ಅಮೆರಿಕದ ಮೂಲನಿವಾಸಿಗಳು ಮತ್ತು ಬೈಬಲು
ಯೂರೋಪಿನವರು ಅಮೆರಿಕವನ್ನು ಅತಿಕ್ರಮಿಸಿದ ಸಮಯದಿಂದ, ಅಲ್ಲಿನ ಅಮೆರಿಕನರಿಗೆ ಬೈಬಲಿನ ಬಗ್ಗೆ ಕಲಿಸಲು ಅನೇಕರು ಪ್ರಯತ್ನಪಟ್ಟಿದ್ದಾರೆ.
17ನೇ ಶತಮಾನದಿಂದ, ಸಂಪೂರ್ಣ ಬೈಬಲು ಸುಮಾರು ಆರು ಉತ್ತರ ಅಮೆರಿಕನ್ ಭಾಷೆಗಳಲ್ಲಿ ಭಾಷಾಂತರಗೊಂಡಿದೆ. ಮೊದಲನೆಯದ್ದು, ಬಾಸ್ಟನ್ ಮತ್ತು ರಾಕ್ಸ್ಬೆರೀ ಮ್ಯಾಸಚೂಸೆಟ್ಸ್ನ ಬಳಿಯಿರುವ ಮ್ಯಾಸಚೂಸೆಟ್ಸ್ ನಾಡಿಗರಿಗಾಗಿ 1663ರಲ್ಲಿ ಮುದ್ರಿಸಲ್ಪಟ್ಟ ಜಾನ್ ಎಲಿಯಟ್ಸ್ ಅವರ ಬೈಬಲ್ ಆಗಿತ್ತು. ಎನ್ಸೈಕ್ಲೊಪಿಡೀಯ ಆಫ್ ನಾರ್ತ್ ಅಮೆರಿಕನ್ ಇಂಡಿಯನ್ಸ್ ಎಂಬುದರಲ್ಲಿ ಬರೆಯುತ್ತಾ, ಹಾರ್ವೀ ಮಾರ್ಕೋವಿಟ್ಸ್ ಹೇಳುವುದು: “ವಲಸೆಗಾರರಲ್ಲಿ ಹೆಚ್ಚಿನವರು [ಒಂದು] ಸಂಧಾನಕ್ಕೆ [ಅಂದರೆ, “ಹೊಸ ಲೋಕದ ‘ಅನಾಗರಿಕರನ್ನು’ ‘ನಾಗರಿಕರನ್ನಾಗಿ’ ಮಾಡಲು”] ಬಂದದ್ದರ ವಿಷಯದಲ್ಲಿದ್ದ ಪ್ರಾಮಾಣಿಕತೆಯನ್ನು ಅನೇಕ ಇತಿಹಾಸಕಾರರು ಈಗ ಸಂಶಯಿಸುವುದಾದರೂ, ಎಲಿಯಟ್ನ ಬದ್ಧತೆಯ ಆಳವು ಮ್ಯಾಸಚೂಸೆಟ್ ಭಾಷೆಯನ್ನು ಕಲಿಯುವುದರಲ್ಲಿ ಮತ್ತು ಬೈಬಲನ್ನು ನಕಲುಮಾಡುವುದಕ್ಕಾಗಿ ಅಕ್ಷರಸಂಯೋಜನೆಯನ್ನು ಮಾಡುವುದರಲ್ಲಿ ಅವನು ಶ್ರಮಪಟ್ಟ ಹದಿನೈದು ವರ್ಷಗಳೇ ಮೂಕಸಾಕ್ಷಿಯಾಗಿವೆ. ಎಲಿಯಟ್ ಈ ಪರಿಶ್ರಮದ ಕೆಲಸವನ್ನು ‘ಪಾವನ ಮತ್ತು ಪವಿತ್ರ ಕೆಲಸವಾಗಿ, ಭಯಭಕ್ತಿಯಿಂದ ಮತ್ತು ಪೂಜ್ಯಭಾವನೆಯಿಂದ ಗೌರವಿಸಲ್ಪಡಬೇಕಾದ ಕೆಲಸವಾಗಿ’ ವೀಕ್ಷಿಸಿದನು.
ಬೈಬಲಿನ ಕೆಲವು ಭಾಗಗಳು ಇತರ ಅಮೆರಿಕದ ಮೂಲನಿವಾಸಿಗಳ ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟರೂ, ಸಂಪೂರ್ಣ ಬೈಬಲ್ ಪ್ರಕಾಶಿಸಲ್ಪಡುವುದಕ್ಕೆ ಸುಮಾರು ಇನ್ನೂರು ವರ್ಷಗಳು ತಗಲಿದವು. ಅದು ಬ್ರಿಟಿಷ್ ಮತ್ತು ವಿದೇಶಿ ಬೈಬಲ್ ಸೊಸೈಟಿಯವರಿಂದ ಪ್ರಕಾಶಿಸಲ್ಪಟ್ಟ ವೆಸ್ಟರ್ನ್ ಕ್ರೀ ಭಾಷೆಯಲ್ಲಿನ (1862) ಬೈಬಲಾಗಿತ್ತು. ಇನ್ನಿತರ ಭಾಷಾಂತರಗಳು ಸಹ ಬೇಗನೆ ಹೊರಬಂದವು: ಈಸ್ಟರ್ನ್ ಆರ್ಕ್ಟಿಕ್ ಇನ್ಯುಅಟ್ (1871); ಡಕೋಟ ಅಥವಾ ಈಸ್ಟರ್ನ್ ಸಿಸೂ (1880); ಮತ್ತು ಸಬ್ಆರ್ಕ್ಟಿಕ್ ಅಮೆರಿಕನ್ ಭಾಷೆಯಾದ ಗ್ವಿಚನ್ (1898) ಬೈಬಲುಗಳು ಆಗಿದ್ದವು.
ಇತ್ತೀಚೆಗಿನ ಸಂಪೂರ್ಣ ಬೈಬಲು, 1985ರಲ್ಲಿ ಎರಡು ಬೈಬಲ್ ಸೊಸೈಟಿಗಳ ತಯಾರಿಸುವಿಕೆ ಮತ್ತು ಸಹಕಾರದಿಂದ ಸುಮಾರು 41 ವರ್ಷಗಳ ಬಳಿಕ ಪ್ರಕಾಶಿಸಲ್ಪಟ್ಟ ನವಾಹೋ ಭಾಷಾಂತರವಾಗಿದೆ. ಹಿಬ್ರೂ ಮತ್ತು ಗ್ರೀಕ್ ಶಾಸ್ತ್ರವಚನಗಳ ಕೆಲವೊಂದು ಭಾಗಗಳು ಈಗ ಸುಮಾರು 46 ಅಮೆರಿಕನ್ ಇಂಡಿಯನ್ ಭಾಷೆಗಳಲ್ಲಿ ಲಭ್ಯವಿವೆ.
ಯಾರು ನೇತೃತ್ವವನ್ನು ವಹಿಸಿಕೊಂಡಿದ್ದಾರೆ?
ಮಾರ್ಕೋವಿಟ್ಸ್ ಹೇಳುವುದು: “ಬೈಬಲನ್ನು ಭಾಷಾಂತರಮಾಡುವ ಕೆಲಸವನ್ನು ಹೆಚ್ಚಾಗಿ ಪ್ರಾಟೆಸ್ಟಂಟರೇ ಮಾಡಿದರು ಎಂಬುದು . . . ಪ್ರಾಮುಖ್ಯವಾದ ವಿಚಾರವಾಗಿದೆ.” ಎರಡನೇ ವ್ಯಾಟಿಕನ್ ಮಹಾಸಭೆಗೆ (1962) ಮುಂಚೆ “ಬೈಬಲಿಗೆ ಸಂಬಂಧಿಸಿದ ಶಾಸ್ತ್ರವಚನಗಳ ಸರಿಯಾದ ಅರ್ಥನಿರೂಪಣೆಗಳನ್ನು ತಿಳಿದುಕೊಳ್ಳಲು, ಜನಸಾಮಾನ್ಯರು ಯೋಗ್ಯವಾದ . . . ತರಬೇತಿಯನ್ನು ಹೊಂದಿಲ್ಲವೆಂದು ನೆನಸುತ್ತಾ, ಪರಿಣತರಲ್ಲದವರ ನಡುವೆ ಬೈಬಲಿನ ಹಬ್ಬುವಿಕೆಯನ್ನು” ಕ್ಯಾಥೊಲಿಕ್ ಚರ್ಚು “ನಿರುತ್ತೇಜಿಸಿತು” ಎಂದು ಅದೇ ಲೇಖಕನು ಹೇಳುತ್ತಾನೆ.
ಶೈಯ್ಯಾನ್, ಹಾವಸೂಪೈ, ಮಿಕ್ಮ್ಯಾಕ್, ಮತ್ತು ಸೂನೀ ಭಾಷೆಗಳನ್ನು ಒಳಗೊಂಡು, ಉತ್ತರ ಅಮೆರಿಕದ ಮೂಲನಿವಾಸಿಗಳ ಭಾಷೆಗಳಲ್ಲಿ ಭಾಷಾಂತರವನ್ನು ಮಾಡುವ ಸುಮಾರು 20 ಯೋಜನೆಗಳಲ್ಲಿ ಹಲವಾರು ಬೈಬಲ್ ಸೊಸೈಟಿಗಳು ಈಗ ಒಳಗೂಡಿವೆ. ನವಾಹೋ ಜನರಿಗಾಗಿ ಗ್ರೀಕ್ ಶಾಸ್ತ್ರವಚನಗಳ ಹೊಸ ಭಾಷಾಂತರವನ್ನು ಮಾಡಲಾಗುತ್ತಿದೆ. ಮಧ್ಯ ಹಾಗೂ ದಕ್ಷಿಣ ಅಮೆರಿಕದ ಇಂಡಿಯನರಿಗಾಗಿ ಇತರ ಭಾಷಾಂತರಗಳು ಸಿದ್ಧವಾಗುತ್ತಿವೆ.
ಯೆಹೋವನ ಸಾಕ್ಷಿಗಳು ಯಾವುದೇ ಪ್ರಾಟೆಸ್ಟಂಟ್ ಸಂಸ್ಥೆಗಳಿಗೆ ಸೇರಿಲ್ಲ. ಆದರೂ, ಅವರು ಅಮೆರಿಕದ ಮೂಲನಿವಾಸಿಗಳಿಗೆ ಸಹಾಯಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ, ನೀತಿಯು ವಾಸವಾಗಿರುವ ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’ದ ಕುರಿತಾದ ಬೈಬಲಿನ ಸತ್ಯಗಳಿಗೆ ಅನೇಕ ಅಮೆರಿಕದ ಮೂಲನಿವಾಸಿಗಳು ಪ್ರತಿಕ್ರಿಯಿಸುತ್ತಿದ್ದಾರೆ. (2 ಪೇತ್ರ 3:13) ಈಗ ಅಮೆರಿಕದ ಮೂಲನಿವಾಸಿಗಳ ಭಾಷೆಗಳಲ್ಲಿ ಲಭ್ಯವಿರುವ ಬೈಬಲುಗಳನ್ನು ಸಾಕ್ಷಿಗಳು ಉಪಯೋಗಿಸುತ್ತಿದ್ದಾರೆ. ಅಯ್ಮರಾ, ಕ್ರೀ, ಡಕೋಟ, ಗ್ವಾರನಿ, ಇನೂಕ್ಟಟುಟ್, ಇರಕ್ವಾಯ್ ನವಾಹೋ ಕೆಚ್ಆ ಮತ್ತು ಇನ್ನಿತರ ಒಂಬತ್ತು ಭಾಷೆಗಳನ್ನು ಒಳಗೊಂಡು, ಹಲವಾರು ಅಮೆರಿಕದ ಮೂಲನಿವಾಸಿಗಳ ಭಾಷೆಗಳಲ್ಲಿ ವಾಚ್ ಟವರ್ ಸೊಸೈಟಿಯಿಂದ ಭಾಷಾಂತರಿಸಲ್ಪಟ್ಟಿರುವ ಬೈಬಲ್ ಸಾಹಿತ್ಯವನ್ನು ಸಹ ಅವರು ಉಪಯೋಗಿಸುತ್ತಾರೆ.—ಸೆಪ್ಟೆಂಬರ್ 8, 1996ರ ಅವೇಕ್! ಪತ್ರಿಕೆಯನ್ನು ನೋಡಿರಿ.
[ಪುಟ 20 ರಲ್ಲಿರುವ ಚಿತ್ರ]
“ಯೆಹೋವ” ಎಂಬ ಹೆಸರು ನವಾಹೋ ಬೈಬಲಿನ ಕೀರ್ತನೆ 68:4ರಲ್ಲಿ ಕಂಡುಬರುತ್ತದೆ