ಏಕೆ ಬದಲಾಗಬೇಕು?
ನಮ್ಮಲ್ಲಿ ಪ್ರಧಾನ ಬಲಹೀನತೆಗಳಿವೆಯೆಂದು ಒಪ್ಪಿಕೊಳ್ಳಲು ಇಷ್ಟಪಡುವವರು ಕೊಂಚ ಜನ. ಸ್ಕಾಟಿಷ್ ಕವಿ, ರಾಬರ್ಟ್ ಬರ್ನ್ಸ್ ಹೇಳಿದ ಮಾತುಗಳು ಅವೆಷ್ಟು ಸತ್ಯ: “ಇತರರು ನಮ್ಮನ್ನು ನೋಡುವಂತೆ ನಾವೇ ನೋಡಲು ಯಾವುದಾದರೊಂದು ಶಕ್ತಿ ನಮಗೆ ಸಾಮರ್ಥ್ಯ ಕೊಡುತ್ತಿದ್ದರೆ!” ಹೌದು, ಇತರರಲ್ಲಿ ತಪ್ಪನ್ನು ಹುಡುಕುವುದು ನಮಗೆ ಸುಲಭವಾಗುತ್ತದೆ ಮತ್ತು ಅವರು ಹೇಗೆ ಸುಧಾರಿಸಬೇಕೆಂಬ ಬುದ್ಧಿವಾದವನ್ನು ನಾವು ಬೇಗನೆ ಕೊಡಬಹುದು. ಆದರೆ ನಮ್ಮ ವರ್ತನೆಯಲ್ಲಿ ಬದಲಾವಣೆ ಅಗತ್ಯವೆಂಬ ಯಾವ ಸೂಚನೆಯೂ ನಮ್ಮನ್ನು ನೋಯಿಸಬಹುದು. ಅದು ನಿಮ್ಮನ್ನು ನೋಯಿಸೀತೆ?
ನಾವು ತುಸು ಹೊತ್ತು ನಿಂತು ಎಲ್ಲರೂ ಶುದ್ಧರು, ಆರೋಗ್ಯವಂತರು, ಮತ್ತು ಪ್ರಾಮಾಣಿಕರಾಗಿರುವ ಒಂದು ಪರಿಪೂರ್ಣ ಜಗತ್ತಿನ ಕುರಿತು ಭಾವಿಸೋಣ; ಅಲ್ಲಿ ಅಧಿಕಾರ ಸ್ಥಾನದಲ್ಲಿರುವರೂ ದಯಾಪರರು ಮತ್ತು ವಿಚಾರಪರರು, ಇತರರ ಹಿತಾಸಕ್ತರು ಆಗಿದ್ದಾರೆ; ಅಲ್ಲಿ ಲೋಭವಿಲ್ಲ, ನೆರೆಯವನನ್ನು ಸ್ವಪ್ರಯೇಜನಕ್ಕಾಗಿ ಉಪಯೋಗಿಸಿಕೊಳ್ಳುವ ವಿಷಯವಿಲ್ಲ; ಅಲ್ಲಿಯ ಮಕ್ಕಳು ವಾತ್ಸಲ್ಯದ, ಪರಾಮರಿಸುವ ಹೆತ್ತವರಿಗೆ ವಿಧೇಯರು; ಅಲ್ಲಿ ಕೋಪದ ಕೆರಳಿಲ್ಲ—ಬಲಾತ್ಕಾರ, ಪಾತಕ, ದುರಾಚಾರಗಳಿಲ್ಲ; ಅಲ್ಲಿಯ ಜನರು ಭರವಸಾರ್ಹರು ಮತ್ತು ಆಹ್ಲಾದ ಪ್ರಕೃತಿಯವರು; ಅಲ್ಲಿ ಸುರಕ್ಷೆ ಮತ್ತು ಸುಕ್ಷೇಮದ ಜೀವದಲ್ಲಿ ಆನಂದಿಸಬಹುದು.
ಇಂಥ ಅಸಾಧ್ಯಾದರ್ಶ ಲೋಕವೊಂದಿರುವಲ್ಲಿ, ಇಂಥ ಜಗತ್ತಿಗೆ ನೀವು ಹೊಂದಿಸಿಕೊಳ್ಳುವಿರೆಂದು ಹೇಳಬಲ್ಲಿರೊ? ಒಳ್ಳೇದು, ಬೈಬಲಿನ ಸುವಾರ್ತೆ ಏನಂದರೆ ಇಂಥ ಜಗತ್ತು ಬೇಗನೆ ಈ ಭೂಮಿಗೆ ಬರಲಿದೆ. ಆದುದರಿಂದ ಈಗ ಇರುವ ಪ್ರಾಮುಖ್ಯ ಪ್ರಶ್ನೆಯು: ಇಂಥ ಮನೋಹರ ಸಮಾಜಕ್ಕೆ ನಿಮ್ಮನ್ನು ಹೊಂದಿಸಿಕೊಳ್ಳುವುದಕ್ಕೆ ನಿಮ್ಮನ್ನು ಅನರ್ಹರಾಗಿ ಮಾಡುವ ಯಾವ ವರ್ತನೆಗಳಾದರೂ ನಿಮ್ಮಲ್ಲಿವೆಯೆ? ಇಂಥ ಪ್ರಮೋದವನದ ಜೀವನಕ್ಕೆ ಅರ್ಹರಾಗಲು ಎಷ್ಟು ಶ್ರಮಪಡುವುದು ಉಚಿತವೆಂದು ನೀವೆಣಿಸುತ್ತೀರಿ?—ಯೆಶಾಯ 65:17-25; 2 ಪೇತ್ರ 3:13.
ಈಗಲೂ, ಇಂಥ ಹೊಸ ಲೋಕವು ಬರುವ ಮೊದಲು, ನಿಮ್ಮ ನಡತೆ ಮತ್ತು ಮನೋಭಾವದ ಕುರಿತು ನೀವೇನಾದರೂ ಮಾಡುವಲ್ಲಿ ನಿಮ್ಮ ಜೀವನ ಉತ್ತಮಗೊಂಡೀತೆ? ಹಾಗಿರುವಲ್ಲಿ, ಏಕೆ ಬದಲಾಗಬಾರದು? ಇದು ಸಾಧ್ಯ. ನಿರ್ದಿಷ್ಟ ಪ್ರಭಾವಗಳು ಮೊದಲಲ್ಲಿ ನಿಮ್ಮ ವರ್ತನೆಯನ್ನು ರೂಪಿಸಿ ಅಚ್ಚೊತ್ತಿದವೆಂದು ನೆನಪಿಸಿಕೊಳ್ಳಿರಿ, ಆದುದರಿಂದ, ಹೆಚ್ಚು ನಿಯಂತ್ರಣ ಮತ್ತು ಆಸಕ್ತಿಯನ್ನು ವಹಿಸುವುದರಿಂದ, ಈಗಲೂ ನೀವು ನಿಮ್ಮ ನಡತೆಯನ್ನು ಪುನಃ ರೂಪಿಸಿಕೊಳ್ಳುವುದು ಸಾಧ್ಯ.
ಆದರೂ, ನೀವು ಇನ್ನೂ ವಾದಿಸುತ್ತಾ, ‘ನಾನು ವಾಸ್ತವವಾಗಿ ಬದಲಾಗಬಲ್ಲೆನೊ? ನಾನು ಈ ಹಿಂದೆ ಎಷ್ಟೋ ಸಲ ಪ್ರಯತ್ನಿಸಿ ವಿಫಲಗೊಂಡಿದ್ದೇನೆ. ನಾನು ಇರುವುದೇ ಹೀಗೆ, ಮತ್ತು ಅದರ ವಿಷಯ ನನಗೆ ಏನೂ ಮಾಡಸಾಧ್ಯವಿಲ್ಲ!’ ಎಂದು ಹೇಳಬಹುದು.
ಯೇಸು ಕ್ರಿಸ್ತನ ಅಪೊಸ್ತಲನಾಗಿದ್ದ ಪೌಲನನ್ನು ತೆಗೆದುಕೊಳ್ಳಿರಿ. (ರೋಮಾಪುರ 7:18-21) ಪೌಲನು ಹಿಂಸಾತ್ಮಕವಾದ, ಸ್ವಧರ್ಮಿಷ್ಠಿತಾಭಿಮಾನವುಳ್ಳ ಕ್ರೈಸ್ತವಿರೋಧಿಯಾಗಿರುವುದರ ಬದಲು ತಾನೇ ಕ್ರೈಸ್ತನಾಗಿ ಬದಲಾಯಿಸಿಕೊಂಡನು. ಅವನಿಗೆ ನಿಜವಾಗಿಯೂ ಆ ಅಪೇಕ್ಷೆ ಇದ್ದುದರಿಂದ ಅವನು ಬದಲಾದನು. ವೈಫಲ್ಯ ಯಾ ಅನುವಂಶೀಯ ಪ್ರಭಾವಗಳ ಕಾರಣದಿಂದ ಅವನು ಪ್ರಯತ್ನವನ್ನು ಬಿಟ್ಟುಬಿಡಲಿಲ್ಲ. ಅವನು ತನ್ನ ಹಳೆಯ ವ್ಯಕ್ತಿತ್ವ ಜಲ್ಲಿಗಾರೆಯಲ್ಲಿಟ್ಟ ವಸ್ತುವಿನಂತೆ ಬದಲಾಗಲು ಸಾಧ್ಯವೇ ಇಲ್ಲವೆಂದು ನಂಬಲಿಲ್ಲ. ಅವನು ಬಹಳ ಪ್ರಯತ್ನಪಡಬೇಕಾಯಿತು. ಆದರೆ ಅವನಿಗೆ ಬಹಳ ಸಹಾಯವೂ ದೊರೆಯಿತು.—ಗಲಾತ್ಯ 1:13-16.
ಈ ಸಹಾಯ ಎಲ್ಲಿಂದ ಬಂತು? (g91 7/8)