ಸಂಘಟಿತ ಅಪರಾಧದಿಂದ ಸ್ವತಂತ್ರನಾಗುವುದು “ನಾನೊಬ್ಬ ಯಾಕೂಸಾ ಆಗಿದ್ದೆ”
“ಪಪಾ, ನೀವು ಮನೆಗೆ ಬಂದಾಗ, ನಾವು ಒಟ್ಟಿಗೆ ಕೂಟಗಳಿಗೆ ಹೋಗೋಣ. ಪ್ರಾಮಿಸ್ ಮಾಡುತ್ತೀರಿ ತಾನೇ?” ನಾನು ಮೂರನೆಯ ಬಾರಿ ಜೆಯ್ಲಿನಲ್ಲಿದ್ದಾಗ ನನ್ನ ಎರಡನೆಯ ಮಗಳಿಂದ ಈ ಪತ್ರ ನನಗೆ ದೊರೆಯಿತು. ಅವಳು ನನ್ನ ಹೆಂಡತಿಯೊಂದಿಗೆ ಕ್ರಮವಾಗಿ ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗುತ್ತಿದ್ದಳು. ನನ್ನ ಕುಟುಂಬದ ಪತ್ರಗಳು ನನ್ನ ಸಾಂತ್ವನದ ಏಕಮಾತ್ರ ಮೂಲವಾಗಿದ್ದುದರಿಂದ, ಅವಳು ಹೇಳಿದಂತೆ ಮಾಡುವೆನೆಂದು ನಾನು ಮಾತುಕೊಟ್ಟೆ.
‘ನನ್ನ ಕುಟುಂಬದಿಂದ ನನ್ನನ್ನು ದೂರ ಕೊಂಡೊಯ್ಯುವ ಅಪರಾಧದ ಜೀವನವನ್ನು ನಾನೇಕೆ ನಡೆಸುತ್ತಿದ್ದೇನೆ?’ ಎಂದು ನಾನು ನನ್ನಲ್ಲಿಯೇ ಯೋಚಿಸಿದೆ. ನಾನು ಅತಿ ಚಿಕ್ಕವನಾಗಿದ್ದಾಗಿನ ದಿನಗಳನ್ನು ನಾನು ನೆನಸಿಕೊಂಡೆ. ನನಗೆ ಕೇವಲ ಹದಿನೆಂಟು ತಿಂಗಳುಗಳಾಗಿದ್ದಾಗ ನನ್ನ ತಂದೆ ಸತ್ತರು. ಆದಕಾರಣ ಅವರ ಮುಖವೂ ನನಗೆ ನೆನಪಿಲ್ಲ. ಇದಾದ ಬಳಿಕ ತಾಯಿ ಎರಡು ಬಾರಿ ಪುನರ್ವಿವಾಹವಾದರು. ಇಂತಹ ಕುಟುಂಬ ಸನ್ನಿವೇಶಗಳು ನನ್ನನ್ನು ಗಾಢವಾಗಿ ಬಾಧಿಸಿದವು ಮತ್ತು ಹೈ ಸ್ಕೂಲಿನಲ್ಲಿ ನಾನು ಪುಂಡರೊಂದಿಗೆ ಜೊತೆಗೂಡಲಾರಂಭಿಸಿದೆ. ನಾನು ಬಲಪ್ರಯೋಗಿಯಾಗಿ ಅನೇಕ ವೇಳೆ ಶಾಲೆಯ ಹೊರಗೆ ಜಗಳಗಳಲ್ಲಿ ಸಿಲುಕಿಕೊಂಡೆ. ನಾನು ಹೈ ಸ್ಕೂಲಿನಲ್ಲಿ ಕಳೆದ ಎರಡನೆಯ ವರುಷದಲ್ಲಿ, ಒಂದು ವಿದ್ಯಾರ್ಥಿ ಗುಂಪು ಇನ್ನೊಂದರೊಂದಿಗೆ ಹೋರಾಡುವಂತೆ ನಾನು ಸಂಘಟಿಸಿದೆ. ಇದರ ಪರಿಣಾಮವಾಗಿ ನನ್ನನ್ನು ದಸ್ತಗಿರಿ ಮಾಡಿ, ಒಂದಿಷ್ಟು ಸಮಯಕ್ಕಾಗಿ ತಿದ್ದುಪಡಿಯ ಸಂಘಕ್ಕೆ ಕಳುಹಿಸಲಾಯಿತು.
ನಾನು ಹಿಂಸಾತ್ಮಕ ಜೀವನದ ಕಡೆಗೆ ಬೆಟ್ಟದಿಂದ ಉರುಳಿ ಬರುತ್ತಿರುವ ಚೆಂಡಿನಂತಿದ್ದೆ. ಬೇಗನೆ ನಾನು ಬಾಲಾಪರಾಧಿಗಳ ತಂಡವನ್ನು ರಚಿಸಿ ಒಂದು ಯಾಕೂಸಾ ಗುಂಪಿನ ಆಫೀಸಿನ ಸಮೀಪ ನಾವು ಚಲಿಸುತ್ತಿದ್ದೆವು. 18ರ ಪ್ರಾಯದಲ್ಲಿ ನಾನು ಆ ಗುಂಪಿನ ಬಲಿತ ಸದಸ್ಯನಾದೆ. ನನ್ನ 20ನೆಯ ವಯಸ್ಸಿನಲ್ಲಿ, ನಾನು ವಿಭಿನ್ನ ಹಿಂಸಾತ್ಮಕ ಕೃತ್ಯಗಳಿಗಾಗಿ ದಸ್ತಗಿರಿಯಾಗಿ ಜೆಯ್ಲಿನಲ್ಲಿ ಮೂರು ವರುಷ ಶಿಕ್ಷೆಗೊಳಗಾದೆ. ಪ್ರಥಮವಾಗಿ ನಾನು ನಾರ ಬಾಲಕ ಸೆರೆಮನೆಯಲ್ಲಿ ಶಿಕ್ಷೆಗೊಳಗಾದರೂ ನನ್ನ ವರ್ತನೆ ಸುಧಾರಣೆಹೊಂದಲಿಲ್ಲ. ಆದಕಾರಣ ನನ್ನನ್ನು ಇನ್ನೊಂದು ಸೆರೆಮನೆಗೆ, ವಯಸ್ಕರದ್ದಕ್ಕೆ ಕಳುಹಿಸಲಾಯಿತು. ಆದರೆ ಅಲ್ಲಿ ನಾನು ಇನ್ನೂ ಕೆಟ್ಟುಹೋದಾಗ, ಕೊನೆಗೆ ಕ್ಯೋಟೋದಲ್ಲಿ ಕಠಿನ ಪಾತಕಿಗಳ ಸೆರೆಮನೆಯೊಂದಕ್ಕೆ ಬಂದು ಮುಟ್ಟಿದೆ.
‘ನಾನೇಕೆ ಇಂತಹ ಅಪರಾಧಗಳನ್ನು ನಡೆಸುತ್ತಿದ್ದೇನೆ?’ ಎಂದು ನನ್ನಲ್ಲಿ ಕೇಳಿಕೊಂಡೆ. ಹಿಂದೃಷ್ಟಿಯಲ್ಲಿ, ಇದು ನನ್ನ ಹುಚ್ಚು ತರ್ಕದ ಕಾರಣವೇ ಆಗಿತ್ತೆಂದು ನಾನು ಗ್ರಹಿಸುತ್ತೇನೆ. ಆ ಸಮಯದಲ್ಲಿ ಅದು ಪೌರುಷದ ವರ್ತನೆ, ನನ್ನ ವೀರ್ಯವತ್ತಿನ ರುಜುವಾತೆಂದು ನಾನು ನೆನಸಿದೆ. ನನಗೆ 25 ವರ್ಷ ಪ್ರಾಯದಲ್ಲಿ ಸೆರೆಮನೆಯಿಂದ ಬಿಡುಗಡೆಯಾದಾಗ, ಜೊತೆ ದೊಂಬಿಗಾರರು ನನ್ನನ್ನು ಯಾರೊ ಗಣ್ಯನೆಂಬುದಾಗಿ ವೀಕ್ಷಿಸಿದರು. ಈಗ ಅಪರಾಧ ಜಗತ್ತಿನಲ್ಲಿ ದೊಡ್ಡ ಸ್ಥಾನವನ್ನು ಅರಸಲು ನನಗೆ ದಾರಿಯು ತೆರೆದಿತ್ತು.
ನನ್ನ ಕುಟುಂಬದ ಪ್ರತಿಕ್ರಿಯೆಗಳು
ಸರಿಸುಮಾರಾಗಿ ಆ ಸಮಯ ನಾನು ಮದುವೆ ಮಾಡಿಕೊಂಡೆ ಮತ್ತು ಬೇಗನೆ ನಮಗೆ ಇಬ್ಬರು ಹೆಣ್ಣುಮಕ್ಕಳಾದರು. ಆದರೆ ನನ್ನ ಜೀವನದಲ್ಲಿ ಬದಲಾವಣೆಯಾಗಲಿಲ್ಲ. ನನ್ನ ಮನೆ ಮತ್ತು ಪೊಲೀಸ್—ಇವುಗಳ ಮಧ್ಯೆ ನಾನು ಓಡಾಡಿದೆ, ಏಕೆಂದರೆ ನಾನು ಜನರನ್ನು ಹೊಡೆದು ಹಣ ಸುಲಿಗೆ ಮಾಡುತ್ತಿದ್ದೆ. ಪ್ರತಿಯೊಂದು ಸಂಭವವು ನನ್ನ ಜೊತೆಗಾರರಿಂದ ನಾನು ಗೌರವವನ್ನು ಪಡೆದುಕೊಳ್ಳುವಂತೆ ಮತ್ತು ನನ್ನ ದೊರೆಯ ಭರವಸೆಯನ್ನು ಸಂಪಾದಿಸುವಂತೆ ಸಹಾಯಮಾಡಿತು. ಕೊನೆಗೆ ನನ್ನ ಹಿರಿಯ ಯಾಕೂಸಾ “ಸಹೋದರ”ನು ಆ ತಂಡದ ಮುಖ್ಯ ಸ್ಥಾನವನ್ನು ಪಡೆದು ದೊರೆಯಾದನು. ದ್ವಿತೀಯ ಸ್ಥಾನಕ್ಕೆ ಏರಿದುದಕ್ಕಾಗಿ ನಾನು ಉಬ್ಬಿಹೋದೆ.
‘ನನ್ನ ಹೆಂಡತಿ, ಮಕ್ಕಳಿಗೆ ನನ್ನ ಜೀವನಮಾರ್ಗ ಹೇಗನಿಸುತ್ತದೊ?’ ಎಂದು ನನ್ನಷ್ಟಕ್ಕೆ ಯೋಚಿಸಿದೆ. ಒಬ್ಬ ಪಾತಕಿಯನ್ನು ಗಂಡನಾಗಿ ಮತ್ತು ತಂದೆಯಾಗಿ ಪಡೆದಿರುವುದು ಅವರನ್ನು ನಾಚಿಕೆಗೊಳಗಾಗಿಸಿದ್ದಿರಬೇಕು. 30ನೆಯ ವಯಸ್ಸಿನಲ್ಲಿ ನಾನು ಪುನಃ ಸೆರೆಮನೆವಾಸಿಯಾದೆ ಮತ್ತು 32ರಲ್ಲಿ ಇನ್ನೊಮ್ಮೆ. ಈ ಬಾರಿ, ಮೂರು ವರುಷಗಳ ಸೆರೆಮನೆವಾಸ ನನಗೆ ತುಂಬಾ ಸಂಕಟಕರವಾಗಿತ್ತು. ನನ್ನ ಹೆಣ್ಣುಮಕ್ಕಳಿಗೆ ಬಂದು ನನ್ನನ್ನು ಭೇಟಿಯಾಗಲು ಅನುಮತಿಯಿರಲಿಲ್ಲ. ಅವರೊಂದಿಗೆ ಮಾತಾಡಿ ಅವರನ್ನು ಅಪ್ಪಿಕೊಳ್ಳುವ ಸಂದರ್ಭವಿಲ್ಲದ್ದಕ್ಕೆ ನಾನು ವಿಷಾದಿಸಿದೆ.
ಈ ಕೊನೆಯ ಶಿಕ್ಷಾವಧಿಯನ್ನು ನಾನು ಆರಂಭಿಸುವುದಕ್ಕೆ ಸರಿಸುಮಾರಾಗಿ, ನನ್ನ ಹೆಂಡತಿ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲಭ್ಯಾಸವನ್ನು ಪ್ರಾರಂಭಿಸಿದಳು. ತಾನು ಕಲಿಯುತ್ತಿದ್ದ ಸತ್ಯದ ಕುರಿತು ಅವಳು ಪದೇ ಪದೇ ನನಗೆ ಬರೆದಳು. ‘ನನ್ನ ಹೆಂಡತಿ ಮಾತಾಡುತ್ತಿರುವ ಈ ಸತ್ಯ ಏನು?’ ಎಂದು ನಾನು ಕುತೂಹಲಪಟ್ಟೆ. ಸೆರೆಮನೆಯಲ್ಲಿ ನಾನು ಇಡೀ ಬೈಬಲನ್ನು ಓದಿಮುಗಿಸಿದೆ. ನನ್ನ ಹೆಂಡತಿ ತನ್ನ ಪತ್ರಗಳಲ್ಲಿ ಹೇಳುತ್ತಿದ್ದ ಒಂದು ಭಾವೀ ನಿರೀಕ್ಷೆಯ ಕುರಿತು ಮತ್ತು ದೇವರ ಉದ್ದೇಶದ ಕುರಿತು ನಾನು ಚಿಂತಿಸಿದೆ.
ಮರಣವು ನನ್ನಲ್ಲಿ ನಿಜವಾಗಿ ಭಯವನ್ನು ಹುಟ್ಟಿಸಿದ್ದರಿಂದ ಭೂಮಿಯ ಮೇಲಿನ ಪ್ರಮೋದವನದಲ್ಲಿ ಮಾನವರು ಸದಾಕಾಲ ಬದುಕುವ ನಿರೀಕ್ಷೆ ನನಗೆ ಹಿಡಿಸಿತು. ‘ಸತ್ತರೆ ನಷ್ಟ ನಿಮಗೆ ಮಾತ್ರ’ ಎಂದು ನಾನು ಸದಾ ಯೋಚಿಸಿದ್ದೆ. ಹಿಂದೃಷ್ಟಿಯಲ್ಲಿ, ಮರಣಭಯವೇ ನಾನು ಇತರರಿಗೆ, ಅವರು ನನಗೆ ಹಾನಿ ಮಾಡುವ ಮೊದಲು ಅವರಿಗೆ ಹಾನಿಮಾಡಲು ಪ್ರೇರೇಪಿಸಿತೆಂದು ನಾನು ಗ್ರಹಿಸುತ್ತೇನೆ. ಗ್ಯಾಂಗ್ ಜಗತ್ತಿನಲ್ಲಿ ಸ್ಥಾನಮಾನಕ್ಕೇರುವ ನನ್ನ ಗುರಿಯ ಶೂನ್ಯತೆಯನ್ನು ನಾನು ನೋಡುವಂತೆಯೂ ನನ್ನ ಹೆಂಡತಿಯ ಪತ್ರಗಳು ಮಾಡಿದವು.
ಆದರೆ ನಾನಿನ್ನೂ ಸತ್ಯವನ್ನು ಅಭ್ಯಸಿಸುವಂತೆ ಪ್ರೇರಿಸಲ್ಪಡಲಿಲ್ಲ. ನನ್ನ ಹೆಂಡತಿ ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಂಡು ಆತನ ಸ್ನಾತ ಸಾಕ್ಷಿಗಳಲ್ಲಿ ಒಬ್ಬಳಾದಳು. ನನ್ನ ಪತ್ರದಲ್ಲಿ ಅವರ ಕೂಟಗಳಿಗೆ ಹೋಗಲು ಒಪ್ಪಿಕೊಂಡಿದ್ದರೂ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗುವುದರ ಕುರಿತು ನಾನು ಯೋಚಿಸುತ್ತಿರಲಿಲ್ಲ. ನನ್ನ ಹೆಂಡತಿ, ಹೆಣ್ಣುಮಕ್ಕಳು ನನ್ನನ್ನು ಹಿಂದೆ ಬಿಟ್ಟು, ತೀರ ಮುಂದುವರಿದಿದ್ದಾರೆಂಬಂತೆ ನನಗನಿಸಿತು.
ಸೆರೆಮನೆಯಿಂದ ಹೊರಬರುವುದು
ನಾನು ಸ್ವತಂತ್ರನಾಗುವ ದಿನ ಹೇಗೂ ಕೊನೆಗೆ ಬಂತು. ನಾಗೋಯ ಸೆರೆಮನೆಯ ಬಾಗಿಲಲ್ಲಿ ಅನೇಕ ಗ್ಯಾಂಗ್ಸ್ಟರ್ಗಳು ನನ್ನನ್ನು ಸ್ವಾಗತಿಸಲು ನೆರೆದುಬಂದಿದ್ದರು. ಆದರೂ ಆ ದೊಡ್ಡ ಜನಸಮೂಹದಲ್ಲಿ ನಾನು ನನ್ನ ಹೆಂಡತಿ ಮತ್ತು ಹೆಣ್ಣುಮಕ್ಕಳಿಗಾಗಿ ಮಾತ್ರ ಹುಡುಕುತ್ತಿದ್ದೆ. ಮೂರುವರೆ ವರುಷಗಳಲ್ಲಿ ಗಣನೀಯವಾಗಿ ಬೆಳೆದಿದ್ದ ನನ್ನ ಹೆಣ್ಣುಮಕ್ಕಳನ್ನು ನೋಡಿದಾಗ ನಾನು ಕಣ್ಣೀರುಬಿಟ್ಟೆ.
ಮನೆಗೆ ಹೋಗಿ ಎರಡು ದಿನಗಳ ಬಳಿಕ, ನನ್ನ ಎರಡನೆಯ ಮಗಳಿಗೆ ಕೊಟ್ಟ ಮಾತನ್ನು ನೆರವೇರಿಸಿ ಯೆಹೋವನ ಸಾಕ್ಷಿಗಳ ಒಂದು ಕೂಟಕ್ಕೆ ಹೋದೆ. ಸಭೆಯಾಗಿ ನೆರೆದುಬಂದಿದ್ದ ಸಕಲರ ಪ್ರಸನ್ನ ಮನೋಭಾವವನ್ನು ನೋಡಿ ನಾನು ಬೆರಗಾದೆ. ಸಾಕ್ಷಿಗಳು ನನ್ನನ್ನು ಹೃದಯೋಲ್ಲಾಸದಿಂದ ಸ್ವಾಗತಿಸಿದರೂ ನನ್ನ ಸ್ಥಳವು ಅದಲ್ಲವೆಂದು ನನಗನಿಸಿತು. ನನ್ನನ್ನು ವಂದಿಸಿದವರಿಗೆ ನನ್ನ ಅಪರಾಧದ ಹಿನ್ನೆಲೆ ತಿಳಿದಿತ್ತೆಂದು ನನಗೆ ಬಳಿಕ ತಿಳಿದುಬಂದಾಗಲಂತೂ ನಾನು ಇನ್ನೂ ಹೆಚ್ಚು ತಬ್ಬಿಬ್ಬಾದೆ. ಆದರೂ ನನಗೆ ಅವರ ಉಲ್ಲಾಸವು ತಟ್ಟಿದ್ದು ಮಾತ್ರವಲ್ಲ, ಕೊಡಲ್ಪಟ್ಟ ಬೈಬಲಾಧರಿತ ಭಾಷಣದಿಂದಲೂ ನಾನು ಆಕರ್ಷಿತನಾದೆ. ಭೂಮಿಯ ಮೇಲಿನ ಪ್ರಮೋದವನದಲ್ಲಿ ಜನರು ಸದಾಕಾಲ ಜೀವಿಸುವ ಕುರಿತು ಅದಾಗಿತ್ತು.
ನನ್ನ ಹೆಂಡತಿ, ಹೆಣ್ಣುಮಕ್ಕಳು ಪ್ರಮೋದವನದೊಳಕ್ಕೆ ಪಾರಾಗಿ, ನಾನು ನಾಶವಾಗುವ ಯೋಚನೆಯು ನನ್ನನ್ನು ಬಹು ಸಂಕಟಕ್ಕೊಳಪಡಿಸಿತು. ನನ್ನ ಕುಟುಂಬದೊಂದಿಗೆ ಸದಾಕಾಲ ಬದುಕಲು ನಾನೇನು ಮಾಡಬೇಕೆಂಬುದರ ಕುರಿತು ನಾನು ಗಂಭೀರವಾಗಿ ಮನನ ಮಾಡಿದೆ. ಗ್ಯಾಂಗ್ಸ್ಟರನಾಗಿರುವ ನನ್ನ ಜೀವನದಿಂದ ಹೊರಬರುವ ವಿಷಯ ನಾನು ಯೋಚಿಸತೊಡಗಿ, ಬೈಬಲನ್ನು ಅಧ್ಯಯನಿಸಲು ಪ್ರಾರಂಭಿಸಿದೆ.
ನನ್ನ ಅಪರಾಧ ಜೀವಿತದಿಂದ ಸ್ವತಂತ್ರನಾಗುವುದು
ಗ್ಯಾಂಗ್ ಕೂಟಗಳಿಗೆ ಹಾಜರಾಗುವುದನ್ನು ನಾನು ನಿಲ್ಲಿಸಿ ಯಾಕೂಸಾ ಸಹವಾಸವನ್ನು ಬಿಟ್ಟುಬಿಟ್ಟೆ. ನನ್ನ ಯೋಚನಾವಿಧವನ್ನು ಬದಲಾಯಿಸುವುದು ಸುಲಭವಾಗಿರಲಿಲ್ಲ. ನಾನು ಕೇವಲ ಸಂತೋಷಾನುಭೋಗಕ್ಕಾಗಿ ಒಂದು ದೊಡ್ಡ ಆಮದುಮಾಡಿದ ವಾಹನ ನಡೆಸುತ್ತಿದ್ದೆ—ಇದೊಂದು ಸ್ವಾರ್ಥಾನ್ವೇಷಣೆಯಾಗಿತ್ತು. ಒಂದು ಮಿತಾನುಕೂಲದ ಕಾರಿಗಾಗಿ ನನ್ನ ದೊಡ್ಡ ಕಾರಿನ ಮಾರಾಟಮಾಡಲು ನನಗೆ ಮೂರು ವರುಷಗಳು ಹಿಡಿದವು. ಸಮಸ್ಯೆಗಳನ್ನು ಕಷ್ಟಪಡದೆ ಸುಲಭವಾಗಿ ಬಗೆಹರಿಸುವ ಪ್ರವೃತ್ತಿಯೂ ನನಗಿತ್ತು. ಆದರೂ ನಾನು ಸತ್ಯವನ್ನು ಕಲಿತಂತೆ, ಪರಿವರ್ತನೆ ಮಾಡಲೇಬೇಕೆಂಬುದು ನನಗೆ ನೋಡಸಾಧ್ಯವಾಯಿತು. ಆದರೆ ಯೆರೆಮೀಯ 17:9 ಹೇಳುವಂತೆ, “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ.” ಯಾವುದು ಸರಿ ಎಂದು ನನಗೆ ಹೇಳಸಾಧ್ಯವಿತ್ತಾದರೂ, ನಾನು ಕಲಿಯುತ್ತಿದ್ದುದನ್ನು ಅನ್ವಯಿಸಿಕೊಳ್ಳುವುದು ನನಗೆ ಕಷ್ಟಕರವಾಗಿತ್ತು. ನನ್ನ ಎದುರಿಗಿದ್ದ ಸಮಸ್ಯೆಗಳು ಒಂದು ದೊಡ್ಡ ಪರ್ವತದಂತೆ ತೋರಿಬಂದವು. ನಾನು ಕ್ಲೇಶಗೊಂಡು, ಅನೇಕ ವೇಳೆ ಅಭ್ಯಾಸವನ್ನು ಬಿಟ್ಟುಬಿಡಲು ಮತ್ತು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗುವ ವಿಚಾರವನ್ನು ತೊರೆದುಬಿಡಲು ಯೋಚಿಸಿದೆ.
ಆಗ, ನನ್ನ ಬೈಬಲ್ ಅಭ್ಯಾಸ ಚಾಲಕನು ನಮ್ಮ ಸಭೆಯಲ್ಲಿ ಸಾರ್ವಜನಿಕ ಭಾಷಣ ಕೊಡಲಿಕ್ಕಾಗಿ ನನ್ನ ಹಿನ್ನೆಲೆಗೆ ಸದೃಶವಾದ ಹಿನ್ನೆಲೆಯಿದ್ದ ಒಬ್ಬ ಸಂಚರಣ ಮೇಲ್ವಿಚಾರಕರನ್ನು ಆಮಂತ್ರಿಸಿದನು. ಅವರು 640 ಕಿಲೊಮೀಟರ್ ದೂರದ ಆಕೀಟದಿಂದ ನನ್ನನ್ನು ಪ್ರೋತ್ಸಾಹಿಸಲು ಸಸೂಕದಷ್ಟು ದೂರ ಬಂದರು. ಆ ಬಳಿಕ, ನಾನು ಬೇಸತ್ತು, ಬಿಟ್ಟುಬಿಡುವ ಮನಸ್ಸಿನವನಾದಾಗಲೆಲ್ಲ ನಾನು ಅವರಿಂದ, ಕರ್ತನ ಮಾರ್ಗದಲ್ಲಿ ನಾನು ಸ್ಥಿರವಾಗಿ ನಡೆಯುತ್ತಿದ್ದೇನೊ ಎಂದು ಕೇಳುವ ಪತ್ರವನ್ನು ಪಡೆಯುತ್ತಿದ್ದೆ.
ನಾನು ನನ್ನ ಸಕಲ ಯಾಕೂಸಾ ಸಂಬಂಧಗಳಿಂದ ಸ್ವತಂತ್ರನಾಗಲು ಸಹಾಯಮಾಡುವಂತೆ ಯೆಹೋವನಿಗೆ ಎಡೆಬಿಡದೆ ಪ್ರಾರ್ಥಿಸಿದೆ. ಯೆಹೋವನು ನನ್ನ ಪ್ರಾರ್ಥನೆಗಳಿಗೆ ಉತ್ತರ ಕೊಡುವನೆಂಬ ಭರವಸೆ ನನಗಿತ್ತು. ಎಪ್ರಿಲ್ 1987ರಲ್ಲಿ ನಾನು ಕೊನೆಗೆ ಯಾಕೂಸಾ ಸಂಸ್ಥೆಯಿಂದ ಹೊರಬರಲು ಶಕ್ತನಾದೆ. ನನ್ನ ಸ್ವಂತ ವ್ಯಾಪಾರವು ನನ್ನನ್ನು ಪ್ರತಿ ತಿಂಗಳು ನನ್ನ ಕುಟುಂಬದಿಂದ ದೂರ ವಿದೇಶಕ್ಕೆ ತೆಗೆದುಕೊಂಡು ಹೋಗುತ್ತಿದ್ದುದರಿಂದ, ನಾನು ದ್ವಾರಪಾಲಕನ ಕೆಲಸಕ್ಕೆ ಬದಲಾಯಿಸಿದೆ. ಇದು ಅಪರಾಹ್ಣಗಳಲ್ಲಿ ಆತ್ಮಿಕ ಕೆಲಸಕ್ಕೆ ನನ್ನನ್ನು ಸ್ವತಂತ್ರವಾಗಿರಿಸಿತು. ಪ್ರಥಮ ಬಾರಿ, ನನಗೆ ಒಂದು ವೇತನ ಲಕೋಟೆ ದೊರೆಯಿತು. ಅದು ಹಗುರವಾಗಿದ್ದರೂ ಅದು ನನ್ನನ್ನು ಅತಿ ಸಂತೋಷಗೊಳಿಸಿತು.
ನಾನು ಯಾಕೂಸಾ ಸಂಸ್ಥೆಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾಗ, ನನಗೆ ಪ್ರಾಪಂಚಿಕವಾಗಿ ಧಾರಾಳವಾಗಿತ್ತಾದರೂ, ಈಗ ಬಾಡಿಹೋಗದ ಆತ್ಮಿಕ ಸಂಪತ್ತು ನನಗಿದೆ. ನನಗೆ ಯೆಹೋವನ ಪರಿಚಯವಿದೆ. ಆತನ ಉದ್ದೇಶಗಳು ನನಗೆ ತಿಳಿದಿವೆ. ಜೀವಿಸಲು ಮೂಲಸೂತ್ರಗಳು ನನ್ನಲ್ಲಿವೆ. ಪರಾಮರಿಸುವ ನಿಜ ಸ್ನೇಹಿತರು ನನಗಿದ್ದಾರೆ. ಯಾಕೂಸಾ ಜಗತ್ತಿನಲ್ಲಿ ಬಾಹ್ಯ ತೋರಿಕೆಯಲ್ಲಿ ಪರಾಮರಿಸುವ ಗ್ಯಾಂಗ್ಸ್ಟರ್ಗಳಿದ್ದರೂ ಇತರರ ಪರವಾಗಿ ತನ್ನನ್ನು ತ್ಯಾಗಮಾಡಿಕೊಳ್ಳುವ ಒಬ್ಬನೇ ಒಬ್ಬ ಯಾಕೂಸಾನ ಪರಿಚಯ ನನಗಿರಲಿಲ್ಲ.
ಆಗಸ್ಟ್ 1988ರಲ್ಲಿ ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವನಿಗೆ ಮಾಡಿದ ಸಮರ್ಪಣೆಯನ್ನು ನಾನು ಸಂಕೇತಿಸಿಕೊಂಡೆ. ಮುಂದಿನ ತಿಂಗಳಲ್ಲಿ, ನನ್ನ ಜೀವನವನ್ನು ಬದಲಾಯಿಸಿದ್ದ ಸುವಾರ್ತೆಯ ಕುರಿತು ಇತರರಿಗೆ ತಿಳಿಸುತ್ತಾ, ತಿಂಗಳಿಗೆ ಕಡಮೆ ಪಕ್ಷ 60 ತಾಸುಗಳನ್ನಾದರೂ ನಾನು ಕಳೆಯತೊಡಗಿದೆ. ಮಾರ್ಚ್ 1989ರಿಂದ ನಾನು ಪೂರ್ಣ ಸಮಯದ ಶುಶ್ರೂಷಕನಾಗಿ ಸೇವೆ ಮಾಡುತ್ತಿದ್ದು, ಈಗ ಸಭೆಯಲ್ಲಿ ಶುಶ್ರೂಷಾ ಸೇವಕನಾಗಿ ಸೇವೆಮಾಡುವ ಸುಯೋಗವು ನನಗೆ ಕೊಡಲ್ಪಟ್ಟಿದೆ.
ನನ್ನ ಯಾಕೂಸಾ ಜೀವಿತದ ಅಧಿಕಾಂಶ ಸ್ಮಾರಕವಸ್ತುಗಳನ್ನು ನನ್ನಿಂದ ತೊಲಗಿಸಲು ನಾನು ಶಕ್ತನಾದೆ. ಆದರೂ ಇನ್ನೂ ಉಳಿದಿರುವ ಒಂದು ಸ್ಮಾರಕವಸ್ತು ಇದೆ. ನನ್ನ ದೇಹದ ಮೇಲಿರುವ ಹಚ್ಚೆ ಗುರುತೇ (ಟಟೂ), ನನಗೂ ನನ್ನ ಕುಟುಂಬದವರಿಗೂ ಇತರರಿಗೂ, ನನ್ನ ಗತ ಯಾಕೂಸಾ ಜೀವಿತದ ನೆನಪನ್ನು ಹುಟ್ಟಿಸುತ್ತದೆ. ಒಂದುಬಾರಿ, ನನ್ನ ಹಿರಿಯ ಮಗಳು ಶಾಲೆಯಿಂದ ಅಳುತ್ತಾ ಮನೆಗೆ ಬಂದಳು. ತನ್ನ ಗೆಳತಿಯರು ತನಗೆ ನಾನು ಯಾಕೂಸಾ ಆಗಿದ್ದೆನೆಂದೂ, ನನ್ನ ಮೇಲೆ ಹಚ್ಚೆ ಗುರುತುಗಳು ಇದ್ದವೆಂದೂ ಹೇಳಿದ ಕಾರಣದಿಂದ, ತಾನು ಇನ್ನುಮುಂದೆ ಶಾಲೆಗೆ ಹೋಗುವುದಿಲ್ಲವೆಂದು ಅವಳು ಹೇಳಿದಳು. ನಾನು ನನ್ನ ಪುತ್ರಿಯರೊಂದಿಗೆ ಈ ವಿಷಯವನ್ನು ಸಮಗ್ರವಾಗಿ ಚರ್ಚಿಸಲು ಶಕ್ತನಾದೆ, ಮತ್ತು ಅವರು ಸನ್ನಿವೇಶವನ್ನು ಅರ್ಥಮಾಡಿಕೊಂಡರು. ಈ ಭೂಮಿಯು ಒಂದು ಪ್ರಮೋದವನವಾಗಿ, ನನ್ನ ಶರೀರವು “ಬಾಲ್ಯಕ್ಕಿಂತಲೂ ಕೋಮಲವಾಗು”ವ ದಿನವನ್ನು ನಾನು ಮುನ್ನೋಡುತ್ತಿದ್ದೇನೆ. ಆಗ ನನ್ನ ಹಚ್ಚೆ ಗುರುತುಗಳು ಹಾಗೂ 20 ವರ್ಷಗಳ ಯಾಕೂಸಾ ಜೀವಿತದ ಸ್ಮರಣೆಗಳು, ಗತ ವಿಷಯಗಳಾಗಿರುವವು. (ಯೋಬ 33:25; ಪ್ರಕಟನೆ 21:4)—ಯಾಸೂಓ ಕಾಟಾಓಕಾ ಹೇಳಿದಂತೆ.
[ಪುಟ 37 ರಲ್ಲಿರುವ ಚಿತ್ರ]
ನನ್ನ ಹಚ್ಚೆ ಗುರುತುಗಳು ಅಳಿಸಿಹಾಕಲ್ಪಡುವ ದಿನಕ್ಕಾಗಿ ನಾನು ಹಂಬಲಿಸುತ್ತೇನೆ
[ಪುಟ 39 ರಲ್ಲಿರುವ ಚಿತ್ರ]
ರಾಜ್ಯ ಸಭಾಗೃಹದಲ್ಲಿ ನನ್ನ ಕುಟುಂಬದೊಂದಿಗೆ