ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 6/15 ಪು. 3-5
  • ಭೂಗ್ರಹವು ಸರ್ವನಾಶವಾಗಲಿದೆಯೊ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭೂಗ್ರಹವು ಸರ್ವನಾಶವಾಗಲಿದೆಯೊ?
  • ಕಾವಲಿನಬುರುಜು—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ಸರ್ವನಾಶ ದಿನದ” ಒಂದು ಸುಸ್ಪಷ್ಟ ವರ್ಣನೆ
  • ಮನುಷ್ಯನ ದುರ್ನಿರ್ವಹಣೆಯು ವಿಪರ್ಯಸ್ತಗೊಳಿಸಲ್ಪಟ್ಟಿದೆ
  • ಅದನ್ನು ಮಾಡಸಾಧ್ಯವಿದೆ
  • ಥೇಮ್ಸ್‌ ನದಿ ಇಂಗ್ಲೆಂಡಿನ ಅಪೂರ್ವ ಆಸ್ತಿ
    ಎಚ್ಚರ!—2006
  • ನಮ್ಮ ಭೂಮಿ ನಾಶ ಆಗಲ್ಲ ಅಂತ ದೇವರು ಮಾತು ಕೊಟ್ಟಿದ್ದಾನೆ
    ಎಚ್ಚರ!—2023
  • ನಮ್ಮ ಭಿದುರಾದ ಭೂಗ್ರಹ ಭವಿಷ್ಯತ್ತಿನ ಕುರಿತೇನು?
    ಎಚ್ಚರ!—1996
  • ಈ ನಮ್ಮ ಜಗತ್ತನ್ನು ವಿಶ್ವವಿಪ್ಲವವು ನಾಶಗೊಳಿಸುವುದೋ?
    ಎಚ್ಚರ!—1999
ಇನ್ನಷ್ಟು
ಕಾವಲಿನಬುರುಜು—1998
w98 6/15 ಪು. 3-5

ಭೂಗ್ರಹವು ಸರ್ವನಾಶವಾಗಲಿದೆಯೊ?

ಇಪ್ಪತ್ತನೆಯ ಶತಮಾನವು ಅಂತ್ಯಗೊಂಡು, ಇಪ್ಪತ್ತೊಂದನೆಯ ಶತಮಾನವು ಇನ್ನೇನು ಉದಯವಾಗಲಿದೆ. ಈ ಹಿನ್ನೆಲೆಯಲ್ಲಿ, ಸಾಮಾನ್ಯವಾಗಿ ಸರ್ವನಾಶದ ಪ್ರವಾದನೆಗಳಿಗೆ ಕಡಿಮೆ ಗಮನವನ್ನು ಕೊಡುವ ಅಥವಾ ಗಮನವನ್ನೇ ಕೊಡದಿರುವ ಜನರಲ್ಲಿ ಹೆಚ್ಚೆಚ್ಚು ಮಂದಿ, ಸಮೀಪ ಭವಿಷ್ಯತ್ತಿನಲ್ಲಿ ಲೋಕವನ್ನು ದಂಗುಬಡಿಸುವ ಯಾವುದೋ ಪ್ರಮುಖ ಘಟನೆಯು ಸಂಭವಿಸಬಹುದೊ ಎಂದು ಕುತೂಹಲಪಡುತ್ತಾರೆ.

ಈ ವಿಷಯದ ಕುರಿತಾಗಿ ನೀವು ವಾರ್ತಾಪತ್ರ ಅಥವಾ ಪತ್ರಿಕಾ ಲೇಖನಗಳನ್ನು, ಪ್ರಾಯಶಃ ಇಡೀ ಪುಸ್ತಕಗಳನ್ನೂ ಗಮನಿಸಿದ್ದಿರಬಹುದು. 21ನೆಯ ಶತಮಾನವು ಯಾವ ಬೆಳೆವಣಿಗೆಗಳೊಂದಿಗೆ ಆರಂಭವಾಗುವುದು ಎಂಬುದನ್ನು ನಾವು ಕಾದುನೋಡಬೇಕು. ಇಸವಿ 2000ದ ಅಂತ್ಯವನ್ನು ತಲಪುವುದು, ಕೇವಲ ಒಂದು ವರ್ಷದಿಂದ ಇನ್ನೊಂದು ವರ್ಷಕ್ಕೆ (ಅಥವಾ ಒಂದು ನಿಮಿಷದಿಂದ ಇನ್ನೊಂದು ನಿಮಿಷಕ್ಕೆ, 2000ದಿಂದ 2001ರ ವರೆಗೆ) ಬದಲಾಗುವುದನ್ನು ಅರ್ಥೈಸುತ್ತದೆ ಮತ್ತು ಅದು ಅಷ್ಟೇನೂ ಪ್ರಮುಖತೆಯುಳ್ಳದ್ದಾಗಿರಲಿಕ್ಕಿಲ್ಲ ಎಂದು ಕೆಲವರು ಸೂಚಿಸುತ್ತಾರೆ. ಹೆಚ್ಚಿನವರು ನಮ್ಮ ಭೂಗ್ರಹದ ದೂರವ್ಯಾಪ್ತಿಯ ಭವಿಷ್ಯತ್ತಿನ ಕುರಿತಾಗಿಯೇ ಹೆಚ್ಚು ಚಿಂತಿತರಾಗಿದ್ದಾರೆ.

ಈಗೀಗ ಹೆಚ್ಚು ಪದೇ ಪದೇ ಗಮನಕ್ಕೆ ತರಲ್ಪಟ್ಟಿರುವ ಒಂದು ಪ್ರವಾದನೆಯು ಯಾವುದೆಂದರೆ, ಒಂದು ಹಂತದಲ್ಲಿ—ಬಲು ಬೇಗನೆ ಅಥವಾ ದೂರದ ಭವಿಷ್ಯತ್ತಿನಲ್ಲಿ—ಭೂಗ್ರಹಕ್ಕೆ ಸಂಪೂರ್ಣ ವಿನಾಶವು ಅನಿವಾರ್ಯ ಎಂಬುದೇ. ಅಂತಹ ನಿರಾಶೆಹುಟ್ಟಿಸುವ ಮುನ್‌ಸೂಚನೆಗಳಲ್ಲಿ ಕೇವಲ ಎರಡನ್ನು ಪರಿಗಣಿಸಿರಿ.

1996ರಲ್ಲಿ ಪ್ರಥಮವಾಗಿ ಪ್ರಕಾಶಿಸಲ್ಪಟ್ಟ, ಲೋಕದ ಅಂತ್ಯ—ಮಾನವ ಅಳಿವಿನ ಅರಿವು ಮತ್ತು ನೀತಿಶಾಸ್ತ್ರ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ, ಲೇಖಕ ಮತ್ತು ತತ್ತ್ವಜ್ಞಾನಿಯಾದ ಜಾನ್‌ ಲೆಸ್ಲಿ, ಭೂಮಿಯ ಮೇಲೆ ಮಾನವ ಜೀವನವು ಹೇಗೆ ಅಂತ್ಯಗೊಳ್ಳಬಹುದು ಎಂಬುದಕ್ಕೆ ಮೂರು ಸಾಧ್ಯತೆಗಳನ್ನು ನೀಡುತ್ತಾರೆ. ಪ್ರಥಮವಾಗಿ ಅವರು ಕೇಳುವುದು: “ಸಂಪೂರ್ಣವಾದ ಪರಮಾಣು ಯುದ್ಧವು, ಮನುಕುಲದ ಅಂತ್ಯವನ್ನು ಅರ್ಥೈಸಬಲ್ಲದೊ?” ಅನಂತರ ಅವರು ಕೂಡಿಸುವುದು: “ಹೆಚ್ಚು ಸಂಭವನೀಯವಾದ ದೃಶ್ಯಾವಳಿಯು . . . ವಿದ್ಯುತ್‌ ವಿಕಿರಣದ ಪರಿಣಾಮಗಳ ಮುಖಾಂತರ ನಿರ್ಮೂಲನವಾಗಿರಬಹುದು: ಕ್ಯಾನ್ಸರ್‌ಗಳು, ಸೋಂಕು ರೋಗಗಳು ಅತಿಯಾಗಿ ಹಬ್ಬುವಂತೆ ಮಾಡುವ ಸೋಂಕು ರಕ್ಷಣಾ ವ್ಯವಸ್ಥೆಯ ಶಿಥಿಲಗೊಳಿಸುವಿಕೆ, ಅಥವಾ ಅಸಂಖ್ಯಾತ ಜನ್ಮ ದೋಷಗಳು. ಪರಿಸರದ ಆರೋಗ್ಯಕ್ಕೆ ಪ್ರಾಮುಖ್ಯವಾಗಿರುವ ಸೂಕ್ಷ್ಮಜೀವಿಗಳ ಸಾವೂ ಇರಸಾಧ್ಯವಿದೆ.” ಶ್ರೀ. ಲೆಸ್ಲಿ ಮುಂದಿಡುವ ಮೂರನೆಯ ಸಾಧ್ಯತೆಯೇನೆಂದರೆ, ಒಂದು ಧೂಮಕೇತು ಅಥವಾ ಕ್ಷುದ್ರಗ್ರಹವು ಬಂದು ಭೂಮಿಗೆ ಬಡಿಯಬಹುದು: “ಒಂದರಿಂದ ಹತ್ತು ಕಿಲೊಮೀಟರ್‌ಗಳ ನಡುವಿನ ವ್ಯಾಸವುಳ್ಳ ಸುಮಾರು ಎರಡು ಸಾವಿರ ಧೂಮಕೇತುಗಳು ಮತ್ತು ಕ್ಷುದ್ರಗ್ರಹಗಳು ಇರುವಂತೆ ತೋರುತ್ತದೆ. ಯಾವುದಾದರೊಂದು ದಿನ ಭೂಮಿಗೆ ಅಪ್ಪಳಿಸಬಹುದಾದ ರೀತಿಯ ಕಕ್ಷೆಗಳು ಇವುಗಳಿಗಿವೆ. ಹೆಚ್ಚು ದೊಡ್ಡದಾದ ಧೂಮಕೇತುಗಳು ಮತ್ತು ಕ್ಷುದ್ರಗ್ರಹಗಳು ತುಂಬ ಕಡಿಮೆ ಸಂಖ್ಯೆಯಲ್ಲಿ (ಅದರ ಅಂದಾಜುಮಾಡುವುದು ಕೇವಲ ಊಹಾಕಾರ್ಯವಾಗಿರುವುದು), ಮತ್ತು ತುಂಬ ಚಿಕ್ಕದಾದ ಧೂಮಕೇತುಗಳು ಮತ್ತು ಕ್ಷುದ್ರಗ್ರಹಗಳು ತುಂಬ ದೊಡ್ಡ ಸಂಖ್ಯೆಯಲ್ಲಿ ಇವೆ.”

“ಸರ್ವನಾಶ ದಿನದ” ಒಂದು ಸುಸ್ಪಷ್ಟ ವರ್ಣನೆ

ಅಥವಾ ಆಸ್ಟ್ರೇಲಿಯದ ಎಡಿಲೇಡ್‌ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರರಾಗಿರುವ ಇನ್ನೊಬ್ಬ ವಿಜ್ಞಾನಿಯನ್ನು ಪರಿಗಣಿಸಿರಿ. ಅವರನ್ನು “ಅಂತಾರಾಷ್ಟ್ರೀಯವಾಗಿ ಅತಿ ಪ್ರಸಿದ್ಧನಾದ ವಿಜ್ಞಾನದ ಲೇಖಕ” ಎಂದು ವಾಷಿಂಗ್ಟನ್‌ ಟೈಮ್ಸ್‌ ವರ್ಣಿಸುತ್ತದೆ. 1994ರಲ್ಲಿ, ಕೊನೆಯ ಮೂರು ನಿಮಿಷಗಳು (ಇಂಗ್ಲಿಷ್‌) ಎಂಬ ಪುಸ್ತಕವನ್ನು ಅವರು ಬರೆದರು. ಈ ಪುಸ್ತಕವನ್ನು “ಜಗತ್ತಿನಲ್ಲಿರುವ ಸರ್ವನಾಶ ದಿನದ ಕುರಿತಾದ ಎಲ್ಲ ಪುಸ್ತಕಗಳ ಮೂಲಪ್ರತಿ” ಎಂದು ಕರೆಯಲಾಗಿದೆ. ಈ ಪುಸ್ತಕದ ಪ್ರಥಮ ಅಧ್ಯಾಯವನ್ನು “ಸರ್ವನಾಶ ದಿನ” ಎಂದು ಕರೆಯಲಾಗಿದೆ, ಮತ್ತು ಒಂದುವೇಳೆ ಒಂದು ಧೂಮಕೇತು ಭೂಗ್ರಹಕ್ಕೆ ಅಪ್ಪಳಿಸುವುದಾದರೆ ಏನಾಗಬಲ್ಲದೆಂಬ ಊಹಾತ್ಮಕ ಚಿತ್ರಣವನ್ನು ಆ ಅಧ್ಯಾಯವು ವರ್ಣಿಸುತ್ತದೆ. ರಕ್ತಹೆಪ್ಪುಗಟ್ಟಿಸುವಂತಹ ಅವರ ವರ್ಣನೆಯ ಒಂದು ಭಾಗವನ್ನು ಓದಿರಿ:

“ಭೂಗ್ರಹವು, ಹತ್ತು ಸಾವಿರ ಭೂಕಂಪಗಳಿಗೆ ಸಮಾನವಾದ ಶಕ್ತಿಯಿಂದ ತತ್ತರಿಸುತ್ತದೆ. ಬಿರುಸಾದ ಗಾಳಿಯು ಭೂಗೋಲದ ಮೇಲ್ಮೈಯಲ್ಲೆಲ್ಲ ಹರಡಿ, ಎಲ್ಲ ಕಟ್ಟಡಗಳನ್ನು ನೆಲಸಮಗೊಳಿಸುತ್ತಾ, ಅದರ ಮಾರ್ಗದಲ್ಲಿ ಅಡ್ಡಬರುವಂತಹದ್ದೆಲ್ಲವನ್ನೂ ಧೂಳೀಪಟಮಾಡುತ್ತದೆ. ಅಪ್ಪಳಿಕೆಯ ನಿವೇಶನದ ಸುತ್ತಲಿನ ಚಪ್ಪಟೆ ಭೂಭಾಗವು, ನೂರೈವತ್ತು ಕಿಲೊಮೀಟರ್‌ ಅಗಲದ ಗುಳಿಯ ರೂಪದಲ್ಲಿ ಭೂಗರ್ಭವನ್ನು ತೆರೆದಿಡುತ್ತಾ, ಹಲವಾರು ಕಿಲೊಮೀಟರುಗಳ ಎತ್ತರದ ಲೋಹದ್ರವದ ಪರ್ವತಗಳ ಸುರುಳಿಯಾಗಿ ಮೇಲೇಳುತ್ತದೆ. . . . ಧೂಳುತುಂಬಿದ ಭಗ್ನಾವಶೇಷದ ಒಂದು ದೊಡ್ಡ ರಾಶಿಯು ವಾತಾವರಣದಲ್ಲಿ ಹರಡಿಕೊಳ್ಳುತ್ತಾ, ಇಡೀ ಭೂಗ್ರಹದಲ್ಲೆಲ್ಲ ಸೂರ್ಯನನ್ನು ಮರೆಮಾಡುತ್ತದೆ. ಈಗ ಸೂರ್ಯನ ಪ್ರಕಾಶವು, ಬಿಲಿಯಗಟ್ಟಲೆ ಉಲ್ಕಾಪಾತಗಳ ಅಪಾಯಸೂಚಕವಾದ, ಮಿನುಗುತ್ತಿರುವ ಝಳಪಿನಿಂದ ಸ್ಥಾನಭರ್ತಿಯಾಗುತ್ತದೆ. ಸ್ಥಾನಾಂತರವಾಗಿರುವ ಪದಾರ್ಥವು ಅಂತರಿಕ್ಷದಿಂದ ವಾತಾವರಣಕ್ಕೆ ಹಿಂದೆ ಧುಮುಕಿದಂತೆ, ಈ ಉಲ್ಕಾಪಾತಗಳು ತಮ್ಮ ಸುಡುವ ಶಾಖದಿಂದ ಕೆಳಗಿನ ನೆಲವನ್ನು ಸುಡುತ್ತವೆ.”

ಧೂಮಕೇತು ಸ್ವಿಫ್ಟ್‌-ಟಟಲ್‌ ಭೂಮಿಗೆ ಅಪ್ಪಳಿಸುವುದೆಂಬ ಭವಿಷ್ಯನುಡಿಯೊಂದಿಗೆ, ಈ ಊಹಾತ್ಮಕ ಚಿತ್ರಣವನ್ನು ಪ್ರೊಫೆಸರ್‌ ಡೇವಿಸ್‌ ಜೋಡಿಸುತ್ತಾರೆ. ಅಂತಹ ಒಂದು ಘಟನೆಯು ಸಮೀಪ ಭವಿಷ್ಯತ್ತಿನಲ್ಲಿ ನಡೆಯದಿರಬಹುದಾದರೂ, ಅವರ ಅಭಿಪ್ರಾಯಕ್ಕನುಸಾರ, “ಇಂದೊ ಮುಂದೊ, ಸ್ವಿಫ್ಟ್‌-ಟಟಲ್‌ ಅಥವಾ ಅದರಂತಹ ಒಂದು ವಸ್ತು, ಖಂಡಿತವಾಗಿಯೂ ಭೂಮಿಗೆ ಅಪ್ಪಳಿಸುವುದು” ಎಂಬ ಎಚ್ಚರಿಕೆಯನ್ನು ಕೂಡಿಸುತ್ತಾರೆ. ವ್ಯಾಸದಲ್ಲಿ ಅರ್ಧ ಅಥವಾ ಅದಕ್ಕಿಂತಲೂ ಹೆಚ್ಚು ಗಾತ್ರದ 10,000 ವಸ್ತುಗಳು ಭೂಮಿಯನ್ನು ಛೇದಿಸುವ ಕಕ್ಷೆಗಳಲ್ಲಿ ಚಲಿಸುತ್ತಿವೆಯೆಂದು ಸೂಚಿಸುವ ಅಂದಾಜುಗಳ ಮೇಲೆ ಅವರ ತೀರ್ಮಾನವು ಆಧಾರಿತವಾಗಿದೆ.

ಅಂತಹ ಭಯವನ್ನು ಉಂಟುಮಾಡುವ ಒಂದು ಪ್ರತೀಕ್ಷೆಯು ನಿಜವೆಂದು ನೀವು ನಂಬುತ್ತೀರೊ? ಆಶ್ಚರ್ಯಗೊಳಿಸುವಷ್ಟು ಸಂಖ್ಯೆಯ ಜನರು ಹಾಗೆ ನಂಬುತ್ತಾರೆ. ಆದರೆ ತಮ್ಮ ಸಮಯದಲ್ಲಿಯೇ ಅದು ಸಂಭವಿಸಲಾರದು ಎಂದು ಸ್ವತಃ ಆಶ್ವಾಸನೆಯನ್ನು ಕೊಡುವ ಮೂಲಕ ಅವರು ಎಲ್ಲ ಚಿಂತೆಯನ್ನು ಬದಿಗೆ ತಳ್ಳುತ್ತಾರೆ. ಆದರೆ ಭೂಗ್ರಹವು—ಶೀಘ್ರದಲ್ಲೇ ಆಗಿರಲಿ, ಇಂದಿನಿಂದ ಸಹಸ್ರ ವರ್ಷಗಳ ನಂತರವೇ ಆಗಿರಲಿ—ಏಕೆ ನಾಶಗೊಳ್ಳಬೇಕು? ನಿಶ್ಚಯವಾಗಿಯೂ, ಸ್ವತಃ ಭೂಮಿಯೇ ತನ್ನ ನಿವಾಸಿಗಳಿಗೆ—ಮಾನವರಿಗಾಗಲಿ, ಪ್ರಾಣಿಗಳಿಗಾಗಲಿ—ತೊಂದರೆಯ ಮೂಲವಾಗಿರುವುದಿಲ್ಲ. ಅದಕ್ಕೆ ಬದಲಾಗಿ, ಸಂಪೂರ್ಣವಾಗಿ “ಭೂಮಿಯನ್ನು ನಾಶಗೊಳಿಸು”ವುದರ (NW) ಸಾಧ್ಯತೆಯನ್ನು ಸೇರಿಸಿ, ಈ 20ನೆಯ ಶತಮಾನದ ಹೆಚ್ಚಿನ ಸಮಸ್ಯೆಗಳಿಗಾಗಿ ಮನುಷ್ಯನೇ ಜವಾಬ್ದಾರನಾಗಿರುವುದಿಲ್ಲವೊ?—ಪ್ರಕಟನೆ 11:18.

ಮನುಷ್ಯನ ದುರ್ನಿರ್ವಹಣೆಯು ವಿಪರ್ಯಸ್ತಗೊಳಿಸಲ್ಪಟ್ಟಿದೆ

ಮನುಷ್ಯನೇ ತನ್ನ ದುರ್ನಿರ್ವಹಣೆ ಮತ್ತು ಲೋಭದ ಕಾರಣದಿಂದ ಭೂಮಿಯನ್ನು ಸಂಪೂರ್ಣವಾಗಿ ನಾಶಗೊಳಿಸಬಹುದಾದ ಹೆಚ್ಚು ಸಂಭವನೀಯ ಸಾಧ್ಯತೆಯ ಕುರಿತಾಗಿ ಏನು? ಭೂಮಿಯ ಭಾಗಗಳ ಹೆಚ್ಚಿನ ನಾಶನವು, ಈಗಾಗಲೇ ವಿಪರೀತವಾದ ಅರಣ್ಯನಾಶ, ವಾತಾವರಣದ ಅನಿಯಂತ್ರಿತ ಮಲಿನಗೊಳಿಸುವಿಕೆ, ಮತ್ತು ಜಲಮಾರ್ಗಗಳ ಹಾಳುಮಾಡುವಿಕೆಯ ಮೂಲಕ ನಡಿದಿದೆ ಎಂಬುದು ಸುವ್ಯಕ್ತ. ಒಂದೇ ಒಂದು ಭೂಮಿ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ, ಬಾರ್‌ಬ್ರ ವಾರ್ಡ್‌ ಮತ್ತು ರೇನೆ ಡ್ಯೂಬೊ ಎಂಬ ಲೇಖಕರು, ಸುಮಾರು 25 ವರ್ಷಗಳ ಹಿಂದೆ ಇದನ್ನು ಚೆನ್ನಾಗಿ ಸಾರಾಂಶಿಸಿದರು: “ನಾವು ಪರೀಕ್ಷಿಸಬೇಕಾದ ಮಾಲಿನ್ಯದ ಮೂರು ವಿಸ್ತಾರವಾದ ಕ್ಷೇತ್ರಗಳು—ಗಾಳಿ, ನೀರು ಮತ್ತು ಮಣ್ಣು—ನಮ್ಮ ಭೂಜೀವನದ ಮೂರು ಪ್ರಮುಖ ಘಟಕಾಂಶಗಳಾಗಿವೆ.” ಮತ್ತು ಅಂದಿನಿಂದ ಪರಿಸ್ಥಿತಿಯು ಮೂಲತಃ ಹೆಚ್ಚೇನೂ ಉತ್ತಮಗೊಂಡಿಲ್ಲ, ಅಲ್ಲವೇ?

ಮನುಷ್ಯನು ತನ್ನ ಸ್ವಂತ ಹುಚ್ಚುತನದಿಂದಾಗಿ ಭೂಮಿಯನ್ನು ನಾಶಗೊಳಿಸುವ ಸಾಧ್ಯತೆಯನ್ನು ಪರಿಗಣಿಸುವಾಗ, ಭೂಗ್ರಹದ ಅದ್ಭುತಕರವಾದ ಚೇತರಿಸಿಕೊಳ್ಳುವ ಮತ್ತು ಪುನರುತ್ಪತ್ತಿಯ ಶಕ್ತಿಗಳನ್ನು ಪರಿಗಣಿಸುವ ಮೂಲಕ ನಾವು ಉತ್ತೇಜಿಸಲ್ಪಡಸಾಧ್ಯವಿದೆ. ಆಶ್ಚರ್ಯಗೊಳಿಸುವಂತಹ ಚೇತರಿಸಿಕೊಳ್ಳುವ ಈ ಸಾಮರ್ಥ್ಯವನ್ನು ವರ್ಣಿಸುತ್ತಾ, ರೇನೆ ಡ್ಯೂಬೊ, ಪರಿಸರ ವ್ಯವಸ್ಥೆಗಳ ಚೇತರಿಸಿಕೊಳ್ಳುವ ಶಕ್ತಿ (ಇಂಗ್ಲಿಷ್‌) ಎಂಬ ಇನ್ನೊಂದು ಪುಸ್ತಕದಲ್ಲಿ ಈ ಉತ್ತೇಜನದಾಯಕ ಅವಲೋಕನಗಳನ್ನು ಮಾಡುತ್ತಾರೆ:

“ಪರಿಸರ ವ್ಯವಸ್ಥೆಗಳಿಗೆ ಈಗಾಗಲೇ ಮಾಡಲ್ಪಟ್ಟಿರುವ ಹಾನಿಯನ್ನು ವಿಪರ್ಯಸ್ತಗೊಳಿಸುವುದು ಅಸಾಧ್ಯವಾಗಿರುವುದರಿಂದ, ಪರಿಸರದ ಹಾಳುಗೆಡಹುವಿಕೆಯ ಕುರಿತಾದ ಅರಿವು, ತೀರ ತಡವಾಗಿ ಮೂಡಿದೆಯೆಂದು ಅನೇಕ ವ್ಯಕ್ತಿಗಳು ಭಯಪಡುತ್ತಾರೆ. ನನ್ನ ಅಭಿಪ್ರಾಯಕ್ಕನುಸಾರ, ಈ ನಿರಾಶಾವಾದಕ್ಕೆ ಸಾಧಾರವಿಲ್ಲ, ಯಾಕಂದರೆ ಪರಿಸರ ವ್ಯವಸ್ಥೆಗಳಿಗೆ ಹಾನಿಕಾರಕವಾದ ಅನುಭವಗಳಿಂದ ಚೇತರಿಸಿಕೊಳ್ಳುವ ಅಪರಿಮಿತ ಶಕ್ತಿಯಿದೆ.

“ಪರಿಸರ ವ್ಯವಸ್ಥೆಗಳು ತಮ್ಮನ್ನೇ ಗುಣಪಡಿಸಿಕೊಳ್ಳುವ ಹಲವಾರು ಕ್ರಿಯಾವಿಧಾನಗಳನ್ನು ಹೊಂದಿರುತ್ತವೆ. . . . ಪರಿಸರ ವ್ಯವಸ್ಥೆಯ ಸಮತೋಲನದ ಮೂಲ ಸ್ಥಿತಿಯನ್ನು ಪ್ರಗತಿಪರವಾಗಿ ಪುನಸ್ಥಾಪಿಸುವ ಮೂಲಕ, ಪರಿಸರ ವ್ಯವಸ್ಥೆಗಳು ಅಡಚಣೆಗಳ ಪರಿಣಾಮವನ್ನು ಜಯಿಸಲು ಅವುಗಳನ್ನು ಶಕ್ತಗೊಳಿಸುತ್ತವೆ.”

ಅದನ್ನು ಮಾಡಸಾಧ್ಯವಿದೆ

ಇತ್ತೀಚಿನ ವರ್ಷಗಳಲ್ಲಿ ಇದರ ಗಮನಾರ್ಹವಾದ ಉದಾಹರಣೆಯು, ಲಂಡನಿನ ಪ್ರಸಿದ್ಧ ಥೇಮ್ಸ್‌ ನದಿಯ ಕ್ರಮೇಣವಾದ ಶುಚಿಗೊಳಿಸುವಿಕೆಯಾಗಿದೆ. ಜೆಫ್ರೀ ಹ್ಯಾರಿಸನ್‌ ಮತ್ತು ಪೀಟರ್‌ ಗ್ರ್ಯಾಂಟ್‌ರವರ ಪರಿವರ್ತಿಸಲ್ಪಟ್ಟಿರುವ ಥೇಮ್ಸ್‌ (ಇಂಗ್ಲಿಷ್‌) ಎಂಬ ಪುಸ್ತಕವು, ಸಾಮಾನ್ಯ ಹಿತಕ್ಕಾಗಿ ಜನರು ಒಟ್ಟುಗೂಡಿ ಕೆಲಸಮಾಡುವಾಗ ಏನನ್ನು ಮಾಡಸಾಧ್ಯವಿದೆ ಎಂಬುದನ್ನು ಪ್ರದರ್ಶಿಸುವ ಈ ಗಮನಾರ್ಹವಾದ ಸಾಧನೆಯನ್ನು ದಾಖಲಿಸುತ್ತದೆ. ಆ ಪುಸ್ತಕದ ಮುನ್ನುಡಿಯಲ್ಲಿ ಬ್ರಿಟನಿನ ಡ್ಯೂಕ್‌ ಆಫ್‌ ಎಡಿನ್‌ಬರ್ಗ್‌ ಬರೆದುದು: “ಸಂರಕ್ಷಣೆಯ ಸಮಸ್ಯೆಗಳು ಎಷ್ಟು ಕೆಟ್ಟದ್ದಾಗಿವೆಯೆಂದು ನಂಬುವಂತೆ ಮಾಡಲಾಗಿತ್ತೊ ಅವು ಅಷ್ಟು ಕೆಟ್ಟದ್ದಾಗಿಲ್ಲವೆಂದು ಕೆಲವು ಜನರು ನೆನಸುವಂತೆ ಉತ್ತೇಜಿಸಬಹುದಾದ ವಾಸ್ತವಾಂಶದ ಎದುರಿನಲ್ಲೂ, ಪ್ರಕಾಶಿಸಲು ಯೋಗ್ಯವಾಗಿರುವಷ್ಟು ದೊಡ್ಡ ಪ್ರಮಾಣದ ಒಂದು ಯಶಸ್ಸಿನ ಕಥೆಯು ಕೊನೆಗೂ ಸಿಕ್ಕಿದೆ. . . . ಥೇಮ್ಸ್‌ ನದಿಯಲ್ಲಿ ಏನು ಸಾಧಿಸಲ್ಪಟ್ಟಿದೆಯೊ ಅದರಿಂದ, ಅವರೆಲ್ಲರೂ (ಗುಂಪುಗಳು ಮತ್ತು ಸಂಸ್ಥೆಗಳು) ಧೈರ್ಯವನ್ನು ತಂದುಕೊಳ್ಳಸಾಧ್ಯವಿದೆ. ಒಳ್ಳೇ ಸುದ್ದಿಯೇನೆಂದರೆ, ಅದನ್ನು ಮಾಡಲು ಸಾಧ್ಯವಿದೆ ಮತ್ತು ಅವರ ಯೋಜನೆಗಳೂ ಸಫಲಗೊಳ್ಳಸಾಧ್ಯವಿದೆ.”

“ಮಹಾ ಶುಚಿಕಾರ್ಯ” ಎಂಬ ಅಧ್ಯಾಯದಲ್ಲಿ, ಹ್ಯಾರಿಸನ್‌ ಮತ್ತು ಗ್ರ್ಯಾಂಟ್‌, ಕಳೆದ 50 ವರ್ಷಗಳಲ್ಲಿ ಸಾಧಿಸಲ್ಪಟ್ಟಿರುವ ವಿಷಯದ ಕುರಿತು ಉತ್ಸುಕರಾಗಿ ಬರೆಯುವುದು: “ಜಗತ್ತಿನಲ್ಲಿ ಪ್ರಥಮ ಬಾರಿ, ಅತಿಯಾಗಿ ಮಲಿನಗೊಳಿಸಲ್ಪಟ್ಟಿದ್ದು, ಉದ್ಯಮೀಕರಿಸಲ್ಪಟ್ಟಿರುವ ನದಿಯೊಂದು, ನೀರುಪಕ್ಷಿಗಳು ಮತ್ತು ಮೀನುಗಳು ಹೇರಳವಾಗಿ ಹಿಂದಿರುಗುವಷ್ಟರ ಮಟ್ಟಿಗೆ ಪುನಸ್ಸ್ಥಾಪಿಸಲ್ಪಟ್ಟಿದೆ. ಅಂತಹ ಒಂದು ಪರಿವರ್ತನೆಯು ಇಷ್ಟು ಕ್ಷಿಪ್ರವಾಗಿ—ಆರಂಭದಲ್ಲಿ ನಿರಾಶಾಹೀನವಾಗಿ ತೋರಿರುವ ಒಂದು ಸನ್ನಿವೇಶದಲ್ಲಿ—ನಡೆದಿರುವ ಸಂಗತಿಯು, ಅತಿ ನಿರಾಶಾವಾದಿಯಾದ ಅರಣ್ಯಜೀವಿ ಸಂರಕ್ಷಕನಿಗೂ ಉತ್ತೇಜನವನ್ನು ಕೊಡುತ್ತದೆ.”

ಅನಂತರ, ಅವರು ಆ ಪರಿವರ್ತನೆಯನ್ನು ಹೀಗೆ ವರ್ಣಿಸುತ್ತಾರೆ: “ಆ ನದಿಯ ಸ್ಥಿತಿಯು ವರ್ಷಗಳು ಗತಿಸಿದಂತೆ ಕ್ರಮೇಣವಾಗಿ ಹದಗೆಟ್ಟಿತು. ಎರಡನೆಯ ಲೋಕ ಯುದ್ಧದ ಸಮಯದಲ್ಲಿ, ಮುಖ್ಯ ಚರಂಡಿ ವ್ಯವಸ್ಥೆಗಳು ಮತ್ತು ಒಳಚರಂಡಿಗಳು ಕೆಡವಲ್ಪಟ್ಟಾಗ ಅಥವಾ ನಾಶಗೊಳಿಸಲ್ಪಟ್ಟಾಗ, ಪ್ರಾಯಶಃ ಕೊನೆಯ ಅತಿ ದೊಡ್ಡ ಹೊಡೆತವು ಬಂತು. 1940ಗಳು ಮತ್ತು 1950ಗಳ ಸಮಯದಲ್ಲಿ ಥೇಮ್ಸ್‌ ನದಿಯ ಸ್ಥಿತಿಯು ತೀರ ಕೀಳ್ಮಟ್ಟದಲ್ಲಿತ್ತು. ಆ ನದಿಯು ತೆರೆದಿರುವ ನಾಲೆಯಂತಿತ್ತು; ನೀರಿನ ಬಣ್ಣ ಕಪ್ಪಾಗಿದ್ದು, ಯಾವುದೇ ಆಮ್ಲಜನಕವು ಇರಲಿಲ್ಲ, ಮತ್ತು ಬೇಸಗೆಯ ತಿಂಗಳುಗಳಲ್ಲಿ ಥೇಮ್ಸ್‌ ನದಿಯಿಂದ ಬರುತ್ತಿದ್ದ ದುರ್ವಾಸನೆಯನ್ನು ವಿಸ್ತಾರವಾದ ಕ್ಷೇತ್ರದ ವರೆಗೂ ಪತ್ತೆಹಚ್ಚಬಹುದಿತ್ತು. . . . ಮೇಲ್ಮೈಯಿಂದ ನೇರವಾಗಿ ಗಾಳಿಯನ್ನು ಉಸಿರಾಡುವ ಸಾಮರ್ಥ್ಯದಿಂದಾಗಿ ಪಾರಾಗಲು ಶಕ್ತವಾಗಿದ್ದ ಕೆಲವೊಂದು ಹಾವುಮೀನುಗಳನ್ನು ಬಿಟ್ಟು, ಒಂದು ಸಮಯದಲ್ಲಿ ಆ ನದಿಯಲ್ಲಿ ಹೇರಳವಾಗಿದ್ದ ಮೀನುಗಳು ಕೊನೆಗೆ ಇಲ್ಲವಾದವು. ಲಂಡನ್‌ ಮತ್ತು ವುಲ್‌ವಿಚ್‌ನ ನಡುವಿನ ಒಳಗಣ ಹಾಗೂ ಕಟ್ಟಡಗಳಿಂದ ತುಂಬಿದ ನದಿಯ ಹರವುಗಳಲ್ಲಿನ ಪಕ್ಷಿಜೀವನವು ತುಂಬ ಕಡಿಮೆಯಾಯಿತು. ಕೆಲವೇ ಕಾಡುಬಾತುಗಳು ಮತ್ತು ಮೂಕ ಹಂಸಗಳು ಉಳಿದವು, ಮತ್ತು ಅವುಗಳ ಅಸ್ತಿತ್ವಕ್ಕೆ ಕಾರಣವು, ಒಂದು ನೈಸರ್ಗಿಕ ಆಹಾರ ಸರಬರಾಯಿಯ ಬದಲಿಗೆ ಧಾನ್ಯದ ಸರಕುಕಟ್ಟೆಗಳಿಂದ ಆಗುತ್ತಿದ್ದ ಚೆಲ್ಲುವಿಕೆಯಾಗಿತ್ತು. . . . ನಡೆಯಲಿದ್ದ ಅನಿರೀಕ್ಷಿತ ವಿಪರ್ಯಸ್ತವನ್ನು ಆ ಸಮಯದಲ್ಲಿ ಯಾರು ನಂಬುತ್ತಿದ್ದರು? ಹತ್ತು ವರ್ಷಗಳೊಳಗೆ ಆ ನದಿಯ ಅದೇ ಹರವುಗಳು, ಕಾರ್ಯತಃ ಪಕ್ಷಿಗಳಿಲ್ಲದ ಶೂನ್ಯಪ್ರದೇಶದಿಂದ, ಚಳಿಗಾಲದಲ್ಲಿನ 10,000 ಕಾಡುಪಕ್ಷಿಗಳು ಮತ್ತು 12,000 ನೀರುಹಕ್ಕಿಗಳ ಸಂಖ್ಯೆಯನ್ನು ಒಳಗೊಂಡು, ಅನೇಕ ಜಾತಿಗಳ ಕಡಲುಹಕ್ಕಿಗಳಿಗೆ ಆಶ್ರಯಸ್ಥಾನವಾಗಿ ಪರಿವರ್ತಿಸಲ್ಪಟ್ಟವು.”

ಅದು ಭೂಗೋಲದ ಒಂದು ಚಿಕ್ಕ ಮೂಲೆಯಲ್ಲಿನ ಒಂದೇ ಒಂದು ಪರಿವರ್ತನೆಯನ್ನು ಮಾತ್ರ ವರ್ಣಿಸುತ್ತದೆ ಎಂಬುದು ನಿಶ್ಚಯ. ಹಾಗಿದ್ದರೂ, ಈ ಉದಾಹರಣೆಯಿಂದ ನಾವು ಪಾಠಗಳನ್ನು ಕಲಿಯಬಹುದು. ಮನುಷ್ಯನ ದುರ್ನಿರ್ವಹಣೆ, ಲೋಭ ಮತ್ತು ವಿಚಾರಹೀನತೆಯ ಕಾರಣದಿಂದಾಗಿ, ಭೂಗ್ರಹದ ಸರ್ವನಾಶವು ನಿಶ್ಚಯವೆಂದು ಪರಿಗಣಿಸುವ ಅಗತ್ಯವಿಲ್ಲ ಎಂಬುದನ್ನು ಅದು ತೋರಿಸುತ್ತದೆ. ಮಾನವಕುಲದ ಸಾಮಾನ್ಯ ಹಿತಕ್ಕಾಗಿ ಸರಿಯಾದ ಶಿಕ್ಷಣ ಮತ್ತು ಏಕೀಕೃತವಾದ ಪ್ರಯತ್ನವು, ಭೂಮಿಯ ಪರಿಸರ ವ್ಯವಸ್ಥೆ, ವಾತಾವರಣ ಮತ್ತು ಭೂಭಾಗಕ್ಕೆ ಮಾಡಲ್ಪಟ್ಟಿರುವ ವಿಸ್ತೃತವಾದ ಹಾನಿಯನ್ನೂ ವಿಪರ್ಯಸ್ತಗೊಳಿಸಲು ಸಹಾಯಮಾಡಸಾಧ್ಯವಿದೆ. ಆದರೆ ಅಲೆದಾಡುತ್ತಿರುವ ಒಂದು ಧೂಮಕೇತು ಅಥವಾ ಉಲ್ಕಾಪಾತದಂತಹ ಬಾಹ್ಯ ಶಕ್ತಿಗಳಿಂದ ಉಂಟಾಗುವ ಸಂಭವನೀಯ ಸರ್ವನಾಶದ ಕುರಿತಾಗಿ ಏನು?

ದಿಗ್ಭ್ರಮೆಗೊಳಿಸುವಂತಹ ಆ ಪ್ರಶ್ನೆಗೆ ಒಂದು ತೃಪ್ತಿದಾಯಕ ಉತ್ತರವನ್ನು ಪಡೆದುಕೊಳ್ಳಲು ಬೇಕಾಗಿರುವ ಕೀಲಿ ಕೈ ಮುಂದಿನ ಲೇಖನದಲ್ಲಿದೆ.

[ಪುಟ 5 ರಲ್ಲಿರುವ ಸಂಕ್ಷಿಪ್ತ ವಿವರಣೆ]

ಶಿಕ್ಷಣ ಮತ್ತು ಏಕೀಕೃತ ಪ್ರಯತ್ನವು, ಭೂಮಿಯು ತನಗೆ ಮಾಡಲ್ಪಟ್ಟಿರುವ ವಿಸ್ತೃತವಾದ ಹಾನಿಯನ್ನೂ ವಿಪರ್ಯಸ್ತಗೊಳಿಸುವಂತೆ ಸಹಾಯಮಾಡಬಲ್ಲದು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ