ಜಗತ್ತನ್ನು ಗಮನಿಸುವುದು
ಬಾಲ್ಯಾವಸ್ಥೆಯ ಬೇಧಿಗೆ ಚಿಕಿತ್ಸೆನೀಡುವುದು
“ವೆನಿಸ್ವೇಲದ ಸಂಶೋಧಕರು, ಮಕ್ಕಳಲ್ಲಿರುವ ತೀವ್ರ ಬೇಧಿಯನ್ನು ಬಹುಮಟ್ಟಿಗೆ ತೆಗೆದುಹಾಕುವ ಒಂದು ಲಸಿಕೆಯನ್ನು ತಯಾರಿಸಿದ್ದಾರೆ,” ಎಂದು ಕ್ಯಾರಕಾಸ್‌ನ ದ ಡೈಯ್ಲಿ ಜರ್ನಲ್ ಹೇಳುತ್ತದೆ. “ಆ ಲಸಿಕೆಯು . . . ಅಭಿವೃದ್ಧಿಶೀಲ ದೇಶಗಳಲ್ಲಿ, ಪ್ರತಿ ವರ್ಷ ಐದು ವರ್ಷಕ್ಕಿಂತ ಕಡಮೆ ವಯಸ್ಸಿನ ಸುಮಾರು 8,73,000 ಮಕ್ಕಳನ್ನು ಕೊಂದುಹಾಕುವ ರೋಟವೈರಸ್ ಬೇಧಿಯ ವಿರುದ್ಧ ಸಂರಕ್ಷಿಸಲು ವಿನ್ಯಾಸಿಸಲ್ಪಟ್ಟಿದೆ.” ಅಮೆರಿಕದಲ್ಲೂ, ಆ ಅಸ್ವಸ್ಥತೆಯು ವಾರ್ಷಿಕವಾಗಿ 1,00,000ಕ್ಕಿಂತಲೂ ಹೆಚ್ಚಿನ ಶಿಶುಗಳನ್ನು ಮತ್ತು ಶಾಲಾವಯಸ್ಸಿಗಿಂತ ಚಿಕ್ಕ ಮಕ್ಕಳನ್ನು ಆಸ್ಪತ್ರೆಗೆ ಕಳುಹಿಸುತ್ತದೆ. ದ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಾಶಿಸಲ್ಪಟ್ಟ ಆ ಅಧ್ಯಯನವು ವರದಿಸುವುದೇನೆಂದರೆ, ಆ ಲಸಿಕೆಯ ಉಪಯೋಗವು, ವೈರಸ್‌ನ ವಿರುದ್ಧ 88 ಪ್ರತಿಶತ ಸಂರಕ್ಷಣಾ ಪ್ರಮಾಣವನ್ನು ಪಡೆದಿದ್ದು, ತೀವ್ರ ಬೇಧಿಗಾಗಿ ಆಸ್ಪತ್ರೆಯಲ್ಲಿ ದಾಖಲಾಗುವುದನ್ನು 70 ಪ್ರತಿಶತ ಕಡಿಮೆಗೊಳಿಸಿತ್ತು. ಆದರೂ ಒಂದು ಪ್ರತಿಕೂಲತೆಯಿದೆ. “ಅದರ ಅಗತ್ಯವು ಹೆಚ್ಚಾಗಿರುವ ಅಭಿವೃದ್ಧಿಶೀಲ ದೇಶಗಳಿಗೆ—ಎಲ್ಲಿ ಪ್ರತಿ ವರ್ಷ ಒಬ್ಬ ವ್ಯಕ್ತಿಯ ಆರೋಗ್ಯ ಆರೈಕೆಗೆ 20 ಡಾಲರುಗಳಿಗಿಂತ ಕಡಿಮೆ ಹಣವನ್ನು ಖರ್ಚುಮಾಡಲಾಗುತ್ತದೊ ಅಲ್ಲಿ—ಆ ಚಿಕಿತ್ಸೆಯು ತೀರ ದುಬಾರಿಯಾಗಿರಬಹುದು,” ಎಂದು ದ ಡೇಲಿ ಜರ್ನಲ್ ಹೇಳುತ್ತದೆ. ಆ ಲಸಿಕೆಯನ್ನು ಅಗ್ಗ ಬೆಲೆಯಲ್ಲಿ ಉತ್ಪಾದಿಸುವ ಸಮಯದ ವರೆಗೆ, ಬೇಧಿಯಿಂದಾಗಿ ಆಗುವ ನಿರ್ಜಲೀಕರಣವನ್ನು, ನಷ್ಟವಾಗಿರುವ ದ್ರವಗಳನ್ನು ಪುನರ್ಭರ್ತಿಮಾಡುವ ಮೂಲಕ ಉಪಚರಿಸಬೇಕು. ಈ ವಿಧಾನವನ್ನು 20 ವರ್ಷಗಳಿಂದ ಪರಿಣಾಮಕಾರಿಯಾಗಿ ಉಪಯೋಗಿಸಲಾಗಿದೆ.
ಕೆಲಸ, ಪ್ರಯಾಸ, ಮತ್ತು ಹೃದಯಾಘಾತಗಳು
ಹೃದಯ ಮತ್ತು ರಕ್ತಪರಿಚಲನೆಯ ಸಮಸ್ಯೆಗಳಿಗಾಗಿ, ಕೆಲಸದ ಸ್ಥಳದಲ್ಲಿನ ಮಾನಸಿಕ ಪ್ರಯಾಸವು ಅಪಾಯದ ಎರಡನೆಯ ಅತಿ ಪ್ರಾಮುಖ್ಯ ಅಂಶವಾಗಿದೆ. ಧೂಮಪಾನ ಮೊದಲನೆಯ ಅಂಶವಾಗಿದೆಯೆಂದು ಫ್ರಾಂಕ್‌ಫರ್ಟರ್ ರುಂಟ್‌ಶಾವ್ ವರದಿಸುತ್ತದೆ. ಜರ್ಮನಿಯ ಬರ್ಲಿನ್‌ನಲ್ಲಿ, ಔದ್ಯೋಗಿಕ ಸುರಕ್ಷೆ ಮತ್ತು ಆರೋಗ್ಯಕ್ಕಾಗಿರುವ ಫೆಡರಲ್ ಇನ್‌ಸ್ಟಿಟ್ಯೂಟ್ ನಡಿಸಿದಂತಹ ಒಂದು ಸಮೀಕ್ಷೆಯನ್ನು ಸಾರಾಂಶಿಸುತ್ತಾ, ಆ ವರದಿಯು ಹೇಳುವುದು: “ಅಪಾಯದಲ್ಲಿರುವ ಹೆಚ್ಚಿನವರು, ನಿರ್ಣಯಗಳನ್ನು ಮಾಡಲಿಕ್ಕಾಗಿ ಸೀಮಿತ ಸ್ವಾತಂತ್ರ್ಯವಿರುವವರು ಮತ್ತು ಸ್ವಲ್ಪವೇ ವೈವಿಧ್ಯತೆಯುಳ್ಳ ಉದ್ಯೋಗವಿರುವವರಾಗಿದ್ದಾರೆ. ದೃಷ್ಟಾಂತಕ್ಕಾಗಿ, ಅವರು ತಮ್ಮ ಸ್ವಂತ ಮನೆಯನ್ನು ಕಟ್ಟುತ್ತಿರುವುದರಿಂದ ಅಥವಾ ಒಬ್ಬ ಅಸ್ವಸ್ಥ ಸಂಬಂಧಿಯನ್ನು ಪರಾಮರಿಸುತ್ತಿರುವ ಕಾರಣದಿಂದ, ವಿಶ್ರಾಮದ ಸಮಯದಲ್ಲೂ ಒತ್ತಡದ ಕೆಳಗಿರುವಲ್ಲಿ, ಹೃದಯಾಘಾತದ ಅಪಾಯವು ಬಹುಮಟ್ಟಿಗೆ ಒಂಬತ್ತು ಪಟ್ಟು ಹೆಚ್ಚುತ್ತದೆ.” ನಿರ್ಣಯ ಮಾಡುವುದರಲ್ಲಿ ಕಾರ್ಮಿಕರಿಗೆ ಹೆಚ್ಚು ಸ್ವತಂತ್ರ ಕೊಡಬೇಕೆಂದು ಒಬ್ಬ ಪರಿಣತನು ಉತ್ತೇಜಿಸುತ್ತಾನೆ. “ತಿಂಗಳಿಗೊಮ್ಮೆ ಇಲಾಖೆಯೊಂದರ ಎಲ್ಲ ಕಾರ್ಮಿಕರ ನಡುವೆ ಒಂದು ಚರ್ಚೆಯು, ವಿಷಯಗಳನ್ನು ಉತ್ತಮಗೊಳಿಸಸಾಧ್ಯವಿದೆ.”
ಮೊಲೆಯುಣಿಸುವಿಕೆ ಅಸ್ವಸ್ಥತೆಗಳನ್ನು ಕಡಿಮೆಮಾಡುತ್ತದೆ
“2ರಿಂದ 7 ತಿಂಗಳುಗಳ ವಯಸ್ಸಿನ, 1,700ಕ್ಕಿಂತಲೂ ಹೆಚ್ಚು ಶಿಶುಗಳ ಮೇಲೆ ನಡೆಸಲ್ಪಟ್ಟ ಅಧ್ಯಯನಕ್ಕನುಸಾರ, ಮೊಲೆಯುಣಿಸಲ್ಪಟ್ಟ ಶಿಶುಗಳು ಕಿವಿಯ ಸೋಂಕುಗಳು ಮತ್ತು ಬೇಧಿಗೆ ತುತ್ತಾಗುವುದು ಕಡಿಮೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಗಾಗಿರುವ ಕೇಂದ್ರಗಳಲ್ಲಿನ ಸಂಶೋಧಕರು ಕಂಡುಕೊಂಡದ್ದೇನೆಂದರೆ, ಕೇವಲ ಡಬ್ಬಿ ಹಾಲು ಉಣ್ಣಿಸಲ್ಪಟ್ಟಿರುವ ಒಂದು ಶಿಶು ಈ ರೋಗಸ್ಥಿತಿಯನ್ನು ವಿಕಸಿಸಿಕೊಳ್ಳುವ ಸಂಭವವು, ಕೇವಲ ಮೊಲೆಯುಣಿಸಲ್ಪಟ್ಟ ಒಂದು ಶಿಶುವಿಗಿಂತ ಬಹುಮಟ್ಟಿಗೆ ಎರಡು ಪಟ್ಟು ಹೆಚ್ಚಾಗಿದೆ,” ಎಂದು ಹೆತ್ತವರು (ಇಂಗ್ಲಿಷ್) ಎಂಬ ಪತ್ರಿಕೆಯು ತಿಳಿಸುತ್ತದೆ. ಎದೆಹಾಲು, ತಾಯಿಯ ಸಂರಕ್ಷಕ ಪ್ರತಿವಿಷಗಳನ್ನು ದಾಟಿಸುವುದರಿಂದ ಸೋಂಕಿನ ವಿರುದ್ಧ ಸಂರಕ್ಷಿಸುತ್ತದೆಂದು ವೈದ್ಯರು ಬಹಳ ಸಮಯದಿಂದ ನಂಬಿದ್ದರೂ, ಪ್ರಯೋಜನಗಳು ಗಮನಾರ್ಹವಾದದ್ದಾಗಿವೆ ಎಂದು ಆ ಅಧ್ಯಯನವು ತೋರಿಸುತ್ತದೆ. ಆ ಅಧ್ಯಯನದ ಲೇಖಕನಾದ ಲಾರೆನ್ಸ್ ಗ್ರಮರ್‌ಸ್ಟ್ರಾನ್ ಹೇಳುವುದು: “ಪ್ರಥಮ ಆರು ತಿಂಗಳುಗಳಲ್ಲಿ ಒಂದು ಶಿಶುವಿಗೆ ಎಷ್ಟು ಹೆಚ್ಚು ಎದೆಹಾಲು ಸಿಗುತ್ತದೊ, ಅಷ್ಟು ಹೆಚ್ಚು ಒಳ್ಳೇದು.”
‘ಜಗತ್ತಿನ ಅತಿ ದಕ್ಷ ವಾಹನಸೌಕರ್ಯ’
ಒಂದು ನಗರದಲ್ಲಿ ನೀವು ಎಂಟು ಕಿಲೊಮೀಟರುಗಳಿಗಿಂತಲೂ ಕಡಿಮೆ ಅಂತರವನ್ನು ಪ್ರಯಾಣಮಾಡುತ್ತಿರುವಲ್ಲಿ, ಕಾರ್‌ಗಿಂತ ಒಂದು ಸೈಕಲ್ ಹೆಚ್ಚು ವೇಗವಾಗಿರಬಹುದು, ಎಂದು ಶ್ರೀಲಂಕದ ಕೊಲೊಂಬೊವಿನ ದ ಐಲೆಂಡ್ ವಾರ್ತಾಪತ್ರಿಕೆಯು ವರದಿಸುತ್ತದೆ. ಭೂಮಿಯ ಸ್ನೇಹಿತರು ಎಂಬ ಅಂತಾರಾಷ್ಟ್ರೀಯ ಪರಿಸರೀಯ ಗುಂಪು ಸೈಕಲನ್ನು, “ಜಗತ್ತಿನಲ್ಲಿರುವ ವಾಹನಸೌಕರ್ಯಗಳಲ್ಲಿಯೇ ಅತಿ ದಕ್ಷವಾದ ರೂಪ” ಎಂದು ಕರೆಯುತ್ತಾರೆ. ಅವರು ಹೇಳುವುದೇನೆಂದರೆ, ಕೇವಲ ಒಂದು ಗ್ಯಾಲನ್ ಗ್ಯಾಸೋಲೀನ್‌ಗೆ ಸಮಾನವಾಗಿರುವ ಆಹಾರದ ಶಕ್ತಿಯಿಂದ, ಒಂದು ಸೈಕಲ್ ಗಾಳಿಯನ್ನು ಮಲಿನಗೊಳಿಸದೆ 2,400 ಕಿಲೊಮೀಟರ್‌ಗಳಷ್ಟು ದೂರ ಪ್ರಯಾಣಿಸಬಲ್ಲದೆಂದು ಆ ವರದಿಯು ಅವಲೋಕಿಸುತ್ತದೆ. ಸೈಕಲ್‌ನ ಉಪಯೋಗವು ಆರೋಗ್ಯ ಪ್ರಯೋಜನಗಳನ್ನೂ ಒದಗಿಸುತ್ತದೆಂದು ಆ ವರದಿಯು ಕೂಡಿಸುತ್ತದೆ.
ಸಿಸೇರಿಯನ್ ಹೆರಿಗೆಯೊ ನಾರ್ಮಲ್ ಹೆರಿಗೆಯೊ?
ಬ್ರೆಸಿಲಿನ ವೈದ್ಯರು ಮತ್ತು ತಾಯಂದಿರು, ನಾರ್ಮಲ್ ಹೆರಿಗೆಗಿಂತಲೂ ಸಿಸೇರಿಯನ್ ಶಸ್ತ್ರಚಿಕಿತ್ಸೆಯನ್ನು ಅನೇಕವೇಳೆ ಇಷ್ಟಪಡುತ್ತಾರೆ. ವೈದ್ಯನು, “ತಾನು ಹೆಚ್ಚು ಹೆರಿಗೆಗಳನ್ನು ನಿರ್ವಹಿಸಬಲ್ಲನು, ಹೆಚ್ಚು ಹಣವನ್ನು ಸಂಪಾದಿಸಬಲ್ಲನು, ಮತ್ತು ತನ್ನ ವಾರಾಂತ್ಯವನ್ನು ಕಳೆದುಕೊಳ್ಳಬೇಕಾಗಿಲ್ಲ” ಎಂಬುದನ್ನು ಕಂಡುಕೊಳ್ಳುತ್ತಾನೆಂದು ವೇಜಾ ಪತ್ರಿಕೆಯು ವರದಿಸುತ್ತದೆ. ತಾಯಂದಿರು, “ನೋವನ್ನು ತಪ್ಪಿಸಲಿಕ್ಕಾಗಿ (ಆದರೆ, ಸಿಸೇರಿಯನ್ ಹೆರಿಗೆಯಿಂದ ಗುಣಮುಖವಾಗುವುದರಲ್ಲಿ ಹೆಚ್ಚು ನೋವು ಒಳಗೊಂಡಿರುತ್ತದೆ) ನಾರ್ಮಲ್ ಹೆರುವಿಕೆಯ ವಿಧಾನವನ್ನು ಅನುಭವಿಸದಿರಲು ಅಯ್ದುಕೊಳ್ಳುತ್ತಾರೆ, ಮತ್ತು ಆ ವಿಧಾನವು, ಸೌಂದರ್ಯದ ದೃಷ್ಟಿಯಿಂದ ದೇಹಕ್ಕೆ ಉಪಯುಕ್ತವಾಗಿದೆ (ಆದರೆ ಅದು ಹಾಗಿರುವುದಿಲ್ಲ) ಎಂದು ಅವರು ನಂಬುತ್ತಾರೆ.” ಸಾರ್ವಜನಿಕ ಆಸ್ಪತ್ರೆಗಳಲ್ಲಿ, ಎಲ್ಲ ಹೆರಿಗೆಗಳಲ್ಲಿ ಮೂರನೆಯ ಒಂದು ಭಾಗವು ಸಿಸೇರಿಯನ್ ಮೂಲಕ ಮಾಡಲಾಗುತ್ತದೆ, ಮತ್ತು ಕೆಲವೊಂದು ಖಾಸಗಿ ಆಸ್ಪತ್ರೆಗಳಲ್ಲಿ ಅದರ ಪ್ರಮಾಣವು 80 ಪ್ರತಿಶತದಷ್ಟು ಉಚ್ಚವಾಗಿರುತ್ತದೆ. “ಮಗುವಿನ ಜನನವು ಒಂದು ವ್ಯಾಪಾರಿ ಉತ್ಪನ್ನವಾಗಿ ಪರಿಣಮಿಸಿದೆ,” ಎಂದು ಕಾಂಪೀನಸ್ ವಿಶ್ವವಿದ್ಯಾನಿಲಯದಲ್ಲಿ ಹೆರಿಗೆ ವಿಭಾಗದ ಮುಖ್ಯಸ್ಥರಾಗಿರುವ ಡಾ. ಸ್ವಾವ್ ಲೂಯೀಷ್ ಕಾರ್ವಾಲ್ಯೂ ಪೀಂಟೂ ಸೀಲ್ವ ಹೇಳುತ್ತಾರೆ. “ನಾರ್ಮಲ್ ಹೆರಿಗೆಗೆ ವ್ಯತಿರಿಕ್ತವಾಗಿ, ಸಿಸೇರಿಯನ್ ಹೆರಿಗೆಯು ಒಂದು ಶಸ್ತ್ರಚಿಕಿತ್ಸೆಯಾಗಿದೆ ಎಂಬುದನ್ನು ಜನರು ಅನೇಕವೇಳೆ ಮರೆತುಬಿಡುತ್ತಾರೆ. ರಕ್ತ ನಷ್ಟವು ಹೆಚ್ಚಾಗಿರುತ್ತದೆ, ಅರಿವಳಿಕೆಯ ಸಮಯವು ಹೆಚ್ಚು ದೀರ್ಘವಾಗಿರುತ್ತದೆ, ಮತ್ತು ಸೋಂಕಿನ ಸಾಧ್ಯತೆಯು ಹೆಚ್ಚುತ್ತದೆ.” ಆ ವೈದ್ಯರಿಗನುಸಾರ, “ಸಿಸೇರಿಯನ್ ಹೆರಿಗೆಗಳನ್ನು ಕೇವಲ ಮೂರು ಸನ್ನಿವೇಶಗಳಲ್ಲಿ ಮಾಡಬೇಕು: ರೋಗಿಯ ಅಥವಾ ಮಗುವಿನ ಜೀವವು ಅಪಾಯದಲ್ಲಿರುವಾಗ, ಹೆರಿಗೆನೋವಿನ ಯಾವುದೇ ಸೂಚನೆಗಳಿಲ್ಲದಿರುವಾಗ, ಅಥವಾ ಒಮ್ಮಿಂದೊಮ್ಮೆಲೆ ತೊಡಕುಗಳು ಉಂಟಾಗುವಾಗ,” ಎಂದು ವೇಜಾ ಪತ್ರಿಕೆಯು ಹೇಳುತ್ತದೆ.