ಅಧ್ಯಯನ ಲೇಖನ 37
ಗೀತೆ 114 ತಾಳ್ಮೆಯಿಂದಿರಿ!
ನೀವು ಅನ್ಯಾಯನ ಹೇಗೆ ಎದುರಿಸ್ತೀರಾ?
“ನಾನು ಅವ್ರಿಂದ ನ್ಯಾಯವನ್ನ ನಿರೀಕ್ಷಿಸ್ತಿದ್ದೆ, ಆದ್ರೆ ನೋಡಿ, ಎಲ್ಲ ಕಡೆನೂ ಅನ್ಯಾಯ ತುಂಬಿತ್ತು.”—ಯೆಶಾ. 5:7.
ಈ ಲೇಖನದಲ್ಲಿ ಏನಿದೆ?
ಯೇಸು ಅನ್ಯಾಯವನ್ನ ಯೆಹೋವನಿಗೆ ಇಷ್ಟ ಆಗೋ ತರ ಎದುರಿಸಿದನು, ನಾವೂ ಆ ತರ ಎದುರಿಸೋಕೆ ಏನು ಮಾಡಬೇಕು ಅಂತ ನೋಡೋಣ.
1-2. (ಎ) ಅನ್ಯಾಯದ ವಿರುದ್ಧ ಇವತ್ತು ತುಂಬ ಜನ ಏನು ಮಾಡ್ತಿದ್ದಾರೆ? (ಬಿ) ನಮಗೆ ಯಾವ ಪ್ರಶ್ನೆಗಳು ಬರುತ್ತೆ?
ನ್ಯಾಯ, ಮಾಯ ಆಗ್ತಿರೋ ಲೋಕದಲ್ಲಿ ನಾವಿದ್ದೀವಿ. ಜನ ಇವತ್ತು ‘ಮುಖ ನೋಡಿ ಮಣೆ ಹಾಕ್ತಿದ್ದಾರೆ.’ ಅದಕ್ಕೆ ಹಣ, ಭಾಷೆ, ಬಣ್ಣ ಮತ್ತು ಊರನ್ನ ನೋಡಿ, ಒಬ್ಬ ವ್ಯಕ್ತಿ ಜೊತೆ ನ್ಯಾಯವಾಗಿ ನಡ್ಕೊಬೇಕಾ ಬೇಡ್ವಾ ಅಂತ ನಿರ್ಧಾರ ಮಾಡ್ತಾರೆ. ಅಷ್ಟೇ ಅಲ್ಲ ದೊಡ್ಡದೊಡ್ಡ ವ್ಯಾಪಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಬರೀ ಹಣದ ಬಗ್ಗೆನೇ ಯೋಚ್ನೆ ಮಾಡ್ತಿರೋದ್ರಿಂದ ಇವತ್ತು ಅನ್ಯಾಯ ತುಂಬಿತುಳುಕ್ತಿದೆ. ‘ಆಡು ಮುಟ್ಟದ ಸೊಪ್ಪಿಲ್ಲ’ ಅನ್ನೋ ತರ ಅನ್ಯಾಯಕ್ಕೆ ಒಳಗಾಗದೇ ಇರೋ ಮನುಷ್ಯಾನೇ ಇಲ್ಲ ಅಂತ ಹೇಳಬಹುದು.
2 ಅದಕ್ಕೆ ಇವತ್ತು ಎಲ್ಲಿ ನೋಡಿದ್ರೂ ಜನ ‘ಬೇಕೇ ಬೇಕು ನ್ಯಾಯ ಬೇಕು!’ ಅಂತ ಹೋರಾಡ್ತಾ ಇದ್ದಾರೆ. ‘ನ್ಯಾಯ ಕೊಡಿಸ್ತೀನಿ’ ಅಂತ ಹೇಳೋ ರಾಜಕೀಯ ವ್ಯಕ್ತಿಗಳ ಜೊತೆ ಸೇರಿ ಹೋರಾಡ್ತಿದ್ದಾರೆ. ನಮ್ಮೆಲ್ರಿಗೂ ಶಾಂತಿ, ಸುರಕ್ಷತೆಯಿಂದ ಇರಬೇಕು ಅನ್ನೋ ಆಸೆ ಇದೆ. ಆದ್ರೆ ಕ್ರೈಸ್ತರಾದ ನಾವು ಈ ತರ ಹೋರಾಡಬಹುದಾ? ನಾವು “ಈ ಲೋಕದವರ ತರ” ಇರಬಾರದು ಅಂತ ಯೇಸು ಕಲಿಸಿದ್ದಾನೆ. (ಯೋಹಾ. 17:16) ಹಾಗಾಗಿ ದೇವ್ರ ಆಳ್ವಿಕೆ ಬಂದು ಅನ್ಯಾಯವನ್ನ ತೆಗೆದು ಹಾಕೋವರೆಗೂ ನಾವು ಕಾಯಬೇಕು. ಆದ್ರೆ ಈ ತರ ಕಾಯುವಾಗ ಅನ್ಯಾಯನ ನೋಡಿ ನಮಗೆ ಬೇಜಾರಾಗಬಹುದು, ನಮ್ಮ ರಕ್ತ ಕುದಿಬಹುದು. ಅಂಥ ಟೈಮಲ್ಲಿ, ‘ಅನ್ಯಾಯವನ್ನ ನಾನು ಹೇಗೆ ಎದುರಿಸ್ಲಿ? ಅನ್ಯಾಯದ ವಿರುದ್ಧ ನಾನು ಈಗ ಏನಾದ್ರೂ ಮಾಡಬಹುದಾ?’ ಅನ್ನೋ ಪ್ರಶ್ನೆ ಬರಬಹುದು. ಈ ಪ್ರಶ್ನೆಗೆ ಉತ್ರ ತಿಳ್ಕೊಳ್ಳೋ ಮುಂಚೆ ಅನ್ಯಾಯನ ನೋಡಿ ಯೆಹೋವ ಮತ್ತು ಯೇಸುಗೆ ಹೇಗೆ ಅನಿಸ್ತಿದೆ ಅಂತ ತಿಳ್ಕೊಳ್ಳೋಣ.
ಯೆಹೋವ ಮತ್ತು ಯೇಸು ಅನ್ಯಾಯನ ದ್ವೇಷಿಸ್ತಾರೆ
3. ಅನ್ಯಾಯ ನೋಡಿದಾಗ ಯಾಕೆ ನಮ್ಮ ರಕ್ತ ಕುದಿಯುತ್ತೆ? (ಯೆಶಾಯ 5:7.)
3 ಅನ್ಯಾಯನ ನೋಡಿದಾಗ ಯಾಕೆ ನಮ್ಮ ರಕ್ತ ಕುದಿಯುತ್ತೆ ಅನ್ನೋದಕ್ಕೆ ಬೈಬಲ್ ಕಾರಣ ಕೊಡುತ್ತೆ. ಯೆಹೋವ ನಮ್ಮನ್ನ ತನ್ನ ಹೋಲಿಕೆಯಲ್ಲಿ ಸೃಷ್ಟಿ ಮಾಡಿದ್ದಾನೆ. ಯೆಹೋವ ‘ನೀತಿ ನ್ಯಾಯವನ್ನ ಪ್ರೀತಿಸೋ’ ದೇವರು. (ಕೀರ್ತ. 33:5; ಆದಿ. 1:26) ಅನ್ಯಾಯ ಮಾಡೋದ್ರ ಬಗ್ಗೆ ಕನಸು ಮನಸಲ್ಲೂ ಯೋಚ್ನೆ ಮಾಡಲ್ಲ. ಅಷ್ಟೇ ಅಲ್ಲ, ಯಾರೂ ಬೇರೆಯವ್ರಿಗೆ ಅನ್ಯಾಯ ಮಾಡಬಾರದು ಅಂತ ಆಸೆಪಡ್ತಾನೆ. (ಧರ್ಮೋ. 32:3, 4; ಮೀಕ 6:8; ಜೆಕ. 7:9) ಉದಾಹರಣೆಗೆ, ಪ್ರವಾದಿ ಯೆಶಾಯನ ಟೈಮಲ್ಲಿ ಕೆಲವು ಇಸ್ರಾಯೇಲ್ಯರು ಬೇರೆ ಕೆಲವು ಇಸ್ರಾಯೇಲ್ಯರ ಜೊತೆ ಅನ್ಯಾಯವಾಗಿ ನಡ್ಕೊಂಡ್ರು. ಆಗ ಅವ್ರ ‘ದುಃಖದ ರೋದನೇ’ ಯೆಹೋವನಿಗೆ ಕೇಳಿಸ್ತು. (ಯೆಶಾಯ 5:7 ಓದಿ.) ಈ ತರ ನಿಯಮನ ಮುರಿದು ಅನ್ಯಾಯವಾಗಿ ನಡ್ಕೊಂಡೋರಿಗೆ ಯೆಹೋವ ಶಿಕ್ಷೆ ಕೊಟ್ಟನು ಅಂತ ಬೈಬಲ್ ಹೇಳುತ್ತೆ.—ಯೆಶಾ. 5:5, 13.
4. ಯಾರಿಗಾದ್ರೂ ಅನ್ಯಾಯ ಆದಾಗ ಯೇಸುಗೆ ಹೇಗನಿಸುತ್ತೆ? ಉದಾಹರಣೆ ಕೊಡಿ. (ಚಿತ್ರ ನೋಡಿ.)
4 ಯೇಸು ತಂದೆಗೆ ತಕ್ಕ ಮಗ! ಅದಕ್ಕೆ ನ್ಯಾಯವನ್ನ ಪ್ರೀತಿಸ್ತಾನೆ, ಅನ್ಯಾಯವನ್ನ ದ್ವೇಷಿಸ್ತಾನೆ. ಒಂದ್ಸಲ ಏನಾಯ್ತು ಗೊತ್ತಾ? ಕೈಗೆ ಲಕ್ವ ಹೊಡೆದಿದ್ದ ಒಬ್ಬ ಮನುಷ್ಯನನ್ನ ಯೇಸು ಸಬ್ಬತ್ ದಿನ ನೋಡ್ತಾನೆ. ಯೇಸುಗೆ ‘ಅಯ್ಯೋ ಪಾಪ’ ಅಂತ ಅನಿಸಿ ಅವನನ್ನ ವಾಸಿ ಮಾಡ್ತಾನೆ. ಇದನ್ನ ನೋಡಿ ಧಾರ್ಮಿಕ ಮುಖಂಡರಿಗೆ ಜೀರ್ಣ ಮಾಡ್ಕೊಳ್ಳೋಕೆ ಆಗ್ಲಿಲ್ಲ. ‘ಇವನು ಸಬ್ಬತ್ ದಿನದಲ್ಲಿ ವಾಸಿ ಮಾಡಿಬಿಟ್ಟನಲ್ಲ’ ಅಂತ ಯೇಸು ಮೇಲೆ ಕೆಂಡಕಾರಿ, ಅದ್ರ ಬಗ್ಗೆ ಅತಿ ನೀತಿವಂತರಾಗಿ ಮಾತಾಡಿದ್ರು. ಆಗ “ಅವ್ರ ಹೃದಯ ಕಲ್ಲು ತರ ಇರೋದನ್ನ ನೋಡಿ ಯೇಸುಗೆ ತುಂಬ ದುಃಖ ಆಯ್ತು.”—ಮಾರ್ಕ 3:1-6.
ಯೆಹೂದಿ ಧರ್ಮಗುರುಗಳಿಗೆ ಜನ್ರ ಕಷ್ಟ ನೋಡಿ ಕನಿಕರ ಬರಲಿಲ್ಲ, ಆದ್ರೆ ಯೇಸು ಕನಿಕರ ತೋರಿಸಿದನು (ಪ್ಯಾರ 4 ನೋಡಿ)
5. ಅನ್ಯಾಯ ಆದಾಗ ಕೋಪನ ಮನಸ್ಸಲ್ಲೇ ಇಟ್ಕೊಳ್ಳೋದು ಸರಿನಾ?
5 ಅನ್ಯಾಯನ ನೋಡ್ದಾಗ ಯೆಹೋವ ಮತ್ತು ಯೇಸುಗೆ ಕೋಪ ಬರುತ್ತೆ ಅಂದ್ಮೇಲೆ ನಮಗೂ ಕೋಪ ಬರೋದ್ರಲ್ಲಿ ತಪ್ಪಿಲ್ಲ! (ಎಫೆ. 4:26) ಆದ್ರೆ ‘ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬರಲ್ಲ’ ಅನ್ನೋದನ್ನ ನಾವು ಯಾವಾಗ್ಲೂ ಮನಸ್ಸಲ್ಲಿಡಬೇಕು. ನಾವು ಕೋಪದಲ್ಲಿ ಏನ್ ಮಾಡಿದ್ರೂ ಅನ್ಯಾಯನಂತೂ ತೆಗಿಯೋಕಾಗಲ್ಲ. ನಾವು ಕೋಪನ ಕಂಟ್ರೋಲ್ ಮಾಡ್ಕೊಳ್ಳಲಿಲ್ಲ ಅಂದ್ರೆ ‘ಕೆಂಡನ ಮಡಿಲಲ್ಲಿ ಇಟ್ಕೊಂಡಂಗೆ!’ ಅದ್ರಿಂದ ನಮಗೇ ಹಾನಿ ಜಾಸ್ತಿ. ನಮ್ಮ ನೆಮ್ಮದಿ, ಆರೋಗ್ಯ ಎಲ್ಲಾ ಹಾಳಾಗುತ್ತೆ. ಹಾಗಾದ್ರೆ ನಾವು ಅನ್ಯಾಯನ ಹೇಗೆ ಎದುರಿಸಿದ್ರೆ ಚೆನ್ನಾಗಿರುತ್ತೆ? (ಕೀರ್ತ. 37:1, 8; ಯಾಕೋ. 1:20) ಇದನ್ನ ತಿಳ್ಕೊಳೋಕೆ ನಾವು ಯೇಸು ನೋಡಿ ಕಲಿಬೇಕು. ಬನ್ನಿ ಆತನು ಏನು ಮಾಡಿದನು ಅಂತ ನೋಡೋಣ.
ಅನ್ಯಾಯ ಆದಾಗ ಯೇಸು ಏನು ಮಾಡಿದನು?
6. ಯಾವೆಲ್ಲ ಅನ್ಯಾಯ ನಡೀತಾ ಇದ್ದಿದ್ದನ್ನ ಯೇಸು ನೋಡಿದನು? (ಚಿತ್ರ ನೋಡಿ.)
6 ಹೆಜ್ಜೆ-ಹೆಜ್ಜೆಗೂ ಅನ್ಯಾಯ ನಡೀತಿದ್ದನ್ನ ಯೇಸು ನೋಡಿದನು. ಮಾಮೂಲಿ ಜನ್ರ ಮೇಲೆ ಧಾರ್ಮಿಕ ಮುಖಂಡರು ದೌರ್ಜನ್ಯ ಮಾಡ್ತಿದ್ರು. (ಮತ್ತಾ. 23:2-4) ರೋಮನ್ ಅಧಿಕಾರಿಗಳು ಜನ್ರ ಮೇಲೆ ದಬ್ಬಾಳಿಕೆ ಮಾಡ್ತಿದ್ರು. ಹಾಗಾಗಿ ಎಷ್ಟೋ ಯೆಹೂದ್ಯರು ‘ರೋಮಿನವ್ರಿಂದ ನಮಗೆ ಸ್ವಾತಂತ್ರ್ಯ ಬೇಕು’ ಅಂತ ಕಾಯ್ತಿದ್ರು. ಝೀಲೆಟ್ಸ್ ಅನ್ನೋ ಯೆಹೂದ್ಯರ ಒಂದು ಗುಂಪು ಇದಕ್ಕಾಗಿ ಹೋರಾಟನೂ ಮಾಡ್ತಿತ್ತು. ಯೇಸು ಆ ಹೋರಾಟದಲ್ಲಿ ಕೈ ಜೋಡಿಸ್ಲಿಲ್ಲ ಅಥವಾ ‘ನಾನೇ ಏನಾದ್ರೂ ಬದಲಾವಣೆ ತರ್ತೀನಿ’ ಅಂತನೂ ಅಂದ್ಕೊಳ್ಳಲಿಲ್ಲ. ಯೇಸುನ ರಾಜ ಮಾಡಬೇಕು ಅಂತ ಜನ ಪ್ಲಾನ್ ಮಾಡ್ತಿದ್ದಾಗ್ಲೂ ಯೇಸು ಅವ್ರಿಂದ ತಪ್ಪಿಸ್ಕೊಂಡು ಓಡಿ ಹೋದನು.—ಯೋಹಾ. 6:15.
ಜನ ಯೇಸುನ ರಾಜ ಮಾಡಬೇಕು ಅಂತಿದ್ದಾಗ ಯೇಸು ಅವ್ರ ಕೈಗೆ ಸಿಗದಂತೆ ದೂರ ಹೋದನು (ಪ್ಯಾರ 6 ನೋಡಿ)
7-8. ಯೇಸು ಅನ್ಯಾಯ ನೋಡ್ತಿದ್ರೂ ಅದನ್ನ ಯಾಕೆ ತೆಗೆಯೋಕೆ ಹೋಗಲಿಲ್ಲ? (ಯೋಹಾನ 18:36)
7 ಅನ್ಯಾಯವನ್ನ ಹೊಡೆದೋಡಿಸೋಕೆ ಯೇಸು ರಾಜಕೀಯ ವಿಷ್ಯಗಳನ್ನ ನಂಬ್ಕೊಂಡು ಹೋಗಲಿಲ್ಲ. ಯಾಕಂದ್ರೆ ಮನುಷ್ಯರಿಗೆ ಬೇರೆ ಜನ್ರ ಮೇಲೆ ಆಳ್ವಿಕೆ ಮಾಡೋ ಹಕ್ಕಾಗಲಿ, ಸಾಮರ್ಥ್ಯ ಆಗಲಿ ಇಲ್ಲ ಅಂತ ಆತನಿಗೆ ಗೊತ್ತಿತ್ತು. (ಕೀರ್ತ. 146:3; ಯೆರೆ. 10:23) ಅಷ್ಟೇ ಅಲ್ಲ, ಈಗ ಆಗ್ತಿರೋ ಅನ್ಯಾಯ, ಕಷ್ಟಕ್ಕೆಲ್ಲ ಏನು ಕಾರಣ ಅಂತ ಕಂಡು ಹಿಡಿದು ಅದನ್ನ ತೆಗೆದು ಹಾಕೋ ಸಾಮರ್ಥ್ಯನೂ ಅವ್ರಿಗಿಲ್ಲ ಅಂತನೂ ಯೇಸುಗೆ ಗೊತ್ತಿತ್ತು. ಇವತ್ತು ಇಡೀ ಲೋಕನ ಸೈತಾನ ಆಳ್ತಿದ್ದಾನೆ. ಅವನಷ್ಟು ಕ್ರೂರಿ ಬೇರೆ ಯಾರೂ ಇಲ್ಲ. ‘ಯಥಾ ರಾಜ ತಥಾ ಪ್ರಜೆ’ ಅನ್ನೋ ಮಾತಿನ ತರ ಈ ಜನ ಅವನ ತರಾನೇ ಆಗಿದ್ದಾರೆ. ಎಲ್ರಿಗೂ ಅನ್ಯಾಯ ಮಾಡ್ತಿದ್ದಾರೆ. (ಯೋಹಾ. 8:44; ಎಫೆ. 2:2) ಒಬ್ಬ ವ್ಯಕ್ತಿ ಎಷ್ಟೇ ಒಳ್ಳೆಯವನಾಗಿದ್ರು, ಸಾಧು ಆಗಿದ್ರೂ ಅವನಲ್ಲಿರೋ ಅಪರಿಪೂರ್ಣತೆ ಅವನು ಎಲ್ಲಾ ಟೈಮಲ್ಲೂ ನಿಯತ್ತಾಗಿ ಇರೋಕೆ ಬಿಡಲ್ಲ.—ಪ್ರಸಂ. 7:20.
8 ಅನ್ಯಾಯಕ್ಕೆ ಮುಖ್ಯ ಕಾರಣ ಏನು ಅಂತ ಕಂಡುಹಿಡಿದು ಅದನ್ನ ತೆಗೆದುಹಾಕೋ ಸಾಮರ್ಥ್ಯ ದೇವರ ಆಳ್ವಿಕೆಗೆ ಮಾತ್ರ ಇದೆ ಅಂತ ಯೇಸುಗೆ ಗೊತ್ತಿತ್ತು. ಹಾಗಾಗಿ “ದೇವರ ಆಳ್ವಿಕೆಯ ಸಿಹಿಸುದ್ದಿ” ಬಗ್ಗೆ ಸಾರೋಕೆ ತನಗಿರೋ ಸಮಯ, ಶಕ್ತಿನೆಲ್ಲ ಬಳಸಿದನು. (ಲೂಕ 8:1) ಅಷ್ಟೇ ಅಲ್ಲ “ನೀತಿಗಾಗಿ ಹಸಿದು ಬಾಯಾರಿದ” ಜನ್ರಿಗೆ ‘ಭ್ರಷ್ಟಾಚಾರ, ಅನ್ಯಾಯ ಎಲ್ಲ ಕೊನೆಯಾಗುತ್ತೆ’ ಅಂತ ಭರವಸೆ ತುಂಬಿದನು. (ಮತ್ತಾ. 5:6; ಲೂಕ 18:7, 8) ಇದೆಲ್ಲಾ ಆಗೋದು ಮನುಷ್ಯರ ಪ್ರತಿಭಟನೆಯಿಂದ ಅಲ್ಲ. ದೇವರ ಆಳ್ವಿಕೆ ಭೂಮಿಗೆ ಬಂದಾಗ ಮಾತ್ರ. ಯಾಕಂದ್ರೆ ಆ “ಆಳ್ವಿಕೆ ಈ ಲೋಕದ ಸರಕಾರಗಳ ತರ ಅಲ್ಲ.”—ಯೋಹಾನ 18:36 ಓದಿ.
ಅನ್ಯಾಯ ಆದಾಗ ಯೇಸು ತರ ನಡ್ಕೊಳ್ಳಿ
9. ದೇವರ ಆಳ್ವಿಕೆ ಮಾತ್ರ ಎಲ್ಲಾ ಅನ್ಯಾಯನೂ ತೆಗೆದು ಹಾಕುತ್ತೆ ಅಂತ ನೀವು ನಂಬೋಕೆ ಏನು ಕಾರಣ?
9 ಯೇಸು ನೋಡಿದ್ದಕ್ಕಿಂತ ಜಾಸ್ತಿ ಅನ್ಯಾಯನ ನಾವು ಇವತ್ತು ನೋಡ್ತಿದೀವಿ. ಆದ್ರೆ ಈ ‘ಕೊನೆ ದಿನಗಳಲ್ಲೂ’ ಆ ಅನ್ಯಾಯಕ್ಕೆ ಕಾರಣ ಸೈತಾನ ಮತ್ತು ಅವನ ‘ತಾಳಕ್ಕೆ ತಕ್ಕ ಹಾಗೆ ಕುಣಿತಿರೋ’ ಅಪರಿಪೂರ್ಣ ಮನುಷ್ಯರೇ. (2 ತಿಮೊ. 3:1-5, 13; ಪ್ರಕ. 12:12) ಅನ್ಯಾಯಕ್ಕೆ ಮುಖ್ಯ ಕಾರಣ ಏನು ಅಂತ ಕಂಡುಹಿಡಿದು ಅದನ್ನ ತೆಗೆದುಹಾಕೋ ಸಾಮರ್ಥ್ಯ ದೇವರ ಆಳ್ವಿಕೆಗೆ ಮಾತ್ರ ಇದೆ ಅಂತ ಯೇಸು ನಂಬಿದನು. ನಾವೂ ಅದನ್ನೇ ನಂಬ್ತೀವಿ. ಹಾಗಾಗಿ ಅನ್ಯಾಯನ ತೆಗೆದುಹಾಕೋಕೆ ಜನ ಮಾಡೋ ಪ್ರತಿಭಟನೆಗಳಿಗೆ ನಾವು ಯಾವತ್ತೂ ಕೈ ಜೋಡಿಸಲ್ಲ. ಸ್ಟೇಸಿa ಅನ್ನೋ ಒಬ್ಬ ಸಹೋದರಿಯ ಅನುಭವ ನೋಡಿ. ಅವಳು ಸತ್ಯಕ್ಕೆ ಬರೋ ಮುಂಚೆ ಅನ್ಯಾಯದ ವಿರುದ್ಧ ಹೋರಾಡೋ ಒಂದು ಪಕ್ಷಕ್ಕೆ ಸೇರಿಕೊಂಡಿದ್ದಳು. ಆದ್ರೆ ಅವಳಿಗೆ ಆಗಾಗ ಕೆಲವು ಪ್ರಶ್ನೆ ಬರ್ತಿತ್ತು. ಅವಳು ಹೀಗೆ ಹೇಳ್ತಾಳೆ, “ಪ್ರತಿಭಟನೆ ಮಾಡ್ತಿರುವಾಗ, ನಾನು ಸರಿಯಾದ ಪಕ್ಷದಲ್ಲೇ ಇದ್ದೀನಾ ಅನ್ನೋ ಡೌಟ್ ನಂಗೆ ಬರ್ತಿತ್ತು. ಆದ್ರೆ ಈಗ ನಾನು ದೇವರ ಆಳ್ವಿಕೆಗೆ ಬೆಂಬಲ ಕೊಡ್ತಿರೋದ್ರಿಂದ, ಸರಿಯಾದ ಪಕ್ಷದಲ್ಲೇ ಇದ್ದೀನಿ ಅಂತ ಪೂರ್ತಿಯಾಗಿ ನಂಬ್ತೀನಿ. ಯೆಹೋವ ನನಗಿಂತ ಚೆನ್ನಾಗಿ ಹೋರಾಡಿ ಪ್ರತಿಯೊಬ್ರಿಗೂ ನ್ಯಾಯ ಕೊಡಿಸ್ತಾನೆ ಅಂತ ಚೆನ್ನಾಗಿ ಗೊತ್ತಿದೆ.”—ಕೀರ್ತ. 72:1, 4.
10. ಈ ಸಮಾಜನ ಸುಧಾರಣೆ ಮಾಡೋಕೆ ನಾವ್ಯಾಕೆ ಪ್ರತಿಭಟನೆಗಳನ್ನ ಮಾಡಲ್ಲ? (ಮತ್ತಾಯ 5:43-48) (ಚಿತ್ರ ನೋಡಿ.)
10 ‘ಅನ್ಯಾಯ ನಿಲ್ಲಬೇಕು ಅಂತ ಮಾಡ್ತಿರೋ ಪ್ರತಿಭಟನೆಗಳು ಒಳ್ಳೆಯದೇ ಅಲ್ವಾ’ ಅಂತ ನಿಮಗೆ ಅನಿಸಬಹುದು. ಆದ್ರೆ ಅದನ್ನ ಮಾಡ್ತಿರೋ ಜನ್ರ ಯೋಚನೆ, ಅವರು ನಡ್ಕೊಳ್ಳೋ ರೀತಿ ಯೇಸು ಹೇಳಿದ್ದಕ್ಕೆ ಮತ್ತು ನಡ್ಕೊಂಡಿದ್ದಕ್ಕೆ ತೀರಾ ವಿರುದ್ಧವಾಗಿದೆ ಅಂತ ನಾವು ಮರೀಬಾರದು. (ಎಫೆ. 4:31) ಇದ್ರ ಬಗ್ಗೆ ಸಹೋದರ ಜೆಫ್ರಿ ಏನು ಹೇಳ್ತಾರೆ ನೋಡಿ. “ಶಾಂತಿಯುತವಾಗಿ ಶುರುವಾಗೋ ಪ್ರತಿಭಟನೆ ಕಣ್ಣು ಮುಚ್ಚಿ ಕಣ್ಣು ತೆರೆಯೋಷ್ಟರಲ್ಲಿ ರಕ್ತಪಾತದಿಂದ ಕೊನೆಯಾಗುತ್ತೆ.” ಆದ್ರೆ ಯೇಸು, ‘ನಾವು ಎಲ್ಲ ಜನ್ರ ಜೊತೆ ಪ್ರೀತಿಯಿಂದ ನಡ್ಕೊಳ್ಳಬೇಕು. ನಮಗೆ ಹಿಂಸೆ ಕೊಡೋರು ಮತ್ತು ಶತ್ರುಗಳನ್ನೂ ಪ್ರೀತಿಸಬೇಕು’ ಅಂತ ಹೇಳಿದ್ದಾನೆ. (ಮತ್ತಾಯ 5:43-48 ಓದಿ.) ಕ್ರೈಸ್ತರಾಗಿರೋ ನಾವೆಲ್ರೂ ಯೇಸು ಇಟ್ಟ ಹೆಜ್ಜೆ ಜಾಡಲ್ಲೇ ನಡೆಯೋಕೆ ನಮ್ಮ ಕೈಲಾದ ಪ್ರಯತ್ನವನ್ನ ಮಾಡ್ತೀವಿ. ಯೇಸುನೂ ಇಂಥ ವಿಷ್ಯದಲ್ಲಿ ತಲೆ ಹಾಕಲಿಲ್ಲ. ನಾವು ಈ ತರ ವಿಷ್ಯದಲ್ಲಿ ತಲೆ ಹಾಕಬಾರದು.
ರಾಜಕೀಯ ಮತ್ತು ಸಮಾಜದ ಗಲಾಟೆಗಳಲ್ಲಿ ತಲೆಹಾಕದೇ ಇರೋಕೆ ದೃಢನಿರ್ಧಾರ ಮಾಡಬೇಕು (ಪ್ಯಾರ 10 ನೋಡಿ)
11. ಯೇಸು ತರ ನಡ್ಕೊಳ್ಳೋದು ಯಾವಾಗ ಮಾತಲ್ಲಿ ಹೇಳಿದಷ್ಟು ಸುಲಭ ಅಲ್ಲ?
11 ದೇವರ ಆಳ್ವಿಕೆ ಮಾತ್ರ ಅನ್ಯಾಯವನ್ನ ಪೂರ್ತಿಯಾಗಿ ತೆಗೆದುಹಾಕುತ್ತೆ ಅಂತ ನಮಗೆ ಗೊತ್ತಿದ್ರೂ ಕೆಲವೊಂದು ಸಲ ನಮಗೇ ಅನ್ಯಾಯ ಆಗಿಬಿಟ್ರೆ ಯೇಸು ತರ ನಡ್ಕೊಳ್ಳೋದು ತುಂಬ ಕಷ್ಟ. ಸಹೋದರಿ ಜಾನಿಯಾಗೂ ಹೀಗೆ ಅನಿಸ್ತು. ಅವಳ ಮೈ ಬಣ್ಣ ಬೇರೆ ಆಗಿದ್ರಿಂದ ಜನ ಅವಳಿಗೆ ಭೇದಭಾವ ಮಾಡ್ತಿದ್ರು. ಅವಳು ಹೇಳೋದು, “ನನಗಂತೂ ತುಂಬ ಕೋಪ ಬಂತು, ಬೇಜಾರಾಯ್ತು. ಈ ಅನ್ಯಾಯದ ವಿರುದ್ಧ ಹೋರಾಡಬೇಕು ಅಂತ ಅನಿಸ್ತು. ಅದಕ್ಕೆ ನಾನು ಈ ತರ ಅನ್ಯಾಯದ ವಿರುದ್ಧ ಹೋರಾಡೋ ಒಂದು ಗುಂಪಿಗೆ ಸೇರ್ಕೊಂಡು ಪ್ರತಿಭಟನೆ ಮಾಡೋಕೆ ಶುರು ಮಾಡಿದೆ. ಈ ತರ ಮಾಡೋದೇ ಕರೆಕ್ಟ್ ಅಂತ ನನಗೆ ಅನಿಸ್ತು. ಆದ್ರೆ ಹೋಗ್ತಾ-ಹೋಗ್ತಾ ನಾನು ಮಾಡ್ತಿರೋದು ಸರಿಯಲ್ಲ, ನಾನು ಬದಲಾಗಬೇಕು ಅಂತ ಗೊತ್ತಾಯ್ತು. ಯಾಕಂದ್ರೆ ಯೆಹೋವ ಅನ್ಯಾಯ ತೆಗೆದು ಹಾಕೋದಕ್ಕಿಂತ ಈ ಮನುಷ್ಯರೇ ಅನ್ಯಾಯ ತೆಗೆದುಹಾಕ್ತಾರೆ ಅಂತ ಈ ಗುಂಪಲ್ಲಿದ್ದ ಜನ್ರ ಮಾತು ಕೇಳ್ಕೊಂಡು ನಾನು ನಂಬಿಬಿಟ್ಟಿದ್ದೆ. ಹಾಗಾಗಿ ನಾನು ಈ ಪ್ರತಿಭಟನೆಯಿಂದ ಹೊರಗೆ ಬಂದೆ. ಈ ಗುಂಪಲ್ಲಿದ್ದವ್ರ ಸಹವಾಸನೆಲ್ಲ ಬಿಟ್ಟುಬಿಟ್ಟೆ.” ಅನ್ಯಾಯ ಆಗುವಾಗ ನಮಗೆ ಬರೋ ಕೋಪ ಕಂಟ್ರೋಲ್ ಮಾಡ್ಕೊಳ್ಳಲಿಲ್ಲ ಅಂದ್ರೆ ರಾಜಕೀಯ ವಿಷ್ಯದಲ್ಲಿ ಮತ್ತು ಈ ಸಮಾಜದ ಸಮಸ್ಯೆಗಳಲ್ಲಿ ನಾವು ತಲೆ ಹಾಕಿ ಬಿಡಬಹುದು.—ಯೋಹಾ. 15:19.
12. ನಾವೇನು ಓದ್ತೀವಿ, ಕೇಳಿಸ್ಕೊಳ್ತೀವಿ, ನೋಡ್ತೀವಿ ಅನ್ನೋದ್ರ ಮೇಲೆ ಯಾಕೆ ನಿಗಾ ಇಡಬೇಕು?
12 ಅನ್ಯಾಯನ ನೋಡಿ ನಮಗೆ ಬರೋ ಕೋಪನ ಕಂಟ್ರೋಲ್ ಮಾಡ್ಕೊಳ್ಳೋಕೆ ಏನು ಮಾಡಬೇಕು? ನಾವೇನು ನೋಡ್ತೀವಿ, ಓದ್ತೀವಿ, ಕೇಳಿಸ್ಕೊಳ್ತೀವಿ ಅನ್ನೋದ್ರ ಮೇಲೆ ನಿಗಾ ಇಟ್ರೆ ಕಂಟ್ರೋಲ್ ಮಾಡ್ಕೊಬಹುದು ಅಂತ ಕೆಲವರು ಹೇಳ್ತಾರೆ. ನಡೀತಿರೋ ಅನ್ಯಾಯ ಕಣ್ಣು ರೆಪ್ಪೆ ಬಡಿಯೋಷ್ಟರಲ್ಲಿ ಎಲ್ರಿಗೂ ಗೊತ್ತಾಗೋ ತರ ಸೋಶಿಯಲ್ ಮೀಡಿಯಾದಲ್ಲಿ ಬರೋ ಪೋಸ್ಟ್‌ಗಳು ಮಾಡುತ್ತೆ. ಅದ್ರ ವಿರುದ್ಧ ಹೋರಾಡಬೇಕು ಅಂತ ನಮ್ಮ ಭಾವನೆಯನ್ನ ಬಡಿದೆಬ್ಬಿಸುತ್ತೆ. ಅಷ್ಟೇ ಅಲ್ಲ, ಎಷ್ಟೋ ಸಲ ನ್ಯೂಸ್‌ಗಳು ನಡೆದಿರೋ ವಿಷ್ಯಕ್ಕೆ ರೆಕ್ಕೆಪುಕ್ಕ ಕಟ್ಟಿ ಏನೇನೋ ಹೇಳುತ್ತೆ. ಅಕಸ್ಮಾತ್ ನಿಜವಾದ ವರದಿನೇ ಕೊಟ್ರೂ ಅದ್ರ ಬಗ್ಗೆ ನಾವು ಜಾಸ್ತಿ ತಲೆ ಕೆಡಿಸ್ಕೊಂಡ್ರೆ ಏನಾಗುತ್ತೆ? ಕೋಪ ಮತ್ತು ಚಿಂತೆಯಲ್ಲಿ ಮುಳುಗಿ ಹೋಗಿ ಕುಸಿದು ಬೀಳ್ತೀವಿ. (ಜ್ಞಾನೋ. 24:10) ಅಷ್ಟೇ ಅಲ್ಲ, ಇದಕ್ಕೆಲ್ಲ ಪೂರ್ತಿ ಪರಿಹಾರ ಕೊಡೋ ದೇವರ ಆಳ್ವಿಕೆನೇ ನಾವು ಮರೆತು ಬಿಡೋ ಸಾಧ್ಯತೆ ಇರುತ್ತೆ.
13. ಅನ್ಯಾಯವನ್ನ ಸರಿಯಾಗಿ ಎದುರಿಸೋಕೆ ಪ್ರತಿದಿನ ಬೈಬಲ್ ಓದೋದು ಮತ್ತು ಅದ್ರ ಬಗ್ಗೆ ಯೋಚನೆ ಮಾಡೋದು ಹೇಗೆ ಸಹಾಯ ಮಾಡುತ್ತೆ?
13 ಪ್ರತಿದಿನ ಬೈಬಲ್ ಓದೋದು ಮತ್ತೆ ಅದ್ರ ಬಗ್ಗೆ ಯೋಚನೆ ಮಾಡೋದ್ರಿಂದ ಅನ್ಯಾಯವನ್ನ ನಾವು ಎದುರಿಸಬಹುದು. ಸಹೋದರಿ ಆಲಿಯಾಗೂ ಈ ವಿಷ್ಯ ಸಹಾಯ ಮಾಡ್ತು. ಅವ್ರಿರೋ ಜಾಗದಲ್ಲಿ ಒಬ್ರು ಇನ್ನೊಬ್ರಿಗೆ ಅನ್ಯಾಯ ಮಾಡೋದನ್ನ ಅವರು ನೋಡಿದ್ರು. ಅನ್ಯಾಯ ಮಾಡ್ತಿದ್ದವ್ರಿಗೆ ಯಾವ ಶಿಕ್ಷೆನೂ ಆಗ್ತಿರಲಿಲ್ಲ. ಇದ್ರ ಬಗ್ಗೆ ಅವರು ಹೇಳೋದು, “ಯೆಹೋವ ಈ ಎಲ್ಲಾ ಸಮಸ್ಯೆಗಳನ್ನ ತೆಗೆದುಹಾಕ್ತಾನೆ ಅನ್ನೋ ನಂಬಿಕೆ ನಿಜವಾಗ್ಲೂ ನನಗಿದ್ಯಾ ಅಂತ ನಾನು ನನ್ನನ್ನ ಕೇಳ್ಕೊಂಡೆ. ಅಂಥ ಟೈಮಲ್ಲಿ, ಯೋಬ 34:22-29ನ ನಾನು ಓದಿದೆ. ಈ ವಚನಗಳನ್ನ ಓದಿದಾಗ ತಪ್ಪು ಮಾಡಿರೋ ಯಾರೂ ಯೆಹೋವನ ಕೈಯಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ ಅಂತ ಗೊತ್ತಾಯ್ತು. ನ್ಯಾಯ ಅಂದ್ರೆ ಏನು ಅಂತ ಯೆಹೋವನಿಗೆ ಮಾತ್ರ ಪೂರ್ತಿಯಾಗಿ ಗೊತ್ತು. ಹಾಗಾಗಿ ಆತನು ಮಾತ್ರ ಎಲ್ಲಾ ಸಮಸ್ಯೆಗಳನ್ನ ಸಂಪೂರ್ಣವಾಗಿ ತೆಗೆದುಹಾಕೋಕೆ ಆಗುತ್ತೆ.” ದೇವರ ಆಳ್ವಿಕೆ ಬಂದು ಈ ಎಲ್ಲ ಸಮಸ್ಯೆಗಳನ್ನ ತೆಗೆದು ಹಾಕಲಿ ಅಂತ ನಾವು ಕಾಯ್ತಾ ಇದ್ದೀವಿ. ಈ ರೀತಿ ಕಾಯುವಾಗ ನಾವು ಇನ್ನೂ ಏನು ಮಾಡಬೇಕು?
ನಾವೇನು ಮಾಡಬೇಕು?
14. ಬೇರೆಯವರು ನಮಗೆ ಅನ್ಯಾಯ ಮಾಡಿದ್ರೂ ನಾವು ಅನ್ಯಾಯ ಮಾಡದೇ ಇರೋಕೆ ಏನು ಮಾಡಬೇಕು? (ಕೊಲೊಸ್ಸೆ 3:10, 11)
14 ಬೇರೆಯವರು ಅನ್ಯಾಯ ಮಾಡದೇ ಇರೋ ತರ ನಮ್ಮ ಕೈಯಲ್ಲಿ ತಡಿಯೋಕ್ಕಾಗಲ್ಲ. ಆದ್ರೆ ನಮ್ಮ ಕೈಯಿಂದ ಯಾರಿಗೂ ಅನ್ಯಾಯ ಆಗದೇ ಇರೋ ತರ ನಾವು ನೋಡ್ಕೊಬಹುದು. ಈಗಾಗಲೇ ಕಲಿತಂತೆ ಯೇಸು ತರ ನಾವೆಲ್ರಿಗೂ ಪ್ರೀತಿ ತೋರಿಸಬೇಕು. ಎಲ್ರಿಗೂ ಅಂದ್ರೆ ನಮ್ಮ ಜೊತೆ ಅನ್ಯಾಯದಿಂದ ನಡ್ಕೊಳ್ಳೋರಿಗೂ ನಾವು ಗೌರವ ಮತ್ತು ಪ್ರೀತಿ ತೋರಿಸಬೇಕು. (ಮತ್ತಾ. 7:12; ರೋಮ. 12:17) ನಾವು ಈ ತರ ಪ್ರತಿಯೊಬ್ರಿಗೂ ಪ್ರೀತಿ ಮತ್ತೆ ದಯೆ ತೋರಿಸಿದ್ರೆ ಯೆಹೋವ ನಮ್ಮನ್ನ ಮೆಚ್ಚಿಕೊಳ್ತಾನೆ.—ಕೊಲೊಸ್ಸೆ 3:10, 11 ಓದಿ.
15. ನಾವು ಸಿಹಿಸುದ್ದಿ ಸಾರೋದ್ರಿಂದ ಅನ್ಯಾಯ ಕಮ್ಮಿ ಆಗುತ್ತೆ ಅಂತ ಯಾಕೆ ಹೇಳಬಹುದು?
15 ಅನ್ಯಾಯ ಮಾಡ್ತಿರೋರ ಸಂಖ್ಯೆ ಕಮ್ಮಿ ಮಾಡೋಕೆ, ಅನ್ಯಾಯದಿಂದ ನರಳ್ತಿರೋರಿಗೆ ಸಹಾಯ ಮಾಡೋಕ್ಕಿರೋ ಒಂದು ಒಳ್ಳೆ ವಿಧ ಸಿಹಿಸುದ್ದಿ ಸಾರೋದೇ. ಯಾಕೆ ಹೀಗೆ ಹೇಳಬಹುದು? ಯಾಕಂದ್ರೆ “ಯೆಹೋವನ ಜ್ಞಾನ” ಕ್ರೂರ ಮೃಗದ ತರ ಇರೋ ವ್ಯಕ್ತಿಯನ್ನೂ ಸಾಧು ಪ್ರಾಣಿ ತರ ಮಾಡಿ ಬಿಡುತ್ತೆ. (ಯೆಶಾ. 11:6, 7, 9) ಉದಾಹರಣೆಗೆ, ಸತ್ಯ ಕಲಿಯೋ ಮುಂಚೆ ಜಮಿಲ್ ಅನ್ನೋ ವ್ಯಕ್ತಿ ಸರ್ಕಾರದ ವಿರುದ್ಧ ಹೋರಾಡೋ ಒಂದು ರೌಡಿ ಗ್ಯಾಂಗಲ್ಲಿದ್ದ. ಅವನು ಹೇಳೋದು, “ಯಾವ ವ್ಯಕ್ತಿಯನ್ನೂ ಒತ್ತಾಯ ಮಾಡಿ ಸರಿಮಾಡಕ್ಕಾಗಲ್ಲ. ನಾನೂ ಆಗ್ಲಿಲ್ಲ. ನನ್ನನ್ನ ಬದಲಾಯಿಸಿದ್ದು ನಾನು ಕಲಿತ ಬೈಬಲ್ ಸತ್ಯಗಳೇ.” ಸತ್ಯ ಕಲಿತ ಮೇಲೆ ಸಹೋದರ ಜಮಿಲ್ ಹೋರಾಟ ಮಾಡೋದನ್ನ ನಿಲ್ಲಿಸಿಬಿಟ್ಟರು. ಎಷ್ಟು ಜನ ಸತ್ಯ ಕಲಿತು ಬದಲಾಗ್ತಾರೋ, ಅಷ್ಟು ಜನ ಅನ್ಯಾಯ ಮಾಡೋದನ್ನ ಕಮ್ಮಿ ಮಾಡ್ತಾರೆ ಅನ್ನೋದನ್ನ ನಾವು ನೆನಪಿಡಬೇಕು.
16. ಬಿಡದೇ ಸಿಹಿಸುದ್ದಿ ಸಾರಬೇಕಂತ ನಿಮಗ್ಯಾಕೆ ಅನಿಸುತ್ತೆ?
16 ಅನ್ಯಾಯಕ್ಕೆ ಶಾಶ್ವತ ಪರಿಹಾರ ದೇವರ ಆಳ್ವಿಕೆ ಮಾತ್ರ ಕೊಡುತ್ತೆ ಅಂತ ತಿಳಿಸೋಕೆ ಯೇಸು ಯಾವಾಗ್ಲೂ ತುದಿಗಾಲಲ್ಲಿ ಇದ್ದ. ನಾವು ಯೇಸುವಿನ ತರಾನೇ ಹುರುಪಿಂದ ಸಾರಿದ್ರೆ ಅನ್ಯಾಯವನ್ನ ಎದುರಿಸ್ತಿರೋರಿಗೆ ಭರವಸೆ ಸಿಗುತ್ತೆ. (ಯೆರೆ. 29:11) ಈಗಾಗಲೇ ತಿಳಿಸಿದ ಸ್ಟೇಸಿ ಹೀಗೆ ಹೇಳ್ತಾರೆ, “ನನಗೂ ಜೀವನದಲ್ಲಿ ಅನ್ಯಾಯ ಆಗಿದೆ. ಬೇರೆಯವ್ರಿಗೆ ಅನ್ಯಾಯ ಆಗಿರೋದನ್ನ ನಾನು ನೋಡಿದ್ದೀನಿ. ಆದ್ರೆ ಸತ್ಯ ಕಲಿತಿದ್ರಿಂದ ಅದನ್ನೆಲ್ಲ ನಿಭಾಯಿಸೋಕೆ ನನಗೆ ಸಹಾಯ ಆಗಿದೆ.” ಸಾಂತ್ವನದ ಸಂದೇಶನ ಬೇರೆಯವ್ರಿಗೆ ಹೇಳಬೇಕಂದ್ರೆ ಮೊದಲು ನಾವು ತಯಾರಾಗಿರಬೇಕು. ಯಾಕಿಷ್ಟು ಕಷ್ಟ ಮತ್ತು ಅನ್ಯಾಯ ಆಗ್ತಿದೆ, ಯೆಹೋವ ಇದನ್ನೆಲ್ಲ ಹೇಗೆ ಕೊನೆ ಮಾಡ್ತಾನೆ ಅಂತ ನಾವು ಚೆನ್ನಾಗಿ ಅರ್ಥ ಮಾಡ್ಕೊಂಡಿದ್ರೆ ನಮ್ಮ ಜೊತೆ ಕೆಲಸ ಮಾಡೋರ ಹತ್ರ, ಶಾಲೆಯಲ್ಲಿ ಅದ್ರ ಬಗ್ಗೆ ಚೆನ್ನಾಗಿ ಮಾತಾಡೋಕೆ ಆಗುತ್ತೆ.b
17. ಈಗ ನಡೀತಿರೋ ಅನ್ಯಾಯನ ತಾಳ್ಕೊಳ್ಳೋಕೆ ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಿದ್ದಾನೆ?
17 ಎಲ್ಲಿವರೆಗೂ ಸೈತಾನ ‘ಈ ಲೋಕದ ನಾಯಕನಾಗಿ’ ಇರ್ತಾನೋ ಅಲ್ಲಿವರೆಗೂ ನಮಗೆ ಅನ್ಯಾಯ ತಪ್ಪಿದ್ದಲ್ಲ. ಆದ್ರೆ ತುಂಬ ಬೇಗ ಅವನನ್ನ ಹೊರಗೆ ಹಾಕ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. (ಯೋಹಾ. 12:31) ಯೆಹೋವ ಬೈಬಲ್‌ನಲ್ಲಿ ಅನ್ಯಾಯ ಯಾಕೆ ಆಗ್ತಿದೆ ಅಂತ ಬರೆಸಿರೋದಷ್ಟೇ ಅಲ್ಲ, ಅನ್ಯಾಯ ನೋಡಿದಾಗ ಆತನಿಗೆ ಎಷ್ಟು ನೋವು ಆಗುತ್ತೆ ಅಂತಾನೂ ಬರೆಸಿದ್ದಾನೆ. (ಕೀರ್ತ. 34:17-19) ಅನ್ಯಾಯ ಆದಾಗ ನಾವೇನು ಮಾಡಬೇಕು ಅಂತ ತನ್ನ ಮಗನ ಮೂಲಕ ಕಲಿಸ್ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ತನ್ನ ಆಳ್ವಿಕೆ ಅನ್ಯಾಯವನ್ನ ಶಾಶ್ವತವಾಗಿ ತೆಗೆದುಹಾಕುತ್ತೆ ಅಂತ ಭರವಸೆ ಕೊಟ್ಟಿದ್ದಾನೆ. (2 ಪೇತ್ರ 3:13) ಹಾಗಾಗಿ ನಾವೆಲ್ರೂ ದೇವರ ಆಳ್ವಿಕೆಯ ಸಿಹಿಸುದ್ದಿನ ಹುರುಪಿಂದ ಎಲ್ರಿಗೂ ಸಾರೋಣ. ಅಷ್ಟೇ ಅಲ್ಲ, “ನ್ಯಾಯದಿಂದ ನೀತಿಯಿಂದ” ಆಳ್ವಿಕೆ ಮಾಡೋ ಆ ಸರ್ಕಾರಕ್ಕಾಗಿ ಎದುರು ನೋಡ್ತಾ ಇರೋಣ.—ಯೆಶಾ. 9:7.
ಗೀತೆ 158 ತಾಳ್ಮೆ ಕೊಡು ದೇವರೇ!
a ಕೆಲವ್ರ ಹೆಸ್ರನ್ನ ಬದಲಾಯಿಸಲಾಗಿದೆ.
b ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ ಕಿರುಹೊತ್ತಗೆಯ ಪರಿಶಿಷ್ಟ ಎ ಭಾಗದಲ್ಲಿರೋ ಪಾಯಿಂಟ್ 24-27ನ್ನ ನೋಡಿ.