ಮಾನವ ಆಳಿಕೆ ತಕ್ಕಡಿಗಳಲ್ಲಿ ತೂಗಲ್ಪಡುವುದು
ಭಾಗ 4 “ಜನತೆಯಾದ ನಾವು”
ಪ್ರಜಾಪ್ರಭುತ್ವ: ಜನರಿಂದ ಒಂದೇ ನೇರವಾಗಿ ಅಥವಾ ಚುನಾಯಿತ ಪ್ರತಿನಿಧಿಗಳ ಮೂಲಕ ಚಲಾಯಿಸಲ್ಪಡುವ ಸರಕಾರ.
“ಯುನೊಯಿಟೆಡ್ ಸ್ಟೇಟ್ಸಿನ ಜನತೆಯಾದ ನಾವು . . . ಈ ಸಂವಿಧಾನವನ್ನು ವಿಧಿಸಿ ಸ್ಥಾಪಿಸುತ್ತೇವೆ.” ಅಮೆರಿಕದ ಸಂವಿಧಾನದ ಪೀಠಿಕೆಯಲ್ಲಿರುವ ಈ ಆರಂಭದ ಮಾತುಗಳು ಸಮಂಜಸ, ಏಕೆಂದರೆ ಅಮೆರಿಕವು ಪ್ರಜಾಪ್ರಭುತ್ವವಾಗಬೇಕೆಂದು ಪ್ರಾರಂಭ ಕರ್ತರ ಉದ್ದೇಶವಾಗಿತ್ತು. ಗ್ರೀಕ್ ಮೂಲದಿಂದ ಬಂದಿರುವ “ಪ್ರಜಾಪ್ರಭುತ್ವ” (democracy) ಎಂದರೆ “ಜನರ ಆಳಿಕೆ,” ಅಥವಾ, ಅಮೆರಿಕದ 16ನೆಯ ಅಧ್ಯಕ್ಷರಾದ ಅಬ್ರಹಾಮ್ ಲಿಂಕನ್ ನಿರೂಪಿಸಿದಂತೆ: “ಜನತೆಯ, ಜನತೆಯಿಂದ, ಮತ್ತು ಜನತೆಗಾಗಿರುವ ಸರಕಾರ.”
ಪ್ರಜಾಪ್ರಭುತ್ವದ ತೊಟ್ಟಿಲು ಎಂದು ಅನೇಕ ವೇಳೆ ಕರೆಯಲಾಗಿರುವ ಪುರಾತನ ಗ್ರೀಸ್, ಪ್ರಜಾಪ್ರಭುತ್ವವು ತನ್ನ ನಗರ-ಸರಕಾರಗಳಲ್ಲಿ, ಗಮನಾರ್ಹವಾಗಿ ಆ್ಯಥೆನ್ಸ್‌ನಲ್ಲಿ, ಸಾ.ಶ.ಪೂ. ಐದನೆಯ ಶತಕದಷ್ಟೂ ಪೂರ್ವದಲ್ಲಿ ಆಚರಣೆಯಲ್ಲಿತ್ತು ಎಂದು ಹೇಳಿಕೊಳ್ಳುತ್ತದೆ. ಆದರೆ ಅಂದಿನ ಪ್ರಜಾಪ್ರಭುತ್ವ ಇಂದಿನಂತೆ ಇರಲಿಲ್ಲ. ಹೇಗೆಂದರೆ, ಒಂದನೆಯದಾಗಿ, ಗ್ರೀಕ್ ಪೌರರು ಆಗ ಆಳುವ ವಿಧಾನದಲ್ಲಿ ನೇರವಾಗಿ ಸೇರಿಕೊಂಡಿದ್ದರು. ಪ್ರತಿ ಪೌರ ಪುರುಷನು ಪ್ರಚಲಿತ ಸಮಸ್ಯೆಗಳನ್ನು ಚರ್ಚಿಸಲು ವರ್ಷವಿಡೀ ಕೂಡಿಬಂದ ಪ್ರತಿನಿಧಿ ಸಭೆಗೆ ಸೇರಿದ್ದನು. ಈ ಸಭೆ ಸರಳ ಬಹುಮತದಿಂದ ಆ ನಗರ-ಸರಕಾರದ ಯಾ ಪೊಲಿಸಿನ ರಾಜಕೀಯವನ್ನು ನಿರ್ಧರಿಸಿತು.
ಆದರೆ ಇಂಥ ರಾಜಕೀಯ ಹಕ್ಕುಗಳು ಸ್ತ್ರೀಯರಿಗೆ, ದಾಸರಿಗೆ ಮತ್ತು ವಿದೇಶೀ ನಿವಾಸಿಗಳಿಗೆ ಇರಲಿಲ್ಲ. ಹೀಗೆ, ಆ್ಯಥೆನ್ಸಿನ ಪ್ರಜಾಪ್ರಭುತ್ವ ಸುಯೋಗಿಗಳಾದ ಕೆಲವರಿಗೆ ಮಾತ್ರ ಇದ್ದಂಥ ಶ್ರೀಮಂತ ಪ್ರಭುತ್ವದ ರೂಪವಾಗಿತ್ತು. ಜನಸಂಖ್ಯೆಯಲ್ಲಿ ಅರ್ಧಾಂಶ ಯಾ ಐದರಲ್ಲಿ ನಾಲ್ಕು ಅಂಶ ಜನರಿಗೆ ರಾಜಕೀಯ ವಿಚಾರಗಳಲ್ಲಿ ಯಾವ ಹಕ್ಕೂ ಇರಲಿಲ್ಲ.
ಆದರೂ ನಿರ್ಣಯಗಳನ್ನು ಮಾಡುವ ಮೊದಲು ಮತ ಕೊಡುವ ಪೌರರಿಗೆ ತಮ್ಮ ಅಭಿಪ್ರಾಯಗಳನ್ನು ಸೂಚಿಸುವ ಹಕ್ಕು ಇದ್ದುದರಿಂದ ಈ ಏರ್ಪಾಡಿನಿಂದಾಗಿ ವಾಕ್ ಸ್ವಾತಂತ್ರ್ಯ ಬೆಳೆಯಿತು. ರಾಜಕೀಯ ಅಧಿಕಾರ ಸ್ಥಾನ ಕೊಂಚ ಮಂದಿ ಗಣ್ಯರಿಗೆ ಮಾತ್ರ ಇರದೆ ಪ್ರತಿಯೊಬ್ಬ ಪೌರ ಪುರುಷನಿಗಿತ್ತು. ಒಬ್ಬೊಬ್ಬನಾಗಲಿ ಗುಂಪುಗಳಾಗಲಿ ರಾಜಕೀಯ ಅಧಿಕಾರವನ್ನು ದುರುಪಯೋಗಿಸುವುದನ್ನು ತಡೆಯಲು ನಿಯಂತ್ರಣ ಪದ್ಧತಿಯೊಂದಿತ್ತು.
“ಆ್ಯಥೆನ್ಸಿನ ಜನರಿಗೆ ತಮ್ಮ ಪ್ರಜಾಪ್ರಭುತ್ವದಲ್ಲಿ ಅಭಿಮಾನವಿತ್ತು” ಎನ್ನುತ್ತಾರೆ ಇತಿಹಾಸಗಾರ ಡಿ. ಬಿ. ಹೀಟರ್. “ಅದು ರಾಜ ಪ್ರಭುತ್ವ ಯಾ ಶ್ರೀಮಂತ ಪ್ರಭುತ್ವ, ಇವೆರಡಕ್ಕಿಂತಲೂ ಪೂರ್ಣ ಮತ್ತು ಸಿದ್ಧ ಜೀವನಕ್ಕೆ ಒಂದು ಹೆಜ್ಜೆ ಹತ್ತಿರವೆಂದು ಅವರು ನಂಬಿದರು.” ಪ್ರಜಾಪ್ರಭುತ್ವ ಹೀಗೆ ಒಳ್ಳೆಯ ಆರಂಭವನ್ನು ಪಡೆದು ಮಂದುವರಿಯಿತೆಂದು ವ್ಯಕ್ತವಾಯಿತು.
ಪ್ರಜಾಪ್ರಭುತ್ವ ತನ್ನ ತೊಟ್ಟಿಲಿಗಿಂತ ದೊಡ್ಡದಾಗಿ ಬೆಳೆದಿದೆ
ಅಮೆರಿಕದ ನ್ಯೂ ಇಂಗ್ಲೆಂಡಿನ ನಗರ ಕೂಟಗಳಲ್ಲಿ ಮತ್ತು ಸ್ವಲ್ಪ ಮಟ್ಟಿಗೆ ಸ್ವಿಟ್ಸರ್ಲೆಂಡಿನ ಕ್ಯಾಂಟನ್‌ಗಳಲ್ಲಿ ಚಿಕ್ಕ ರೀತಿಯಲ್ಲಿ ನಡೆಯುವುದನ್ನು ಬಿಟ್ಟರೆ, ನೇರವಾದ, ಯಾ ಶುದ್ಧ ಪ್ರಜಾಪ್ರಭುತ್ವವು ಈಗ ಅಸ್ತಿತ್ವದಲ್ಲಿಲ್ಲ. ಆಧುನಿಕ ರಾಜ್ಯಗಳ ವಿಪರೀತ ಗಾತ್ರ ಮತ್ತು ಅದರಲ್ಲಿರುವ ಲಕ್ಷಾಂತರ ನಾಗರಿಕರನ್ನು ಪರಿಗಣಿಸುವಾಗ, ಈ ರೀತಿಯ ಆಡಳಿತ ಔದ್ಯೋಗಿಕವಾಗಿ ಅಸಾಧ್ಯ. ಇದಲ್ಲದೆ, ಇಂದಿನ ಕಾರ್ಯಮಗ್ನ ಜಗತ್ತಿನಲ್ಲಿ ಎಷ್ಟು ಜನ ನಾಗರಿಕರಿಗೆ ತಾಸುಗಟ್ಟಲೆ ನಡೆಯುವ ರಾಜಕೀಯ ಚರ್ಚೆಯಲ್ಲಿ ಭಾಗವಹಿಸಲು ಸಮಯವಿದ್ದೀತು?
ಪ್ರಜಾಪ್ರಭುತ್ವವು ವಿವಾದಾತ್ಮಕ ವಯಸ್ಕನಾಗಿ—ಅನೇಕ ಮುಖಗಳುಳ್ಳದ್ದಾಗಿ—ಬೆಳೆದದೆ. ಟೈಮ್ ಪತ್ರಿಕೆ ವಿವರಿಸುವಂತೆ: “ಜಗತ್ತನ್ನು ಸ್ಪಷ್ಟವಾಗಿದ ಪ್ರಜಾಪ್ರಭುತ್ವ ಮತ್ತು ಅಪ್ರಜಾಪ್ರಭುತ್ವ ಜನಾಂಗಗಳಾಗಿ ವಿಂಗಡಿಸುವುದು ಅಸಾಧ್ಯ. ಪ್ರಜಾಪ್ರಭುತ್ವವೆಂದು ಕರೆಯಲ್ಪಡುವವುಗಳಲ್ಲಿ, ಸರ್ವಾಧಿಕಾರಗಳಲ್ಲಿ ಹೇಗೆ ವಿವಿಧ ರೀತಿಯ ನಿರೋಧಗಳಿವೆಯೊ ಹಾಗೆಯೆ ವೈಯಕ್ತಿಕ ಸ್ವಾತಂತ್ರ್ಯ, ಅನೇಕ ತತ್ವವಾದ ಮತ್ತು ಮಾನವ ಹಕ್ಕುಗಳಲ್ಲಿ ವರ್ಗೀಕರಣಗಳಿವೆ.” ಆದರೂ ಹೆಚ್ಚಿನವರು ಪ್ರಜಾಪ್ರಭುತ್ವ ಸರಕಾರಗಳ ಕೆಳಗೆ, ವೈಯಕ್ತಿಕ ಸ್ವಾತಂತ್ರ್ಯ, ಸಮಾನತೆ, ಮಾನವ ಹಕ್ಕುಗಳಿಗೆ ಗೌರವ, ಮತ್ತು ಕಾನೂನುಗಳ ಮೂಲಕ ನ್ಯಾಯ, ಈ ಮೊದಲಾದವುಗಳನ್ನು ಕಂಡುಕೊಳ್ಳಲು ನಿರೀಕ್ಷಿಸುತ್ತಾರೆ.
ಈ ಹಿಂದಿನ ಪ್ರತ್ಯಕ್ಷ ಪ್ರಜಾಪ್ರಭುತ್ವ ಇಂದಿನ ಪ್ರತಿನಿಧಿರೂಪದ ಪ್ರಜಾಪ್ರಭುತ್ವವಾಗಿ ಪರಿಣಮಿಸಿದೆ. ಶಾಸನ ಸಭೆಗಳು—ಅವು ಏಕಸಭೆ ಅಂದರೆ, ಒಂದು ಅಂತಸ್ತು ಇರುವ ಸಭೆಯಾಗಲಿ, ದ್ವಿಸಭೆ ಅಂದರೆ ಎರಡು ಅಂತಸ್ತು ಇರುವ ಸಭೆಯಾಗಲಿ—ಜನರಿಂದ ಅವರ ಪ್ರಯೋಜನಾರ್ಥವಾಗಿ ಅವರನ್ನು ಪ್ರತಿನಿಧೀಕರಿಸಲು ಮತ್ತು ನಿಯಮಗಳನ್ನು ಮಂಡಿಸಲು ಚುನಾಯಿಸಲ್ಪಟ್ಟ ಅಥವಾ ನೇಮಿಸಲ್ಪಟ್ಟ ವ್ಯಕ್ತಿಗಳಿಂದ ಕೂಡಿದೆ.
ಪ್ರತಿನಿಧಿರೂಪದ ಪ್ರಜಾಪ್ರಭುತ್ವದ ಕಡೆಗಿನ ಈ ಪ್ರವೃತ್ತಿ ಮಧ್ಯಯುಗಗಳಲ್ಲಿ ಆರಂಭಗೊಂಡಿತು. ಮತ್ತು 17 ಮತ್ತು 18ನೆಯ ಶತಕಗಳೊಳಗೆ, 13ನೆಯ ಶತಕದ ಪದ್ಧತಿಗಳಾದ ಮ್ಯಾಗ್ನ ಕಾರ್ಟ ಸ್ವಾತಂತ್ರ್ಯ ಶಾಸನ ಮತ್ತು ಇಂಗ್ಲೆಂಡಿನ ಪಾರ್ಲಿಮೆಂಟು, ಮಾನವರ ಸಮಾನತೆ, ಸ್ವಾಭಾವಿಕ ಹಕ್ಕುಗಳು, ಮತ್ತು ಜನರ ಪರಮಾಧಿಕಾರಗಳೊಂದಿಗೆ ಹೆಚ್ಚು ಅರ್ಥಗರ್ಭಿತವಾಗುತಿದ್ತವ್ದು.
ಹದಿನೆಂಟನೆಯ ಶತಮಾನದ ಉತ್ತರಾರ್ಧದೊಳಗೆ, “ಪ್ರಜಾಪ್ರಭುತ್ವ” ಎಂಬ ಪದ, ಸಂದೇಹಾಸ್ಪದವಾಗಿ ಕಂಡುಬಂದರೂ ಸಾಮಾನ್ಯ ಬಳಕೆಗೆ ಬಂದಿತ್ತು. ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “1787ರ ಅಮೆರಿಕದ ಸಂವಿಧಾನ ಕರ್ತರು ಸಹ ರಾಜಕೀಯ ಕಾರ್ಯವಿಧಾನದಲ್ಲಿ ಜನಸಮುದಾಯವನ್ನು ಸೇರಿಸಿಕೊಳ್ಳುವ ವಿಷಯ ಚಿಂತಿತರಾದರು. ಇವರಲ್ಲಿ ಎಲ್ಬಿಜ್ರ್ ಗೆರಿ ಎಂಬವರು ಪ್ರಜಾಪ್ರಭುತ್ವವನ್ನು ‘ರಾಜಕೀಯ ಕೆಡುಕುಗಳಲ್ಲಿ ಅತಿ ಕೆಟ್ಟದ್ದು’ ಎಂದು ಕರೆದರು.” ಹೀಗಿದ್ದರೂ, ಇಂಗ್ಲೆಂಡಿನ ಜಾನ್ ಲಾಕ್‌ರಂಥ ಪುರುಷರು, ಸರಕಾರವು ಜನರ ಒಪ್ಪಿಗೆಯ ಮೇಲೆ ಆಧಾರವಾಗಿದೆಯೆಂದೂ ಅವರ ಹಕ್ಕುಗಳು ಪರಮ ಪವಿತ್ರವೆಂದೂ ವಾದಿಸುತ್ತಾ ಮುಂದುವರಿದರು.
ಗಣರಾಜ್ಯಗಳು
ಅನೇಕ ಪ್ರಜಾಪ್ರಭುತ್ವಗಳು ಗಣರಾಜ್ಯಗಳು, ಅಂದರೆ ಅರಸನಲ್ಲ, ಇನ್ನೊಬ್ಬನು ಮುಖ್ಯಸ್ಥನಿರುವ, ಈಗ ಸಾಮಾನ್ಯವಾಗಿ ಅಧ್ಯಕ್ಷನಿರುವ ಸರಕಾರಗಳು. ಜಗತ್ತಿನ ಪ್ರಥಮ ಗಣರಾಜ್ಯಗಳಲ್ಲಿ, ಅಲ್ಲಿಯ ಪ್ರಜಾಪ್ರಭುತ್ವ ಮಿತವಾಗಿತ್ತೆಂದು ಒಪ್ಪಿಕೊಳ್ಳಬೇಕಾದರೂ, ಪುರಾತನದ ರೋಮ್ ಒಂದಾಗಿತ್ತು. ಆದರೂ, ಈ ಅಂಶಿಕ ಪ್ರಜಾಪ್ರಭುತ್ವದ ಗಣರಾಜ್ಯವು ರಾಜಪ್ರಭುತ್ವ ಮತ್ತು ರೋಮನ್ ಸಾಮ್ರಾಜ್ಯಕ್ಕೆ ಸ್ಥಳ ಬಿಟ್ಟುಕೊಡುವ ಮೊದಲು 400ಕ್ಕೂ ಹೆಚ್ಚು ಕಾಲ ಬಾಳಿತು.
ಇಂದು ಗಣರಾಜ್ಯಗಳು ಸರಕಾರದ ಅತಿ ಸಾಮಾನ್ಯವಾದ ರೂಪವಾಗಿರುತ್ತವೆ. 1989 ಪ್ರಮಾಣಗ್ರಂಥವೊಂದರಲ್ಲಿ ಕೊಟ್ಟಿರುವ 219 ಸರಕಾರ ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳಲ್ಲಿ, 127ನ್ನು, ಅವೆಲ್ಲವೂ ಪ್ರತಿನಿಧಿರೂಪದ ಪ್ರಜಾಪ್ರಭುತ್ವಗಳಲ್ಲವಾದರೂ ಗಣರಾಜ್ಯಗಳೆಂದು ಗುರುತಿಸಲಾಗಿದೆ. ವಾಸ್ತವವೇನಂದರೆ, ಗಣರಾಜ್ಯಗಳ ಸರಕಾರಿ ರೂಪಗಳು ವಿಶಾಲವಾಗಿವೆ.
ಕೆಲವು ಗಣರಾಜ್ಯಗಳು ಏಕೀಕೃತ ಪದ್ಧತಿಗಳು, ಅಂದರೆ, ಬಲವಾದ ಕೇಂದ್ರ ಸರಕಾರದಿಂದ ನಿಯಂತ್ರಿತವಾಗುವವುಗಳು. ಇನ್ನು ಕೆಲವು ಫೆಡರಲ್ ಸಂಯುಕ್ತ ರಾಷ್ಟ್ರ ಪದ್ಧತಿಯವುಗಳು, ಅಂದರೆ ಸರಕಾರದಲ್ಲಿ ನಿಯಂತ್ರಿಸುವ ಎರಡು ಅಂತಸ್ತುಗಳಿವೆ. ಹೆಸರು ಸೂಚಿಸುವಂತೆ ಅಮೆರಿಕದ ಸಂಯಕ್ತ ರಾಷ್ಟ್ರಗಳು ಈ ಎರಡನೆಯ ಫೆಡರಲಿಸ್ಮ್ ಪದ್ಧತಿಗೆ ಸೇರಿದೆ. ರಾಷ್ಟ್ರೀಯ ಸರಕಾರವು ಇಡೀ ರಾಷ್ಟ್ರದ ಪರಾಮರಿಕೆ ಮಾಡುವಾಗ ರಾಜ್ಯ ಸರಕಾರಗಳು ಸ್ಥಳೀಕ ಆವಶ್ಯಕತೆಗಳನ್ನು ಪೂರೈಸುತ್ತವೆ. ಈ ವ್ಯಾಪಕ ಪರಿಭಾಷೆಯಲ್ಲಿ ಅನೇಕ ಭಿನ್ನತೆಗಳಿವೆಯೆಂಬುದು ನಿಶ್ಚಯ.
ಕೆಲವು ಗಣರಾಜ್ಯಗಳು ಸ್ವತಂತ್ರ ಚುನಾವಣೆಗಳನ್ನು ನಡಿಸುತ್ತವೆ. ಅವುಗಳ ನಾಗರಿಕರಿಗೆ ಅನೇಕ ರಾಜಕೀಯ ಪಕ್ಷಗಳಿಂದ ಮತ್ತು ಉಮೇದ್ವಾರರಿಂದ ವ್ಯಕ್ತಿಗಳನ್ನು ಚುನಾಯಿಸುವ ಅವಕಾಶ ಕೊಡಲಾಗಬಹುದು. ಇತರ ಗಣರಾಜ್ಯಗಳು ಜನರ ಪ್ರಜಾಪ್ರಭುತ್ವದ ಇಚ್ಫೆಗಳನ್ನು ಇತರ ಮಾಧ್ಯಮಗಳ ಮೂಲಕ ಅಂದರೆ, ಉತ್ಪಾದಿಸುವ ಮಾಧ್ಯಮಗಳ ಸಾಮೂಹಿಕ ಸ್ವಾಮ್ಯವನ್ನು ವರ್ಧಿಸುವುದರ ಮೂಲಕ ಪೂರೈಸಬಹುದೆಂದು ವಾದಿಸುತ್ತಾ ಸ್ವತಂತ್ರ ಚುನಾವಣೆಗಳು ಅನಗತ್ಯವೆಂದು ಎಣಿಸುತ್ತವೆ. ಪುರಾತನ ಗ್ರೀಸ್‌ನಲ್ಲಿ ಸ್ವತಂತ್ರ ಚುನಾವಣೆಗಳು ಅಜ್ಞಾತವಾಗಿದ್ದುದರಿಂದ ಆ ದೇಶ ಇದಕ್ಕೆ ಪೂರ್ವಗಾಮಿಯಾಗಿದೆ. ಆಡಳಿತಗಾರರನ್ನು ಅಲ್ಲಿ ಚೀಟುಹಾಕಿ ಆರಿಸಲಾಗುತ್ತಿತ್ತು, ಮತ್ತು ಅವರಿಗೆ ಸಾಮಾನ್ಯವಾಗಿ ಒಂದು ಅಥವಾ ಎರಡು ಒಂದೊಂದು ವರ್ಷಗಳ ಸೇವೆಮಾಡುವ ಅನುಮತಿಯಿತ್ತು. ಅರಿಸ್ಟಾಟಲನು ಚುನಾವಣೆಯ ವಿರುದ್ಧ, ಅದು “ಸರ್ವೋತ್ತಮರನ್ನು” ಆರಿಸುವ ಶ್ರೀಮಂತ ಪ್ರಭುತ್ವದ ಲಕ್ಷಣಗಳನ್ನು ಮುಂತರುತ್ತದೆಂದು ಹೇಳಿಕೆ ಕೊಟ್ಟನು. ಆದರೆ, ಪ್ರಜಾಪ್ರಭುತ್ವವು ಜನರ ಸರಕಾರವಾಗಬೇಕಿತ್ತು, ಕೇವಲ “ಸರ್ವೋತ್ತಮರದ್ದು” ಅಲ್ಲ.
ತುಲನೆಯಲ್ಲಿ ಮಾತ್ರ ಸರ್ವೋತ್ತಮ?
ಪುರಾತನದ ಆ್ಯಥೆನ್ಸ್‌ನಲ್ಲಿಯೂ ಪ್ರಜಾಪ್ರಭುತ್ವದ ಆಡಳಿತ ವಿವಾದಾತ್ಮಕವಾಗಿತ್ತು. ಪ್ಲೇಟೊ ಸಂದೇಹಪಡುವವನಾಗಿದ್ದನು. ಪ್ರಜಾಪ್ರಭುತ್ವ ಆಳಿಕೆಯು ಯಾವನಾದರೂ ಚಳವಳಿಗಾರನ ಭಾವಪೂರಿತ ಮಾತುಗಳಿಂದ ಸುಲಭವಾಗಿ ಓಲಾಡಸಾಧ್ಯವಿರುವ ಅಜ್ಞಾನಿ ವ್ಯಕ್ತಿಗಳ ಕೈಯಲ್ಲಿರುವುದರಿಂದ ಅದು ಬಲಹೀನ ಎಂದು ಎಣಿಸಲ್ಪಡುತ್ತಿತ್ತು. ಪ್ರಜಾಪ್ರಭುತ್ವವು ದೊಂಬಿ ಪ್ರಭುತ್ವವಲ್ಲದೆ ಮ್ತತ್ತೇನೂ ಅಲ್ಲವೆಂದು ಸೊಕ್ರೇಟಿಸನು ಸೂಚಿಸಿದನು. ಮತ್ತು ಪುರಾತನದ ಈ ಪ್ರಸಿದ್ಧ ಗ್ರೀಕ್ ತತ್ವಜ್ಞಾನಿ ತಂಡದಲ್ಲಿ ಮೂರನೆಯವನಾದ ಅರಿಸ್ಟಾಟಲನು, “ಪ್ರಜಾಪ್ರಭುತ್ವ ಎಷ್ಟು ಹೆಚ್ಚು ಪ್ರಜಾಪ್ರಭುತ್ವವಾಗುತ್ತದೊ ಅಷ್ಟೇ ಹೆಚ್ಚು ಅದು ಜನಜಂಗುಳಿಯ ಆಳಿಕೆಯಾಗಿ, . . . ದಬ್ಬಾಳಿಕೆಗೆ ಅವನತಿ ಹೊಂದುತ್ತದೆ” ಎಂದು ವಾದಿಸಿದನೆಂದು ಎ ಹಿಸ್ಟರಿ ಆಫ್ ಪೊಲಿಟಿಕಲ್ ಥಿಯರಿ ಎಂಬ ಪುಸ್ತಕ ಹೇಳುತ್ತದೆ.
ಇತರ ಅಭಿಪ್ರಾಯಗಳು ಇದೇ ರೀತಿಯ ಶಂಕೆಗಳನ್ನು ಹುಟ್ಟಿಸಿವೆ. ಭಾರತದ ಮಾಜಿ ಪ್ರಧಾನಿ, ಜವಾಹರ್‌ಲಾಲ್ ನೆಹರು, ಪ್ರಜಾಪ್ರಭುತ್ವವನ್ನು ಒಳ್ಳೆಯದೆಂದು ಕರೆದರೂ “ಇತರ ಪದ್ಧತಿಗಳು ಇದಕ್ಕಿಂತ ಕೆಟ್ಟದಾಗಿರುವುದರಿಂದಲೇ ನಾನು ಹೀಗೆ ಹೇಳುತ್ತೇನೆ” ಎಂದು ಅದನ್ನು ವಿಶೇಷ್ಲಿಸಿ ನುಡಿದರು. ಮತ್ತು ಇಂಗ್ಲಿಷ್ ಧರ್ಮಾಧ್ಯಕ್ಷ ಮತ್ತು ಲೇಖಕ, ವಿಲ್ಯಂ ರಾಲ್ಫ್ ಇಂಜ್ ಒಮ್ಮೆ ಬರೆದದ್ದು: “ಪ್ರಜಾಪ್ರಭುತ್ವವನ್ನು ಅದು ಒಳ್ಳೆಯದೆಂಬುದಾಗಿ ಅಲ್ಲ, ಇತರ ಸರಕಾರಗಳಿಗಿಂತ ಕಡಮೆ ಕೆಟ್ಟ ರೂಪದ ಸರಕಾರವೆಂದು ಹೇಳಿ ತರ್ಕಸಮ್ಮತವಾಗಿ ಸಮರ್ಥಿಸಬಹುದು.”
ಪ್ರಜಾಪ್ರಭುತ್ವಕ್ಕೆ ಅನೇಕ ಬಲಹೀನತೆಗಳಿವೆ. ಪ್ರಥಮವಾಗಿ, ಅದು ಸಾಫಲ್ಯ ಹೊಂದಬೇಕಾದರೆ, ವ್ಯಕ್ತಿಗಳು ತಮ್ಮ ಅಭಿರುಚಿಗಳಿಗಿಂತ ಮುಂದಾಗಿ ಬಹುಪಕ್ಷದವರ ಹಿತವನ್ನಿಡಬೇಕು. ಅಂದರೆ, ಕಂದಾಯ ಮತ್ತು ಇತರ ನಿಯಮಗಳನ್ನು, ಅದಕ್ಕೆ ನೀವು ಸಮ್ಮತಿಸದಿದ್ದರೂ ಇಡೀ ರಾಷ್ಟ್ರದ ಹಿತಕ್ಕೆ ಆವಶ್ಯಕವೆಂದು ಹೇಳಿ ಅದನ್ನು ನೀವು ಸಮರ್ಥಿಸಬೇಕಾದೀತು. ಇಂಥ ನಿಸ್ವಾರ್ಥಪರ ಅಭಿರುಚಿಯನ್ನು ಪ್ರಜಾಪ್ರಭುತ್ವದ “ಕ್ರೈಸ್ತ” ರಾಷ್ಟ್ರಗಳಲ್ಲಿಯೂ ಕಾಣುವುದು ಕಷ್ಟ.
ಇನ್ನೊಂದು ದೋಷವನ್ನು ಪ್ಲೇಟೊ ಕಂಡುಹಿಡಿದನು. ಎ ಹಿಸ್ಟರಿ ಆಫ್ ಪೊಲಿಟಿಕಲ್ ಥಿಯರಿ ಪುಸ್ತಕಕ್ಕನುಸಾರವಾಗಿ, ಅವನು “ಪ್ರಜಾಪ್ರಭುತ್ವಗಳ ವಿಶೇಷ ಶಾಪವಾದ ರಾಜಕಾರಣಿಗಳ ಅಜ್ಞಾನ ಹಾಗೂ ಅದಕ್ಷತೆಯನ್ನು” ವಿರೋಧಿಸಿ ಮಾತಾಡಿದನು. ಅನೇಕ ಕಸಬುದಾರ ರಾಜಕಾರಣಿಗಳು ಸರಕಾರದಲ್ಲಿ ಕೆಲಸ ಮಾಡಲು ಅರ್ಹತೆ ಹಾಗೂ ಸಾಮರ್ಥ್ಯವಿರುವವರನ್ನು ಕಂಡುಹಿಡಿಯುವ ಕಷ್ಟಕ್ಕೆ ವಿಷಾದಪಡುತ್ತಾರೆ. ಆರಿಸಲ್ಪಟ್ಟ ಅಧಿಕಾರಿಗಳು ಸಹ ರಾಜಕೀಯ ಅಡಕ್ಡಸಬಿನವರಿಗಿಂತ ಹೆಚ್ಚಿನವರಾಗಿರಲಿಕ್ಕಿಲ್ಲ. ಮತ್ತು ಈ ಟೆಲಿವಿಷನ್ ಯುಗದಲ್ಲಿ, ಒಬ್ಬ ಅಭ್ಯರ್ಥಿಯ ಆಡಳಿತ ಸಾಮರ್ಥ್ಯಕ್ಕಿಂತ ಅವನ ಸೌಂದರ್ಯ ಯಾ ಮೋಹಕತೆ ಅವನಿಗೆ ಮತಗಳನ್ನು ಗೆದ್ದೀತು.
ಪ್ರಜಾಪ್ರಭುತ್ವಗಳ ಇನ್ನೊಂದು ಅಹಿತವು ಅವುಗಳ ನಿಧಾನ ಚಲನೆಯೇ. ಒಬ್ಬ ಸರ್ವಾಧಿಕಾರಿ ಮಾತಾಡಿದನೆಂದರೆ ತತ್‌ಕ್ಷಣ ಕೆಲಸ ಮಾಡಿ ಮುಗಿಸಲ್ಪಡುತ್ತದೆ! ಆದರೆ ಪ್ರಜಾಪ್ರಭುತ್ವದಲ್ಲಿ ಪ್ರಗತಿಯು ಅನಂತ ವಾಗ್ವಾದಗಳ ಕಾರಣ ನಿಧಾನಿಸಲ್ಪಡಬಹುದು. ವಿವಾದಾತ್ಮಕ ಸಂಗತಿಗಳನ್ನು ಕೂಲಂಕಷವಾಗಿ ಚರ್ಚಿಸುವುದರಿಂದ ನಿಶ್ಚಿತವಾದ ಪ್ರಯೋಜನಗಳಿರುವುದೇನೊ ನಿಜ. ಆದರೂ, ಬ್ರಿಟನಿನ ಮಾಜಿ ಪ್ರಧಾನ ಮಂತ್ರಿ, ಕೆಮ್ಲೆಂಟ್ ಆ್ಯಟ್ಲಿ, ಒಮ್ಮೆ ಅವಲೋಕಿಸಿದು: “ಪ್ರಜಾಪ್ರಭುತ್ವವೆಂದರೆ ಚರ್ಚೆಯಿಂದ ನಡೆಯುವ ಸರಕಾರ, ಆದರೆ ಜನರು ಮಾತಾಡುವುದನ್ನು ನಿಲ್ಲಿಸಿದರೆ ಮಾತ್ರ ಅದು ಕಾರ್ಯಸಾಧಕ.”
ಮಾತಾಡುವುದನ್ನು ನಿಲ್ಲಿಸಿದ ಮೇಲೆಯೂ, ಮಾಡಲ್ಪಡುವ ನಿರ್ಣಯಗಳು ಎಷ್ಟರ ಮಟ್ಟಿಗೆ “ಜನರಿಗೆ” ಬೇಕಾಗಿರುವುದರ ನಿಜ ಪ್ರತಿನಿಧಿರೂಪದ್ದಾಗಿದೆ ಎಂಬುದು ವಿವಾದಾಸ್ಪದ. ಪ್ರತಿನಿಧಿಗಳು ತಮ್ಮ ಚುನಾವಣಾ ಕ್ಷೇತ್ರದಲ್ಲಿ ಬಹುಪಕ್ಷದವರ ಅಭಿಪ್ರಾಯವನ್ನು ಅನುಸರಿಸಿ ವೂಟು ಹಾಕುತ್ತಾರೆಯೆ, ಯಾ ಹೆಚ್ಚು ಬಾರಿ, ತಮ್ಮ ನಂಬಿಕೆಗನುಸಾರವಾಗಿಯೆ? ಅಥವಾ, ಅವರು ತಮ್ಮ ಪಕ್ಷದ ಅಧಿಕೃತ ಕಾರ್ಯನೀತಿಗೆ ಕೇವಲ ಮುದ್ರೆ ಒತ್ತುತ್ತಾರೆಯೆ?
ಭ್ರಷ್ಟಾಚಾರವನ್ನು ನಿಯಂತ್ರಿಸಲು ಸರಿನೋಡಿ ನಿಯಂತ್ರಿಸುವ ಪ್ರಜಾಪ್ರಭುತ್ವ ಪದ್ಧತಿಯು ಉತ್ತಮವೆಂದು ಎಣಿಸಲಾಗುವುದಾದರೂ, ಅದು ಕಾರ್ಯಸಾಧಕವಾಗುವುದು ವಿರಳ. 1989ರಲ್ಲಿ ಟೈಮ್ ಪತ್ರಿಕೆ “ಎಲ್ಲ ಹಂತಗಳಲ್ಲಿಯೂ ಇರುವ ಸರಕಾರೀ ಶೈಥಿಲ್ಯ”ದ ಕುರಿತು ಮಾತಾಡುತ್ತಾ, ಒಂದು ಪ್ರಮುಖ ಪ್ರಜಾಪ್ರಭುತ್ವ ಸರಕಾರವನ್ನು “ಉಬ್ಬಿದ, ದಕ್ಷವಲ್ಲದ, ಸಹಾಯಶೂನ್ಯ ದೈತ್ಯ”ನೆಂದು ಕರೆಯಿತು. 1980ನೆಯ ದಶಕದ ಮಧ್ಯ ಭಾಗದಲ್ಲಿ, ಇನ್ನೊಂದು ಸರಕಾರದ ದುಂದನ್ನು ತನಿಖೆ ಮಾಡಲು ನಿಯಮಿಸಿದ ಮಂಡಲಿಯ ಅಧ್ಯಕ್ಷರು “ಸರಕಾರವು ಭಯಂಕರ ರೀತಿಯಲ್ಲಿ ನಡೆಯುತ್ತದೆ” ಎಂದು ಪ್ರಲಾಪಿಸುವಂತೆ ಪ್ರಚೋದಿಸಲ್ಪಟ್ಟರು.
ಈ ಮತ್ತು ಇನ್ನು ಅನೇಕ ಕಾರಣಗಳಿಂದಾಗಿ ಪ್ರಜಾಪ್ರಭುತ್ವಗಳನ್ನು ಆದರ್ಶ ಸರಕಾರಗಳೆಂದು ಕರೆಯಸಾಧ್ಯವಿಲ್ಲ. 17ನೆಯ ಶತಕದ ಇಂಗ್ಲಿಷ್ ಕವಿ, ಜಾನ್ ಡ್ರೈಡೆನ್ ತೋರಿಸಿದಂತೆ, “ಅಧಿಕ ಜನರೂ ಕೊಂಚ ಜನರಷ್ಟೆ ಮಹತ್ತರವಾದ ತಪ್ಪುಗಳನ್ನು ಮಾಡಬಲ್ಲರು” ಎಂಬುದು ಸುವ್ಯಕ್ತವಾದ ಸತ್ಯ. ಅಮೆರಿಕನ್ ಲೇಖಕ, ಹೆನ್ರಿ ಮಿಲರ್, “ಕುರುಡರು ಕುರುಡರಿಗೆ ದಾರಿ ತೋರಿಸುತ್ತಾರೆ. ಇದು ಪ್ರಜಾಪ್ರಭುತ್ವದ ಮಾರ್ಗ” ಎಂದು ಒರಟಾಗಿ ನುಡಿದರೂ ಅವರು ಹೇಳಿದ್ದು ನಿಷ್ಕೃಷ್ಟವಾಗಿತ್ತು.
ಅದರ ಸಮಾಧಿಗೆ?
ಪ್ರಜಾಪ್ರಭುತ್ವದ ಆಳಿಕೆ ಈ ಶತಮಾನದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸ್ವೀಕಾರಪಾತ್ರವಾಗಿದೆ, ಇತ್ತೀಚೆಗೆ ಪೂರ್ವ ಯೂರೋಪಿನಲ್ಲಿ ನಡೆದ ರಾಜಕೀಯ ಉತ್‌ಪವ್ಲನಗಳು ಇದನ್ನು ರುಜುಪಡಿಸುತ್ತವೆ. ಆದರೂ, “ಉದಾರಾಭಿಪ್ರಾಯದ ಪ್ರಜಾಪ್ರಭುತ್ವ ಈಗ ಲೋಕದಲ್ಲಿ ಗುರುತರವಾದ ಉಪದ್ರವಕ್ಕೊಳಗಾಗಿದೆ” ಎಂದು ಪತ್ರಕಾರ ಜೇಮ್ಸ್ ರೆಸ್ಟನ್ ಕೆಲವು ವರ್ಷಗಳ ಹಿಂದೆ ಬರೆದರು. “ಉದಾರಾಭಿಪ್ರಾಯದ ಪ್ರಜಾಪ್ರಭುತ್ವವು ಪ್ರಾಬಲ್ಯ ಪಡೆಯುವ ಭಾವನಾ ಶಾಸ್ತ್ರವಲ್ಲ”ವೆಂದೂ, “ಪ್ರಜಾಪ್ರಭುತ್ವಗಳು ಕಾಣದೆ ಹೋಗುವಂತೆ ತೋರುತ್ತವೆ” ಎಂದೂ ಡ್ಯಾನಿಯೆಲ್ ಮೊಯ್ನಿಹಾನ್ ಎಚ್ಚರಿಸಿದರು. ಪ್ರಜಾಪ್ರಭುತ್ವ ಸರಕಾರ ಅನಿಶ್ಚಿತ ಕಾಲದ ವರೆಗೆ ಇರಸಾಧ್ಯವಿಲ್ಲ, ಏಕೆಂದರೆ ಅದು “ಯಾವಾಗಲೂ ಸಡಿಲು ರಾಜ್ಯಾದಾಯದ ಕಾರ್ಯನೀತಿಯ ಕಾರಣ ಕುಸಿದು ಬೀಳುತ್ತವೆ” ಎನ್ನುತ್ತಾರೆ ಬ್ರಿಟಿಷ್ ಇತಿಹಾಸಗಾರ ಅಲೆಗ್ಸಾಂಡರ್ ಟಯ್ಲರ್. ಆದರೆ ಇವರ ವೀಕ್ಷಣ ವಾದಾಸ್ಪದ.
ಹೇಗಿದ್ದರೂ, ಪ್ರಜಾಪ್ರಭುತ್ವವು ಏದೆನಿನಲ್ಲಿ ಆರಂಭವಾದ ಪ್ರವೃತ್ತಿಯ, ಅಂದರೆ ಮನುಷ್ಯರು ದೇವರ ಮಾರ್ಗವನ್ನು ಬಿಟ್ಟು ಕಾರ್ಯಗಳನ್ನು ತಮ್ಮದೇ ಆದ ಮಾರ್ಗದಲ್ಲಿ ಮಾಡತೊಡಗಿದ ಪ್ರವೃತ್ತಿಯ ಮುಂದುವರಿಸುವಿಕೆ ಎಂಬುದು ವ್ಯಕ್ತ. ಮಾನವ ಆಳಿಕೆಯಲ್ಲಿ ಇದು ಆಳುವ ಕಾರ್ಯಗತಿಯಲ್ಲಿ ಸಕಲರನ್ನೂ ಆವರಿಸುವ ಕಾರಣ ಕೇವಲ ಊಹಾತ್ಮಕವಾಗಿಯಾಗಿಯಾದರೂ ಕೊನೆಯ ಮಾತಾಗಿದೆ. ಆದರೆ ಲ್ಯಾಟಿನ್ ಹೇಳಿಕೆಯಾದ ವಾಕ್ಸ್ ಪಾಪ್ಯುಲೈ ವಾಕ್ಸ್ ಡೈ, “ಜನವಾಣಿಯೇ ದೇವವಾಣಿ” ಎಂಬುದು ಅಸತ್ಯ. ಹೀಗೆ, ಪ್ರಜಾಪ್ರಭುತ್ವ ಆಳಿಕೆಗಳನ್ನು ಬೆಂಬಲಿಸುವವರು ಅದರ ಕಾರ್ಯಗಳಿಗೆ ಹೊಣೆಗಾರರಾಗಲು ಸಿದ್ಧರಾಗಿರಬೇಕು.—1 ತಿಮೊಥಿ 5:22 ಹೋಲಿಸಿರಿ.
ಈ ನಿಜತ್ವವು 1914ರಿಂದ ಹೆಚ್ಚಿನ ಗಂಭೀರತೆಯನ್ನು ತೆಗೆದುಕೊಂಡಿದೆ. ಆ ವರ್ಷದಲ್ಲಿ ದೈವಿಕ ಆಳಿಕೆ ಒಂದು ಅದ್ವಿತೀಯ ರೀತಿಯಲ್ಲಿ ಕಾರ್ಯ ನಡಿಸಿತು. ದೇವರ ಮೆಸ್ಸೀಯನ ರಾಜ್ಯವು ಲೋಕ ವಿಚಾರಗಳನ್ನು ಪೂರ್ತಿಯಾಗಿ ನಿಯಂತ್ರಿಸಲು ಸಿದ್ಧವಾಗಿ ನಿಂತಿದೆ. ಎಲ್ಲಾ ವಿಧದ ಮಾನವ ಆಳಿಕೆಗಳು—ಪ್ರಜಾಪ್ರಭುತ್ವ ಸೇರಿ—ತಕ್ಕಡಿಗಳಲ್ಲಿ ತೂಗಲ್ಪಡುತ್ತಾ ಇವೆ. ನಾವು ಅದನ್ನು ಎಷ್ಟರ ಮಟ್ಟಿಗೆ ಸಮರ್ಥಿಸುತ್ತವೋ ಅಷ್ಟರ ಮಟ್ಟಿಗೆ ನಾವೂ ಅವುಗಳೊಂದಿಗೆ ತೂಗಲ್ಪಡುತ್ತಿದ್ದೇವೆ.—ದಾನಿಯೇಲ 2:44; ಪ್ರಕಟನೆ 19: 11-21. (g90 9/22)
[ಪುಟ 23ರಲ್ಲಿರುವಚೌಕ]
“ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”—ಯೆರೆಮೀಯ 10:23
[ಪುಟ 25ರಲ್ಲಿರುವಚೌಕ]
“ಮನುಷ್ಯನಿಗೆ ಸರಿಯೆಂದು ತೋರುವ ಮಾರ್ಗವೊಂದುಂಟು, ಆದರೆ ಅಂತ್ಯದಲ್ಲಿ ಅದು ಮರಣಕ್ಕೆ ನಡಿಸುತ್ತದೆ.”—ಜ್ಞಾನೋಕ್ತಿ 14:12, “ನ್ಯೂ ಇಂಟರ್‌ನ್ಯಾಷನಲ್ ವರ್ಷನ್”
[ಪುಟ 24 ರಲ್ಲಿರುವಚಿತ್ರ]
ಪ್ರಜಾಪ್ರಭುತ್ವ ಮಾನವ ಆಳಿಕೆಯನ್ನು ಸಮರ್ಥಿಸುವವರು ಅದರ ಕಾರ್ಯಗಳಿಗೆ ಹೊಣೆಗಾರರಾಗಲು ಸಿದ್ಧರಾಗಿರಬೇಕು
[ಪುಟ 22 ರಲ್ಲಿರುವ ಚಿತ್ರ ಕೃಪೆ]
U. S. National Archives photo