ಅಧ್ಯಯನ ಲೇಖನ 36
ಗೀತೆ 103 ಮಂದೆಯನ್ನು ಕಾಯುವ ಪಾಲಕರು
‘ಹಿರಿಯರ ಹತ್ರ ಮಾತಾಡಿ’
“ಸಭೆ ಹಿರಿಯರಿಗೆ ನಿಮ್ಮ ಹತ್ರ ಬರಕ್ಕೆ ಹೇಳಿ.”—ಯಾಕೋ. 5:14.
ಈ ಲೇಖನದಲ್ಲಿ ಏನಿದೆ?
ನಮಗೆ ಅಗತ್ಯ ಇದ್ದಾಗ ಹಿರಿಯರ ಸಹಾಯ ಕೇಳೋದು ಎಷ್ಟು ಮುಖ್ಯ ಅಂತ ನೋಡೋಣ.
1. ತನ್ನ ಕುರಿಗಳು ಯೆಹೋವನಿಗೆ ತುಂಬ ಅಮೂಲ್ಯ ಅಂತ ನಮಗೆ ಹೇಗೆ ಗೊತ್ತು?
ಯೆಹೋವ ಒಬ್ಬ ಕುರುಬನ ಹಾಗೆ, ನಮ್ಮೆಲ್ರನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೊಳ್ತಾನೆ. ಆತನು ಸಭೇಲಿರೋ ಎಲ್ರನ್ನ ಯೇಸುವಿನ ರಕ್ತ ಕೊಟ್ಟು ಕೊಂಡ್ಕೊಂಡಿದ್ದಾನೆ. (ಅ. ಕಾ. 20:28) ಅವ್ರನ್ನೆಲ್ಲ ಚೆನ್ನಾಗಿ ನೋಡ್ಕೊಳ್ಳೋಕೆ ಹಿರಿಯರನ್ನ ಕೊಟ್ಟಿದ್ದಾನೆ. ಹಾಗಾಗಿ ಹಿರಿಯರು ಎಲ್ರನ್ನ ದಯೆ ಮತ್ತು ಪ್ರೀತಿಯಿಂದ ನೋಡ್ಕೊಬೇಕು ಅಂತ ಆತನು ಆಸೆಪಡ್ತಾನೆ. ಈ ಕೆಲ್ಸನ ಚೆನ್ನಾಗಿ ಮಾಡೋಕೆ ಯೇಸು ಹಿರಿಯರಿಗೆ ನಿರ್ದೇಶನಗಳನ್ನ ಕೊಟ್ಟಿದ್ದಾನೆ. ಅದನ್ನ ಪಾಲಿಸ್ತಾ ಹಿರಿಯರು ಸಭೆಯವ್ರಿಗೆ ಪ್ರೋತ್ಸಾಹ ಕೊಡ್ತಾರೆ, ಯಾವಾಗ್ಲೂ ಯೆಹೋವನಿಗೆ ನಿಯತ್ತಾಗಿರೋಕೆ ಸಹಾಯ ಮಾಡ್ತಾರೆ.—ಯೆಶಾ. 32:1, 2.
2. ಯೆಹೋವ ಯಾರ ಕಡೆ ವಿಶೇಷ ಗಮನ ಕೊಡ್ತಾನೆ? (ಯೆಹೆಜ್ಕೇಲ 34:15, 16)
2 ಯೆಹೋವನು ತನ್ನ ಎಲ್ಲ ಕುರಿಗಳ ಬಗ್ಗೆ ತುಂಬ ಯೋಚಿಸ್ತಾನೆ. ಆದ್ರೆ ಯಾರು ನೋವಲ್ಲಿ ನರಳ್ತಿದ್ದಾರೋ ಅಂಥವ್ರನ್ನ ತನ್ನ ಕಣ್ಣ ರೆಪ್ಪೆ ಆಡಿಸ್ದೇ ಗಮನಿಸ್ತಾ ಇರ್ತಾನೆ. ಯಾರಾದ್ರೂ ತಪ್ಪು ಮಾಡಿ ಆ ನೋವಲ್ಲಿ ಮುಳುಗಿದ್ರೆ ಅಂಥವ್ರಿಗೆ ಹಿರಿಯರ ಮೂಲಕ ಸಹಾಯ ಮಾಡ್ತಾನೆ. (ಯೆಹೆಜ್ಕೇಲ 34:15, 16 ಓದಿ.) ನಾವು ಆತನಿಗೆ, ‘ಸಹಾಯ ಮಾಡು’ ಅಂತ ಪ್ರಾರ್ಥನೆ ಮಾಡಬೇಕಂತ ಬಯಸ್ತಾನೆ. ಅಷ್ಟೇ ಅಲ್ಲ, ನಮಗೋಸ್ಕರ ಯಾರನ್ನ “ಕುರುಬರಾಗಿ ಮತ್ತು ಬೋಧಕರಾಗಿ” ಕೊಟ್ಟಿದಾನೋ ಆ ಹಿರಿಯರ ಸಹಾಯ ಪಡ್ಕೊಳಬೇಕು ಅಂತಾನೂ ಆತನು ಇಷ್ಟ ಪಡ್ತಾನೆ.—ಎಫೆ. 4:11, 12.
3. (ಎ) ಈ ಲೇಖನದಲ್ಲಿ ನಾವು ಏನು ಕಲಿತೀವಿ? (ಬಿ) ಇದನ್ನ ಕಲಿಯೋದು ಯಾಕೆ ಮುಖ್ಯ?
3 ಸಹಾಯ ಮಾಡೋಕೆ ಯೆಹೋವನು ಹಿರಿಯರ ಮೂಲಕ ಯಾವ ಏರ್ಪಾಡು ಮಾಡಿದ್ದಾನೆ ಅಂತ ನಾವು ಈ ಲೇಖನದಲ್ಲಿ ನೋಡೋಣ. ಜೊತೆಗೆ ಮೂರು ಪ್ರಶ್ನೆಗಳಿಗೆ ಉತ್ರ ತಿಳ್ಕೊಳ್ಳೋಣ. (1) ನಾವು ಹಿರಿಯರ ಹತ್ರ ಯಾವಾಗ ಸಹಾಯ ಕೇಳಬೇಕು? (2) ಹಿರಿಯರ ಸಹಾಯ ತಗೊಳೋದು ಯಾಕಷ್ಟು ಮುಖ್ಯ? (3) ಹಿರಿಯರು ನಮಗೆ ಹೇಗೆ ಸಹಾಯ ಮಾಡ್ತಾರೆ? ಯೆಹೋವನ ಜೊತೆಯಲ್ಲಿ ನಿಮಗೀಗ ಒಳ್ಳೆ ಸ್ನೇಹ ಇರಬಹುದು, ಅದಕ್ಕೆ ಹಿರಿಯರ ಸಹಾಯ ಸದ್ಯಕ್ಕೆ ಬೇಡ ಅಂತ ಅನಿಸಬಹುದು. ಹಾಗಿದ್ರೂ ಈ ಪ್ರಶ್ನೆಗಳಿಗೆ ಉತ್ರ ತಿಳ್ಕೊಳ್ಳೋದು ತುಂಬ ಒಳ್ಳೇದು. ಆಗ ದೇವರು ಮಾಡಿರೋ ಈ ಏರ್ಪಾಡಿನ ಮೇಲೆ ಗೌರವ ಜಾಸ್ತಿ ಆಗುತ್ತೆ, ಮುಂದೆ ನಿಮಗೆ ಸಹಾಯ ಬೇಕಾದಾಗ ಇದು ನಿಮ್ಮ ಪ್ರಾಣ ಉಳಿಸುತ್ತೆ!
‘ಹಿರಿಯರ ಹತ್ರ’ ಯಾವಾಗ ಮಾತಾಡಬೇಕು?
4. ಯಾಕೋಬ 5ನೇ ಅಧ್ಯಾಯ ಆಧ್ಯಾತ್ಮಿಕ ಕಾಯಿಲೆ ಬಗ್ಗೆನೇ ಮಾತಾಡ್ತಿದೆ ಅಂತ ನಾವು ಹೇಗೆ ಹೇಳಬಹುದು? (ಯಾಕೋಬ 5:14-16, 19, 20) (ಚಿತ್ರ ನೋಡಿ.)
4 ನಮಗೆ ಸಹಾಯ ಮಾಡೋಕೆ ದೇವರು ಮಾಡಿರೋ ಏರ್ಪಾಡು ಯಾವುದು ಅಂತ ಶಿಷ್ಯ ಯಾಕೋಬ ಬರೆದಿದ್ದಾನೆ. “ನಿಮ್ಮಲ್ಲಿ ಯಾರಿಗಾದ್ರೂ ಹುಷಾರಿಲ್ವಾ? ಸಭೆ ಹಿರಿಯರಿಗೆ ನಿಮ್ಮ ಹತ್ರ ಬರೋಕೆ ಹೇಳಿ” ಅಂತ ಅವನು ಹೇಳಿದ್ದಾನೆ. (ಯಾಕೋಬ 5:14-16, 19, 20 ಓದಿ.) ಈ ವಚನದ ಹಿನ್ನೆಲೆ ನೋಡೋದಾದ್ರೆ ಯಾಕೋಬ ಇಲ್ಲಿ ಆಧ್ಯಾತ್ಮಿಕವಾಗಿ ಹುಷಾರು ತಪ್ಪಿದವ್ರ ಬಗ್ಗೆ ಹೇಳ್ತಿದ್ದಾನೆ ಅಂತ ಗೊತ್ತಾಗುತ್ತೆ. ಅದು ಹೇಗೆ? ಇಲ್ಲಿ ಹುಷಾರು ಇಲ್ಲದಿರೋರಿಗೆ ಡಾಕ್ಟರ್‌ನ ಕರೆಯಿರಿ ಅಂತಲ್ಲ, ಹಿರಿಯರನ್ನ ಕರೆಯಿರಿ ಅಂದಿದ್ದಾನೆ. ಆಧ್ಯಾತ್ಮಿಕವಾಗಿ ಕಾಯಿಲೆ ಬಿದ್ದವ್ರಿಗೆ ಅವ್ರ ಪಾಪಗಳಿಗೆ ಸಿಗೋ ಕ್ಷಮೆನೇ ಔಷಧಿ! ಕಾಯಿಲೆ ಬಂದಾಗ ಒಬ್ಬ ವ್ಯಕ್ತಿ ಮೊದಲು ಡಾಕ್ಟರ್ ಹತ್ರ ಹೋಗ್ತಾನೆ. ಅವನಿಗೆ ಏನೆಲ್ಲ ಆಗ್ತಿದೆ ಅಂತ ಹೇಳ್ತಾನೆ. ಡಾಕ್ಟರ್ ಕೊಡೋ ಸಲಹೆ ಪಾಲಿಸಿ ಹುಷಾರಾಗ್ತಾನೆ. ಅದೇ ತರ ಆಧ್ಯಾತ್ಮಿಕ ಕಾಯಿಲೆ ಬಂದಿರೋರು ಹಿರಿಯರ ಹತ್ರ ಹೋಗಬೇಕು, ಅವ್ರಿಗೆ ಏನೆಲ್ಲಾ ಆಗ್ತಿದೆ ಅಂತ ಹೇಳ್ಕೊಬೇಕು. ಹಿರಿಯರು ಬೈಬಲಿಂದ ಕೊಡೋ ಸಲಹೆನ, ಮಾರ್ಗದರ್ಶನನ ಪಾಲಿಸಬೇಕು.
ನಮಗೆ ಹುಷಾರಿಲ್ಲದೆ ಇದ್ದಾಗ ಡಾಕ್ಟರ್ ಹತ್ರ ಹೋಗ್ತೀವಿ. ಅದೇ ತರ ಆಧ್ಯಾತ್ಮಿಕವಾಗಿ ಕಾಯಿಲೆ ಬಿದ್ದಾಗ ಹಿರಿಯರ ಹತ್ರ ಹೋಗಬೇಕು (ಪ್ಯಾರ 4 ನೋಡಿ)
5. ನಾವು ಆಧ್ಯಾತ್ಮಿಕವಾಗಿ ಹುಷಾರು ತಪ್ತಿದ್ದೀವಾ ಅಂತ ಕಂಡುಹಿಡಿಯೋದು ಹೇಗೆ?
5 ಯೆಹೋವನ ಜೊತೆ ನಿಮಗಿರೋ ಸ್ನೇಹನ ನೀವು ಕಳ್ಕೊತಿದ್ದೀರ ಅಂತ ಅನಿಸ್ತಿದ್ರೆ ಹಿರಿಯರ ಹತ್ರ ನೀವು ಸಹಾಯ ಕೇಳಬೇಕು ಅಂತ ಯಾಕೋಬ 5ನೇ ಅಧ್ಯಾಯ ಪ್ರೋತ್ಸಾಹಿಸುತ್ತೆ. ಯೆಹೋವನ ಜೊತೆ ನಿಮಗಿರೋ ಸ್ನೇಹ ಪೂರ್ತಿ ಹಾಳಾಗೋ ಮೊದಲೇ ನೀವು ಹಿರಿಯರ ಸಹಾಯ ತಗೊಳೋದು ಮುಖ್ಯ! ಇದನ್ನ ಮಾಡಬೇಕಂದ್ರೆ ನಿಮ್ಮ ಮನಸ್ಸಿಗೆ ನೀವು ಪ್ರಾಮಾಣಿಕರಾಗಿರಬೇಕು. ಯಾಕಂದ್ರೆ, ‘ನನಗೆ ಏನು ಆಗಿಲ್ಲ, ನಾನು ಯಾವ ತಪ್ಪೂ ಮಾಡ್ತಿಲ್ಲ’ ಅಂತ ನಮ್ಮನ್ನ ನಾವೇ ಮೋಸ ಮಾಡ್ಕೊಳ್ಳೋ ಸಾಧ್ಯತೆ ಇದೆ ಅಂತ ಬೈಬಲ್ ಎಚ್ಚರಿಸುತ್ತೆ. (ಯಾಕೋ. 1:22) ಒಂದನೇ ಶತಮಾನದ ಸಾರ್ದಿಸ್ ಸಭೇಲಿದ್ದ ಕೆಲವು ಕ್ರೈಸ್ತರು ಇದೇ ತಪ್ಪು ಮಾಡಿದ್ರು. ಅದಕ್ಕೆ ಯೇಸು ಅವ್ರನ್ನ ಎಚ್ಚರಿಸಿದನು. (ಪ್ರಕ. 3:1, 2) ನಮ್ಮ ಆಧ್ಯಾತ್ಮಿಕ ಆರೋಗ್ಯ ಹೇಗಿದೆ ಅಂತ ತಿಳ್ಕೊಳ್ಳೋಕೆ ಹಲವಾರು ವಿಧಾನಗಳಿವೆ. ಅದ್ರಲ್ಲೊಂದು, ಯೆಹೋವನ ಸೇವೆ ಮಾಡೋಕೆ ಮೊದಲು ನನಗೆ ಇದ್ದ ಹುರುಪು ಈಗ್ಲೂ ಇದ್ಯಾ ಅಂತ ಪರೀಕ್ಷೆ ಮಾಡ್ಕೊಬೇಕು. (ಪ್ರಕ. 2:4, 5) ನಾನು ಬೈಬಲ್ ಓದೋದನ್ನ, ಅದ್ರ ಬಗ್ಗೆ ಯೋಚ್ನೆ ಮಾಡೋದನ್ನ ಕಮ್ಮಿ ಮಾಡಿದ್ದೀನಾ? ಮೀಟಿಂಗ್‌ಗೆ ಏನೂ ತಯಾರಿ ಮಾಡದೇ ‘ಏನೋ ಹೋಗಬೇಕಲ್ಲಾ’ ಅಂತ ಹೋಗ್ತಿದ್ದೀನಾ? ಸೇವೆ ಮಾಡೋಕೆ ನನಗಿದ್ದ ಹುರುಪು ಕಮ್ಮಿ ಆಗ್ತಿದ್ಯಾ? ನಾನು ಮೂರು ಹೊತ್ತು ಹಣ, ಆಸ್ತಿ-ಅಂತಸ್ತು ಕೂಡಿಸೋದ್ರ ಬಗ್ಗೆನೇ ಯೋಚ್ನೆ ಮಾಡ್ತಿದ್ದೀನಾ? ಅಂತ ಕೇಳ್ಕೊಬೇಕು. ಈ ಪ್ರಶ್ನೆಗಳಲ್ಲಿ ಯಾವುದಾದ್ರೂ ಒಂದಕ್ಕೆ ನೀವು ‘ಹೌದು’ ಅಂತ ಉತ್ರ ಕೊಟ್ಟಿರೋದಾದ್ರೆ, ನೀವು ಯೆಹೋವನ ಸ್ನೇಹನ ಕಳ್ಕೊತಿದ್ದೀರ, ಆಧ್ಯಾತ್ಮಿಕವಾಗಿ ಬಲಹೀನರಾಗ್ತಾ ಇದ್ದೀರ ಅಂತರ್ಥ! ನೀವು ಆದಷ್ಟು ಬೇಗ ಸಹಾಯ ಪಡ್ಕೊಬೇಕು. ನಿಮ್ಮ ಪರಿಸ್ಥಿತಿಯಿಂದ ಚೇತರಿಸ್ಕೊಳ್ಳೋಕೆ ನಿಮಗೆ ಸ್ವಂತ ಶಕ್ತಿಯಿಲ್ಲ ಅಂತ ಅನಿಸ್ತಿದ್ರೆ ಅಥವಾ ಈಗಾಗ್ಲೇ ದೇವ್ರ ಕೆಲವು ನಿಯಮಗಳನ್ನ ನೀವು ಮುರಿದಿದ್ರೆ ದಯವಿಟ್ಟು ತಡ ಮಾಡದೆ ಹಿರಿಯರ ಸಹಾಯ ತಗೊಳಿ.
6. ಗಂಭೀರ ತಪ್ಪು ಮಾಡಿರೋರು ಏನು ಮಾಡಬೇಕು?
6 ಕೆಲವೊಮ್ಮೆ ಸಭೆಯಿಂದ ಹೊರಗೆ ಹಾಕೋಷ್ಟು ಗಂಭೀರ ತಪ್ಪನ್ನ ಒಬ್ಬ ಸಹೋದರ ಮಾಡಿರಬಹುದು. ಆಗಲೂ ಅವನು ಒಬ್ಬ ಹಿರಿಯನ ಹತ್ರ ಹೋಗಿ ಮಾತಾಡಬೇಕು. (1 ಕೊರಿಂ. 5:11-13) ಗಂಭೀರ ತಪ್ಪು ಮಾಡಿರೋ ವ್ಯಕ್ತಿ ಯೆಹೋವನ ಜೊತೆ ತನಗಿರೋ ಸಂಬಂಧನ ಸರಿ ಮಾಡ್ಕೊಬೇಕು. ಅದಕ್ಕೆ ಅವನಿಗೆ ಸಹಾಯ ಬೇಕಿರುತ್ತೆ. ಅವನು ಬಿಡುಗಡೆ ಬೆಲೆಯ ಆಧಾರದ ಮೇಲೆ ಯೆಹೋವನ ಕ್ಷಮೆ ಪಡ್ಕೊಬೇಕಾದ್ರೆ ಪಶ್ಚಾತ್ತಾಪಪಡಬೇಕು, ‘ತಪ್ಪು ತಿದ್ಕೊಂಡು ಜೀವನ ಮಾಡಬೇಕು.’ (ಅ. ಕಾ. 26:20) ಅವನು ತಪ್ಪು ತಿದ್ಕೊಂಡು ಜೀವನ ಮಾಡೋದ್ರಲ್ಲಿ ಮುಖ್ಯ ಹೆಜ್ಜೆ ಹಿರಿಯರ ಹತ್ರ ಹೋಗಿ ಮಾತಾಡೋದೇ ಆಗಿದೆ.
7. ಹಿರಿಯರ ಸಹಾಯ ಇನ್ನೂ ಯಾರಿಗೆ ಬೇಕಾಗುತ್ತೆ?
7 ಹಿರಿಯರು ಗಂಭೀರ ತಪ್ಪು ಮಾಡಿರೋರಿಗೆ ಅಷ್ಟೇ ಅಲ್ಲ ಆಧ್ಯಾತ್ಮಿಕವಾಗಿ ಬಲಹೀನರಾಗ್ತಿರೋ ಪ್ರತಿಯೊಬ್ರಿಗೂ ಸಹಾಯ ಮಾಡ್ತಾರೆ. (ಅ. ಕಾ. 20:35) ಉದಾಹರಣೆಗೆ, ನೀವು ತಪ್ಪಾದ ಆಸೆಗಳ ವಿರುದ್ಧ ಎಷ್ಟೇ ಹೋರಾಡ್ತಿದ್ರೂ ಅದ್ರಿಂದ ಹೊರಗೆ ಬರೋಕೆ ಆಗ್ತಿಲ್ಲ ಅಂತ ನಿಮಗೆ ಅನಿಸಬಹುದು. ಅದ್ರಲ್ಲೂ ನೀವು ಸತ್ಯ ಕಲಿಯೋ ಮುಂಚೆ ಡ್ರಗ್ಸ್ ತಗೊಳೋ, ಅಶ್ಲೀಲ ಸಾಹಿತ್ಯ ನೋಡೋ ಚಟ ಇದಿದ್ರೆ ಅಥವಾ ಅನೈತಿಕ ಜೀವನ ಮಾಡಿದ್ರೆ ಈ ಹೋರಾಟ ಇನ್ನೂ ಕಷ್ಟ ಅನಿಸಬಹುದು. ಹಾಗಂತ ಈ ಹೋರಾಟನ ನೀವು ಒಬ್ರೇ ಮಾಡಬೇಕಂತೇನಿಲ್ಲ. ನಿಮಗೆ ಹಿರಿಯರು ಸಹಾಯ ಮಾಡ್ತಾರೆ. ನೀವು ಒಬ್ಬ ಹಿರಿಯನ ಹತ್ರ ಇದ್ರ ಬಗ್ಗೆ ಮಾತಾಡಿ. ಅವರು ನಿಮ್ಮ ನೋವು ಅರ್ಥ ಮಾಡ್ಕೊತಾರೆ. ನೀವೇನು ಮಾಡಬಹುದು ಅನ್ನೋ ಸಲಹೆ ಕೊಡ್ತಾರೆ. ತಪ್ಪಾದ ಆಸೆಗಳ ವಿರುದ್ಧ ಹೋರಾಡೋಕೆ ನಿಮ್ಮ ಕೈಲ್ಲಾದಷ್ಟು ಪ್ರಯತ್ನ ಹಾಕಿದ್ರೆ ಯೆಹೋವ ನಿಮ್ಮನ್ನ ಪ್ರೀತಿಸ್ತಾನೆ ಅಂತ ಧೈರ್ಯ ಹೇಳ್ತಾರೆ. (ಪ್ರಸಂ. 4:12) ಒಂದುವೇಳೆ ನೀವು ಎಷ್ಟೇ ಹೋರಾಡಿದ್ರೂ ಇಂಥ ತಪ್ಪಾದ ಆಸೆಗಳಿಂದ ಹೊರಗೆ ಬರೋಕೆ ಆಗ್ತಿಲ್ಲ ಅಂದ್ರು ಅವರು ನಿಮ್ಮನ್ನ ಪ್ರಶಂಸಿಸ್ತಾರೆ. ಯಾಕೆ ಗೊತ್ತಾ? ನೀವು ಹಾಕ್ತಿರೋ ಪ್ರಯತ್ನ, ಯೆಹೋವನ ಸ್ನೇಹನ ನೀವು ಎಷ್ಟು ಅಮೂಲ್ಯವಾಗಿ ನೋಡ್ತಿದ್ದೀರ ಅಂತ ತೋರಿಸುತ್ತೆ. ನಿಮ್ಮಷ್ಟಕ್ಕೆ ನೀವೇ ಇದ್ದು ಬಿಡದೇ ಸಹಾಯ ಕೇಳೋದು ನಿಮ್ಮಲ್ಲಿ ದೀನತೆ ಇದೆ ಅಂತ ತೋರಿಸುತ್ತೆ.—1 ಕೊರಿಂ. 10:12.
8. ನಾವು ಚಿಕ್ಕಪುಟ್ಟ ತಪ್ಪು ಮಾಡಿದಾಗೆಲ್ಲಾ ಹಿರಿಯರ ಹತ್ರ ಹೋಗಿ ಅದರ ಬಗ್ಗೆ ಮಾತಾಡಬೇಕಾ? ವಿವರಿಸಿ.
8 ನಾವು ಚಿಕ್ಕಪುಟ್ಟ ತಪ್ಪು ಮಾಡಿದಾಗೆಲ್ಲಾ ಹಿರಿಯರಿಗೆ ಆ ತಪ್ಪು ಒಪ್ಪಿಸಬೇಕಿಲ್ಲ. ಉದಾಹರಣೆಗೆ, ನೀವು ಸಭೆಯಲ್ಲಿ ಯಾರಿಗಾದ್ರೂ ನೋವಾಗೋ ತರ ಮಾತಾಡಿದ್ರೆ ಅಥವಾ ಕೋಪದಲ್ಲಿ ಏನಾದ್ರೂ ಅಂದಿದ್ರೆ, ಅದನ್ನೆಲ್ಲ ಹಿರಿಯರ ಹತ್ರ ಹೇಳಬೇಕಿಲ್ಲ. ಯಾಕೆ? ಇಂಥ ಸಂದರ್ಭದಲ್ಲಿ ಯೇಸು ಕೊಟ್ಟ ಸಲಹೆ ಪಾಲಿಸಿದ್ರೆ ಸಾಕು! ಯೇಸು ಏನು ಸಲಹೆ ಕೊಟ್ಟನು? ಮನಸ್ತಾಪ ಇದ್ರೆ ‘ಅವರ ಹತ್ರನೇ ಹೋಗಿ ಸಮಾಧಾನ ಮಾಡ್ಕೊ’ ಅಂತ ಸಲಹೆ ಕೊಟ್ಟಿದ್ದಾನೆ. (ಮತ್ತಾ. 5:23, 24) ನೀವು ಆಗ ದಯೆ, ತಾಳ್ಮೆ, ಸ್ವನಿಯಂತ್ರಣ ಅನ್ನೋ ಗುಣಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡಿದ್ರೆ ಈ ಗುಣಗಳನ್ನ ಇನ್ನೂ ಚೆನ್ನಾಗಿ ಬೆಳೆಸ್ಕೊಳ್ಳೋಕೆ ಆಗುತ್ತೆ. ಇಷ್ಟೆಲ್ಲ ಮಾಡಿದ ಮೇಲೆನೂ ನಿಮ್ಮ ಮಧ್ಯೆ ಇರೋ ಸಮಸ್ಯೆ ಇನ್ನೂ ಸರಿ ಹೋಗಿಲ್ಲ ಅಂದ್ರೆ ಆಗ ನೀವು ಒಬ್ಬ ಹಿರಿಯನ ಹತ್ರ ಹೋಗಿ ಸಹಾಯ ಕೇಳಬಹುದು. ಅಪೊಸ್ತಲ ಪೌಲ ಫಿಲಿಪ್ಪಿಯವ್ರಿಗೆ ಪತ್ರ ಬರೆದಾಗ, ಯುವೊದ್ಯ ಮತ್ತು ಸಂತುಕೆ ಅನ್ನೋ ಸಹೋದರಿಯರ ಮಧ್ಯೆ ಇದ್ದ ಸಮಸ್ಯೆ ಬಗೆಹರಿಸೋಕೆ ಒಬ್ಬ ಸಹೋದರನ ಸಹಾಯ ಕೇಳ್ತಾನೆ. ಇದೇ ತರನೇ ಸಭೆಯಲ್ಲಿರೋ ಒಬ್ಬ ಹಿರಿಯ ನಿಮಗೆ ಸಹಾಯ ಮಾಡಬಹುದು.—ಫಿಲಿ. 4:2, 3.
ಹಿರಿಯರ ಹತ್ರ ಮಾತಾಡೋದು ಯಾಕೆ ಮುಖ್ಯ?
9. ನಾಚಿಕೆ ಆದ್ರೂ ಹಿರಿಯರ ಹತ್ರ ಹೋಗಿ ಮಾತಾಡೋಕೆ ನಾವು ಯಾಕೆ ಹಿಂದೇಟು ಹಾಕಬಾರದು? (ಜ್ಞಾನೋಕ್ತಿ 28:13)
9 ನಾವೊಂದು ಗಂಭೀರ ತಪ್ಪು ಮಾಡಿದ್ರೆ ಅಥವಾ ತಪ್ಪಾದ ಆಸೆಯಿಂದ ಹೊರಗೆ ಬರೋಕೆ ಒದ್ದಾಡ್ತಾ ಇದ್ರೆ, ಹಿರಿಯರ ಹತ್ರ ಸಹಾಯ ಕೇಳಬೇಕು. ಇದನ್ನ ಮಾಡೋಕೆ ನಮಗೆ ನಂಬಿಕೆ ಮತ್ತು ಧೈರ್ಯ ಬೇಕು. ಆದ್ರೆ ಯಾವುದೇ ಕಾರಣಕ್ಕೂ ‘ಹಿರಿಯರ ಹತ್ರ ಇದ್ರ ಬಗ್ಗೆ ಮಾತಾಡೋಕೆ ನಾಚಿಕೆ ಆಗುತ್ತೆ’ ಅಂತ ಹಿಂದೇಟು ಹಾಕಿದ್ರೆ ನಾವು ಯೆಹೋವನ ಸ್ನೇಹ ಕಳ್ಕೊತೀವಿ. ಆ ತರ ಆಗಬಾರದು ಅಂತನೇ ಯೆಹೋವನು ನಮಗೆ ಹಿರಿಯರನ್ನ ಕೊಟ್ಟಿದ್ದಾನೆ. ನಾವು ಹಿರಿಯರ ಹತ್ರ ಮಾತಾಡಿದ್ರೆ ಯೆಹೋವನ ಮೇಲೆ ನಂಬಿಕೆ ಇದೆ ಅಂತ ತೋರಿಸ್ತೀವಿ. ಯೆಹೋವನ ಮಾತಿಗೆ ವಿಧೇಯತೆ ತೋರಿಸ್ತೀವಿ. ಸರಿಯಾಗಿರೋದನ್ನ ಮಾಡೋಕೆ ನಮಗೆ ಯಾರದಾದ್ರೂ ಸಹಾಯ ಬೇಕಾಗುತ್ತೆ. (ಕೀರ್ತ. 94:18) ಮಾಡಿದ ತಪ್ಪನ್ನ ಹಿರಿಯರ ಹತ್ರ ಒಪ್ಕೊಂಡ್ರೆ, ಮತ್ತೆ ಅದನ್ನ ಮಾಡದೇ ಇರೋಕೆ ನಿರ್ಧಾರ ಮಾಡಿದ್ರೆ ಯೆಹೋವನು ನಮಗೆ ಕರುಣೆ ತೋರಿಸ್ತೀನಿ ಅಂತ ಮಾತು ಕೊಟ್ಟಿದ್ದಾನೆ.—ಜ್ಞಾನೋಕ್ತಿ 28:13 ಓದಿ.
10. ಮಾಡಿದ ಪಾಪನ ನಾವು ಮುಚ್ಚಿಟ್ರೆ ಏನಾಗಬಹುದು?
10 ಹಿರಿಯರ ಹತ್ರ ಹೋಗಿ ಮಾತಾಡಿದ್ರೆ ಅದ್ರಿಂದ ನಮಗೆ ತುಂಬ ಪ್ರಯೋಜನ ಆಗುತ್ತೆ ಅಂತ ಗೊತ್ತಾಯ್ತು. ಒಂದುವೇಳೆ ಹಿರಿಯರ ಹತ್ರ ಮಾತಾಡದೆ ಆ ವಿಷ್ಯ ಮುಚ್ಚಿಟ್ರೆ ಏನಾಗುತ್ತೆ ಅಂತಾನೂ ನೋಡೋಣ. ತಪ್ಪನ್ನ ಮುಚ್ಚಿಟ್ರೆ ನಮ್ಮ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂಗೆ ಆಗುತ್ತೆ ಅಂತ ನೆನಪಿಡಬೇಕು. ರಾಜ ದಾವೀದ ತಾನು ಮಾಡಿದ ತಪ್ಪುಗಳನ್ನ ಮುಚ್ಚಿಟ್ಟ. ಆಮೇಲೆ ಆರಾಮವಾಗಿ ಇದ್ದನಾ? ಇಲ್ಲ. ಆಗೆಲ್ಲ ಅವನ ಮನಸ್ಸಾಕ್ಷಿ ಅವನನ್ನ ಚುಚ್ತಾ ಇತ್ತು. ಆ ನೋವು ಅವನನ್ನ ಕಿತ್ತು ತಿನ್ನುತ್ತಿತ್ತು. ‘ಯೆಹೋವನಿಗೆ ನನ್ನ ನೋಡಿ ಖುಷಿ ಆಗಲ್ಲ’ ಅಂತ ನೆನಸಿಕೊಂಡಾಗ ಅವನಿಗೆ ತುಂಬ ಬೇಜಾರಾಯ್ತು. ಒಂದು ಕಾಯಿಲೆಗೆ ಬೇಗ ಚಿಕಿತ್ಸೆ ಕೊಡ್ಲಿಲ್ಲ ಅಂದ್ರೆ ಏನಾಗುತ್ತೆ ಹೇಳಿ? ಅದ್ರಿಂದ ಆ ವ್ಯಕ್ತಿಗೆ ನೋವು, ಸಂಕಟ ಜಾಸ್ತಿ ಆಗುತ್ತೆ. ಅದೇ ತರಾನೇ ತಪ್ಪು ಮಾಡಿದಾಗ ಬೇಗ ಹಿರಿಯರ ಸಹಾಯ ತಗೊಂಡಿಲ್ಲಾಂದ್ರೆ ಆ ವೇದನೆ, ಸಂಕಟ ಜಾಸ್ತಿ ಆಗುತ್ತೆ. ಯೆಹೋವನಿಗೆ ಇದು ಚೆನ್ನಾಗಿ ಅರ್ಥ ಆಗುತ್ತೆ. (ಕೀರ್ತ. 32:3-5) ಅದಕ್ಕೇ ಯೆಹೋವ ದೇವರು, ‘ಬನ್ನಿ ನಮ್ಮ ಮಧ್ಯ ಇರೋ ವಿಷ್ಯಗಳನ್ನ ಇತ್ಯರ್ಥ ಮಾಡ್ಕೊಳ್ಳೋಣ’ ಅಂತ ಹೇಳಿದ್ದಾನೆ.—ಯೆಶಾ. 1:5, 6, 18.
11. ಮಾಡಿದ ಪಾಪನ ಮುಚ್ಚಿಟ್ರೆ ಅದ್ರಿಂದ ಬೇರೆಯವ್ರಿಗೆ ಹೇಗೆ ತೊಂದ್ರೆ ಆಗುತ್ತೆ?
11 ನಾವು ಮಾಡಿದ ಪಾಪನ ಮುಚ್ಚಿಟ್ರೆ ಅದ್ರಿಂದ ಬೇರೆಯವ್ರಿಗೂ ತೊಂದ್ರೆ ಆಗುತ್ತೆ. ಯೆಹೋವನ ಪವಿತ್ರಶಕ್ತಿ ಸಭೆ ಮೇಲೆ ಸರಾಗವಾಗಿ ಹರಿಯೋದಿಲ್ಲ. ಸಭೆಯವ್ರ ಶಾಂತಿ-ಸಮಾಧಾನ ನುಚ್ಚು ನೂರಾಗುತ್ತೆ. (ಎಫೆ. 4:30) ಒಂದುವೇಳೆ ಸಭೆಯಲ್ಲಿರೋ ಬೇರೆಯವರು ಗಂಭೀರ ಪಾಪ ಮಾಡಿರೋದು ನಿಮಗೆ ಗೊತ್ತಾದ್ರೆ ಏನು ಮಾಡಬೇಕು? ಆ ವ್ಯಕ್ತಿ ಹಿರಿಯರ ಹತ್ರ ಮಾತಾಡೋಕೆ ಪ್ರೋತ್ಸಾಹಿಸಬೇಕು.a ಬೇರೆಯವ್ರ ಪಾಪನ ನೀವು ಮುಚ್ಚಿಟ್ರೆ, ಆ ಪಾಪನ ನೀವೂ ಮಾಡಿದಂತೆ ಆಗುತ್ತೆ ಅನ್ನೋದನ್ನ ಮರೀಬೇಡಿ. (ಯಾಜ. 5:1) ಯೆಹೋವನ ಮೇಲೆ ನಮಗೆ ಪ್ರೀತಿ ಇದ್ರೆ ಧೈರ್ಯವಾಗಿ ಹೋಗಿ ಇರೋ ಸತ್ಯ ಹೇಳ್ತೀವಿ. ನಾವು ಈ ತರ ಮಾಡಿದ್ರೆ ಸಭೆನೂ ಶುದ್ಧವಾಗಿರುತ್ತೆ. ಪಾಪ ಮಾಡಿದ ವ್ಯಕ್ತಿ ಕೂಡ ಯೆಹೋವನ ಜೊತೆ ಸ್ನೇಹ ಸಂಬಂಧನ ಬಲಪಡಿಸ್ಕೊಳ್ಳೋಕೆ ಸಾಧ್ಯ ಆಗುತ್ತೆ.
ಹಿರಿಯರು ಹೇಗೆ ಸಹಾಯ ಮಾಡ್ತಾರೆ?
12. ಆಧ್ಯಾತ್ಮಿಕವಾಗಿ ಬಲಹೀನವಾಗಿ ಇರೋರಿಗೆ ಹಿರಿಯರು ಹೇಗೆ ಸಹಾಯ ಮಾಡ್ತಾರೆ?
12 ಆಧ್ಯಾತ್ಮಿಕವಾಗಿ ಬಲಹೀನವಾಗಿರೋರಿಗೆ ಸಹಾಯ ಮಾಡಬೇಕು ಅಂತ ಯೆಹೋವ ಹಿರಿಯರಿಗೆ ಹೇಳಿದ್ದಾನೆ. (1 ಥೆಸ. 5:14) ಹಾಗಾಗಿ ನೀವು ಪಾಪ ಮಾಡಿದಾಗ, ಹಿರಿಯರು ನಿಮ್ಮ ಹತ್ರ ವಿವೇಚನೆ ಬಳಸಿ ನಿಮ್ಮ ಯೋಚನೆ ಮತ್ತು ಭಾವನೆಗಳನ್ನ ಅರ್ಥ ಮಾಡ್ಕೊಳ್ಳೋಕೆ ಕೆಲವು ಪ್ರಶ್ನೆಗಳನ್ನ ಕೇಳಬಹುದು. (ಜ್ಞಾನೋ. 20:5) ಆಗ ನೀವು ನಿಮ್ಮ ಮನಸ್ಸಲ್ಲಿರೋದನ್ನ ಮುಚ್ಚು ಮರೆ ಇಲ್ಲದೇ ಹೇಳಿ. ನಿಮಗೆ ಹೇಳೋದಕ್ಕೆ ನಾಚಿಕೆ ಆಗಬಹುದು, ನಿಮ್ಮ ವ್ಯಕ್ತಿತ್ವ ಅಥವಾ ನೀವು ಬೆಳೆದು ಬಂದಿರೋ ರೀತಿಯಿಂದ ಇದನ್ನ ಮಾಡೋಕೆ ನಿಮಗೆ ಕಷ್ಟ ಆಗಬಹುದು. ಆದ್ರೂ ದಯವಿಟ್ಟು ಹಿರಿಯರ ಹತ್ರ ಹೇಳ್ಕೊಳ್ಳಿ. ‘ಹಿರಿಯರ ಹತ್ರ ಹಿಂದೆಮುಂದೆ ಯೋಚ್ನೆ ಮಾಡದೆ ನಾನು ದುಡುಕಿ ಏನಾದ್ರೂ ಹೇಳಿಬಿಟ್ರೆ’ ಅಂತ ಚಿಂತೆ ಮಾಡಬೇಡಿ. (ಯೋಬ 6:3) ಹಿರಿಯರು ಆತುರಪಟ್ಟು ನಿಮ್ಮನ್ನ ತಪ್ಪಾಗಿ ಅರ್ಥ ಮಾಡ್ಕೊಳ್ಳಲ್ಲ. ನೀವು ಹೇಳೋದನ್ನ ಚೆನ್ನಾಗಿ ಕೇಳಿಸಿಕೊಂಡು ಅರ್ಥ ಮಾಡ್ಕೊತಾರೆ. ಆಮೇಲೆ ನಿಮಗೆ ಬೇಕಾಗಿರೋ ಸಲಹೆ ಕೊಡ್ತಾರೆ. (ಜ್ಞಾನೋ. 18:13) ಇದನ್ನೆಲ್ಲ ಮಾಡೋಕೆ ತುಂಬ ಸಮಯ ಬೇಕಾಗಬಹುದು. ಹಾಗಾಗಿ ಅವರು ನಿಮ್ಮ ಹತ್ರ ಒಂದಕ್ಕಿಂತ ಹೆಚ್ಚು ಬಾರಿ ಕೂತು ಮಾತಾಡೋ ಅಗತ್ಯ ಇರಬಹುದು.
13. ಹಿರಿಯರು ಮಾಡೋ ಪ್ರಾರ್ಥನೆ ಮತ್ತು ಬಳಸೋ ಬೈಬಲ್ ವಚನಗಳು ನಮಗೆ ಹೇಗೆ ಸಹಾಯ ಮಾಡುತ್ತೆ? (ಚಿತ್ರ ನೋಡಿ.)
13 ನೀವು ಹಿರಿಯರ ಹತ್ರ ಮಾತಾಡುವಾಗ, ಅವರ ಮಾತು ಮತ್ತು ನಡತೆಯಲ್ಲಿ ನಿಮಗೆ ನೋವಾಗದೇ ಇರೋ ತರ ನೋಡ್ಕೊಳ್ತಾರೆ. ಅವರು “ಎಣ್ಣೆ ಹಚ್ಚಿ ಯೆಹೋವನ ಹೆಸ್ರಲ್ಲಿ ನಿಮಗೋಸ್ಕರ ಪ್ರಾರ್ಥನೆ ಮಾಡ್ತಾರೆ.” ಅವರ ಪ್ರಾರ್ಥನೆಗಳಿಗೆ “ತುಂಬ ಶಕ್ತಿ” ಇರೋದನ್ನ ನೋಡ್ದಾಗ ನಿಮಗೆ ಆಶ್ಚರ್ಯ ಆಗುತ್ತೆ. (ಯಾಕೋ. 5:14-16) ‘ಎಣ್ಣೆ ಹಚ್ತಾರೆ’ ಅಂದ್ರೆ ಏನು? ಇಲ್ಲಿ ಹೇಳಿರೋ ‘ಎಣ್ಣೆ’ ದೇವರ ವಾಕ್ಯದಲ್ಲಿರೋ ಸತ್ಯ ಆಗಿದೆ. ಅವರು ಬೈಬಲಲ್ಲಿರೋ ವಚನಗಳನ್ನ ಬಳಸಿದಾಗ ನಿಮಗೆ ಸಮಾಧಾನ ಮತ್ತು ಸಾಂತ್ವನ ಸಿಗುತ್ತೆ. ಯೆಹೋವ ದೇವರ ಜೊತೆಯಲ್ಲಿ ನಿಮಗಿರೋ ಸ್ನೇಹ ಮತ್ತೆ ಮುಂಚಿನ ತರ ಆಗುತ್ತೆ. (ಯೆಶಾ. 57:18) ಅವರು ಬೈಬಲಿಂದ ಕೊಡೋ ಸಲಹೆಗಳು ಸರಿಯಾಗಿರೋದನ್ನ ಮಾಡೋಕೆ ನಿಮಗೆ ಬೇಕಾಗಿರೋ ಬಲ ಕೊಡುತ್ತೆ. ಹೀಗೆ ಹಿರಿಯರ ಮೂಲಕ ಯೆಹೋವ ದೇವರು ನಿಮಗೆ ‘ಇದೇ ದಾರಿ ಇದ್ರಲ್ಲೇ ನಡಿರಿ’ ಅಂತ ಹೇಳ್ತಾನೆ.—ಯೆಶಾ. 30:21.
ಆಧ್ಯಾತ್ಮಿಕವಾಗಿ ಕಾಯಿಲೆ ಬಿದ್ದವ್ರಿಗೆ ಹಿರಿಯರು ಬೈಬಲ್ ಬಳಸಿ ಸಾಂತ್ವನ ನೀಡ್ತಾರೆ (ಪ್ಯಾರ 13-14 ನೋಡಿ)
14. ತಪ್ಪು ದಾರಿ ಹಿಡಿದಿರೋ ವ್ಯಕ್ತಿಗೆ ಹಿರಿಯರು ಹೇಗೆ ಸಹಾಯ ಮಾಡ್ತಾರೆ? (ಗಲಾತ್ಯ 6:1) (ಚಿತ್ರ ನೋಡಿ.)
14 ಗಲಾತ್ಯ 6:1 ಓದಿ. ‘ತಪ್ಪು ದಾರಿ ಹಿಡಿದಿರೋ’ ಒಬ್ಬ ಕ್ರೈಸ್ತ ದೇವರ ನೀತಿ ನಿಯಮಗಳನ್ನ ಪಾಲಿಸ್ತಿರಲ್ಲ. ‘ತಪ್ಪು ದಾರಿ ಹಿಡಿಯೋದು’ ಅಂದ್ರೆ ಏನು? ಸರಿ ಯಾವುದು ಅಂತ ಗೊತ್ತಿದ್ರೂ ಒಬ್ಬ ಸಹೋದರ ತಪ್ಪು ನಿರ್ಧಾರ ಮಾಡಿದ್ರೆ ಅಥವಾ ಗಂಭೀರ ಪಾಪ ಮಾಡಿದ್ರೆ ಅವನು ತಪ್ಪು ದಾರಿ ಹಿಡಿದಿದ್ದಾನೆ ಅಂತ ಅರ್ಥ. ಆಗ ಪ್ರೀತಿ ಇರೋ ಹಿರಿಯರು ಅವನನ್ನ ‘ಮತ್ತೆ ಸರಿ ದಾರಿಗೆ ತರೋಕೆ ಪ್ರಯತ್ನಿಸ್ತಾರೆ.’ ‘ಮತ್ತೆ ಸರಿ ದಾರಿಗೆ ತರೋದು’ ಅನ್ನೋದಕ್ಕೆ ಬಳಸಿರೋ ಗ್ರೀಕ್ ಪದ ‘ತನ್ನ ಜಾಗದಿಂದ ಪಕ್ಕಕ್ಕೆ ಸರಿದಿರೋ ಮೂಳೆನ ಮತ್ತೆ ಅದ್ರ ಜಾಗಕ್ಕೆ ಸರಿ ಹೊಂದಿಸೋ ಕೆಲ್ಸನ’ ಸೂಚಿಸುತ್ತೆ. ಒಬ್ಬ ಮೂಳೆಯ ಡಾಕ್ಟರ್ ಈ ಕೆಲ್ಸ ಮಾಡುವಾಗ ರೋಗಿಗೆ ಜಾಸ್ತಿ ನೋವಾಗದಂತೆ ನೋಡ್ಕೊಳ್ತಾನೆ. ಅದೇ ತರಾನೇ ಹಿರಿಯರು ಕೂಡ ಆಧ್ಯಾತ್ಮಿಕವಾಗಿ ನಿಮಗೆ ಜಾಸ್ತಿ ನೋವಾಗದಂತೆ ನೋಡ್ಕೊತಾರೆ. ಆದ್ರೆ ಅದೇ ಸಮಯದಲ್ಲಿ ಅವರು “ಯಾವ ತಪ್ಪನ್ನೂ ಮಾಡದ ಹಾಗೆ” ಹುಷಾರಾಗಿ ಇರ್ತಾರೆ. ಅಂದ್ರೆ ನಿಮಗೆ ಸಹಾಯ ಮಾಡುವಾಗ ‘ನಾವು ನಿಮಗಿಂತ ಶ್ರೇಷ್ಠ’ ಅನ್ನೋ ತರ ಕಟುವಾಗಿ ನಡ್ಕೊಳ್ಳಲ್ಲ. ಅವರೂ ಅಪರಿಪೂರ್ಣತೆಯಿಂದ ತಪ್ಪು ಹೆಜ್ಜೆ ಇಡೋ ಸಾಧ್ಯತೆ ಇದೆ ಅಂತ ನೆನಪು ಮಾಡ್ಕೊತಾರೆ. ಹಾಗಾಗಿ ನಿಮ್ಮ ಹತ್ರ ಕರುಣೆಯಿಂದ ಮಾತಾಡ್ತಾರೆ.—1 ಪೇತ್ರ 3:8.
15. ನಮಗೊಂದು ತೊಂದ್ರೆ ಇದ್ರೆ ನಾವೇನು ಮಾಡಬೇಕು?
15 ನಮ್ಮ ಸಭೆಯಲ್ಲಿರೋ ಹಿರಿಯರ ಮೇಲೆ ನಾವು ನಂಬಿಕೆ ಇಡಬಹುದು. ಯಾಕಂದ್ರೆ ಯೆಹೋವನು ಅವ್ರಿಗೆ ಬೇಕಾಗಿರೋ ತರಬೇತಿ ಕೊಟ್ಟಿದ್ದಾನೆ. ಹಾಗಾಗಿ ನಾವು ಅವ್ರ ಹತ್ರ ಹೇಳೋ ವಿಷ್ಯನ ಅವರು ಬೇರೆ ಯಾರಿಗೂ ಹೇಳಲ್ಲ! ಅದನ್ನ ಗುಟ್ಟಾಗಿ ಇಡ್ತಾರೆ. ಅವರು ಮನಸ್ಸಿಗೆ ಬಂದಿದ್ದನ್ನ ಹೇಳದೇ ಬೈಬಲಿನಿಂದ ಸಲಹೆ ಕೊಡ್ತಾರೆ. ನಮಗೆ ಸಹಾಯ ಮಾಡೋಕೆ ಆಗಾಗ ಇದ್ರ ಬಗ್ಗೆ ನಮ್ಮತ್ರ ಮಾತಾಡ್ತಾರೆ. (ಜ್ಞಾನೋ. 11:13; ಗಲಾ. 6:2) ಪ್ರತಿಯೊಬ್ಬ ಹಿರಿಯನ ವ್ಯಕ್ತಿತ್ವ ಮತ್ತು ಅನುಭವ ಬೇರೆಬೇರೆ ಆಗಿರುತ್ತೆ. ನಾವು ನಮ್ಮ ಸಮಸ್ಯೆನ ಯಾವುದೇ ಹಿರಿಯನ ಹತ್ರ ಹೋಗಿ ಮಾತಾಡಬಹುದು. ಹಾಗಂತ ನಮಗೆ ಇಷ್ಟ ಆಗೋ ವಿಷ್ಯಾನ ಯಾವ ಹಿರಿಯರು ಹೇಳ್ತಾರೆ ಅಂತ ತಿಳ್ಕೊಳ್ಳೋಕೆ ಒಬ್ರಾದ ಮೇಲೆ ಒಬ್ರ ಹತ್ರ ಹೋಗಿ ಮಾತಾಡೋದು ಸರಿಯಲ್ಲ. ಯಾಕಂದ್ರೆ ‘ಒಳ್ಳೆ ಮಾತನ್ನ ಕೇಳ್ದೆ, ಕಿವಿಗೆ ಇಷ್ಟ ಆಗೋ ವಿಷ್ಯಗಳನ್ನ ಹೇಳೋ ಬೋಧಕರನ್ನ ಹುಡ್ಕೊಂಡು ಹೋಗೋದು’ ತಪ್ಪು ಅಂತ ಬೈಬಲ್ ಹೇಳಿದೆ. (2 ತಿಮೊ. 4:3) ಆದ್ರಿಂದ ನಾವು ಒಬ್ಬ ಹಿರಿಯನ ಹತ್ರ ಹೋಗಿ ನಮ್ಮ ಸಮಸ್ಯೆ ಹೇಳ್ಕೊಂಡಾಗ, ಅವರು ನಮಗೆ ‘ನೀವು ಈ ವಿಷ್ಯಾನ ಬೇರೆ ಹಿರಿಯರ ಹತ್ರ ಹೇಳಿದ್ದೀರಾ? ಅವರು ನಿಮಗೆ ಏನು ಸಲಹೆ ಕೊಟ್ರು?’ ಅಂತ ಕೇಳಬಹುದು. ಒಂದುವೇಳೆ ನಾವು ಈಗಾಗ್ಲೇ ಬೇರೆ ಹಿರಿಯರಿಗೆ ಹೇಳಿರೋದಾದ್ರೆ, ಅವರು ಮೊದಲು ಆ ಹಿರಿಯನ ಹತ್ರ ಮಾತಾಡಿ ಆಮೇಲೆ ನಮ್ಮ ಜೊತೆ ಮಾತಾಡ್ತಾರೆ.—ಜ್ಞಾನೋ. 13:10.
ನಮ್ಮ ಜವಾಬ್ದಾರಿ!
16. ನಮಗೆ ಯಾವ ಜವಾಬ್ದಾರಿ ಇದೆ?
16 ನಾವು ದೇವರ ಕುರಿಗಳಾಗಿರೋದ್ರಿಂದ ಹಿರಿಯರು ನಮಗೆ ಸಹಾಯ ಮಾಡ್ತಾರೆ. ಹಾಗಂತ ಅವರು ನಾವೇನು ಮಾಡಬೇಕು, ಏನು ಮಾಡಬಾರದು ಅಂತ ನೇರವಾಗಿ ಹೇಳಲ್ಲ. ದೇವ್ರಿಗೆ ಇಷ್ಟ ಆಗೋ ತರ ಜೀವನ ಮಾಡೋದು ನಮ್ಮೆಲ್ಲರ ಜವಾಬ್ದಾರಿ. ನಾವು ಏನು ಮಾತಾಡ್ತೀವಿ, ಹೇಗೆ ನಡ್ಕೊಳ್ತೀವಿ ಅನ್ನೋದಕ್ಕೆ ನಾವೆಲ್ಲ ಯೆಹೋವ ದೇವರಿಗೆ ಲೆಕ್ಕ ಕೊಡಬೇಕು. ಯೆಹೋವ ದೇವರು ನಮಗೆ ಸಹಾಯ ಮಾಡೋದ್ರಿಂದ ಖಂಡಿತ ನಾವೆಲ್ಲರೂ ನಿಯತ್ತಾಗಿ ಬದುಕೋಕೆ ಆಗುತ್ತೆ. (ರೋಮ. 14:12) ಹಾಗಾಗಿ ಹಿರಿಯರು ‘ನೀವು ಇದನ್ನ ಮಾಡಿ, ಅದನ್ನ ಮಾಡಬೇಡಿ’ ಅಂತ ಹೇಳೋದಕ್ಕಿಂತ ಬೈಬಲನ್ನ ಬಳಸ್ತಾ ದೇವರ ಯೋಚನೆ ಏನು ಅಂತ ನಮಗೆ ಅರ್ಥ ಮಾಡಿಸ್ತಾರೆ. ಅವರು ಬೈಬಲಿಂದ ಕೊಡೋ ಸಲಹೆನ ಪಾಲಿಸೋದಾದ್ರೆ ನಾವು “ಸರಿ ಯಾವುದು ತಪ್ಪು ಯಾವುದು ಅನ್ನೋ ವ್ಯತ್ಯಾಸ” ತಿಳ್ಕೊಳ್ತೀವಿ ಮತ್ತು ವಿವೇಕದಿಂದ ನಿರ್ಧಾರಗಳನ್ನ ಮಾಡ್ತೀವಿ.—ಇಬ್ರಿ. 5:14.
17. ನಾವೆಲ್ರೂ ಏನು ಮಾಡಬೇಕು ಅಂತ ಯೆಹೋವ ಇಷ್ಟಪಡ್ತಾನೆ?
17 ಯೆಹೋವನ ಕುರಿಗಳಾಗಿ ಇರೋದು ನಮ್ಮೆಲ್ರಿಗೂ ಸಿಕ್ಕಿರೋ ಅಮೂಲ್ಯ ಅವಕಾಶ! ಯೆಹೋವ ‘ಒಳ್ಳೆ ಕುರುಬನಾದ’ ಯೇಸುವನ್ನ ಕಳುಹಿಸಿ ನಮಗೋಸ್ಕರ ಬಿಡುಗಡೆ ಬೆಲೆ ಕೊಟ್ಟಿದ್ದಾನೆ. (ಯೋಹಾ. 10:11) ಹೀಗೆ ನಾವೆಲ್ರೂ ಶಾಶ್ವತ ಜೀವ ಪಡ್ಕೊಳ್ಳೋ ಬಾಗಿಲು ತೆರೆದಿದ್ದಾನೆ. “ನನ್ನ ಮನಸ್ಸಿಗೆ ಇಷ್ಟ ಆಗೋ ಕುರುಬರನ್ನ ನಿಮಗೆ ಕೊಡ್ತೀನಿ. ಅವರು ನಿಮ್ಮನ್ನ ಜ್ಞಾನ ತಿಳುವಳಿಕೆಯಿಂದ ನೋಡ್ಕೊಳ್ತಾರೆ” ಅಂತ ಯೆಹೋವನು ನಮಗೆ ಮಾತು ಕೊಟ್ಟಿದ್ದಾನೆ. (ಯೆರೆ. 3:15) ಇವತ್ತು ಕ್ರೈಸ್ತ ಸಭೆಯಲ್ಲಿ ಹಿರಿಯರನ್ನ ಕೊಡೋ ಮೂಲಕ ಆ ಮಾತನ್ನ ನೆರವೇರಿಸಿದ್ದಾನೆ! ನಾವು ಆಧ್ಯಾತ್ಮಿಕವಾಗಿ ಹುಷಾರು ತಪ್ಪಿದಾಗ ಅಥವಾ ಬಲಹೀನರಾದಾಗ ಹಿರಿಯರ ಹತ್ರ ಹೋಗಿ ಸಹಾಯ ಕೇಳೋಕೆ ಯಾವತ್ತೂ ಹಿಂದೇಟು ಹಾಕಬಾರದು. ಯೆಹೋವನು ಕೊಟ್ಟಿರೋ ಈ ಹಿರಿಯರ ಏರ್ಪಾಡನ್ನ ಸಂಪೂರ್ಣವಾಗಿ ನಾವು ಬಳಸ್ಕೊಳ್ಳೋದಾದ್ರೆ, ಖಂಡಿತ ನಮಗೆ ಯೆಹೋವನಿಂದ ಎಷ್ಟೊಂದು ಆಶೀರ್ವಾದಗಳು ಸಿಗುತ್ತೆ.
ಗೀತೆ 49 ಯೆಹೋವನ ಮನಸ್ಸನ್ನ ಖುಷಿಪಡಿಸುವುದು
a ನೀವು ಸಾಕಷ್ಟು ಸಮಯ ಕೊಟ್ಟ ಮೇಲೂ ತಪ್ಪು ಮಾಡಿದ ವ್ಯಕ್ತಿ ಹಿರಿಯರ ಹತ್ರ ಹೋಗಿ ಮಾತಾಡಲಿಲ್ಲ ಅಂದ್ರೆ, ನೀವೇ ಹೋಗಿ ಹಿರಿಯರ ಹತ್ರ ಅದನ್ನ ಹೇಳಬೇಕು. ಆಗ ನೀವು ಯೆಹೋವನಿಗೆ ನಿಯತ್ತಾಗಿ ಇದ್ದೀರ ಅಂತ ತೋರಿಸಿ ಕೊಡ್ತೀರ.