ಅಧ್ಯಯನ ಲೇಖನ 38
ಗೀತೆ 17 “ನನಗೆ ಮನಸ್ಸಿದೆ”
ಎಲ್ರಿಗೂ ಗೌರವ ಕೊಡಿ
“ಬೆಳ್ಳಿಬಂಗಾರಕ್ಕಿಂತ ಗೌರವ ಗಳಿಸೋದು ಮೇಲು.”—ಜ್ಞಾನೋ. 22:1.
ಈ ಲೇಖನದಲ್ಲಿ ಏನಿದೆ?
ನಾವು ಯಾಕೆ ಬೇರೆಯವ್ರಿಗೆ ಗೌರವ ಕೊಡಬೇಕು ಮತ್ತು ಕಷ್ಟ ಆದ್ರೂ ಗೌರವ ಕೊಡೋದು ಯಾಕೆ ಮುಖ್ಯ ಅಂತ ನೋಡೋಣ.
1. ಗೌರವ ಸಿಕ್ಕಿದಾಗ ಜನ್ರಿಗೆ ಯಾಕೆ ಖುಷಿಯಾಗುತ್ತೆ? (ಜ್ಞಾನೋಕ್ತಿ 22:1)
“ಪ್ರಾಣಕ್ಕಿಂತ ಮಾನ ಮುಖ್ಯ” ಅಂತ ಜನ ಹೇಳ್ತಾರೆ. ಜನ ಗೌರವಕ್ಕೆ ಎಷ್ಟು ಬೆಲೆ ಕೊಡ್ತಾರೆ ಅಂತ ಇದ್ರಿಂದಾನೇ ಗೊತ್ತಾಗುತ್ತೆ. ಬೇರೆಯವರು ನಮ್ಮನ್ನ ಗೌರವಿಸಬೇಕು ಅನ್ನೋ ಆಸೆ ನಮ್ಮೆಲ್ರಿಗೂ ಇರುತ್ತೆ. ಬೇರೆಯವರು ನಮಗೆ ಗೌರವ ಕೊಟ್ಟಾಗ ನಮಗೆ ತುಂಬ ಖುಷಿ ಆಗುತ್ತೆ. ಅದಕ್ಕೆ ಬೈಬಲ್, “ಬೆಳ್ಳಿಬಂಗಾರಕ್ಕಿಂತ ಗೌರವ ಗಳಿಸೋದು ಮೇಲು” ಅಂತ ಹೇಳುತ್ತೆ.—ಜ್ಞಾನೋಕ್ತಿ 22:1 ಓದಿ.
2-3. (ಎ) ಗೌರವ ಕೊಡೋದು ಯಾಕೆ ಯಾವಾಗ್ಲೂ ಸುಲಭ ಅಲ್ಲ? (ಬಿ) ನಾವು ಯಾರಿಗೆಲ್ಲ ಗೌರವ ಕೊಡಬೇಕು?
2 ಆದ್ರೆ ಬೇರೆವ್ರಿಗೆ ಗೌರವ ಕೊಡೋದು ಮಾತಲ್ಲಿ ಹೇಳಿದಷ್ಟು ಸುಲಭ ಅಲ್ಲ. ಯಾಕಂದ್ರೆ ನಮಗೆ ಬೇಗ ಬೇರೆಯವ್ರ ತಪ್ಪು ಎದ್ದು ಕಾಣಿಸುತ್ತೆ. ಅಷ್ಟೇ ಅಲ್ಲ, ಜನ ಗೌರವ ಕೊಡದೇ ಇರೋ ಕಾಲದಲ್ಲಿ ನಾವು ಜೀವಿಸ್ತಾ ಇದ್ದೀವಿ. ಹಾಗಂತ ನಾವು ಆ ತರ ನಡ್ಕೊಬಾರದು. ಯಾಕಂದ್ರೆ “ಎಲ್ಲ ತರದ ಜನ್ರನ್ನ ಗೌರವಿಸಿ” ಅಂತ ಯೆಹೋವ ನಮಗೆ ಹೇಳಿದ್ದಾನೆ.—1 ಪೇತ್ರ 2:17.
3 ಈ ಲೇಖನದಲ್ಲಿ ಗೌರವ ಕೊಡೋದು ಅಂದ್ರೇನು ಅಂತ ತಿಳಿಯೋಣ. (1) ನಮ್ಮ ಕುಟುಂಬದವ್ರಿಗೆ (2) ಸಹೋದರ ಸಹೋದರಿಯರಿಗೆ ಹಾಗೂ (3) ಸತ್ಯದಲ್ಲಿ ಇಲ್ಲದೇ ಇರೋರಿಗೆ ಹೇಗೆ ಗೌರವ ಕೊಡಬಹುದು ಅಂತ ಕಲಿಯೋಣ. ಇದ್ರ ಜೊತೆಗೆ ಕೆಲವು ಸಲ ಕಷ್ಟ ಆದ್ರೂ ಗೌರವ ಕೊಡೋದು ಹೇಗೆ ಅಂತ ನೋಡೋಣ.
ಗೌರವ ಕೊಡೋದು ಅಂದ್ರೇನು?
4. ಗೌರವ ಕೊಡೋದ್ರಲ್ಲಿ ಏನೆಲ್ಲ ಸೇರಿದೆ?
4 ಗೌರವ ಕೊಡೋದ್ರಲ್ಲಿ ನಾವು ಒಬ್ಬ ವ್ಯಕ್ತಿ ಬಗ್ಗೆ ಏನು ಯೋಚಿಸ್ತೀವಿ, ಅವ್ರ ಜೊತೆ ಹೇಗೆ ನಡ್ಕೊಳ್ತೀವಿ ಅನ್ನೋದೆಲ್ಲ ಸೇರಿದೆ. ಸಾಮಾನ್ಯವಾಗಿ, ಒಬ್ರಲ್ಲಿ ಒಳ್ಳೆಯ ಗುಣಗಳಿದ್ರೆ, ಅವರು ಏನಾದ್ರೂ ಒಳ್ಳೆ ಕೆಲಸ ಮಾಡಿದ್ರೆ ಅಥವಾ ಅವರಿಗೆ ನಮ್ಮ ಮೇಲೆ ಅಧಿಕಾರ ಇದ್ರೆ ನಾವು ಅವ್ರಿಗೆ ಗೌರವ ಕೊಡ್ತೀವಿ. ನಾವು ಯಾರಿಗೆ ಗೌರವ ಕೊಡ್ತೀವೋ ಅವರನ್ನ ಅಮೂಲ್ಯವಾಗಿ ನೋಡ್ತೀವಿ, ಅವ್ರನ್ನ ಮೆಚ್ಕೊಳ್ತೀವಿ ಮತ್ತು ಅವ್ರ ಜೊತೆ ಚೆನ್ನಾಗಿ ನಡ್ಕೊಳ್ತೀವಿ. ಆದ್ರೆ ನೆನಪಿಡಿ, ಗೌರವ ಬರೀ ಬಾಯಿ ಮಾತಲ್ಲಿ ಅಲ್ಲ, ನಮ್ಮ ಹೃದಯದಿಂದ ಬರಬೇಕು.—ಮತ್ತಾ. 15:8.
5. ನಾವು ಬೇರೆಯವ್ರಿಗೆ ಗೌರವ ಕೊಡೋಕೆ ಏನು ಕಾರಣ?
5 ನಾವು ಎಲ್ರ ಜೊತೆ ಗೌರವದಿಂದ ನಡ್ಕೊಬೇಕು ಅಂತ ಯೆಹೋವ ಬಯಸ್ತಾನೆ. ಉದಾಹರಣೆಗೆ, ‘ಅಧಿಕಾರಿಗಳ ಮಾತು ಕೇಳಬೇಕು,’ ಅಂತ ಆತನು ಹೇಳಿದ್ದಾನೆ. (ರೋಮ. 13:1, 7) ಆದ್ರೆ ಕೆಲವರು, ‘ಗೌರವ ಕೊಡೋ ತರ ನಡ್ಕೊಂಡ್ರೆ ಮಾತ್ರ ನಾನು ಜನ್ರಿಗೆ ಗೌರವ ಕೊಡ್ತೀನಿ’ ಅಂತ ಹೇಳ್ತಾರೆ. ಆದ್ರೆ ಯೆಹೋವ ಇದನ್ನ ಒಪ್ಪಲ್ಲ. ಆತನ ಸೇವಕರಾದ ನಾವು, ಜನ ಹೇಗೆ ನಡ್ಕೊಳ್ತಾರೆ ಅನ್ನೋದನ್ನ ನೋಡಿ ಅವ್ರಿಗೆ ಗೌರವ ಕೊಡಬಾರದು. ಬದಲಿಗೆ, ನಮಗೆ ಯೆಹೋವ ಮೇಲೆ ಪ್ರೀತಿ ಇರೋದ್ರಿಂದ ಮತ್ತು ಆತನನ್ನ ಮೆಚ್ಚಿಸೋ ಆಸೆ ಇರೋದ್ರಿಂದ ನಾವು ಜನ್ರಿಗೆ ಗೌರವ ಕೊಡಬೇಕು.—ಯೆಹೋ. 4:14; 1 ಪೇತ್ರ 3:15.
6. ಗೌರವ ಕೊಡದೆ ಇರೋರಿಗೂ ನಾವು ಗೌರವ ಕೊಡೋಕೆ ಆಗುತ್ತಾ? ವಿವರಿಸಿ. ( ಚಿತ್ರ ನೋಡಿ.)
6 ನಮಗೆ ಗೌರವ ಕೊಡದೇ ಇರೋರಿಗೂ ನಾವು ಗೌರವ ಕೊಡಬೇಕಾ? ಹೌದು ಕೊಡಬೇಕು ಅಂತ ಬೈಬಲಿನ ಉದಾಹರಣೆಗಳು ತೋರಿಸುತ್ತೆ. ಯೋನಾತಾನನಿಗೆ ತನ್ನ ತಂದೆ ಸೌಲನೇ ಎಲ್ರ ಮುಂದೆ ಅವಮಾನ ಮಾಡಿದ. (1 ಸಮು. 20:30-34) ಆದ್ರೂ ಸೌಲ ಸಾಯೋವರೆಗೂ ಯೋನಾತಾನ ಅವನಿಗೆ ಗೌರವ ಕೊಟ್ಟು ಬೆನ್ನೆಲುಬಾಗಿ ನಿಂತ. (ವಿಮೋ. 20:12; 2 ಸಮು. 1:23) ಮಹಾ ಪುರೋಹಿತ ಏಲಿ ಹನ್ನಳಿಗೆ ‘ನೀನು ಕುಡಿದು ಮಾತಾಡ್ತಾ ಇದ್ದೀಯ’ ಅಂತ ಬೈದ. (1 ಸಮು. 1:12-14) ಮಹಾಪುರೋಹಿತನಾಗಿ, ತಂದೆಯಾಗಿ ಏಲಿನೇ ತನ್ನ ಮಕ್ಕಳಿಗೆ ಬುದ್ಧಿ ಹೇಳಿ ಸರಿಯಾಗಿ ಬೆಳೆಸ್ತಿರಲಿಲ್ಲ. ಇದು ಇಡೀ ಇಸ್ರಾಯೇಲ್ ಜನ್ರಿಗೆ ಗೊತ್ತಿತ್ತು. ಆದ್ರೂ ಹನ್ನ ಅವನ ಹತ್ರ ಗೌರವದಿಂದ ಮಾತಾಡಿದಳು. (1 ಸಮು. 1:15-18; 2:22-24) ಅಥೆನ್ಸ್‌ನ ಜನ ಅಪೊಸ್ತಲ ಪೌಲನಿಗೆ “ಬಾಯಿಬಡಕ” ಅಂತ ಹೇಳಿದ್ರು. (ಅ. ಕಾ. 17:18) ಆದ್ರೂ ಪೌಲ ಅವ್ರ ಜೊತೆ ಗೌರವದಿಂದ ಮಾತಾಡಿದ. (ಅ. ಕಾ. 17:22) ಇವ್ರಿಗೆಲ್ಲ ಗೌರವ ಕೊಡೋದು ಕಷ್ಟ ಆದ್ರೂ, ಅವ್ರಿಗೇ ಅವಮಾನ ಆದ್ರೂ ಯಾಕೆ ಗೌರವ ಕೊಟ್ರು? ಯಾಕಂದ್ರೆ ಇವ್ರಿಗೆಲ್ಲ ಯೆಹೋವನ ಮೇಲೆ ಪ್ರೀತಿ ಇತ್ತು. ಯೆಹೋವನನ್ನ ಮೆಚ್ಚಿಸಬೇಕು ಅನ್ನೋ ಆಸೆ ಇತ್ತು. ನಮಗೂ ಕಷ್ಟ ಆದ್ರೂ ಎಲ್ರಿಗೂ ಗೌರವ ಕೊಡ್ತೀವಿ. ನಾವೀಗ ಯಾರಿಗೆಲ್ಲ ಗೌರವ ಕೊಡಬೇಕು ಮತ್ತೆ ಆ ತರ ಗೌರವ ಕೊಡೋದು ಯಾಕೆ ಮುಖ್ಯ ಅಂತ ನೋಡೋಣ.
ತನ್ನ ತಂದೆ ಸೌಲ ಅವಮಾನ ಮಾಡಿದ್ರೂ ಯೋನಾತಾನ ಅವನಿಗೆ ಬೆನ್ನೆಲುಬಾಗಿ ನಿಂತ (ಪ್ಯಾರ 6 ನೋಡಿ)
ಕುಟುಂಬದವ್ರಿಗೆ ಗೌರವ ಕೊಡಿ!
7. ಕುಟುಂಬದವ್ರಿಗೆ ಗೌರವ ಕೊಡೋಕೆ ಕೆಲವು ಸಲ ನಮಗೆ ಯಾಕೆ ಕಷ್ಟ ಆಗಬಹುದು?
7 ಸವಾಲು: ನಾವು ನಮ್ಮ ಕುಟುಂಬದವ್ರ ಜೊತೆ ಜಾಸ್ತಿ ಟೈಮ್ ಕಳೀತೀವಿ. ಹಾಗಾಗಿ ಪ್ರತಿಯೊಬ್ರ ಒಳ್ಳೆ ಗುಣಗಳು ಮತ್ತು ಅವ್ರ ಕುಂದು ಕೊರತೆಗಳು ನಮಗೆ ಚೆನ್ನಾಗಿ ಗೊತ್ತಿರುತ್ತೆ. ನಮ್ಮ ಕುಟುಂಬದಲ್ಲಿ ಯಾರಿಗಾದ್ರೂ ದೊಡ್ಡ ಕಾಯಿಲೆ ಇದ್ರೆ ಅಥವಾ ಖಿನ್ನತೆ ಇದ್ರೆ ಅವ್ರ ಜೊತೆ ಗೌರವದಿಂದ ನಡ್ಕೊಳೋಕೆ ಮತ್ತು ಅವ್ರನ್ನ ನೋಡ್ಕೊಳೋಕೆ ನಮಗೆ ಕಷ್ಟ ಆಗಬಹುದು. ಇನ್ನು ಕೆಲವು ಸಲ ಕುಟುಂಬದವರು ಹಿಂದೆಮುಂದೆ ಯೋಚ್ನೆ ಮಾಡದೆ ನಮಗೆ ನೋವಾಗೋ ತರ ಮಾತಾಡಬಹುದು. ಇಂಥ ಟೈಮಲ್ಲಿ ನಾವು ಕೋಪ ಮಾಡ್ಕೊಂಡ್ರೆ ನಮ್ಮ ಕುಟುಂಬದ ಸಂತೋಷನ ನಾವೇ ಕೈಯಾರೇ ನಾಶ ಮಾಡ್ಕೊತ್ತೀವಿ. ನಾವು ಆರೋಗ್ಯವಾಗಿಲ್ಲ ಅಂದ್ರೆ ನಮ್ಮ ದೇಹ ಸರಿಯಾಗಿ ಕೆಲಸ ಮಾಡಲ್ಲ. ಅದೇ ತರ ಗೌರವ ಇಲ್ಲ ಅಂದ್ರೆ ಕುಟುಂಬ ಚೆನ್ನಾಗಿರಲ್ಲ.
8. ಕುಟುಂಬದವ್ರಿಗೆ ಗೌರವ ಕೊಡೋದು ಯಾಕೆ ತುಂಬ ಮುಖ್ಯ? (1 ತಿಮೊತಿ 5:4, 8)
8 ಯಾಕೆ ಗೌರವ ಕೊಡಬೇಕು? (1 ತಿಮೊತಿ 5:4, 8. ಓದಿ.) ಪೌಲ ತಿಮೊತಿಗೆ ಬರೆದ ಮೊದಲನೇ ಪತ್ರದಲ್ಲಿ ಕುಟುಂಬದವರು ಹೇಗೆ ನಡ್ಕೊಬೇಕು ಅಂತ ತಿಳಿಸಿದ್ದಾನೆ. ‘ಒಬ್ರಿಗೊಬ್ರು ಗೌರವ ತೋರಿಸೋದು’ ಬರೀ ಕರ್ತವ್ಯ ಅಲ್ಲ. ಅದು ನಿಮಗೆ ದೇವ್ರ ಮೇಲಿರೋ ಭಕ್ತಿ ತೋರಿಸುತ್ತೆ ಅಂತ ಹೇಳಿದ್ದಾನೆ. ಅಂದ್ರೆ ನಾವು ಯೆಹೋವನನ್ನ ಪ್ರೀತಿಸೋದ್ರಿಂದ ಮತ್ತು ಇದು ನಮ್ಮ ಆರಾಧನೆ ಭಾಗ ಆಗಿರೋದ್ರಿಂದ ನಾವು ಒಬ್ರಿಗೊಬ್ರು ಗೌರವ ತೋರಿಸ್ತೀವಿ. ಕುಟುಂಬದ ಏರ್ಪಾಡನ್ನ ಮಾಡಿದ್ದು ಯೆಹೋವನೇ. (ಎಫೆಸ 3:14, 15) ಹಾಗಾಗಿ ನಾವು ಕುಟುಂಬದಲ್ಲಿರೋ ಪ್ರತಿಯೊಬ್ರಿಗೂ ಗೌರವ ಕೊಟ್ರೆ, ನಮ್ಮ ಕುಟುಂಬದ ಏರ್ಪಾಡನ್ನ ಮಾಡಿರೋ ಯೆಹೋವನಿಗೆ ಗೌರವ ಕೊಟ್ಟಂತೆ ಇರುತ್ತೆ. ಗೌರವ ತೋರಿಸೋಕೆ ಇದು ಎಷ್ಟು ದೊಡ್ಡ ಕಾರಣ ಅಲ್ವಾ?
9. (ಎ) ಹೆಂಡ್ತಿಗೆ ಗೌರವ ಕೊಡೋಕೆ ಗಂಡ ಏನು ಮಾಡಬೇಕು? (ಬಿ) ಗಂಡನಿಗೆ ಗೌರವ ಕೊಡೋಕೆ ಹೆಂಡ್ತಿ ಏನು ಮಾಡಬೇಕು? (ಚಿತ್ರಗಳನ್ನ ನೋಡಿ.)
9 ಹೇಗೆ ಗೌರವ ಕೊಡಬೇಕು? ಗೌರವ ಕೊಡೋ ಒಬ್ಬ ಗಂಡ ತನ್ನ ಹೆಂಡತಿಗೆ ಮನೆಯಲ್ಲೂ ಮತ್ತೆ ಎಲ್ರ ಮುಂದೇನೂ ಅವಳು ತುಂಬ ಅಮೂಲ್ಯ ಅನ್ನೋ ತರ ನಡ್ಕೊಳ್ತಾನೆ. (ಜ್ಞಾನೋ. 31:28; 1 ಪೇತ್ರ 3:7) ಅವಳನ್ನ ಹೊಡಿಯೋದು, ಬಡಿಯೋದು, ಅವಮಾನ ಮಾಡೋದು ಮಾಡಲ್ಲ. ಅವಳು ಯಾವುದಕ್ಕೂ ಲಾಯಕ್ಕಿಲ್ಲ ಅನ್ನೋ ತರ ನಡ್ಕೊಳಲ್ಲ. ಅರ್ಜೆಂಟೀನಾದಲ್ಲಿರೋ ಅರಿಲ್a ಅನ್ನೋ ವ್ಯಕ್ತಿ ಹೀಗೆ ಹೇಳ್ತಾರೆ, ‘ನನ್ನ ಹೆಂಡ್ತಿಗೆ ಒಂದು ಕಾಯಿಲೆ ಇದೆ. ಹಾಗಾಗಿ ಅವಳು ಕೆಲವೊಂದು ಸಲ ಯೋಚ್ನೆ ಮಾಡದೆ ನನಗೆ ನೋವಾಗೋ ತರ ಮಾತಾಡಿಬಿಡ್ತಾಳೆ. ಈ ತರ ಆದಾಗ ಇವಳು ಈ ಮಾತನ್ನ ಮನಸ್ಸಿಂದ ಹೇಳ್ತಿಲ್ಲ. ಅವಳಿಗೆ ಕಷ್ಟ ಆಗ್ತಿರೋದ್ರಿಂದ, ಒತ್ತಡದಿಂದ ಹೇಳ್ತಿದ್ದಾಳೆ ಅಂತ ಅರ್ಥ ಮಾಡ್ಕೊಳ್ತೀನಿ. ಕೆಲವೊಂದು ಸಲ ನನಗೆ ಕಷ್ಟ ಆದಾಗ 1 ಕೊರಿಂಥ 13:5ರಲ್ಲಿರೋ ಮಾತನ್ನ ನೆನಪಿಸ್ಕೊಳ್ತೀನಿ. ಇದ್ರಿಂದ ಅವಳ ಮೇಲೆ ಸಿಟ್ಟು ಮಾಡ್ಕೊಳ್ಳದೆ ದಯೆಯಿಂದ ಮಾತಾಡೋಕೆ ಆಗುತ್ತೆ.’ (ಜ್ಞಾನೋ. 19:11) ಒಬ್ಬ ಹೆಂಡ್ತಿನೂ ತನ್ನ ಗಂಡನ ಬಗ್ಗೆ ಬೇರೆಯವ್ರ ಜೊತೆ ಗೌರವ ಕೊಡೋ ತರ ಮಾತಾಡಬೇಕು. (ಎಫೆ. 5:33) ಅವಳು ಯಾವತ್ತೂ ಗಂಡನ್ನ ಅಡ್ಡ ಹೆಸರಿಟ್ಟು ಕರಿಯೋದು, ಅವಮಾನ ಆಗೋ ತರ ಮಾತಾಡೋದು ಮಾಡಬಾರದು. ಅಷ್ಟೇ ಅಲ್ಲ, ತನ್ನ ಗಂಡನ ಬಗ್ಗೆ ಬೇರೆಯವರ ಹತ್ರ ತಾತ್ಸಾರವಾಗಿ ಮಾತಾಡಬಾರದು. ಇಲ್ಲಾಂದ್ರೆ ಅವ್ರ ಮದುವೆ ಜೀವನವೇ ಹಾಳಾಗುತ್ತೆ ಅಂತ ಅವಳು ಅರ್ಥ ಮಾಡ್ಕೊಬೇಕು. (ಜ್ಞಾನೋ. 14:1) ಇಟಲಿಯಲ್ಲಿರೋ ಒಬ್ಬ ಸಹೋದರಿಯ ಗಂಡನಿಗೆ ಖಿನ್ನತೆ ಕಾಯಿಲೆ ಇದೆ. ಆ ಸಹೋದರಿ ಹೀಗೆ ಹೇಳ್ತಾರೆ, ‘ಒಂದೊಂದು ಸಲ ನನ್ನ ಗಂಡ ಚಿಕ್ಕ ವಿಷ್ಯಾನೂ ತುಂಬ ದೊಡ್ಡದಾಗಿ ಹೇಳ್ತಾರೆ. ಅತಿಯಾಗಿ ಚಿಂತೆ ಮಾಡ್ತಾರೆ. ಮುಂಚೆ ನನ್ನ ಮಾತಲ್ಲಿ, ನನ್ನ ಮುಖದಲ್ಲೇ ನನಗೆ ಬರ್ತಿದ್ದ ಕೋಪನ ತೋರಿಸ್ತಿದ್ದೆ. ಆದರೆ ಈಗ ಗೌರವ ಕೊಡೋರ ಜೊತೆ ಸಹವಾಸ ಮಾಡ್ತಿದ್ದೀನಿ. ಆದ್ರಿಂದ ನಾನು ನನ್ನ ಗಂಡನಿಗೆ ಗೌರವ ಕೊಡೋಕೆ ಕಲೀತಿದ್ದೀನಿ.’
ಕುಟುಂಬದವ್ರಿಗೆ ಗೌರವ ಕೊಟ್ರೆ, ನಮ್ಮ ಕುಟುಂಬದ ತಲೆಯಾಗಿರೋ ಯೆಹೋವನಿಗೆ ಗೌರವ ಕೊಟ್ಟಂತೆ (ಪ್ಯಾರ 9 ನೋಡಿ)
10. ಮಕ್ಕಳೇ, ನೀವು ನಿಮ್ಮ ಅಪ್ಪಅಮ್ಮನಿಗೆ ಹೇಗೆ ಗೌರವ ಕೊಡಬಹುದು?
10 ಮಕ್ಕಳೇ, ನಿಮ್ಮ ಮನೆಯಲ್ಲಿ ಅಪ್ಪ ಅಮ್ಮ ಇಟ್ಟಿರೋ ನಿಯಮನ ಪಾಲಿಸಿ. (ಎಫೆ. 6:1-3) ಅಪ್ಪ ಅಮ್ಮನಿಗೆ ಗೌರವ ಕೊಟ್ಟು ಮಾತಾಡಿ. (ವಿಮೋ. 21:17) ಅವ್ರಿಗೆ ವಯಸ್ಸಾಗ್ತಾ ಆಗ್ತಾ ನಿಮ್ಮ ಸಹಾಯ ಜಾಸ್ತಿ ಬೇಕಾಗಬಹುದು. ಹಾಗಾಗಿ ನಿಮ್ಮ ಕೈಲಾದ ಸಹಾಯ ಮಾಡಿ, ಅವರನ್ನ ಚೆನ್ನಾಗಿ ನೋಡ್ಕೊಳ್ಳಿ. ಮರಿಯಾ ಅನ್ನೋ ಸಹೋದರಿಯ ಅನುಭವ ನೋಡಿ. ಅವ್ರ ತಂದೆ ಸತ್ಯದಲ್ಲಿರಲಿಲ್ಲ. ಅವರು ಕಾಯಿಲೆ ಬಿದ್ದಾಗ ಮರಿಯಾಗೆ ಅವ್ರನ್ನ ನೋಡ್ಕೊಳೋಕೆ ಕಷ್ಟ ಆಯ್ತು. ಯಾಕಂದ್ರೆ ಅವ್ರಪ್ಪ ಇವಳ ಹತ್ರ ದಯೆಯಿಂದ ಪ್ರೀತಿಯಿಂದ ನಡ್ಕೊಳ್ತಿರಲಿಲ್ಲ. ಇದ್ರ ಬಗ್ಗೆ ಮರಿಯಾ ಹೀಗೆ ಹೇಳ್ತಾಳೆ, “ಅಪ್ಪನ ಮೇಲೆ ಗೌರವ ಬೆಳೆಸ್ಕೊಳೋಕೆ ಸಹಾಯ ಮಾಡು ಅಂತ ನಾನು ಪ್ರಾರ್ಥಿಸ್ತಿದ್ದೆ. ನನ್ನ ಮಾತಲ್ಲಿ, ನಡತೆಯಲ್ಲಿ ಅವ್ರಿಗೆ ಗೌರವ ತೋರಿಸೋಕೆ ಸಹಾಯ ಮಾಡು ಅಂತಾನೂ ನಾನು ಯೆಹೋವನ ಹತ್ರ ಕೇಳಿಕೊಂಡೆ. ‘ಅಪ್ಪ ಅಮ್ಮನಿಗೆ ಗೌರವ ಕೊಡಿ’ ಅಂತ ಯೆಹೋವ ಹೇಳಿದ್ದಾನೆ ಅಂದ್ಮೇಲೆ ಅದಕ್ಕೆ ಬೇಕಾಗಿರೋ ಶಕ್ತಿನೂ ನನಗೆ ಆತನೇ ಕೊಡ್ತಾನೆ ಅಂತ ನಾನು ನಂಬಿದೆ. ನಾನು ಅಪ್ಪಂಗೆ ಗೌರವ ಕೊಡಬೇಕಂದ್ರೆ ಅವರು ಬದ್ಲಾಗಲೇಬೇಕು ಅಂತ ಏನಿಲ್ಲ, ಅವರು ಬದಲಾಗಿಲ್ಲ ಅಂದ್ರೂ ನಾನು ಗೌರವ ಕೊಡಬಹುದು ಅಂತ ಅರ್ಥಮಾಡ್ಕೊಂಡೆ.” ನಮ್ಮ ಕುಟುಂಬದವರು ನಮಗೆ ನೋವು ಮಾಡ್ತಿದ್ರೂ ನಾವು ಅವ್ರಿಗೆ ಗೌರವ ಕೊಡಬಹುದು. ಈ ತರ ಮಾಡಿದ್ರೆ ಯೆಹೋವನಿಗೆ ಮತ್ತು ಆತನ ಏರ್ಪಾಡಿಗೆ ಗೌರವ ಕೊಟ್ಟಂತೆ ಆಗುತ್ತೆ.
ಸಹೋದರ ಸಹೋದರಿಯರಿಗೆ ಗೌರವ ಕೊಡಿ
11. ನಮ್ಮ ಸಹೋದರ ಸಹೋದರಿಯರಿಗೆ ಗೌರವ ಕೊಡೋಕೆ ಯಾವಾಗ ಕಷ್ಟ ಆಗಬಹುದು?
11 ಸವಾಲು: ನಮ್ಮ ಸಹೋದರ ಸಹೋದರಿಯರು ಬೈಬಲ್ ಹೇಳೋ ತರ ನಡ್ಕೊಳ್ತಾರೆ. ಆದ್ರೆ ಕೆಲವು ಸಲ ನಮ್ಮ ಜೊತೆ ಒರಟಾಗಿ, ಅನ್ಯಾಯವಾಗಿ ನಡ್ಕೊಬಹುದು ಅಥವಾ ನಮಗೆ ಕಿರಿಕಿರಿ ಮಾಡಬಹುದು. ನಮ್ಮ ಸಭೆಯವರು ‘ತಪ್ಪು ಮಾಡಿದಾಗ’ ಅವ್ರಿಗೆ ಗೌರವ ಕೊಡೋಕೆ ಕಷ್ಟ ಆಗುತ್ತೆ. (ಕೊಲೊ. 3:13) ಆದ್ರೆ ಅಂಥ ಟೈಮಲ್ಲೂ ಗೌರವ ಕೊಡೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?
12. ನಮ್ಮ ಸಹೋದರ ಸಹೋದರಿಯರಿಗೆ ಗೌರವ ಕೊಡೋದು ಯಾಕೆ ಮುಖ್ಯ? (2 ಪೇತ್ರ 2:9-12)
12 ಯಾಕೆ ಗೌರವ ಕೊಡಬೇಕು? (2 ಪೇತ್ರ 2:9-12 ಓದಿ.) ಪೇತ್ರ ತಾನು ಬರೆದ ಎರಡನೇ ಪತ್ರದಲ್ಲಿ ಒಂದನೇ ಶತಮಾನದಲ್ಲಿದ್ದ ಕ್ರೈಸ್ತ ಸಭೆಯವರು ಹಿರಿಯರ ಬಗ್ಗೆ ಅಗೌರವದಿಂದ, ತಪ್ಪುತಪ್ಪಾಗಿ ಮಾತಾಡ್ತಿದ್ರು ಅಂತ ಹೇಳಿದ್ದಾನೆ. ಕ್ರೈಸ್ತರು ಈ ತರ ಮಾಡೋದನ್ನ ನೋಡಿ ದೇವದೂತರು ಏನು ಮಾಡಿದ್ರು? ಯೆಹೋವನ ಮೇಲಿರೋ ಗೌರವದಿಂದ ಅವರು ಆ ಸುಳ್ಳು ಬೋಧಕರ ಮೇಲೆ ಯಾವ ಆರೋಪನೂ ಹಾಕಲಿಲ್ಲ. ಅವರ ಬಗ್ಗೆ ತಪ್ಪಾಗಿ ಮಾತಾಡ್ಲಿಲ್ಲ. ಪರಿಪೂರ್ಣರಾಗಿರೋ ದೇವದೂತರೇ ಆ ಅಹಂಕಾರಿ ಜನ್ರ ವಿರುದ್ಧ ಯಾವ ಮಾತೂ ಆಡದೇ ಯೆಹೋವನೇ ನ್ಯಾಯ ತೀರಿಸಲಿ ಅಂತ ಎಲ್ಲಾನೂ ಆತನ ಕೈಗೆ ಬಿಟ್ಟು ಕೊಟ್ರು. (ರೋಮ. 14:10-12 ಮತ್ತು ಯೂದ 9 ಹೋಲಿಸಿ ನೋಡಿ.) ದೇವದೂತರಿಂದ ನಾವೇನು ಕಲಿಬಹುದು? ಆ ಸುಳ್ಳು ಬೋಧಕರಿಗೇ ದೇವದೂತರು ಏನೂ ಹೇಳಲಿಲ್ಲ ಅಂದ್ಮೇಲೆ ಇನ್ನು ಯೆಹೋವನನ್ನ ಪ್ರೀತಿಸೋ ನಮ್ಮ ಸಹೋದರ ಸಹೋದರಿಯರಿಗೆ ನಾವು ಅವಮಾನ ಆಗೋ ತರ ಮಾಡೋದು ಸರೀನಾ? ಇಲ್ಲ ಅಲ್ವಾ? ಅದಕ್ಕೇ ಬೈಬಲ್ ‘ಗೌರವ ತೋರಿಸೋದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದೆ ಬನ್ನಿ’ ಅಂತ ಹೇಳುತ್ತೆ. (ರೋಮ. 12:10) ನಾವು ನಮ್ಮ ಸಭೆಯವ್ರಿಗೆ ಗೌರವ ತೋರಿಸಿದ್ರೆ ಯೆಹೋವನಿಗೂ ಗೌರವ ತೋರಿಸಿದಂತೆ ಇರುತ್ತೆ.
13-14. ಸಭೆಯಲ್ಲಿರೋರಿಗೆ ನಾವು ಹೇಗೆ ಗೌರವ ಕೊಡಬಹುದು? ಉದಾಹರಣೆ ಕೊಡಿ. (ಚಿತ್ರ ನೋಡಿ.)
13 ಹೇಗೆ ಗೌರವ ಕೊಡಬೇಕು? ಹಿರಿಯರೇ, ನೀವು ಸಭೆಯಲ್ಲಿ ಕಲಿಸ್ವಾಗ ಅದನ್ನ ಪ್ರೀತಿಯಿಂದ ಮಾಡಿ. (ಫಿಲೆ. 8, 9) ನೀವು ಕೋಪದಲ್ಲಿ ಇರುವಾಗ ಯಾರನ್ನೂ ತಿದ್ದೋಕೆ ಹೋಗಬೇಡಿ, ಯಾವಾಗ್ಲೂ ದಯೆಯಿಂದ ಮಾತಾಡಿ. ಸಹೋದರಿಯರೇ, ನೀವು ಸಭೆಯ ಐಕ್ಯತೆ ಮತ್ತು ಒಗ್ಗಟ್ಟು ಕಾಪಾಡಬಹುದು. ಆದ್ರಿಂದ ಯಾವತ್ತೂ ಬೇರೆಯವ್ರ ಬಗ್ಗೆ ತಪ್ಪುತಪ್ಪಾಗಿ ಮಾತಾಡಬೇಡಿ. ‘ಹರಟೆ ಮಾತಾಡೋರು’ ಅನ್ನೋ ಹೆಸ್ರು ನಿಮಗೆ ಬಾರದಂತೆ ನೋಡ್ಕೊಳ್ಳಿ. (ತೀತ 2:3-5) ನಮ್ಮ ಸಭೆಯಲ್ಲಿರೋ ಹಿರಿಯರು ತುಂಬ ಕೆಲಸಗಳನ್ನ ಮಾಡ್ತಾರೆ, ಪ್ರತಿವಾರ ಕೂಟಗಳನ್ನ ನಡೆಸ್ತಾರೆ ಮತ್ತು ಸೇವೆಗೆ ಏರ್ಪಾಡು ಮಾಡ್ತಾರೆ. ಇದೆಲ್ಲದ್ರ ಜೊತೆಗೆ ‘ತಪ್ಪು ದಾರಿ ಹಿಡಿದ’ ಪ್ರಚಾರಕರು ಸಭೆಗೆ ವಾಪಸ್ ಬರೋಕೆ ಸಹಾಯ ಮಾಡ್ತಾರೆ. ಹಿರಿಯರು ಮಾಡ್ತಿರೋ ಈ ಎಲ್ಲ ಕೆಲಸಗಳಿಗೆ ನೀವು ಯಾವಾಗಲೂ ಕೃತಜ್ಞತೆ ತೋರಿಸಿ.—ಗಲಾ. 6:1; 1 ತಿಮೊ. 5:17.
14 ಸಹೋದರಿ ರೊಸಿಯೋಗೆ ಅವ್ರ ಸಭೆಯ ಒಬ್ಬ ಹಿರಿಯ ಒಂದು ಬುದ್ಧಿ ಮಾತು ಹೇಳಿದ್ರು. ಆಗ ಸಹೋದರಿ ರೊಸಿಯೋಗೆ ಆ ಹಿರಿಯನಿಗೆ ಗೌರವ ಕೊಡೋಕೆ ಕಷ್ಟ ಆಯ್ತು. ಅವರು ಏನು ಹೇಳ್ತಾರೆ ನೋಡಿ, “ಆ ಹಿರಿಯ ನನ್ನ ಜೊತೆ ಪ್ರೀತಿಯಿಂದ, ದಯೆಯಿಂದ ನಡ್ಕೊಳ್ಳಲಿಲ್ಲ ಅಂತ ನಂಗೆ ಅನಿಸ್ತು. ನಂಗೆ ಬೇಜಾರಾಯ್ತು. ಅವ್ರ ಮುಂದೆ ನನ್ನ ಬೇಜಾರು ತೋರಿಸ್ಲಿಲ್ಲ. ಆದ್ರೆ ಮನೆಯವ್ರ ಹತ್ರ ಅವ್ರ ಬಗ್ಗೆ ತಪ್ಪುತಪ್ಪಾಗಿ ಮಾತಾಡ್ತಿದ್ದೆ. ಅವರು ನಿಜವಾಗ್ಲೂ ನನ್ನ ಪ್ರೀತಿಸಲ್ಲ ಅಂತ ಅಂದ್ಕೊಂಡೆ. ಹಾಗಾಗಿ ಅವರು ಕೊಟ್ಟ ಸಲಹೆ ನಾನು ಪಾಲಿಸಲಿಲ್ಲ. ಒಂದಿನ ನಾನು 1 ಥೆಸಲೊನೀಕ 5:12, 13 ವಚನ ಓದ್ತಿದ್ದೆ. ಆಗ ನಂಗೆ ನಾನು ಈ ಹಿರಿಯನಿಗೆ ಗೌರವ ತೋರಿಸ್ತಿಲ್ಲ ಅಲ್ವಾ? ನಾನು ತಪ್ಪು ಮಾಡ್ತಿದ್ದೀನಿ ಅಂತ ನನ್ನ ಮನಸ್ಸು ಚುಚ್ಚುತ್ತಾ ಇತ್ತು. ಅದಕ್ಕೇ ಬದಲಾಗೋಕೆ ಸಹಾಯ ಮಾಡು ಅಂತ ಪ್ರಾರ್ಥನೆ ಮಾಡಿದೆ. ನಮ್ಮ ಪುಸ್ತಕ, ಪತ್ರಿಕೆಗಳನ್ನ ಹುಡುಕಿ ಓದಿದೆ. ಹೋಗ್ತಾಹೋಗ್ತಾ ಪ್ರಾಬ್ಲಮ್ ಆ ಹಿರಿಯನದಲ್ಲ, ನನ್ನಲ್ಲಿರೋ ಅಹಂಕಾರ ಅಂತ ಅರ್ಥಮಾಡ್ಕೊಂಡೆ. ಒಬ್ರಿಗೆ ಗೌರವ ಕೊಡೋಕೆ ನಮಗೆ ಕಷ್ಟ ಆಗ್ತಿದೆ ಅಂದ್ರೆ ನಮ್ಮಲ್ಲಿ ದೀನತೆ ಇಲ್ಲ ಅಂತರ್ಥ ಅಂತ ತಿಳ್ಕೊಂಡೆ. ಈಗ್ಲೂ ನಾನು ಗೌರವ ಕೊಡೋಕೆ ಕಲಿತಾ ಇದ್ದೀನಿ, ಪ್ರಯತ್ನ ಹಾಕ್ತಿದ್ದೀನಿ. ಅದಕ್ಕೇ ನಂಗೆ ಯೆಹೋವನ ಜೊತೆ ಒಂದು ಒಳ್ಳೆ ಸಂಬಂಧ ಇದೆ.”
ಹಿರಿಯರಿಗೆ ಬೆಂಬಲ ಕೊಡೋ ಮೂಲಕ, ಅವರು ಮಾಡ್ತಿರೋ ಎಲ್ಲ ಕೆಲಸಗಳಿಗೆ ಕೃತಜ್ಞತೆ ತೋರಿಸೋ ಮೂಲಕ ನಾವು ಅವ್ರನ್ನ ಗೌರವಿಸ್ತೀವಿ ಅಂತ ತೋರಿಸಬಹುದು (ಪ್ಯಾರ 13-14 ನೋಡಿ)
ಸತ್ಯದಲ್ಲಿ ಇಲ್ಲದೇ ಇರೋರಿಗೂ ಗೌರವ ಕೊಡಿ
15. ಸತ್ಯದಲ್ಲಿ ಇಲ್ಲದೇ ಇರೋರಿಗೆ ಗೌರವ ಕೊಡೋಕೆ ನಮಗ್ಯಾಕೆ ಕಷ್ಟ ಆಗಬಹುದು?
15 ಸವಾಲು: ಬೈಬಲ್ ಮೇಲೆ ಎಳ್ಳಷ್ಟೂ ಪ್ರೀತಿ ಇಲ್ಲದೇ ಇರೋ ಜನ ನಮಗೆ ಸೇವೆಲಿ ಆಗಾಗ ಸಿಗ್ತಾರೆ. (ಎಫೆ. 4:18) ಕೆಲವರು ಅವರು ಬೆಳೆದು ಬಂದ ರೀತಿಯಿಂದ ಬೇರೆಯವ್ರ ಜೊತೆ ಅಗೌರವದಿಂದ ನಡ್ಕೊಬಹುದು. ಅಷ್ಟೇ ಅಲ್ಲ, ಸ್ಕೂಲ್ ಟೀಚರ್, ನಮ್ಮ ಬಾಸ್ ಅಥವಾ ಜೊತೆ ಕೆಲಸ ಮಾಡೋರು ನಮ್ಮ ಹತ್ರ ಒರಟಾಗಿ ನಡ್ಕೊಬಹುದು. ನಾವೆಷ್ಟೇ ಚೆನ್ನಾಗಿ ಕೆಲಸ ಮಾಡಿದ್ರೂ ಅವರು ನಮಗೆ ಬೆಲೆನೇ ಕೊಡದೇ ಇರಬಹುದು. ಹೋಗ್ತಾಹೋಗ್ತಾ ಇಂಥವ್ರ ಮೇಲೆ ನಮಗಿರೋ ಗೌರವ ಕಮ್ಮಿ ಆಗಬಹುದು. ಅವ್ರಿಗೆ ಗೌರವ ಕೊಡೋದೇ ಬೇಡ ಅಂತ ಅನಿಸಬಹುದು.
16. ಸತ್ಯದಲ್ಲಿ ಇಲ್ಲದೇ ಇರೋರಿಗೂ ನಾವು ಯಾಕೆ ಗೌರವ ಕೊಡಬೇಕು? (1 ಪೇತ್ರ 2:12; 3:15)
16 ಯಾಕೆ ಗೌರವ ಕೊಡಬೇಕು? ನಾವು ಸತ್ಯದಲ್ಲಿ ಇಲ್ಲದೇ ಇರೋರ ಜೊತೆನೂ ಹೇಗೆ ನಡ್ಕೊಳ್ತೀವಿ, ಹೇಗೆ ಮಾತಾಡ್ತೀವಿ ಅನ್ನೋದನ್ನ ಯೆಹೋವ ಯಾವಾಗ್ಲೂ ಗಮನಿಸ್ತಾ ಇರ್ತಾನೆ ಅಂತ ನೆನಪಿಡಿ. ನಾವು ಮಾಡೋ ಒಳ್ಳೆ ಕೆಲಸಗಳನ್ನ ನೋಡಿ ಜನ ದೇವರನ್ನ ಹೊಗಳ್ತಾರೆ ಅಂತ ಪೇತ್ರ ಹೇಳಿದ. ಅದಕ್ಕೇ ನಾವು ನಮ್ಮ ನಂಬಿಕೆ ಬಗ್ಗೆ ಬೇರೆಯವ್ರ ಹತ್ರ ‘ಮೃದುವಾಗಿ ತುಂಬ ಗೌರವದಿಂದ ಮಾತಾಡಬೇಕು.’ (1 ಪೇತ್ರ 2:12; 3:15 ಓದಿ.) ನಾವು ನಮ್ಮ ನಂಬಿಕೆ ಬಗ್ಗೆ ಕೋರ್ಟಲ್ಲೇ ಮಾತಾಡ್ತಾ ಇರಲಿ ಅಥವಾ ನಮ್ಮ ಅಕ್ಕಪಕ್ಕದವ್ರ ಹತ್ರನೇ ಮಾತಾಡ್ತಿರಲಿ ಇದನ್ನ ನಾವು ಮನಸ್ಸಲ್ಲಿಡಬೇಕು. ಯಾಕಂದ್ರೆ ನಾವು ಯೆಹೋವನ ಮುಂದೆ ಮಾತಾಡ್ತಿದ್ದೀವಿ. ನಾವು ಹೇಗೆ ಮಾತಾಡ್ತೀವಿ, ಏನು ಹೇಳ್ತೀವಿ ಅನ್ನೋದನ್ನ ಯೆಹೋವ ನೋಡ್ತಾನೆ. ಬೇರೆಯವ್ರ ಜೊತೆ ಗೌರವದಿಂದ ನಡ್ಕೊಳ್ಳೋಕೆ ಇದೆಷ್ಟು ಒಳ್ಳೆ ಕಾರಣ ಅಲ್ವಾ!
17. (ಎ) ಸೇವೆಯಲ್ಲಿ ನಾವು ಹೇಗೆ ಗೌರವ ತೋರಿಸಬಹುದು? (ಬಿ) ಕೆಲಸದಲ್ಲಿ ಹೇಗೆ ಗೌರವ ತೋರಿಸಬಹುದು?
17 ಹೇಗೆ ಗೌರವ ಕೊಡಬೇಕು? ಜನ್ರಿಗೆ ನಾವು ಸಿಹಿಸುದ್ದಿ ಸಾರುವಾಗ್ಲೂ ಗೌರವ ತೋರಿಸಬಹುದು. ಬೇರೆಯವ್ರ ಜೊತೆ ಮಾತಾಡುವಾಗ, ಅವ್ರಿಗಿಂತ ಜಾಸ್ತಿ ನಮಗೇ ಬೈಬಲ್ ಜ್ಞಾನ ಇದೆ, ಅವ್ರಿಗೆ ಏನೂ ಗೊತ್ತಿಲ್ಲ ಅನ್ನೋ ತರ ನಡ್ಕೊಬಾರದು. ಬದ್ಲಿಗೆ ಅವರು ದೇವ್ರ ಕಣ್ಣಲ್ಲಿ ತುಂಬ ಅಮೂಲ್ಯ, ನಮಗಿಂತ ಶ್ರೇಷ್ಠರು ಅಂತ ಮರೀಬಾರದು. (ಹಗ್ಗಾ. 2:7; ಫಿಲಿ. 2:3) ಯಾರಾದ್ರೂ ನಮ್ಮ ನಂಬಿಕೆ ಬಗ್ಗೆ ಅವಮಾನ ಮಾಡಿದ್ರೆ, ತಕ್ಷಣ ಅವರ ಮುಖಕ್ಕೆ ಹೊಡೆದ ಹಾಗೆ ಉತ್ರ ಕೊಡಬಾರದು. (1 ಪೇತ್ರ 2:23) ಒಂದುವೇಳೆ, ನಾವು ಹಿಂದೆ ಮುಂದೆ ಯೋಚ್ನೆ ಮಾಡದೇ ಏನಾದ್ರೂ ಮಾತಾಡಿದ್ರೆ, ‘ಅಯ್ಯೋ, ಈ ತರ ಮಾತಾಡಬಾರದಿತ್ತು’ ಅಂತ ಅನಿಸಿದ್ರೆ ತಕ್ಷಣ ಅವ್ರ ಹತ್ರ ಕ್ಷಮೆ ಕೇಳಬೇಕು. ಕೆಲಸದ ಸ್ಥಳದಲ್ಲಿ ನಾವು ಹೇಗೆ ಗೌರವ ತೋರಿಸಬಹುದು? ನೀವು ಕಷ್ಟಪಟ್ಟು ಕೆಲಸ ಮಾಡಿ. ನೀವು ಬಾಸ್ ಆಗಿದ್ರೂ ಅಥವಾ ಕೆಲಸದವ್ರೇ ಆಗಿದ್ರೂ ಎಲ್ರ ಜೊತೆ ದಯೆಯಿಂದ ನಡ್ಕೊಳ್ಳಿ. (ತೀತ 2:9, 10) ನೀವು ಪ್ರಾಮಾಣಿಕವಾಗಿ, ನಿಯತ್ತಾಗಿದ್ರೆ ಮನುಷ್ಯರು ನಿಮ್ಮನ್ನ ಮೆಚ್ಕೊಂಡಿಲ್ಲಾಂದ್ರೂ ಯೆಹೋವ ಅಂತೂ ನಿಮ್ಮನ್ನ ಗ್ಯಾರಂಟಿ ಮೆಚ್ಕೊತಾನೆ.—ಕೊಲೊ. 3:22, 23.
18. (ಎ) ಈ ಲೇಖನದಲ್ಲಿ ನಾವು ಏನೆಲ್ಲ ಕಲಿತ್ವಿ? (ಬಿ) ನಾವು ಗೌರವ ಕೊಡೋದ್ರಿಂದ ಏನು ಪ್ರಯೋಜನ?
18 ಗೌರವ ಕೊಡೋಕೆ ನಮಗೆ ಎಷ್ಟೊಂದು ಒಳ್ಳೆ ಕಾರಣಗಳಿವೆ ಅಂತ ಈ ಲೇಖನದಲ್ಲಿ ಕಲಿತ್ವಿ. ನಾವು ನಮ್ಮ ಕುಟುಂಬದವ್ರ ಜೊತೆ ಗೌರವದಿಂದ ನಡ್ಕೊಂಡ್ರೆ ನಮ್ಮ ಕುಟುಂಬದ ಯಜಮಾನನಾಗಿರೋ ಯೆಹೋವನಿಗೆ ಗೌರವ ಕೊಟ್ಟಂತೆ ಇರುತ್ತೆ. ನಮ್ಮ ಸಹೋದರ ಸಹೋದರಿಯರಿಗೆ ಗೌರವ ಕೊಟ್ರೆ ಯೆಹೋವನಿಗೆ ಗೌರವ ಕೊಟ್ಟು ಆತನನ್ನ ಮೆಚ್ಚಿಸಿದಂತೆ ಆಗುತ್ತೆ. ಸತ್ಯದಲ್ಲಿ ಇಲ್ಲದೇ ಇರೋರ ಜೊತೆ ಗೌರವದಿಂದ ನಡ್ಕೊಂಡ್ರೆ ಅವರು ನಮ್ಮ ಒಳ್ಳೆ ನಡತೆ ನೋಡಿ ಯೆಹೋವನನ್ನ ಹೊಗಳೋಕೆ ಆಗುತ್ತೆ. ನೆನಪಿಡಿ, ಕೆಲವ ಜನ ನಮಗೆ ಗೌರವ ಕೊಡ್ಲಿ ಬಿಡ್ಲಿ ನಾವಂತೂ ಅವ್ರಿಗೆ ಗೌರವ ಕೊಡಬೇಕು. ಯಾಕಂದ್ರೆ, ಆಗ ಯೆಹೋವ ನಮ್ಮನ್ನ ಆಶೀರ್ವದಿಸ್ತಾನೆ. ಅಷ್ಟೇ ಅಲ್ಲ, “ನನಗೆ ಗೌರವ ಕೊಡುವವರಿಗೆ ನಾನೂ ಗೌರವ ಕೊಡ್ತೀನಿ” ಅಂತ ಮಾತು ಕೊಟ್ಟಿದ್ದಾನೆ.—1 ಸಮು. 2:30.
ಗೀತೆ 143 ನಿರೀಕ್ಷಿಸುತ್ತಾ, ಸಹಿಸುತ್ತಾ ಕಾಯೋಣ
a ಕೆಲವು ಹೆಸ್ರನ್ನ ಬದಲಾಯಿಸಲಾಗಿದೆ.