ಶಬ್ದ—ನೀವು ಅದರ ಕುರಿತು ಮಾಡಸಾಧ್ಯವಿರುವ ಸಂಗತಿ
ಒಂದು ಆಯಾಸಕರ ದಿನದ ಕೊನೆಯಲ್ಲಿ, ನೀವು ಗಾಢವಾದ ನಿದ್ರೆಗೆ ವಶವಾಗುತ್ತೀರಿ. ಹಠಾತ್ತನೆ, ನೆರೆಹೊರೆಯಲ್ಲಿರುವ ನಾಯಿಗಳ ಬೊಗಳುವಿಕೆಯಿಂದ ನೀವು ಎಚ್ಚರಗೊಳ್ಳುತ್ತೀರಿ. ನಿಮ್ಮ ಮಂಚದ ಮೇಲೆ ನೀವು ಮಗ್ಗುಲು ಬದಲಾಯಿಸಿ, ಕಿರಿಕಿರಿಯನ್ನುಂಟುಮಾಡುವ ಆ ಶಬ್ದವು ಬೇಗನೆ ನಿಂತುಹೋಗುವುದೆಂದು ನಿರೀಕ್ಷಿಸುತ್ತೀರಿ. ಆದರೆ ಅದು ಬಿಡದೆ ಮುಂದುವರಿಯುತ್ತದೆ. ಸತತವಾಗಿ ಆ ನಾಯಿಗಳು ಬೊಗಳುತ್ತಾ ಇರುತ್ತವೆ. ಕಳವಳಗೊಂಡು, ನಿದ್ರಾಹೀನತೆಯಿಂದ ಆಶಾಭಂಗಗೊಂಡು, ಈಗ ಪೂರ್ಣವಾಗಿ ಎಚ್ಚರಗೊಂಡಿರುವ ನೀವು, ನಿಮ್ಮ ನೆರೆಯವರು ಇಂತಹ ಗಲಾಟೆಯನ್ನು ಹೇಗೆ ಸಹಿಸಿಕೊಳ್ಳಸಾಧ್ಯವಿದೆ ಎಂದು ಬೆರಗುಗೊಳ್ಳುತ್ತೀರಿ.
ಜನರು ತಾವು ಶಬ್ದವನ್ನು ಸಹಿಸಿಕೊಳ್ಳುವ ವಿಧದಲ್ಲಿ ಬಹಳವಾಗಿ ಭಿನ್ನರಾಗಿರುತ್ತಾರೆ. ವಿಮಾನಗಳಿಗೆ ಸಂಬಂಧಿಸದೇ ಇರುವ ಕೆಲಸವನ್ನು ಮಾಡುವವರಿಗಿಂತ, ವಿಮಾನಗಳ ಹಾರಾಟಪಥದ ಬಳಿ ವಾಸಿಸುವ ವಿಮಾನ ನಿಲ್ದಾಣದ ನೌಕರರು, ವಿಮಾನದಿಂದ ಉಂಟಾಗುವ ಶಬ್ದದಿಂದ ತೊಂದರೆಗೊಳಗಾಗುವುದು ಬಹಳ ಕಡಿಮೆ. ವಿದ್ಯುತ್ತಿನ ಫೂಡ್ ಪ್ರೋಸೆಸರ್ (ಆಹಾರ ಸಂಸ್ಕಾರಕ) ಅನ್ನು ಉಪಯೋಗಿಸುವ ಒಬ್ಬ ಗೃಹಿಣಿಯು, ಪಕ್ಕದ ಕೋಣೆಯಲ್ಲಿ ಒಂದು ಪುಸ್ತಕವನ್ನು ಓದಲು ಇಲ್ಲವೆ ಟಿವಿಯನ್ನು ವೀಕ್ಷಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಗಿಂತ ಹೆಚ್ಚು ಉತ್ತಮವಾಗಿ ಅದರ ಶಬ್ದವನ್ನು ಸಹಿಸಿಕೊಳ್ಳುತ್ತಾಳೆ.
ಶಬ್ದ ಮಾಲಿನ್ಯವೆಂದರೇನು?
ದೇಶಗಳು ಶಬ್ದ ಮಾಲಿನ್ಯವನ್ನು ವಿಭಿನ್ನವಾಗಿ ವ್ಯಾಖ್ಯಾನಿಸುತ್ತವೆ. ಮೆಕ್ಸಿಕೊದಲ್ಲಿ, ಶಬ್ದವು “ಒಂದು ಅನಿಷ್ಟ ಇಲ್ಲವೆ ವ್ಯಕ್ತಿಗಳಿಗೆ ಹಾನಿಕಾರಕವಾಗಿರುವ ಯಾವುದೇ ಅನಪೇಕ್ಷಣೀಯ ಸದ್ದು” ಆಗಿದೆ. ಶಬ್ದವು “ವಿಚಾರಹೀನವಾಗಿ ಯಾವುದೇ ವ್ಯಕ್ತಿಯ ಶಾಂತಿ, ನೆಮ್ಮದಿ ಮತ್ತು ಅನುಕೂಲತೆಯೊಂದಿಗೆ ಅಡ್ಡಬರುವಂತಹ ಸ್ವರೂಪದ್ದು” ಆಗಿರುವಾಗ, ನ್ಯೂ ಸೀಲೆಂಡ್ ಅದನ್ನು ಮಿತಿಮೀರಿದ್ದಾಗಿ ಪರಿಗಣಿಸುತ್ತದೆ.
ಇಬ್ಬರು ಪ್ರಖ್ಯಾತ ವಿಜ್ಞಾನಿಗಳು—ದೂರವಾಣಿಯ ನಿರ್ಮಾಪಕ ಅಲೆಗ್ಸಾಂಡರ್ ಗ್ರಾಹಮ್ ಬೆಲ್ ಮತ್ತು ಜರ್ಮನ್ ಭೌತವಿಜ್ಞಾನಿಯಾದ ಹೀನ್ರಿಕ್ ಹರ್ಟ್ಸ್—ಶಬ್ದದ ಮಾಪನದೊಂದಿಗೆ ನಿಕಟವಾಗಿ ಸಂಬಂಧಿಸಲ್ಪಡುತ್ತಾರೆ. ಬೆಲ್ಗಳು, ಇಲ್ಲವೆ ಹೆಚ್ಚು ಸಾಮಾನ್ಯವಾಗಿ ಡೆಸಿಬೆಲ್ಗಳು (ಒಂದು ಬೆಲ್ನ ದಶಾಂಶ), ಸಾಪೇಕ್ಷವಾದ ದೊಡ್ಡ ಧ್ವನಿಯನ್ನು ಅಳೆಯುವಾಗ, ಹರ್ಟ್ಸ್ ಒಂದು ಸದ್ದಿನ ಪಿಚ್ ಇಲ್ಲವೆ ಕಂಪನ ಪ್ರಮಾಣವನ್ನು ಅಳೆಯುತ್ತದೆ. ಶಬ್ದವನ್ನು ಅಳೆಯುವಾಗ, ವರದಿಗಳು ಸಾಮಾನ್ಯವಾಗಿ ಸದ್ದಿನ ಡೆಸಿಬೆಲ್ ಮಟ್ಟವನ್ನು ಸೂಚಿಸುತ್ತವೆ.*
ಆದರೆ, ಒಂದು ಸದ್ದು ಎಷ್ಟು ಪ್ರಮಾಣದ ಕ್ಷೋಭೆಯನ್ನುಂಟುಮಾಡುತ್ತದೆ ಎಂಬುದನ್ನು ಯಾರು ನಿರ್ಧರಿಸುತ್ತಾರೆ? ಕೇಳುಗರಾದ ನೀವೇ! “ರೇಗಿಸುವ ಶಬ್ದದ ಮೌಲ್ಯಮಾಪಕವಾಗಿ, ಮಾನವ ಕಿವಿಯು ಅತ್ಯುತ್ತಮ ಶೋಧಕವಾಗಿಯೇ ಉಳಿಯುತ್ತದೆ,” ಎಂದು ಲಂಡನ್ನ ದಿ ಇಂಡಿಪೆಂಡೆಂಟ್ ಪತ್ರಿಕೆಯು ಗಮನಿಸುತ್ತದೆ.
ಶಬ್ದದ ಪರಿಣಾಮಗಳು
ಕಿವಿಯು ಶಬ್ದದ “ಅತ್ಯುತ್ತಮ ಶೋಧಕ”ವಾಗಿರುವ ಕಾರಣ, ಅದರಿಂದ ಆಗುವ ಹಾನಿಯನ್ನು ಅನುಭವಿಸುವ ಹೆಚ್ಚಿನ ಸಾಧ್ಯತೆಯುಳ್ಳ ಅಂಗವೂ ಅದೇ ಎಂಬುದು ಸ್ಪಷ್ಟ. ನಿಮ್ಮ ಒಳಕಿವಿಯ ಸೂಕ್ಷ್ಮಸಂವೇದನಾ ನರಜೀವಕೋಶಗಳಿಗೆ ಆಗುವ ಹಾನಿಯು, ಶ್ರವಣಶಕ್ತಿಯ ಶಾಶ್ವತವಾದ ನಷ್ಟವನ್ನು ಉಂಟುಮಾಡಬಲ್ಲದು. ಗಟ್ಟಿಯಾದ ಸದ್ದುಗಳಿಗೆ ಜನರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆಂಬುದು ನಿಜ. ಆದರೆ 80ರಿಂದ 90 ಡೆಸಿಬೆಲ್ಗಳಿಗಿಂತಲೂ ಹೆಚ್ಚಿನ ಪ್ರಮಾಣದ ಸದ್ದುಗಳಿಗೆ ಸತತವಾದ ಒಡ್ಡುವಿಕೆಯು, ಕ್ರಮೇಣವಾಗಿ ಶ್ರವಣಶಕ್ತಿಯ ನಷ್ಟಕ್ಕೆ ನಡೆಸಬಲ್ಲದು. ನಿಶ್ಚಯವಾಗಿಯೂ, ಯಾವ ಪರಿಸರದಲ್ಲಿ ಶಬ್ದದ ಮಟ್ಟಗಳು ಉನ್ನತವಾಗಿವೆಯೊ ಅಂತಹ ಪರಿಸರದಲ್ಲಿ—ನಿಮ್ಮ ಶ್ರವಣಶಕ್ತಿಗೆ ಆಗುವ ಹಾನಿಯನ್ನು ನೀವು ತಡೆಗಟ್ಟಬೇಕಾದರೆ—ಕಡಮೆ ಸಮಯವನ್ನು ಸುರಕ್ಷಿತವಾಗಿ ವ್ಯಯಿಸಬಲ್ಲಿರಿ.
ಫ್ರಾನ್ಸ್ನಲ್ಲಿ ಮಾರಲ್ಪಡುವ ಅನೇಕ ವೈಯಕ್ತಿಕ ಸ್ಟೀರಿಯೊ (ವಾಕ್ಮನ್)ಗಳಿಗೆ 113 ಡೆಸಿಬೆಲ್ಗಳ ಗರಿಷ್ಠ ಮೊತ್ತವಿದೆಯೆಂದು ನ್ಯೂ ಸೈಎನ್ಟಿಸ್ಟ್ ಪತ್ರಿಕೆಯು ವರದಿಸುತ್ತದೆ. ಒಂದು ಅಧ್ಯಯನವನ್ನು ಉದ್ಧರಿಸುತ್ತಾ ಅದು ಗಮನಿಸಿದ್ದೇನೆಂದರೆ, “ವೈಯಕ್ತಿಕ ವಾಕ್ಮನ್ಗಳಲ್ಲಿ ಒಂದು ತಾಸಿನ ವರೆಗೆ ಭಾರಿ ಸದ್ದಿನೊಂದಿಗೆ ನುಡಿಸಲ್ಪಟ್ಟ ರಾಕ್ ಸಂಗೀತವು, ಹೆಚ್ಚಿನ ಸಮಯ 100 ಡೆಸಿಬೆಲ್ಗಳನ್ನು ಮೀರಿ, ಸುಮಾರು 127 ಡೆಸಿಬೆಲ್ಗಳ ಉಚ್ಚ ಮಟ್ಟವನ್ನು ತಲಪಿತು.” ಇದಕ್ಕಿಂತಲೂ ಹೆಚ್ಚು ಗಂಭೀರವಾದದ್ದು, ನೇರವಾದ ಗಾನಗೋಷ್ಠಿಗಳ ಸಮಯದಲ್ಲಿ ಉಂಟಾಗುವ ಶಬ್ದದ ಪರಿಣಾಮವೇ. ಜನರು ಮೈಮರೆತ ಸ್ಥಿತಿಯಲ್ಲಿ ಧ್ವನಿವರ್ಧಕಯಂತ್ರಗಳ ರಾಶಿಯ ಹತ್ತಿರ ಗುಂಪುಗೂಡಿರುವುದನ್ನು ಒಬ್ಬ ಪರೀಕ್ಷಕನು ಕಂಡುಕೊಂಡನು. “ನನ್ನ ದೃಷ್ಟಿಯು ಮಬ್ಬಾಗುತ್ತಿತ್ತು, ದೇಹದ ಟೊಳ್ಳುಭಾಗಗಳು ಮಂದ್ರವಾದ್ಯದ ಬಡಿತದಿಂದ ಅನುರಣಿಸುತ್ತಿದ್ದವು, ಮತ್ತು ಆ ಶಬ್ದವು ನನ್ನ ಕಿವಿಗಳಿಗೆ ವೇದನೆಯನ್ನು ಉಂಟುಮಾಡುತ್ತಿತ್ತು” ಎಂದು ಅವನು ಹೇಳುತ್ತಾನೆ.
ಶಬ್ದವು ನಿಮ್ಮ ಮೇಲೆ ಯಾವ ಪರಿಣಾಮಗಳನ್ನು ಬೀರಬಲ್ಲದು? ಒಂದು ಗ್ರಂಥವು ಹೇಳುವುದು: “ಮಿತವಾದ ಮಟ್ಟಗಳಿಂದ ಉಚ್ಚ ಮಟ್ಟದ ಸತತವಾದ ಶಬ್ದಗಳು, ಒತ್ತಡ, ಬಳಲಿಕೆ, ಮತ್ತು ಸಿಡುಕುತನವನ್ನು ಉಂಟುಮಾಡುತ್ತವೆ.” “ಶಬ್ದದಿಂದ ಹಿಂಸಿಸಲ್ಪಡುವುದು, ಒಬ್ಬನನ್ನು ದುಃಖಿತನನ್ನಾಗಿ ಮಾಡುತ್ತದೆ ಮಾತ್ರವಲ್ಲ, ಅದು ಒಬ್ಬ ವ್ಯಕ್ತಿಯನ್ನು ಶಾರೀರಿಕವಾಗಿಯೂ ಭಾವನಾತ್ಮಕವಾಗಿಯೂ ಕೃಶಗೊಳಿಸುತ್ತದೆ” ಎಂದು, ಜರ್ಮನಿಯ ಗೀಸನ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಗೇರಾಲ್ಟ್ ಫ್ಲೀಶರ್ ಗಮನಿಸುತ್ತಾರೆ. ಪ್ರೊಫೆಸರ್ ಮಾಕಿಸ್ ಟ್ಸಾಪೋಗಾಸ್ ಅವರಿಗನುಸಾರ, ಇತರ ಒತ್ತಡಭರಿತ ಸ್ಥಿತಿಗಳೊಂದಿಗೆ ಕೂಡಿಕೆಯಾಗಿ ಶಬ್ದವು ಬರುವಾಗ, ಅದು ಖಿನ್ನತೆಯನ್ನು ಅಷ್ಟೇ ಅಲ್ಲದೆ ಜೈವಿಕ ರೋಗಗಳನ್ನೂ ಪ್ರಚೋದಿಸಬಲ್ಲದು.
ಶಬ್ದಕ್ಕೆ ದೀರ್ಘವಾಗಿ ಒಡ್ಡಲ್ಪಡುವುದು, ನಿಮ್ಮ ವ್ಯಕ್ತಿತ್ವವನ್ನು ಬಾಧಿಸಬಲ್ಲದು. ಬ್ರಿಟಿಷ್ ಸರಕಾರದ ಸಂಶೋಧಕರು ಶಬ್ದ ಮಾಲಿನ್ಯಕ್ಕೆ ಆಹುತಿಯಾದವರನ್ನು, ಅದಕ್ಕೆ ಹೊಣೆಗಾರರಾಗಿದ್ದವರ ಬಗ್ಗೆ ಅವರಿಗೆ ಹೇಗನಿಸಿತೆಂದು ಕೇಳಿದಾಗ, ಅವರು ದ್ವೇಷ, ಪ್ರತೀಕಾರ, ಮತ್ತು ಕೊಲೆಯ ಕುರಿತೂ ಮಾತಾಡಿದರು. ಇನ್ನೊಂದು ಕಡೆಯಲ್ಲಿ, ಶಬ್ದವನ್ನುಂಟುಮಾಡುವವರು ತಾವು ಸತತವಾದ ದೂರುಗಳಿಗೆ ಗುರಿಯಾಗುವಾಗ ಆಗಿಂದಾಗ್ಗೆ ಆಕ್ರಮಣಶೀಲರಾಗುತ್ತಾರೆ. “ಶಬ್ದವು ಜನರ ಪರಹಿತಚಿಂತನೆಯನ್ನು ಕಡಮೆಗೊಳಿಸಿ, ಆಕ್ರಮಣ ಪ್ರವೃತ್ತಿ ಮತ್ತು ಹಗೆತನವನ್ನು ಸೃಷ್ಟಿಸುತ್ತದೆ,” ಎಂಬುದಾಗಿ ಶಬ್ದವಿರೋಧಿ ಚಳುವಳಿಗಾರನೊಬ್ಬನು ಪ್ರತಿಪಾದಿಸುತ್ತಾನೆ.
ಶಬ್ದ ಮಾಲಿನ್ಯದಿಂದ ಕಷ್ಟಾನುಭವಿಸಿರುವ ಹೆಚ್ಚಿನವರು, ಸಂಕ್ಷೋಭೆಯ ಕಡೆಗಿನ ಅವರ ನಿರೋಧಶಕ್ತಿಯು ಕ್ರಮೇಣವಾಗಿ ದುರ್ಬಲಗೊಳ್ಳುವುದನ್ನು ಗ್ರಹಿಸುತ್ತಾರೆ. ಯಾರ ಗದ್ದಲಭರಿತ ನೆರೆಯವರು ಸತತವಾಗಿ ಗಟ್ಟಿ ಧ್ವನಿಯಲ್ಲಿ ಸಂಗೀತವನ್ನು ನುಡಿಸಿದರೊ, ಆ ಒಬ್ಬಾಕೆ ಸ್ತ್ರೀಯ ದೃಷ್ಟಿಕೋನವನ್ನು ಅವರು ಪ್ರತಿಧ್ವನಿಸುತ್ತಾರೆ: “ನೀವು ಬಯಸದೇ ಇರುವ ಯಾವುದೊ ವಿಷಯವನ್ನು ಆಲಿಸುವಂತೆ ಒತ್ತಾಯಿಸಲ್ಪಡುವಾಗ, ಅದು ನಿಮ್ಮ ದೇಹಕ್ಕೆ ಹಾನಿಕಾರಕವಾಗಿದೆ. . . . ಶಬ್ದವು ನಿಂತ ಮೇಲೂ, ಅದು ಪುನಃ ಆರಂಭಗೊಳ್ಳುವುದೆಂದು ನಮಗೆ ಗೊತ್ತಿತ್ತು.”
ಹಾಗಾದರೆ, ಶಬ್ದ ಮಾಲಿನ್ಯದೊಂದಿಗೆ ವ್ಯವಹರಿಸುವ ಮಾರ್ಗವೇ ಇಲ್ಲವೊ?
ನೀವು ಮಾಡಸಾಧ್ಯವಿರುವ ಸಂಗತಿ
ಶಬ್ದವು ಇಷ್ಟೊಂದು ಸರ್ವವ್ಯಾಪಕವಾಗಿರುವುದರಿಂದ, ತಾವು ಇತರರಿಗೆ ಕ್ಷೋಭೆಯನ್ನುಂಟುಮಾಡುತ್ತಿರುವಾಗ ಅನೇಕ ಜನರು ಅದನ್ನು ಗ್ರಹಿಸುವುದೇ ಇಲ್ಲ. ಅವರಿಗೆ ಅದು ಗೊತ್ತಿದ್ದರೆ, ಕೆಲವರು ನಿಸ್ಸಂದೇಹವಾಗಿಯೂ ನೆಮ್ಮದಿಗೆಡಿಸುವ ಆ ಚಟುವಟಿಕೆಯನ್ನು ನಿಲ್ಲಿಸುತ್ತಿದ್ದರು. ಈ ಕಾರಣಕ್ಕಾಗಿಯೇ, ಗದ್ದಲಮಾಡುವ ಒಬ್ಬ ನೆರೆಯವನ ಕಡೆಗೆ ಒಂದು ಸ್ನೇಹಪರ ಸಮೀಪಿಸುವಿಕೆಯು ಪರಿಣಾಮಕಾರಿಯಾಗಿರಬಲ್ಲದು. ತಾನು ಗದ್ದಲಭರಿತನೆಂಬ ತನ್ನ ನೆರೆಯವರ ಅಧಿಕೃತ ದೂರುಗಳಿಂದ ಒಬ್ಬ ವ್ಯಕ್ತಿಯು ಕೋಪಗೊಂಡನು. ಅವನು ಹೇಳಿದ್ದು: “ಅವರು ಶಬ್ದದ ಕಾರಣ ಗಲಿಬಿಲಿಗೊಂಡಿದ್ದಲ್ಲಿ ನೇರವಾಗಿ ನನ್ನನ್ನು ನೋಡಲು ಬರುತ್ತಿದ್ದರೆಂದು ನಾನು ಭಾವಿಸಿಕೊಳ್ಳುತ್ತಿದ್ದೆ.” ಕೆಲವು ಎಳೆಯ ಮಕ್ಕಳಿಗಾಗಿ ಒಂದು ಪಾರ್ಟಿಯನ್ನು ಏರ್ಪಡಿಸಿದ ತಾಯಿಯೊಬ್ಬಳು, ಶಬ್ದದ ದೂರೊಂದರ ತನಿಖೆನಡೆಸುತ್ತಿರುವ ಒಬ್ಬ ಅಧಿಕಾರಿಯನ್ನು ಸಂಧಿಸಿದಾಗ ಆಶ್ಚರ್ಯವನ್ನು ವ್ಯಕ್ತಪಡಿಸಿದಳು. ಅವಳು ಗಮನಿಸಿದ್ದು: “ದೂರುಗಳನ್ನು ನೀಡಿದವರು, ನನ್ನ ಬಾಗಿಲನ್ನು ತಟ್ಟಿ, ನಮಗೆ ತೊಂದರೆಯಾಗುತ್ತಿದೆ ಎಂದು ನನಗೆ ಹೇಳಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು.” ಹಾಗಾದರೆ, ಸ್ಥಳೀಯ ಮೂಲಗಳಿಂದ ಬರುವ ಶಬ್ದದ ಕುರಿತು ದೂರು ನೀಡುವ 80 ಪ್ರತಿಶತದಷ್ಟು ಜನರು, ಕಡಮೆ ಶಬ್ದವನ್ನು ಮಾಡುವಂತೆ ತಮ್ಮ ನೆರೆಯವರಲ್ಲಿ ಎಂದೂ ಕೇಳಿಕೊಂಡಿಲ್ಲವೆಂಬುದನ್ನು ಅರಿತು, ಒಬ್ಬ ಬ್ರಿಟಿಷ್ ಪರಿಸರಸಂಬಂಧವಾದ ಆರೋಗ್ಯಾಧಿಕಾರಿಯು ಬೆರಗುಗೊಂಡದ್ದರಲ್ಲಿ ಆಶ್ಚರ್ಯವೇನೂ ಇಲ್ಲ.
ಗದ್ದಲಭರಿತ ನೆರೆಯವರೊಂದಿಗೆ ಮಾತಾಡಲು ಜನರು ತೋರುವ ಮೌನವು, ಪರಸ್ಪರ ಗೌರವದ ಕೊರತೆಯನ್ನು ಸೂಚಿಸುತ್ತದೆ. ‘ನನ್ನ ಸಂಗೀತವನ್ನು ನುಡಿಸಲು ನಾನು ಬಯಸುವುದಾದರೆ, ನಾನು ಅದನ್ನು ನುಡಿಸಬಲ್ಲೆ. ಅದು ನನ್ನ ಹಕ್ಕಾಗಿದೆ!’ ಎಂಬುದೇ ಅವರು ನಿರೀಕ್ಷಿಸುವ ಮತ್ತು ಅನೇಕ ವೇಳೆ ಪಡೆದುಕೊಳ್ಳುವ ಪ್ರತಿಕ್ರಿಯೆಯಾಗಿದೆ. ಶಬ್ದವನ್ನು ಕಡಮೆಮಾಡಲು ನೀಡಲ್ಪಡುವ ಒಂದು ದಯಾಪರ ಸೂಚನೆಯು—ಗದ್ದಲಭರಿತ ನೆರೆಯವನು ತಮ್ಮ ದೂರನ್ನು ಅಸಂಬದ್ಧವೆಂದು ಹೆಸರಿಸುವ ಕಾರಣ—ಮುಖಾಬಿಲೆಗೆ ನಡೆಸಬಹುದೆಂದು ಅವರು ಭಯಪಡುತ್ತಾರೆ. ಪ್ರಸ್ತುತ ದಿನದ ಸಮಾಜದ ಎಂತಹ ಒಂದು ದುಃಖಕರ ಪ್ರತಿಬಿಂಬ ಇದಾಗಿದೆ! ಈ “ನಿಭಾಯಿಸಲು ಕಠಿನವಾದ ಸಮಯಗಳಲ್ಲಿ” (NW), ಸಾಮಾನ್ಯವಾಗಿ ಜನರು ‘ಸ್ವಾರ್ಥಚಿಂತಕರು, ಅಹಂಕಾರಿಗಳು, ಉಗ್ರತೆಯುಳ್ಳವರು, ಮತ್ತು ದುಡುಕಿನವರು’ ಆಗಿರುವರೆಂಬ ಬೈಬಲಿನ ಹೇಳಿಕೆಗೆ ಇದು ಎಷ್ಟೊಂದು ಸದೃಶವಾಗಿದೆ!—2 ತಿಮೊಥೆಯ 3:1-4.
ಆಹುತಿಯಾದವನು ತೆಗೆದುಕೊಳ್ಳುವ ಸಮೀಪಿಸುವಿಕೆಯ ಮೇಲೆ ಹೆಚ್ಚಿನದ್ದು ಅವಲಂಬಿಸಿರುತ್ತದೆ. ಒಂದು ಆಕ್ರಮಣಕಾರಿ ದೂರು ತಪ್ಪಿತಸ್ಥನನ್ನು ರೇಗಿಸಿದ ಬಳಿಕ, ಅಲ್ಲಿಯ ಬಿಕ್ಕಟ್ಟನ್ನು ಹೇಗೆ ಬಗೆಹರಿಸುವುದೆಂಬುದರ ಕುರಿತು, ವುಮೆನ್ಸ್ ವೀಕ್ಲಿ ಪತ್ರಿಕೆಯು ಈ ಮುಂದಿನ ದೃಶ್ಯವಿವರವನ್ನು ನೀಡಿತು: ದೂರುಮಾಡಿದವನು, “ಹೃದಯೋಲ್ಲಾಸಕರ ಹಾಗೂ ಗ್ರಾಹ್ಯವಾದ ವಿಧದಲ್ಲಿ ಹೀಗೆ ಹೇಳಬಹುದು, ‘ನನ್ನನ್ನು ಕ್ಷಮಿಸಿ. ನಾನು ಕೋಪಗೊಂಡೆ, ಆದರೆ ನನಗೆ ನಿದ್ರಿಸಲು ಸಾಧ್ಯವಿರದಿರುವಾಗ ನಾನು ಬಹಳ ಬಳಲಿಹೋಗುತ್ತೇನೆ.’ ಈ ರೀತಿಯ ಮಾತು ಬಹುಶಃ [ತಾವು ಸರಿಯೆಂದು ವಾದಿಸುವ ನೆರೆಯವರನ್ನು] ಒಲಿಸಿಕೊಳ್ಳಲು ಸಾಕಾಗಬಹುದು.” ಅವರು ಆನಂದದಿಂದ ತಮ್ಮ ಧ್ವನಿವರ್ಧಕ ಸಜ್ಜನ್ನು ಪಕ್ಕದಲ್ಲಿರುವ ಗೋಡೆಯಿಂದ ದೂರ ಸರಿಸಿ, ಶಬ್ದವನ್ನು ಒಂದಿಷ್ಟು ಕಡಮೆಮಾಡಬಹುದು.
ವಾಸ್ತವಿಕವಾಗಿ, ನಿಮ್ಮ ನೆರೆಯವರೊಂದಿಗೆ ಒಳ್ಳೆಯ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಪ್ರಯೋಜನಕರವಾಗಿದೆ. ಕೆಲವು ಸ್ಥಳಿಕ ಸರಕಾರಿ ಅಧಿಕಾರಿಗಳು, ವಿರೋಧಾತ್ಮಕ ನೆರೆಯವರ ಮನಸ್ತಾಪವನ್ನು ಪರಿಹರಿಸಲು ಮಧ್ಯವರ್ತಿ ಸೇವೆಯನ್ನು ನೀಡುತ್ತಾರೆ. ಅಧಿಕೃತ ದೂರುಗಳು ಉದ್ರೇಕಿಸುವ ಹಗೆಯ ಅನಿಸಿಕೆಗಳ ನೋಟದಲ್ಲಿ, ಒತ್ತಾಯದಿಂದ ಕಾರ್ಯಗತಮಾಡುವ ನಿಯೋಗಿಯನ್ನು ಕರೆಸುವುದು, “ಅತ್ಯಂತ ಕೊನೆಯ ಉಪಾಯ”ವಾಗಿ ವೀಕ್ಷಿಸಲ್ಪಡತಕ್ಕದ್ದು.
ಹೊಸ ಸ್ಥಳಕ್ಕೆ ನೀವು ಸ್ಥಳಾಂತರಿಸುವವರಿದ್ದರೆ, ಕರಾರುಗಳಿಗೆ ಅಂತಿಮ ನಿರ್ಧಾರವನ್ನು ಮಾಡುವ ಮುಂಚೆ, ಶಬ್ದದ ಸಂಕ್ಷೋಭೆಯಿರುವ ಸಂಭವನೀಯ ಮೂಲಗಳನ್ನು ಪರಿಶೀಲಿಸುವುದು ವಿವೇಕಪ್ರದವಾಗಿದೆ ಎಂದು ನೀವು ಕಂಡುಕೊಳ್ಳುವಿರಿ. ಶಬ್ದದ ಪರಿಶೀಲನೆ ನಡೆಸಲು, ದಿನದ ವಿಭಿನ್ನ ಸಮಯಗಳಲ್ಲಿ ನಿಮ್ಮ ಭಾವೀ ಮನೆಯನ್ನು ನೀವು ಸಂದರ್ಶಿಸುವಂತೆ ಸ್ಥಿರಾಸ್ತಿಯ ದಳ್ಳಾಳಿಗಳು ಶಿಫಾರಸ್ಸು ಮಾಡುತ್ತಾರೆ. ಅವರ ಅಭಿಪ್ರಾಯಗಳೇನೆಂದು ನೀವು ನೆರೆಯವರನ್ನು ಕೇಳಬಹುದು. ನಿಮ್ಮ ಹೊಸ ಮನೆಗೆ ಸ್ಥಳಾಂತರಿಸಿದ ಮೇಲೆ ನೀವು ಸಮಸ್ಯೆಗಳನ್ನು ಎದುರಿಸುವಲ್ಲಿ, ಅವುಗಳನ್ನು ಸ್ನೇಹಪರ ವಿಧದಲ್ಲಿ ಬಗೆಹರಿಸಲು ಪ್ರಯತ್ನಿಸಿರಿ. ಮೊಕದ್ದಮೆಯು ಸಾಮಾನ್ಯವಾಗಿ ಬದ್ಧವೈರವನ್ನು ಉತ್ತೇಜಿಸುತ್ತದೆ.
ಆದರೆ ನೀವು ಗದ್ದಲಭರಿತ ನೆರೆಹೊರೆಯಲ್ಲಿ ಜೀವಿಸುತ್ತಿದ್ದು, ಬೇರೆಲ್ಲಿಗೂ ಸ್ಥಳಾಂತರಿಸುವ ಮಾರ್ಗ ನಿಮಗಿರದಿದ್ದಲ್ಲಿ ಆಗೇನು? ಅನಿಶ್ಚಿತ ಕಾಲದ ವರೆಗೆ ಕಷ್ಟಾನುಭವಿಸುವಂತೆ ನೀವು ನಿರ್ಬಂಧಿಸಲ್ಪಡುತ್ತೀರೊ? ಹಾಗಿರುವ ಅಗತ್ಯವೇನಿಲ್ಲ.
ಶಬ್ದದ ವಿರುದ್ಧ ಸಂರಕ್ಷಣೆಯನ್ನು ಸಾಧಿಸುವ ವಿಧ
ಹೊರಗಿನ ಶಬ್ದವು ನಿಮ್ಮ ಮನೆಯನ್ನು ಪ್ರವೇಶಿಸದಿರುವಂತೆ ನೀವು ಏನು ಮಾಡಸಾಧ್ಯವಿದೆ ಎಂಬುದರ ಕಡೆಗೆ ದೃಷ್ಟಿಹರಿಸಿರಿ. ಮುಚ್ಚಬೇಕಾದ ಯಾವುದೇ ರಂಧ್ರಗಳು ಇವೆಯೊ ಎಂಬುದನ್ನು ನೋಡಲು, ಗೋಡೆಗಳನ್ನೂ ನೆಲಗಳನ್ನೂ ಪರಿಶೀಲಿಸಿರಿ. ವಿದ್ಯುತ್ತಿನ ಸಾಕೆಟ್ಗಳಿರುವ ಸ್ಥಳಗಳಿಗೆ ವಿಶೇಷವಾಗಿ ಗಮನಕೊಡಿರಿ. ಅವು ಭದ್ರವಾಗಿವೆಯೊ?
ಅನೇಕ ವೇಳೆ ಶಬ್ದವು, ಬಾಗಿಲುಗಳು ಹಾಗೂ ಕಿಟಕಿಗಳ ಮೂಲಕ ಮನೆಯೊಳಗೆ ಪ್ರವೇಶಿಸುತ್ತದೆ. ಕಿಟಕಿಗಳಿಗೆ ಗಾಜಿನ ಇನ್ನೊಂದು ಪದರವನ್ನು ಜೋಡಿಸುವುದು (ಜೋಡಿಗಾಜು ಹಾಕುವಿಕೆ), ಶಬ್ದವನ್ನು ಕಡಮೆಗೊಳಿಸಲು ಸಹಾಯ ಮಾಡಬಲ್ಲದು. ನಿಮ್ಮ ಬಾಗಿಲಿನ ಚೌಕಟ್ಟಿಗೆ ಫೋಮಿನ ತೆಳುವಾದ ಪದರವನ್ನು ಕೂಡಿಸುವುದು ಸಹ, ಬಾಗಿಲು ಭದ್ರವಾಗಿ ಮುಚ್ಚಿಕೊಳ್ಳುತ್ತದೆ ಎಂಬುದನ್ನು ಖಚಿತಪಡಿಸುವುದು. ಬಹುಶಃ ಬಾಗಿಲಿರುವ ಒಂದು ದ್ವಾರ ಮಂಟಪವನ್ನು ಕಟ್ಟುವುದು, ಕ್ಷೋಭೆಗೊಳಿಸುವ ವಾಹನ ಸಂಚಾರದ ಶಬ್ದದಿಂದ ನಿಮ್ಮ ವಾಸದ ಕ್ಷೇತ್ರಗಳನ್ನು ರಕ್ಷಿಸುವುದು.
ವಾಹನ ಸಂಚಾರದ ಶಬ್ದವು ತೀವ್ರವಾಗಿ ಬೆಳೆಯುತ್ತಿರುವುದಾದರೂ, ನಿಮ್ಮ ವಾಹನದೊಳಗಿನ ಸದ್ದಿನ ಮಟ್ಟಗಳನ್ನು ಕಡಮೆಗೊಳಿಸಲು, ವಾಹನ ತಯಾರಕರು ಸತತವಾಗಿ ಹೊಸ ಸಾಮಗ್ರಿಗಳನ್ನು ಮತ್ತು ವಿಧಾನಗಳನ್ನು ವಿಕಸಿಸುತ್ತಿದ್ದಾರೆ. ನಿಮ್ಮ ವಾಹನಕ್ಕೆ ಜೋಡಿಸಲ್ಪಟ್ಟ, ಹೆಚ್ಚು ಶಬ್ದಮಾಡದ ಟೈಅರ್ಗಳೂ ಸಹಾಯಮಾಡುತ್ತವೆ. ಅನೇಕ ದೇಶಗಳಲ್ಲಿ, ವಿಭಿನ್ನ ಪ್ರಕಾರಗಳ ರಸ್ತೆಯ ಮೇಲ್ಮೈಗಳೊಂದಿಗೆ ನಡೆಸಲ್ಪಟ್ಟ ಪ್ರಯೋಗಗಳು, “ಪಿಸುಗುಟ್ಟುವ ಜಲ್ಲಿಕಲ್ಲು”ಗಳಂತಹ ಉತ್ಪನ್ನಗಳನ್ನು ತಯಾರಿಸಿವೆ. ಇದರಲ್ಲಿ ಒಂದಿಷ್ಟು ಜಲ್ಲಿಗಾರೆಯು ತೆರೆದಿಡಲ್ಪಟ್ಟಿರುವ ಕಾರಣ, ಅಲ್ಲಿ ಗೊತ್ತುಗುರಿಯಿಲ್ಲದ ಟೈಅರ್ ಸಂಪರ್ಕ ಮಾತ್ರವಿರುತ್ತದೆ. ಈ ಮೇಲ್ಮೈಯ ಬಳಕೆಯು, ಹಗುರವಾದ ವಾಹನಗಳಿಗೆ ಎರಡು ಡೆಸಿಬೆಲ್ಗಳಷ್ಟು ಮತ್ತು ಭಾರವಾದ ಟ್ರಕ್ಕುಗಳಿಗೆ ಒಂದು ಡೆಸಿಬೆಲ್ನಷ್ಟು ಮೊತ್ತದಿಂದ ಶಬ್ದದ ಮಟ್ಟಗಳನ್ನು ಕಡಮೆಮಾಡುತ್ತದೆಂದು ವರದಿಸಲಾಗಿದೆ. ಇದು ಮಹತ್ತರವಾಗಿ ತೋರಿಬರದಿದ್ದರೂ, ಸರಾಸರಿಯಾಗಿ ಮೂರು ಡೆಸಿಬೆಲ್ಗಳ ಇಳಿತವು, ವಾಹನ ಸಂಚಾರದಿಂದ ಬರುವ ಶಬ್ದವನ್ನು 50 ಪ್ರತಿಶತದಷ್ಟು ಕಡಮೆಮಾಡುವುದಕ್ಕೆ ಸಮಾನವಾಗಿದೆ!
ರಸ್ತೆಯನ್ನು ನಿರ್ಮಿಸುವವರು ಈಗ, ಎರಡೂ ಬದಿಗಳಲ್ಲಿ ತಡೆಗಟ್ಟುಗಳನ್ನು ಇಲ್ಲವೆ ಮಣ್ಣಿನ ದಿಣ್ಣೆಗಳಿಂದ ಮರೆಮಾಡಲ್ಪಟ್ಟಿರುವ ಹೆದ್ದಾರಿಗಳನ್ನು ರಚಿಸಿ, ಹೀಗೆ ಶಬ್ದವನ್ನು ಪರಿಣಾಮಕಾರಿಯಾಗಿ ಕಡಮೆಗೊಳಿಸುತ್ತಾರೆ. ಇದಕ್ಕೆ ಸ್ಥಳಾವಕಾಶವಿಲ್ಲದಿದ್ದರೂ, ವಿಶೇಷವಾಗಿ ರಚಿಸಲ್ಪಟ್ಟ ಬೇಲಿಗಳು—ಪೂರ್ವ ಲಂಡನಿನಲ್ಲಿ, ಹೆಣೆದ ವಿಲೋ ರೆಂಬೆಗಳು ಮತ್ತು ನಿತ್ಯಹಸಿರು ಗಿಡಗಳಿಂದ ಮಾಡಲ್ಪಟ್ಟಂತಹ ಒಂದು ಬೇಲಿ—ಹೆದ್ದಾರಿಯ ಹತ್ತಿರವಿರುವ ನಿವಾಸಿಗಳನ್ನು ಅನಾವಶ್ಯಕವಾದ ಶಬ್ದದಿಂದ ರಕ್ಷಿಸುತ್ತವೆ.
ತಬ್ಬಿಬ್ಬಾಗಿಸುವ ಶಬ್ದಗಳನ್ನು ನಿಸ್ತೇಜ (ವೈಟ್) ಶಬ್ದ—ಉದಾಹರಣೆಗೆ, ಸಮಸ್ಥಿತಿ ಇಲ್ಲವೆ ರಭಸದಿಂದ ನುಗ್ಗುವ ಗಾಳಿ—ವೆಂಬುದಾಗಿ ಕರೆಯಲ್ಪಟ್ಟಿರುವ ಶಬ್ದದಿಂದ ಅಡಗಿಸುವುದು, ಕಛೇರಿಗಳಂತಹ ಕೆಲವು ಪರಿಸರಗಳಲ್ಲಿ ಉಪಯುಕ್ತವಾಗಿರಬಲ್ಲದು.* ಜಪಾನಿನಲ್ಲಿ, ನಿಶಬ್ದ ಪಿಯಾನೊಗಳು ಮಾರುಕಟ್ಟೆಗೆ ಬಂದಿವೆ. ತಂತಿಗಳನ್ನು ಮೀಟುವ ಬದಲಿಗೆ, ಸುತ್ತಿಗೆಯು ನುಡಿಸುವವನ ಕರ್ಣವಾಣಿ (ಇಅರ್ಫೋನ್)ಗಳಲ್ಲಿ ಸ್ವರವನ್ನು ಉತ್ಪಾದಿಸುವ ಒಂದು ವಿದ್ಯುತ್ತಿನ ಪ್ರವಾಹಮಾರ್ಗವನ್ನು ಸಕ್ರಿಯಗೊಳಿಸುತ್ತದೆ.
ತಾವು ಯಾವುದನ್ನು ಶಬ್ದಪ್ರತಿರೋಧಕ (ಆ್ಯನ್ಟಿ-ನಾಯ್ಸ್)ವೆಂದು ಕರೆಯುತ್ತಾರೊ ಅದರ ಉತ್ಪಾದನೆಯ ಸಂಶೋಧನೆ ನಡೆಸುತ್ತಾ, ವಿಜ್ಞಾನಿಗಳು ಈಗಾಗಲೇ ದೀರ್ಘ ತಾಸುಗಳನ್ನು ವ್ಯಯಿಸಿದ್ದಾರೆ. ಮೂಲಭೂತವಾಗಿ, ಇದು ಶಬ್ದದ ಪರಿಣಾಮಗಳನ್ನು ತೊಡೆದುಹಾಕುವ ಕಂಪನಗಳನ್ನು ಉಂಟುಮಾಡಲಿಕ್ಕಾಗಿ, ಸದ್ದಿನ ಮತ್ತೊಂದು ಮೂಲವನ್ನು ಉಪಯೋಗಿಸುವುದನ್ನು ಒಳಗೊಳ್ಳುತ್ತದೆ. ನಿಶ್ಚಯವಾಗಿಯೂ, ಇದು ಹೆಚ್ಚಿನ ಸಜ್ಜನ್ನು ಮತ್ತು ಹೆಚ್ಚಿನ ವೆಚ್ಚವನ್ನು ಒಳಗೊಳ್ಳುತ್ತದೆ ಮತ್ತು ಸಮಸ್ಯೆಯ ಮೂಲವನ್ನು ನಿಜವಾಗಿಯೂ ತೆಗೆದುಬಿಡುವುದಿಲ್ಲ. “ಜನರು ಶಬ್ದವನ್ನು, ಧ್ವನಿಗೆ ಸಂಬಂಧಿಸಿದ ಕಸವಾಗಿ ಪರಿಗಣಿಸಲು ತೊಡಗುವ ತನಕ, ಶಬ್ದಪ್ರತಿರೋಧಕವು ಒಂದು ಗಳಿಗೆ ಮೌನವನ್ನು ಪಡೆದುಕೊಳ್ಳುವ ಏಕೈಕ ಮಾರ್ಗವಾಗಿರಬಹುದು” ಎಂಬುದಾಗಿ ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಗಮನಿಸುತ್ತದೆ. ಅದು ಸಂಭವನೀಯ, ಆದರೆ ಶಬ್ದ ಮಾಲಿನ್ಯಕ್ಕೆ ಮೌನವು ಪರಿಹಾರವಾಗಿದೆಯೊ?
ನಿಮ್ಮ ಮನೆಗೆ ಮತ್ತು ನಿಮ್ಮ ನೆರೆಹೊರೆಗೆ ಶಾಂತಿ ಮತ್ತು ನೆಮ್ಮದಿಯ ಯಾವ ಪ್ರತೀಕ್ಷೆಯಾದರೂ ನಿಜವಾಗಿಯೂ ಇದೆಯೊ? ನಮ್ಮ ಮುಂದಿನ ಲೇಖನವು ನಿಜವಾದ ನಿರೀಕ್ಷೆಯನ್ನು ನೀಡುತ್ತದೆ.
[ಅಧ್ಯಯನ ಪ್ರಶ್ನೆಗಳು]
ಶಬ್ದದ ಮಟ್ಟಗಳು, ಸದ್ದನ್ನು ಡೆಸಿಬೆಲ್ಗಳಲ್ಲಿ ಅಳೆಯುವ ಒಂದು ಮೀಟರ್ನ ಬಳಕೆಯಿಂದ ಸಾಮಾನ್ಯವಾಗಿ ನಿರ್ಧರಿಸಲ್ಪಡುತ್ತವೆ. ಕಿವಿಯು ಕೆಲವು ಕಂಪನ ಪ್ರಮಾಣಗಳನ್ನು ಬೇರೆಯವುಗಳಿಗಿಂತ ಹೆಚ್ಚು ತೀಕ್ಷ್ಣವಾಗಿ ಆಲಿಸುವುದರಿಂದ, ಅದೇ ರೀತಿಯಲ್ಲಿ ಪ್ರತಿಕ್ರಿಯಿಸುವಂತೆ ಮೀಟರನ್ನು ರಚಿಸಲಾಗಿದೆ.
ನಿರ್ವರ್ಣ ಬೆಳಕು, ಬೆಳಕಿನ ವರ್ಣಪಟಲದಲ್ಲಿರುವ ಎಲ್ಲ ಸ್ಪಂದನ ಪ್ರಮಾಣಗಳ ಮಿಶ್ರಣವಾಗಿರುವಂತೆಯೇ, ನಿಸ್ತೇಜ ಶಬ್ದವು ಶ್ರವ್ಯ ವ್ಯಾಪ್ತಿಯೊಳಗಿನ ಎಲ್ಲ ಪ್ರಮಾಣಗಳನ್ನು ಪಡೆದುಕೊಂಡಿರುವ—ಸರಿಸುಮಾರಾಗಿ ದೊಡ್ಡ ಧ್ವನಿಯ ಸಮಾನವಾದ ಮಟ್ಟಗಳಲ್ಲಿನ—ಸದ್ದಾಗಿದೆ.
[ಪುಟ 7 ರಲ್ಲಿರುವ ಚೌಕ]
ಒಬ್ಬ ಗದ್ದಲಭರಿತ ನೆರೆಯವರಾಗಿರುವುದನ್ನು ನೀವು ತ್ಯಜಿಸಬಲ್ಲ ವಿಧ
● ನೀವು ಗದ್ದಲಭರಿತವಾದ ಏನನ್ನಾದರೂ ಮಾಡುವಾಗ, ನಿಮ್ಮ ನೆರೆಯವರನ್ನು ಪರಿಗಣಿಸಿರಿ ಮತ್ತು ಮುಂಚಿತವಾಗಿಯೇ ಅವರಿಗೆ ತಿಳಿಸಿರಿ.
● ಶಬ್ದವನ್ನು ಕಡಮೆಮಾಡುವಂತೆ ನೆರೆಯವನಿಂದ ಕೇಳಿಕೊಳ್ಳಲ್ಪಟ್ಟಾಗ ಸಹಕರಿಸಿರಿ.
● ನಿಮ್ಮ ಸುಖಾನುಭವವು ನಿಮ್ಮ ನೆರೆಯವರ ಸಂಕಟಕ್ಕೆ ನಡೆಸಬಾರದೆಂಬುದನ್ನು ಗ್ರಹಿಸಿರಿ.
● ಶಬ್ದ ಮತ್ತು ಕಂಪನವು, ಸಭಾಂಗಣ ಮತ್ತು ಮಹಡಿಗಳ ಮೂಲಕ ಸುಲಭವಾಗಿ ರವಾನಿಸಲ್ಪಡುತ್ತದೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ.
● ಮನೆವಾರ್ತೆಯ ಗದ್ದಲಭರಿತ ಸಜ್ಜನ್ನು ಮೆತ್ತೆ (ಪ್ಯಾಡಿಂಗ್)ಯ ಮೇಲಿಡಿರಿ.
● ಮನೆಯಿಂದ ಮತ್ತು ಕಾರಿನಿಂದ ಬರುವ ಸುಳ್ಳು ಎಚ್ಚರಿಕೆ (ಫಾಲ್ಸ್ ಅಲಾರ್ಮ್)ಗಳನ್ನು ನಿರ್ವಹಿಸಲು ಯಾರನ್ನಾದರೂ ಕರೆಯಸಾಧ್ಯವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ.
● ರಾತ್ರಿಯಲ್ಲಿ ತಡವಾಗಿ ಗದ್ದಲಭರಿತ ಕೆಲಸವನ್ನು ಮಾಡಬೇಡಿರಿ ಇಲ್ಲವೆ ಗದ್ದಲಭರಿತ ಗೃಹಬಳಕೆಯ ಸಾಧನಗಳನ್ನು ಉಪಯೋಗಿಸಬೇಡಿರಿ.
● ನಿಮ್ಮ ನೆರೆಯವರಿಗೆ ಕಿರಿಕಿರಿಯನ್ನುಂಟುಮಾಡುವ ಮಟ್ಟದಲ್ಲಿ ಸಂಗೀತವನ್ನು ಹಾಕಬೇಡಿರಿ.
● ನಾಯಿಗಳನ್ನು ದೀರ್ಘ ಅವಧಿಗಳ ವರೆಗೆ ಒಂಟಿಯಾಗಿ ಬಿಡಬೇಡಿರಿ.
● ಮಹಡಿಯ ಮೇಲೆ ಜಿಗಿದು, ಕೆಳಗಿನ ಕೋಣೆಯಲ್ಲಿರುವ ಜನರಿಗೆ ತೊಂದರೆಯನ್ನು ಉಂಟುಮಾಡುವಂತೆ ಮಕ್ಕಳಿಗೆ ಅನುಮತಿ ನೀಡಬೇಡಿರಿ.
● ರಾತ್ರಿಯಲ್ಲಿ ಕಾರಿನ ಹಾರ್ನ್ಗಳನ್ನು ಧ್ವನಿಸಬೇಡಿ, ಬಾಗಿಲುಗಳನ್ನು ರಭಸವಾಗಿ ಮುಚ್ಚಬೇಡಿರಿ, ಇಲ್ಲವೆ ಎಂಜಿನ್ಗಳನ್ನು ಹೆಚ್ಚಿನ ವೇಗದಲ್ಲಿ ಚಲಾಯಿಸಬೇಡಿ.
[ಪುಟ 8 ರಲ್ಲಿರುವ ಚೌಕ]
ಶಬ್ದ ಮತ್ತು ನೀವು
“ಇಂದು ಬ್ರಿಟನಿನಲ್ಲಿ ಶಬ್ದವು ಅತ್ಯಂತ ವ್ಯಾಪಕವಾದ ಔದ್ಯೋಗಿಕ ಅಪಾಯಸಂಭವವಾಗಿದೆ, ಮತ್ತು ಅದರ ಸಾಮಾನ್ಯ ಪರಿಣಾಮವು ಕಿವುಡುತನವಾಗಿದೆ” ಎಂದು ದ ಟೈಮ್ಸ್ ಗಮನಿಸುತ್ತದೆ. ಕೆಲವು ವೃತ್ತಿಪರ ಆರೋಗ್ಯ ಅಧ್ಯಯನಗಳು ಸೂಚಿಸುವುದೇನೆಂದರೆ, 85 ಡೆಸಿಬೆಲ್ಗಳಿಗಿಂತಲೂ ಹೆಚ್ಚಿನ ಪ್ರಮಾಣದ ಶಬ್ದವು ಭ್ರೂಣಕ್ಕೆ ಹಾನಿಯನ್ನುಂಟುಮಾಡಬಲ್ಲದು. ಆ ಮಗುವಿನ ಶ್ರವಣಶಕ್ತಿಯು ಹಾನಿಗೊಂಡು, ಮಗುವಿನಲ್ಲಿ ಹಾರ್ಮೋನ್ ಸಂಬಂಧಿತ ತೊಂದರೆಗಳು ಅಷ್ಟೇ ಅಲ್ಲದೆ ಜನನ ದೋಷಗಳಿರಬಹುದು.
ಗಟ್ಟಿಯಾದ ಶಬ್ದಕ್ಕೆ ಒಡ್ಡುವಿಕೆಯು, ರಕ್ತನಾಳಗಳನ್ನು ಸಂಕುಚಿತಗೊಳಿಸಿ, ನಿಮ್ಮ ಅಂಗಾಂಗಗಳಿಗೆ ರಕ್ತದ ಪ್ರವಾಹವನ್ನು ಕಡಮೆಗೊಳಿಸುತ್ತದೆ. ಇದಕ್ಕೆ ಪ್ರತಿಯಾಗಿ, ಕೆಲವೊಮ್ಮೆ ಹೃದಯಾತಿಸ್ಪಂದನಗಳಿಗೆ ಮತ್ತು ಎದೆಸೆಳೆತಕ್ಕೂ ನಡೆಸುತ್ತಾ, ರಕ್ತದೊತ್ತಡವನ್ನು ಅಧಿಕಗೊಳಿಸುವ ಮತ್ತು ನಿಮ್ಮ ಹೃದಯಬಡಿತವನ್ನು ಹೆಚ್ಚಿಸುವ ಹಾರ್ಮೋನ್ಗಳನ್ನು ಉತ್ಪಾದಿಸುವ ಮೂಲಕ ನಿಮ್ಮ ದೇಹವು ಪ್ರತಿಕ್ರಿಯಿಸುತ್ತದೆ. ಶಬ್ದವು ನಿಮ್ಮ ದಿನಚರಿಗೆ ಭಂಗವನ್ನುಂಟುಮಾಡುವಾಗ, ಇತರ ಸಮಸ್ಯೆಗಳು ಸಂಭವಿಸಬಲ್ಲವು. ಅರ್ಧಂಬರ್ಧ ನಿದ್ರೆಯು ನಿಮ್ಮ ಹಗಲಿನ ಪ್ರತಿಕ್ರಿಯೆಗಳನ್ನು ಬಾಧಿಸಬಲ್ಲದು.
ಶಬ್ದವು ನೀವು ಮಾಡುವಂತಹ ಕೆಲಸದ ಒಟ್ಟು ವೇಗವನ್ನು ಪ್ರಭಾವಿಸದೆ ಇರಬಹುದಾದರೂ, ನೀವು ಮಾಡುವಂತಹ ತಪ್ಪುಗಳ ಸಂಖ್ಯೆಯನ್ನು ಪ್ರಭಾವಿಸಬಲ್ಲದು.
[ಪುಟ 0 ರಲ್ಲಿರುವ ಚೌಕ]
ಕೆಲಸದ ಸ್ಥಳದಲ್ಲಿ ಸಂರಕ್ಷಣೆ
ಕೆಲಸದ ಸ್ಥಳದಲ್ಲಿ ಶಬ್ದವು ಒಂದು ಸಮಸ್ಯೆಯಾಗಿರುವುದನ್ನು ನೀವು ಕಂಡುಕೊಳ್ಳುವಲ್ಲಿ, ಯಾವುದಾದರೊಂದು ಪ್ರಕಾರದ ಕಿವಿಯ ಸಂರಕ್ಷಣೆಯನ್ನು ಹಾಕಿಕೊಳ್ಳುವುದನ್ನು ಪರಿಗಣಿಸಿರಿ.* ಕಿವಿಕಾಪು (ಇಯರ್-ಮಫ್)ಗಳು ನಿಮ್ಮ ತಲೆಯ ಸುತ್ತಲೂ ಹೆಡ್ಫೋನ್ಗಳಂತೆ ಹೊಂದಿಕೊಂಡು, ಶಬ್ದದ ಮಟ್ಟಗಳು ಉಚ್ಚವಾಗಿರುವ ಸ್ಥಳಗಳಲ್ಲಿ ಸಾಮಾನ್ಯವಾಗಿ ಪರಿಣಾಮಕಾರಿಯಾಗಿವೆ. ಅವುಗಳನ್ನು ಧರಿಸಿಕೊಂಡ ಮೇಲೂ ನೀವು ಶಾಬ್ದಿಕ ಸಂದೇಶಗಳನ್ನು ಮತ್ತು ಯಂತ್ರದ ಎಚ್ಚರಿಕೆಯ ಸಂಕೇತಗಳನ್ನು—ಸದ್ದು ಎಲ್ಲಿಂದ ಬರುತ್ತದೆಂಬುದನ್ನು ಸೂಚಿಸುವುದು ನಿಮಗೆ ಕಷ್ಟಕರವಾಗುವಂತೆ ಅವು ಮಾಡಬಹುದಾದರೂ—ಕೇಳಸಾಧ್ಯವಿರುವುದು ಅವುಗಳಲ್ಲಿರುವ ಪ್ರಯೋಜನವಾಗಿದೆ. ಕಿವಿಬಿರಡೆ (ಇಯರ್-ಪ್ಲಗ್)ಗಳು ನಿಮಗೆ ತಕ್ಕ ಸೈಸಿನವುಗಳಾಗಿರಬೇಕು ಮತ್ತು ನಿಮಗೆ ಕಿವಿಯ ರೋಗ ಇಲ್ಲವೆ ಕಿವಿಯ ನಾಳದ ಉರಿಯೂತವಿದ್ದಲ್ಲಿ ಅವು ನಿಮಗೆ ಅನುಚಿತವಾಗಿವೆ.
ಯಂತ್ರವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು, ಕಂಪನಗಳನ್ನು ಕಡಮೆಮಾಡಬಲ್ಲದು. ಉಪಕರಣವನ್ನು ರಬ್ಬರಿನ ಮೆತ್ತೆಗಳ ಮೇಲೆ ಇರಿಸುವುದು ಮತ್ತು ಗದ್ದಲಭರಿತ ಯಂತ್ರವನ್ನು ಪ್ರತ್ಯೇಕವಾಗಿ ಇಡುವುದೂ ಶಬ್ದ ಮಾಲಿನ್ಯವನ್ನು ಕಡಮೆಗೊಳಿಸಲು ಕಾರ್ಯನಡಿಸುವುದು.
*ತಮ್ಮ ಕಾರ್ಮಿಕರು ತಮ್ಮ ಶ್ರವಣಶಕ್ತಿಗಾಗಿ ಸಾಕಷ್ಟು ಸಂರಕ್ಷಣೆಯನ್ನು ಮಾಡಿಕೊಳ್ಳುವುದನ್ನು ಧಣಿಗಳು ಖಚಿತಪಡಿಸಿಕೊಳ್ಳುವಂತೆ ಅನೇಕ ದೇಶಗಳಲ್ಲಿನ ಶಾಸನವು ಕೇಳಿಕೊಳ್ಳುತ್ತದೆ.
[ಪುಟ 9 ರಲ್ಲಿರುವ ಚಿತ್ರ]
ಸುಲಭ ಸಾಗಣೆಯ (ಮೊಬೈಲ್) ಸಮಾಜದ ಮೂಲಕ ಉಂಟುಮಾಡಲ್ಪಡುವ ಶಬ್ದದಿಂದ ನೀವು ನಿಮ್ಮನ್ನು ಹೇಗೆ ಸಂರಕ್ಷಿಸಿಕೊಳ್ಳಬಲ್ಲಿರಿ?