ಬೈಬಲಿನ ದೃಷ್ಟಿಕೋನ
ಕಾರ್ನಿವಲ್ ಆಚರಣೆಗಳು ಸರಿಯೊ ತಪ್ಪೊ?
“ನೀವು ಅದನ್ನು ನಿಜವಾಗಿಯೂ ಪ್ರತಿರೋಧಿಸಸಾಧ್ಯವಿಲ್ಲ” ಎಂದು ಮೈಕಲ್ ಹೇಳುತ್ತಾನೆ. “ಆ ಸಂಗೀತವು ನಿಮ್ಮ ಕುರ್ಚಿಯಿಂದ ನಿಮ್ಮನ್ನು ಏಳುವಂತೆ ಪ್ರಚೋದಿಸುತ್ತದೆ, ನಿಮ್ಮ ಪಾದಗಳನ್ನು ಚಲಿಸುವಂತೆ ಮಾಡುತ್ತದೆ, ನಿಮ್ಮ ತಲೆಯನ್ನು ಉದ್ರೇಕಗೊಳಿಸುತ್ತದೆ—ನಿಮಗೆ ಕಾರ್ನಿವಲ್ ಹುಚ್ಚುಹಿಡಿದಿದೆಯೆಂಬುದು ಇದರ ಅರ್ಥ!” ನಿಜವಾಗಿಯೂ, ಪ್ರತಿ ವರ್ಷ ಕಾರ್ನಿವಲ್ ಲೋಕದ ಸುತ್ತಲೂ ಇರುವ ಕೋಟ್ಯಂತರ ಜನರ ಹೃದಯಬಡಿತವನ್ನು ಹೆಚ್ಚಿಸುತ್ತದೆ, ಆದರೆ ಮೈಕಲ್ ಜೀವಿಸುವ ದೇಶವಾದ ಬ್ರೆಸಿಲ್ನಲ್ಲಿರುವಷ್ಟು ಕಾರ್ನಿವಲ್ ಹುಚ್ಚು ಬೇರೆಲ್ಲಿಯೂ ಇಲ್ಲ. ಬೂದಿ ಬುಧವಾರಕ್ಕೆ ಮುಂಚಿನ ವಾರದಲ್ಲಿ, ಬ್ರೆಸಿಲ್ನ ನಿವಾಸಿಗಳು ಅಲಂಕಾರಮಯವಾದ ವಸ್ತ್ರಗಳನ್ನು ಧರಿಸುತ್ತಾರೆ, ಜನರು ತಮ್ಮ ಹಂಗುಗಳು ಹಾಗೂ ಕಾರ್ಯತಖ್ತೆಗಳ ಕುರಿತಾಗಿ ಮರೆಯುತ್ತಾರೆ, ಹಾಗೂ ಆ್ಯಮಸಾನ್ ಅರಣ್ಯದಿಂದ ರಿಯೊ ಡಿ ಜನೆರೊದ ಸಮುದ್ರತೀರಗಳ ವರೆಗೆ ಇಡೀ ದೇಶದ ಸಮಸ್ಥಾಯತ್ವವನ್ನು ಭಂಗಗೊಳಿಸುವ ಪ್ರೇಕ್ಷಣದಲ್ಲಿ ಮುಳುಗುತ್ತಾರೆ. ಅದು ಹಾಡುವ, ನೃತ್ಯ (ಸಾಂಬ)ಮಾಡುವ, ಹಾಗೂ ಮರೆಯುವ ಒಂದು ಸಮಯವಾಗಿದೆ.
“ಕಾರ್ನಿವಲ್ ಇಷ್ಟು ಜನಪ್ರಿಯವಾಗಿರಲು ಅದು ಒಂದು ಕಾರಣವಾಗಿದೆ” ಎಂದು, ವರ್ಷಗಳಿಂದ ಅತ್ಯುತ್ಸಾಹಿ ಕಾರ್ನಿವಲ್ ಆಚರಣೆಗಾರನಾಗಿದ್ದ ಮೈಕಲ್ ವಿವರಿಸುತ್ತಾನೆ. “ಕಾರ್ನಿವಲ್ ಜನರಿಗೆ ತಮ್ಮ ಸಂಕಟವನ್ನು ಮರೆಯಲು ಒಂದು ಅವಕಾಶವನ್ನು ಕೊಡುತ್ತದೆ.” ಮತ್ತು ವಿಶೇಷವಾಗಿ ಕೋಟಿಗಟ್ಟಲೆ ಬಡ—ಸಾಕಷ್ಟು ನೀರಿಲ್ಲದೆ, ವಿದ್ಯುಚ್ಛಕ್ತಿಯಿಲ್ಲದೆ, ಉದ್ಯೋಗವಿಲ್ಲದೆ, ಮತ್ತು ನಿರೀಕ್ಷೆಯಿಲ್ಲದೆ ಜೀವಿಸುತ್ತಿರುವ—ಜನರಿಗೆ ಮರೆಯಲಿಕ್ಕಾಗಿ ವಿಷಯಗಳು ಬೇಕಾದಷ್ಟಿವೆ. ಅವರಿಗೆ ಕಾರ್ನಿವಲ್ ಒಂದು ಆ್ಯಸ್ಪಿರಿನ್ನಂತಿದೆ: ಅದು ಸಮಸ್ಯೆಗಳನ್ನು ಬಗೆಹರಿಸದಿರಬಹುದು, ಆದರೆ ಕಡಿಮೆಪಕ್ಷ ಅದು ಬೇಗುದಿಯನ್ನು ಜಡಗೊಳಿಸುತ್ತದೆ. ಇದಕ್ಕೆ ಕೂಡಿಸಿ, ಕೆಲವು ರೋಮನ್ ಕ್ಯಾಥೊಲಿಕ್ ವೈದಿಕರಲ್ಲಿರುವ ಕಾರ್ನಿವಲ್ನ ಕುರಿತಾಗಿರುವ ನೋಟದಲ್ಲಿ, ಕಾರ್ನಿವಲ್ “ಜನರ ಮನಶ್ಶಾಸ್ತ್ರಾನುಸಾರವಾದ ಸಮತೂಕತೆಗೆ ಬಹಳ ಪ್ರಯೋಜನಕರವಾಗಿದೆ” ಎಂದು ಒಬ್ಬ ಬಿಷಪನು ಹೇಳಿದನು. ಆದುದರಿಂದ, ಕಾರ್ನಿವಲ್ ಒಂದು ಸಹಾಯಕರವಾದ ಹಾಗೂ ಚರ್ಚಿನಿಂದ ಅಂಗೀಕರಿಸಲ್ಪಟ್ಟ ಅಪಕರ್ಷಣೆಯಾಗಿದೆಯೆಂದು ಅನೇಕರು ಏಕೆ ಭಾವಿಸುತ್ತಾರೆಂಬುದನ್ನು ನೋಡುವುದು ಸುಲಭ. ಆದರೂ, ಕಾರ್ನಿವಲ್ ಆಚರಣೆಗಳ ಕುರಿತಾಗಿ ಬೈಬಲಿನ ದೃಷ್ಟಿಕೋನವೇನು?
ಸಂತೋಷ ಸಂಭ್ರಮವೊ ಸುಖವಿಲಾಸವೊ?
“ನಗುವ ಸಮಯ . . . ಕುಣಿದಾಡುವ ಸಮಯ” ಇದೆಯೆಂದು ದೇವರ ವಾಕ್ಯವು ಹೇಳುತ್ತದೆ. (ಪ್ರಸಂಗಿ 3:4) “ನಗು”ವಿಗಾಗಿರುವ ಹೀಬ್ರು ಶಬ್ದವನ್ನು “ಆಚರಿಸು” ಎಂಬುದಾಗಿಯೂ ಭಾಷಾಂತರಿಸಬಹುದಾದ್ದರಿಂದ, ನಮ್ಮ ಸೃಷ್ಟಿಕರ್ತನ ಸಂಬಂಧದಲ್ಲಿಯಾದರೋ, ನಾವು ಹಿತಕರವಾದ, ಒಳ್ಳೆಯ ಸಮಯವನ್ನು ಆನಂದಿಸುವುದರಲ್ಲಿ ಏನೂ ತಪ್ಪಿಲ್ಲವೆಂಬುದು ಸ್ಪಷ್ಟವಾಗಿದೆ. (ನೋಡಿರಿ 1 ಸಮುವೇಲ 18:6, 7.) ವಾಸ್ತವವಾಗಿ, ದೇವರ ವಾಕ್ಯವು ನಮಗೆ ಸಂತೋಷಿತರೂ ಹರ್ಷಿತರೂ ಆಗಿರುವಂತೆ ಹೇಳುತ್ತದೆ. (ಪ್ರಸಂಗಿ 3:22; 9:7) ಆದುದರಿಂದ ಬೈಬಲು ಸೂಕ್ತವಾದ ಸಂತೋಷ ಸಂಭ್ರಮವನ್ನು ಅಂಗೀಕರಿಸುತ್ತದೆ.
ಆದಾಗ್ಯೂ, ಬೈಬಲು ಎಲ್ಲಾ ರೀತಿಯ ಸಂತೋಷ ಸಂಭ್ರಮವನ್ನು ಅಂಗೀಕರಿಸುವುದಿಲ್ಲ. ಸುಖವಿಲಾಸ, ಅಥವಾ ಅತಿಗದ್ದಲದ ಸಂತೋಷ ಸಂಭ್ರಮವು “ಶರೀರಭಾವದ ಕರ್ಮಗಳಿ”ಗೆ ಸೇರಿದ್ದಾಗಿದೆ, ಮತ್ತು ಸುಖವಿಲಾಸವನ್ನು ನಡೆಸುವವರು “ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ” ಎಂದು ಅಪೊಸ್ತಲ ಪೌಲನು ಹೇಳುತ್ತಾನೆ. (ಗಲಾತ್ಯ 5:19-21) ಆದುದರಿಂದ, ಪೌಲನು ಕ್ರೈಸ್ತರಿಗೆ “ಸುಖವಿಲಾಸಗಳಿಂದಲ್ಲ, ಮಾನಸ್ಥರಾಗಿ ನಡೆದುಕೊಳ್ಳು”ವಂತೆ ಬುದ್ಧಿಹೇಳಿದನು. (ರೋಮಾಪುರ 13:13, NW) ಆದುದರಿಂದ ಪ್ರಶ್ನೆಯೇನೆಂದರೆ, ಕಾರ್ನಿವಲ್ ಯಾವ ವರ್ಗಕ್ಕೆ ಸೇರುತ್ತದೆ—ಮುಗ್ಧವಾದ ಸಂತೋಷ ಸಂಭ್ರಮಕ್ಕೊ ಅಥವಾ ಕಾಮಾಭಿಲಾಷೆಯ ಸುಖವಿಲಾಸಕ್ಕೊ? ಇದನ್ನು ಉತ್ತರಿಸಲು, ಮೊದಲಾಗಿ ನಾವು ಬೈಬಲು ಯಾವುದನ್ನು ಸುಖವಿಲಾಸವೆಂದು ವೀಕ್ಷಿಸುತ್ತದೆಂಬುದನ್ನು ಇನ್ನಷ್ಟು ವಿವರಿಸೋಣ.
“ಸುಖವಿಲಾಸ” ಅಥವಾ ಗ್ರೀಕ್ ಭಾಷೆಯಲ್ಲಿ ಕಾಮಾಸ್ ಎಂಬ ಶಬ್ದವು, ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ ಮೂರು ಬಾರಿ—ಯಾವಾಗಲೂ ಅಸಮ್ಮತಿಸೂಚಕ ಅರ್ಥದಲ್ಲಿ—ಕಂಡುಬರುತ್ತದೆ. (ರೋಮಾಪುರ 13:13; ಗಲಾತ್ಯ 5:21; 1 ಪೇತ್ರ 4:3) ಮತ್ತು ಇದರಲ್ಲಿ ಆಶ್ಚರ್ಯವೇನಿಲ್ಲ, ಏಕೆಂದರೆ ಗ್ರೀಕ್ ಭಾಷೆಯನ್ನು ಮಾತಾಡುವ ಆದಿ ಕ್ರೈಸ್ತರಿಗೆ ಸುವಿದಿತವಾಗಿದ್ದ ಅಪ್ರಸಿದ್ಧ ಆಚರಣೆಗಳಿಂದ ಕಾಮಾಸ್ ಬರುತ್ತದೆ. ಯಾವ ಆಚರಣೆಗಳು?
ಇತಿಹಾಸಕಾರ ವಿಲ್ ಡ್ಯೂರಾಂಟ್ ವಿವರಿಸುವುದು: “ಜನರ ಗುಂಪೊಂದು, ಪವಿತ್ರ ಶಿಶ್ನ [ಪುರುಷ ಜನನೇಂದ್ರಿಯದ ಸಂಕೇತ]ವನ್ನು ಕೊಂಡೊಯ್ಯುತ್ತಾ, ಡೈಅನಿಸಸ್ಗೆ ಆವೇಶದ ಮೇಳಸ್ತುತಿ [ಭಕ್ತಿಗೀತೆಗಳು]ಗಳನ್ನು ಹಾಡುತ್ತಿದುದು . . . ಗ್ರೀಕ್ ಪರಿಭಾಷೆಯಲ್ಲಿ ಒಂದು ಕಾಮಾಸ್, ಅಥವಾ ಸುಖವಿಲಾಸವನ್ನು ರಚಿಸಿತು.” ಗ್ರೀಕ್ ದಂತಕಥೆಯಲ್ಲಿ ದ್ರಾಕ್ಷಾಮದ್ಯದ ದೇವನಾದ ಡೈಅನಿಸಸ್ನು ತದನಂತರ ರೋಮನರಿಂದ ದತ್ತುಸ್ವೀಕರಿಸಲ್ಪಟ್ಟನು, ಮತ್ತು ಅವರು ಅವನಿಗೆ ಬ್ಯಾಕಸ್ ಎಂದು ಪುನರ್ನಾಮಕರಣಮಾಡಿದರು. ಆದರೂ, ಕಾಮಾಸ್ದ ಸಂಬಂಧವು ಹೆಸರಿನ ಬದಲಾವಣೆಯನ್ನು ಪಾರಾಗಿಉಳಿಯಿತು. ಬೈಬಲ್ ಪಂಡಿತರಾದ ಡಾ. ಜೇಮ್ಸ್ ಮ್ಯಾಕ್ನಿಟ್ ಬರೆಯುವುದು: ‘ಕಾಮಾಯ್ಸ್ [ಕಾಮಾಸ್ನ ಬಹುವಚನ ರೂಪ] ಎಂಬ ಶಬ್ದವು, ಹಬ್ಬವನ್ನಾಚರಿಸುವ ಹಾಗೂ ಸುಖವಿಲಾಸಪಡುವ ದೇವನಾದ ಕಾಮಸ್ನಿಂದ ಬರುತ್ತದೆ. ಈ ಸುಖವಿಲಾಸಗಳು, ಬ್ಯಾಕಸ್ನ ಗೌರವಾರ್ಥವಾಗಿ ನಿರ್ವಹಿಸಲ್ಪಡುತ್ತಿದ್ದು, ಈ ಕಾರಣಕ್ಕಾಗಿಯೇ ಅವನು ಕಾಮಸ್ಟೀಸ್ ಎಂದು ಹೆಸರಿಸಲ್ಪಟ್ಟನು.’ ಹೌದು, ಡೈಅನಿಸಸ್ ಮತ್ತು ಬ್ಯಾಕಸ್ರಿಗಾಗಿರುವ ಆಚರಣೆಗಳು, ಸುಖವಿಲಾಸದ ಮೂರ್ತರೂಪಗಳೇ ಆಗಿದ್ದವು. ಈ ಹಬ್ಬಗಳ ವೈಶಿಷ್ಟ್ಯಗಳೇನಾಗಿದ್ದವು?
ಸುಖವಿಲಾಸವು ಚಿತ್ರಿಸಲ್ಪಟ್ಟದ್ದು
ಡ್ಯೂರಾಂಟ್ಗೆ ಅನುಸಾರವಾಗಿ, ಡೈಅನಿಸಸ್ನ ಗೌರವಾರ್ಥವಾಗಿರುವ ಗ್ರೀಕ್ ಉತ್ಸವಗಳ ಸಮಯದಲ್ಲಿ, ಆಚರಣೆಗಾರರ ಗುಂಪುಗಳು “ಮಿತಿಯಿಲ್ಲದೆ ಕುಡಿದವು, ಮತ್ತು . . . ತನ್ನ ಭಾವನೆಗಳ ನಿಯಂತ್ರಣವನ್ನು ತೊರೆಯಲು ಇಷ್ಟಪಡದಿರುವ ವ್ಯಕ್ತಿಯನ್ನು ಮೂರ್ಖನೆಂದು ಪರಿಗಣಿಸಿದವು. ಅವರು ಸಂಭ್ರಮೋನ್ಮತ್ತ ಮೆರವಣಿಗೆಯಲ್ಲಿ ನಡೆದರು, . . . ಮತ್ತು ಅವರು ಕುಡಿದು ನರ್ತಿಸಿದಂತೆ, ಸಂಪೂರ್ಣವಾಗಿ ಅವರು ಅನಿಯಂತ್ರಿತರಾಗಿ ಪರಿಣಮಿಸಿದರು.” ತದ್ರೀತಿಯ ಒಂದು ಧಾಟಿಯಲ್ಲಿ, (ಬ್ಯಾಕಸ್ ದೇವನ ಹಬ್ಬ ಎಂದು ಕರೆಯಲ್ಪಡುವ) ಬ್ಯಾಕಸ್ನ ಗೌರವಾರ್ಥವಾಗಿರುವ ರೋಮನ್ ಹಬ್ಬಗಳು, ಕುಡಿತವನ್ನೂ ಕಾಮಾಭಿಲಾಷೆಯ ಹಾಡುಗಳನ್ನೂ ಸಂಗೀತವನ್ನೂ ಪ್ರದರ್ಶಿಸಿದವು ಮತ್ತು “ಬಹಳ ಅಗೌರವಾರ್ಹವಾದ ಕೃತ್ಯಗಳ” ದೃಶ್ಯಗಳಾಗಿದ್ದವು ಎಂದು ಮ್ಯಾಕ್ನಿಟ್ ಬರೆಯುತ್ತಾರೆ. ಹೀಗೆ ಸಂಪೂರ್ಣವಾಗಿ ಅನಿಯಂತ್ರಿತವಾಗಿದ್ದ ಗುಂಪುಗಳು, ಮದ್ಯಪಾನೀಯಗಳ ವಿಪರೀತ ಕುಡಿತ, ವಿಷಯಾಭಿಲಾಷೆಯ ನರ್ತನ ಹಾಗೂ ಸಂಗೀತ, ಮತ್ತು ಅನೈತಿಕ ಕಾಮವು, ಗ್ರೀಕ್-ರೋಮನ್ ಸುಖವಿಲಾಸಗಳ ಮೂಲ ಘಟಕಗಳನ್ನು ರೂಪಿಸಿದವು.
ಇಂದಿನ ಕಾರ್ನಿವಲ್ಗಳು ಈ ರೀತಿಯ ಸುಖವಿಲಾಸವನ್ನು ಉತ್ಪಾದಿಸುವ ಘಟಕಗಳನ್ನು ಒಳಗೊಂಡಿವೆಯೊ? ಕಾರ್ನಿವಲ್ ಆಚರಣೆಗಳ ಕುರಿತಾಗಿರುವ ವಾರ್ತಾವರದಿಗಳಿಂದ ಆಯ್ದ ಕೆಲವು ಉಲ್ಲೇಖಗಳನ್ನು ಪರಿಗಣಿಸಿರಿ: “ವಿಪರೀತ ಕರ್ಕಶ ಗುಂಪುಗಳು.” “ಕುಡಿತ ಮತ್ತು ಇಡೀ ರಾತ್ರಿ ಪಾರ್ಟಿನಡೆಸುವ ನಾಲ್ಕು-ದಿನದ ಒಂದು ಪಾನಕೇಳಿ.” “ಕೆಲವು ಸುಖವಿಲಾಸಿಗಳಿಗೆ ಕಾರ್ನಿವಲ್ ಮದ್ಯಪಾನದ ಅಮಲು ಅನೇಕ ದಿವಸಗಳ ವರೆಗೆ ಉಳಿಯಬಲ್ಲದು.” “ತೀರ ಸಮೀಪದಲ್ಲಿರುವ ಬಹುಮಟ್ಟಿಗೆ ಕಿವುಡುಗೊಳಿಸುವ ಧ್ವನಿಗಳು, ಹೋಲಿಕೆಯಲ್ಲಿ ‘ಹೆವಿ ಮೆಟಲ್’ ಗುಂಪುಗಳ ಪ್ರದರ್ಶನಗಳನ್ನು . . . ಮಂಕಾಗಿಸುತ್ತವೆ.” “ಇಂದು, ಯಾವುದೇ ಸಲಿಂಗಿ ಕಾಮಿಗಳಿಲ್ಲದ ಕಾರ್ನಿವಲ್ ಆಚರಣೆಯು, ಕರಿಮೆಣಸಿಲ್ಲದೆ ಬೇಯಿಸಲ್ಪಟ್ಟ ಮಾಂಸದ ತುಂಡಿನಂತಿದೆ.” “ಕಾರ್ನಿವಲ್, ಸಂಪೂರ್ಣ ನಗ್ನತೆಗೆ ಒಂದು ಸಮನಾರ್ಥಕ ಪದವಾಗಿ ಪರಿಣಮಿಸಿದೆ.” ಕಾರ್ನಿವಲ್ ನರ್ತನಗಳು “ಮುಷ್ಟಿಮೈಥುನದ ದೃಶ್ಯಗಳನ್ನು . . . ಹಾಗೂ ಲೈಂಗಿ[ಕ] ಸಂಭೋಗದ ವಿವಿಧ ರೂಪಗಳನ್ನು” ಪ್ರದರ್ಶಿಸಿದವು.
ವಾಸ್ತವವಾಗಿ, ಇಂದಿನ ಕಾರ್ನಿವಲ್ಗಳು ಹಾಗೂ ಆ ಪುರಾತನ ಉತ್ಸವಗಳ ನಡುವಿನ ಸಾದೃಶ್ಯಗಳು ಎಷ್ಟು ಗಮನಾರ್ಹವಾಗಿವೆಯೆಂದರೆ, ಆಧುನಿಕ ದಿನದ ಕಾರ್ನಿವಲ್ ಪಾರ್ಟಿಯೊಂದರ ಮಧ್ಯದಲ್ಲಿ, ಬ್ಯಾಕಸ್ ಸುಖವಿಲಾಸಿಯೊಬ್ಬನು ಪುನರುಜ್ಜೀವಿಸುವುದಾದರೆ, ಅವನು ಒಂದು ತಾಳವನ್ನೂ ತಪ್ಪಲಾರನು. ಮತ್ತು ಅದು ನಮ್ಮನ್ನು ಆಶ್ಚರ್ಯಗೊಳಿಸಬಾರದು ಎಂದು ಬ್ರೆಸಿಲ್ನ ಟೆಲಿವಿಷನ್ ನಿರ್ಮಾಪಕರಾದ ಕ್ಲಾತ್ಯೊ ಪ್ಯಾಟ್ರಾಲೆ ಹೇಳಿಕೆ ನೀಡುತ್ತಾರೆ, ಏಕೆಂದರೆ ಇಂದಿನ ಕಾರ್ನಿವಲ್ “ಡೈಅನಿಸಸ್ ಮತ್ತು ಬ್ಯಾಕಸ್ರ ಉತ್ಸವಗಳಿಂದ ಉದ್ಭವಿಸುತ್ತದೆ ಮತ್ತು ಅದು ನಿಜವಾಗಿಯೂ ಈ ವಿಧದ ಸುಖವಿಲಾಸವು ಕಾರ್ನಿವಲ್ನ ಸ್ವರೂಪವಾಗಿದೆ” ಎಂದು ಅವರು ಹೇಳುತ್ತಾರೆ. ಕಾರ್ನಿವಲ್ ಅನ್ನು ಪುರಾತನ ರೋಮ್ನ ವಿಧರ್ಮಿ ಸ್ಯಾಟರ್ನ್ ದೇವತೆಯ ಮಹೋತ್ಸವದೊಂದಿಗೆ ಸಂಬಂಧಿಸಬಹುದೆಂದು ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುತ್ತದೆ. ಹೀಗೆ ಕಾರ್ನಿವಲ್, ವಿಭಿನ್ನ ಶಕಕ್ಕೆ ಸೇರಿದ್ದಾಗಿರುವುದಾದರೂ, ಅದರ ಪೂರ್ವಿಕರದ್ದೇ ಗುಂಪಿಗೆ ಸೇರಿದ್ದಾಗಿದೆ. ಆ ಗುಂಪಿನ ಹೆಸರೇನು? ಸುಖವಿಲಾಸವೆಂಬುದೇ.
ಈ ಜ್ಞಾನವು ಇಂದು ಕ್ರೈಸ್ತರ ಮೇಲೆ ಯಾವ ಪರಿಣಾಮವನ್ನು ಬೀರಬೇಕು? ಏಷ್ಯಾ ಮೈನರ್ನಲ್ಲಿನ ಗ್ರೀಕ್ ಪ್ರಭಾವವಿದ್ದ ಪ್ರಾಂತ್ಯಗಳಲ್ಲಿ ಜೀವಿಸುತ್ತಿದ್ದ ಆದಿ ಕ್ರೈಸ್ತರ ಮೇಲೆ ಅದು ಬೀರಿದ್ದ ಪರಿಣಾಮವನ್ನೇ. ಕ್ರೈಸ್ತರಾಗುವುದಕ್ಕೆ ಮೊದಲು, ಅವರು “ಸಡಿಲು ನಡತೆಯ ಕೃತ್ಯಗಳು, ಕಾಮಾಸಕ್ತಿಗಳು, ಮದ್ಯದ ವೈಪರೀತ್ಯ, ಸುಖವಿಲಾಸಗಳು [ಕಾಮಾಯ್ಸ್], ಕುಡಿತದ ಗೋಷ್ಠಿಗಳು, ಹಾಗೂ ಕಾನೂನುಬಾಹಿರ ವಿಗ್ರಹಾರಾಧನೆಗಳ”ಲ್ಲಿ ಒಳಗೂಡುತ್ತಿದ್ದರು. (1 ಪೇತ್ರ 1:1; 4:3, 4, NW) ಆದಾಗ್ಯೂ, ದೇವರು ಸುಖವಿಲಾಸಗಳನ್ನು “ಕತ್ತಲೆಗೆ ಅನುಗುಣವಾದ ಕೃತ್ಯ”ಗಳೋಪಾದಿ ದೃಷ್ಟಿಸುತ್ತಾನೆಂದು ತಿಳಿದುಕೊಂಡ ಬಳಿಕ, ಕಾರ್ನಿವಲ್ನಂತಹ ಆಚರಣೆಗಳಲ್ಲಿ ಭಾಗವಹಿಸುವುದನ್ನು ಅವರು ನಿಲ್ಲಿಸಿಬಿಟ್ಟರು.—ರೋಮಾಪುರ 13:12-14.
ಈ ಹಿಂದೆ ಉಲ್ಲೇಖಿಸಲ್ಪಟ್ಟಿರುವ ಮೈಕಲ್, ಅದನ್ನೇ ಮಾಡಿದನು. ಅದರ ಕಾರಣವನ್ನು ಅವನು ಹೀಗೆ ವಿವರಿಸುತ್ತಾನೆ: “ನನ್ನ ಬೈಬಲ್ ಜ್ಞಾನವು ವೃದ್ಧಿಗೊಂಡಂತೆ, ಕಾರ್ನಿವಲ್ ಆಚರಣೆಗಳು ಹಾಗೂ ಬೈಬಲ್ ಮೂಲತತ್ವಗಳು, ಎಣ್ಣೆ ಹಾಗೂ ನೀರುಗಳಂತಿವೆ ಎಂಬುದನ್ನು ನಾನು ಅವಲೋಕಿಸಿದೆ—ಅವು ಒಟ್ಟಿಗೆ ಮಿಶ್ರವಾಗುವುದೇ ಇಲ್ಲ.” 1979ರಲ್ಲಿ, ಮೈಕಲ್ ಒಂದು ನಿರ್ಧಾರವನ್ನು ಮಾಡಿದನು. ಅವನು ಕಾರ್ನಿವಲ್ ಆಚರಣೆಗಳನ್ನು ಶಾಶ್ವತವಾಗಿ ನಿಲ್ಲಿಸಿಬಿಟ್ಟನು. ನೀವು ಯಾವ ಆಯ್ಕೆಯನ್ನು ಮಾಡುವಿರಿ?
[ಪುಟ 21 ರಲ್ಲಿರುವ ಚಿತ್ರ]
ಡೈಅನಿಸಸ್ (ಎಡಭಾಗದ ಚಿತ್ರ)ನನ್ನು ಚಿತ್ರಿಸುವ ಕ್ರೈಸ್ತಪೂರ್ವ ಗ್ರೀಕ್ ಆ್ಯಂಫರ
[ಕೃಪೆ]
Courtesy of The British Museum