ಜಾಹೀರಾತಿನ ಕಡಲಲ್ಲಿ ಕೊಚ್ಚಿಕೊಂಡು ಹೋಗುವುದು
“ಪಪ್ಪಾ, ಚಂದ್ರನು ಏನನ್ನು ಜಾಹೀರುಪಡಿಸುವನು?” ಪುಟ್ಟ ಹುಡುಗಿಯೊಬ್ಬಳಿಂದ ಕೇಳಲ್ಪಟ್ಟ ಈ ವಿಚಿತ್ರ ಪ್ರಶ್ನೆಯು, ಸುಮಾರು 50 ವರ್ಷಗಳ ಹಿಂದೆ, ಕಾರ್ಲ್ ಸ್ಯಾಂಡ್ಬರ್ಗ್ ಅವರು ಬರೆದ ಒಂದು ಕವಿತೆಯಲ್ಲಿ ಕಾಣಿಸಿಕೊಂಡಿತು. ಭವಿಷ್ಯತ್ತಿನಲ್ಲಿ, ಇಂತಹ ಪ್ರಶ್ನೆಯು ಅಷ್ಟೊಂದು ವಿಚಿತ್ರವಾಗಿ ತೋರದಿರಬಹುದು. ನ್ಯೂ ಸೈಎಂಟಿಸ್ಟ್ ಎಂಬ ಪತ್ರಿಕೆಗನುಸಾರ, ಲಂಡನ್ನಲ್ಲಿರುವ ಜಾಹೀರಾತು ಕಂಪನಿಯ ಇಬ್ಬರು ಕಾರ್ಯನಿರ್ವಾಹಕರು, ಚಂದ್ರನ ಮೇಲೆ ಜಾಹೀರಾತುಗಳನ್ನು ಮೂಡಿಸಲು, ಪ್ರತಿಫಲಿತ ಸೂರ್ಯನಬೆಳಕನ್ನು ಉಪಯೋಗಿಸಲು ಯೋಜಿಸುತ್ತಿದ್ದಾರೆ.
ಚಂದ್ರನನ್ನು ಜಾಹೀರಾತು ಹಲಗೆಯಂತೆ ಉಪಯೋಗಿಸುವುದನ್ನು ಸ್ವಲ್ಪ ಊಹಿಸಿಕೊಳ್ಳಿರಿ! ಒಂದು ಜಾಹೀರಾತನ್ನು ಇಡೀ ಲೋಕಕ್ಕೆ ಪ್ರದರ್ಶಿಸುವುದರ ಕುರಿತು ಆಲೋಚಿಸಿರಿ. ಆ ಸಂದೇಶವನ್ನು, ಟಿವಿ ಇಲ್ಲವೆ ರೇಡಿಯೊ ಅನ್ನು ಆಫ್ಮಾಡುವಂತೆ ಆಫ್ಮಾಡಸಾಧ್ಯವಿಲ್ಲ, ಒಂದು ಟೆಲಿಫೋನ್ ಸಂಭಾಷಣೆಯನ್ನು ನಿಲ್ಲಿಸಿಬಿಡುವಂತೆ ನಿಲ್ಲಿಸಲು ಸಾಧ್ಯವಿಲ್ಲ, ಕಸದ ಡಬ್ಬಿಯಲ್ಲಿ ಎಸೆದುಬಿಡಲು ಸಾಧ್ಯವಿಲ್ಲ, ಇಲ್ಲವೆ ಒಂದು ರಿಮೋಟ್ ಕಂಟ್ರೋಲ್ನ ಸಹಾಯದಿಂದ ಅದರ ಧ್ವನಿಯನ್ನು ಕಡಿಮೆಮಾಡಸಾಧ್ಯವಿಲ್ಲ. ಆ ವಿಚಾರದಿಂದ ನೀವು ಹರ್ಷಚಿತ್ತರಾಗದಿದ್ದರೂ, ಇತರರಿಗೆ ಅದು ನನಸಾಗಲಿರುವ ಒಂದು ಕನಸಾಗಿರುವುದು.
ಜಾಹೀರಾತು ಚಂದ್ರನನ್ನು ಇನ್ನೂ ತಲಪದಿದ್ದರೂ, ಅದು ಇಡೀ ಭೂಮಿಯನ್ನು ಆವರಿಸಿಬಿಟ್ಟಿದೆ. ಹೆಚ್ಚಿನ ಅಮೆರಿಕನ್ ಪತ್ರಿಕೆಗಳು ಹಾಗೂ ವಾರ್ತಾಪತ್ರಿಕೆಗಳು, ಶೇಖಡ 60ರಷ್ಟು ಪುಟಗಳನ್ನು ಜಾಹೀರಾತುಗಳಿಗಾಗಿ ಪ್ರತ್ಯೇಕವಾಗಿಡುತ್ತವೆ. ರವಿವಾರದ ದ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆಯಲ್ಲೇ, ಸುಮಾರು 350 ಪುಟಗಳ ಜಾಹೀರಾತುಗಳು ಇರಬಹುದು. ಕೆಲವು ರೇಡಿಯೊ ಕೇಂದ್ರಗಳು, ಪ್ರತಿ ಗಂಟೆಗೆ 40 ನಿಮಿಷಗಳನ್ನು ಜಾಹೀರಾತುಗಳಿಗೆ ಮೀಸಲಾಗಿಡುತ್ತವೆ.
ಮತ್ತು ಟೆಲಿವಿಷನ್ ಕೂಡ ಇದೆ. ಒಂದು ಅಂದಾಜಿನ ಪ್ರಕಾರ, ಅಮೆರಿಕದ ಯೌವನಸ್ಥರು, ಪ್ರತಿ ವಾರ ಮೂರು ತಾಸುಗಳಷ್ಟು ಜಾಹೀರಾತುಗಳನ್ನು ವೀಕ್ಷಿಸುತ್ತಾರೆ. ಅವರು ಪ್ರೌಢ ಶಾಲೆಯ ವಿದ್ಯಾಭ್ಯಾಸವನ್ನು ಮುಗಿಸುವಷ್ಟರೊಳಗೆ, 3,60,000 ಟಿವಿ ಜಾಹೀರಾತುಗಳನ್ನು ವೀಕ್ಷಿಸಿರುವರು. ಟೆಲಿವಿಷನ್ ಜಾಹೀರಾತುಗಳನ್ನು ವಿಮಾನನಿಲ್ದಾಣಗಳಲ್ಲಿ, ಆಸ್ಪತ್ರೆಯ ನಿರೀಕ್ಷಣಾಲಯಗಳಲ್ಲಿ, ಮತ್ತು ಶಾಲೆಗಳಲ್ಲಿ ನೋಡಸಾಧ್ಯವಿದೆ.
ಪ್ರಮುಖ ಕ್ರೀಡೆಗಳು ಕೂಡ, ಈಗ ಜಾಹೀರಾತುಗಳ ಪ್ರಮುಖ ಮಾಧ್ಯಮಗಳಾಗಿ ಪರಿಣಮಿಸಿವೆ. ರೇಸ್ಗಾಗಿರುವ ಕಾರುಗಳಿಗೆ ಜಾಹೀರಾತುಗಳನ್ನು ಅಂಟಿಸಲಾಗಿರುತ್ತದೆ. ಕೆಲವು ಕ್ರೀಡಾಪಟುಗಳು ಹೆಚ್ಚಿನ ಹಣವನ್ನು ಜಾಹೀರಾತು ನಿಯೋಗಿಗಳಿಂದ ಪಡೆದುಕೊಳ್ಳುತ್ತಾರೆ. ಒಬ್ಬ ಅಗ್ರಗಣ್ಯ ಬಾಸ್ಕೆಟ್ಬಾಲ್ ಆಟಗಾರನು, ಚೆಂಡಾಟ ಆಡುತ್ತಾ 30.9 ಲಕ್ಷ ಡಾಲರುಗಳನ್ನು ಸಂಪಾದಿಸಿದನು. ಆದರೆ, ಅದಕ್ಕಿಂತಲೂ ಒಂಬತ್ತು ಪಟ್ಟು ಹೆಚ್ಚು ಹಣವನ್ನು ತಮ್ಮ ಉತ್ಪಾದನೆಗಳನ್ನು ಪ್ರವರ್ಧಿಸಲಿಕ್ಕಾಗಿ ಜಾಹೀರಾತುಗಾರರು ಅವನಿಗೆ ನೀಡಿದರು.
ಜಾಹೀರಾತುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅವುಗಳು ಸೂಪರ್ಮಾರ್ಕೆಟ್ಗಳಲ್ಲಿ, ಸ್ಟೋರ್ಗಳಲ್ಲಿ ಮತ್ತು ಎಲಿವೇಟರ್ಗಳು, ಗೋಡೆಗಳು, ಬಸ್ಗಳು ಹಾಗೂ ಟ್ರಕ್ಕುಗಳ ಮೇಲೆ ಪ್ರದರ್ಶಿಸಲ್ಪಟ್ಟಿರುವುದನ್ನು ನೋಡಸಾಧ್ಯವಿದೆ. ಅವು ಟ್ಯಾಕ್ಸಿಗಳ ಹಾಗೂ ಸುರಂಗ ರೈಲುದಾರಿಗಳ ಒಳಗೆ, ಮತ್ತು ಸಾರ್ವಜನಿಕ ಟ್ಲಾಯೆಟ್ಗಳ ಬಾಗಿಲುಗಳ ಮೇಲೆಯೂ ಶೋಭಾಯಮಾನವಾಗಿ ಅಂಟಿಸಿರಲಾಗಿರುತ್ತವೆ. ರಸ್ತೆಯಲ್ಲಿ ನಡೆಯುತ್ತಿರುವಾಗ, ಲೌಡ್ಸ್ಪೀಕರ್ಗಳ ಮೂಲಕ ನಾವು ಜಾಹೀರಾತುಗಳನ್ನು ಕೇಳಿಸಿಕೊಳ್ಳಸಾಧ್ಯವಿದೆ ಮತ್ತು ಅನೇಕ ದೇಶಗಳಲ್ಲಿ ಟೆಲಿಫೋನಿನಲ್ಲಿ ಮಾತಾಡುತ್ತಿರುವಾಗ ಅವು ನಮ್ಮ ಕಿವಿಗೆ ಬೀಳುತ್ತವೆ. ಕೆಲವು ದೇಶಗಳಲ್ಲಿ ಅಂಚೆಯ ಮೂಲಕ ಎಷ್ಟೊಂದು ಜಾಹೀರಾತುಗಳು ಬರುತ್ತವೆಂದರೆ, ಅವುಗಳನ್ನು ಪಡೆದುಕೊಳ್ಳುವ ಅನೇಕರು, ಅಂಚೆಪೆಟ್ಟಿಗೆಯಿಂದ ನೇರವಾಗಿ ಹತ್ತಿರದ ಕಸದಬುಟ್ಟಿಯಲ್ಲಿ ಅವನ್ನು ಎಸೆದುಬಿಡುತ್ತಾರೆ.
ಒಂದು ಭೌಗೋಲಿಕ ಜಾಹೀರಾತು ಎಜೆನ್ಸಿಯಾದ ಮ್ಯಾಕನ್-ಎರಿಕ್ಸನ್ ಅವರಿಂದ ಪ್ರಕಾಶಿಸಲ್ಪಟ್ಟ ಇನ್ಸೈಡರ್ಸ್ ರಿಪೋರ್ಟ್ಗನುಸಾರ, 1990ರಲ್ಲಿ ಲೋಕವ್ಯಾಪಕವಾಗಿ ಜಾಹೀರಾತುಗಳಿಗಾಗಿ ವ್ಯಯಿಸಲ್ಪಟ್ಟ ಹಣವು, 11,020 ಶತಕೋಟಿಯೆಂದು ಅಂದಾಜುಮಾಡಲಾಗಿದೆ. ಆ ಸಮಯದಂದಿನಿಂದ ಮೊತ್ತಗಳು ಗಗನಕ್ಕೇರಿದ್ದು, 1997ಕ್ಕಾಗಿ 16,464 ಶತಕೋಟಿಯಷ್ಟು ಮತ್ತು 1998ಕ್ಕಾಗಿ 17,376 ಶತಕೋಟಿಯಷ್ಟನ್ನು ಅಂದಾಜುಮಾಡಲಾಗಿದೆ. ಇದು ಭಾರಿ ಮೊತ್ತವೇ ಸರಿ!
ಇದೆಲ್ಲದರ ಪರಿಣಾಮವು ಏನಾಗಿದೆ? ಒಬ್ಬ ವಿಶ್ಲೇಷಕಿಯು ಹೀಗೆ ಹೇಳಿದಳು: “ಸಂಸ್ಕೃತಿಯ ಅತ್ಯಂತ ಪ್ರಭಾವಕಾರಿ ಸಾಮಾಜಿಕ ಶಕ್ತಿಗಳಲ್ಲಿ, ಜಾಹೀರಾತು ಒಂದಾಗಿದೆ. . . . ಅವು ಕೇವಲ ಉತ್ಪಾದನೆಗಳ ಮಾರಾಟಮಾಡುವುದಿಲ್ಲ. ಬದಲಿಗೆ, ನಾವು ಯಾರಾಗಿದ್ದೇವೆ ಮತ್ತು ಯಾರಾಗಿರಬೇಕು ಎಂಬುದರ ಕುರಿತಾದ ಕಲ್ಪನೆಗಳನ್ನು, ಮೌಲ್ಯಗಳನ್ನು, ಗುರಿಗಳನ್ನು ಮತ್ತು ಭಾವನೆಗಳ ಮಾರಾಟವನ್ನು ಮಾಡುತ್ತವೆ. . . . ಅವು ನಮ್ಮ ಮನೋಭಾವಗಳನ್ನು ರೂಪಿಸುತ್ತವೆ, ಮತ್ತು ನಮ್ಮ ಮನೋಭಾವಗಳು ನಮ್ಮ ವರ್ತನೆಯನ್ನು ರೂಪಿಸುತ್ತವೆ.”
ಜಾಹೀರಾತುಗಳಿಂದ ನೀವು ತಪ್ಪಿಸಿಕೊಳ್ಳುವುದು ಅಸಾಧ್ಯವಾಗಿರುವುದರಿಂದ, ಅವು ಹೇಗೆ ಕೆಲಸಮಾಡುತ್ತವೆ ಮತ್ತು ಅವು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಸಾಧ್ಯವಿದೆ ಎಂಬುದನ್ನು ನೀವು ಏಕೆ ತಿಳಿದುಕೊಳ್ಳಬಾರದು?