ಏಯ್ಡ್ಸ್ ಹೆತ್ತವರು ಮತ್ತು ಮಕ್ಕಳು ಅರಿತಿರಬೇಕಾದ ಸಂಗತಿ
ಏಯ್ಡ್ಸ್ ವಿಕಸಿಸಿರುವ ಅನೇಕ ತರುಣ ರೋಗಿಗಳಿಗೆ, ಏಯ್ಡ್ಸ್ ಕುರಿತು ತುಸು ಜ್ಞಾನವಿರುವ ವಯಸ್ಕರ ಅಸಮತೆಯ ಯೋಚನೆಗಳ ಕಾರಣ, ಸಮಸ್ಯೆಗಳು ಜಟಿಲವಾಗುವುದು ದೌರ್ಭಾಗ್ಯಕರ. ಅನೇಕ ವೇಳೆ, ಹೆತ್ತವರು ತಮ್ಮ ಸ್ವಂತ ಮಕ್ಕಳ ಮನಸ್ಸನ್ನು ರೋಗವಿರುವವರ ವಿರುದ್ಧ ಪ್ರತಿಕೂಲವಾಗುವಂತೆ ಮಾಡಿದ್ದಾರೆ. ಅಪಾಯವಿಲ್ಲವೆಂದು ವೈದ್ಯರು ತಿಳಿಸಿದ ಬಳಿಕವೂ, ಶಾಲಾ ಮೇಲ್ವಿಚಾರಕರು ಮತ್ತು ಮುಖ್ಯೋಪಾಧ್ಯಾಯರು ಏಯ್ಡ್ಸ್ ರೋಗಾಣು ಅಂಟಿರುವ ವಿದ್ಯಾರ್ಥಿಗಳನ್ನು ಶಾಲೆಗೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಈ ಕಾರಣದಿಂದ, ಏಚ್ಐವಿ ಅಂಟಿರುವ ಮಕ್ಕಳ ಅನೇಕ ಹೆತ್ತವರಿಗೆ ಗುಟ್ಟೆಂಬುದು ಗುರುತು ನುಡಿಯಾಗಿದೆ. ತಮ್ಮ ಮಕ್ಕಳು ಹೊರಗೆ ಹಾಕಲ್ಪಡುವರು, ಅಪಪ್ರಯೋಗಿಸಲ್ಪಡುವರು, ಅಥವಾ ಅದಕ್ಕಿಂತಲೂ ಕೆಟ್ಟದ್ದು ಅವರಿಗಾಗುವುದು ಎಂದು ಅವರು, ಕೆಲವು ಸಂದರ್ಭಗಳಲ್ಲಿ ಸಕಾರಣದಿಂದಲೇ ಭಯಪಡುತ್ತಾರೆ.
ದೃಷ್ಟಾಂತಕ್ಕೆ, ಏಯ್ಡ್ಸ್ ಅಂಟಿದ್ದ ಮಗಳಿದ್ದ ಒಬ್ಬ ತಾಯಿ, ನೆರೆಯವರು ತನಗೆ ಉಪದ್ರವ ಕೊಟ್ಟಾರೆಂದು ಎಷ್ಟು ಭಯಪಟ್ಟಳೆಂದರೆ, ತನ್ನ ಮಗಳು ಇತರ ಮಕ್ಕಳೊಂದಿಗೆ ಆಡಲು ಸಹ ಬಿಡಲಿಲ್ಲ. “ನಿಮ್ಮ ಮಗುವಿಗೆ ಏಯ್ಡ್ಸ್ ಇದೆಯೆಂದು ನೆರೆಹೊರೆಯವರಿಗೆ ತಿಳಿಯುವ ಮನಸ್ಸು ನಿಮಗಿಲ್ಲ; ಏಕೆಂದರೆ ಅವರು ವಿಚಿತ್ರ ಸಂಗತಿಗಳನ್ನು ಮಾಡುತ್ತಾರೆ.” ಮತ್ತು ವರದಿಗಳನ್ನು ನೋಡುವುದಾದರೆ, ಇದು ಅತಿಶಯೋಕ್ತಿಯಲ್ಲ. ಆಪ್ತ ಮಿತ್ರರು ಮತ್ತು ನೆರೆಯವರೇ ಹೆತ್ತವರನ್ನು ದೂರವಿಟ್ಟದ್ದುಂಟು. ಮಿತ್ರರು ದಾರಿಯಲ್ಲಿ ಸಿಕ್ಕಿದ ವ್ಯಕ್ತಿಯನ್ನು ಗುರುತಿಸುವ ಯಾ ವಂದಿಸುವ ಬದಲಿಗೆ ಅವರನ್ನು ಅಲಕ್ಷ್ಯಿಸಿ ನಡೆದು ಹೋದದಿದ್ದೆ. ಏಯ್ಡ್ಸ್ನ ಕೆಟ್ಟ ಹೆಸರಿನ ಅವಿಚಾರಾಭಿಪ್ರಾಯ ಎಷ್ಟು ಆಳವಾಗಿ ಹರಿದು ಹೋಗುತ್ತಿದೆಯೆಂದರೆ, ಏಯ್ಡ್ಸ್ ಇರುವ ಮಗುವಿನ ಕುಟುಂಬ ರೆಸ್ಟರಂಟಿಗೆ ಊಟಕ್ಕೆ ಹೋದಾಗ ಅಲ್ಲಿದ್ದ ಇತರ ಗಿರಾಕಿಗಳು ಅವಮರ್ಯಾದೆಯ ಮಾತುಗಳನ್ನು ಕೂಗಿ ಹೇಳಿ ಅಲ್ಲಿಂದ ಹೊರಟು ಹೋದದ್ದುಂಟು. ತಂದೆಗಳಿಗೆ ಕೆಲಸ ನಷ್ಟವಾಗಿದೆ. ಇತರರು ಬಾಂಬು ಎಸೆಯಲ್ಪಡುವ ಬೆದರಿಕೆಗೊಳಗಾಗಿದ್ದಾರೆ. ಇನ್ನಿತರರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.
ಏಯ್ಡ್ಸ್ ಇರುವ ಮಕ್ಕಳು ಅವರ ಸಹಪಾಠಿಗಳಿಂದ ಕ್ರೂರ ತಮಾಷೆಗೊಳಗಾದದಿದ್ದೆ. ರಕ್ತಪೂರಣದಿಂದ ಏಯ್ಡ್ಸ್ ಅಂಟಿದ್ದ ಇಂಥ ಒಬ್ಬನನ್ನು ಅವನ ಸಹಪಾಠಿಗಳು ಪದೇ ಪದೇ ಅವನು ಸಲಿಂಗೀಕಾಮಿಯೆಂದು ಅಪವಾದ ಹೊರಿಸಿದರು. “ನಿನಗೆ ನಿಜವಾಗಿಯೂ ಏಯ್ಡ್ಸ್ ಹೇಗೆ ಬಂತೆಂದು ನಮಗೆ ಗೊತ್ತು” ಎಂದು ಅವರು ಮೂದಲಿಸುತ್ತಿದ್ದರು. ಅವರ ಚರ್ಚಿನ ಇತರ ಸದಸ್ಯರು ಆ ಕುಟುಂಬವನ್ನು ವರ್ಜಿಸಿದರು. ಅಶ್ಲೀಲವಾದ ಅನಾಮಧೇಯ ಪತ್ರಗಳು ಅವರಿಗೆ ಬರತೊಡಗಿದವು. ಅವರ ಹಿತ್ತಲಲ್ಲಿ ಕಚಡದ ರಾಶಿಗಳು ಎಸೆಯಲ್ಪಟ್ಟವು. ಮುಂದಿನ ಕಿಟಿಕಿಯಿಂದ ಯಾರೋ ಗುಂಡು ಹೊಡೆದದ್ದೂ ಉಂಟು.
ಏಯ್ಡ್ಸ್ ಅಂಟಿದ ಒಂದು ಮಗುವಿನ ತಾಯಿ ಹೇಳಿದ್ದು: “ಇದು ಅಷ್ಟು ಗುಟ್ಟಾದ ಸಂಗತಿ; ಮತ್ತು ಅದೇ ಒಬ್ಬನನ್ನು ಒಂಟಿಗ ಭಾವನೆಗೆ ನಡೆಸುತ್ತದೆ.” ದ ನ್ಯೂ ಯಾರ್ಕ್ ಟೈಮ್ಸ್ ತನ್ನ ಸರ್ವವನ್ನು ಕೂಡಿಸಿ ಹೇಳುವುದು: “13 ವಯಸ್ಸಿನ ಕೆಳಗಣ 1,736 ಮಂದಿ ಏಯ್ಡ್ಸ್ ಇದೆಯೆಂದು ರೋಗನಿರ್ಣಯವಾಗಿರುವ ಅಮೆರಿಕನ್ ಮಕ್ಕಳಲ್ಲಿ ಹೆಚ್ಚಿನವರು, ಅವರ ರೋಗದಿಂದಾಗಿ ಪ್ರತ್ಯೇಕಿಸಲ್ಪಟ್ಟು, ಅವರನ್ನು ದೂರ ಮಾಡಬಹುದಾದ ಆರೋಗ್ಯವಂತ ಮಿತ್ರರಿಂದ ಮತ್ತು ಶಾಲಾ ಸ್ನೇಹಿತರಿಂದ ತಮ್ಮ ನಿಜಸ್ಥಿತಿಯನ್ನು ಅಡಗಿಸಿಡುವಂತೆ ಬಲಾತ್ಕರಿಸಲ್ಪಟ್ಟಿದ್ದಾರೆ.” ಮತ್ತು, ಕೊನೆಯದಾಗಿ, ದ ಟೊರಾಂಟೊ ಸ್ಟಾರ್ನ ಈ ಅವಲೋಕನವಿದೆ: “ಒಬ್ಬ ತರುಣನು ಸತ್ತ ಬಳಿಕವೂ, ಅನೇಕ ಕುಟುಂಬಗಳು ಸತ್ಯವನ್ನು ತಿಳಿಸಲು ಭಯಪಡುತ್ತಾರೆ, ಮತ್ತು ಇದು, ಮಗುವಿನ ನಷ್ಟದ ವೇದನೆ ಮತ್ತು ಪ್ರತ್ಯೇಕತೆಯನ್ನು ಹೆಚ್ಚಿಸುತ್ತದೆ.”
ನೀವು ಅರಿತಿರಬೇಕಾದುದು
ಏಯ್ಡ್ಸ್ಗೆ ಸಕಲರೂ ಸರಿಸಮಾನರು ಎಂಬುದು ಒಪ್ಪಿಕೊಳ್ಳಬೇಕಾದ ವಿಷಯ. ಅದು ಧನಿಕ, ಬಡವ, ಯುವಕ, ತೀರಾ ಕಿರಿಯ, ಮತ್ತು ಮುದುಕರಿಗೆ ಅಂಟಬಲ್ಲದು. ಎಳೆಯರಲ್ಲಿ, ಕೆಲವು ದೇಶಗಳಲ್ಲಿ, ಏಯ್ಡ್ಸ್ನ ಕುರಿತು ನ್ಯೂನ ಹಾಗೂ ಕೇವಲ ಬಾಹ್ಯ ಮಾಹಿತಿ ಇದೆ. ನ್ಯೂ ಯಾರ್ಕ್ ಸಿಟಿಯ ಒಬ್ಬ ಏಯ್ಡ್ಸ್ ಪರಿಣತರು ಹೇಳಿದ್ದು: ಅನೇಕರಿಗೆ “ಹದಿಪ್ರಾಯದವರಿಗೆ ಏಯ್ಡ್ಸ್ ಎಷ್ಟು ದೊಡ್ಡ ಅಪಾಯವೆಂಬ ವಿಷಯದಲ್ಲಿ ಯಾವ ಊಹೆಯೂ ಇಲ್ಲ.”
ದೃಷ್ಟಾಂತಕ್ಕೆ, ಒಂದು ದೊಡ್ಡ ಅಮೆರಿಕನ್ ನಗರದಲ್ಲಿ ಮಾಡಿದ ಯುವಜನರ ಅಧ್ಯಯನ ತಿಳಿಸಿದ್ದೇನಂದರೆ, ಸಮೀಕ್ಷೆ ನಡೆಸಿದವರಲ್ಲಿ 30 ಪ್ರತಿಶತ, ಆರಂಭದಲ್ಲೇ ಚಿಕಿತ್ಸೆ ನಡೆಸುವಲ್ಲಿ ಏಯ್ಡ್ಸ್ ಗುಣವಾಗಬಲ್ಲದೆಂದು ನಂಬಿದರು. ಆದರೆ ಇದನ್ನು ವಾಸಿಮಾಡುವ ಯಾವುದೂ ಇದುವರೆಗೆ ಕಂಡುಹಿಡಿಯಲ್ಪಟ್ಟಿರುವುದಿಲ್ಲ. ಇವರಲ್ಲಿ ಮೂರರಲ್ಲಿ ಒಂದು ಭಾಗಕ್ಕೆ, ರೋಗಿಯಾದ ಒಬ್ಬನನ್ನು ಕೇವಲ ಮುಟ್ಟುವಲ್ಲಿ ಯಾ ಅವನ ಬಾಚಣಿಗೆಯನ್ನು ಉಪಯೋಗಿಸುವಲ್ಲಿ ಏಯ್ಡ್ಸ್ ಅಂಟಲಾರದೆಂದು ಗೊತ್ತಿರಲಿಲ್ಲ. ಅಮೆರಿಕದ ಇನ್ನೊಂದು ಭಾಗದಲ್ಲಿ, 16ರಿಂದ 18 ವಯಸ್ಸಿನ 860 ಹದಿಪ್ರಾಯದವರಲ್ಲಿ ನಡೆಸಿದ ಇನ್ನೊಂದು ಸಮೀಕ್ಷೆ ಕಂಡುಹಿಡಿದದ್ದೇನಂದರೆ, ಇವರಲ್ಲಿ 22 ಪ್ರತಿಶತ ಮಂದಿಗೆ ಏಯ್ಡ್ಸ್ ರೋಗಾಣುವನ್ನು ವೀರ್ಯದಿಂದ ರವಾನಿಸಬಹುದೆಂದು ಗೊತ್ತಿರಲಿಲ್ಲ, ಮತ್ತು 29 ಪ್ರತಿಶತಕ್ಕೆ ಅದನ್ನು ಯೋನಿಯ ಸ್ರಾವದಿಂದ ರವಾನಿಸಸಾಧ್ಯವಿದೆಯೆಂದು ಗೊತ್ತಿರಲಿಲ್ಲ.
ಪರಿಪಾಕಾವಸ್ಥೆಯ ಪೂರ್ತಿ ಸಮಯದಲ್ಲಿ ಹಾಗೂ ಏಯ್ಡ್ಸ್ ತೋರಿಬಂದಿರುವ ಸಮಯದಲ್ಲಿ, ಈ ರೋಗಿಗಳು ರೋಗವಂಟಿಸಬಲ್ಲರು ಮತ್ತು ಏಯ್ಡ್ಸ್ ರೋಗಾಣುವನ್ನು ಇತರರಿಗೆ ರವಾನಿಸಬಲ್ಲರು. ಆದರೆ ಕೈಕುಲುಕುವಾಗ ಯಾ ರೋಗಿಯನ್ನು ಅಪ್ಪಿಕೊಳ್ಳುವಾಗ ಇದನ್ನು ರವಾನಿಸಸಾಧ್ಯವಿಲ್ಲ, ಏಕೆಂದರೆ ದೇಹದ ಹೊರಗೆ ಈ ಸೂಕ್ಷ್ಮ ರೋಗಾಣು ಬೇಗನೆ ಸಾಯುತ್ತದೆ. ತದ್ರೀತಿ, ಈ ರೋಗಾಣು, ಕೆಲವರು ಭಯಪಡುವಂತೆ, ಪಾಯಿಖಾನೆಯ ಕುರ್ಚಿಗಳಲ್ಲಿ ಬದುಕದು. ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಮೇಲಧಿಕಾರಿಗಳು, ಏಯ್ಡ್ಸ್ ಇಲ್ಲದ ವಿದ್ಯಾರ್ಥಿಗಳು ಆಗ ತಾನೆ ನೀರು ಕುಡಿದ ರೋಗಿಯ ಕಾರಣ ನೀರಿನ ಚಿಲುಮೆಯಿಂದ ಕುಡಿಯುವಲ್ಲಿ ಅದು ಅವರಿಗೂ ಅಂಟುವುದೆಂದು ಭಯಪಟ್ಟರೊ? ಈ ಶಂಕೆಗಳಿಗೆ ಅಧಾರವಿಲ್ಲವೆಂದು ಪರಿಣತರು ಹೇಳುತ್ತಾರೆ, ಏಕೆಂದರೆ ರೋಗವಂಟಿರದ ವ್ಯಕ್ತಿಯ ರಕ್ತಕ್ಕೆ ಸೇರುವ ಯಾವ ಅವಕಾಶವೂ ರೋಗಾಣುವಿಗಿರುವುದಿಲ್ಲ.
ಕಿವಿ ತೂತು ಮಾಡುವಾಗ ಸೂಜಿ ಉಪಯೋಗಿಸಲ್ಪಡುವುದರಿಂದ, ಅದರ ಅಪಾಯದ ಕುರಿತು ಅನೇಕ ವೇಳೆ ಡಾಕ್ಟರರನ್ನು ಕೇಳಲಾಗುತ್ತದೆ. ಮಲಿನಗೊಂಡಿರುವ ಉಪಕರಣಗಳನ್ನು ಉಪಯೋಗಿಸುವಲ್ಲಿ ಇದು ಏಯ್ಡ್ಸ್ ರೋಗಾಣು ಅಂಟುವ ದಾರಿಯಾಗಬಹುದೆಂದು ಪರಿಣತರು ಒಪ್ಪುತ್ತಾರೆ. ಚುಂಬಿಸುವುದರ ವಿಷಯವೇನು? “ಏಯ್ಡ್ಸ್ ಇರುವ ಯಾ ಏಚ್ಐವಿ ಅಂಟಿರುವ ಒಬ್ಬನು ನಿಮ್ಮನ್ನು ಚುಂಬಿಸುವಲ್ಲಿ, ಮತ್ತು ನಿಮ್ಮ ತುಟಿ ಯಾ ಬಾಯಿಯಲ್ಲಿ ರಕ್ತ ಸುರಿಯುವ ಗಾಯವಿರುವಲ್ಲಿ, ಅದು ಸಂಭಾವ್ಯವಾದರೂ, ತೀರಾ ಅಸಂಭವನೀಯ,” ಎಂದರು ಒಬ್ಬ ಪರಿಣತರು. ಆದರೂ ಇದರ ಸಾಧ್ಯತೆಯಿದೆ.
ಸಂದೇಹಾಸ್ಪದವಾದ ರೋಗಲಕ್ಷಣಗಳು ತೋರಿಬಂದ ಮೇಲೆಯೂ ನಿಮಗೆ ಅದು ಅಂಟಿದೆಯೋ ಇಲ್ಲವೋ ಎಂದು ತಿಳಿಯುವ ಒಂದೇ ಮಾರ್ಗವು ಡಾಕ್ಟರರ ಆದ್ಯಂತ ಪರೀಕ್ಷೆ ಮತ್ತು ರಕ್ತ ಪರೀಕ್ಷೆಯ ಮೂಲಕವೇ.
ಮತ್ತು, ಅಂತಿಮವಾಗಿ, ನೀವು ಚಿಕ್ಕವರಾಗಿರುವಲ್ಲಿ, ನಿಮ್ಮ ಹೆತ್ತವರೊಂದಿಗೆ ಸತ್ಯವನ್ನಾಡಿರಿ. ಇತರ ಸಕಲರೂ ನಿಮ್ಮನ್ನು ಬಿಟ್ಟು ಹೋಗುವಾಗ ಅವರು ನಿಮ್ಮೊಂದಿಗಿದ್ದು ನಿಮಗೆ ಬೇಕಾಗುವ ದುಃಖಶಮನ ಮತ್ತು ನೆರವನ್ನು ನೀಡುವರು. ವಿವೇಕಿಗಳಾಗಿ ಮಾದಕ ಪದಾರ್ಥಗಳಿಗೂ ವಿವಾಹಪೂರ್ವದ ಮೈಥುನಕ್ಕೂ ಬೇಡವೆಂದು ಹೇಳಿರಿ. ಇದು ನಿಮ್ಮ ಜೀವವನ್ನು ರಕ್ಷಿಸಬಲ್ಲದು. ಏಯ್ಡ್ಸ್ ರೋಗಾಣುವನ್ನು ಸಂಭೋಗದ ಮೂಲಕ ಯಾ ಮಲಿನ ಸೂಜಿಗಳ ಮೂಲಕ ಪಡೆದಿರುವ ಅನೇಕ ಯುವಜನರು, ತಾವು ಕೆಟ್ಟ ಸಹವಾಸದಿಂದ ಪ್ರಭಾವಿತರಾದೆವೆಂದು ಒಪ್ಪಿಕೊಂಡಿದ್ದಾರೆ. ಅವರಿಗೆ ಈಗ ಅಪೊಸ್ತಲ ಪೌಲನ ಮಾತುಗಳ ಅಗಾಧವಾದ ಅರ್ಥ ತಿಳಿಯುತ್ತದೆಂಬುದು ನಿಶ್ಚಯ. “ಮೋಸಹೋಗಬೇಡಿರಿ. ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ,”—ಮತ್ತು ಕೆಲವು ಸಂದರ್ಭಗಳಲ್ಲಿ ಜೀವನಷ್ಟವನ್ನೂ ತರಬಲ್ಲದು.—1 ಕೊರಿಂಥ 15:33. (g91 7/22)