ಬೈಬಲಿನ ದೃಷ್ಟಿಕೋನ
ಆಟಗಳಲ್ಲಿ ಪ್ರಾರ್ಥನೆ ದೇವರು ಆಲಿಸುತ್ತಾನೋ?
ಸಾವಿರಾರು ಆಸಕ್ತರು ಕ್ರೀಡಾಂಗಣಕ್ಕೆ ಹರಿದು ಬರುತ್ತಾ ತಮ್ಮ ಪ್ರಿಯ ದಳಕ್ಕೆ ಬೆಂಬಲವನ್ನು ಭೋರ್ಗರೆಯುವಾಗ ವಾತಾವರಣ ಕೋಲಾಹಲದಿಂದ ಪುಳಕಿತವಾಗುತ್ತದೆ. ಆಟಗಾರರು ತಮ್ಮ ವ್ಯಾಯಾಮವನ್ನು ಈಗ ತಾನೇ ಮುಗಿಸಿರುತ್ತಾರೆ. ಆಟಾರಂಭದ ಸೀಟಿ ಊದಲ್ಪಡುವ ಸಮಯವಾಗಿದೆ. ಬಯಲಿನ ಒಂದು ಬದಿಯಲ್ಲಿ ಆಟಗಾರರು ಬಾಗಿ ನಿಂತಿರುತ್ತಾರೆ. ಅವರ ನಾಯಕ ಮಧ್ಯದಲ್ಲಿ ಮೊಣಕಾಲೂರಿ, “ದೇವರೇ, ನಮ್ಮ ತಂಡವನ್ನು ಆಶೀರ್ವದಿಸಿ ನಮಗೆ ನಮ್ಮ ವಿರೋಧ ಪಕ್ಷದ ಮೇಲೆ ಜಯವನ್ನು ದಯಪಾಲಿಸಿ ಹಾನಿಯಿಂದ ತಪ್ಪಿಸು, ಆಮೆನ್” ಎಂದು ಪ್ರಾರ್ಥಿಸುತ್ತಾನೆ. ಆರ್ಭಟ ಧ್ವನಿಯೊಂದಿಗೆ ಅವರು ಅಗಲಿ ಹೋಗಿ, ತಮ್ಮ ತಮ್ಮ ಸ್ಥಳಗಳಲ್ಲಿ ನಿಂತಾಗ ಸೀಟಿ ಊದಲಾಗಿ ಅಮೆರಿಕನ್ ಫುಟ್ಬಾಲಿನ ವ್ಯವಸ್ಥಾಪಿತ ಹಾನಿಮಾಡುವಿಕೆ ಆರಂಭವಾಗುತ್ತದೆ.
ವಿವಿಧ ಆಟಗಳಲ್ಲಿ ಭಾಗವಹಿಸುವುದಕ್ಕೆ ಮೊದಲು, ಮಧ್ಯದಲ್ಲಿ ಮತ್ತು ಆ ಬಳಿಕ ವೈಯಕ್ತಿಕ ಮತ್ತು ಸಾಮೂಹಿಕ ಪ್ರಾರ್ಥನೆ ಈಗ ಮಾಮೂಲಿ ದೃಶ್ಯ. ಆದರೆ ದೇವರು ಆಲಿಸುತ್ತಾನೋ? ಅಥವಾ, ಕೆಲವರು ಹೇಳುವಂತೆ, ಇದು ಪ್ರಾರ್ಥನೆಯನ್ನು ಹಾಸ್ಯಾಸ್ಪದವಾಗಿ ಮಾಡುತ್ತದೋ?
“ನೆರೆಯವನನ್ನು ಜಜ್ಜುಬಡಿ”
ಲೋಕವ್ಯಾಪಕವಾಗಿ ಕಾರ್ಯತಃ, ಪ್ರತಿಯೊಂದು ಆಟವೂ, ಬಯಲಿನಲ್ಲಿ ಪ್ರೇಕ್ಷಕರ ಹಿಂಸಾಕೃತ್ಯಗಳಿಂದ ಕೆಟ್ಟಿರುತ್ತದೆ. ಅಮೆರಿಕದ ಒಬ್ಬ ಮಾಜಿ ಫುಟ್ಬಾಲ್ ವೃತ್ತಿಗಾರ ಬರೆದುದು: “ಯುದ್ಧದಲ್ಲಿ ಕೊಲ್ಲುವುದು ಮತ್ತು ಅಂಗಹೀನ ಮಾಡುವುದು ಹೇಗೊ ಹಾಗೆಯೇ ಫುಟ್ಬಾಲಿನಲ್ಲಿ ದೇಹವನ್ನು ಜಜ್ಜು ಬಡೆಯುವುದೇ ವಾದಾಸ್ಪದವಾದ ಮುಖ್ಯ ವಿಷಯ.” ಅವನು ಇನ್ನೂ ಹೇಳಿದ್ದು: “ಸ್ಪರ್ಧಾತ್ಮಕ, ವ್ಯವಸ್ಥಾಪಿತ ಹಾನಿಮಾಡುವಿಕೆ ನಮ್ಮ ಜೀವನ ರೀತಿಯ ಆವಶ್ಯಕ ಭಾಗ ಮತ್ತು ನಿನ್ನ ನೆರೆಯವನನ್ನು ಜಜ್ಜು ಬಡೆಯುವುದು ಎಷ್ಟು ಉತ್ತೇಜಕ ಮತ್ತು ಪ್ರತಿಫಲದಾಯಕವೆಂದು ತೋರಿಸಲು . . . ಫುಟ್ಬಾಲ್ ಹೆಚ್ಚು ಬುದ್ಧಿಗ್ರಾಹ್ಯವಾದ ದರ್ಪಣವಾಗಿದೆ.”
ನೆರೆಯವನನ್ನು ಜಜ್ಜುಬಡಿಯುವುದೇ? ನಿನ್ನ ನೆರೆಯವನನ್ನು ಪ್ರೀತಿಸಬೇಕೆಂದು ಯೇಸು ಹೇಳಿದನು. (ಮತ್ತಾಯ 22:39) ಆದುದರಿಂದ, ಪ್ರೀತಿಯ ದೇವರು ಇಂದಿನ ಆಟಗಳಿಗೆ ಬಂದು, ಏನೇ ಆಗಲಿ ಜಯಿಸಬೇಕು ಎಂಬುದು ಪ್ರಧಾನ ಧ್ಯೇಯವಾಗಿರುವ ಈ ಆಟಗಳಲ್ಲಿ ಒಂದನ್ನು ಆಶೀರ್ವದಿಸುವನೆಂದು ಭಾವಿಸುವುದು ಅಸಾಧ್ಯ.—1 ಯೋಹಾನ 4:16.
ದೇವರು ಆಟಗಳಲ್ಲಿ ಹಾಜರಿರುತ್ತಾನೋ?
ಆಟಗಳಲ್ಲಿ ಪ್ರಾರ್ಥನೆಯನ್ನು ಉತ್ತೇಜಿಸಲು ಒಂದು ಕಾರಣ ದೇವರು ಸರ್ವವ್ಯಾಪಿ, ಅಂದರೆ ದೇವರು ಎಲ್ಲಾ ಸಮಯಗಳಲ್ಲಿ, ಎಲ್ಲಾ ಸ್ಥಳಗಳಲ್ಲಿ ಮತ್ತು ವಸ್ತುಗಳಲ್ಲಿ ಉಪಸ್ಥಿತನು ಎಂಬ ಧಾರ್ಮಿಕ ಬೋಧನೆಯೇ. ದೃಷ್ಟಾಂತಕ್ಕೆ, ಗಾಡ್ ಗೋಸ್ ಟು ಫುಟ್ಬಾಲ್ ಗೇಮ್ಸ್ ಎಂಬ ಪುಸ್ತಕದಲ್ಲಿ ಪುರೋಹಿತ ಮತ್ತು ಮಾಜಿ ಆಟ ತಂಡದ ಪಾದ್ರಿ ಎಲ್. ಎಚ್. ಹಾಲಿಂಗ್ಸ್ವರ್ತ್ ಹೇಳುವುದು: “ದೇವರ ವಿಷಯ ನಮಗಿರುವ ಪ್ರತಿಯೊಂದು ವಿಧಿವಿಹಿತ ನಂಬಿಕೆ, ದೇವರ ಸರ್ವವ್ಯಾಪಕತೆಯಲ್ಲಿ ಸೇರಿದೆ. ನಮ್ಮ ಐಹಿಕ ಅನುಭವವೆಂದು ನಾವು ಕರೆಯುವುದರಲ್ಲಿ ಆತನು ನಿಶ್ಚಯವಾಗಿಯೂ ಉಪಸ್ಥಿತನು ಎಂಬ ವಿಚಾರವೇ ಇದು . . . ಅಂದರೆ ದೇವರು ಚರ್ಚಿಗೆ ಹೋಗುತ್ತಾನೆ ಮತ್ತು ದೇವರು ಫುಟ್ಬಾಲ್ ಆಟಕ್ಕೆ ಹೋಗುತ್ತಾನೆ ಎಂಬುದೇ.”
ಆದರೆ ದೇವರು ಸರ್ವವ್ಯಾಪಿ ಎಂದು ಬೈಬಲು ಹೇಳುವುದಿಲ್ಲ. ಕ್ರೈಸ್ತ ಅಪೊಸ್ತಲ ಪೌಲನು ಬರೆದದ್ದು: “ಕ್ರಿಸ್ತನು . . . ದೇವರ ಸಮ್ಮುಖದಲ್ಲಿ ನಮಗೋಸ್ಕರ ಈಗ ಕಾಣಿಸಿಕೊಳ್ಳುವುದಕ್ಕೆ ಪರಲೋಕದಲ್ಲಿಯೇ ಪ್ರವೇಶಿಸಿದನು.” (ಇಬ್ರಿಯ 9:24) ಈ ವಚನದಲ್ಲಿ ನಾವು ಗಣ್ಯ ಮಾಡಬೇಕಾದ ಎರಡು ಪ್ರಧಾನ ವಿಷಯಗಳಿವೆ: ದೇವರು ಆತ್ಮ ಸ್ವರೂಪದ ವ್ಯಕ್ತಿ ಮತ್ತು ಆತನಿಗೆ ಸ್ವರ್ಗವೆಂಬ ನಿಯಮಿತ ವಾಸಸ್ಥಾನವಿದೆ. (1 ಅರಸು 8:49; ಯೋಹಾನ 4:24) ಹೀಗೆ, ಅದೇ ಸಮಯದಲ್ಲಿ, ಆತನು ಇನ್ನೆಲ್ಲಿಯೂ ಇರಲು ಸಾಧ್ಯವಿಲ್ಲ.
ದೇವರು ತನ್ನ ಸ್ನೇಹಿತರಿಗೆ ಕಿವಿಗೊಡುತ್ತಾನೆ
ಒಳ್ಳೇದು, ದೇವರು ಆಟಗಳಲ್ಲಿ ಉಪಸ್ಥಿತನಾಗಿರದಿದ್ದರೆ, ಅವರ ಪ್ರಾರ್ಥನೆಗಳನ್ನಾದರೂ ಕೇಳುತ್ತಾನೋ? ಯಾರ ಮುಂದೆ ಯೇಸು ಹೋದನೋ, ಆ ಸ್ವರ್ಗದ ದೇವರ ಕಿವಿಗಳಿಗೆ ಪ್ರಾರ್ಥನೆ ಮುಟ್ಟಬೇಕಾದರೆ, ಪ್ರಾರ್ಥಿಸುವವನಿಗೆ ದೇವರ ಉದ್ದೇಶಗಳ, ಆತನ ವ್ಯಕ್ತಿತ್ವ, ಗುಣ, ಮಾರ್ಗ ಮತ್ತು ನಾಮದ ಜ್ಞಾನವಿರತಕ್ಕದ್ದು. (ಯಾಕೋಬ 4:3) ದೇವರನ್ನು ತಿಳಿಯುವ ಅವಶ್ಯಕತೆಯನ್ನು ಒತ್ತಿ ಹೇಳುತ್ತಾ ಯೇಸು ಪ್ರಾರ್ಥಿಸಿದ್ದು: “ಒಬ್ಬನೇ ಸತ್ಯದೇವರಾದ ನಿನ್ನನ್ನು . . . ತಿಳಿಯುವುದೇ ನಿತ್ಯಜೀವವು.”—ಯೋಹಾನ 17:3.
ಒಬ್ಬನ ಪರಿಚಯವಾಗಬೇಕಾದರೆ ಸಂಪರ್ಕ ಅಗತ್ಯ. ದೇವರು ಬೈಬಲಿನ ಮೂಲಕ ಸಂಪರ್ಕ ಬೆಳೆಸುತ್ತಾನೆ ಮತ್ತು ನಾವು ಸ್ವರ್ಗದ ದೇವರ ಪರಿಚಯ ಮಾಡಿಕೊಳ್ಳುವುದು ಬೈಬಲಿನ ಮೂಲಕವೇ. ಆತನ ನಾಮ ಯೆಹೋವನೆಂದು ಬೈಬಲು ತಿಳಿಸುತ್ತದೆ. (ಕೀರ್ತನೆ 83:18) ದೇವರು ಲೋಕವನ್ನು ಎಷ್ಟು ಪ್ರೀತಿಸಿದನೆಂದರೆ, ಮನುಷ್ಯರಿಗೆ ನಿತ್ಯಜೀವದ ಸಂದರ್ಭ ದೊರಕುವಂತೆ ಆತನು ತನ್ನ ಏಕಜಾತ ಪುತ್ರನಾದ ಯೇಸುವನ್ನು ಈ ಭೂಮಿಗೆ ಕಳುಹಿಸಿದನು ಎಂದೂ ಬೈಬಲು ಹೇಳುತ್ತದೆ. (ಯೋಹಾನ 3:16) ನಾವು ಬೈಬಲನ್ನು ಓದಿ, ಅಧ್ಯಯನ ಮಾಡುವಾಗ ಯೆಹೋವನು ನಮಗೆ ವಾಸ್ತವವಾಗಿ ಪರಿಣಮಿಸಿ ನಾವು ಯೇಸುವಿನ ಮೂಲಕ ಆತನ ಬಳಿಗೆ ಎಳೆಯಲ್ಪಡುತ್ತೇವೆ. (ಯೋಹಾನ 6:44, 65; ಯಾಕೋಬ 4:8) ಯೆಹೋವನು ವಾಸ್ತವವಾಗಿರುವುದರಿಂದ ನಾವು ಆತನೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಬಲ್ಲೆವು.
ಆದರೆ ದೇವರೊಂದಿಗೆ ಮಿತ್ರತ್ವದಲ್ಲಿ ದ್ವಿಪಕ್ಷ ಸಂಪರ್ಕ ಸೇರಿದೆ. ಇದಕ್ಕೆ ನಾವು ಯೆಹೋವನೊಂದಿಗೆ ಪ್ರಾರ್ಥನೆಯಲ್ಲಿ ಮಾತಾಡುವುದು ಅಗತ್ಯ. ದೇವರು “ಪ್ರಾರ್ಥನೆಯನ್ನು ಕೇಳುವವನು” ಮತ್ತು “ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ” ಎಂದು ಬೈಬಲನ್ನುತ್ತದೆ. (ಕೀರ್ತನೆ 65:2; ಅಪೊಸ್ತಲರ ಕೃತ್ಯ 17:27) ಆದರೆ, ದೇವರು ಸಕಲ ಪ್ರಾರ್ಥನೆಗಳನ್ನೂ ಕೇಳುತ್ತಾನೆಂದು ಇದರ ಅರ್ಥವಲ್ಲ. (ಯೆಶಾಯ 1:15-17) ದೇವರು ಯಾರ ಪ್ರಾರ್ಥನೆಗಳನ್ನು ಕೇಳಲು ಇಷ್ಟಪಡುತ್ತಾನೆ?
ಕೀರ್ತನೆಗಾರ ದಾವೀದನು, “ಯೆಹೋವನು ತನ್ನ ಸದ್ಭಕ್ತರಿಗೆ ಆಪ್ತ ಮಿತ್ರನಂತಿರುವನು” ಎಂದು ಹೇಳಿದನು. (ಕೀರ್ತನೆ 25:14) ಮೂಲ ಹಿಬ್ರೂ ಭಾಷೆಯಲ್ಲಿ “ಆಪ್ತ” (sohd) ಎಂಬುದರ ಮೂಲ “ಬಿಗಿಸು” ಎಂದಾಗಿದೆ. ಈ ಕಾರಣದಿಂದ, ಯೆಹೋವನ ಒಳಾವರಣಕ್ಕೆ ಅಥವಾ ಆತನ ಸ್ನೇಹದ ಒಡಂಬಡಿಕೆಯೊಳಗೆ ಪ್ರವೇಶಿಸಲು ಅನುಮತಿಸುವ ವಿಚಾರವನ್ನು ವ್ಯಕ್ತ ಪಡಿಸುತ್ತದೆ. ಯೋಗ್ಯ ಗೌರವ ತೋರಿಸುವ ಆರಾಧಕರಿಗೆ ಮಾತ್ರ ಇಲ್ಲಿ ಪ್ರವೇಶವಿದೆ. ಹೀಗೆ, ದೇವರೊಂದಿಗೆ ಆಪ್ತ ಸ್ನೇಹವು, ನಾವು ಆಟದ ವಿಜಯಕ್ಕಾಗಿ ಪ್ರಾರ್ಥನೆಯನ್ನು ಶುಭಕಾರಿ ತಾಯಿತದಂತೆ ಉಪಯೋಗಿಸುತ್ತಾ ದೇವರನ್ನು ಅಸಮಾಧಾನಗೊಳಿಸಿ ನಮ್ಮ ಸಂಬಂಧವನ್ನು ಕಡಿಯುವ ವಿಷಯದಲ್ಲಿ ಭಯಪಡುವಂತೆ ಮಾಡುತ್ತದೆ.
ತನ್ನೊಂದಿಗೆ ಮಿತ್ರತ್ವ ಬೆಳೆಸಲು ಹುಡುಕುವ ಪ್ರಾಮಾಣಿಕ ಹೃದಯಿಗಳ ಪ್ರಾರ್ಥನೆಗಳನ್ನು ದೇವರು ಆಲಿಸುತ್ತಾನೆ. ಆತನು ಪಕ್ಷಪಾತಿಯಲ್ಲ. ಆತನು, ಒಬ್ಬನಿಗಿಂತ ಇನ್ನೊಬ್ಬನು ಹೆಚ್ಚು ಅಚ್ಚುಮೆಚ್ಚಿನವನು ಅಥವಾ ಒಂದು ರಾಷ್ಟ್ರ, ಕುಲ ಅಥವಾ ಆಟದ ತಂಡ ಇನ್ನೊಂದಕ್ಕಿಂತ ಒಳ್ಳೆಯದೆಂದು ನೆನಸಿ ಅದನ್ನು ಗೌರವಿಸುವುದಿಲ್ಲ. (ಕೀರ್ತನೆ 65:2; ಅಪೊಸ್ತಲರ ಕೃತ್ಯ 10:34, 35) ದೇವರು ಆಟ ಸ್ಪರ್ಧಿಗಳ ಪ್ರಾರ್ಥನೆಗಳನ್ನು ಆಲಿಸುವುದಾದರೆ, ಎರಡು ತಂಡಗಳೂ ವಿಜಯಕ್ಕಾಗಿ ಪ್ರಾರ್ಥಿಸುವಲ್ಲಿ ಆತನು ಯಾರನ್ನು ಆಶೀರ್ವದಿಸಾನು? ಅಥವಾ, ಒಬ್ಬ ಆಟಗಾರನಿಗೆ ತೀರಾ ಗಾಯವಾದಲ್ಲಿ ದೇವರು ಹೊಣೆಗಾರನೋ?
ಹೀಗಿರುವುದರಿಂದ, ಯೋಗ್ಯ ವಿಷಯಗಳಿಗಾಗಿ ನಾವು ಪ್ರಾರ್ಥಿಸತಕ್ಕದ್ದು. ಅಪೊಸ್ತಲ ಯೋಹಾನನು ಇದನ್ನು ಹೀಗೆ ವಿವರಿಸುತ್ತಾನೆ. “ನಾವು ದೇವರ ಚಿತ್ತಾನುಸಾರ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆ.” (1 ಯೋಹಾನ 5:14) ಯೆಹೋವನು ಆತನ ಚಿತ್ತಾನುಸಾರ ಮಾಡಲಾಗುವ ಪ್ರಾರ್ಥನೆಗಳನ್ನು ಕೇಳುತ್ತಾನೆ. ಮತ್ತು ನಮ್ಮ ಪ್ರಾರ್ಥನೆಗಳು ಆತನ ಇಷ್ಟ ಮತ್ತು ಉದ್ದೇಶಕ್ಕನುಸಾರವಾಗಿ ಇರಬೇಕಾದರೆ ನಾವು ಅವುಗಳನ್ನು ತಿಳಿಯುವ ಅಗತ್ಯವಿದೆ.
ಇಂದಿನ ಸ್ಪರ್ಧಾತ್ಮಕ ಮತ್ತು ಹಿಂಸಾತ್ಮಕ ಕ್ರೀಡೆಗಳಲ್ಲಿ ದೇವರ ಇಷ್ಟ, ಉದ್ದೇಶ ಮತ್ತು ಮಹಿಮಾಭರಿತ ನಾಮ ಸೇರಿಕೊಂಡಿಲ್ಲ. ದೇವರು ಪಕ್ಷಪಾತಿಯಲ್ಲ. ಆದುದರಿಂದ, ಇಂಥ ಸಂದರ್ಭಗಳಲ್ಲಿ ಪ್ರಾರ್ಥನೆ ಮಾಡುವಾಗ ದೇವರು ಆಲಿಸುತ್ತಿದ್ದಾನೋ? ನಿಶ್ಚಯವಾಗಿಯೂ ಇಲ್ಲ! (g90 5/8)