ಫೈಬ್ರಮೈಆ್ಯಲ್ಜೀಯ ರೋಗವನ್ನು ಅರಿತುಕೊಂಡು ಅದನ್ನು ಸಹಿಸಿಕೊಳ್ಳುತ್ತ ಜೀವಿಸುವುದು
ನಿಮ್ಮ ಮೈಯೆಲ್ಲ ನೋಯುತ್ತದೆಯೆ? ವಿಪರೀತ ಆಯಾಸ ನಿಮಗಾಗುತ್ತದೆಯೆ? ಬೆಳಗ್ಗೆ ಎದ್ದೇಳುವಾಗ ಮೈಸೆಡೆತ ಮತ್ತು ತೀವ್ರಾಯಾಸ ನಿಮಗಿದೆಯೆ? ನಿಮ್ಮ ಜ್ಞಾಪಕಶಕ್ತಿಗೆ ಆಗಾಗ ತಡೆಯುಂಟಾಗುತ್ತದೆಯೆ? ಇವು ಫೈಬ್ರಮೈಆ್ಯಲ್ಜೀಯ ರೋಗ (ಫೈಬ್ರಮೈಆ್ಯಲ್ಜೀಯ ಸಿಂಡ್ರೋಮ್, ಎಫ್ಎಮ್ಎಸ್)ದ ಕೆಲವು ಸೂಚನೆಗಳು.
ಟೆಡ್a ಎಂಬವರು ಹೇಳುವುದು: “1989ರ ಆ ಬೆಳಗ್ಗೆ ನಾನು ಎದ್ದಾಗ, 45 ನಿಮಿಷ ಲಕ್ವಾ ಹೊಡೆದ ಸ್ಥಿತಿಯಲ್ಲಿದ್ದುದನ್ನು ನಾನು ಸದಾ ಜ್ಞಾಪಿಸಿಕೊಳ್ಳುತ್ತೇನೆ.” ಹೀಗೆ ಫೈಬ್ರಮೈಆ್ಯಲ್ಜೀಯದೊಂದಿಗೆ ಟೆಡ್ ಅವರ ಹೋರಾಟವು ಆರಂಭಗೊಂಡಿತು. ಫೈಬ್ರಮೈಆ್ಯಲ್ಜೀಯದ ಮೂಲಾರ್ಥವು, “ಸ್ನಾಯುರಜ್ಜು, ಅಸ್ಥಿರಜ್ಜು, ಮತ್ತು ಸ್ನಾಯುಗಳಲ್ಲಿನ ವೇದನೆ.”
ಪ್ರಾಯಶಃ ಒಬ್ಬ ಮಿತ್ರನಿಗೊ ಕುಟುಂಬ ಸದಸ್ಯನಿಗೊ ಎಫ್ಎಮ್ಎಸ್ ಇದೆ. ನೀವು ಹೇಗೆ ಸಹಾಯ ಮಾಡಬಲ್ಲಿರಿ? ಇಲ್ಲವೆ ನಿಮಗೆ ಇದು ಇರುವಲ್ಲಿ, ಏನು ಮಾಡಸಾಧ್ಯವಿದೆ? ಇದರ ಒಳ್ಳೆಯ ಮಾಹಿತಿಯು, ಈ ಸಮಸ್ಯೆಯನ್ನು ಅರಿತುಕೊಂಡು, ಅದನ್ನು ಸಹಿಸಿಕೊಳ್ಳುತ್ತಾ ಜೀವಿಸುವ ಸಂಬಂಧದಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಆದರೂ, ಈ ಮೇಲಿನ ರೋಗಸೂಚನೆಗಳಿರುವ ಎಲ್ಲರಿಗೂ ಈ ಎಫ್ಎಮ್ಎಸ್ ರೋಗವಿದೆಯೆಂದಲ್ಲ.
ಫೈಬ್ರಮೈಆ್ಯಲ್ಜೀಯದ ಅರ್ಥನಿರೂಪಿಸುವುದು
ಅಮೆರಿಕನ್ ಕಾಲೆಜ್ ಆಫ್ ರೂಮಟಾಲಜಿಗನುಸಾರ, “ಫೈಬ್ರಮೈಆ್ಯಲ್ಜೀಯದ ರೋಗನಿರ್ಣಯವು ಆ ವ್ಯಕ್ತಿಯ ಅಸ್ಥಿಗತ ವ್ಯಾಪಕ ವೇದನೆಯ ಚರಿತ್ರೆ ಮತ್ತು ವೈದ್ಯನು ದೇಹದ ನಿರ್ದಿಷ್ಟ ಸ್ಥಳಗಳಲ್ಲಿ ನೋಯುವ ಬಿಂದುಗಳನ್ನು ಕಂಡುಹಿಡಿಯುವುದರ ಮೇಲೆ ಆಧಾರಗೊಂಡಿದೆ.” ಇನ್ನು ಬೇರೆ ರೋಗಸೂಚನೆಗಳೂ ಇವೆ. ಇವುಗಳಲ್ಲಿ ಕೆಲವು ಕ್ರಾನಿಕ್ ಫಟೀಗ್ ಸಿಂಡ್ರೋಮ್ (ಸಿಎಫ್ಎಸ್)ಗೆ ಸಮಾನವಾಗಿವೆ.
ಹೌದು, ಎಫ್ಎಮ್ಎಸ್ ಇರುವ ಅನೇಕರಿಗೆ ಸಿಎಫ್ಎಸ್ ಹಾಗೂ ಬೇರೆ ಕಾಯಿಲೆಗಳಿರುತ್ತವೆ. ಎಫ್ಎಮ್ಎಸ್ ಕಷ್ಟಾನುಭವಿಗಳಲ್ಲಿ, ಖಿನ್ನತೆ ಮತ್ತು ವಿಪರೀತ ಕಳವಳವಿರುವುದು ಸಾಮಾನ್ಯ, ಮತ್ತು ಎಫ್ಎಮ್ಎಸ್ ಸಾಮಾನ್ಯವಾಗಿ ಈ ಸಮಸ್ಯೆಗಳ ಫಲಿತಾಂಶವಲ್ಲ, ಅವುಗಳ ಕಾರಣವಾಗಿದೆಯೆಂದು ತೋರಿಬರುತ್ತದೆ. ತೀರ ಹೆಚ್ಚು ಅಥವಾ ತೀರ ಕಡಿಮೆ ಶಾರೀರಿಕ ಕೆಲಸ, ಆಗಮಿಸುತ್ತಿರುವ ಶೀತಲ ಹವಾಮಾನ, ನಿದ್ರಾರಹಿತ ರಾತ್ರಿ ಅಥವಾ ಅಧಿಕ ಒತ್ತಡಗಳು ಎಫ್ಎಮ್ಎಸ್ ಅನ್ನು ಅಧಿಕಗೊಳಿಸಬಲ್ಲದು.
ತಂತೂತಕುರಿತ (ಫೈಬ್ರಸೈಟಿಸ್) ರೋಗದಂತಹ ವಿಭಿನ್ನ ಹೆಸರುಗಳಿಂದ ಈ ಹಿಂದೆ ಜ್ಞಾತವಾಗಿದ್ದ ಎಫ್ಎಮ್ಎಸ್, ಕುರೂಪಗೊಳಿಸುವ, ಕುಂಟುಮಾಡುವ ರೋಗವಾಗಿರುವುದೂ ಇಲ್ಲ, ಜೀವಕ್ಕೆ ಬೆದರಿಕೆಯನ್ನೊಡ್ಡುವ ರೋಗವೂ ಆಗಿರುವುದಿಲ್ಲ. ಎಫ್ಎಮ್ಎಸ್ ಆನುವಂಶಿಕವೆಂದು ನಿಶ್ಚಯವಾಗಿ ಹೇಳಸಾಧ್ಯವಿಲ್ಲವಾದರೂ, ಕೆಲವು ಕುಟುಂಬಗಳಲ್ಲಿ ಒಂದಕ್ಕೂ ಹೆಚ್ಚು ಮಂದಿ ಸದಸ್ಯರಲ್ಲಿ ಇದು ತೋರಿಬಂದಿದೆ. ಇದು ಲಕ್ಷಾಂತರ ಮಂದಿಯನ್ನು ಬಾಧಿಸಿ, ಎಲ್ಲ ವಯಸ್ಸಿನ ವಯಸ್ಕರಲ್ಲಿ—ಪುರುಷರಿಗಿಂತ ಹೆಚ್ಚು ಸ್ತ್ರೀಯರಲ್ಲಿ—ಕಂಡುಬರುತ್ತದೆ.
ಎಫ್ಎಮ್ಎಸ್ ರೋಗದ ಕಾರಣ
ಎಫ್ಎಮ್ಎಸ್ ರೋಗಕ್ಕೆ ಇದು ಕಾರಣವೆಂಬ ವಿಷಯದಲ್ಲಿ ಅನೇಕ ಊಹೆಗಳನ್ನು ಕೊಡಲಾಗಿದೆ. ಕಾರಣವು ವೈರಸ್ ವಿಷಾಣು ಆಗಿರಬಹುದು ಅಥವಾ ನಿದ್ರೆಯ ಮೇಲೆ ಪ್ರಭಾವ ಬೀರುವ ಸಿರಟೋನಿನ್ ನರವಾಹಕದ ಅಸಮತೆಯಾಗಿರಬಹುದು, ಮತ್ತು ದೇಹದ ಸ್ವಾಭಾವಿಕ ನೋವುಹೋರಾಟಗಾರರು ಎಂಡೋರ್ಫಿನ್ಗಳಂತಹ ರಸಾಯನಗಳ ಅಸಮತೆಯಾಗಿರಬಹುದು. ಈ ಊಹೆಗಳು ಮತ್ತು ಇತರ ಊಹೆಗಳ ವಿಷಯದಲ್ಲಿ ಸಂಶೋಧನೆ ಮುಂದುವರಿಯುತ್ತ ಇದೆ.
ಮೈಕ್ರೋಸ್ಕೋಪ್ನಲ್ಲಿ ನೋಡುವಾಗ, ಎಫ್ಎಮ್ಎಸ್ ಬಾಧಿತರ ಸ್ನಾಯುಗಳು ಆರೋಗ್ಯಕರವಾಗಿ ಕಾಣುತ್ತವೆ. ಆದರೆ ಕಣಗಳ ಶಕ್ತಿಉತ್ಪಾದಕ ಭಾಗಗಳು ಸ್ವಾಭಾವಿಕವಾಗಿ ಕೆಲಸಮಾಡದೆ ಇರಬಹುದು. ಇದಕ್ಕೆ ಕಾರಣ ಮತ್ತು ಚಿಕಿತ್ಸೆ ಇವೆರಡೂ ಅಜ್ಞಾತ. ಅನೇಕ ಸಂದರ್ಭಗಳಲ್ಲಿ ವ್ಯಕ್ತಿಯು ತನ್ನ ರೋಗಸೂಚನೆಗಳ ತೋರಿಬರುವಿಕೆಗೆ ಒಂದು ವಿಶೇಷ ಶಾರೀರಿಕ ಅಥವಾ ಭಾವಾತ್ಮಕ ಆಘಾತವು ಕಾರಣವೆಂದು ಹೇಳುವಾಗ, ಇತರರ ವಿಷಯದಲ್ಲಿ ಅದರ ತೋರಿಬರುವಿಕೆಯು ಹೆಚ್ಚು ಮಾರ್ಮಿಕವಾಗಿತ್ತು.
ಎಫ್ಎಮ್ಎಸ್ ರೋಗನಿರ್ಣಯದಲ್ಲಿರುವ ಸಮಸ್ಯೆಗಳು
ಅದರ ರೋಗಸೂಚನೆಗಳಲ್ಲಿ ಹೆಚ್ಚಿನವು ಬೇರೆ ಅನಾರೋಗ್ಯ ಸ್ಥಿತಿಗಳಲ್ಲಿಯೂ ಕಂಡುಬರುವುದರಿಂದ, ಕೆನಡದ ಡಾ. ಕಾರ್ಲ ಆಕ್ಲೀ ಹೇಳುವುದು: “ರೋಗಿಯು ಸಂಧಿನೋವುಳ್ಳವನಾಗಿ ಬರುವಾಗ, ಅವನಿಗೆ ಎಫ್ಎಮ್ಎಸ್ ಇದೆಯೊ ಎಂದು ನೋಡುವುದು ಯಾವಾಗಲೂ ಪ್ರಥಮ ಸಂಗತಿಯಾಗಿರುವುದಿಲ್ಲ. ಅನೇಕ ಬಾರಿ ಭೇಟಿಮಾಡಿದ ಬಳಿಕವೂ ಸಮಸ್ಯೆಗಳು ಇನ್ನೂ ಇರುವಲ್ಲಿ, ಆಗ ನಾವು ಹೆಚ್ಚು ಆಳವಾಗಿ ಪರೀಕ್ಷಿಸುತ್ತೇವೆ. ರೋಗನಿರ್ಣಯವು ಎಫ್ಎಮ್ಎಸ್ ಆಗಿರುವಾಗ, ನಾನು ದೃಢೀಕರಿಸಲಿಕ್ಕಾಗಿ ರೋಗಿಯನ್ನು ಸಾಮಾನ್ಯವಾಗಿ ಸಂಧಿವಾತ ನಿಪುಣನ ಬಳಿಗೆ ಕಳುಹಿಸುತ್ತೇನೆ.”
ಇತ್ತೀಚಿನ ವರೆಗೆ ಎಫ್ಎಮ್ಎಸ್ ರೋಗನಿರ್ಣಯ ಮಾಡುವ ಮಟ್ಟವೇ ಇರದಿದ್ದುದರಿಂದ, ಈ ಸಮಸ್ಯೆಯು ಆಂತರಿಕವಾಗಿತ್ತು; ಅಂದರೆ ರೋಗಿಗೆ ಮಾತ್ರ ಗ್ರಾಹ್ಯವಾಗಿತ್ತು. ಪರೀಕ್ಷಾ ಪರಿಣಾಮಗಳು ಯಥಾಸ್ಥಿತಿಯವುಗಳಾಗಿದ್ದವು. ಹೀಗೆ ಅನೇಕ ವೈದ್ಯರಿಗೆ ಇದು ಅಪರಿಚಿತವಾಗಿತ್ತು. ರೇಚೆಲ್ ಎಂಬ ಸ್ತ್ರೀ ಪ್ರಲಾಪಿಸಿದ್ದು: “ನನ್ನ ಎಫ್ಎಮ್ಎಸ್ ಸರಿಯಾಗಿ ರೋಗನಿರ್ಣಯಿಸಲ್ಪಡುವ ಮೊದಲು, ನಾನು 25 ವರ್ಷಕಾಲ ವಿವಿಧ ಡಾಕ್ಟರರ ಬಳಿಗೆ ಹೋಗಿ, ಸಾವಿರಾರು ಡಾಲರುಗಳನ್ನು ವ್ಯಯಿಸಿದೆ.”
ಹಾಗಾದರೆ, ನಿಮಗೆ ಫೈಬ್ರಮೈಆ್ಯಲ್ಜೀಯ ಇದೆಯೆಂದು ನೀವು ನೆನಸುವಲ್ಲಿ, ನಿಮಗೆ ಸಹಾಯವು ಎಲ್ಲಿ ದೊರೆಯಬಲ್ಲದು? ಸ್ನಾಯು ವೇದನೆ ಗುಣಹೊಂದದಿರುವಾಗ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಗೇಲ್ ಬ್ಯಾಕ್ಸ್ಟ್ರಾಮ್, ಆರ್ತ್ರೈಟಿಸ್ ಫೌಂಡೇಷನ್ ಸಂಸ್ಥೆಯ ಸ್ಥಳಿಕ ಆಫೀಸನ್ನು ಅಥವಾ ರೂಮಟಾಲಜಿಸ್ಟ್ ಡಾಕ್ಟರರನ್ನು ಸಂಪರ್ಕಿಸಬೇಕೆಂದು ಸೂಚಿಸುತ್ತಾರೆ.
ಚಿಕಿತ್ಸೆ
ಇದು ವರೆಗೆ ಎಫ್ಎಮ್ಎಸ್ಗಾಗಿ ಯಾವ ಸಂಪೂರ್ಣ ಚಿಕಿತ್ಸೆಯೂ ಕಂಡುಹಿಡಿಯಲ್ಪಟ್ಟಿರುವುದಿಲ್ಲ ಆದುದರಿಂದ, ಸಾಮಾನ್ಯವಾಗಿ ರೋಗಸೂಚನೆಗಳ ಮೇಲೆ ಚಿಕಿತ್ಸೆಯನ್ನು ಕೇಂದ್ರೀಕರಿಸಲಾಗುತ್ತದೆ. ಪ್ರಮುಖ ಅಂಶಗಳಲ್ಲಿ ಒಂದು, ವೇದನೆಯಾಗಿದೆ. ಇದು ಇತರ ರೋಗಸೂಚನೆಗಳಂತೆ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿದ್ದು, ಅದೇ ವ್ಯಕ್ತಿಯಲ್ಲಿಯೂ ದಿನೇದಿನೇ ಬದಲಾಗುತ್ತಿರುತ್ತದೆ.
ಸಮಸ್ಯೆಗೆ ಇನ್ನೂ ಹೆಚ್ಚಿಗೆ ಕೂಡಿಸುವ ವಿಷಯವೇನಂದರೆ, ವೇದನಹಾರಿ ಔಷಧ ಮತ್ತು ಕೆಲವು ಚಿಕಿತ್ಸಾವಿಧಾನಗಳು ಸಮಯ ಕಳೆದಂತೆ ಅವುಗಳ ಪರಿಣಾಮಕಾರಿತ್ವವನ್ನು ಕಳೆದುಕೊಳ್ಳುತ್ತವೆ. ಗೇಲ್ ಬ್ಯಾಕ್ಸ್ಟ್ರಾಮ್ ಸೂಚಿಸುವುದು: “ಅನೇಕ ವೇಳೆ, ಸ್ವಲ್ಪ ಸಮಯಾನಂತರ ಆ ಔಷಧವನ್ನು ಸೇವಿಸುವಲ್ಲಿ, ನೀವು ಇನ್ನೊಮ್ಮೆ ಸಕಾರಾತ್ಮಕ ಪರಿಣಾಮಗಳ ಸಮಯವನ್ನು ಅನುಭವಿಸುವಿರಿ.” ಹೌದು, ನಿಮ್ಮ ಡಾಕ್ಟರರನ್ನು ನೀವು ಮೊದಲು ವಿಚಾರಿಸಬೇಕೆಂಬುದು ನಿಶ್ಚಯ. ಅಡ್ಡಪರಿಣಾಮಗಳ ಅಥವಾ ಚಟ ಹಿಡಿಯುವ ಅಪಾಯವೂ ಇದರಲ್ಲಿದೆ. ಆದಕಾರಣ, “ತೀಕ್ಷ್ಣವಾದ ವೇದನಾ ಶಾಮಕಗಳನ್ನು ವರ್ಜಿಸಬೇಕು,” ಎಂದು ಅಮೆರಿಕನ್ ಕಾಲೆಜ್ ಆಫ್ ರೂಮಟಾಲೊಜಿ ಶಿಫಾರಸ್ಸು ಮಾಡುತ್ತದೆ.
ಎರಡನೆಯ ಪ್ರಧಾನಾಂಶವು, ವೇದನೆ ಮತ್ತು ಇತರ ಗೊಂದಲಗಳ ಕಾರಣ ಅತ್ಯಾವಶ್ಯಕ ನಿದ್ರೆಯ ಕೊರತೆಯೇ. ಮೆಲನೀ ಎಂಬವಳು ನೋವಿಗಾಗಿ ದೇಹದಿಂಬನ್ನು ಉಪಯೋಗಿಸಿ, ಬಾಹ್ಯಸದ್ದನ್ನು ನಿವಾರಿಸಲು ಆರ್ದ್ರಕ (ಹ್ಯೂಮಿಡಿಫೈಯರ್)ದ ಗುಂಯ್ಗುಟ್ಟುವ ಸದ್ದನ್ನು ಬಳಸುತ್ತಾಳೆ. ಬೇರೆ ಸಹಾಯಕಗಳಲ್ಲಿ ಕಿವಿ ಬಿರಡೆ (ಇಯರ್ಪ್ಲಗ್), ನೊರೆಮೆತ್ತೆ (ಫೋಮ್ಪ್ಯಾಡ್) ಅಥವಾ ಎಗ್ಕ್ರೇಟ್ ಆಕಾರದ ಹಾಸಿಗೆ ಸೇರಿವೆ.b ನಾರ್ತ್ ಕ್ಯಾರಲೈನದ ಡಾ. ಡ್ವೇನ್ ಏಅರ್ಸ್ ಹೇಳುವುದು: “ಅವರ ನಿದ್ರೆಯನ್ನು ಉತ್ತಮಗೊಳಿಸುವಂತೆ ಸಹಾಯಮಾಡಿದಾಗ, ನನ್ನ ರೋಗಿಗಳು ಬೇರೆ ಚಿಕಿತ್ಸೆಗಳಿಗೆ ಹೆಚ್ಚು ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ.”
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಆರ್ತ್ರೈಟಿಸ್ ಆ್ಯಂಡ್ ಮಸ್ಕ್ಯುಲೋಸ್ಕೆಲೆಟಲ್ ಆ್ಯಂಡ್ ಸ್ಕಿನ್ ಡಿಸೀಸಸ್ ಸಂಸ್ಥೆಗನುಸಾರ, “ಫೈಬ್ರಮೈಆ್ಯಲ್ಜೀಯ ರೋಗಿಗಳು, ವ್ಯಾಯಾಮ, ಔಷಧ, ಫಿಸಿಕಲ್ ತೆರಪಿ ಮತ್ತು ವಿಶ್ರಾಂತಿ—ಇವುಗಳ ಸಂಯೋಜನೆಯಿಂದ ಪ್ರಯೋಜನ ಪಡೆಯಬಹುದು.” ಬೇರೆ ಚಿಕಿತ್ಸೆಗಳಲ್ಲಿ ಅಂಗಮರ್ದನ ಚಿಕಿತ್ಸೆ, ಒತ್ತಡ ನಿರ್ವಹಣೆ ಮತ್ತು ಚಾಚು ವ್ಯಾಯಾಮಗಳು ಒಳಗೊಳ್ಳಬಹುದು. ಆದರೂ, ಸತತವಾಗಿ ನೋವು ಮತ್ತು ಆಯಾಸವನ್ನು ಅನುಭವಿಸುತ್ತಿರುವವನಿಗೆ, ವ್ಯಾಯಾಮ ಅಸಾಧ್ಯವೆಂದು ಕಂಡುಬಂದೀತು. ಆದಕಾರಣ, ಅತಿ ನಿಧಾನವಾಗಿ ಇದನ್ನು ಆರಂಭಿಸುವಂತೆ ಕೆಲವರು ಶಿಫಾರಸ್ಸುಮಾಡುತ್ತಾರೆ. ಮತ್ತು ಯಾವುದೇ ವ್ಯಾಯಾಮ ಕಾರ್ಯಕ್ರಮವನ್ನು ಪ್ರಾರಂಭಿಸುವ ಮುನ್ನ, ನಿಮ್ಮ ಡಾಕ್ಟರರನ್ನು ವಿಚಾರಿಸಲು ನಿಶ್ಚಯಿಸಿಕೊಳ್ಳಿರಿ.
ಜುಲೈ 1997ರ ಸಂಚಿಕೆಯಲ್ಲಿ, ಪೈಬ್ರಮೈಆ್ಯಲ್ಜೀಯ ನೆಟ್ವರ್ಕ್ ವಾರ್ತಾಪತ್ರ, ಆರೆಗನ್ನ ಪೋರ್ಟ್ಲೆಂಡ್ನಲ್ಲಿರುವ ವ್ಯಾಯಾಮ ಶರೀರಶಾಸ್ತ್ರಜ್ಞೆ, ಶ್ಯಾರನ್ ಕ್ಲಾರ್ಕ್ ಎಂಬವರು ಈ ರೀತಿಯಲ್ಲಿ ಹೇಳಿದರೆಂದು ಉಲ್ಲೇಖಿಸಿತು. ನಿಮಗೆ 20 ಅಥವಾ 30 ನಿಮಿಷಗಳ ವ್ಯಾಯಾಮ ಮಾಡುವುದು ಅಸಾಧ್ಯವಾದರೆ, “ನೀವು ದಿನಕ್ಕೆ 5-ನಿಮಿಷಗಳ ನಡಿಗೆಯನ್ನು ಆರು ಬಾರಿ ಮಾಡುವಲ್ಲಿ ಅದು ಪ್ರಯೋಜನಕರವಾದ ಫಲಗಳನ್ನು ಉಂಟುಮಾಡುವುದು.” ಸೀಮಿತವಾದ ಏರೋಬಿಕ್ ರೀತಿಯ ವ್ಯಾಯಾಮವು ಎಂಡೋರ್ಫಿನ್ಗಳ ಉತ್ಪಾದನೆಯನ್ನು ಹೆಚ್ಚಿಸಿ, ನಿದ್ರೆಯನ್ನು ಉತ್ತಮಗೊಳಿಸಿ, ದೇಹ ಮತ್ತು ಸ್ನಾಯುಗಳನ್ನು ಆಮ್ಲಜನಕದಿಂದ ಸಂಸ್ಕರಿಸುತ್ತದೆ.
ಆದರೂ ಜನರು ವಿಭಿನ್ನರಾಗಿದ್ದು, ಎಫ್ಎಮ್ಎಸ್ನ ವಿವಿಧ ಹಂತಗಳಲ್ಲಿರುವವರಾಗಿರಬಹುದು. ಇಲೇನ್ ಹೇಳುವುದು: “ನನ್ನ ಮನೆಯ ಖಾಸಗಿ ಹಾದಿಯಲ್ಲಿ ಒಮ್ಮೆ ನಡೆದು ಬರುವುದೇ ನನಗೆ ಮಹಾ ಸಾಧನೆಯಾಗಿರುವಾಗ, ಎಫ್ಎಮ್ಎಸ್ ಇರುವ ನನ್ನ ಆಪ್ತ ಸ್ನೇಹಿತೆ ಒಂದು ಮೈಲು ನಡೆಯುತ್ತಾಳೆ.” “ಪ್ರಯಾಸ ಪಡದಿದ್ದರೆ, ಪ್ರಯೋಜನವೂ ಸಿಗುವುದಿಲ್ಲ” ಎಂಬ ಸಂಗತಿ ಇದಕ್ಕೆ ಅನ್ವಯಿಸುವುದಿಲ್ಲ. ಬದಲಿಗೆ “ಪ್ರಯತ್ನವನ್ನು ಬಿಡದಿರು” ಎಂಬ ಸ್ಥಿತಿ ಇದಾಗಿದೆ. ಸಿಎಫ್ಎಸ್ ಮತ್ತು ಎಫ್ಎಮ್ಎಸ್ ಎರಡೂ ಇರುವ ಟೆಡ್ ಹೇಳುವುದು: “ಮೊದಮೊದಲು ನನಗೆ ನನ್ನ ವ್ಯಾಯಾಮದ ಸೈಕಲನ್ನು ವಾರಕ್ಕೆ ಒಂದಾವರ್ತಿ ಎರಡೋ ಮೂರೋ ನಿಮಿಷ ಬಳಸಸಾಧ್ಯವಾಗುತ್ತಿತ್ತು. ಆದರೆ ಈಗ ವಾರಕ್ಕೆ ಮೂರೋ ನಾಲ್ಕೋ ಬಾರಿ, 20 ನಿಮಿಷಗಳಿಗೂ ಹೆಚ್ಚು ಸಮಯ ವ್ಯಾಯಾಮ ಮಾಡುತ್ತೇನೆ. ಆದರೆ ಇದಕ್ಕೆ ನಾಲ್ಕಕ್ಕೂ ಹೆಚ್ಚು ವರ್ಷಕಾಲ ಹಿಡಿಯಿತು.”
ಎಕ್ಯುಪಂಕ್ಚರ್, ಕೈರೊಪ್ರ್ಯಾಕ್ಟಿಕ್ ಮತ್ತು ಇತರ ರೀತಿಯ ಅನ್ಯ ಚಿಕಿತ್ಸೆಗಳು ಅಥವಾ ಮೂಲಿಕೆ ಅಥವಾ ಇತರ ಪಥ್ಯ ಸಂಪೂರಕಗಳು ಉಪಯುಕ್ತವೊ ಎಂಬ ಪ್ರಶ್ನೆ ಎದ್ದಿದೆ. ಈ ಮೇಲಿನವುಗಳಲ್ಲಿ ಕೆಲವನ್ನು ಉಪಯೋಗಿಸಿ ತಮ್ಮ ಆರೋಗ್ಯ ಸುಧಾರಿಸಿದೆಯೆಂದು ಕೆಲವರು ಪ್ರತಿಪಾದಿಸುತ್ತಾರಾದರೂ, ಇತರರು ಹಾಗೆ ಪ್ರತಿಪಾದಿಸುವುದಿಲ್ಲ. ಸಂಶೋಧಕರು ಇವುಗಳಲ್ಲಿ ಅನೇಕ ಚಿಕಿತ್ಸೆಗಳನ್ನು ಸಂಶೋಧಿಸುತ್ತಿದ್ದಾರಾದರೂ, ಪರಿಣಾಮಗಳು ಇನ್ನೂ ಅನಿರ್ಧಾರಿತವಾಗಿವೆ.
ಹಲವು ಬಾರಿ ಔಷಧಗಳು ಹಸಿವಿನ ಕಟ್ಟಾಸೆಯನ್ನು ಉಂಟುಮಾಡುತ್ತವೆ ಇಲ್ಲವೆ, ತಿನ್ನುವುದೇ ಕಳವಳವನ್ನು ನಿಭಾಯಿಸುವ ವಿಧವಾಗಿ ಬಿಡುತ್ತದೆ. ಆದರೆ ಹೆಚ್ಚು ತೂಕವು ಸ್ನಾಯುಗಳ ಮೇಲೆ ಹೆಚ್ಚು ಒತ್ತಡವನ್ನು ಹಾಕುವುದರಿಂದ, ಇದು ಹೆಚ್ಚು ನೋವನ್ನು ಉಂಟುಮಾಡುತ್ತದೆ. ಆದಕಾರಣ, ಕೆಲವು ಸಂದರ್ಭಗಳಲ್ಲಿ, ಕೆಲವು ಕಿಲೊಗ್ರಾಮ್ಗಳಷ್ಟು ತೂಕವನ್ನು ಕಡಮೆಮಾಡಬೇಕೆಂದು ಡಾಕ್ಟರರು ಶಿಫಾರಸ್ಸು ಮಾಡುವರು.
ಎಫ್ಎಮ್ಎಸ್ ಇರುವುದಾಗಿ ರೋಗನಿರ್ಣಯ ಮಾಡಲ್ಪಟ್ಟಾಗ, ಅದು ವಿಪರೀತ ಗಾಬರಿ ಮತ್ತು ಕೋಪವನ್ನು ಉಂಟುಮಾಡಬಹುದು. ಆದರೂ, ಯಾರಿಗೂ ಹಾನಿಯಾಗದಂತೆ ಇಂತಹ ಸಾಮಾನ್ಯ ಅನಿಸಿಕೆಗಳನ್ನು ನಿಭಾಯಿಸುವ ಸುರಕ್ಷಿತವಾದ ವಿಧಗಳಿವೆ. ದುಃಖಿಸುವುದು ಇನ್ನೊಂದು ಸಾಮಾನ್ಯವಾದ ಪ್ರತಿಕ್ರಿಯೆಯಾಗಿದೆ. ನಮ್ಮ ಆರೋಗ್ಯದಷ್ಟು ಪ್ರಿಯವಾದ ವಿಷಯವು ನಷ್ಟವಾಗುವಾಗ ದುಃಖಿಸುವುದು ಸ್ವಾಭಾವಿಕವೇ.
ನಿಮ್ಮ ಕೆಲಸವನ್ನು ಅದು ಪ್ರಭಾವಿಸುವಾಗ
ಎಫ್ಎಮ್ಎಸ್ ಬಾಧಿತರು ಕೆಲಸದಲ್ಲಿ ಸಮಸ್ಯೆಗಳನ್ನು ಅನುಭವಿಸಬಹುದು. ಲೀ ವರ್ಷಗಟ್ಟಲೆ ಕೆಲಸ ಮಾಡಿರುವುದಾದರೂ, ಆಕೆಯ ಆರೋಗ್ಯದ ಕಾರಣ ಆಕೆಗೆ ಕೆಲಸಮಾಡುವುದು ಹೆಚ್ಚು ಕಷ್ಟಕರವಾಗಿ ಪರಿಣಮಿಸಿತು. ತನ್ನ ಧಣಿಯೊಂದಿಗೆ ಮಾತಾಡಿದ ತರುವಾಯ, ಆಕೆಗೆ ಅದೇ ಕಂಪನಿಯಲ್ಲಿ ಒಪ್ಪತ್ತಿನ ಕೆಲಸವನ್ನು ಪಡೆದುಕೊಳ್ಳಲು ಸಾಧ್ಯವಾದ ಕಾರಣ, ಆಕೆಯ ಮೇಲಿನ ಒತ್ತಡವು ಕಡಮೆಯಾಯಿತು. ಅಲ್ಲದೆ, ಆಕೆಗೆ ಬೆರಗಾಗುವಂತೆ, ತಾಸಿನ ಲೆಕ್ಕದಲ್ಲಿ ಆಕೆಯ ಸಂಬಳದಲ್ಲಿ ಬಡತಿಯಾಯಿತು.
ಕೆಲಸದಲ್ಲಿ ತೊಡಗಿಸುವ (ಆಕ್ಯುಪೇಷನಲ್) ಚಿಕಿತ್ಸಕನು ಅಥವಾ ದೈಹಿಕ (ಫಿಸಿಕಲ್) ಚಿಕಿತ್ಸಕನು, ನಿಮ್ಮ ದೇಹದ ಮೇಲೆ ಕಡಮೆ ಒತ್ತಡವನ್ನು ಹಾಕಿ, ನಿಮ್ಮ ಕೆಲಸವನ್ನು ಮಾಡುವ ವಿಧಗಳನ್ನು ಕಂಡುಹಿಡಿಯಲು ಸಹಾಯಮಾಡಬಲ್ಲನು. ಮೇಜಿನ ಮೇಲೆ ಮಾಡುವ ಕೆಲಸಕ್ಕೆ ಕೈಗಳಿರುವ ಕುರ್ಚಿಯನ್ನು ಉಪಯೋಗಿಸುವುದು ಸಹಾಯಕರವೆಂದು ಲೀಸ ಕಂಡುಕೊಂಡಳು. ಈವಾನ್ನ ವಿಷಯದಲ್ಲಿ, ಆಕೆ ಪ್ರತ್ಯೇಕ ಕುರ್ಚಿಯನ್ನು ಮಾತ್ರವಲ್ಲ, ಇನ್ನೊಂದು ಮೇಜನ್ನೂ ಪಡೆದುಕೊಳ್ಳುವಂತೆ ಶಿಫಾರಸ್ಸು ಮಾಡಲಾಯಿತು. ಆದರೆ ಕೆಲಸದ ಬದಲಾವಣೆಯು ಅಗತ್ಯವಾದಾಗ, ನಿಮಗೆ ನೆರವು ನೀಡಬಲ್ಲ ಆಯೋಗಗಳೂ ಇವೆ.
ನೀವು ಸಹಾಯಮಾಡಬಲ್ಲ ವಿಧ
ಕುಟುಂಬದಲ್ಲಿ ಪ್ರತಿಯೊಬ್ಬರೂ, ಚಿಕ್ಕವರು ಕೂಡ, ಎಫ್ಎಮ್ಎಸ್ ಕುರಿತು ತಿಳಿವಳಿಕೆ ಪಡೆದುಕೊಂಡು, ಹೀಗೆ, ಎಫ್ಎಮ್ಎಸ್ ಬಾಧಿತರು ಆರೋಗ್ಯವುಳ್ಳವರಾಗಿ ಕಂಡುಬಂದರೂ, ಅವರಿಗೆ ನೋವು, ದಣಿವುಗಳನ್ನು ಉಂಟುಮಾಡುವ ಅಸ್ಥಿಗತ ಕಾಯಿಲೆಯಿದೆಯೆಂಬುದನ್ನು ಅರ್ಥಮಾಡಿಕೊಳ್ಳಬಹುದು. ಉತ್ತಮ ಮಾತುಕತೆ ಸಹ ಮಹತ್ವದ್ದು. ಜೆನೀ ಹೇಳುವುದು: “ಪ್ರತಿಯೊಬ್ಬರು ಹೇಗೆ ಸಹಾಯಮಾಡಬಲ್ಲರೆಂಬ ಕುರಿತು ನಮಗೆ ಆಗಾಗ ಕುಟುಂಬ ಚರ್ಚೆಗಳಿರುತ್ತವೆ. ಎಫ್ಎಮ್ಎಸ್ನೊಂದಿಗೆ ಯಶಸ್ವಿಕರವಾಗಿ ಜೀವಿಸುವ ವಿಷಯದಲ್ಲಿನ ಒಂದು ಪ್ರಮುಖ ಅಂಶವು, ಕೆಲಸಗಳನ್ನು ಮಾಡಿ ಮುಗಿಸುತ್ತ ಇರುವಾಗ, ಶಕ್ತಿಯನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಕಲಿಯುವುದೇ ಆಗಿದೆ. ಇದಕ್ಕೆ ತುಸು ಕಲ್ಪನಾಶಕ್ತಿ ಹಾಗೂ ಇತರರಿಂದ ಸಹಕಾರ ಬೇಕಾದೀತು. ಇಲ್ಲಿ ಸಹ, ಕೆಲಸದಲ್ಲಿ ತೊಡಗಿಸುವ ಚಿಕಿತ್ಸಕನು ಸಹಾಯನೀಡಶಕ್ತನಾದಾನು.
ಎಫ್ಎಮ್ಎಸ್ ಇರುವ ನಿಮ್ಮ ಸ್ನೇಹಿತನನ್ನು ಟೀಕಿಸದೆ, ಅವನಿಗೆ “ಕಿವಿಗೊಡುವ” ಮೂಲಕ ನೀವು ಸಹಾಯಮಾಡಬಲ್ಲಿರಿ. ನಿಮ್ಮ ಸಂಭಾಷಣೆಗಳನ್ನು ಸಕಾರಾತ್ಮಕ ಮಟ್ಟದಲ್ಲಿ, ಇಡೀ ಸಂಭಾಷಣೆಯಲ್ಲಿ ಫೈಬ್ರಮೈಆ್ಯಲ್ಜೀಯವೇ ಪ್ರಧಾನವಾಗಿರದ ಮಟ್ಟದಲ್ಲಿ ಇಟ್ಟುಕೊಳ್ಳಿ. ಏನು ಹೇಳಬೇಕು, ಏನು ಹೇಳಬಾರದು? ಸಲಹೆ ಸೂಚನೆಗಳಿಗಾಗಿ, 23ನೆಯ ಪುಟದ ರೇಖಾಚೌಕವನ್ನು ನೋಡಿರಿ. ನಿಮಗೆ ಎಫ್ಎಮ್ಎಸ್ ಇರುವಲ್ಲಿ, ಒಂದೇ “ಕಿವಿ” ಆಲಿಸಿ, ಆಲಿಸಿ ಸವೆದುಹೋಗದಂತೆ ಒಂದಕ್ಕಿಂತ ಹೆಚ್ಚು “ಆಲಿಸುವ ಕಿವಿ” ಉಳ್ಳವರಾಗಿರಲು ಪ್ರಯತ್ನಿಸಿರಿ. ಮತ್ತು ನಿಮ್ಮ ಎಫ್ಎಮ್ಎಸ್ ಕುರಿತು ಸದಾ ಕೇಳಿಸಿಕೊಳ್ಳಲು ಎಲ್ಲರೂ ಇಷ್ಟಪಡಲಿಕ್ಕಿಲ್ಲ ಎಂಬುದು ನೆನಪಿನಲ್ಲಿರಲಿ.
ಬದಲಾವಣೆಗಳಿಗೆ ಹೊಂದಿಕೊಳ್ಳುವುದು
ಕೆಲವು ಸಂದರ್ಭಗಳಲ್ಲಿ, ಬದಲಾವಣೆಗಳು—ವಿಶೇಷವಾಗಿ ಬಲವಂತವಾಗಿ ಬರುವ ಬದಲಾವಣೆಗಳು—ಬರುವಾಗ ನಮಗೆ ಸಿಡಿಮಿಡಿಗೊಳ್ಳುವ ಪ್ರವೃತ್ತಿಯಿರುತ್ತದೆ. ಆದರೆ, ಸುಮಾರು ನೂರು ಮಂದಿ ಎಫ್ಎಮ್ಎಸ್ ಬಾಧಿತರಿಗೆ ಸಹಾಯಮಾಡಿರುವ ಒಬ್ಬ ದೈಹಿಕ ಚಿಕಿತ್ಸಕನು ಹೇಳುವುದು: “ತಮ್ಮ ಸನ್ನಿವೇಶವನ್ನು ಒಪ್ಪಿಕೊಳ್ಳುವ ಆವಶ್ಯಕತೆಯನ್ನು ಅವರು ಅರ್ಥಮಾಡಿಕೊಳ್ಳುವಂತೆ ನಾನು ಪ್ರಯತ್ನಿಸುತ್ತೇನೆ. ತಾತ್ಕಾಲಿಕ ವೈಫಲ್ಯ ಅಥವಾ ಕೆರಳುವಿಕೆಗಳಿಂದ ನಿರುತ್ತೇಜಿತರಾಗದೆ, ಅವರು ತಮ್ಮ ಜೀವಿತಗಳಲ್ಲಿ ಕೆಲವು ಬದಲಾವಣೆಗಳನ್ನೂ ಮಾಡುವುದು ಅಗತ್ಯ. ಸ್ವನಿರ್ವಹಣೆ, ಜ್ಞಾನ, ಗ್ರಹಿಕೆ ಮತ್ತು ವ್ಯಾಯಾಮದ ಮೂಲಕ, ಅವರು ತಮ್ಮ ಎಫ್ಎಮ್ಎಸ್ಅನ್ನು—ಅದು ಅವರನ್ನು ನಿಯಂತ್ರಿಸುವಂತೆ ಬಿಡುವ ಬದಲು—ನಿಯಂತ್ರಿಸಬಲ್ಲರು.”
“ಹೆಚ್ಚು ಸೌಖ್ಯವಿರುವ ದಿನಗಳಲ್ಲಿ ಹೆಚ್ಚು ಕೆಲಸಮಾಡುವ ಪ್ರವೃತ್ತಿ ನಮಗಿರುತ್ತದಾದರೂ, ಉಳಿದ ಇಡೀ ವಾರವನ್ನು ಹಾಸಿಗೆಯಲ್ಲಿ ಕಳೆಯುವ ಬದಲು, ನಿಮ್ಮ ಶಕ್ತಿಯನ್ನು ನಾಳೆಗಾಗಿ ಶೇಖರಿಸಿಡುವುದು ವಿವೇಕಪ್ರದ”ವೆಂದು ಎಫ್ಎಮ್ಎಸ್ ಇರುವ ಡೇವ್ ಹೇಳುತ್ತಾರೆ. ಆದರೂ ಕೆಲವೊಮ್ಮೆ, ಒಂದು ಸಂದರ್ಭದಲ್ಲಿ ಅಥವಾ ಸಾಮಾಜಿಕ ಗೋಷ್ಠಿಯಲ್ಲಿ ನಿಮ್ಮ ಹಾಜರಿಯು, ನಿಮಗೆ ಅನಂತರ ಬರಬಹುದಾದ ಕಷ್ಟಾನುಭವಕ್ಕಿಂತ ಲೇಸು ಎಂದು ನಿಮಗನಿಸಬಹುದು. ನಿಮ್ಮ ಎಫ್ಎಮ್ಎಸ್ ಅನ್ನು, ವಿಶೇಷವಾಗಿ ನಿಮ್ಮ ವಿಷಯದಲ್ಲಿ ನಿಜವಾಗಿಯೂ ಚಿಂತಿಸುವವರಿಂದ ಅಡಗಿಸಿಡುವುದು ಸದಾ ವಿವೇಕಪ್ರದವಲ್ಲ. ಮತ್ತು ಹಾಸ್ಯ ಪ್ರಜ್ಞೆಯೂ ಉಳ್ಳವರಾಗಿರಿ. ಆ್ಯಂಡ್ರೆ ಹೇಳುವುದು: “ಚೆನ್ನಾಗಿ ನಗಾಡಿದ ಮೇಲೆ ಅಥವಾ ಉತ್ತಮವಾದ ಹಾಸ್ಯ ಚಿತ್ರವನ್ನು ನೋಡಿಯಾದ ಮೇಲೆ ಸಾಮಾನ್ಯವಾಗಿ ಒಳ್ಳೆಯ ನಿದ್ರೆ ಬರುತ್ತದೆಂದು ನಾನು ಕಂಡುಕೊಳ್ಳುತ್ತೇನೆ.”
ಇದೂ ನೆನಪಿರಲಿ, ಏನಂದರೆ ಯೆಹೋವನು ನಿಮ್ಮ ಕೆಲಸದ ಮಟ್ಟವನ್ನು ಇತರರ ಕೆಲಸದ ಮಟ್ಟದೊಂದಿಗೆ ಹೋಲಿಸದೆ, ನೀವು ತೋರಿಸುವ ನಂಬಿಕೆ ಮತ್ತು ಆಳವಾದ ಪ್ರೀತಿಯನ್ನು ಗಣ್ಯಮಾಡುತ್ತಾನೆ. (ಮಾರ್ಕ 12:41-44) ನಿಮ್ಮ ಮಿತಿಗನುಸಾರ ಜೀವಿಸುವುದೇ ಪ್ರಾಮುಖ್ಯ ವಿಷಯವಾಗಿದೆ. ಮಿತಿಮೀರಿ ದೇಹರಕ್ಷಿಸುವವರೂ ಆಗಿರಬಾರದು, ಮಿತಿಮೀರಿದ ಸಾಹಸಿಗಳೂ ಆಗಿರಬಾರದು. ನಿಮ್ಮಿಂದಾಗುವಷ್ಟನ್ನು ಮಾಡಲು ಬೇಕಾದ ವಿವೇಕ ಮತ್ತು ಶಕ್ತಿಗಾಗಿ ಯೆಹೋವ ದೇವರ ಮೇಲೆ ಆತುಕೊಳ್ಳಿರಿ. (2 ಕೊರಿಂಥ 4:16) ಮತ್ತು ಈ ಭೂಮಿಯೊಂದು ಪ್ರಮೋದವನವಾಗುವ ಸಮಯವನ್ನು, “ಯಾವ ನಿವಾಸಿಯೂ ತಾನು ಅಸ್ವಸ್ಥನು” ಎಂದು ಹೇಳದಿರುವ ಸಮಯವನ್ನು ನೆನಪಿನಲ್ಲಿಟ್ಟುಕೊಳ್ಳಿರಿ. (ಯೆಶಾಯ 33:24) ಹೌದು, ಒಂದು ದಿನ ನೀವು ಪುನಃ ಆರೋಗ್ಯವಂತರಾಗಿರುವಿರಿ!
[ಅಧ್ಯಯನ ಪ್ರಶ್ನೆಗಳು]
a ಹೆಸರುಗಳಲ್ಲಿ ಕೆಲವನ್ನು ಬದಲಾಯಿಸಲಾಗಿದೆ.
b ಎಚ್ಚರ! ಪತ್ರಿಕೆಯು, ಯಾವುದೇ ಪ್ರತ್ಯೇಕ ರೀತಿಯ ನಿದ್ರೆ ಬರಿಸುವ ಸಹಾಯಕವನ್ನು ಇಲ್ಲವೆ ಎಫ್ಎಮ್ಎಸ್ಗಾಗಿ ಯಾವುದೇ ನಿರ್ದಿಷ್ಟ ರೀತಿಯ ಚಿಕಿತ್ಸೆಯನ್ನು ಶಿಫಾರಸ್ಸು ಮಾಡುವುದಿಲ್ಲ.
[ಪುಟ 21 ರಲ್ಲಿರುವ ಚೌಕ]
ಬೈಬಲಿನಿಂದ ಸಾಂತ್ವನ
• ಅಂತಃಕರಣದಲ್ಲಿ ನಜ್ಜುಗುಜ್ಜಾಗಿರುವವರನ್ನು ಯೆಹೋವನು ರಕ್ಷಿಸುತ್ತಾನೆ.—ಕೀರ್ತನೆ 34:18.
• ಯೆಹೋವನು ನಿಮ್ಮನ್ನು ಉದ್ಧಾರಮಾಡುವನು.—ಕೀರ್ತನೆ 41:3.
• ನಿಮ್ಮ ಎಲ್ಲ ಚಿಂತೆಗಳನ್ನು ಯೆಹೋವನ ಮೇಲೆ ಹಾಕಿರಿ; ಆತನು ನಿಮಗೋಸ್ಕರ ಚಿಂತಿಸುತ್ತಾನೆ.—ಕೀರ್ತನೆ 55:22; 1 ಪೇತ್ರ 5:7.
• ಯೆಹೋವನನ್ನು ಸೇವಿಸುವ ನಿಮ್ಮ ಪೂರ್ಣಹೃದಯದ ಪ್ರಯತ್ನಗಳನ್ನು—ಆ ಸೇವೆ ಎಷ್ಟೇ ಸೀಮಿತದ್ದಾಗಿರಲಿ—ಆತನು ಮೆಚ್ಚುತ್ತಾನೆ. —ಮತ್ತಾಯ 13:8; ಗಲಾತ್ಯ 6:4; ಕೊಲೊಸ್ಸೆ 3:23, 24.
• ನಾವು ಧೈರ್ಯಗೆಡುವುದಿಲ್ಲ.—2 ಕೊರಿಂಥ 4:16-18.
[ಪುಟ 22 ರಲ್ಲಿರುವ ಚೌಕ]
ಹೇಳಬೇಕಾದದ್ದು
• ನಿಮ್ಮನ್ನು ನೋಡಲು ಸಂತೋಷವಾಗುತ್ತದೆ.
• ಇಲ್ಲಿಗೆ ಬಂದು ಸೇರಲು ನೀವು ತುಂಬ ಪ್ರಯಾಸಪಟ್ಟಿರಬೇಕು.
• ನಿಮ್ಮ ಸಹಾಯಕ್ಕಾಗಿ ನಾನಿದ್ದೇನೆ. ನಿಮ್ಮ ವಿಷಯವಾಗಿ ಚಿಂತಿಸುತ್ತೇನೆ.
• ನೀವು ಏನನ್ನು ಮಾಡಲು ಶಕ್ತರಾಗಿದ್ದೀರೊ, ಅದನ್ನು ನಾನು ಗಣ್ಯ ಮಾಡುತ್ತೇನೆ.
ಹೇಳಬಾರದ ಮಾತುಗಳು
• ನೀವು ಪಡುತ್ತಿರುವ ಕಷ್ಟವನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ.
• ನೀವು ಆರೋಗ್ಯವಂತರಾಗಿ ಕಾಣುತ್ತೀರಿ. ನಿಮಗೆ ಕಾಯಿಲೆ ಹೇಗಿರಸಾಧ್ಯ?
• ನಿಮಗೆ ಏನಾದರೂ ಬೇಕಾಗಿರುವಲ್ಲಿ ನನ್ನನ್ನು ಕರೆಯಿರಿ.
[ಪುಟ 20ರಲ್ಲಿರುವಚಿತ್ರ]
(For fully formatted text, see publication)
ಈ ಕಪ್ಪು ಚುಕ್ಕೆಗಳು ಫೈಬ್ರಮೈಆ್ಯಲ್ಜೀಯ ರೋಗನಿರ್ಣಯವನ್ನು ಮಾಡುವಾಗ ಹುಡುಕುವ ನೋವಿನ ಬಿಂದುಗಳಲ್ಲಿ ಕೆಲವಾಗಿವೆ
[ಪುಟ 23 ರಲ್ಲಿರುವ ಚಿತ್ರ]
ಉತ್ತಮ ಮಾತುಕತೆ ಮತ್ತು ಕುಟುಂಬ ಚರ್ಚೆಗಳು ಅತ್ಯಾವಶ್ಯಕ