ಸ್ತನ ಕ್ಯಾನ್ಸರ್ ಪತ್ತೆ, ಪರಿಹಾರ
ಕವಿತಾಳಿಗೆ ಆಗ 40 ವರ್ಷ.a ಆರೋಗ್ಯವಾಗಿದ್ದಳು. ಆಕೆಯ ಕುಟುಂಬದಲ್ಲಿ ಹಿಂದೆ ಯಾರಿಗೂ ಸ್ತನ ಕ್ಯಾನ್ಸರ್ ಇರಲಿಲ್ಲ. ಆಕೆ ನಿಯಮಿತವಾಗಿ ಮಾಡುತ್ತಿದ್ದ ಮ್ಯಾಮೊಗ್ರ್ಯಾಮ್ ಪರೀಕ್ಷೆಯಲ್ಲೂ ಏನು ಕಂಡುಬಂದಿರಲಿಲ್ಲ. ಆದ್ದರಿಂದ ಆಕೆಗೆ ಕ್ಯಾನ್ಸರ್ ಬರುವ ಸಾಧ್ಯತೆಗಳಿಲ್ಲ ಎಂಬಂತೆ ತೋರಿತು. ಆದರೆ ಒಮ್ಮೆ ಸ್ನಾನ ಮಾಡುತ್ತಿದ್ದಾಗ ಸ್ತನ ಮುಟ್ಟಿ ಪರೀಕ್ಷಿಸುತ್ತಿದ್ದಳು. ಗಂಟಿನಂಥ ಏನೋ ಕೈಗೆ ತಾಕಿದಂತಾಯಿತು. ವೈದ್ಯಕೀಯ ಪರೀಕ್ಷೆಯಿಂದ ಅದು ಕ್ಯಾನ್ಸರ್ ಎಂದು ತಿಳಿದಾಗ ಕವಿತಾ ಮತ್ತವಳ ಗಂಡ ದಂಗಾಗಿ ಹೋದರು. ಲಭ್ಯವಿರುವ ವಿವಿಧ ಚಿಕಿತ್ಸೆಗಳ ಬಗ್ಗೆ ಡಾಕ್ಟರ್ ಅವರಿಗೆ ವಿವರಿಸಿದರು.
ಹಿಂದಿನ ಕಾಲದಲ್ಲೆಲ್ಲ ಸ್ತನ ಕ್ಯಾನ್ಸರ್ ಇದ್ದ ಸ್ತ್ರೀಯರಿಗೆ ಡಾಕ್ಟರರು ಶಿಫಾರಸ್ಸು ಮಾಡುತ್ತಿದ್ದ ಒಂದೇ ಚಿಕಿತ್ಸೆ ‘ರ್ಯಾಡಿಕಲ್ ಮ್ಯಾಸ್ಟೆಕ್ಟಮಿ.’ ಈ ಶಸ್ತ್ರಕ್ರಿಯೆಯಲ್ಲಿ ಸ್ತನ, ಅದರಡಿಯ ಸ್ನಾಯುಗಳು, ಎದೆ ಹಾಗೂ ಕಂಕುಳಲ್ಲಿರುವ ದುಗ್ಧರಸ ಗ್ರಂಥಿಗಳನ್ನು ತೆಗೆದುಹಾಕಲಾಗುತ್ತಿತ್ತು. ಆದರೆ ಇದು ದೇಹದಾಕಾರ ಕೆಡಿಸುತ್ತಿತ್ತು. ಅಲ್ಲದೆ ಅದರ ಬಳಿಕ ಕೊಡಲಾಗುವ ಕೀಮೋಥೆರಪಿ ಅಥವಾ ರೇಡಿಯೇಶನ್ (ವಿಕಿರಣ) ಚಿಕಿತ್ಸೆಗಳು ‘ಗಾಯದ ಮೇಲೆ ಬರೆ ಎಳೆದಂತೆ’ ನೋವನ್ನು ಹೆಚ್ಚಿಸುತ್ತಿದ್ದವು. ಹಾಗಾಗಿ ಅನೇಕರಿಗೆ ರೋಗಕ್ಕಿಂತ ಚಿಕಿತ್ಸೆ ಬಗ್ಗೆಯೇ ಹೆಚ್ಚು ಭಯ ಇದ್ದದರಲ್ಲಿ ಆಶ್ಚರ್ಯವೇನಿಲ್ಲ!
ಸ್ತನ ಕ್ಯಾನ್ಸರಿನ ವಿರುದ್ಧ ಸಂಗ್ರಾಮ ನಡೆಯುತ್ತಾ ಇದೆ. ‘ಹಾವೂ ಸಾಯಬೇಕು, ಕೋಲೂ ಮುರಿಬಾರದು’ ಎಂಬಂತೆ ಈ ಕೊಲೆಗಡುಕ ರೋಗಕ್ಕೆ ಉಗ್ರ ಚಿಕಿತ್ಸೆಯೂ ಕೊಡಬೇಕು ಅದೇ ಸಮಯ ಅನಗತ್ಯವಾಗಿ ದೇಹದಾಕಾರ ಕೆಡಿಸದೆ ವೇದನಾಮಯ ಅಡ್ಡಪರಿಣಾಮಗಳನ್ನೂ ತಪ್ಪಿಸಬೇಕು. ಇಂದು ಸ್ತನ ಕ್ಯಾನ್ಸರ್ಗೆ ವಿಧ ವಿಧವಾದ ಚಿಕಿತ್ಸೆಗಳಿವೆ, ಬೇಕಾದದ್ದನ್ನು ಆಯ್ಕೆಮಾಡಬಹುದು.b ಮುಂದೊಂದು ದಿನ ಕ್ಯಾನ್ಸರನ್ನು ಸದೆಬಡಿಯಲಾಗುವುದು ಎಂಬ ನಿರೀಕ್ಷೆಯನ್ನು ವೈದ್ಯಕೀಯ ಅಧ್ಯಯನಗಳು, ಮಾಧ್ಯಮಗಳ ವರದಿಗಳು ಜನರ ಮುಂದಿಡುತ್ತಿವೆ. ಬರಲಿರುವ ಹೊಸ ಚಿಕಿತ್ಸೆಗಳು, ಕ್ಯಾನ್ಸರ್ ಬರುವ ಸಾಧ್ಯತೆಗಳೆಡೆಗೆ ಬೊಟ್ಟುಮಾಡುವ ಪರೀಕ್ಷೆಗಳು ಹಾಗೂ ಕ್ಯಾನ್ಸರನ್ನು ತಡೆಯುವ ಆಹಾರಪಥ್ಯಗಳ ಮೂಲಕ ಇದು ಸಾಧ್ಯ ಎಂಬುದು ಅವರ ಅಂಬೋಣ.
ಇಂದಿನ ಎಲ್ಲ ವೈದ್ಯಕೀಯ ಮುನ್ನಡೆಗಳ ಮಧ್ಯೆಯೂ ಸ್ತ್ರೀಯರ ಸಾವಿಗೆ ಕಾರಣವಾಗುವ ಕ್ಯಾನ್ಸರ್ಗಳಲ್ಲಿ ಸ್ತನ ಕ್ಯಾನ್ಸರ್ಗೆ ಈಗಲೂ ಅಗ್ರ ಸ್ಥಾನ.c ಉತ್ತರ ಅಮೆರಿಕ ಹಾಗೂ ಪಾಶ್ಚಿಮಾತ್ಯ ಯೂರೋಪಿನ ಕೈಗಾರಿಕಾ ರಾಷ್ಟ್ರಗಳಲ್ಲಿ ಕ್ಯಾನ್ಸರಿನ ಪ್ರಕರಣಗಳು ಅತ್ಯಧಿಕವಾಗಿವೆ. ಈ ಹಿಂದೆ ಏಷ್ಯಾ, ಆಫ್ರಿಕ ಖಂಡಗಳಲ್ಲಿ ಕಡಿಮೆ ಪ್ರಕರಣಗಳಿದ್ದವು. ಆದರೆ ಇಲ್ಲೂ ಇದೀಗ ಅಧಿಕವಾಗುತ್ತಿದೆ. ಅಲ್ಲದೆ ಕ್ಯಾನ್ಸರ್ ಪತ್ತೆಯಾದ ಮೇಲೂ ಮರಣ ಸಂಖ್ಯೆ ಏರುತ್ತಿದೆ. ಅದೇಕೆ? ಆಫ್ರಿಕದ ಒಬ್ಬ ಡಾಕ್ಟರ್ ಹೇಳಿದಂತೆ “ರೋಗಿಗಳು ಕ್ಯಾನ್ಸರನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿರುವುದಿಲ್ಲ. ಹೆಚ್ಚಿನವರು ನಮ್ಮ ಬಳಿ ಬರುವಷ್ಟರಲ್ಲಿ ಕ್ಯಾನ್ಸರ್ ತುಂಬ ಅಪಾಯಕಾರಿ ಹಂತವನ್ನು ತಲಪಿರುತ್ತದೆ.”
ವಯಸ್ಸಾಗುತ್ತಾ ಹೋದಂತೆ ಕ್ಯಾನ್ಸರ್ನ ಅಪಾಯವೂ ಹೆಚ್ಚು. ಶೇ. 80ರಷ್ಟು ಪ್ರಕರಣಗಳು ಕಂಡುಬಂದಿರುವುದು 50 ದಾಟಿರುವ ಸ್ತ್ರೀಯರಲ್ಲಿ. ಆದರೆ, ವಾಸಿಯಾಗಬಲ್ಲ ಕ್ಯಾನ್ಸರ್ಗಳ ಪೈಕಿ ಸ್ತನ ಕ್ಯಾನ್ಸರ್ ಕೂಡ ಒಂದು ಎಂಬುದು ಸಂತಸದ ಸಂಗತಿ. ಕ್ಯಾನ್ಸರ್ ದೇಹದ ಬೇರೆಡೆಗೆ ಹರಡುವ ಮುಂಚೆಯೇ ಆರಂಭದ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆದ ಮಹಿಳೆಯರಲ್ಲಿ ಶೇ. 97ರಷ್ಟು ಮಂದಿ ಐದು ವರ್ಷಗಳ ಬಳಿಕವೂ ಬದುಕಿರುವ ದಾಖಲೆಯಿದೆ. ಕವಿತಾ ಇತ್ತೀಚೆಗೆ ಆ ಐದು ವರ್ಷದ ಗಡುವನ್ನು ದಾಟಿದಳು.
ಸ್ತನ ಕ್ಯಾನ್ಸರಿನ ಅ, ಆ, ಇ, ಈ. . .
ಕವಿತಾಳಿಗಾದಂತೆ, ಸ್ತನ ಕ್ಯಾನ್ಸರ್ ಹೆಚ್ಚಾಗಿ ಪತ್ತೆಯಾಗುವುದು ಒಂದು ವಿಚಿತ್ರ ಗಂಟು ಕೈಗೆ ತಾಕಿದಾಗ. ಇಂಥ ಗಂಟುಗಳಲ್ಲಿ ಶೇ. 80ರಷ್ಟು ನಿರುಪದ್ರವಿ (ಬಿನೈನ್) ಆಗಿರುತ್ತವೆ. ಇದರಲ್ಲಿ ಹೆಚ್ಚಿನವು ದ್ರವತುಂಬಿದ ಚೀಲಗಳಂತಿದ್ದು ಅವುಗಳನ್ನು ‘ಸಿಸ್ಟ್’ ಎನ್ನುತ್ತಾರೆ.
ಸ್ತನ ಕ್ಯಾನ್ಸರ್ ಅಂಕುರವಾಗುವುದು ಹೀಗೆ: ‘ಹಾದಿತಪ್ಪಿದ’ ಜೀವಕೋಶವೊಂದು ಅನಿಯಂತ್ರಿತವಾಗಿ ವಿಭಜನೆಗೊಂಡು, ಕ್ರಮೇಣ ಟ್ಯೂಮರ್ ಅಥವಾ ಗೆಡ್ಡೆಯಾಗುತ್ತದೆ. ಅದರಲ್ಲಿರುವ ಜೀವಕೋಶಗಳು ಬೇರೆ ಅಂಗಾಂಶಗಳ ಮೇಲೆ ದಾಳಿಮಾಡುವಾಗ ಈ ಗೆಡ್ಡೆ ಹಾನಿಕರ ಇಲ್ಲವೆ ಕ್ಯಾನ್ಸರ್ ಆಗಿಬಿಡುತ್ತದೆ. ಕೆಲವು ಗೆಡ್ಡೆಗಳು ವೇಗವಾಗಿ ಬೆಳೆಯುತ್ತವೆ; ಬೇರೆ ಗೆಡ್ಡೆಗಳು ಪತ್ತೆಹಚ್ಚುವಷ್ಟು ದೊಡ್ಡ ಗಾತ್ರ ತಲಪಲು ಹತ್ತು ವರ್ಷಗಳೇ ಹಿಡಿಯಬಹುದು.
ಕವಿತಾಳಿಗೆ ಕ್ಯಾನ್ಸರ್ ಇದೆಯಾ ಎಂದು ತಿಳಿದುಕೊಳ್ಳಲು ಡಾಕ್ಟರ್ ಆಕೆಯ ಸ್ತನದಲ್ಲಿದ್ದ ಗಂಟಿಗೆ ಅತಿಸೂಕ್ಷ್ಮವಾದ ಸೂಜಿಯನ್ನು ತೂರಿಸಿ ಅದರಿಂದ ತುಣುಕನ್ನು ತೆಗೆದರು. ಪರೀಕ್ಷಿಸಿ ನೋಡಿದಾಗ ಅದರಲ್ಲಿ ಕ್ಯಾನ್ಸರ್ ಜೀವಕೋಶಗಳಿದ್ದವು. ಆದ್ದರಿಂದ ಆ ಗೆಡ್ಡೆಯನ್ನೂ ಸುತ್ತಲಿನ ಅಂಗಾಂಶಗಳನ್ನೂ ತೆಗೆಯಲು ಮತ್ತು ಅದರ ಸ್ಟೇಜ್ (ಅಂದರೆ ಗಾತ್ರ, ವಿಧ, ಹರಡುವಿಕೆ) ಹಾಗೂ ಗ್ರೇಡ್ (ಅಂದರೆ ಬೆಳವಣಿಗೆಯ ವೇಗ) ತಿಳಿಯಲಿಕ್ಕಾಗಿ ಶಸ್ತ್ರಕ್ರಿಯೆಗೊಳಗಾದಳು.
ಶಸ್ತ್ರಕ್ರಿಯೆ ಆದ ಮೇಲೂ ಅನೇಕ ರೋಗಿಗಳಿಗೆ ಇನ್ನಷ್ಟು ಚಿಕಿತ್ಸೆಗಳು ನಡೆಯುತ್ತವೆ. ಇವುಗಳ ಉದ್ದೇಶ, ಆ ಕ್ಯಾನ್ಸರ್ನ ಪುನರಾಕ್ರಮಣ ಇಲ್ಲವೆ ಹಬ್ಬುವಿಕೆಯನ್ನು ತಡೆಯುವುದೇ. ಕ್ಯಾನ್ಸರ್ ಜೀವಕೋಶಗಳು ಗೆಡ್ಡೆಯಿಂದ ಬೇರ್ಪಟ್ಟು, ರಕ್ತಪ್ರವಾಹ ಇಲ್ಲವೆ ದುಗ್ಧರಸ ಗ್ರಂಥಿ ಜಾಲ ಸೇರಿ ಪ್ರಯಾಣಿಸಿ, ಬೇರೆಲ್ಲೊ ಸಾಗಿ ಅಲ್ಲಿ ನೆಲೆನಿಂತು ಬೆಳೆಯುವ ಸಾಧ್ಯತೆಯಿದೆ. ಈ ರೀತಿಯಲ್ಲಿ ಅದು ಮಿದುಳು, ಯಕೃತ್ತು, ಮೂಳೆ-ಮಜ್ಜೆ, ಶ್ವಾಸಕೋಶಗಳಂಥ ಮುಖ್ಯ ಅಂಗಗಳಿಗೆ, ಅಂಗಾಂಶಗಳಿಗೆ ಹರಡಿ (ಮೆಟಾಸ್ಟೇಸಿಸ್) ಪ್ರಾಣಕ್ಕೆ ಕಂಟಕವಾಗುತ್ತದೆ.
ಕವಿತಾಳಿಗೆ ವಿಕಿರಣ, ಕೀಮೋಥೆರಪಿ ಎರಡನ್ನೂ ಕೊಡಲಾಯಿತು. ಸ್ತನದಲ್ಲಿ ಮತ್ತು ದೇಹದಾದ್ಯಂತ ಅಳಿದುಳಿದ ಕ್ಯಾನ್ಸರ್ ಜೀವಕೋಶಗಳನ್ನು ನಾಶಮಾಡುವುದು ಇದರ ಉದ್ದೇಶ. ಆಕೆಗಿದ್ದ ಸ್ತನ ಕ್ಯಾನ್ಸರ್ ಈಸ್ಟ್ರೋಜನ್ ಎಂಬ ಹಾರ್ಮೋನನ್ನು ಬಳಸಿ ಬೆಳೆಯುತ್ತಿದ್ದದರಿಂದ ಅದರ ವಿರುದ್ಧ ಕೆಲಸಮಾಡುವ ಹಾರ್ಮೋನ್ ಚಿಕಿತ್ಸೆ ಕೊಡಲಾಯಿತು. ಇದು ಹೊಸ ಗೆಡ್ಡೆಗಳು ಬೆಳೆಯುವುದನ್ನು ತಡೆಯಲು ತಕ್ಕೊಂಡ ಕ್ರಮವಾಗಿತ್ತು.
ಸ್ತನ ಕ್ಯಾನ್ಸರ್ ಚಿಕಿತ್ಸೆಯ ಮುನ್ನಡೆಗಳಿಂದಾಗಿ ರೋಗಿಗಳಿಗೆ ಅವರ ವಯಸ್ಸು, ಆರೋಗ್ಯ, ಕ್ಯಾನ್ಸರ್ ಚರಿತ್ರೆ ಮತ್ತು ಅವರವರ ಕ್ಯಾನ್ಸರ್ಗೆ ತಕ್ಕಂತೆ ಇತರ ಚಿಕಿತ್ಸೆಗಳೂ ಇವೆ. ದೃಷ್ಟಾಂತಕ್ಕೆ, ಆರತಿ ಎಂಬ ಮಹಿಳೆಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾದಾಗ ಅದಿನ್ನೂ ಹಾಲು ಸಾಗುವ ಕೊಳವೆಯಿಂದ ಬೇರೆಡೆ ಹರಡಿರಲಿಲ್ಲ. ಹಾಗಾಗಿ ಬರೇ ಗೆಡ್ಡೆಯನ್ನು ತೆಗೆಯುವ ಲಂಪೇಕ್ಟಮಿ (ಮೊಲೆಗಡ್ಡೆಕೊಯ್ತ) ಎಂಬ ಶಸ್ತ್ರಕ್ರಿಯೆ ಮಾಡಿಸಲಾಯಿತು. ಇಡೀ ಸ್ತನವನ್ನು ಕತ್ತರಿಸಿ ತೆಗೆಯಬೇಕಾಗಿ ಬರಲಿಲ್ಲ. ಆಶಾ ಎಂಬವರಿಗೆ ಮೊದಲು ಕೀಮೋಥೆರಪಿ ಕೊಟ್ಟು ಗೆಡ್ಡೆಯ ಗಾತ್ರ ಕುಗ್ಗಿಸಿ ಆಮೇಲೆ ಶಸ್ತ್ರಕ್ರಿಯೆ ನಡೆಸಲಾಯಿತು. ಜ್ಯಾನಿಸ್ ಎಂಬವರ ವೈದ್ಯರು ಗೆಡ್ಡೆಯನ್ನೂ ಅದರ ಪಕ್ಕದಲ್ಲೇ ಇದ್ದ ಒಂದು ದುಗ್ಧರಸ ಗ್ರಂಥಿಯನ್ನೂ ತೆಗೆದರು. ಏಕೆಂದರೆ ಗೆಡ್ಡೆಯಿಂದ ದ್ರವ ಮೊದಲು ಹೋಗುವುದು ಈ ಗ್ರಂಥಿಗೆ. ಆದರೆ ಇದರಲ್ಲಿ ಕ್ಯಾನ್ಸರ್ ಜೀವಕೋಶಗಳು ಕಾಣಿಸದಿದ್ದಾಗ ಉಳಿದ ದುಗ್ಧರಸ ಗ್ರಂಥಿಗಳನ್ನು ಮುಟ್ಟದೆ ಹಾಗೇ ಬಿಟ್ಟರು. ಹೀಗೆ ಲಿಂಫೇಡೆಮಕ್ಕೆ (ಅನೇಕ ದುಗ್ಧರಸ ಗ್ರಂಥಿಗಳನ್ನು ತೆಗೆದರೆ ತೋಳಿನಲ್ಲಾಗುವ ನೋವುಭರಿತ ಊತ) ಜ್ಯಾನಿಸ್ ಒಳಗಾಗುವದೂ ತಪ್ಪಿತು.
ಸ್ತನ ಕ್ಯಾನ್ಸರಿನ ಬೆಳವಣಿಗೆ ಬಗ್ಗೆ ಎಷ್ಟೇ ಮಾಹಿತಿ ಲಭ್ಯವಿದ್ದರೂ ಅದರ ಆರಂಭ ಹೇಗೆ, ಏಕೆ ಎಂಬ ಮೂಲಭೂತ ಪ್ರಶ್ನೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.
ಕಾರಣಗಳೇನು?
ಸ್ತನ ಕ್ಯಾನ್ಸರಿಗೆ ಕಾರಣಗಳೇನು ಎಂಬುದು ಈಗಲೂ ಒಂದು ಯಕ್ಷಪ್ರಶ್ನೆ. ಈ ಕ್ಯಾನ್ಸರಿಗೆ ಚಿಕಿತ್ಸೆಗಳೇನು, ಪತ್ತೆಹಚ್ಚುವುದು ಹೇಗೆ ಎನ್ನುವುದರ ಬಗ್ಗೆಯೇ ಇಂದು ಬಿರುಸಿನ ಸಂಶೋಧನೆ ನಡೆಯುತ್ತಿದೆ ಏಕೆಂದರೆ ಇವುಗಳಿಂದ ಲಾಭ ಹೆಚ್ಚು. ಈ ಕ್ಯಾನ್ಸರಿಗೆ ಕಾರಣಗಳೇನು, ತಡೆಗಟ್ಟುವುದು ಹೇಗೆಂಬುದರ ಬಗೆಗಿನ ಸಂಶೋಧನೆ ಮೂಲೆಸೇರಿದೆ ಎಂಬುದು ವಿಮರ್ಶಕರ ಅಳಲು. ಹಾಗಿದ್ದರೂ ವಿಜ್ಞಾನಿಗಳಿಗೆ ಪ್ರಮುಖ ಸುಳಿವುಗಳು ಸಿಕ್ಕಿವೆ. ಕೆಲವರ ಅಭಿಪ್ರಾಯಕ್ಕನುಸಾರ ಸ್ತನ ಕ್ಯಾನ್ಸರ್ ಎಂಬುದು ನಾನಾ ಹಂತಗಳ ಜಟಿಲ ಪ್ರಕ್ರಿಯೆ. ಅದರ ಆರಂಭ ಒಂದು ದೋಷಯುಕ್ತ ಜೀನ್ನಿಂದ. ಇದು ಜೀವಕೋಶಗಳನ್ನು ಹಾದಿತಪ್ಪಿಸುತ್ತದೆ. ಅಂದರೆ ಅವು ವೇಗವಾಗಿಯೂ ಅನಿರ್ಬಂಧಿತವಾಗಿಯೂ ವಿಭಜನೆಗೊಳ್ಳಲು, ಬೇರೆ ಅಂಗಾಂಶಗಳ ಮೇಲೆ ದಾಳಿಮಾಡಲು, ರೋಗನಿರೋಧಕ ಜೀವಕೋಶಗಳಿಂದ ತಪ್ಪಿಸಿಕೊಳ್ಳಲು, ಮುಖ್ಯ ಅಂಗಗಳ ಮೇಲೆ ಗುಟ್ಟಾಗಿ ಆಕ್ರಮಣಮಾಡಲು ಈ ಜೀನ್ ನಿರ್ದೇಶಿಸುತ್ತದೆ.
ಈ ದೋಷಯುಕ್ತ ಜೀನ್ಗಳು ಬರುವುದು ಹೇಗೆ? ಶೇ. 5-10ರಷ್ಟು ಪ್ರಕರಣಗಳಲ್ಲಿ ಕಂಡುಬಂದಂತೆ, ಸ್ತನ ಕ್ಯಾನ್ಸರ್ಕಾರಕ ಜೀನ್ಗಳು ಹುಟ್ಟಿನಿಂದಲೇ ಬರುತ್ತವೆ. ಆದರೆ ಹೆಚ್ಚಿನ ವಿದ್ಯಮಾನಗಳಲ್ಲಿ ಆರೋಗ್ಯಕರ ಜೀನ್ಗಳು, ಮುಖ್ಯವಾಗಿ ವಿಕಿರಣ ಮತ್ತು ರಾಸಾಯನಿಕಗಳಂಥ ದೇಹದ ಹೊರಗಿನ ಅಂಶಗಳಿಂದ ಹಾನಿಗೊಳಗಾಗುವಂತೆ ತೋರುತ್ತದೆ. ಭವಿಷ್ಯದಲ್ಲಿ ಅಧ್ಯಯನಗಳು ಈ ನಂಟನ್ನು ದೃಢೀಕರಿಸಬಹುದು.
ಇನ್ನೊಂದು ಕಾರಣ ಈಸ್ಟ್ರೋಜನ್ ಹಾರ್ಮೋನ್. ಇದು ಕೆಲವೊಂದು ಸ್ತನ ಕ್ಯಾನ್ಸರನ್ನು ಪ್ರಚೋದಿಸುವಂತೆ ತೋರುತ್ತದೆ. ಹಾಗಾಗಿ ತೀರ ಚಿಕ್ಕ ಪ್ರಾಯದಲ್ಲೇ ಋತುಮತಿಯಾದ, ಸಾಮಾನ್ಯಕ್ಕಿಂತ ತಡವಾಗಿ ಋತುಬಂಧಕ್ಕೆ ಒಳಗಾದ, ತಡವಾಗಿ ಮಕ್ಕಳಾದ, ಮಕ್ಕಳೇ ಇಲ್ಲದ, ಹಾರ್ಮೋನ್ ಬದಲಿ ಚಿಕಿತ್ಸೆಗೆ ಒಳಗಾದ ಸ್ತ್ರೀಯರಲ್ಲಿ ಈ ಕ್ಯಾನ್ಸರ್ ಉದ್ಭವವಾಗುವ ಸಾಧ್ಯತೆ ಜಾಸ್ತಿ. ಋತುಬಂಧಕ್ಕೊಳಗಾದ ಸ್ತ್ರೀಯರ ಅಂಡಾಶಯಗಳು ಹಾರ್ಮೋನ್ ಉತ್ಪತ್ತಿ ನಿಲ್ಲಿಸಿದರೂ ಅವರಿಗೆ ಬೊಜ್ಜುಮೈ ಇದ್ದರೆ ಸ್ತನ ಕ್ಯಾನ್ಸರಿನ ಅಪಾಯ ಹೆಚ್ಚು. ಏಕೆಂದರೆ ಕೊಬ್ಬಿನ ಜೀವಕೋಶಗಳು ಈಸ್ಟ್ರೋಜನ್ ಅನ್ನು ಉತ್ಪಾದಿಸುತ್ತವೆ. ಮತ್ತೊಂದು ಕಾರಣ ಇನ್ಸುಲಿನ್ ಹಾರ್ಮೋನಿನ ಮಟ್ಟದಲ್ಲಾಗುವ ಹೆಚ್ಚಳ. ಮೆಲಾಟೊನಿನ್ ಎಂಬ ನಿದ್ದೆಯ ಹಾರ್ಮೋನಿನ ಮಟ್ಟ ಕಡಿಮೆಯಾದರೂ ಅಪಾಯವಿದೆ. ಇದು ರಾತ್ರಿ ಪಾಳಿ ಕೆಲಸಮಾಡುವವರಲ್ಲಿ ಸಾಮಾನ್ಯ.
ಸ್ತನ ಕ್ಯಾನ್ಸರಿಗಾಗಿ ಹೆಚ್ಚು ಪರಿಣಾಮಕಾರಿ ಆದರೆ ಕಡಿಮೆ ಬೇನೆ-ಬೇಗುದಿಯ ಚಿಕಿತ್ಸೆಗಳು ಬರುವ ಸೂಚನೆ ಏನಾದರೂ ಇದೆಯೇ? ದೇಹದ ರೋಗ ನಿರೋಧಕ ವ್ಯವಸ್ಥೆಯನ್ನೇ ಬಳಸುವ ಚಿಕಿತ್ಸೆಗಳನ್ನು ಮತ್ತು ಕ್ಯಾನ್ಸರ್ ಬೆಳವಣಿಗೆಯನ್ನು ಪೋಷಿಸುವಂಥ ಜೀನ್, ಪ್ರೋಟೀನ್ಗಳ ಜಾಲಗಳನ್ನು ನಾಶಮಾಡುವ ಔಷಧಗಳನ್ನೂ ಸಂಶೋಧಕರು ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ. ಅಲ್ಲಿ ವರೆಗೆ, ಅಭಿವೃದ್ಧಿಗೊಂಡ ಚಿತ್ರಣ ತಂತ್ರಜ್ಞಾನದ ನೆರವಿನಿಂದ ವಿಕಿರಣ ಚಿಕಿತ್ಸೆಯನ್ನು ಹೆಚ್ಚು ನಿಖರವಾಗಿ ಮತ್ತು ಪರಿಣಾಮಕಾರಿಯಾಗಿ ಕೊಡಲು ಚಿಕಿತ್ಸಕರಿಗೆ ಸಾಧ್ಯವಾಗುವುದು.
ಈ ಕ್ಯಾನ್ಸರನ್ನು ಹತ್ತಿಕ್ಕುವ ಬೇರೆ ವಿಧಾನಗಳಿಗಾಗಿ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಮೆಟಾಸ್ಟೇಸಿಸ್ ಹೇಗಾಗುತ್ತದೆಂಬ ರಹಸ್ಯ ಬಿಡಿಸುವುದು, ಕೀಮೋ ಚಿಕಿತ್ಸೆಗೆ ಬಗ್ಗದ ಕ್ಯಾನ್ಸರ್ ಕಣಗಳನ್ನು ಸದೆಬಡಿಯುವುದು, ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯ ಆದೇಶಗಳನ್ನು ತಡೆಯುವ ಮತ್ತು ರೋಗಿಯಲ್ಲಿನ ಟ್ಯೂಮರ್ಗನುಸಾರ ಚಿಕಿತ್ಸೆಯನ್ನು ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ.
ಹಾಗಿದ್ದರೂ ಇಂದು ಎಲ್ಲ ರೋಗಗಳ ನಿರ್ಮೂಲನ ಕನಸಿನ ಮಾತು. ಮನುಷ್ಯರು ಸಾವುನೋವುಗಳಿಗೆ ಬಲಿಯಾಗುತ್ತಲೇ ಇರುವರು. (ರೋಮನ್ನರಿಗೆ 5:12) ಈ ಕಹಿ ಸತ್ಯವನ್ನು ಬದಲಾಯಿಸುವ ಶಕ್ತಿಯಿರುವುದು ನಮ್ಮ ಸೃಷ್ಟಿಕರ್ತನಿಗೆ ಮಾತ್ರ. ಅದನ್ನಾತ ಮಾಡುವನೇ? ಹೌದೆಂದು ಬೈಬಲ್ ಉತ್ತರ ಕೊಡುತ್ತದೆ. ಮುಂದೊಂದು ದಿನ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು” ಎನ್ನುತ್ತದೆ ಅದು.d (ಯೆಶಾಯ 33:24) ಆಗ ನಿಶ್ಚಯವಾಗಿಯೂ ನೆಮ್ಮದಿಯ ನಿಟ್ಟುಸಿರು ಬಿಡಬಲ್ಲೆವು! (g11-E 08)
[ಪಾದಟಿಪ್ಪಣಿಗಳು]
a ಕೆಲವು ಹೆಸರುಗಳನ್ನು ಬದಲಿಸಲಾಗಿದೆ.
b ಎಚ್ಚರ! ಪತ್ರಿಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯನ್ನು ಶಿಫಾರಸ್ಸು ಮಾಡುವುದಿಲ್ಲ.
c ಹೆಂಗಸರಿಗೆ ಹೋಲಿಸಿದರೆ ಗಂಡಸರಲ್ಲಿ ಸ್ತನ ಕ್ಯಾನರ್ನ ಪ್ರಕರಣಗಳು ಅಪರೂಪ.
d ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕ ದೇವರ ಈ ವಾಗ್ದಾನದ ಬಗ್ಗೆ ವಿವರವಾಗಿ ಚರ್ಚಿಸುತ್ತದೆ.
[ಪುಟ 26, 27ರಲ್ಲಿರುವ ಚೌಕ/ಚಿತ್ರ]]
ಈ ಲಕ್ಷಣಗಳಿವೆಯಾ ನೋಡಿ
ಆರಂಭಿಕ ಹಂತದಲ್ಲೇ ಕ್ಯಾನ್ಸರನ್ನು ಪತ್ತೆಹಚ್ಚುವುದು ಬಹುಮುಖ್ಯ. ಆದರೆ ಎಳೇ ವಯಸ್ಸಿನ ಸ್ತ್ರೀಯರ ಸ್ತನಗಳಲ್ಲಿ ಗೆಡ್ಡೆಗಳು ಮೂಡಿದ್ದರೆ ಅದನ್ನು ಕೈಯಿಂದ ಮುಟ್ಟಿ ಮಾಡುವ ಸ್ವಪರೀಕ್ಷೆ, ಮ್ಯಾಮೊಗ್ರಾಮ್ಗಳಿಂದ ನಿಖರವಾಗಿ ಗುರುತಿಸಲು ಆಗುವುದಿಲ್ಲ. ಅಲ್ಲದೆ ಅದು ಅನಗತ್ಯ ಚಿಕಿತ್ಸೆ, ಚಿಂತೆಗೆ ಕಾರಣವಾಗಬಲ್ಲದೆಂದು ಎಚ್ಚರಿಸುತ್ತವೆ ಕೆಲವು ಅಧ್ಯಯನಗಳು. ಹಾಗಿದ್ದರೂ ಸ್ತ್ರೀಯರು ತಮ್ಮ ಸ್ತನಗಳಲ್ಲಿ ಹಾಗೂ ದುಗ್ಧಗ್ರಂಥಿಗಳಲ್ಲಿ ಏನಾದರೂ ಬದಲಾವಣೆಗಳಾಗಿವೆಯೊ ಎಂದು ಆಗಾಗ್ಗೆ ಪರೀಕ್ಷಿಸುವುದಕ್ಕೆ ತಜ್ಞರು ಒತ್ತುನೀಡುತ್ತಾರೆ. ಕೆಳಗಿನ ಲಕ್ಷಣಗಳಿವೆಯಾ ಎಂದು ಗಮನಿಸುತ್ತಿರಿ:
● ಕಂಕುಳು, ಸ್ತನಗಳಲ್ಲಿ ಕೈಗೆ ತಾಕುವ ಗೆಡ್ಡೆ-ಗಂಟು
● ತೊಟ್ಟಿನಿಂದ ಹಾಲಲ್ಲದೆ ಬೇರಾವುದೇ ದ್ರವ ಒಸರುವಿಕೆ
● ಚರ್ಮದ ಬಣ್ಣ ಅಥವಾ ಸ್ಥಿತಿಯಲ್ಲಿ ಏನಾದರೂ ಬದಲಾವಣೆ
● ಅಸಾಧಾರಣವಾಗಿ ಒಳಕ್ಕೆ ಎಳೆದುಕೊಂಡಿರುವ ಅಥವಾ ನೋವಿರುವ ತೊಟ್ಟು
[ಪುಟ 27ರಲ್ಲಿರುವ ಚೌಕ]
ಸ್ತನ ಕ್ಯಾನ್ಸರ್ ಇದೆಯೆಂದು ಡಾಕ್ಟರ್ ಹೇಳಿದರೆ. . .
● ಚಿಕಿತ್ಸೆ ಪಡೆದು, ಚೇತರಿಸಿಕೊಳ್ಳಲು ಕಡಿಮೆಪಕ್ಷ ಒಂದು ವರ್ಷವಾದರೂ ಹಿಡಿಯುವುದರಿಂದ ಮಾನಸಿಕವಾಗಿ ಸಿದ್ಧರಾಗಿ.
● ಚಿಕಿತ್ಸೆಯ ಸಂಬಂಧದಲ್ಲಿ ನಿಮ್ಮ ಬೇಕುಬೇಡಗಳನ್ನು, ಧಾರ್ಮಿಕ ನಂಬಿಕೆಗಳನ್ನು ಗೌರವಿಸುವಂಥ ನಿಪುಣ ವೈದ್ಯರನ್ನು ಸಾಧ್ಯವಿದ್ದಲ್ಲಿ ಆರಿಸಿಕೊಳ್ಳಿ.
● ನಿಮ್ಮ ಈ ಸ್ಥಿತಿಯ ಬಗ್ಗೆ ಯಾರಿಗೆ ಯಾವಾಗ ತಿಳಿಸುವಿರೆಂದು ಕುಟುಂಬವಾಗಿ ನಿರ್ಣಯಿಸಿ. ಆಗ ಸ್ನೇಹಿತರಿಗೆ ನಿಮ್ಮ ಮೇಲಿನ ಪ್ರೀತಿ ತೋರಿಸಲು, ನಿಮ್ಮ ಜೊತೆ ಪ್ರಾರ್ಥಿಸಲು, ನಿಮಗೋಸ್ಕರ ಪ್ರಾರ್ಥಿಸಲು ಸಾಧ್ಯವಾಗುವುದು.—1 ಯೋಹಾನ 3:18.
● ಈ ಭಾವನಾತ್ಮಕ ಒತ್ತಡವನ್ನು ನಿಭಾಯಿಸಲು ಪ್ರಾರ್ಥಿಸಿ, ಬೈಬಲ್ ಓದಿ, ಆಶಾಜನಕ ವಿಷಯಗಳ ಬಗ್ಗೆ ಧ್ಯಾನಿಸಿ.—ರೋಮನ್ನರಿಗೆ 15:4; ಫಿಲಿಪ್ಪಿ 4:6, 7.
● ಸ್ತನ ಕ್ಯಾನ್ಸರ್ ಇದ್ದವರೊಟ್ಟಿಗೆ ಮಾತಾಡಿ. ಆದರೆ ಅವರು ಪ್ರೋತ್ಸಾಹಿಸುವ ಮಾತುಗಳನ್ನು ಆಡುವವರಾಗಿರಬೇಕು.—2 ಕೊರಿಂಥ 1:7.
● ಇವತ್ತಿನ ಬಗ್ಗೆ ಯೋಚಿಸಿ, ನಾಳೆಯ ಚಿಂತೆ ಬೇಡ. ಯೇಸು ಹೇಳಿದಂತೆ, “ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡಬೇಡಿ; ನಾಳೆಯ ದಿನವು ತನ್ನದೇ ಆದ ಚಿಂತೆಗಳನ್ನು ಹೊಂದಿರುವುದು.”—ಮತ್ತಾಯ 6:34.
● ಆಯಾಸ ಮಾಡಿಕೊಳ್ಳಬೇಡಿ. ಸಾಕಷ್ಟು ವಿಶ್ರಾಂತಿ ಪಡೆದುಕೊಳ್ಳಿ.
[ಪುಟ 28ರಲ್ಲಿರುವ ಚೌಕ/ಚಿತ್ರ]
ಡಾಕ್ಟರ್ ಜೊತೆ ಮಾತುಕತೆ
● ಸ್ತನ ಕ್ಯಾನ್ಸರಿಗೆ ಸಂಬಂಧಪಟ್ಟ ಮುಖ್ಯ ವೈದ್ಯಕೀಯ ಪದಗಳನ್ನು ಕಲಿತುಕೊಳ್ಳಿ.
● ಡಾಕ್ಟರ್ಗೆ ಯಾವ್ಯಾವ ಪ್ರಶ್ನೆ ಕೇಳಬೇಕೆಂದು ಬರೆದುಕೊಂಡು ಹೋಗಿ. ಅವರು ಹೇಳುವ ವಿಷಯಗಳ ಟಿಪ್ಪಣಿ ಮಾಡಲು ನಿಮ್ಮ ಗಂಡನನ್ನೊ ಸ್ನೇಹಿತೆಯನ್ನೊ ಒಟ್ಟಿಗೆ ಕರಕೊಂಡು ಹೋಗಿ.
● ಡಾಕ್ಟರ್ ಹೇಳುವ ವಿಷಯ ಅರ್ಥವಾಗದಿದ್ದರೆ ವಿವರಿಸುವಂತೆ ವಿನಂತಿಸಿ.
● ‘ನನ್ನಂಥ ಎಷ್ಟು ರೋಗಿಗಳಿಗೆ ಚಿಕಿತ್ಸೆ ಕೊಟ್ಟಿದ್ದೀರಿ ಡಾಕ್ಟ್ರೇ?’ ಎಂದು ಕೇಳಿ.
● ಸಾಧ್ಯವಿದ್ದರೆ, ಇನ್ನೊಬ್ಬ ಡಾಕ್ಟರರನ್ನು ನೋಡಿ ಅವರ ಅಭಿಪ್ರಾಯ ಕೇಳಿ.
● ಇಬ್ಬರ ಅಭಿಪ್ರಾಯ ಭಿನ್ನಭಿನ್ನವಾಗಿದ್ದರೆ ಅವರಿಬ್ಬರ ಅನುಭವ ಹೋಲಿಸಿ ನೋಡಿ. ನಿಮ್ಮ ಸನ್ನಿವೇಶದ ಬಗ್ಗೆ ಅವರಿಬ್ಬರು ಮಾತಾಡಿಕೊಳ್ಳುವಂತೆ ಕೇಳಿ. ಬೇಕಿದ್ದರೆ ನೀವು ಮೂರನೇ ಡಾಕ್ಟರರನ್ನೂ ನೋಡಬಹುದು.
[ಪುಟ 29ರಲ್ಲಿರುವ ಚೌಕ/ಚಿತ್ರ]
ಅಡ್ಡಪರಿಣಾಮಗಳನ್ನು ಅಡಗಿಸುವ ವಿಧ
ಕೆಲವೊಂದು ಕ್ಯಾನ್ಸರ್ ಚಿಕಿತ್ಸೆಗಳ ಅಡ್ಡಪರಿಣಾಮಗಳೆಂದರೆ ವಾಕರಿಕೆ, ಕೂದಲೆಲ್ಲ ಉದುರಿಹೋಗುವುದು, ಸದಾ ಸುಸ್ತು, ನೋವು, ಕೈಕಾಲುಗಳಲ್ಲಿ ಮರಗಟ್ಟಿದ ಚುಚ್ಚಿದಂಥ ಅನುಭವ, ಚರ್ಮದ ಸಮಸ್ಯೆಗಳು ಇತ್ಯಾದಿ. ಇವುಗಳನ್ನು ಕೆಳಕಂಡ ಸರಳ ಕ್ರಮಗಳು ಕಡಿಮೆಮಾಡಬಹುದು:
● ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಚೆನ್ನಾಗಿ ಊಟಮಾಡಿ.
● ಯಾವಾಗ ಚೆನ್ನಾಗಿರುತ್ತೀರಿ, ಯಾವಾಗ ಸುಸ್ತನಿಸುತ್ತದೆ, ಬೇರೆ ಬೇರೆ ಆಹಾರಗಳಿಗೆ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ದಿನಾಲೂ ಬರೆದಿಡಿ.
● ಔಷಧ, ಆ್ಯಕ್ಯುಪಂಕ್ಚರ್, ಮಸಾಜ್ಗಳಿಂದ ವಾಕರಿಕೆ, ನೋವು ಕಡಿಮೆಯಾಗುತ್ತದಾ ನೋಡಿ.
● ದೇಹದ ಶಕ್ತಿ ಹೆಚ್ಚಿಸಲು, ತೂಕ ನಿಯಂತ್ರಿಸಲು, ರೋಗನಿರೋಧಕ ಶಕ್ತಿಯನ್ನು ಚುರುಕಾಗಿಸಲು ಹಿತಮಿತ ವ್ಯಾಯಾಮ ಮಾಡಿ.e
● ಆಗಾಗ್ಗೆ ವಿಶ್ರಾಂತಿ ಪಡೆಯಿರಿ. ಆದರೆ ತೀರ ಜಾಸ್ತಿ ಸಮಯ ಮಲಗಿಯೇ ಇದ್ದರೆ ಸುಸ್ತು ಹೆಚ್ಚಾಗಬಹುದು.
● ಚರ್ಮದ ತೇವಾಂಶ ಕಾಪಾಡಿ. ಬಿಗಿ ಬಟ್ಟೆಗಳನ್ನು ಧರಿಸಬೇಡಿ. ಬೆಚ್ಚಗಿನ ನೀರಿನಲ್ಲಿ ಸ್ನಾನಮಾಡಿ.
[ಪಾದಟಿಪ್ಪಣಿ]
e ಕ್ಯಾನ್ಸರ್ ರೋಗಿಗಳು ವ್ಯಾಯಾಮ ಆರಂಭಿಸುವ ಮುಂಚೆ ವೈದ್ಯಕೀಯ ವೃತ್ತಿಪರರ ಸಲಹೆ ಪಡೆಯಬೇಕು.
[ಪುಟ 30ರಲ್ಲಿರುವ ಚೌಕ]
ಆಪ್ತರೊಬ್ಬರಿಗೆ ಕ್ಯಾನ್ಸರ್ ಇದ್ದರೆ
ಆಪ್ತರೊಬ್ಬರಿಗೆ ಕ್ಯಾನ್ಸರ್ ಇದ್ದರೆ ಹೇಗೆ ಸ್ಪಂದಿಸುವಿರಿ? ಈ ಬೈಬಲ್ ಸೂತ್ರ ಅನ್ವಯಿಸಿ: “ಆನಂದಿಸುವವರೊಂದಿಗೆ ಆನಂದಿಸಿರಿ; ಅಳುವವರೊಂದಿಗೆ ಅಳಿರಿ.” (ರೋಮನ್ನರಿಗೆ 12:15) ನಿಮ್ಮ ಪ್ರೀತಿಕಳಕಳಿಯನ್ನು ತೋರಿಸಲಿಕ್ಕಾಗಿ ಫೋನ್ ಮಾಡಿ. ಪತ್ರ, ಕಾರ್ಡು, ಇ-ಮೇಲ್ ಕಳುಹಿಸಿ. ಭೇಟಿಮಾಡಿ ಸ್ವಲ್ಪ ಸಮಯ ಅವರೊಟ್ಟಿಗೆ ಇರಿ. ಒಟ್ಟಿಗೆ ಪ್ರಾರ್ಥನೆ ಮಾಡಿ. ಸಂತೈಸುವ ಬೈಬಲ್ ವಚನಗಳನ್ನು ಓದಿ. ಬೆರಲ್ ಎಂಬವರು ಹೇಳುವುದು: “ಕ್ಯಾನ್ಸರ್ನಿಂದ ಸತ್ತವರ ಬಗ್ಗೆ ಮಾತೆತ್ತಬೇಡಿ. ಅದನ್ನು ಗೆದ್ದುಬಂದವರ ಬಗ್ಗೆ ಮಾತಾಡಿ.” ಹಿಂದೊಮ್ಮೆ ಕ್ಯಾನ್ಸರ್ ಪೀಡಿತಳಾಗಿದ್ದ ಜ್ಯಾನಿಸ್ ಹೇಳುವುದು: “ವಿಷಯ ಗೊತ್ತಾದಾಗ ನಿಮ್ಮ ಸ್ನೇಹಿತೆಯನ್ನು ಭೇಟಿಮಾಡಿ ಅಪ್ಪಿಕೊಳ್ಳಿ. ಆಕೆಗೆ ಅದರ ಬಗ್ಗೆ ಮಾತಾಡಬೇಕೆಂದು ಅನಿಸಿದರೆ ಮಾತಾಡುವಳು.” ವಿಶೇಷವಾಗಿ ಗಂಡನು ತನ್ನ ಪತ್ನಿಯ ಮೇಲೆ ತನಗೆಷ್ಟು ಪ್ರೀತಿಯಿದೆ ಎಂದು ಹೇಳಿ ಧೈರ್ಯತುಂಬಿಸಬೇಕು.
ಜೆಫ್ ಎಂಬವರು ನೆನಪಿಸಿಕೊಳ್ಳುವುದು: “ನಮ್ಮಿಬ್ಬರ ಯೋಚನೆ, ಮಾತು ಸದಾ ತನ್ನ ಅನಾರೋಗ್ಯದ ಕುರಿತೇ ಇರಬಾರದು ಎಂದು ನನ್ನಾಕೆ ಮೊದಲೇ ನಿರ್ಣಯಿಸಿದ್ದಳು. ಆದ್ದರಿಂದ ಆಗಾಗ್ಗೆ ‘ಕ್ಯಾನ್ಸರ್-ಮುಕ್ತ ದಿನ’ಗಳನ್ನು ಆಚರಿಸಲು ನಿರ್ಣಯಿಸಿದೆವು. ಅಂದರೆ ಆ ಇಡೀ ದಿನ ಆಕೆಗಿದ್ದ ಕ್ಯಾನ್ಸರ್ ಬಗ್ಗೆ ನಾವು ಮಾತೇ ಎತ್ತುತ್ತಿರಲಿಲ್ಲ. ಕಾಯಿಲೆ ಬಗ್ಗೆಯೇ ಮಾತಾಡುವ, ಯೋಚಿಸುವ ಬದಲು ನಮ್ಮ ಬದುಕಿನ ಸಕಾರಾತ್ಮಕ ವಿಷಯಗಳೆಡೆಗೆ ಗಮನಕೊಟ್ಟೆವು. ಆ ದಿನಗಳು ನಾವು ‘ಕಾಯಿಲೆಯಿಂದ ರಜೆ ತೆಗೆದುಕೊಂಡ ದಿನಗಳಂತೆ’ ಇದ್ದವು.”
[ಪುಟ 30ರಲ್ಲಿರುವ ಚೌಕ]
ಭಾವನೆಗಳ ತುಣುಕುಗಳು
ಕ್ಯಾನ್ಸರ್ ಇದೆಯೆಂದು ಗೊತ್ತಾದಾಗ
ಶೆರಾನ್: ನನ್ನ ಬದುಕು ಕ್ಷಣಾರ್ಧದಲ್ಲೇ ಅಡಿಮೇಲಾಯಿತು. “ನನ್ನ ಕಥೆ ಮುಗಿಯಿತು” ಎಂದು ಬಡಬಡಿಸಿದೆ.
ಅತ್ಯಂತ ಕಷ್ಟಕರ ಕ್ಷಣಗಳು
ಸ್ಯಾಂಡ್ರ: ಚಿಕಿತ್ಸೆಗಿಂತಲೂ ಮಾನಸಿಕ ತೊಳಲಾಟವೇ ಹೆಚ್ಚು ಕಷ್ಟಕರ.
ಮಾರ್ಗರೆಟ್: ಎರಡನೇ ಸುತ್ತಿನ ಕೀಮೋಥೆರಪಿಯ ನಂತರ ನನಗೆ ಮುಂದಿನ ಚಿಕಿತ್ಸೆ ಬೇಡವೇ ಬೇಡ ಅನಿಸಿತು. ಆದರೆ ಆ ಚಿಕಿತ್ಸೆಯನ್ನು ಮುಗಿಸದೇ ಬೇರೆ ದಾರಿಯಿರಲಿಲ್ಲ.
ಮಿತ್ರರು
ಆರ್ಲೆಟ್: ನಮ್ಮ ಮಿತ್ರರು ನಮಗಾಗಿ ಪ್ರಾರ್ಥನೆ ಮಾಡಲು ಸಾಧ್ಯವಾಗುವಂತೆ ವಿಷಯವನ್ನು ಅವರಿಗೆ ತಿಳಿಸಿದೆವು.
ಜೆನ್ನಿ: ನನ್ನನ್ನು ನೋಡಿ ಯಾರಾದರೂ ನಸುನಗೆ ಬೀರಿದರೆ, ವಂದಿಸಲೆಂದು ತಲೆಬಾಗಿದರೆ, ‘ಹಲೋ’ ಅಂದರೆ ನನಗೆ ತುಂಬ ಖುಷಿಯಾಗುತ್ತಿತ್ತು.
ಬೆನ್ನೆಲುಬಾಗಿ ನಿಂತ ಗಂಡಂದಿರು
ಭಾನು: ನನ್ನ ಕೂದಲೆಲ್ಲ ಉದುರಿಹೋಗುವ ಮುಂಚೆ ನಾನೇ ಬೋಳಿಸಿಬಿಟ್ಟೆ. ಆಗ ನನ್ನ ಗಂಡ, “ನಿನ್ನ ತಲೆಬುರುಡೆ ಆಕಾರ ಎಷ್ಟು ಚೆನ್ನಾಗಿದೆ ಕಣೇ!” ಅಂತ ಹೇಳಿ ನನ್ನನ್ನು ನಗಿಸಿದರು.
ಸ್ಯಾಂಡ್ರ: ನಾವಿಬ್ಬರೂ ಕನ್ನಡಿ ಮುಂದೆ ನಿಂತು ನಮ್ಮ ಮುಖಗಳನ್ನು ನೋಡಿದೆವು. ಮುಂಚೆ ಅವರಿಗೆ ನನ್ನ ಮೇಲೆ ಇದ್ದಷ್ಟೇ ಪ್ರೀತಿ ಆಗಲೂ ಅವರ ಮುಖದಲ್ಲಿ ಕಾಣುತ್ತಿತ್ತು. ಸ್ವಲ್ಪವೂ ಬದಲಾವಣೆ ಇರಲಿಲ್ಲ.
ಸೋನಾಲಿ: ಬೇರೆಯವರ ಜೊತೆ ಮಾತಾಡುವಾಗೆಲ್ಲ ನನ್ನ ಯಜಮಾನರು “ನಮಗೆ ಕ್ಯಾನ್ಸರ್ ಇದೆ” ಎಂದೇ ಹೇಳುತ್ತಿದ್ದರು.
ಜೆನ್ನಿ: ನನ್ನ ಪತಿಯ ಪ್ರೀತಿ ಸ್ವಲ್ಪವೂ ಕಡಿಮೆಯಾಗಲಿಲ್ಲ. ಅಲ್ಲದೆ, ದೇವರ ಮೇಲೆ ಅವರಿಗಿದ್ದ ಭರವಸೆ ನನ್ನಲ್ಲಿ ಸದಾ ಧೈರ್ಯ ತುಂಬುತ್ತಿತ್ತು.
[ಪುಟ 29ರಲ್ಲಿರುವ ರೇಖಾಕೃತಿ/ಚಿತ್ರ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಕ್ಯಾನ್ಸರ್ ಕಣಗಳು ಸಾಧಾರಣ ಬೆಳವಣಿಗೆಯ ಆದೇಶಗಳನ್ನು ಮೀರುತ್ತಾ ಅನಿಯಂತ್ರಿತವಾಗಿ ವರ್ಧಿಸಿ ಇತರ ಅಂಗಾಂಶಗಳ ಮೇಲೂ ದಾಳಿಮಾಡುತ್ತವೆ
[ರೇಖಾಕೃತಿ]
ಆರೋಗ್ಯಕರ ಜೀವಕೋಶಗಳಿರುವ ಹಾಲಿನ ಕೊಳವೆ
ಮೂಲ ಸ್ಥಾನದಲ್ಲಿರುವ ಕ್ಯಾನ್ಸರ್
ಹರಡುತ್ತಿರುವ ಕ್ಯಾನ್ಸರ್
[ಪುಟ 30ರಲ್ಲಿರುವ ಚಿತ್ರ]
ಚಿಕಿತ್ಸೆಯ ಜೊತೆಗೆ ಬಂಧುಬಳಗದವರ ಪ್ರೀತಿ, ಬೆಂಬಲ ಕ್ಯಾನ್ಸರ್ ಪೀಡಿತರಿಗೆ ಜೀವಾಳ