ಶಾಂತಿ ಮತ್ತು ನೆಮ್ಮದಿ ಎಂದಾದರೂ ಇರುವುದೊ?
ವಿದೇಶದಲ್ಲಿ ಕಳೆಯುವ ರಜಾಕಾಲದಲ್ಲಿ ಅವರು ಏನನ್ನು ಎದುರುನೋಡಿದರೆಂದು ಕೇಳಲ್ಪಟ್ಟಾಗ, ಪ್ರತಿ 4 ಬ್ರಿಟಿಷ್ ಪ್ರವಾಸಿಗರಲ್ಲಿ ಬಹುಮಟ್ಟಿಗೆ 3 ಮಂದಿ ಉತ್ತರಿಸಿದ್ದು, “ಶಾಂತಿ ಮತ್ತು ನೆಮ್ಮದಿ.” ಆದರೆ ಶಬ್ದ ಮಾಲಿನ್ಯವು ಒಂದು ಲೋಕವ್ಯಾಪಕ ಸಮಸ್ಯೆಯಾಗಿರುವ ಕಾರಣ, ನಿಜವಾದ ಶಾಂತಿ ಮತ್ತು ನೆಮ್ಮದಿ ಕೇವಲ ಒಂದು ಕಟ್ಟುಕಥೆಯಾಗಿದೆಯೆಂದು ಅನೇಕರು ನಂಬುತ್ತಾರೆ.
ಶಬ್ದ ಮಾಲಿನ್ಯವನ್ನು ಕಡಮೆಗೊಳಿಸಲು ಮಾಡಲ್ಪಡುವ ಹುರುಪಿನ ಪ್ರಯತ್ನಗಳ ಎದುರಿನಲ್ಲಿಯೂ, ಎಂದಾದರೂ ಸಂಪೂರ್ಣವಾದ ಯಶಸ್ಸು ದೊರೆಯುವುದೆಂದು ನಂಬುವುದು ವಾಸ್ತವಿಕವಾಗಿದೆಯೊ ಎಂದು ನೀವು ಆಶ್ಚರ್ಯಪಡಬಹುದು. ನಿಮ್ಮ ಚಿಂತೆಯಲ್ಲಿ ಪಾಲ್ಗೊಳ್ಳದ ಇತರರ ಕುರಿತೇನು?
ಜಯಿಸಬೇಕಾದ ವಿಘ್ನಗಳು
ಪ್ರತಿವರ್ತಿಗಳಾಗಿರುವ ಜನರೊಂದಿಗೆ ಮಾತಾಡುವುದು ಸುಲಭವಲ್ಲ, ಮತ್ತು ನಿಮ್ಮ ದೃಷ್ಟಿಕೋನವನ್ನು ಅವರು ಅರ್ಥಮಾಡಿಕೊಳ್ಳುವಂತೆ ಪ್ರಯಾಸಪಡುವುದು ಇನ್ನೂ ಕಷ್ಟಕರ. ರಾನ್ ವಾಸಿಸುತ್ತಿದ್ದ ಕಟ್ಟಡದ ಹೊರಗಡೆ, ಗದ್ದಲಭರಿತ ಹದಿವಯಸ್ಕರ ಗುಂಪುಗಳು ಸೇರಿಬಂದಾಗ, ಅವರೊಂದಿಗೆ ಸ್ನೇಹಬೆಳೆಸಿಕೊಳ್ಳಲು ಅವನು ಆರಂಭಿಕ ಹೆಜ್ಜೆಯನ್ನು ತೆಗೆದುಕೊಂಡನು. ಅವರ ಹೆಸರುಗಳನ್ನು ಅವನು ಕಲಿತುಕೊಂಡನು. ಅವರ ಸೈಕಲುಗಳಲ್ಲಿ ಒಂದರ ದುರಸ್ತಿಮಾಡಲೂ ಅವನು ಸಹಾಯ ಮಾಡಿದನು. ಆ ಸಮಯದಿಂದ, ಅವನಿಗೆ ಅವರಿಂದಾಗಿ ಯಾವ ಸಮಸ್ಯೆಯೂ ಇರಲಿಲ್ಲ.
ಗದ್ದಲಭರಿತ ನೆರೆಯವರ ಕೋಣೆಗಳ ನಡುವೆ ಇರುವ ಕೋಣೆಯಲ್ಲಿ, ಒಬ್ಬ ಹದಿವಯಸ್ಕ ಮಗಳೊಂದಿಗೆ ವಾಸಿಸುವ ಒಂಟಿ ಹೆತ್ತವಳಾದ ಮಾರ್ಜರೀಯ ವಿದ್ಯಮಾನವನ್ನು ಪರಿಗಣಿಸಿರಿ. ಮಹಡಿಯ ಮೇಲಿನ ಕೋಣೆಯಲ್ಲಿರುವ ಬಾಡಿಗೆದಾರರ ನೆಲದ ಮೇಲೆ ಹಾಸುಗಂಬಳಿ ಇಲ್ಲ. ಫಲಸ್ವರೂಪವಾಗಿ, ಮಕ್ಕಳು ನೆಲದ ಮೇಲೆ ರೋಲರ್ ಸ್ಕೇಟಿಂಗ್ ಮಾಡುವ, ಒಂದು ಚೆಂಡನ್ನು ರಭಸವಾಗಿ ಎಸೆಯುವ, ಇಲ್ಲವೆ ಮಂಚದಿಂದ ಕುಪ್ಪಳಿಸುವ ಶಬ್ದವು ತನ್ನನ್ನು ಕ್ಷೋಭೆಗೊಳಿಸುತ್ತದೆಂದು ಮಾರ್ಜರೀ ಕಂಡುಕೊಳ್ಳುತ್ತಾಳೆ. ಇದಕ್ಕೆ ಕೂಡಿಸಿ, ಅವರ ತಾಯಿ ಮನೆಯಲ್ಲಿ ಎತ್ತರ ಹಿಮ್ಮಡಿಯುಳ್ಳ ಪಾದರಕ್ಷೆಗಳನ್ನು ಧರಿಸುತ್ತಾಳೆ. ತನ್ನ ನೆರೆಯಾಕೆ ಹೆಚ್ಚು ಗಲಾಟೆಮಾಡದಿರುವಂತೆ ಕೇಳಿಕೊಳ್ಳಲು ಮಾರ್ಜರೀ ಅವಳನ್ನು ದಯಾಪರವಾಗಿ ಸಮೀಪಿಸಿದಳು, ಆದರೆ ಅವರ ನಡುವೆಯಿದ್ದ ಭಾಷೆಯ ತಡೆಯು ಆಶಾಭಂಗವನ್ನುಂಟುಮಾಡಿತು. ಸ್ಥಳೀಯ ಪೌರಸಂಸ್ಥೆಯ ಸಲಹಾ ಮಂಡಲಿಯು, ಸಮಸ್ಯೆಯನ್ನು ಬಗೆಹರಿಸಲು ಒಬ್ಬ ಭಾಷಾಂತರಕಾರನನ್ನು ಕಳುಹಿಸುವುದಾಗಿ ಹೇಳಿದೆ. ಆದುದರಿಂದ ಮಾರ್ಜರೀ ಪರಿಸ್ಥಿತಿಯ ಸುಧಾರಣೆಗಾಗಿ ಕಾಯುತ್ತಾಳೆ.
ಕೆಳ ಅಂತಸ್ತಿನ ಕೋಣೆಯಲ್ಲಿ, ಪ್ರತಿ ಬೆಳಗ್ಗೆ ಏಳರಿಂದ ಎಂಟು ಗಂಟೆಯ ವರೆಗೆ, ಮಂದ್ರಬಡಿತವು ಸತತವಾಗಿ ಬಡಿಯುತ್ತಾ ಇರುವ ಗಟ್ಟಿಯಾದ ಸಂಗೀತವನ್ನು ನುಡಿಸುವ ಒಬ್ಬ ಮನುಷ್ಯನು ವಾಸಿಸುತ್ತಾನೆ. ಆ ಮನುಷ್ಯನನ್ನು ಅವಳು ಜಾಣ್ಮೆಯಿಂದ ಸಮೀಪಿಸಿದಾಗ, ‘ಅವನ ಕೆಲಸವನ್ನು ಪೂರೈಸಲು ಅವನು ಒಳ್ಳೆಯ ಮನಸ್ಥಿತಿಯಲ್ಲಿರುವಂತೆ’ ಅವನಿಗೆ ತನ್ನ ಸಂಗೀತದ ಅಗತ್ಯವಿತ್ತೆಂಬ ಉತ್ತರವನ್ನು ಅವಳು ಪಡೆದುಕೊಂಡಳು. ಮಾರ್ಜರೀ ಹೇಗೆ ನಿಭಾಯಿಸುತ್ತಾಳೆ?
ಅವಳು ಹೇಳುವುದು, “ನಾನು ಆತ್ಮ ನಿಯಂತ್ರಣ ಮತ್ತು ತಾಳ್ಮೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನಾನು ನನ್ನ ಕಾರ್ಯಕ್ರಮವನ್ನು ಪುನಃ ಏರ್ಪಡಿಸಿದ್ದೇನೆ, ಮತ್ತು ಶಬ್ದವಿರುವಾಗ್ಯೂ ನಾನು ಓದಲು ಕುಳಿತುಕೊಳ್ಳುತ್ತೇನೆ. ನಾನು ಬೇಗನೆ ನನ್ನ ಪುಸ್ತಕದಲ್ಲಿ ತಲ್ಲೀನಳಾಗಿರುವುದನ್ನು ಕಂಡುಕೊಳ್ಳುತ್ತೇನೆ. ಆಗ, ನಾನು ಶಬ್ದವನ್ನು ಅಷ್ಟೊಂದು ಗಮನಿಸುವುದಿಲ್ಲ.”
ಇನ್ನೊಂದು ಕಡೆಯಲ್ಲಿ ಹೆದರ್, ಒಂದು ನೈಟ್ಕ್ಲಬ್ಬಿನ ಎದುರಿನಲ್ಲಿರುವ ಕೋಣೆಯಲ್ಲಿ ವಾಸಿಸುತ್ತಾಳೆ. ಅದು, ಒಂದು ಗದ್ದಲಭರಿತ ರಾತ್ರಿಯ ತರುವಾಯ, ಬೆಳಗ್ಗೆ ಸುಮಾರು ಆರು ಗಂಟೆಗೆ ಅದನ್ನು ಮುಚ್ಚಲಾಗುತ್ತದೆ. ಅವಳು ಕಟ್ಟಕಡೆಗೆ ಸ್ಥಳೀಯ ಅಧಿಕಾರಿಗಳಿಗೆ ದೂರು ಸಲ್ಲಿಸಿದಳಾದರೂ, ಆ ಉಪಟಳವನ್ನು ನಿಲ್ಲಿಸಲು ಯಾವ ಕ್ರಮವೂ ತೆಗೆದುಕೊಳ್ಳಲ್ಪಟ್ಟಿಲ್ಲ.
ಶಬ್ದಕ್ಕೊಂದು ಕೊನೆಯಿದೆಯೆ?
ಬ್ರಿಟನಿನ ವೈದ್ಯಕೀಯ ಸಂಶೋಧನಾ ಸಭೆಯ, ಶ್ರವಣಶಕ್ತಿ ಸಂಶೋಧನಾ ಸಂಸ್ಥೆಯ ಡಾ. ರಾಸ್ ಕೋಲ್ಸ್ ಗಮನಿಸುವುದೇನೆಂದರೆ, “ಅನೇಕ ಜನರು ಸಂಪೂರ್ಣ ಮೌನವನ್ನು ಅತ್ಯಂತ ಕ್ಷೋಭೆಗೊಳಿಸುವಂತಹದ್ದೂ ಭಯಹುಟ್ಟಿಸುವಂತಹದ್ದೂ ಆದದ್ದಾಗಿ ಕಂಡುಕೊಳ್ಳುತ್ತಾರೆ.” ಪಕ್ಷಿಗಳ ಇಂಪಾದ ಇಂಚರಗಳು, ಮರಳದಂಡೆಯ ಮೇಲೆ ಅಲೆಗಳ ಸೌಮ್ಯವಾದ ಅಪ್ಪಳಿಸುವಿಕೆ, ಮಕ್ಕಳ ಉದ್ರೇಕಿತ ಕೂಗುಗಳು—ಇವು ಮತ್ತು ಇತರ ಸದ್ದುಗಳು ನಮ್ಮನ್ನು ಹರ್ಷಗೊಳಿಸುತ್ತವೆ. ನಾವು ಸದ್ಯಕ್ಕೆ ಶಬ್ದದಿಂದ ಒಂದಿಷ್ಟು ಉಪಶಮನವನ್ನು ಬಯಸಬಹುದಾದರೂ, ನಮ್ಮೊಂದಿಗೆ ಸಂಭಾಷಿಸುವ ಹಿತಕರವಾದ ಸಂಗಾತಿಗಳೊಂದಿಗಿರಲು ನಾವು ಸಂತೋಷಿಸುತ್ತೇವೆ. ದೇವರು ತನ್ನ ನಂಬಿಗಸ್ತ ಸೇವಕರಿಗಾಗಿ ಶಾಂತಿ ಮತ್ತು ನೆಮ್ಮದಿಯನ್ನು ವಾಗ್ದಾನಿಸಿದ್ದಾನೆ.
ಬೈಬಲಿನಲ್ಲಿ ಕೀರ್ತನೆಗಾರನು ಹೀಗೆ ಘೋಷಿಸುತ್ತಾನೆ: “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ [“ಶಾಂತಿಯ ಸಮೃದ್ಧಿಯಲ್ಲಿ,” NW] ಆನಂದಿಸುವರು.” (ಕೀರ್ತನೆ 37:11) ದೇವರ ಸ್ವರ್ಗೀಯ ರಾಜ್ಯ ಸರಕಾರವು ಬೇಗನೆ ಮಾನವ ಕಾರ್ಯಕಲಾಪಗಳಲ್ಲಿ ಹಸ್ತಕ್ಷೇಪಮಾಡುವುದು. (ದಾನಿಯೇಲ 2:44) ಆಗ, ಕ್ರಿಸ್ತ ಯೇಸುವಿನ ಆಳ್ವಿಕೆಯ ಕೆಳಗೆ, “ಚಂದ್ರನಿರುವ ವರೆಗೂ ಪರಿಪೂರ್ಣಸೌಭಾಗ್ಯ [“ಶಾಂತಿಯ ಸಮೃದ್ಧಿ,” NW]” ಇರುವುದು.—ಕೀರ್ತನೆ 72:7; ಯೆಶಾಯ 9:6, 7.
ದೈವಿಕ ಹಸ್ತಕ್ಷೇಪವು ನಮ್ಮಲ್ಲಿ ಎಲ್ಲರೂ ಬಯಸುವ ಶಾಂತಿ ಮತ್ತು ನೆಮ್ಮದಿಯನ್ನು ಪೂರೈಸುವುದೆಂಬ ವಿಷಯದಲ್ಲಿ ನಾವು ನಿಶ್ಚಿತರಾಗಿರಬಲ್ಲೆವು. ಅದು ದೇವರ ಪ್ರವಾದಿಯಾದ ಯೆಶಾಯನು ಮುಂತಿಳಿಸಿದಂತೆಯೇ ಇರುವುದು: “ಧರ್ಮದಿಂದ ಸಮಾಧಾನವು ಫಲಿಸುವದು, ಶಾಂತಿ ನಿರ್ಭಯಗಳು ಧರ್ಮದ ನಿತ್ಯಪರಿಣಾಮವಾಗಿರುವವು. ನನ್ನ ಜನರು . . . ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.”—ಯೆಶಾಯ 32:17, 18.
ಈಗಲೂ ಸಹ, ನೀವು ನಿಮ್ಮ ವಾಸಸ್ಥಳದಲ್ಲಿನ ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಆತ್ಮಿಕ ಶಾಂತಿ ಮತ್ತು ನೆಮ್ಮದಿಯನ್ನು ಕಂಡುಕೊಳ್ಳಸಾಧ್ಯವಿದೆ. ಕೆಲವೊಮ್ಮೆ ಹತ್ತಾರು ಸಾವಿರ ಸಾಕ್ಷಿಗಳು ಆರಾಧನೆಗಾಗಿ ದೊಡ್ಡ ಅಧಿವೇಶನಗಳಲ್ಲಿ ಕೂಡಿಬರುವುದಾದರೂ—ಮತ್ತು ಈ ಕೂಡಿಬರುವಿಕೆಗಳು ನಿಜವಾಗಿಯೂ ‘ಪುರುಷರು, ಸ್ತ್ರೀಯರು, ಮತ್ತು ಮಕ್ಕಳಿಂದ ಗಿಜಿಗುಟ್ಟುತ್ತಿರುತ್ತದೆ’—ಆ ಸದ್ದು ಕ್ಷೋಭೆಗೊಳಿಸುವಂತಹದ್ದಲ್ಲ, ಪ್ರಸನ್ನಕರವಾದದ್ದಾಗಿದೆ. (ಮೀಕ 2:12) ಸಾಕ್ಷಿಗಳೊಂದಿಗೆ ಸ್ಥಳಿಕವಾಗಿ ಸಂಧಿಸುವ ಮೂಲಕ ಇಲ್ಲವೆ ಅವರನ್ನು ಸಂಪರ್ಕಿಸಲು ಈ ಪತ್ರಿಕೆಯ 5ನೆಯ ಪುಟದಲ್ಲಿರುವ ವಿಳಾಸಗಳಲ್ಲಿ ಒಂದಕ್ಕೆ ಬರೆಯುವ ಮೂಲಕ, ಅದನ್ನು ಸ್ವತಃ ಅನುಭವಿಸಿರಿ. ಈಗ ಮತ್ತು ಬಹುಶಃ ಎಂದೆಂದಿಗೂ ಅವರ ಸಹವಾಸದಲ್ಲಿ ನಿಜವಾದ ಶಾಂತಿ ಮತ್ತು ನೆಮ್ಮದಿಯನ್ನು ಅನುಭವಿಸಿರಿ.