ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 4/8 ಪು. 18-21
  • ಕ್ರೈಸ್ತರು ಮತ್ತು ಜಾತಿಪದ್ಧತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕ್ರೈಸ್ತರು ಮತ್ತು ಜಾತಿಪದ್ಧತಿ
  • ಎಚ್ಚರ!—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಭಾರತದ ಜಾತಿಪದ್ಧತಿಯ ಸಂಭವನೀಯ ಮೂಲ
  • ಆಧುನಿಕ ಸನ್ನಿವೇಶದಲ್ಲಿ ಜಾತಿ
  • ಕ್ರೈಸ್ತಪ್ರಪಂಚದ ಮಿಷನೆರಿಗಳು ಮತ್ತು ಜಾತಿ
  • ಇಂದಿನ ಚರ್ಚುಗಳಲ್ಲಿ ಜಾತಿ
  • ಅಸಮಾಧಾನಕ್ಕೆ ಪ್ರತಿಕ್ರಿಯೆಗಳು
  • ಸತ್ಯ ಕ್ರೈಸ್ತ ಮಾರ್ಗ
  • ನೂತನ ಲೋಕ ಯೋಚನೆಯ ಆವಶ್ಯಕತೆ
  • ಭಾಗ 7: ಸಾ.ಶ.ಪೂ. 1500ರ ಮುಂದಕ್ಕೆ ಹಿಂದೂ ಮತ ಸಹನೆಯೇ ನಿನ್ನ ನಾಮ
    ಎಚ್ಚರ!—1990
  • ನಮ್ಮ ವಾಚಕರಿಂದ
    ಎಚ್ಚರ!—1999
  • ಜಗತ್ತನ್ನು ಗಮನಿಸುವುದು
    ಎಚ್ಚರ!—1992
  • ಯಾವ ರೀತಿಯ ಜನರನ್ನು ನೀವು ಮೆಚ್ಚುತ್ತೀರಿ?
    ಕಾವಲಿನಬುರುಜು—1993
ಇನ್ನಷ್ಟು
ಎಚ್ಚರ!—1998
g98 4/8 ಪು. 18-21

ಕ್ರೈಸ್ತರು ಮತ್ತು ಜಾತಿಪದ್ಧತಿ

ಭಾರತದ ಎಚ್ಚರ! ಸುದ್ದಿಗಾರರಿಂದ

“ಜಾತಿಪದ್ಧತಿ” ಎಂಬ ಪದಗಳನ್ನು ಕೇಳಿಸಿಕೊಳ್ಳುವಾಗ, ನಿಮ್ಮ ಮನಸ್ಸಿಗೆ ಯಾವ ವಿಷಯವು ಬರುತ್ತದೆ? ಪ್ರಾಯಶಃ ನೀವು ಭಾರತವನ್ನು ಮತ್ತು ಪರಿಶಿಷ್ಟ ಜಾತಿಗಳವರು—ಜಾತಿಭ್ರಷ್ಟರು—ಆಗಿರುವ ಕೋಟ್ಯಂತರ ಮಂದಿಯ ಕುರಿತು ಯೋಚಿಸುತ್ತೀರಿ.a ಜಾತಿಪದ್ಧತಿಯು ಹಿಂದೂ ಧರ್ಮದ ಭಾಗವಾಗಿದೆಯಾದರೂ, ಹಿಂದೂ ಸಮಾಜ ಸುಧಾರಕರು, ಕೆಳಗಣ ಜಾತಿ ಹಾಗೂ ಜಾತಿಭ್ರಷ್ಟರ ಮೇಲೆ ಅದು ಮಾಡಿರುವ ಪರಿಣಾಮಗಳನ್ನು ನಿವಾರಿಸುವುದಕ್ಕಾಗಿ ಹೋರಾಡಿದ್ದಾರೆ. ಈ ವೀಕ್ಷಣದಲ್ಲಿ, ಕ್ರೈಸ್ತರೆಂದು ವಾದಿಸುವವರ ಚರ್ಚುಗಳಲ್ಲಿಯೂ ಜಾತಿಪದ್ಧತಿಯನ್ನು ಅನುಸರಿಸಲಾಗುತ್ತದೆಂದು ನಿಮಗೆ ಕೇಳಿಬರುವಾಗ ನೀವೇನು ಹೇಳುವಿರಿ?

ಭಾರತದ ಜಾತಿಪದ್ಧತಿಯ ಸಂಭವನೀಯ ಮೂಲ

ಯಾವುದರಲ್ಲಿ ತಾವು ಶ್ರೇಷ್ಠರೆಂದು ಕೆಲವರು ಎಣಿಸುತ್ತಾರೋ ಅಂತಹ ಸಾಮಾಜಿಕ ಪದ್ಧತಿಗಳಲ್ಲಿ, ಜನರ ವಿಭಜನೆಯು ಭಾರತದಲ್ಲಿ ಮಾತ್ರ ಇರುವ ಅಸಾಧಾರಣ ಪದ್ಧತಿಯಲ್ಲ. ಒಂದಲ್ಲ ಒಂದು ವಿಧದಲ್ಲಿ ಎಲ್ಲ ಭೂಖಂಡಗಳು ವರ್ಗ ಭೇದಗಳನ್ನು ಕಂಡಿವೆ. ಭಾರತದ ಜಾತಿಪದ್ಧತಿಯನ್ನು ಭಿನ್ನವಾಗಿಸಿದ್ದು, 3,000 ವರ್ಷಗಳಿಗೂ ಹೆಚ್ಚು ಹಿಂದೆ, ಸಾಮಾಜಿಕ ಸ್ವಾಧೀನತೆಯ ಒಂದು ಕಾರ್ಯವಿಧಾನವು ಧರ್ಮದೊಳಕ್ಕೆ ಸಂಘಟಿಸಲ್ಪಟ್ಟ ನಿಜತ್ವವೇ.

ಜಾತಿಪದ್ಧತಿಯ ಮೂಲವು ಖಂಡಿತವಾಗಿ ಇದೇ ಎಂಬುದು ತಿಳಿದುಬಂದಿರುವುದಿಲ್ಲವಾದರೂ, ಕೆಲವು ವಿಶೇಷಜ್ಞರು, ಆಧುನಿಕ ಪಾಕಿಸ್ತಾನದ ಸಿಂಧೂನದಿ ಕಣಿವೆಯ ಪುರಾತನ ನಾಗರಿಕತೆಯಲ್ಲಿ ಇದರ ಮೂಲವಿರುವುದನ್ನು ಕಂಡುಹಿಡಿದಿದ್ದಾರೆ. ಅಲ್ಲಿಯ ಆದಿನಿವಾಸಿಗಳನ್ನು, ಆ ಬಳಿಕ ವಾಯುವ್ಯ ದಿಕ್ಕಿನಿಂದ ಬಂದ ಕುಲಗಳು ಜಯಿಸಿದವೆಂಬುದನ್ನು, ಪ್ರಾಕ್ತನ ಶಾಸ್ತ್ರವು ಸೂಚಿಸುವಂತೆ ತೋರುತ್ತದೆ. ಇದನ್ನು ಸಾಮಾನ್ಯವಾಗಿ “ಆರ್ಯರ ವಲಸೆ ಹೋಗುವಿಕೆ” ಎಂದು ಕರೆಯಲಾಗುತ್ತದೆ. ದ ಡಿಸ್‌ಕವರಿ ಆಫ್‌ ಇಂಡಿಯ ಎಂಬ ಪುಸ್ತಕದಲ್ಲಿ ಜವಾಹರ್‌ಲಾಲ್‌ ನೆಹರೂ ಇದನ್ನು, “ಪ್ರಥಮ ಮಹಾ ಸಾಂಸ್ಕೃತಿಕ ಸಂಯೋಗ ಮತ್ತು ಒಕ್ಕೂಟ” ಎಂದು ಕರೆದು, ಇದರಿಂದ “ಭಾರತದ ಕುಲಗಳು ಮತ್ತು ಮೂಲ ಭಾರತೀಯ ಸಂಸ್ಕೃತಿಯು” ಉದ್ಭವಿಸಿತೆಂದು ಹೇಳುತ್ತಾರೆ. ಆದರೆ ಈ ಒಕ್ಕೂಟವು ಕುಲಸಂಬಂಧವಾದ ಸಮಾನತೆಯಲ್ಲಿ ಫಲಿಸಲಿಲ್ಲ.

ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ನಾಲ್ಕು ವರ್ಗಗಳನ್ನು ಅಥವಾ ವರ್ಣಗಳನ್ನು, ಅಂತರ್ಜಾತೀಯ ವಿವಾಹಗಳ (ಹಿಂದೂ ಧರ್ಮಸಂಬಂಧವಾದ ಕೃತಿಗಳಲ್ಲಿ ನಿಷಿದ್ಧವಾಗಿವೆ) ಕಾರಣ ಉಪವಿಭಾಗಿಸುವ ಮೂಲಕ ಜಾತಿಗಳ (ಜಾತೀಸ್‌, ಅಕ್ಷರಾರ್ಥದಲ್ಲಿ ‘ಹುಟ್ಟುಗಳ’) ಉತ್ಪತ್ತಿಗೆ ಹಿಂದೂಗಳು ಕಾರಣರಾದರು. ಆದರೆ ಆಧುನಿಕ ತತ್ವಜ್ಞಾನಿಗಳು, ಕುಟುಂಬ ಸಂಸ್ಕಾರಾಚರಣೆಗಳು, ಕುಲಭೇದಗಳು ಮತ್ತು ಉದ್ಯೋಗ ವ್ಯತ್ಯಾಸಗಳು ಮತ್ತು ವಿಶೇಷೀಕರಣಗಳ ಕಾರಣ ಜಾತಿಗಳು ಉದಯಿಸಿದವೆಂದು ಊಹಿಸುತ್ತಾರೆ. ಸರಳ ವರ್ಣಪದ್ಧತಿಯು ಒಂದು ಊಹಿತ ಸಾಮಾಜಿಕ ಮತ್ತು ಧಾರ್ಮಿಕ ಆದರ್ಶಕ್ಕಿಂತ ಹೆಚ್ಚಾದದ್ದಾಗಿತ್ತೆಂಬುದನ್ನು ಸಹ ಅನೇಕ ಆಧುನಿಕ ತಜ್ಞರು ಸಂದೇಹಿಸಿ, ಹಿಂದೂ ಸಮಾಜವನ್ನು ಸುಮಾರು 3,000 ಜಾತಿಗಳು ಮತ್ತು ಉಪಜಾತಿಗಳಾಗಿ ಮಾಡಿರುವ ತೀರ ಜಟಿಲವಾಗಿರುವ ವಿಭಾಗಗಳು, ಪ್ರಾಯಶಃ ಪುರಾತನ ಕಾಲಗಳಲ್ಲಿಯೂ ಇದ್ದವೆಂದು ಒತ್ತಿಹೇಳಿದ್ದಾರೆ.”

ಕೆಲವು ಸಮಯಗಳ ವರೆಗೆ ಅಂತರ್ವಿವಾಹಗಳು ವರ್ಗಗಳ ಮಧ್ಯೆ ನಡೆದು, ಚರ್ಮದ ಬಣ್ಣದ ಮೇಲೆ ಆಧಾರಿಸಿದ್ದ ಹಿಂದಿನ ಅವಿಚಾರಾಭಿಪ್ರಾಯಗಳು ಕಡಮೆ ಗಮನಾರ್ಹವಾದವು. ಜಾತಿಯನ್ನು ನಿರ್ದೇಶಿಸಿದ ಕಟ್ಟುನಿಟ್ಟಾದ ನಿಯಮಗಳು ಆ ಬಳಿಕ ಬಂದ ಧಾರ್ಮಿಕ ಬೆಳವಣಿಗೆಯಾಗಿದ್ದು, ವೇದಗಳಲ್ಲಿ ಮತ್ತು ಹಿಂದೂ ಋಷಿಯಾದ ಮನುವಿನ ಸಂಹಿತೆ ಅಥವಾ (ನಿಯಮಾವಳಿ)ಯಲ್ಲಿ ಅವು ಕೊಡಲ್ಪಟ್ಟಿದ್ದವು. ಶ್ರೇಷ್ಠ ಕುಲಗಳು, ಕೆಳಜಾತಿಗಳಿಂದ ಅವುಗಳನ್ನು ಪ್ರತ್ಯೇಕಿಸಿದ ಒಂದು ನಿರ್ಮಲತೆಯೊಂದಿಗೆ ಜನಿಸಿದ್ದವೆಂದು ಬ್ರಾಹ್ಮಣರು ಕಲಿಸಿದರು. ಶೂದ್ರರು ಅಥವಾ ಅತ್ಯಂತ ಕೆಳಜಾತಿಯವರಲ್ಲಿ, ಅವರ ಹೀನ ಕೆಲಸಗಳು ಹಿಂದಿನ ಹುಟ್ಟಿನಲ್ಲಿ ಅವರು ಮಾಡಿದ ಕೆಟ್ಟ ಕೆಲಸಗಳಿಗಾಗಿ ದೇವವಿಧಿತ ಶಿಕ್ಷೆಯಾಗಿವೆಯೆಂದೂ ಮತ್ತು ಜಾತಿಸಂಬಂಧವಾದ ಪ್ರತಿಬಂಧವನ್ನು ಮುರಿಯಲು ಅವರು ಮಾಡುವ ಯಾವುದೇ ಪ್ರಯತ್ನವು ಅವರನ್ನು ಜಾತಿಭ್ರಷ್ಟರನ್ನಾಗಿ ಮಾಡುವುದೆಂಬ ನಂಬಿಕೆಯನ್ನೂ ಅವರು ತುಂಬಿದರು. ಅಂತರ್ವಿವಾಹ, ಅಂತರ್ಭೋಜನ ಮತ್ತು ಒಂದೇ ಮೂಲದಿಂದ ನೀರನ್ನು ಉಪಯೋಗಿಸುವುದು ಅಥವಾ ಶೂದ್ರನು ಹೋಗುವ ದೇವಸ್ಥಾನಕ್ಕೆ ಪ್ರವೇಶಿಸುವುದರಿಂದ ಶ್ರೇಷ್ಠಜಾತಿಯವನು ತನ್ನ ಜಾತಿಗೆಡಿಸಿಕೊಳ್ಳಸಾಧ್ಯವಿದೆ.

ಆಧುನಿಕ ಸನ್ನಿವೇಶದಲ್ಲಿ ಜಾತಿ

1947ರಲ್ಲಿ ಸ್ವಾತಂತ್ರ್ಯವನ್ನು ಪಡೆದುಕೊಂಡ ಬಳಿಕ, ಭಾರತದ ಜಾತ್ಯತೀತ ಸರಕಾರವು, ಜಾತಿಭೇದವನ್ನು ಕ್ರಿಮಿನಲ್‌ ಪಾತಕವನ್ನಾಗಿ ಮಾಡಿದ ಒಂದು ಸಂವಿಧಾನವನ್ನು ಸೂತ್ರೀಕರಿಸಿತು. ಕೆಳಜಾತಿಯ ಹಿಂದೂಗಳು ಅನುಭವಿಸಿದ ಶತಮಾನಗಳ ಅನಾನುಕೂಲ್ಯಗಳನ್ನು ಗುರುತಿಸಿ, ಸರಕಾರವು ಪರಿಶಿಷ್ಟ ಜಾತಿ ಮತ್ತು ಕುಲಗಳಿಗೆ, ಸರಕಾರೀ ಮತ್ತು ವಿದ್ಯಾ ಸಂಸ್ಥೆಗಳಲ್ಲಿನ ಚುನಾಯಿತ ಹುದ್ದೆ ಮತ್ತು ಸ್ಥಾನಗಳಲ್ಲಿ ಮೀಸಲಾತಿಯನ್ನು ಶಾಸನಬದ್ಧವಾಗಿ ಮಾಡಿತು. ಈ ಹಿಂದೂ ಗುಂಪುಗಳಿಗೆ ಉಪಯೋಗಿಸಲ್ಪಟ್ಟ ಒಂದು ಹೆಸರು “ದಲಿತ” ಅಂದರೆ “ಜಜ್ಜಲ್ಪಟ್ಟ, ದಬ್ಬಾಳಿಕೆಗೆ ಒಳಗಾದ” ಎಂದಾಗಿತ್ತು. ಆದರೆ ಇತ್ತೀಚಿನ ಒಂದು ವಾರ್ತಾಪತ್ರದಲ್ಲಿ ಶೀರ್ಷಿಕೆಯು, “ದಲಿತ ಕ್ರೈಸ್ತರು ಮೀಸಲಾತಿ [ಉದ್ಯೋಗ ಮತ್ತು ವಿಶ್ವವಿದ್ಯಾನಿಲಯ ಹಿಸ್ಸೆಯಲ್ಲಿ]ಯ ಹಕ್ಕುಕೇಳಿಕೆಯನ್ನು ಮಾಡುತ್ತಾರೆ” ಎಂದಿತ್ತು. ಇದು ಹೇಗೆ ಸಂಭವಿಸಿತು?

ಕೆಳಜಾತಿಯ ಹಿಂದೂಗಳಿಗೆ ಕೊಡಲ್ಪಟ್ಟಿರುವ ವ್ಯಾಪಕವಾದ ಸರಕಾರೀ ಪ್ರಯೋಜನಗಳು, ಜಾತಿಪದ್ಧತಿಯ ಕಾರಣ ಅನ್ಯಾಯವನ್ನು ಅನುಭವಿಸಿರುವುದರ ನಿಜತ್ವದ ಮೇಲೆ ಆಧಾರಿತವಾಗಿವೆ. ಆದಕಾರಣ, ಜಾತಿಪದ್ಧತಿಯನ್ನು ಆಚರಿಸದ ಧರ್ಮಗಳು ಈ ಪ್ರಯೋಜನಗಳನ್ನು ನಿರೀಕ್ಷಿಸಸಾಧ್ಯವಿಲ್ಲವೆಂದು ತರ್ಕಿಸಲಾಗಿತ್ತು. ಹಾಗಿದ್ದರೂ, ದಲಿತ ಕ್ರೈಸ್ತರು ಹೇಳುವುದೇನಂದರೆ, ತಾವು ಕೆಳಜಾತಿಯವರು, ಅಥವಾ ಅಸ್ಪೃಶ್ಯರು, ಮತಾಂತರಿಗಳು ಆಗಿರುವುದರಿಂದ, ತಾವು ಹಿಂದೂಗಳಿಂದ ಮಾತ್ರವಲ್ಲ, ತಮ್ಮ ‘ಜೊತೆಕ್ರೈಸ್ತ’ರಿಂದಲೂ ಭೇದಭಾವವನ್ನು ಅನುಭವಿಸುತ್ತಿದ್ದೇವೆ. ಇದು ನಿಜವೊ?

ಕ್ರೈಸ್ತಪ್ರಪಂಚದ ಮಿಷನೆರಿಗಳು ಮತ್ತು ಜಾತಿ

ವಸಾಹತು ಸಮಯಗಳಲ್ಲಿ, ಪೋರ್ಚುಗೀಸರು, ಫ್ರೆಂಚರು ಮತ್ತು ಬ್ರಿಟಿಷ್‌ ಮಿಷನೆರಿಗಳು, ಅನೇಕ ಮಂದಿ ಹಿಂದೂಗಳನ್ನು ಕ್ಯಾಥೊಲಿಕರನ್ನಾಗಿಯೂ ಪ್ರಾಟೆಸ್ಟಂಟರನ್ನಾಗಿಯೂ ಮತಾಂತರಿಸಿದರು. ಎಲ್ಲ ಜಾತಿಗಳವರು ನಾಮಮಾತ್ರದ ಕ್ರೈಸ್ತರಾದರು. ಕೆಲವು ಬೋಧಕರು ಬ್ರಾಹ್ಮಣರನ್ನು, ಇತರರು ಅಸ್ಪೃಶ್ಯರನ್ನು ಆಕರ್ಷಿಸಿದರು. ಮಿಷನೆರಿಗಳ ಬೋಧನೆಗಳು ಮತ್ತು ನಡತೆಗಳು, ಜಾತಿಯಲ್ಲಿ ತೀರ ದೃಢವಾಗಿ ನಂಬಿಕೆಯಿರಿಸಿದ ಈ ಜನರ ಮೇಲೆ ಯಾವ ಪರಿಣಾಮವನ್ನು ಬೀರಿದವು?

ಭಾರತದಲ್ಲಿದ್ದ ಬ್ರಿಟಿಷರ ಕುರಿತು ಲೇಖಕ ನೀರದ್‌ ಚೌಧ್ರೀ ಹೇಳುವುದೇನೆಂದರೆ, ಚರ್ಚುಗಳಲ್ಲಿ “ಭಾರತೀಯ ಸಭಿಕರು ಐರೋಪ್ಯರೊಂದಿಗೆ ಕುಳಿತುಕೊಳ್ಳಸಾಧ್ಯವಿರಲಿಲ್ಲ. ಭಾರತದ ಮೇಲಿನ ಬ್ರಿಟಿಷ್‌ ಆಳಿಕೆಯು ಆಧಾರಿಸಿದ್ದ ಕುಲಶ್ರೇಷ್ಠತೆಯ ಪ್ರಜ್ಞೆಯನ್ನು ಕ್ರೈಸ್ತತ್ವವು ಅಡಗಿಸಲಿಲ್ಲ.” 1894ರಲ್ಲಿ, ತದ್ರೀತಿಯ ಮನೋಭಾವವನ್ನೇ ಪ್ರದರ್ಶಿಸುತ್ತ, ಅಮೇರಿಕದ ಫಾರೀನ್‌ ಮಿಶನ್‌ ಬೋರ್ಡಿಗೆ ವರದಿಮಾಡುತ್ತ ಒಬ್ಬ ಮಿಷನೆರಿ ಹೇಳಿದ್ದೇನಂದರೆ, ಕೆಳಜಾತಿಯವರನ್ನು ಮತಾಂತರಿಸುವುದು, “ಚರ್ಚಿನೊಳಗೆ ಹೊಲಸನ್ನು ಸೇರಿಸಿಕೊಳ್ಳುತ್ತದೆ.”

ಆದಿ ಮಿಷನೆರಿಗಳ ಕುಲ ಶ್ರೇಷ್ಠತೆಯ ಅನಿಸಿಕೆಗಳು ಮತ್ತು ಚರ್ಚ್‌ ಬೋಧನೆಗಳೊಂದಿಗೆ ಬ್ರಾಹ್ಮಣ ಸಂಬಂಧಿತ ಆಲೋಚನೆಗಳ ಒಕ್ಕೂಟವು, ಭಾರತದಲ್ಲಿ ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕರು ಬಹಿರಂಗವಾಗಿ ಅನುಸರಿಸುವ ಜಾತಿಪದ್ಧತಿಗೆ ಬಹುಮಟ್ಟಿಗೆ ಕಾರಣವೆಂಬುದು ಸ್ಪಷ್ಟ.

ಇಂದಿನ ಚರ್ಚುಗಳಲ್ಲಿ ಜಾತಿ

ಕ್ಯಾಥೊಲಿಕ್‌ ಆರ್ಚ್‌ಬಿಷಪ್‌ ಜಾರ್ಜ್‌ ಸರ್‌, 1991ರಲ್ಲಿ ಭಾರತದ ಕ್ಯಾಥೊಲಿಕ್‌ ಬಿಷಪರ ಸಮ್ಮೇಳನವನ್ನು ಸಂಬೋಧಿಸುತ್ತ ಹೇಳಿದ್ದು: “ಪರಿಶಿಷ್ಟ ಜಾತಿಯ ಮತಾಂತರಿಗಳು, ಶ್ರೇಷ್ಠ ಜಾತಿಯ ಹಿಂದೂಗಳಿಂದ ಮಾತ್ರವಲ್ಲ, ಶ್ರೇಷ್ಠ ಜಾತಿಯ ಕ್ರೈಸ್ತರಿಂದಲೂ ಕೀಳೆಂದು ಎಣಿಸಲ್ಪಡುತ್ತಾರೆ. . . . ಪ್ಯಾರಿಷ್‌ ಚರ್ಚುಗಳಲ್ಲಿಯೂ ಶ್ಮಶಾನಗಳಲ್ಲಿಯೂ ಅವರಿಗೆ ಬೇರೆ ಬೇರೆ ಸ್ಥಳಗಳು ಗುರುತಿಸಲ್ಪಡುತ್ತವೆ. ಅಂತರ್ಜಾತೀಯ ವಿವಾಹಗಳು ಅಸಮ್ಮತಿಯಿಂದ ಕಾಣಲ್ಪಡುತ್ತವೆ. . . . ಜಾತೀಯತೆಯು ಪುರೋಹಿತರ ಮಧ್ಯೆ ಅತಿರೇಕವಾಗಿದೆ.”

ಒಂದು ಯುನೈಟೆಡ್‌ ಪ್ರಾಟೆಸ್ಟಂಟ್‌ ಚರ್ಚಾದ ಚರ್ಚ್‌ ಆಫ್‌ ಸೌತ್‌ ಇಂಡಿಯದ, ಬಿಷಪ್‌ ಎಮ್‌. ಅಸರಾಯ, ಭಾರತದ ಚರ್ಚಿನ ಅಕ್ರೈಸ್ತ ಪಾರ್ಶ್ವ (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ ಹೇಳಿದ್ದು: “ವಿವಿಧ ಚರ್ಚುಗಳೊಳಗಿರುವ ಜೊತೆಕ್ರೈಸ್ತರಿಂದ, ಪರಿಶಿಷ್ಟ ಜಾತಿ (ದಲಿತ)ಯ ಕ್ರೈಸ್ತರು, ಸ್ವಂತ ದೋಷದ ಕಾರಣಕ್ಕಲ್ಲ, ಜನನದ ಕಾರಣದಿಂದ—ಅವರು 2ನೆಯ 3ನೆಯ ಅಥವಾ 4ನೆಯ ಸಂತತಿಯವರಾಗಿದ್ದರೂ—ಪಕ್ಷಪಾತ ಮತ್ತು ದಬ್ಬಾಳಿಕೆಗೆ ಒಳಗಾಗುತ್ತಾರೆ. ಚರ್ಚಿನಲ್ಲಿ ಅಲ್ಪಸಂಖ್ಯಾತರಾಗಿರುವ ಮೇಲ್ಜಾತಿಯ ಕ್ರೈಸ್ತರು, ಸಂತತಿಗಳು ಕಳೆದರೂ ಕ್ರೈಸ್ತ ನಂಬಿಕೆ ಮತ್ತು ಆಚಾರದಿಂದ ಪ್ರಭಾವಿತರಾಗದೆ, ತಮ್ಮ ಜಾತಿಸಂಬಂಧಿತ ಅವಿಚಾರಾಭಿಪ್ರಾಯಗಳನ್ನು ಮುಂದೊಯ್ಯುತ್ತಿದ್ದಾರೆ.”

ಭಾರತದ ಹಿಂದುಳಿದ ವರ್ಗಗಳ ಸಮಸ್ಯೆಗಳ ಕುರಿತಾದ, ಮಂಡಲ್‌ ಆಯೋಗವೆಂದು ಜ್ಞಾತವಾಗಿರುವ ಒಂದು ಸರಕಾರೀ ತನಿಖೆಯು, ಕೇರಳದಲ್ಲಿನ ಕ್ರೈಸ್ತರೆಂದು ಹೇಳಿಕೊಳ್ಳುವವರು, “ತಮ್ಮ ಜಾತಿ ಹಿನ್ನೆಲೆಗನುಸಾರ ವಿವಿಧ ಬುಡಕಟ್ಟು ಗುಂಪುಗಳಾಗಿ” ವಿಭಾಗಿಸಲ್ಪಟ್ಟಿದ್ದಾರೆ ಎಂಬುದನ್ನು ಕಂಡುಕೊಂಡಿದೆ. “ಮತಾಂತರಗೊಂಡ ಬಳಿಕವೂ, ಕೆಳಜಾತಿಯ ಮತಾಂತರಿಗಳು ಹರಿಜನರಂತೆb ಕಾಣಲ್ಪಟ್ಟರು . . . ಒಂದೇ ಚರ್ಚಿಗೆ ಸೇರಿದ ಸಿರಿಯನ್‌ ಮತ್ತು ಹೊಲೆಯ ಸದಸ್ಯರು, ಧಾರ್ಮಿಕ ಸಂಸ್ಕಾರಗಳನ್ನು ಬೇರೆ ಬೇರೆ ಕಟ್ಟಡಗಳಲ್ಲಿ ಪ್ರತ್ಯೇಕವಾಗಿ ನಡೆಸಿದರು” ಎಂದು ಕಂಡುಹಿಡಿಯಿತು.

ಆಗಸ್ಟ್‌ 1996ರಲ್ಲಿ, ಇಂಡಿಯನ್‌ ಎಕ್ಸ್‌ಪ್ರೆಸ್‌ ವಾರ್ತಾ ವರದಿಯೊಂದು ದಲಿತ ಕ್ರೈಸ್ತರ ಕುರಿತು ಹೇಳಿದ್ದು: “ತಮಿಳುನಾಡಿನಲ್ಲಿ ಇವರು ಮೇಲ್ಜಾತಿಯವರಿಗಿಂತ ಪ್ರತ್ಯೇಕವಾಗಿ ವಾಸಿಸುತ್ತಾರೆ. ಕೇರಳದಲ್ಲಿ ಇವರಲ್ಲಿ ಹೆಚ್ಚಿನವರು ಜಮೀನಿಲ್ಲದ ಕೆಲಸಗಾರರಾಗಿದ್ದು, ಸಿರಿಯನ್‌ ಕ್ರೈಸ್ತರು ಮತ್ತು ಜಮೀನುಳ್ಳ ಇತರ ಮೇಲ್ಜಾತಿಯವರಿಗಾಗಿ ಕೆಲಸಮಾಡುತ್ತಾರೆ. ದಲಿತರ ಮತ್ತು ಸಿರಿಯನ್‌ ಕ್ರೈಸ್ತರ ಮಧ್ಯೆ ಅಂತರ್ಭೋಜನದ ಅಥವಾ ಅಂತರ್ವಿವಾಹದ ಪ್ರಶ್ನೆಯೇ ಇಲ್ಲ. ಅನೇಕ ಸಂದರ್ಭಗಳಲ್ಲಿ ದಲಿತರು ತಮ್ಮದೇ ಆದ ಚರ್ಚುಗಳಲ್ಲಿ—‘ಹೊಲೆಯ ಚರ್ಚು’ ಅಥವಾ ‘ಪರೆಯ ಚರ್ಚು’ ಎಂದು ಕರೆಯಲ್ಪಡುವವುಗಳಲ್ಲಿ—ಆರಾಧಿಸುತ್ತಾರೆ.” ಇವು ಉಪಜಾತಿಯ ಹೆಸರುಗಳಾಗಿವೆ. “ಪರೆಯ”ದ ಆಂಗ್ಲೀಕೃತ ಹೆಸರು “ಪಾರಿಯ.”

ಅಸಮಾಧಾನಕ್ಕೆ ಪ್ರತಿಕ್ರಿಯೆಗಳು

ಎಫ್‌ಎಸಿಇ (ಫಾರಮ್‌ ಎಗೇನ್‌ಸ್ಟ್‌ ಕ್ರಿಶ್ಚಿಯನ್‌ ಎಕ್ಸ್‌ಪ್ಲಾಯಿಟೇಶನ್‌)ನಂತಹ ಸಾಮಾನ್ಯ ಕ್ರಿಯಾವಾದಿ ಗುಂಪುಗಳು, ಕ್ರೈಸ್ತ ಮತಾಂತರಿಗಳಿಗೆ ಸರಕಾರೀ ಪ್ರಯೋಜನಗಳನ್ನು ನೀಡಲು ಪ್ರಯತ್ನಿಸುತ್ತಿವೆ. ಮುಖ್ಯ ಚಿಂತೆಯು ಕ್ರೈಸ್ತ ಮತಾಂತರಿಗಳಿಗೆ ಆರ್ಥಿಕ ಸಹಾಯವನ್ನು ನೀಡುವುದೇ ಆಗಿದೆ. ಆದರೆ ಇತರರು, ಚರ್ಚಿನೊಳಗೆ ಉಪಚರಿಸುವ ರೀತಿಯ ಕುರಿತು ಚಿಂತಿತರಾಗಿದ್ದಾರೆ. ಪೋಪ್‌ ಜಾನ್‌ ಪೌಲ್‌ II, ಅವರಿಗೆ ಬರೆದ ಪತ್ರವೊಂದಕ್ಕೆ ಸಹಿಹಾಕಿದ 120 ಮಂದಿ, “ತಾವು ಜಾತಿ ಪದ್ಧತಿಯಿಂದ ವಿಮೋಚನೆ ಹೊಂದಲಿಕ್ಕಾಗಿ ಕ್ರೈಸ್ತತ್ವವನ್ನು ಅವಲಂಬಿಸಿ”ದ್ದೇವೆ ಎಂದೂ, ಆದರೆ ಹಳ್ಳಿಯ ಚರ್ಚಿಗೆ ಪ್ರವೇಶಿಸಲು ಅಥವಾ ಆರಾಧನೆಯಲ್ಲಿ ಭಾಗವಹಿಸಲು ತಮಗೆ ಅನುಮತಿಯಿಲ್ಲವೆಂದೂ ಹೇಳಿದರು. ಏಕಹಾದಿ ಉದ್ದಕ್ಕೆ ಅವರು ಮನೆಗಳನ್ನು ಕಟ್ಟುವಂತೆ ನಿರ್ಬಂಧಿಸಲಾಗಿತ್ತು. ಮೇಲ್ಜಾತಿಯ ಯಾವನೇ ಕ್ರೈಸ್ತನಾಗಲಿ, ಚರ್ಚಿನ ಪಾದ್ರಿಯಾಗಲಿ, ಆ ಹಾದಿಯಲ್ಲಿ ಕಾಲಿಟ್ಟದ್ದೇ ಇಲ್ಲ! ತದ್ರೀತಿಯಲ್ಲಿ ಮನಸ್ತಾಪಪಟ್ಟ ಕ್ಯಾಥೊಲಿಕ್‌ ಸ್ತ್ರೀಯೊಬ್ಬಳು ಹೇಳಿದ್ದು: “ನನ್ನ ಮಗನು ಉತ್ತಮ ಕಾಲೆಜೊಂದರಲ್ಲಿ ಕಲಿಯುವುದು ನನಗೆ ನಿಶ್ಚಯವಾಗಿಯೂ ಪ್ರಾಮುಖ್ಯ. ಅವನ [ಕ್ಯಾಥೊಲಿಕ್‌] ಜೊತೆವಿಶ್ವಾಸಿಗಳು ಅವನನ್ನು ಸಮಾನನೆಂದು ಒಪ್ಪಿಕೊಳ್ಳುವದು ಅದಕ್ಕಿಂತಲೂ ಹೆಚ್ಚು ಪ್ರಾಮುಖ್ಯ.”

ಕೆಲವರು ದಲಿತ ಕ್ರೈಸ್ತರ ಸ್ಥಿತಿಯನ್ನು ಉತ್ತಮಗೊಳಿಸಲು ಪ್ರಯತ್ನಿಸುವುದು ನಿಜವಾದರೂ, ಅನೇಕರು ತಾಳ್ಮೆಗೆಡುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನಂತಹ ಸಂಘಗಳು ಕ್ರೈಸ್ತ ಮತಾಂತರಿಗಳನ್ನು ಹಿಂದೂ ಧರ್ಮದೊಳಕ್ಕೆ ಹಿಂತರಲು ಪ್ರಯತ್ನಿಸುತ್ತಿವೆ. 10,000 ಮಂದಿ ನೆರೆದು ಬಂದಿದ್ದ ಒಂದು ಸಮಾರಂಭದಲ್ಲಿ, ಇಂತಹ 600 “ಕ್ರೈಸ್ತ” ಕುಟುಂಬಗಳು ಹಿಂದುತ್ವವನ್ನು ಪುನಃ ಅವಲಂಬಿಸಿದುದರ ಕುರಿತು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಸಿತು.

ಸತ್ಯ ಕ್ರೈಸ್ತ ಮಾರ್ಗ

ಚರ್ಚ್‌ ಸಂಸ್ಥೆಗಳ ಮಿಷನೆರಿಗಳು ಪ್ರೀತಿಯ ಮೇಲಾಧಾರಿತವಾದ ಕ್ರಿಸ್ತನ ಬೋಧನೆಗಳನ್ನು ಕಲಿಸುತ್ತಿದ್ದಲ್ಲಿ, “ಬ್ರಾಹ್ಮಣ ಕ್ರೈಸ್ತರು,” “ದಲಿತ ಕ್ರೈಸ್ತರು,” “ಹೊಲೆಯ ಕ್ರೈಸ್ತರು” ಇರುತ್ತಿದ್ದಿಲ್ಲ. (ಮತ್ತಾಯ 22:37-40) ದಲಿತರಿಗೆ ಪ್ರತ್ಯೇಕ ಚರ್ಚುಗಳಾಗಲಿ, ಭೋಜನಗಳಲ್ಲಿ ಪ್ರತ್ಯೇಕತೆಯಾಗಲಿ ಇರುತ್ತಿದ್ದಿಲ್ಲ. ವರ್ಗ ಭೇದಗಳನ್ನು ಅಸಾಧ್ಯವಾಗಿಸುವ ಈ ವಿಮೋಚಕವಾದ ಬೈಬಲ್‌ ಬೋಧನೆಯು ಯಾವುದು?

“ನಿಮ್ಮ ದೇವರಾದ ಯೆಹೋವನು ದೇವಾಧಿದೇವನಾಗಿಯೂ . . . ಇದ್ದಾನೆ; . . . ಆತನು ದಾಕ್ಷಿಣ್ಯ ನೋಡುವವನಲ್ಲ, ಲಂಚತೆಗೆದುಕೊಳ್ಳುವವನಲ್ಲ.”—ಧರ್ಮೋಪದೇಶಕಾಂಡ 10:17.

“ಸಹೋದರರೇ, ನಿಮ್ಮೆಲ್ಲರ ಮಾತು ಒಂದೇ ಆಗಿರಬೇಕು; ನಿಮ್ಮಲ್ಲಿ ಭೇದಗಳಿರಬಾರದು, ನೀವು ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿದ್ದು ಹೊಂದಿಕೆಯಿಂದಿರಬೇಕು ಎಂಬದಾಗಿ ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ.”—1 ಕೊರಿಂಥ 1:10.

“ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”—ಯೋಹಾನ 13:35.

ದೇವರು ಒಬ್ಬ ಮನುಷ್ಯನಿಂದಲೇ ಸಕಲ ಮಾನವಕುಲವನ್ನು ಉಂಟುಮಾಡಿದನೆಂದು ಬೈಬಲು ಬೋಧಿಸುತ್ತದೆ. ಆ ಒಬ್ಬ ಮನುಷ್ಯನ ಎಲ್ಲ ವಂಶಜರು ದೇವರನ್ನು ‘ಹುಡುಕಿ ಕಂಡುಕೊಳ್ಳಬೇಕು, ಆದರೆ ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ’ ಎಂದು ಬೈಬಲು ಹೇಳುತ್ತದೆ.—ಅ. ಕೃತ್ಯಗಳು 17:26, 27.

ಆದಿ ಕ್ರೈಸ್ತ ಸಭೆಯೊಳಗೆ ವರ್ಗ ಭೇದಗಳು ನುಸುಳಲು ತೊಡಗಿದಾಗ, ಲೇಖಕ ಯಾಕೋಬನು ಪ್ರೇರಿತನಾಗಿ ಅದನ್ನು ಅತಿಯಾಗಿ ಖಂಡಿಸಿದನು. ಅವನಂದದ್ದು: “ನೀವು ನಿಮ್ಮಲ್ಲಿ ಭೇದ ಮಾಡುವವರಾಗಿ ಅನ್ಯಾಯವಾದ ತೀರ್ಪನ್ನು ಮಾಡುವವರಾದಿರಲ್ಲಾ.” (ಯಾಕೋಬ 2:1-4) ಸತ್ಯ ಕ್ರೈಸ್ತ ಬೋಧನೆಯು ಯಾವ ವಿಧದ ಜಾತಿಪದ್ಧತಿಗೂ ಅನುಮತಿ ನೀಡುವುದಿಲ್ಲ.

ನೂತನ ಲೋಕ ಯೋಚನೆಯ ಆವಶ್ಯಕತೆ

ಲಕ್ಷಾಂತರ ಮಂದಿ ಯೆಹೋವನ ಸಾಕ್ಷಿಗಳು, ತಾವು ಅನೇಕ ವಿಭಿನ್ನ ಧರ್ಮಗಳಿಂದ ಕಲಿತಿರುವ ತಮ್ಮ ಹಿಂದಿನ ನಂಬಿಕೆಗಳು ಮತ್ತು ವರ್ತನೆಯನ್ನು ಬದಲಾಯಿಸಲು ಬಯಸಿದ್ದಾರೆ. ಬೈಬಲಿನ ಬೋಧನೆಗಳು ಅವರ ಹೃದಯ ಮತ್ತು ಮನಸ್ಸುಗಳಿಂದ, ಶ್ರೇಷ್ಠತೆಯನ್ನು ಮತ್ತು ಕೀಳರಿಮೆಯ ಅನಿಸಿಕೆಗಳನ್ನು—ಅವು ವಸಾಹತು ವಿಜಯದಲ್ಲಿ ಬೇರೂರಿರಲಿ, ಕುಲ, ಕುಲ ಶ್ರೇಷ್ಠತೆ ಅಥವಾ ಜಾತಿಪದ್ಧತಿಯಲ್ಲಿ ಬೇರೂರಿರಲಿ—ತೊಲಗಿಸಿಬಿಟ್ಟಿವೆ. (ರೋಮಾಪುರ 12:1, 2) ಬೈಬಲು ಯಾವುದನ್ನು “ನೀತಿಯು ವಾಸ”ವಾಗಿರುವ “ನೂತನಾಕಾಶಮಂಡಲ”ವೆಂದು ಕರೆಯುತ್ತದೋ ಅದರ ಸ್ಪಷ್ಟವಾದ ತಿಳಿವಳಿಕೆ ಅವರಿಗಿದೆ. ಭೂಮಿಯ ಕಷ್ಟಾನುಭವಿಸುತ್ತಿರುವ ಜನಸ್ತೋಮಗಳಿಗೆ ಎಂತಹ ಮಹಿಮಾಭರಿತ ಪ್ರತೀಕ್ಷೆ!—2 ಪೇತ್ರ 3:13.

[ಅಧ್ಯಯನ ಪ್ರಶ್ನೆಗಳು]

a “ಪರಿಶಿಷ್ಟ ಜಾತಿಗಳು” ಎಂಬುದು ಹಿಂದೂಗಳಲ್ಲಿ ಕೆಳಜಾತಿಯವರಿಗೆ ಅಥವಾ ಜಾತಿಭ್ರಷ್ಟರಿಗೆ, ಅಂದರೆ ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ನಷ್ಟವನ್ನು ಅನುಭವಿಸಿರುವ ಅಸ್ಪೃಶ್ಯರಿಗೆ ಅನ್ವಯಿಸುವ ಅಧಿಕೃತ ಹೆಸರು.

b ಎಮ್‌. ಕೆ. ಗಾಂಧಿಯವರು ಕೆಳಜಾತಿಯವರಿಗೆ ಉಪಯೋಗಿಸಿದ ಕಲ್ಪಿತ ಪದ. ವಿಷ್ಣು ದೇವನ ಹೆಸರುಗಳಲ್ಲಿ ಒಂದಾದ “ಹರಿಯ ಜನರು” ಎಂದಿದರ ಅರ್ಥ.

[ಪುಟ 21ರಲ್ಲಿರುವ ಸಂಕ್ಷಿಪ್ತ ವಿವರಣೆ]

“ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.”

ಅ.ಕೃತ್ಯಗಳು 10:34,35.

[ಪುಟ 20 ರಲ್ಲಿರುವ ಚೌಕ/ಚಿತ್ರಗಳು]

ಹೇಗನಿಸುತ್ತದೆ?

ಹೌದು, ಕ್ರೈಸ್ತರೆನಿಸಿಕೊಳ್ಳುವವರಿಂದ ಜಾತಿಭ್ರಷ್ಟನೆಂದು ಎಣಿಸಲ್ಪಡುವಾಗ ಹೇಗನಿಸಬಹುದು? ಯಾರ ಪೂರ್ವಿಕರು ಚರ್ಮಾರರು ಅಥವಾ ಹೊಲೆಯರು ಎಂದು ಕರೆಯಲ್ಪಡುತ್ತಿದ್ದರೊ, ಅಂತಹ ಹಿಂದುತ್ವದ ಕೆಳಜಾತಿಯಿಂದ ಮತಾಂತರಿಸಲ್ಪಟ್ಟಿದ್ದ ಕ್ರೈಸ್ತನೊಬ್ಬನು, ತನ್ನ ಸ್ವಂತ ರಾಜ್ಯವಾದ ಕೇರಳದಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಘಟನೆಯೊಂದನ್ನು ತಿಳಿಸುತ್ತಾನೆ:

ನಾನು ಒಂದು ವಿವಾಹಕ್ಕೆ ಆಮಂತ್ರಿಸಲ್ಪಟ್ಟಿದ್ದೆ; ಅಲ್ಲಿಗೆ ಬಂದಿದ್ದ ಅಧಿಕಾಂಶ ಅತಿಥಿಗಳು ಚರ್ಚ್‌ ಸದಸ್ಯರಾಗಿದ್ದರು. ಸಮಾರಂಭದಲ್ಲಿ ಅವರು ನನ್ನನ್ನು ನೋಡಿದಾಗ, ಅದು ತುಂಬ ಗಲಭೆಯನ್ನುಂಟುಮಾಡಿತು. ಆರ್ಥಡಕ್ಸ್‌ ಸಿರಿಯನ್‌ ಚರ್ಚಿನಿಂದ ಬಂದಿದ್ದವರು, ನಾನು ಹೊರಟುಹೋಗದಿರುವಲ್ಲಿ ತಾವು ಸಮಾರಂಭಕ್ಕೆ ನಿಲ್ಲುವುದಿಲ್ಲವೆಂದು ಹೇಳಿದರು. ಏಕೆಂದರೆ ಅವರು ಹೊಲೆಯನೊಂದಿಗೆ ಊಟಮಾಡುವುದಿಲ್ಲ. ವಧುವಿನ ತಂದೆ ಅವರ ಅಂತಿಮ ನಿರ್ಧಾರಕ್ಕೆ ಒಪ್ಪದಿದ್ದಾಗ, ಅವರಲ್ಲಿ ಸರ್ವರೂ ಸಮಾರಂಭವನ್ನು ಬಹಿಷ್ಕರಿಸಿ ಹೊರಟುಹೋದರು. ಅವರು ಹೋದ ಬಳಿಕ ಊಟವನ್ನು ಬಡಿಸಲಾಯಿತು. ಆದರೆ ಬಡಿಸುವವರು ನಾನು ಯಾವುದರಲ್ಲಿ ಊಟಮಾಡಿದ್ದೆನೋ ಆ ಬಾಳೆ ಎಲೆಯನ್ನಾಗಲಿ ನನ್ನ ಮೇಜನ್ನಾಗಲಿ ಶುಚಿಮಾಡಲು ನಿರಾಕರಿಸಿದರು.

ಕೆಳಜಾತಿಯವರು ಮಾತ್ರ ಕೂಡಿಬರುವ, ದಕ್ಷಿಣ ಭಾರತದ ಒಂದು ಪ್ರಾತಿನಿಧಿಕ ಚರ್ಚ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ