ಏಯ್ಡ್ಸ್ ಮಕ್ಕಳು ಅದಕ್ಕೆ ತೆರುವ ಹೃದಯದ್ರಾವಕ ಬೆಲೆ
ನೀವು ಅವರ ಚಿತ್ರಗಳನ್ನು ನೋಡಿದ್ದೀರೊ? ಅವರ ಕಥೆಗಳನ್ನು ಕೇಳಿದ್ದೀರೊ, ಓದಿದ್ದೀರೊ? ಹೌದಾದರೆ, ಅದು ನಿಮ್ಮೊಳಗೆ ತಲ್ಲಣಗೊಳಿಸುವ ತರಂಗಗಳನ್ನು ಹರಿಯಿಸಿದ್ದುಂಟೆ? ನಿಮಗೆ ಕಣ್ಣೀರನ್ನು ತಡೆದು ಹಿಡಿಯಲು, ಕೊರಳ ಬಿಗಿತವನ್ನು ತಡೆದು ನಿಲ್ಲಿಸಲು ಸಾಧ್ಯವಾಯಿತೆ? ನಿಮ್ಮ ಹೃದಯ ಅವರಿಗಾಗಿ ನೋಯುತ್ತಿದೆಯೆ? ನೋಡಲು ದೊರೆಯದಿದ್ದರೂ ಸಾಯಲಿರುವವರ ನಿಧಾನದ ನರಳಾಟ ನಿಮಗೆ ಇನ್ನೂ ಕೇಳಿಸುತ್ತಿದೆಯೆ? ನಿಮಗೆ ಈಗಲೂ, ಒಂದೇ ಮಂಚದಲ್ಲಿ ಎರಡು, ಮೂರು, ಯಾ ನಾಲ್ಕರಂತಿದ್ದ, ಆ ಸಾಯುತ್ತಿರುವ ಶಿಶುಗಳ ವ್ಯಸನಕರವಾದ ದೃಶ್ಯಗಳನ್ನು ಅಳಿಸಬಿಡಲು ಸಾಧ್ಯವಾಗುತ್ತಿದೆಯೆ? ಇವುಗಳಲ್ಲಿ ಹೆಚ್ಚಿನವು ವರ್ಜಿಸಲ್ಪಟ್ಟವುಗಳು. ಅವುಗಳ ನರಳಾಟ ಮತ್ತು ಮರಣ, ಈಗ ಲೋಕದಲ್ಲಿ ಬಿರುಸಾಗಿ ಬೀಸುತ್ತಿರುವ ಆ ಭಯಂಕರ ವ್ಯಾಧಿಯಾದ ಏಯ್ಡ್ಸ್ನಿಂದ ಬರುತ್ತದೆ.
ಒಂದು ಯೂರೋಪಿಯನ್ ದೇಶದಿಂದ ಫೆಬ್ರವರಿ 1990ರಲ್ಲಿ ಮಾಡಿದ ಟೀವೀ ಪ್ರಸಾರದ ವರದಿ ಮತ್ತು ಚಿತ್ರಗಳು ಲಕ್ಷಾಂತರ ಮಂದಿ ಪ್ರೇಕ್ಷಕ ವರ್ಗಕ್ಕೆ ಧಕ್ಕೆ ತಗಲಿಸಿತು. ಲೋಕವ್ಯಾಪಕವಾಗಿ ಇನ್ನು ಲಕ್ಷಾಂತರ ಜನರು ಈ ದುರಂತವನ್ನು ವೃತ್ತಪತ್ರ ಮತ್ತು ಪತ್ರಿಕೆಗಳಲ್ಲಿ ಓದಿದರು. ಟೈಮ್ ಪತ್ರಿಕೆ ವರದಿ ಮಾಡಿದ್ದು: “ವಾಂತಿ ಬರಿಸುವ ಭಯಂಕರ ದೃಶ್ಯವಿದು. ತೊಟ್ಟಿಲು ತೊಟ್ಟಿಲುಗಳಲ್ಲಿ ಸಾಲಾಗಿ ಮುದುಕರಂತೆ ಕಾಣುವ ದಟ್ಟಡಿಯ ಮಕ್ಕಳಿದ್ದಾರೆ. ಅವರ ಚರ್ಮ ಮುದುಡಿಕೊಂಡಿದೆ, ಅವರ ಎಲುಬುಗೂಡಿನಂತಿರುವ ಮುಖಗಳಲ್ಲಿ ತಪ್ಪು ತಿಳಿಯಲು ಅವಕಾಶವೇ ಇಲ್ಲದ ಸಮೀಪಿಸುತ್ತಿರುವ ಮರಣದ ಗುರುತು ಇದೆ.” ಒಬ್ಬ ಡಾಕ್ಟರರು ಪ್ರಲಾಪಿಸಿದ್ದು: “ನಾನು ನೋಡಿರುವ ಸಕಲ ರೋಗಗಳಿಗಿಂತಲೂ ಇದು ಹೆಚ್ಚು ಕೆಟ್ಟದ್ದು. ಇದು ವೈದ್ಯಕೀಯ ಕಾರ್ಯಗಳಿಂದಾಗಿ ರವಾನಿಸಲ್ಪಟ್ಟ ವ್ಯಾಧಿಯೆಂಬುದು ಸ್ಪಷ್ಟ.”
ಇದು ಹೀಗೆ ಹೇಗೆ? ಏಯ್ಡ್ಸ್ ಅಂಟಿದ್ದ ತಾಯಂದಿರಿಂದ ಹುಟ್ಟಿದ ಅಧಿಕಾಂಶ ಏಯ್ಡ್ಸ್ ಶಿಶುಗಳಿಗೆ ಅಸದೃಶವಾಗಿ, ಈ ಶಿಶುಗಳು ಏಚ್ಐವಿ ಪಾಸಿಟಿವ್ (HIV positive) ರೋಗಾಣುಗಳುಳ್ಳವುಗಳಾಗಿ ಹುಟ್ಟಿರಲಿಲ್ಲ. ಈ ದುರಂತ ನಡೆದದ್ದು ಅವು ಹುಟ್ಟಿದ ಬಳಿಕ, ಬಲಹೀನ ಯಾ ಅಪ್ರಾಪ್ತ ಶಿಶುವಿಗೆ ಅವು ಬಲಗೊಳ್ಳುವವೆಂಬ ನಂಬುಗೆಯಿಂದ ರಕ್ತಪೂರಣ—ವೈದ್ಯಕೀಯ ವೃತ್ತಿ ದೀರ್ಘಕಾಲದಿಂದ ಅಪಖ್ಯಾತಿಗೊಳಪಡಿಸಿರುವ ವಿಧಾನ—ಮಾಡಿದ ಬಳಿಕವೇ. “ಒಬ್ಬ ಏಚ್ಐವಿ ಪಾಸಿಟಿವ್ ರಕ್ತದಾನಿ 10, 12, ಯಾ ಹೆಚ್ಚು ಮಕ್ಕಳಿಗೆ ರೋಗ ಅಂಟಿಸಬಲ್ಲನು,” ಎಂದರು ಒಬ್ಬ ವೈದ್ಯರು.
“ಏಯ್ಡ್ಸ್ ಇತಿಹಾಸದಲ್ಲಿ ಪ್ರಥಮ ಬಾರಿ, ನಾವು ಶೈಶವದ ಏಯ್ಡ್ಸನ್ನು ಎದುರಿಸುತ್ತಿದ್ದೇವೆ. ಇದೊಂದು ಸಾಂಕ್ರಾಮಿಕ ರೋಗ” ಎಂದರು, ಪ್ಯಾರಿಸಿನಲ್ಲಿರುವ ಡಾಕ್ಟರ್ಸ್ ಆಫ್ ದ ವರ್ಲ್ಡ್ ಎಂಬ ಮಾನವ ಹಿತ ಸಂಘದ ಅಧ್ಯಕ್ಷ ಡಾ. ಶಾಕ್ ಲಿಬಾ.
ಉದಾಹರಣೆಗೆ, ಸಪ್ಟಂಬರ 1990ರಲ್ಲಿ, ಪ್ರಥಮ ಬಾರಿ, ಲೋಕಾರೋಗ್ಯ ಸಂಸ್ಥೆ (WHO) ಲೋಕವ್ಯಾಪಕವಾದ ಮಕ್ಕಳ ಏಯ್ಡ್ಸ್ ವ್ಯಾಧಿಯ ಬೆಚ್ಚಿ ಬೀಳಿಸುವ ರುಜುವಾತನ್ನು ತೋರಿಸಿತು. 2000 ಇಸವಿಯೊಳಗೆ, ಎಕ್ವಾಯರ್ಡ್ ಇಮ್ಯೂನ್ ಡಿಫಿಶನ್ಸಿ ಸಿಂಡ್ರೋಮ್ ಲಕ್ಷಣಗಳನ್ನು ಉಂಟುಮಾಡುವ ರೋಗಾಣು ಒಂದು ಕೋಟಿ ಮಕ್ಕಳಿಗೆ ಅಂಟುವುದೆಂದು ಡಬ್ಲ್ಯುಎಚ್ಒ ವರದಿ ಮಾಡಿತು. “ಇವರಲ್ಲಿ ದೊಡ್ಡ ಬಹುಸಂಖ್ಯಾತ ಭಾಗದವರಲ್ಲಿ ಏಯ್ಡ್ಸ್ ವಿಕಸನಗೊಂಡು 2000 ಇಸವಿಯೊಳಗೆ ಸಾಯುವರು,” ಎಂದರು ಡಾ. ಮೈಕಲ್ ಮರ್ಸನ್, ಸಂಸ್ಥೆಯ ಲೋಕವ್ಯಾಪಕ ಏಯ್ಡ್ಸ್ ಕಾರ್ಯಕ್ರಮದ ಡೈರೆಕ್ಟರ್. 1990ರ ಅಂತ್ಯ ಭಾಗದೊಳಗೆ, ಪೂರ್ತಿ ಬೆಳೆದ ಏಯ್ಡ್ಸ್ ರೋಗವಿತ್ತೆಂದು ಅಂದಾಜಾಗಿರುವ 12 ಲಕ್ಷ ಜನರಲ್ಲಿ ಮೂರನೆಯ ಒಂದಂಶ ಐದು ವರ್ಷಕ್ಕೆ ಕೆಳಗಿನ ಮಕ್ಕಳಲ್ಲಿತ್ತೆಂದು ನಂಬಲಾಗಿದೆ.
ಹೀಗಿರುವುದರಿಂದ, ಏಯ್ಡ್ಸ್ ವ್ಯಾಧಿಯ ಹಬ್ಬುವಿಕೆಯನ್ನು ಸರ್ವವ್ಯಾಪಿ ವ್ಯಾಧಿಯೆಂದು ಕರೆದಿರುವುದು ಆಶ್ಚರ್ಯವೆ? 1992ರೊಳಗೆ, ಸುಮಾರು 40 ಲಕ್ಷ ಶಿಶುಗಳು ಏಚ್ಐವಿ ಅಂಟಿರುವ ತಾಯಿಗಳಿಗೆ ಹುಟ್ಟಿರುವರು. ಈ ರೋಗಾಣುವಿನಿಂದ ಹುಟ್ಟಿದ ಐವರಲ್ಲಿ ನಾಲ್ಕು ಮಕ್ಕಳು ತಮ್ಮ ಐದನೆಯ ಜನ್ಮದಿನದೊಳಗೆ ಏಯ್ಡ್ಸನ್ನು ವಿಕಸಿಸುವರು. ಅವರಿಗೆ ಏಯ್ಡ್ಸ್ ಅಂಟಿದ ಬಳಿಕ ಅವರು ಸಾಮಾನ್ಯವಾಗಿ ಒಂದೆರಡು ವರ್ಷಗಳಲ್ಲಿ ಸಾಯುವರು, ಎಂದರು ಡಾ. ಮೆರ್ಸನ್, ಜಿನೀವದ ಒಂದು ಪತ್ರಿಕಾ ಸಭೆಯಲ್ಲಿ.
ಪರಿಣತರು ಮುಂತಿಳಿಸುವುದೇನಂದರೆ, 1992ರಲ್ಲಿ ಕೇವಲ ಆಫ್ರಿಕನ್ ಮಹಿಳೆಯರಲ್ಲಿಯೇ 1,50,000 ಏಯ್ಡ್ಸ್ ಕೇಸುಗಳೂ ಆಫ್ರಿಕನ್ ಮಕ್ಕಳಲ್ಲಿ 1,30,000 ಕೇಸುಗಳೂ ಇರುವುವು. ಇಂದಿನ ತನಕ, ಅಮೆರಿಕದಲ್ಲಿ, 20,000 ಶಿಶುಗಳು ಏಚ್ಐವಿ ಅಂಟಿರುವ ತಾಯಿಗಳಿಗೆ ಹುಟ್ಟಿರಬಹುದು, ಎಂದಿತು ಡಬ್ಲ್ಯುಎಚ್ಒ ವರದಿ. ನ್ಯೂ ಸೀಲೆಂಡಿನ ವೆಲಿಂಗನ್ಟಿನ ಈವ್ನಿಂಗ್ ಪೋಸ್ಟ್, ಜೂಲೈ 12, 1989ರಲ್ಲಿ ವರದಿಸಿದ್ದೇನಂದರೆ, ಬ್ರೆಸೀಲಿನ ಯುವಜನರಲ್ಲಿ ಸುಮಾರು 1,40,000 ಮಂದಿ ಈ ರೋಗಾಣುವಿನ ವಾಹಕರಾಗಿದ್ದಾರೆ. “ಆದರೆ ಈ ಅಂದಾಜು ಕಡಮೆ ಇರಬಹುದು ಎಂದು ಕ್ರಿಯಾವಾದಿಗಳ ಭಯ” ಎಂದಿತು ಆ ಪತ್ರಿಕೆ. ಅಪ್ರಾಪ್ತ ವಯಸ್ಕರ ಹಿತದ ನ್ಯಾಷನಲ್ ಫೌಂಡೇಶನಿನ ಮೆಡಿಕಲ್ ಡೈರೆಕ್ಟರ್ ಹೇಳಿದ್ದು: “ಈ ಗುಂಪಿಗೆ ವಿಶೇಷ ಚಿಕಿತ್ಸೆ ಕೊಡದಿರುವಲ್ಲಿ, ಅದು ನಗರದಲ್ಲಿ ಅಲೆದಾಡುವ ಅಣು ಬಾಂಬು ಆಗುವದು ಎಂದು ನನ್ನ ನಂಬಿಕೆ.” ಬ್ರೆಸೀಲಿನ ಒಬ್ಬ ಮನಶ್ಶಾಸ್ತ್ರಜ್ಞ ಪ್ರಲಾಪಿಸಿದ್ದು: “ಇದೊಂದು ವಿಪರೀತ ಗುರುತರವಾಗಿರುವ ಸಮಸ್ಯೆ.”
ಸಮಸ್ಯೆಗಳ ವರ್ಧನ
ಈ ಮಾರಕ ವ್ಯಾಧಿಯನ್ನು ಅನುಭವಿಸುವವರಾದ ನಿರಪರಾಧಿ ಆಹುತಿಗಳ ಅವಸ್ಥೆಯನ್ನು ನೋಡಿ ಯಾವನಾದರೂ ಭಾವಾತ್ಮಕವಾಗಿ ಪ್ರೇರಿಸಲ್ಪಡದೆ ಇದ್ದಾನೇ? ದೃಷ್ಟಾಂತಕ್ಕೆ, ಈ ವರದಿಯನ್ನು ಪರಿಗಣಿಸಿರಿ: “ನಾರ್ವೇಜಿಯನ್ ರೆಡ್ ಕ್ರಾಸ್ಗನುಸಾರ, ಮಧ್ಯ ಆಫ್ರಿಕದಲ್ಲಿ ಕಡಮೆ ಪಕ್ಷ 50 ಮಕ್ಕಳಾದರೂ—ಕೆಲವರು ಅವರ ಸ್ವಂತ ಹೆತ್ತವರಿಂದ— ಅವರಿಗೆ ಏಯ್ಡ್ಸ್ ಅಂಟಿರುವ ಕಾರಣ ಕೊಲೆ ಮಾಡಲ್ಪಟ್ಟಿದ್ದಾರೆ.” ಏಯ್ಡ್ಸ್ ಅಂಟಿರುವ ಇತರ ಆಫ್ರಿಕನ್ ಮಕ್ಕಳನ್ನು, ವ್ಯಾಧಿಯೊಂದಿಗೆ ತಮಗಿರುವ ಸಂಬಂಧವನ್ನೆ ಅಳಿಸಿಬಿಡಲು ಪ್ರಯತ್ನಿಸುವ ಕುಟುಂಬಗಳು ಮನೆಯಿಂದ ಓಡಿಸುತ್ತವೆ. ಏಕೆಂದರೆ ಈ ವ್ಯಾಧಿಗೆ ಕುಷ್ಠ ರೋಗಕ್ಕಿಂತ ಕೆಟ್ಟ ಹೆಸರಿದೆ, ಎಂದು ದಕ್ಷಿಣ ಆಫ್ರಿಕದ ಜೊಹ್ಯಾನೆಸ್ಬರ್ಗಿನ ವೃತ್ತ ಪತ್ರಿಕೆ ಸಂಡೇ ಸ್ಟಾರ್ ವರದಿಸಿತು. “ಕೆಲವು ಸ್ಥಳಗಳಲ್ಲಿ ಏಯ್ಡ್ಸ್ ರೋಗಿಗಳನ್ನೂ ಅವರ ಕುಟುಂಬಗಳನ್ನೂ ನೀರುಗಂಡಿಗಳಿಗೆ ಮತ್ತು ಚರ್ಚುಗಳಿಗೆ ಬರಲು ಬಿಡುವುದಿಲ್ಲ,” ಎಂದಿತು ಆ ಪೇಪರ್.
ನಡುಕ ಬರಿಸುವ ಹೆಚ್ಚಿನ ಸಂಖ್ಯಾ ಸಂಗ್ರಹಣ ನೆಮ್ಮದಿಯಿಂದಿರಲು ಎಡೆಗೊಡುವುದಿಲ್ಲ. ಲೋಕವ್ಯಾಪಕ ವರದಿಗಳು, ಏಯ್ಡ್ಸ್ ಸರ್ವವ್ಯಾಪಿ ವ್ಯಾಧಿಯು ಇನ್ನೊಂದು ದುರಂತದ ನೇರವಾದ ಕಾರಣವೆಂದು ದೋಷಾರೋಪಣೆ ಹೊರಿಸುತ್ತವೆ. ಏಯ್ಡ್ಸ್ ರೋಗಾಣು ಅಂಟಿರದ ಲಕ್ಷಗಟ್ಟಲೆ ಮಕ್ಕಳು 1990ಗಳಲ್ಲಿ ಅನಾಥರಾಗಲಿಕ್ಕಿದ್ದಾರೆ. ಇದೇಕೆ? ಅವರ ಹೆತ್ತವರು ಏಯ್ಡ್ಸ್ನ ಕಾರಣ ಸಾಯಲಿರುವುದರಿಂದಲೇ. 1992ರೊಳಗೆ ಲೋಕವ್ಯಾಪಕವಾಗಿ ಐವತ್ತು ಲಕ್ಷ ಏಯ್ಡ್ಸ್ ಅನಾಥರಿರುವರೆಂದು ಲೋಕಾರೋಗ್ಯ ಸಂಸ್ಥೆ ಅಂದಾಜು ಮಾಡುತ್ತದೆ. “ಇದು ಆರಂಭವಾಗುತ್ತಾ ಇರುವ ಜಲಪ್ರಳಯ. ಮತ್ತು ನಮಗೆ ಸಾಕು ಪರಾಮರಿಕೆಯ ಯೋಜಿಸುವ ದೂರದೃಷ್ಟಿಯಿಲ್ಲದಿದ್ದರೆ, ದೊಡ್ಡ ಅನಾಥ ಶಾಲೆಗಳನ್ನು ತೆರೆಯ ಬೇಕಾಗಿ ಬಂದೀತು,” ಎಂದರು ಶಿಶುಪಾಲನೆಯ ಒಬ್ಬ ನಿಪುಣರು.
“ವೇದನೆ ಹೆಚ್ಚುಕಡಮೆ ಅಸಂವೇದ್ಯ,” ಎಂದರು ಒಬ್ಬ ಸೇವಕರು, ನ್ಯೂ ಯಾರ್ಕಿನ ಒಂದು ಕುಟುಂಬವನ್ನು ವರ್ಣಿಸುತ್ತಾ. “ತಾಯಿಗೆ ಮತ್ತು ತಂದೆಗೆ ರೋಗ ಅಂಟಿದೆ, ಮಗು ಅಸ್ವಸ್ಥವಿದೆ, ಹೆತ್ತವರು ಮತ್ತು ಮಗು ಸಾಯಲಿಕ್ಕಿದ್ದಾರೆ, ಮತ್ತು ಅವರು 10 ವಯಸ್ಸಿನ ಹುಡುಗನನ್ನು ಯಾವ ಕುಟುಂಬವೂ ಇಲ್ಲದೆ ಬಿಟ್ಟುಹೋಗಲಿದ್ದಾರೆ.”
ಮತ್ತು ಕೊನೆಯದಾಗಿ, ನ್ಯೂ ಯಾರ್ಕಿನ ಆಲ್ಬರ್ಟ್ ಐನ್ಸ್ಟೈನ್ ಕಾಲೆಜ್ ಆಫ್ ಮೆಡಿಸಿನ್ನ ಡಾ. ಅರ್ನೆಸ್ಟ್ ಡ್ರಕರ್ ಮಾಡಿರುವ ಸಮಮನಸ್ಸಿನ ಅವಲೋಕನವಿದೆ: “ಹೆತ್ತವರ ಮರಣಾನಂತರ ಮಕ್ಕಳು ಅನೇಕ ವೇಳೆ ಪಾಲನಾ ವಿಷಯದ ಹೋರಾಟಗಳಲ್ಲಿ ಸಿಕ್ಕಿಕೊಂಡು, ಕುಟುಂಬದ ಒಬ್ಬ ಸದಸ್ಯನಿಂದ ಇನ್ನೊಬ್ಬನ ಬಳಿಗೆ ಹೋಗುತ್ತಾರೆ. ಮತ್ತು ಅದೇ ಸಮಯದಲ್ಲಿ, ಅವರು ತಮಗಾಗಿರುವ ನಷ್ಟ ಮತ್ತು ಏಯ್ಡ್ಸ್ನಿಂದ ಬಂದಿರುವ ಕೆಟ್ಟ ಹೆಸರನ್ನು ನಿಭಾಯಿಸಪ್ರಯತ್ನಿಸುತ್ತಾರೆ.”
ಮಕ್ಕಳ ಮತ್ತು ತರುಣರ ಮರಣದಲ್ಲಿ ಏಯ್ಡ್ಸ್ ಪ್ರಮುಖ ಕಾರಣಗಳಲ್ಲಿ ಒಂದಾಗುತ್ತಾ ಬರುತ್ತಿದೆ. ಒಂದರಿಂದ ನಾಲ್ಕು ವಯಸ್ಸಿನ ಮಕ್ಕಳಲ್ಲಿ ಇದು ಪ್ರಮುಖ ಕಾರಣಗಳಲ್ಲಿ ಒಂಭತನ್ತೆಯದ್ದಾಗಿರುವಾಗ, ಹದಿಹರೆಯದವರಲ್ಲಿ ಮತ್ತು 25 ವಯಸ್ಸಿನ ಕೆಳಗಿನ ತರುಣರಲ್ಲಿ ಇದು ಪ್ರಮುಖ ಕಾರಣಗಳಲ್ಲಿ ಏಳನೆಯದಾಗಿದೆ. 1990ಗಳ ಆದಿಭಾಗದಲ್ಲಿ, ಏಯ್ಡ್ಸ್, ಮರಣದ ಮೊದಲಿನ ಐದು ಪ್ರಮುಖ ಕಾರಣಗಳಲ್ಲಿ ಒಂದಾಗಬಹುದು ಎಂದು ಸಪ್ಟಂಬರ್ 1989ರ ದಿ ಏಯ್ಡ್ಸ್⁄ಏಚ್ಐವಿ ರೆಕಾರ್ಡ್ ವರದಿ ಮಾಡಿತು. ಆದರೂ, ಈ ಭಯಂಕರ ರೋಗದ ಅನೇಕ ಭಾವೀ ಬಲಿಪಶುಗಳಲ್ಲಿ ಲೋಕವ್ಯಾಪಕವಾಗಿ ನಿರಾತಂಕ ಮನೋಭಾವವಿದೆಯೆಂದು ವರದಿಗಳು ಸೂಚಿಸುತ್ತವೆ. ಮುಂದಿನ ಲೇಖನದಲ್ಲಿ, ಬೆಚ್ಚಿ ಬೀಳಿಸುವ ಕೆಲವು ನಿಜತ್ವಗಳನ್ನು ಪರಿಗಣಿಸಿರಿ. (g91 7/22)