೆಲ್ಲಾ ಶ್ರಮವನ್ನು ಏಕೆ ತೆಗೆದುಕೊಂಡಳು? ಮುಖ್ಯವಾಗಿ ಅವಳು “ಸೊಲೊಮೋನನ ಜ್ಞಾನವನ್ನು ತಿಳುಕೊಳ್ಳು”ವುದಕ್ಕೋಸ್ಕರ ಬಂದಿದ್ದಳು.—ಲೂಕ 11:31.
ಕಾವಲಿನಬುರುಜು99 7/1 ಪುಟ 30 ಪ್ಯಾರ 4-5
ಹೇರಳವಾಗಿ ಬಹುಮಾನಿಸಲ್ಪಟ್ಟ ಒಂದು ಭೇಟಿ
ಏನೇ ಆಗಲಿ, ರಾಣಿಯು “ಸುಗಂಧದ್ರವ್ಯ, ಅಪರಿಮಿತವಾದ ಬಂಗಾರ, ರತ್ನ ಇವುಗಳನ್ನು ಒಂಟೆಗಳ ಮೇಲೆ ಹೇರಿಸಿಕೊಂಡು ಮಹಾಪರಿವಾರದೊಡನೆ” ಯೆರೂಸಲೇಮಿಗೆ ಬಂದಳು. (1 ಅರಸು 10:2ಎ) “ಮಹಾಪರಿವಾರ”ದಲ್ಲಿ ಸಶಸ್ತ್ರ ರಕ್ಷಕ ಪಡೆಯು ಸೇರಿತ್ತೆಂದು ಕೆಲವರು ಹೇಳುತ್ತಾರೆ. ರಾಣಿಯು ಪ್ರಬಲ ಗೌರವಾನಿತ್ವಳಾಗಿದ್ದಳೆನ್ನುವುದನ್ನು ಪರಿಗಣಿಸುವಾಗ ಮತ್ತು ಕೋಟಿಗಟ್ಟಲೆ ರೂಪಾಯಿಗಳಷ್ಟು ಅಮೂಲ್ಯ ಸಂಪತ್ತಿನೊಂದಿಗೆ ಪ್ರಯಾಣಿಸುತ್ತಿದ್ದಳೆಂಬುದನ್ನು ಗಮನಿಸುವಾಗ ಇದನ್ನು ನಾವು ಅರ್ಥಮಾಡಿಕೊಳ್ಳಬಹುದು.
ಆದಾಗ್ಯೂ, ರಾಣಿಯು ‘ಯೆಹೋವನಾಮಮಹತ್ತಿನ ಕುರಿತು’ ಸೊಲೊಮೋನನ ಕೀರ್ತಿಯನ್ನು ಕೇಳಿದ್ದಳೆಂಬುದನ್ನು ನಾವಿಲ್ಲಿ ಗಮನಿಸುತ್ತೇವೆ. ಹೀಗಾಗಿ, ಇದು ಕೇವಲ ಒಂದು ವ್ಯಾವಹಾರಿಕ ಸಂಚಾರವಾಗಿರಲಿಲ್ಲ. ಲಭ್ಯವಿರುವ ಸಾಕ್ಷ್ಯಗಳ ಆಧಾರದಲ್ಲಿ, ರಾಣಿಯ ಪ್ರಯಾಣದ ಮುಖ್ಯ ಕಾರಣವು ಸೊಲೊಮೋನನಿಂದ ವಿವೇಕವನ್ನು ಕೇಳಲು, ಪ್ರಾಯಶಃ ಅವನ ದೇವರಾದ ಯೆಹೋವನ ಕುರಿತು ಕಲಿಯುವ ಸಲುವಾಗಿ ಬಂದಿದ್ದಳು. ಅವಳು ಯೆಹೋವನ ಆರಾಧಕರಾಗಿದ್ದ ಶೇಮ್ ಅಥವಾ ಹಾಮ್‌ರಿಂದ ಬಂದವಳಾಗಿದ್ದಿರಬಹುದಾದ ಕಾರಣ, ತನ್ನ ಪೂರ್ವಿಕರ ಧರ್ಮದ ಕುರಿತು ತಿಳಿಯಲು ಕುತೂಹಲಿಯಾಗಿದ್ದಿರಬಹುದು.
ಹೇರಳವಾಗಿ ಬಹುಮಾನಿಸಲ್ಪಟ್ಟ ಒಂದು ಭೇಟಿ
ಶೆಬದ ರಾಣಿಯು ಸೊಲೊಮೋನನ ವಿವೇಕ ಮತ್ತು ಅವನ ರಾಜ್ಯದ ಅಭಿವೃದ್ಧಿಯಿಂದ ಎಷ್ಟೊಂದು ಪ್ರಭಾವಿತಳಾದಳೆಂದರೆ, ಅವಳು “ವಿಸ್ಮಿತಳಾಗಿ” ನಿಂತಳು. (1 ಅರಸು 10:4, 5) ಈ ವಾಕ್ಸರಣಿಯು, ರಾಣಿಯು ‘ಉಸಿರು ಕಟ್ಟಲ್ಪಟ್ಟ’ವಳಂತಾದಳು ಎಂಬುದನ್ನು ಹೇಳುತ್ತದೆಂದು ಕೆಲವರು ಅರ್ಥಮಾಡಿಕೊಳ್ಳುತ್ತಾರೆ. ಅವಳು ಮೂರ್ಛೆ ತಪ್ಪಿದಳೆಂದು ಸಹ ಒಬ್ಬ ವಿದ್ವಾಂಸನು ಸೂಚಿಸುತ್ತಾನೆ! ಅದು ಏನೇ ಆಗಿರಲಿ, ರಾಣಿಯು ನೋಡಿದ ಮತ್ತು ಕೇಳಿದ ವಿಷಯಗಳಿಂದ ಬೆರಗಾದಳು. ಈ ಅರಸನ ಜ್ಞಾನದ ವಾಕ್ಯಗಳನ್ನು ಕೇಳಲು ಶಕ್ತರಾಗಿರುವುದಕ್ಕೆ ಸೊಲೊಮೋನನ ಸೇವಕರನ್ನು ಧನ್ಯರೆಂದು ಅವಳು ಉಚ್ಚರಿಸಿದಳು ಮತ್ತು ಸೊಲೊಮೋನನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದ್ದಕ್ಕಾಗಿ ಯೆಹೋವನನ್ನು ಆಕೆಯು ಸ್ತುತಿಸಿದಳು. ಅನಂತರ ಅವಳು ಅರಸನಿಗೆ ಬಹುಬೆಲೆಯುಳ್ಳ ಕೊಡುಗೆಗಳನ್ನು ನೀಡಿದಳು; ನೀಡಿದವುಗಳಲ್ಲಿ ಕೇವಲ ಬಂಗಾರವೇ ಆಧುನಿಕ ಕ್ರಯಕ್ಕನುಸಾರ ಸುಮಾರು 4,00,00,000 ಡಾಲರುಗಳಿಷ್ಟಿತ್ತು. ಸೊಲೊಮೋನನು ಕೂಡ ಕೊಡುಗೆಗಳನ್ನು ನೀಡಿದನು, ರಾಣಿಯು “ಕೇಳಿದವುಗಳನ್ನೆಲ್ಲಾ ಕೊಟ್ಟು ಬಿಟ್ಟನು.”—1 ಅರಸು 10:6-13.
ಕಾವಲಿನಬುರುಜು95 9/1 ಪುಟ 11 ಪ್ಯಾರ 12
ಸುಳ್ಳು ದೇವರುಗಳ ವಿರುದ್ಧ ಸಾಕ್ಷಿಗಳು
ಸೊಲೊಮೋನನ ಭೇಟಿಗಾರರಲ್ಲಿ ಶೆಬಾ ದೇಶದ ರಾಣಿಯು ಪ್ರಮುಖಳಾಗಿದ್ದಳು. ಜನಾಂಗ ಹಾಗೂ ಅದರ ಅರಸನ ಮೇಲಿನ ಯೆಹೋವನ ಆಶೀರ್ವಾದವನ್ನು ಸ್ವತಃ ನೋಡಿದ ಬಳಿಕ ಅವಳು ಹೇಳಿದ್ದು: “ನಿನ್ನನ್ನು ಮೆಚ್ಚಿ ತನ್ನ ಸನ್ನಿಧಿಯಲ್ಲಿ ಅರಸನಾಗುವದಕ್ಕೆ ನಿನ್ನನ್ನು ತನ್ನ ಸಿಂಹಾಸನದ ಮೇಲೆ ಕುಳ್ಳಿರಿಸಿದ ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ; ನಿನ್ನ ದೇವರು ಇಸ್ರಾಯೇಲ್ಯರನ್ನು ಪ್ರೀತಿಸಿ”ದನು.—2 ಪೂರ್ವಕಾಲವೃತ್ತಾಂತ 9:8.
ಬೈಬಲಿನಲ್ಲಿರುವ ರತ್ನಗಳು
it-2-E ಪುಟ 1097
ಸಿಂಹಾಸನ
ಇಸ್ರಾಯೇಲ್ಯರನ್ನ ಆಳಿದ ರಾಜರಲ್ಲಿ ಸೊಲೊಮೋನನ ಸಿಂಹಾಸನದ ಬಗ್ಗೆ ಮಾತ್ರ ವಿವರಣೆ ಕೊಡಲಾಗಿದೆ. (1ಅರ 10:18-20; 2ಪೂರ್ವ 9:17-19) ಸಿಂಹಾಸನಕ್ಕೆ ಆರು ಮೆಟ್ಟಿಲುಗಳು ಇದ್ದವು. ಮುಂದುವರಿಸಿ ಅದರ ವಿವರ ಹೀಗಿದೆ: “ಸಿಂಹಾಸನಕ್ಕೆ ಎರಡು ಕೈಗಳಿತ್ತು. ಆ ಕೈಗಳ ಬದಿಯಲ್ಲಿ ಎರಡು ಸಿಂಹಗಳು ನಿಂತಿರೋ ಪ್ರತಿಮೆ ಇತ್ತು. ಪ್ರತಿ ಮೆಟ್ಟಿಲಿನ ಎರಡೂ ಕೊನೆಯಲ್ಲಿ ಒಂದೊಂದು ಸಿಂಹದ ಪ್ರತಿಮೆ ಇತ್ತು. ಹೀಗೆ ಆರು ಮೆಟ್ಟಿಲಿಗೆ ಒಟ್ಟು 12 ಸಿಂಹದ ಪ್ರತಿಮೆಗಳು ಇದ್ವು.” (2ಪೂರ್ವ 9:17-19) ಇವು ರಾಜನಾದ ಸೊಲೊಮೋನನಿಗೆ ಇದ್ದ ಅಧಿಕಾರವನ್ನ ಸೂಚಿಸಿದವು. (ಆದಿ 49:9, 10; ಪ್ರಕ 5:5) 12 ಸಿಂಹಗಳು ಇಸ್ರಾಯೇಲಿನ 12 ಕುಲಗಳನ್ನ ಮತ್ತು ಅವರು ರಾಜನಿಗೆ ಬೆಂಬಲ ಕೊಡುವುದನ್ನ ಸೂಚಿಸಿರಬೇಕು.
ಏಪ್ರಿಲ್ 17-23
ಬೈಬಲಿನಲ್ಲಿರುವ ನಿಧಿ | 2 ಪೂರ್ವಕಾಲವೃತ್ತಾಂತ 10–12
“ಒಳ್ಳೇ ಬುದ್ಧಿಮಾತಿನಿಂದ ಸಿಗೋ ಪ್ರಯೋಜನ”
ಕಾವಲಿನಬುರುಜು18.06 ಪುಟ 13 ಪ್ಯಾರ 3
ದೇವರ ಅನುಗ್ರಹವನ್ನು ಅವನು ಪಡೆಯಬಹುದಿತ್ತು
ಈಗ ರೆಹಬ್ಬಾಮನದ್ದು ಅಡಕತ್ತರಿಯಲ್ಲಿ ಸಿಲುಕಿದ ಪರಿಸ್ಥಿತಿ. ಜನರು ಹೇಳಿದ ಹಾಗೆ ಮಾಡಿದರೆ ತನಗೆ, ತನ್ನ ಕುಟುಂಬಕ್ಕೆ ಮತ್ತು ತನ್ನ ಅರಮನೆಯಲ್ಲಿ ಇರುವವರಿಗೆ ಸುಖಸೌಕರ್ಯಗಳು ಕಡಿಮೆಯಾಗುತ್ತಿದ್ದವು. ಜನರು ಹೇಳಿದ ಹಾಗೆ ಮಾಡದೇ ಇದ್ದರೆ ತನ್ನ ವಿರುದ್ಧ ಅವರು ದಂಗೆಯೇಳುವ ಸಾಧ್ಯತೆ ಇತ್ತು. ಅವನೇನು ಮಾಡಿದನು? ತನ್ನ ತಂದೆಯ ಮಂತ್ರಿಗಳ ಹತ್ತಿರ ಮೊದಲು ಸಲಹೆ ಕೇಳಿದನು. ಅವರು ಅವನಿಗೆ ಜನರ ಮಾತು ಕೇಳು ಎಂದು ಹೇಳಿದರು. ಆಮೇಲೆ ಅವನು ತನ್ನ ವಯಸ್ಸಿನವರ ಹತ್ತಿರ ಸಲಹೆ ಕೇಳಿ ಜನರೊಂದಿಗೆ ಕಠಿಣವಾಗಿ ನಡಕೊಳ್ಳಲು ತೀರ್ಮಾನಿಸಿದನು. ಅವನು ಜನರಿಗೆ, ‘ನಾನು ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುವೆನು. ನನ್ನ ತಂದೆ ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ; ನಾನಾದರೋ ನಿಮ್ಮನ್ನು ಮುಳ್ಳುಕೊರಡೆಗಳಿಂದ ದಂಡಿಸುವೆನು’ ಎಂದು ಹೇಳಿದನು.—2 ಪೂರ್ವ. 10:6-14.
ಒಳ್ಳೇ ತೀರ್ಮಾನಗಳನ್ನು ನೀವು ಮಾಡಸಾಧ್ಯವಿರುವ ವಿಧ
ನಮ್ಮ ತೀರ್ಮಾನಗಳ ಕುರಿತಾಗಿ ಚರ್ಚಿಸಲಿಕ್ಕಾಗಿ ಯೆಹೋವನು ಸಭೆಯಲ್ಲಿ ಪ್ರೌಢ ವ್ಯಕ್ತಿಗಳನ್ನೂ ಒದಗಿಸುತ್ತಾನೆ. (ಎಫೆಸ 4:11, 12) ಆದರೂ, ಬೇರೆಯವರೊಂದಿಗೆ ವಿಚಾರಿಸುವಾಗ, ತಾವು ಏನು ಕೇಳಿಸಿಕೊಳ್ಳಬೇಕೆಂದು ಬಯಸುತ್ತಾರೋ ಅದನ್ನು ಹೇಳುವ ವ್ಯಕ್ತಿ ಸಿಗುವ ವರೆಗೂ ಒಬ್ಬರಿಂದ ಮತ್ತೊಬ್ಬರ ಬಳಿ ಹೋಗುತ್ತಿರುವವರ ಮತ್ತು ಅನಂತರ ಆ ವ್ಯಕ್ತಿಯ ಸಲಹೆಯನ್ನು ಹಿಂಬಾಲಿಸುವವರ ಮಾದರಿಯನ್ನು ನಾವು ಹಿಂಬಾಲಿಸಬಾರದು. ನಾವು ರೆಹಬ್ಬಾಮನ ಎಚ್ಚರಿಕೆಯ ಮಾದರಿಯನ್ನೂ ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಅವನು ಒಂದು ಗಂಭೀರವಾದ ತೀರ್ಮಾನವನ್ನು ಮಾಡಬೇಕಾಗಿದ್ದಾಗ, ತನ್ನ ತಂದೆಗೆ ಸೇವೆ ಸಲ್ಲಿಸಿದ್ದ ಹಿರೀ ಪುರುಷರಿಂದ ಅವನಿಗೆ ಅತ್ಯುತ್ತಮವಾದ ಸಲಹೆಯು ಸಿಕ್ಕಿತು. ಆದರೆ, ಅವರ ಬುದ್ಧಿವಾದವನ್ನು ಹಿಂಬಾಲಿಸುವ ಬದಲು, ತನ್ನ ಜೊತೆಯಲ್ಲಿ ಬೆಳೆದು ದೊಡ್ಡವರಾಗಿದ್ದ ಯುವ ಪುರುಷರನ್ನು ಅವನು ವಿಚಾರಿಸಿದನು. ಅವರ ಸಲಹೆಯನ್ನು ಹಿಂಬಾಲಿಸುತ್ತಾ, ಅವನು ತುಂಬ ತಪ್ಪಾದ ಒಂದು ತೀರ್ಮಾನವನ್ನು ಮಾಡಿದನು ಮತ್ತು ಇದರ ಫಲಿತಾಂಶವಾಗಿ ತನ್ನ ರಾಜ್ಯದ ದೊಡ್ಡ ಭಾಗವನ್ನು ಕಳೆದುಕೊಂಡನು.—1 ಅರಸುಗಳು 12:1-17.
ಸಲಹೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುವಾಗ, ಜೀವನದಲ್ಲಿ ಅನುಭವ ಪಡೆದಿರುವ ಮತ್ತು ಶಾಸ್ತ್ರವಚನಗಳಲ್ಲಿ ಒಳ್ಳೆಯ ಜ್ಞಾನವಿರುವ ಹಾಗೂ ಒಳ್ಳೆಯ ಮೂಲತತ್ತ್ವಗಳಿಗಾಗಿ ಆಳವಾದ ಗೌರವವಿರುವ ವ್ಯಕ್ತಿಗಳಿಂದ ಇದನ್ನು ಪಡೆದುಕೊಳ್ಳಿ. (ಜ್ಞಾನೋಕ್ತಿ 1:5; 11:14; 13:20) ಸಾಧ್ಯವಿರುವಾಗ, ಒಳಗೂಡಿರುವ ಮೂಲತತ್ತ್ವಗಳ ಕುರಿತು ಮತ್ತು ನೀವು ಸಂಗ್ರಹಿಸಿರುವ ಎಲ್ಲಾ ವಿಚಾರಗಳ ಕುರಿತು ಮನನಮಾಡಿರಿ. ವಿಷಯಗಳನ್ನು ನೀವು ಯೆಹೋವನ ವಾಕ್ಯದ ಬೆಳಕಿನಲ್ಲಿ ನೋಡುವಾಗ, ಸರಿಯಾದ ತೀರ್ಮಾನವು ಹೆಚ್ಚು ವ್ಯಕ್ತವಾಗುವುದು.—ಫಿಲಿಪ್ಪಿ 4:6, 7.
it-2-E ಪುಟ 768 ಪ್ಯಾರ 1
ರೆಹಬ್ಬಾಮ
ರೆಹಬ್ಬಾಮ ತುಂಬ ಅಹಂಕಾರಿಯಾಗಿದ್ದ ಮತ್ತು ಬೇರೆಯವರ ಭಾವನೆಗಳನ್ನ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಹಾಗಾಗಿ ತುಂಬ ಜನ ಅವನಿಗೆ ಬೆಂಬಲ ನೀಡೋದನ್ನ ನಿಲ್ಲಿಸಿದ್ರು. ಯೂದಾಯ ಮತ್ತು ಬೆನ್ಯಾಮೀನ ಕುಲದಲ್ಲಿದ್ದ ಕೆಲವು ಪುರೋಹಿತರು, ಲೇವಿಯರು ಮತ್ತು 10 ಕುಲಗಳಲ್ಲಿದ್ದ ಕೆಲವರು ಮಾತ್ರ ಅವನನ್ನ ಬೆಂಬಲಿಸುತ್ತಿದ್ದರು.—1ಅರ 12:16, 17; 2 ಪೂರ್ವ 10:16, 17; 11:13, 14, 16.
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 966-967
ಆಡಿನ ಮೂರ್ತಿ
ಯೆಹೋಶುವ 24:14ರಿಂದ, ಇಸ್ರಾಯೇಲ್ಯರಲ್ಲಿ ಕೆಲವರು ಈಜಿಪ್ಟಿನವರ ತರಾನೇ ಸುಳ್ಳು ಆರಾಧನೆಯನ್ನ ಮಾಡುತ್ತಿದ್ದರು ಅಂತ ಗೊತ್ತಾಗುತ್ತೆ. (ಯೆಹೆ 23:8, 21) ಹಾಗಾಗಿ ಕೆಲವು ವಿದ್ವಾಂಸರು ಏನು ಹೇಳುತ್ತಾರೆ ಅಂದರೆ ಯಾರೊಬ್ಬಾಮ ‘ಆಡಿನ ಮೂರ್ತಿಗಳಿಗೆ’ ಸೇವೆ ಮಾಡೋಕಾಗಿ ಪುರೋಹಿತರನ್ನ ನೇಮಿಸಿದ್ದ. ಇದರಿಂದ ಏನು ಗೊತ್ತಾಗುತ್ತೆ ಅಂದರೆ ಈಜಿಪ್ಟಿನವರ ಹಾಗೆನೇ ಇಸ್ರಾಯೇಲ್ಯರು ಕೂಡ ಆಡಿನ ತರ ಇದ್ದ ಮೂರ್ತಿಗಳನ್ನ ಆರಾಧಿಸುತ್ತಿದ್ದರು. (2ಪೂರ್ವ 11:15)
‘ಆಡಿನ ಮೂರ್ತಿ’ ಅನ್ನೋದು ಯಾವುದನ್ನ ಸೂಚಿಸುತ್ತೆ ಅಂತ ಸ್ಪಷ್ಟವಾಗಿ ಹೇಳಕ್ಕಾಗಲ್ಲ. ಜನರು ಆರಾಧಿಸುತ್ತಿದ್ದ ಸುಳ್ಳು ದೇವರುಗಳು ಆಡಿನ ತರ ಇದ್ದಿರಬೇಕು ಅನ್ನೋದನ್ನ ತಿಳಿಸೋಕಾಗಿ ಈ ಪದವನ್ನ ಬಳಸಿರಬೇಕು ಅಥವಾ ಎಲ್ಲ ಮೂರ್ತಿಗಳು ಅಸಹ್ಯವಾಗಿದೆ ಅಂತ ಸೂಚಿಸೋಕಾಗಿ ಈ ಪದವನ್ನ ಬಳಸಿರಬೇಕು. ಈ ಬಳಕೆ ಸರಿಯಾಗಿದೆ ಅಂತ ಹೇಳೋಕೆ ಕಾರಣ ಇಬ್ರಿಯ ಭಾಷೆಯಲ್ಲಿ ‘ಮೂರ್ತಿಗಳಿಗೆ’ “ಸಗಣಿ” ಅಂತ ಬಳಸಿರೋದೇ ಆಗಿದೆ. ಹಾಗಂತ ಎಲ್ಲಾ ವಿಗ್ರಹಗಳನ್ನ ಸಗಣಿಯಿಂದ ಮಾಡಲಾಗಿತ್ತು ಅಂತ ಅಲ್ಲ.—ಯಾಜ 26:30; ಧರ್ಮೋ 29:17, ಪಾದಟಿಪ್ಪಣಿ.
ಏಪ್ರಿಲ್ 24-30
ಬೈಬಲಿನಲ್ಲಿರುವ ನಿಧಿ | 2 ಪೂರ್ವಕಾಲವೃತ್ತಾಂತ 13-16
“ಯಾವಾಗ ಯೆಹೋವನ ಮೇಲೆ ಆತುಕೊಳ್ಳಬೇಕು?”
ಕಾವಲಿನಬುರುಜು21.03 ಪುಟ 5 ಪ್ಯಾರ 12
ಹುಡುಗರೇ, ನೀವು ಹೇಗೆ ಬೇರೆಯವರ ವಿಶ್ವಾಸ ಗೆಲ್ಲಬಹುದು?
12 ಆಸ ಚಿಕ್ಕ ಹುಡುಗನಾಗಿದ್ದಾಗ ದೀನನಾಗಿದ್ದ, ಧೈರ್ಯವಂತನಾಗಿದ್ದ. ಅವನು ತನ್ನ ತಂದೆ ಅಬೀಯನ ನಂತ್ರ ರಾಜನಾದ. ರಾಜನಾದ ಕೂಡಲೇ ದೇಶದಲ್ಲಿದ್ದ ಎಲ್ಲಾ ಮೂರ್ತಿಗಳನ್ನು ತೆಗೆಸಿಬಿಟ್ಟ. ಅಷ್ಟೇ ಅಲ್ಲ “ಯೆಹೂದದ ಜನ್ರಿಗೆ ತಮ್ಮ ಪೂರ್ವಜರ ದೇವರಾದ ಯೆಹೋವನನ್ನ ಆರಾಧಿಸೋಕೆ ಮತ್ತು ಆತನು ಕೊಟ್ಟಿರೋ ನಿಯಮ ಪುಸ್ತಕನ ಮತ್ತು ಆಜ್ಞೆಗಳನ್ನ ಪಾಲಿಸೋಕೆ ಹೇಳಿದ.” (2 ಪೂರ್ವ. 14:1-7) ಒಮ್ಮೆ ಇಥಿಯೋಪ್ಯದ ಜೆರಹ 10 ಲಕ್ಷ ಜನ್ರನ್ನು ಕರ್ಕೊಂಡು ಬಂದು ಯೆಹೂದದ ಮೇಲೆ ದಾಳಿ ಮಾಡಿದಾಗ ಬುದ್ಧಿವಂತಿಕೆಯಿಂದ ಆಸ ಯೆಹೋವನ ಹತ್ರಾನೇ ಸಹಾಯ ಕೇಳಿದ. ಅವನು ಹೀಗೆ ಪ್ರಾರ್ಥಿಸಿದ: “ಯೆಹೋವನೇ, ನೀನು ಯಾರಿಗೆ ಸಹಾಯ ಮಾಡೋಕೆ ಇಷ್ಟ ಪಡ್ತೀಯೋ ಅವರು ತುಂಬ ಜನ ಇದ್ರೂ ಅವರಿಗೆ ಶಕ್ತಿ ಇಲ್ಲಾ ಅಂದ್ರೂ ನೀನು ಅದ್ರ ಬಗ್ಗೆ ತಲೆ ಕೆಡಿಸ್ಕೊಳ್ಳಲ್ಲ. ನಮ್ಮ ದೇವರಾದ ಯೆಹೋವನೇ, ದಯವಿಟ್ಟು ನಮಗೆ ಸಹಾಯಮಾಡು. ನಾವು ನಿನ್ನನ್ನೆ ನಂಬ್ಕೊಂಡಿದ್ದೀವಿ.” ಯೆಹೋವನಿಗೆ ತುಂಬ ಶಕ್ತಿ ಇದೆ, ತನ್ನ ಜನ್ರನ್ನು ಖಂಡಿತ ಕಾಪಾಡ್ತಾನೆ ಅಂತ ಆಸನಿಗೆ ನಂಬಿಕೆ ಇತ್ತು. ಅವನು ಮಾಡಿದ ಪ್ರಾರ್ಥನೆಯಿಂದ ಇದು ಗೊತ್ತಾಗುತ್ತೆ. ಯೆಹೋವನ ಮೇಲೆ ಆಸ ಇಟ್ಟ ನಂಬಿಕೆ ಸುಳ್ಳಾಗಲಿಲ್ಲ. ಯೆಹೋವ ದೇವರು “ಇಥಿಯೋಪ್ಯದ ಜನ್ರನ್ನ ಸೋಲಿಸಿದನು.”—2 ಪೂರ್ವ. 14:8-12.
ಕಾವಲಿನಬುರುಜು21.03 ಪುಟ 5 ಪ್ಯಾರ 13
ಹುಡುಗರೇ, ನೀವು ಹೇಗೆ ಬೇರೆಯವರ ವಿಶ್ವಾಸ ಗೆಲ್ಲಬಹುದು?
13 ಆಸನ ವಿರುದ್ಧ 10 ಲಕ್ಷ ಸೈನಿಕರಿದ್ದ ದೊಡ್ಡ ಸೈನ್ಯ ಯುದ್ಧ ಮಾಡೋಕೆ ಬಂದಾಗ ಅವನಿಗೆ ತುಂಬ ಭಯ ಆಗಿರುತ್ತೆ ಅಲ್ವಾ? ಆಗ ಅವನು ಯೆಹೋವನ ಸಹಾಯ ಕೇಳಿದ, ಆ ದೊಡ್ಡ ಸೈನ್ಯವನ್ನು ಸೋಲಿಸಿಬಿಟ್ಟ. ಆಮೇಲೆ ಅದಕ್ಕಿಂತ ಒಂದು ಚಿಕ್ಕ ಸೈನ್ಯ ಅಂದ್ರೆ ಇಸ್ರಾಯೇಲಿನ ರಾಜನಾದ ಬಾಷನ ಸೈನ್ಯ ಆಸನ ಮೇಲೆ ದಾಳಿ ಮಾಡೋಕೆ ಬಂತು. ಆಗ ಅವನು ಯೆಹೋವನ ಸಹಾಯ ಕೇಳಲಿಲ್ಲ. ಅರಾಮ್ಯರ ರಾಜನ ಸಹಾಯ ಕೇಳಿದ. ಇದು ಅವನು ಮಾಡಿದ ದೊಡ್ಡ ಎಡವಟ್ಟಾಗಿತ್ತು! ಯೆಹೋವ ತನ್ನ ಪ್ರವಾದಿಯಾದ ಹನಾನಿ ಮೂಲಕ ಆಸನಿಗೆ “ನೀನು ನಿನ್ನ ದೇವರಾದ ಯೆಹೋವನಲ್ಲಿ ಭರವಸೆ ಇಡದೆ ಅರಾಮ್ಯರ ರಾಜನಲ್ಲಿ ಭರವಸೆ ಇಟ್ಟಿದ್ರಿಂದ ಅವನ ಸೈನ್ಯ ನಿನ್ನ ಕೈಯಿಂದ ತಪ್ಪಿಸಿಕೊಳ್ತು.” ಇದಾದ ಮೇಲೆ ಆಸ ತನ್ನ ಸಮಯವನ್ನೆಲ್ಲ ಯುದ್ಧ ಮಾಡೋದ್ರಲ್ಲೇ ಕಳಿಬೇಕಾಯ್ತು. (2 ಪೂರ್ವ. 16:7, 9; 1 ಅರ. 15:32) ಇದ್ರಿಂದ ನಾವೇನು ಕಲಿಬಹುದು?
ಕಾವಲಿನಬುರುಜು21.03 ಪುಟ 6 ಪ್ಯಾರ 14
ಹುಡುಗರೇ, ನೀವು ಹೇಗೆ ಬೇರೆಯವರ ವಿಶ್ವಾಸ ಗೆಲ್ಲಬಹುದು?
14 ಯಾವಾಗ್ಲೂ ದೀನರಾಗಿರಿ ಮತ್ತು ಯೆಹೋವನ ಸಹಾಯ ಕೇಳ್ತಾ ಇರಿ. ನೀವು ದೀಕ್ಷಾಸ್ನಾನ ಪಡಕೊಂಡಾಗ ಯೆಹೋವನ ಮೇಲೆ ನಿಮಗೆ ತುಂಬ ನಂಬಿಕೆ ಇದೆ ಅಂತ ತೋರಿಸಿಕೊಟ್ರಿ. ಯೆಹೋವ ಕೂಡ ಖುಷಿಯಿಂದ ನಿಮ್ಮನ್ನ ತನ್ನ ಕುಟುಂಬಕ್ಕೆ ಸೇರಿಸಿಕೊಂಡನು. ನೀವು ಈಗ್ಲೂ ಯೆಹೋವನ ಸಹಾಯ ಕೇಳ್ತಾ ಇದ್ದೀರಾ? ನೀವು ಜೀವನದಲ್ಲಿ ದೊಡ್ಡದೊಡ್ಡ ತೀರ್ಮಾನಗಳನ್ನ ಮಾಡುವಾಗ ಯೆಹೋವನ ಸಹಾಯ ಕೇಳೇ ಕೇಳ್ತೀರಿ. ಅದೇ ತರ ಚಿಕ್ಕಚಿಕ್ಕ ನಿರ್ಧಾರ ಮಾಡುವಾಗ್ಲೂ ಕೇಳ್ತೀರಾ? ಮನೋರಂಜನೆಯಂಥ ವಿಷ್ಯದಲ್ಲಿ ಆಗಲಿ ಅಥವಾ ಕೆಲಸ, ಜೀವನದ ಗುರಿ ಇಂಥ ವಿಷ್ಯದಲ್ಲಿ ಆಗಲಿ ಏನೇ ನಿರ್ಧಾರ ಮಾಡೋ ಮುಂಚೆ ಯೆಹೋವನನ್ನು ಕೇಳೋದು ತುಂಬ ಮುಖ್ಯ. ನಿಮ್ಮ ಬುದ್ಧಿ ಏನು ಹೇಳುತ್ತೋ ಅದರ ಪ್ರಕಾರ ಮಾಡದೆ ಬೈಬಲ್ ಏನು ಹೇಳುತ್ತೆ ಅಂತ ನೋಡಿ. ಅದರ ಪ್ರಕಾರ ತೀರ್ಮಾನ ತಗೊಳ್ಳಿ. (ಜ್ಞಾನೋ. 3:5, 6) ಹಾಗೆ ಮಾಡಿದ್ರೆ ಯೆಹೋವ ದೇವರಿಗೆ ಖುಷಿ ಆಗುತ್ತೆ. ಅಷ್ಟೇ ಅಲ್ಲ ಸಭೆಯವರ ಪ್ರೀತಿ-ವಿಶ್ವಾಸ ಗೆಲ್ತೀರಿ, ಅವರ ಗೌರವ ಗಳಿಸ್ತೀರಿ.—1 ತಿಮೊತಿ 4:12 ಓದಿ.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು17.03 ಪುಟ 19 ಪ್ಯಾರ 7
ಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡಿ!
7 ನಾವು ಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡುತ್ತಿದ್ದೇವಾ ಎಂದು ತಿಳಿದುಕೊಳ್ಳುವುದು ಹೇಗೆ? ‘ಯೆಹೋವನಿಗೆ ವಿಧೇಯತೆ ತೋರಿಸಲು ಕಷ್ಟವಾದಾಗಲೂ ನಾನು ವಿಧೇಯತೆ ತೋರಿಸುತ್ತೇನಾ? ಆತನ ಸಭೆಯನ್ನು ಶುದ್ಧವಾಗಿಡಬೇಕು ಎಂಬ ದೃಢಮನಸ್ಸು ನನಗಿದೆಯಾ?’ ಎಂದು ನಮ್ಮನ್ನೇ ಕೇಳಿಕೊಳ್ಳಬೇಕು. ಆಸನ ಬಗ್ಗೆ ಸ್ವಲ್ಪ ಯೋಚಿಸಿ. ತನ್ನ ಅಜ್ಜಿಯನ್ನು ರಾಜಮಾತೆಯ ಸ್ಥಾನದಿಂದ ತೆಗೆದುಹಾಕಲು ಅವನಿಗೆ ನಿಜವಾಗಲೂ ತುಂಬ ಧೈರ್ಯ ಬೇಕಾಗಿತ್ತು! ಅವನಂತೆ ನಾವು ಕೆಲವೊಮ್ಮೆ ಧೈರ್ಯ ತೋರಿಸಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಕುಟುಂಬದಲ್ಲಿ ಒಬ್ಬರು ಅಥವಾ ಸ್ನೇಹಿತರು ಪಾಪಮಾಡಿ ಪಶ್ಚಾತ್ತಾಪಪಡದಿದ್ದಾಗ ಬಹಿಷ್ಕಾರವಾದರೆ ನೀವೇನು ಮಾಡುತ್ತೀರಾ? ಅವರೊಂದಿಗೆ ಸಹವಾಸ ಮಾಡಬಾರದೆಂದು ಗಟ್ಟಿಮನಸ್ಸು ಮಾಡುತ್ತೀರಾ? ಏನು ಮಾಡಬೇಕೆಂದು ನಿಮ್ಮ ಹೃದಯ ಹೇಳಬಹುದು?