ಧರ್ಮದ ಭವಿಷ್ಯ ಅದರ ಗತಕಾಲದ ನೋಟದಲ್ಲಿ
ಭಾಗ 9: ಸಾ.ಶ.ಪೂ 551ರಿಂದ ಹಿಡಿದು ಸರಿಯಾದ ಮಾರ್ಗಕ್ಕಾಗಿ ಪೌರಸ್ತ್ಯ ಅನ್ವೇಷಣೆ
“ಸತ್ಯಮಾರ್ಗ ಮಹಾದಾರಿಯಂತಿದೆ.—”ಸಾ.ಶ.ಪೂ. 4ನೇ ಶತಕದ ಚೈನೀಸ್ ಜ್ಞಾನಿ ಮೆಂಗ್-ಟ್ಸು
ತಾವು ರಕ್ಷಣೆಗೆ ನಡಿಸುವ ಸತ್ಯಮಾರ್ಗಗಳೆಂದು ವಾದಿಸುವ ಧರ್ಮಗಳೋ ಅನೇಕ. ಉದಾಹರಣೆಗೆ. ಕನ್ಫೂಶಿಯನ್, ಟಾವ್ ಮತ್ತು ಬೌದ್ಧ ಧರ್ಮಗಳು ಚೀನಾದ “ಮೂರು ಮಾರ್ಗಗಳು”ಎಂದು ಕರೆಯಲ್ಪಡುತ್ತವೆ. ಜಪಾನ್ ಮತ್ತು ಕೊರಿಯಾದ ಧರ್ಮಗಳು ಹೋಲುವ ಪದಪ್ರಯೋಗವನ್ನು ಮಾಡುತ್ತವೆ. ಹಾಗಾದರೆ, ವ್ಯತ್ಯಾಸವಿರುವಲ್ಲಿ. ಈ ವಿವಿಧ “ಮಾರ್ಗಗಳು” ಹೇಗೆ ಭಿನ್ನವಾಗಿವೆ?
ಕನ್ಫೂಶಿಯನ್ ಧರ್ಮ — ಮನುಷ್ಯ ಮಾರ್ಗ
ಕನ್ಫೂಶಿಯಸನ ಕುರಿತು ನಿಶ್ಚಯವಾದ ತಿಳುವಳಿಕೆ ಸ್ವಲ್ಪವೇ ಆದರೂ ಒಂದು ದಾಖಲೆಗ್ರಂಥ “ಲೋಕ ಇತಿಹಾಸದಲ್ಲಿ ಅವನು ಅತ್ಯಂತ ಹೆಚ್ಚು ಪ್ರಭಾವಬೀರಿದವರಲ್ಲಿ ಒಬ್ಬನೆಂದೆಣಿಸಲ್ಪಡಬೇಕು” ಎಂದು ಹೇಳುತ್ತದೆ. ಅಧ್ಯಾಪಕ, ತತ್ವಜ್ಞಾನಿ ಮತ್ತು ರಾಜಕೀಯ ಮೀಮಾಂಸಕನಾಗಿದ್ದ ಅವನು ಸಾ.ಶ.ಪೂ. 551 ಮತ್ತು 479ರ ಮಧ್ಯೆ ಜೀವಿಸಿದನು. ಅವನ ಕುಟುಂಬದ ಹೆಸರು ಕುಂಗ್ ಎಂದಾಗಿದ್ದುದರಿಂದ ಅವನನ್ನು ಬಳಿಕ ಕುಂಗ್-ಫು-ಟ್ಸು ಅಂದರೆ “ಕುಂಗ್ ಗುರು” ಎಂದು ಕರೆಯಲಾಯಿತು. ಇದರ ಲ್ಯಾಟಿನ್ ತರ್ಜುಮೆ “ಕನ್ಫೂಶಿಯಸ್” ಎಂದಾಗಿದೆ.
ಕನ್ಫೂಶಿಯಸನು ಹೊಸ ಧರ್ಮವನ್ನು ಸ್ಥಾಪಿಸಲಿಲ್ಲ. ದ ವೈಕಿಂಗ್ ಪೋರ್ಟೆಬಲ್ ಲೈಬ್ರೆರಿ ವರ್ಲ್ಡ್ ಬೈಬಲ್ ಹೇಳುವುದು: ಅವನು “ತನ್ನ ಹುಟ್ಟಿದ ದೇಶದಲ್ಲಿ ಅನಾದಿಕಾಲದಿಂದ ಇದ್ದ ಧರ್ಮವನ್ನು, ಅದರ ಪುಸ್ತಕಗಳಿಗೆ ರೂಪಕೊಟ್ಟು, ವಿಹಿತಾಚರಣೆಗಳಿಗೆ ಘನತೆಕೊಟ್ಟು ನೈತಿಕ ಕಟ್ಟಳೆಗಳಿಗೆ ಪ್ರಾಮುಖ್ಯತೆ ಕೊಟ್ಟು ಅದನ್ನು ಸಂಘಟಿಸಿದನು.” ದೇವತಾಶಾಸ್ತ್ರಜ್ಞಾನವಲ್ಲ, ಮಾನವ ನಡಾವಳಿ ಅವನ ಮುಖ್ಯ ಆಸಕ್ತಿಯಾಗಿತ್ತು. ಅವನ ಬೋಧನೆ, ಪ್ರಧಾನವಾಗಿ, ಸಮಾಜನೀತಿತತ್ವವಾಗಿತ್ತು. ರಾಜಕೀಯ ಹುದ್ದೆಯನ್ನು ಸಾಧಿಸುವ ಅವನ ಪ್ರಯತ್ನಗಳು ಜನರ ಕಷ್ಟಗಳನ್ನು ಹೋಗಲಾಡಿಸಲು ಅವನಿಗಿದ್ದ ಮಹತ್ತರವಾದ ಬಯಕೆಯಿಂದ ಪ್ರಚೋದಿತವಾಗಿದ್ದವು. ಆದುದರಿಂದ, ಯೋಗ್ಯವಾಗಿಯೇ, ಹೆಗ್ಗುರಿಯ ಧಾರ್ಮಿಕನಾಯಕನಿಗಿಂತ ಹೆಚ್ಚು ಹತಾಶನಾದ ರಾಜಕಾರಣಿಯಾಗಿದ್ದ ಈ ಮನುಷ್ಯನ ತತ್ವಜ್ಞಾನವನ್ನು “ಮನುಷ್ಯನ ಕನ್ಫೂಶಿಯಸ್ ಮಾರ್ಗ”ವೆಂದು ಕರೆಯಲಾಗಿದೆ.
ತನ್ನ ದಿನಗಳ ಧರ್ಮ ಉಚ್ಛರೀತಿಯದ್ದೆಂದು ಕನ್ಫೂಶಿಯಸನು ಹೇಳಲಿಲ್ಲ. ಅದರಲ್ಲಿ ಹೆಚ್ಚಿನದ್ದು ಮೂಢಭಕ್ತಿ ಎಂದು ಅವನು ಹೇಳಿದನು. ದೇವರಲ್ಲಿ ವಿಶ್ವಾಸವಿದೆಯೋ ಎಂದು ಅವನನ್ನು ಕೇಳಲಾಗಿ “ನಾನು ಮಾತಾಡದಿರಲು ಇಷ್ಟಪಡುತ್ತೇನೆ” ಎಂಬುದು ಅವನ ಉತ್ತರವಾಗಿತ್ತಂತೆ. ಆದರೆ “ಸ್ವರ್ಗ”ವೆಂದು ಅರ್ಥ ಬರುವ ‘ಟಿಯೆನ್’ ಎಂಬ ಪದವನ್ನು ಅವನು ಅನೇಕ ಸಲ ಉಪಯೋಗಿಸಿರುವುದರಿಂದ, ಅವನು ವ್ಯಕ್ತಿಸ್ವರೂಪವಿಲ್ಲದ ಉನ್ನತಶಕ್ತಿಗಿಂತಲೂ ಹೆಚ್ಚಿನ ಯಾವುದನ್ನೋ ನಂಬುತ್ತಿದ್ದನೆಂದು ಕೆಲವರ ಅಭಿಪ್ರಾಯ.
ಕನ್ಫೂಶಿಯಸನು ಪರಿವಾರ ಸದ್ಗುಣ, ಅಧಿಕಾರಕ್ಕೆ ಗೌರವ ಮತ್ತು ಸಮಾಜ ಸಾಮರಸ್ಯಗಳನ್ನು ಒತ್ತಿಹೇಳಿದನು. ಸಾಮರ್ಥ್ಯಗಳನ್ನು ಬೆಳೆಸುವುದರಲ್ಲಿ ವಿದ್ಯೆಯ ಆವಶ್ಯಕತೆ ಮತ್ತು ಇತರರ ಸೇವೆ ಮಾಡಲು ವೈಯಕ್ತಿಕ ಗುಣಗಳನ್ನು ಬಲಪಡಿಸುವುದಕ್ಕೆ ಅವನು ಗಮನ ಸೆಳೆದನು. ಮಾನವ ಸಂತತಿಯ ಕಡೆಗೆ ಉಪಕಾರ ಬುದ್ಧಿ ಎಂದು ಸಾಮಾನ್ಯ ಅರ್ಥವಿರುವ ‘ಜೆನ್’ ಎಂಬ ಪದವನ್ನು ಮತ್ತು ನಿರ್ದಿಷ್ಟವಾಗಿ, ಪುತ್ರೀಯ ಧರ್ಮಶೃದ್ಧೆ ಮತ್ತು ಸಹೋದರಗೌರವವನ್ನು ಅವನು ಒತ್ತಿ ಹೇಳಿದನು. ಪೂರ್ವಿಕರ ಆರಾಧನೆಯನ್ನು ಅವನು ಪ್ರೋತ್ಸಾಹಿಸಿದನು.
ಈ ಪ್ರತಿನಿಧಿರೂಪದ ಕನ್ಫೂಶಿಯಸ್ ಪ್ರವೃತ್ತಿಗಳು ಕನ್ಫೂಶಿಯಸ್ ರೀತಿಯಲ್ಲಿ ಬೆಳೆಸಿದ ಏಷ್ಯಾದ ಜನರ ಗುಣಗಳಾಗಿವೆ. ಚಿಕಾಗೋದಲ್ಲಿರುವ ಇಲ್ಲಿನೊಯಿ ವಿಶ್ವವಿದ್ಯಾಲಯದ ವಿಲ್ಯಂ ಲ್ಯು ಹೇಳುವುದು: “ಕನ್ಫೂಶಿಯನ್ ನೀತಿತತ್ವಗಳು ಜನರು ಕೆಲಸಮಾಡಿ, ಶ್ರೇಷ್ಟತೆ ತೋರಿಸಿ ಹೆತ್ತವರಿಗೆ ಸಲ್ಲತಕ್ಕ ಸಾಲವನ್ನು ಅವರು ಸಲ್ಲಿಸುವಂತೆ ಮಾಡುತ್ತವೆ.” ಹೀಗೆ ಬಲವಾದ ಕನ್ಫೂಶಿಯನ್ ಪ್ರಭಾವವಿರುವ ದೇಶಗಳಿಂದ ಬಂದ ವಲಸೆಗಾರರು ಅಮೇರಿಕದಲ್ಲಿ ತಮ್ಮ ಪಾಂಡಿತ್ಯಕ್ಕೆ ಹೆಸರುವಾಸಿಯಾಗಿದ್ದಾರೆ.
ಕನ್ಫೂಶಿಯನ್ ವಿಚಾರಗಳ ಮೂಲೆಗಲ್ಲು ವು ಚಿಂಗ್ (“ಐದು ಶ್ರೇಷ್ಟ ಸಾಹಿತ್ಯಗಳು”) ಎಂದು ಕರೆಯಲ್ಪಡುವ ಗ್ರಂಥ ಸಂಗ್ರಹ. 12ನೇ ಶತಕದಲ್ಲಿ ಕೂಡಿಸಲ್ಪಟ್ಟ “ನಾಲ್ಕು ಗ್ರಂಥಗಳು” ಅಥವಾ ಸ್ಸು ಶು ಕನ್ಫೂಶಿಯನ್ ವಿಚಾರಧಾರೆಗೆ ಅಗತ್ಯವೆಂದೆಣಿಸಲ್ಪಡುತ್ತದೆ. ಸಂಕ್ಷಿಪ್ತವೂ ದಟ್ಟವೂ ಆದ ಶೈಲಿಯಲ್ಲಿ ಬರೆಯಲ್ಪಟ್ಟದ್ದರಿಂದ ಇವನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರ.
ಸಾ.ಶ.ನಾಲ್ಕನೆಯ ಶತಕದೊಳಗೆ ಉತ್ತರ ಕೊರಿಯದ ಕೋಕುರ್ಯೊ ರಾಜ್ಯದಲ್ಲಿ ಕನ್ಫೂಶಿಯನ್ ತತ್ವಗಳು ಕಲಿಸಲ್ಪಡುತ್ತಿದ್ದವು. ಸಾ.ಶ.ಐದನೆಯ ಶತಮಾನದ ಆರಂಭದೊಳಗೆ ಕನ್ಫೂಶಿಯನ್ ತತ್ವ ಜಪಾನಿನೊಳಗೆ ಪ್ರಾಯಶಃ ಹೋಗಿರಬೇಕು. ಈ ಮಧ್ಯೆ ಚೀನಾದಲ್ಲಿ ಇನ್ನೊಂದು “ಮಾರ್ಗ” ವಿಕಾಸಗೊಳ್ಳುತ್ತಿತ್ತು.
ಟಾವ್ ಧರ್ಮ — ಪ್ರಕೃತಿ ಮಾರ್ಗ
ಸಹಸ್ರಾರು ವರ್ಷಗಳಲ್ಲಿ ಚೀನಿಯರ ವಿಚಾರದ ಕೇಂದ್ರವಾಗಿರುವ ಟಾವ್ ಎಂಬುದರ ಅರ್ಥವು “ಮಾರ್ಗ” ಅಥವಾ “ರಾಶಿ”. ವಿಶ್ವವು ಯಾವ ರೀತಿ ನಡೆಯುತ್ತದೋ ಆ ಪ್ರಕೃತಿ ವಿಧಾನಕ್ಕೆ ಅನುಗುಣವಾಗಿ ಸರಿಯಾದ ಮಾರ್ಗದಲ್ಲಿ ಕೆಲಸನಡಿಸುವುದು ಎಂಬುದನ್ನು ಈ ಪದ ಸೂಚಿಸಿತು. ಇದರ ಸ್ಥಾಪಕನು ಕನ್ಫೂಶಿಯಸನ ಸಮಕಾಲೀನ ಲಾ ಟ್ಸೆ ಎಂದು ಸಂಪ್ರದಾಯಗಳು ತಿಳಿಸುತ್ತವೆ. ಲಾ ಟ್ಸೆ ಅಂದರೆ “ಮುದಿ ಹುಡುಗ” ಅಥವಾ “ಮುದಿ (ಪೂಜ್ಯ) ತತ್ವಜ್ಞಾನಿ.” ಅದ್ಭುತ ಗರ್ಭಧಾರಣೆಯಾಗಿ ಅನೇಕ ದಶಕಗಳ ವರೆಗೆ ಗರ್ಭದಲ್ಲಿಯೇ ಇದ್ದು ಬಳಿಕ ವಯಸ್ಸಿನಿಂದ ಕೂದಲು ಆಗಲೇ ಹಣ್ಣಾಗಿದ್ದಾಗ ತಾಯಿ ಅವನಿಗೆ ಜನ್ಮ ಕೊಟ್ಟದ್ದರಿಂದ ಅವನಿಗೆ ಆ ಹೆಸರು ಬಂತು ಎಂದು ಕೆಲವರ ವಾದ. ಇತರರು, ಅವನ ವಿವೇಕದ ಉಪದೇಶಕ್ಕೆ ಗೌರವಾರ್ಥವಾಗಿ ಅವನಿಗೆ ಆ ಬಿರುದು ಕೊಡಲ್ಪಟ್ಟಿತ್ತೆಂದು ಹೇಳುತ್ತಾರೆ.
ಜನನದಲ್ಲಿ ಮಗುವಿಗೆ ಒಂದಿಷ್ಟು “ಆದ್ಯ ಉಸಿರು” ಅಥವಾ ಜೀವಶಕ್ತಿ ಕೊಡಲಾಗುತ್ತದೆಂದು ಟಾವ್ ಧರ್ಮ ಕಲಿಸುತ್ತದೆ. ಮತ್ತು ಧ್ಯಾನ, ನಿಯಂತ್ರಿತ ಆಹಾರ ಕ್ರಮ, ಉಸಿರಾಟದ ಮತ್ತು ಲೈಂಗಿಕ ನಿಯಂತ್ರಣವೇ ಮೊದಲಾದ ವಿಧಗಳಿಂದ ಈ “ಆದ್ಯ ಉಸಿರು” ಅನಾವಶ್ಯಕವಾಗಿ ಕಡಿಮೆಯಾಗುವುದನ್ನು ತಪ್ಪಿಸಬಹುದು. ಹೀಗೆ ದೀರ್ಘಾಯುಷ್ಯ ಪುಣ್ಯಜೀವನಕ್ಕೆ ಸಮಾನಾರ್ಥಕವಾಗಿದೆ.
ಮಾನವ ದೇಹವು ಪ್ರಕೃತಿಯೊಂದಿಗೆ ಯೋಗ್ಯ ಹೊಂದಿಕೆಯಲ್ಲಿ ಇಟ್ಟುಕೊಳ್ಳಬೇಕಾದ ಚಿಕ್ಕಗಾತ್ರದ ಒಂದು ವಿಶ್ವವೆಂದು ಎಣಿಸಲ್ಪಡುತ್ತದೆ. ಇದು ಚೀನಿಯರು ಯಿನ್ ಮತ್ತು ಯಾಂಗ್ ಎಂದು ಕರೆಯುವ ಅಂದರೆ ಅಕ್ಷರಾರ್ಥಕವಾಗಿ, ಒಂದು ಗುಡ್ಡದ ನೆರಳಿನ ಮತ್ತು ಬಿಸಿಲಿಗೊಡ್ಡಿದ ಬದಿಗಳಿಗೆ ಸಂಬಂಧಿಸಿದೆ. ಎಲ್ಲಾ ತತ್ವಜ್ಞಾನಗಳಂತೆಯೇ ಯಿನ್ ಮತ್ತು ಯಾಂಗ್ ಪ್ರಕೃತಿಯ ಸರ್ವವೂ ಯಾವುದರಿಂದ ನಿರ್ಮಿತವಾಗಿದೆಯೋ ಆ ವಿರೋಧಾತ್ಮಕವಾದ, ಆದರೂ ಪೂರಕವಾದ ಘಟಕಗಳು. ದಿ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ವಿವರಿಸುವುದು: “ಕಪ್ಪಾದ, ನೆರಳಾದ, ಒದ್ದೆಯಾದ, ಕ್ಷೀಣಿಸುವ, ಬಗ್ಗುವ, ಜಡವಾದ ಮತ್ತು ಹೆಣ್ಣು ಜಾತಿಯಲ್ಲಿ ಯಿನ್ ಘಟಕ ಪ್ರಧಾನವಾಗಿರುವ ಶುಭ್ರವಾದ, ಬೆಚ್ಚಗಿನ, ಒಣಗಿದ, ವೃದ್ಧಿಯಾಗುವ. ನುಗ್ಗುಪ್ರವೃತ್ತಿಯ ಮತ್ತು ಜಗ್ಗದ, ದಿವ್ಯ ಮತ್ತು ಗಂಡುಜಾತಿ ಯಾಂಗ್ ಆಗಿದೆ.” ಈ ಸೂತ್ರದ ಒಂದು ಪ್ರಯೋಗವು ಕನ್ನಡದಲ್ಲಿ ಆಕಾರಪ್ರಶ್ನೆಯೆಂದು ಕರೆಯಲ್ಪಡುವ ಚೈನೀಸ್ ಕಣಿರೂಪವಾದ ಫೆಂಗ್ ಷುಯ್ಯಲ್ಲಿ ಕಂಡುಬರುತ್ತದೆ. ಪಟ್ಟಣ ಮತ್ತು ಮನೆಗಳಿಗೆ ಮತ್ತು ವಿಶೇಷವಾಗಿ ಸಮಾಧಿಗಳಿಗೆ ಶುಭಸೂಚಕವಾದ ಸ್ಥಳಗಳನ್ನು ಕಂಡುಹಿಡಿಯಲು ಇದನ್ನು ಉಪಯೋಗಿಸಲಾಗುತ್ತದೆ. ಒಂದು ಸ್ಥಳದ ಯಿನ್ ಯಾಂಗ್ ಶಕ್ತಿಗಳನ್ನು ಅದರ ನಿವಾಸಿಗಳ ಶಕ್ತಿಗಳೊಂದಿಗೆ ಹೊಂದಿಸುವುದಾದರೆ ನಿವಾಸಿಗಳಿಗೆ ಹಿತವಾಗುವುದು ಎಂದು ವಾದಿಸಲಾಗುತ್ತದೆ. ಪ್ರಿನ್ಸ್ಟನ್ ಯೂನಿವರ್ಸಿಟಿಯ ಹೆಲೆನ್ ಹಾರ್ಡೇಕರ್ ಹೇಳುವುದು: “ವಿಶ್ವಶಕ್ತಿಗಳ [ಸರಿಯಾದ] ಸಂಯೋಗವು ಮೃತರಿಗೆ ಲಾಭ ತರುತ್ತದೆ ಮತ್ತು ಆ ಲೋಕದಲ್ಲಿ ಅವರು ಪ್ರಗತಿಹೊಂದುವಂತೆ ಅನುಕೂಲಮಾಡುತ್ತದೆಂದು ನಂಬಲಾಗುತ್ತದೆ.”
ಈ ಯಿನ್-ಯಾಂಗ್ ಶಕ್ತಿಗಳನ್ನು ಸಮತೆಯಲ್ಲಿಡಲು ಪ್ರಯತ್ನಿಸುವಾಗ, ಅವುಗಳ ಪ್ರಾಕೃತಿಕ ಸ್ಥಿತಿಯನ್ನು ಬಲಾತ್ಕಾರದಿಂದ ಬದಲಾಯಿಸಬಾರದು. ಇದು ಪ್ರತಿಉತ್ಪನ್ನಕಾರಕವೆಂದು ಎಣಿಸಲಾಗುತ್ತದೆ. ಇದು ನಿವೃತ್ತಿಭಾವವಾದವನ್ನು ಪ್ರೋತ್ಸಾಹಿಸುತ್ತದೆ. 1986ರಲ್ಲಿ, ಒಬ್ಬ ವೃದ್ಧ ಸಂನ್ಯಾಸಿ ಇದನ್ನು ಹೀಗೆ ವಿವರಿಸಿದನು: “ಟಾವ್ ಬೋಧನೆ ಸುಮ್ಮನಿರು, ಏನೂ ಮಾಡಬೇಡ ಎಂದಾಗಿದೆ. ಏನೂ ಮಾಡದಿರುವುದರಲ್ಲಿ ಸರ್ವವನ್ನು ಮಾಡುವುದು ಹೊಂದಿಕೊಂಡಿದೆ.” ಈ ಕಾರಣದಿಂದ ಟಾವ್ ಧರ್ಮದ ಶಕ್ತಿ, ಯಾವುದು ಮೃದುವಾಗಿದ್ದರೂ ಸರ್ವ ಜೀವಿಗಳಿಗೆ ಪ್ರಯೋಜನ ನೀಡುತ್ತದೋ ಆ ಜಲಕ್ಕೆ ಹೋಲಿಸಲ್ಪಟ್ಟಿದೆ.
ಹಿಂದೆ, ಟಾವ್ ತತ್ವಜ್ಞಾನ (ಸಾ.ಶ.ಪೂ.4⁄3 ಶತಕ) ಮತ್ತು ಟಾವ ಧರ್ಮ (ಸಾ.ಶ.2⁄3 ಶತಕ)ದ ಮಧ್ಯೆ ವ್ಯತ್ಯಾಸ ತೋರಿಸುವುದು ಒಂದು ವಾಡಿಕೆಯಾಗಿತ್ತು. ಈಗ ಈ ಭಿನ್ನತೆ ಅಷ್ಟು ಸ್ಪಷ್ಟವಾಗಿರುವುದಿಲ್ಲ ಏಕೆಂದರೆ ಟಾವ್ ಧರ್ಮ ಅದರ ಮೊದಲೇ ಇದ್ದ ಟಾವ್ ತತ್ವಜ್ಞಾನದಿಂದ ಹುಟ್ಟಿದೆಯೆಂಬುದು ವ್ಯಕ್ತ. ಧರ್ಮದ ಪ್ರೊಫೆಸರ್ ಹಾನ್ಸ್-ಜೋಕಿಮ್ ಷೊಪ್ಸ್ ಎಂಬವರಿಗನುಸಾರ ಟಾವ್ ಧರ್ಮ “ಪುರಾತನ ಚೈನೀಸ್ ಜನಧರ್ಮದ ಮುಂದುವರಿಕೆಯೇ ಹೊರತು ಮತ್ತೇನೂ ಅಲ್ಲ. ಅದರ ತಿರುಳು ಪ್ರೇತವ್ಯವಹಾರದ ಒಂದು ಸರಳ ರೂಪ. . .[ಪ್ರೇತಗಳು] ಎಲ್ಲೆಲ್ಲಿಯೂ ಇದ್ದು ಮಾನವ ಜೀವ ಮತ್ತು ಆರೋಗ್ಯಕ್ಕೆ ಸದಾ ಹಾನಿ ತರುತ್ತವೆ. . .ಇಂದಿನ ಚೈನಾದಲ್ಲಿ ಟಾವ್ ಧರ್ಮ ಜನರ ಮೂಢನಂಬಿಕೆಯ ಧಾರ್ಮಿಕರೂಪವಾಗಿ ಅವನತಿ ಹೊಂದಿವೆ.”
ಶಿಂಟೊ — ಕಾಮಿಯ ಮಾರ್ಗ
ಜಪಾನ್ ದೇಶ ಪುರಾತನದ ಸಾಂಪ್ರದಾಯಿಕವಾದ ಇನ್ನೊಂದು ಧರ್ಮಕ್ಕೂ ಹೆಸರುವಾಸಿಯಾಗಿದೆ. ಒಬ್ಬ ಲೇಖಕನು ವರ್ಣಿಸಿದಂತೆ ಇದು, “ಬಹುದೇವತೆಗಳಿರುವ ಪ್ರಕೃತಿ ಮತ್ತು ಪೂರ್ವಿಕರ ಆರಾಧನೆ”ಯ ಮಿಶ್ರಣ. ಮೊದಲಲ್ಲಿ, ಈ ಕುಲಧರ್ಮಕ್ಕೆ ಹೆಸರಿರಲಿಲ್ಲ. ಆದರೆ, ಸಾ.ಶ. ಆರನೆಯ ಶತಮಾನದಲ್ಲಿ, ಬೌದ್ಧ ಧರ್ಮ ಜಪಾನಿಗೆ ಬಂದಾಗ ಅದಕ್ಕೆ ಬುಟ್ಸುಡೊ ಅಂದರೆ “ಬುದ್ಧನ ಮಾರ್ಗ” ಎಂಬ ಹೆಸರು ಕೊಡಲಾಯಿತು. ಹೀಗೆ, ಇದನ್ನು ಮತ್ತು ಸ್ವದೇಶದ ಧರ್ಮವನ್ನು ಪ್ರತ್ಯೇಕಿಸಲಿಕ್ಕಾಗಿ, ಈ ನಾಡಿಗ ಧರ್ಮ ಸ್ವಲ್ಪದರಲ್ಲಿ ಶಿಂಟೊ, “ಕಾಮಿಯ ಮಾರ್ಗ” ಎಂದು ಪ್ರಸಿದ್ಧವಾಯಿತು.
ಕಾಮಿ (ವಿವಿಧ ದೇವ, ದೇವತೆಗಳು) ಶಿಂಟೊ ಧರ್ಮದ ಕೇಂದ್ರ. ಕಾಮಿ ಅತಿಲೌಕಿಕ ಶಕ್ತಿ ಅಥವಾ ದೇವರು, ಪ್ರಕೃತಿ ದೇವರುಗಳು, ಪ್ರಸಿದ್ಧ ಪುರುಷರು, ದೇವತ್ವಕ್ಕೇರಿಸಲ್ಪಟ್ಟ ಪೂರ್ವಿಕರು ಮತ್ತು “ಒಂದು ಆದರ್ಶವನ್ನು ಸೂಚಿಸುವ ಅಥವಾ ಭಾವನಾರೂಪದ ಶಕ್ತಿಯನ್ನು ಸೂಚಿಸುವ ದೇವತ್ವವನ್ನೂ” ಸೂಚಿಸುವಂಥದ್ದಾಗಿ ಪರಿಣಮಿಸಿತು.(ದಿ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್) ಯಾವಯೊರೊಸು-ನೊ-ಕಾಮಿ ಎಂಬ ಪದದ ಅಕ್ಷರಾರ್ಥ, 80 ಲಕ್ಷ ದೇವರುಗಳು ಎಂದಾಗಿರುವುದಾದರೂ ಶಿಂಟೊ ಧರ್ಮದ ದೇವತೆಗಳು ಹೆಚ್ಚುತ್ತಾ ಬರುವುದರಿಂದ, ಈ ಪದ “ಅನೇಕ ದೇವರುಗಳ”ನ್ನು ಸೂಚಿಸಲು ಉಪಯೋಗಿಸಲ್ಪಡುತ್ತದೆ. ಮನುಷ್ಯರು ಕಾಮಿಯ ಮಕ್ಕಳಾಗಿರುವುದರಿಂದ ಅವರಿಗೆ ಪ್ರಧಾನವಾಗಿ ದೈವಿಕ ಸ್ವಭಾವವಿದೆ. ಆದುದರಿಂದ, ಕಾಮಿಗೆ ಅನುಸಾರವಾಗಿ ಜೀವಿಸುವಲ್ಲಿ ನಿಮಗೆ ಅವರಿಂದ ಸಂರಕ್ಷಣೆಯೂ ಮನ್ನಣೆಯೂ ದೊರೆಯುತ್ತದೆ.
ಶಿಂಟೊ ಧರ್ಮ, ಸಿದ್ಧಾಂತ ಮತ್ತು ದೇವತಾಶಾಸ್ತ್ರ ಬಲಾಢ್ಯವಾಗಿರುವುದಿಲ್ಲವಾದರೂ ಅದು ಜಪಾನಿಯರಿಗೆ ನೈತಿಕ ಸೂತ್ರಗಳನ್ನು ಕೊಟ್ಟು ಅವರ ವರ್ತನೆಗಳನ್ನು ನಿಯಂತ್ರಿಸಿ, ಅವರ ಆಲೋಚನಾ ವಿಧಗಳನ್ನು ನಿರ್ಣಯಿಸಿದೆ. ಅದು ಅವರಿಗೆ ಬೇಕಾದಾಗ ಆರಾಧಿಸಲು ಗುಡಿಗಳನ್ನು ಒದಗಿಸುತ್ತದೆ.
ಶಿಂಟೊ ಧರ್ಮದ ಪ್ರಧಾನ ವಿಧಗಳ ಮಧ್ಯೆ ಸಂಬಂಧವಿದೆ. ಗುಡಿ ಶಿಂಟೊ ಮತ್ತು ಸಾಂಪ್ರದಾಯಿಕ ಶಿಂಟೊಗಳ ಮಧ್ಯೆ ವಿಶೇಷ ವ್ಯತ್ಯಾಸಗಳು ಕಡಮೆ. ಆದರೆ ಪಂಥ ಶಿಂಟೊದಲ್ಲಿ, 19ನೆಯ ಶತಮಾನದಲ್ಲಿ ಸ್ಥಾಪಿಸಲ್ಪಟ್ಟ 13 ಪಂಥಗಳು ಸೇರಿವೆ. ಇವುಗಳಲ್ಲಿ ಕನ್ಫೂಶಿಯನ್ ಧರ್ಮ, ಬೌದ್ಧ ಧರ್ಮ ಮತ್ತು ಟಾವ್ ಧರ್ಮದ ಅಂಶಗಳು ವಿವಿಧ ಪರಿಮಾಣಗಳಲ್ಲಿ ಸೇರಿವೆ.
ಶಿಂಟೊ ಧರ್ಮದ ಮೇಲೆ ಬೌದ್ಧ ಪ್ರಭಾವ ಬಲವಾಗಿ ಬಿದ್ದಿದೆ. ಈ ಕಾರಣದಿಂದಲೇ ಅನೇಕ ಜಪಾನಿಯರು ಬೌದ್ಧರೂ ಶಿಂಟೊಗಳೂ ಆಗಿದ್ದಾರೆ. ಒಂದು ಸಾಂಪ್ರದಾಯಿಕ ಜಪಾನೀ ಮನೆಯಲ್ಲಿ ಎರಡು ಬಲಿಪೀಠಗಳಿವೆ, ಒಂದು ಕಾಮಿಯನ್ನು ಗೌರವಿಸಲು ಶಿಂಟೊ ಬಲಿಪೀಠ. ಇನ್ನೊಂದು ಪೂರ್ವಿಕರನ್ನು ಸನ್ಮಾನಿಸಲು ಬೌದ್ಧ ಬಲಿಪೀಠ. ಕೀಕೊ ಎಂಬ ಜಪಾನಿ ಯುವತಿ ಹೇಳುವುದು: “ನಾನು ಪೂರ್ವಿಕರಿಗೆ ತೋರಿಸಬೇಕಾದ ಸನ್ಮಾನವನ್ನು ಬೌದ್ಧ ಧರ್ಮದ ಮೂಲಕ ತೋರಿಸುತ್ತೇನೆ. . . .ನಾನು ಜಪಾನೀಯಳು. ಎಲ್ಲಾ ಶಿಂಟೊ ಸಂಸ್ಕಾರಗಳನ್ನೂ ನಡಿಸುತ್ತೇನೆ.” ಆ ಬಳಿಕ ಅವಳು ಹೇಳುವುದು: “ಮತ್ತು ಕ್ರೈಸ್ತ ವಿವಾಹ ಬಹಳ ಸೊಗಸೆಂದು ನನ್ನ ಎಣಿಕೆ. ಇದು ವಿರೋಧೋಕ್ತಿ, ನಿಜ. ಆದರೆ ಅದರಲ್ಲಿ ಏನಂತೆ?”
ಚೊಂಡೊಗ್ಯೊ — ಕೊರಿಯದ ಸರ್ಗೀಯ ಪಥ ಧರ್ಮ
ಕೊರಿಯದ ಮುಖ್ಯ ಕ್ರೈಸ್ತೇತರ ಧರ್ಮಗಳಲ್ಲಿ ಟಾವ್ ಧರ್ಮ ಸೇರಿದ ಬೌದ್ಧ ಧರ್ಮ ಮತ್ತು ಕನ್ಫೂಶಿಯನ್ ಧರ್ಮಗಳು ಸೇರಿವೆ. ಇವು ಚೈನಾದಿಂದ ಬಂದ ಮೇಲೆ ಕೊರಿಯದ ಜನಧರ್ಮವಾದ ಶಾಮನ್ ಧರ್ಮದಿಂದ ಪ್ರಭಾವಿತವಾದವು. ಮತ್ತು ದಿ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಗನುಸಾರವಾಗಿ ಅವನ್ನು “ಕೊರಿಯ ದ್ವೀಪಕಲ್ಪದಲ್ಲಿದ್ದ ಸಾಮಾಜಿಕ ಹಾಗೂ ಬುದ್ಧಿಶಕ್ತಿಯ ಸ್ಥಿತಿಗತಿಗೆ ವಿವಿಧ ಪರಿಣಾಮದಲ್ಲಿ ಆಯ್ದುಕೊಳ್ಳಲಾಗಿ, ರೂಪಾಂತರಿಸಲಾಗಿ ಹೊಂದಿಸಲಾಯಿತು.”a
ಕೊರಿಯದ ಇನ್ನೊಂದು ಧರ್ಮ “ಸ್ವರ್ಗೀಯ ಪಥ ಧರ್ಮ”ವಾದ ಚೊಂಡೊಗ್ಯೊ. ಇದು 1905ರಿಂದ ಹಿಡಿದು ಇದರ ಹೆಸರು. 1860ರಲ್ಲಿ ಚೋಯಿ ಸೂನ್ (ಚ್ಯೂ) ಎಂಬವನಿಂದ ಸ್ಥಾಪಿಸಲ್ಪಟ್ಟ ಇದು ಆದಿಯಲ್ಲಿ ಟೊಂಗಕ್, “ಪ್ರಾಚ್ಯ ವಿದ್ಯೆ” ಎಂದು ಕರೆಯಲ್ಪಟ್ಟಿತು. ಸೋಹಕ್, ಅಂದರೆ “ಪಾಶ್ಚಾತ್ಯ ವಿದ್ಯೆ” ಎಂದು ಕರೆಯಲ್ಪಡುವ ಕ್ರೈಸ್ತತ್ವವನ್ನು ಪ್ರತಿಕೂಲಿಸಲು ಈ ಚೊಂಡೊಗ್ಯೊವನ್ನು ಅಂಶಿಕವಾಗಿ ಬೆಳೆಸಲಾಯಿತು. ಜರ್ಮನ್ ಲೇಖಕ ಜೆರಾಲ್ಡ್ ಬೆಲಿಂಜರ್ ಎಂಬವರಿಗನುಸಾರ ಚೊಂಡೊಗ್ಯೊ “ಕನ್ಫೂಶಿಯನ್ ಮಾನವ ದಯೆ ಮತ್ತು ನ್ಯಾಯ, ಟಾವ್ ಧರ್ಮದ ಅನಾಸಕ್ತ ಗುಣ ಮತ್ತು ಬೌದ್ಧ ಧರ್ಮದ ಅನುಕಂಪ”ವನ್ನು ಬೆರೆಸಲು ಪ್ರಯತ್ನಿಸಿತು. ಅದರ ಸ್ಥಾಪಕನ ಉದ್ದೇಶ ಇದೇ ಆಗಿತ್ತು. ಚೊಂಡೊಗ್ಯೊದಲ್ಲಿ ಶಾಮನ್ ಮತ್ತು ರೋಮನ್ ಕ್ಯಾಥಲಿಕ್ ಧರ್ಮದ ಅಂಶಗಳೂ ಇವೆ. ಇದು ಧಾರ್ಮಿಕ ಏಕತೆಯನ್ನು ಬೆಳೆಸುತ್ತದೆಂದು ವಾದಿಸುತ್ತದಾದರೂ 1935ರೊಳಗೆ ಇದು 17 ಪುತ್ರಿ ಪಂಥಗಳನ್ನು ಹುಟ್ಟಿಸಿತು.
ಸ್ವರ್ಗೀಯ ಪಥಧರ್ಮದ ಮುಖ್ಯ ನಂಬಿಕೆ ಏನಂದರೆ ಮನುಷ್ಯನು ಸಾರಭೂತವಾಗಿ, ದೇವರ ಭಾಗವಾಗಿದ್ದು ದೈವಿಕನಾಗಿದ್ದಾನೆ. ಸೈನ್ಯಾಚೊನ್ (“ಮನುಷ್ಯನನ್ನು ದೇವರಂತೆ ಕಾಣು”) ಎಂಬುದು ಇದರ ಪ್ರಧಾನ ನೀತಿ ತತ್ವ. ಜೊತೆ ಮನುಷ್ಯರನ್ನು “ತೀರಾ ಚಿಂತೆ, ಸನ್ಮಾನ, ಯಥಾರ್ಥತೆ, ಗೌರವ, ಸಮಾನತೆ ಮತ್ತು ನ್ಯಾಯ”ದಿಂದ ಕಾಣಲೇಬೇಕೆಂದು ಇದು ಕೇಳಿಕೊಳ್ಳುತ್ತದೆಂದು ರೋಹ್ಡ್ ಐಲೆಂಡ್ ಯೂನಿವರ್ಸಿಟಿಯ ಯಾಗ್ ಚೂನ್ ಕಿಮ್ ಎಂಬವರು ತಿಳಿಸುತ್ತಾರೆ.
ಈ ಉನ್ನತ ಸೂತ್ರಗಳಿಂದ ಸಮಾಜ ಕ್ರಮವನ್ನು ಬದಲಾಯಿಸಲು ಮಾಡಿದ ಪ್ರಯತ್ನದಿಂದಾಗಿ ಸೂನನು ಸರಕಾರದ ಎದುರಾಳಿಯಾದನು. ರಾಜಕೀಯದೊಳಗೆ ತಲೆಹಾಕುವಿಕೆಯು ಅವನನ್ನೂ ಅವನ ಉತ್ತರಾಧಿಕಾರಿಯನ್ನೂ ಮರಣಶಿಕ್ಷೆಗೊಳಪಡಿಸಿತು. ಇದು 1894ರ ಚೀನೀ—ಜಪಾನ್ ಯುದ್ಧವನ್ನೂ ಉದ್ರೇಕಿಸಿತು. ವಾಸ್ತವವೇನಂದರೆ, ಕೊರಿಯದ ಹೊಸ ಧರ್ಮಗಳ ಒಂದು ಲಕ್ಷಣ ರಾಜಕೀಯ ಚಟುವಟಿಕೆಯೇ. ಟೊಂಗಕ್ ಇದರಲ್ಲಿ ಮೊದಲನೆಯದು ಮಾತ್ರ—ಲೋಕ ಪ್ರಾಧಾನ್ಯತೆಯಲ್ಲಿ ಭಾವೀಸ್ಥಾನ ಕೊರಿಯಕ್ಕೆ ಇರಬೇಕೆಂದು ಹೇಳಿ ರಾಷ್ಟ್ರೀಯತೆಯೇ ಅನೇಕ ವೇಳೆ ಇವುಗಳ ಮುಖ್ಯ ವಿಷಯವಾಗಿದೆ.
ಯಾವ “ಮಾರ್ಗ” ಜೀವಕ್ಕೆ ನಡಿಸುತ್ತದೆ?
ಏಷ್ಯಾದ ಅನೇಕರು, ಯಾವ ಧಾರ್ಮಿಕ “ಮಾರ್ಗ”ವನ್ನು ಒಬ್ಬನು ಅನುಸರಿಸುತ್ತಾನೆಂಬುದು ಅಧಿಕಾಂಶ ಅಪ್ರಧಾನವೆಂದು ಎಣಿಸುತ್ತಾರೆ. ಒಂದನೆಯ ಶತಮಾನದಲ್ಲಿ ಯಾರ ಧರ್ಮವು ಸಹ “ಮಾರ್ಗ”ವೆಂದು ಕರೆಯಲ್ಪಟ್ಟಿತೋ ಆ ಯೇಸು ಕ್ರಿಸ್ತನು ಸಕಲ ಧಾರ್ಮಿಕ “ಮಾರ್ಗಗಳೂ” ದೇವರಿಗೆ ಮೆಚ್ಚುಗೆಯಾಗಿವೆ ಎಂಬ ವೀಕ್ಷಣವನ್ನು ತಳ್ಳಿಹಾಕಿದ್ದನು. ಅವನು ಎಚ್ಚರಿಸಿದ್ದು: “ನಾಶಕ್ಕೆ ನಡೆಸುವ ದಾರಿ ಅಗಲವಾದ, ಧಾರಾಳ ಸ್ಥಳವಿರುವ ದಾರಿ; . . .ಆದರೆ ಜೀವಕ್ಕೆ ನಡೆಸುವ ದಾರಿ ಚಿಕ್ಕದು, ಇಕ್ಕಟ್ಟಾದದ್ದು, ಮತ್ತು ಅದನ್ನು ಕಂಡುಹಿಡಿಯುವವರು ಕೊಂಚ ಜನ.”—ಅಪೊಸ್ತಲರ ಕೃತ್ಯ 9:2; 19:9; ಮತ್ತಾಯ 7:13, 14; NEB; ಪಾದಟಿಪ್ಪಣಿ; ಜ್ಞಾನೋಕ್ತಿ 16:25; ಹೋಲಿಸಿ.
ಹೌದು, ಒಂದನೆಯ ಶತಮಾನದ ಯೆಹೂದ್ಯರಲ್ಲಿ ಬಹುತೇಕ ಜನರು ಅವನ ಮಾತುಗಳನ್ನು ಅಲಕ್ಷ್ಯಮಾಡಿದರು. ಯೇಸುವಿನಲ್ಲಿ ತಾವು ನಿಜ ಮೆಸ್ಸೀಯನನ್ನು ಮತ್ತು ಅವನ ಧರ್ಮದಲ್ಲಿ ನಿಜ “ಮಾರ್ಗ”ವನ್ನು ತಾವು ಕಂಡುಹಿಡಿದಿದ್ದೇವೆಂದು ಅವರು ಎಣಿಸಲಿಲ್ಲ. ಇಂದು, 19 ಶತಕಗಳು ತೀರಿದ ಮೇಲೆಯೂ ಅವರ ವಂಶಸ್ಥರು ಅವರ ಮೆಸ್ಸೀಯನಿಗಾಗಿ ಇನ್ನೂ ಕಾಯುತ್ತಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಇದೇಕೆಂದು ವಿವರಿಸುವುದು. (g89 5/8)
[ಅಧ್ಯಯನ ಪ್ರಶ್ನೆಗಳು]
a ಶಾಮನ್ ಧರ್ಮದ ಕೇಂದ್ರ ಶಾಮನ್ ಎಂಬ ಧಾರ್ಮಿಕ ಪುರುಷ. ಅವನು ಮಾಯಾವಿದ್ಯೆಯಿಂದ ರೋಗಗಳನ್ನು ವಾಸಿಮಾಡಿ ಆತ್ಮಲೋಕದೊಂದಿಗೆ ಮಾತಾನಾಡುತ್ತಾನಂತೆ.
[ಪುಟ 21 ರಲ್ಲಿರುವಚಿತ್ರ]
ಚೀನೀ ಜನಧರ್ಮದಲ್ಲಿ ಯುದ್ಧ ದೇವರಾದ ಮತ್ತು ವರ್ತಕವರ್ಗದವರ ರಕ್ಷಕ ಜನರಲ್ ಗುವಾನ್ಯು
ಎಡದಿಂದ: ಹಾನ್ ಕ್ಸಿಯಾಂಗ್ಸಿ, ಲೂ ಡಾಂಗ್ಟಿನ್ ಮತ್ತು ಲೀಗುವೈ—ಇವರು ಎಂಟು ಟಾವ್ ಅಮರ್ತ್ಯರಲ್ಲಿ ಮೂವರು—ಮತ್ತು ಶೂಲಾನ್ ಎಂಬ ದೀರ್ಘಾಯುಷ್ಯದ ನಕ್ಷತ್ರ ದೇವರು
[ಕೃಪೆ]
Courtesy of the British Museum
[ಪುಟ 23 ರಲ್ಲಿರುವಚಿತ್ರ]
ಶಿಂಟೊ ಗುಡಿಯಲ್ಲಿ ಅನೇಕ ಪ್ರತಿಮೆಗಳು ಕಂಡುಬರುತ್ತವೆ. ಎಡಬದಿಯ ಪಾಲಕ ನಾಯಿ ದೆವ್ವಗಳನ್ನು ಓಡಿಸುತ್ತದೆ ಎಂದು ಯೋಚಿಸಲಾಗುತ್ತದೆ
ಟೋಕಿಯೊದ ಯುಷೀಮ ಟೆಂಜಿನ್ ಗುಡಿಯಲ್ಲಿ ವಿದ್ಯಾರ್ಥಿಗಳು ಹೆತ್ತವರೊಂದಿಗೆ ಪರೀಕ್ಷಾ ಸಾಫಲ್ಯಕ್ಕಾಗಿ ಪ್ರಾರ್ಥಿಸುತ್ತಾರೆ