ಜೀವ—ಮಾನ್ಯ ಮಾಡಬೇಕಾದ ಒಂದು ಕೊಡುಗೆ
ಯೆಹೋವ ದೇವರು ಪ್ರಸೂತಿಯ ಸುಯೋಗವನ್ನು ಮಾನವ ಕುಟುಂಬಕ್ಕೆ ದಯಪಾಲಿಸಿದಾಗ, ಅದೆಂತಹ ಕೊಡುಗೆಯಾಗಿತ್ತು! ಪರಸ್ಪರ ಪ್ರೀತಿಯಿದ್ದ ಮತ್ತು ತಮ್ಮ ದಾಂಪತ್ಯ ಸಂಯೋಗದಿಂದ ಬಂದಿರುವ ಈ ಪುಟ್ಟ ಉತ್ಪಾದನೆಯನ್ನು ಮಾನ್ಯಮಾಡಿ, ಅದನ್ನು ಪರಾಮರಿಸಲು ಸಿದ್ಧರಾಗಿರುವ ಸಂತುಷ್ಟ ದಂಪತಿಗಳ ಕಾಯುತ್ತಿರುವ ತೋಳುಗಳಿಂದ ಅಂಗೀಕರಿಸಲ್ಪಡಲು ಒಂದು ಸುಂದರವಾದ ಶಿಶು ಬರಲಿತ್ತು. ಮಗುವಿನ ಜೀವ ವಿಕಾಸಗೊಳ್ಳುವಾಗ ಕೇವಲ ಆನಂದವೇ ಆ ಕುಟುಂಬವನ್ನು ಕಾಯಲಿತ್ತು.
ಆದರೆ ಆದಾಮ ಮತ್ತು ಹವ್ವರ ಪಾಪ ಮಾನವ ಸಂತತಿಯೊಳಗೆ ಜನಿಸಿದ ಶಿಶುಗಳಿಗೆ ದುರಂತಕರವಾದ ಪರಿಣಾಮಗಳನ್ನು ತಂದಿತು. ಪಾಪದ ಪರಿಣಾಮವಾಗಿ, ನಮ್ಮ ಪ್ರಥಮ ಮಾತೆ, ಆಕೆ ಮಕ್ಕಳನ್ನು ಹಡೆಯುವಾಗ ಸಂಕಟ ಮತ್ತು ಶಾರೀರಿಕ ವೇದನೆಗಳಿಂದ ಶಪಿಸಲ್ಪಟ್ಟಳು. ಮತ್ತು ತಮ್ಮ ಸಂತತಿಯವರು ಯಾವುದರೊಳಗೆ ಬಂದರೊ ಆ ಪಾಪಪೂರಿತ ಪರಿಸರವು ಪ್ರಸೂತಿಯನ್ನು ಒಂದು ಭೀಕರ ಪಂಥಾಹ್ವಾನವಾಗಿ ಮಾಡಿತು. ಆದುದರಿಂದ, ಇಂದಿನ ಸಂಕೀರ್ಣ ಜಗತ್ತಿನಲ್ಲಿ, ಒಂದು ಮಗುವಿನ ಗರ್ಭಧಾರಣೆ ಅನೇಕ ವೇಳೆ ಸಂತೋಷದಿಂದ ಸ್ವೀಕರಿಸಲ್ಪಡದೆ ಇರುವುದರಲ್ಲಿ ಆಶ್ಚರ್ಯವಿಲ್ಲ. ಆದರೂ, ಅಜನಿತರ ಬಗೆಗೆ ಸೃಷ್ಟಿಕರ್ತನ ವೀಕ್ಷಣವೇನು? ನೈತಿಕತೆಯ ಬದಲಾವಣೆಯಾಗಿರುವ ಏರುಬೀಳುಗಳ ಕಾರಣ ಅದು ಬದಲಾವಣೆ ಹೊಂದಿದೆಯೆ? ನಿಶ್ಚಯವಾಗಿಯೂ ಇಲ್ಲ. ಅಜಾತ ಮಕ್ಕಳ ಕುರಿತ ಆತನ ವೀಕ್ಷಣ ಮತ್ತು ಚಿಂತೆ ಅಚಲವಾಗಿ ನಿಲ್ಲುತ್ತದೆ.
ತಾಯಿಯೊಳಗೆ ಒಂದು ಅನನ್ಯ ಮಾನವ ವ್ಯಕ್ತಿ ಬೆಳೆಯುತ್ತಿದೆ ಎಂದು ಶಾಸ್ತ್ರಗ್ರಂಥ ಸ್ಪಷ್ಟಪಡಿಸುತ್ತದೆ. ಗರ್ಭಧಾರಣೆಯಲ್ಲಿ ಜೀವ ಆರಂಭವಾಗುತ್ತದೆ. ಹುಟ್ಟಿ ಲೋಕದೊಳಗೆ ಬರುವುದು, ದೇವರು ಆಗಲೇ ನೋಡಿರುವ ಮಗುವನ್ನು ಮನುಷ್ಯನಿಗೆ ಪ್ರಕಟಪಡಿಸುತ್ತದೆ, ಅಷ್ಟೆ. “ಗರ್ಭವನ್ನು ತೆರೆಯುವ ಪ್ರತಿಯೊಂದು ಮಗು”ವಿನ ಕುರಿತು ಯೆಹೆಜ್ಕೇಲನು ಮಾತಾಡುತ್ತಾನೆ. (ಯೆಹೆಜ್ಕೇಲ 20:26, NW) ಯೋಬನು “ನನ್ನ ತಾಯಿಯ ಗರ್ಭದ್ವಾರ”ವನ್ನು ವರ್ಣಿಸಿ, ಗರ್ಭಸ್ರಾವಗಳನ್ನು “ಬೆಳಕನ್ನೇ ಕಾಣದ ಕೂಸು”ಗಳೆಂದು ಕರೆಯುತ್ತಾನೆ.—ಯೋಬ 3:10, 16.
ಆ ಕೋಮಲವಾದ ಜೀವ ಗರ್ಭಕೋಶದಲ್ಲಿ ಬೆಳೆಯುತ್ತಿರುವಾಗ ಯೆಹೋವ ದೇವರ ಕೋಮಲವಾದ ಲಕ್ಷ್ಯವನ್ನು ಗಮನಿಸಿರಿ. ಆತನು ಯೆರೆಮೀಯನಿಗೆ ಹೇಳಿದ್ದು: “ನಾನು ನಿನ್ನನ್ನು ಗರ್ಭದಲ್ಲಿ ರೂಪಿಸುವದಕ್ಕೆ ಮುಂಚೆ ನಿನ್ನನ್ನು ತಿಳಿದಿದ್ದೆನು; ನೀನು ಉದರದಿಂದ ಬರುವದಕ್ಕೆ ಮೊದಲೇ ನಿನ್ನನ್ನು ಪ್ರತಿಷ್ಠಿಸಿದ್ದೆನು.” (ಯೆರೆಮೀಯ 1:5) ದಾವೀದನು ಹೇಳಿದ್ದು: “ನಾನು ಗುಪ್ತಸ್ಥಳದಲ್ಲಿ ಏರ್ಪಡುತ್ತಾ ಭೂಗರ್ಭದಲ್ಲಿ ರಚಿಸಲ್ಪಡುತ್ತಾ ಇದ್ದಾಗ ನನ್ನ ಅಸ್ಥಿಪಂಜರವು ನಿನಗೆ ಮರೆಯಾಗಿದ್ದಿಲ್ಲ.” (ಕೀರ್ತನೆ 139:15, 16) ಯೋಬನು ದೇವರನ್ನು, “ನನ್ನನ್ನು ಗರ್ಭದಲ್ಲಿ ನಿರ್ಮಿಸಿದಾತನು,” “ಹೊಟ್ಟೆಯಲ್ಲಿ ರೂಪಿಸಿ”ದವನು ಎಂದು ಕರೆಯುತ್ತಾನೆ.—ಯೋಬ 31:15.
ಆದರೆ ಮಗು ಬೇಡವಾಗಿರುವ ಎದೆಗುಂದುತ್ತಿರುವ ಬಸುರಿ ತಾಯಿಯ ವಿಷಯದಲ್ಲಿ ದೇವರ ಚಿಂತೆಯ ಕುರಿತೇನು? ಎಲ್ಲ ವ್ಯಕ್ತಿಗಳಿಗಿಂತ ಹೆಚ್ಚಾಗಿ, ಜನ್ಮದಾತೃತನದ ಗಂಭೀರ ಜವಾಬ್ದಾರಿ ಸೃಷ್ಟಿಕರ್ತನಿಗೆ ಗೊತ್ತಿದೆ. ಒಬ್ಬ ಬಸುರಿ ತಾಯಿ, ಕಷ್ಟ ಪರಿಸ್ಥಿತಿಯಲ್ಲಿ ಇರುವುದಾದರೂ, ದಿವ್ಯ ಆವಶ್ಯಕತೆಗಳಿಗೆ ಗೌರವದ ಕಾರಣದಿಂದ ತನ್ನ ಕೂಸನ್ನು ಇಟ್ಟುಕೊಳ್ಳಲು ಆಯ್ಕೆ ಮಾಡುವಲ್ಲಿ, ಆತನು ಆಕೆಯ ನಿರ್ಣಯವನ್ನು ಆಶೀರ್ವದಿಸನೆ? ಒಂದು ಸಂತುಷ್ಟ ಮಗುವನ್ನು ಬೆಳೆಸಲು ಸಹಾಯಕ್ಕಾಗಿ ಒಬ್ಬ ಜನ್ಮದಾತೃ ಸಮರ್ಪಕವಾಗಿಯೇ ಪ್ರಾರ್ಥನೆ ಮಾಡಸಾಧ್ಯವಿದೆ ಮತ್ತು ಮಾಡಬೇಕು. ತನ್ನ ವಾಕ್ಯದ ಪುಟಗಳಲ್ಲಿ, ಮಕ್ಕಳನ್ನು ಬೆಳೆಸಲು ದೊರಕುವ ಅತ್ಯುತ್ತಮ ಸಲಹೆಯನ್ನು ದೇವರು ಆಗಲೆ ಕೊಟ್ಟಿದ್ದಾನೆ. ಬೈಬಲಿನ ಮೂಲಸೂತ್ರಗಳನ್ನು ಕುಟುಂಬ ಜೀವಿತದಲ್ಲಿ ಪ್ರಯೋಗಿಸುವುದು ಆಶೀರ್ವಾದಿತ ಫಲಗಳನ್ನು ಫಲಿಸುವುದು. ದೇವಭಕ್ತಿಯ ಮಕ್ಕಳನ್ನು ಬೆಳೆಸುವ ಸಂತೋಷಗಳೂ ಪ್ರತಿಫಲಗಳೂ, ಯಾವುದೇ ನ್ಯಾಯವಾಗಿ ಹೆಮ್ಮೆಪಡುವ ಜನ್ಮದಾತೃ ಸಾಕ್ಷಿಕೊಡಸಾಧ್ಯವಿರುವಂತೆ, ಒಬ್ಬನು ಆ ದಾರಿಯಲ್ಲಿ ಮಾಡುವ ಯಾವುದೇ ತ್ಯಾಗಗಳನ್ನೂ ಮೀರಿಸುತ್ತದೆ.
ಆ ಮಗು ಬಲಾತ್ಕಾರ ಸಂಭೋಗ ಯಾ ಅಗಮ್ಯಗಮನದ ಉತ್ಪಾದನೆಯಾಗಿರುವಲ್ಲಿ ಯೆಹೋವನು ವಿಷಯಗಳನ್ನು ಪ್ರತ್ಯೇಕವಾಗಿ ವೀಕ್ಷಿಸುತ್ತಾನೊ? ತಾಯಿಯ ವಿರುದ್ಧ ಮಾಡಿದ ವರ್ತನೆಯು ಅಪರಾಧವಾದರೂ, ಅದಕ್ಕೆ ಮಗು ಹೊಣೆಯಲ್ಲ. ಅದರ ಜೀವವನ್ನು ಕೊನೆಗಾಣಿಸುವುದು, ಒಂದು ಹಿಂಸಾಕೃತ್ಯವನ್ನು ಇನ್ನೊಂದರಿಂದ ಕೇವಲ ಪ್ರತಿರೋಧಿಸುವುದಾಗಿರುವುದು. ಇಂತಹ ಬಲಿಪಶುಗಳು ಅನುಭವಿಸುವ ಭಾವಾತ್ಮಕ ಆಘಾತವನ್ನು ಯೆಹೋವನು ನಿಶ್ಚಯವಾಗಿ ಗ್ರಹಿಸುತ್ತಾನೆ, ಮತ್ತು ತಾಯಿ ಹಾಗೂ ಮಗು ಫಲಾಂತರವನ್ನು ಸಮತೆಯ ವಿಧದಲ್ಲಿ ನಿಭಾಯಿಸುವರೆ ಸಹಾಯ ಮಾಡಬಲ್ಲನು.
ಒಬ್ಬ ಗರ್ಭಿಣಿ ಸ್ತ್ರೀಗೆ ವೈದ್ಯರು, ಆಕೆಯ ಮಗುವನ್ನು ಪೂರ್ಣಾವಧಿಯ ತನಕ ಇಟ್ಟುಕೊಳ್ಳುವಲ್ಲಿ ಆಕೆಯ ಜೀವ ಅಪಾಯಕ್ಕೊಳಗಾಗಬಹುದೆಂದು ತಿಳಿಸುವಲ್ಲಿ ಏನು? ಡಾ. ಆ್ಯಲನ್ ಗಟ್ಮಾಕರ್ ಹೇಳಿದ್ದು: “ಇಂದು ಒಬ್ಬಳು ಕ್ಯಾನ್ಸರ್ ಯಾ ರಕ್ತಕ್ಷಯದಂತಹ ಮಾರಕ ರೋಗದಿಂದ ಬಳಲದಿರುವಲ್ಲಿ, ಅಧಿಕಾಂಶ ಯಾವ ರೋಗಿಯನ್ನೂ ಗರ್ಭಧಾರಣೆಯಿಂದ ಪಾರಾಗಿಸುವುದು ಸಾಧ್ಯ. ಹಾಗೆ ಬಳಲುವಲ್ಲಿ, ಗರ್ಭಪಾತ ಜೀವವನ್ನು ರಕ್ಷಿಸುವುದಂತೂ ಇರಲಿ, ಅದನ್ನು ಲಂಬಿಸುವುದೂ ಅಸಂಭವನೀಯ.” ದಿ ಎನ್ಸೈಕ್ಲೊಪೀಡಿಯ ಅಮೆರಿಕಾನ ಹೇಳುವುದು: “ಅಧಿಕಾಂಶ ಸ್ತ್ರೀಯರನ್ನು, ಗಂಭೀರವಾದ ವೈದ್ಯಕೀಯ ಸಮಸ್ಯೆಗಳಿರುವಾಗಲೂ ಗರ್ಭಧಾರಣೆಯಿಂದ ಭದ್ರವಾಗಿ ಪಾರಾಗಿಸಸಾಧ್ಯವಿರುವುದರಿಂದ, ತಾಯಿಯ ಆರೋಗ್ಯವನ್ನು ಕಾಪಾಡಲು ಕೆಲವೇ ಗರ್ಭಪಾತಗಳ ಅವಶ್ಯವಿದೆ. ಅಧಿಕಾಂಶ ಗರ್ಭಪಾತಗಳ ಮಾಡಿಸುವಿಕೆಯು ಮಗುವಾಗುವುದನ್ನು ತಪ್ಪಿಸಲಿಕ್ಕಾಗಿಯೇ.” ಆದುದರಿಂದ ಅಂತಹ ಸನ್ನಿವೇಶಗಳು ತೀರಾ ವಿರಳ. ಆದರೂ, ಹೆರಿಗೆಯ ಸಮಯದಲ್ಲಿ ಇದು ಸಂಭವಿಸುವುದಾದರೆ, ಹೆತ್ತವರು ತಾಯಿಯ ಜೀವ ಮತ್ತು ಮಗುವಿನ ಜೀವದ ಮಧ್ಯೆ ಆಯ್ಕೆಯನ್ನು ಮಾಡತಕ್ಕದ್ದು. ಇದು ಅವರ ನಿರ್ಣಯ.
ಜೀವದ ಸೃಷ್ಟಿಕರ್ತನು ನಮ್ಮ ಜನ್ಮಕೊಡುವ ಶಕ್ತಿಯನ್ನು ಉಪಯೋಗಿಸುವ ವಿಷಯದಲ್ಲಿ ಸ್ಪಷ್ಟ ಮಾರ್ಗದರ್ಶನವನ್ನು ಕೊಟ್ಟಿರುವುದರಲ್ಲಿ ಆಶ್ಚರ್ಯವಿದೆಯೆ? ಆತನ ದೃಷ್ಟಿಯಲ್ಲಿ, ಜೀವವನ್ನು ತೆಗೆಯುವುದು ಹೇಗೆ ಪಾಪವಾಗಿದೆಯೋ ಹಾಗೆಯೇ, ಪರಾಮರಿಸಲು ಉದ್ದೇಶವಿಲ್ಲದ ಜೀವವನ್ನು ಉಂಟುಮಾಡುವುದು ಪಾಪವಾಗಿದೆ.
ಈ ವಾಗ್ವಾದ ಈ ವ್ಯವಸ್ಥೆಯ ಅಂತ್ಯದ ತನಕ ಮುಂದುವರಿಯುವುದು ಖಂಡಿತ. ಆದರೆ ಜೀವದ ಸೃಷ್ಟಿಕರ್ತ ಯೆಹೋವ ದೇವರಿಗೆ ಹಾಗೂ ಆತನ ಆಜ್ಞೆಗಳನ್ನು ಮಾನ್ಯ ಮಾಡುವವರಿಗೆ, ವಾಗ್ವಾದದ ಪ್ರಶ್ನೆಯೇ ಇರುವುದಿಲ್ಲ. ಜೀವವು ಅಮೂಲ್ಯವಾಗಿದೆ—ಅದರ ಆದಿಯಿಂದಲೇ ಆರೈಕೆ ಮಾಡಿ ಮಾನ್ಯ ಮಾಡಬೇಕಾದ ಒಂದು ಕೊಡುಗೆ. (g93 5/22)
[ಪುಟ 11 ರಲ್ಲಿರುವ ಚೌಕ]
ಗರ್ಭಪಾತವನ್ನು ದೇವರ ವಿಧದಲ್ಲಿ ವೀಕ್ಷಿಸುವುದು
ವಿವಾಹಿತ ಸ್ಥಿತಿಯಿಂದ ಹೊರಗೆ ಗರ್ಭಧರಿಸಿದ ಮತ್ತು ತಾಯ್ತನಕ್ಕೆ ತೀರಾ ತಯಾರಾಗಿಲ್ಲದ ಒಬ್ಬ ಚಿಕ್ಕ ಹುಡುಗಿಯ ವಿಷಯವೇನು? ಆಕೆ ಒಂದು ಕೂಸನ್ನು ಲೋಕದೊಳಗೆ ತರುವಂತೆ ಬಿಡಲ್ಪಡಬೇಕೊ? ಅದರ ತಾಯಿ ಅವಿವೇಕದ ಮತ್ತು ಅನೈತಿಕ ರೀತಿಯಲ್ಲಿ ವರ್ತಿಸಿದ ಮಾತ್ರಕ್ಕೆ ಮಗುವಿನ ಕಡೆಗಿರುವ ದೇವರ ಅನಿಸಿಕೆಗಳು ಮಾರ್ಪಟ್ಟಿಲ್ಲ. ಮಗುವಿನ ಜನನ, ಅದರ ತಾಯಿಗೆ ತನ್ನ ಅನೈತಿಕತೆಯ ಕಾರಣ ಬರುವ ಪ್ರಾಕೃತಿಕ ಫಲಗಳನ್ನು ಆಕೆ ಗ್ರಹಿಸುವಂತೆ ಮಾಡಿ, ಹೀಗೆ ದೇವರ ನಿಯಮಗಳ ವಿವೇಕವನ್ನು ಆಕೆಗೆ ಮನದಟ್ಟು ಮಾಡಿಸಬಹುದು. ಆಕೆಯ ಕಾನೂನು ಬಾಹಿರ ಸಂಭೋಗ ಕೃತ್ಯದ ಪರಿಣಾಮಗಳನ್ನು ತೊಲಗಿಸುವುದು, ಆಕೆಯಲ್ಲಿ ಅಪರಾಧ ಪ್ರಜ್ಞೆಯ ನೋವನ್ನು ಬಿಟ್ಟು ಹೋಗಬಹುದು, ಇಲ್ಲವೆ ಅದು ಅವಳನ್ನು ಹೆಚ್ಚಿನ ಅನೈತಿಕತೆಯ ಕಾರ್ಯಗಳಿಗೆ ಹುರಿದುಂಬಿಸಬಹುದು.
ಹೊರೆಯಲ್ಲಿ ಪಾಲಿಗನಾಗಲು ತಂದೆಯಿಲ್ಲದೆ ಇರುವಲ್ಲಿ, ಮಗುವನ್ನು ಬೆಳೆಸುವುದು ಸುಲಭವಾಗಿರುವುದಿಲ್ಲ. ಆದರೆ ಸ್ವರ್ಗೀಯ ತಂದೆಯೊಂದಿಗಿರುವ ಬಲವಾದ ಒಂದು ಸಂಬಂಧವು, ಒಬ್ಬ ತಾಯಿಗೆ ಹಾಗೆ ಮಾಡಲು ನೈತಿಕ ಮತ್ತು ಭಾವಾತ್ಮಕ ಬಲವನ್ನು, ಬೆಂಬಲವನ್ನು, ಮತ್ತು ಮಾರ್ಗದರ್ಶನವನ್ನು ಕೊಡಬಲ್ಲದು. ಒಂಟಿಗ ಹೆತ್ತವರ ಹೊರೆಗಳನ್ನು ಶಮನ ಮಾಡಲಿಕ್ಕಾಗಿ ಆತನು ಕ್ರೈಸ್ತ ಸಭೆಯನ್ನೂ ಒದಗಿಸಿದ್ದಾನೆ.