ಜಗತ್ತನ್ನು ಗಮನಿಸುವುದು
ಶೀತಲ ಯುದ್ಧ ಫಲಾಂತರ
ಶೀತಲ ಯುದ್ಧ ಮುಕ್ತಾಯದ ಬಳಿಕವೂ ಜಾಗತಿಕ ಮಿಲಿಟರಿ ವ್ಯಯವು 1990ರಲ್ಲಿ 900 ಬಿಲಿಯ ಡಾಲರುಗಳಿಗೂ ಅಧಿಕವಾಗಿದೆ. ಮತ್ತು ಇದು ವಾಷಿಂಗ್ಟನ್ ಡಿ.ಸಿ. ಯ ಒಂದು ಸಂಶೋಧನಾ ತಂಡವಾದ ವರ್ಲ್ಡ್ ಪ್ರಯಾರಿಟೀಸ್ ಎಂಬುದಕ್ಕನುಸಾರ, 1970ಗಳ ವಾರ್ಷಿಕ ಸರಾಸರಿ ಖರ್ಚಿಗಿಂತ 60ಕ್ಕೂ ಹೆಚ್ಚು ಸೇಕಡ ಅಧಿಕವಾಗಿದೆ. ವರ್ಲ್ಡ್ ಮಿಲಿಟರಿ ಆ್ಯಂಡ್ ಸೋಷಲ್ ಎಕ್ಸ್‌ಪೆಂಡಿಚರ್ಸ್ 1991 ವಾರ್ಷಿಕ ವರದಿ, ಲೋಕವ್ಯಾಪಕವಾಗಿ ಯುದ್ಧ ಮರಣಗಳಲ್ಲಿ ಅಯೋಧ ಮರಣ ಪ್ರಮಾಣವು 1980ಗಳಲ್ಲಿದ್ದ 74 ಪ್ರತಿಶತಕ್ಕಿಂತ 1990ರಲ್ಲಿ 90 ಪ್ರತಿಶತದಷ್ಟೂ ಮೇಲೇರಿತು ಎಂದೂ ಕಂಡುಹಿಡಿಯಿತು. ಈ ವರದಿಯ ಲೇಖಕಿ, ಅರ್ಥಶಾಸ್ತ್ರಜ್ಞೆ ರೂತ್ ಲಿಜೆರ್ ಸಿವಾರ್ಡ್ ಅಯೋಧ ಮರಣಗಳಲ್ಲಿ ಈ ವಿಪರೀತ ಉನ್ನತಿಗೆ ಹೆಚ್ಚುತ್ತಿರುವ ಮಾರಕ ಅಸ್ತ್ರಗಳು ಕಾರಣವೆಂದರು. “ಇಂದಿನ ಸಾಂಪ್ರದಾಯಿಕ ಅಸ್ತ್ರಗಳೆಂದು ಕರೆಯಲ್ಪಡುವವುಗಳು ಅವುಗಳ ಮಾರಕ ಶಕ್ತಿಯಲ್ಲಿ ಚಿಕ್ಕ ನ್ಯೂಕ್ಲಿಯರ್ ಅಸ್ತ್ರಗಳನ್ನು ಹೋಲುತ್ತವೆ” ಎಂದರವರು. ಈ ಅಧ್ಯಯನವು, ಭೂಮಿಯ ಅತಿ ದೊಡ್ಡ ಮಲಿನ ಮಾಡುವವರು ಲೋಕದ ಸೈನ್ಯಗಳೇ ಎಂದೂ ಕಂಡುಹಿಡಿಯಿತು; ಅಮೆರಿಕದಲ್ಲಿ ವಾರ್ಷಿಕವಾಗಿ ಅವು ಉತ್ಪಾದಿಸುವ ವಿಷವು ಐದು ಅತಿ ದೊಡ್ಡ ಕೆಮಿಕಲ್ ಕಂಪೆನಿಗಳು ಕೂಡಿ ಉತ್ಪಾದಿಸುವ ವಿಷಕ್ಕಿಂತ ಹೆಚ್ಚು. (g91 11/22)
ಗರ್ಭಪಾತದಿಂದ ಮರಣ
“ಗರ್ಭಪಾತದಿಂದಾಗಿ ನೈಜೀರಿಯದಲ್ಲಿ ಪ್ರತಿ ವರ್ಷ 10,000ದಷ್ಟು ಸ್ತ್ರೀಯರು ಸಾಯುತ್ತಾರೆ ಮತ್ತು ತೊಡಕುಗಳಿಂದಾಗಿ 2,00,000 ಹೆಂಗುಸರು ಆಸ್ಪತ್ರೆಗೆ ಸೇರಿಸಲ್ಪಡುತ್ತಾರೆ” ಎಂದು ನೈಜೀರಿಯದ ಸಂಡೇ ಕಾನ್‌ಕಾರ್ಡ್ ವರದಿ ಮಾಡಿತು. ಇದರಲ್ಲಿ ಪ್ರಾಯಶಃ 20 ಪ್ರತಿಶತದಷ್ಟೂ ಹದಿಪ್ರಾಯದವರು ಒಳಗೊಂಡಿರುತ್ತಾರೆ. ಫ್ಯಾಮಿಲಿ ಪ್ಲ್ಯಾನಿಂಗ್ ಇಂಟರ್‌ನ್ಯಾಷನಲ್ ಅಸಿಸ್ಟೆನ್ಸ್ ಸಂಘದ ಡೈರೆಕ್ಟರ್ ಡಾ. ಊಚೆ ಆಸೀಏ, “ಅನೇಕರು ತಾವೇ ಗರ್ಭಪಾತ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ” ಎಂದು ಹೇಳಿದರೆಂದು ವರದಿಸಲಾಗಿದೆ. ಲೈಂಗಿಕ ವಿಷಯಗಳ ಕುರಿತ ಅಜ್ಞಾನವೇ ಗರ್ಭಪಾತಗಳಿಗೆ ನಡೆಸುವ ಗರ್ಭಧಾರಣೆಗೆ ಹೆಚ್ಚುಮಟ್ಟಿಗಿನ ಕಾರಣವೆಂದು ಅವರು ಸೂಚಿಸಿದರು. (g91 11/22)
ಮದ್ಯಸಾರ ಮತ್ತು ಹೃದ್ರೋಗ
ಮದ್ಯ ಪಾನೀಯಗಳ ಮಿತಪಾನವು ಹೃದ್ರೋಗದ ಅಪಾಯವನ್ನು ಕಡಮೆ ಮಾಡುತ್ತದೆ ಎಂದು ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ ಎಂದು ಲ್ಯಾನ್ಸೆಟ್ ಪತ್ರಿಕೆ ವರದಿ ಮಾಡಿತು. ಮದ್ಯಸಾರವು ರಕ್ತಪ್ರವಾಹದಲ್ಲಿ ಎರಡು ವಿಧದ, ಒಳ್ಳೆಯ ಕಲೆಸ್ಟರಾಲ್ ಎಂದು ಕರೆಯಲ್ಪಡುವ ಎಚ್‌ಡಿಎಲ್ (HDL, ಹೆಚ್ಚು ಸಾಂದ್ರತೆಯ ಲಿಪೊಪ್ರೋಟೀನ್) ನ ಮೊತ್ತವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ನಂಬುತ್ತಾರೆ. ಎಚ್‌ಡಿಎಲ್ ಅಪಧಮನಿಗಳಲ್ಲಿರುವ ಕೊಬ್ಬಿನ ತಡೆಗಳನ್ನು ಸ್ವಚ್ಛಗೊಳಿಸಿ, ಹೀಗೆ ಹೃದ್ರೋಗವನ್ನು ಕಡಮೆ ಮಾಡುತ್ತದೆಂದು ತೋರುತ್ತದೆ. ಮದ್ಯಸಾರವು ರಕ್ತದಲ್ಲಿರುವ ಎಲ್‌ಡಿಎಲ್ (LDL, ಕಡಮೆ ಸಾಂದ್ರತೆಯ ಲಿಪೊಪ್ರೋಟೀನ್) ಮಟ್ಟಗಳನ್ನು ಕೆಳಗಿಳಿಸುವ ಮೂಲಕ ರಕ್ತ ಗೆಡ್ಡೆಗಳನ್ನು ತಡೆಯುವುದರಲ್ಲಿ ಸಹ ಸಹಾಯ ಮಾಡಬಹುದು. ಎಲ್‌ಡಿಎಲ್‌ನ ಉನ್ನತ ಮಟ್ಟಗಳು ಹೃದಯಾಘಾತಗಳಿಗೆ ಒಂದು ಪ್ರಧಾನ ಕಾರಣ. ಆದರೂ, ಒಬ್ಬನು ಮದ್ಯ ಪಾನೀಯಗಳನ್ನು ಸೇವಿಸುವವನಾಗಿರುವಲ್ಲಿ, ‘ತನ್ನ ಹೊಟ್ಟೆಯ ಸಲುವಾಗಿ ಸ್ವಲ್ಪ ದ್ರಾಕ್ಷಾಮದ್ಯವನ್ನು ಮಾತ್ರ’ ಸೇವಿಸುವುದು ಒಳ್ಳೆಯದು.—1 ತಿಮೊಥೆಯ 5:23. (g91 12/8)
ಟೀವೀ ದುರುಪಯೋಗದ ಚಿಕಿತ್ಸೆಗೆ ಶಿಶುವೈದ್ಯರು
“ಟೆಲಿವಿಷನ್ ವಿಷಯಗಳಲ್ಲಿ ಶಿಶುವೈದ್ಯರು ಹೆಚ್ಚು ಆಸಕ್ತಿ ವಹಿಸುವುದು ಅತ್ಯಗತ್ಯ,” ಎಂದು ಪೀಡಿಯಾಟ್ರಿಕ್ಸ್ ಪತ್ರಿಕೆ ಶಿಫಾರಸು ಮಾಡಿ ಮುಂದುವರಿಸುವುದು: “ಅವರು ಹೆತ್ತವರಿಗೆ ಟೆಲಿವಿಷನ್ ಹಿಂಸಾಕೃತ್ಯಗಳ ಮತ್ತು ಮಕ್ಕಳಿಗೆ ಅಯೋಗ್ಯವಾಗಿರುವ ಇತರ ಒಳವಿಷಯಗಳ ಹಾನಿಕರ ಪರಿಣಾಮಗಳ ಕುರಿತು ಕಲಿಸಬೇಕು.” ಕೆನಡದಲ್ಲಿ 311 ಕುಟುಂಬಗಳ ಟೆಲಿವಿಷನ್ ವೀಕ್ಷಣ ಅಭ್ಯಾಸದ ಮೇಲೆ ಮಾಡಿದ ಇತ್ತೀಚಿನ ಒಂದು ಸಮೀಕ್ಷೆಯು, ಎಲ್ಲ ಕುಟುಂಬಗಳೂ ಕಡಮೆ ಪಕ್ಷ ಒಂದು ಟೆಲಿವಿಷನಾದರೂ ಇದ್ದವರಾಗಿದ್ದರು. ಹದಿನಾರು ಪ್ರತಿಶತ ಕುಟುಂಬಗಳಲ್ಲಿ ಅದನ್ನು ಇಡೀ ದಿನ ಹಚ್ಚಿ ಇಡಲಾಗುತ್ತಿತ್ತು. “ಅನೇಕ ಮಕ್ಕಳು ತಮ್ಮ ಹೆತ್ತವರಿಂದ ಯಾವ ನಿಯಂತ್ರಣವೂ ಇಲ್ಲದೆ ಟೆಲಿವಿಷನನ್ನು ಪ್ರೇಕ್ಷಿಸಿ ಪರಿಣಾಮಕಾರಕ ಮತ್ತು ಸುಲಭಭೇದ್ಯ ವಯಸ್ಸಿನಲ್ಲಿ ಹಿಂಸಾಕೃತ್ಯಗಳನ್ನು ನೋಡುತ್ತಿದ್ದಾರೆ” ಎಂದು ಸಂಶೋಧಕರು ಗಮನಿಸಿದರು. ಟೆಲಿವಿಷನ್ ದುರುಪಯೋಗದಿಂದಾಗುವ ಹಾನಿಯ ಕುರಿತು ಹೆತ್ತವರನ್ನು ಎಚ್ಚರಿಸಬೇಕೆಂದು ಶಿಶುವೈದ್ಯರನ್ನು ಪ್ರೋತ್ಸಾಹಿಸಲಾಯಿತು. (g91 12/8)
ರಕ್ತಪೂರಣ “ಜೀವದಾನ” ಅಲ್ಲ
ರಕ್ತಪೂರಣಗಳು ನಿಜವಾಗಿಯೂ ಜೀವರಕ್ಷಕವೆ? ವೈದ್ಯಕೀಯ ಅಧಿಕಾರಿಗಳು ಹೆಚ್ಚುತ್ತಿರುವ ಸಂಖ್ಯೆಯಲ್ಲಿ ಇದನ್ನು ಸಂಶಯಿಸುತ್ತಾರೆ. ಆಸ್ಟ್ರೇಲಿಯದ ಸಿಡ್ನಿ ರಾಯಲ್ ನಾರ್ತ್ ಶೋರ್ ಹಾಸ್ಪಿಟಲಿನ ಹೀಮಟಾಲಜಿ ಡೈರೆಕ್ಟರು ಮೆಡಿಕಲ್ ಜರ್ನಲ್ ಆಫ್ ಆಸ್ಟ್ರೇಲಿಯ ಪತ್ರಿಕೆಯಲ್ಲಿ ರಕ್ತಪೂರಣ ನಿರಪಾಯತೆಯ ಕುರಿತು ಚಿಂತೆಗಳನ್ನು ಚರ್ಚಿಸುತ್ತಾರೆ. ಕ್ಯಾನ್ಸರ್, ರೋಗದ ಸೋಂಕು, ಮತ್ತು ರಕ್ತಪೂರಣಗಳ ನಡುವೆ ಸಂಬಂಧವಿದೆಯೆಂದು ಅವರ ನಂಬಿಕೆ. ಬ್ರಿಸ್ಬೆನ್ ಕೂರಿಯರ್-ಮೇಲ್ ಈ ಪ್ರಮುಖ ವೈದ್ಯರು ಹೀಗೆ ಹೇಳಿದರೆಂದು ಉಲ್ಲೇಖಿಸುತ್ತದೆ: “ಈ ಹಿಂದೆ ರಕ್ತಪೂರಣವನ್ನು ಜೀವದಾನವೆಂಬಂತೆ ನೋಡಲಾಗುತ್ತಿತ್ತು, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗಿನ ಸಾಮಾನ್ಯ ಅನುಭವವೇನಂದರೆ ರಕ್ತರಹಿತ ಶಸ್ತ್ರಚಿಕಿತ್ಸೆ ಮತ್ತು ಪೂರಣದಿಂದ ದೂರವಿರುವುದೇ ಜೀವದಾನವಾಗಬಹುದು. ಶಸ್ತ್ರಚಿಕಿತ್ಸೆಯ ಸಮಯ ರಕ್ತಪೂರಣವು ಕ್ಯಾನ್ಸರ್‌ನ ಮರುಕೊಳಿಸುವಿಕೆಗೆ ಮತ್ತು ಶಸ್ತ್ರಚಿಕಿತ್ಸೆಯ ಅನಂತರದ ರೋಗಸೋಂಕಿಗೆ ಕಾರಣವಾಗಬಹುದು ಎಂದು ಸೂಚಿಸುವ ಹೊಸ ಆಧಾರಾಂಶಗಳು ಚಿಂತೆಗೆ ಕಾರಣವಾಗಿವೆ.” (g91 11/22)
ಸರಕಾರದ ಅಯೋಗ್ಯತೆ
ಇತ್ತೀಚೆಗೆ ಪ್ರಕಟಿಸಿದ ಒಂದು ವರದಿಯಲ್ಲಿ, ಯುಎನ್ ವಿಕಾಸ ಕಾರ್ಯಕ್ರಮವು, ಬಡತನದ ವಿರುದ್ಧ ಹೋರಾಟದಲ್ಲಿ ಸರಕಾರಗಳ ಅಯೋಗ್ಯತೆಯನ್ನು ಖಂಡಿಸಿತು. ಈ ವರದಿಯನ್ನು ಉಲ್ಲೇಖಿಸುತ್ತಾ, ಫ್ರೆಂಚ್ ದೈನಿಕ ಲೆ ಮಾಂಡ್ ವಿವರಿಸುವುದೇನಂದರೆ ಕೆಲವು ವಿಕಾಸ ಹೊಂದುತ್ತಿರುವ ದೇಶಗಳಲ್ಲಿ, “ಶಸ್ತ್ರಗಳಿಗೆ ತಗಲುವ ಖರ್ಚು ಆರೋಗ್ಯ ಮತ್ತು ವಿದ್ಯಾಭ್ಯಾಸದ ಖರ್ಚಿಗಿಂತ ಕಡಮೆ ಪಕ್ಷ ಇಮ್ಮಡಿಯಾದರೂ ಆಗಿದೆ.” “ವಿಕಾಸಗೊಳ್ಳುತ್ತಿರುವ ದೇಶಗಳಲ್ಲಿ ಮಿಲಿಟರಿ ಖರ್ಚು ಉದ್ಯಮೀಕರಣ ಹೊಂದಿರುವ ದೇಶಗಳಿಗಿಂತ ಮೂರು ಪಾಲು ವೇಗವಾಗಿ ಏರಿದೆ” ಎಂದು ಅದು ಗಮನಿಸಿತು. “ಕೊಲ್ಲಿ ಯುದ್ಧದ ಹತ್ತು ದಿನಗಳಲ್ಲಿ ಖರ್ಚಾದ ಹಣವು ಮುಂದಿನ ಹತ್ತು ವರ್ಷಗಳಲ್ಲಿ ರೋಗವಿಷಕ್ಕೆ ಒಳ್ಳೆಯ ಪ್ರತಿಕ್ರಿಯೆ ತೋರಿಸುವ ರೋಗಗಳಿಗೆದುರು ಲೋಕದ ಪ್ರತಿಯೊಂದು ಮಗುವಿಗೆ ನಂಜು ಚುಚ್ಚಲು ಸಾಕಾಗುತ್ತಿತ್ತು ಎಂದು ವರದಿಯು ಹೇಳಿತು.” (g91 12/8)
ಒಂದು ತಾಸಿನ ಶ್ರಮಕ್ಕಾಗಿ
ಇತ್ತೀಚಿನ ಒಂದು ಅಧ್ಯಯನವು ಲೋಕಾದ್ಯಂತವಾಗಿ, 49 ವಿವಿಧ ಸಾಮಾಜಿಕ ಮಟ್ಟಗಳ 159 ವಿವಿಧ ಉದ್ಯೋಗಗಳಲ್ಲಿರುವ ಸಂಪಾದನೆಯ ಶಕ್ತಿಯನ್ನು ಸರಿಹೋಲಿಸಿತು, ಎಂದು ಫ್ರೆಂಚ್ ವೃತ್ತಪತ್ರಕೆ ಲೆ ಮಾಂಡ್ ವರದಿ ಮಾಡಿತು. ಅಂತಾರಾಷ್ಟ್ರೀಯ ಕಾರ್ಮಿಕ ಸಂಘವು ಮಾಡಿದ ಈ ಅಧ್ಯಯನವು ಕಾರ್ಮಿಕರ ಕೊಳ್ಳುವ ಶಕ್ತಿಯು ಒಂದು ಸ್ಥಳದಿಂದ ಇನ್ನೊಂದಕ್ಕೆ ಎಷ್ಟು ಅಸಮ ಪ್ರಮಾಣದಲ್ಲಿದೆ ಎಂದು ತೋರಿಸುತ್ತದೆ. ಉದಾಹರಣೆಗೆ, ಸುಡಾನಿನ ನೇಕಾರ, ಶ್ರೀ ಲಂಕದ ಪರಿಚಾರಕ, ಯುಗೊಸ್ಲಾವಿಯದ ನೂಲುಕಾರ, ಬಾಂಗ್ಲಾದೇಶದ ಬಸ್ ಡ್ರೈವರ್, ಮತ್ತು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ನ ರೊಟ್ಟಿಗಾರ—ಇವರು ಕೇವಲ ಒಂದು ಕಿಲೊಗ್ರಾಮ್ ಅಕ್ಕಿ ಕೊಳ್ಳಲು ಮೂರಕ್ಕೂ ಹೆಚ್ಚು ತಾಸು ಕೆಲಸ ಮಾಡಬೇಕು. ಇದಕ್ಕೆ ವ್ಯತಿರಿಕ್ತವಾಗಿ, ಫ್ರೆಂಚ್ ಪಾಲಿನೇಷ್ಯದ ಆಫೀಸ್ ಕೆಲಸಗಾರನು ಯಾ ಸ್ವೀಡನಿನ ಬಡಗಿ, ಕೇವಲ ಒಂದು ತಾಸಿನ ಕೆಲಸದ ಸಂಬಳದಿಂದ ಒಂಬತ್ತು ಕಿಲೊಗ್ರಾಮ್ ಅಕ್ಕಿಯನ್ನು ಖರೀದಿಸಬಲ್ಲನು. (g91 11/22)
ಬಡ ಆಲೂಗಡ್ಡೆಯ ಬೆಲೆ
“ಯೂರೋಪಿಯನ್ ಗೆಲ್ಲಾಳುಗಳು ಅಮೆರಿಕಕ್ಕೆ ಬಂದಾಗ, ಲೋಹ ಮತ್ತು ರತ್ನಗಳೇ ಐಶ್ವರ್ಯವೆಂದು ನೆನಸಿ ಬಂದರು. ಆಲೂಗಡ್ಡೆಯ ಬೆಲೆಯ ‘ಕಂಡುಹಿಡಿತ’ಕ್ಕೆ ಮೂರು ಶತಮಾನ ದಾಟಬೇಕಿತ್ತು.” ಹೀಗೆಂದು ಆರ್ಜೆಂಟೀನದ ಬ್ಯಾರೆಲೋಚಿಯ ರೀಜನಲ್ ಯೂನಿವರ್ಸಿಟಿ ಸೆಂಟರ್‌ನ ಎಡುವಾರ್ಡೊ ಎಚ್. ರ್ಯಾಪೊಪೋರ್ಟ್, ಬ್ರೆಸೀಲಿನ ಸೀಯೆನೋಯ ಹೋಜೆ ಪತ್ರಿಕೆಯಲ್ಲಿ ಹೇಳಿದರು. ಆಲೂಗಡ್ಡೆಗಳು ಅತಿ ಪ್ರಾಮುಖ್ಯ ಮತ್ತು ಪೋಷಕ ಆಹಾರಗಳಲ್ಲಿ ಒಂದಾಗಿದ್ದು ಅನೇಕ ಜೀವಾತುಗಳಿಂದ ತುಂಬಿವೆ. ಈ ಕಾರಣದಿಂದ, ಅವುಗಳ ಬೆಲೆ ವರ್ಷಕ್ಕೆ ಕೋಟಿಗಟ್ಟಲೆ ಡಾಲರುಗಳಾಗುತ್ತವೆ. ರ್ಯಾಪೊಪೋರ್ಟ್ ಕೂಡಿಸಿ ಹೇಳುವುದು: “ಒಂದು ವರ್ಷದಲ್ಲಿ ಲೋಕವು ಕೊಯ್ಯುವ ಆಲೂಗಡ್ಡೆಗಳ ಬೆಲೆ, ಸ್ಪೆಯ್ನ್ ದೇಶ ಅಮೆರಿಕದಿಂದ ತೆಗೆದಿರುವ ಎಲ್ಲ ಬಂಗಾರ ಮತ್ತು ಬೆಳ್ಳಿಗೂ ಎಷ್ಟೋ ಶ್ರೇಷ್ಠವಾಗಿದೆ.” (g91 11/22)
ಸಂಗೀತಕ್ಕನುಸಾರ ತಿನ್ನುವುದು
ತಿನ್ನುವ ಅಭ್ಯಾಸದ ಮೇಲೆ ಹಿನ್ನೆಲೆಯ ಸಂಗೀತ ಬೀರುವ ಪರಿಣಾಮವನ್ನು ಸಂಶೋಧಕರು ಅಧ್ಯಯನ ಮಾಡುತ್ತಿದ್ದಾರೆ. ಒಂದು ಅಧ್ಯಯನದಲ್ಲಿ, ವಿವಿಧ ರೀತಿಯ ಸಂಗೀತಗಳ್ನು ಕೇಳುವಾಗ ಊಟಮಾಡುವ ಜನರು ಎಷ್ಟು ತುತ್ತು ಆಹಾರವನ್ನು ತೆಗೆದುಕೊಂಡರೆಂದು ಲೆಕ್ಕ ಮಾಡಿದರು. ಟಫ್ಟ್ಸ್ ಯೂನಿವರ್ಸಿಟಿ ಡೈಎಟ್ ಆ್ಯಂಡ್ ನ್ಯೂಟ್ರಿಷನ್ ಲೆಟರ್ ವರದಿಸುವುದೇನಂದರೆ, ಹಿನ್ನೆಲೆಯ ಸಂಗೀತ ಬಾಜಿಸದಿದ್ದಾಗ ಭಾಗಿಗಳು “ನಿಮಿಷಕ್ಕೆ ಸರಾಸರಿ 3.9 ತುತ್ತು ತಿಂದು” ಅವರಲ್ಲಿ ಮೂರರಲ್ಲಿ ಒಂದಂಶ ಬಟ್ಟಲು ಖಾಲಿ ಮಾಡಿದ ಮೇಲೆ ಹೆಚ್ಚು ಆಹಾರಕ್ಕಾಗಿ ಕೇಳಿದರು. “ಉತ್ಸಾಹದ ಧಾಟಿಗಳು” ನುಡಿಸಲ್ಪಟ್ಟಾಗ, ಊಟ ಮಾಡುವವರು “ನಿಮಿಷಕ್ಕೆ ಸರಾಸರಿ 5.1 ತುತ್ತಿಗೆ ಧಾವಿಸಿದರು.” “ಮತ್ತೊಂದು ಕಡೆಯಲ್ಲಿ, ಶಾಂತಗೊಳಿಸುವ ಕೊಳಲು ವಾದ್ಯ ನಿಮಿಷಕ್ಕೆ 3.2 ತುತ್ತುಗಳಂತೆ ಊಟವನ್ನು ನಿಧಾನಿಸಿತು, ಮತ್ತು ತುತ್ತುಗಳು ಚಿಕ್ಕವಾದವು” ಎಂದು ವರದಿ ಕೂಡಿಸಿ ಹೇಳುತ್ತದೆ. ಈ ಕೊನೆಯ ಸಂದರ್ಭದಲ್ಲಿ, ಯಾರೂ ಎರಡನೆಯ ಸಲ ಆಹಾರವನ್ನು ಕೇಳಲಿಲ್ಲ. ವಾಸ್ತವವೇನಂದರೆ, ಅನೇಕರು, ಹೊಟ್ಟೆ ತುಂಬಿದ ಅನಿಸಿಕೆಯುಳ್ಳವರಾಗಿ, ತಮ್ಮ ಬಟ್ಟಲುಗಳಲ್ಲಿ ಆಹಾರವನ್ನು ಬಿಟ್ಟುಹೋದದ್ದಲ್ಲದೆ, ಆಹಾರ ಹೆಚ್ಚು ರುಚಿಕರವಾಗಿತ್ತೆಂದು ಹೇಳಿದರು. ಅವರಿಗೆ “ಜೀರ್ಣಸಂಬಂಧವಾದ ಕಾಯಿಲೆಗಳೂ ಕಡಮೆ” ಆಗಿದ್ದವಂತೆ. (g91 12/8)
ಅನಕ್ಷರತೆಯು ಲೋಕವ್ಯಾಪಕವಾಗಿ ಕುಸಿಯುತ್ತದೆ
“ಮೊದಲನೆಯ ಬಾರಿ ಲೋಕದಲ್ಲಿ ಅನಕ್ಷರಸ್ಥರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ತುಸು ಇಳಿದಿದೆ,” ಎನ್ನುತ್ತದೆ ದ ನ್ಯೂ ಯಾರ್ಕ್ ಟೈಮ್ಸ್. “ಯುನೆಸ್ಕೊ (UNESCO)ಸಂಘ ಹೊರಡಿಸಿದ ವರದಿ, 1990ರಲ್ಲಿ 94.8 ಕೋಟಿ ಅನಕ್ಷರಿಸ್ಥರಿದ್ದರೆಂದು ಅಂದಾಜು ಮಾಡಿತು. ಇದು 1985ರಲ್ಲಿದ್ದರೆಂದು ಅಂದಾಜಾಗಿದ್ದ 95 ಕೋಟಿಗಳಿಗಿಂತ ಕಡಮೆ.” ಲೋಕದ ಜನಸಂಖ್ಯೆಯಲ್ಲಿ ಸುಮಾರು 26.6 ಪ್ರತಿಶತ ಅನಕ್ಷರಸ್ಥರು, ಮತ್ತು ಈಗಿನ ಪ್ರವೃತ್ತಿ ಮುಂದುವರಿಯುವಲ್ಲಿ, ಇದು ಇಸವಿ 2000ದೊಳಗೆ 21.8 ಪ್ರತಿಶತಕ್ಕೆ ಯಾ 93.5 ಕೋಟಿಗಳಿಗೆ ಇಳಿಯುವುದು. ಸಹಘಟನೆಯಾಗಿ, 1990ನ್ನು ಅಂತಾರಾಷ್ಟ್ರೀಯ ಸಾಕ್ಷರತಾ ವರ್ಷವಾಗಿ ಹೆಸರಿಸಲಾಗಿತ್ತು. ಹೆಚ್ಚು ಬಡತನವಿರುವ ರಾಷ್ಟ್ರಗಳಲ್ಲಿ ಸಾಕ್ಷರತೆಯನ್ನು ಹೆಚ್ಚಿಸುವ ಹೆಚ್ಚಿನ ಇಚ್ಫೆಯಲ್ಲದೆ, ಉದ್ಯಮೀಕರಣ ಹೊಂದಿರುವ ದೇಶಗಳಲ್ಲಿ ಈಗ 10ರಿಂದ 20 ಪ್ರತಿಶತ ಇದೆಯೆಂದು ಅಂದಾಜಾಗಿರುವ ಆಚಾರಾರ್ಥಕ ಅನಕ್ಷರತೆಯ ಹೆಚ್ಚಾದ ಪ್ರಜ್ಞೆಯೂ ಇತ್ತು. (g91 11/22)