ಬದುಕಿ ಉಳಿಯುವಿಕೆಗೆ ಕೀಲಿ ಕೈಗಳು
ಒಬ್ಬ ಕೊಲೆಗಾರನು ನಿಮ್ಮ ನೆರೆಹೊರೆಯಲ್ಲಿ ಸುಳಿದಾಡುತ್ತಿದ್ದಾನೆಂಬ ಒಂದು ವಾರ್ತಾ ವರದಿಯನ್ನು ನೀವು ಕೇಳುವುದಾದರೆ, ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲಿಕ್ಕಾಗಿ ಸೂಕ್ತ ಕ್ರಮಗಳನ್ನು ನೀವು ತೆಗೆದುಕೊಳ್ಳುವಿರೊ? ಅವನು ನಿಮ್ಮ ಮನೆಯೊಳಗೆ ಸುಲಭವಾಗಿ ಪ್ರವೇಶಿಸದಂತೆ ನೀವು ನಿಮ್ಮ ಬಾಗಿಲುಗಳಿಗೆ ಬೀಗ ಮತ್ತು ಅಗುಳಿಯನ್ನು ಹಾಕುವುದು ಸಂಭವನೀಯ. ಹಾಗೂ ಸಂಶಯಾಸ್ಪದವಾಗಿ ಕಾಣುವ ಅಪರಿಚಿತರಿಗಾಗಿ ನೀವು ಎದುರು ನೋಡುತ್ತಾ ಇರುತ್ತೀರಿ ಮತ್ತು ಆ ಕೂಡಲೆ ಅವರ ಇರವನ್ನು ವರದಿಸುತ್ತೀರಿ.
ಕೊಲೆಗಾರ ರೋಗವಾದ ಸ್ತನದ ಕ್ಯಾನ್ಸರಿನ ಕುರಿತು ಮಹಿಳೆಯರು ಇದಕ್ಕಿಂತಲೂ ಕಡಿಮೆಯಾದುದನ್ನು ಮಾಡಬೇಕೊ? ತಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ತಮ್ಮ ಬದುಕಿ ಉಳಿಯುವ ಅವಕಾಶಗಳನ್ನು ಅಧಿಕಗೊಳಿಸಲು ಅವರು ಯಾವ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಲ್ಲರು?
ತಡೆಗಟ್ಟುವಿಕೆ ಮತ್ತು ಆಹಾರ ಕ್ರಮ
ಅಮೆರಿಕದಲ್ಲಿ 3 ಕ್ಯಾನ್ಸರ್ಗಳಲ್ಲಿ ಒಂದು, ಆಹಾರ ಕ್ರಮದ ಪ್ರಭಾವಗಳಿಂದ ಉಂಟಾಗುತ್ತದೆಂದು ಅಂದಾಜುಮಾಡಲಾಗುತ್ತದೆ. ನಿಮ್ಮ ದೇಹದ ಸೋಂಕು ರಕ್ಷಾ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಂತೆ ಸಹಾಯಿಸುವ ಒಂದು ಉತ್ತಮ ಆಹಾರ ಕ್ರಮವು ನಿಮ್ಮ ಪ್ರಥಮ ಸರ್ವಕ್ಷೆಯ ಸಾಲಾಗಿರಬಹುದು. ಯಾವುದೇ ಜ್ಞಾತ ಆಹಾರಕ್ಕೆ ಕ್ಯಾನ್ಸರನ್ನು ಗುಣಪಡಿಸುವುದು ಅಸಾಧ್ಯವಾದರೂ, ನಿರ್ದಿಷ್ಟ ಆಹಾರಗಳನ್ನು ಸೇವಿಸುವುದು ಮತ್ತು ಇತರ ಆಹಾರಗಳ ಸೇವನೆಯನ್ನು ಕಡಿಮೆಗೊಳಿಸುವುದು ತಡೆಗಟ್ಟುವ ಸೂಕ್ತ ಕ್ರಮವಾಗಿರಸಾಧ್ಯವಿದೆ. “ಸೂಕ್ತವಾದ ಆಹಾರ ಕ್ರಮವನ್ನು ಅನುಸರಿಸುವುದು, ನೀವು ಸ್ತನದ ಕ್ಯಾನ್ಸರ್ ಪಡೆಯುವ ಗಂಡಾಂತರವನ್ನು ಸುಮಾರು ಐವತ್ತು ಪ್ರತಿಶತದಷ್ಟು ಕಡಿಮೆಗೊಳಿಸಬಲ್ಲದು,” ಎಂದು ನ್ಯೂ ಯಾರ್ಕ್ನ, ವ್ಯಾಲಲ್ಹದಲ್ಲಿರುವ ಅಮೆರಿಕನ್ ಆರೋಗ್ಯ ಸಂಸ್ಥೆಯ ಡಾ. ಲೆನರ್ಡ್ ಕೋಅನ್ ಹೇಳಿದರು.
ಏಕದಳ ಧಾನ್ಯಗಳ ರೊಟ್ಟಿಗಳು ಮತ್ತು ಏಕದಳ ಧಾನ್ಯಗಳಂತಹ ನಾರಿನಿಂದ ಸಮೃದ್ಧವಾದ ಆಹಾರಗಳು, ಪ್ರೊಲ್ಯಾಕ್ಟಿನ್ ಮತ್ತು ಎಸ್ಟ್ರಜೆನಿನ ಪ್ರಮಾಣವನ್ನು, ಒಂದು ವೇಳೆ ಈ ಚೋದಕ ಸ್ರಾವಗಳಿಗೆ ಬಂಧಕವಾಗುವ ಮತ್ತು ಅವನ್ನು ಶರೀರದಿಂದ ಹೊರತಳ್ಳುವ ಮೂಲಕ ಕಡಿಮೆಗೊಳಿಸಲು ಸಹಾಯಿಸಬಹುದು. ಪೋಷಣೆ ಮತ್ತು ಕ್ಯಾನ್ಸರ್ (ಇಂಗ್ಲಿಷ್) ಪತ್ರಿಕೆಗನುಸಾರ, “ಈ ಪರಿಣಾಮಗಳು ಕ್ಯಾನ್ಸರ್ ಜನಕದ ಪ್ರವರ್ತಕ ಸ್ಥಿತಿಯನ್ನು ನಿಗ್ರಹಿಸುವುವು.”
ಪರಿಪೂರಿತ ಕೊಬ್ಬುಗಳನ್ನು ಕಡಿಮೆ ಮಾಡುವುದು ಗಂಡಾಂತರವನ್ನು ತಗ್ಗಿಸಬಹುದು. ಸಂಪೂರ್ಣ ಹಾಲಿನಿಂದ ಕೆನೆರಹಿತ ಹಾಲಿಗೆ ತಿರುಗುವುದು, ಬೆಣ್ಣೆ ಸೇವನೆಯನ್ನು ಕಡಿಮೆ ಮಾಡುವುದು, ಕಡಿಮೆ ಕೊಬ್ಬುಳ್ಳ ಮಾಂಸಗಳನ್ನು ತಿನ್ನುವುದು, ಮತ್ತು ಕೋಳಿ ಮಾಂಸದಿಂದ ಚರ್ಮವನ್ನು ತೆಗೆಯುವುದು, ಪರಿಪೂರಿತ ಕೊಬ್ಬಿನ ಸೇವನೆಯನ್ನು ಸುರಕ್ಷಿತ ಮಟ್ಟಗಳಿಗೆ ತರಬಲ್ಲದೆಂದು ಪ್ರಿವೆನ್ಷನ್ ಪತ್ರಿಕೆಯು ಸೂಚಿಸಿತು.
ಕ್ಯಾರಟ್ಗಳು, ಕುಂಬಳ ಜಾತಿಯ ಕಾಯಿಗಳು, ಗೆಣಸುಗಳಂತಹ ಎ-ಜೀವಸ್ವತಗಳಿಂದ ಸಮೃದ್ಧವಾಗಿರುವ ತರಕಾರಿಗಳು, ಮತ್ತು ಬಸಲೆ ಹಾಗೂ ಕೋಸುಗಡ್ಡೆ, ಮತ್ತು ಸಾಸವೆ ಸೊಪ್ಪುಗಳಂತಹ ಸೊಪ್ಪುಗಳು ಬಹುಶಃ ಸಹಾಯಕವಾಗಿರಬಹುದು. ಎ-ಜೀವಸ್ವತವು ಕ್ಯಾನ್ಸರ್ ಜನಕ ಬದಲಾವಣೆಗಳ ಆಗುವಿಕೆಯನ್ನು ಪ್ರತಿಬಂಧಿಸುತ್ತದೆಂದು ಭಾವಿಸಲಾಗುತ್ತದೆ. ಮತ್ತು ಹೂಕೋಸು, ಬ್ರಸಲ್ಸ್ ಕೋಸಿನ ಮೊಗ್ಗು, ಕಾಲಿಫವ್ಲರು, ಎಲೆಕೋಸು ಮತ್ತು ಹಸಿರು ಈರುಳ್ಳಿಗಳಂತಹ ತರಕಾರಿಗಳು, ರಕ್ಷಾತ್ಮಕ ಕಿಣ್ವಗಳನ್ನು ಉಂಟುಮಾಡುವ ರಾಸಾಯನಿಕಗಳನ್ನು ಒಳಗೊಂಡಿವೆ.
ಸ್ತನದ ಕ್ಯಾನ್ಸರ್—ಪ್ರತಿಯೊಬ್ಬ ಮಹಿಳೆಯು ತಿಳಿಯಬೇಕಾದ ವಿಷಯ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಡಾ. ಪಾಲ್ ರೊಡ್ರಿಗಸ್ ಹೇಳುವುದೇನಂದರೆ, ಅಸಾಮಾನ್ಯ ಜೀವಕೋಶಗಳನ್ನು ಗುರುತಿಸುವ ಮತ್ತು ನಾಶಮಾಡುವ ಸೋಂಕು ರಕ್ಷಾ ವ್ಯವಸ್ಥೆಯನ್ನು ಸೂಕ್ತವಾದ ಆಹಾರ ಕ್ರಮದ ಮೂಲಕ ಬಲಪಡಿಸಸಾಧ್ಯವಿದೆ. ಕೊಬ್ಬುರಹಿತ ಮಾಂಸಗಳು, ಹಸಿರು ತರಕಾರಿಗಳು, ಚಿಪ್ಪು ಮೀನುಗಳಂತಹ ಕಬ್ಬಿಣ ಸತ್ವದಿಂದ ಸಮೃದ್ಧವಾಗಿರುವ ಆಹಾರಗಳನ್ನು, ಮತ್ತು ಸಿ-ಜೀವಸ್ವತಗಳು ಅಧಿಕವಿರುವ ಹಣ್ಣುಗಳು ಹಾಗೂ ತರಕಾರಿಗಳನ್ನು ತಿನ್ನುವಂತೆ ಅವರು ಸಲಹೆ ನೀಡುತ್ತಾರೆ. ಸಿ-ಜೀವಸ್ವತವು ಅಧಿಕವಿರುವ ಹಣ್ಣುಗಳು ಮತ್ತು ತರಕಾರಿಗಳು, ಸ್ತನದ ಕ್ಯಾನ್ಸರ್ನ ಗಂಡಾಂತರವನ್ನು ಕಡಿಮೆ ಮಾಡುತ್ತವೆಂದು ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಪತ್ರಿಕೆ ವರದಿಸುತ್ತದೆ. ಸೋಯಾ ಬೀನ್ಸ್ ಮತ್ತು ಹುಳಿಹಿಡಿಸದ ಸೋಯಾ ಉತ್ಪನ್ನಗಳು, ಪ್ರಯೋಗಶಾಲೆಯ ಪ್ರಯೋಗಗಳಲ್ಲಿ ಊತವನ್ನು ನಿಗ್ರಹಿಸಲು ಪ್ರಸಿದ್ಧವಾದ ಜಿನಿಸ್ಟೀನನ್ನು ಒಳಗೊಂಡಿವೆ, ಆದರೆ ಮಾನವರಲ್ಲಿ ಅದರ ಕಾರ್ಯ ಸಾಧಕತೆಯನ್ನು ಇನ್ನೂ ಸ್ಥಿರಪಡಿಸಲಿಕ್ಕಿದೆ.
ಆರಂಭದಲ್ಲಿ ಪತ್ತೆ ಹಚ್ಚುವುದು
“ಸ್ತನದ ಕ್ಯಾನ್ಸರಿನ ಆರಂಭದ ಪತ್ತೆ ಹಚ್ಚುವಿಕೆ, ಸ್ತನದ ಕ್ಯಾನ್ಸರಿನ ಪ್ರಕ್ರಿಯೆಯನ್ನು ಬದಲಾಯಿಸುವುದರಲ್ಲಿ ಅತ್ಯಂತ ಪ್ರಮುಖ ಹಂತವಾಗಿ ಉಳಿಯುತ್ತದೆ,” ಎಂದು ರೇಡಿಯೊಲಾಜಿಕ್ ಕಿನ್ಲಿಕ್ಸ್ ಆಫ್ ನಾರ್ತ್ ಅಮೆರಿಕ ಎಂಬ ಪ್ರಕಾಶನವು ಹೇಳುತ್ತದೆ. ಈ ಸಂಬಂಧದಲ್ಲಿ, ಸ್ತನಗಳ ಕ್ರಮವಾದ ಸ್ವಯಂ ಪರೀಕ್ಷೆ, ವೈದ್ಯನೊಬ್ಬನಿಂದ ವಾರ್ಷಿಕ ತಪಾಸಣೆ, ಮ್ಯಾಮೋಗ್ರಫಿ (ಎಕ್ಸ್ರೇ ಪರೀಕ್ಷೆ) ಪ್ರಾಮುಖ್ಯವಾದ ಮೂರು ಸೂಕ್ತ ಕ್ರಮಗಳಾಗಿವೆ.
ಪ್ರತಿ ತಿಂಗಳು ಸ್ತನದ ಸ್ವಯಂ ಪರೀಕ್ಷೆಯು ನಿಯಮಿತವಾಗಿ ಮಾಡಲ್ಪಡಬೇಕು, ತೋರಿಕೆಯಲ್ಲಿ ಅಥವಾ ತನ್ನ ಸ್ತನಗಳ ಸ್ಪರ್ಶದಲ್ಲಿ, ಗಟ್ಟಿಯಾಗುವಿಕೆ ಅಥವಾ ಒಂದು ಗೆಡ್ಡೆಯಂತಹ, ಸಂದೇಹಾಸ್ಪದವಾಗಿರುವ ಯಾವುದನ್ನಾದರೂ ಗಮನಿಸುವಲ್ಲಿ ಮಹಿಳೆಯೊಬ್ಬಳು ಜಾಗರೂಕತೆಯಿಂದಿರಬೇಕು. ಅವಳ ಕಂಡುಹಿಡಿಯುವಿಕೆಯು ಎಷ್ಟೇ ಸಣ್ಣದಾಗಿ ತೋರಿಬಂದರೂ, ಆ ಕೂಡಲೆ ತನ್ನ ವೈದ್ಯರನ್ನು ಅವಳು ಸಂಪರ್ಕಿಸುವುದು ಅತ್ಯಾವಶ್ಯ. ಒಂದು ಗೆಡ್ಡೆಯು ಎಷ್ಟು ಮುಂಚಿತವಾಗಿ ವರ್ಗೀಕರಿಸಲ್ಪಡುತ್ತದೋ, ತನ್ನ ಭವಿಷ್ಯದ ಮೇಲೆ ಅಷ್ಟು ಅಧಿಕ ನಿಯಂತ್ರಣವು ಅವಳಿಗಿರುತ್ತದೆ. ಸ್ಥಾನಾಂತರ ಹೊಂದದಿರುವ ಸ್ತನದ ಕ್ಯಾನ್ಸರ್, 15 ಮಿಲಿಮೀಟರ್ಗಳಷ್ಟು ಅಥವಾ ಗಾತ್ರದಲ್ಲಿ ಸಣ್ಣದಾಗಿದ್ದು, ಶಸ್ತ್ರಕಿಯೆಯಿಂದ ತೆಗೆದುಹಾಕಲ್ಪಟ್ಟಿರುವುದಾದರೆ, 12 ವರ್ಷಗಳ ಜೀವ ನಿರೀಕ್ಷಣೆ 94 ಪ್ರತಿಶತ ಸಾಧ್ಯವಿದೆಯೆಂದು ಸ್ವೀಡನಿನ ಒಂದು ವರದಿಯು ತೋರಿಸಿತು.
ಡಾ. ಪೆಟ್ರಿಶ ಕೆಲಿ ವ್ಯಾಖ್ಯಾನಿಸಿದ್ದು: “ಸ್ತನದ ಕ್ಯಾನ್ಸರ್ನ ಪುನರಾವರ್ತಕ ರೋಗ ಲಕ್ಷಣಗಳು ಹನ್ನೆರಡುವರೆ ವರ್ಷಗಳೊಳಗೆ ನಿಮ್ಮಲ್ಲಿ ಕಂಡುಬರದಿದ್ದಲ್ಲಿ, ಅದು ಹಿಂದಿರುಗುವುದು ತೀರ ಅಸಂಭವನೀಯ. . . . ಮತ್ತು ಮಹಿಳೆಯರು, ಗಾತ್ರದಲ್ಲಿ ಒಂದು ಸೆಂಟಿಮೀಟರ್ಗಿಂತಲೂ ಸಣ್ಣದಾದ ಸ್ತನದ ಕ್ಯಾನ್ಸರ್ಗಳನ್ನು ಕೇವಲ ತಮ್ಮ ಬೆರಳುಗಳನ್ನು ಉಪಯೋಗಿಸಿ ಕಂಡುಹಿಡಿಯುವಂತೆ ಕಲಿಸಲ್ಪಡಸಾಧ್ಯವಿದೆ.”
ಪ್ರಾಯೋಗಿಕ ಚಿಕಿತ್ಸಕನೊಬ್ಬನಿಂದ ಅಥವಾ ವೈದ್ಯನಿಂದ ಶಾರೀರಿಕ ತಪಾಸಣೆಯು ಪ್ರತಿವರ್ಷ ನಿಯತಕ್ರಮವಾಗಿ, ವಿಶೇಷವಾಗಿ ಮಹಿಳೆಯೊಬ್ಬಳು 40 ವರ್ಷ ಮೀರಿದ ಬಳಿಕ ಮಾಡಿಸಿಕೊಳ್ಳಬೇಕೆಂದು ಶಿಫಾರಸ್ಸು ಮಾಡಲ್ಪಡುತ್ತದೆ. ಗೆಡ್ಡೆಯೊಂದು ಪತ್ತೆ ಹಚ್ಚಲ್ಪಟ್ಟಲ್ಲಿ, ಸ್ತನದ ವಿಶೇಷಜ್ಞ ಅಥವಾ ಶಸ್ತ್ರವೈದ್ಯನೊಬ್ಬನಿಂದ ದ್ವಿತೀಯ ಅಭಿಪ್ರಾಯವನ್ನು ಪಡೆಯುವುದು ಪ್ರಯೋಜನಕರವಾಗಿರುವುದು.
ಕ್ರಮವಾದ ಮ್ಯಾಮೋಗ್ರ್ಯಾಂ ತಪಾಸಣೆಯು ಸ್ತನದ ಕ್ಯಾನ್ಸರಿನ ವಿರುದ್ಧವಾದ ಒಂದು ಒಳ್ಳೆಯ ಸಾಧನವಾಗಿದೆಯೆಂದು ಅಮೆರಿಕದ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯು ಹೇಳುತ್ತದೆ. ಎಕ್ಸ್ರೇಯ ಈ ವಿಧವು ಒಂದು ಗೆಡ್ಡೆಯನ್ನು ಬಹುಶಃ ಅದನ್ನು ಸ್ವರ್ಶಿಸಸಾಧ್ಯವಿರುವುದಕ್ಕಿಂತ ಎರಡು ವರುಷಗಳಷ್ಟು ಮೊದಲೇ ಪತ್ತೆಹಚ್ಚಬಲ್ಲದು. ನಾಲ್ವತ್ತು ವರ್ಷ ಮೀರಿದ ಮಹಿಳೆಯರಿಗೆ ಈ ಕಾರ್ಯವಿಧಾನವನ್ನು ಶಿಫಾರಸ್ಸು ಮಾಡಲಾಗಿದೆ. ಆದಾಗ್ಯೂ, ಡಾ. ಡೇನಿಯೆಲ್ ಕೋಪನ್ಸ್ ನಮಗೆ ತಿಳಿಸುವುದು: “ಮ್ಯಾಮೋಗ್ರಫಿಯು ಅನ್ಯೂನವಾಗಿರುವುದರಿಂದ ದೂರವಿದೆ.” ಸ್ತನದ ಎಲ್ಲ ಕ್ಯಾನ್ಸರ್ಗಳನ್ನು ಕಂಡುಹಿಡಿಯುವುದು ಅದಕ್ಕೆ ಅಸಾಧ್ಯ.
ನ್ಯೂ ಯಾರ್ಕ್ ರಾಜ್ಯದ ಒಂದು ಸ್ತನದ ಚಿಕಿತ್ಸಾಲಯದ ಡಾ. ವೆಂಡಿ ಲೋಗನ್-ಯಂಗ್ ಎಚ್ಚರ!ಕ್ಕೆ ಹೇಳಿದ್ದೇನಂದರೆ, ಒಬ್ಬ ಮಹಿಳೆ ಅಥವಾ ಅವಳ ವೈದ್ಯನೊಬ್ಬನು ಅಪಸಾಮಾನ್ಯತೆಯನ್ನು ಕಂಡುಹಿಡಿಯುವುದಾದರೆ, ಒಂದು ಮ್ಯಾಮೋಗ್ರ್ಯಾಂ ಅದರ ಕುರಿತು ಸುಳಿವು ನೀಡದಿದ್ದಲ್ಲಿ, ವೈದ್ಯಕೀಯ ಕಂಡುಹಿಡಿತವನ್ನು ಅಲಕ್ಷಿಸುವುದು ಮತ್ತು ಎಕ್ಸ್ರೇಯನ್ನು ನಂಬುವುದು ಒಂದು ಪ್ರವೃತ್ತಿಯಾಗಿರಬಹುದು. “ಇಂದಿನ ದಿನಗಳಲ್ಲಿ ನಾವು ಕಾಣುವ ಅತ್ಯಂತ ದೊಡ್ಡ ತಪ್ಪು ತಿಳಿವಳಿಕೆ” ಇದಾಗಿದೆಯೆಂದು ಅವರು ಹೇಳುತ್ತಾರೆ. ಕ್ಯಾನ್ಸರನ್ನು ಪತ್ತೆಹಚ್ಚಲು ಮ್ಯಾಮೋಗ್ರಫಿಯ ಸಾಮರ್ಥ್ಯದ ಕುರಿತು ನಿರ್ದಿಷ್ಟ ಪರಿಮಿತಿಯನ್ನಿಡುವಂತೆ ಮತ್ತು ಸ್ತನದ ಪರೀಕ್ಷೆಯ ಮೇಲೆ ಸಹ ಹೆಚ್ಚಾಗಿ ಆತುಕೊಳ್ಳುವಂತೆ ಅವರು ಮಹಿಳೆಯರಿಗೆ ಸಲಹೆ ನೀಡುತ್ತಾರೆ.
ಮ್ಯಾಮೋಗ್ರಫಿಗೆ ಗೆಡ್ಡೆಗಳನ್ನು ಪತ್ತೆಹಚ್ಚಲು ಸಾಧ್ಯವಿರುವುದಾದರೂ, ಅವು ಹಾನಿಕರವಲ್ಲವೊ (ಕ್ಯಾನ್ಸರ್ಕಾರಕವಲ್ಲ) ಅಥವಾ ಹಾನಿಕರವೊ (ಕ್ಯಾನ್ಸರ್ಕಾರಕ) ಎಂಬುದನ್ನು ಅದು ನಿಜವಾಗಿ ನಿರ್ಣಯಿಸುವುದಿಲ್ಲ. ಕೇವಲ ಒಂದು ಅಂಗಾಂಶ ಪರೀಕ್ಷೆ (ಬೈಆಪ್ಸಿ)ಯ ಮೂಲಕವಾಗಿ ಮಾತ್ರ ಅದನ್ನು ಮಾಡಸಾಧ್ಯವಿದೆ. ಮ್ಯಾಮೋಗ್ರಾಂ ತಪಾಸಣೆಗಾಗಿ ಹೋದ ಐರೀನಳ ನಿದರ್ಶನವನ್ನು ಪರಿಗಣಿಸಿ. ಎಕ್ಸ್ರೇ ಛಾಯಾಚಿತ್ರದ ಮೇಲಾಧಾರಿಸಿ, ಅವಳ ಸ್ತನದಲ್ಲಿದ್ದ ಗೆಡ್ಡೆಯನ್ನು ಕ್ಯಾನ್ಸರ್ರಹಿತ ಸ್ತನದ ರೋಗವೆಂದು ವೈದ್ಯರು ನಿರ್ಣಯಿಸಿದರು ಮತ್ತು ಹೇಳಿದ್ದು: “ನಿನಗೆ ಕ್ಯಾನ್ಸರ್ ಇಲ್ಲವೆಂದು ನನಗೆ ತೀರ ನಿಶ್ಚಯವಿದೆ.” ಮ್ಯಾಮೋಗ್ರ್ಯಾಂ ತಪಾಸಣೆ ಮಾಡಿದ ನರ್ಸ್ ಮನಃಕ್ಲೇಶಪಟ್ಟರೂ ಐರಿನ್ ಹೇಳಿದ್ದು: “ವೈದ್ಯರು ಭರವಸೆಯಿಂದಿರುವಾಗ, ನಾನು ವಿಪರೀತ ಭಯಪಡುತ್ತಿರಬಹುದೆಂದು ಭಾವಿಸಿದೆ.” ಅತಿಬೇಗನೆ ಗೆಡ್ಡೆಯು ದೊಡ್ಡದಾಗಿ ಬೆಳೆಯಿತು, ಆದುದರಿಂದ ಐರಿನ್ ಬೇರೊಬ್ಬ ವೈದ್ಯನನ್ನು ಸಂಪರ್ಕಿಸಿದಳು. ಬೈಆಪ್ಸಿಯನ್ನು ಮಾಡಲಾಯಿತು ಮತ್ತು ಅವಳಿಗೆ ವೇಗವಾಗಿ ವರ್ಧಿಸುವ ಕ್ಯಾನ್ಸರ್—ಇನ್ಫ್ಲ್ಯಾಮಟರಿ ಕಾರ್ಸಿನೋಮ—ಇದೆಯೆಂದು ಅದು ತೋರಿಸಿತು. ಗೆಡ್ಡೆಯೊಂದು ಕ್ಯಾನ್ಸರ್ರಹಿತವೊ ಅಥವಾ ಕ್ಯಾನ್ಸರ್ಕಾರಕವೊ (10ರಲ್ಲಿ ಸುಮಾರು 8 ಹಾಗಿರುತ್ತದೆ) ಎಂಬುದನ್ನು ನಿರ್ಧರಿಸಲು, ಬೈಆಪ್ಸಿಯನ್ನು ಮಾಡಿಸಲೇ ಬೇಕು. ಗೆಡ್ಡೆಯು ಕಂಡುಬಂದಲ್ಲಿ ಅಥವಾ ಪ್ರಾಯೋಗಿಕವಾಗಿ ಸಂದೇಹಾಸ್ಪದವೆನಿಸುವಲ್ಲಿ ಅಥವಾ ಬೆಳೆಯುತ್ತಿರುವಲ್ಲಿ ಬೈಆಪ್ಸಿಯನ್ನು ಮಾಡಿಸಬೇಕು.
ಚಿಕಿತ್ಸೆ
ಪ್ರಸ್ತುತ, ಶಸ್ತ್ರ ಚಿಕಿತ್ಸೆ, ವಿಕಿರಣ, ಮತ್ತು ರಾಸಾಯನಿಕ ಚಿಕಿತ್ಸೆಗಳು ಸ್ತನದ ಕ್ಯಾನ್ಸರಿನ ಸಾಂಪ್ರದಾಯಿಕ ಚಿಕಿತ್ಸೆಗಳಾಗಿವೆ. ಗೆಡ್ಡೆಯ ವಿಧ, ಅದರ ಗಾತ್ರ, ಅದರ ಆಕ್ರಮಕ ಗುಣ, ಅಥವಾ ಅದು ದುಗ್ಧರಸ ಗ್ರಂಥಿಗಳಿಗೆ ಹರಡಿದೆಯೊ ಇಲ್ಲವೊ ಎಂಬುದರ ಕುರಿತಾದ ಸಮಾಚಾರ, ಮತ್ತು ನಿಮ್ಮ ರಜಸ್ತಂಭನದ ಸ್ಥಿತಿ, ಇವು ನಿಮಗೆ ಮತ್ತು ನಿಮ್ಮ ವೈದ್ಯರಿಗೆ ಚಿಕಿತ್ಸೆಯ ವಿಧಾನವನ್ನು ನಿರ್ಧರಿಸಲು ಸಹಾಯಮಾಡಬಲ್ಲವು.
ಶಸ್ತ್ರ ಚಿಕಿತ್ಸೆ. ಶತಮಾನಗಳಿಂದ ಅಮೂಲಾಗ್ರ ಸ್ತನಚ್ಛೇದನೆ—ಕೆಳಗಿರುವ ಸ್ನಾಯುಗಳು ಮತ್ತು ದುಗ್ಧರಸ ಗ್ರಂಥಿಗಳೊಂದಿಗೆ ಸ್ತನದ ತೆಗೆದುಹಾಕುವಿಕೆ—ಯು ವ್ಯಾಪಕವಾಗಿ ಉಪಯೋಗಿಸಲ್ಪಡುತ್ತಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ, ಗೆಡ್ಡೆ ಮತ್ತು ದುಗ್ಧರಸ ಗ್ರಂಥಿಗಳ ತೆಗೆದುಹಾಕುವಿಕೆ, ಹಾಗೂ ವಿಕಿರಣವನ್ನೊಳಗೊಂಡಿರುವ ಸ್ತನ-ಸಂರಕ್ಷಕ ಚಿಕಿತ್ಸೆಯು ಉಪಯೋಗಿಸಲ್ಪಟ್ಟಿದ್ದು, ಅದರ ಬದುಕಿ ಉಳಿಯುವಿಕೆಯ ಪ್ರಮಾಣಗಳು ಸ್ತನಚ್ಛೇದನೆಯ ಪ್ರಮಾಣಗಳಿಗೆ ಸಮಾನವಾಗಿವೆ. ಸಣ್ಣದಾದ ಗೆಡ್ಡೆಯೊಂದನ್ನು ತೆಗೆದುಹಾಕಲು ನಿರ್ಧರಿಸುವಾಗ, ಇದು ಕಡಮೆ ರೂಪಗೆಡಿಸುವುದರಿಂದ, ಕೆಲವು ಮಹಿಳೆಯರಿಗೆ ಇದು ಹೆಚ್ಚು ಮನಶ್ಶಾಂತಿಯನ್ನು ಕೊಟ್ಟಿದೆ. ಆದರೆ ಬ್ರಿಟಿಷ್ ಜರ್ನಲ್ ಆಫ್ ಸರ್ಜರಿ ಹೇಳುವುದೇನಂದರೆ, ಒಂದೇ ಸ್ತನದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಕ್ಯಾನ್ಸರ್ ಇರುವ ಅಥವಾ ಮೂರು ಸೆಂಟಿಮೀಟರ್ಗಳಿಗಿಂತ ದೊಡ್ಡದಾದ ಗೆಡ್ಡೆಗಳಿರುವ ಎಳೆಯ ಮಹಿಳೆಯರು, ಸಂರಕ್ಷಕ ಚಿಕಿತ್ಸೆಯಿಂದ ಪುನರಾವರ್ತನವಾಗುವ ಅಧಿಕ ಅಪಾಯವನ್ನು ಹೊಂದಿದ್ದಾರೆ.
ಪುನರಾವರ್ತನರಹಿತ ಬದುಕಿ ಉಳಿಯುವಿಕೆಯಲ್ಲಿ ಒಂದು ಪ್ರಾಮುಖ್ಯವಾದ ಅಂಶವು ಕೀವ್ಲ್ಲೆಂಡ್ ಕಿನ್ಲಿಕ್ ಜರ್ನಲ್ ಆಫ್ ಮೆಡಿಸಿನ್ನಿಂದ ಗಮನಿಸಲ್ಪಟ್ಟಿತು: “ತುಸು ಮಾರ್ಪಡಿಸಲ್ಪಟ್ಟ ಸ್ತನಚ್ಛೇದನೆಯ ಬಳಿಕ . . . ರಕ್ತ ಪೂರಣವು ಬದುಕಿ ಉಳಿಯುವಿಕೆಯ ಮತ್ತು ಪುನರಾವರ್ತಕ ಪ್ರಮಾಣಗಳ ಮೇಲೆ ಪ್ರತಿಕೂಲವಾದ ಪರಿಣಾಮವನ್ನು ಬೀರುತ್ತದೆ.” ರಕ್ತ ಪೂರಣವನ್ನು ಸ್ವೀಕರಿಸಿದ ಒಂದು ಗುಂಪಿಗೆ, ಐದು ವರ್ಷಗಳ ಬದುಕಿ ಉಳಿಯುವಿಕೆಯ ಪ್ರಮಾಣವು 53 ಪ್ರತಿಶತವಾಗಿತ್ತು, ಇದಕ್ಕೆ ವೈದೃಶ್ಯವಾಗಿ ರಕ್ತ ಪೂರಣ ಪಡೆದುಕೊಳ್ಳದ ಗುಂಪಿಗೆ ಅದರ ಪ್ರಮಾಣವು 93 ಪ್ರತಿಶತವಾಗಿತ್ತೆಂದು ವರದಿಯು ತೋರಿಸಿತು.
ಬದುಕಿ ಉಳಿಯುವಿಕೆಗೆ ಇನ್ನೊಂದು ಸಹಾಯವು ದ ಲಾನ್ಸೆಟ್ನಲ್ಲಿ ವರದಿಸಲ್ಪಟ್ಟಿದೆ, ಡಾ. ಆರ್. ಎ. ಬಾಡ್ವಿ ಹೇಳಿದ್ದು: “ಋತುಚಕ್ರದ ಸ್ಥಿತಿಯ ಸಂಬಂಧದಲ್ಲಿ ಶಸ್ತ್ರಕ್ರಿಯೆಯ ಸಮಯ ಸಾಂಗತ್ಯವು, ಸ್ತನದ ಕ್ಯಾನ್ಸರ್ ಇರುವ ರಜಸ್ತಂಭನಪೂರ್ವ ರೋಗಿಗಳ ದೀರ್ಘಾವಧಿಯ ಪರಿಣಾಮದ ಮೇಲೆ ಒಂದು ದೊಡ್ಡ ಆಘಾತವನ್ನುಂಟುಮಾಡುತ್ತದೆ.” ಎಸ್ಟ್ರಜೆನಿನ ಪ್ರಚೋದನೆಯ ಹಂತದಲ್ಲಿ ಗೆಡ್ಡೆಯನ್ನು ಛೇದಿಸಿಕೊಂಡ ಮಹಿಳೆಯರು, ಋತುಚಕ್ರದ ಇತರ ಹಂತಗಳಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರಿಗಿಂತಲೂ ಹೆಚ್ಚು ಕೆಟ್ಟಸ್ಥಿತಿಗಿಳಿದರು—54 ಪ್ರತಿಶತ ಹತ್ತು ವರುಷ ಬದುಕಿ ಉಳಿದರು, ಇದಕ್ಕೆ ಪ್ರತಿಯಾಗಿ ಅನಂತರದ ಗುಂಪಿನವರು 84 ಪ್ರತಿಶತ. ಸ್ತನದ ಕ್ಯಾನ್ಸರ್ ಇರುವ ರಜಸ್ತಂಭನಪೂರ್ವ ಮಹಿಳೆಯರಿಗೆ ಶಸ್ತ್ರ ಚಿಕಿತ್ಸೆಗಾಗಿ ಅತ್ಯುತ್ತಮವಾದ ಸಮಯವು, ಕೊನೆಯ ಋತುಸ್ರಾವದ ಸಮಯದಿಂದ ಕಡಿಮೆ ಪಕ್ಷ 12 ದಿನಗಳಾದ ಬಳಿಕವೆಂದು ಹೇಳಲ್ಪಟ್ಟಿದೆ.
ವಿಕಿರಣ ಚಿಕಿತ್ಸೆ. ವಿಕಿರಣ ಚಿಕಿತ್ಸೆಯು ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲುತ್ತದೆ. ಸ್ತನ ಸಂರಕ್ಷಕ ಚಿಕಿತ್ಸೆಯಲ್ಲಿ, ಶಸ್ತ್ರ ಚಿಕಿತ್ಸಕನೊಬ್ಬನು ಸ್ತನವನ್ನು ಉಳಿಸಲು ಪ್ರಯತ್ನಿಸುವಾಗ, ಸೂಕ್ಷ್ಮವಾದ ಕ್ಯಾನ್ಸರ್ ಗೆಡ್ಡೆಗಳು ಆತನ ಕತ್ತಿಯಿಂದ ತಪ್ಪಿಸಿಕೊಳ್ಳಬಹುದು. ವಿಕಿರಣ ಚಿಕಿತ್ಸೆಯು ಅಲ್ಲೇ ಬಳಸಾಡುವ ಜೀವಕೋಶಗಳನ್ನು ನಾಶಮಾಡಬಲ್ಲದು. ಆದರೆ ವಿಕಿರಣದಿಂದ ವಿರುದ್ಧ ಪಕ್ಕದ ಸ್ತನದಲ್ಲಿ ದ್ವಿತೀಯ ಕ್ಯಾನ್ಸರ್ ಉಂಟಾಗುವ ತುಸು ಅಪಾಯವು ಬರುತ್ತದೆ. ವಿರುದ್ಧ ಸ್ತನಕ್ಕೆ ವಿಕಿರಣ ಒಡ್ಡುವಿಕೆಯನ್ನು ಕಡಿಮೆ ಮಾಡುವುದನ್ನು ಡಾ. ಬೆನೆಡಿಕ್ ಫ್ರಾಸ್ ಶಿಫಾರಸ್ಸು ಮಾಡುತ್ತಾರೆ. ಅವರು ಹೇಳಿದ್ದು: “ಮೊದಲನೆಯ ಸ್ತನವನ್ನು ವಿಕಿರಣಕ್ಕೊಳಪಡಿಸಿದಾಗ ವಿರುದ್ಧ ಸ್ತನದಿಂದ ಪಡೆದುಕೊಳ್ಳಲ್ಪಟ್ಟ ವಿಕಿರಣ ಪ್ರಮಾಣವನ್ನು ಕೆಲವೊಂದು ಸರಳವಾದ ಕಾರ್ಯವಿಧಾನಗಳ ಮೂಲಕ ಪರಿಣಾಮಕಾರಿಯಾಗಿ ಕಡಿಮೆ ಮಾಡಸಾಧ್ಯವಿದೆ.” ಎರಡೂವರೆ ಸೆಂಟಿಮೀಟರ್ಗಳಷ್ಟು ದಪ್ಪನಾದ ಸೀಸದ ಫಲಕವನ್ನು ವಿರುದ್ಧ ಸ್ತನದ ಮೇಲೆ ಅನುಗೊಳಿಸುವಂತೆ ಅವರು ಸಲಹೆ ನೀಡುತ್ತಾರೆ.
ರಾಸಾಯನಿಕ (ಕೆಮತೆರಪಿ) ಚಿಕಿತ್ಸೆ. ಶಸ್ತ್ರ ಚಿಕಿತ್ಸೆಯ ಮೂಲಕ ಸ್ತನ್ಯ ಕ್ಯಾನ್ಸರನ್ನು ನಿರ್ಮೂಲಗೊಳಿಸಲು ಪ್ರಯತ್ನಗಳು ನಡೆಸಲ್ಪಟ್ಟಾಗ್ಯೂ, ಹೊಸತಾಗಿ ರೋಗ ನಿರ್ಣಯಿಸಲ್ಪಟ್ಟ 25ರಿಂದ 30 ಪ್ರತಿಶತ ಮಹಿಳೆಯರಲ್ಲಿ, ಆರಂಭದಲ್ಲಿ ರೋಗಲಕ್ಷಣಗಳನ್ನು ಉತ್ಪತ್ತಿ ಮಾಡಲು ತೀರ ಸಣ್ಣದಾಗಿರುವ ಗುಹ್ಯ ಸ್ಥಾನಾಂತರ ಹೊಂದುವಿಕೆಗಳು ಇರುತ್ತವೆ. ದೇಹದ ಇತರ ಭಾಗಗಳನ್ನು ಅತಿಕ್ರಮಿಸುವ ಆ ಜೀವಕೋಶಗಳನ್ನು ಕೊಲ್ಲಲು ಪ್ರಯತ್ನಿಸುವಾಗ ರಾಸಾಯನಿಕ ಕಾರಕಗಳನ್ನು ಉಪಯೋಗಿಸುವ ಚಿಕಿತ್ಸೆಯು ರಾಸಾಯನಿಕ ಚಿಕಿತ್ಸೆಯಾಗಿದೆ.
ಪ್ರತಿಯೊಂದು ಜೀವಕೋಶವು ಔಷಧಗಳಿಗೆ ತಮ್ಮ ಸ್ವಂತ ಪ್ರತಿಕ್ರಿಯೆಯನ್ನು ತೋರಿಸುವ, ವಿವಿಧ ವಿಧಗಳ ಜೀವಕೋಶಗಳಿಂದ ಕ್ಯಾನ್ಸರ್ಕಾರಕ ಗೆಡ್ಡೆಗಳು ಮಾಡಲ್ಪಟ್ಟಿರುವುದರಿಂದ ರಾಸಾಯನಿಕ ಚಿಕಿತ್ಸೆಯು ಅದರ ಪರಿಣಾಮಕಾರಿತ್ವದಲ್ಲಿ ಪರಿಮಿತವಾಗಿದೆ. ಚಿಕಿತ್ಸೆಯನ್ನು ಪಾರಾದ ಆ ಜೀವಕೋಶಗಳು, ಔಷಧ ನಿರೋಧಕ ಗೆಡ್ಡೆಗಳ ಒಂದು ಹೊಸ ಸಂತತಿಯನ್ನು ಉತ್ಪತ್ತಿ ಮಾಡಬಹುದು. ಆದರೆ ರಾಸಾಯನಿಕ ಚಿಕಿತ್ಸೆಯು, ಮಹಿಳೆಯೊಬ್ಬಳ ವಯಸ್ಸಿನ ಮೇಲೆ ಅವಲಂಬಿಸಿ, ಅವಳ ಬದುಕಿ ಉಳಿಯುವಿಕೆಯ—ಒಂದು ದಶಕದಷ್ಟು ಹೆಚ್ಚು—ಅವಕಾಶವನ್ನು 5ರಿಂದ 10 ಪ್ರತಿಶತದಷ್ಟು ಅಧಿಕಗೊಳಿಸಿತೆಂದು ಜನವರಿ 1992ರ ದ ಲಾನ್ಸೆಟ್ ಸಂಚಿಕೆಯು ಸಾಕ್ಷ್ಯವನ್ನು ನೀಡಿತು.
ರಾಸಾಯನಿಕ ಚಿಕಿತ್ಸೆಯ ಅಡ್ಡ ತೊಡಕುಗಳಲ್ಲಿ ಪಿತ್ತೋದ್ರೇಕ, ಓಕರಿಕೆ, ಕೂದಲು ಉದುರುವಿಕೆ, ರಕ್ತಸ್ರಾವ, ಹೃದಯ ಹಾನಿ, ಸೋಂಕು ರಕ್ಷೆಯ ನಿಗ್ರಹ, ಬಂಜೆತನ, ಮತ್ತು ಲೂಕೀಮಿಯ ಒಳಗೊಳ್ಳಬಹುದು. ಸೈಎಂಟಿಫಿಕ್ ಅಮೆರಿಕನ್ನಲ್ಲಿ ಬರೆಯುತ್ತಾ, ಜಾನ್ ಕಯರ್ನ್ಸ್ ವ್ಯಾಖ್ಯಾನಿಸಿದ್ದು: “ಪ್ರಗತಿಪರವಾದ ಮತ್ತು ತೀವ್ರಗತಿಯಲ್ಲಿ ಬೆಳೆಯುತ್ತಿರುವ ಕ್ಯಾನ್ಸರ್ ಇರುವ ರೋಗಿಯೊಬ್ಬಳಿಗೆ ಇವು ಸಂಬಂಧ ಸೂಚಕವಾಗಿ ಅಪ್ರಧಾನ ಅಪಾಯಗಳಾಗಿ ಕಂಡುಬರಬಹುದಾದರೂ, ಒಂದು ಚಿಕ್ಕ ಒಂದು ಸೆಂಟಿಮೀಟರಿನ, ಸ್ತನದಲ್ಲಿಯೇ ಇದೆಯೆಂದು ತೋರುವ ಸ್ತನದ ಕ್ಯಾನ್ಸರಿರುವ ಮಹಿಳೆಗೆ ಅವು ಗುರುತರವಾದ ಯೋಚನೆಯನ್ನು ತರಬಲ್ಲವು. ಶಸ್ತ್ರ ಚಿಕಿತ್ಸೆಯ ಬಳಿಕ ಆಕೆ ಯಾವ ಹೆಚ್ಚಿನ ಚಿಕಿತ್ಸೆಯನ್ನು ತೆಗೆದುಕೊಳ್ಳದಿದ್ದರೂ, ತನ್ನ ಕ್ಯಾನ್ಸರಿನಿಂದಾಗಿ ಆಕೆ ಐದು ವರ್ಷಗಳೊಳಗೆ ಸಾಯುವ ಸಂದರ್ಭವು ಸುಮಾರು 10 ಪ್ರತಿಶತ ಮಾತ್ರ ಆಗಿರುವುದು.”
ಹಾರ್ಮೋನ್ ಚಿಕಿತ್ಸೆ: ಎಸ್ಟ್ರಜೆನ್ ವಿರುದ್ಧ ಚಿಕಿತ್ಸೆಯು ಎಸ್ಟ್ರಜೆನಿನ ವರ್ಧನವನ್ನು ಉದ್ರೇಕಿಸುವ ಪರಿಣಾಮಗಳನ್ನು ನಾಶಮಾಡುತ್ತದೆ. ರಜಸ್ತಂಭನಪೂರ್ವ ಮಹಿಳೆಯರಲ್ಲಿ ಎಸ್ಟ್ರಜೆನ್ ಮಟ್ಟಗಳನ್ನು, ಒಂದೇ ಅಂಡಾಶಯಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆಯುವುದರಿಂದ, ಇಲ್ಲವೆ ಟೆಮ್ಯಾಕ್ಸಿಫೆನ್ನಂತಹ ಔಷಧಗಳ ಮೂಲಕ ಕಡಮೆ ಮಾಡುವುದರಿಂದ ಸಾಧಿಸಲಾಗುತ್ತದೆ. ಈ ಮೇಲಿನ ವಿಧಾನಗಳಲ್ಲಿ ಚಿಕಿತ್ಸೆಗೊಳಗಾದ ಪ್ರತಿ 100 ಸ್ತ್ರೀಯರಲ್ಲಿ 8ರಿಂದ 12 ಸ್ತ್ರೀಯರಿಗೆ ಹತ್ತು ವರ್ಷಗಳ ಬದುಕಿ ಉಳಿಯುವ ಪ್ರಮಾಣವನ್ನು ದ ಲ್ಯಾನ್ಸೆಟ್ ವರದಿ ಮಾಡಿತು.
ಸ್ತನ್ಯ ಕ್ಯಾನ್ಸರಿರುವ ಯಾವಳೇ ಮಹಿಳೆಗೆ ಹಿಂಬಾಲಿಸಿ ಬರುವ ಪರಾಮರಿಕೆ ಜೀವಾವಧಿಯ ಪ್ರಯತ್ನವಾಗಿದೆ. ಒತ್ತಾದ ನಿಗಾವಣೆಯನ್ನಿಟ್ಟುಕೊಳ್ಳುವುದು ಅವಶ್ಯ, ಏಕೆಂದರೆ ಒಂದು ಚಿಕಿತ್ಸಾ ಪದ್ಧತಿ ವಿಫಲಗೊಳ್ಳುವಲ್ಲಿ, ಇತರ ಚಿಕಿತ್ಸಾ ವಿಧಾನಗಳು ಬೇಕಾಗಿರುವ ಶಸ್ತ್ರವನ್ನು ಒದಗಿಸಾವು.
ಒಂದು ಭಿನ್ನವಾದ ಹಾದಿಯನ್ನು ತೆಗೆದುಕೊಳ್ಳುವ ಇನ್ನೊಂದು ವಿಧದ ಕ್ಯಾನ್ಸರ್ ಚಿಕಿತ್ಸೆಯು ಕಕೆಕ್ಸೀಯ ಎಂದು ಕರೆಯಲ್ಪಡುವ ರೋಗಲಕ್ಷಣವನ್ನು ಒಳಗೊಂಡಿದೆ. ಕ್ಯಾನ್ಸರ್ ರಿಸರ್ಚ್ ಪತ್ರಿಕೆ ಹೇಳುವುದೇನಂದರೆ, ಎಲ್ಲ ಕ್ಯಾನ್ಸರ್ ಮರಣಗಳಲ್ಲಿ ಮೂರರಲ್ಲಿ ಎರಡಂಶವನ್ನು ಕಕೆಕ್ಸೀಯ ಆಗಿಸುತ್ತದೆ. ಈ ಪದವನ್ನು ಸ್ನಾಯು ಮತ್ತು ಇತರ ಅಂಗಾಂಶಗಳ ನಶಿಸಿಹೋಗುವಿಕೆಯನ್ನು ವರ್ಣಿಸಲು ಉಪಯೋಗಿಸಲಾಗುತ್ತದೆ. ಅಮೆರಿಕದ ಸಿರಕ್ಯೂಸ್ ಕ್ಯಾನ್ಸರ್ ರಿಸರ್ಚ್ ಸಂಘದ ಡಾ. ಜೋಸೆಫ್ ಗೋಲ್ಡ್, ಎಚ್ಚರ!ಕ್ಕೆ ಹೇಳುವುದು: “ಗೆಡ್ಡೆಯ ಬೆಳವಣಿಗೆಯು ಶರೀರವನ್ನು, ಕಕೆಕ್ಸೀಯಕ್ಕಿರುವ ಜೀವರಾಸಾಯನಿಕ ಹಾದಿಗಳು ತೆರೆಯದ ಹೊರತು ವ್ಯಾಪಿಸಸಾಧ್ಯವಿಲ್ಲ.” ವಿಷರಹಿತವಾದ ಹೈಡ್ರಜೀನ್ ಸಲ್ಫೇಟ್ ಔಷಧವನ್ನು ಉಪಯೋಗಿಸಿ ಮಾಡಿದ ಒಂದು ಚಿಕಿತ್ಸಾ ಅಧ್ಯಯನವು, ಈ ಹಾದಿಗಳಲ್ಲಿ ಕೆಲವನ್ನು ಮುಚ್ಚಿ ಬಿಡುವುದು ಸಾಧ್ಯವೆಂದು ತೋರಿಸಿತು. ಈ ಅಧ್ಯಯನದಲ್ಲಿ ಒಳಗೊಂಡಿದ್ದ ಕೊನೆಯ ಹಂತದ ಸ್ತನ್ಯ ಕ್ಯಾನ್ಸರಿನ 50 ಪ್ರತಿಶತ ರೋಗಿಗಳಲ್ಲಿ ಸ್ಥಿರೀಕರಣವು ಸಾಧಿಸಲ್ಪಟ್ಟಿತು.
ಸ್ತನದ ಕ್ಯಾನ್ಸರಿಗೆ ಶಸ್ತ್ರ ಚಿಕಿತ್ಸೆರಹಿತ ಅಥವಾ ವಿಷರಹಿತ ಚಿಕಿತ್ಸೆಯನ್ನು ಒದಗಿಸಲು ಅಸಾಂಪ್ರದಾಯಿಕ ಚಿಕಿತ್ಸೆಯೆಂದು ಜ್ಞಾತವಾಗಿರುವ ಅನ್ಯ ಮಾರ್ಗಗಳನ್ನು ಕೆಲವು ಮಹಿಳೆಯರು ಎದುರು ನೋಡಿದ್ದಾರೆ. ಚಿಕಿತ್ಸೆಗಳು ವೈವಿಧ್ಯಮಯ. ಹಾಕ್ಸಿ ಚಿಕಿತ್ಸೆಯಲ್ಲಿರುವಂತೆ, ಕೆಲವು ಚಿಕಿತ್ಸೆಗಳು ಪಥ್ಯ ಮತ್ತು ಗಿಡ ಮೂಲಿಕೆಯನ್ನು ಬಳಸುತ್ತವೆ. ಆದರೆ ಈ ಚಿಕಿತ್ಸೆಗಳ ಕಾರ್ಯಸಾಧಕತೆಯನ್ನು ಒಬ್ಬನು ನಿರ್ಣಯಿಸಶಕ್ತನಾಗುವಂತೆ ಮಾಡಲಿಕ್ಕಾಗಿ ಪ್ರಕಟಿಸಲ್ಪಟ್ಟಿರುವ ಅಧ್ಯಯನಗಳು ವಿರಳ.
ಈ ಲೇಖನವು ಬದುಕಿ ಉಳಿಯಲಿಕ್ಕಾಗಿರುವ ಕೀಲಿ ಕೈಗಳನ್ನು ಸಾದರಪಡಿಸುವಂತೆ ರೂಪಿಸಲ್ಪಟ್ಟಿದೆಯಾದರೂ, ಯಾವ ಚಿಕಿತ್ಸೆಯನ್ನೂ ಅನುಮೋದಿಸುವುದು ಎಚ್ಚರ!ದ ಕಾರ್ಯನೀತಿಯಲ್ಲ. ನಾವು ಎಲ್ಲರನ್ನೂ, ಅವರು ಈ ರೋಗದ ಚಿಕಿತ್ಸೆಗಾಗಿ ಈ ವಿಭಿನ್ನ ಹಾದಿಗಳನ್ನು ಸೂಕ್ಷ್ಮ ವಿವೇಚನೆಯಿಂದ ನೋಡಬೇಕೆಂದು ಪ್ರೋತ್ಸಾಹಿಸುತ್ತೇವೆ.—ಜ್ಞಾನೋಕ್ತಿ 14:15.
ಒತ್ತಡ ಮತ್ತು ಸ್ತನದ ಕ್ಯಾನ್ಸರ್
ಆಕ್ಟ ನ್ಯುರಾಲಾಜಿಕ ಪತ್ರಿಕೆಯಲ್ಲಿ ಡಾ. ಎಚ್. ಬಾಲ್ಟ್ರುಷ್ ವಿವರಿಸುವುದೇನಂದರೆ, ಅತಿರೇಕ ಅಥವಾ ದೀರ್ಘಕಾಲದ ಒತ್ತಡವು, ರೋಗರಕ್ಷಾ ವ್ಯವಸ್ಥೆಯಲ್ಲಿ ದೇಹದ ಊತವಿರೋಧಕ ರಕ್ಷಾ ಸಾಮರ್ಥ್ಯವನ್ನು ಕಡಮೆ ಮಾಡಬಹುದು. ದಣಿದಿರುವ, ಖಿನ್ನತೆಯನ್ನು ಅನುಭವಿಸುವ, ಅಥವಾ ಭಾವಾತ್ಮಕ ಬೆಂಬಲದ ಕೊರತೆಯಿರುವ ಮಹಿಳೆಯರು ತಮ್ಮ ರೋಗರಕ್ಷಾ ವ್ಯವಸ್ಥೆಯನ್ನು 50 ಪ್ರತಿಶತದಷ್ಟೂ ಅಪಾಯಕ್ಕೊಳಪಡಿಸಬಹುದು.
ಹೀಗೆ, ಡಾ. ಬಾಜಿಲ್ ಸ್ಟಾಲ್, ಮನಸ್ಸು ಮತ್ತು ಕ್ಯಾನ್ಸರಿನ ಮುನ್ನರಿವು (ಇಂಗ್ಲಿಷ್) ಎಂಬುದರಲ್ಲಿ ಬರೆಯುವಾಗ ಒತ್ತಿ ಹೇಳಿದ್ದು: “ತಮ್ಮ ರೋಗ ಚಿಕಿತ್ಸೆಯ ಸಮಯದಲ್ಲಿ ಮತ್ತು ಆ ಬಳಿಕ ಕ್ಯಾನ್ಸರ್ ರೋಗಿಗಳಿಗಾಗುವ ಅನಿವಾರ್ಯವಾದ ಶಾರೀರಿಕ ಹಾಗೂ ಮಾನಸಿಕ ಪೆಟ್ಟನ್ನು ಕಡಮೆ ಮಾಡಲು ಪ್ರತಿಯೊಂದು ಪ್ರಯತ್ನವನ್ನೂ ಮಾಡಬೇಕು.” ಆದರೆ ಯಾವ ರೀತಿಯ ಬೆಂಬಲ ಅವಶ್ಯ?
[ಪುಟ 7 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಯಾವುದೇ ಜ್ಞಾತ ಆಹಾರಕ್ಕೆ ಕ್ಯಾನ್ಸರನ್ನು ಗುಣಪಡಿಸುವುದು ಅಸಾಧ್ಯವಾದರೂ, ನಿರ್ದಿಷ್ಟ ಆಹಾರಗಳನ್ನು ಸೇವಿಸುವುದು ಮತ್ತು ಇತರ ಆಹಾರಗಳ ಸೇವನೆಯನ್ನು ಕಡಿಮೆಗೊಳಿಸುವುದು, ತಡೆಗಟ್ಟುವ ಸೂಕ್ತ ಕ್ರಮವಾಗಿರಸಾಧ್ಯವಿದೆ. “ಸೂಕ್ತವಾದ ಆಹಾರಕ್ರಮವನ್ನು ಅನುಸರಿಸುವುದು ನಿಮ್ಮ ಕ್ಯಾನ್ಸರ್ ಗಂಡಾಂತರವನ್ನು ಐವತ್ತು ಪ್ರತಿಶತದಷ್ಟು ಕಡಿಮೆಗೊಳಿಸಬಲ್ಲದು,” ಎಂದರು ಡಾ. ಲೆನರ್ಡ್ ಕೋಅನ್
[ಪುಟ 8 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಸ್ತನದ ಕ್ಯಾನ್ಸರಿನ ಆರಂಭದ ಪತ್ತೆ ಹಚ್ಚುವಿಕೆ, ಸ್ತನದ ಕ್ಯಾನ್ಸರಿನ ಪ್ರಕ್ರಿಯೆಯನ್ನು ಬದಲಾಯಿಸುವುದರಲ್ಲಿ ಅತ್ಯಂತ ಪ್ರಮುಖ ಹಂತವಾಗಿ ಉಳಿಯುತ್ತದೆ,” ಎಂದು “ರೇಡಿಯೊಲಾಜಿಕ್ ಕಿನ್ಲಿಕ್ಸ್ ಆಫ್ ನಾರ್ತ್ ಅಮೆರಿಕ” ಎಂಬ ಪ್ರಕಾಶನವು ಹೇಳುತ್ತದೆ. ಈ ಸಂಬಂಧದಲ್ಲಿ, ಸ್ತನಗಳ ಕ್ರಮವಾದ ಸ್ವಯಂ ಪರೀಕ್ಷೆ, ವೈದ್ಯನೊಬ್ಬನಿಂದ ವಾರ್ಷಿಕ ತಪಾಸಣೆ, ಮತ್ತು ಮ್ಯಾಮೋಗ್ರಫಿ, ಪ್ರಾಮುಖ್ಯವಾದ ಮೂರು ಸೂಕ್ತ ಕ್ರಮಗಳಾಗಿವೆ
[ಪುಟ 10 ರಲ್ಲಿರುವ ಸಂಕ್ಷಿಪ್ತ ವಿವರಣೆ]
ದಣಿದಿರುವ, ಖಿನ್ನತೆಯನ್ನು ಅನುಭವಿಸುವ, ಅಥವಾ ಭಾವಾತ್ಮಕ ಬೆಂಬಲದ ಕೊರತೆಯಿರುವ ಮಹಿಳೆಯರು ತಮ್ಮ ರೋಗರಕ್ಷಾ ವ್ಯವಸ್ಥೆಯನ್ನು ಅಪಾಯಕ್ಕೊ ಳಪಡಿಸಬಹುದು
[ಪುಟ 9 ರಲ್ಲಿರುವ ಚೌಕ]
ಸ್ವಯಂ ಪರೀಕ್ಷೆ—ಒಂದು ಮಾಸಿಕ ತಪಾಸಣೆ
ಸ್ತನದ ಸ್ವಯಂ ಪರೀಕ್ಷೆಯನ್ನು ಋತುಸ್ರಾವದ ಸಮಯ ಮುಗಿದು ನಾಲ್ಕರಿಂದ ಏಳು ದಿನಗಳ ಬಳಿಕ ಮಾಡಬೇಕು. ಋತುಸ್ರಾವ ನಿಂತ ಮಹಿಳೆಯರು ಸಹ ಪ್ರತಿ ತಿಂಗಳಲ್ಲಿ ಅದೇ ದಿನ ಪರೀಕ್ಷಿಸುವುದು ಅವಶ್ಯ.
ಪ್ರತಿ ತಿಂಗಳಲ್ಲಿ ಅದೇ ದಿನ ನೋಡಬೇಕಾದ ಸೂಚನೆಗಳು
• ಸ್ತನದಲ್ಲಿ ಯಾವುದೇ ಗಾತ್ರದ (ಚಿಕ್ಕದು ಯಾ ದೊಡ್ಡದು) ಗಂತಿ ಅಥವಾ ಗಟ್ಟಿಯಾಗುವಿಕೆ.
• ಸ್ತನದ ಚರ್ಮದಲ್ಲಿ ಸುಕ್ಕು ಬೀಳುವಿಕೆ, ಕುಳಿ ಬೀಳುವಿಕೆ, ಯಾ ಬಣ್ಣಗೆಡುವಿಕೆ.
• ಸ್ತನದ ತೊಟ್ಟು ಹಿಂದೆ ಹೋಗಿರುವುದು ಅಥವಾ ತಿರುಗಿರುವುದು.
• ತೊಟ್ಟಿನಲ್ಲಿ ಗುಳ್ಳೆಗಳು ಅಥವಾ ಪೊರೆ ಬರುವಿಕೆ ಅಥವಾ ಹೊರಸೂಸುವ ಸ್ರಾವ.
• ತೋಳಿನ ಅಡಿಯಲ್ಲಿ ಉಬ್ಬಿಕೊಂಡಿರುವ ರಸಗ್ರಂಥಿಗಳು.
• ಸ್ತನದ ಮಚ್ಚೆಗಳಲ್ಲಿ ಅಥವಾ ಸೀಳುಗಾಯಗಳಲ್ಲಿ ಬದಲಾವಣೆಗಳು.
• ಸ್ತನಗಳಲ್ಲಿ ಸಾಮಾನ್ಯವಾಗಿರುವುದಕ್ಕಿಂತ ಬದಲಾವಣೆ ತೋರಿಸುವ ಗಮನಾರ್ಹ ಅಸಮ ಪ್ರಮಾಣ.
ಸ್ವಯಂ ಪರೀಕ್ಷೆ
ನಿಂತಿರುವಾಗ, ಎಡತೋಳನ್ನು ಮೇಲಕ್ಕೆ ಎತ್ತಿ. ಬಲಗೈಯನ್ನು ಉಪಯೋಗಿಸುತ್ತಾ, ಸ್ತನದ ಹೊರ ಅಂಚಿನಿಂದ ಪ್ರಾರಂಭಿಸಿ, ಬೆರಳುಗಳ ಸಮತಲವಾಗಿರುವ ಭಾಗವನ್ನು ಚಿಕ್ಕ ವೃತ್ತಗಳಲ್ಲಿ ಒತ್ತುತ್ತ, ನಿಧಾನವಾಗಿ ಸ್ತನದ ಸುತ್ತ ಮತ್ತು ತೊಟ್ಟಿನ ಕಡೆಗೆ ಮುಂದುವರಿಯಿರಿ. ತೋಳಿನ ಅಡಿಭಾಗ ಮತ್ತು ಸ್ತನದ ಮಧ್ಯೆ ಇರುವ ಕ್ಷೇತ್ರಕ್ಕೂ ಗಮನ ಕೊಡಿರಿ.
ಸಮತಲವಾಗಿ ಮಲಗಿ, ಎಡಭುಜದ ಅಡಿಯಲ್ಲಿ ಒಂದು ದಿಂಬನ್ನಿಟ್ಟು, ಎಡತೋಳನ್ನು ತಲೆಯ ಮೇಲಕ್ಕೆ ಅಥವಾ ಹಿಂಭಾಗದಲ್ಲಿಡಿ. ಮೇಲೆ ವಿವರಿಸಿದಂತೆಯೇ ವೃತ್ತಾಕಾರದ ಚಲನೆಯನ್ನು ಉಪಯೋಗಿಸಿ. ಬಲ ಪಕ್ಕಕ್ಕಾಗಿ ಕ್ರಮ ವಿಪರ್ಯಯ ಮಾಡಿ.
ಯಾವ ಸ್ರಾವವಾದರೂ ಇದೆಯೋ ಎಂದು ನೋಡಲು ತೊಟ್ಟನ್ನು ಮೃದುವಾಗಿ ಹಿಂಡಿರಿ. ಬಲ ಪಕ್ಕದ ಸ್ತನಕ್ಕಾಗಿ ಇದನ್ನೇ ಪುನರಾವೃತ್ತಿಸಿ.