ಮಾನವ ಆಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡುವುದು
ಭಾಗ 3 ‘ಸರ್ವೋತ್ತಮರಿಂದ ಸರಕಾರ’ ನಿಜವಾಗಿಯೂ ಸರ್ವೋತ್ತಮವೊ?
ಶ್ರೀಮಂತ ಪ್ರಭುತ್ವ: ಕುಲೀನರಿಂದ, ವಿಶೇಷಾಧಿಕಾರದ ಅಲ್ಪಸಂಖ್ಯಾತರಿಂದ, ಯಾ ಆಳಲು ಅತಿ ಯೋಗ್ಯರೆಂದೆಣಿಸಲ್ಪಟ್ಟಿರುವ ಗಣ್ಯ ವರ್ಗದಿಂದ ಸರಕಾರ; ಸ್ವಲ್ಪಜನಾಧಿಪತ್ಯ: ಸ್ವಲ್ಪ ಜನರಿಂದ, ವ್ಯಕ್ತಿಗಳಿಂದ ಯಾ ಕುಟುಂಬಗಳಿಂದ, ಅನೇಕ ವೇಳೆ ಭ್ರಷ್ಟ ಹಾಗೂ ಸ್ವಾರ್ಥದ ಉದ್ದೇಶಗಳಿಗಿರುವ ಸರಕಾರ.
ಸರ್ವೋತ್ತಮ ಜನರಿರುವ ಸರಕಾರವಿರುವಲ್ಲಿ ಸರ್ವೋತ್ತಮ ಸರಕಾರವಿರುವುದೆಂದು ನೆನಸುವುದು ನ್ಯಾಯಸಮ್ಮತ. ಸರ್ವೋತ್ತಮರು ಹೆಚ್ಚು ವಿದ್ಯಾವಂತರು, ಹೆಚ್ಚು ಯೋಗ್ಯರು, ಮತ್ತು ಹೆಚ್ಚು ದಕ್ಷರು—ಹೀಗೆಂದು ವಾದಿಸಲಾಗುತ್ತದೆ—ಆದುದರಿಂದ ಅವರು ಇತರರನ್ನು ನಡೆಸಲು ಹೆಚ್ಚು ಸಮರ್ಥರು. ಇಂಥ ಗಣ್ಯ ವರ್ಗದವರಿರುವ ಶ್ರೀಮಂತ ಪ್ರಭುತ್ವ ಸರಕಾರ ಅನೇಕ ರೀತಿಯದ್ದಾಗಿರಬಹುದು; ಉದಾಹರಣೆಗೆ, ಸಂಪತ್ತುಳ್ಳವರ ಆಳಿಕೆ, ಧನಿಕ ಪ್ರಭುತ್ವ; ಪುರೋಹಿತರ ಆಳಿಕೆ, ದೇವಪ್ರಭುತ್ವ; ಅಥವಾ, ಅಧಿಕಾರಿಗಳ ಆಡಳಿತ, ಕಚೇರಿ ಸರಕಾರ.
ಬಣಹಿರಿಯರ ಯಾ ನಾಯಕರ ಆಡಳಿತದ ಕೆಳಗಿದ್ದ ಅನೇಕ ಅಸಂಸ್ಕೃತ ಸಮಾಜಗಳು ಶ್ರೀಮಂತ ಪ್ರಭುತ್ವಗಳಾಗಿದ್ದವು. ಒಂದಲ್ಲ ಒಂದು ಸಮಯದಲ್ಲಿ, ಕೇವಲ ಮೂರು ದೇಶಗಳನ್ನೆ ಹೆಸರಿಸುವುದಾದರೂ, ರೋಮ್, ಇಂಗ್ಲೆಂಡ್ ಮತ್ತು ಜಪಾನ್ ಶ್ರೀಮಂತ ಪ್ರಭುತ್ವಗಳಾಗಿದ್ದವು. ಪುರಾತನ ಗ್ರೀಸಿನಲ್ಲಿ, ಒಂದು ಚಿಕ್ಕ ಗುಂಪು ಆಡಳಿತ ನಡೆಸುತ್ತಿದ್ದ ನಗರ-ಸರಕಾರಗಳ ಯಾ ಪೊಲೇಸ್ಗಳ ಸಂಬಂಧದಲ್ಲಿ “ಶ್ರೀಮಂತ ಪ್ರಭುತ್ವ” ಎಂಬ ಪದವನ್ನು ಉಪಯೋಗಿಸಲಾಗುತ್ತಿತ್ತು. ಇಲ್ಲಿ ಅನೇಕ ವೇಳೆ, ಕೆಲವು ಪ್ರಮುಖ ಕುಟುಂಬಗಳು ಅಧಿಕಾರದಲ್ಲಿ ಭಾಗವಹಿಸಿದವು. ಆದರೆ, ಕೆಲವು ಸಂದರ್ಭಗಳಲ್ಲಿ, ಒಂದು ಕುಟುಂಬವೇ ನ್ಯಾಯವಿರುದ್ಧವಾಗಿ ಅಧಿಕಾರವನ್ನು ಕಿತ್ತುಕೊಂಡು ಹೆಚ್ಚು ನಿರಂಕುಶ ರೀತಿಯ ಆಡಳಿತವನ್ನು ಸ್ಥಾಪಿಸಿತು.
ಇತರ ನಗರ ಸರಕಾರಗಳಂತೆ, ಮೊದಲು ಆ್ಯಥೆನ್ಸ್ ಸಹ ಒಂದು ಶ್ರೀಮಂತ ಪ್ರಭುತ್ವವಾಗಿತ್ತು. ಆದರೆ ಆ ಬಳಿಕ, ಸಾಂಸ್ಕೃತಿಕ ಬದಲಾವಣೆಗಳು ಪ್ರತ್ಯೇಕ ವರ್ಗಗಳನ್ನು ಬಲಹೀನಗೊಳಿಸಿ ಅದರ ಐಕ್ಯವನ್ನು ಒಡೆದುದರಿಂದ ಆ ನಗರದಲ್ಲಿ ಪ್ರಜಾಪ್ರಭುತ್ವ ರೀತಿಗಳು ಎದ್ದುಬಂದವು. ಆದರೆ ಸಾ.ಶ.ಪೂ. ಒಂಭತನ್ತೆಯ ಶತಮಾನದಲ್ಲಿ ಕಟ್ಟಲಾಗಿದೆಯೆಂದು ಹೇಳಲಾಗಿರುವ ಸ್ಪಾರ್ಟ ನಗರವನ್ನು ಒಂದು ಮಿಲಿಟರಿ ಸ್ವಲ್ಪಜನಾಧಿಪತ್ಯವು ಆಳುತ್ತಿತ್ತು. ಈ ನಗರ ಹೆಚ್ಚು ಹಳೆಯ ಆ್ಯಥೆನ್ಸ್ ನಗರದಷ್ಟೆ ಬೆಳೆದಾಗ ಈ ಎರಡು ನಗರಗಳೂ ಆಗಿನ ಗ್ರೀಕ್ ಜಗತ್ತಿನಲ್ಲಿ ಶ್ರೇಷ್ಠತೆಗಾಗಿ ಹೋರಾಡಿದವು. ಹೀಗೆ, ಆ್ಯಥೆನ್ಸ್ನಲ್ಲಿದ್ದಂಥ ಅನೇಕರ ಆಳಿಕೆ, ಸ್ಪಾರ್ಟದ ಕೊಂಚ ಜನರ ಆಳಿಕೆಯೊಂದಿಗೆ ಘರ್ಷಿಸಿತು. ಆದರೆ ಅವರ ಹೋರಾಟ, ಕೇವಲ ಸರಕಾರಗಳ ವಿಷಯ ಅಸಮ್ಮತಿಗಿಂತ ಹೆಚ್ಚು ಜಟಿಲವಾಗಿತ್ತು.
ಒಂದು ಉದಾತ್ತ ಆದರ್ಶ ಭ್ರಷ್ಟಗೊಳ್ಳುವುದು
ಗ್ರೀಕ್ ತತ್ವಜ್ಞಾನಿಗಳ ಮಧ್ಯೆ ಅನೇಕ ವೇಳೆ ರಾಜಕೀಯ ಭಿನ್ನತೆಗಳು ತಾತ್ವಿಕ ವಿವಾದಗಳ ವಿಷಯವಾಗುತ್ತಿತ್ತು. ಪ್ಲೇಟೋವಿನ ಮಾಜಿ ವಿದ್ಯಾರ್ಥಿ ಅರಿಸ್ಟಾಟಲ್, ಶ್ರೀಮಂತ ಪ್ರಭುತ್ವ ಮತ್ತು ಸ್ವಲ್ಪಜನಾಧಿಪತ್ಯಗಳ ಮಧ್ಯೆ ವ್ಯತ್ಯಾಸವಿರುವುದನ್ನು ತೋರಿಸಿದನು. ಶುದ್ಧ ಶ್ರೀಮಂತ ಪ್ರಭುತ್ವ ಉತ್ತಮ ರೀತಿಯ ಸರಕಾರ, ಅದು ವಿಶೇಷ ಸಾಮರ್ಥ್ಯವಿರುವ ಮತ್ತು ಶ್ರೇಷ್ಠ ನೈತಿಕತೆಯಿರುವ ವ್ಯಕ್ತಿಗಳು ಇತರರ ಪ್ರಯೋಜನಾರ್ಥವಾಗಿ ಸಾರ್ವಜನಿಕ ಸೇವೆಗೆ ತಮ್ಮನ್ನು ಮೀಸಲಾಗಿಡುವಂತೆ ಮಾಡುವ ಉದಾತ್ತ ಆದರ್ಶವೆಂದು ಅವನು ಅದನ್ನು ವರ್ಗೀಕರಿಸಿದನು. ಆದರೆ ಶೋಷಣೆ ಮಾಡುವ ಮತ್ತು ಸ್ವಾರ್ಥದ ಗಣ್ಯ ವ್ಯಕ್ತಿಗಳು ಅದರ ನಾಯಕರಾಗುವಲ್ಲಿ, ಈ ಶುದ್ಧ ಶ್ರೀಮಂತ ಪ್ರಭುತ್ವವು ನ್ಯಾಯರಹಿತ ಸ್ವಲ್ಪಜನಾಧಿಪತ್ಯವಾಗಿ ಕ್ಷಯಿಸುವುದು. ಇದು ಸರಕಾರದ ಭ್ರಷ್ಟ ರೂಪ ಎಂದು ಅವನ ಎಣಿಕೆಯಾಗಿತ್ತು.
‘ಸರ್ವೋತ್ತಮ’ರಿಂದ ಆಡಳಿತವನ್ನು ಸಮರ್ಥಿಸಿದಾಗ, ಶ್ರೀಮಂತ ಪ್ರಭುತ್ವವನ್ನು ಪ್ರಜಾಪ್ರಭುತ್ವದೊಂದಿಗೆ ಜೋಡಿಸುವುದಾದರೆ ಪ್ರಾಯಶಃ ಅಪೇಕ್ಷಿತ ಪರಿಣಾಮ ಬರಬಹುದೆಂದು ಅರಿಸ್ಟಾಟಲನು ಒಪ್ಪಿದನು. ಈ ವಿಚಾರ ಈಗಲೂ ಕೆಲವು ರಾಜಕೀಯ ಚಿಂತಕರಿಗೆ ಹಿಡಿಸುತ್ತದೆ. ವಾಸ್ತವವೇನಂದರೆ, ಪ್ರಾಚೀನ ಕಾಲದ ರೋಮನರು ಈ ಎರಡು ವಿಧದ ಸರಕಾರಗಳನ್ನು ಜೋಡಿಸಿ ಸ್ವಲ್ಪ ಸಾಫಲ್ಯವನ್ನು ಪಡೆದಿದ್ದರು. “ರಾಜಕೀಯ [ರೋಮಿನಲ್ಲಿ] ಪ್ರತಿಯೊಬ್ಬರ ವ್ಯವಹಾರವಾಗಿತ್ತು” ಎನ್ನುತ್ತದೆ ದ ಕಾಲಿನ್ಸ್ ಆ್ಯಟ್ಲಸ್ ಆಫ್ ವರ್ಲ್ಡ್ ಹಿಸ್ಟರಿ. ಆದರೂ ಅದೇ ಸಮಯದಲ್ಲಿ, “ಅತಿ ಧನಿಕ ನಾಗರಿಕರು ಮತ್ತು ಸ್ವದಂಶೀಯರಾಗಿ ಹುಟ್ಟುವ ಭಾಗ್ಯವಿದವ್ದರು, ಮ್ಯಾಜಿಸ್ಟ್ರೇಟ್, ಸೈನ್ಯಾಧಿಕಾರಿ ಮತ್ತು ಪುರೋಹಿತನ ಅಧಿಕಾರದಲ್ಲಿ ಪಾಲಿಗರಾಗಿ ಒಂದು ಸ್ವಲ್ಪಜನಾಧಿಪತ್ಯವನ್ನು ಉಂಟುಮಾಡಿದರು.”
ಮಧ್ಯಯುಗಗಳ ಅಂತ್ಯದಲ್ಲಿ ಮತ್ತು ಆಧುನಿಕ ದಿನಗಳಲ್ಲಿ ಸಹ, ಯೂರೋಪಿನ ಪೌರ ಕೇಂದ್ರಗಳು ತಮ್ಮ ಸರಕಾರಗಳಲ್ಲಿ ಪ್ರಜಾಪ್ರಭುತ್ವ ಮತ್ತು ಶ್ರೀಮಂತ ಪ್ರಭುತ್ವದ ಅಂಶಗಳನ್ನು ಸೇರಿಸಿದವು. ಕಾಲ್ಯರ್ಸ್ ಎನ್ಸೈಕ್ಲೊಪೀಡಿಯ ಹೇಳುವುದು: “ಅಂತಿಮವಾಗಿ ನೆಪೋಲಿಯನನು ಉರುಳಿಸಿದ, ವಿಪರೀತವಾಗಿ ಸಂಪ್ರದಾಯಬದ್ಧ ವೆನೇಷನ್ ಗಣರಾಜ್ಯದಂಥ ಸ್ವಲ್ಪಜನಾಧಿಪತ್ಯಕ್ಕೆ ಮೇಲರ್ತಗತಿಯ ಮಾದರಿಯನ್ನೊದಗಿಸುತ್ತದೆ; ಆದರೆ ಹೋಲಿ ರೋಮನ್ ಸಾಮ್ರಾಜ್ಯದ ಸ್ವತಂತ್ರ ನಗರಗಳು, ವರ್ತಕ ಸಂಘಗಳ ನಗರಗಳು ಮತ್ತು ಇಂಗ್ಲೆಂಡ್ ಮತ್ತು ಪಶ್ಚಿಮ ಯೂರೋಪಿನ ಸನ್ನದು ಪಡೆದ ನಗರಗಳು ಸಹ ಚಿಕ್ಕದಾದರೂ ಆತ್ಮಗೌರವ ಮತ್ತು ಸುಸಂಸ್ಕೃತಿಯ ಶ್ರೀಮಂತ ಪದವಿ [ಶ್ರೀಮಂತ ಪ್ರಭುತ್ವ] ಯ ಮೂಲಕ ಬಿಗಿಯಾದ ಸ್ವಲ್ಪಜನಾಧಿಪತ್ಯವನ್ನು ನಡೆಸುವ ಸಾಮಾನ್ಯ ಪ್ರವೃತ್ತಿಯನ್ನು ತೋರಿಸಿವೆ.”
ಎಲ್ಲ ಸರಕಾರಗಳು ಶ್ರೀಮಂತ ಪ್ರಭುತ್ವದ ಪ್ರಕೃತಿಯವುಗಳು, ಏಕೆಂದರೆ ಅವೆಲ್ಲವೂ ಅಧಿಕಾರದಲ್ಲಿ ಅತಿ ಯೋಗ್ಯ ವ್ಯಕ್ತಿಗಳನ್ನಿಡಲು ಪ್ರಯತ್ನಿಸುತ್ತವೆ ಎಂದು ಕೆಲವರು ಸ್ವಲ್ಪ ಸಕಾರಣವಿದ್ದೇ ವಾದಿಸಿದ್ದಾರೆ. ಒಂದು ಆಡಳಿತ ವರ್ಗದ ಭಾವನೆಯೆ ಈ ವೀಕ್ಷಣವನ್ನು ಬಲಪಡಿಸುವಂತಾಗಿದೆ. ಒಂದು ಪ್ರಮಾಣ ಗ್ರಂಥ ಈ ಕಾರಣದಿಂದ ತೀರ್ಮಾನಿಸುವುದು: “ಆಳುವ ವರ್ಗ ಮತ್ತು ಗಣ್ಯರು, ಪ್ಲೇಟೋ ಮತ್ತು ಅರಿಸ್ಟಾಟಲರು ಯಾವುದನ್ನು ಆದರ್ಶವೆಂದು ವಾದಿಸಿದ್ದಾರೊ ಅದನ್ನು ವಾಸ್ತವಿಕ ಎಂದು ವರ್ಣಿಸಲಿಕ್ಕಿರುವ ಸಮಾನಾರ್ಥಕ ಪದಗಳಾಗಿವೆ.”
‘ಸರ್ವೋತ್ತಮವಾದುದರ’ ತಲಾಷಿನಲ್ಲಿ
ಗ್ರೀಕ್ ತತ್ವಜ್ಞಾನಿಗಳು ತೋರಿಬರುವುದಕ್ಕೆ ಶತಮಾನಗಳ ಮೊದಲು, (ಧಣಿ ಮತ್ತು ಹಿಡುವಳಿದಾರರಿದ್ದ) ಒಂದು ಊಳಿಗಮಾನ್ಯ ಸಮಾಜ ಪುರಾತನ ಚೈನ ದೇಶದ ಚೌ ರಾಜಮನೆತನದ ಅಧಿಕಾರದಲ್ಲಿ ಸ್ವಲ್ಪ ಮಟ್ಟಿಗೆ ಸ್ಥಾಯಿತ್ವ ಮತ್ತು ಶಾಂತಿಯನ್ನು ತಂದಿತು. ಆದರೆ, ಸಾ.ಶ.ಪೂ. 722ರ ಬಳಿಕ, ಚುನ್ ಚಿಯು ಎಂದು ಕರೆಯಲ್ಪಟ್ಟಿರುವ ಸಮಯಾವಧಿಯಲ್ಲಿ, ಈ ಊಳಿಗಮಾನ್ಯ ಪದ್ಧತಿ ಕ್ರಮೇಣ ದುರ್ಬಲಗೊಂಡಿತು. ಈ ಸಮಯಾವಧಿಯ ಕೊನೆಯ ಭಾಗದಲ್ಲಿ, ಊಳಿಗಮಾನ್ಯ ಕುಟುಂಬಗಳಲ್ಲಿ ಕೆಲಸ ಮಾಡುತ್ತಿದ್ದ ಮಾಜಿ “ಸ್ವದಂಶೀಯರು”, ಮತ್ತು ಹಳೆಯ ಕುಲೀನ ಮನೆತನಗಳ ವಂಶಸ್ಥರು ಸೇರಿರುವ ಒಂದು ಹೊಸ ಗಣ್ಯ ವರ್ಗ ಹೊರಬಂತು. ಈ ಗಣ್ಯ ವ್ಯಕ್ತಿಗಳು ಸರಕಾರದಲ್ಲಿ ಮುಖ್ಯ ಸ್ಥಾನಗಳನ್ನು ಸೇರಿದರು. ಪ್ರಸಿದ್ಧ ಚೈನೀಸ್ ಜ್ಞಾನಿಯಾಗಿದ್ದ ಕನ್ಫ್ಯೂಷಿಯಸ್, ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವಂತೆ, “ನಾಯಕತ್ವಕ್ಕೆ ಅರ್ಹತೆ ಕೊಡುವುದು ಹುಟ್ಟಿನ ಬದಲಿಗೆ ಸಾಮರ್ಥ್ಯ ಮತ್ತು ನೈತಿಕ ಉತ್ಕೃಷ್ಟತೆಯೆ” ಎಂಬುದನ್ನು ಒತ್ತಿಹೇಳಿದನು.
ಆದರೆ ಯೂರೋಪಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಬಳಿಕ, ಗಣ್ಯರನ್ನು, ಆಳಲು ಅತ್ಯರ್ಹರನ್ನು ಹೆಕ್ಕುವುದರಲ್ಲಿ “ಸಾಮರ್ಥ್ಯ ಮತ್ತು ನೈತಿಕ ಉತ್ಕೃಷ್ಟತೆ” ಪ್ರಶ್ನೆ ಕೇವಲ ಕಡಮೆಯಾಗಿತ್ತು. ಹಾರ್ವರ್ಡ್ ಪ್ರೊಫೆಸರ್ ಕಾರ್ಲ್ ಜೆ. ಫ್ರೀಡ್ರಿಕ್ ಗಮನಿಸುವುದೇನಂದರೆ, “ಹದಿನೆಂಟನೆಯ ಶತಕದ ಇಂಗ್ಲೆಂಡಿನ ಗಣ್ಯ ವ್ಯಕ್ತಿಯು ಪ್ರಧಾನವಾಗಿ ರಕ್ತಸಂಬಂಧ ಮತ್ತು ಐಶ್ವರ್ಯದಲ್ಲಿ ಗಣ್ಯನಾಗಿದ್ದನು. ವೆನೀಸ್ನಲ್ಲಿಯೂ ಇದು ನಿಜವಾಗಿತ್ತು.” ಅವರು ಮುಂದುವರಿಸಿ ಹೇಳಿದ್ದು: “ಹದಿನೆಂಟನೆಯ ಶತಮಾನದ ಪ್ರಷ್ಯದಂಥ ಕೆಲವು ದೇಶಗಳಲ್ಲಿ ಗಣ್ಯ ವರ್ಗ ರಕ್ತಸಂಬಂಧ ಮತ್ತು ಮಿಲಿಟರಿ ಶೌರ್ಯದ ಮೇಲೆ ಆಧಾರಿತವಾಗಿತ್ತು.”
‘ಉತ್ತಮ ಜನರ’ ಸದ್ಗುಣಗಳು ಅವರ ಸಂತಾನಕ್ಕೆ ದಾಟಿಸಲ್ಪಡುತ್ತವೆ ಎಂಬ ವಿಚಾರವೇ ಹಿಂದಿನ ದಿನಗಳ ಅರಸರ ವಿವಾಹ ಅಭ್ಯಾಸಗಳಿಗೆ ಕಾರಣವಾಗಿದೆ. ಮಧ್ಯಯುಗಗಳಲ್ಲಿ, ವಂಶ ಶ್ರೇಷ್ಠತೆಯ ವಿಚಾರ ರೂಢಿಯಲ್ಲಿತ್ತು. ಜನಸಾಮಾನ್ಯನನ್ನು ವಿವಾಹ ಮಾಡಿಕೊಳ್ಳುವುದು ವಂಶದ ಕುಲೀನತೆಯನ್ನು ಕುಂದಿಸಿದಂತೆ, ದೈವನಿಯಮವನ್ನು ನೋಯಿಸಿದಂತೆ ಎಂದು ಎಣಿಸಲ್ಪಡುತ್ತಿತ್ತು. ಈ ಜೀವಿ ಶ್ರೇಷ್ಠತೆಯು ಆ ಬಳಿಕ ಸ್ವಲ್ಪ ಹೆಚ್ಚು ತರ್ಕಸಮ್ಮತವಾದ ಸಮರ್ಥನೆಗೆ—ಉತ್ತಮ ಅವಕಾಶ, ವಿದ್ಯೆ, ಸಾಮರ್ಥ್ಯ, ಯಾ ಸಾಧನೆಯ ಮೇಲೆ ಆಧಾರಿತವಾದ ಶ್ರೇಷ್ಠತೆಗೆ ದಾರಿ ಮಾಡಿಕೊಟ್ಟಿತು.
ಪದವಿಯೊಂದಿಗೆ ಜವಾಬ್ದಾರಿ (noblesse oblige) ಸೇರಿದೆ ಎಂದು ಪ್ರಸಿದ್ಧವಾಗಿರುವ ಮೂಲಸೂತ್ರ ಶ್ರೀಮಂತ ಪ್ರಭುತ್ವಗಳ ಯಶಸ್ವಿಗೆ ನೆಚ್ಚಿಗೆ ಕೊಡಲಿಕ್ಕಾಗಿತ್ತು. ಪದಶಃ “ಕುಲೀನತೆ ಬದ್ಧಮಾಡುತ್ತದೆ” ಎಂಬ ಅರ್ಥವಿರುವ ಇದು “ಉನ್ನತ ತರಗತಿ ಯಾ ಹುಟ್ಟಿನೊಂದಿಗೆ ಕೂಡಿರುವ ಗೌರವವುಳ್ಳ, ಉದಾರತೆಯ, ಮತ್ತು ಉತ್ತರವಾದದ ವರ್ತನೆಯ ಹಂಗನ್ನು” ಸೂಚಿಸಿತು. ಅವರ “ಶ್ರೇಷ್ಠತೆ”ಯ ಕಾರಣ ಕುಲೀನರಾಗಿ ಹುಟ್ಟಿದವರು ಇತರರ ಆವಶ್ಯಕತೆಗಳನ್ನು ಜವಾಬ್ದಾರಿಯಿಂದ ಪೂರೈಸುವ ಹಂಗಿನಲಿದ್ದರು. ಈ ಮೂಲಸೂತ್ರವು ಪುರಾತನಕಾಲದ ಸ್ಪಾರ್ಟದಂಥ ಮತ್ತು ಜಪಾನಿನಂಥ ಶ್ರೀಮಂತ ಪ್ರಭುತ್ವಗಳಲ್ಲಿ ಕಂಡುಬಂದಿದೆ. ಸ್ಪಾರ್ಟದ ಯುದ್ಧವೀರರು ಮತ್ತು ಜಪಾನಿನ ಸ್ಯಾಮುರೈ ಸೈನಿಕ ಜಾತಿಯವರು ತಮ್ಮ ಸ್ವಂತ ಅಭಿರುಚಿಗಿಂತ ಇತರರದ್ದನ್ನು ಮೊದಲಾಗಿ ಇಡಲು ಹಂಗಿಗರಾಗಿದ್ದರು.
ಶ್ರೀಮಂತ ಪ್ರಭುತ್ವಗಳಲ್ಲಿ ಕೊರತೆ ಕಂಡುಬರುವುದು
ಶ್ರೀಮಂತ ಪ್ರಭುತ್ವಗಳ ಅಪೂರ್ಣತೆಯನ್ನು ಸುಲಭವಾಗಿ ಚಿತ್ರಿಸಬಹುದು. ಆದಿ ರೋಮಿನಲ್ಲಿ, ಮೇಲರ್ತಗತಿಯಲ್ಲಿ ಹುಟ್ಟಿದ, ಶ್ರೀಮಂತ ಕುಲಸ್ಥರು (patricians) ಎಂದು ಕರೆಯಲಾದವರು ಮಾತ್ರ ರೋಮನ್ ಶಾಸನಸಭೆಯ ಸದಸ್ಯರಾಗಲು ಅರ್ಹರಾಗಿದ್ದರು. ಪಿಬ್ಲೀಯನ್ಸ್ ಎಂದು ಕರೆಯಲ್ಪಟ್ಟ ಸಾಮಾನ್ಯ ಪ್ರಜೆ ಇದಕ್ಕೆ ಅರ್ಹರಾಗಿರಲಿಲ್ಲ. ಆದರೆ ಪ್ರಭುಗಳು “ಸಾಮರ್ಥ್ಯ ಮತ್ತು ನೈತಿಕ ಉತ್ಕೃಷ್ಟತೆಯ” ಪುರುಷರಾಗಿರಬೇಕೆಂದು ಕನ್ಫ್ಯೂಷಿಯಸನು ಅವಶ್ಯಪಟ್ಟದ್ದಕ್ಕೆ ವ್ಯತಿರಿಕ್ತವಾಗಿ, ಈ ಸೆನೆಟಿನ ಸದಸ್ಯರು ಹೆಚ್ಚು ಭ್ರಷ್ಟರೂ ದಬ್ಬಾಳಿಕೆ ನಡೆಸುವವರೂ ಆದರು. ಇದರ ಪರಿಣಾಮವಾಗಿ ಆಂತರಿಕ ಹೋರಾಟ ಉಂಟಾಯಿತು.
ಸುಧಾರಣೆಗಳು ಪದೇ ಪದೇ ನಡೆದರೂ ಈ ಶಾಸಕ ಸ್ವಲ್ಪಜನಾಧಿಪತ್ಯ, ಕಡಮೆ ಪಕ್ಷ ಜೂಲಿಯಸ್ ಸೀಸರನು ಸಾ.ಶ.ಪೂ. 44 ರಲ್ಲಿ ತನ್ನ ಹತ್ಯವಾಗುವುದಕ್ಕೆ ಕೆಲವೇ ವರ್ಷ ಮೊದಲು ಸರ್ವಾಧಿಕಾರವನ್ನು ಸ್ಥಾಪಿಸುವ ತನಕ ಮುಂದುವರಿಯಿತು. ಅವನ ಮರಣಾನಂತರ, ಶ್ರೀಮಂತ ಪ್ರಭುತ್ವವನ್ನು ಪುನಃ ಚೇತರಿಸಲಾಯಿತು. ಆದರೆ ಸಾ.ಶ.ಪೂ. 29ರೊಳಗೆ ಇದನ್ನು ಪುನಃ ತೆಗೆದುಬಿಡಲಾಯಿತು. ಕಾಲ್ಯರ್ಸ್ ಎನ್ಸೈಕ್ಲೊಪೀಡಿಯ ವಿವರಿಸುವುದು: “ರೋಮಿನ ಬೆಳೆಯುತ್ತಿದ್ದ ಅಧಿಕಾರ, ಸಂಪತ್ತು, ಮತ್ತು ಭೂಮೇರೆಯ ಕಾರಣ ಶ್ರೀಮಂತ ಪ್ರಭುತ್ವವು ಭ್ರಷ್ಟತೆಯ ಸ್ವಲ್ಪಜನಾಧಿಪತ್ಯವಾಗಿ ಪರಿಣಮಿಸಿತ್ತು, ಮತ್ತು ಅದರ ಪೌರ ಮನೋಭಾವದ ನಷ್ಟವು ಸಾರ್ವಜನಿಕ ಗೌರವ ನಷ್ಟದಲ್ಲಿ ಪ್ರತಿಬಿಂಬಿತವಾಗಿತ್ತು. ಅದರ ಕುಸಿತವು ನಿರಂಕುಶ ಪ್ರಭುತ್ವವನ್ನು ಬರಮಾಡಿತು.”
ಮುಂದಿನ ಸುಮಾರು 1,200 ವರ್ಷಗಳಲ್ಲಿ, ಯೂರೋಪಿನಲ್ಲಿ, ಹೆಸರಿನಲ್ಲಿ ರಾಜಪ್ರಭುತ್ವಗಳಾಗಿದ್ದರೂ ಶ್ರೀಮಂತ ಪ್ರಭುತ್ವಗಳೇ ರೂಢಿಯಾಗಿದ್ದವು. ಸಮಯಾನಂತರ, ಅನೇಕ ರಾಜಕೀಯ. ಆರ್ಥಿಕ, ಮತ್ತು ಸಾಂಸ್ಕೃತಿಕ ಬದಲಾವಣೆಗಳು ಕ್ರಮೇಣ ಈ ಪದ್ಧತಿಯನ್ನು ನವೀಕರಿಸಿದವು. ಆದರೆ, ಈ ಎಲ್ಲ ಸಮಯದಲ್ಲಿ ಯೂರೋಪಿಯನ್ ಶ್ರೀಮಂತ ಪ್ರಭುತ್ವವು ಬಲಾಢ್ಯವಾಗಿ ಉಳಿದು, ತನ್ನ ಜಮೀನನ್ನು ಉಳಿಸಿಕೊಂಡು, ಮಿಲಿಟರಿ ಅಧಿಕಾರದ ಮೇಲೆ ತನ್ನ ಬಿಗಿಹಿಡಿತವನ್ನು ಇಟ್ಟುಕೊಂಡರೂ, ಅದೇ ಸಮಯದಲ್ಲಿ ಹೆಚ್ಚೆಚ್ಚು ಪರೋಪಜೀವಿಗಳೂ, ವ್ಯರ್ಥವ್ಯಯಿಗಳೂ, ದುರಹಂಕಾರಿಗಳೂ, ಹುಡುಗಾಟಿಕೆಯವರೂ ಆದರು.
ಈ ಶ್ರೀಮಂತ ಪ್ರಭುತ್ವವು 1780ಗಳಲ್ಲಿ ಕಠಿಣವಾದ ಒಂದು ಪೆಟ್ಟನ್ನು ಅನುಭವಿಸಿತು. ಫ್ರಾನ್ಸಿನ XVI ನೆಯ ಲೂಯಿ ಅರಸನು, ಹಣಕಾಸಿನ ಕಷ್ಟದಲ್ಲಿದ್ದಾಗ ಫ್ರೆಂಚ್ ಶ್ರೀಮಂತ ಪ್ರಭುಗಳೊಂದಿಗೆ ಅವರು ತಮ್ಮ ರಾಜ್ಯಾದಾಯ ಅವಕಾಶದಲ್ಲಿ ಸ್ವಲ್ಪವನ್ನು ಬಿಟ್ಟು ಬಿಡಬೇಕೆಂದು ಕೇಳಿಕೊಂಡನು. ಆದರೆ ಅವರು ಅವನನ್ನು ಸಮರ್ಥಿಸುವ ಬದಲಿಗೆ ಅವನ ಕಷ್ಟದಿಂದ ಸ್ವಪ್ರಯೇಜನ ಪಡೆದುಕೊಂಡು ರಾಜಪ್ರಭುತ್ವವನ್ನು ಶಿಥಿಲಗೊಳಿಸಿ ತಾವು ನಷ್ಟಹೊಂದಿರುವ ಅಧಿಕಾರದಲ್ಲಿ ಸ್ವಲ್ಪವನ್ನು ಹಿಂದೆ ಪಡೆಯಲು ಅಪೇಕ್ಷಿಸಿದರು. “ಜನರ, ರಾಜನಿಂದ, ಶ್ರೀಮಂತರಿಗಾಗಿರುವ ಸರಕಾರದಲ್ಲಿ ಅಸಂತೃಪ್ತಿಪಟ್ಟು ಅವರು [ಶ್ರೀಮಂತರು] ಜನರ, ಶ್ರೀಮಂತರಿಂದ, ಮತ್ತು ಶ್ರೀಮಂತರಿಗಾಗಿರುವ ಸರಕಾರವನ್ನು ಅವರು ಪಡೆಯಲು ಪ್ರಯತ್ನಿಸಿದರು” ಎನ್ನುತ್ತಾರೆ, ಕೊಲಂಬಿಯ ಯೂನಿವರ್ಸಿಟಿಯ ಹಿಸ್ಟರಿ ಪ್ರೊಫೆಸರ್ ಹೆರ್ಮನ್ ಆಸುಬೆಲ್. ಈ ಮನೋಭಾವವು 1789ರ ಫ್ರೆಂಚ್ ವಿಪ್ಲವವನ್ನು ತರ್ವೆಗೊಳಿಸಿತು.
ಫ್ರಾನ್ಸಿನಲ್ಲಿ ನಡೆದ ಈ ಘಟನೆಗಳು ಪ್ರಧಾನ ಪರಿವರ್ತನೆಗಳನ್ನು ತಂದು ದೇಶದ ಹೊರಗೂ ಇದರ ಪ್ರಭಾವ ತೋರಿಬಂತು. ಶ್ರೀಮಂತ ಪ್ರಭುತ್ವ ಅದಕ್ಕಿದ್ದ ವಿಶೇಷ ಅವಕಾಶಗಳನ್ನು ಕಳೆದುಕೊಂಡಿತು, ಊಳಿಗಮಾನ್ಯ ಪದ್ಧತಿ ರದ್ದಾಯಿತು. ಮಾನವ ಮತ್ತು ನಾಗರಿಕನ ಹಕ್ಕುಗಳ ಘೋಷಣೆಯನ್ನೂ ಒಂದು ಸಂವಿಧಾನವನ್ನೂ ಅಂಗೀಕರಿಸಲಾಯಿತು. ಇದಲ್ಲದೆ ಪುರೋಹಿತವರ್ಗದ ಅಧಿಕಾರ ಶಾಸನದ ಮೂಲಕ ಮಿತಿಗೊಳಗಾಯಿತು.
ಹೀಗೆ, ಸ್ವಲ್ಪ ಜನರ ಸರಕಾರ—ಅವರು ಸರ್ವೋತ್ತಮರೆಂದು ಎಣಿಸಲ್ಪಟ್ಟರೂ—ಅನೇಕರಿಂದ ತಕ್ಕಡಿಗಳಲ್ಲಿ ತೂಗಲಾಗಿ ಕೊರತೆಯುಳ್ಳದ್ದಾಗಿ ಕಂಡುಬಂದಿದೆ.
ಅಂತಿಮವಾಗಿ ‘ಸರ್ವೋತ್ತಮವಾದುದನ್ನು’ ಕಂಡುಹಿಡಿಯುವುದು
‘ಸರ್ವೋತ್ತಮರಾದವರು’ ಸದಾ ತಮ್ಮ ಕೀರ್ತಿಗೆ ತಕ್ಕಂತೆ ಬಾಳುವುದಿಲ್ಲವೆಂಬ ಈ ಸ್ಪಷ್ಟ ನಿಜತ್ವವು, ‘ಸರ್ವೋತ್ತಮರಿಂದ’ ಸರಕಾರದ ಒಂದು ದೊಡ್ಡ ಬಲಹೀನತೆಯನ್ನು ತೋರಿಸುತ್ತದೆ. ಅದು, ನಿಜವಾಗಿ ‘ಸರ್ವೋತ್ತಮರು’ ಯಾರು ಎಂಬುದನ್ನು ನಿರ್ಧರಿಸುವ ತಾಪತ್ರಯವೇ. ಆಳಲು ಬಲು ಅರ್ಹತೆಯುಳ್ಳವರು ಎಂಬ ಆವಶ್ಯಕತೆಯನ್ನು ಮುಟ್ಟಲು, ಐಶ್ವರ್ಯ, ಕುಲೀನ ವಂಶ, ಯಾ ಮಿಲಿಟರಿ ಶೌರ್ಯಕ್ಕೂ ಹೆಚ್ಚಿನದು ಬೇಕು.
ಅತ್ಯುತ್ತಮ ಡಾಕ್ಟರರು, ಅಡುಗೆಯವರು, ಯಾ ಮೋಚಿಗಳು ಯಾರೆಂಬುದನ್ನು ನಿಶ್ಚಯಿಸುವುದು ಕಷ್ಟವಲ್ಲ. ಅವರ ಕೆಲಸ ಯಾ ಅವರ ಉತ್ಪಾದನೆಯಿಂದ ಅದು ವ್ಯಕ್ತವಾಗುತ್ತದೆ. “ಆದರೆ, ಸರಕಾರದ ವಿಷಯದಲ್ಲಿ ಇದು ಸುಲಭವಲ್ಲ” ಎನ್ನುತ್ತಾರೆ ಪ್ರೊಫೆಸರ್ ಫ್ರೀಡ್ರಿಕ್. ಸರಕಾರವು ಹೇಗಿರಬೇಕು ಮತ್ತು ಏನು ಮಾಡಬೇಕು ಎಂಬ ವಿಷಯ ಜನರ ಭಿನ್ನಾಭಿಪ್ರಾಯವೇ ಅದನ್ನು ಕಷ್ಟಕರವಾಗಿ ಮಾಡುತ್ತದೆ. ಅಲ್ಲದೆ, ಸರಕಾರದ ಗುರಿಗಳು ಸದಾ ಬದಲಾಗುತ್ತಿವೆ. ಹೀಗೆ, ಫ್ರೀಡ್ರಿಕ್ ಅವರು ಹೇಳುವಂತೆ, “ಗಣ್ಯರು ಯಾರೆಂಬುದು ಅನಿಶ್ಚಿತವಾಗಿ ಉಳಿಯುತ್ತದೆ.”
‘ಸರ್ವೋತ್ತಮರಿಂದ ಸರಕಾರವು’ ನಿಜವಾಗಿ ಸರ್ವೋತ್ತಮವಾಗಬೇಕಾದರೆ, ಗಣ್ಯರನ್ನು ಮನುಷ್ಯಾತೀತ ಜ್ಞಾನವುಳ್ಳಾತನೂ ತಪ್ಪು ಮಾಡದೆ ತೀರ್ಮಾನಿಸುವವನೂ ಆದ ಒಬ್ಬನು ಆರಿಸಬೇಕು. ಆರಿಸಲ್ಪಡುವವರು ಮುರಿಯಲಾಗದ ನೈತಿಕ ಸಮಗ್ರತೆಯುಳ್ಳವರೂ ತಮ್ಮ ಸರಕಾರದ ಮಾರ್ಪಾಟಾಗದ ಗುರಿಗಳಿಗೆ ಪೂರ್ತಿ ನಿಷ್ಠೆಯುಳ್ಳವರೂ ಆಗಿರಬೇಕು. ಸ್ವಹಿತಕ್ಕೆ ಮೊದಲು ಇತರರ ಹಿತವನ್ನು ಇಡುವ ಅವರ ಅಪೇಕ್ಷೆ ಸಂಶಯರಹಿತವಾಗಿರಬೇಕು.
ಯೆಹೋವ ದೇವರು ಇಂಥ ಒಂದು ವರ್ಗವನ್ನೆ—ಆತನ ಪುತ್ರನಾದ ಯೇಸು ಕ್ರಿಸ್ತನನ್ನೂ ಅವನ ನಂಬಿಗಸ್ತ ಹಿಂಬಾಲಕರಲ್ಲಿ ಕೆಲವರನ್ನೂ—ಆರಿಸಿದ್ದಾನೆಂದೂ ಒಂದು ಸಾವಿರ ವರ್ಷಗಳ ತನಕ ಭೂಮಿಯನ್ನು ಆಳಲು ಅವರನ್ನು ನೇಮಿಸಿದ್ದಾನೆಂದೂ ಬೈಬಲು ತೋರಿಸುತ್ತದೆ. (ಲೂಕ 9:35; 2 ಥೆಸಲೊನೀಕ 2:13, 14; ಪ್ರಕಟನೆ 20:6) ತಪ್ಪು ಮಾಡುವ ಮಾನವರಾಗಿ ಅಲ್ಲ, ತಪ್ಪು ಮಾಡದ ಅಮರ ಆತ್ಮ ಜೀವಿಗಳಾಗಿ ಕ್ರಿಸ್ತನೂ ಅವನ ಜೊತೆಪ್ರಭುಗಳೂ ಭೂಮಿಗೆ ಬಾಳಿಕೆ ಬರುವ ಶಾಂತಿ, ಭದ್ರತೆ ಮತ್ತು ಸಂತೋಷವನ್ನು ಸುರಿದು ಮಾನವಕುಲವನ್ನು ಪರಿಪೂರ್ಣತೆಗೆ ಪುನಃ ಸ್ಥಾಪಿಸುವರು. ಯಾವ ಮಾನವ ಸರಕಾರವೇ ಆಗಲಿ—ಅದು ‘ಸರ್ವೋತ್ತಮರ ಸರಕಾರವೆ’ ಆಗಲಿ—ಇಂಥ ವಿಷಯವನ್ನು ನೀಡಬಲ್ಲದೊ? (g90 9/8)
[ಪುಟ 26 ರಲ್ಲಿರುವ ಚೌಕ]
ಆಧುನಿಕ ದಿನದ ಸ್ವಲ್ಪಜನಾಧಿಪತ್ಯ
“ಸ್ವಲ್ಪಜನಾಧಿಪತ್ಯ ಪ್ರವೃತ್ತಿಗಳು . . . ಮುಂದುವರಿದ ರಾಜಕೀಯ ಪದ್ಧತಿಗಳ ಸಕಲ ಕಚೇರಿಶಾಹಿ ರಚನೆಗಳಲ್ಲಿ ಕಂಡುಬಂದಿವೆ. ಆಧುನಿಕ ಸಮಾಜದ ಮತ್ತು ಅದರ ಸರಕಾರದ ಬೆಳೆಯುತ್ತಿರುವ ಜಟಿಲತೆ ಆಡಳಿತಗಾರರ ಮತ್ತು ಪರಿಣತರ ಕಮಿಟಿಗಳ ಕೈಗಳಿಗೆ ಹೆಚ್ಚು ಅಧಿಕಾರವನ್ನು ಕೊಡುತ್ತದೆ. ಸಾಂವಿಧಾನಿಕ ಸರಕಾರಗಳಲ್ಲಿಯೂ, ಈ ಕಚೇರಿಯ ನಿರ್ಣಯಗಾರರನ್ನು ಹೇಗೆ ಉತ್ತರವಾದಿಗಳಾಗಿ ಮಾಡಿ ಅವರ ಅಧಿಕಾರವನ್ನು ಕಾರ್ಯಸಾಧಕವಾಗಿ—ಕಾರ್ಯನೀತಿ ಮಾಡುವ ವಿಧಾನದ ಕಾರ್ಯಸಾಧಕತೆ ಮತ್ತು ವಿವೇಚನೆಗೆ ಹಾನಿ ಮಾಡದೆ—ತಡೆಯಬಹುದೆಂಬ ಪ್ರಶ್ನೆಗೆ ಯಾವ ಪೂರ್ತಿಯಾಗಿ ತೃಪ್ತಿಕರವಾದ ಉತ್ತರವೂ ಕಂಡುಹಿಡಿಯಲ್ಪಟ್ಟಿರುವುದಿಲ್ಲ.”—ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ.
[ಪುಟ 25 ರಲ್ಲಿರುವ ಚಿತ್ರ]
ಶ್ರೀಮಂತ ಪ್ರಭುತ್ವ ಮತ್ತು ಪ್ರಜಾಪ್ರಭುತ್ವವನ್ನು ಜೋಡಿಸುವಲ್ಲಿ ಅತ್ಯುತ್ತಮ ಸರಕಾರ ಉಂಟಾಗುವುದೆಂದು ಅರಿಸ್ಟಾಟಲನು ನಂಬಿದನು.
[ಕೃಪೆ]
National Archaeological Museum, Athens