ಸಿಡ್ನಿ ಗಿಜಿಗುಟ್ಟುವ ಒಂದು ರೇವು ಪಟ್ಟಣ
ಆಸ್ಟ್ರೇಲಿಯದ ಎಚ್ಚರ! ಸುದ್ದಿಗಾರರಿಂದ
“ಸಿಡ್ನಿ, ಆಸ್ಟ್ರೇಲಿಯ” ಎಂಬ ಶಬ್ದಗಳನ್ನು ನೀವು ಕೇಳಿಸಿಕೊಳ್ಳುವಾಗ ನಿಮ್ಮ ಮನಸ್ಸಿಗೆ ಏನು ಹೊಳೆಯುತ್ತದೆ? ನೀರಿನ ಪಕ್ಕದಲ್ಲೇ ನೆಲೆಸಿದ್ದು, ಮೇಲ್ಚಾವಣಿಗಳು ಹಡಗಿನ ನೌಕಾಪಟಗಳಂತೆ ಅಥವಾ ದೊಡ್ಡ ಶಂಖಗಳಂತೆ ಅಲೆಯಲೆಯಾಗಿ ಉಬ್ಬಿಕೊಂಡಿರುವಂತೆ ತೋರುವ ಅಪೂರ್ವವಾದ ನಾಟಕ ಮಂದಿರ (ಆಪೆರ ಹೌಸ್)ವು ತತ್ಕ್ಷಣ ನಿಮ್ಮ ಮನಸ್ಸಿಗೆ ಬರುತ್ತದೋ? ನಿಮ್ಮ ಅಭಿರುಚಿಗಳ ಮೇಲೆ ಹೊಂದಿಕೊಂಡು, ಬಹುಶಃ ಅದೇ ಚಿತ್ರವು ಥಟ್ಟನೆ ನಿಮ್ಮ ಮನಃಪಟಲದಲ್ಲಿ ಮೂಡಿಬರಬಹುದು.
ಆಸ್ಟ್ರೇಲಿಯದ ಪ್ರವೇಶದ್ವಾರ ಎಂದು ಕರೆಯಲ್ಪಡುವ ಸಿಡ್ನಿ ನಗರವು, ಇಡೀ ಜಗತ್ತಿನಲ್ಲೇ ಹೆಚ್ಚು ನಯನಮನೋಹರವಾಗಿರುವ ನಗರಗಳಲ್ಲಿ ಒಂದಾಗಿದೆ ಎಂಬುದು ಅನೇಕರ ಅಭಿಪ್ರಾಯ. ಇದು, ಈ ಭೂಖಂಡದ ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯವಾದ ನ್ಯೂ ಸೌತ್ ವೇಲ್ಸ್ನ ರಾಜಧಾನಿಯಾಗಿದೆ. ಆದರೂ, ಇದರ ರಾಷ್ಟ್ರೀಯ ರಾಜಧಾನಿಯು ಕ್ಯಾನ್ಬೆರವಾಗಿದ್ದು, ಇದು ಸಿಡ್ನಿ ಮತ್ತು ಮೆಲ್ಬರ್ನ್ನ ಮಧ್ಯದಾರಿಯಲ್ಲಿದೆ.
ಈ ನಗರದ ನಿವಾಸಿಗಳು ತಮ್ಮನ್ನು ಸಿಡ್ನಿವಾಸಿಗಳೆಂದು ಕರೆಸಿಕೊಳ್ಳಲು ಇಷ್ಟಪಡುತ್ತಾರೆ ಮತ್ತು ಸಾಮಾನ್ಯವಾಗಿ ಇವರು ಸ್ನೇಹಪರರೂ ಆರಾಮವಾಗಿರುವವರೂ ಆಗಿದ್ದಾರೆ. ಜನಪ್ರಿಯ ಪದ್ಯಗಳಲ್ಲಿ ಅನೇಕವೇಳೆ “ಸಿಡ್ನಿ ಟೌನ್” ಎಂದು ಸಂಬೋಧಿಸಲ್ಪಡುವ ಸಿಡ್ನಿಯು, ಕಡಿಮೆಪಕ್ಷ ಮೂರು ವಿಶೇಷ ಹೆಗ್ಗುರುತುಗಳಿಗೆ ಪ್ರಸಿದ್ಧವಾಗಿದೆ: (1) ಆಳವಾಗಿರುವ ಒಂದು ನೈಸರ್ಗಿಕ ಬಂದರು, (2) ಹೃದಯಸ್ಪರ್ಶಿಯೂ, ಒಂದೇ ಸ್ಪ್ಯಾನ್ (ಎರಡು ಆಧಾರಸ್ತಂಭಗಳ ನಡುವಣ ಅಂತರ)ವುಳ್ಳದ್ದೂ ಆಗಿರುವ ಬಂದರಿನ ಸೇತುವೆ, ಮತ್ತು (3) ಅಪೂರ್ವವಾದ ನಾಟಕ ಮಂದಿರ.
ಇಲ್ಲಿನ ಹವಾಮಾನವು ಹದವಾಗಿದೆ. ತುಂಬ ಬೇಸಗೆಯಿರುವ ಫೆಬ್ರವರಿ ತಿಂಗಳಿನಲ್ಲಿ ಸರಾಸರಿ 22° ಸೆಲ್ಸಿಯಸ್ನಷ್ಟು ಉಷ್ಣತೆಯು ಇರುತ್ತದೆ, ಮತ್ತು ತುಂಬ ಶೀತಮಯವಾದ ಜುಲೈ ತಿಂಗಳಿನಲ್ಲಿ ಸರಾಸರಿ 12° ಸೆಲ್ಸಿಯಸ್ನಷ್ಟು ಉಷ್ಣತೆಯು ಇರುತ್ತದೆ. ಆಸ್ಟ್ರೇಲಿಯದ ಮಳೆಯು ತುಂಬ ಅನಿರ್ದಿಷ್ಟವಾಗಿದೆ ಮತ್ತು ಅದು ಯಾವಾಗ ಬರುತ್ತದೆ ಎಂಬುದನ್ನು ಮುಂತಿಳಿಸಲು ಸಾಧ್ಯವಿಲ್ಲ. ಆದರೆ ಸಿಡ್ನಿಯಲ್ಲಿ ಒಂದು ವರ್ಷಕ್ಕೆ ಸರಾಸರಿ 45 ಇಂಚುಗಳಷ್ಟು ಮಳೆಸುರಿಯುತ್ತದೆ ಮತ್ತು ಅಧಿಕಾಂಶ ಮಳೆಯು ಬೇಸಗೆ ತಿಂಗಳುಗಳಲ್ಲಿ (ಡಿಸೆಂಬರ್ನಿಂದ ಮಾರ್ಚ್ ತನಕ) ಇರುತ್ತದೆ.
ಮುಂದಿನ ತಿಂಗಳುಗಳಲ್ಲಿ ನೀವು ಸಿಡ್ನಿಯ ಕುರಿತು ಇನ್ನೂ ಹೆಚ್ಚು ವಿಷಯಗಳನ್ನು ಕೇಳಿಸಿಕೊಳ್ಳುವಿರಿ, ಏಕೆಂದರೆ ಇದನ್ನು 2000 ಇಸವಿಯಲ್ಲಿ ಒಲಿಂಪಿಕ್ ಗೇಮ್ಸ್ನ ಆತಿಥೇಯ ನಗರವಾಗಿ ಆಯ್ಕೆಮಾಡಲಾಗಿದೆ.
ದಂಡನೆಯ ಸ್ಥಳವು ಸಮೃದ್ಧ ನಗರವಾಗಿ ಮಾರ್ಪಟ್ಟದ್ದು
ಜಗತ್ಪ್ರಸಿದ್ಧವಾಗಿರುವ ಇನ್ನಿತರ ನಗರಗಳಿಗೆ ಹೋಲಿಸುವಾಗ, ಸಿಡ್ನಿಯು ತೀರ ಇತ್ತೀಚಿನದ್ದಾಗಿದೆ. ಏಕೆಂದರೆ 1770ರಲ್ಲಿ, ಕ್ಯಾಪ್ಟನ್ ಜೇಮ್ಸ್ ಕುಕ್ ಎಂಬ ಬ್ರಿಟಿಷ್ ಅನ್ವೇಷಕನು ಬಾಟನಿ ಕೊಲ್ಲಿ ಎಂಬ ಸ್ಥಳಕ್ಕೆ ಬಂದು ಮುಟ್ಟಿದಾಗಿನಿಂದ, ಅಂದರೆ ಸುಮಾರು 200 ವರ್ಷಗಳಿಗೂ ಪೂರ್ವದಲ್ಲಿ ಇದರ ಇತಿಹಾಸವು ಆರಂಭವಾಗುತ್ತದೆ. (ಈಗ ಬಾಟನಿ ಕೊಲ್ಲಿಯ ಉತ್ತರ ತೀರದಲ್ಲಿ ಸಿಡ್ನಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇದೆ.) ಹಡಗಿನಲ್ಲಿ ಉತ್ತರಕ್ಕೆ ಕೆಲವು ಮೈಲುಗಳಷ್ಟು ದೂರ ಹೋದಾಗ, ಅವನು ಒಂದು ಆಳವಾದ ನೈಸರ್ಗಿಕ ಬಂದರನ್ನು ಸುತ್ತಿ ಬಳಸಿದಾಗ, ಆ ಸ್ಥಳಕ್ಕೆ ಪೋರ್ಟ್ ಜ್ಯಾಕ್ಸನ್ ಎಂದು ಹೆಸರಿಟ್ಟನು. ಹೀಗೆ, ಆ ಬಂದರಿನ ಕಡೆಗೆ ನಡೆಸುತ್ತಿದ್ದ ಎರಡು ಭೂಶಿರಗಳ ನಡುವೆ ಅವನು ಹೋಗಲಿಲ್ಲ.
ತದನಂತರ, 1788ರಲ್ಲಿ, ಗವರ್ನರ್ ಆರ್ಥರ್ ಫಿಲಿಪ್ ಪ್ರಪ್ರಥಮ ನೌಕಾಪಡೆಯೊಂದಿಗೆ ಹಾಗೂ ಬ್ರಿಟಿಷ್ ಖೈದಿಗಳಿದ್ದ ಹಡಗಿನ ಸರಕುಗಳೊಂದಿಗೆ ಇಂಗ್ಲೆಂಡ್ನಿಂದ ಈ ಸ್ಥಳಕ್ಕೆ ಬಂದನು. ಬಾಟನಿ ಕೊಲ್ಲಿಯಲ್ಲಿ ಒಂದು ನೆಲಸುನಾಡನ್ನು ಸ್ಥಾಪಿಸಲಿಕ್ಕಾಗಿ ಅವನು ಕೊಲ್ಲಿಯ ದಡಕ್ಕೆ ಹೋದನು, ಆದರೆ ಆ ಜಾಗವು ನೆಲಸುನಾಡಿಗೆ ಯೋಗ್ಯವಾಗಿಲ್ಲ ಎಂಬ ನಿರ್ಧಾರಕ್ಕೆ ಅವನು ಬಂದನು. ಆದುದರಿಂದ, ಹೆಚ್ಚು ಉತ್ತಮವಾದ ಒಂದು ಸ್ಥಳವನ್ನು ಕಂಡುಕೊಳ್ಳುವ ಉದ್ದೇಶದಿಂದ, ಅವನು ಮೂರು ದೋಣಿಗಳನ್ನು ತೆಗೆದುಕೊಂಡು ಉತ್ತರ ದಿಕ್ಕಿಗೆ ಪ್ರಯಾಣಿಸಿದನು.
ಆದರೆ, ಅಲ್ಲಿಂದ ಕೆಲವೇ ಕಿಲೊಮೀಟರುಗಳಷ್ಟು ದೂರ ಪ್ರಯಾಣಿಸಿದಾಗ, ಆಶ್ಚರ್ಯಗೊಳಿಸುವಷ್ಟು ಆಳವೂ ವಿಸ್ತಾರವೂ ಆದ ಒಂದು ಕೊಲ್ಲಿಯು ಅವನ ಕಣ್ಣಿಗೆ ಬಿತ್ತು. ಈ ಮುಂಚೆ ಕ್ಯಾಪ್ಟನ್ ಕುಕ್ ಅಲ್ಲಿಂದ ಪ್ರಯಾಣಿಸಿದ್ದನಾದರೂ ಅವನು ಅದನ್ನು ನೋಡಿರಲಿಲ್ಲ. ಇಂಗ್ಲೆಂಡ್ನ ಗೃಹ ಸಚಿವರಾಗಿದ್ದ ಲಾರ್ಡ್ ಸಿಡ್ನಿಗೆ ಕಳುಹಿಸಿದ ತುರ್ತು ಸಂದೇಶದಲ್ಲಿ, ಪೋರ್ಟ್ ಜ್ಯಾಕ್ಸನ್ನ ಕುರಿತಾದ ತನ್ನ ಅಭಿಪ್ರಾಯಗಳನ್ನು ಫಿಲಿಪ್ ಹೀಗೆ ವ್ಯಕ್ತಪಡಿಸಿದನು: “ಜಗತ್ತಿನಲ್ಲೇ ಅತ್ಯುತ್ತಮವಾದ ಬಂದರನ್ನು ಕಂಡುಕೊಂಡ ಸಂತೃಪ್ತಿ . . . ನಮಗಾಗಿದೆ. ಇದರಲ್ಲಿ ಸಾಲಾಗಿ ಸಾವಿರ ಹಡಗುಗಳು ಅತಿ ಸುರಕ್ಷಿತವಾಗಿ ಪ್ರಯಾಣಿಸಬಹುದು.” ಲಾರ್ಡ್ ಸಿಡ್ನಿಯ ಗೌರವಾರ್ಥವಾಗಿ, ಫಿಲಿಪ್ ಈ ಕೊಲ್ಲಿಗೆ ಸಿಡ್ನಿ ಕೊಲ್ಲಿಯೆಂದು ಹೆಸರಿಟ್ಟು, ಅಲ್ಲಿ ಮೊತ್ತಮೊದಲ ನೆಲಸುನಾಡನ್ನು ಸ್ಥಾಪಿಸಿದನು. ಸಿಡ್ನಿ ಎಂಬ ಹೆಸರು ಇಂದಿನ ವರೆಗೂ ಅಚ್ಚಳಿಯದೆ ಉಳಿದಿದೆ.
ಖೈದಿಗಳಲ್ಲಿ ಎಲ್ಲ ಗಂಡಸರನ್ನು ಹಡಗಿನಿಂದ ಇಳಿಸಲಾಯಿತು, ಮತ್ತು ಕೂಡಲೆ ಅವರು ಆ ಪ್ರದೇಶವನ್ನು ಸ್ವಚ್ಛಗೊಳಿಸಿ, ಸರಿಸುಮಾರಾದ ವಸತಿಗೃಹಗಳನ್ನು ಕಟ್ಟಲಾರಂಭಿಸಿದರು. ನೌಕಾಪಡೆಯು, ಅನೇಕ ಖೈದಿಗಳನ್ನು ಮತ್ತು ಅವರ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬಂದಿದ್ದರಿಂದ, ಇವರೆಲ್ಲರೂ ತಮ್ಮ ಜನ್ಮಸ್ಥಳದಿಂದ ಸಾವಿರಾರು ಕಿಲೊಮೀಟರುಗಳಷ್ಟು ದೂರದಲ್ಲಿದ್ದ ಈ ಹೊಸ “ಮನೆ”ಗೆ ಹೊಂದಿಕೊಳ್ಳಲು ತಮ್ಮಿಂದಾದಷ್ಟು ಪ್ರಯತ್ನವನ್ನು ಮಾಡಬೇಕಾಗಿತ್ತು. ಮುಂದಿನ 20 ವರ್ಷಗಳ ವರೆಗೆ ಈ ನೆಲಸುನಾಡಿನಲ್ಲಿ ಕೇವಲ ತಾತ್ಕಾಲಿಕ ಶಿಬಿರಗಳು ಮತ್ತು ವಾಸಸ್ಥಳಗಳು, ಅಂದರೆ ಹೆಚ್ಚಾಗಿ ಗುಡಿಸಿಲುಗಳು ಹಾಗೂ ಜೋಪಡಿಗಳು ಇದ್ದವು. ಏಕೆಂದರೆ ಮೂಲತಃ ಇದು ಕೇವಲ ಖೈದಿಗಳಿಗೆ ದಂಡನೆ ನೀಡಲಿಕ್ಕಾಗಿ ಉಪಯೋಗಿಸಲ್ಪಡುವ ನೆಲಸುನಾಡಾಗಿತ್ತು. ಆದರೆ, 1810ರಲ್ಲಿ ಗವರ್ನರ್ ಲ್ಯಾಕ್ಲನ್ ಮಕ್ವಾರೀ ಸಿಡ್ನಿಗೆ ಬಂದನು. ಅವನ 11 ವರ್ಷದ ಅಧಿಕಾರ ಕಾಲಾವಧಿಯು ಈ ವಸಾಹತಿನಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿತು.
ಒಂದು ನಗರವು ರೂಪುಗೊಳ್ಳಲು ಆರಂಭವಾಗುತ್ತದೆ
ಮಕ್ವಾರೀಯ ಮಾರ್ಗದರ್ಶನೆಗನುಸಾರ, ಇಂಗ್ಲೆಂಡಿನಿಂದ ಅವನ ಜೊತೆಯಲ್ಲಿ ಬಂದಿದ್ದ ಒಬ್ಬ ವಾಸ್ತುಶಿಲ್ಪಿಯು ಮತ್ತು ಈಗಾಗಲೇ ಬಿಡುಗಡೆಹೊಂದಿದ್ದ ಇನ್ನೊಬ್ಬ ಖೈದಿಯು—ಇವನು ಸಹ ಒಬ್ಬ ವಾಸ್ತುಶಿಲ್ಪಿಯಾಗಿದ್ದನು—ಸೇರಿಕೊಂಡು, ಸಿಡ್ನಿಯಲ್ಲಿ ಹಾಗೂ ಅದರ ಸುತ್ತಮುತ್ತಲೂ ಅನೇಕ ಕಟ್ಟಡಗಳನ್ನು ವಿನ್ಯಾಸಿಸಿದರು. ಇದು, ತತ್ಕ್ಷಣವೇ ಖೈದಿಗಳ ಶಿಬಿರಕ್ಕೆ ಒಂದು ಸ್ಥಾಯಿ ಆವರಣವನ್ನು ಕೊಟ್ಟಿತು. ಬೇಕಾದಷ್ಟು ಖೈದಿಗಳು ಇದ್ದುದರಿಂದ, ಆಳುಗಳ ಕೊರತೆಯಿರಲಿಲ್ಲ ಎಂಬುದಂತೂ ಖಂಡಿತ. ಇದರ ಜೊತೆಗೆ, ಕಟ್ಟಡಕ್ಕೆ ಯೋಗ್ಯವಾದ ಮರಳುಗಲ್ಲು ಸಹ ಹೇರಳವಾಗಿ ಲಭ್ಯವಿತ್ತು.
ಪಾರ್ಟಿಯ ರಾಬಿನ್ಸನ್ ಎಂಬ ಲೇಖಕಿಯು ಬಾಟನಿ ಕೊಲ್ಲಿಯ ಸ್ತ್ರೀಯರು (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ, ಈ ವಸಾಹತಿನ ಶೀಘ್ರಗತಿಯ ರೂಪಾಂತರವನ್ನು ಹೀಗೆ ವಿವರಿಸುತ್ತಾಳೆ: “ಮಕ್ವಾರೀಯ ದಶಕ [1810-21]ದ ನಂತರದ ವರ್ಷಗಳಲ್ಲಿ, ಅನೇಕ ಸಂದರ್ಶಕರು, ತಮ್ಮಿಷ್ಟದಂತೆ ಬಂದು ನೆಲೆಸಿದ ನೆಲಸಿಗರು, ಅಧಿಕಾರಿಗಳು, ಸೈನಿಕರು, ಹಾಗೂ ಖೈದಿಗಳು ನ್ಯೂ ಸೌತ್ ವೇಲ್ಸ್ಗೆ ಆಗಮಿಸಿದರು. ವಸಾಹತುವಿನ ವೈಶಿಷ್ಟ್ಯವೆಂದು ಬ್ರಿಟನ್ನಲ್ಲಿ ನಂಬಲಾಗುತ್ತಿದ್ದ ವಿಷಯಲಂಪಟತೆ, ಕುಡಿಕತನ ಹಾಗೂ ಸ್ವೇಚ್ಛಾಚಾರದ ಜೀವನಶೈಲಿಯು ಇಲ್ಲಿಯೂ ಕಂಡುಬರುತ್ತದೆಂದು ಅವರು ಭಾವಿಸಿದ್ದರು. ಆದರೆ ಈ ನೆಲಸುನಾಡಿನ ‘ನಾಗರಿಕತೆ’ಯನ್ನು ಕಂಡು ಆಶ್ಚರ್ಯಚಕಿತರಾದರು. ಗುಡಿಸಿಲುಗಳು ಹಾಗೂ ಜೋಪಡಿಗಳಿಗೆ ಬದಲಾಗಿ, ಹ್ಯಾನೊವರ್ ಸ್ಕ್ವೇರ್ನಲ್ಲಿರುವ ಕಟ್ಟಡಗಳಿಗೆ ಸಮಾನವಾಗಿ ಕಾಣುವ ದೊಡ್ಡ ದೊಡ್ಡ ಭವನಗಳನ್ನು, ಆಕ್ಸ್ಫರ್ಡ್ ಸ್ಟ್ರೀಟ್ನಷ್ಟು ಉದ್ದವಾದ ಬೀದಿಗಳನ್ನು, ಭವ್ಯವಾದ ಚರ್ಚುಗಳು ಹಾಗೂ ಸಾರ್ವಜನಿಕ ಕಟ್ಟಡಗಳನ್ನು, ರಸ್ತೆಗಳು ಮತ್ತು ಸೇತುವೆಗಳನ್ನು, ಅಂಗಡಿಗಳು ಹಾಗೂ ಎಲ್ಲ ರೀತಿಯ ವ್ಯಾಪಾರಗಳನ್ನು, ಕೆಲಸಗಾರರಿಗಾಗಿ ಒಳ್ಳೆಯ ವಸತಿಸೌಕರ್ಯಗಳನ್ನು, ಐಶ್ವರ್ಯವಂತರಿಗಾಗಿ ಆಡಂಬರದ ವಾಹನಗಳನ್ನು ಅವರು ಕಂಡರು . . . ‘ಅದು ಖೈದಿಗಳ ವಸಾಹತಾಗಿತ್ತು ಎಂಬುದನ್ನು ಈ ಎಲ್ಲ ಬದಲಾವಣೆಗಳು ಸುಳ್ಳಾಗಿಸಿದ್ದವು.’”
ಹೀಗೆ, 1821ರಲ್ಲಿ ಗವರ್ನರ್ ಮಕ್ವಾರೀ ಸಿಡ್ನಿಯನ್ನು ಬಿಟ್ಟು ಹೊರಟುಹೋದಾಗ, ಈಗಾಗಲೇ ಸಿಡ್ನಿಯಲ್ಲಿ ಮರಳುಗಲ್ಲಿನಿಂದ ಕಟ್ಟಲ್ಪಟ್ಟ 59 ಕಟ್ಟಡಗಳು, ಇಟ್ಟಿಗೆಯಿಂದ ಕಟ್ಟಲ್ಪಟ್ಟ 221 ಮನೆಗಳು, ಮತ್ತು ಮರದಿಂದ ಕಟ್ಟಲ್ಪಟ್ಟ 773 ಮನೆಗಳು ಇದ್ದವು; ಅಷ್ಟುಮಾತ್ರವಲ್ಲ, ಅಲ್ಲಿ ಸರಕಾರದ ಸ್ವಾಧೀನದಲ್ಲಿದ್ದ ಮನೆಗಳೂ ಸಾರ್ವಜನಿಕ ಕಟ್ಟಡಗಳೂ ಇದ್ದವು. ಸುಮಾರು 40 ಲಕ್ಷದಷ್ಟು ಜನಸಂಖ್ಯೆಯಿರುವ ಇಂದಿನ ಸಿಡ್ನಿ ನಗರವು, ಖೈದಿಗಳು, ನೆಲಸುನಾಡಿಗರು ಮತ್ತು ಅವರ ಕುಟುಂಬಗಳ ಕಲ್ಪನಾ ಚಾತುರ್ಯ, ಹಾಗೂ ಈ ವಸಾಹತಿನ ಆರಂಭದ ಗವರ್ನರ್ಗಳ ದೂರದೃಷ್ಟಿಗೆ ಅತ್ಯುತ್ತಮ ಉದಾಹರಣೆಯಾಗಿ ಉಳಿದಿದೆ.
ಸಿಡ್ನಿಯ ‘ಭವ್ಯವಾದ ಹಾಗೂ ವಿಶಾಲವಾದ ಬಂದರು’
ಸಿಡ್ನಿಯ ನಿವಾಸಿಗಳು ಆಡುಭಾಷೆಯಲ್ಲಿ ಪೋರ್ಟ್ ಜ್ಯಾಕ್ಸನ್ಗೆ ಸಿಡ್ನಿ ಬಂದರು ಎಂದು ಹೇಳುವುದಾದರೂ, ವಾಸ್ತವದಲ್ಲಿ ಈ ನಿರ್ದಿಷ್ಟ ಬಂದರು ಮೂರು ಕ್ಷೇತ್ರಗಳನ್ನು ಒಳಗೂಡಿದೆ—ಮಧ್ಯ ಬಂದರು, ಉತ್ತರ ಬಂದರು, ಮತ್ತು ಸಿಡ್ನಿ ಬಂದರು. ಪಾರಮಟ ಹಾಗೂ ಲೇನ್ ಕೋವ್ ನದಿಗಳು, ಬಂದರಿನಿಂದ ಹೊರಟು ಉಪನಗರಗಳ ಒಳಗೆಲ್ಲ ಹರಿಯುತ್ತವೆ.
ಜಗತ್ತಿನ ಅತ್ಯುತ್ತಮ ನೈಸರ್ಗಿಕ ಬಂದರುಗಳಲ್ಲಿ ಸಿಡ್ನಿ ಬಂದರು ಒಂದಾಗಿದ್ದು, ಅದರ ಮರಳುಗಲ್ಲಿನ ಒರಟಾದ ತೀರಪ್ರದೇಶಗಳು ಸುಮಾರು 240 ಕಿಲೊಮೀಟರುಗಳ ವರೆಗೆ ಚಾಚಿಕೊಂಡಿವೆ. ಬಂದರಿನ ಪ್ರವೇಶದ್ವಾರದಿಂದ ಆರಂಭಿಸಿ, ಅದು ಪಾರಮಟ ನದಿಯೊಂದಿಗೆ ಸೇರುವ ಸ್ಥಳದ ತನಕ ಇರುವ ನಿಜವಾದ ಉದ್ದವನ್ನು ಸರಳರೇಖೆಯಲ್ಲಿ ಅಳೆಯುವಲ್ಲಿ, ಅದು 19 ಕಿಲೊಮೀಟರುಗಳಷ್ಟಿದೆ. ಮತ್ತು ಅದರ ನೀರಿನ ಒಟ್ಟು ಮೇಲ್ಮೈ ಕ್ಷೇತ್ರವು 54 ಚದರ ಕಿಲೊಮೀಟರುಗಳಷ್ಟಿದೆ. ಬಂದರಿನ ಒಳಗಿರುವ ಕಡಲತೀರದ ಆಳವು ಅದರ ವಿಶೇಷತೆಗಳಲ್ಲಿ ಒಂದಾಗಿದೆ, ಮತ್ತು ಅತಿ ಆಳವಿರುವ ಪ್ರದೇಶವು ಸುಮಾರು 47 ಮೀಟರ್ಗಳಷ್ಟಿದೆಯೆಂದು ಅಳೆಯಲಾಗಿದೆ. ಆಕರ್ಷಕ ಪ್ರವೇಶದ್ವಾರವಿರುವ ಈ ಬಂದರನ್ನು, ಪೆಸಿಫಿಕ್ ಮಹಾಸಾಗರದಿಂದ ಕಡಿದಾದ ಎರಡು ಭೂಶಿರಗಳ—ನಾರ್ತ್ ಹೆಡ್ ಮತ್ತು ಸೌತ್ ಹೆಡ್—ಮೂಲಕ ಪ್ರವೇಶಿಸಸಾಧ್ಯವಿದೆ. ಈ ಎರಡು ಭೂಶಿರಗಳ ನಡುವೆ ಕೇವಲ 2 ಕಿಲೊಮೀಟರುಗಳಷ್ಟು ಅಂತರವಿದ್ದು, ನೀವು ಸಂಪೂರ್ಣವಾಗಿ ಒಳಗೆ ಪ್ರವೇಶಿಸುವ ತನಕ ಬಂದರು ಎಷ್ಟು ವಿಸ್ತಾರವಾಗಿದೆ ಎಂಬುದು ನಿಮಗೆ ಗೊತ್ತಾಗುವುದಿಲ್ಲ. ಕ್ಯಾಪ್ಟನ್ ಕುಕ್ ಯಾವುದನ್ನು ಕೇವಲ ಒಂದು ಕೊಲ್ಲಿಯೆಂದು ಭಾವಿಸಿದನೋ ಅದನ್ನು ಹೆಚ್ಚು ಗಹನವಾಗಿ ಅನ್ವೇಷಿಸಲು ಅವನು ಏಕೆ ತಪ್ಪಿಹೋದನು ಎಂಬುದನ್ನು ಇದು ವಿವರಿಸಬಹುದು.
1788ರಷ್ಟು ಹಿಂದೆ, ಗವರ್ನರ್ ಫಿಲಿಪ್ ಸಿಡ್ನಿ ಬಂದರಿನ ಕುರಿತು ಹೀಗೆ ಹೇಳಿದನೆಂದು ದಾಖಲಿಸಲಾಗಿದೆ: ‘ಈ ಬಂದರಿನ ವಿಸ್ತೀರ್ಣ ಹಾಗೂ ಭದ್ರತೆಯು, ಇದುವರೆಗೆ ನಾನು ನೋಡಿರುವ ಯಾವುದೇ ಬಂದರಿಗಿಂತ ಎಷ್ಟೋ ಅತ್ಯುತ್ತಮವಾಗಿದೆ. ಇದು ಎಷ್ಟು ಭವ್ಯವಾದ ಹಾಗೂ ವಿಶಾಲವಾದ ಬಂದರಾಗಿದೆಯೆಂದರೆ, ಇಲ್ಲಿ ಬಹಳಷ್ಟು ಸಂಖ್ಯೆಯ ಹಡಗುಗಳನ್ನು ನಿಲ್ಲಿಸಿ, ಸುರಕ್ಷಿತವಾಗಿ ಲಂಗರುಹಾಕಲು ಅನುಕೂಲಕರವಾಗಿದೆ ಎಂದು ನನ್ನ ಜೊತೆಯಿದ್ದ ಅಧಿಕಾಂಶ ಅನುಭವಸ್ಥ ನಾವಿಕರು ಸಹ ಸಂಪೂರ್ಣವಾಗಿ ಒಪ್ಪಿಕೊಂಡರು.’
ಸಿಡ್ನಿ ಹಾರ್ಬರ್ ಬ್ರಿಜ್—ಯಂತ್ರಜ್ಞಾನದ ಅತ್ಯುತ್ತಮ ಕೆಲಸಗಾರಿಕೆ
1815ರಷ್ಟು ಹಿಂದೆ, ಬಂದರಿನ ಉತ್ತರ ಭಾಗದಿಂದ ದಕ್ಷಿಣ ಭಾಗಕ್ಕೆ ಹೋಗಲಿಕ್ಕಾಗಿ ಒಂದು ಸೇತುವೆಯನ್ನು ಕಟ್ಟುವ ಯೋಜನೆಗೆ ಗಂಭೀರವಾದ ಗಮನವನ್ನು ಕೊಡಲಾಯಿತು. ಆದರೆ 1857ರ ತನಕ ಸೇತುವೆಯ ಮೊತ್ತಮೊದಲ ದಾಖಲಿತ ನಕಾಶೆಯು ತೋರಿಬರಲಿಲ್ಲ. ಆದರೆ ಇಂದು ಆ ಸೇತುವೆಯು ಬಂದರಿನ ದಕ್ಷಿಣ ಭಾಗದಲ್ಲಿರುವ ಡಾಸ್ ಪಾಯಿಂಟ್ನಿಂದ ಉತ್ತರ ತೀರದಲ್ಲಿರುವ ಮಿಲ್ಸನ್ಸ್ ಪಾಯಿಂಟ್ ತನಕ ಚಾಚಿಕೊಂಡಿದೆ—ಮೊದಲು ಯಾವ ಜಾಗವನ್ನು ಸೂಚಿಸಲಾಗಿತ್ತೋ ಅದೇ ಜಾಗದಲ್ಲಿ ಇದನ್ನು ನಿರ್ಮಿಸಲಾಗಿದೆ! ಜಗತ್ತಿನಲ್ಲೇ ಅತ್ಯಂತ ಉದ್ದವಾದ ಒಂದೇ ಸ್ಪ್ಯಾನ್ವುಳ್ಳ ಈ ಸೇತುವೆಯನ್ನು ಕಟ್ಟಲು ಸುಮಾರು ಒಂಬತ್ತು ವರ್ಷಗಳು ಹಿಡಿದವು ಮತ್ತು 2 ಕೋಟಿ ಆಸ್ಟ್ರೇಲಿಯನ್ ಡಾಲರುಗಳಷ್ಟು ವೆಚ್ಚ ತಗುಲಿತು. 1930ಗಳ ಆರಂಭದಲ್ಲಿದ್ದ ಆರ್ಥಿಕ ಕುಸಿತದ ವರ್ಷಗಳಲ್ಲಿ ಇದು ಭಾರಿ ದೊಡ್ಡ ಮೊತ್ತವಾಗಿತ್ತು. 1932ರ ಮಾರ್ಚ್ 19ರಂದು ಅಧಿಕೃತವಾಗಿ ಇದರ ಮೇಲೆ ವಾಹನ ಸಂಚಾರವು ಆರಂಭವಾಯಿತು.
ಸೇತುವೆಯ ಮಧ್ಯೆಯಿರುವ ಬೃಹದಾಕಾರದ ಕಮಾನು 503 ಮೀಟರ್ಗಳಷ್ಟು ಉದ್ದವಿದ್ದು, ನೀರಿನ ಮೇಲ್ಮೈಯಿಂದ ಅದರ ತುದಿಯ ತನಕ ಸುಮಾರು 134 ಮೀಟರುಗಳಷ್ಟು ಎತ್ತರವುಳ್ಳದ್ದಾಗಿದೆ. ನೀರಿನ ಮೇಲ್ಮೈಗೂ ಸೇತುವೆಯ ಪ್ಲ್ಯಾಟ್ಫಾರ್ಮ್ಗೂ ನಡುವೆ ಸುಮಾರು 50 ಮೀಟರುಗಳಷ್ಟು ಅಂತರವಿರುವುದರಿಂದ, ಅತಿ ದೊಡ್ಡ ಪ್ರಯಾಣಿಕ ಹಡಗುಗಳು ಅದರ ಕೆಳಗೆ ಸುರಕ್ಷಿತವಾಗಿ ಹಾದುಹೋಗುತ್ತವೆ. ಸೇತುವೆಯ ರಸ್ತೆಮಾರ್ಗ (ಡೆಕ್) 49 ಮೀಟರುಗಳಷ್ಟು ಅಗಲವಾಗಿದ್ದು, ಆರಂಭದಲ್ಲಿ ಅದರ ಮೇಲೆ ಒಂದು ಜೋಡಿ ರೈಲುಮಾರ್ಗಗಳು, ಒಂದು ಜೋಡಿ ಟ್ರಾಮ್ದಾರಿ (ಸ್ಟ್ರೀಟ್ಕಾರ್ ಕಂಬಿದಾರಿ), ಆರು ರಸ್ತೆಗಳು, ಮತ್ತು ಎರಡು ಕಾಲುದಾರಿಗಳಿದ್ದವು. 1959ರಲ್ಲಿ, ಸಿಡ್ನಿಯು ಸ್ಟ್ರೀಟ್ಕಾರ್ಗಳಿಗೆ ಬದಲಾಗಿ ಬಸ್ಸುಗಳನ್ನು ಉಪಯೋಗಿಸಲಾರಂಭಿಸಿತು. ಆದುದರಿಂದ, ಟ್ರಾಮ್ದಾರಿಗಳನ್ನು ವಾಹನ ಸಂಚಾರದ ರಸ್ತೆಗಳಾಗಿ ಮಾರ್ಪಡಿಸಲಾಯಿತು. ಈಗ ಕಾರುಗಳು, ಬಸ್ಗಳು, ಹಾಗೂ ಟ್ರಕ್ಗಳಿಗೋಸ್ಕರ ಎಂಟು ರಸ್ತೆಗಳಿವೆ. ಪ್ರವೇಶಚಾಚುಗಳನ್ನೂ ಸೇರಿಸಿ ಸೇತುವೆಯ ಒಟ್ಟು ಉದ್ದವು 1,149 ಮೀಟರುಗಳಷ್ಟಾಗಿದೆ.
1980ಗಳಷ್ಟಕ್ಕೆ, ಸೇತುವೆಯ ಮೇಲಿನ ವಾಹನ ಸಂಚಾರವು ಎಷ್ಟು ಕಿಕ್ಕಿರಿದಿತ್ತೆಂದರೆ, ಇನ್ನೊಂದು ಹಾರ್ಬರ್ ಕ್ರಾಸಿಂಗ್ ಅನ್ನು ನಿರ್ಮಿಸುವ ಯೋಜನೆಯನ್ನು ಪರಿಗಣಿಸಲಾಯಿತು. ಈ ಬಾರಿ ಅಂತರ್ಜಲಮಾರ್ಗವನ್ನು ಆರಂಭಿಸುವುದು ಹೆಚ್ಚು ಪ್ರಾಯೋಗಿಕವಾದದ್ದಾಗಿತ್ತು. ಆದುದರಿಂದ, 1992ರ ಆಗಸ್ಟ್ ತಿಂಗಳಿನಲ್ಲಿ, ನಾಲ್ಕು ಹಾದಿಗಳಿರುವ ಬಂದರಿನ ಸುರಂಗಮಾರ್ಗವು ತೆರೆಯಲ್ಪಟ್ಟಿತು.
ಸೇತುವೆಯ ಮೇಲೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ತಿರುಗಾಡುವಲ್ಲಿ, ಸಿಡ್ನಿ ನಗರದ ಸುತ್ತಮುತ್ತಲಿನ ದೃಶ್ಯವು ಕಣ್ಣಿಗೆ ಬೀಳುತ್ತದೆ. ಬಂದರಿನ ಉತ್ತರ ಭಾಗದಲ್ಲಿ, ಮರಗಳಿಂದ ಕೂಡಿರುವ ತಗ್ಗುಪ್ರದೇಶದಲ್ಲಿ, ಟರಾಂಗ ಪ್ರಾಣಿಸಂಗ್ರಹಾಲಯವು ಇದೆ. ಬಂದರಿನ ವಿರುದ್ಧ ದಿಕ್ಕಿನಲ್ಲಿ, ಅಂದರೆ ಸೇತುವೆಯ ಕೆಳಗೆ, ಬೆನಲಾಂಗ್ ಪಾಯಿಂಟ್ನಲ್ಲಿ ಸಿಡ್ನಿಯ ಎದ್ದುಕಾಣುವ ನಾಟಕ ಮಂದಿರವಿದೆ.
ಬಂದರಿನ ಮೇಲಿರುವ ಸಿಡ್ನಿಯ ರತ್ನಾಭರಣ
“ಬೆನಲಾಂಗ್ ಪಾಯಿಂಟ್ನ ರತ್ನಾಭರಣ” ಎಂದು ವರ್ಣಿಸಲ್ಪಟ್ಟಿರುವ ಸಿಡ್ನಿ ನಾಟಕ ಮಂದಿರದ ಮೂರು ಪಾರ್ಶ್ವಗಳಲ್ಲಿ, ಸಿಡ್ನಿ ಬಂದರಿನ ನೀಲವರ್ಣದ ನೀರು ಸುತ್ತುವರಿದಿದೆ. ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿ ಇದು ನಿಜವಾಗಿಯೂ ಒಂದು ರತ್ನಾಭರಣದಂತೆ ಕಾಣುತ್ತದೆ. ಗಾತಿಕ್ ವಾಸ್ತುಶಿಲ್ಪದಂತೆ ಕಟ್ಟಲ್ಪಟ್ಟಿರುವ ಶಂಖಾಕೃತಿಗಳು, ರಾತ್ರಿ ಸಮಯದಲ್ಲಿ ನಾಟಕ ಮಂದಿರದ ಲೈಟ್ಗಳ ಬೆಳಕಿನಲ್ಲಿ ತುಂಬ ಶೋಭಾಯಮಾನವಾಗಿ ಹೊಳೆಯುತ್ತವೆ.
ಒಂದು ಕಲ್ಪನೆಯು ಕೈಗೂಡುತ್ತದೆ (ಇಂಗ್ಲಿಷ್) ಎಂಬ ಪುಸ್ತಕದ ಮುನ್ನುಡಿಯು, ಸಿಡ್ನಿ ನಾಟಕ ಮಂದಿರವು ಹೇಗೆ ಕಾಣುತ್ತದೆ ಎಂಬುದನ್ನು ಈ ಮಾತುಗಳಿಂದ ವರ್ಣಿಸುತ್ತದೆ: “ಬೇರೆ ಬೇರೆ ಕೋನಗಳಿಂದ ನೋಡುವಾಗ ಅಥವಾ ಬೆಳಕಿನಲ್ಲಿ ಬದಲಾವಣೆಯಾಗುವಾಗ ಯಾವ ಕಟ್ಟಡಗಳು ಹೊಸ ರೀತಿಯಲ್ಲಿ ಕಂಡುಬರುತ್ತವೋ ಅಂತಹ ಕಟ್ಟಡಗಳಲ್ಲಿ ಸಿಡ್ನಿ ನಾಟಕ ಮಂದಿರವು ಒಂದಾಗಿದೆ. . . . ನಸುಕಿನಲ್ಲಿ ಬೀಳುವ ಇಬ್ಬನಿಯು ಅಥವಾ ಸಾಯಂಕಾಲದ ಸೂರ್ಯಾಸ್ತಮಾನದ ಪ್ರಭೆಯು, ದಂತಕಥೆಗಳಲ್ಲಿರುವ ರಾಕ್ಷಸರ ಸಾಹಸಕಥೆಗಳ ಶಿರಸ್ತ್ರಾಣಗಳಂತೆ ಕಾಣುವ ಶಂಖಾಕೃತಿಗಳ ಹೊಳಪನ್ನು ಇನ್ನೂ ಹೆಚ್ಚಿಸುತ್ತದೆ.”
ಈ ನಾಟಕ ಮಂದಿರದ ವಿನ್ಯಾಸವು ಮೂಲತಃ ಡೇನಿಷ್ ವಾಸ್ತುಶಿಲ್ಪಿಯಾಗಿದ್ದ ಯಾರ್ನ್ ಉಟ್ಸಾನ್ನಿಂದ ರಚಿಸಲ್ಪಟ್ಟಿದ್ದು, ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 200ಕ್ಕಿಂತಲೂ ಹೆಚ್ಚಿನ ಅಂತಾರಾಷ್ಟ್ರೀಯ ಸ್ಪರ್ಧಿಗಳ ನಡುವೆ ಇದು ಆಯ್ಕೆಯಾಗಿತ್ತು. ಆದರೆ ಅವನ ವಿನ್ಯಾಸದ ಪ್ರತೀಕ್ಷೆಗಳು ಕಾರ್ಯರೂಪಕ್ಕೆ ತರಲು ಕಷ್ಟಕರವಾಗಿ ಕಂಡುಬಂದದ್ದರಿಂದ, ಆ ವಿನ್ಯಾಸಗಳಲ್ಲಿ ಗಣನೀಯ ಬದಲಾವಣೆಗಳನ್ನು ಮಾಡಬೇಕಾಯಿತು.
ಲಂಡನಿನ ಆರ್ಕಿಟೆಕ್ಟ್ಸ್ ಜರ್ನಲ್ ಅದನ್ನು “ಭಾರಿ ದೊಡ್ಡ ಗಾತ್ರದ ರೋಮಾಂಚಕ ಶಿಲ್ಪದ ಮೂರ್ತರೂಪ” ಎಂದು ವರ್ಣಿಸಿತು. ಆದರೂ, ಈ ರೋಮಾಂಚಕ ಕನಸನ್ನು ನನಸಾಗಿ ಮಾಡುವಾಗ, ಯಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕಾನೇಕ ತೊಂದರೆಗಳು ಎದುರಾದವು. ಇಂಜಿನಿಯರ್ಗಳಲ್ಲಿ ಇಬ್ಬರಾದ ಓವ ಆರುಪ್ ಮತ್ತು ಜ್ಯಾಕ್ ಸುನ್ಸ್ ಹೇಳಿದ್ದು: “ಸಿಡ್ನಿ ನಾಟಕ ಮಂದಿರವು . . . ಕಟ್ಟಡ ನಿರ್ಮಾಣದಲ್ಲೇ ಒಂದು ಸಾಹಸವಾಗಿದೆ. . . . ಏಕೆಂದರೆ ಇದು ಕಟ್ಟಲ್ಪಡುವಾಗ ಇದ್ದ ಸನ್ನಿವೇಶಗಳು ತುಂಬ ಅಸಾಮಾನ್ಯವಾಗಿದ್ದವು, ಮತ್ತು ಇದರ ಸಮಸ್ಯೆಗಳು ಎಷ್ಟು ಕಷ್ಟಕರವಾಗಿದ್ದವೆಂದರೆ, ಹೊಸ ತಾಂತ್ರಿಕತೆಯ ವಿಕಸನಗಳಿಗೆ . . . ಇದು ಅಪೂರ್ವ ಅವಕಾಶಗಳನ್ನು ಉಂಟುಮಾಡಿತ್ತು. ಅಂದಿನಿಂದ, ಈ ತಾಂತ್ರಿಕತೆಗಳಲ್ಲಿ ಅನೇಕ ತಾಂತ್ರಿಕತೆಗಳು, ಸಾಧಾರಣ ಸೇತುವೆಗಳಲ್ಲಿ ಹಾಗೂ ಕಟ್ಟಡ ನಿರ್ಮಾಣಗಳಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಟ್ಟಿವೆ.”
ಈ ನಾಟಕ ಮಂದಿರಕ್ಕೆ ಸುಮಾರು 70 ಲಕ್ಷ ಆಸ್ಟ್ರೇಲಿಯನ್ ಡಾಲರುಗಳಷ್ಟು ವೆಚ್ಚವು ತಗಲುತ್ತದೆಂದು ಈ ಮುಂಚೆ ಅಂದಾಜುಮಾಡಲಾಗಿತ್ತು. ಆದರೆ 1973ರಲ್ಲಿ ಅದು ಪೂರ್ಣಗೊಳಿಸಲ್ಪಟ್ಟಾಗ, ಇದರ ವೆಚ್ಚವು ಗಗನಕ್ಕೇರಿದ್ದು, 10 ಕೋಟಿ 20 ಲಕ್ಷದಷ್ಟು ದೊಡ್ಡ ಸಂಖ್ಯೆಯನ್ನು ತಲಪಿತ್ತು!
ನಾಟಕ ಮಂದಿರದ ಒಳಗಿನ ನೋಟ
ನಾವು ನಾಟಕ ಮಂದಿರದ ಪ್ರವೇಶದ್ವಾರದಿಂದ ಒಳಗೆಹೋಗುತ್ತಿದ್ದಂತೆ, ಶಂಖಗಳ ಕೋನಾಕಾರದ ಬಾಯಿಗೆ ಹೊದಿಸಿರುವ ಎರಡು ಪದರಗಳ ಗಾಜಿನ ಮೂಲಕ ಸೂರ್ಯನ ಬೆಳಕು ತೂರಿಬರುವುದನ್ನು ನೋಡುತ್ತೇವೆ. ಈ ಗಾಜು ಫ್ರಾನ್ಸ್ನಲ್ಲಿ ತಯಾರಿಸಲ್ಪಟ್ಟದ್ದಾಗಿದ್ದು, ಇಡೀ ನಾಟಕ ಮಂದಿರದ ಕಿಟಕಿಗಳು ಹಾಗೂ ಗೋಡೆಗಳಿಗೆ ಒಟ್ಟು 6,225 ಚದರ ಮೀಟರುಗಳಷ್ಟು ಗಾಜು ಹೊದಿಸಲ್ಪಟ್ಟಿದೆ. ತದನಂತರ ನಾವು ಗಾನಗೋಷ್ಠಿಯ ಸಭಾಂಗಣವನ್ನು ಪ್ರವೇಶಿಸುತ್ತೇವೆ. ಅಲ್ಲಿಯೇ ಹಿಂದೆ ನಿಂತುಕೊಂಡು ವೇದಿಕೆಯ ತನಕ ಇರುವ 2,690 ಆಸನಗಳನ್ನು ನೋಡುತ್ತಿರುವಾಗ, ಜಗತ್ತಿನಲ್ಲೇ ಅತಿ ದೊಡ್ಡದಾಗಿದ್ದು, 10,500 ಪೈಪ್ಗಳುಳ್ಳ ಒಂದು ಮೆಕ್ಯಾನಿಕಲ್ ಟ್ರ್ಯಾಕರ್ ಆರ್ಗನ್ ಅನ್ನು ನೋಡಿ ನಾವು ಪ್ರಭಾವಿತರಾಗುತ್ತೇವೆ.a ಈ ಕಟ್ಟಡದ ಮೇಲ್ಚಾವಣಿಯು 25 ಮೀಟರ್ಗಳಷ್ಟು ಎತ್ತರದಲ್ಲಿದ್ದು, ಅದರ ಒಳಭಾಗವು 26,400 ಘನ ಮೀಟರ್ಗಳಷ್ಟು ವಿಶಾಲವಾಗಿದೆ. ಇದು “ವಾದ್ಯಮೇಳ ಸಂಗೀತವನ್ನು ಸುಮಧುರ, ಹಾಗೂ ಸುಲಲಿತ ಸ್ವರದಿಂದ ಕೇಳಿಸಿಕೊಳ್ಳಲು ಸಾಧ್ಯವಾಗುವಂತೆ, ಸುಮಾರು ಎರಡು ಸೆಕೆಂಡುಗಳಷ್ಟು ಪ್ರತಿಧ್ವನಿಸುವ ಕಾಲವನ್ನು ಒದಗಿಸುತ್ತದೆ” ಎಂದು ಅಧಿಕೃತ ಮಾಹಿತಿಯು ತಿಳಿಸುತ್ತದೆ.
ಇನ್ನೂ ಮೂರು ಸಭಾಂಗಣಗಳು ಸಹ ತುಂಬ ಆಕರ್ಷಕವಾಗಿವೆ. ನಾಟಕ, ವಾದ್ಯಮೇಳ ಗಾನಗೋಷ್ಠಿ, ನಾಟ್ಯ, ಚಲನಚಿತ್ರಗಳು, ಕಥನ, ಡ್ರಾಮ, ಗೃಹಸಂಗೀತ, ವಸ್ತುಪ್ರದರ್ಶನ, ಹಾಗೂ ಸಮ್ಮೇಳನಕ್ಕಾಗಿ ಇವು ವಿನ್ಯಾಸಿಸಲ್ಪಟ್ಟಿವೆ. ನಾಟಕ ಮಂದಿರದ ಕಟ್ಟಡದಲ್ಲಿ ಒಟ್ಟು 1,000 ರೂಮ್ಗಳು ಇದ್ದು, ರೆಸ್ಟೊರೆಂಟ್ಗಳು, ವೇಷಭೂಷಣದ ಕೋಣೆಗಳು, ಮತ್ತು ಇತರ ಸೌಕರ್ಯಗಳೂ ಇದರಲ್ಲಿ ಸೇರಿವೆ.
ಪ್ರಾಣಿಸಂಗ್ರಹಾಲಯವನ್ನು ನೋಡಲು ಮರೆಯದಿರಿ!
ನೀವು ಸಿಡ್ನಿಗೆ ಭೇಟಿ ನೀಡಲು ಯೋಜಿಸುತ್ತಿರುವಲ್ಲಿ, ಬಂದರಿನ ಸುತ್ತಲೂ ದೋಣಿಯಲ್ಲಿ ಸಂಚರಿಸಲು ಖಂಡಿತವಾಗಿಯೂ ಮರೆಯಬೇಡಿ. ನೀವು ಅದನ್ನು ವಿಷಾದಿಸದಿರುವಿರಿ. ಒಂದು ದೋಣಿಯನ್ನು ತೆಗೆದುಕೊಂಡು ಟರಾಂಗ ಪ್ರಾಣಿಸಂಗ್ರಹಾಲಯಕ್ಕೆ ಹೋಗಿ. ಆಸ್ಟ್ರೇಲಿಯಕ್ಕೆ ಹೋಗುವ ಎಲ್ಲ ಸಂದರ್ಶಕರಿಗೆ, ಆಸ್ಟ್ರೇಲಿಯದ ಪೊದೆಗಾಡನ್ನು ಹಾಗೂ ಅದರ ವನ್ಯಮೃಗಗಳನ್ನು ನೋಡಲು ಸಮಯವಿರುವುದಿಲ್ಲ. ಆದುದರಿಂದ, ಪ್ರಾಣಿಸಂಗ್ರಹಾಲಯವನ್ನು ನೋಡಲಿಕ್ಕಾಗಿ ಒಂದು ದಿನವನ್ನು ಬದಿಗಿರಿಸುವುದು, ಆಸ್ಟ್ರೇಲಿಯದ “ಗ್ರಾಮಪ್ರದೇಶ”ವನ್ನು ನೋಡಲು ಒಂದು ಅನುಕೂಲಕರವಾದ ಸಾಹಸವಾಗಿರಸಾಧ್ಯವಿದೆ. ಈ ಪ್ರಾಣಿಸಂಗ್ರಹಾಲಯದಲ್ಲಿ ಆಸ್ಟ್ರೇಲಿಯದ ಅಪೂರ್ವ ವನ್ಯಮೃಗಗಳಿದ್ದು, ಇವುಗಳಲ್ಲಿ ಕ್ಯಾಂಗರೂಗಳು, ಕೊಆಲಗಳು, ಪ್ಲ್ಯಾಟಿಪಸ್ಗಳು ಮತ್ತು ಡಿಂಗೋ ಕಾಡುನಾಯಿಗಳು ಕೆಲವಾಗಿವೆ. ನಾಟಕ ಮಂದಿರದ ಬಳಿಯಿರುವ ದೋಣಿಗಳ ಇಳಿದಾಣದಿಂದ, ಬಂದರಿನ ದೋಣಿಗಳ ಮೂಲಕ ಕೆಲವೇ ನಿಮಿಷಗಳಷ್ಟು ಮುಂದೆ ಹೋಗುವಲ್ಲಿ, ಹೆಚ್ಚುಕಡಿಮೆ ಸಿಡ್ನಿಯ ಮಧ್ಯಭಾಗದಲ್ಲೇ ಪ್ರಾಣಿಸಂಗ್ರಹಾಲಯವು ಇದೆ. ಜಗತ್ತಿನಲ್ಲೇ ಅತ್ಯುತ್ತಮವಾದ ಪ್ರಾಣಿಸಂಗ್ರಹಾಲಯಗಳಲ್ಲಿ ಇದು ಒಂದಾಗಿದೆ ಎಂಬ ಪ್ರಸಿದ್ಧಿ ಅದಕ್ಕಿದೆ. ಬಂದರಿನ ಕ್ಷೇತ್ರದಲ್ಲಿರುವಾಗ, ಬೇರೆ ಬೇರೆ ರೀತಿಯ ಸಂಚಾರಿ ನಟರಿಂದ, ಅಂದರೆ ದೊಂಬರಾಟದವರು, ಡಿಜರಿಡೂ (ಆಸ್ಟ್ರೇಲಿಯದ ಆದಿವಾಸಿಗಳು ಉಪಯೋಗಿಸುವ ಕೊಳವೆಯಾಕಾರದ ವಾದ್ಯ)ವನ್ನು ನುಡಿಸುತ್ತಿರುವ ಮೂಲನಿವಾಸಿಗಳು, ಅಥವಾ ಜ್ಯಾಸ್ ಸಂಗೀತ ತಂಡದಿಂದ ತೋರಿಸಲ್ಪಡುವ ಉಚಿತ ಮನೋರಂಜನೆಯನ್ನು ನೋಡಿ ಆನಂದಿಸಿರಿ.
ನೀವು ಸಿಡ್ನಿಯಲ್ಲಿ ತಂಗುವಲ್ಲಿ, ಖಂಡಿತವಾಗಿಯೂ ತುಂಬ ಆನಂದಿಸುವಿರಿ ಎಂಬ ದೃಢವಿಶ್ವಾಸ ನಮಗಿದೆ. ನಿಜವಾಗಿಯೂ, ಪೆಸಿಫಿಕ್ ಮಹಾಸಾಗರದ ನೀಲವರ್ಣದ ವಿಶಾಲ ಪ್ರದೇಶದಲ್ಲಿನ ಅಪೂರ್ವವಾದ ಬಂದರಿನ ಮೇಲೆ ನೆಲೆಸಿರುವ ಸಿಡ್ನಿಯು, ಗಿಜಿಗುಟ್ಟುವ ಒಂದು ರೇವು ಪಟ್ಟಣವಾಗಿದೆ. ಮತ್ತು ನಾವು ನಿಮಗಾಗಿ ಇನ್ನೊಂದು ಸೀಗಡಿಯನ್ನು ಕಂಬಿ ಒಲೆಗೆ ಸಿಕ್ಕಿಸಲೂಬಹುದು, ಯಾರಿಗೆ ಗೊತ್ತು?
[ಅಧ್ಯಯನ ಪ್ರಶ್ನೆಗಳು]
a ಟ್ರ್ಯಾಕರ್ ಆಕ್ಷನ್ ವ್ಯವಸ್ಥೆಯು, ಪೈಪ್ಗಳಿಗೆ ಗಾಳಿ ರವಾನಿಸುವ ಯಾಂತ್ರಿಕ ವ್ಯವಸ್ಥೆಯಾಗಿದೆ. ಆರ್ಗನ್ ಬಾರಿಸುವವನು ಬೆರಳುಗಳಿಂದ ಸ್ವಲ್ಪ ಒತ್ತುಹಾಕಿ ಬಾರಿಸುವಂತೆ ಇದು ಅನುಮತಿಸುತ್ತದೆ.
[Maps on page 14]
(For fully formatted text, see publication)
ಸಿಡ್ನಿ
ಮ್ಯಾನ್ಲಿ ಬೀಚ್
ಪೋರ್ಟ್ ಜ್ಯಾಕ್ಸನ್
ಸಿಡ್ನಿ ಹಾರ್ಬರ್ ಬ್ರಿಜ್
ಸಿಡ್ನಿ
ಬಾಟನಿ ಕೊಲ್ಲಿ
[ಪುಟ 15 ರಲ್ಲಿರುವ ಚಿತ್ರ]
ಸಿಡ್ನಿಯ ಕೇಂದ್ರೀಯ ವ್ಯಾಪಾರ ಕ್ಷೇತ್ರ
[ಪುಟ 15 ರಲ್ಲಿರುವ ಚಿತ್ರ]
ಬಾಟನಿ ಕೊಲ್ಲಿಯಲ್ಲಿ “ಬೌಂಟಿ”ಯ ಪಡಿಯಚ್ಚು
[ಪುಟ 15 ರಲ್ಲಿರುವ ಚಿತ್ರ]
ಸಿಡ್ನಿ ನಗರದ ಮಧ್ಯಭಾಗದಲ್ಲಿ ತೂಗುರೈಲು (ಏರಿಯಲ್ ಟ್ರೈನ್)
[ಪುಟ 17 ರಲ್ಲಿರುವ ಚಿತ್ರ]
ಸಿಡ್ನಿ ನಾಟಕ ಮಂದಿರ ಮತ್ತು ಹಾರ್ಬರ್ ಬ್ರಿಜ್
[ಕೃಪೆ]
By courtesy of Sydney Opera House Trust (photograph by Tracy Schramm)
[ಪುಟ 17 ರಲ್ಲಿರುವ ಚಿತ್ರ]
ನಾಟಕ ಮಂದಿರದ ಒಳಭಾಗ, ಮತ್ತು ಅದರ 10,500-ಪೈಪ್ ಆರ್ಗನ್
[ಕೃಪೆ]
By courtesy of Australian Archives, Canberra, A.C.T.
[ಪುಟ 18 ರಲ್ಲಿರುವ ಚಿತ್ರ]
ಸಿಡ್ನಿಯ ಮ್ಯಾನ್ಲಿ ಬೀಚ್