ಥೇಮ್ಸ್ ನದಿ ಇಂಗ್ಲೆಂಡಿನ ಅಪೂರ್ವ ಆಸ್ತಿ
ಬ್ರಿಟನ್ನ ಎಚ್ಚರ! ಲೇಖಕರಿಂದ
ಬ್ರಿಟನಿನಲ್ಲಿ ಹೆಚ್ಚಿನವರು ಥೇಮ್ಸ್ ನದಿಯನ್ನು ಪ್ರೀತಿಯಿಂದ “ತಾತ ಥೇಮ್ಸ್” ಎಂದು ಕರೆಯುತ್ತಾರೆ. ಅದು ಇಂಗ್ಲೆಂಡಿನ ದಕ್ಷಿಣಮಧ್ಯ ಭಾಗದಲ್ಲಿರುವ ರಮಣೀಯವಾದ ಕಾಟ್ಸ್ವೋಲ್ಡ್ ಬೆಟ್ಟಗಳಲ್ಲಿರುವ ನಾಲ್ಕು ತೊರೆಗಳಿಂದ ಹುಟ್ಟುತ್ತದೆ. ಅದು ಪೂರ್ವ ದಿಕ್ಕಿನಲ್ಲಿ 350 ಕಿಲೊಮೀಟರ್ ಸುತ್ತಿಬಳಸಿ ಹರಿಯುವಾಗ, ಬೇರೆ ನದಿಗಳು ಅದನ್ನು ಸೇರುತ್ತವೆ, ಮತ್ತು ಕೊನೆಗೆ ಅದು ಸುಮಾರು 29 ಕಿಲೊಮೀಟರ್ ಅಗಲವಾದ ನದೀಮುಖದ ಮೂಲಕ ಉತ್ತರ ಸಮುದ್ರದೊಳಕ್ಕೆ ಹರಿಯುತ್ತದೆ. ಈ ಚಿಕ್ಕ ನದಿಯು, ಇಂಗ್ಲೆಂಡಿನ ಇತಿಹಾಸವನ್ನು ಹೇಗೆ ರೂಪಿಸಿತೆಂಬುದು ಒಂದು ರೋಚಕ ಕಥೆಯಾಗಿದೆ.
ಇಂಗ್ಲೆಂಡಿನ ಮೇಲೆ ರೋಮನರ ಪ್ರಪ್ರಥಮ ದಾಳಿಯು ಸುಮಾರು ಸಾ.ಶ.ಪೂ. 55ರಲ್ಲಿ ಜೂಲಿಯಸ್ ಸೀಸರನ ನೇತೃತ್ವದಲ್ಲಿ ನಡೆಯಿತು. ಮುಂದಿನ ವರ್ಷ ಅವನು ಮರಳಿಬಂದಾಗ, ಅವನ ಮುನ್ನಡೆಯನ್ನು ಒಂದು ನದಿಯು ಅಡ್ಡಗಟ್ಟಿತು. ಅದನ್ನು ಟಾಮೆಸಿಸ್ ಅಂದರೆ ಥೇಮ್ಸ್ ಎಂದವನು ಹೆಸರಿಸಿದನು. ಮುಂದೆ 90 ವರ್ಷಗಳ ಬಳಿಕವೇ, ರೋಮನ್ ಸಾಮ್ರಾಟನಾದ ಕ್ಲಾಡಿಯಸ್ ಇಂಗ್ಲೆಂಡನ್ನು ವಶಪಡಿಸಿಕೊಂಡನು.
ಆ ಸಮಯದಲ್ಲಿ ಥೇಮ್ಸ್ ನದಿಯ ಇಬ್ಬದಿಗಳಲ್ಲಿಯೂ ಜವುಗುಭೂಮಿ ಇತ್ತು. ಆದರೆ ನದೀಮುಖದಿಂದ ನದಿಮೂಲದ ದಿಕ್ಕಿನಲ್ಲಿ ಸುಮಾರು 50 ಕಿಲೊಮೀಟರ್ ಒಳಕ್ಕೆ, ಅಂದರೆ ಎಲ್ಲಿ ವರೆಗೆ ಸಮುದ್ರನೀರು ಬರುತ್ತದೊ ಅಲ್ಲಿ ರೋಮನ್ ಸೈನ್ಯವು ಕಾಲಾನಂತರ ಮರದ ಸೇತುವೆಯೊಂದನ್ನು ಕಟ್ಟಿತು. ಅಲ್ಲಿ, ಅಂದರೆ ಆ ನದಿಯ ಉತ್ತರ ದಡದಲ್ಲಿ ಅವರೊಂದು ಬಂದರನ್ನು ನಿರ್ಮಿಸಿದರು ಮತ್ತು ಅದನ್ನು ಲಾಂಡೀನ್ಯುಮ್ ಎಂದು ಕರೆದರು.a
ಮುಂದಿನ ನಾಲ್ಕು ಶತಮಾನಗಳ ವರೆಗೆ, ರೋಮನರು ತಮ್ಮ ವ್ಯಾಪಾರವನ್ನು ಯೂರೋಪಿನ ಇತರ ಭಾಗಗಳಿಗೆ ವಿಸ್ತರಿಸಿದರು ಮತ್ತು ಮೆಡಿಟರೇನಿಯನ್ ಪ್ರದೇಶದಿಂದ ಸುಖಭೋಗದ ವಸ್ತುಗಳನ್ನು, ಹೌದು ಲೆಬನೋನಿನಿಂದ ಮರವನ್ನೂ ಆಮದುಮಾಡಿಕೊಳ್ಳುತ್ತಿದ್ದರು. ಲಂಡನ್ನಿಂದ ಒಳನಾಡಿನಲ್ಲಿನ ಕ್ಷೇತ್ರಗಳಿಗೆ ಸರಕುಸಾಮಾನುಗಳನ್ನು ಒಯ್ಯಲಿಕ್ಕಾಗಿಯೂ ಅವರು ಥೇಮ್ಸ್ ನದಿಯನ್ನು ಬಳಸಿದರು. ಹೀಗೆ ಲಂಡನ್ ನಗರವು, ಅದರ ವಿಸ್ತರಿಸಲ್ಪಡುತ್ತಿದ್ದ ಮುಖ್ಯ ರಸ್ತೆಗಳ ವ್ಯವಸ್ಥೆಯೊಂದಿಗೆ ಬೇಗನೆ ಒಂದು ಪ್ರಮುಖ ವ್ಯಾಪಾರಿ ಕೇಂದ್ರವಾಯಿತು.
ವಿಲ್ಯಮ್ ದ ಕಾಂಕರರ್ನ ಪ್ರಭಾವ
ರೋಮನ್ ಸಾಮ್ರಾಜ್ಯವು ಕುಸಿದುಹೋದ ಅನಂತರ ಸಾ.ಶ. 410ರಲ್ಲಿ ರೋಮನ್ ಸೈನ್ಯಗಳು ಬ್ರಿಟನ್ ಅನ್ನು ಬಿಟ್ಟುಹೋದವು. ಆಗ ಲಂಡನ್ ನಿರ್ಲಕ್ಷಿಸಲ್ಪಟ್ಟಿತು, ಮತ್ತು ಇದರಿಂದಾಗಿ ಥೇಮ್ಸ್ ನದಿಯುದ್ದಕ್ಕೂ ನಡೆಯುತ್ತಿದ್ದ ವ್ಯಾಪಾರವು ಸಹಜವಾಗಿಯೇ ಇಳಿಮುಖಗೊಂಡಿತು. ಆ್ಯಂಗ್ಲೊ-ಸ್ಯಾಕ್ಸನ್ ರಾಜರ ಕಿರೀಟಧಾರಣೆಯನ್ನು ಕಿಂಗ್ಸ್ಟನ್ ಎಂಬಲ್ಲಿ ನಡೆಸಲಾಗುತ್ತಿತ್ತು. ಇಲ್ಲಿ ಥೇಮ್ಸ್ ನದಿಯನ್ನು ಸುಲಭವಾಗಿ ದಾಟಸಾಧ್ಯವಿತ್ತು ಮತ್ತು ಇದು ಲಂಡನ್ನಿಂದ ಥೇಮ್ಸ್ ನದಿಯ ಮೂಲದತ್ತ 19 ಕಿಲೊಮೀಟರ್ ದೂರದಲ್ಲಿದ್ದ ಒಂದು ನೆಲಸುನಾಡಾಗಿತ್ತು. ಈ ಕಿರೀಟಧಾರಣೆಯ ಪದ್ಧತಿಯು ನಾರ್ಮಂಡಿಯ ವಿಲ್ಯಮ್ ದ ಕಾಂಕರರ್ (ವಿಜಯಿ ವಿಲ್ಯಮ್) ಎಂಬವನು 11ನೇ ಶತಮಾನದಲ್ಲಿ ಬಂದು ದಾಳಿ ನಡೆಸಿದ ವರೆಗೂ ನಡೆಯಿತು. ವಿಲ್ಯಮ್ನ ಕಿರೀಟಧಾರಣೆಯು ವೆಸ್ಟ್ಮಿನ್ಸ್ಟರ್ನಲ್ಲಿ 1066ರಲ್ಲಿ ನಡೆಯಿತು. ತದನಂತರ ಅವನು ಟವರ್ ಆಫ್ ಲಂಡನ್ (ಲಂಡನ್ ಗೋಪುರ) ಅನ್ನು ರೋಮನ್ ನಗರದ ಗೋಡೆಗಳೊಳಗೆ ಕಟ್ಟಿಸಿದನು. ಇದನ್ನು ಅವನು ವಾಣಿಜ್ಯ ಸಮುದಾಯದ ಮೇಲೆ ಆಧಿಪತ್ಯ ನಡೆಸಲು ಮತ್ತು ವಿಸ್ತರಿಸಲು ಹಾಗೂ ಬಂದರಿನೊಳಗೆ ಏನು ಪ್ರವೇಶಿಸುತ್ತದೆಂಬುದನ್ನು ನಿಯಂತ್ರಿಸಲಿಕ್ಕಾಗಿ ಮಾಡಿದನು. ಇದರಿಂದಾಗಿ ಪುನಃ ಒಮ್ಮೆ ವ್ಯಾಪಾರವು ವೃದ್ಧಿಯಾಯಿತು, ಮತ್ತು ಲಂಡನಿನ ಜನಸಂಖ್ಯೆಯು ಸುಮಾರು 30,000ಕ್ಕೇರಿತು.
ಲಂಡನಿನ ಪಶ್ಚಿಮಕ್ಕೆ ಸುಮಾರು 35 ಕಿಲೊಮೀಟರ್ ದೂರದಲ್ಲಿ, ಇಂದು ವಿಂಡ್ಸರ್ ಎಂದು ಕರೆಯಲ್ಪಡುವ ಸ್ಥಳದಲ್ಲಿ, ಸುಣ್ಣದ ದಿಬ್ಬದ ಮೇಲೆ ವಿಲ್ಯಮ್ ದ ಕಾಂಕರರ್ ಒಂದು ಕೋಟೆಯನ್ನು ಕಟ್ಟಿಸಿದನು. ಇದನ್ನು, ಇದಕ್ಕಿಂತ ಮುಂಚೆ ಇದ್ದ ಸ್ಯಾಕ್ಸನ್ ರಾಜವೈಭವದ ನಿವಾಸದ ಸ್ಥಾನದಲ್ಲಿ ಕಟ್ಟಿಸಲಾಯಿತು ಮತ್ತು ಇಲ್ಲಿಂದ ಥೇಮ್ಸ್ ನದಿಯ ವಿಹಂಗಮವಾದ ನೋಟ ಕಾಣಸಿಗುತ್ತದೆ. ಇಂದು ಅಲ್ಲಿರುವ ವಿಂಡ್ಸರ್ ಕೋಟೆಮನೆಯು ಅಲ್ಲಿ ಮಾಡಲ್ಪಟ್ಟ ಅನೇಕ ಜೋಡಣೆಗಳು ಮತ್ತು ಮಾರ್ಪಾಟುಗಳ ಫಲಿತಾಂಶವಾಗಿದೆ. ಈ ಕೋಟೆಮನೆಯು ಇಂದಿನ ವರೆಗೂ ಬ್ರಿಟನಿನ ಅತಿ ಜನಪ್ರಿಯವಾದ ಪ್ರವಾಸಿತಾಣಗಳಲ್ಲಿ ಒಂದಾಗಿರುತ್ತದೆ.
ಇಸವಿ 1209ರಲ್ಲಿ, 30 ವರ್ಷಗಳ ಒಂದು ನಿರ್ಮಾಣಕೆಲಸವು ಪೂರ್ಣಗೊಂಡಿತು. ಅದು, ಥೇಮ್ಸ್ ನದಿಯ ಮೇಲೆ ಲಂಡನಿನಲ್ಲಿ ಕಟ್ಟಲ್ಪಟ್ಟ ಕಲ್ಲಿನ ಸೇತುವೆ ಆಗಿತ್ತು. ಈ ರೀತಿಯ ಸೇತುವೆಯು ಯೂರೋಪಿನಲ್ಲೇ ಪ್ರಥಮ. ಈ ಅಸಾಮಾನ್ಯವಾದ ರಚನಾಕಟ್ಟಿನಲ್ಲಿ ಅಂಗಡಿಗಳು, ಮನೆಗಳು ಮತ್ತು ಒಂದು ಚಿಕ್ಕ ಚರ್ಚು ಸಹ ಕಟ್ಟಲ್ಪಟ್ಟಿತು. ಈ ಸೇತುವೆಗೆ ಎರಡು ಎತ್ತುಸೇತುವೆಗಳಿದ್ದವು (ತುದಿಯನ್ನು ಮೇಲಕ್ಕೆತ್ತಬಹುದಾದ ಸೇತುವೆ) ಮತ್ತು ಇದರ ದಕ್ಷಿಣದ ಭಾಗದಲ್ಲಿನ ಸೌತ್ವರ್ಕ್ ಎಂಬಲ್ಲಿ ರಕ್ಷಣೆಗಾಗಿ ಒಂದು ಗೋಪುರ ಸಹ ಇತ್ತು.
ಥೇಮ್ಸ್ ನದಿಯ ದಡದಲ್ಲಿರುವ ವಿಂಡ್ಸರ್ನ ಬಳಿಯಲ್ಲಿರುವ ರನ್ನಿಮೇಡ್ ಎಂಬಲ್ಲಿ, ಇಂಗ್ಲೆಂಡಿನ ರಾಜ ಜಾನ್ (1167-1216) ಪ್ರಸಿದ್ಧವಾದ ಮ್ಯಾಗ್ನ ಕಾರ್ಟ ಎಂಬ ವೈಯಕ್ತಿಕ ಹಾಗೂ ರಾಜಕೀಯ ಸ್ವಾತಂತ್ರ್ಯದ ಶಾಸನಕ್ಕೆ 1215ರಲ್ಲಿ ಮುದ್ರೆಯೊತ್ತಿದನು. ಈ ಕಾಯಿದೆಯಿಂದಾಗಿ ಅವನು ಇಂಗ್ಲಿಷ್ ನಾಗರಿಕ ಹಕ್ಕುಗಳನ್ನು ಮಾತ್ರವಲ್ಲ, ನಿರ್ದಿಷ್ಟವಾಗಿ ಲಂಡನ್ ನಗರದ ಹಕ್ಕುಗಳನ್ನು ಮತ್ತು ಅದರ ಬಂದರು ಹಾಗೂ ವ್ಯಾಪಾರಿಗಳ ಸ್ವಾತಂತ್ರ್ಯದ ಖಾತರಿಯನ್ನು ಕೊಡಲು ಒತ್ತಾಯಿಸಲ್ಪಟ್ಟನು.
ಥೇಮ್ಸ್ನಿಂದಾಗಿ ಸಮೃದ್ಧಿ
ಹಿಂಬಾಲಿಸಿ ಬಂದ ಶತಮಾನಗಳಲ್ಲಿ ಥೇಮ್ಸ್ ನದಿಯ ಮೂಲಕ ನಡೆಯುತ್ತಿದ್ದ ವ್ಯಾಪಾರವು ಬೆಳೆಯಿತು. ಹೆಚ್ಚೆಚ್ಚಾಗುತ್ತಿದ್ದ ವ್ಯಾಪಾರವು ಕಾಲಾನಂತರ ಆ ನದಿಯುದ್ದಕ್ಕೂ ಇದ್ದ ಸೌಕರ್ಯಗಳನ್ನು ಮೀರಿ ನಿಂತಿತು. ಇನ್ನೂರು ವರ್ಷಗಳ ಹಿಂದೆ ಥೇಮ್ಸ್ ನದಿಯ ಹಡಗುಕಟ್ಟೆಗಳಲ್ಲಿ ಕೇವಲ 600 ಹಡಗುಗಳು ಲಂಗರನ್ನು ಹಾಕಲು ಸಾಕಾಗುವಷ್ಟು ಸ್ಥಳವಿತ್ತು. ಅದೇ ಸಮಯದಲ್ಲಿ, ಕೆಲವೊಮ್ಮೆ ಬಂದರಿನಲ್ಲಿ ಸುಮಾರು 1,775ರಷ್ಟು ಹಾಯಿ ಹಡಗುಗಳು ತಮ್ಮ ಸರಕನ್ನು ಇಳಿಸಲು ಕಾಯುತ್ತಾ ನಿಂತಿರುತ್ತಿದ್ದವು. ಈ ಕಿಕ್ಕಿರಿದಿರುವಿಕೆಯಿಂದಾಗಿ ಕಳ್ಳತನದ ಗಂಭೀರ ಸಮಸ್ಯೆ ಶುರುವಾಯಿತು. ಕಳ್ಳರು ರಾತ್ರಿ ಸಮಯದಲ್ಲಿ ಹಡಗುಗಳನ್ನು ಲಂಗರುಗಳಿಂದ ಕತ್ತರಿಸಿಬಿಟ್ಟು ಅವುಗಳನ್ನು ಲೂಟಿಮಾಡುತ್ತಿದ್ದರು. ಇನ್ನೂ ಕೆಲವರು ಚಿಕ್ಕ ದೋಣಿಗಳಲ್ಲಿ ಥೇಮ್ಸ್ ನದಿಯಲ್ಲಿ ಸಂಚರಿಸುತ್ತಾ ಕಳ್ಳಸಾಗಣೆಮಾಡಿ ಜೀವನ ನಡೆಸುತ್ತಿದ್ದರು. ಈ ಸಮಸ್ಯೆಯನ್ನು ಪರಿಹರಿಸಲು, ಜಗತ್ತಿನ ಪ್ರಪ್ರಥಮ ನದಿ ಪೊಲೀಸ್ ಪಡೆಯನ್ನು ಲಂಡನ್ ಸ್ಥಾಪಿಸಿತು. ಅದು ಇಂದಿನ ವರೆಗೂ ಕಾರ್ಯನಿರತವಾಗಿದೆ.
ಆದರೆ ಆ ಬಂದರಿನ ಸೌಕರ್ಯಗಳ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಇನ್ನೂ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿತ್ತು. ಆದುದರಿಂದ 19ನೇ ಶತಮಾನದಲ್ಲಿ ಇಂಗ್ಲೆಂಡಿನ ಪಾರ್ಲಿಮೆಂಟು, ಆ ನದಿಯ ಎರಡು ಬದಿಗಳಲ್ಲಿರುವ ತಗ್ಗು ಪ್ರದೇಶದಲ್ಲಿ ಆವರಣಗಳುಳ್ಳ ಹಡಗುಕಟ್ಟೆಗಳ ನಿರ್ಮಾಣಕ್ಕಾಗಿ ಅನುಮತಿಕೊಟ್ಟಿತು. ಜಗತ್ತಿನಲ್ಲಿ ಈ ರೀತಿಯ ಹಡಗುಕಟ್ಟು ವ್ಯವಸ್ಥೆಯಲ್ಲಿ ಇದೇ ಅತಿ ದೊಡ್ಡದಾಗಿತ್ತು. 1800ಗಳ ಆರಂಭದಲ್ಲಿ ಸರೇ ಕಮರ್ಷಿಯಲ್ ಡಾಕ್ಸ್, ಲಂಡನ್ ಡಾಕ್, ವೆಸ್ಟ್ ಆ್ಯಂಡ್ ಈಸ್ಟ್ ಇಂಡಿಯ ಡಾಕ್ಸ್ ಮೊದಲು ಪೂರ್ಣಗೊಂಡವು, ತದನಂತರ 1855ರಲ್ಲಿ ರಾಯಲ್ ವಿಕ್ಟೋರಿಯ ಡಾಕ್ ಮತ್ತು ಅದರ ಜೊತೆಯಾದ ರಾಯಲ್ ಆ್ಯಲ್ಬರ್ಟ್ ಡಾಕ್ 1880ರಲ್ಲಿ ಸಿದ್ಧವಾಯಿತು.
ಒಂದನೇ ಮಾರ್ಕ್ ಮತ್ತು ಇಸಂಬಾರ್ಡ್ ಕೆ. ಬ್ರೂನೆಲ್ (ತಂದೆ ಮತ್ತು ಮಗ) ಎಂಬ ಇಬ್ಬರು ಇಂಜಿನೀಯರರು, 1840ರಲ್ಲಿ ಲೋಕದ ಪ್ರಪ್ರಥಮ ನೀರಿನಡಿಯ ಸುರಂಗವನ್ನು ಕಟ್ಟಿ ಥೇಮ್ಸ್ ನದಿಯ ಎರಡೂ ದಡಗಳನ್ನು ಜೋಡಿಸಿದರು. ಅದು 459 ಮೀಟರ್ ಉದ್ದವಾಗಿರುತ್ತದೆ ಮತ್ತು ಈಗಲೂ ಗ್ರೇಟರ್ ಲಂಡನಿನ ನೆಲದಡಿಯ ರೈಲಿನ ಜಾಲದ ಭಾಗವಾಗಿದೆ. 1894ರಲ್ಲಿ ಆಧುನಿಕ ಪ್ರವಾಸೋದ್ಯಮದ ಆಕರ್ಷಣೆಯಾಗಿರುವ ಟವರ್ ಬ್ರಿಡ್ಜ್ ಪೂರ್ಣಗೊಂಡಿತು. ಈ ಎತ್ತುಸೇತುವೆಯ (ಸಮಸನ್ನೆಯಿಂದ ಮೇಲಕ್ಕೆ ಏರಿಸಬಲ್ಲ ಮತ್ತು ಕೆಳಕ್ಕೆ ಇಳಿಸಬಲ್ಲ ಭಾಗಗಳುಳ್ಳ ಸೇತುವೆ) ಎರಡು ಗೋಪುರಗಳ ಮಧ್ಯದಿಂದ ದೊಡ್ಡ ದೊಡ್ಡ ಹಡಗುಗಳು ದಾಟಿಹೋಗಲು ಸಾಧ್ಯವಾಗುವಂತೆ 76 ಮೀಟರ್ಗಳಷ್ಟು ಸ್ಥಳವಕಾಶವಿರುತ್ತದೆ. ಒಂದುವೇಳೆ ನೀವು ಹೆಚ್ಚುಕಡಿಮೆ 300 ಮೆಟ್ಟಿಲುಗಳನ್ನು ಹತ್ತಿದರೆ ಈ ಸೇತುವೆಯಲ್ಲಿ ಇನ್ನೂ ಮೇಲಕ್ಕಿರುವ ಕಾಲುದಾರಿಗೆ ಹೋಗಿ, ಅಲ್ಲಿಂದ ನದಿಯ ಸುತ್ತಲಿನ ರಮಣೀಯ ದೃಶ್ಯಗಳನ್ನು ನೋಡಸಾಧ್ಯವಿದೆ.
ಇಪ್ಪತ್ತನೆಯ ಶತಮಾನದಷ್ಟಕ್ಕೆ, ಲಂಡನಿನ ಬಂದರು ಸಂಕೀರ್ಣವು, ಆ ನಗರದಿಂದಾಗಿ ಆಗುತ್ತಿದ್ದ ವ್ಯಾಪಾರವನ್ನು ನಿರ್ವಹಿಸಲಿಕ್ಕಾಗಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದ ದೊಡ್ಡ ದೊಡ್ಡ ಸ್ಟೀಮ್ಹಡಗುಗಳಿಗಾಗಿ ಸ್ಥಳ ಹಾಗೂ ಅನುಕೂಲತೆಗಳನ್ನು ಹೊಂದಿಕೊಂಡು ಚೆನ್ನಾಗಿ ಸಜ್ಜಾಗಿತ್ತು. ರಾಜನಾದ Vನೇ ಜಾರ್ಜ್ನ ಹೆಸರು ಕೊಡಲ್ಪಟ್ಟಿರುವ ಕೊನೆಯ ಹಡಗುಕಟ್ಟೆಯು 1921ರಲ್ಲಿ ಸಿದ್ಧವಾಗುವಷ್ಟಕ್ಕೆ ಲಂಡನ್, “ಜಗತ್ತಿನ ಅತ್ಯಂತ ದೊಡ್ಡ ಮತ್ತು ಧನಿಕ ಬಂದರು ವ್ಯವಸ್ಥೆ”ಯಾಗಿಬಿಟ್ಟಿತ್ತು.
ಅರಮನೆಗಳು, ರಾಜಮನೆತನ ಮತ್ತು ವೈಭವ ಪ್ರದರ್ಶನಗಳಿಗೆ ಆತಿಥೇಯ
ಲಂಡನ್ ವಿಕಾಸಗೊಳ್ಳುತ್ತಿದ್ದ ಸಮಯದಲ್ಲಿ ಅದರ ರಸ್ತೆಗಳು ತೀರ ಕೆಳಮಟ್ಟದವುಗಳಾಗಿದ್ದು, ನೆಲಗಟ್ಟು ಮಾಡಲ್ಪಟ್ಟಿರಲಿಲ್ಲ. ಚಳಿಗಾಲದಲ್ಲಂತೂ ಅನೇಕವೇಳೆ ಅವುಗಳಲ್ಲಿ ಪ್ರಯಾಣಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಹೀಗಿರುವುದರಿಂದ ಥೇಮ್ಸ್ ನದಿಯೇ, ಅತಿ ಶೀಘ್ರ ಮತ್ತು ಅತಿ ಸಮಂಜಸವಾದ ಸಾರಿಗೆಯ ಮಾಧ್ಯಮವಾಗಿತ್ತು. ವರ್ಷಗಳು ದಾಟಿದಂತೆ ಅದು ತುಂಬ ಸಂಚಾರವಿದ್ದ ಜಲಮಾರ್ಗವಾಯಿತು. ಥೇಮ್ಸ್ ನದಿಯ ಅಂಬಿಗರು, ನದಿತೀರದ ಏಣಿಗಳು ಮತ್ತು ಮೆಟ್ಟಿಲುಸಾಲುಗಳ ಬಳಿ ಗುಂಪುಗೂಡುತ್ತಾ “ಓರ್ಸ್” (ದೋಣಿಯ ಹುಟ್ಟುಗಳು) ಎಂದು ಕೂಗುತ್ತಿದ್ದರು. ಥೇಮ್ಸ್ ನದಿಯ ಆಚೆ ದಡಕ್ಕೆ, ಇಲ್ಲವೆ ಆ ನದಿಯ ಮೂಲದತ್ತ ಹೋಗುವ ದಿಕ್ಕಿನಲ್ಲಿ ಇಲ್ಲವೆ ವಿರುದ್ಧ ದಿಕ್ಕಿನಲ್ಲಿ ಅಥವಾ, ಫ್ಲೀಟ್ ಮತ್ತು ವಾಲ್ಬ್ರೂಕ್ ಎಂಬ ಸುತ್ತಿಬಳಸಿ ಹರಿಯುವ ಉಪನದಿಗಳಲ್ಲಿ ಪ್ರಯಾಣಿಕರನ್ನು ಒಯ್ಯಲು ಹಾಗೆ ಕೂಗಾಡುತ್ತಿದ್ದರು. ಫ್ಲೀಟ್ ಮತ್ತು ವಾಲ್ಬ್ರೂಕ್ ಎಂಬ ಆ ನದಿಗಳು ಈಗ ಅವುಗಳ ಹೆಸರನ್ನು ಹೊತ್ತಿರುವ ಲಂಡನಿನ ಬೀದಿಗಳಡಿಯಲ್ಲಿ ಹೂತುಹೋಗಿವೆ.
ಸಮಯಾನಂತರ ಲಂಡನ್ ಬಹಳಷ್ಟು ಮಟ್ಟಿಗೆ ವೆನಿಸ್ ನಗರದಂತೆ ತೋರಲಾರಂಭಿಸಿತು. ಅದರ ಅನೇಕ ಭವ್ಯ ಅರಮನೆಗಳ ಜಗಲಿಗಳು ಕೆಳಗಿಳಿಯುತ್ತಾ ನದಿಗೆ ಬಂದು ತಲಪುತ್ತಿದ್ದವು. ಥೇಮ್ಸ್ ನದಿಯ ದಡದಲ್ಲಿರುವ ಅರಮನೆಯೊಂದರಲ್ಲಿ ವಾಸಿಸುವುದು ರಾಜಮನೆತನದವರ ನಡುವೆ ಅತಿ ಉನ್ನತವಾದ ಫ್ಯಾಷನ್ ಆಗಿಬಿಟ್ಟಿತು. ಇದಕ್ಕೆ ಗ್ರೀನ್ವಿಚ್, ವೈಟ್ಹಾಲ್ ಮತ್ತು ವೆಸ್ಟ್ಮಿನ್ಸ್ಟರ್ನಲ್ಲಿರುವ ಅರಮನೆಗಳು ಸಾಕ್ಷ್ಯಗಳಾಗಿವೆ. ಅದೇ ರೀತಿಯಲ್ಲಿ ಹ್ಯಾಂಪ್ಟನ್ ಕೋರ್ಟ್ ಇಂಗ್ಲೆಂಡಿನ ರಾಜರಾಣಿಯರ ಮನೆಯಾಗಿರುತ್ತ ಬಂದಿದೆ. ಮತ್ತು ನದಿಮೂಲದ ದಿಕ್ಕಿನಲ್ಲಿರುವ ವಿಂಡ್ಸರ್ ಕಾಸಲ್ ಈಗಲೂ ರಾಜಮನೆತನದ ನಿವಾಸವಾಗಿರುತ್ತದೆ.
ಇಸವಿ 1717ರಲ್ಲಿ ಜಾರ್ಜ್ ಫ್ರೀಡ್ರಿಕ್ ಹ್ಯಾಂಡಲ್ ಎಂಬವನು, ನದಿಯ ಮೇಲೆ ರಾಜಮನೆತನದವರಿಗಾಗಿ ನಡೆದ ಪಿಕ್ನಿಕ್ನ ಸಂದರ್ಭದಲ್ಲಿ ರಾಜನಾದ Iನೇ ಜಾರ್ಜ್ನ್ನು ಸಂತೋಷಪಡಿಸಲು “ವಾಟರ್ ಮ್ಯೂಸಿಕ್” ಎಂಬ ಸಂಗೀತವನ್ನು ರಚಿಸಿದನು. ರಾಜನ ಉತ್ಸವನೌಕೆ (ಚಪ್ಪಟೆಯಾದ ದೋಣಿ)ಯೊಂದಿಗೆ “ಎಷ್ಟೊಂದು ದೋಣಿಗಳಿದ್ದವೆಂದರೆ, ಇಡೀ ನದಿಯೇ ಅವುಗಳಿಂದ ಮುಚ್ಚಲ್ಪಟ್ಟಿದೆಯೊ ಎಂಬಂತಿತ್ತು” ಎಂದು ಆ ದಿನದಲ್ಲಿನ ಒಂದು ವಾರ್ತಾಪತ್ರಿಕೆಯು ವರದಿಸಿತು. ರಾಜನ ಉತ್ಸವನೌಕೆಯ ಪಕ್ಕದಲ್ಲಿದ್ದ ಇನ್ನೊಂದು ಉತ್ಸವನೌಕೆಯಲ್ಲಿ 50 ಸಂಗೀತಗಾರರು ಇದ್ದರು. ಇವರೆಲ್ಲರು ವೆಸ್ಟ್ಮಿನ್ಸ್ಟರ್ನಿಂದ ಚೆಲ್ಸಿಯ ವರೆಗೂ ಆ ಉತ್ಸವನೌಕೆಯಲ್ಲಿ 8 ಕಿಲೊಮೀಟರ್ ಪ್ರಯಾಣಿಸುತ್ತಿದ್ದಾಗ ಮೂರು ಸಲ ಹ್ಯಾಂಡಲ್ನ ಸಂಗೀತರಚನೆಯನ್ನು ನುಡಿಸಿದರು.
ಸುಖಾನುಭವ ಮತ್ತು ವಿಶ್ರಾಮವನ್ನು ನೀಡುವಂಥ ನದಿ
ಇಸವಿ 1740ರ ದಶಕಗಳಲ್ಲಿ ವೆಸ್ಟ್ಮಿನ್ಸ್ಟರ್ ಬ್ರಿಡ್ಜ್ ನಿರ್ಮಾಣವಾಗುವ ವರೆಗೆ ಥೇಮ್ಸ್ ನದಿಯನ್ನು ಕಾಲ್ನಡಿಗೆಯಲ್ಲಿ ದಾಟಲಿಕ್ಕಾಗಿ ಇದ್ದ ಒಂದೇ ಒಂದು ಮಾರ್ಗವು, ಲಂಡನ್ ಬ್ರಿಡ್ಜ್ ಆಗಿತ್ತು. ಈ ಲಂಡನ್ ಬ್ರಿಡ್ಜ್ ಅನ್ನು ತದನಂತರ ನವೀಕರಿಸಲಾಯಿತು ಮತ್ತು ಕೊನೆಗೆ 1820ರಲ್ಲಿ ತೆಗೆದುಹಾಕಲಾಯಿತು. ಅದರ ಆರಂಭದ ಕಲ್ಲಿನ ರಚನೆಯಲ್ಲಿದ್ದ 19 ಕಮಾನುಗಳನ್ನು ಬೆಂಬಲಿಸುತ್ತಿದ್ದ ಕಂಬಗಳು ನದಿಯ ಹರಿಯುವಿಕೆಯನ್ನು ಬಹಳಷ್ಟು ತಡೆಗಟ್ಟಿದವು. ಇದರಿಂದಾಗಿ, ಅದು ಅಸ್ತಿತ್ವದಲ್ಲಿದ್ದ 600ರಷ್ಟು ವರ್ಷಗಳಲ್ಲಿ ಥೇಮ್ಸ್ ನದಿಯು ಕಡಿಮೆಪಕ್ಷ ಎಂಟು ಸಲ ಹಿಮಗಟ್ಟಿತು. ಹೀಗೆ ಆಗುತ್ತಿದ್ದಾಗ, ಆ ಮಂಜುಗಡ್ಡೆಯ ಮೇಲೆ ದೊಡ್ಡದಾದ “ಹಿಮ ಜಾತ್ರೆಗಳು” ನಡೆಸಲ್ಪಡುತ್ತಿದ್ದವು ಮತ್ತು ಅದರಲ್ಲಿ ಕ್ರೀಡಾ ಪಂದ್ಯಗಳು ನಡೆಯುತ್ತಿದ್ದವು. ಎತ್ತಿನ ಮಾಂಸವನ್ನು ಕರಿಯಲಾಗುತ್ತಿತ್ತು ಮತ್ತು ರಾಜಮನೆತನದವರು ಅಲ್ಲಿ ಊಟಮಾಡುತ್ತಿರುವುದನ್ನು ನೋಡಬಹುದಿತ್ತು. “ಥೇಮ್ಸ್ ನದಿಯಿಂದ ಖರೀದಿಸಲ್ಪಟ್ಟದ್ದು” ಎಂಬ ಲೇಬಲ್ಗಳಿರುತ್ತಿದ್ದ ಪುಸ್ತಕಗಳನ್ನೂ ಆಟಿಕೆಗಳನ್ನೂ ಜನರು ಉತ್ಸುಕತೆಯಿಂದ ಖರೀದಿಸುತ್ತಿದ್ದರು. ಹಿಮಗಟ್ಟಿದ್ದ ಆ ನದಿಯ ಮೇಲೆ ಸಜ್ಜುಗೊಳಿಸಲ್ಪಟ್ಟ ಮುದ್ರಣಯಂತ್ರಗಳಲ್ಲಿ ವಾರ್ತಾ ಹಾಳೆಗಳು ಮತ್ತು ‘ಕರ್ತನ ಪ್ರಾರ್ಥನೆಯ’ ಪ್ರತಿಗಳನ್ನೂ ಮುದ್ರಿಸಲಾಗುತ್ತಿತ್ತು! ಇತ್ತೀಚಿನ ಸಮಯಗಳಲ್ಲಿ ಆಕ್ಸ್ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳ ಮಧ್ಯೆ ನಡೆಯುವ ‘ಯೂನಿವರ್ಸಿಟಿ ಬೋಟ್ ರೇಸ್’ ಸ್ಪರ್ಧೆಯು ವಾರ್ಷಿಕ ವಸಂತಕಾಲದ ಪಂದ್ಯವಾಗಿಬಿಟ್ಟಿದೆ. ಪಟ್ನಿ ಮತ್ತು ಮಾರ್ಟ್ಲೇಕ್ ಎಂಬ ಸ್ಥಳಗಳ ನಡುವೆ ಥೇಮ್ಸ್ ನದಿಯ ದಡಗಳಲ್ಲಿ ಜನರು ಸಾಲಾಗಿ ನಿಂತಿರುತ್ತಾರೆ ಮತ್ತು ಎಂಟು ಮಂದಿ ದೋಣಿ ನಡೆಸುವವರ ಪ್ರತಿಸ್ಪರ್ಧಿ ತಂಡಗಳು 20 ನಿಮಿಷಗಳೊಳಗೆ ಏಳು ಕಿಲೊಮೀಟರ್ಗಿಂತ ಸ್ವಲ್ಪ ಕಡಿಮೆ ಅಂತರವನ್ನು ಆವರಿಸುತ್ತಿರುವಾಗ ಅವರನ್ನು ಹುರಿದುಂಬಿಸುತ್ತಿರುತ್ತಾರೆ. ಈ ರೀತಿಯ ಮೊದಲ ಸ್ಪರ್ಧೆಯನ್ನು 1829ರಲ್ಲಿ ಆ ನದಿಯ ಮೂಲದ ದಿಕ್ಕಿನಲ್ಲಿದ್ದ ಹೆನ್ಲಿ ಎಂಬಲ್ಲಿ ನಡೆಸಲಾಗಿತ್ತು. ಇದನ್ನು ಆಮೇಲೆ ನದಿ ಮೂಲದ ವಿರುದ್ಧ ದಿಕ್ಕಿನಲ್ಲಿ ಇನ್ನೊಂದು ಸ್ಥಳಕ್ಕೆ ಬದಲಾಯಿಸಿದಾಗ ಹೆನ್ಲಿ ಪಟ್ಟಣವು ಅದರ ಸ್ವಂತ ರಾಯಲ್ ವಿಹಾರನೌಕಾ ಪಂದ್ಯವನ್ನು ಆರಂಭಿಸಿತು. ಇದು, ಯೂರೋಪಿನಲ್ಲಿ ಅತ್ಯಂತ ಹಳೆಯ ಮತ್ತು ಅತಿ ಪ್ರತಿಷ್ಠಿತ ದೋಣಿನಡೆಸುವ ಪಂದ್ಯವಾಗಿದೆ. ಥೇಮ್ಸ್ ನದಿಯಲ್ಲಿ ಸುಮಾರು 1,600 ಮೀಟರ್ಗಳ ದೂರದ ವರೆಗೆ ನಡೆಯುವ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಜಗತ್ತಿನ ಅತಿ ಉತ್ತಮ ಅಂಬಿಗರು ಬರುತ್ತಾರೆ. ಬೇಸಗೆಕಾಲದಲ್ಲಿ ನಡೆಯುವ ಈ ಸ್ಪರ್ಧೆಯು ಈಗ ಒಂದು ಅತ್ಯಾಧುನಿಕ ಶೈಲಿಯ ಸಾಮಾಜಿಕ ಘಟನೆಯಾಗಿ ಪರಿಣಮಿಸಿದೆ.
ಬ್ರಿಟನಿನ ಕುರಿತಾದ ಒಂದು ಮಾರ್ಗದರ್ಶಿ ಪುಸ್ತಕವು ಹೇಳುವುದೇನೆಂದರೆ, ಥೇಮ್ಸ್ ನದಿಯು “ಚಿಕ್ಕ ಗುಡ್ಡಗಳು, ಕಾಡುಗಳು, ಹುಲ್ಲುಗಾವಲುಗಳು, ಹಳ್ಳಿಮನೆಗಳು, ಸುಂದರವಾದ ಹಳ್ಳಿಗಳು ಮತ್ತು ಚಿಕ್ಕ ಪಟ್ಟಣಗಳಿರುವ ಶುದ್ಧ ಇಂಗ್ಲಿಷ್ ಶೈಲಿಯ ಗ್ರಾಮಪ್ರದೇಶದ ಪಕ್ಕದಿಂದ ಹರಿಯುತ್ತಾ ಹೋಗುವಾಗ ಅನೇಕ ವಿಭಿನ್ನ ಸುಖಾನುಭವಗಳನ್ನು ನೀಡುತ್ತದೆ. . . . ಉದ್ದುದ್ದ ವಿಭಾಗಗಳಲ್ಲಿ ಅದರ ದಡದಾದ್ಯಂತ ರಸ್ತೆಯಿರುವುದಿಲ್ಲ, ಆದರೆ ಸಾಮಾನ್ಯವಾಗಿ ಒಂದು ಎಳೆದಾರಿ [ದೋಣಿಯನ್ನು ನದಿಯ ಪಕ್ಕದಲ್ಲಿ ಉದ್ದಕ್ಕೂ ಎಳೆದುಕೊಂಡು ಹೋಗಲಿಕ್ಕಾಗಿರುವ ನೆಲ ದಾರಿ] ಇರುತ್ತದೆ. ವಾಹನದಲ್ಲಿ ಹೋಗುವ ವ್ಯಕ್ತಿಯು, ನದಿಯ ಸೌಂದರ್ಯವನ್ನು ಅದರ ಮಾರ್ಗದಲ್ಲಿ ಹಾದುಹೋಗುವಂಥ ಪಟ್ಟಣಗಳಲ್ಲಿ ನೋಡಬಹುದು, ಆದರೆ ಆ ನದಿಯ ಪ್ರಶಾಂತ ಅಂದವನ್ನು ಪೂರ್ಣವಾಗಿ ಆಸ್ವಾದಿಸಬೇಕಾದರೆ, ಒಂದು ದೋಣಿಯಲ್ಲಿ ಇಲ್ಲವೆ ಆ ಎಳೆದಾರಿಗಳಲ್ಲಿ ಕಾಲ್ನಡಿಗೆಯಲ್ಲಿ ಹೋಗಬೇಕು.”
ಇಂಗ್ಲೆಂಡಿಗೆ ಭೇಟಿನೀಡುವ ಯೋಜನೆಮಾಡುತ್ತಿದ್ದೀರೊ? ಹಾಗಿರುವಲ್ಲಿ, ಥೇಮ್ಸ್ ನದಿಯನ್ನು ಸುತ್ತಿನೋಡಲು ಸಮಯಮಾಡಿಕೊಂಡು ಅದರ ಚರಿತ್ರೆಯಲ್ಲಿ ಸ್ವಲ್ಪವನ್ನಾದರೂ ಸವಿಯಿರಿ. ಅದರ ಉಗಮಸ್ಥಾನದಲ್ಲಿರುವ ಗ್ರಾಮಾಂತರ ಸೌಂದರ್ಯದಿಂದ ಹಿಡಿದು, ಅದರ ಚಟುವಟಿಕೆ ತುಂಬಿದ ನದೀಮುಖದ ವರೆಗೂ ನೋಡಲು ಹಾಗೂ ಕಲಿಯಲು ಬಹಳಷ್ಟು ಇದೆ! ಈ ‘ತಾತ ಥೇಮ್ಸ್’ ನಿಮ್ಮನ್ನು ನಿರಾಶೆಗೊಳಿಸನು. (g 2/06)
[ಪಾದಟಿಪ್ಪಣಿ]
a ಲಂಡನ್ ಎಂಬ ಹೆಸರು ಲ್ಯಾಟಿನ್ ಭಾಷೆಯ ಲಾಂಡೀನ್ಯುಮ್ ಎಂಬ ಪದದಿಂದ ಬಂದಿರುವುದಾದರೂ, ಈ ಎರಡೂ ಪದಗಳು ಕೆಲ್ಟಿಕ್ ಭಾಷೆಯ ಲಿನ್ ಮತ್ತು ಡಿನ್ ಎಂಬ ಪದಗಳಿಂದ ತೆಗೆಯಲ್ಪಟ್ಟವುಗಳಾಗಿರಬಹುದು. ಇವರೆಡನ್ನೂ ಸೇರಿಸುವಾಗ ಅವು, “ಸರೋವರದ ಮೇಲಿನ ಪಟ್ಟಣ [ಇಲ್ಲವೆ, ಭದ್ರವಾದ ನೆಲೆ]” ಎಂಬರ್ಥವನ್ನು ಕೊಡುತ್ತವೆ.
[ಪುಟ 25ರಲ್ಲಿರುವ ಚೌಕ]
ಸಾಹಿತ್ಯ ಮತ್ತು ಥೇಮ್ಸ್ ನದಿ
ಜೆರೋಮ್ ಕೆ. ಜೆರೋಮ್ ಎಂಬವರು, ಥೇಮ್ಸ್ ನದಿಯ ವಿಶ್ರಾಂತಿದಾಯಕ ವಾತಾವರಣವನ್ನು ತ್ರೀ ಮೆನ್ ಇನ್ ಅ ಬೋಟ್ (ಒಂದು ದೋಣಿಯಲ್ಲಿ ಮೂರು ಪುರುಷರು) ಎಂಬ ಪುಸ್ತಕದಲ್ಲಿ ಸೆರೆಹಿಡಿದಿದ್ದಾರೆ. ಅದರಲ್ಲಿ, ಮೂರು ಮಂದಿ ಸ್ನೇಹಿತರು ತಮ್ಮ ನಾಯಿಯೊಂದಿಗೆ ಥೇಮ್ಸ್ ನದಿಯ ಕಿಂಗ್ಸ್ಟನ್ನಿಂದ ಆಕ್ಸ್ಫರ್ಡ್ ವರೆಗೆ ದೋಣಿಯಲ್ಲಿ ಹೋಗುವ ರಜಾ ಪ್ರಯಾಣವನ್ನು ದಾಖಲಿಸಲಾಗಿದೆ. 1889ರಲ್ಲಿ ಬರೆಯಲ್ಪಟ್ಟಿದ್ದು, ಬಹಳಷ್ಟು ಭಾಷೆಗಳಿಗೆ ತರ್ಜುಮೆಮಾಡಲ್ಪಟ್ಟಿರುವ ಈ ಪುಸ್ತಕವು, “ವಿಚಿತ್ರವಾದ ಹಾಸ್ಯದ ಮೇರುಕೃತಿ”ಯಾಗಿ ಈಗಲೂ ಜನಪ್ರಿಯವಾಗಿದೆ.
ದ ವಿಂಡ್ ಇನ್ ದ ವಿಲ್ಲೊಸ್ ಎಂಬುದು ಇನ್ನೊಂದು ಜನಪ್ರಿಯ ಕಥೆಯಾಗಿದೆ. ಇದನ್ನು ವಯಸ್ಕರೂ ಮಕ್ಕಳೂ ಎಲ್ಲರೂ ಓದಲು ಬಹಳಷ್ಟು ಇಷ್ಟಪಡುತ್ತಾರೆ. ಥೇಮ್ಸ್ನ ದಡದಲ್ಲಿದ್ದ ಪಾಂಗ್ಬರ್ನ್ ಎಂಬ ಪಟ್ಟಣದಲ್ಲಿ ವಾಸಿಸುತ್ತಿದ್ದ ಕೆನೆತ್ ಗ್ರೇಅಮ್ ಎಂಬವನು ಈ ಕಥೆಯನ್ನು 1908ರಲ್ಲಿ ಪೂರ್ಣಗೊಳಿಸಿದನು. ಇದು, ಥೇಮ್ಸ್ ನದಿಯ ದಡದಲ್ಲಿ ಇಲ್ಲವೆ ಅದಕ್ಕೆ ಹತ್ತಿರದಲ್ಲಿ ಜೀವಿಸುವ ಪ್ರಾಣಿಗಳ ಕುರಿತಾದ ಒಂದು ಕಾಲ್ಪನಿಕ ಕಥೆಯಾಗಿದೆ.
[ಪುಟ 25ರಲ್ಲಿರುವ ಚೌಕ/ಚಿತ್ರ]
ಥೇಮ್ಸ್ಗೆ ಎದುರಾಗಿ ರಾಜ
ಹದಿನೇಳನೆಯ ಶತಮಾನದ ಆದಿ ಭಾಗದಲ್ಲಿ ಆಳಿದಂಥ ರಾಜನಾದ Iನೇ ಜೇಮ್ಸ್ ಎಂಬವನು ಒಮ್ಮೆ ಲಂಡನಿನ ನಗರಸಭೆಯಿಂದ 20,000 ಪೌಂಡುಗಳನ್ನು ತಗಾದೆಮಾಡಿದನು. ಆ ಸಮಯದಲ್ಲಿದ್ದ ಮೇಯರ್ ಅದನ್ನು ಕೊಡಲು ನಿರಾಕರಿಸಿದಾಗ, ರಾಜನು ಹೀಗೆ ಬೆದರಿಕೆಯೊಡ್ಡಿದನು: “ನಿನ್ನನ್ನೂ ನಿನ್ನ ನಗರವನ್ನೂ ಎಂದೆಂದಿಗೂ ಧ್ವಂಸಮಾಡಿಬಿಡುವೆ. ನನ್ನ ನ್ಯಾಯಾಲಯಗಳನ್ನು, ಸ್ವತಃ ನನ್ನ ಆಸ್ಥಾನವನ್ನು ಮತ್ತು ನನ್ನ ಪಾರ್ಲಿಮೆಂಟನ್ನು ಅಲ್ಲಿಂದ ತೆಗೆದು ಅದನ್ನು ವಿಂಚೆಸ್ಟರ್ ಇಲ್ಲವೆ ಆಕ್ಸ್ಫರ್ಡ್ಗೆ ಸ್ಥಳಾಂತರಿಸಿ, ವೆಸ್ಟ್ಮಿನ್ಸ್ಟರನ್ನು ಮರುಭೂಮಿಯನ್ನಾಗಿ ಮಾಡುವೆ; ಆಗ ನಿನ್ನ ಗತಿಯೇನಾಗಿರುವುದೆಂದು ಸ್ವಲ್ಪ ಯೋಚಿಸು!” ಇದಕ್ಕೆ ಮೇಯರ್ ಉತ್ತರಿಸಿದ್ದು: “ಏನೇ ಇದ್ದರೂ, ಲಂಡನಿನ ವ್ಯಾಪಾರಿಗಳಿಗೆ ಸಮಾಧಾನಕೊಡುವ ಒಂದು ವಿಷಯವಂತೂ ಯಾವಾಗಲೂ ಇರುವುದು. ಅದೇನೆಂದರೆ, ಮಹಾ ಪ್ರಭುಗಳು ತಮ್ಮೊಂದಿಗೆ ಥೇಮ್ಸ್ ನದಿಯನ್ನು ಕೊಂಡೊಯ್ಯಲಾರಿರಿ.”
[ಕೃಪೆ]
From the book Old and New London: A Narrative of Its History, Its People, and Its Places (Vol. II)
[ಪುಟ 24ರಲ್ಲಿರುವ ಭೂಪಟಗಳು]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಇಂಗ್ಲೆಂಡ್
ಥೇಮ್ಸ್ ನದಿ
ಲಂಡನ್
[ಕೃಪೆ]
ಭೂಪಟ: Mountain High Maps® Copyright © 1997 Digital Wisdom, Inc.
[ಪುಟ 22, 23ರಲ್ಲಿರುವ ಚಿತ್ರ]
ಲಂಡನಿನ ವೆಸ್ಟ್ಮಿನ್ಸ್ಟರ್ನಲ್ಲಿ ಬಿಗ್ ಬೆನ್ ಮತ್ತು ಹೌಸಸ್ ಆಫ್ ಪಾರ್ಲಿಮೆಂಟ್
[ಪುಟ 23ರಲ್ಲಿರುವ ಚಿತ್ರ]
ಕಲ್ಲಿನಿಂದ ಮಾಡಲ್ಪಟ್ಟ ಲಂಡನ್ ಬ್ರಿಡ್ಜ್, 1756
[ಕೃಪೆ]
From the book Old and New London: A Narrative of Its History, Its People, and Its Places (Vol. II)
[ಪುಟ 24ರಲ್ಲಿರುವ ಚಿತ್ರ]
1803ರ ಈ ಕೆತ್ತನೆಚಿತ್ರವು, ಥೇಮ್ಸ್ ನದಿಯನ್ನು ಮತ್ತು ಬಂದರಿನಲ್ಲಿ ನಿಲ್ಲಿಸಲ್ಪಟ್ಟಿರುವ ನೂರಾರು ಹಡಗುಗಳನ್ನು ತೋರಿಸುತ್ತದೆ
[ಕೃಪೆ]
Corporation of London, London Metropolitan Archive
[ಪುಟ 24, 25ರಲ್ಲಿರುವ ಚಿತ್ರ]
1683ರ ಹಿಮ ಜಾತ್ರೆಯನ್ನು ತೋರಿಸುವ ಒಂದು ಕೆತ್ತನೆಚಿತ್ರ
[ಕೃಪೆ]
From the book Ridpath’s History of the World (Vol. VI)