ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 4/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲ್‌ ವಾಚನವು ಪ್ರಯೋಜನಗಳನ್ನು ತರುತ್ತದೆ
  • ಧ್ವನಿಯ ಕಾಳಜಿ
  • “ಆಫೀಸಿನ ರೋಗ”
  • ಟಿಬೆಟನ್‌ ಹವಾಮಾನವನ್ನು ಪತ್ತೆಹಚ್ಚುವುದು
  • ಔಷಧದೋಪಾದಿ ಇರುವೆಗಳು
  • ಪಂಜಾಬಿಗಳು ಹಾಗೂ ಮೂತ್ರಜನಕಾಂಗದ ಕಲ್ಲುಗಳು
  • ವಲಸೆಗಾರರು ಮರಣದ ಅಪಾಯಸಂಭವವನ್ನು ಅಂಗೀಕರಿಸಬೇಕು
  • ಸಹಸ್ರ ವರ್ಷವು ಈಗಾಗಲೇ ಕೊನೆಗೊಂಡಿತೊ?
  • ತಪ್ಪುಮಾರ್ಗದರ್ಶಿತ ಭಕ್ತಿಯೊ?
  • ವ್ಯಸನಕಾರಕ ಅಮಲೌಷಧಗಳಿಂದ ಲಾಭ ಗಳಿಸುವುದು
  • ಮಕ್ಕಳಲ್ಲಿ ಬೊಜ್ಜು ಪರಿಹಾರ?
    ಎಚ್ಚರ!—2009
  • ಲೋಕವನ್ನು ಗಮನಿಸುವುದು
    ಎಚ್ಚರ!—1993
  • ಜಗತ್ತನ್ನು ಗಮನಿಸುವುದು
    ಎಚ್ಚರ!—1995
  • ಮೂರನೆಯ ಸಹಸ್ರ ವರ್ಷವು ಯಾವಾಗ ಆರಂಭವಾಗುವುದು?
    ಕಾವಲಿನಬುರುಜು—1999
ಇನ್ನಷ್ಟು
ಎಚ್ಚರ!—1998
g98 4/8 ಪು. 28-29

ಜಗತ್ತನ್ನು ಗಮನಿಸುವುದು

ಬೈಬಲ್‌ ವಾಚನವು ಪ್ರಯೋಜನಗಳನ್ನು ತರುತ್ತದೆ

ಅಸೋಸಿಯೇಟೆಡ್‌ ಪ್ರೆಸ್‌ನಿಂದ ವರದಿಸಲ್ಪಟ್ಟ ಒಂದು ಅಧ್ಯಯನಕ್ಕನುಸಾರ, ತೀರ ಕಡಿಮೆ ಬೈಬಲ್‌ ಓದುವವರಿಗಿಂತಲೂ, ಕಡಿಮೆಪಕ್ಷ ವಾರಕ್ಕೆ ಒಂದು ಬಾರಿ ಬೈಬಲನ್ನು ಓದುವ ಅಮೆರಿಕನರು, ಹೆಚ್ಚು ಆನಂದವನ್ನೂ ಸಂತೃಪ್ತಿಯನ್ನೂ ಅನುಭವಿಸುತ್ತಾರೆ ಮತ್ತು ಜೀವಿತದಲ್ಲಿ ಹೆಚ್ಚು ಮಹತ್ತಾದ ಉದ್ದೇಶವನ್ನು ಗ್ರಹಿಸುತ್ತಾರೆ. ಇಲಿನೊಯಿಸ್‌ನ ಮಾರ್ಕೆಟ್‌ ಫ್ಯಾಕ್ಟ್ಸ್‌ ಇನ್ಕ್‌.ನಿಂದ ನಡೆಸಲ್ಪಟ್ಟ, ಅಮೆರಿಕದ ವಯಸ್ಕರ ಸರಿಸುಮಾರಾದ ಒಂದು ಸಮೀಕ್ಷೆಯಲ್ಲಿ, ಒಂದು ತಿಂಗಳಿಗೆ ಒಂದು ಬಾರಿಗಿಂತಲೂ ಕಡಿಮೆ ಸಲ ಬೈಬಲನ್ನು ಓದುವ 58 ಪ್ರತಿಶತ ಮಂದಿಗೆ ಹೋಲಿಕೆಯಲ್ಲಿ, ಆಗಿಂದಾಗ್ಗೆ ಬೈಬಲ್‌ ಓದುವವರಲ್ಲಿ ಬಹುಮಟ್ಟಿಗೆ 90 ಪ್ರತಿಶತ ಮಂದಿ, ಎಲ್ಲ ಸಮಯಗಳಲ್ಲಿ ಅಥವಾ ಅಧಿಕಾಂಶ ಸಮಯ ತಮಗೆ ಮನಶ್ಶಾಂತಿಯಿರುತ್ತದೆ ಎಂದು ಹೇಳಿದರು. ಇದಲ್ಲದೆ, ಅಕ್ರಮವಾದ 28 ಪ್ರತಿಶತ ವಾಚಕರಿಗೆ ಹೋಲಿಸುವಾಗ, ಕ್ರಮವಾಗಿ ಬೈಬಲನ್ನು ಓದುವವರಲ್ಲಿ 15 ಪ್ರತಿಶತ ಮಂದಿ, ಇತರರಿಂದ ನಾವು ಅಂಗೀಕರಿಸಲ್ಪಡುತ್ತೇವೋ ಎಂಬ ವಿಷಯವಾಗಿ ನಾವು ಚಿಂತಿಸುತ್ತೇವೆ ಎಂದು ಹೇಳಿದರು. ಬೈಬಲನ್ನು ಆಗಿಂದಾಗ್ಗೆ ಓದದಿರುವವರಲ್ಲಿ 22 ಪ್ರತಿಶತ ಮಂದಿಯೊಂದಿಗೆ ಹೋಲಿಸುವಾಗ, ಆಗಿಂದಾಗ್ಗೆ ಓದುವವರಲ್ಲಿ ಕೇವಲ 12 ಪ್ರತಿಶತ ಮಂದಿ, ತಾವು ಮರಣದ ಬಗ್ಗೆ ಕೆಲವೊಮ್ಮೆ ಅಥವಾ ತೀರ ಹೆಚ್ಚು ಚಿಂತಿಸುತ್ತೇವೆಂದು ಹೇಳಿದರು.

ಧ್ವನಿಯ ಕಾಳಜಿ

ಒಬ್ಬ ಶಿಕ್ಷಕರಂತಹ, ಧ್ವನಿಯನ್ನು ತುಂಬ ಹೆಚ್ಚು ಉಪಯೋಗಿಸುವ ಯಾರೇ ಆಗಲಿ, ಬಳಲಿಹೋಗುವ ಹಾಗೂ ತನ್ನ ಧ್ವನಿಯನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾನೆಂದು ದ ಟೊರಾಂಟೊ ಸ್ಟಾರ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ತದ್ರೀತಿಯಲ್ಲಿ, ಶಬ್ದಮಯವಾದ ಒಂದು ಪರಿಸರದಲ್ಲಿ ಸತತವಾಗಿ ಕೂಗಾಡುತ್ತಿರುವಲ್ಲಿ, ಧ್ವನಿ ಪೆಟ್ಟಿಗೆಗಳು ಹಾನಿಗೊಳ್ಳಸಾಧ್ಯವಿದೆ. ಪಿಸುಗುಟ್ಟುವುದು ಹಾಗೂ ಆಗಿಂದಾಗ್ಗೆ ಗಂಟಲನ್ನು ಸರಿಪಡಿಸಿಕೊಳ್ಳುವುದು ಸಹ ನಿಮ್ಮ ಧ್ವನಿಯನ್ನು ಹಾನಿಗೊಳಿಸುತ್ತದೆಂದು, ಮಾತು ಹಾಗೂ ಭಾಷೆಯ ರೋಗಲಕ್ಷಣ ಶಾಸ್ತ್ರಜ್ಞರಾದ ಬಾನೀ ಮನ್‌ ಹೇಳುತ್ತಾರೆ. ಕ್ರಿಯೆ ಕೈಕೊಳ್ಳುವುದಕ್ಕೆ ಮೊದಲು ಆ ಸಮಸ್ಯೆಯು ಗಂಭೀರವಾಗಿ ಪರಿಣಮಿಸುವ ತನಕ ಕಾಯಬಾರದೆಂದು ಅವರು ಸಲಹೆ ನೀಡುತ್ತಾರೆ. ಮತ್ತು ಕತ್ತು ಹಾಗೂ ಭುಜಗಳಲ್ಲಿನ ಬಿಗಿತವನ್ನು ಸಡಿಲಿಸಲಿಕ್ಕಾಗಿ ಒಳ್ಳೆಯ ಭಂಗಿಯಲ್ಲಿರುವುದನ್ನು ಅವರು ಪ್ರೋತ್ಸಾಹಿಸುತ್ತಾರೆ. ಅವರು ಕೂಡಿಸುವುದು: “ಎಲ್ಲಕ್ಕಿಂತಲೂ ಹೆಚ್ಚಾಗಿ, ನಿಮ್ಮ ಗಂಟಲನ್ನು ತೇವವಾಗಿಡುವುದು ಪ್ರಾಮುಖ್ಯವಾದದ್ದಾಗಿದೆ.” ನೀವು ನಿಮ್ಮ ಧ್ವನಿಯನ್ನು ತೀರ ಹೆಚ್ಚು ಉಪಯೋಗಿಸಬೇಕಾಗಿರುವಲ್ಲಿ, ಇಡೀ ದಿನ ನೀರನ್ನು ಸ್ವಲ್ಪ ಸ್ವಲ್ಪ ಕುಡಿಯುತ್ತಾ ಇರುವುದನ್ನು ಮನ್‌ ಶಿಫಾರಸ್ಸು ಮಾಡುತ್ತಾರೆ.

“ಆಫೀಸಿನ ರೋಗ”

ಸೀನಾ ಭಾವಭಂಗಿ ಕೇಂದ್ರದ ವಿಶ್ವವಿದ್ಯಾನಿಲಯದ ನಿರ್ದೇಶಕರಾದ ಪ್ರೊಫೆಸರ್‌ ಮೌರೀಟ್ಸ್‌ಯೋ ರೀಚಾಡೀ ಅವರಿಂದ ನಡೆಸಲ್ಪಟ್ಟ ಒಂದು ಅಧ್ಯಯನಕ್ಕನುಸಾರ, ಇಟಲಿಯ 80 ಪ್ರತಿಶತಕ್ಕಿಂತಲೂ ಹೆಚ್ಚು ಮಂದಿ, ಕುಳಿತುಕೊಂಡೇ ಕೆಲಸಮಾಡುವ ಜೀವನ ಶೈಲಿಯ ಕಾರಣದಿಂದ, ಭಾವಭಂಗಿಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಈ “ಆಫೀಸಿನ ರೋಗ”ವನ್ನು ಅನುಭವಿಸುತ್ತಿರುವವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ, ಬೆನ್ನುನೋವುಗಳು, ತಲೆನೋವುಗಳು, ಓಕರಿಕೆ, ತಲೆಸುತ್ತುವಿಕೆ, ಹಾಗೂ ಸಮತೂಕದ ತೊಂದರೆಗಳು, ರಕ್ತದೊತ್ತಡದಲ್ಲಿನ ಏರುಪೇರುಗಳು, ಅತಿಭೇದಿ, ಮಲಬದ್ಧತೆ, ದೊಡ್ಡಕರುಳಿನ ಊತ, ಮತ್ತು ಜಠರಚರ್ಮಗಳ ಊತಗಳಂತಹ ವಿಷಯಗಳ ಪರವಾಗಿಯೂ ಆಪಾದಿಸುತ್ತಾರೆ ಎಂದು, ಈಲ್‌ ಮೆಸ್ಸಾಜೆರೋ ವಾರ್ತಾಪತ್ರಿಕೆಯು ವರದಿಸುತ್ತದೆ. ಈ ಸಮಸ್ಯೆಗಳನ್ನು ಹೊಡೆದೋಡಿಸಲಿಕ್ಕಾಗಿ, “ಜಪಾನೀಯರು ಹಾಗೂ ಚೀನೀಯರು, ಪ್ರತಿಯೊಂದು ತಾಸು ಕೆಲಸಮಾಡಿದ ಬಳಿಕ, ಸರಳವಾದ ಕೆಲವು ವ್ಯಾಯಾಮಗಳನ್ನು ಮಾಡುತ್ತಾರೆ, ಆದರೆ ನಮಗಿರುವ ಒಂದೇ ವಿರಾಮವು, ಕಾಫಿಯ ವಿರಾಮವಾಗಿದೆ” ಎಂದು ರೀಚಾಡೀ ಹೇಳುತ್ತಾರೆ.

ಟಿಬೆಟನ್‌ ಹವಾಮಾನವನ್ನು ಪತ್ತೆಹಚ್ಚುವುದು

ಏಷಿಯ-ಪೆಸಿಫಿಕ್‌ ಪ್ರದೇಶದಲ್ಲಿರುವ ಹತ್ತು ದೇಶಗಳು, ಮಳೆಗಾಲಗಳ ಅಧ್ಯಯನವನ್ನು ನಡೆಸುವ ಪ್ರಯೋಗವನ್ನು ವ್ಯವಸ್ಥಾಪಿಸಿವೆ ಎಂದು, ನ್ಯೂ ಸೈಂಟಿಸ್ಟ್‌ ಪತ್ರಿಕೆಯು ವರದಿಸುತ್ತದೆ. ಏಷಿಯದ ಬಹು ದೊಡ್ಡ ಕ್ಷೇತ್ರಗಳಲ್ಲಿನ ವ್ಯವಸಾಯವು, ಮಳೆಗಾಲಗಳಿಂದ ತರಲ್ಪಡುವ ಮಳೆಯ ಮೇಲೆ ಅವಲಂಬಿಸಿದೆಯಾದರೂ, ಅವು ಪ್ರತಿ ವರ್ಷ ಗಣನೀಯವಾಗಿ ಬದಲಾಗಬಲ್ಲವು. ಮಳೆಗಾಲದ ಮಳೆಗೆ ಟಿಬೆಟನ್‌ ಪ್ರಸ್ಥಭೂಮಿಯು ಪ್ರಮುಖ ಕಾರಣವಾಗಿದೆಯಾದರೂ, ಟಿಬೆಟ್‌ನಿಂದ ಬಂದ ದತ್ತಾಂಶವು ವಿಶ್ಲೇಷಣೆಗೆ ಸಿಕ್ಕಿಲ್ಲವೆಂದು ವಾತಾವರಣ ಶಾಸ್ತ್ರಜ್ಞರು ನಂಬುತ್ತಾರೆ. ಚೀನಾದೊಂದಿಗಿನ ವಿಚಾರ ವಿನಿಮಯದ ಬಳಿಕ, ಉಷ್ಣಾಂಶ, ಆರ್ದ್ರತೆ, ಹಾಗೂ ಹಿಮಾಲಯದ ಇತರ ಹವಾಮಾನ ಸಂಬಂಧಿತ ಅಂಶಗಳನ್ನು ನೋಡಿಕೊಳ್ಳಲಿಕ್ಕಾಗಿ, ಈಗ ಟಿಬೆಟ್‌ನಲ್ಲಿ ಒಂದು ಸ್ವಯಂಚಾಲಿತ ಉಪಕರಣವನ್ನು ಸ್ಥಾಪಿಸಲಾಗಿದೆ. ಅದರಿಂದ ಪಡೆದುಕೊಳ್ಳಲ್ಪಡುವ ದತ್ತಾಂಶವು, ಏಷಿಯದ ಮಳೆಗಾಲಗಳ ಕುರಿತು ಹೆಚ್ಚು ಉತ್ತಮವಾದ ತಿಳುವಳಿಕೆಗೆ ನಡೆಸುವುದೆಂದು ಸಂಶೋಧಕರು ನಿರೀಕ್ಷಿಸುತ್ತಿದ್ದಾರೆ.

ಔಷಧದೋಪಾದಿ ಇರುವೆಗಳು

1947ರ ಕದನದ ಸಮಯದಲ್ಲಿ, ಚೀನಾದ ಮಿಲಿಟರಿ ಶಸ್ತ್ರಚಿಕಿತ್ಸಕರಾದ ವು ಜೀಚನ್‌ರಿಗೆ, ಗಾಯಗೊಂಡಿದ್ದ ಸೈನಿಕರಲ್ಲಿನ ಸೋಂಕನ್ನು ತಡೆಯುವ ಅಗತ್ಯವಿತ್ತು, ಆದರೆ ಅವರ ಔಷಧಗಳ ಸಂಗ್ರಹವು ಮುಗಿದುಹೋಗಿತ್ತು. ತೀರ ಹತಾಶರಾಗಿ, ಅವರು ಒಬ್ಬ ಸ್ಥಳಿಕ ವೈದ್ಯನ ಸಹಾಯವನ್ನು ಪಡೆಯಲು ಪ್ರಯತ್ನಿಸಿದರು. ಆ ವೈದ್ಯನು ಒಂದು ಸಾಂಪ್ರದಾಯಿಕ ಚೈನೀಸ್‌ ಔಷಧವನ್ನು—ಗಾಯಗಳನ್ನು ತೊಳೆಯಲಿಕ್ಕಾಗಿ ಇರುವೆಗಳೊಂದಿಗೆ ಕುದಿಸಿದ ನೀರು ಹಾಗೂ ವಿಶೇಷ ರೀತಿಯ ಇರುವೆಗಳಿಂದ ಮಾಡಲ್ಪಟ್ಟ ಔಷಧ—ತಿಳಿಸಿದನು. ಚೈನಾ ಟುಡೇ ಪತ್ರಿಕೆಗನುಸಾರ, ಅದರ ಪರಿಣಾಮಗಳು ಎಷ್ಟು ಪ್ರೋತ್ಸಾಹನೀಯವಾಗಿದ್ದವೆಂದರೆ, ಡಾ. ವು ಇರುವೆಗಳಿಗಾಗಿರುವ ವೈದ್ಯಕೀಯ ಉಪಯೋಗಗಳನ್ನು ಸಂಶೋಧಿಸುವ ದೀರ್ಘ ಸಮಯದ ವೃತ್ತಿಯನ್ನು ಆರಂಭಿಸಿದರು. ಸೋಂಕು ರಕ್ಷಾ ವ್ಯವಸ್ಥೆಯನ್ನು ಸಮತೂಕಗೊಳಿಸಲು ಇರುವೆ ಔಷಧಗಳು ಸಹಾಯ ಮಾಡುತ್ತವೆಂದು ಅವರು ನಂಬುತ್ತಾರೆ ಮತ್ತು ಅವರು ಹೇಳುವುದು: “ಇರುವೆಯು ಪೋಷಕಾಂಶಗಳ ಚಿಕ್ಕ ಉಗ್ರಾಣವಾಗಿದೆ. ಮಾನವ ದೇಹದಿಂದ ಅಗತ್ಯಪಡಿಸಲ್ಪಡುವ 50ಕ್ಕಿಂತಲೂ ಹೆಚ್ಚು ಪೋಷಕಾಂಶಗಳು, 28 ಅಮೈನೊ ಆಮ್ಲಗಳು ಹಾಗೂ ಬೇರೆ ಬೇರೆ ಖನಿಜಪದಾರ್ಥಗಳು ಹಾಗೂ ರಾಸಾಯನಿಕ ಸಂಯುಕ್ತ ವಸ್ತುಗಳನ್ನು ಅದು ಒಳಗೊಂಡಿದೆ.”

ಪಂಜಾಬಿಗಳು ಹಾಗೂ ಮೂತ್ರಜನಕಾಂಗದ ಕಲ್ಲುಗಳು

ಪಂಜಾಬ್‌ ರಾಜ್ಯದ ಹಾಗೂ ಭಾರತದ ಸುತ್ತುಮುತ್ತಲಿನ ಕ್ಷೇತ್ರಗಳ ಜನರು, ಲೋಕದಲ್ಲಿರುವ ಇತರ ಯಾವುದೇ ಸಮುದಾಯಕ್ಕಿಂತಲೂ ಹೆಚ್ಚಾಗಿ ಮೂತ್ರಜನಕಾಂಗದ ಕಲ್ಲುಗಳನ್ನು ಹೊಂದುವ ಸ್ಥಿತಿಯಲ್ಲಿದ್ದಾರೆಂದು ಇಂಡಿಯ ಟುಡೇ ಇಂಟರ್‌ನ್ಯಾಷನಲ್‌ ವರದಿಸುತ್ತದೆ. ಪಂಜಾಬಿಗಳು ಕಷ್ಟಪಟ್ಟು ದುಡಿದು, ಪುಷ್ಕಳವಾಗಿ ತಿನ್ನುವುದಕ್ಕೆ ಪ್ರಸಿದ್ಧರಾಗಿದ್ದಾರೆ, ಆದರೆ ಅನೇಕವೇಳೆ ಸುಡುತ್ತಿರುವ ಬೇಸಿಗೆ ತಿಂಗಳುಗಳಲ್ಲಿ ಅವರು ಸಾಕಷ್ಟು ನೀರನ್ನು ಕುಡಿಯುವುದಿಲ್ಲವೆಂದು ವರದಿಯು ಹೇಳುತ್ತದೆ. ಈ ಕಾರಣದಿಂದಲೇ, ಇತ್ತೀಚೆಗಿನ ಒಂದು ಅಂತಾರಾಷ್ಟ್ರೀಯ ಮೂತ್ರಶಾಸ್ತ್ರಸಂಬಂಧಿತ ಸಮ್ಮೇಳನದಲ್ಲಿ, ಅವರ ಪ್ರಾಂತವು ಲೋಕದ “ಮೂತ್ರಜನಕಾಂಗದ ಕಲ್ಲುಗಳ ಕ್ಷೇತ್ರವಾಗಿ” ವರ್ಣಿಸಲ್ಪಟ್ಟಿದೆ. ಯೂರೋಪಿನಲ್ಲಿರುವ ಹಾಗೂ ಅಮೆರಿಕದಲ್ಲಿರುವ ಒಂದು ಸೆಂಟಿಮೀಟರ್‌ [ಅರ್ಧ ಇಂಚಿಗಿಂತಲೂ ಕಡಿಮೆ]ಗೆ ಹೋಲಿಸುವಾಗ, ಅಲ್ಲಿನ ಮೂತ್ರಜನಕಾಂಗದ ಕಲ್ಲೊಂದರ ಸರಾಸರಿ ಗಾತ್ರವು, ಎರಡು ಮತ್ತು ಮೂರು ಸೆಂಟಿಮೀಟರು [ಸುಮಾರು ಒಂದು ಇಂಚು]ಗಳಷ್ಟಿದೆ. ಚಿಕ್ಕಪುಟ್ಟ ನೋವುಗಳನ್ನು ಅಲಕ್ಷಿಸುವ ಅಥವಾ ಚಿಕಿತ್ಸೆಯನ್ನು ಮುಂದೂಡುವ ಅನೇಕ ಭಾರತೀಯರ ಪ್ರವೃತ್ತಿಯೇ ಇದಕ್ಕೆ ಕಾರಣವೆಂದು ಆ ವರದಿಯು ಹೇಳುತ್ತದೆ. ಆರೋಗ್ಯವಂತರಾದ ಜನರು ಪ್ರತಿ ದಿನ ಕಡಿಮೆಪಕ್ಷ ಎರಡು ಲೀಟರ್‌ಗಳಷ್ಟು ಶುದ್ಧವಾದ ನೀರನ್ನು ಕುಡಿಯಬೇಕೆಂದು ಮೂತ್ರಶಾಸ್ತ್ರಜ್ಞರು ಹೇಳುತ್ತಾರೆ.

ವಲಸೆಗಾರರು ಮರಣದ ಅಪಾಯಸಂಭವವನ್ನು ಅಂಗೀಕರಿಸಬೇಕು

ದಕ್ಷಿಣ ಆಫ್ರಿಕದಲ್ಲಿ, ಪ್ರತಿ ವರ್ಷ ಸಾವಿರಾರು ಮಂದಿ ಕಾನೂನುಬಾಹಿರ ವಲಸೆಗಾರರು, ಉದ್ಯೋಗಕ್ಕಾಗಿ ಹುಡುಕಾಟ ನಡೆಸಲಿಕ್ಕಾಗಿ ಹಾಗೂ ಹೆಚ್ಚು ಉತ್ತಮವಾದ ಜೀವನ ಮಟ್ಟಕ್ಕಾಗಿ ತಮ್ಮ ಜೀವಿತಗಳನ್ನು ಅಪಾಯಕ್ಕೊಡ್ಡುತ್ತಾರೆ. ಲಿಂಪೊಪೊ ನದಿಯನ್ನು ಈಜಿ ದಾಟುತ್ತಿದ್ದಾಗ, ನೂರಾರು ಮಂದಿ ವಲಸೆಗಾರರು ಮೊಸಳೆಗಳಿಂದ ತಿಂದುಹಾಕಲ್ಪಟ್ಟಿದ್ದಾರೆಂದು ಹೇಳಲಾಗಿದೆ. ಕ್ರೂಗರ್‌ ರಾಷ್ಟ್ರೀಯ ಪಾರ್ಕಿನಲ್ಲಿ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ, ಇನ್ನಿತರರು ಆನೆಗಳಿಂದ ತುಳಿಯಲ್ಪಟ್ಟಿದ್ದಾರೆ ಹಾಗೂ ಸಿಂಹಗಳಿಂದ ಕೊಲ್ಲಲ್ಪಟ್ಟಿದ್ದಾರೆ. ಉದ್ಯಾನವನದ ಅಧಿಕಾರಿಗಳು, ನರಭಕ್ಷಕಗಳಾಗಿ ಪರಿಣಮಿಸಿದ್ದ ಐದು ಸಿಂಹಗಳನ್ನು ಇತ್ತೀಚೆಗಷ್ಟೇ ಗುಂಡಿಕ್ಕಿ ಕೊಂದರು. “ಆ ಐದು ಸಿಂಹಗಳ ಶವಪರೀಕ್ಷೆಗಳು, ಆ ಪ್ರಾಣಿಗಳ ಪಚನಾಂಗ ವ್ಯೂಹದಲ್ಲಿ ಮಾನವ ಅವಶೇಷಗಳನ್ನು ತೋರ್ಪಡಿಸಿದವು” ಎಂದು, ದ ಸ್ಟಾರ್‌ ಎಂಬ ಜೊಹಾನೆಸ್‌ಬರ್ಗ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ವನ್ಯ ಮೃಗಗಳಿಂದ ಕೊಲ್ಲಲ್ಪಟ್ಟಿರುವ ಕಾನೂನುಬಾಹಿರ ವಲಸೆಗಾರರ ನಿರ್ದಿಷ್ಟ ಸಂಖ್ಯೆಯು ತಿಳಿದುಬಂದಿಲ್ಲ. “ಕ್ರಮವಾದ ಗಸ್ತುತಿರುಗುವಿಕೆಗಳಿಂದ ಮನುಷ್ಯರ ಹೆಜ್ಜೆ ಗುರುತುಗಳು ಕಂಡುಬಂದಿವೆ, ಆದರೆ ಆ ಕೂಡಲೆ ಅವು ಎಲ್ಲಿ ಸಂಪೂರ್ಣವಾಗಿ ಮಾಯವಾದವೆಂಬುದು ತಿಳಿದುಬಂದಿಲ್ಲ” ಎಂದು ಆ ವಾರ್ತಾಪತ್ರಿಕೆಯು ಹೇಳುತ್ತದೆ. “ಸಂಪೂರ್ಣವಾಗಿ ಬೆಳೆದ ಒಂದು ಗಂಡು [ಸಿಂಹ]ವು, ಒಮ್ಮೆಗೆ 70 ಕಿಲೊಗ್ರಾಮ್‌ಗಳಷ್ಟು ಮಾಂಸವನ್ನು ತಿನ್ನಲು ಸಮರ್ಥವಾಗಿರುತ್ತದೆ. ಪುರಾವೆಯೋಪಾದಿ ಮಾನವ ಅವಶೇಷಗಳು ಹಿಂದೆ ಬಿಡಲ್ಪಡುವ ಸಂಭವಗಳು—ವಿಶೇಷವಾಗಿ ಸಿಂಹದಿಂದ ಕೊಲ್ಲಲ್ಪಟ್ಟ ಮಾನವ ಅವಶೇಷಗಳನ್ನು ತಿನ್ನಲಿಕ್ಕಾಗಿ ಕತ್ತೆ ಕಿರುಬಗಳು ಹಾಗೂ ತೋಳಗಳು ಬಂದಾಗ—ತೀರ ವಿರಳ.”

ಸಹಸ್ರ ವರ್ಷವು ಈಗಾಗಲೇ ಕೊನೆಗೊಂಡಿತೊ?

ವಿದ್ವಾಂಸರಿಗನುಸಾರ, “ವಾಸ್ತವವಾಗಿ ಸಹಸ್ರ ವರ್ಷವು ಅನೇಕ ವರ್ಷಗಳ ಹಿಂದೆಯೇ ಆಗಿಹೋಗಿದೆ. ಕ್ಷಮಿಸಿ, ಆದರೆ ನಾವದನ್ನು ಗುರುತಿಸಲೇ ಇಲ್ಲ” ಎಂದು ನ್ಯೂಸ್‌ವೀಕ್‌ ಪತ್ರಿಕೆಯು ಹೇಳುತ್ತದೆ. ಕಾರಣವೇನು? ನಮ್ಮ ಕ್ಯಾಲೆಂಡರ್‌, ಕ್ರಿಸ್ತನ ಜನನದ ಮೇಲಾಧಾರಿತವಾಗಿರಬೇಕಾದದ್ದು, “ಸಮಯದ ಸ್ವೇಚ್ಛಾನುಸಾರವಾದ ವಿಭಜನೆಯ ಮೇಲೆ ಆಧಾರಿತವಾಗಿದೆ.” ಆದರೆ, ವಾಸ್ತವವಾಗಿ ಯೇಸು “ಕ್ರಿಸ್ತ ಪೂರ್ವ”ಕ್ಕಿಂತ ಅನೇಕ ವರ್ಷಗಳಿಗೆ ಮುಂಚೆಯೇ ಜನಿಸಿದ್ದನೆಂದು ಆಧುನಿಕ ವಿದ್ವಾಂಸರು ನಂಬುತ್ತಾರೆಂದು ಆ ಲೇಖನವು ಟಿಪ್ಪಣಿಮಾಡುತ್ತದೆ. ನ್ಯೂಸ್‌ವೀಕ್‌ ಪತ್ರಿಕೆಗನುಸಾರ, ಅದರ “ಅರ್ಥ, ಈಗಾಗಲೇ ನಾವು ಮೂರನೆಯ ಸಹಸ್ರ ವರ್ಷವನ್ನು ಪ್ರವೇಶಿಸಿದ್ದೇವೆ.” ಈ ದೋಷವು ಡಯೊನಿಸಿಯಸ್‌ ದ ಶಾರ್ಟ್‌ನಿಂದ ಮಾಡಲ್ಪಟ್ಟಿತು. ಸಾ.ಶ. 525ರಲ್ಲಿ, ಪ್ರಮಾಣಭೂತವಾದ ಪೂಜಾವಿಧಾನ ಸೂತ್ರಗಳ ಒಂದು ಕ್ಯಾಲೆಂಡರನ್ನು ಪ್ರಕಾಶಿಸುವಂತೆ Iನೆಯ ಪೋಪ್‌ ಜಾನ್‌ ಅವನಿಗೆ ಆದೇಶಿಸಿದನು. ಯೇಸುವಿನ ಜನನವನ್ನು ಪ್ರಮುಖ ದಿನಾಂಕವಾಗಿ ಉಪಯೋಗಿಸಲು ಡಯೊನಿಸಿಯಸ್‌ ನಿರ್ಧರಿಸಿದನಾದರೂ, ಅದರ ಲೆಕ್ಕಾಚಾರಮಾಡುವುದರಲ್ಲಿ ಅವನು ತಪ್ಪುಮಾಡಿದನು. “ಖಂಡಿತವಾಗಿಯೂ ಯೇಸು ಯಾವಾಗ ಜನಿಸಿದನೆಂಬುದನ್ನು ನಿಖರವಾಗಿ ಇತಿಹಾಸಕಾರರು ಎಂದೂ ತಿಳಿಯುವುದಿಲ್ಲ” ಎಂದು ನ್ಯೂಸ್‌ವೀಕ್‌ ಪತ್ರಿಕೆಯು ಹೇಳುತ್ತದೆ. “ಅವನ ಜನ್ಮದಿನವನ್ನು ಆಚರಿಸುವ ಕ್ರಿಸ್ಮಸ್‌ನ ದಿನಾಂಕ ಗೊತ್ತುಪಡಿಸುವಿಕೆಯು ಸಹ ಸ್ವೇಚ್ಛಾನುಸಾರವಾದದ್ದಾಗಿದೆ. ಮಕರ ಸಂಕ್ರಾಂತಿಯ ವಿಧರ್ಮಿ ಆಚರಣೆಗಳೊಂದಿಗೆ ಸರಿಹೊಂದಿಸಲಿಕ್ಕಾಗಿ—ಮತ್ತು ಧಾರ್ಮಿಕವಾಗಿ ಪ್ರತಿಕೂಲವಾಗಿ—ಚರ್ಚು ಡಿಸೆಂ. 25ನ್ನು ಆರಿಸಿಕೊಂಡಿತೆಂದು ವಿದ್ವಾಂಸರು ನಂಬುತ್ತಾರೆ.” ಸಾ.ಶ.ಪೂ. 2ನೆಯ ವರ್ಷದಲ್ಲಿ ಯೇಸು ಜನಿಸಿದನೆಂದು, ಬೈಬಲ್‌ ಕಾಲಗಣನಶಾಸ್ತ್ರವು ಸೂಚಿಸುತ್ತದೆ.

ತಪ್ಪುಮಾರ್ಗದರ್ಶಿತ ಭಕ್ತಿಯೊ?

1997ರ ಜೂನ್‌ 1ರಂದು, ಮೆಕ್ಸಿಕೊ ಸಿಟಿ ಮೆಟ್ರೊದ ಸ್ಟೇಷನ್‌ಗಳಲ್ಲೊಂದರಲ್ಲಿ, ಒಂದು ಗೋಡೆಯ ಮೇಲೆ, ಒಂದು ರೂಪವು—ಸುವ್ಯಕ್ತವಾಗಿ ಆರ್ದ್ರತೆಯಿಂದ ಉಂಟಾದದ್ದು—ಕಂಡುಬಂತು. ಅನೇಕ ಕ್ಯಾಥೊಲಿಕ್‌ ಭಕ್ತರಿಗೆ ಇದು, ಗ್ವಾಡೆಲೋಪ್‌ನ ಕನ್ಯೆಯ—ಮೆಕ್ಸಿಕೊದಲ್ಲಿ ಕನ್ಯೆ ಮರಿಯಳಿಗೆ ಕೊಡಲ್ಪಟ್ಟಿರುವ ಒಂದು ಹೆಸರು—ಒಂದು ಅತಿಮಾನುಷ ದೃಶ್ಯವಾಗಿತ್ತು. “ಕ್ಯಾಥೊಲಿಕ್‌ ಚರ್ಚು ಈ ಮೆಟ್ರೊವಿನ ಕನ್ಯೆಯ ದೃಶ್ಯವನ್ನು ಒಂದು ವಿಶ್ವಾಸಾರ್ಹವಾದ ಅದ್ಭುತವಾಗಿ ಪರಿಗಣಿಸುವುದಿಲ್ಲ, ಬದಲಾಗಿ ಸ್ಟೇಷನ್‌ನ ಗೋಡೆಗಳಲ್ಲಿನ ನೀರಿನಿಂದ ಸೋಸಿಬಂದ ದ್ರವದಿಂದ ಉಂಟುಮಾಡಲ್ಪಟ್ಟ ಒಂದು ಸಹಜ ರಚನೆಯಾಗಿ ಪರಿಗಣಿಸುತ್ತದೆ” ಎಂದು ಎಲ್‌ ಯೂನೀವರ್ಸಾಲ್‌ ವಾರ್ತಾಪತ್ರಿಕೆಯು ಹೇಳುತ್ತದೆ. ಆದರೆ, ಅನೇಕ ಜನರು ಆರಾಧಿಸಲಿಕ್ಕಾಗಿ ಅದರ ಮುಂದೆ ನಿಲ್ಲುತ್ತಾರೆ, ಮತ್ತು ಆ ಬಿಂಬವು “ಒಂದು ತಾಸಿಗೆ ಸಾವಿರಕ್ಕಿಂತಲೂ ಹೆಚ್ಚು ಜನರಿಂದ ಸಂದರ್ಶಿಸಲ್ಪಟ್ಟಿದೆ.” ಆ ಬಿಂಬಕ್ಕಾಗಿ ಒಂದು ಚಿಕ್ಕ ಗೂಡು ನಿರ್ಮಿಸಲ್ಪಟ್ಟು, ಒಬ್ಬ ಕ್ಯಾಥೊಲಿಕ್‌ ಪಾದ್ರಿಯಿಂದ ಪ್ರತಿಷ್ಠಾಪಿಸಲ್ಪಟ್ಟಿತು.

ವ್ಯಸನಕಾರಕ ಅಮಲೌಷಧಗಳಿಂದ ಲಾಭ ಗಳಿಸುವುದು

ವಿಶ್ವ ಸಂಸ್ಥೆಗನುಸಾರ, ಲೋಕವ್ಯಾಪಕವಾಗಿ ಸುಮಾರು 34 ಕೋಟಿ ಅಮಲೌಷಧ ವ್ಯಸನಿಗಳಿದ್ದಾರೆಂದು ಅಂದಾಜುಮಾಡಲಾಗಿದೆ. ಸಾರ್ನಲ್‌ ಡ ಟಾರ್ಡದಲ್ಲಿ ವರದಿಸಲ್ಪಟ್ಟಿರುವಂತೆ, “22.75 ಕೋಟಿ ಅಥವಾ ಬಹುಮಟ್ಟಿಗೆ ಲೋಕದ ಜನಸಂಖ್ಯೆಯ 4 ಪ್ರತಿಶತ ಮಂದಿಯ ಉಪಯೋಗದೊಂದಿಗೆ, ನೋವುಶ್ಯಾಮಕಗಳು ಹಾಗೂ ಉಪಶಮನಕಾರಿಗಳ ಮೇಲಿನ ಅವಲಂಬನೆಯು ಪ್ರಥಮ ಶ್ರೇಣಿಯಲ್ಲಿದೆ. ತದನಂತರ 14.1 ಕೋಟಿ ವ್ಯಸನಿಗಳಿರುವ—ಭೌಗೋಲಿಕ ಜನಸಂಖ್ಯೆಯಲ್ಲಿ ಒಟ್ಟು 2.5 ಪ್ರತಿಶತ—ಮಾರಿವಾನ ಬರುತ್ತದೆ.” ಎಲ್ಲ ಕಾನೂನುಬಾಹಿರ ಅಮಲೌಷಧಗಳಲ್ಲಿ ಕೇವಲ 5ರಿಂದ 10 ಪ್ರತಿಶತ ಅಮಲೌಷಧಗಳು ಪೊಲೀಸರಿಂದ ವಶಪಡಿಸಿಕೊಳ್ಳಲ್ಪಡುತ್ತವೆ ಎಂಬುದನ್ನು ಸಹ ಅಂದಾಜುಮಾಡಲಾಗಿದೆ. ಅಮಲೌಷಧಗಳ ಮಾರಾಟವು, ಪ್ರತಿ ವರ್ಷ 40,000 ಕೋಟಿ ಡಾಲರುಗಳಷ್ಟು ಹಣವನ್ನು ಉತ್ಪಾದಿಸುತ್ತದೆ. ಕೆಲವು ವಿದ್ಯಮಾನಗಳಲ್ಲಿ, ವ್ಯಾಪಾರಿಗಳು 300 ಪ್ರತಿಶತದಷ್ಟು ಲಾಭವನ್ನೂ ಗಳಿಸುತ್ತಾರೆ—“ಇನ್ನಾವುದೇ ರೀತಿಯ ವ್ಯಾಪಾರದಲ್ಲಿ ಇಂತಹ ಲಾಭಗಳು ಎಂದೂ ಗಳಿಸಲ್ಪಡುವುದಿಲ್ಲ” ಎಂದು ವಾರ್ತಾಪತ್ರಿಕೆಯು ಹೇಳುತ್ತದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ