ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w24 ಫೆಬ್ರವರಿ ಪು. 2-7
  • “ನಾನು ಯಾವತ್ತೂ ನಿನ್ನ ಕೈಬಿಡಲ್ಲ”!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನಾನು ಯಾವತ್ತೂ ನಿನ್ನ ಕೈಬಿಡಲ್ಲ”!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮುಂದೆ ಏನಾಗಲ್ಲ?
  • ಶುದ್ಧಾರಾಧನೆ ಯಾವತ್ತೂ ನಿಂತುಹೋಗಲ್ಲ
  • ಮುಂದೆ ಏನಾಗುತ್ತೆ?
  • ದೇವರ ಸೇವಕರ ಮಾತುಗಳು ಕಲಿಸೋ ಮುತ್ತಿನಂಥ ಪಾಠಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಯೆಹೋವ ಭವಿಷ್ಯದಲ್ಲಿ ಜನ್ರಿಗೆ ತೀರ್ಪು ಮಾಡೋದ್ರ ಬಗ್ಗೆ ನಮಗೆ ಏನು ಗೊತ್ತಿದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
w24 ಫೆಬ್ರವರಿ ಪು. 2-7

ಅಧ್ಯಯನ ಲೇಖನ 5

ಗೀತೆ 151 ದೇವ ಪುತ್ರರ ಪ್ರಕಟ

“ನಾನು ಯಾವತ್ತೂ ನಿನ್ನ ಕೈಬಿಡಲ್ಲ”!

“‘ನಾನು ಯಾವತ್ತೂ ನಿನ್ನನ್ನ ಬಿಟ್ಟುಬಿಡಲ್ಲ. ನಾನು ಯಾವತ್ತೂ ನಿನ್ನ ಕೈಬಿಡಲ್ಲ’ ಅಂತ ದೇವರು ಹೇಳಿದ್ದಾನೆ.”—ಇಬ್ರಿ. 13:5ಬಿ.

ಈ ಲೇಖನದಲ್ಲಿ ಏನಿದೆ?

ಅಭಿಷಿಕ್ತ ಕ್ರೈಸ್ತರೆಲ್ಲ ಸ್ವರ್ಗಕ್ಕೆ ಹೋದ್ಮೇಲೆ ದೇವರು ಭೂಮಿ ಮೇಲಿರೋ ತನ್ನ ಸೇವಕರ ಕೈಯನ್ನ ಯಾವತ್ತೂ ಬಿಡಲ್ಲ ಅಂತ ಮಾತುಕೊಟ್ಟಿದ್ದಾನೆ.

1. ಅಭಿಷಿಕ್ತ ಕ್ರೈಸ್ತರು ಸ್ವರ್ಗಕ್ಕೆ ಯಾವಾಗ ಹೋಗ್ತಾರೆ?

“ಕೊನೇಲಿ ಉಳ್ಕೊಳ್ಳೋ ಅಭಿಷಿಕ್ತರು ಸ್ವರ್ಗಕ್ಕೆ ಯಾವಾಗ ಹೋಗ್ತಾರೆ?” ಈ ಪ್ರಶ್ನೆ ತುಂಬ ವರ್ಷಗಳ ಹಿಂದೆ ಯೆಹೋವನ ಸೇವಕರ ಮನಸ್ಸಲ್ಲಿತ್ತು. ಅವರು ಹರ್ಮಗೆದೋನ್‌ ಆದ್ಮೇಲೆ ಸ್ವಲ್ಪ ಸಮಯ ಪರದೈಸಲ್ಲಿ ಇದ್ದು ಆಮೇಲೆ ಹೋಗ್ತಾರೆ ಅಂತ ಮುಂಚೆ ನಾವು ಅಂದ್ಕೊಂಡಿದ್ವಿ. ಆದ್ರೆ 2013, ಜುಲೈ 15ರ ಕಾವಲಿನಬುರುಜು, ಅವರು ಹರ್ಮಗೆದೋನ್‌ಗಿಂತ ಮುಂಚೆನೇ ಸ್ವರ್ಗಕ್ಕೆ ಹೋಗ್ತಾರೆ ಅಂತ ಸ್ಪಷ್ಟವಾಗಿ ಹೇಳ್ತು.—ಮತ್ತಾ. 24:31.

2. (ಎ) ನಮ್ಮ ಮನಸ್ಸಿಗೆ ಯಾವ ಪ್ರಶ್ನೆ ಬರಬಹುದು? (ಬಿ) ಈ ಲೇಖನದಲ್ಲಿ ಏನು ಕಲಿತೀವಿ?

2 ಆದ್ರೆ ಈಗ ನಮ್ಮ ಮನಸ್ಸಿಗೆ ಇನ್ನೊಂದು ಪ್ರಶ್ನೆ ಬರಬಹುದು. ‘ಮಹಾ ಸಂಕಟದ’ ಸಮಯದಲ್ಲಿ ಈ ಭೂಮಿ ಮೇಲಿರೋ ಯೆಹೋವನನ್ನ ಆರಾಧಿಸ್ತಿರೋ ‘ಬೇರೆ ಕುರಿಗಳಿಗೆ’ ಏನಾಗುತ್ತೆ? (ಯೋಹಾ. 10:16; ಮತ್ತಾ. 24:21) ಆ ಸಮಯದಲ್ಲಿ ಅಭಿಷಿಕ್ತರು ಭೂಮಿಯಲ್ಲಿ ಇರಲ್ಲ. ಹಾಗಾಗಿ ಕೆಲವ್ರಿಗೆ ‘ಮುಂದೆ ನಮಗೆ ಯಾರು ನಿರ್ದೇಶನ ಕೊಡ್ತಾರೆ? ಯಾರು ನಮ್ಮನ್ನ ನಡೆಸ್ತಾರೆ?’ ಅಂತ ಚಿಂತೆ ಆಗಬಹುದು. ಅವ್ರಿಗೆ ಯಾಕೆ ಹಾಗೆ ಅನಿಸುತ್ತೆ ಅಂತ ಈಗ ನೋಡೋಣ. ಆದ್ರೆ ಅವರು ಯಾಕೆ ಚಿಂತೆ ಮಾಡೋ ಅವಶ್ಯಕತೆ ಇಲ್ಲ ಅಂತನೂ ತಿಳ್ಕೊಳ್ಳೋಣ.

ಮುಂದೆ ಏನಾಗಲ್ಲ?

3-4. ಬೇರೆ ಕುರಿಗಳಲ್ಲಿ ಕೆಲವ್ರಿಗೆ ಯಾವ ಭಯ ಇದೆ ಮತ್ತು ಯಾಕೆ?

3 ಮಹಾ ಸಂಕಟದ ಸಮಯದಲ್ಲಿ ಆಡಳಿತ ಮಂಡಲಿಯ ಎಲ್ಲಾ ಅಭಿಷಿಕ್ತ ಸಹೋದರರೂ ಸ್ವರ್ಗಕ್ಕೆ ಹೋಗಿರುತ್ತಾರೆ. ಹಾಗಾಗಿ ಆ ಸಮಯದಲ್ಲಿ ಬೇರೆ ಕುರಿಗಳಿಗೆ ‘ನಮ್ಮನ್ನ ಇನ್ಮುಂದೆ ಯಾರು ನಡೆಸ್ತಾರೆ? ನಾವು ಒಂದುವೇಳೆ ಯೆಹೋವನಿಂದ ದೂರ ಹೋಗಿಬಿಟ್ರೆ ಏನು ಮಾಡೋದು?’ ಅಂತ ಭಯ ಆಗಬಹುದು. ಬೈಬಲಲ್ಲಿರೋ ಎರಡು ಘಟನೆಗಳಿಂದ ಅವ್ರಿಗೆ ಹಾಗನಿಸಬಹುದು. ಮೊದಲನೇದು ಯೆಹೋವಾಷನ ಜೀವನದಲ್ಲಿ ನಡೆದ ಘಟನೆ. ಅವನು ಚಿಕ್ಕವನಾಗಿದ್ದಾಗ ಮಹಾ ಪುರೋಹಿತ ಯೆಹೋಯಾದ ಮತ್ತು ಅವನ ಹೆಂಡತಿ ಯೆಹೋಷೆಬ ಅವನನ್ನ ಕಾಪಾಡಿದ್ರು. ಯೆಹೋಯಾದನಿಗೆ ಯೆಹೋವನ ಮೇಲೆ ತುಂಬ ನಂಬಿಕೆ ಇತ್ತು. ಅವನು ಯೆಹೋವಾಷನಿಗೆ ದೇವರಿಗೆ ಇಷ್ಟ ಆಗೋ ತರ ನಡ್ಕೊಳ್ಳೋದು ಹೇಗೆ ಅಂತ ಹೇಳ್ಕೊಟ್ಟಿದ್ದ. ಯೆಹೋಯಾದ ಬದುಕಿರೋ ತನಕ ಯೆಹೋವಾಷ ಒಳ್ಳೆಯವನಾಗಿದ್ದ, ಯೆಹೋವನನ್ನ ಆರಾಧಿಸ್ತಿದ್ದ. ಆದ್ರೆ ಯೆಹೋಯಾದ ತೀರಿಹೋದ್ಮೇಲೆ ಅವನು ಕೆಟ್ಟವನಾದ. ಭ್ರಷ್ಟ ಅಧಿಕಾರಿಗಳ ಮಾತು ಕೇಳಿ ಯೆಹೋವನನ್ನೇ ಬಿಟ್ಟುಹೋದ.—2 ಪೂರ್ವ. 24:2, 15-19.

4 ಇನ್ನೊಂದು ಉದಾಹರಣೆ ಎರಡನೇ ಶತಮಾನದ ಕ್ರೈಸ್ತರದ್ದು. ಎಲ್ಲಾ ಅಪೊಸ್ತಲರು ತೀರಿಹೋದ್ಮೇಲೆ ಯೋಹಾನ ಮಾತ್ರ ಇದ್ದ. ಅವನು ಅಲ್ಲಿದ್ದ ಕ್ರೈಸ್ತರಿಗೆ ಯೆಹೋವನ ಸೇವೆನ ಚೆನ್ನಾಗಿ ಮಾಡೋಕೆ ಪ್ರೋತ್ಸಾಹಿಸ್ತಿದ್ದ, ಸಹಾಯ ಮಾಡ್ತಿದ್ದ. (3 ಯೋಹಾ. 4) ಬೇರೆ ಅಪೊಸ್ತಲರ ತರ ಇವನೂ ಸಭೆಯೊಳಗೆ ಧರ್ಮಭ್ರಷ್ಟತೆ ಬರದೆ ಇರೋ ತರ ನೋಡ್ಕೊಳ್ಳೋಕೆ ತುಂಬ ಪ್ರಯತ್ನ ಮಾಡಿದ. (1 ಯೋಹಾ. 2:18; 2 ಥೆಸ. 2:7) ಆದ್ರೆ ಯೋಹಾನ ತೀರಿಹೋದ್ಮೇಲೆ ಎಲ್ಲಾ ಸಭೆಗಳಲ್ಲಿ ಧರ್ಮಭ್ರಷ್ಟತೆ ಕಾಡ್ಗಿಚ್ಚಿನ ತರ ಬೇಗ ಹರಡಿಕೊಳ್ತು. ಕೆಲವು ವರ್ಷಗಳಲ್ಲಿ ಸಭೆಯಲ್ಲಿ ಸತ್ಯಕ್ರೈಸ್ತರೇ ಇಲ್ವೇನೋ ಅನ್ನೋ ತರ ಆಗೋಯ್ತು.

5. ನಾವು ಆ ಘಟನೆಗಳನ್ನ ಓದಿ ಏನಂತ ತಪ್ಪರ್ಥ ಮಾಡ್ಕೊಬಾರದು?

5 ಈ ಎರಡು ಘಟನೆಗಳ ಬಗ್ಗೆ ತಿಳ್ಕೊಂಡಾಗ ನಿಮಗೇನು ಅನಿಸ್ತಿದೆ? ಇದ್ರ ಅರ್ಥ ಅಭಿಷಿಕ್ತ ಕ್ರೈಸ್ತರು ಸ್ವರ್ಗಕ್ಕೆ ಹೋದ್ಮೇಲೆ ಬೇರೆ ಕುರಿಗಳು ಯೆಹೋವಾಷನ ತರ ಯೆಹೋವನನ್ನ ಬಿಟ್ಟುಹೋಗ್ತಾರೆ ಅಂತನಾ? ಅಥವಾ ಎರಡನೇ ಶತಮಾನದ ಕ್ರೈಸ್ತರ ತರ ಧರ್ಮಭ್ರಷ್ಟರಾಗಿಬಿಡ್ತಾರೆ ಅಂತನಾ? ಖಂಡಿತ ಇಲ್ಲ! ಆಗ್ಲೂ ಅವರು ಯೆಹೋವನನ್ನ ಆರಾಧಿಸ್ತಾ ಇರ್ತಾರೆ. ಯೆಹೋವ ಅವ್ರನ್ನ ಚೆನ್ನಾಗಿ ನೋಡ್ಕೊಳ್ತಾ ಇರ್ತಾನೆ.

ಶುದ್ಧಾರಾಧನೆ ಯಾವತ್ತೂ ನಿಂತುಹೋಗಲ್ಲ

6. ನಾವೀಗ ಯಾವ ಮೂರು ಸಮಯದ ಬಗ್ಗೆ ಚರ್ಚಿಸ್ತೀವಿ?

6 ಮುಂದೆ ಎಷ್ಟೇ ಕಷ್ಟಗಳು ಬಂದ್ರೂ ಶುದ್ಧಾರಾಧನೆಯಲ್ಲಿ ಧರ್ಮಭ್ರಷ್ಟತೆ ನುಸುಳಲ್ಲ ಅಂತ ನಾವ್ಯಾಕೆ ಹೇಳಬಹುದು? ಯಾಕಂದ್ರೆ ನಾವಿರೋ ಈ ಸಮಯದ ಬಗ್ಗೆ ಬೈಬಲ್‌ ಏನು ಹೇಳುತ್ತೋ ಅದು ನಮಗೆ ಚೆನ್ನಾಗಿ ಗೊತ್ತಿದೆ. ಇಸ್ರಾಯೇಲ್ಯರು ಮತ್ತು ಎರಡನೇ ಶತಮಾನದ ಕ್ರೈಸ್ತರು ಇದ್ದ ಸಮಯಕ್ಕೂ ನಾವಿರೋ ಸಮಯಕ್ಕೂ ತುಂಬ ವ್ಯತ್ಯಾಸ ಇದೆ. ಹಾಗಾಗಿ ನಾವೀಗ (1) ಇಸ್ರಾಯೇಲ್ಯರ ಸಮಯದಲ್ಲಿ ಏನಾಯ್ತು? (2) ಅಪೊಸ್ತಲರು ತೀರಿಹೋದ್ಮೇಲೆ ಏನಾಯ್ತು? (3) ‘ಎಲ್ಲವನ್ನ ಸರಿಮಾಡೋ ಸಮಯದಲ್ಲಿ’ ಏನಾಗ್ತಿದೆ ಮತ್ತು ಏನಾಗುತ್ತೆ? ಅಂತ ನೋಡೋಣ.—ಅ. ಕಾ. 3:21.

7. ರಾಜರೂ ಮತ್ತು ಸುತ್ತಮುತ್ತ ಇದ್ದವರು ಕೆಟ್ಟದ್ದನ್ನ ಮಾಡ್ತಾ ಇದ್ರೂ ಕೆಲವು ಇಸ್ರಾಯೇಲ್ಯರು ಯಾಕೆ ಧೈರ್ಯ ಕಳ್ಕೊಳ್ಳಲಿಲ್ಲ?

7 ಇಸ್ರಾಯೇಲ್ಯರ ಸಮಯ. ಮೋಶೆ ಸಾಯೋಕೂ ಮುಂಚೆ ಇಸ್ರಾಯೇಲ್ಯರಿಗೆ ಹೀಗೆ ಹೇಳಿದ: “ನಾನು ಸತ್ತ ಮೇಲೆ ಈ ಜನ್ರು ಕೆಟ್ಟ ಕೆಲಸಗಳನ್ನ ಮಾಡೇ ಮಾಡ್ತಾರೆ. ನಾನು ಅವ್ರಿಗೆ ಕೊಟ್ಟ ಆಜ್ಞೆಗಳನ್ನ ಪಾಲಿಸಲ್ಲ ಅಂತ ನನಗೆ ಚೆನ್ನಾಗಿ ಗೊತ್ತು.” (ಧರ್ಮೋ. 31:29) ಇಸ್ರಾಯೇಲ್ಯರು ತಪ್ಪು ಮಾಡಿದ್ರೆ ಕೈದಿಗಳಾಗಿ ಹೋಗ್ತಾರೆ ಅಂತನೂ ಮೋಶೆ ಹೇಳಿದ. (ಧರ್ಮೋ. 28:35, 36) ಅವನು ಹೇಳಿದ ಮಾತು ನಿಜ ಆಯ್ತಾ? ಖಂಡಿತ ಆಯ್ತು. ನೂರಾರು ವರ್ಷಗಳಾದ ಮೇಲೆ ಎಷ್ಟೋ ರಾಜರು ಯೆಹೋವನಿಗೆ ಇಷ್ಟ ಇಲ್ಲದೇ ಇರೋದನ್ನ ಮಾಡಿದ್ರು. ಸುಳ್ಳು ದೇವರುಗಳನ್ನ ಆರಾಧಿಸಿದ್ರು. ಇವ್ರನ್ನ ನೋಡಿ ಜನ್ರೂ ಅದನ್ನೇ ಮಾಡಿದ್ರು. ಅದಕ್ಕೇ ಯೆಹೋವನಿಗೆ ಕೋಪ ಬಂದು ಇಸ್ರಾಯೇಲ್ಯರನ್ನ ಶಿಕ್ಷಿಸಿದನು. ಅಷ್ಟೇ ಅಲ್ಲ, ಇಸ್ರಾಯೇಲ್ಯರ ರಾಜರ ಆಳ್ವಿಕೆಯನ್ನ ಕೊನೆ ಮಾಡಿದನು. (ಯೆಹೆ. 21:25-27) ಆದ್ರೆ ಯೆಹೋವನಿಗೆ ನಿಯತ್ತಾಗಿ ಸೇವೆ ಮಾಡ್ತಿದ್ದ ಕೆಲವು ಇಸ್ರಾಯೇಲ್ಯರು ಯೆಹೋವನ ಮಾತು ನಿಜ ಆಗಿದ್ದನ್ನ ನೋಡಿದಾಗ ಅವರು ಧೈರ್ಯದಿಂದ ಯೆಹೋವನ ಸೇವೆ ಮಾಡ್ತಾ ಹೋದ್ರು.—ಯೆಶಾ. 55:10, 11.

8. ಎರಡನೇ ಶತಮಾನದ ಕ್ರೈಸ್ತ ಸಭೆಗಳಲ್ಲಿ ಧರ್ಮಭ್ರಷ್ಟತೆ ಇತ್ತು ಅಂತ ಕೇಳಿದಾಗ ನಮಗೆ ಯಾಕೆ ಆಶ್ಚರ್ಯ ಆಗಲ್ಲ? ವಿವರಿಸಿ.

8 ಅಪೊಸ್ತಲರು ತೀರಿಹೋದ ಸಮಯ. ಎರಡನೇ ಶತಮಾನದಲ್ಲಿ ಕ್ರೈಸ್ತ ಸಭೆಗಳಲ್ಲಿ ಧರ್ಮಭ್ರಷ್ಟತೆ ಇತ್ತು ಅಂತ ಕೇಳಿ ನಾವು ಆಶ್ಚರ್ಯ ಪಡಬೇಕಾ? ಇಲ್ಲ. ಯಾಕಂದ್ರೆ ಹೀಗಾಗುತ್ತೆ ಅಂತ ಯೇಸು ಮುಂಚೆನೇ ಹೇಳಿದ್ದನು. (ಮತ್ತಾ. 7:21-23; 13:24-30, 36-43) ಆತನು ಹೇಳಿದ ಮಾತು ಒಂದನೇ ಶತಮಾನದಲ್ಲಿ ನಿಜ ಆಗೋಕೆ ಶುರು ಆಯ್ತು ಅಂತ ಅಪೊಸ್ತಲ ಪೌಲ, ಪೇತ್ರ, ಯೋಹಾನ ಕೂಡ ಹೇಳಿದ್ರು. (2 ಥೆಸ. 2:3, 7; 2 ಪೇತ್ರ 2:1; 1 ಯೋಹಾ. 2:18) ಎರಡನೇ ಶತಮಾನದಷ್ಟಕ್ಕೆ ಸಭೆಗಳಲ್ಲಿ ಧರ್ಮಭ್ರಷ್ಟತೆ ತುಂಬಿಹೋಯ್ತು. ಈ ಧರ್ಮಭ್ರಷ್ಟ ಕ್ರೈಸ್ತರು ಸುಳ್ಳು ಧರ್ಮಗಳ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲ್‌ನ ಕೈವಶ ಆದ್ರು. ಹೀಗೆ ಯೇಸು ಹೇಳಿದ ಭವಿಷ್ಯವಾಣಿ ತಪ್ಪದೇ ನೆರವೇರಿತು.

9. ಇಸ್ರಾಯೇಲ್ಯರ ಸಮಯ ಮತ್ತು ಅಪೊಸ್ತಲರು ತೀರಿಹೋದ ಸಮಯಕ್ಕೂ ನಮ್ಮ ಸಮಯಕ್ಕೂ ಏನು ವ್ಯತ್ಯಾಸ?

9 “ಎಲ್ಲವನ್ನ ಸರಿಮಾಡೋ ಸಮಯ.” ಇಸ್ರಾಯೇಲ್ಯರ ಸಮಯ ಮತ್ತು ಅಪೊಸ್ತಲರು ತೀರಿಹೋದ ಸಮಯಕ್ಕೂ ನಮ್ಮ ಸಮಯಕ್ಕೂ ತುಂಬ ವ್ಯತ್ಯಾಸ ಇದೆ. ನಾವು ಈಗಿರೋ ಸಮಯನ ‘ಕೊನೇ ದಿನಗಳು’ ಅಂತ ಹೇಳ್ತೀವಿ. (2 ತಿಮೊ. 3:1) ಆದ್ರೆ ಕೊನೇ ದಿನಗಳು ಶುರುವಾದಾಗಲೇ ಇನ್ನೊಂದು ಸಮಯನೂ ಶುರು ಆಯ್ತು. ಆ ಸಮಯ ತುಂಬ ಮುಖ್ಯವಾಗಿದೆ ಮತ್ತು ಅದು ದೀರ್ಘಕಾಲದ ತನಕ ಇರುತ್ತೆ. ಇದನ್ನ ಬೈಬಲ್‌ “ಎಲ್ಲವನ್ನ ಸರಿಮಾಡೋ ಸಮಯ” ಅಂತ ಕರಿಯುತ್ತೆ. ಹಾಗಾದ್ರೆ ಈ ಸಮಯ ಎಷ್ಟರ ತನಕ ಇರುತ್ತೆ? ಮೆಸ್ಸೀಯನ ಆಳ್ವಿಕೆ ಭೂಮಿ ಮೇಲೆ ಬಂದು ಎಲ್ಲ ಮನುಷ್ಯರನ್ನ ಪರಿಪೂರ್ಣರಾಗಿ ಮಾಡಿ, ಭೂಮಿಯನ್ನೂ ಪರದೈಸಾಗಿ ಮಾಡೋ ತನಕ ಇರುತ್ತೆ. (ಅ. ಕಾ. 3:21) ಈ ಕಾಲಾವಧಿ 1914ರಲ್ಲಿ ಶುರು ಆಯ್ತು. ಆಗ ಏನೆಲ್ಲಾ ನಡೀತು? ಯೇಸು ಸ್ವರ್ಗದಲ್ಲಿ ರಾಜನಾದ. ಹೀಗೆ ಯೆಹೋವ ದೇವರು ರಾಜ ದಾವೀದನ ವಂಶದಿಂದಾನೇ ಮತ್ತೆ ಒಬ್ಬ ರಾಜನನ್ನ ಅಧಿಕಾರಕ್ಕೆ ತಂದನು. ಇದಷ್ಟೇ ಅಲ್ಲ, ಎಲ್ಲ ಜನ್ರು ತನಗಿಷ್ಟ ಆಗೋ ರೀತೀಲಿ ತನ್ನನ್ನ ಆರಾಧಿಸೋಕೆ ಯೆಹೋವ ಶುದ್ಧಾರಾಧನೆಯ ಏರ್ಪಾಡು ಮಾಡಿದನು. (ಯೆಶಾ. 2:2-4; ಯೆಹೆ. 11:17-20) ಹಾಗಾದ್ರೆ ಈ ಶುದ್ಧಾರಾಧನೆಯಲ್ಲಿ ಧರ್ಮಭ್ರಷ್ಟತೆ ಮತ್ತೆ ನುಸುಳುತ್ತಾ?

10. (ಎ) ಶುದ್ಧಾರಾಧನೆ ಬಗ್ಗೆ ಹೇಳಿರೋ ಯಾವ ಭವಿಷ್ಯವಾಣಿ ಈಗ ನಿಜ ಆಗ್ತಿದೆ? (ಯೆಶಾಯ 54:17) (ಬಿ) ಇದನ್ನ ತಿಳ್ಕೊಳ್ಳೋದ್ರಿಂದ ನಮಗೆ ಹೇಗೆ ಸಮಾಧಾನ ಸಿಗುತ್ತೆ?

10 ಯೆಶಾಯ 54:17 ಓದಿ. “ನಿನಗೆ ಹಾನಿಮಾಡೋಕೆ ತಯಾರಿಸೋ ಯಾವುದೇ ಆಯುಧ ಜಯವನ್ನ ಸಾಧಿಸಲ್ಲ”! ಅನ್ನೋ ಭವಿಷ್ಯವಾಣಿ ಬಗ್ಗೆ ಸ್ವಲ್ಪ ಯೋಚ್ನೆ ಮಾಡಿ. ಇದು ನಮ್ಮ ಕಾಲದಲ್ಲಿ ನಿಜ ಆಗ್ತಿದೆ ಅಲ್ವಾ? ಇದಷ್ಟೇ ಅಲ್ಲ, “ನಿನ್ನ ಮಕ್ಕಳೆಲ್ಲ ಯೆಹೋವನಿಂದ ಕಲಿತಾರೆ, ನಿನ್ನ ಮಕ್ಕಳಿಗೆ ಅಪಾರವಾದ ಶಾಂತಿ ಇರುತ್ತೆ. ನಿನ್ನನ್ನ ನೀತಿಯಲ್ಲಿ ದೃಢವಾಗಿ ಸ್ಥಾಪಿಸಲಾಗುತ್ತೆ. . . . ನಿನಗೆ ಯಾವ ಭಯನೂ ಇರಲ್ಲ, ಯಾವುದೂ ನಿನ್ನನ್ನ ಹೆದರಿಸಲ್ಲ, ಅದು ನಿನ್ನ ಹತ್ರಕ್ಕೂ ಬರಲ್ಲ” ಅನ್ನೋ ಭವಿಷ್ಯವಾಣಿನೂ ನಿಜ ಆಗ್ತಿದೆ. (ಯೆಶಾ. 54:13, 14) ಯಾಕಂದ್ರೆ ನಾವು ಯೆಹೋವ ದೇವರ ಬಗ್ಗೆ ಜನ್ರಿಗೆ ಕಲಿಸೋದನ್ನ ತಡಿಯೋಕೆ ‘ಈ ಲೋಕದ ದೇವರಾದ’ ಸೈತಾನನಿಗೂ ಆಗ್ತಿಲ್ಲ. (2 ಕೊರಿಂ. 4:4) ಯೆಹೋವ ಶುದ್ಧಾರಾಧನೆಯ ಏರ್ಪಾಡನ್ನ ಶಾಶ್ವತವಾಗಿ ಇರೋ ಹಾಗೆ ಮಾಡಿದ್ದಾನೆ. ಹಾಗಾಗಿ ಇದನ್ನ ಹಾಳುಮಾಡೋಕೆ ಅಥವಾ ಧರ್ಮಭ್ರಷ್ಟತೆ ನುಸುಳೋ ತರ ಮಾಡೋಕೆ ಯಾರಿಂದನೂ ಆಗಲ್ಲ!

ಮುಂದೆ ಏನಾಗುತ್ತೆ?

11. ಅಭಿಷಿಕ್ತರೆಲ್ಲ ಸ್ವರ್ಗಕ್ಕೆ ಹೋದ್ಮೇಲೆ ಬೇರೆ ಕುರಿಗಳು ಯಾಕೆ ಹೆದರಬೇಕಾಗಿಲ್ಲ?

11 ಅಭಿಷಿಕ್ತರೆಲ್ಲ ಸ್ವರ್ಗಕ್ಕೆ ಹೋದ್ಮೇಲೆ ಏನಾಗುತ್ತೆ? ಯೇಸು ನಮ್ಮ ಕುರುಬ ಅನ್ನೋದನ್ನ ನೆನಪಿಡಿ. ಆತನೇ ಸಭೆಯನ್ನ ನಡೆಸ್ತಿದ್ದಾನೆ. ಅಷ್ಟೇ ಅಲ್ಲ, “ಕ್ರಿಸ್ತ ಒಬ್ಬನೇ ನಿಮ್ಮ ನಾಯಕ” ಅಂತ ಬೈಬಲ್‌ ಹೇಳುತ್ತೆ. (ಮತ್ತಾ. 23:10) ಹಾಗಾಗಿ ನಮ್ಮ ರಾಜ ಕೊಟ್ಟ ಮಾತನ್ನ ಯಾವತ್ತೂ ತಪ್ಪಲ್ಲ. ಅಷ್ಟೇ ಅಲ್ಲ, ಅವನು ಯೆಹೋವನ ಮಗನೂ ಆಗಿರೋದ್ರಿಂದ ನಮ್ಮನ್ನ ಚೆನ್ನಾಗಿ ನೋಡ್ಕೊಳ್ತಾನೆ. ಆ ಸಮಯದಲ್ಲಿ ಆತನು ಏನೆಲ್ಲಾ ಮಾಡ್ತಾನೆ ಅಂತ ಪ್ರತಿಯೊಂದು ವಿಷ್ಯ ನಮಗೆ ಗೊತ್ತಿಲ್ಲದೇ ಇದ್ರೂ ನಾವು ಯಾವುದಕ್ಕೂ ಭಯಪಡಬೇಕಾಗಿಲ್ಲ. ನಾವು ಯಾಕಷ್ಟು ಧೈರ್ಯವಾಗಿ ಇರಬಹುದು ಅನ್ನೋದಕ್ಕೆ ಬೈಬಲಲ್ಲಿರೋ ಕೆಲವು ಘಟನೆಗಳನ್ನ ನೋಡೋಣ.

12. (ಎ) ಮೋಶೆ ತೀರಿಹೋದ ಮೇಲೆ ಯೆಹೋವ ತನ್ನ ಜನ್ರನ್ನ ಹೇಗೆ ನೋಡ್ಕೊಂಡನು? (ಬಿ) ಎಲೀಯ ಬೇರೆ ಕಡೆ ಹೋದ್ಮೇಲೆ ಯೆಹೋವ ತನ್ನ ಜನ್ರನ್ನ ಹೇಗೆ ನೋಡ್ಕೊಂಡನು? (ಚಿತ್ರನೂ ನೋಡಿ.)

12 ಇಸ್ರಾಯೇಲ್ಯರು ಯೆಹೋವ ಮಾತುಕೊಟ್ಟ ದೇಶಕ್ಕೆ ಹೋಗೋ ಮುಂಚೆ ಮೋಶೆ ತೀರಿಹೋದ. ಅವನು ತೀರಿಹೋದ್ಮೇಲೆ ಯೆಹೋವ ಇಸ್ರಾಯೇಲ್ಯರಿಗೆ ಸಹಾಯ ಮಾಡೋದನ್ನ ನಿಲ್ಲಿಸಿಬಿಟ್ಟನಾ? ಇಲ್ಲ. ಅವರು ಯೆಹೋವನಿಗೆ ನಿಯತ್ತಾಗಿರೋ ತನಕ ಆತನು ಅವ್ರನ್ನ ಚೆನ್ನಾಗಿ ನೋಡ್ಕೊಂಡನು. ಮೋಶೆ ತೀರಿಹೋಗೋ ಮುಂಚೆ ಯೆಹೋವ ಅವನ ಹತ್ರ ಯೆಹೋಶುವನನ್ನ ಇಸ್ರಾಯೇಲ್ಯರ ನಾಯಕನಾಗಿ ನೇಮಿಸೋಕೆ ಹೇಳಿದನು. ಆಮೇಲೆ ಅವನು ಯೆಹೋಶುವನಿಗೆ ತುಂಬ ವರ್ಷ ತರಬೇತಿ ಕೊಟ್ಟ. (ವಿಮೋ. 33:11; ಧರ್ಮೋ. 34:9) ಅಷ್ಟೇ ಅಲ್ಲ, ಅವನು ಸಾವಿರ ಜನ್ರ ಮೇಲೆ, ನೂರು ಜನ್ರ ಮೇಲೆ, ಐವತ್ತು ಜನ್ರ ಮೇಲೆ, ಹತ್ತು ಜನ್ರ ಮೇಲೆ ಮುಖ್ಯಸ್ಥರನ್ನ ನೇಮಿಸಿದ. (ಧರ್ಮೋ. 1:15) ಹೀಗೆ ಯೆಹೋವ ತನ್ನ ಜನ್ರನ್ನ ಚೆನ್ನಾಗಿ ನೋಡ್ಕೊಂಡನು. ಎಲೀಯನ ಕಾಲದಲ್ಲಿ ಏನಾಯ್ತು ನೋಡಿ. ಅವನು ಇಸ್ರಾಯೇಲ್ಯರಿಗೆ ಯೆಹೋವನನ್ನ ಆರಾಧಿಸೋಕೆ ತುಂಬ ವರ್ಷ ಸಹಾಯ ಮಾಡಿದನು. ಆದ್ರೆ ಸ್ವಲ್ಪ ಸಮಯ ಆದ್ಮೇಲೆ ಯೆಹೋವ ಅವನನ್ನ ಯೆಹೂದಕ್ಕೆ ಕಳಿಸಿದನು. (2 ಅರ. 2:1; 2 ಪೂರ್ವ. 21:12) ಆಗ ಯೆಹೋವ ಇಸ್ರಾಯೇಲ್ಯರ ಹತ್ತು ಕುಲಗಳ ಕೈಬಿಟ್ಟನಾ? ಇಲ್ಲ. ಎಲೀಯ ಎಲೀಷನಿಗೆ ತುಂಬ ವರ್ಷಗಳ ತನಕ ಚೆನ್ನಾಗಿ ತರಬೇತಿ ಕೊಟ್ಟ. ಅವನಷ್ಟೇ ಅಲ್ಲ, ಅಲ್ಲಿ ‘ಪ್ರವಾದಿಗಳ ಗಂಡು ಮಕ್ಕಳು’ ಕೂಡ ಇದ್ರು. ಅವ್ರಿಗೂ ಒಳ್ಳೇ ತರಬೇತಿ ಸಿಕ್ಕಿದ್ರಿಂದ ಜನ್ರಿಗೆ ಸಹಾಯ ಮಾಡ್ತಿದ್ರು. (2 ಅರ. 2:7) ಯೆಹೋವನ ಜನ್ರನ್ನ ನಡೆಸೋಕೆ ಅಲ್ಲಿ ಎಷ್ಟೋ ದೇವ ಸೇವಕರು ಇದ್ರು. ಹೀಗೆ ಒಂದು ಕಡೆ ಯೆಹೋವ ತನ್ನ ಉದ್ದೇಶನೂ ನೇರವೇರಿಸ್ತಿದ್ದನು. ಇನ್ನೊಂದು ಕಡೆ ತನ್ನ ಜನ್ರನ್ನೂ ನೋಡ್ಕೊಳ್ತಿದ್ದನು.

ಚಿತ್ರಗಳು: 1. ಮೋಶೆ ಇಸ್ರಾಯೇಲ್‌ ಗಂಡಸರ ಮುಂದೆ ಯೆಹೋಶುವನನ್ನ ನೇಮಿಸ್ತಾ ಇದ್ದಾನೆ . 2. ಎಲೀಯ ತನ್ನ ಬಟ್ಟೆಯಿಂದ ನದಿಗೆ ಹೊಡೆಯೋದನ್ನ ಎಲೀಷ ಗಮನಿಸ್ತಾ ಇದ್ದಾನೆ . ಇನ್ನು ಕೆಲವು ಪ್ರವಾದಿಗಳು ಸ್ವಲ್ಪ ದೂರದಿಂದ ಅದನ್ನ ನೋಡ್ತಾ ಇದ್ದಾರೆ .

ಮೋಶೆ (ಎಡಗಡೆ) ಮತ್ತು ಎಲೀಯ (ಬಲಗಡೆ) ಇಬ್ರೂ ಬೇರೆಯವ್ರಿಗೆ ತರಬೇತಿ ಕೊಡ್ತಿದ್ದಾರೆ (ಪ್ಯಾರ 12 ನೋಡಿ)


13. ಯೆಹೋವ ಏನಂತ ಮಾತುಕೊಟ್ಟಿದ್ದಾನೆ? (ಇಬ್ರಿಯ 13:5ಬಿ) (ಚಿತ್ರನೂ ನೋಡಿ.)

13 ಈ ಉದಾಹರಣೆಗಳಿಂದ ನಿಮಗೇನು ಗೊತ್ತಾಗುತ್ತೆ? ಉಳಿದಿರೋ ಅಭಿಷಿಕ್ತರೆಲ್ಲ ಸ್ವರ್ಗಕ್ಕೆ ಹೋದ್ಮೇಲೆ ಭೂಮಿಲಿರೋ ಯೆಹೋವನ ಸೇವಕರು ಭಯ ಪಡಬೇಕಾ? ಇಲ್ಲ. ಯಾಕಂದ್ರೆ ಯೆಹೋವ ಯಾವತ್ತೂ ಅವ್ರ ಕೈಬಿಡಲ್ಲ ಅಂತ ಮಾತುಕೊಟ್ಟಿದ್ದಾನೆ. (ಇಬ್ರಿಯ 13:5ಬಿ ಓದಿ.) ಮೋಶೆ ಮತ್ತು ಎಲೀಯನ ತರ ಆಡಳಿತ ಮಂಡಲಿಯ ಸಹೋದರರು ಬೇರೆಯವ್ರಿಗೆ ತರಬೇತಿ ಕೊಡೋದು ಎಷ್ಟು ಮುಖ್ಯ ಅಂತ ಅರ್ಥ ಮಾಡ್ಕೊಂಡಿದ್ದಾರೆ. ಅದಕ್ಕೇ ಎಷ್ಟೋ ವರ್ಷಗಳಿಂದ ಸಹೋದರರಿಗೆ ಯೆಹೋವನ ಜನ್ರನ್ನ ಚೆನ್ನಾಗಿ ನೋಡ್ಕೊಳ್ಳೋಕೆ ತರಬೇತಿ ಕೊಡ್ತಾ ಬಂದಿದ್ದಾರೆ. ಹಿರಿಯರಿಗೆ, ಸಂಚರಣ ಮೇಲ್ವಿಚಾರಕರಿಗೆ, ಬ್ರಾಂಚ್‌ ಕಮಿಟಿ ಸದಸ್ಯರಿಗೆ, ಬೆತೆಲ್‌ನಲ್ಲಿರೋ ಮೇಲ್ವಿಚಾರಕರಿಗೆ ಮತ್ತು ಬೇರೆ ಸಹೋದರರಿಗೆ ತರಬೇತಿ ಕೊಡೋಕೆ ಎಷ್ಟೋ ಶಾಲೆಗಳನ್ನ ಏರ್ಪಾಡು ಮಾಡಿದ್ದಾರೆ. ಆಡಳಿತ ಮಂಡಲಿಯ ಕಮಿಟಿಗಳಲ್ಲಿ ಸಹಾಯಕರಾಗಿರೋ ಸಹೋದರರಿಗೂ ಇವ್ರೇ ತರಬೇತಿ ಕೊಡ್ತಿದ್ದಾರೆ. ಈ ಸಹೋದರರು ಈಗಾಗ್ಲೇ ತುಂಬ ಜವಾಬ್ದಾರಿಗಳನ್ನ ಚೆನ್ನಾಗಿ ನಿರ್ವಹಿಸ್ತಿದ್ದಾರೆ. ಹಾಗಾಗಿ ಕ್ರಿಸ್ತನ ಕುರಿಗಳನ್ನ ಮುಂದೆ ಚೆನ್ನಾಗಿ ನೋಡ್ಕೊಳ್ಳೋಕೆ ಅವರು ತಯಾರಾಗಿದ್ದಾರೆ.

ಚಿತ್ರಗಳು: 1. ಒಬ್ಬ ಆಡಳಿತ ಮಂಡಲಿಯ ಸದಸ್ಯ ಶಾಲೆಯಲ್ಲಿರೋ ಸಹೋದರ ಸಹೋದರಿಯರಿಗೆ ಕಲಿಸ್ತಿದ್ದಾನೆ . 2. ಆ ಸಹೋದರ ಸಹೋದರಿಯರು ಟಿಪ್ಪಣಿ ಬರೆದುಕೊಳ್ತಿದ್ದಾರೆ . 3. ಶಾಲೆಯಲ್ಲಿ ಕಲಿಸ್ತಿರೋ ಸಹೋದರ ಒಬ್ಬ ಸಹೋದರನ ಜೊತೆ ಇಬ್ರಿಯ 8 ಮತ್ತು 9ನೇ ಅಧ್ಯಾಯದಲ್ಲಿರೋ ವಿಷ್ಯನ ಚರ್ಚಿಸ್ತಿದ್ದಾನೆ . ಆ ಸಹೋದರರ ಹಿಂದೆ ಪವಿತ್ರ ಡೇರೆಯ ಚಿತ್ರ ಇದೆ , ಮುಂದೆ ಆ ಡೇರೆಯ ಮಾದರಿ ಇದೆ . ಅವ್ರ ಮುಂದೆ ಸಹೋದರ ಸಹೋದರಿಯರು ಕೂತಿದ್ದಾರೆ .

ಆಡಳಿತ ಮಂಡಲಿಯಲ್ಲಿರೋ ಸಹೋದರರು ಸಹಾಯಕರಿಗೆ ತರಬೇತಿ ಕೊಡ್ತಿದ್ದಾರೆ. ಎಲ್ಲ ಕಡೆ ಇರೋ ಹಿರಿಯರಿಗೆ, ಸಂಚರಣ ಮೇಲ್ವಿಚಾರಕರಿಗೆ, ಬ್ರಾಂಚ್‌ ಕಮಿಟಿ ಸದಸ್ಯರಿಗೆ, ಬೆತೆಲ್‌ನಲ್ಲಿರೋ ಮೇಲ್ವಿಚಾರಕರಿಗೆ ಮತ್ತು ಮಿಷನರಿಗಳಿಗೆ ತರಬೇತಿ ಕೊಡೋಕೆ ಶಾಲೆಗಳನ್ನ ಏರ್ಪಾಡು ಮಾಡಿದ್ದಾರೆ (ಪ್ಯಾರ 13 ನೋಡಿ)


14. ನಾವು ಯಾವ ವಿಷ್ಯನ ಕಣ್ಮುಚ್ಚಿ ನಂಬಬಹುದು?

14 ಒಂದು ವಿಷ್ಯನಂತೂ ನಾವು ಕಣ್ಮುಚ್ಚಿ ನಂಬಬಹುದು. ಅದೇನಂದ್ರೆ ಎಲ್ಲಾ ಅಭಿಷಿಕ್ತರು ಸ್ವರ್ಗಕ್ಕೆ ಹೋದ್ಮೇಲೆ ಭೂಮಿಲಿ ಇರೋರಿಗೆ ಯೇಸು ಕ್ರಿಸ್ತ ನಾಯಕನಾಗಿ ಇರ್ತಾನೆ. ಹಾಗಾಗಿ ಬೇರೆ ಕುರಿಗಳು ಯೆಹೋವನನ್ನ ಆರಾಧಿಸ್ತಾನೇ ಇರ್ತಾರೆ. ಶುದ್ಧಾರಾಧನೆ ಯಾವತ್ತೂ ನಿಂತುಹೋಗಲ್ಲ. ಆ ಸಮಯದಲ್ಲಿ ಮಾಗೋಗಿನ ಗೋಗ ಅಂದ್ರೆ ಜನಾಂಗಗಳ ಗುಂಪು ನಮ್ಮ ಮೇಲೆ ಆಕ್ರಮಣ ಮಾಡುತ್ತೆ, ನಿಜ. (ಯೆಹೆ. 38:18-20) ಆದ್ರೆ ಆ ಗೋಗನಿಗೆ ಯೆಹೋವನ ಆರಾಧನೆಯನ್ನ ನಿಲ್ಲಿಸೋಕಾಗಲ್ಲ. ಅವನು ಸೋಲೋದಂತೂ ಗ್ಯಾರಂಟಿ. ಯಾಕಂದ್ರೆ ಯೆಹೋವ ಬೇರೆ ಕುರಿಗಳನ್ನ ಕಾಪಾಡ್ತಾನೆ. ನಾವು ಹಾಗೆ ಹೇಳೋಕೆ ಇನ್ನೊಂದು ಕಾರಣನೂ ಇದೆ. ಅಪೊಸ್ತಲ ಯೋಹಾನ ಒಂದು ದರ್ಶನದಲ್ಲಿ ಬೇರೆ ಕುರಿಗಳಿರೋ ಒಂದು ‘ದೊಡ್ಡ ಗುಂಪನ್ನ’ ನೋಡಿದ. “ಇವರು ಮಹಾ ಸಂಕಟವನ್ನ ಪಾರಾಗಿ ಬಂದಿದ್ದಾರೆ” ಅಂತ ಹೇಳೋದನ್ನ ಕೇಳಿಸ್ಕೊಂಡ. (ಪ್ರಕ. 7:9, 14) ಹಾಗಾಗಿ ಏನೇ ಆದ್ರೂ ಯೆಹೋವ ಬೇರೆ ಕುರಿಗಳನ್ನ ಕಾಪಾಡ್ತಾನೆ ಅನ್ನೋದ್ರಲ್ಲಿ ಅನುಮಾನನೇ ಇಲ್ಲ!

15-16. (ಎ) ಅಭಿಷಿಕ್ತ ಕ್ರೈಸ್ತರು ಹರ್ಮಗೆದೋನ್‌ ಯುದ್ಧದಲ್ಲಿ ಏನು ಮಾಡ್ತಾರೆ? (ಪ್ರಕಟನೆ 17:14) (ಬಿ) ಇದನ್ನ ಕೇಳಿದಾಗ ನಿಮಗೆ ಹೇಗನಿಸುತ್ತೆ?

15 ‘ಅಭಿಷಿಕ್ತರು ಸ್ವರ್ಗಕ್ಕೆ ಹೋದ್ಮೇಲೆ ಅವರು ಅಲ್ಲಿ ಏನು ಮಾಡ್ತಾರೆ?’ ಅಂತ ಕೆಲವ್ರಿಗೆ ಅನಿಸಬಹುದು. ಅದಕ್ಕೆ ಬೈಬಲ್‌ ಉತ್ರ ಕೊಡುತ್ತೆ. ಭೂಮಿಲಿರೋ ಸರ್ಕಾರಗಳು “ಕುರಿಮರಿ ಜೊತೆ ಯುದ್ಧ ಮಾಡ್ತಾರೆ. ಆದ್ರೆ ಆ ಕುರಿಮರಿ . . . ಅವ್ರನ್ನ ಸೋಲಿಸ್ತಾನೆ.” ಹಾಗಾದ್ರೆ ಆ ಕುರಿಮರಿಗೆ ಯಾರು ಸಹಾಯ ಮಾಡ್ತಾರೆ? “ದೇವರು ಯಾರನ್ನ ಕರೆದಿದ್ದಾನೋ ಯಾರನ್ನ ಆರಿಸ್ಕೊಂಡಿದ್ದಾನೋ ದೇವರಿಗೆ ಯಾರು ನಂಬಿಗಸ್ತರಾಗಿ ಇದ್ದಾರೋ” ಅವರು ಸಹಾಯ ಮಾಡ್ತಾರೆ. (ಪ್ರಕಟನೆ 17:14 ಓದಿ.) ಇವರು ಯಾರು? ಸ್ವರ್ಗಕ್ಕೆ ಹೋದ ಅಭಿಷಿಕ್ತ ಕ್ರೈಸ್ತರು! ಅಲ್ಲಿಗೆ ಅವರು ಹೋದ ತಕ್ಷಣ ಅವ್ರಿಗೆ ಸಿಗೋ ಮೊದಲನೇ ನೇಮಕನೇ ಯುದ್ಧ ಮಾಡೋದು. ಕೆಲವು ಅಭಿಷಿಕ್ತ ಕ್ರೈಸ್ತರು ಸತ್ಯ ಕಲಿಯೋಕೆ ಮುಂಚೆ ಸೈನಿಕರಾಗಿದ್ರು, ಕುಸ್ತಿಪಟುಗಳಾಗಿದ್ರು. ಆದ್ರೆ ಯಾವಾಗ ಅವರು ಬೈಬಲ್‌ ಕಲ್ತು ಬದಲಾದ್ರೋ ಆಗ ಬೇರೆಯವ್ರ ಜೊತೆ ಶಾಂತಿಯಿಂದ ಇರೋಕೆ ಯುದ್ಧ ಮಾಡೋದನ್ನ ನಿಲ್ಲಿಸಿದ್ರು. (ಗಲಾ. 5:22; 2 ಥೆಸ. 3:16) ಆದ್ರೆ ಅವರು ಸ್ವರ್ಗಕ್ಕೆ ಹೋಗಿದ್ದೇ ಯೇಸು ಮತ್ತು ದೇವದೂತರ ಜೊತೆ ಸೇರ್ಕೊಂಡು ಯೆಹೋವನ ಶತ್ರುಗಳ ವಿರುದ್ಧ ಯುದ್ಧ ಮಾಡ್ತಾರೆ. ಇದನ್ನ ನೆನಸ್ಕೊಂಡಾಗ ನಮ್ಮ ಮೈ ಜುಮ್‌ ಅನ್ನುತ್ತಲ್ವಾ?

16 ಈಗ ಭೂಮಿ ಮೇಲಿರೋ ಕೆಲವು ಅಭಿಷಿಕ್ತರಿಗೆ ವಯಸ್ಸಾಗಿರೋದ್ರಿಂದ ಅಷ್ಟು ಶಕ್ತಿ ಇಲ್ಲ ನಿಜ. ಆದ್ರೆ ಅವರು ಸ್ವರ್ಗಕ್ಕೆ ಹೋದ್ಮೇಲೆ ಅವರು ಬಲಿಷ್ಠರಾಗ್ತಾರೆ, ಅಮರ ಆತ್ಮಜೀವಿಗಳಾಗ್ತಾರೆ, ಯೇಸು ಕ್ರಿಸ್ತನ ಜೊತೆ ಸೇರ್ಕೊಂಡು ಯುದ್ಧ ಮಾಡ್ತಾರೆ. ಅಷ್ಟೇ ಅಲ್ಲ, ಹರ್ಮಗೆದೋನ್‌ ಯುದ್ಧ ಆದ್ಮೇಲೆ ಭೂಮಿ ಮೇಲಿರೋ ಜನ್ರಿಗೆ ಪರಿಪೂರ್ಣರಾಗೋಕೆ ಸಹಾಯ ಮಾಡ್ತಾರೆ. ಆಗ ಅವರು ಭೂಮಿಲಿದ್ದಾಗ ಸಹೋದರ ಸಹೋದರಿಯರಿಗೆ ಸಹಾಯ ಮಾಡಿದ್ದಕ್ಕಿಂತ ಜಾಸ್ತಿ ಸಹಾಯ ಮಾಡಕ್ಕಾಗುತ್ತೆ!

17. ಹರ್ಮಗೆದೋನ್‌ ಯುದ್ಧ ನಡಿಯುವಾಗ ದೇವರ ಸೇವಕರೆಲ್ಲ ಸುರಕ್ಷಿತವಾಗಿ ಇರ್ತಾರೆ ಅಂತ ನಾವು ಹೇಗೆ ಹೇಳಬಹುದು?

17 ಹಾಗಾದ್ರೆ ಹರ್ಮಗೆದೋನ್‌ ಯುದ್ಧ ಶುರು ಆಗುವಾಗ ಬೇರೆ ಕುರಿಗಳಾಗಿರೋ ನೀವು ಏನು ಮಾಡಬೇಕು? ಯೆಹೋವನ ಮೇಲೆ ನಂಬಿಕೆ ಇಡಬೇಕು. ಆತನು ಹೇಳಿದ ಹಾಗೆ ನಡ್ಕೊಬೇಕು. “ನಿಮ್ಮನಿಮ್ಮ ಒಳಗಿನ ಕೋಣೆಗಳಿಗೆ ಹೋಗಿ, ಬಾಗಿಲು ಹಾಕೊಳ್ಳಿ, ಸ್ವಲ್ಪಹೊತ್ತು ಬಚ್ಚಿಟ್ಕೊಳ್ಳಿ. ನನ್ನ ಕೋಪ ತೀರೋ ತನಕ ಅಲ್ಲೇ ಇರಿ” ಅಂತ ಯೆಹೋವ ಹೇಳೋ ಮಾತನ್ನ ಕೇಳಬೇಕು. (ಯೆಶಾ. 26:20) ಯೆಹೋವನನ್ನ ನಂಬಿಕೆಯಿಂದ ಸೇವೆ ಮಾಡ್ತಿರೋರು ಸ್ವರ್ಗಕ್ಕೆ ಹೋಗಲಿ, ಭೂಮಿಲಿ ಇರಲಿ ಎಲ್ರೂ ಸುರಕ್ಷಿತವಾಗಿ ಇರ್ತಾರೆ. ಯಾಕಂದ್ರೆ ಅಪೊಸ್ತಲ ಪೌಲ ಹೇಳಿದ ಹಾಗೆ “ಸರ್ಕಾರಗಳಾಗ್ಲಿ ಈಗಿರೋ ವಿಷ್ಯಗಳಾಗ್ಲಿ ಮುಂದೆ ಬರೋ ವಿಷ್ಯಗಳಾಗ್ಲಿ . . . ದೇವರು ತೋರಿಸೋ ಪ್ರೀತಿಯಿಂದ ನಮ್ಮನ್ನ ದೂರ ಮಾಡಕ್ಕಾಗಲ್ಲ.” (ರೋಮ. 8:38, 39) ಹಾಗಾಗಿ ಪ್ರೀತಿಯ ಸಹೋದರ ಸಹೋದರಿಯರೇ, ಯೆಹೋವ ನಿಮ್ಮನ್ನ ತುಂಬ ಪ್ರೀತಿಸ್ತಾನೆ. ಆತನು ಯಾವತ್ತೂ ನಿಮ್ಮ ಕೈಬಿಡಲ್ಲ ಅನ್ನೋದನ್ನ ನೆನಪಿಡಿ!

ಉಳಿದಿರೋ ಅಭಿಷಿಕ್ತರು ಸ್ವರ್ಗಕ್ಕೆ ಹೋದ್ಮೇಲೆ . . .

  • ಏನಾಗಲ್ಲ?

  • ಶುದ್ಧಾರಾಧನೆಗೆ ಧರ್ಮಭ್ರಷ್ಟತೆ ಮತ್ತೆ ನುಸುಳಲ್ಲ ಅಂತ ನಾವು ಯಾಕೆ ಹೇಳಬಹುದು?

  • ಯೆಹೋವ ತನ್ನ ಜನ್ರನ್ನ ನೋಡ್ಕೊಳ್ತಾನೆ ಅಂತ ನಾವು ಹೇಗೆ ಹೇಳಬಹುದು?

ಗೀತೆ 49 ಯೆಹೋವನು ನಮ್ಮ ಆಶ್ರಯ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ