ಜಗತ್ತನ್ನು ಗಮನಿಸುವುದು
ವಿವಾಹ ಪ್ರಮಾಣಗಳು ಕುಸಿಯುತ್ತಿವೆ
ಕೆನಡ ಸಂಖ್ಯಾ ಸಂಗ್ರಹಣದಲ್ಲಿನ, ಪ್ರಚಲಿತ ಜನಸಂಖ್ಯಾಶಾಸ್ತ್ರ ವಿಶ್ಲೇಷಣದ ಮುಖ್ಯಾಧಿಕಾರಿಯಾದ, ಸಾನ್ ಡ್ಯೂಮಸ್ ಹೇಳುವುದೇನೆಂದರೆ, “ಒಂದು ಆಚಾರದೋಪಾದಿ ವಿವಾಹದ ಕಣ್ಮರೆಯಾಗುವಿಕೆಯನ್ನು ನಾವು ನೋಡುತ್ತಿದ್ದೇವೆ.” ದ ಟೊರಾಂಟೊ ಸ್ಟಾರ್‌ಗನುಸಾರ, ಕೆನಡದಲ್ಲಿ, ವಿಶೇಷವಾಗಿ ಕ್ವಿಬೆಕ್‌ನಲ್ಲಿ, ವಿವಾಹ ಪ್ರಮಾಣಗಳು ಕುಸಿಯುತ್ತಿವೆ. ಕೆಲವು ಸಂದರ್ಭಗಳಲ್ಲಿ, ಒಂದು ಬಾಳುವ ವಿವಾಹಕ್ಕೆ ತಮ್ಮನ್ನು ತಾವೇ ಬದ್ಧರನ್ನಾಗಿ ಮಾಡಿಕೊಳ್ಳುವ ಸಂಕೋಚಕ್ಕೆ ಕಾರಣವು, ತಮ್ಮ ಸ್ವಂತ ಹೆತ್ತವರ ವಿವಾಹಗಳ ಕುರಿತು ಜನರಿಗೆ ಇರುವ ತುಚ್ಛವಾದ ಕಲ್ಪನೆಯೇ ಎಂಬುದಾಗಿ ವರದಿಯು ಹೇಳುತ್ತದೆ. 25 ವರುಷಗಳ ಅವಧಿಯಲ್ಲಿ ಸಂಗ್ರಹಿಸಿದ ಮಾಹಿತಿಯು ಪ್ರಕಟಿಸುವುದೇನಂದರೆ, 1969ರಲ್ಲಿ ವಿವಾಹವಾದ ದಂಪತಿಗಳಲ್ಲಿ, 30 ಪ್ರತಿಶತ ದಂಪತಿಗಳು 1993ರಲ್ಲಿ ಇನ್ನೆಂದಿಗೂ ಒಂದಾಗಿ ಬಾಳುವೆ ಮಾಡುತ್ತಿರಲಿಲ್ಲ. ತೀರ ಇತ್ತೀಚೆಗೆ ವಿವಾಹವಾದ ದಂಪತಿಗಳು ವಿಚ್ಛೇದ ಪಡೆಯುತ್ತಿದ್ದಾರೆ ಎಂಬುದನ್ನೂ ಸಂಖ್ಯಾ ಸಂಗ್ರಹಣವು ತೋರಿಸುತ್ತದೆ. ಕೆನಡದಲ್ಲಿ, 1993ರಲ್ಲಿ ಆದ ಎಲ್ಲ ವಿವಾಹ ವಿಚ್ಛೇದಗಳಲ್ಲಿ ಮೂರರಲ್ಲಿ ಒಂದಂಶ, ಐದು ವರ್ಷಗಳಿಗಿಂತ ಕಡಮೆ ಸಮಯ ವಿವಾಹವಾಗಿದ್ದ ದಂಪತಿಗಳನ್ನೊಳಗೊಂಡಿತ್ತು. ಇದು 1980ರಲ್ಲಿ ಇದ್ದ ಕಾಲು ಭಾಗಕ್ಕಿಂತ ಹೆಚ್ಚಾಗಿತ್ತು. ಅಂಟಾರಿಯೊದ ಗೆಲ್ಫ್ ವಿಶ್ವವಿದ್ಯಾನಿಲಯದಲ್ಲಿನ, ವಿವಾಹ ಹಾಗೂ ಕುಟುಂಬ ಚಿಕಿತ್ಸಾ ಕೇಂದ್ರದ ನಿರ್ದೇಶಕರಾದ ಮಾರ್ಷಲ್ ಫೀನ್ ತಿಳಿಸುವುದು: “ಯುವ ಜನರಿಗಾಗಿ ಇದು ತುಂಬ ಸುರಕ್ಷಿತ ಲೋಕವಾಗಿ ಕಾಣುವುದಿಲ್ಲ.”
ಆಹಾರ ಪಥ್ಯವು ಕ್ಯಾನ್ಸರ್ ಅಪಾಯವನ್ನು ಕಡಿಮೆಗೊಳಿಸುತ್ತದೆ
ದಿನಕ್ಕೆ ಕಡಿಮೆ ಪಕ್ಷ ಐದಾವರ್ತಿ ಹಣ್ಣುಹಂಪಲುಗಳನ್ನೂ ತರಕಾರಿಗಳನ್ನೂ ತಿನ್ನುವುದು, ಒಬ್ಬ ವ್ಯಕ್ತಿಯ ಶ್ವಾಸಕೋಶದ, ದೊಡ್ಡಕರುಳಿನ, ಹೊಟ್ಟೆಯ, ಮತ್ತು ಇತರ ವಿಧಗಳ ಕ್ಯಾನ್ಸರಿನ ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂಬುದಾಗಿ ದ ವಾಲ್ ಸ್ಟ್ರೀಟ್ ಜರ್ನಲ್ ವರದಿಸುತ್ತದೆ. ಕಡಿಮೆ ಪಕ್ಷ 17 ದೇಶಗಳಲ್ಲಿ ಈ ಆಹಾರ ಪಥ್ಯದ ಪ್ರಯೋಜನಗಳನ್ನು ದೃಢಪಡಿಸುವ 200ಕ್ಕಿಂತಲೂ ಹೆಚ್ಚಿನ ಅಧ್ಯಯನಗಳ ನಂತರ ಇದಕ್ಕೆ “ಪ್ರಬಲವಾದ ರುಜುವಾತು” ಕಂಡುಬಂತು. ಆಹಾರದ ಪ್ರಮಾಣ ದೊಡ್ಡದಾಗಿರಬೇಕೆಂದಿಲ್ಲ. ಅಮೆರಿಕದ ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಕಾರ್ಯಕ್ರಮಕ್ಕನುಸಾರ, ಪರಿಣಾಮಕಾರಿಯಾದ ಪ್ರಮಾಣಗಳಲ್ಲಿ, “ಹಣ್ಣಿನ ಒಂದು ಮಧ್ಯಮ ಗಾತ್ರದ ತುಂಡು, ಮುಕ್ಕಾಲು ಕಪ್ ಜೂಸ್, ಅರ್ಧ ಕಪ್ ಬೇಯಿಸಿದ ತರಕಾರಿಗಳು, ಸ್ಯಾಲಡ್‌ನಲ್ಲಿರುವ ಒಂದು ಕಪ್ ತಾಜಾ ಹಸಿರು ತರಕಾರಿ, ಅಥವಾ ಕಾಲು ಕಪ್ ಒಣಗಿಸಿದ ಹಣ್ಣು” ಒಳಗೊಂಡಿದೆ. ಕಳೆದ ಐದು ವರುಷಗಳಿಂದ ಈ ಸಂಸ್ಥೆಯು ಇಂತಹ ಆಹಾರ ಪಥ್ಯವನ್ನು ಉತ್ತೇಜಿಸಿದೆ, ಆದರೆ ಅಮೆರಿಕದಲ್ಲಿ ಸದ್ಯಕ್ಕೆ 3ರಲ್ಲಿ ಕೇವಲ 1 ವಯಸ್ಕನು ಮತ್ತು 5ರಲ್ಲಿ 1 ಮಗುವು ಈ ಮಾರ್ಗದರ್ಶನವನ್ನು ಅನುಸರಿಸುತ್ತಿದೆ. ಫಾಸ್ಟ್-ಫುಡ್ (ಕೂಡಲೆ ತಯಾರಿಸಿ ತಿನ್ನಲಾಗುವಂತಹ ಆಹಾರ)ಗಾಗಿರುವ ಹಂಬಲಿಸುವಿಕೆಯೇ ಇದರ ಸಾಫಲ್ಯವನ್ನು ತಡೆಯುವಂತೆ ತೋರುತ್ತದೆ. ದ ವಾಲ್ ಸ್ಟ್ರೀಟ್ ಜರ್ನಲ್ ತಿಳಿಸುವುದು: “ಕೆಚಪ್‌ನೊಂದಿಗೆ ಕರ್ಲಿ ಫ್ರೈಯ್ಸ್ (ಎಣ್ಣೆಯಲ್ಲಿ ಹುರಿದ ಆಲೂಗಡ್ಡೆಯ ಸುರುಳಿಯಾಕಾರದ ತುಂಡು) ತಿನ್ನುವುದು, ಎರಡಾವರ್ತಿ ತರಕಾರಿ ತಿನ್ನುವುದಕ್ಕೆ ಸಮಾನವಲ್ಲ.”
ನಿದ್ರಾವಂಚಿತ ಹದಿಹರೆಯದವರು
ಮುಂಜಾನೆ ಮಲಗಬೇಕೆಂಬ ಹದಿಹರೆಯದವರ ಆಶೆಗೆ, ಟಿವಿ, ದಂಗೆ, ಅಥವಾ ಸೋಮಾರಿತನಕ್ಕಿಂತಲೂ ಹೆಚ್ಚಿನದ್ದು ಕಾರಣವಾಗಿರಬಹುದೆಂದು ಆಸ್ಟ್ರೇಲಿಯ ಹಾಗೂ ಅಮೆರಿಕದಲ್ಲಿನ ಕೆಲವು ನಿದ್ರಾ ವಿಶೇಷಜ್ಞರು ನಂಬುತ್ತಾರೆಂದು ಏಷಿಯಾವೀಕ್ ಪತ್ರಿಕೆ ವರದಿಮಾಡುತ್ತದೆ. ಆಸ್ಟ್ರೇಲಿಯದ ನಿದ್ರಾ ವಿಶೇಷಜ್ಞ ಡಾ. ಕ್ರಿಸ್ ಸಿಟನ್ ಹೇಳುವುದೇನೆಂದರೆ, ಹೆಚ್ಚು ಮಲಗಬೇಕೆಂಬ ಹದಿಹರೆಯದವರ ಆಶೆಯು, ಹಾರ್ಮೋನಿನ ಬದಲಾವಣೆಗೆ ಹಾಗೂ ಬೆಳವಣಿಗೆಯ ರಭಸಕ್ಕೆ ಸಂಬಂಧಿಸಿರಲು ಸಾಧ್ಯವಿದೆ. ಒಂಬತ್ತು ವಯಸ್ಸಿನಿಂದ ಆರಂಭವಾಗಿ, ಒಬ್ಬ ಯುವಕನ ನಿದ್ದೆಯ ಆವಶ್ಯಕತೆಯು ಹೆಚ್ಚಾಗುತ್ತದೆ. ಹಾಗಿದ್ದರೂ, 17ರಿಂದ 19 ವರುಷಗಳ ವಯಸ್ಸಿನ ಅಮೆರಿಕದ 3,000 ವಿದ್ಯಾರ್ಥಿಗಳ ಒಂದು ಸಮೀಕ್ಷೆಯಲ್ಲಿ, 85 ಪ್ರತಿಶತ ವಿದ್ಯಾರ್ಥಿಗಳು ಆವಶ್ಯಕವಿರುವುದಕ್ಕಿಂತ ಕಡಿಮೆ ನಿದ್ರೆಯನ್ನು ಪಡೆಯುತ್ತಿದ್ದರು. ಇದರ ಪ್ರತಿಫಲವು, ವಿಶೇಷವಾಗಿ ಮುಂಜಾನೆ ಕ್ಲಾಸ್‌ಗಳಲ್ಲಿ ಸತತವಾಗಿ ತೂಕಡಿಸುವಿಕೆಯೊಂದಿಗೆ ಹೋರಾಡುತ್ತಿರುವ ವಿದ್ಯಾರ್ಥಿಗಳು ಎಂಬುದಾಗಿ ದ ನ್ಯೂ ಯಾರ್ಕ್ ಟೈಮ್ಸ್ ವರದಿಸುತ್ತದೆ. ಕೊರ್‌ನೆಲ್ ವಿಶ್ವವಿದ್ಯಾನಿಲಯದ ಪ್ರೊಫೆಸರರಾದ ಜೇಮ್ಸ್ ಬಿ. ಮಾಸ್ ತಿಳಿಸುವುದು: “ನಮ್ಮಲ್ಲಿರುವ ಈ ಮಕ್ಕಳು ಎಷ್ಟು ನಿದ್ರಾವಂಚಿತರೆಂದರೆ, ಹೆಚ್ಚುಕಡಿಮೆ ಅವರು ಅಮಲಿನಲ್ಲಿದ್ದಂತೆ ಇದ್ದಾರೆ.” ಹದಿಹರೆಯದವರಿಗೆ ಒಂದು ರಾತ್ರಿಗೆ ಕಡಿಮೆಪಕ್ಷ ಎಂಟೂವರೆ ತಾಸಿನ ನಿದ್ರೆ ಬೇಕಾಗಿದೆ ಎಂಬುದಾಗಿ ಪರಿಣತರು ನಂಬುತ್ತಾರೆ.
ಒಂದು ಸ್ಥಿರವಾದ ಜನಸಂಖ್ಯೆಯೊ?
ವಿಯೆನ್ನದ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಅಪ್ಲೈಡ್ ಸಿಸ್ಟೆಮ್ಸ್ ಅನ್ಯಾಲಿಸಿಸ್ (ಐಐಎಎಸ್‌ಎ)ಗನುಸಾರ, ಈಗಿನ ಲೋಕದ ಜನಸಂಖ್ಯೆ ಇಮ್ಮಡಿಯಾಗುವುದು ಅಸಂಭವ. ನ್ಯೂ ಸೈಎನ್ಟಿಸ್ಟ್ ತಿಳಿಸುವುದೇನಂದರೆ, ಜನಸಂಖ್ಯೆಯು “ಇಸವಿ 2050ರೊಳಗೆ ಅದರ ಇಂದಿನ 575 ಕೋಟಿಗಳಿಂದ 1,000 ಕೋಟಿಗಳಿಗೆ ಬೆಳೆದು, ಇಸವಿ 2075ರೊಳಗೆ 1,100 ಕೋಟಿಗಳ ಉಚ್ಚಾಂಕವನ್ನು ತಲಪಿ, ಇಸವಿ 2100ರ ಸುಮಾರಿಗೆ ಹೆಚ್ಚು ಕಡಮೆ ಸ್ಥಿರವಾಗಿ ಉಳಿಯಲಿದೆ ಅಥವಾ ಕೊಂಚ ಕಡಮೆಯಾಗಲಿದೆ,” ಎಂಬುದು ಅವರ ಅಂದಾಜಾಗಿದೆ. ಐಐಎಎಸ್‌ಎಗನುಸಾರ, ನಮ್ಮ ಈಗಿನ ಭೌಗೋಳಿಕ ಜನಸಂಖ್ಯೆಯು ಎಂದಿಗೂ ಇಮ್ಮಡಿಯಾಗುವುದಿಲ್ಲ ಎಂಬುದಕ್ಕೆ 64 ಪ್ರತಿಶತ ಸಂಭವವಿದೆ. 1995ರಲ್ಲಿ ಲೋಕದ ಪ್ರತಿಯೊಂದು ಭಾಗದಲ್ಲಿ ಮಕ್ಕಳು ಹುಟ್ಟುವ ಪ್ರಮಾಣವು ಕಡಿಮೆಯಾಗಿರುವಂತೆ ಕಾಣುತ್ತದೆ ಎಂಬುದಾಗಿ ಅವರ ಲೆಕ್ಕಗಳು ತೋರಿಸುತ್ತವೆ.
ಬ್ಯಾಟರಿ-ರಹಿತವಾದ ರೇಡಿಯೊ
ಗ್ರಾಮೀಣ ಆಫ್ರಿಕದ ಹೆಚ್ಚಿನ ಭಾಗದಲ್ಲಿ ವಿದ್ಯುಚ್ಛಕ್ತಿಯ ಕೊರತೆಯೊಂದಿಗೂ ಬ್ಯಾಟರಿಯ ನ್ಯೂನ ಲಭ್ಯತೆಯೊಂದಿಗೂ ನಿಭಾಯಿಸಲು, ದಕ್ಷಿಣ ಆಫ್ರಿಕದ ಕೇಪ್ ಟೌನ್‌ನ ಬಳಿ ಒಂದು ಸಣ್ಣ ಕಾರ್ಖಾನೆಯು, ಕೈಯಿಂದ ತಿರುಗಿಸಲಾಗುವ ಅಂತರ್ನಿವಿಷ್ಟ ಜನರೇಟರ್‌ವುಳ್ಳ, ಒಯ್ಯಲು ಅನುಕೂಲವಾದ (ಸಣ್ಣ ಗಾತ್ರದ) ರೇಡಿಯೊವನ್ನು ತಯಾರಿಸುತ್ತಿದೆ. “ಹಿಡಿಯನ್ನು ಕೊಂಚ ಸುತ್ತು ಜೋರಾಗಿ ತಿರುಗಿಸಿರಿ, ರೇಡಿಯೊ ಅರ್ಧ ಗಂಟೆಯ ವರೆಗೆ ಹಾಡುತ್ತದೆ,” ಎಂಬುದಾಗಿ ದ ನ್ಯೂ ಯಾರ್ಕ್ ಟೈಮ್ಸ್ ವರದಿಸುತ್ತದೆ. ಒಂದು ಊಟದ ಡಬ್ಬಿಯ ಗಾತ್ರದ ಹಾಗೂ ಮೂರು ಕಿಲೊ ಭಾರದ ಹೊರತಾಗಿಯೂ, ಈ ಹೊಸ ಶೈಲಿಯು ವಿಜಯಕ್ಕಾಗಿ ವಿಧಿಸಿದೆ ಎಂಬಂತೆ ಕಾಣುತ್ತದೆ. ಈ ಕಾರ್ಖಾನೆಯ ಮಾರ್ಕೆಟಿಂಗ್ ಕಾರ್ಯಾಚರಣೆಯನ್ನು ನಿರ್ವಹಿಸುವ ಸೀಆ್ಯನ್ಗಾ ಮಾಲೂಮಾಗನುಸಾರ, ರೇಡಿಯೊವನ್ನು ಒಂದು ದಿನಕ್ಕೆ ಐದು ಅಥವಾ ಹತ್ತು ತಾಸು ಹಾಡಿಸಿದರೆ, ಅದು ಬ್ಯಾಟರಿಗಳಲ್ಲಿ ಸುಮಾರು ಮೂರು ವರುಷಗಳಲ್ಲಿ 500ರಿಂದ 1,000 ಡಾಲರ್ ಹಣವನ್ನು ಉಳಿತಾಯಮಾಡುತ್ತದೆ. ಸೈಕಲ್ ಹಾಗೂ ಮೋಟಾರ್‌ಸೈಕಲ್‌ನೊಂದಿಗೆ, “ಆಫ್ರಿಕದ ಘನತೆಯ ಮೂರು ದೊಡ್ಡ ಸಂಕೇತಗಳಲ್ಲಿ ರೇಡಿಯೊ ಒಂದಾಗಿದೆ,” ಎಂಬುದಾಗಿ ಮಾಲೂಮಾ ಹೇಳುತ್ತಾನೆ. “ನೀವು ನಿಶ್ಚಯದಿಂದಿರಸಾಧ್ಯವಿದೆ,” ಎಂಬುದಾಗಿ ಅವನು ದೃಢಪಡಿಸುತ್ತಾನೆ. ಒಂದು ಸ್ವಂತ ರೇಡಿಯೊವನ್ನು ಹೊಂದಿರುವ ಆಧಾರದ ಮೇಲೆ, “ನಿಮಗೆ ಒಬ್ಬ ಹೆಂಡತಿ ಸಿಗಸಾಧ್ಯವಿದೆ.”
ಕೊಲೆಗಾರ ಮಳೆ
ಸ್ವೀಡನ್‌ನ ವಿಜ್ಞಾನಿಯಾದ ಡಾ. ಆ್ಯಡ್ರೀಯಾನ್ ಫ್ರ್ಯಾಂಕ್‌ಗನುಸಾರ, ಆಮ್ಲ ಮಳೆಯು, ಪರೋಕ್ಷವಾಗಿ ಸ್ಕ್ಯಾಂಡಿನೇವಿಯದ ಅನೇಕ ಸಾರಂಗದ ಮರಣಕ್ಕೆ ಕಾರಣವಾಗಿದೆ. ಆಮ್ಲ ಮಳೆಯ ಪರಿಣಾಮಗಳನ್ನು ಎದುರಿಸಲು, ಸುಣ್ಣವನ್ನು ಗದ್ದೆಗಳಲ್ಲಿಯೂ ಸರೋವರಗಳಲ್ಲಿಯೂ ಹಾಕಲಾಗುತ್ತದೆ. ಹಾಗಿದ್ದರೂ, ಸುಣ್ಣ ಮಿಶ್ರಿತ ಮಣ್ಣಿನಲ್ಲಿ ಬೆಳೆಯುವ ಗಿಡಗಳು, ವಿಶೇಷವಾಗಿ ಮಾಲಿಬ್ಡೀನಮ್‌ನಂತಹ ಕೆಲವು ಘಟಕಾಂಶಗಳ ಮಟ್ಟವು ಹೆಚ್ಚಾಗಿರುವುದನ್ನು ತೋರಿಸುತ್ತವೆ. ಸಾರಂಗವು ಬಹಳಷ್ಟು ಮಾಲಿಬ್ಡೀನಮನ್ನು ಸೇವಿಸುವಾಗ, ಅದು ತಾಮ್ರದ ಘೋರ ಕೊರತೆಯನ್ನು ಉಂಟುಮಾಡುತ್ತದೆ. ಮತ್ತು ಇದು, ಪ್ರಾಣಿಗಳ ರೋಗ ನಿರೋಧಕ ಅಂಗಗಳನ್ನು ಗಂಭೀರವಾಗಿ ಬಾಧಿಸುತ್ತದೆ. ಆಮ್ಲ ಮಳೆಯ ಮುಂದಿನ ಪರಿಣಾಮವಾಗಿ, ಸ್ವೀಡನಿನ 4,000ಕ್ಕಿಂತಲೂ ಹೆಚ್ಚಿನ ಸರೋವರಗಳಲ್ಲಿ ಮೀನುಗಳು ಈಗ ಬದುಕಲು ಸಾಧ್ಯವಾಗುತ್ತಿಲ್ಲ ಮತ್ತು ನಾರ್ವೇಯಲ್ಲಿ ಸಿಹಿನೀರು ಮೀನಿನ ಸಂಖ್ಯೆಯು ಹಿಂದಿನ ಮಟ್ಟಗಳಿಗಿಂತ ಅರ್ಧದಷ್ಟು ಕಡಿಮೆಯಾಗಿದೆ. ಲಂಡನಿನ ದ ಸಂಡೇ ಟೆಲಿಗ್ರಾಫ್ ತಿಳಿಸುವುದೇನೆಂದರೆ, ಬ್ರಿಟಿಷ್ ಸರಕಾರವು ಮಲಿನತೆಯ ಮೂಲವನ್ನು ತಡೆಗಟ್ಟಲು ಅದರ ವಿದ್ಯುಚ್ಛಕ್ತ್ಯುತ್ಪತ್ತಿ ಸ್ಥಾವರದಿಂದ ಗಂಧಕ ವಿಸರ್ಜನೆಯನ್ನು ಕಡಿಮೆಮಾಡುತ್ತಿದೆಯಾದರೂ, ಆಮ್ಲ ಮಳೆಯ ಉಳಿದಿರುವ ಪ್ರಭಾವವು ಅನೇಕ ವರುಷಗಳ ವರೆಗೆ ಮುಂದುವರಿಯಸಾಧ್ಯವಿದೆ.
ಆಫ್ರಿಕದ ಆನೆಗಳನ್ನು ಪಳಗಿಸುವುದು
ಶತಮಾನಗಳಿಂದ ಏಷ್ಯಾದ ಆನೆಗಳನ್ನು ಕೆಲಸದ ಪ್ರಾಣಿಗಳಾಗಿ ಉಪಯೋಗಿಸಲಾಗುತ್ತಿದೆ. ಹಾಗಿದ್ದರೂ, ಅವುಗಳ ಬಹು ದೊಡ್ಡ ಆಫ್ರಿಕದ ಸೋದರಸಂಬಂಧಿಗಳು, ಪಳಗಿಸಲು ಬಹು ಆಕ್ರಮಣ ಪ್ರವೃತ್ತಿಯವುಗಳಾಗಿವೆ ಎಂದು ನಂಬಲಾಗಿದೆ. ಆದರೂ, ಕಡಿಮೆಪಕ್ಷ ಒಂದು ಪ್ರಯೋಗವು ಸುವ್ಯಕ್ತ ಜಯವನ್ನು ಗಳಿಸಿದೆ. ಸಿಂಬಾಬ್ವೆಯ ಈಮೀರ್ ಆಟದಲ್ಲಿ, ಗದ್ದೆಗಳನ್ನು ಉಳಲು ಹಾಗೂ ತಲಪಲು ಕಷ್ಟಕರವಾದ ಸ್ಥಳಗಳಿಗೆ ವನ ರಕ್ಷಕರನ್ನು ತಲಪಿಸಲು, ಆಫ್ರಿಕದ ಆನೆಗಳನ್ನು ಉಪಯೋಗಿಸಲಾಗುತ್ತಿದೆ. ಪಳಗಿಸಲು ಉಪಯೋಗಿಸಲಾದ ವಿಧಾನವನ್ನು “ಪ್ರೀತಿ ಮತ್ತು ಪ್ರತಿಫಲ” ಎಂಬುದಾಗಿ ಕರೆಯಲಾಯಿತು. ನ್ಯಾಷಾ ಎಂಬ ಹೆಸರುಳ್ಳ ಒಂದು ಆನೆಯು, ಕೂಲಿಕಾರನಾದ ಮೂಚಿಮ್‌ವಾನನ್ನು ಅದರ ಬೆನ್ನಮೇಲೆ ಹೊತ್ತುಕೊಂಡು ಗದ್ದೆ ಉಳುವುದನ್ನು ಆಫ್ರಿಕದ ವಾರ್ತಾಪತ್ರಿಕೆಯೊಂದರ ಒಬ್ಬ ವರದಿಗಾರನು ಗಮನಿಸಿದನು. “ಪದೇ ಪದೇ ಆ ಆನೆಯು ತನ್ನ ಸೊಂಡಿಲನ್ನು ಹಿಂದಕ್ಕೆ ಎತ್ತುತ್ತಿತ್ತು ಮತ್ತು ಮೂಚಿಮ್‌ವಾ ಅದರೊಳಗೆ ಬಹು ಸಸಾರಜನಕವುಳ್ಳ ಆಹಾರವನ್ನು ತುರುಕುತ್ತಿದ್ದ,” ಎಂದು ವರದಿಗಾರನು ವಿವರಿಸಿದನು. ವರದಿಯು ಮುಂದುವರಿದದ್ದು: “ಈಮೀರ್‌ನಲ್ಲಿ ಪಳಗಿಸಲಾದ ನ್ಯಾಷಾ ಹಾಗೂ ಇತರ ಆರು ಆನೆಗಳು, ಅವುಗಳಿಗೂ ಹೊಲದ ಹಟ್ಟಿಗಳಲ್ಲಿರುವ ಇತರ ಪ್ರಾಣಿಗಳಿಗೂ ಆಹಾರವಾಗಿ ಉಪಯೋಗಿಸಲ್ಪಡುವ ಮುಸುಕಿನ ಜೋಳದಂತಹ ಬೆಳೆಗಳನ್ನು ಬೆಳೆಸಲು, ಮುಂದಿನ ಮಳೆಗಾಲಕ್ಕಿಂತ ಮೊದಲು ಗದ್ದೆಗಳನ್ನು ಉಳಲು ಉಪಯೋಗಿಸಲ್ಪಡುವುವು.”
ಕೊಲ್ಲುವಂತಹ ರೋಮಾಂಚಕಗಳು
ಫ್ರಾನ್ಸಿನಲ್ಲಿ, ಬಂಗಿ ಜಂಪಿಂಗ್, ಹಗ್ಗದ ಸಹಾಯವಿಲ್ಲದೆ ಬಂಡೆಯನ್ನು ಹತ್ತುವುದು, ಸ್ಕೈ ಡೈವಿಂಗ್, ಬೇಸ್ ಜಂಪಿಂಗ್ ಮುಂತಾದ ರೋಮಾಂಚಕರ ಕ್ರೀಡೆಗಳು ಸಾಮಾನ್ಯವಾಗಿವೆ. ಫ್ರಾನ್ಸಿನಲ್ಲಿ ರೋಮಾಂಚಕರ ಕ್ರೀಡೆಗಳು ಏಕೆ ಅಷ್ಟೊಂದು ಪ್ರಖ್ಯಾತವಾಗಿವೆ ಎಂಬುದಾಗಿ ಪ್ಯಾರಿಸಿನ ಲ ಮೊಂಡ್ ವಾರ್ತಾಪತ್ರಿಕೆ ಅನೇಕ ಪ್ರವೀಣರನ್ನು ಕೇಳಿತು. ಶಿಸ್ತಿನ ಆವಶ್ಯಕತೆಗಿಂತಲೂ ಸ್ವಾತಂತ್ರ್ಯಕ್ಕೆ ಹಾಗೂ ಮೋಜಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುವ ಇಂದಿನ ಯುವ ಜನರ ಮೌಲ್ಯಗಳಿಗೆ, ನಿಯಮ, ಶಿಸ್ತು, ಮತ್ತು ಶಿಕ್ಷಣವನ್ನು ಅವಶ್ಯಪಡಿಸುವ ಸಾಂಪ್ರದಾಯಿಕ ಕ್ರೀಡೆಗಳು ಇನ್ನು ಮುಂದೆ ಒಪ್ಪದಿರುವುದೆ ಒಂದು ಕಾರಣವಾಗಿದೆ ಎಂಬುದಾಗಿ ಸ್ಟಡಿ ಸೆಂಟರ್ ಫಾರ್ ಸ್ಪೋರ್ಟ್ಸ್ ಇನೊವೇಷನ್‌ನ ನಿರ್ದೇಶಕರಾದ ಏಲನ್ ಲೋರಾ ಹೇಳಿದರು. ಫ್ರಾನ್ಸಿನ ಸಮಾಜ ವಿಜ್ಞಾನಿ ಡೇವಿಡ್ ಲೇ ಬ್ರೆಟೋನ್‌ಗನುಸಾರ, “ಬಹು ಗಂಡಾಂತರದ ಕ್ರೀಡೆಗಳ ಬೆಳೆಯುತ್ತಿರುವ ಜನಪ್ರಿಯತೆಯು, ನೈತಿಕ ಮೌಲ್ಯಗಳ ವಿಷಮಸ್ಥಿತಿಯ ಒಂದು ಪ್ರತಿಬಿಂಬವಾಗಿದೆ. ವಾಸ್ತವವಾಗಿ, ನಾವು ಯಾವುದಕ್ಕಾಗಿ ಜೀವಿಸುತ್ತಿದ್ದೇವೆಂದು ನಿಜವಾಗಿಯೂ ನಮಗೆಂದಿಗೂ ತಿಳಿದಿರುವುದಿಲ್ಲ. ಜೀವವು ಜೀವಿಸಲು ಬೆಲೆಯುಳ್ಳದ್ದಾಗಿದೆ ಎಂಬುದಾಗಿ ನಮ್ಮ ಸಮಾಜ ನಮಗೆ ಹೇಳುವುದಿಲ್ಲ. ಆದಕಾರಣ, ರೋಮಾಂಚಕ ವಿಷಯವನ್ನು ಹುಡುಕುವುದನ್ನು . . . ಜೀವಿತವನ್ನು ಅರ್ಥವುಳ್ಳದ್ದಾಗಿ ಮಾಡುವ ಒಂದು ದಾರಿಯಾಗಿದೆ ಎಂಬುದಾಗಿ ತಿಳಿದುಕೊಳ್ಳಸಾಧ್ಯವಿದೆ.” ಹಾಗಿದ್ದರೂ, ಹೆಚ್ಚೆಚ್ಚಾಗಿ ಯುವ ಜನರು ತಮ್ಮ ಜೀವಗಳನ್ನು ಗಂಡಾಂತರಕ್ಕೊಳಪಡಿಸುತ್ತಿದ್ದಾರೆ ಹಾಗೂ ಅವುಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ಮಕ್ಕಳ ಸೈನ್ಯಗಳು
26 ದೇಶಗಳಲ್ಲಿ ಮಾಡಲಾದ ಸಂಶೋಧನೆ ಮತ್ತು ಅದರ ಕುರಿತಾಗಿ, ಇಂಗ್ಲೆಂಡಿನ ಮ್ಯಾನ್ಚೆಸ್ಟರಿನ ಗಾರ್ಡಿಯನ್ ವೀಕ್ಲಿಯ ವರದಿಗನುಸಾರ, ಏಳರಷ್ಟು ಎಳೆಯರಾದ ಕೆಲವರನ್ನು ಸೇರಿಸಿ ಎರಡೂವರೆ ಲಕ್ಷ ಮಕ್ಕಳು ಲೋಕವ್ಯಾಪಕವಾಗಿ ಸೇನಾಪಡೆಗಳಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ವಿಶ್ವ ಸಂಸ್ಥೆಯ ಎರಡು ವರ್ಷಗಳ ಅಧ್ಯಯನದ ಒಂದು ಭಾಗವಾದ ಆ ವರದಿಯು ಪ್ರಕಟಿಸಿದ್ದೇನಂದರೆ, ಹೊಸದಾಗಿ ಸೇರಿಸಲ್ಪಟ್ಟ ಮಕ್ಕಳು ಅನೇಕ ವೇಳೆ ತಮ್ಮ ಸಂಬಂಧಿಕರಿಗೆ ಕೊಡಲ್ಪಟ್ಟ ಚಿತ್ರಹಿಂಸೆಯನ್ನು ಹಾಗೂ ಅವರ ಮರಣವನ್ನು ನೋಡುವಂತೆ ಒತ್ತಾಯಿಸಲ್ಪಟ್ಟ ಕಾರಣ ತಾವಾಗಿಯೇ ಮೃಗ ಸ್ವಭಾವದವರಾಗಿದ್ದಾರೆ. ತದನಂತರ, ಅವರು ವಧಕಾರರಾಗಿ, ಹಂತಕರಾಗಿ, ಮತ್ತು ಗೂಢಚಾರರಾಗಿ ಉಪಯೋಗಿಸಲ್ಪಟ್ಟರು. ಒಂದು ದೇಶದಲ್ಲಿ, “ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಮಕ್ಕಳಿಗೆ ಅಥವಾ ಪ್ರಾಯಸ್ಥರಿಗೆ ಚಿತ್ರಹಿಂಸೆ ಕೊಡಲು, ಅಂಗಹೀನ ಮಾಡಲು ಅಥವಾ ಕೊಲ್ಲಲು ಹೆಚ್ಚಿನ ಸಣ್ಣ ಪ್ರಾಯದ ಸೈನಿಕರಿಗೆ ಆಜ್ಞಾಪಿಸಲಾಯಿತು.” ಕಾದಾಡುವ ಮೊದಲು ಅನೇಕ ವೇಳೆ ಅಮಲೌಷಧ ಅಥವಾ ಮಾದಕ ಪದಾರ್ಥ ಕೊಡಲ್ಪಟ್ಟ ಮಕ್ಕಳು, ಅವರು “ಅಮರರೊ ಅಥವಾ ಅಭೇದ್ಯರೊ ಎನ್ನುವಂತೆ” ಯುದ್ಧಕ್ಕೆ ಮುನ್ನುಗ್ಗುತ್ತಿರುವುದನ್ನು ನೋಡಲಾಗಿದೆ.
ಸೊಳ್ಳೆಗಳಿಗಾಗಿ ಅಲ್ಲ
ರಾತ್ರಿಯಲ್ಲಿ ಕೀಟಗಳನ್ನು ಆಕರ್ಷಿಸುವ ಮತ್ತು ಅದಕ್ಕೆ ಶಬ್ದದೊಂದಿಗೆ ವಿದ್ಯುನ್ಮರಣ ವಿಧಿಸುವ, ಬಾಗಿಲಿನ ಹೊರಗೆ ನೇತುಹಾಕಿದ ಬಗ್ ಸ್ಯಾಪ್ಪರ್ಸ್ ಎಂಬುದಾಗಿ ಕರೆಯಲಾದ ವಿದ್ಯುತ್ತಿನ ಯಂತ್ರವು ಸೊಳ್ಳೆಗಳ ಮೇಲೆ ಪರಿಣಾಮಕಾರಿಯಲ್ಲ. ಕ್ರಿಮಿಶಾಸ್ತ್ರದ ಒಬ್ಬ ಪ್ರೊಫೆಸರರಾದ ಜಾರ್ಜ್ ಬಿ. ಕ್ರ್ಯಾಗ್, ಜೂನಿಯರ್, ಹೇಳುವುದು, “ಈ ಯಂತ್ರಗಳು ಅವಶ್ಯವಾಗಿ ಪ್ರಯೋಜನವಿಲ್ಲದವುಗಳಾಗಿವೆ.” ಹೆಚ್ಚಿನ ಸೊಳ್ಳೆಗಳು ಬೆಳಕಿಗೆ ಆಕರ್ಷಿಸಲ್ಪಡುವುದಿಲ್ಲ ಮತ್ತು ಹೆಣ್ಣು ಸೊಳ್ಳೆಗಳು—ಕಚ್ಚುವಂತಹವುಗಳು—ಒಂದು ಆಹಾರಕ್ಕಾಗಿ ಗುರಿಯಿಡುವಾಗ, ಅಮೋನಿಯ, ಇಂಗಾಲದ ಡೈಆಕ್ಸೈಡ್, ಉಷ್ಣತೆ, ಮತ್ತು ಬಗ್ ಸ್ಯಾಪ್ಪರ್ಸ್‌ನಿಂದ ಹೊರಕ್ಕೆ ಕಳುಹಿಸಲ್ಪಡದ ಇತರ ಚರ್ಮದ ವಿಸರ್ಜನೆಗಾಗಿ ಹುಡುಕುತ್ತವೆ. ಇವನ್ನು ಕಂಡುಕೊಳ್ಳದ ಕಾರಣ, ಅವುಗಳು ಈ ಯಂತ್ರವನ್ನು ಬಿಟ್ಟು ಹಾರಿಹೋಗುತ್ತವೆ. ಅಲ್ಲದೆ, ಸ್ಯಾಪ್ಪರ್ಸ್‌ನಿಂದ ಸೊಳ್ಳೆಗಳನ್ನು ಕೊಲ್ಲಲು ಪ್ರಯತ್ನಿಸುವುದು, “ಚಹ ಚಮಚದಿಂದ ಸಮುದ್ರವನ್ನು ಖಾಲಿಮಾಡಲು ಪ್ರಯತ್ನಿಸುವುದಕ್ಕೆ ಸಮಾನ,” ಎಂದು ಡಾ. ಕ್ರ್ಯಾಗ್ ಹೇಳುತ್ತಾರೆ. ಕೆಲವು ತಿಂಗಳುಗಳೊಳಗಾಗಿ ಒಂದು ಹೆಣ್ಣು ಸೊಳ್ಳೆಯು 60,000ಕ್ಕಿಂತಲೂ ಹೆಚ್ಚು ಹೆಣ್ಣು ಸಂತತಿಗಳನ್ನು ಉತ್ಪಾದಿಸಬಲ್ಲದು. ಮೂರು ತಿಂಗಳ ಒಂದು ಅಭ್ಯಾಸವು ತೋರಿಸಿದ್ದೇನೆಂದರೆ, ಸರಾಸರಿ ಒಂದು ರಾತ್ರಿಯಲ್ಲಿ ಸ್ಯಾಪ್ಪರ್ಸ್‌ನ ಮೂಲಕ ಕೊಲ್ಲಲ್ಪಟ್ಟ ಕೀಟಗಳಲ್ಲಿ ಕೇವಲ 3 ಪ್ರತಿಶತ ಕೀಟಗಳು ಹೆಣ್ಣು ಸೊಳ್ಳೆಗಳಾಗಿವೆ. ಸ್ಯಾಪ್ಪರ್ಸ್‌ಗಳು “ಅಂಗಡಿಯ ಮನೆ ಮನೋರಂಜನೆ ಪ್ರದರ್ಶನ ವಿಭಾಗದಲ್ಲಿ ಮಾರಲ್ಪಡಬೇಕು, ತೋಟಗಾರಿಕೆ ವಿಭಾಗದಲ್ಲಲ್ಲ” ಎಂದು ಕ್ರ್ಯಾಗ್ ಹೇಳುತ್ತಾರೆ.