ಜಗತ್ತನ್ನು ಗಮನಿಸುವುದು
ಟೋಕ್ಯೊವಿನ ಪ್ರಯಾಣಿಕ ಕಾಗೆಗಳು
ಜಪಾನಿನ ಟೋಕ್ಯೊದಲ್ಲಿರುವ ಕಾಗೆಗಳು, ಪ್ರತಿದಿನ ನಗರ ಮತ್ತು ಉಪನಗರಗಳ ನಡುವೆ ಪ್ರಯಾಣಿಸುವ ಹವ್ಯಾಸವನ್ನು ಬೆಳೆಸಿಕೊಂಡಿವೆಯೆಂದು ದ ಡೇಲಿ ಯೊಮೀಯುರೀ ವರದಿಸುತ್ತದೆ. ಇದು ಕೆಲವು ವರ್ಷಗಳ ಹಿಂದೆ ಆರಂಭಗೊಂಡಿತೆಂದು ಪಕ್ಷಿ ಪರಿಣತರು ಹೇಳುತ್ತಾರೆ. ಆಗ ಟೋಕ್ಯೊವಿನ ಉದ್ಯಾನವನಗಳು ಮತ್ತು ದೇವಾಲಯದ ಆವರಣಗಳಲ್ಲಿದ್ದ ಕಾಗೆಗಳ ಸಂಖ್ಯೆಯು ಎಷ್ಟೊಂದು ಹೆಚ್ಚಾಯಿತೆಂದರೆ, ಗೂಡುಗಳನ್ನು ಬೇರೆ ಕಡೆ ಕಟ್ಟಿಕೊಳ್ಳುವಂತೆ ಕಾಗೆಗಳು ಒತ್ತಾಯಿಸಲ್ಪಟ್ಟವು. ಉಪನಗರ ಜೀವನದ ಸೌಕರ್ಯಗಳನ್ನು ಕಾಗೆಗಳು ಕಂಡುಕೊಂಡದ್ದು ಆಗಲೇ. ಆದರೂ ಅವುಗಳು ಕಳೆದುಕೊಂಡ ಒಂದು ವಿಷಯವು, ನಗರದ ರುಚಿಕರ ಆಹಾರ—ಕಸ ಹಾಗೂ ವಿಸರ್ಜಿಸಲ್ಪಟ್ಟ ಎಂಜಲು. “ಸಂಬಳ ಸಿಗುವ ಕಾರ್ಮಿಕರಂತಹದ್ದೇ ಆದ ಪ್ರಯಾಣಿಕ ನಮೂನೆಗಳನ್ನು” ವಿಕಸಿಸಿಕೊಳ್ಳುವ ಮೂಲಕ ಅವು ಈ ಸಮಸ್ಯೆಯನ್ನು ಜಯಿಸಿದವು. “ಆಹಾರವನ್ನು ಹುಡುಕಲಿಕ್ಕಾಗಿ ಅವು ಬೆಳಗ್ಗೆ ನಗರದ ಕ್ಷೇತ್ರಗಳಿಗೆ ಹಾರಿಹೋಗಿ, ಸಂಜೆ ಉಪನಗರಗಳಿಗೆ ಹಿಂದಿರುಗುತ್ತವೆ” ಎಂಬುದಾಗಿ ದ ಡೇಲಿ ಯೊಮೀಯುರೀ ಹೇಳುತ್ತದೆ.
ನೈಸರ್ಗಿಕ ಸಂಪತ್ತು ಅಪಾಯಕ್ಕೊಳಗಾಗುತ್ತದೆ
ಸಸ್ಯ ಹಾಗೂ ಪ್ರಾಣಿ ಜೀವರಾಶಿಯಲ್ಲಿ ಸಮೃದ್ಧವಾಗಿರುವ ಭಾರತದ ಈಶಾನ್ಯ ಕ್ಷೇತ್ರವು, ಸಸ್ಯಗಳಲ್ಲಿ 650 ಜಾತಿಗಳು ಮತ್ತು ಪ್ರಾಣಿಗಳಲ್ಲಿ 70 ಜಾತಿಗಳು ಅಪಾಯದಲ್ಲಿರುವುದಾಗಿ ಈಗ ಪಟ್ಟಿಮಾಡುತ್ತದೆ. ಬಾಂಗ್ಲಾದೇಶದ ಮೇರೆಯಲ್ಲಿರುವ ಮೇಘಾಲಯ ರಾಜ್ಯದಲ್ಲಿನ ನಾಜೂಕಾದ ಪರಿಸರವ್ಯವಸ್ಥೆಯು, ಎಲ್ಲಿ ಜೈವಿಕ ವೈವಿಧ್ಯವು ಗಂಡಾಂತರದಲ್ಲಿದೆಯೊ ಆ 18 ‘ಅಪಾಯದ ಸ್ಥಳ’ಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. ದಿ ಏಷ್ಯನ್ ಏಜ್ ಪತ್ರಿಕೆಯಲ್ಲಿ ವರದಿಸಲ್ಪಟ್ಟಂತೆ, ಆ ಪರಿಸರವ್ಯವಸ್ಥೆಯು, ಬೇರೆ ಅಂಶಗಳೊಂದಿಗೆ ಮಾನವ ಧ್ವಂಸ ಹಾಗೂ ಕಳ್ಳಬೇಟೆಯಿಂದಾಗಿ ಆಕ್ರಮಣಕ್ಕೊಳಗಾಗಿದೆ. ಈ ಏಳು ಈಶಾನ್ಯ ಭಾರತೀಯ ರಾಜ್ಯಗಳ ಜೈವಿಕ ವೈವಿಧ್ಯವು, ಆ ದೇಶದ ಇತರ ಭಾಗಗಳಿಗಿಂತಲೂ ಹೆಚ್ಚು ನಾಜೂಕಾದದ್ದೂ ಪರಿಸರೀಯವಾಗಿ ಸೂಕ್ಷ್ಮವಾದದ್ದೂ ಆಗಿದೆಯೆಂದು ಪರಿಗಣಿಸಲಾಗಿದೆ.
ಶಿಶುವಿಗೆ ಮೊಲೆಯುಣಿಸುವ ಬಿಕ್ಕಟ್ಟು
“ಎರಡು ದಶಕಗಳಿಂದ ವೈದ್ಯರು ಮತ್ತು ಸಾರ್ವಜನಿಕ ಆರೋಗ್ಯ ಆಯೋಗಗಳು, ಬಡ ದೇಶಗಳಲ್ಲಿರುವ ಹೊಸ ತಾಯಂದಿರಿಗೆ ಒಂದೇ ರೀತಿಯ ಸಲಹೆಯನ್ನು ನೀಡಿದ್ದಾರೆ: ನಿಮ್ಮ ಶಿಶುಗಳ ಆರೋಗ್ಯವನ್ನು ಕಾಪಾಡಲು ಅವುಗಳಿಗೆ ಮೊಲೆಯುಣಿಸಿರಿ,” ಎಂದು ದ ನ್ಯೂ ಯಾರ್ಕ್ ಟೈಮ್ಸ್ ಹೇಳುತ್ತದೆ. “ಆದರೆ ಈಗ, ಏಡ್ಸ್ ಪಿಡುಗು ಆ ಸರಳವಾದ ಸಲಹೆಯನ್ನು ತಲೆಕೆಳಗಾಗಿಸುತ್ತಿದೆ. ಹೆಚ್ಚಿನ ಸಂದರ್ಭಗಳಲ್ಲಿ ಏಡ್ಸ್ ವಿಷಾಣುವಿನಿಂದ ಸೋಂಕಿತರಾದ ತಾಯಂದಿರು ಎದೆಹಾಲಿನ ಮೂಲಕ ಅದನ್ನು ರವಾನಿಸಸಾಧ್ಯವೆಂದು ಅಧ್ಯಯನಗಳು ತೋರಿಸುತ್ತಿವೆ. . . . ಏಚ್.ಐ.ವಿ ಇರುವ ಎಲ್ಲ ಶಿಶುಗಳಲ್ಲಿ ಮೂರನೆಯ ಒಂದಂಶದಷ್ಟು ಶಿಶುಗಳು ಆ ವಿಷಾಣುವನ್ನು ತಮ್ಮ ತಾಯಂದಿರ ಹಾಲಿನಿಂದ ಪಡೆದುಕೊಂಡವೆಂದು ವಿಶ್ವಸಂಸ್ಥೆ ಇತ್ತೀಚೆಗೆ ಅಂದಾಜುಮಾಡಿತು.” ಬದಲಿಯು ಒಂದು ಶಿಶು ಆಹಾರಮಿಶ್ರಣವಾಗಿದೆ, ಆದರೆ ಅದಕ್ಕೆ ಅದರದ್ದೇ ಆದ ಸಮಸ್ಯೆಗಳಿವೆ. ಅನೇಕ ದೇಶಗಳಲ್ಲಿ ತಾಯಂದಿರಿಗೆ ಆ ಆಹಾರಮಿಶ್ರಣವನ್ನು ಖರೀದಿಸಲು ಇಲ್ಲವೆ ಸೀಸೆಗಳನ್ನು ಕ್ರಿಮಿಶುದ್ಧಿಮಾಡಲು ಸಾಧ್ಯವಾಗಿಲ್ಲ ಮತ್ತು ಅವರಿಗೆ ಶುದ್ಧವಾದ ನೀರೂ ದೊರೆಯುವುದಿಲ್ಲ. ಫಲಸ್ವರೂಪವಾಗಿ, ಶಿಶುಗಳು ಅತಿಭೇದಿ ಮತ್ತು ನಿರ್ಜಲೀಕರಣ, ಅಲ್ಲದೆ ಉಸಿರಾಟದ ಮತ್ತು ಜಠರ ಹಾಗೂ ಕರುಳುಗಳ ಕಾಯಿಲೆಗಳಿಂದಲೂ ಕಷ್ಟಾನುಭವಿಸುತ್ತವೆ. ಬಡ ಕುಟುಂಬಗಳು ಆ ಆಹಾರಮಿಶ್ರಣಕ್ಕೆ ಬಹಳಷ್ಟು ನೀರನ್ನು ಸೇರಿಸುತ್ತವೆ, ಅದು ಶಿಶುಗಳ ನ್ಯೂನಪೋಷಣೆಯಲ್ಲಿ ಫಲಿಸುತ್ತದೆ. ಎರಡೂ ವಿವಾದಾಂಶಗಳನ್ನು ಸರಿದೂಗಿಸಲು ಆರೋಗ್ಯಾಧಿಕಾರಿಗಳು ಈಗ ಪ್ರಯಾಸಪಡುತ್ತಿದ್ದಾರೆ. ಲೋಕವ್ಯಾಪಕವಾಗಿ ಪ್ರತಿದಿನ, ಶಿಶುಗಳು ಮತ್ತು ಮಕ್ಕಳಲ್ಲಿ ಏಚ್‌ಐವಿ ಸೋಂಕಿನ 1,000ಕ್ಕಿಂತಲೂ ಹೆಚ್ಚಿನ ಹೊಸ ಕೇಸುಗಳಿವೆ.
ಅಸಾಮಾನ್ಯವಾದ ಸ್ನೇಹ
ಇರುವೆಗಳು ಮತ್ತು ಆಫ್ರಿಕದ ಅಕೇಷಿಯ ಮರಗಳ ನಡುವಿನ ಸಂಬಂಧವನ್ನು ಕಂಡು ವಿಜ್ಞಾನಿಗಳು ಬಹು ಸಮಯದಿಂದ ಆಶ್ಚರ್ಯಪಟ್ಟಿದ್ದಾರೆ. ಮರಗಳು ಇರುವೆಗಳಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸುತ್ತವೆ. ಸರದಿಯಾಗಿ ಇರುವೆಗಳು, ಮರಗಳಿಗೆ ಹಾನಿಯನ್ನುಂಟುಮಾಡುವ ಕೀಟಗಳನ್ನು ಆಕ್ರಮಿಸಿ, ಎಲೆಗಳನ್ನು ತಿನ್ನುವ ಪ್ರಾಣಿಗಳನ್ನು ಕುಟುಕುತ್ತವೆ. ತಮ್ಮ ಉಳಿಯುವಿಕೆಗಾಗಿ ಮರಗಳು ಈ ಸಂರಕ್ಷಣೆಯ ಮೇಲೆ ಅವಲಂಬಿಸುತ್ತಿರುವಂತೆ ತೋರುತ್ತದೆ. ಆದರೂ ತಮ್ಮ ಪುಷ್ಪಗಳಿಗೆ ಪರಾಗಾಧಾನ ಮಾಡಲು ಆ ಮರಗಳಿಗೆ ಹಾರಾಡುವ ಕೀಟಗಳೂ ಬೇಕು. ಇದರ ನೋಟದಲ್ಲಿ, ಪರಾಗಾಧಾನ ಮಾಡುವ ಕೀಟಗಳಿಗೆ ತಮ್ಮ ಕೆಲಸವನ್ನು ಮಾಡುವ ಅವಕಾಶವು ಹೇಗೆ ಸಿಗುತ್ತದೆ? ವಿಜ್ಞಾನ ಪತ್ರಿಕೆಯಾದ ನೇಚರ್‌ಗನುಸಾರ, ಮರಗಳು “ಗರಿಷ್ಠಮಟ್ಟದ ಪುಷ್ಪ ಫಲಶಕ್ತಿಯನ್ನು” ಪಡೆದಿರುವಾಗ, ಇರುವೆಗಳನ್ನು ಹಿಮ್ಮೆಟ್ಟಿಸುವಂತೆ ತೋರುವ ಒಂದು ರಸಾಯನವನ್ನು ಅವು ಹೊರಸೂಸುತ್ತವೆ. “ಆ ನಿರ್ಣಾಯಕ ಗಳಿಗೆಯಲ್ಲಿ” ಪುಷ್ಪಗಳನ್ನು ಸಂದರ್ಶಿಸುವಂತೆ ಇದು ಕೀಟಗಳಿಗೆ ಅನುಮತಿ ನೀಡುತ್ತದೆ. ಅನಂತರ, ಪುಷ್ಪಗಳಿಗೆ ಪರಾಗಾಧಾನ ಮಾಡಲ್ಪಟ್ಟ ತರುವಾಯ, ಇರುವೆಗಳು ತಮ್ಮ ಕಾವಲು ಕೆಲಸಕ್ಕೆ ಹಿಂದಿರುಗುತ್ತವೆ.
ಲೋಕದ ನೈರ್ಮಲ್ಯ ಮಟ್ಟವು ಕೆಡುತ್ತದೆ
“ಬಹುಮಟ್ಟಿಗೆ 300 ಕೋಟಿಗಳಷ್ಟು ಜನರಿಗೆ—ಲೋಕದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು—ಸ್ವಲ್ಪವಾದರೂ ನಿರ್ಮಲವಾಗಿರುವ ಪಾಯಿಖಾನೆಯೂ ಲಭ್ಯವಿಲ್ಲ,” ಎಂಬುದಾಗಿ ದ ನ್ಯೂ ಯಾರ್ಕ್ ಟೈಮ್ಸ್ ವರದಿಸುತ್ತದೆ. ಯುನಿಸೆಫ್ (ವಿಶ್ವ ಸಂಸ್ಥೆಯ ಮಕ್ಕಳ ನಿಧಿ) ಇಂದ ನಡೆಸಲ್ಪಟ್ಟ ರಾಷ್ಟ್ರಗಳ ಏಳಿಗೆ ವಾರ್ಷಿಕ ಸಮೀಕ್ಷೆಯ ಭಾಗದೋಪಾದಿ ಈ ಶೋಧಾಂಶಗಳು, “ನೈರ್ಮಲ್ಯ ಸಂಖ್ಯಾಸಂಗ್ರಹಣಗಳಲ್ಲಿ ತೋರಿಸಲ್ಪಟ್ಟಂತೆ, ನೈರ್ಮಲ್ಯದ ಮಟ್ಟವು ಲೋಕವ್ಯಾಪಕವಾಗಿ ಕೆಡುತ್ತಿದೆಯೇ ಹೊರತು ಉತ್ತಮವಾಗುತ್ತಿಲ್ಲ” ಎಂಬುದನ್ನೂ ಪ್ರಕಟಪಡಿಸುತ್ತವೆ. ಉದಾಹರಣೆಗೆ, ಬಡವರಿಗೆ ಶುದ್ಧವಾದ ನೀರನ್ನು ಒದಗಿಸುವುದರಲ್ಲಿ ಪ್ರಗತಿಯನ್ನು ಮಾಡಿರುವ ಕೆಲವು ದೇಶಗಳು, ರೊಚ್ಚಿನ ವಿಸರ್ಜನೆಯ ವಿಷಯದಲ್ಲಿ ವಿಫಲವಾಗಿವೆ. ಈ ಮೂಲಭೂತ ಆರೋಗ್ಯ ಸೂತ್ರದ ಕೊರತೆಯು, ಹೊಸ ವ್ಯಾಧಿಗಳ ಹರಡುವಿಕೆಗೆ ಮತ್ತು ಹಳೆಯ ರೋಗಗಳ ಮರಳುವಿಕೆಗೆ ಮಹತ್ತರವಾಗಿ ಕೂಡಿಸಿದೆ ಎಂಬುದಾಗಿ ಆ ವರದಿಯು ಹೇಳುತ್ತದೆ. ನಿರ್ಮಲವಲ್ಲದ ಪರಿಸ್ಥಿತಿಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ಪ್ರತಿ ವರ್ಷ 20 ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು ಸಾಯುತ್ತಾರೆಂದು ಅಂದಾಜುಮಾಡಲಾಗಿದೆ. ಆ ಅಧ್ಯಯನದ ಕರ್ತೃವಾದ ಅಖ್ತರ್ ಹಮೀದ್ ಖಾನ್ ಹೇಳುವುದು: “ಮಧ್ಯಯುಗವನ್ನು ಅನುಕರಿಸುವಂತಹ ನೈರ್ಮಲ್ಯ ಮಟ್ಟವು ಇರುವಲ್ಲಿ, ಮಧ್ಯಯುಗವನ್ನು ಅನುಕರಿಸುವಂತಹ ರೋಗದ ಮಟ್ಟವೂ ಇರುವುದು.”
ಗೂಟನ್‌ಬರ್ಗ್ ಬೈಬಲು ಕಂಡುಹಿಡಿಯಲ್ಪಟ್ಟದ್ದು
15ನೆಯ ಶತಮಾನದಲ್ಲಿ ಯೋಹಾನಸ್ ಗೂಟನ್‌ಬರ್ಗ್ ಅವರಿಂದ ಮುದ್ರಿಸಲ್ಪಟ್ಟ ಬೈಬಲಿನ ಒಂದು ಭಾಗವು, ಜರ್ಮನಿಯ ರೆಂಟ್ಸ್‌ಬರ್ಗ್‌ನಲ್ಲಿರುವ ಒಂದು ಚರ್ಚಿನ ಪತ್ರಾಗಾರದಲ್ಲಿ ಕಂಡುಕೊಳ್ಳಲ್ಪಟ್ಟಿದೆ. 1996ರ ಆದಿಭಾಗದಲ್ಲಿ ಕಂಡುಕೊಳ್ಳಲ್ಪಟ್ಟ ಅನಂತರ, ಅದು ಯಥಾರ್ಥವಾದ ಗೂಟನ್‌ಬರ್ಗ್ ಬೈಬಲ್ ಎಂಬುದಾಗಿ ಘೋಷಿಸಲ್ಪಡುವ ಮುಂಚೆ, ಬೈಬಲಿನ ಆ 150 ಪುಟದ ವಿಭಾಗವು ಜಾಗರೂಕವಾಗಿ ಪರಿಶೀಲಿಸಲ್ಪಟ್ಟಿತೆಂದು, ವೀಸ್‌ಬಾಡನರ್ ಕೂರೀರ್ ವರದಿಸುತ್ತದೆ. ಲೋಕವ್ಯಾಪಕವಾಗಿ, 48 ಗೂಟನ್‌ಬರ್ಗ್ ಬೈಬಲುಗಳು ಅಸ್ತಿತ್ವದಲ್ಲಿವೆಯೆಂದು ವಿದಿತವಾಗಿದೆ, ಅದರಲ್ಲಿ 20 ಸಂಪೂರ್ಣ ಬೈಬಲುಗಳಾಗಿವೆ. “ಯೋಹಾನಸ್ ಗೂಟನ್‌ಬರ್ಗ್ ಅವರಿಂದ ಮುದ್ರಿಸಲ್ಪಟ್ಟ ಪ್ರಸಿದ್ಧವಾದ ಎರಡು ಸಂಪುಟದ ಬೈಬಲುಗಳು, ಪುಸ್ತಕ ಮುದ್ರಣದಲ್ಲಿ ಪ್ರಥಮ ಮಹಾ ಕೃತಿಯೆಂದು ಪರಿಗಣಿಸಲ್ಪಟ್ಟಿವೆ,” ಎಂಬುದಾಗಿ ಆ ವಾರ್ತಾಪತ್ರಿಕೆಯು ಹೇಳುತ್ತದೆ. ಹೊಸದಾಗಿ ಕಂಡುಹಿಡಿಯಲ್ಪಟ್ಟ ಗೂಟನ್‌ಬರ್ಗ್ ಬೈಬಲಿನ ಈ ವಿಭಾಗದಲ್ಲಿ “ಅದರ ಮೂಲ ಪುಸ್ತಕ ಸರಪಣಿಯು ಇನ್ನೂ ಭದ್ರವಾಗಿಯೇ ಇದೆ. ಬೈಬಲಿನ ಕಳುವು ಆಗದಂತೆ, ಬೈಬಲನ್ನು ಉಪದೇಶ ವೇದಿಕೆಗೆ ಕಟ್ಟಿಹಾಕಲು ಅದನ್ನು ಬಳಸಲಾಗಿತ್ತು.”