ಶಬ್ದ ಒಂದು ಆಧುನಿಕ ಅನಿಷ್ಟ
ಬ್ರಿಟನಿನ ಎಚ್ಚರ! ಸುದ್ದಿಗಾರರಿಂದ
“ಜೀವನದ ಭಾರಿ ಒತ್ತಡ ಪ್ರಚೋದಕಗಳಲ್ಲಿ ಒಂದು.”—ಮಾಕೀಸ್ ಟ್ಸಾಪೋಗಾಸ್, ಲೋಕಾರೋಗ್ಯ ಸಂಸ್ಥೆಯ ಸಲಹೆಗಾರರು.
“ಅಮೆರಿಕದ ಅತ್ಯಂತ ವ್ಯಾಪಕವಾದ ಮಲಿನಕಾರಕ ಅಂಶ.”—ದ ಬಾಸ್ಟನ್ ಸಂಡೆ ಗ್ಲೋಬ್, ಅಮೆರಿಕ.
“ನಮ್ಮ ಸಮಯದ ಅತಿ ಹಾನಿಕರವಾದ ಮಲಿನಕಾರಕ ಅಂಶ.”—ಡೇಲಿ ಎಕ್ಸ್‌ಪ್ರೆಸ್, ಲಂಡನ್, ಇಂಗ್ಲೆಂಡ್.
ನೀವು ಅದನ್ನು ನೋಡಲು, ಆಘ್ರಾಣಿಸಲು, ಆಸ್ವಾದಿಸಲು, ಇಲ್ಲವೆ ಸ್ಪರ್ಶಿಸಲು ಸಾಧ್ಯವಿಲ್ಲ. ಆಧುನಿಕ ನಗರ ಜೀವನದ ಶಾಪವಾಗಿರುವ ಶಬ್ದ, ಈಗ ಗ್ರಾಮಪ್ರದೇಶವನ್ನೂ ಮಲಿನಗೊಳಿಸುತ್ತದೆ.
ಪ್ರಕೃತಿಯ ಧ್ವನಿಗಳನ್ನು ರೆಕಾರ್ಡ್ ಮಾಡುತ್ತಾ ಸುಮಾರು 16 ವರ್ಷಗಳನ್ನು ಕಳೆದ ಅಮೆರಿಕ ದೇಶದ ಒಬ್ಬ ಪ್ರಕೃತಿಶಾಸ್ತ್ರಜ್ಞನು, ತನ್ನ ಕೆಲಸವು ಬಹಳ ಕಷ್ಟಕರವೆಂಬುದನ್ನು ಕಂಡುಕೊಂಡಿದ್ದಾನೆ. 1984ರಲ್ಲಿ, ಅಮೆರಿಕದ ವಾಷಿಂಗ್‌ಟನ್ ರಾಜ್ಯದಲ್ಲಿ, 15 ಅಥವಾ ಅದಕ್ಕಿಂತಲೂ ಹೆಚ್ಚು ನಿಮಿಷಗಳ ಕಾಲ ಶಬ್ದಮುಕ್ತವಾಗಿದ್ದ 21 ನಿವೇಶನಗಳನ್ನು ಅವನು ಪರಿಶೀಲಿಸಿದನು. ಐದು ವರ್ಷಗಳ ತರುವಾಯ, ಕೇವಲ ಮೂರು ಶಾಂತ ನಿವೇಶನಗಳು ಉಳಿದವು.
ಲೋಕದ ನಿವಾಸಿಗಳಲ್ಲಿ ಅನೇಕರಿಗೆ, ಮೂರು ಶಬ್ದಮುಕ್ತ ಸ್ಥಳಗಳನ್ನು ಕಂಡುಕೊಳ್ಳುವುದು ಒಂದು ಪಂಥಾಹ್ವಾನವಾಗಿದೆ. ಜಪಾನಿನಲ್ಲಿ, ಇಸವಿ 1991ಕ್ಕಾಗಿ ತಯಾರಿಸಲ್ಪಟ್ಟ ಒಂದು ದೇಶೀಯ ವರದಿಯು ತಿಳಿಸಿದ್ದೇನೆಂದರೆ, ಮಾಲಿನ್ಯದ ಬೇರೆ ಯಾವುದೇ ವಿಧಕ್ಕಿಂತಲೂ ಶಬ್ದವು ಹೆಚ್ಚು ದೂರುಗಳನ್ನು ಕೆರಳಿಸಿತು. ನಿಶ್ಚಯವಾಗಿಯೂ, ಲಂಡನಿನ ದ ಟೈಮ್ಸ್ ಪತ್ರಿಕೆಯು, ಶಬ್ದವನ್ನು ಸೂಕ್ತವಾಗಿಯೇ, “ಸಮಕಾಲೀನ ಜೀವಿತದ ಅತ್ಯಂತ ಮಹಾ ಪೀಡೆ”ಯಾಗಿ ವರ್ಣಿಸುತ್ತದೆ. ಒಂದು ನಾಯಿಯ ರೇಗಿಸುವಂತಹ ಸತತವಾದ ಬೊಗಳುವಿಕೆಯಿಂದ ಹಿಡಿದು, ನೆರೆಯವರ ಸ್ಟೀರಿಯೊದ ಅರಚುವಿಕೆ ಇಲ್ಲವೆ ಒಂದು ಕಾರಿನ ಕನ್ನಗಳ್ಳ ಅಲಾರಮ್ ಅಥವಾ ರೇಡಿಯೊದ ಪಟ್ಟುಹಿಡಿದ ಅರಚುವಿಕೆಯ ವರೆಗೆ, ಶಬ್ದವು ಒಂದು ಯಥಾಸ್ಥಿತಿಯಾಗಿ ಪರಿಣಮಿಸಿದೆ. ಆದರೂ, ಶಬ್ದ ಮಾಲಿನ್ಯವು ಹೊಸದಾದ ವಿಷಯವೇನೂ ಅಲ್ಲ. ಅದಕ್ಕೊಂದು ದೀರ್ಘವಾದ ಇತಿಹಾಸವಿದೆ.
ಒಂದು ಹೊಸ ಸಮಸ್ಯೆಯೇನಲ್ಲ
ವಾಹನ ಸಂಚಾರದ ಸಂದಣಿಯನ್ನು ತಡೆಗಟ್ಟಲಿಕ್ಕಾಗಿ ಜೂಲಿಯಸ್ ಸೀಸರನು, ಹಗಲಿನಲ್ಲಿ ರೋಮಿನ ಕೇಂದ್ರಸ್ಥಾನದಿಂದ ಚಕ್ರಗಳುಳ್ಳ ವಾಹನಗಳ ಸಂಚಾರವನ್ನು ನಿಷೇಧಿಸಿದನು. “ಮರದ ಇಲ್ಲವೆ ಕಬ್ಬಿಣದ ಲಾಳಹಾಕಲ್ಪಟ್ಟ ಚಕ್ರದ ಬಂಡಿಗಳು, ಕಲ್ಲಿನ ಕಾಲುದಾರಿಗಳ ಮೇಲೆ ಗಡಗಡನೆ ಸದ್ದುಮಾಡುತ್ತಾ ಹೋಗುತ್ತಿದ್ದ ಕಾರಣ,” ದುಃಖಕರವಾಗಿ, ಅವನಿಗೂ ಅವನ ಜೊತೆ ರೋಮನರಿಗೂ ಆ ಆಜ್ಞೆಯು ರಾತ್ರಿಯಲ್ಲಿ ತೀವ್ರವಾದ ಶಬ್ದ ಮಾಲಿನ್ಯವನ್ನು ಉಂಟುಮಾಡಿತು. (ದ ಸಿಟಿ ಇನ್ ಹಿಸ್ಟರಿ ಎಂಬ ಪುಸ್ತಕ, ಲೂಯಿಸ್ ಮಮ್‌ಫರ್ಡ್ ಅವರಿಂದ) ಒಂದು ಶತಮಾನಕ್ಕಿಂತಲೂ ಹೆಚ್ಚಿನ ಸಮಯದ ತರುವಾಯ, ಶಬ್ದವು ರೋಮನರನ್ನು ನಿತ್ಯವಾದ ನಿರ್ನಿದ್ರತೆಯ ದಂಡನೆಗೆ ಗುರಿಮಾಡಿತೆಂದು ಜೂವೆನಲ್ ಕವಿಯು ಆಪಾದಿಸಿದನು.
ಹದಿನಾರನೆಯ ಶತಮಾನದೊಳಗಾಗಿ, ಇಂಗ್ಲೆಂಡ್‌ನ ರಾಜಧಾನಿಯಾದ ಲಂಡನ್, ಗದ್ದಲಭರಿತ ರಾಜಧಾನಿಯಾಗಿ ಪರಿಣಮಿಸಿತ್ತು. ಇಲಿಸಬೀತನ್ ಇಂಗ್ಲೆಂಡ್ ಎಂಬ ಪುಸ್ತಕದ ಲೇಖಕಿಯಾದ ಆ್ಯಲಿಸನ್ ಪ್ಲೌಡನ್ ಬರೆಯುವುದು, “ಹೆಚ್ಚಿನ ಸಂದರ್ಶಕರನ್ನು ಪ್ರಭಾವಿಸಿದ್ದಿರಬೇಕಾದ ಮೊಟ್ಟಮೊದಲಿನ ವಿಷಯವು, ಅಲ್ಲಿನ ಕೋಲಾಹಲವಾಗಿತ್ತು: ಸಾವಿರಾರು ಕಾರ್ಯಾಲಯಗಳಿಂದ ಬರುವ ಲಟಪಟ ಧ್ವನಿ ಮತ್ತು ಸುತ್ತಿಗೆ ಬಡಿತದ ಧ್ವನಿ, ಚಕ್ರದ ಬಂಡಿಗಳ ಗಡಗಡ ಸದ್ದು ಮತ್ತು ಕೀಚುಧ್ವನಿ, ಮಾರುಕಟ್ಟೆಗೆ ಅಟ್ಟಿಕೊಂಡುಹೋಗಲಾಗುತ್ತಿರುವ ದನಕರುಗಳ ಅಂಬಾ ಎಂಬ ಕೂಗು, ತಮ್ಮ ಸರಕುಗಳ ಕುರಿತು ಕೂಗಿ ಹೇಳುತ್ತಿರುವ ರಸ್ತೆಬದಿಯ ಮಾರಾಟಗಾರರ ಕರ್ಕಶ ಕೂಗುಗಳು.”
ಹದಿನೆಂಟನೆಯ ಶತಮಾನವು ಔದ್ಯೋಗಿಕ ಕ್ರಾಂತಿಯ ಆರಂಭವನ್ನು ಕಂಡಿತು. ಈಗ ಕಾರ್ಖಾನೆಯ ಕಾರ್ಮಿಕರು ತಮ್ಮ ಶ್ರವಣಶಕ್ತಿಯ ಹಾನಿಯನ್ನು ಅನುಭವಿಸಿದಂತೆ, ಯಂತ್ರಸಂಬಂಧವಾದ ಶಬ್ದದ ಪರಿಣಾಮಗಳು ವ್ಯಕ್ತವಾದವು. ಆದರೆ, ಕಾರ್ಖಾನೆಗಳ ಹತ್ತಿರ ಜೀವಿಸದಿದ್ದ ನಗರವಾಸಿಗಳೂ, ಹೆಚ್ಚಾಗುತ್ತಿರುವ ಗದ್ದಲದ ವಿಷಯವಾಗಿ ಆಪಾದಿಸಿದರು. ಇತಿಹಾಸಕಾರ ಥಾಮಸ್ ಕಾರ್ಲೈಲ್, ಕೋಳಿಯ ಕೂಗುಗಳು, ನೆರೆಯವರ ಪಿಯಾನೊ ಸದ್ದುಗಳು, ಮತ್ತು ಹತ್ತಿರದ ವಾಹನ ಸಂಚಾರದಿಂದ ದೂರವಿರಲು, ಲಂಡನಿನಲ್ಲಿದ್ದ ತನ್ನ ಮನೆಯ ಮಾಳಿಗೆಯ ಮೇಲಿನ “ಸುಸಜ್ಜಿತ ಶಬ್ದನಿರೋಧಕ ಕೋಣೆ”ಯಲ್ಲಿ ಆಶ್ರಯಪಡೆದುಕೊಂಡನು. ದ ಟೈಮ್ಸ್ ಪತ್ರಿಕೆಯು ವರದಿಸುವುದು: “ಅದು ಸಮಸ್ಯೆಯನ್ನು ಬಗೆಹರಿಸಲಿಲ್ಲ.” ಏಕೆ? “ಆಗ ಅವನು ದೋಣಿಯ ಸಿಳ್ಳು ಮತ್ತು ರೈಲುಗಾಡಿಯ ಸಿಳ್ಳುಗಳನ್ನು ಸೇರಿಸಿ, ಶಬ್ದಗಳ ಹೊಸ ಸರಣಿಯಿಂದ ಬಹಳವಾಗಿ ಕ್ಷೋಭೆಗೊಳಗಾದನು”!
ಬಹುವ್ಯಾಪಕವಾದ ಆಧುನಿಕ ಮಲಿನಕಾರಕ ಅಂಶ
ಇಂದು ಶಬ್ದ ಮಾಲಿನ್ಯದ ವಿರುದ್ಧ ಕಾನೂನು ಕ್ರಮತೆಗೆದುಕೊಳ್ಳುವುದನ್ನು ವಿಮಾನ ಸಂಸ್ಥೆಗಳು ಹುರುಪಿನಿಂದ ಪ್ರತಿರೋಧಿಸಿದಂತೆ, ಶಬ್ದದ ಪ್ರತಿಭಟಕರು ವಿಮಾನ ನಿಲ್ದಾಣಗಳ ಮೇಲೆ ಕೇಂದ್ರೀಕರಿಸುತ್ತಾರೆ. ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ವಿಮಾನ ನಿಲ್ದಾಣವು, ವಿಪರೀತ ಶಬ್ದಮಾಡುವ ಕಾನ್‌ಕಾರ್ಡ್ ಪ್ರಯಾಣಿಕ ವಿಮಾನವು ಹಾರಿಹೋದ ಪ್ರತಿ ಬಾರಿ ಅದರ ಮೇಲೆ ಅನಿವಾರ್ಯ ಜುಲ್ಮಾನೆಗಳನ್ನು ಹೇರಿದಾಗ, ಇವು ಪರಿಣಾಮಕಾರಿಯಾಗಿದ್ದವೊ? ಇಲ್ಲ. ಕಾನ್‌ಕಾರ್ಡ್ ಪ್ರಯಾಣಿಕ ವಿಮಾನದ ಒಬ್ಬ ವಿಮಾನಚಾಲಕನು ಒಪ್ಪಿಕೊಂಡದ್ದೇನೆಂದರೆ, ವಿಮಾನವು ಶಬ್ದಮಯವಾಗಿತ್ತಾದರೂ, ಶಬ್ದದ ಮಟ್ಟವನ್ನು ಕಡಮೆಗೊಳಿಸಲು ಅದು ಇಂಧನದ ಹಗುರವಾದ ಹೊರೆಯೊಂದಿಗೆ ಮೇಲಕ್ಕೆ ಹಾರುವಲ್ಲಿ, ಅದು ಮಧ್ಯೆ ಎಲ್ಲೂ ನಿಲ್ಲದೆ ಟರಾಂಟೊ ಇಲ್ಲವೆ ನ್ಯೂ ಯಾರ್ಕನ್ನು ತಲಪಲಾರದು.
ರಸ್ತೆಯ ವಾಹನ ಸಂಚಾರದ ಶಬ್ದವನ್ನು ತಡೆಗಟ್ಟುವುದು, ಅಷ್ಟೇ ಸಮಸ್ಯೆಯಿಂದ ಕೂಡಿದ್ದಾಗಿದೆ. ಉದಾಹರಣೆಗೆ, ಜರ್ಮನಿಯಲ್ಲಿ, ಈ ಪ್ರಕಾರದ ಮಾಲಿನ್ಯವು ಜನಸಂಖ್ಯೆಯಲ್ಲಿ 64 ಪ್ರತಿಶತದಷ್ಟು ಜನರ ನೆಮ್ಮದಿಗೆಡಿಸುತ್ತದೆ ಎಂದು ಅಧ್ಯಯನಗಳು ಪ್ರಕಟಪಡಿಸುತ್ತವೆ. ಮತ್ತು ಇದೊಂದು ಬೆಳೆಯುತ್ತಿರುವ ಸಮಸ್ಯೆಯಾಗಿದೆ, ಸಮಾಜವು ಮೋಟರೀಕೃತವಾಗುವ ಮುಂಚೆ ಇದ್ದುದಕ್ಕಿಂತಲೂ ಒಂದು ಸಾವಿರ ಪಟ್ಟು ಹೆಚ್ಚಾಗಿದೆಯೆಂಬ ವರದಿಯುಂಟು. ಗ್ರೀಸಿನಿಂದ ಬಂದ ಒಂದು ವರದಿಯು ಹೇಳುವುದೇನೆಂದರೆ, “ಯೂರೋಪಿನಲ್ಲಿನ ಅತ್ಯಂತ ಗದ್ದಲಭರಿತವಾದ ನಗರಗಳಲ್ಲಿ ಅಥೆನ್ಸ್ ಒಂದಾಗಿದೆ ಮತ್ತು ಅಲ್ಲಿನ ಕೋಲಾಹಲವು ಎಷ್ಟೊಂದು ಕೆಟ್ಟದಾಗಿದೆಯೆಂದರೆ, ಅದು ಅಥೆನ್ಸಿನವರ ಆರೋಗ್ಯವನ್ನು ಹಾನಿಗೊಳಿಸುತ್ತಾ ಇದೆ.” ತದ್ರೀತಿಯಲ್ಲಿ, ಜಪಾನಿನ ಪರಿಸರ ಸಂಬಂಧವಾದ ಆಯೋಗವು, ವಾಹನ ಸಂಚಾರದ ಶಬ್ದದಲ್ಲಿ ಅತ್ಯಂತ ಕೆಟ್ಟ ಪ್ರವೃತ್ತಿಯನ್ನು ಗಮನಿಸಿ, ಮೋಟಾರುಗಾಡಿಗಳ ಬಳಕೆಯಲ್ಲಿನ ಸತತವಾದ ಅಭಿವೃದ್ಧಿಗಳೇ ಇದಕ್ಕೆ ಕಾರಣವೆಂದು ಹೇಳುತ್ತದೆ. ಕಡಮೆ ವೇಗಗಳಲ್ಲಿ, ಕಾರಿನ ಎಂಜಿನ್ ಶಬ್ದದ ಪ್ರಧಾನ ಮೂಲವಾಗಿರುತ್ತದಾದರೂ, ತಾಸಿಗೆ 60 ಕಿಲೊಮೀಟರುಗಳಿಗಿಂತ ಹೆಚ್ಚಿನ ವೇಗಗಳಲ್ಲಿ, ಟೈಅರ್‌ಗಳು ಅತಿ ಹೆಚ್ಚು ಶಬ್ದವನ್ನು ಮಾಡುತ್ತವೆ.
ಬ್ರಿಟನಿನಲ್ಲಿ ಶಬ್ದದ ದೂರುಗಳ ಅತ್ಯಂತ ಪ್ರಾಮುಖ್ಯವಾದ ಕಾರಣವು ಸ್ಥಳೀಯ ಮೂಲಗಳಿಂದ ಬರುವ ಶಬ್ದವಾಗಿದೆ. 1996ರಲ್ಲಿ, ಬ್ರಿಟನಿನ ಪರಿಸರ ಆರೋಗ್ಯದ ಸನ್ನದು ಸಂಘವು, ಗದ್ದಲಭರಿತ ನೆರೆಯವರ ಕುರಿತಾದ ದೂರುಗಳಲ್ಲಿ 10 ಪ್ರತಿಶತ ಏರಿಕೆಯನ್ನು ಗಮನಿಸಿತು. ಆ ಸಂಘದ ಪ್ರತಿನಿಧಿಯೊಬ್ಬಳು ಹೇಳಿಕೆ ನೀಡಿದ್ದು: “ಅದನ್ನು ವಿವರಿಸುವುದು ಕಷ್ಟಕರ. ಜನರು ಕೆಲಸದ ಸ್ಥಳದಲ್ಲಿ ಅನುಭವಿಸುವ ಒತ್ತಡಗಳು, ಮನೆಯಲ್ಲಿ ಶಾಂತಿ ಮತ್ತು ಪ್ರಶಾಂತತೆಗಾಗಿ ಅವರು ಹೆಚ್ಚಿನ ತಗಾದೆಗಳನ್ನು ಮಾಡುವಂತೆ ನಡೆಸುತ್ತಿರುವುದು ಒಂದು ಅಂಶವಾಗಿರಬಹುದು.” ಬ್ರಿಟನಿನಲ್ಲಿ 1994ರಲ್ಲಿ ಆಪಾದಿಸಲ್ಪಟ್ಟ ಎಲ್ಲ ದೂರುಗಳಲ್ಲಿ, ಮೂರನೇ ಎರಡು ಭಾಗದಷ್ಟು ದೂರುಗಳು, ರಾತ್ರಿ ಹೊತ್ತುಮೀರಿ ನುಡಿಸುವ ಸಂಗೀತ, ಗದ್ದಲಭರಿತ ಕಾರ್ ಎಂಜಿನ್‌ಗಳು, ಅಲಾರಮ್‌ಗಳು ಮತ್ತು ಹಾರನ್ನುಗಳನ್ನು ಒಳಗೊಂಡಿದ್ದವು. ಆದರೆ, ಪ್ರತೀಕಾರಗಳ ಭಯದಿಂದಾಗಿ ಯಾವ ದೂರನ್ನೂ ಮಾಡದ, ಅಂದಾಜುಮಾಡಲ್ಪಟ್ಟ 70 ಪ್ರತಿಶತದಷ್ಟು ಶಬ್ದ ಮಾಲಿನ್ಯದ ಬಲಿಪಶುಗಳ ಕುರಿತೇನು? ಸಮಸ್ಯೆಯು ನಿಜವಾಗಿಯೂ ವ್ಯಾಪಕವಾಗಿದೆ.
ಬಹುವ್ಯಾಪಕವಾದ ಶಬ್ದ ಅನಿಷ್ಟದಿಂದಾಗಿ, ಪರಿಸರವನ್ನು ಸಂರಕ್ಷಿಸಲು ಉದ್ದೇಶಿಸುವ ಆಯೋಗಗಳು, ಶಬ್ದ ಮಾಲಿನ್ಯವನ್ನು ನಿಗ್ರಹಿಸುವ ನಿಯಮಗಳಿಗಾಗಿ ಒತ್ತಾಯಿಸುತ್ತವೆ. ಉದಾಹರಣೆಗೆ, ಅಮೆರಿಕದಲ್ಲಿ, ಭೂದೃಶ್ಯಕ್ಕಾಗಿ ಉಪಯೋಗಿಸುವ ವಿದ್ಯುತ್ತಿನ ಉಪಕರಣಗಳ ಬಳಕೆಯನ್ನು ಸೀಮಿತಗೊಳಿಸಲು, ಕೆಲವು ಸಮುದಾಯಗಳು ಸ್ಥಳೀಯ ಕಟ್ಟಳೆಗಳನ್ನು ಅಂಗೀಕರಿಸಿವೆ. ಬ್ರಿಟನಿನಲ್ಲಿ, ಹೊಸದೊಂದು ಶಬ್ದ ಕಾಯಿದೆಯು, ಗದ್ದಲಮಾಡುವ ನೆರೆಯವರನ್ನು ಗುರಿಯನ್ನಾಗಿ ಮಾಡಿ, ರಾತ್ರಿ 11ರಿಂದ ಬೆಳಗ್ಗೆ 7ರ ನಡುವೆ ಮಾಡಲಾಗುವ ನಿಯಮೋಲ್ಲಂಘನೆಗಳಿಗಾಗಿ ಆ ಕೂಡಲೆ ಜುಲ್ಮಾನೆಗಳನ್ನು ಹೇರುವ ಅಧಿಕಾರವನ್ನು ನೀಡುತ್ತದೆ. ಸ್ಥಳಿಕ ಅಧಿಕಾರಿಗಳಿಗೆ ಗಟ್ಟಿಯಾಗಿ ಸಂಗೀತವನ್ನು ನುಡಿಸಲು ಬಳಸುವ ಸ್ಟೀರಿಯೊ ಉಪಕರಣವನ್ನು ವಶಪಡಿಸಿಕೊಳ್ಳುವ ಅಧಿಕಾರವೂ ಇದೆ. ಆದರೂ, ಶಬ್ದವು ಇದ್ದೇ ಇದೆ.
ನಿಜವಾಗಿಯೂ ಒಂದು ಬೆಳೆಯುತ್ತಿರುವ ಸಮಸ್ಯೆಯಾಗಿರುವ ಶಬ್ದ ಮಾಲಿನ್ಯದೊಂದಿಗೆ, ಒಬ್ಬ ಬಲಿಪಶುವಿನೋಪಾದಿ ನೀವು ಏನು ಮಾಡಬಲ್ಲಿರೆಂದು ವಿಸ್ಮಯಪಡಬಹುದು. ಆದರೆ, ಶಬ್ದವನ್ನುಂಟುಮಾಡುವುದರಿಂದ ನೀವು ಹೇಗೆ ದೂರವಿರಸಾಧ್ಯವಿದೆ? ಬಾಳುವ ಶಾಂತಿ ಮತ್ತು ಪ್ರಶಾಂತತೆ ಎಂದಾದರೂ ಇರುವುದೊ? ಉತ್ತರಗಳಿಗಾಗಿ ಮುಂದಿನ ಲೇಖನಗಳನ್ನು ಓದಿರಿ.