ಆಸ್ಟ್ರೇಲಿಯದಲ್ಲಿ ನಾನು ನಿಜವಾದ ಸಂಪತ್ತನ್ನು ಕಂಡುಕೊಂಡೆ
ಅದು 1971ರ ಎಪ್ರಿಲ್ ತಿಂಗಳಾಗಿತ್ತು. ಆಸ್ಟ್ರೇಲಿಯದಲ್ಲಿ ಏಳು ವರ್ಷಗಳನ್ನು ಕಳೆದ ಬಳಿಕ, ನನ್ನ ಕುಟುಂಬವನ್ನು ಸಂದರ್ಶಿಸಲು ನಾನು ಇತ್ತೀಚೆಗೆ ಗ್ರೀಸ್ ದೇಶಕ್ಕೆ ಹಿಂದಿರುಗಿದ್ದೆ. ಸ್ಥಳೀಯ ಪಾದ್ರಿ ಮತ್ತು ಪೌರ ಸಭಾಧ್ಯಕ್ಷರು ಬಂದು ನನ್ನ ಎದುರು ಕುಳಿತುಕೊಂಡಾಗ ಸಂಜೆಯಾಗಿತ್ತು, ಮತ್ತು ನಾನು ಕಾರೀಯೆಸ್ ಹಳ್ಳಿಯ ಚೌಕದಲ್ಲಿರುವ ಕಾಫಿಯಂಗಡಿಯ ಒಂದು ಮೇಜಿನ ಬಳಿ ಸುಮ್ಮನೆ ಕುಳಿತುಕೊಂಡಿದ್ದೆ. ಒಂದು ವಾಗ್ವಾದವನ್ನು ಪ್ರಚೋದಿಸಲು ಅವರು ಆತುರರಾಗಿದ್ದರೆಂಬುದು ಸ್ಪಷ್ಟವಾಗಿಗಿತ್ತು.
ಸರಳವಾದ ಒಂದು ವಂದನೆಯೂ ಇಲ್ಲದೆ, ಹಣ ಮಾಡುವ ಉದ್ದೇಶಕ್ಕಾಗಿ ಮಾತ್ರ ನಾನು ಆಸ್ಟ್ರೇಲಿಯಕ್ಕೆ ವಲಸೆ ಹೋಗಿದ್ದೆ ಎಂಬುದಾಗಿ ಪಾದ್ರಿಯು ನನ್ನನ್ನು ಆಪಾದಿಸಿದನು. ನಾನು ಆಶ್ಚರ್ಯಚಕಿತನಾದೆ ಎಂದು ಹೇಳಿದರೆ ಅದು ಸತ್ಯವನ್ನು ಕುಂದಿಸಿ ಹೇಳಿದಂತಾದೀತು. ನಾನು ಆಸ್ಟ್ರೇಲಿಯದಲ್ಲಿ ಜೀವಿಸುತ್ತಿರುವಾಗ, ಹಣಕ್ಕಿಂತ ಹೆಚ್ಚು ಬೆಲೆಯುಳ್ಳ ಸಂಪತ್ತನ್ನು ಸಂಪಾದಿಸಲು ಶಕ್ತನಾದೆನೆಂದು ಸಾಧ್ಯವಾದಷ್ಟು ಶಾಂತವಾಗಿ ನಾನು ಉತ್ತರಿಸಿದೆ.
ನನ್ನ ಉತ್ತರವು ಅವನನ್ನು ಆಶ್ಚರ್ಯಗೊಳಿಸಿತು, ಮತ್ತು ನಾನು ಏನನ್ನು ಅರ್ಥೈಸಿದೆನೆಂದು ಅರಿಯಲು ಅವನು ತಗಾದೆಮಾಡಿದನು. ಇತರ ವಿಷಯಗಳೊಂದಿಗೆ, ದೇವರಿಗೊಂದು ನಾಮವಿದೆ ಎಂಬುದಾಗಿ ನಾನು ಕಲಿತಿದ್ದೆ ಎಂದು ನಾನು ಉತ್ತರಿಸಿದೆ. ಅವನನ್ನು ನೇರವಾಗಿ ನೋಡುತ್ತಾ, “ನನಗೆ ಕಲಿಸಲು ನೀನು ಅಲಕ್ಷಿಸಿದ ಒಂದು ವಿಷಯವು ಇದಾಗಿದೆ,” ಎಂದು ನಾನು ಹೇಳಿದೆ. ಅವನು ಪ್ರತೀಕರಿಸುವ ಮೊದಲು, “ಆದರ್ಶ ಪ್ರಾರ್ಥನೆಯಲ್ಲಿ, ‘ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ’ ಎಂಬುದಾಗಿ ಪ್ರಾರ್ಥಿಸಲು ಯೇಸು ನಮಗೆ ಕಲಿಸಿಕೊಟ್ಟಾಗ, ಅವನು ಸೂಚಿಸಿದ ದೇವರ ನಾಮವನ್ನು ದಯವಿಟ್ಟು ನನಗೆ ನೀನು ಹೇಳುವಿಯೊ? ಎಂದು ನಾನು ಕೇಳಿದೆ.”—ಮತ್ತಾಯ 6:9.
ವಾಗ್ವಾದದ ಕುರಿತು ಮಾತು ಬಹಳ ಬೇಗನೆ ಹಳ್ಳಿಯ ಚೌಕದಲ್ಲಿ ಹರಡಿತು ಮತ್ತು ಹತ್ತು ನಿಮಿಷಗಳೊಳಗೆ ಸುಮಾರು 200 ಜನರು ಸೇರಿಬಂದಿದ್ದರು. ಪಾದ್ರಿಗೆ ತೊಂದರೆಯಾಗ ತೊಡಗಿತು. ದೇವರ ನಾಮದ ಬಗ್ಗೆ ನನ್ನ ಪ್ರಶ್ನೆಗೆ ಅವನು ಉತ್ತರ ನೀಡಲಿಲ್ಲ, ಮತ್ತು ಹೆಚ್ಚಿನ ಬೈಬಲ್ ಪ್ರಶ್ನೆಗಳಿಗೆ ಅವನಲ್ಲಿ ಬಲಹೀನ ಉತ್ತರಗಳಿದ್ದವು. ಸತತವಾಗಿ ಅವನು ಪರಿಚಾರಕನನ್ನು ಅಧಿಕ ಊಜೋ—ಗ್ರೀಕ್ ಮದ್ಯಸಾರದ ಒಂದು ಪಾನೀಯ—ಗಾಗಿ ಕರೆಯುತ್ತಿದ್ದುದರಿಂದ ಅವನ ಪೇಚಾಟ ವ್ಯಕ್ತವಾಯಿತು.
ಸ್ವಾರಸ್ಯಕರವಾದ ಎರಡು ಗಂಟೆಗಳು ಕಳೆದವು. ನನ್ನನ್ನು ಹುಡುಕಿಕೊಂಡು ನನ್ನ ತಂದೆ ಬಂದರು, ಆದರೆ ಅಲ್ಲಿ ಸಂಭವಿಸುತ್ತಿರುವುದನ್ನು ಅವರು ನೋಡಿದಾಗ, ಒಂದು ಮೂಲೆಯಲ್ಲಿ ಶಾಂತವಾಗಿ ಕುಳಿತು ದೃಶ್ಯವನ್ನು ವೀಕ್ಷಿಸಿದರು. ಉಲ್ಲಾಸಕರವಾದ ಚರ್ಚೆಯು ರಾತ್ರಿ 11:30ರ ವರೆಗೆ ಅಮಲೇರಿದ ಒಬ್ಬ ಮನುಷ್ಯನು ಕೋಪದಿಂದ ಕೂಗಲು ಆರಂಭಿಸುವ ತನಕ, ಮುಂದುವರಿಯಿತು. ರಾತ್ರಿ ಬಹಳ ಹೊತ್ತಾಗಿದ್ದುದರಿಂದ ನಾವೆಲ್ಲರು ಮನೆಗೆ ಹೋಗಬೇಕೆಂದು ನಾನು ಗುಂಪಿಗೆ ಸೂಚಿಸಿದೆ.
ಈ ಮುಕಾಬಿಲೆಯ ಕಾರಣವೇನಾಗಿತ್ತು? ಪಾದ್ರಿ ಮತ್ತು ಪೌರ ಸಭಾಧ್ಯಕ್ಷರು ನನ್ನೊಂದಿಗೆ ಒಂದು ಜಗಳವನ್ನು ಆರಂಭಿಸಲು ಯಾಕೆ ಪ್ರಯತ್ನಿಸಿದರು? ಗ್ರೀಸಿನ ಈ ಭಾಗದಲ್ಲಿ ನನ್ನ ಬೆಳವಣಿಗೆಯ ಕುರಿತು ಒಂದಿಷ್ಟು ಹಿನ್ನೆಲೆಯು ಇದನ್ನು ನೀವು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುವುದು.
ಆರಂಭಿಕ ತೊಂದರೆಗಳು
ಪೆಲಪನೀಸಸ್ನಲ್ಲಿನ ಕಾರೀಯೆಸ್ ಎಂಬ ಹಳ್ಳಿಯಲ್ಲಿ ದಶಂಬರ 1940ರಲ್ಲಿ ನಾನು ಜನಿಸಿದೆ. ನಾವು ಬಹಳ ಬಡವರಾಗಿದ್ದೆವು, ಮತ್ತು ನಾನು ಶಾಲೆಗೆ ಹಾಜರಾಗದಿರುವ ಸಮಯದಲ್ಲಿ ತಾಯಿಯೊಂದಿಗೆ ಇಡೀ ದಿನ ಅಕ್ಕಿಯ ಹೊಲಗಳಲ್ಲಿ ಮೊಣಕಾಲಿನ ವರೆಗಿರುವ ನೀರಿನಲ್ಲಿ ನಿಂತು ಕೆಲಸಮಾಡುತ್ತಿದ್ದೆ. ಹದಿಮೂರನೆಯ ವಯಸ್ಸಿನಲ್ಲಿ ಪ್ರಾಥಮಿಕ ಶಾಲೆಯನ್ನು ಮುಗಿಸಿದಾಗ, ಅಭ್ಯಾಸಿಯೋಪಾದಿಯಲ್ಲಿ ಕೆಲಸಮಾಡಲು ನನ್ನ ಹೆತ್ತವರು ನನಗಾಗಿ ಏರ್ಪಡಿಸಿದರು. ಕೊಳಾಯಿಗಾರನಂತೆ ಮತ್ತು ಕಿಟಕಿ ಅಳವಡಿಸುವವನಂತೆ ತರಬೇತಿಯನ್ನು ನಾನು ಪಡೆಯಲಿಕ್ಕಾಗಿ, ನನ್ನ ಹೆತ್ತವರು ನನ್ನ ಯಜಮಾನನಿಗೆ, ಬಹುಮಟ್ಟಿಗೆ ಒಂದು ವರ್ಷಕ್ಕಾಗಿದ್ದ ಅವರ ಸಂಪೂರ್ಣ ಆದಾಯವನ್ನು—500 ಕಿಲೊಗ್ರಾಮ್ ಗೋಧಿಯನ್ನು ಮತ್ತು 20 ಕಿಲೊಗ್ರಾಮ್ ವನಸ್ಪತಿಯ ಎಣ್ಣೆಯನ್ನು—ಕೊಟ್ಟರು.
ಅಭ್ಯಾಸಿಯೋಪಾದಿ ಜೀವನವು—ಮನೆಯಿಂದ ಮೈಲಿಗಳು ದೂರ ಜೀವಿಸುತ್ತಾ ಮತ್ತು ಅನೇಕ ವೇಳೆ ನಸುಕಿನಿಂದ ಮಧ್ಯರಾತ್ರಿಯ ವರೆಗೆ ಕೆಲಸಮಾಡುತ್ತಾ—ಬಹಳ ಕಷ್ಟಕರವಾಗಿತ್ತು. ಕೆಲವೊಮ್ಮೆ ಮನೆಗೆ ಹಿಂದಿರುಗುವುದನ್ನು ನಾನು ಪರಿಗಣಿಸಿದೆ, ಆದರೆ ನನ್ನ ಹೆತ್ತವರಿಗೆ ಹಾಗೆ ಮಾಡಲು ನನಗೆ ಸಾಧ್ಯವಾಗಲಿಲ್ಲ. ನನ್ನ ಪರವಾಗಿ ಅವರು ಎಂತಹ ನಿಸ್ವಾರ್ಥವಾದ ತ್ಯಾಗವನ್ನು ಮಾಡಿದ್ದರು. ಆದುದರಿಂದ ನನ್ನ ಸಮಸ್ಯೆಗಳ ಕುರಿತು ಅವರು ತಿಳಿಯುವಂತೆ ನಾನು ಎಂದೂ ಬಿಡಲಿಲ್ಲ: ‘ಎಷ್ಟೇ ಕಷ್ಟವಾದರೂ ಪರವಾಗಿಲ್ಲ, ನೀನು ಬಿಡದೆ ಮುಂದುವರಿಯಬೇಕು’ ಎಂದು ಸ್ವತಃ ನನಗೆ ಹೇಳಿಕೊಂಡೆ.
ಈ ವರ್ಷಗಳಲ್ಲಿ, ನನ್ನ ಹೆತ್ತವರನ್ನು ನಾನು ಆಗಿಂದಾಗ್ಯೆ ಸಂದರ್ಶಿಸಲು ಶಕ್ತನಾದೆ, ಮತ್ತು ಕಟ್ಟಕಡೆಗೆ 18 ವರ್ಷದವನಾದಾಗ ನನ್ನ ತರಬೇತಿಯನ್ನು ಮುಗಿಸಿದೆ. ಕೆಲಸದ ಪ್ರತೀಕ್ಷೆಗಳು ಹೆಚ್ಚಾಗಿದ್ದ ರಾಜಧಾನಿಯಾದ ಆ್ಯಥೆನ್ಸ್ಗೆ ಹೋಗಲು ನಿರ್ಧರಿಸಿದೆ. ಅಲ್ಲಿ ಉದ್ಯೋಗವನ್ನು ಕಂಡುಕೊಂಡೆ ಮತ್ತು ಒಂದು ಕೋಣೆಯನ್ನು ಬಾಡಿಗೆಗೆ ತೆಗೆದುಕೊಂಡೆ. ಪ್ರತಿ ದಿನ ಕೆಲಸದ ತರುವಾಯ, ಮನೆಗೆ ಹಿಂದಿರುಗಿ, ನಾನೇ ಅಡಿಗೆ ಮಾಡಿ, ಕೋಣೆಯನ್ನು ಶುಚಿಮಾಡಿ, ಮತ್ತು ತದನಂತರ ನನಗಿದ್ದ ಕೊಂಚ ಬಿಡುವಿನ ಸಮಯವನ್ನು ಇಂಗ್ಲಿಷ್, ಜರ್ಮನ್, ಮತ್ತು ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಾ ವ್ಯಯಿಸಿದೆ.
ಇತರ ಯುವಕರ ಅನೈತಿಕ ಮಾತುಕತೆ ಮತ್ತು ವರ್ತನೆ ನನ್ನನ್ನು ಬಾಧಿಸಿತು, ಆದುದರಿಂದ ನಾನು ಅವರ ಸಹವಾಸವನ್ನು ತೊರೆದೆ. ಆದರೆ ಇದು ನನ್ನಲ್ಲಿ ಬಹಳ ಏಕಾಂಗಿಯ ಭಾವನೆಯನ್ನು ಮೂಡಿಸಿತು. ನನಗೆ 21 ವರ್ಷ ವಯಸ್ಸಾದಾಗ, ಸೈನಿಕ ಸೇವೆಯನ್ನು ಮಾಡುವಂತೆ ನಾನು ಕೇಳಿಕೊಳ್ಳಲ್ಪಟ್ಟೆ, ಮತ್ತು ಆ ಸಮಯದಲ್ಲಿ ಭಾಷೆಗಳ ನನ್ನ ಅಭ್ಯಾಸವನ್ನು ನಾನು ಮುಂದುವರಿಸಿದೆ. ಆಮೇಲೆ, ಮಾರ್ಚ್ 1964ರಲ್ಲಿ, ಸೇನೆಯನ್ನು ನಾನು ಬಿಟ್ಟಾದ ಮೇಲೆ, ಆಸ್ಟ್ರೇಲಿಯಕ್ಕೆ ವಲಸೆಹೋಗಿ ಮೆಲ್ಬರ್ನ್ನಲ್ಲಿ ನೆಲೆಸಿದೆ.
ಒಂದು ಹೊಸ ದೇಶದಲ್ಲಿ ಧಾರ್ಮಿಕ ತಲಾಷು
ನಾನು ಬೇಗನೆ ಕೆಲಸವನ್ನು ಕಂಡುಕೊಂಡೆ, ಆ್ಯಲೆಕ್ಸಾಂಡ್ರಾ ಎಂಬ ಹೆಸರಿನ ಇನ್ನೊಬ್ಬ ಗ್ರೀಕ್ ವಲಸೆಗಾರಳನ್ನು ಭೇಟಿಯಾದೆ, ಮತ್ತು ನನ್ನ ಆಗಮನದ ಆರು ತಿಂಗಳುಗಳೊಳಗೆ ನಾವು ವಿವಾಹವಾದೆವು. ಹಲವಾರು ವರ್ಷಗಳಾನಂತರ, 1969ರಲ್ಲಿ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದ ಒಬ್ಬಾಕೆ ವೃದ್ಧ ಸ್ತ್ರೀ, ನಮ್ಮ ಮನೆಗೆ ಭೇಟಿನೀಡಿದರು ಮತ್ತು ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳನ್ನು ನೀಡಿದರು. ಪತ್ರಿಕೆಗಳು ಅಭಿರುಚಿಯುಳ್ಳದ್ದಾಗಿವೆಯೆಂದು ನಾನು ಕಂಡುಕೊಂಡೆ, ಆದುದರಿಂದ ಅವುಗಳನ್ನು ಬಿಸಾಡಬಾರದೆಂದು ನನ್ನ ಹೆಂಡತಿಗೆ ಹೇಳುತ್ತಾ, ಅವುಗಳನ್ನು ಸುರಕ್ಷಿತವಾದೊಂದು ಸ್ಥಳದಲ್ಲಿ ಇಟ್ಟೆ. ಒಂದು ವರ್ಷದ ತರುವಾಯ ಇತರ ಇಬ್ಬರು ಸಾಕ್ಷಿಗಳು ಸಂದರ್ಶಿಸಿದರು ಮತ್ತು ಒಂದು ಉಚಿತ ಮನೆ ಬೈಬಲ್ ಅಧ್ಯಯನವನ್ನು ನನಗೆ ನೀಡಿದರು. ನಾನು ಸ್ವೀಕರಿಸಿದೆ, ಮತ್ತು ನನ್ನ ಜೀವಿತದಲ್ಲಿ ಇದ್ದ ಶೂನ್ಯ ಭಾವವನ್ನು ತುಂಬಲು ನಾನು ಎದುರುನೋಡುತ್ತಿದ್ದ ವಿಷಯಗಳನ್ನೇ ನಾನು ಶಾಸ್ತ್ರಗಳಿಂದ ಕಲಿತೆ.
ಸಾಕ್ಷಿಗಳೊಂದಿಗೆ ನಾನು ಅಭ್ಯಾಸ ಮಾಡುತ್ತಿರುವೆನೆಂದು ನನ್ನ ನೆರೆಯಾಕೆಗೆ ತಿಳಿದ ಕೂಡಲೆ, ಆಕೆ ಇವ್ಯಾಂಜೆಲಿಸ್ಟ್ಸ್ನವರು ಹೆಚ್ಚು ಉತ್ತಮ ಧರ್ಮದವರೆಂದು ಹೇಳಿಕೊಳ್ಳುತ್ತಾ, ನನ್ನನ್ನು ಅವರಿಗೆ ಪರಿಚಯಿಸಿದಳು. ಫಲವಾಗಿ, ಇವ್ಯಾಂಜೆಲಿಸ್ಟ್ ಚರ್ಚಿನ ಒಬ್ಬ ಹಿರಿಯನೊಂದಿಗೆ ಕೂಡ ಅಭ್ಯಾಸಿಸಲು ನಾನು ತೊಡಗಿದೆ. ಸತ್ಯ ಧರ್ಮವನ್ನು ಕಂಡುಹಿಡಿಯಲು ನಾನು ನಿಶ್ಚಯಿಸಿದ್ದ ಕಾರಣ, ಇವ್ಯಾಂಜೆಲಿಸ್ಟ್ರ ಮತ್ತು ಸಾಕ್ಷಿಗಳ—ಇಬ್ಬರ ಕೂಟಗಳನ್ನೂ ನಾನು ಹಾಜರಾಗತೊಡಗಿದೆ.
ಅದೇ ಸಮಯದಲ್ಲಿ, ನನ್ನ ಗ್ರೀಕ್ ಪಾಲನೆಗೆ ಮರ್ಯಾದೆ ತೋರಿಸುತ್ತಾ, ಆರ್ತೊಡಾಕ್ಸ್ ಧರ್ಮವನ್ನು ಆಳವಾಗಿ ಪರಿಶೀಲಿಸತೊಡಗಿದೆ. ಒಂದು ದಿನ ನಾನು ಮೂರು ಗ್ರೀಕ್ ಆರ್ತೊಡಾಕ್ಸ್ ಚರ್ಚುಗಳಿಗೆ ಹೋದೆ. ನನ್ನ ಸಂದರ್ಶನದ ಉದ್ದೇಶವನ್ನು ನಾನು ಮೊದಲನೆಯ ಸ್ಥಳದಲ್ಲಿ ವಿವರಿಸಿದಾಗ, ನಿಧಾನವಾಗಿ, ಅಲ್ಲಿಂದ ಹೋಗುವಂತೆ ಪಾದ್ರಿಯು ನನಗೆ ಸೂಚಿಸಿದನು. ಹಾಗೆ ಸೂಚಿಸಿದಾಗ, ನಾವು ಗ್ರೀಕರು, ಆದುದರಿಂದ ಸಾಕ್ಷಿಗಳೊಂದಿಗಾಗಲಿ ಯಾ ಇವ್ಯಾಂಜೆಲಿಸ್ಟ್ ಜನರೊಂದಿಗಾಗಲಿ ಸೇರುವುದು ತಪ್ಪೆಂದು ಅವನು ವಿವರಿಸಿದನು.
ಅವನ ಮನೋಭಾವವು ನನ್ನನ್ನು ಆಶ್ಚರ್ಯಗೊಳಿಸಿತು, ಆದರೆ ‘ಬಹುಶಃ ಈ ಪಾದ್ರಿಯು ಚರ್ಚಿನ ಒಳ್ಳೆಯ ಪ್ರತಿನಿಧಿಯಾಗಿಲ್ಲವೆಂದು’ ನಾನು ನೆನಸಿದೆ. ನನಗೆ ತುಂಬ ಆಶ್ಚರ್ಯವಾಗುವಂತೆ, ಎರಡನೆಯ ಚರ್ಚಿನ ಪಾದ್ರಿ ಕೂಡ ಅದೇ ರೀತಿಯಲ್ಲಿ ಪ್ರತಿಕ್ರಿಯಿಸಿದನು. ಹಾಗಿದ್ದರೂ, ಪ್ರತಿ ಶನಿವಾರ ಸಂಜೆ ಅವನ ಚರ್ಚಿನಲ್ಲಿ ಒಬ್ಬ ದೇವತಾಶಾಸ್ತ್ರಜ್ಞನ ಮೂಲಕ ನಡೆಸಲಾಗುವ ಒಂದು ಬೈಬಲ್ ಅಧ್ಯಯನ ಕ್ಲಾಸಿದೆ ಎಂದು ಅವನು ನನಗೆ ಹೇಳಿದನು. ನಾನು ಮೂರನೆಯ ಚರ್ಚಿಗೆ ಹೋದಾಗ, ನನಗೆ ಇನ್ನೂ ಹೆಚ್ಚು ಭ್ರಮನಿರಸನವಾಯಿತು.
ಹಾಗಿದ್ದರೂ, ಎರಡನೆಯ ಚರ್ಚಿನಲ್ಲಿ ನಡೆಸಲಾಗುತ್ತಿದ್ದ ಬೈಬಲ್ ಅಧ್ಯಯನ ಕ್ಲಾಸನ್ನು ಹಾಜರಾಗಲು ನಾನು ನಿರ್ಧರಿಸಿದೆ, ಮತ್ತು ಮುಂದಿನ ಶನಿವಾರ ಅಲ್ಲಿಗೆ ಭೇಟಿನೀಡಿದೆ. ಅಪೊಸ್ತಲರ ಕೃತ್ಯಗಳ ಬೈಬಲ್ ಪುಸ್ತಕದಿಂದ ವಾಚನವನ್ನು ಅನುಸರಿಸುವುದರಲ್ಲಿ ನಾನು ಆನಂದಿಸಿದೆ. ಪೇತ್ರನ ಮುಂದೆ ಕೊರ್ನೇಲಿಯಸ್ ಮೊಣಕಾಲೂರಿದ ಭಾಗವನ್ನು ಓದುವಾಗ, ದೇವತಾಶಾಸ್ತ್ರಜ್ಞನು ಓದುವಿಕೆಯನ್ನು ತಡೆದನು ಮತ್ತು ಪೇತ್ರನು ಸರಿಯಾಗಿ ಕೊರ್ನೇಲಿಯಸನ ಆರಾಧನಾ ಕ್ರಿಯೆಯನ್ನು ನಿರಾಕರಿಸಿದನೆಂದು ಸೂಚಿಸಿದನು. (ಅ. ಕೃತ್ಯಗಳು 10:24-26) ಆಗ ನಾನು ನನ್ನ ಕೈಯನ್ನು ಮೇಲೆತ್ತಿ ನನಗೊಂದು ಪ್ರಶ್ನೆಯಿದೆ ಎಂದು ಹೇಳಿದೆ.
“ಒಳ್ಳೇದು, ನಿನಗೆ ತಿಳಿಯಬೇಕಾದ ವಿಷಯವು ಯಾವುದು?”
“ಸರಿ, ಅಪೊಸ್ತಲ ಪೇತ್ರನು ಆರಾಧಿಸಲ್ಪಡಲು ನಿರಾಕರಿಸಿದ್ದಲ್ಲಿ, ನಾವು ಯಾಕೆ ಅವನ ಪ್ರತಿಮೆಯನ್ನು ಇಟ್ಟು ಅದನ್ನು ಆರಾಧಿಸುತ್ತೇವೆ?”
ಹಲವಾರು ಸೆಕೆಂಡುಗಳ ವರೆಗೆ ಸಂಪೂರ್ಣ ಮೌನವಿತ್ತು. ಆಮೇಲೆ ಅಲ್ಲಿ ಒಂದು ಬಾಂಬ್ ಬಿದ್ದಿತೋ ಎಂಬಂತಿತ್ತು. ಜನರು ಕೋಪೋದ್ರೇಕಗೊಂಡರು, ಮತ್ತು “ನೀನು ಎಲ್ಲಿಂದ ಬಂದೆ?” ಎಂಬ ಕೂಗುಗಳಿದ್ದವು. ಬಹಳಷ್ಟು ಕೂಗಾಟದೊಂದಿಗೆ ಎರಡು ಗಂಟೆಗಳ ವರೆಗೆ ಬಿಸಿಯಾದ ವಾಗ್ವಾದ ನಡೆಯಿತು. ಕಟ್ಟಕಡೆಗೆ, ನಾನು ಅಲ್ಲಿಂದ ಬರುವಾಗ, ನನಗೊಂದು ಪುಸ್ತಕವನ್ನು ಮನೆಗೆ ತೆಗೆದುಕೊಂಡು ಹೋಗುವಂತೆ ನೀಡಲಾಯಿತು.
ಅದನ್ನು ತೆರೆದಾಗ, ನಾನು ಓದಿದ ಮೊದಲ ಶಬ್ದಗಳು: “ನಾವು ಗ್ರೀಕರು, ಮತ್ತು ನಮ್ಮ ಧರ್ಮವು ನಮ್ಮ ಸಂಪ್ರದಾಯವನ್ನು ಸಂರಕ್ಷಿಸುವ ಸಲುವಾಗಿ ರಕ್ತವನ್ನು ಸುರಿದಿದೆ,” ಎಂಬುದಾಗಿದ್ದವು. ದೇವರು ಗ್ರೀಕ್ ಜನರಿಗೆ ಮಾತ್ರ ಸೇರಿರಲಿಲ್ಲವೆಂದು ನನಗೆ ಗೊತ್ತಿತ್ತು, ಆದುದರಿಂದ ನಾನು ಕೂಡಲೇ ಗ್ರೀಕ್ ಆರ್ತೊಡಾಕ್ಸ್ ಚರ್ಚ್ನೊಂದಿಗೆ ಸಂಬಂಧಗಳನ್ನು ಮುರಿದುಹಾಕಿದೆ. ಆಗಿನಿಂದ ಸಾಕ್ಷಿಗಳೊಂದಿಗೆ ಮಾತ್ರ ನನ್ನ ಬೈಬಲ್ ಅಧ್ಯಯನವನ್ನು ನಾನು ಮುಂದುವರಿಸಿದೆ. ಎಪ್ರಿಲ್ 1970ರಲ್ಲಿ, ಯೆಹೋವನಿಗೆ ನನ್ನ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ನಾನು ಸಂಕೇತಿಸಿದೆ, ಮತ್ತು ನನ್ನ ಹೆಂಡತಿಯು ಆರು ತಿಂಗಳುಗಳ ಅನಂತರ ದೀಕ್ಷಾಸ್ನಾನ ಪಡೆದುಕೊಂಡಳು.
ಹಳ್ಳಿಯ ಪಾದ್ರಿಯೊಂದಿಗೆ ಸಂಪರ್ಕ
ಆ ವರ್ಷದ ಕೊನೆಗೆ, ಗ್ರೀಸ್ನಲ್ಲಿದ್ದ ನನ್ನ ಸ್ವಂತ ಹಳ್ಳಿಯ ಪಾದ್ರಿಯು, ಹಳ್ಳಿಯ ಚರ್ಚಿನ ದುರಸ್ತಿಗಾಗಿ ಸಹಾಯ ಮಾಡಲು ಹಣವನ್ನು ಕಳುಹಿಸುವಂತೆ ವಿನಂತಿಸುವ ಒಂದು ಪತ್ರವನ್ನು ಕಳುಹಿಸಿದನು. ಹಣವನ್ನು ಕಳುಹಿಸುವ ಬದಲು, ಈಗ ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೆಂದು ಮತ್ತು ಸತ್ಯವನ್ನು ಕಂಡುಕೊಂಡಿದ್ದೇನೆಂದು ನಾನು ನಂಬಿದ್ದೇನೆ ಎಂಬುದನ್ನು ವಿವರಿಸುವ ಒಂದು ಪತ್ರದೊಂದಿಗೆ ಅನಂತ ಜೀವನಕ್ಕೆ ನಡೆಸುವ ಸತ್ಯವು ಎಂಬ ಪುಸ್ತಕವನ್ನು ನಾನು ಕಳುಹಿಸಿದೆ. ನನ್ನ ಪತ್ರ ಸಿಕ್ಕಿದ ಮೇಲೆ, ಆಸ್ಟ್ರೇಲಿಯಕ್ಕೆ ಹೋದ ಒಬ್ಬ ವಲಸೆಗಾರನು ದಂಗೆ ಎದ್ದಿದ್ದಾನೆಂದು ಚರ್ಚ್ನಲ್ಲಿ ಅವನು ಪ್ರಕಟಿಸಿದನು.
ಅದಾದನಂತರ, ಆಸ್ಟ್ರೇಲಿಯದಲ್ಲಿ ಗಂಡು ಮಕ್ಕಳಿದ್ದ ತಾಯಂದಿರು ಅದು ತಮ್ಮ ಮಗನೊ ಎಂದು ಪಾದ್ರಿಯನ್ನು ಕೇಳುತ್ತಾ ಇದ್ದರು. ನನ್ನ ತಾಯಿ ಅವನ ಮನೆಗೂ ಕೂಡ ಹೋಗಿ, ಅವಳಿಗೆ ಹೇಳುವಂತೆ ಬೇಡಿಕೊಂಡಳು. “ದೌರ್ಭಾಗ್ಯದಿಂದ, ಅವನು ನಿನ್ನ ಮಗನೇ,” ಎಂದು ಅವನು ಹೇಳಿದನು. ನನ್ನ ಕುರಿತು ಇದನ್ನು ತನಗೆ ಹೇಳುವುದಕ್ಕಿಂತ ಅವನು ತನ್ನನ್ನು ಕೊಲ್ಲುವುದು ತನಗೆ ಇಷ್ಟವಾಗುತ್ತಿತ್ತೆಂದು ತಾಯಿ ನನಗೆ ತದನಂತರ ಹೇಳಿದಳು.
ಗ್ರೀಸಿಗೆ ಹಿಂದಿರುಗುವಿಕೆ
ನಮ್ಮ ದೀಕ್ಷಾಸ್ನಾನದ ಬಳಿಕ, ನನ್ನ ಹೆಂಡತಿ ಮತ್ತು ನಾನು ಗ್ರೀಸಿಗೆ ಹಿಂದಿರುಗಿ ನಮ್ಮ ಕುಟುಂಬಗಳಿಗೆ ಮತ್ತು ಗೆಳೆಯರಿಗೆ ನಾವು ಬೈಬಲಿನಿಂದ ಕಲಿತಿರುವ ಒಳ್ಳೆಯ ವಿಷಯಗಳನ್ನು ಹೇಳಲು ಬಯಸಿದೆವು. ಆದುದರಿಂದ ಎಪ್ರಿಲ್ 1971ರಲ್ಲಿ, ನಮ್ಮ ಐದು ವರ್ಷ ಪ್ರಾಯದ ಮಗಳು, ಥಿಮಿಟ್ರಳೊಂದಿಗೆ ಜೊತೆಗೂಡಿ, ನನ್ನ ಸ್ವಂತ ಹಳ್ಳಿಯಾದ ಕಾರೀಯೆಸ್ನಿಂದ 30 ಕಿಲೊಮೀಟರ್ ದೂರದಲ್ಲಿರುವ ಕೀಪಾರೀಸ್ಯಾ ಎಂಬ ಊರಿನಲ್ಲಿ ತಂಗುತ್ತಾ, ದೀರ್ಘಕಾಲದ ಒಂದು ರಜೆಗಾಗಿ ನಾವು ಹಿಂದಿರುಗಿದೆವು. ನಮ್ಮ ಹೋಗಿಬರುವ ವಿಮಾನ ಟಿಕೆಟುಗಳು ಆರು ತಿಂಗಳಿನ ತಂಗುವಿಕೆಗಾಗಿ ಸಮಂಜಸವಾಗಿದ್ದವು.
ಮನೆಯಲ್ಲಿ ಎರಡನೆಯ ರಾತ್ರಿ, ತಾಯಿ ಅಳಲಾರಂಭಿಸಿದಳು ಮತ್ತು ನಾನು ತಪ್ಪು ಮಾರ್ಗವನ್ನು ಹಿಡಿದಿರುವೆನೆಂದು ಮತ್ತು ಕುಟುಂಬದ ಹೆಸರನ್ನು ಕಳಂಕಿತಗೊಳಿಸಿರುವೆನೆಂದು ಕಂಬನಿ ಸುರಿಸುತ್ತಾ ಹೇಳಿದಳು. ಅಳುತ್ತಾ ಬಿಕ್ಕುತ್ತಾ, ನನ್ನ “ತಪ್ಪಾದ” ಮಾರ್ಗದಿಂದ ತಿರುಗುವಂತೆ ಅವಳು ನನ್ನನ್ನು ಬೇಡಿಕೊಂಡಳು. ಆಮೇಲೆ ಅವಳು ಮೂರ್ಛೆಹೋದಳು ಮತ್ತು ನನ್ನ ತೋಳುಗಳಲ್ಲಿ ಕುಸಿದುಬಿದ್ದಳು. ಬಾಲ್ಯಾವಸ್ಥೆಯಿಂದ ನಮಗೆ ಎಷ್ಟು ಪ್ರೀತಿಯಿಂದ ಆಕೆ ಕಲಿಸಿದ ದೇವರ ಕುರಿತು ನನ್ನ ಜ್ಞಾನವನ್ನು ನಾನು ಕೇವಲ ಹೆಚ್ಚಿಸಿಕೊಂಡಿದ್ದೆ ಎಂಬುದಾಗಿ ವಿವರಿಸುತ್ತಾ, ಮರುದಿನ ಅವಳೊಂದಿಗೆ ತರ್ಕಿಸಲು ನಾನು ಪ್ರಯತ್ನಿಸಿದೆ. ಮುಂದಿನ ಸಂಜೆ ಸ್ಥಳಿಕ ಪಾದ್ರಿ ಮತ್ತು ಹಳ್ಳಿಯ ಪೌರಸಭಾಧ್ಯಕ್ಷನೊಂದಿಗೆ ಆ ಸ್ಮರಣೀಯ ಮುಕಾಬಿಲೆ ನಡೆದಿತ್ತು.
ಆ್ಯಥೆನ್ಸ್ನಲ್ಲಿ ಜೀವಿಸುತ್ತಿದ್ದ ನನ್ನ ಇಬ್ಬರು ಚಿಕ್ಕ ಸಹೋದರರು, ಈಸ್ಟರ್ಗಾಗಿ ತಂಗಲು ಬಂದಿದ್ದರು. ನಾನೊಬ್ಬ ಕುಷ್ಠ ರೋಗಿಯೋ ಎಂಬಂತೆ ಅವರಿಬ್ಬರೂ ನನ್ನನ್ನು ತೊರೆದರು. ಹಾಗಿದ್ದರೂ, ಒಂದು ದಿನ, ಇಬ್ಬರಲ್ಲಿ ಹಿರಿಯನು ಆಲಿಸಲು ತೊಡಗಿದನು. ಚರ್ಚೆಯ ಹಲವಾರು ಗಂಟೆಗಳಾನಂತರ, ಬೈಬಲಿನಿಂದ ನಾನು ಅವನಿಗೆ ತೋರಿಸಿದ್ದ ಎಲ್ಲ ವಿಷಯದೊಂದಿಗೆ ತಾನು ಸಮ್ಮತಿಯಿಂದಿದ್ದೇನೆಂದು ಅವನು ಹೇಳಿದನು. ಆ ದಿನದಿಂದ, ಕುಟುಂಬದ ಉಳಿದ ಸದಸ್ಯರ ಎದುರಿನಲ್ಲಿ ಅವನು ನನ್ನ ಪಕ್ಷ ವಹಿಸಿದನು.
ಅದಾದ ಬಳಿಕ, ನಾನು ನನ್ನ ಸಹೋದರನೊಂದಿಗೆ ಇರಲು ಅನೇಕ ವೇಳೆ ಆ್ಯಥೆನ್ಸ್ಗೆ ಭೇಟಿನೀಡಿದೆ. ನಾನು ಭೇಟಿನೀಡಿದ ಪ್ರತಿಸಲ, ಸುವಾರ್ತೆಯನ್ನು ಕೇಳಲು ಬರುವಂತೆ ಅವನು ಇತರ ಕುಟುಂಬಗಳನ್ನು ಆಮಂತ್ರಿಸಿದನು. ನನಗೆ ತುಂಬ ಆನಂದವಾಗುವಂತೆ, ಅವರು ಬೈಬಲ್ ಅಭ್ಯಾಸಗಳನ್ನು ನಡೆಸಿದ ಇತರ ಮೂರು ಕುಟುಂಬಗಳೊಂದಿಗೆ, ಅವನು ಮತ್ತು ಅವನ ಹೆಂಡತಿ ತದನಂತರ ದೇವರಿಗೆ ತಮ್ಮ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿದರು!
ವಾರಗಳು ಕ್ಷಿಪ್ರವಾಗಿ ಕಳೆದವು, ಮತ್ತು ನಮ್ಮ ಆರು ತಿಂಗಳುಗಳು ಕೊನೆಗೊಳ್ಳುವ ತುಸುಮೊದಲು, ನಮ್ಮ ಹಳ್ಳಿಯಿಂದ ಸುಮಾರು 70 ಕಿಲೊಮೀಟರ್ಗಳಷ್ಟು ದೂರದಲ್ಲಿರುವ ಒಂದು ಸಭೆಯಲ್ಲಿ ಸೇವೆ ಸಲ್ಲಿಸುತ್ತಿರುವ ಒಬ್ಬ ಸಾಕ್ಷಿಯು ಭೇಟಿನೀಡಿದನು. ಕ್ಷೇತ್ರದಲ್ಲಿ ಸಾರುವ ಕೆಲಸದ ಸಂಬಂಧದಲ್ಲಿ ಬೇಕಾಗಿದ್ದ ಸಹಾಯದ ಕುರಿತು ಅವನು ಸೂಚಿಸಿದನು ಮತ್ತು ಶಾಶ್ವತವಾಗಿ ತಂಗುವುದರ ಕುರಿತು ನಾನು ಯೋಚಿಸಿರುವೆನೊ ಎಂದು ಕೇಳಿದನು. ಆ ರಾತ್ರಿ ನನ್ನ ಹೆಂಡತಿಯೊಂದಿಗೆ ಅದರ ಸಾಧ್ಯತೆಯ ಕುರಿತು ನಾನು ಚರ್ಚಿಸಿದೆ.
ತಂಗುವುದು ಕಷ್ಟಕರವೆಂದು ನಾವಿಬ್ಬರೂ ಒಪ್ಪಿದೆವು. ಆದರೆ ಜನರು ಬೈಬಲ್ ಸತ್ಯವನ್ನು ಕೇಳುವ ಮಹಾ ಅಗತ್ಯವಿತ್ತೆಂಬುದು ಸ್ಪಷ್ಟವಾಗಿಗಿತ್ತು. ಕೊನೆಯದಾಗಿ, ಕಡಿಮೆಪಕ್ಷ ಒಂದು ಯಾ ಎರಡು ವರ್ಷಕ್ಕಾಗಿ ತಂಗಲು ನಾವು ನಿರ್ಧರಿಸಿದೆವು. ನಮ್ಮ ಮನೆ ಮತ್ತು ಕಾರನ್ನು ಮಾರಲು ಮತ್ತು ಆಕೆಗೆ ತರಲು ಸಾಧ್ಯವಿದ್ದ ಸಾಮಾನುಗಳನ್ನು ತರಲು ನನ್ನ ಹೆಂಡತಿ ಆಸ್ಟ್ರೇಲಿಯಕ್ಕೆ ಹಿಂದಿರುಗುವವಳಿದ್ದಳು. ನಮ್ಮ ನಿರ್ಣಯವನ್ನು ಮಾಡಿಯಾದ ಬಳಿಕ, ಮರುದಿನ ಬೆಳಗ್ಗೆ ನಾವು ಊರಿನೊಳಗೆ ಹೋಗಿ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡೆವು. ಸ್ಥಳಿಕ ಪ್ರಾಥಮಿಕ ಶಾಲೆಯಲ್ಲಿ ನಮ್ಮ ಮಗಳನ್ನು ಕೂಡ ನಾವು ಸೇರಿಸಿದೆವು.
ವಿರೋಧವು ಸ್ಫೋಟವಾಗುತ್ತದೆ
ನಮ್ಮ ವಿರುದ್ಧ ಕಾರ್ಯತಃ ಯುದ್ಧವನ್ನೇ ಬೇಗನೆ ಘೋಷಿಸಲಾಯಿತು. ವಿರೋಧವು ಪೊಲೀಸರಿಂದ, ಶಾಲಾ ಮುಖ್ಯೋಪಾಧ್ಯಾಯರಿಂದ, ಮತ್ತು ಶಿಕ್ಷಕರಿಂದ ಬಂದಿತು. ಶಾಲೆಯಲ್ಲಿ ಥಿಮೀಟ್ರ ಶಿಲುಬೆಯ ಸಂಕೇತವನ್ನು ಮಾಡುತ್ತಿರಲಿಲ್ಲ. ಶಾಲಾ ಅಧಿಕಾರಿಗಳು ಅವಳು ಒಪ್ಪುವಂತೆ ಹೆದರಿಸಲಿಕ್ಕಾಗಿ ಪ್ರಯತ್ನಿಸಲು ಒಬ್ಬ ಪೊಲೀಸನನ್ನು ಕರೆದರು, ಆದರೆ ಅವಳು ದೃಢವಾಗಿ ನಿಂತಳು. ಮುಖ್ಯೋಪಾಧ್ಯಾಯರನ್ನು ಭೇಟಿ ಮಾಡಲು ನನ್ನನ್ನು ಕರೆಸಲಾಯಿತು, ಮತ್ತು ನಾನು ಥಿಮೀಟ್ರಳನ್ನು ಕರೆದುಕೊಂಡು ಹೋಗುವಂತೆ ಆದೇಶಿಸಿದ ಆರ್ಚ್ಬಿಷಪ್ರಿಂದ ಬಂದ ಒಂದು ಪತ್ರವನ್ನು ಅವನು ನನಗೆ ತೋರಿಸಿದನು. ಮುಖ್ಯೋಪಾಧ್ಯಾಯರೊಂದಿಗೆ ದೀರ್ಘವಾದ ಒಂದು ಚರ್ಚೆಯ ಅನಂತರ, ಶಾಲೆಯಲ್ಲಿ ಇರುವಂತೆ ಅವಳಿಗೆ ಅನುಮತಿ ಸಿಕ್ಕಿತು.
ಸಕಾಲದಲ್ಲಿ ಯೆಹೋವನ ಸಾಕ್ಷಿಗಳ ಒಂದು ಸಮ್ಮೇಳನವನ್ನು ಹಾಜರಾಗಿದ್ದ ಕಿಪಾರಿಸ್ಯಾನಲ್ಲಿರುವ ಒಬ್ಬ ದಂಪತಿಗಳ ಕುರಿತು ನಾನು ಅರಿತೆ, ಮತ್ತು ನಾವು ಅವರ ಆಸಕ್ತಿಯನ್ನು ನವೀಕರಿಸಲು ಶಕ್ತರಾದೆವು. ಹತ್ತಿರದಲ್ಲಿದ್ದ ಹಳ್ಳಿಯಿಂದ ಸಾಕ್ಷಿಗಳನ್ನು ಬೈಬಲ್ ಅಧ್ಯಯನಗಳಿಗಾಗಿ ನಮ್ಮ ಮನೆಗೆ ನನ್ನ ಹೆಂಡತಿ ಮತ್ತು ನಾನು ಆಮಂತ್ರಿಸಿದೆವು. ಸ್ವಲ್ಪ ಸಮಯದಲ್ಲಿಯೆ, ಪೊಲೀಸರು ಬಂದು ನಮ್ಮೆಲ್ಲರನ್ನು ಪೊಲೀಸ್ ಠಾಣೆಗೆ ವಿಷಯಾನೇಷ್ವಣೆಗಾಗಿ ಕರೆದುಕೊಂಡು ಹೋದರು. ಲೈಸನ್ಸ್ ಇಲ್ಲದೆ ನನ್ನ ಮನೆಯನ್ನು ಆರಾಧನೆಯ ಒಂದು ಸ್ಥಳವಾಗಿ ಉಪಯೋಗಿಸುವುದಾಗಿ ನನ್ನನ್ನು ಆಪಾದಿಸಲಾಯಿತು. ನಮ್ಮನ್ನು ಸೆರೆಮನೆಯಲ್ಲಿ ಹಾಕದೆ ಇದ್ದ ಕಾರಣ, ನಮ್ಮ ಕೂಟಗಳನ್ನು ನಾವು ಮುಂದುವರಿಸಿದೆವು.
ನನಗೊಂದು ಕೆಲಸ ನೀಡಲ್ಪಟ್ಟಾಗ್ಯೂ, ಅದರ ಕುರಿತು ಬಿಷಪ್ ಕೇಳಿದೊಡನೆಯೆ, ನನ್ನನ್ನು ಅಲ್ಲಿಂದ ಹೊರಹಾಕದಿದ್ದರೆ ನನ್ನ ಯಜಮಾನನ ಅಂಗಡಿಯನ್ನು ಮುಚ್ಚಿಬಿಡುವುದಾಗಿ ಅವನು ಬೆದರಿಸಿದನು. ಕೊಳಾಯಿ⁄ಲೋಹದ ತಗಡಿನ ಅಂಗಡಿಯು ಮಾರಾಟಕ್ಕಿತ್ತು, ಮತ್ತು ನಾವು ಅದನ್ನು ಕೊಂಡುಕೊಳ್ಳಲು ಶಕ್ತರಾದೆವು. ಬಹುಮಟ್ಟಿಗೆ ಕೂಡಲೇ ಇಬ್ಬರು ಪಾದ್ರಿಗಳು ವ್ಯಾಪಾರವನ್ನು ಮುಚ್ಚಿಸಿ ಬಿಡುವ ಬೆದರಿಕೆಗಳೊಂದಿಗೆ ಬಂದರು, ಮತ್ತು ಕೆಲವೊಂದು ವಾರಗಳಾನಂತರ ನಮ್ಮ ಕುಟುಂಬವು ಬಹಿಷ್ಕರಿಸಲ್ಪಡಬೇಕೆಂದು ಆರ್ಚ್ಬಿಷಪ್ಪರು ಆದೇಶಿಸಿದರು. ಆ ಸಮಯದಲ್ಲಿ ಗ್ರೀಕ್ ಆರ್ತೊಡಾಕ್ಸ್ ಚರ್ಚಿನಿಂದ ಬಹಿಷ್ಕರಿಸಲ್ಪಟ್ಟ ಯಾವುದೇ ವ್ಯಕ್ತಿಯನ್ನು ಸಂಪೂರ್ಣವಾಗಿ ಸಮಾಜ ತೊರೆದ ವ್ಯಕ್ತಿಯಂತೆ ನೋಡಿಕೊಳ್ಳಲಾಗುತ್ತಿತ್ತು. ಯಾವನನ್ನೂ ಒಳಗೆ ಬರುವುದರಿಂದ ತಡೆಯಲು ನಮ್ಮ ಅಂಗಡಿಯ ಮುಂದೆ ಒಬ್ಬ ಪೊಲೀಸ್ ಅಧಿಕಾರಿಯನ್ನು ನಿಲ್ಲಿಸಲಾಗಿತ್ತು. ಯಾವುದೇ ಗಿರಾಕಿಗಳು ಇಲ್ಲದಿದ್ದರೂ, ನಾವು ಬಗ್ಗದೆ ಪ್ರತಿಯೊಂದು ದಿನ ಅಂಗಡಿಯನ್ನು ತೆರೆದಿಟ್ಟೆವು. ನಮ್ಮ ದುಸ್ಥಿತಿಯು ಬೇಗನೆ ಬೀದಿ ಮಾತಾಯಿತು.
ಸೆರೆಹಿಡಿಯಲ್ಪಟ್ಟದ್ದು ಮತ್ತು ವಿಚಾರಣೆಗೆ ಗುರಿಮಾಡಲ್ಪಟ್ಟದ್ದು
ಒಂದು ಶನಿವಾರದಂದು ಇನ್ನೊಬ್ಬ ವ್ಯಕ್ತಿ ಮತ್ತು ನಾನು ಅವನ ಮೊಟರ್ಬೈಕ್ನಲ್ಲಿ ಹತ್ತಿರದ ಪಟ್ಟಣದಲ್ಲಿ ಸಾಕ್ಷಿನೀಡಲು ಹೊರಟೆವು. ಅಲ್ಲಿ ಪೊಲೀಸರು ನಮ್ಮನ್ನು ತಡೆದರು ಮತ್ತು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಅಲ್ಲಿ ನಮ್ಮನ್ನು ಸೆರೆಯಲ್ಲಿ ಇಡೀ ವಾರಾಂತ್ಯದ ವರೆಗೆ ಇಡಲಾಯಿತು. ಸೋಮವಾರ ಬೆಳಗ್ಗೆ ನಮ್ಮನ್ನು ರೈಲುಗಾಡಿಯಲ್ಲಿ ಪುನಃ ಕಿಪಾರಿಸ್ಯಾಗೆ ಕರೆದುಕೊಂಡು ಹೋಗಲಾಯಿತು. ನಮ್ಮನ್ನು ಸೆರೆಹಿಡಿಯಲಾಗಿತ್ತು ಎಂಬ ಸುದ್ದಿ ಹರಡಿತು, ಮತ್ತು ನಮ್ಮ ಪೊಲೀಸು ಬೆಂಗಾವಲವರೊಂದಿಗೆ ನಾವು ಬಂದು ತಲಪುವುದನ್ನು ನೋಡಲು ರೈಲು ನಿಲ್ದಾಣದಲ್ಲಿ ಒಂದು ಸಮೂಹವು ಕೂಡಿಬಂದಿತ್ತು.
ಬೆರಳೊತ್ತಿಸಲ್ಪಟ್ಟ ಅನಂತರ, ನಾವು ಸಾರ್ವಜನಿಕ ನ್ಯಾಯ ಖಾತೆಯ ಅಧಿಕಾರಿಯ ಬಳಿಗೆ ಕೊಂಡೊಯ್ಯಲ್ಪಟ್ಟೆವು. ಪೊಲೀಸರ ಮೂಲಕ ಪ್ರಶ್ನಿಸಲ್ಪಟ್ಟ ಹಳ್ಳಿಗರಿಂದ ಸಂಕಲಿಸಲ್ಪಟ್ಟಿದ್ದ ನಮ್ಮ ವಿರುದ್ಧವಿದ್ದ ಆಪಾದನೆಗಳನ್ನು ದೊಡ್ಡ ಧ್ವನಿಯಲ್ಲಿ ತಾನು ಓದುವೆನೆಂದು ಹೇಳುವ ಮೂಲಕ, ಕಾರ್ಯವಿಧಾನಗಳನ್ನು ಅವನು ಆರಂಭಿಸಿದನು. “ಯೇಸು ಕ್ರಿಸ್ತನು ಇಸವಿ 1914ರಲ್ಲಿ ರಾಜನಾಗಿದ್ದಾನೆಂದು ಅವರು ನಮಗೆ ಹೇಳಿದರು,” ಎಂದು ಮೊದಲನೆಯ ಆಪಾದನೆಯು ಹೇಳಿತು.
“ಈ ವಿಚಿತ್ರವಾದ ವಿಚಾರವು ನಿಮಗೆ ಎಲ್ಲಿಂದ ಸಿಕ್ಕಿತು?” ನ್ಯಾಯಾಧಿಕಾರಿಯು ಜಗಳ ಮಾಡುವವನಂತೆ ಕೇಳಿದನು.
ನಾನು ಮುಂದೆ ಬಂದು ಅವನ ಮೇಜಿನ ಮೇಲಿದ್ದ ಬೈಬಲನ್ನು ತೆಗೆದುಕೊಂಡು ಅದನ್ನು ಮತ್ತಾಯ 24ನೆಯ ಅಧ್ಯಾಯಕ್ಕೆ ತೆರೆದು ಓದುವಂತೆ ನಾನು ಸೂಚಿಸಿದೆ. ಒಂದು ಗಳಿಗೆ ಅವನು ಹಿಂಜರಿದನು ಆದರೆ ಆಮೇಲೆ ಬೈಬಲನ್ನು ತೆಗೆದುಕೊಂಡು ಓದಲು ಆರಂಭಿಸಿದನು. ಕೆಲವೊಂದು ನಿಮಿಷಗಳ ವರೆಗೆ ಓದಿಯಾದ ಬಳಿಕ, ಅವನು ಉತ್ತೇಜಿತನಾಗಿ ಹೇಳಿದ್ದು: “ಇದು ಸತ್ಯವಾಗಿದ್ದರೆ, ನಾನು ಎಲ್ಲವನ್ನು ನಿಲ್ಲಿಸಿ ಒಂದು ಮಠವನ್ನು ಸೇರಿಕೊಳ್ಳಬೇಕು!”
“ಬೇಡ”ವೆಂದು ನಾನು ಶಾಂತವಾಗಿ ಹೇಳಿದೆ. “ಬೈಬಲಿನ ಸತ್ಯವನ್ನು ನೀವು ಕಲಿಯಬೇಕು ಮತ್ತು ತದನಂತರ ಹಾಗೆಯೆ ಸತ್ಯವನ್ನು ಕಂಡುಕೊಳ್ಳಲು ಇತರರಿಗೆ ಸಹಾಯ ಮಾಡಬೇಕು.”
ಕೆಲವು ವಕೀಲರು ಆಗಮಿಸಿದರು, ಮತ್ತು ಅವರಲ್ಲಿ ಕೆಲವರಿಗೆ ಆ ದಿನ ಸಾಕ್ಷಿನೀಡಲು ನಾವು ಶಕ್ತರಾದೆವು. ಹಾಸ್ಯವ್ಯಂಗ್ಯವಾಗಿ, ಇದು ಇನ್ನೊಂದು ಆಪಾದನೆಯಾಗಿ—ಮತಾಂತರಿಸುವುದರಲ್ಲಿ—ಪರಿಣಮಿಸಿತು!
ಆ ವರ್ಷದಲ್ಲಿ ಮೂರು ನ್ಯಾಯಾಲಯದ ಕೇಸುಗಳನ್ನು ನಾವು ಎದುರಿಸಿದೆವು, ಆದರೆ ಅಂತಿಮವಾಗಿ ಎಲ್ಲ ಆಪಾದನೆಗಳಿಂದ ನಾವು ಬಿಡುಗಡೆ ಮಾಡಲ್ಪಟ್ಟೆವು. ನಮ್ಮ ಕಡೆಗೆ ಜನರ ಮನೋಭಾವದ ಮಟ್ಟಿಗೆ, ಆ ವಿಜಯವು ಚಳಿ ಮುರಿಯುವಂತೆ ತೋರಿತು. ಆಗಿನಿಂದ ಅವರು ನಮ್ಮನ್ನು ಹೆಚ್ಚು ಸ್ವತಂತ್ರರಾಗಿ ಸಮೀಪಿಸಿ, ದೇವರ ರಾಜ್ಯದ ಕುರಿತು ನಮಗೆ ಹೇಳಲಿಕ್ಕಿದ್ದ ವಿಷಯವನ್ನು ಕೇಳಲು ತೊಡಗಿದರು.
ಕಟ್ಟಕಡೆಗೆ ಕಿಪಾರಿಸ್ಯಾದಲ್ಲಿದ್ದ ನಮ್ಮ ಮನೆಯಲ್ಲಿನ ಸಣ್ಣ ಅಭ್ಯಾಸ ಗುಂಪು ಒಂದು ಸಭೆಯಾಗಿ ರೂಪುಗೊಂಡಿತು. ನಮ್ಮ ಹೊಸ ಸಭೆಗೆ ಒಬ್ಬ ಕ್ರೈಸ್ತ ಹಿರಿಯನು ವರ್ಗಾಯಿಸಲ್ಪಟ್ಟನು, ಮತ್ತು ನಾನು ಒಬ್ಬ ಶುಶ್ರೂಷಾ ಸೇವಕನಾಗಿ ನೇಮಕಗೊಂಡೆ. ನಮ್ಮ ಮನೆಯಲ್ಲಿನ ಕೂಟಗಳನ್ನು 15 ಸಕ್ರಿಯ ಸಾಕ್ಷಿಗಳು ಕ್ರಮವಾಗಿ ಹಾಜರಾಗುತ್ತಿದ್ದರು.
ಹಿಂದಿರುಗಿ ಆಸ್ಟ್ರೇಲಿಯಕ್ಕೆ
ಎರಡು ವರ್ಷಗಳು ಮತ್ತು ಮೂರು ತಿಂಗಳುಗಳು ಕಳೆದ ತರುವಾಯ, ನಾವು ಆಸ್ಟ್ರೇಲಿಯಕ್ಕೆ ಹಿಂದಿರುಗಲು ನಿರ್ಧರಿಸಿದೆವು. ಇಲ್ಲಿ ವರ್ಷಗಳು ಕ್ಷಿಪ್ರವಾಗಿ ದಾಟಿಹೋಗಿವೆ. ನನ್ನ ಮಗಳಾದ ಥಿಮೀಟ್ರ ತನ್ನ ನಂಬಿಕೆಯನ್ನು ಕಾಪಾಡಿಕೊಂಡಿದ್ದಾಳೆ ಮತ್ತು ಮೆಲ್ಬರ್ನ್ನ ಒಂದು ಸಭೆಯಲ್ಲಿರುವ ಒಬ್ಬ ಶುಶ್ರೂಷಾ ಸೇವಕನೊಂದಿಗೆ ವಿವಾಹವಾಗಿದ್ದಾಳೆ. ನನ್ನ ಹೆಂಡತಿ ಮತ್ತು ನಮ್ಮ 15 ವರ್ಷ ಪ್ರಾಯದ ಮಗಳು, ಮಾರ್ಥ ಹಾಜರಾಗುವ, ಮೆಲ್ಬರ್ನ್ನಲ್ಲಿನ ಗ್ರೀಕ್ ಭಾಷೆಯ ಸಭೆಯಲ್ಲಿ ಒಬ್ಬ ಹಿರಿಯನಾಗಿ ನಾನು ಈಗ ಸೇವಿಸುತ್ತಿದ್ದೇನೆ.
ನಾವು ಹಿಂದೆ ಕಿಪಾರಿಸ್ಯಾದಲ್ಲಿ ಬಿಟ್ಟು ಬಂದಿದ್ದ ಸಣ್ಣ ಸಭೆಯು ಈಗ ಹೆಚ್ಚು ದೊಡ್ಡದಾಗಿ ಬೆಳೆದಿದೆ, ಮತ್ತು ಅನೇಕ ಅರ್ಹ ಜನರು ತಮ್ಮ ಹೃದಯಗಳನ್ನು ಬೈಬಲ್ ಸತ್ಯತೆಗಳಿಗೆ ತೆರೆದಿದ್ದಾರೆ. ಇಸವಿ 1991ರ ಬೇಸಗೆಯಲ್ಲಿ, ಕೆಲವೊಂದು ವಾರಗಳಿಗಾಗಿ ನಾನು ಗ್ರೀಸನ್ನು ಸಂದರ್ಶಿಸಿದೆ ಮತ್ತು ಕಿಪಾರಿಸ್ಯಾದಲ್ಲಿ ಒಂದು ಬಹಿರಂಗ ಬೈಬಲ್ ಭಾಷಣವನ್ನು ನೀಡಿದೆ, ಮತ್ತು 70 ಜನ ಹಾಜರಿದ್ದರು. ಸಂತೋಷಕರವಾಗಿ, ಕುಟುಂಬ ವಿರೋಧದ ಹೊರತೂ ನನ್ನ ಎಳೆಯ ಸಹೋದರಿ ಮರೀಯ, ಯೆಹೋವನ ಒಬ್ಬ ಸೇವಿಕೆಯಾಗಿದ್ದಾಳೆ.
ಆಸ್ಟ್ರೇಲಿಯದಲ್ಲಿ ನಿಜವಾದ ಸಂಪತ್ತನ್ನು—ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರ ಮತ್ತು ಆತನ ರಾಜ್ಯ ಸರಕಾರದ ಜ್ಞಾನ ಮತ್ತು ತಿಳಿವಳಿಕೆ—ಪಡೆಯುವ ಅವಕಾಶ ನನಗೆ ಇದ್ದುದಕ್ಕೆ ನಾನು ಕೃತಜ್ಞನಾಗಿದ್ದೇನೆ. ನನ್ನ ಜೀವಿತಕ್ಕೆ ಈಗ ನಿಜವಾದ ಅರ್ಥವಿದೆ, ಮತ್ತು ಇಡೀ ಭೂಮಿಯ ಮೇಲೆ ದೇವರ ಸ್ವರ್ಗೀಯ ಸರಕಾರದ ಆಶೀರ್ವಾದಗಳು ಹರಡುವುದನ್ನು ನೋಡಲು ಹತ್ತಿರದ ಭವಿಷ್ಯತ್ತಿಗಾಗಿ ನನ್ನ ಕುಟುಂಬ ಮತ್ತು ನಾನು ಕಾದಿರುತ್ತೇವೆ—ಜಾರ್ಜ್ ಕ್ಯಾಟ್ಸಿಕಾರೊನಿಸ್ ಹೇಳಿದಂತೆ.
[ಪುಟ 23 ರಲ್ಲಿರುವ ಚಿತ್ರ]
ಆಸ್ಟ್ರೇಲಿಯದಿಂದ ಹಿಂದಿರುಗಿದ ಬಳಿಕ ನಾನು ಜೀವಿಸಿದ್ದ ಕಿಪಾರಿಸ್ಯಾ
[ಪುಟ 23 ರಲ್ಲಿರುವ ಚಿತ್ರ]
ನನ್ನ ಹೆಂಡತಿ ಆ್ಯಲೆಕ್ಸಾಂಡ್ರಳೊಂದಿಗೆ