ದೈತ್ಯ ಲೆದರ್ಬ್ಯಾಕ್ ಆಮೆಗಳ ವಾರ್ಷಿಕ ಭೇಟಿ
ಮಲೇಷಿಯದಲ್ಲಿರುವ ಎಚ್ಚರ! ಸುದ್ದಿಗಾರರಿಂದ
ಬಹುಮಟ್ಟಿಗೆ ಮಧ್ಯರಾತ್ರಿ. ಆಕಾಶದಲ್ಲಿರುವ ಪೂರ್ಣ ಚಂದ್ರನು ತನ್ನ ಸುವರ್ಣ ಕಾಂತಿಯನ್ನು ಶಾಂತಿಭರಿತ ಹಾಗೂ ನಿಶ್ಶಬ್ದ ಸಮುದ್ರದ ಉದ್ದಕ್ಕೂ ಚೆಲ್ಲುತ್ತಾನೆ. ರಾನ್ಟಾವು ಆಬಂಗ್ನಲ್ಲಿನ ಕಡಲತೀರದ ಮೇಲೆ ಕೆಲವರು ನಿಂತಿರುವ, ಇತರರು ತಣ್ಣಗಿರುವ ನಯವಾದ ಮರಳಿನ ಮೇಲೆ ಕುಳಿತುಕೊಂಡಿರುವ ಜನರ ಗುಂಪುಗಳಿವೆ. ಈ ಸಮಯದಲ್ಲಿ ಅವರು ಇಲ್ಲೇನು ಮಾಡುತ್ತಿದ್ದಾರೆ? ನಾಲ್ಕು ಈಜುವ ಅಂಗಗಳೊಂದಿಗೆ ಸಜ್ಜಿತವಾಗಿರುವ ದೊಡ್ಡದಾದ ಚಿಪ್ಪಿನ—ದೈತ್ಯ ತೊಗಲಿನಂತಿರುವ ಆಮೆಯ, ಯಾ ಲೆದರ್ಬ್ಯಾಕ್ನ—ಸಂದರ್ಶನಕ್ಕಾಗಿ ಅವರು ತಾಳ್ಮೆಯಿಂದ ಕಾಯುತ್ತಿದ್ದಾರೆ.
ಈ ರಹಸ್ಯವಾದ ಉಭಯಚರಿ ಸಂದರ್ಶಕರು ಅನ್ಯಥಾ ಕಡೆಗಣಿಸಲ್ಪಟ್ಟ ಈ ಕಡಲತೀರಕ್ಕೆ ಅಂತಾರಾಷ್ಟ್ರೀಯ ಕೀರ್ತಿಯನ್ನು ತಂದಿರುತ್ತಾರೆ. ರಾನ್ಟಾವು ಆಬಂಗ್ ಮಲೇಷಿಯ ಪರ್ಯಾಯ ದ್ವೀಪದ ಪೂರ್ವ ಕರಾವಳಿಯ ಮೇಲೆ, ಡಂಗನ್ನ ಉತ್ತರಕ್ಕೆ ಮತ್ತು ಸಿಂಗಾಪೂರದಿಂದ ಸುಮಾರು 400 ಕಿಲೊಮೀಟರುಗಳ ದೂರದಲ್ಲಿ ನೆಲೆಸಿರುತ್ತದೆ. ಲೆದರ್ಬ್ಯಾಕ್ ಆಮೆಗಳು ಪ್ರತಿ ವರ್ಷ ಒಂದು ಉದಾತ್ತ ಕಾರ್ಯಕ್ಕಾಗಿ ಭೇಟಿನೀಡುವ ಲೋಕದಲ್ಲಿನ ಕೆಲವೇ ಸ್ಥಳಗಳಲ್ಲಿ ಇದು ಒಂದಾಗಿದೆ.
ಇಲ್ಲಿ ಮೊಟ್ಟೆ ಇಡುವ ಕಾಲವು ಸರಿಸುಮಾರಾಗಿ ಮೇಯಿಂದ ಸಪ್ಟಂಬರ್ ವರೆಗೆ ವ್ಯಾಪಿಸುತ್ತದೆ. ಜೂನ್, ಜುಲೈ, ಮತ್ತು ಆಗಸ್ಟ್ನ ಉಚ್ಚತಮ ತಿಂಗಳುಗಳಲ್ಲಿ, ಮೊಟ್ಟೆ ಇಡುವ ಪ್ರಕ್ರಿಯೆಯನ್ನು ವೀಕ್ಷಿಸುವುದು ಬಹಳ ಸುಲಭವಾಗಿರುತ್ತದೆ. ಸಾಮಾನ್ಯವಾಗಿ ಆಮೆಗಳು ಕತ್ತಲಾದ ಅನಂತರ ನೀರಿನಿಂದ ಹೊರಗೆ ಬರಲು ಆರಂಭಿಸುತ್ತವೆ. ಮಲೇಷಿಯ, ಸಿಂಗಾಪುರ, ಮತ್ತು ಪಾಶ್ಚಾತ್ಯ ದೇಶಗಳ ಎಲ್ಲ ಕಡೆಗಳಿಂದಲೂ ಬಂದ ಸಂದರ್ಶಕರು ವ್ಯರ್ಥವಾಗಿ ಕಾಯುತ್ತಿರುವರೊ?
ಸಮುದ್ರದಿಂದ ಅವು ಬರುತ್ತವೆ!
ಥಟ್ಟನೆ, ತೀರದಿಂದ ಬಹಳ ದೂರದಲ್ಲಿರದ ಮಿನುಗುವ ನೀರಿನ ಹಿನ್ನೆಲೆಯಲ್ಲಿ ಛಾಯಾರೂಪವಾಗಿ, ಏನೋ ಒಂದು ವಸ್ತು ಕೆಳಕ್ಕೂ ಮೇಲಕ್ಕೂ ತೂಗಾಡುತ್ತಿರುವುದು ಕಂಡುಬರುತ್ತದೆ. ಜನಸಮೂಹವು ಉತ್ತೇಜಿತಗೊಳ್ಳುತ್ತದೆ! ಅದು ತೀರಕ್ಕೆ ಹತ್ತಿರ ಬಂದಾಗ, ಗುಮ್ಮಟ ಆಕಾರದ ಒಂದು ವಸ್ತು ನೀರಿನಿಂದ ಹೊರಬರಲು ಪ್ರಾರಂಭಿಸುತ್ತದೆ. ಅದು ದಡಕ್ಕೆ ಬರುತ್ತಿರುವ ಒಂದು ಆಮೆ! ಉಪಸಿತ್ಧರಿರುವ ಕೆಲವು ಮಾರ್ಗದರ್ಶಿಗಳು ಸಾಧ್ಯವಾದಷ್ಟು ಶಾಂತವಾಗಿ ವೀಕ್ಷಿಸುವಂತೆ ಎಲ್ಲರನ್ನು ಎಚ್ಚರಿಸುತ್ತಾರೆ, ಇಲ್ಲವಾದರೆ ಗದ್ದಲವು ಅದನ್ನು ಹಿಂದೆ ಹೋಗುವಂತೆ ಭಯಹಿಡಿಸೀತು.
ಮೊದಲು ತಲೆಯು ಕಾಣಿಸಿಕೊಳ್ಳುತ್ತದೆ, ಅನಂತರ ಕುತ್ತಿಗೆ, ಅದನ್ನು ಹಿಂಬಾಲಿಸಿ ಚಿಪ್ಪಿನ ಮುಂಭಾಗ ಮತ್ತು ಮುಂದಿನ ಕೈಗಳು, ಕೊನೆಯದಾಗಿ ಇಡೀ ಆಮೆಯು ದಡದ ಮೇಲೆ ಕಾಣಿಸಿಕೊಳ್ಳುತ್ತದೆ. ಮೃದುವಾದ ಅಲೆಯು ಅದರ ಬಾಲ ಮತ್ತು ಹಿಂದಿನ ಕೈಗಳನ್ನು ತೊಯಿಸಿ ಹೋಗುತ್ತದೆ. ನಿಶ್ಚಯವಾಗಿಯೂ ಒಂದು ದೈತ್ಯ, ಮೂಗಿನಿಂದ ಬಾಲದ ತುದಿಯ ವರೆಗೆ ಸುಮಾರು ಎರಡು ಅಥವಾ ಹೆಚ್ಚು ಮೀಟರುಗಳು ಉದ್ದ! ಕಡಲ ತೀರದ ಮೇಲೆ ಅದು ಚಲನೆಯಿಲ್ಲದೆ ಬಿದ್ದುಕೊಳ್ಳುತ್ತದೆ.
ಹಠಾತ್ತಾಗಿ, ಮುಂದಿನ ಕೈಗಳ ಮೂಲಕ ಆಮೆಯು ತನ್ನನ್ನು ಎತ್ತಿಕೊಳ್ಳುತ್ತದೆ ಮತ್ತು ನೆಲವನ್ನು ದಡ್ ಎಂಬ ಶಬ್ದದೊಂದಿಗೆ ಬಡಿಯುತ್ತಾ, ತನ್ನ ದೇಹವನ್ನು ಮುಂದೆ ಹಾಕುತ್ತದೆ. ಮುಂದಿನ ಎತ್ತುವಿಕೆ ಮತ್ತು ಎಸೆತಕ್ಕೆ ಶ್ವಾಸವನ್ನು ಮತ್ತು ಬಲವನ್ನು ಆಹ್ವಾನಿಸುವಂತಹ, ಒಂದು ಕ್ಷಣಕ್ಕಾಗಿ ಅದು ನಿಶ್ಚಲವಾಗಿರುತ್ತದೆ. ಈ ರೀತಿಯಲ್ಲಿ ಅದು ನೆಲದ ಮೇಲೆ ಚಲಿಸುತ್ತದೆ. ಅದರ ಎರಡು ಬದಿಗಳಲ್ಲಿರುವ ಜನಸಮೂಹವನ್ನು ದೂರದಲ್ಲಿ ಇಡಲಾಗುತ್ತದೆ. ಮಾರ್ಗದರ್ಶಿಗಳು ಇದರ ಬಗ್ಗೆ ಬಹಳ ಕಟ್ಟುನಿಟ್ಟಾಗಿರುತ್ತಾರೆ. ಮುಂದಿಡುವ ಪ್ರತಿಯೊಂದು ಹೆಜ್ಜೆಯೊಂದಿಗೆ, ಜನಸಮೂಹವೂ ಕೂಡ ಮುಂದೆ ಚಲಿಸುತ್ತದೆ—ಆದರೆ ಬಹಳ ಶಾಂತವಾಗಿ.
ದಡದ ಮೇಲೆ ಲೆದರ್ಬ್ಯಾಕ್ ಆಮೆಯು ಕುಂಟುತ್ತಾ ಹೋಗುವಾಗ, ಸಹಜ ಪ್ರವೃತ್ತಿಯಿಂದ ಅದರ ಗಮ್ಯಸ್ಥಾನವನ್ನು ಅದು ತಿಳಿದಿರುತ್ತದೆ. ಅದರ ಮೊಟ್ಟೆಗಳು ಯಶಸ್ವಿಯಾಗಿ ಮರಿಯಾಗಲು ಎಲ್ಲ ಲಾಭವಿರುವ ಒಂದು ಸ್ಥಳವನ್ನು ಹುಡುಕುವಂತೆ ಅದರ ಹುಟ್ಟರಿವು ಅದನ್ನು ಶಕ್ತಗೊಳಿಸುತ್ತದೆ. ಅಲ್ಲಿ ಅದೊಂದು ಗುಂಡಿಯನ್ನು ತೋಡಲು ಪ್ರಾರಂಭಿಸುತ್ತದೆ. ಮರಳನ್ನು ಬಾಚುತ್ತಾ, ಹಿಂದಿನ ಕೈಗಳು ಗುದ್ದಲಿಗಳಾಗುತ್ತವೆ.
ಯಾವುದು ದೀರ್ಘಸಮಯವೆಂದು ತೋರುತ್ತದೋ ಅದು ಕಳೆದ ಬಳಿಕ, ಲೈಸನ್ಸ್ ಪಡೆದ ಮೊಟ್ಟೆ ಕೂಡಿಸುವವನು ಆಗಿರುವ ಮಾರ್ಗದರ್ಶಿಗಳಲ್ಲಿ ಒಬ್ಬನು, ಮುಂದೆ ಬಂದು ತನ್ನ ಮೊಣಕೈ ಅದರೊಳಗೆ ಮಾಯವಾಗುವಷ್ಟು ಆಳವಾಗಿರುವ ಗುಂಡಿಯೊಳಗೆ ತನ್ನ ಕೈಯನ್ನು ಚಾಚುತ್ತಾನೆ. ತನ್ನ ತೋಳನ್ನು ಗುಂಡಿಯಿಂದ ಹಿಂತೆಗೆದಾಗ ಎಲ್ಲರೂ ಆಶ್ಚರ್ಯ ಮತ್ತು ಉತ್ತೇಜನದಿಂದ ಉಸಿರೆಳೆಯುತ್ತಾರೆ. ಅವನೊಂದು ಮೊಟ್ಟೆಯನ್ನು ಹೊರತೆಗೆಯುತ್ತಾನೆ!
ಲೆದರ್ಬ್ಯಾಕ್ ಆಮೆಯ ಮೊಟ್ಟೆ ಮಬ್ಬಾದ ಬಿಳಿ ಬಣ್ಣದ್ದಾಗಿದೆ. ಅದು ಗಾತ್ರದಲ್ಲಿ ಟೇಬಲ್ ಟೆನಿಸ್ ಚೆಂಡಿನಿಂದ ಟೆನಿಸ್ ಚೆಂಡಿನ ವರೆಗಿನ ವೈವಿಧ್ಯವುಳ್ಳದ್ದಾಗಿದೆ. ಮೊಟ್ಟೆಗಳ ತಂಡದಲ್ಲಿನ ಕೊನೆಯ ಕೆಲವು ಮೊಟ್ಟೆಗಳು ಸಾಮಾನ್ಯವಾಗಿ ಗೋಲಿಯ ಗಾತ್ರದ್ದಾಗಿರುತ್ತವೆ. ಕುಕ್ಕುಟ ಮೊಟ್ಟೆಗಳಂತೆ ಇರದೆ, ಅದರ ಕರಟವು ನಿಜವಾಗಿಯೂ ಗಡುಸಾದ ಚರ್ಮದ್ದಾಗಿದ್ದು ಅದರ ಮೇಲೆ ಒತ್ತಡವನ್ನು ಹಾಕಿದಾಗ ಸುಲಭವಾಗಿ ಕಚ್ಚುಳ್ಳದ್ದಾಗುತ್ತದೆ. ಕುತೂಹಲಕರವಾಗಿ, ಅದನ್ನು ಬೇಯಿಸಿದಾಗ ಕೂಡ ಮೊಟ್ಟೆಯ ಬಿಳಿ ಭಾಗ (ಬಿಳಿಯ ಲೋಳೆ) ದ್ರವವಾಗಿ ಉಳಿಯುತ್ತದೆ. ಸ್ವಾದವು ತೀಕ್ಷೈವಾಗಿಯೂ ಮತ್ತು ಸ್ವಲ್ಪ ಮೀನಿನಂಥ ವಾಸನೆಯುಳ್ಳದ್ದಾಗಿಯೂ ಇದೆಯೆಂದು ಹೇಳಲಾಗುತ್ತದೆ. ಆಮೆಯೊಂದು ಒಂದು ಸಮಯಕ್ಕೆ ಸರಾಸರಿ ಸುಮಾರು 85 ಮೊಟ್ಟೆಗಳನ್ನು ಇಡುತ್ತದೆ. ಆದರೆ 1967ರಲ್ಲಿ 140 ಮೊಟ್ಟೆಗಳ ಗೂಡಿನ ಒಂದು ದಾಖಲೆಯು ವರದಿಸಲಾಗಿತ್ತು.
ಈಗ ಜನಸಮೂಹವು ಹೆಚ್ಚಿನ ಸ್ವಾತಂತ್ರ್ಯವುಳ್ಳದ್ದಾಗಿರಬಲ್ಲದು. ಕೆಲವರು ಅಂಜಿಕೆಯಿಂದ ಆಮೆಯನ್ನು ಸ್ಪರ್ಶಿಸಿ, ಪರಿಶೀಲಿಸುತ್ತಾರೆ. ಇತರರು ಅದರ ಮೇಲೆ ಏರುತ್ತಾರೆ ಯಾ ತಮ್ಮ ಕುಟುಂಬದ ಚಿತ್ರ ಸಂಪುಟಕ್ಕೆ ಚಿಟಿಕೆ ಛಾಯಾಚಿತ್ರಗಳಿಗಾಗಿ ನಿಲ್ಲಲು ಅದರ ಮೇಲೆ ಒರಗುತ್ತಾರೆ. ಆಮೆಯ ಸಮೀಪದ ನೋಟವು, ಮರಳಿನ ಕಣಗಳಿಂದ ತುರುಗಿದ ಕಣ್ಣುಗಳಿಂದ ಹನಿಹನಿಯಾಗಿ ಬೀಳುತ್ತಿರುವ ಸಾಂದ್ರವಾದ ಪಾರದೀಪಕ ಲೋಳೆಯನ್ನು ತೋರಿಸುತ್ತದೆ. ನೀರಿನಿಂದ ಗಾಳಿಗೆ ಮಾಡಲಾದ ಬದಲಾವಣೆಯು ಇದನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ. ಆಗಿಂದಾಗ್ಗೆ, ಆಮೆಯು ಗುಟುರುವ ಶಬ್ದದೊಂದಿಗೆ ಉಸಿರೆಳೆಯಲು ಅದರ ಬಾಯಿಯನ್ನು ತೆರೆಯುತ್ತದೆ.
ಮೊಟ್ಟೆಗಳನ್ನು ಹುಗಿದಿಡುವುದು
ಸ್ವಲ್ಪ ಸಮಯದ ತರುವಾಯ, ಗುಂಡಿಯೊಳಗೆ ಮರಳನ್ನು ಸರಿಸಲು ಆ ಜೀವಿಯು ಅದರ ಹಿಂದಿನ ಕೈಗಳನ್ನು ಚಲಾಯಿಸಲು ತೊಡಗುತ್ತದೆ. ಗುಂಡಿಯು ತುಂಬಿದ ಕೂಡಲೇ, ಲೆದರ್ಬ್ಯಾಕ್ ಆಮೆಯು ಅದರ ಹಿಂದಿನ ಕೈಗಳನ್ನು ಶಕ್ತಿಶಾಲಿಯಾಗಿ ಬೀಸುವ ಅರ್ಧವೃತ್ತದ ಚಲನೆಯಲ್ಲಿ ತೊಡಗಿಸುತ್ತದೆ. ಮರಳು ಎಲ್ಲ ದಿಕ್ಕಿನಲ್ಲಿಯೂ ಹಾರುತ್ತದೆ! ತಮ್ಮ ಮುಖಗಳನ್ನು ಮತ್ತು ಶರೀರಗಳನ್ನು ರಕ್ಷಿಸಲು ಜನಸಮೂಹವು ಕ್ಷಿಪ್ರವಾಗಿ ಹಿಂದಕ್ಕೆ ಹೆಜ್ಜೆಯಿಡುತ್ತದೆ. ತೂಗಾಡುವ ಕೈಗಳು ಸ್ವಲ್ಪ ಸಮಯದ ವರೆಗೆ ಬಡಿಯುವುದನ್ನು ಮುಂದುವರಿಸುತ್ತವೆ. ಎಂತಹ ದಾರ್ಢ್ಯ ಮತ್ತು ಶಕ್ತಿ ಪ್ರಯೋಗಿಸಲಾಗುತ್ತಿದೆ! ಕೈಗಳು ಅಂತಿಮವಾಗಿ ನಿಂತಾಗ, ಜನಸಮೂಹಕ್ಕೆ ಲೆದರ್ಬ್ಯಾಕ್ ಆಮೆಯು ತೋಡಿದ ಗುಂಡಿಯ ಗುರುತನ್ನು ನೋಡಲು ಸಾಧ್ಯವಿರುವುದಿಲ್ಲ. ನಿಶ್ಚಯವಾಗಿಯೂ ಸಹಜಪ್ರವೃತ್ತಿಯ ವಿವೇಕ! ಆದರೆ ಈ ಆಮೆಯ ಸೃಷ್ಟಿಕರ್ತನ ವಿವೇಕವು ಎಷ್ಟು ಅಪಾರವಾಗಿ ಹೆಚ್ಚಿನದ್ದಾಗಿದೆ!
ಲೆದರ್ಬ್ಯಾಕ್ ಆಮೆಯು ಪುನಃ ಸಮುದ್ರಕ್ಕೆ ಹೋಗುವ ಮುಂಚೆ, ಲೈಸನ್ಸ್ ಪಡೆದ ಮೊಟ್ಟೆ ಕೂಡಿಸುವವನೊಬ್ಬನು ಅದರ ಮುಂದಿನ ಕೈಗಳಲ್ಲಿ ಒಂದಕ್ಕೆ ಪಟ್ಟಿ ಕಟ್ಟುತ್ತಾನೆ. ಅದರ ಮುಂದಿನ ದಡದ ಭೇಟಿಗಳನ್ನು ಮತ್ತು ವಿಶಾಲ ಸಮುದ್ರಗಳಲ್ಲಿ ಅದರ ಚಲನವಲನಗಳನ್ನು ನಿಯಂತ್ರಿಸುವುದಕ್ಕಾಗಿ ಇದನ್ನು ಮಾಡಲಾಗುತ್ತದೆ. ಪ್ರತಿ ಋತುವಿನಲ್ಲಿ ಅದು ಆರರಿಂದ ಒಂಭತ್ತು ಬಾರಿ—ಮಧ್ಯದಲ್ಲಿ 9ರಿಂದ 14 ದಿನಗಳ ವಿರಾಮದೊಂದಿಗೆ—ಮೊಟ್ಟೆಯಿಡುತ್ತದೆ.
ಥಟ್ಟನೆ ಲೆದರ್ಬ್ಯಾಕ್ ಆಮೆಯು ನಿಟ್ಟುಸಿರುಬಿಟ್ಟು ತನ್ನನ್ನು ಮುಂದಕ್ಕೆ ಎಸೆದುಕೊಳ್ಳುತ್ತದೆ. ಅದು ತಿರುಗಿ ಸಮುದ್ರ ಕಡೆಗೆ, ಅದು ತಲಪಿದಕ್ಕಿಂತ ತುಲನಾತ್ಮಕವಾಗಿ ಹೆಚ್ಚು ವೇಗದಿಂದ ಕುಂಟುತ್ತಾ ಹೋಗುತ್ತದೆ. ಅದು ನೀರನ್ನು ಸ್ಪರ್ಶಿಸಿದಾಗ, ತಲೆಯು ಒಳಗೆ ಹೋಗುತ್ತದೆ, ಆಮೇಲೆ ಚಿಪ್ಪು. ಅಂತಿಮವಾಗಿ ಅದು ದೃಷ್ಟಿಯಿಂದ ಮರೆಯಾಗುತ್ತದೆ. ತಲೆಯು ಕೊನೆಗೆ ನೀರಿನ ಮೇಲೆ ಕಾಣಿಸಿಕೊಳ್ಳುವಾಗ, ಆಮೆಯು ಬಹಳ ದೂರ ಹೋಗಿರುತ್ತದೆ. ಅದರ ಮೂಗಿನ ತುದಿಯನ್ನು ಚಂದ್ರನ ಬೆಳಕು ಹಿಡಿಯುತ್ತಾ, ಅದು ತೆರೆದ ಸಮುದ್ರಕ್ಕೆ ತೀವ್ರವಾಗಿ ಈಜಿ ಹೋಗುತ್ತದೆ. ನೀರಿನಲ್ಲಿ ಅದು ಎಷ್ಟು ಚುರುಕಾಗಿಯೂ ಕ್ಷಿಪ್ರವಾಗಿಯೂ ಇದೆ! ನೆಲದ ಮೇಲೆ ಅದರ ಅಚತುರ ಹಾಗೂ ನಿಧಾನ ಪ್ರಗತಿಗಿಂತ ಇದು ಬಹಳ ಭಿನ್ನವಾಗಿದೆ.
ಸಂರಕ್ಷಣಾ ಪ್ರಯತ್ನಗಳು
ಇತರ ಪ್ರಾಣಿ ಜಾತಿಗಳ ಹೆಚ್ಚಾಗುತ್ತಿರುವ ಸಂಖ್ಯೆಗಳಂತೆ, ಲೆದರ್ಬ್ಯಾಕ್ ಆಮೆಗಳು ಮಲಿನಗೊಂಡ ಪರಿಸರ ಮತ್ತು ಮಾನವ ಲೋಭದ ಫಲಗಳಿಂದ ಅಪಾಯಕ್ಕೀಡಾಗಿವೆ. ಮಧ್ಯ 1970ಗಳಲ್ಲಿ, ಪೂರ್ಣವಾಗಿ ಪ್ರೌಢಾವಸ್ಥೆಗೆ ಬಂದಿರದ ನೂರಾರು ಆಮೆಗಳು ನೆರೆಯ ರಾಜ್ಯವಾದ ಪಹಂಗ್ನ ದಡದ ಮೇಲೆ—ಸತ್ತು ಬಿದಿದ್ದವು! ಮತ್ತು ಆಮೆಯ ಮೊಟ್ಟೆಗಳನ್ನು ಅಸಾಮಾನ್ಯ ರಸನೇಂದ್ರಿಯವನ್ನು ತೃಪ್ತಪಡಿಸಲು ನೀತಿ ನಿಷ್ಠೆಗಳಿಲ್ಲದೆ ಕೂಡಿಸಲಾಗುತ್ತದೆ.
ಸಂತೋಷಕರವಾಗಿ ಈ ಆಮೆಗಳಿಗೆ, ಮಲೇಷಿಯದಲ್ಲಿ ಅವುಗಳ ಕಡಿಮೆಯಾಗುತ್ತಿರುವ ಸಂಖ್ಯೆಗಾಗಿ ಆಳವಾದ ಚಿಂತೆಯು, 1951ರಲ್ಲಿ ಟರ್ಟ್ಲ್ ಎನ್ಆ್ಯಕ್ಟ್ಮೆಂಟ್ ಎಂಬ ಕಾನೂನಿನ ಅಂಗೀಕಾರಕ್ಕೆ ಕಾರಣವಾಯಿತು. ಮೊಟ್ಟೆಗಳ ಖಾಸಗಿ ಕೂಡಿಸುವಿಕೆ ನಿಷೇಧಿಸಲ್ಪಟ್ಟಿತು. ಹಾಗಿದ್ದರೂ, ಲಾಭವು ಒಂದು ದೊಡ್ಡ ಪ್ರಲೋಭನವಾಗಿರುವ ಕಾರಣ, ಹಣದ ಲೋಭವಿರುವ ವ್ಯಕ್ತಿಗಳು ಈ ನಿಯಮವನ್ನು ಉಲ್ಲಂಘಿಸುತ್ತಾರೆ. ಆದರೂ ಕೂಡ, ಸಂರಕ್ಷಣೆಯ ಪ್ರಯತ್ನಗಳು ವ್ಯರ್ಥವಾಗಿಲ್ಲ.
ರಾನ್ಟಾವು ಆಬಂಗ್ನ ಕಡಲ ತೀರದ ಮೇಲೆ, ಮರಳಿನಲ್ಲಿ ಚಿಕ್ಕ ಪ್ರಕಟನ ಪತ್ರಗಳ ಸಾಲನ್ನು ನೋಡುವುದು ಆನಂದಕರ. ಪ್ರತಿಯೊಂದು ಪ್ರಕಟನ ಪತ್ರವು, ಲೆದರ್ಬ್ಯಾಕ್ ಮೊಟ್ಟೆಗಳ ಒಂದು ಸಣ್ಣ ರಾಶಿ ಹುಗಿದಿಡಲ್ಪಟ್ಟಿರುವ ಸ್ಥಳವನ್ನು ಗುರುತಿಸುತ್ತದೆ. ಪ್ರಕಟನ ಪತ್ರವು ಮೊಟ್ಟೆಗಳ ಸಂಖ್ಯೆಯನ್ನು, ನೆಟ್ಟ ತಾರೀಖನ್ನು, ಮತ್ತು ಮೂಲಭೂತ ಮೊಟ್ಟೆಗಳ ತಂಡವನ್ನು ಗುರುತಿಸುವ ಕೋಡ್ ಸಂಖ್ಯೆಯನ್ನು ಸೂಚಿಸುತ್ತದೆ. ನೆಟ್ಟಾದ ಸುಮಾರು 45 ದಿನಗಳ ತರುವಾಯ, ತಪ್ಪಿಸಿಕೊಳ್ಳುವುದರಿಂದ ಮರಿಗಳನ್ನು ತಡೆಯಲು ಪ್ರತಿಯೊಂದು ಪ್ರಕಟನ ಪತ್ರದ ಸುತ್ತಲೂ ತಂತಿಯ ಬಲೆಯನ್ನು ಇರಿಸಲಾಗುತ್ತದೆ. ಮೊಟ್ಟೆ ಮರಿಯಾಗುವ ಅವಧಿಯು 52ರಿಂದ 61 ದಿನಗಳ ವರೆಗೆ ಹರಡಿರುತ್ತದೆ. ಸಾಮಾನ್ಯವಾಗಿ ಸಂಜೆಯಲ್ಲಿ ಸೂರ್ಯಾಸ್ತಮಾನದ ಬಳಿಕ, ಮರಿಗಳು ಮೇಲೆ ಬಂದಂತೆ, ಪ್ರತಿಯೊಂದು ಗುಂಡಿಯಿಂದ ಬಂದ ಸಂಖ್ಯೆಯ ದಾಖಲೆ ಮಾಡಲಾಗುತ್ತದೆ. ಅವುಗಳನ್ನು ತದನಂತರ ಪಾತ್ರೆಗಳಲ್ಲಿ ಇರಿಸಿ ಆಮೇಲೆ ಸಮುದ್ರದ ಅಂಚಿನಲ್ಲಿ ಬಿಡಲಾಗುತ್ತದೆ.
ಸಂರಕ್ಷಣೆಯ ಕಾರ್ಯಕ್ರಮವು ಯಶಸ್ವಿಯಾಗಿ ಸಾವಿರಾರು ಮರಿಗಳನ್ನು ಬೆಳಸಿ, ಅವುಗಳನ್ನು ತಮ್ಮ ನೀರಿನ ಮನೆಗೆ ಹಿಂದಿರುಗಿಸುತ್ತದೆ. ಆದರೆ ಬದುಕಿ ಉಳಿಯುವ ಅವುಗಳ ಕಡಿಮೆ ಪ್ರಮಾಣ, ಅಷ್ಟೇ ಅಲ್ಲದೆ ರಾನ್ಟಾವು ಆಬಂಗ್ಗೆ ಬರುತ್ತಿರುವ ಲೆದರ್ಬ್ಯಾಕ್ ಆಮೆಗಳ ಕಡಿಮೆ ಆಗುತ್ತಿರುವ ಸಂಖ್ಯೆಯು, ಚಿಂತೆಯ ವಿಷಯವಾಗಿರುತ್ತಾ ಮುಂದುವರಿದಿದೆ.
[ಪುಟ 18 ರಲ್ಲಿರುವ ಚಿತ್ರಗಳು]
ತಲೆಯಿಂದ ಬಾಲದ ವರೆಗೆ ಸುಮಾರು ಎರಡು ಮೀಟರುಗಳು ಉದ್ದವಾಗಿರುವ ಲೆದರ್ಬ್ಯಾಕ್ ಆಮೆಯು, ಡಜನ್ಗಟ್ಟಲೆ ಮೊಟ್ಟೆಗಳನ್ನು ಇಡುತ್ತದೆ. ಸುಮಾರು ಎಂಟು ವಾರಗಳ ಬಳಿಕ, ಮರಿಗಳು ಮೇಲೆ ಬರುತ್ತವೆ
[ಕೃಪೆ]
Leathery turtle. Lydekker
C. Allen Morgan/Peter Arnold
David Harvey/SUPERSTOCK
[ಪುಟ 25 ರಲ್ಲಿರುವ ಚಿತ್ರ ಕೃಪೆ]
C. Allen Morgan/Peter Arnold