ಫ್ರೆಂಚ್ ಕ್ರಾಂತಿ—ಬರಲಿರುವ ಸಂಗತಿಗಳ ಒಂದು ಪೂರ್ವಭಾವಿಪ್ರಭೆ
ಎವೇಕ್! ನ ಫ್ರಾನ್ಸಿನ ಬಾತ್ಮಿದಾರನಿಂದ
ಫ್ರೆಂಚ್ ಕ್ರಾಂತಿಯು 200 ವರ್ಷಗಳ ಹಿಂದೆ, 1789 ರಲ್ಲಿ ನಡೆಯಿತು. ಅದಕ್ಕೆ ಕಾರಣಗಳೇನು? ಬರಲಿರುವ ಸಂಗತಿಗಳ ಯಾವ ಉದಾಹರಣೆಯನ್ನು ಅದು ಬಿಟ್ಟುಹೋಗಿದೆ?
“ಇದೊಂದು ದಂಗೆಯೋ?” ವಿಚಾರಿಸಿದನು ಅರಸನು.
“ಇಲ್ಲ, ಮಹಾಸ್ವಾಮೀ, ಇದೊಂದು ಕ್ರಾಂತಿ.”
ಜುಲೈ 14, 1789 ರಲ್ಲಿ, ಪ್ಯಾರಿಸ್ನ ಬ್ಯಾಸಿಲ್ನ್ನು ಮುತ್ತಿಗೆ ಹಾಕಿದ ದಿನ, ಈ ಪ್ರಶ್ನೆಯನ್ನು ಫ್ರೆಂಚ್ ಅರಸ 16ನೇ ಲೂಯಿಸ್ ಕೇಳಿದನು. ಫ್ರಾನ್ಸಿನಲ್ಲಿ ಬಾಳುವ ಬದಲಾವಣೆಗಳನ್ನು ತರುವ ಮತ್ತು ಬರಲಿರುವ ಸಂಗತಿಗಳ ಒಂದು ಪೂರ್ವಭಾವಿ ಪ್ರಭೆಯನ್ನು ಒದಗಿಸುವ ಘಟನೆಗಳನ್ನು ಫ್ರೆಂಚ್ ರಾಜಮನೆತನವು ಅಂಗೀಕರಿಸಲು ಅಶಕ್ಯವೆಂದು ಅವನು ತೋರಿಸಿದನು.
18ನೇ ಶತಮಾನದಲ್ಲಿ ಹಸಿವೆಯ ಕಾರಣ ಪ್ರಾನ್ಸಿನಲ್ಲಿ ಅನೇಕ ದಂಗೆಗಳು ಈಗಾಗಲೇ ನಡೆದಿದ್ದವು. ಕ್ರಾಂತಿಯ ಪೂರ್ವಭಾವಿಯಾಗಿ, ಜೀವದಿಂದುಳಿಯಲಿಕ್ಕಾಗಿ 2 ಕೋಟಿ 50 ಲಕ್ಷ ಜನಸಂಖ್ಯೆಯಲ್ಲಿ 1 ಕೋಟಿ ಜನರು ಭಿಕ್ಷಾದಾನದಲ್ಲಿ ಆತುಕೊಂಡಿದ್ದರು. ಇದಕ್ಕೆ ಕೂಡಿಸಿ, ರಾಜಮನೆತನದ ಶಕ್ತಿಯು ಜೀರ್ಣಿಸುತ್ತಾ ಇತ್ತು, ಸುಧಾರಣೆಗಳೆಡೆಗೆ ಆಡಳಿತ ಯಂತ್ರವು ನಿರ್ಲಕ್ಷತೆಯದ್ದಾಗಿತ್ತು. ರಾಷ್ಟ್ರೀಯ ಅಭಿರುಚಿಗಳಿಗಿಂತ ಅರಸನ ಅಧಿಕಾರವು ಶ್ರೇಷ್ಟವಾಗಿರಬೇಕೋ ಎಂದು ಬುದ್ಧಿವಂತ ವರ್ಗದವರು ಪ್ರಶ್ನಿಸಲಾರಂಭಿಸಿದರು.
ಶಾಸನ ಸಭೆಗಳು
1788 ರಲ್ಲಿ ಅಧಿಕ ಸಂಕಟವು ರಾಜ್ಯಾಡಳಿತಕ್ಕೆ ಬಂದೊದಗಿತು. ಕಾರಣ ಬ್ರಿಟನಿನ ವಿರುದ್ಧ ಸ್ವತಂತೆಯ ಯುದ್ಧಕ್ಕೆ ಅಮೆರಿಕನರಿಗೆ ಫ್ರೆಂಚರು ಬೆಂಬಲ ನೀಡಿದ್ದರಿಂದಲೇ. ಶಾಸನ ಸಭೆಗಳೆಂದು ಕರೆಯಲ್ಪಡುವ ಸ್ಟೇಟ್ಸ್ ಜನರಲ್ನ್ನು ಒಟ್ಟು ಸೇರಿಸುವ ಹಂಗಿಗೆ ಅರಸನು ಬಿದ್ದನು. ಇದು ರಾಷ್ಟ್ರದ ಮೂರು ವರ್ಗದ ಪ್ರತಿನಿಧಿಗಳಿಂದ ಮಾಡಲ್ಪಟ್ಟಿತ್ತು: ಧಾರ್ಮಿಕ ಪ್ರಭುಗಳು (ಮೊದಲ ದರ್ಜೆ); ಲೌಕಿಕ ಪ್ರಭುಗಳು (ಎರಡನೆ ದರ್ಜೆ); ಮತ್ತು ಜನಸಾಮಾನ್ಯರು (ಮೂರನೆಯ ದರ್ಜೆ).
ಧರ್ಮಪ್ರಭುಗಳು ಕೇವಲ 1,50,000 ಮಂದಿ, ಲೌಕಿಕ ಪ್ರಭುಗಳು ಸುಮಾರು 5,00,000 ಮಂದಿ ಮತ್ತು ಮೂರನೆ ದರ್ಜೆಯವರು 2,45,00,000 ಮಂದಿಯನ್ನು ಪ್ರತಿನಿಧಿಸಿದ್ದರು. ಮೂರು ವರ್ಗದ ಪ್ರತಿಯೊಬ್ಬನಿಗೆ ಒಂದು ಮತ (ವೋಟ್) ಇತ್ತು. ಇದರ ಅರ್ಥ ಜನಸಾಮಾನ್ಯರು (ಒಂದು ಮತ) ಒಂದು ವೇಳೆ ಧಾರ್ಮಿಕ ಮತ್ತು ಲೌಕಿಕ ಪ್ರಭುಗಳು (ಎರಡು ಮತಗಳು) ಒಪ್ಪದಿದ್ದರೆ ಯಾವುದೇ ಒಂದು ಸುಧಾರಣೆಯನ್ನು ತರಶಕ್ತರಿರಲಿಲ್ಲ. ಆದದರಿಂದ ಧಾರ್ಮಿಕ ಪ್ರಭುಗಳು ಮತ್ತು ಲೌಕಿಕ ಪ್ರಭುಗಳು—ಜನಸಂಖ್ಯೆಯ ಕೇವಲ ಮೂರು ಶೇಕಡಾ—ಬೇರೆ 97 ಶೇಕಡಾದವರನ್ನು ಹೆಚ್ಚು ಮತದಿಂದ ಸೋಲಿಸಬಹುದಿತ್ತು! ಇದಲ್ಲದೆ, ಧಾರ್ಮಿಕ ಪ್ರಭುಗಳು ಮತ್ತು ಲೌಕಿಕ ಪ್ರಭುಗಳು ದೇಶದ ಶೇಕಡಾ 36 ಪಟ್ಟು ಆಸ್ತಿ ಹೊಂದಿದವರಾಗಿದ್ದು ಆಸ್ತಿಯ ಕರವನ್ನು ನೀಡಲಿಕ್ಕಿರಲಿಲ್ಲ.
ಇಷ್ಟೊಂದು ಜನರು ಹಸಿದಿರುವಾಗ, ಜನಸಾಮಾನ್ಯರ ಪ್ರತಿನಿಧಿಗಳು ಸರಕಾರದ ನಿರಂಕುಶ ಪ್ರಭುತ್ವವನ್ನೂ, ಅನ್ಯಾಯ ಕರವಿಧಿಸುವಿಕೆ ಮತ್ತು ಮತದಾನದ ವ್ಯವಸ್ಥೆಯನ್ನು, ಕಥೋಲಿಕ ಪುರೋಹಿತ ಪ್ರಭುತ್ವದ ಮತ್ತು ಲೌಕಿಕ ಪ್ರಭುಗಳ ಅನ್ಯಾಯಗಳನ್ನೂ ಐಶ್ವರ್ಯವಂತಿಕೆಯನ್ನೂ ಖಂಡಿಸಿತು. ಆದಾಗ್ಯೂ, ಅರಸನು ತಾನು ಭದ್ರನಾಗಿರುವೆನೆಂದು ನೆನಸಿದನು, ಯಾಕೆಂದರೆ ದೈವಿಕ ಹಕ್ಕಿನಿಂದ ತಾನು ಆಳುತ್ತೇನೆಂದು ಅವನು ಯೋಚಿಸಿದ್ದನು. ಮತ್ತು ಜನರಿಗೆ ಇನ್ನೂ ಕಥೋಲಿಕ ಧರ್ಮದಲ್ಲಿ ವಿಶ್ವಾಸವಿತ್ತು. ಆದರೂ, ನಾಲ್ಕು ವರ್ಷಗಳೊಳಗೆ ರಾಜಮನೆತನವು ಉರುಳಿಸಲ್ಪಟ್ಟಿತು ಮತ್ತು ಅಕ್ರೈಸ್ತರನ್ನಾಗಿ ಮಾಡುವ ಕ್ರಮ ವಿಧಾನವು ಮುನ್ನಗ್ಗಿಸಲ್ಪಟ್ಟಿತು.
1789ರ ವಸಂತಕಾಲದಲ್ಲಿ ಕ್ರಾಂತಿಯ ಕ್ರಮವಿಧಾನವು ಆರಂಭಿಸಲ್ಪಟ್ಟಿತು. ಚುನಾವಣೆಯ ಪದ್ಧತಿಯಲ್ಲಿ ಬದಲಾವಣೆಗಳನ್ನು ಸ್ವೀಕರಿಸಲು ಲೌಕಿಕ ಪ್ರಭುಗಳು ನಿರಾಕರಿಸಿದ ಕಾರಣ, ಮೂರನೆ ದರ್ಜೆಯ ಅಧಿಕಾರಿಗಳು ಸ್ವತಹ ನ್ಯಾಶನಲ್ ಎಸೆಂಬ್ಲಿ (ರಾಷ್ಟ್ರೀಯ ಸಭೆ) ಎಂದು ಘೋಷಿಸಿದರು. ಇದು ಮಧ್ಯಮ ವರ್ಗದ ತರಗತಿಯ ವಿಜಯವಾಗಿಯೂ, ಪರಮ ರಾಜಮನೆತನದ ಆಳಿಕೆಯ ಅಂತ್ಯವಾಗಿಯೂ ಗುರುತಿಸಲ್ಪಟ್ಟಿತು.
ಆದಾಗ್ಯೂ, ರಾಜನೂ, ಶ್ರೀಮಂತ ವರ್ಗದವರೂ ಜತೆಸೇರಿ ಮೂರನೆ ವರ್ಗದವರನ್ನು ಉರುಳಿಸುವ ಹಂಚಿಕೆಯ ಹೆದರಿಕೆ ರೈತಾಪಿ ಜನರಲ್ಲುಂಟಾಯಿತು. ಇದು ಅರಮನೆಗಳನ್ನೂ ಜಹಗೀರುದಾರರ ಮನೆಗಳನ್ನೂ ಧ್ವಂಸಮಾಡುವಂತೆ ಜನರನ್ನು ನಡಿಸಿತು. ಇದು ಹೀಗೆ ಜನವರ್ಗದ ದಂಗೆಯಾಗಿ ಪರಿವರ್ತಿತವಾಯಿತು. ಅಗೋಸ್ತು 4, 1789 ರ ರಾತ್ರಿ, ಶಿಸ್ತನ್ನು ಕಾಪಾಡಲಿಕ್ಕಾಗಿ, ಎಸೆಂಬ್ಲಿಯು ಕುಲೀನರ ಸುಯೋಗಗಳನ್ನೂ, ಊಳಿಗಮಾನ್ಯ ಪದ್ಧತಿಯ ಆಳ್ವಿಕೆಯನ್ನೂ ರದ್ದುಮಾಡಿತು. ಈ ರೀತಿ ಕೆಲವೇ ದಿನಗಳಲ್ಲಿ, ಹಳೆಯ ರಾಜಕೀಯ ತಳಪಾಯವು ಧೂಳೀಪಟ ಹೊಂದಿತು.
ಮಾನವ ಹಕ್ಕುಗಳು
ಅನಂತರ ಎಸೆಂಬ್ಲಿಯು ಮಾನವನ ಹಕ್ಕುಗಳ ಘೋಷಣೆಯನ್ನು ಪ್ರಸ್ತಾಪಿಸಿತು. ಸ್ವಾತಂತ್ರ್ಯ, ಸಮಾನತೆ, ಮತ್ತು ಭ್ರಾತೃಭಾವದ ಧ್ಯೇಯಗಳು ಘೋಷಿಸಲ್ಪಟ್ಟವು. ಧಾರ್ಮಿಕ ಮತ್ತು ಅಭಿವ್ಯಕ್ತಿಸುವ ಸ್ವಾತಂತ್ರ್ಯದ ಹಕ್ಕುಗಳನ್ನು ಅಂಗೀಕರಿಸುವ 10 ಮತ್ತು 11ನೆಯ ಪ್ರಕರಣಗಳನ್ನು ಸೇರಿಸುವ ಮೊದಲು ವೈದಿಕರ ವಿರೋಧವನ್ನು ಎಸೆಂಬ್ಲಿಯು ಜಯಿಸಬೇಕಾಗಿತ್ತು.
ಅನೇಕರು, ತಾವು ಪರಿಪೂರ್ಣ ಸರಕಾರವೊಂದನ್ನು ಕಂಡುಕೊಂಡಿದ್ದೇವೆಂದು ನೆನಸಿದರು. ಆದಾಗ್ಯೂ ನಿರಾಶೆಗಾಗಿ ಅವರೀಗ ಸಿದ್ಧರಾಗಬೇಕಾಯಿತು, ಯಾಕಂದರೆ 6ನೇ ಪೋಪ್ ಪಿಯುಸ್ ರಿಂದ ಪ್ರತಿನಿಧಿಸಲ್ಪಟ್ಟ ಚರ್ಚು ಈ ಘೋಷಣೆಯನ್ನು ಖಂಡಿಸಿತು. ಅನೇಕ ಕ್ರಾಂತಿಕಾರರು ಈ ಘೋಷಣೆಯನ್ನು ತ್ಯಜಿಸಲಾರಂಭಿಸಿದರು, ಹೀಗೆ ಇದು ತಣಿಸಲಾರದ ರಕ್ತದ ದಾಹಕ್ಕೆ ಎಡೆಮಾಡಿಕೊಟ್ಟಿತು.
ಸುಮಾರು 150 ವರ್ಷಗಳ ನಂತರ, 1948 ರಲ್ಲಿ ಸಂಯುಕ್ತ ರಾಷ್ಟ್ರ ಸಂಘದ ಜನರಲ್ ಎಸೆಂಬ್ಲಿಯು 1789 ರಲ್ಲಿ ಫ್ರೆಂಚ್ ಮೂಲ ಪಾಠದಿಂದ ಪ್ರೇರಿಸಲ್ಪಟ್ಟ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಿತು. ಆದರೆ ಗತಕಾಲದಂತೆ ಇಂದು ಕೂಡಾ, ಅದರಲ್ಲಿ ಸೂಚಿತವಾದ ಸೂತ್ರಗಳಿಗೆ ತೀರಾ ಅಲಕ್ಷ್ಯವನ್ನು ತೋರಿಸಿ, ಅಂತಹ ಹಕ್ಕುಗಳಿಗೆ ಕೇವಲ ತುಟಿಯ ಸೇವೆಯನ್ನು ಮಾತ್ರ ಸಲ್ಲಿಸುತ್ತಾರೆ. ಪ್ರಸಂಗಿ 8:9ರ ಮಾತುಗಳು ಎಷ್ಟೊಂದು ಸತ್ಯ: “ಕೆಲವು ಮನಷ್ಯರಿಗೆ ಅಧಿಕಾರವಿದೆ ಮತ್ತು ಇತರರು ಅದರ ಅಡಿಯಲ್ಲಿ ಬಾಧೆಗೊಳಗಾಗಬೇಕಾಗಿದೆ.—ಟುಡೇಸ್ ಇಂಗ್ಲಿಷ್ ವರ್ಶನ್.
ಚರ್ಚು ವಿಭಜನೆಗೊಂಡಿತು
ಅಗೋಸ್ತು 1789 ರಲ್ಲಿ ಕೆಲವು ಅಧಿಕಾರಿಗಳು ಚರ್ಚನ್ನು ರಾಷ್ಟ್ರೀಕರಣಗೊಳಿಸುವ ಯೋಚನೆಯನ್ನು ಮಂಡಿಸಿದರು. ಈ ಪ್ರಸ್ತಾಪವು ಕಾನೂನಾಯಿತು ಮತ್ತು ಸರಕಾರವು ಚರ್ಚ್ ಆಸ್ತಿಯನ್ನು ಸ್ವಾಧೀನ ಮಾಡಿಕೊಂಡಿತು. ಇದಕ್ಕೆ ಕೂಡಿಸಿ, ವೈದಿಕರ ನಾಗರಿಕ ಸಂವಿಧಾನ (ಸಿವಿಲ್ ಕಾನ್ ಸ್ಟಿಟ್ಯೂಶನ್ ಆಫ್ ದಿ ಕ್ಲರ್ಜಿ) ಎಂಬದನ್ನು ತಯಾರಿಸಿ, ಅದಕ್ಕೆ ವೈದಿಕ ನಿಷ್ಣತೆಯ ಪ್ರಮಾಣ ತೆಗೆದುಕೊಳ್ಳುವಂತೆ ಎಸೆಂಬ್ಲಿಯು ಒಂದು ಹಂಗನ್ನಾಗಿ ಮಾಡಿತು.
ಚರ್ಚ್ ವಿಭಜಿತಗೊಂಡಿತು. ಅಲ್ಲಿ ಸರಕಾರದ ವೈದಿಕರು (ವೈದಿಕರಲ್ಲಿ 60 ಸೇಕಡಾ) ಪ್ರತಿಜ್ಞೆಯನ್ನು ಸ್ವೀಕರಿಸಿದರೆ, ರೋಮಿಗೆ ನಿಷ್ಟರಾಗಿ ನಿಂತು, ನಿಷ್ಠೆಯ ಪ್ರಮಾಣಮಾಡಲು ನಿರಾಕರಿಸಿದ ವೈದಿಕರೂ ಇದ್ದರು. ಈ ವಿಭಜನೆಯು ಅನೇಕ ಸಂಘರ್ಷಣೆಗಳಿಗೆ ನಡಿಸಿತು. ಪ್ರಮಾಣ ತೆಗೆದು ಕೊಳ್ಳಲು ನಿರಾಕರಿಸಿದ ವೈದಿಕರನ್ನು ಕೆಲವೊಮ್ಮೆ ಕ್ರಾಂತಿಯ ಮತ್ತು ದೇಶದ ವೈರಿಗಳೆಂದೂ ಪರಿಗಣಿಸಲಾಗುತಿತ್ತು.
ಭಯ ಮತ್ತು ರಕ್ತಪಾತ
ಬಾಹ್ಯ ಗಂಡಾಂತರಗಳು ಕೂಡಾ ಕ್ರಾಂತಿಗೆ ಬೆದರಿಕೆಯನ್ನೊಡ್ಡಿದ್ದವು. ವಿದೇಶಿ ರಾಜಮನೆತನದವರು ಅರಸನನ್ನು ಪುನ: ಸಿಂಹಾಸನಕ್ಕೇರಿಸಲು ಫ್ರೆಂಚ್ ವ್ಯವಹಾರಗಳಲ್ಲಿ ಮಧ್ಯ ಪ್ರವೇಶಿಸುವುದನ್ನು ಯೋಚಿಸುತ್ತಿದ್ದರು. 16ನೇ ಲೂಯಿಸ್ನಲ್ಲಿ ಜನಸಾಮಾನ್ಯರ ನಂಬಿಕೆಯು, ಅವನು ಜೂನ್ 21, 1791 ರಲ್ಲಿ ಪಲಾಯನ ಮಾಡಲು ಪ್ರಯತ್ನಿಸಿದಾಗ, ನಷ್ಟಗೊಂಡಿತು.
1792ರ ವಸಂತಕಾಲದಲ್ಲಿ, ಯುರೋಪಿನ ಇತರ ದೇಶಗಳಲ್ಲಿ ಕ್ರಾಂತಿಗೆ ವಿರೋಧವು ಏಳುವುದನ್ನು ಗಮನದಲ್ಲಿಟ್ಟು, ಫ್ರಾನ್ಸ್ ಬೊಹೆಮಿಯ ಮತ್ತು ಹಂಗೆರಿಯ ಅರಸನ ಮೇಲೆ ಯುದ್ಧ ಸಾರಿತು. ಯುದ್ಧವು ಯುರೋಪಿನಲ್ಲೆಲ್ಲಾ ಹಬ್ಬಿತು ಮತ್ತು 1799 ರ ತನಕ ನಡೆದು, 5,00,000 ಕ್ಕಿಂತಲೂ ಹೆಚ್ಚು ಫ್ರೆಂಚರನ್ನು ಆಹುತಿ ತೆಗೆದುಕೊಂಡಿತು.
ಅಗೋಸ್ತು ಮತ್ತು ಸಪ್ಟಂಬರ 1792 ರಲ್ಲಿ ಕ್ರಾಂತಿಯು ತೀವ್ರಗಾಮಿಯಾಗಿ ಪರಿವರ್ತನೆಗೊಂಡಿತು. ರಾಜನನ್ನು ಕೆಳಗಿಳಿಸಲಾಯಿತು, ಮರಣ ಶಿಕ್ಷೆ ವಿಧಿಸಲಾಯಿತು ಮತ್ತು ಪ್ರಜಾಪ್ರಭುತ್ವ ಘೋಷಿಸಲಾಯಿತು. ಜನವರಿ 21, 1793 ರಲ್ಲಿ ಅರಸನನ್ನು ಹತಿಸಲಾಯಿತು, ಮತ್ತು ರಾಣಿ ಮಾರಿ ಎಂಟೊನಿಯೆಟ್ ಳನ್ನು ಒಕ್ಟೋಬರ 16, 1793 ರಂದು ಕೊಲಲ್ಲಾಯಿತು. ಅಸಹಕಾರ ತೋರಿಸಿದ ಅನೇಕ ವೈದಿಕರನ್ನು ದೇಶದಿಂದ ಹೊರಗಟ್ಟಲಾಯಿತು. ನಿರಂಕುಶ ರಾಜಮನೆತನದ ಆಳ್ವಿಕೆಯ ಕೆಳಗೆ ಇನ್ನು ಇರುವ ಜನರನ್ನು ವಿಮೋಚಿಸಬೇಕು ಎಂದು ಜನರು ಭಾವಿಸಿದರು. ಆದರೆ ವಿಮೋಚಕರೇ ಸ್ವತಹ ದಬ್ಬಾಳಿಕೆಗಾರರಾಗಿ ಕೆಲವೊಮ್ಮೆ ಕೊನೆಗೆ ತೋರಿಬಂದರು.
ಆದಾಗ್ಯೂ, ಯುದ್ಧದಿಂದ ಹೆಚ್ಚಾದ ಕಷ್ಟಗಳಿಂದ ಯಾವುದೇ ಬಿಡುಗಡೆ ತರಲ್ಪಡಲಿಲ್ಲ. 3,00,000 ಪುರುಷರನ್ನು ಯುದ್ಧಕ್ಕೆ ಭರ್ತಿಮಾಡುವ ಅನುಶಾಸನ ಬಂದಾಗ, ದೇಶದಲ್ಲಿ ತೊಂದರೆಯು ಉದ್ಬವಿಸಿತು. ಪಶ್ಚಿಮ ಫ್ರಾನ್ಸ್ನಲ್ಲಿ ರಾಜಮನೆತನದ ಕಥೋಲಿಕ ಸೇನೆಯು ಕ್ರೂಜೆ ಮತ್ತು ಪವಿತ್ರ ಹೃದಯದ ಚಿಹ್ನೆಯ ಕೆಳಗೆ ಒಂದುಗೂಡಿಸಲ್ಪಟ್ಟಿತು. ಅದು ನಾಲ್ಕು ಪ್ರದೇಶಗಳ ನಗರಗಳನ್ನು ತನ್ನ ವಶದಲ್ಲಿಟ್ಟುಕೊಂಡು, ರಿಪಬ್ಲಿಕನರನ್ನು ಅಲ್ಲಿ ಸಮೂಹಹತ್ಯೆ ಮಾಡಿತು.
ಈ ಸಮಸ್ಯೆಗಳ ಅವಕಾಶವನ್ನುಪಯೋಗಿಸಿ ಕೇಂದ್ರೀಯ ಸರಕಾರವು, ಒಂದು ಸಾರ್ವಜನಿಕ ಸುರಕ್ಷೆ ಸಮಿತಿ (ಕಮಿಟಿ ಆಫ್ ಪಬ್ಲಿಕ್ ಸೇಫ್ಟಿ) ರಚಿಸಿ, ರೊಬೆಸ್ಪಿಯರೆ ಯನ್ನು ಅದರ ಅತ್ಯಧಿಕಾರವುಳ್ಳ ಸದಸ್ಯನನ್ನಾಗಿ ಮಾಡಿ, ಸ್ವತಹ ನಿರಂಕುಶ ಪ್ರಭುತ್ವದ ಬಲವನ್ನು ತನ್ನ ಕೈಗೆತ್ತಿಕೊಂಡಿತು. ಭಯವು ಸರಕಾರದ ಸೂತ್ರವಾಯಿತು. ಕೆಲವೊಮ್ಮೆ 1789 ರಲ್ಲಿ ಘೋಷಿಸಲ್ಪಟ್ಟ ಹಕ್ಕುಗಳು ತುಳಿದಾಡಲ್ಪಟ್ಟವು. ಕ್ರಾಂತಿಕಾರಿ ನ್ಯಾಯಮಂಡಲಿಗಳು ಹೆಚ್ಚೆಚ್ಚು ಮರಣದಂಡನೆಯನ್ನು ವಿಧಿಸಿದವು ಮತ್ತು ಶಿರಚ್ಛೇದಕ ಯಂತ್ರ (ಗಿಲೊಟೀನ್) ಕುಖ್ಯಾತಿಗೆ ಬಂತು.
ಅಕ್ರೈಸ್ತೀಕರಣ
1793ರ ಶರತ್ಕಾಲದಿಂದ, ಕ್ರಾಂತಿಕಾರಿ ಸರಕಾರವು ಅಕ್ರೈಸ್ತೀಕರಣದ ಒಂದು ಮಹತ್ತಾದ ಯೋಜನೆಯನ್ನು ರೂಪಿಸಿತು. ದುಷ್ಟ ಪ್ರವೃತ್ತಿಗಳನ್ನು ಇಲ್ಲದಂತಾಗಿರಿಸುವ “ಹೊಸ ಮನುಷ್ಯನನ್ನು” ಉಂಟುಮಾಡುವುದೇ ಇದರ ಗುರಿ. ಜನರ ಅವಿಚಾರ ನಂಬಿಕೆಯ ದುರುಪಯೋಗ ಮಾಡಲು ಕಥೋಲಿಕ ಚರ್ಚು ಪ್ರಯತ್ನಿಸುತ್ತಿದೆಂದು ಅಪಾದಿಸಲಾಯಿತು. ಕೆಲವೊಂದು ಚರ್ಚುಗಳನ್ನು ನಾಶಗೊಳಿಸಲಾಯಿತು, ಇನ್ನಿತರ ಕೆಲವನ್ನು ಸೈನಿಕನೆಲೆಗಳನ್ನಾಗಿ ಪರಿವರ್ತಿಸಲಾಯಿತು. ವೈದಿಕರು ತಮ್ಮ ಪುರೋಹಿತ ವೃತ್ತಿಯನ್ನು ತ್ಯಜಿಸಿ, ಮದುವೆಯಾಗುವಂತೆ ಬಲಾತ್ಕರಿಸಲ್ಪಟ್ಟರು. ನಿರಾಕರಿಸಿದವರನ್ನು ಕೈದುಮಾಡಿ, ಹತಿಸಲಾಯಿತು. ಕೆಲವರು ದೇಶಬಿಟ್ಟು ಪಲಾಯನಗೈದರು.
ಕಥೋಲಿಕ ಧರ್ಮದ ಬದಲಾಗಿ ತಾರ್ಕಿಕತೆಯ ಧರ್ಮ (ರಿಲಿಜನ್ ಆಫ್ ರೀಸನ್) ಸ್ಥಾನಪಲ್ಲಟಗೊಂಡಿತು. ಕೆಲವರು ತಾರ್ಕಿಕತೆಯನ್ನು “ಸ್ವದೇಶದ ಮಾತೆ” ಎಂಬಂತೆ ಒಂದು ದೇವತೆಯಾಗಿ ವೀಕ್ಷಿಸಿದರು. ಅನಂತರ ತಾರ್ಕಿಕತೆಯ ಆರಾಧನೆಯ ಸ್ಥಾನದಲ್ಲಿ ರೊಬಿಸ್ಪಿಯರೆ ಯಿಂದ ದೇವಾಸಿಕ್ತ ಧರ್ಮವನ್ನು ಬಲಾತ್ಕಾರದಿಂದ ಹೊರಿಸಲಾಯಿತು. ತನ್ನ ವಿರೋಧಿಗಳನ್ನು ಅವನು ಇಲ್ಲದಂತೆ ಮಾಡಿದನು ಮತ್ತು ಕ್ರೂರತನದ ನಿರಂಕುಶತ್ವವನ್ನು ಸ್ಥಾಪಿಸಿದನು. ರಕ್ತದ ರೋಷಾವೇಶವು ಕೊನೆಗೆ ಅವನ ಸ್ವಂತ ಜೀವವನ್ನೇ ಆಹುತಿ ತಕ್ಕೊಂಡಿತು. ಜುಲೈ 28, 1794 ರಲ್ಲಿ, ಕಿರಿಚುತ್ತಿರುವಾಗಲೇ ಅವನನ್ನೆಳೆದುಕೊಂಡುಹೋಗಿ ಶಿರಚ್ಛೇದಕ ಯಂತ್ರಕ್ಕೆ ಹಾಕಲಾಯಿತು.
ಪಾರಾಗಿ ಉಳಿದ ರಾಜಕೀಯಸ್ಥರು ಏಕ-ಮನುಷ್ಯ ನಿರಂಕುಶತ್ವವನ್ನು ಬಯಸದ್ದರಿಂದ, ಅವರು ಅಧಿಕಾರವನ್ನು ಐದು ಸದಸ್ಯರ ಮಾರ್ಗದರ್ಶಕತ್ವಕ್ಕೆ ಒಪ್ಪಿಸಿದರು. ಆದರೆ ಯುದ್ಧವು ಪುನ: ಆರಂಭಿಸಿದಂತೆ, ಮತ್ತು ಆರ್ಥಿಕ ಸನ್ನಿವೇಶವು ಹೆಚ್ಚೆಚ್ಚಾಗಿ ಹಾಳಾದಂತೆ, ಅಧಿಕಾರವನ್ನು ನೆಪೋಲಿಯನ್ ಬೋನಪಾರ್ಟ್ ಎಂಬ ವ್ಯಕ್ತಿಯ ಕೈಗೆ ಕೊಡುವುದು ವಿಹಿತವೆಂದು ತೋರಿತು. ಹೀಗೆ ಇನ್ನೊಂದು ನಿರಂಕುಶತ್ವಕ್ಕೆ ಇದು ದಾರಿಮಾಡಿತು.
ಫ್ರೆಂಚ್ ಕ್ರಾಂತಿಯು ಪ್ರಜಾಪ್ರಭುತ್ವಗಳನ್ನು, ನಿರಂಕುಶತ್ವಗಳನ್ನು ಮುಂದಕ್ಕೆ ಬೆಳೆಸಲು ಯೋಚನೆಗಳನ್ನು ಬಿತಿತ್ತು. ಸಂಸ್ಥಾಪಿತ ಧರ್ಮಗಳ ವಿರುದ್ಧವಾಗಿ ರಾಜಕೀಯ ಶಕ್ತಿಗಳು ಒಮ್ಮೆಲೇ ಎದುರುಬಿದ್ದರೆ ಏನು ಸಂಭವಿಸಬಹುದೆಂದೂ ಇದು ತೋರಿಸಿತು. ಇದರಲ್ಲಿ, ಬರಲಿರುವ ಸಂಗತಿಗಳ ಪೂರ್ವಭಾವಿ ಪ್ರಭೆಯೊಂದನ್ನು ಇದು ಒದಗಿಸಬಹುದು.—ಪ್ರಕಟನೆ 17:16; 18:1-24. (g89 12/22)
[ಪುಟ 28 ರಲ್ಲಿರುವಚಿತ್ರ]
ನೋಟ್ರೆ ಡಾಮ್ ಕಥಿಡ್ರೆಲ್ನಲ್ಲಿ ತಾರ್ಕಿಕತೆಯ ದೇವತೆಗೆ ಒಂದು ವಿಗ್ರಹಾರಾಧಕ ಹಬ್ಬದಾಚರಣೆ
[ಕೃಪೆ]
Bibliothèque Nationale, Paris
[ಪುಟ 26 ರಲ್ಲಿರುವ ಚಿತ್ರ ಕೃಪೆ]
From an old engraving, by H. Bricher sc.