ಕುಟುಂಬಗಳು—ಹೊತ್ತು ಮೀರುವ ಮೊದಲೆ ಹತ್ತಿರ ಬನ್ನಿರಿ
“ಕುಟುಂಬವು ಅತ್ಯಂತ ಹಳೆಯ ಮಾನವ ಸಂಘಟನೆಯಾಗಿದೆ. ಅನೇಕ ರೀತಿಗಳಲ್ಲಿ ಅದು ಅತ್ಯಂತ ಮಹತ್ವವುಳ್ಳದ್ದೂ ಆಗಿದೆ. ಅದು ಸಮಾಜದ ಮೂಲಭೂತ ಏಕಾಂಶ. ಕುಟುಂಬ ಜೀವನದ ಸುದೃಢತೆ ಯಾ ನಿರ್ಬಲತೆಯನ್ನು ಅವಲಂಬಿಸುತ್ತಾ, ಇಡೀ ನಾಗರಿಕತೆಗಳು ಪಾರಾಗಿವೆ ಇಲ್ಲವೇ ಮಾಯವಾಗಿ ಹೋಗಿವೆ.”—ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ (1973ರ ಮುದ್ರಣ).
ಕುಟುಂಬ ಏಕಾಂಶವು ಮಕ್ಕಳಿಗೆ ಸಂರಕ್ಷಣೆ ನೀಡುವ ಒಂದು ಕೊಡೆ. ಆದರೆ ಇಂದು, ಅನೇಕ ಕಡೆಗಳಲ್ಲಿ ಆ ಕೊಡೆಯಲ್ಲಿ ತುಂಬ ತೂತುಗಳು ಬಿದ್ದಿವೆ; ಅನೇಕ ಕಡೆಗಳಲ್ಲಿ, ಅದು ಮುಚ್ಚಲ್ಪಟ್ಟು ಕಪಾಟಿಗೆ ಎಸೆಯಲ್ಪಟ್ಟಿದೆ. ಸಾಂಪ್ರದಾಯಿಕ ಕುಟುಂಬವನ್ನು ಹಳೆಯ ಪದ್ಧತಿಯದ್ದೆಂದು ಹೇಳುತ್ತಾ, ಅದನ್ನು ಪದೇ ಪದೇ ಬದಿಗಿರಿಸಲಾಗುತ್ತದೆ. ಟೆಲಿವಿಷನ್ ಹಾಸ್ಯಚಿತ್ರಗಳು ಅನೇಕ ವೇಳೆ ತಂದೆಗಳನ್ನು ಹೆಡ್ಡರೆಂದೂ, ತಾಯಂದಿರನ್ನು ಹೆಚ್ಚು ಜಾಣರೆಂದೂ ಚಿತ್ರಿಸಿ, ಮಕ್ಕಳನ್ನು ಸರ್ವಜ್ಞರೆಂದು ತೋರಿಸುತ್ತವೆ.
ದಾಂಪತ್ಯ ದ್ರೋಹ ಸರ್ವಸಾಮಾನ್ಯ. ಕೆಲವು ಕೈಗಾರಿಕೀಕರಿಸಲ್ಪಟ್ಟಿರುವ ರಾಷ್ಟ್ರಗಳಲ್ಲಿ, ಪ್ರತಿ ಎರಡು ಮೊದಲ ವಿವಾಹಗಳಲ್ಲಿ ಒಂದು ವಿಚ್ಛೇದದಲ್ಲಿ ಅಂತ್ಯಗೊಳ್ಳುತ್ತದೆ. ವಿಚ್ಛೇದಗಳು ವೃದ್ಧಿಯಾಗುವಾಗ, ಒಂಟಿಗ ಹೆತ್ತವರಿರುವ ಕುಟುಂಬಗಳು ಹೆಚ್ಚುತ್ತವೆ. ಹೆಚ್ಚುತ್ತಿರುವ ಸಂಖ್ಯೆಗಳಲ್ಲಿ, ವಿವಾಹವಿಲ್ಲದೆನೇ ಇಬ್ಬರು ಒಂದಾಗಿ ಜೀವಿಸುತ್ತಾರೆ. ಸಲಿಂಗೀಕಾಮಿಗಳು ತಮ್ಮ ಸಂಬಂಧವನ್ನು ಗೌರವವುಳ್ಳದ್ದಾಗಿ ಮಾಡಲು ವಿವಾಹ ಪ್ರತಿಜ್ಞೆ ಮಾಡುತ್ತಾರೆ. ಚಲನಚಿತ್ರ ಮತ್ತು ವಿಡಿಯೊಗಳಲ್ಲಿ ಕಾಮ, ಅದು ರೂಢಿಯದ್ದಾಗಿರಲಿ, ವಿಕೃತವಾಗಿರಲಿ, ಮುಖ್ಯ ಪಾತ್ರ ವಹಿಸುತ್ತದೆ. ಶಾಲೆಗಳು ಲೈಂಗಿಕ ನೈರ್ಮಲ್ಯವನ್ನು ಅಪ್ರಾಯೋಗಿಕವೆಂದು ಕಂಡು, ಜಾರತ್ವವು ಸುರಕ್ಷಿತವಾಗಿರುವಂತೆ—ಅದು ಸುರಕ್ಷಿತವಲ್ಲ—ಶಿಶ್ನಕವಚಗಳನ್ನು ಹಂಚುತ್ತವೆ. ರತಿ ರವಾನಿತ ರೋಗಗಳು ಮತ್ತು ಹದಿಪ್ರಾಯದವರ ಗರ್ಭಧಾರಣೆಗಳು ತೀರಾ ಮೇಲಕ್ಕೇರಿವೆ. ಇದರ ಬಲಿಪಶುಗಳಾಗುವುದು—ಅವುಗಳನ್ನು ಹುಟ್ಟಲು ಬಿಡುವಲ್ಲಿ—ಶಿಶುಗಳೆ. ಸಾಂಪ್ರದಾಯಿಕ ಕುಟುಂಬಗಳ ನಿಧನದ ಕಾರಣ ಮುಖ್ಯವಾಗಿ ನಷ್ಟಪಡುವವರು ಮಕ್ಕಳು.
ವರ್ಷಗಳಿಗೆ ಹಿಂದೆ, ನೋಬೆಲ್ ಪಾರಿತೋಷಿಕ ವಿಜೇತ ಅಲೆಕ್ಸಿಸ್ ಕ್ಯಾರೆಲ್, ಮ್ಯಾನ್, ದಿ ಅನ್ನೋನ್ ಎಂಬ ಪುಸ್ತಕದಲ್ಲಿ ಈ ಎಚ್ಚರಿಕೆ ಕೊಟ್ಟರು: “ಕುಟುಂಬ ತರಬೇತನ್ನು ಶಾಲೆಗೆ ಪೂರ್ತಿ ಬಿಟ್ಟುಕೊಟ್ಟದ್ದರ ಮೂಲಕ ಆಧುನಿಕ ಸಮಾಜ ಗುರುತರವಾದ ತಪ್ಪನ್ನು ಮಾಡಿದೆ. ತಾಯಂದಿರು ತಮ್ಮ ಜೀವನೋಪಾಯ, ತಮ್ಮ ಸಾಮಾಜಿಕ ಹೆಬ್ಬಯಕೆ, ಲೈಂಗಿಕಾಭಿಲಾಷೆ, ಸಾಹಿತ್ಯಿಕ ಮತ್ತು ಕಲಾಸಂಬಂಧವಾದ ಭ್ರಾಂತಿ, ಯಾ ಕೇವಲ ಬ್ರಿಜ್ ಆಟ ಆಡಲು, ಸಿನಿಮಕ್ಕೆ ಹೋಗಲು, ಮತ್ತು ಮಗ್ನತೆಯ ಮೈಗಳ್ಳತನದಲ್ಲಿ ಕಾಲ ವ್ಯಯಿಸಲು, ತಮ್ಮ ಮಕ್ಕಳನ್ನು ಕಿಂಡರ್ಗಾರ್ಟನಿನಲ್ಲಿ [ಈಗ ಡೇ ಕ್ಯಾರ್ ಮತ್ತು ಪ್ರೀಸ್ಕೂಲ್ ಶಿಶುಗೃಹಗಳು] ಹಾಕಿ ಬಿಡುತ್ತಾರೆ. ಹೀಗೆ ಅವರು ಎಲ್ಲಿ ಮಗು ವಯಸ್ಕರ ಸಂಪರ್ಕದಲ್ಲಿತ್ತೊ ಮತ್ತು ಅವರಿಂದ ತುಂಬ ಕಲಿಯುತ್ತಿತ್ತೊ, ಆ ಕುಟುಂಬ ಗುಂಪಿನ ಕಣ್ಮರೆಗೆ ಕಾರಣವಾಗುತ್ತಾರೆ. . . . ತನ್ನ ಪೂರ್ಣ ಬಲದ ಮಟ್ಟವನ್ನು ಮುಟ್ಟಲು, ಒಬ್ಬನಿಗೆ ಸಂಬಂಧಸೂಚಕ ಪ್ರತ್ಯೇಕತೆ ಮತ್ತು ಕುಟುಂಬವನ್ನೊಳಗೊಂಡಿರುವ ಆ ಸೀಮಿತ ಸಾಮಾಜಿಕ ಗುಂಪು ಅಗತ್ಯ.”—ಪುಟ 176.
ಹೆಚ್ಚು ಇತ್ತೀಚೆಗೆ, ಹರ್ಷನಾಟಕ ನಟ ಸೀವ್ಟ್ ಆ್ಯಲೆನ್, ಕುಟುಂಬದ ಮೇಲೆ ಟೆಲಿವಿಷನ್, ಅದರ ಬಂಡು ಮಾತು ಮತ್ತು ಲೈಂಗಿಕ ದುರಾಚಾರದ ಪೂರ್ವಮಗ್ನತೆಯ ಮೂಲಕ ಮಾಡಿರುವ ಆಕ್ರಮಣದ ಕುರಿತು ಮಾತನಾಡಿದರು. ಅವರಂದದ್ದು: “ಈ ಪ್ರವಾಹ ನಮ್ಮನ್ನು ನೇರವಾಗಿ ಚರಂಡಿಗೊಯ್ಯುತ್ತದೆ. ತಮ್ಮ ಮಕ್ಕಳು ಉಪಯೋಗಿಸಬಾರದೆಂದು ಹೆತ್ತವರು ಹೇಳುವ ಭಾಷೆಯೇ ಈಗ ಪರಿಮಿತಿಯೇ ಇಲ್ಲದ ಕೇಬ್ಲ್ ಟೀವೀ ಚಾಲಕರಿಂದ ಮಾತ್ರವಲ್ಲ, ಒಮ್ಮೆ ಉದಾತ್ತ ಸೂತ್ರಗಳಿದ್ದ ನೆಟ್ವರ್ಕ್ಸ್ ಟೀವೀಯಿಂದಲೂ ಪ್ರೋತ್ಸಾಹಿಸಲ್ಪಡುತ್ತದೆ. ಮಕ್ಕಳು ಮತ್ತು ಇತರರು ಹೊಲಸು ಭಾಷೆಯನ್ನಾಡುವುದನ್ನು ತೋರಿಸುವ ಚಿತ್ರಗಳು ಅಮೆರಿಕನ್ ಕುಟುಂಬದ ಪತನವನ್ನು ಮಾತ್ರ ಒತ್ತಿ ಹೇಳುತ್ತದೆ.”
ಸಮಾಜವು ಈಗ ತನ್ನ ಮಕ್ಕಳಿಗೆ ಯಾವ ಬಳುವಳಿಯನ್ನು ಇಡುತ್ತಾ ಇದೆ? ವೃತ್ತಪತ್ರಿಕೆಯನ್ನು ಓದಿರಿ, ಟೆಲಿವಿಷನನ್ನು ಪ್ರೇಕ್ಷಿಸಿರಿ, ವಿಡಿಯೊ ಗಮನಿಸಿರಿ, ಸಂಧ್ಯಾವಾರ್ತೆಯನ್ನು ಕೇಳಿರಿ, ರ್ಯಾಪ್ ಸಂಗೀತಕ್ಕೆ ಕಿವಿಗೊಡಿರಿ, ಮತ್ತು ನಿಮ್ಮ ಸುತ್ತಲಿರುವ ವಯಸ್ಕರ ಮಾದರಿಯನ್ನು ನೋಡಿರಿ. ಮಕ್ಕಳಿಗೆ ಮಾನಸಿಕ ಮತ್ತು ಭಾವುಕ ಕಚಡ ಆಹಾರ ಧಾರಾಳ ದೊರೆಯುತ್ತದೆ. ಮಾಜಿ ಬ್ರಿಟಿಷ್ ವಿದ್ಯಾ ಸಚಿವ ಸರ್ ಕೀತ್ ಜೋಸೆಫ್ ಹೇಳಿದ್ದು: “ನಿಮಗೆ ಒಂದು ದೇಶವನ್ನು ನಾಶ ಮಾಡಲು ಮನಸ್ಸಿದ್ದರೆ, ನೀವು ಅದರ ಹಣ ಚಲಾವಣೆಯನ್ನು ಭ್ರಷ್ಟಗೊಳಿಸುತ್ತೀರಿ.” ಅವರು ಮುಂದುವರಿಸಿ ಹೇಳಿದ್ದು: “ಒಂದು ಸಮಾಜವನ್ನು ಹಾಳು ಮಾಡುವ ಮಾರ್ಗವು ಅದರ ಮಕ್ಕಳನ್ನು ಭ್ರಷ್ಟಗೊಳಿಸಿಯೆ.” ವೆಬ್ಸ್ಟರ್ಸ್ಗನುಸಾರ “ಭ್ರಷ್ಟ ಮಾಡು” ಎಂಬುದರ ಅರ್ಥ “ಸೌಶೀಲ್ಯಗೆಡಿಸು, ಸ್ವದರ್ತನೆಗೆಡಿಸು” ಎಂದಾಗಿದೆ. ಇದನ್ನು ಇಂದು ಅತಿಯಾಗಿ ಮಾಡಲಾಗುತ್ತದೆ. ಬಾಲಕರ ತಕ್ಸೀರಿನ ಕುರಿತು ಇಂದು ಹೆಚ್ಚು ಹೇಳಲಾಗುತ್ತದೆ; ವಯಸ್ಕರ ತಕ್ಸೀರಿನ ಕುರಿತು ಇನ್ನೂ ಹೆಚ್ಚು ಹೇಳಬೇಕು.
ಅವು ನಮ್ಮನ್ನು ಕಾಡಲು ಹಿಂದೆ ಬರುವುವು
ಫ್ಯಾಮಿಲಿ ಸರ್ವಿಸ್ ಅಮೆರಿಕ ಎಂಬ ಸಂಘದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕಿ, ಜೆನೀವ ಬಿ. ಜಾನ್ಸನ್, ಕಳೆದ ವರ್ಷ ಕೊಟ್ಟ ಒಂದು ಭಾಷಣದಲ್ಲಿ ಹೇಳಿದ್ದು: “ಕುಟುಂಬವು ತೀರಾ, ಪ್ರಾಯಶಃ ಮಾರಕವಾಗಿ ಕಾಯಿಲೆ ಬಿದದ್ದೆ.” ಇದು “ನಮ್ಮ ಅನೇಕ ಮಕ್ಕಳಿಗೆ ಘೋರವಾದ ಒಂದು ಚಿತ್ರ”ವೆಂದು ಹೇಳಿ, ಆ ಬಳಿಕ ಅಶುಭಸೂಚಕವಾಗಿ ನುಡಿದುದು: “ನಮ್ಮ ನ್ಯೂನ ಮನೆ, ನ್ಯೂನ ಆಹಾರ, ನ್ಯೂನ ಚಿಕಿತ್ಸೆ ಮತ್ತು ನ್ಯೂನ ವಿದ್ಯೆ ಇರುವ ಎಷ್ಟೋ ಮಂದಿ ಮಕ್ಕಳನ್ನು ಸಂಪತ್ತಿನ ಸಮಾಜದಲ್ಲಿ ಜಾತಿಗೆಟ್ಟವರಂತೆ ನೋಡಲು ಈ ರಾಷ್ಟ್ರಕ್ಕಿರುವ ಮನಸ್ಸು ನಮ್ಮನ್ನು ಕಾಡಲು ಹಿಂದೆ ಬರಲಿದೆ.” ಇದು ನಮ್ಮನ್ನು ಕಾಡಲು ಆಗಲೆ ಬಂದಿರುತ್ತದೆ. ನೀವದನ್ನು ವೃತ್ತಪತ್ರಿಕೆಗಳಲ್ಲಿ ಓದಬಲ್ಲಿರಿ, ವಾರ್ತಾಪ್ರಸಾರಗಳಲ್ಲಿ ಕೇಳಬಲ್ಲಿರಿ, ನಿಮ್ಮ ಟೆಲಿವಿಷನಿನಲ್ಲಿ ನೋಡಬಲ್ಲಿರಿ. ಇದಕ್ಕೆ ಚಿಕ್ಕ ನಿದರ್ಶನ ಇಲ್ಲಿದೆ:
ಜಡಾನ್ ಎಂಬವನು ಬಂದೂಕು ತೆಗೆದು ಜರ್ಮೇನಿನ ಎದೆಗೆ ಮೂರು ಗುಂಡಿಕ್ಕುತ್ತಾನೆ. ಜರ್ಮೇನ್ ಸಾಯುತ್ತಾನೆ; ಅವನಿಗೆ 15 ವರ್ಷ ವಯಸ್ಸು. ಜಡಾನ್ 14 ವರ್ಷ ವಯಸ್ಸಿನವನು. ಅವರು ಆಪ್ತ ಮಿತ್ರರಾಗಿದ್ದರು. ಅವರಿಗೆ ಒಬ್ಬ ಹುಡುಗಿಯ ವಿಷಯದಲ್ಲಿ ವಿವಾದ ಎದ್ದುಬಂತು.
ಹದಿನಾರು ವರ್ಷ ವಯಸ್ಸಿನ ಮೈಕಲ್ ಹಿಲಿಯಾರ್ಡ್ನ ಶವಸಂಸ್ಕಾರಕ್ಕೆ ಒಂದು ನೂರು ಜನ ಬಂದರು. ಒಂದು ಬಾಸ್ಕೆಟ್ ಬಾಲ್ ಆಟದಲ್ಲಿ ನಡೆದ ವಿವಾದದಿಂದ ಅವನು ನಡೆದು ಹೋದಾಗ ಅವನ ತಲೆಯ ಹಿಂಭಾಗಕ್ಕೆ ಗುಂಡು ಹೊಡೆಯಲಾಯಿತು.
ನ್ಯೂ ಯಾರ್ಕಿನ ಬ್ರೂಕ್ಲಿನ್ನಲ್ಲಿ ಮೂರು ಹದಿಪ್ರಾಯದವರು ಮನೆಯಿದ್ದಿಲ್ಲದ ಒಬ್ಬ ದಂಪತಿಗಳಿಗೆ ಬೆಂಕಿ ಹಚ್ಚಿದರು. ಉಪಯೋಗಿಸಿದ ರಬಿಂಗ್ ಆ್ಯಲ್ಕೊಹಾಲ್ ಮದ್ಯಕ್ಕೆ ಬೆಂಕಿ ಹಚ್ಚದಿದ್ದಾಗ ಅವರು ಪೆಟ್ರೋಲನ್ನು ಉಪಯೋಗಿಸಿದರು. ಅದಕ್ಕೆ ಬೆಂಕಿ ಹಚ್ಚಿತು.
ಫ್ಲಾರಿಡದಲ್ಲಿ ಐದು ವರ್ಷ ವಯಸ್ಸಿನವನೊಬ್ಬನು ಒಂದು ದಟ್ಟಡಿಯ ಮಗುವನ್ನು ಐದನೆಯ ಮಹಡಿಯ ಮೆಟ್ಟಲಗಂಡಿಯಿಂದ ಕೆಳಗೆ ದೂಡಿದ ಕಾರಣ ಆ ಮಗು ಸತ್ತಿತು.
ಟೆಕ್ಸಸಿನಲ್ಲಿ, ಹತ್ತು ವರ್ಷ ವಯಸ್ಸಿನವನೊಬ್ಬನು ಬಂದೂಕು ತೆಗೆದು ತನ್ನ ಆಟದ ಸಂಗಾತಿಗೆ ಗುಂಡಿಕ್ಕಿ ಅವನ ಶವವನ್ನು ಮನೆಯ ಕೆಳಗೆ ಅಡಗಿಸಿಟ್ಟನು.
ಅಮೆರಿಕದ ಜಾರ್ಜಿಯದಲ್ಲಿ 15 ವರ್ಷ ವಯಸ್ಸಿನ ಹುಡುಗನು, ಅವನಿಗೆ ಶಿಸ್ತು ಕೊಡಲ್ಪಡುತ್ತಿದ್ದಾಗ ಮುಖ್ಯೋಪಾಧ್ಯಾಯರನ್ನು ತಿವಿದನು.
ನ್ಯೂ ಯಾರ್ಕ್ ಸಿಟಿಯಲ್ಲಿ, ದಾಂಡು, ನಳಿಕೆ, ಕೊಡಲಿ, ಚಾಕುಗಳು, ಮತ್ತು ಕಡಿಗತ್ತಿ ಹಿಡಿದಿರುವ ಮುಂದುವರಿದಿರುವ ಹದಿಪ್ರಾಯದಿಂದ ಆದಿ 20ಗಳ ಒಂದು ಯುವತಂಡ, ಮನೆಯಿಲ್ಲದ ಪುರುಷರ ಆಶ್ರಯಾಲಯದ ಬಳಿ ಕೋಪಾವೇಶವರ್ತನೆ ತೋರಿಸಿದುದರ ಪರಿಣಾಮವಾಗಿ ಅನೇಕರಿಗೆ ಗಾಯವಾಗಿ ಒಬ್ಬನ ಮುಂಗತ್ತು ಸೀಳಲ್ಪಟ್ಟಿತು. ಪ್ರಚೋದನೆ? ತನಿಖೆ ಮಾಡುವವರೊಬ್ಬರು ವಿವರಿಸಿದ್ದು: “ಮನೆಯಿಲ್ಲದವರ ಮೇಲೆ ಆಕ್ರಮಣ ಮಾಡುವುದರಲ್ಲಿ ಅವರು ರೋಮಾಂಚಕತೆ ಪಡೆಯುತ್ತಿದ್ದರು.”
ಡಿಟ್ರೈಟ್, ಮಿಶಿಗನ್ನಲ್ಲಿ, 11 ಮತ್ತು 15 ವರ್ಷ ವಯಸ್ಸಿನ ಇಬ್ಬರು ಹುಡುಗರು ಕೂಡಿ ಎರಡು ವರ್ಷ ವಯಸ್ಸಿನ ಹುಡುಗಿಯ ಮೇಲೆ ಬಲಾತ್ಕಾರ ಸಂಭೋಗ ಮಾಡಿದರು. ಅವರು ಆ ಮಗುವನ್ನು ಒಂದು ಕಸದ ದೊಡ್ಡ ತೊಟ್ಟಿಯಲ್ಲಿ ಹಾಕಿದರೆಂದು ಆಪಾದಿಸಲಾಯಿತು.
ಕ್ಲೀವ್ಲೆಂಡ್, ಒಹಾಯೊದಲ್ಲಿ ಆರರಿಂದ ಒಂಬತ್ತು ವರ್ಷ ವಯಸ್ಸಿನ ನಾಲ್ಕು ಹುಡುಗರು ಒಂದು ಎಲಿಮೆಂಟರಿ ಶಾಲೆಯಲ್ಲಿ ಒಂಭತ್ತು ವರ್ಷ ವಯಸ್ಸಿನ ಹುಡುಗಿಯನ್ನು ಬಲಾತ್ಕಾರದಿಂದ ಕೆಡಿಸಿದರು. ಇದರ ಕುರಿತು ಮಾತಾಡುತ್ತಾ, ಬ್ರೆಂಟ್ ಲಾರ್ಕಿನ್, ಕ್ಲೀವ್ಲೆಂಡ್ ಪ್ಲೆಯ್ನ್ ಡೀಲರ್ನಲ್ಲಿ ಬರೆದುದು: “ಇದು ಈ ದೇಶದಲ್ಲಿ ನಡೆಯುತ್ತಿರುವ ಸಂಗತಿಗಳು, ಅಂದರೆ ನಮ್ಮ ಮೌಲ್ಯ ಪದ್ಧತಿಗಳು ಹೇಗೆ ನೇರವಾಗಿ ಚರಂಡಿಯ ಕಡೆ ಸಾಗುತ್ತಿವೆ ಎಂಬುದಕ್ಕೆ ಯಥೇಷ್ಟ ನಿದರ್ಶನವಾಗಿದೆ.”
ಡಾ. ಲೆಸ್ಲಿ ಫಿಶರ್, ಎಂಬ ಕ್ಲೀವ್ಲೆಂಡ್ ಸ್ಟೇಟ್ ಯೂನಿವರ್ಸಿಟಿಯ ಮನಶ್ಶಾಸ್ತ್ರ ಪ್ರೊಫೆಸರರು ಟೆಲಿವಿಷನನ್ನು ದೂರಿದರು. ಅವರು ಅದನ್ನು “ದೊಡ್ಡ ಕಾಮ ಯಂತ್ರ”ವೆಂದು ಕರೆದು “8 ಮತ್ತು 9 ವರ್ಷ ವಯಸ್ಸಿನ ಹುಡುಗರು ಇವುಗಳನ್ನು ಪ್ರೇಕ್ಷಿಸುತ್ತಿದ್ದಾರೆ” ಎಂದು ಹೇಳಿದರು. ಅಮೆರಿಕನ್ ಸಮಾಜದ ಅವನತಿಗೆ ಅವರು ಹೆತ್ತವರನ್ನು ದೂರಿದರು: “ಅಮ್ಮ, ಅಪ್ಪ ತಮ್ಮ ಸ್ವಂತ ಸಮಸ್ಯೆಗಳಲ್ಲಿ ತೀರಾ ಸಿಕ್ಕಿಕೊಂಡಿದ್ದಾರೆ; ತಮ್ಮ ಮಕ್ಕಳನ್ನು ಪಾಲಿಸಲು ಅವರು ಸಮಯವನ್ನು ತಕ್ಕೊಳ್ಳಲಾರರು.”
ಒಳಗಡೆ ಹೋಗುವುದೂ ಕಚಡ, ಉತ್ಪನ್ನವೂ ಕಚಡ
ಸಮಾಜದ ವಿವಿಧ ಅಂಶಗಳು, ವಿಶೇಷವಾಗಿ, ವಾರ್ತಾ ಮಾಧ್ಯಮ, ಮನೋರಂಜಕರು, ಮತ್ತು ಮನೋರಂಜನೆಯ ಉದ್ಯಮ—ಮಾನವರಲ್ಲಿ ಅತಿ ಕೆಟ್ಟದ್ದಕ್ಕೆ ಸಹಾಯ ಮಾಡಿ ಲಾಭ ಪಡೆಯುವವರು—ಕಾಮ, ಹಿಂಸಾಕೃತ್ಯ ಮತ್ತು ಭ್ರಷ್ಟಾಚಾರವನ್ನು ಕಕ್ಕುತ್ತಾ, ಹೀಗೆ ಎಳೆಯರ ಮತ್ತು ಕುಟುಂಬಗಳ ಕೀಳಾಗುವಿಕೆಗೆ ತುಂಬ ಸಹಾಯ ಮಾಡುತ್ತಾರೆ. ಹೀಗೆ, ಈ ನಿಯಮ ಕಾರ್ಯ ನಡೆಸಲು ಆರಂಭಿಸುತ್ತದೆ: ಕೊಳೆತವನ್ನು ಬಿತ್ತಿದರೆ ಕೊಯ್ಯುವುದೂ ಕೊಳೆತವನ್ನೆ. ಒಳಗಡೆ ಹೋಗುವುದೂ ಕಚಡ, ಉತ್ಪನ್ನವೂ ಕಚಡ. ಕೆಟ್ಟ ಪರಿಣಾಮ ಅದನ್ನು ಆರಂಭಿಸಿದವನಿಗೇ ತಲುಪುತ್ತದೆ. ಮತ್ತು ಪರಿಣಾಮ ಭಯಂಕರವೇ ಸರಿ.
ಸಮಾಜವು ಆತ್ಮಸಾಕ್ಷಿಯಿಲ್ಲದಿರುವ ಮಕ್ಕಳ ಸಂತಾನವನ್ನು ಹುಟ್ಟಿಸುತ್ತಿದೆಯೆ? ನ್ಯೂ ಯಾರ್ಕಿನ ಸೆಂಟ್ರಲ್ ಪಾರ್ಕಿನಲ್ಲಿ ನಡೆದ ಒಂದು ಕುಪ್ರಸಿದ್ಧ ಕೋಪಾವೇಶ ವರ್ತನೆಯ ಬಳಿಕ ಈ ಪ್ರಶ್ನೆ ಎದ್ದು ಬಂತು. ಅಲ್ಲಿ ಅಲೆದಾಡುತ್ತಿದ್ದ ಒಂದು ಹದಿಪ್ರಾಯದವರ ತಂಡವು 28 ವರ್ಷ ವಯಸ್ಸಿನ ಒಬ್ಬ ಮಹಿಳೆಯನ್ನು ಹೊಡೆದು, ಅವಳ ಮೇಲೆ ಬಲಾತ್ಕಾರ ಸಂಭೋಗ ನಡೆಸಿ, ಅವಳು ಸತ್ತಳೆಂದು ನೆನಸಿ ಬಿಟ್ಟು ಹೋದರು. ಅವರು “ಆತ್ಮತೃಪ್ತರೂ ಪರಿತಾಪರಹಿತರೂ” ಆಗಿದ್ದರೆಂದು ಪೊಲೀಸರು ಹೇಳಿದರು. ದಸ್ತಗಿರಿಯಾದಾಗ ಅವರು “ವಿನೋದವಾಡುತ್ತಾ, ಮಾತಾಡುತ್ತಾ, ಹಾಡುತ್ತಾ” ಇದ್ದರು. ಹಾಗೆ ಮಾಡಲು ಅವರು ಕೊಟ್ಟ ಕಾರಣಗಳು: “ಅದು ತಮಾಷೆಯಾಗಿತ್ತು.” “ನಮಗೆ ಬೇಸರ ಹಿಡಿದಿತ್ತು.” “ನಮಗೆ ಮಾಡಲು ಏನೊ ಕೆಲಸ ಸಿಕ್ಕಿದಂತಾಯಿತು.” ಟೈಮ್ ಪತ್ರಿಕೆ ಅವರನ್ನು “ಆತ್ಮಿಕ ಅಂಗಚ್ಛೇದವಾದವರು,” “ನಾವು ಯಾವುದನ್ನು ಆತ್ಮಸಾಕ್ಷಿಯೆಂದು ಕರೆಯುತ್ತೇವೊ, ಆ ಆತ್ಮಿಕ ಅನುಬಂಧವನ್ನು ಕಳೆದು ಕೊಂಡವರು, ಪ್ರಾಯಶಃ ವಿಕಸಿಸದೆ ಇದ್ದವರು” ಎಂದು ಕರೆಯಿತು.
ಯು.ಎಸ್. ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಪ್ರೋತ್ಸಾಹಿಸಿದ್ದು: “ಆತ್ಮಸಾಕ್ಷಿ ಇಲ್ಲದ ಮಕ್ಕಳ ಇನ್ನೊಂದು ಸಂತತಿಯನ್ನು ತಪ್ಪಿಸಲಿಕ್ಕಾಗಿ ಈ ರಾಷ್ಟ್ರ ಕೆಲಸ ನಡೆಸಬೇಕು.” ಡಾ. ಕೆನ್ ಮೆಗಿಡ್ ಎಂಬ ಪ್ರಮುಖ ಮನಶ್ಶಾಸ್ತ್ರಜ್ಞರು ಮತ್ತು ಕ್ಯಾರಲ್ ಮೆಕೆಲ್ವಿ ಎಂಬವರು ಇದೇ ಅಪಾಯವನ್ನು ಅವರ ಹೈ ರಿಸ್ಕ್: ಚಿಲ್ಡ್ರನ್ ವಿದೌಟ್ ಕಾನ್ಷನ್ಸ್ ಎಂಬ ಸ್ಫೋಟಕ ಪುಸ್ತಕದಲ್ಲಿ ಎತ್ತಿ ಹೇಳುತ್ತಾರೆ. ಕೇಸ್ ಹಿಸ್ಟರಿ ಮತ್ತು ಅನೇಕ ಮನಶಾಸ್ತ್ರಜ್ಞರ ಮತ್ತು ಮನೋವೈದ್ಯರ ಹೇಳಿಕೆಗಳು ಮೆಗಿಡ್ ಅವರ ತೀರ್ಮಾನಕ್ಕೆ ಧಾರಾಳ ಬೆಂಬಲವನ್ನು ನೀಡುತ್ತವೆ: ಇದಕ್ಕೆ ಮೂಲ ಕಾರಣ ಜನನದಲ್ಲಿ ಮತ್ತು ಅನುಸರಿಸಿ ಬರುವ ಬೆಳವಣಿಗೆಯ ವರ್ಷಗಳಲ್ಲಿ ಮಗು ಮತ್ತು ಹೆತ್ತವರ ಮಧ್ಯೆ ಬಲವಾದ ಬಂಧದ ಕೊರತೆಯೆ.
ನಿಶ್ಚಯವಾಗಿ, ಕುಟುಂಬಗಳು ಆ ಬೆಳವಣಿಗೆಯ ವರ್ಷಗಳಲ್ಲಿ ಹೊತ್ತು ಮೀರುವ ಮೊದಲೆ ಹತ್ತಿರ ಬರತಕ್ಕದ್ದು! (g91 9/22)