ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 39 ಪು. 220-ಪು. 222 ಪ್ಯಾ. 6
  • ಪರಿಣಾಮಕಾರಿಯಾದ ಸಮಾಪ್ತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿಣಾಮಕಾರಿಯಾದ ಸಮಾಪ್ತಿ
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಸೂಕ್ತವಾದ ಸಮಾಪ್ತಿ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಮುಖ್ಯಾಂಶಗಳಿಗೆ ಪ್ರಾಮುಖ್ಯತೆ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಭಾಷಣದ ಹೊರಮೇರೆಯನ್ನು ತಯಾರಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಆಸಕ್ತಿಯನ್ನು ಕೆರಳಿಸುವಂಥ ಪೀಠಿಕೆ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 39 ಪು. 220-ಪು. 222 ಪ್ಯಾ. 6

ಅಧ್ಯಾಯ 39

ಪರಿಣಾಮಕಾರಿಯಾದ ಸಮಾಪ್ತಿ

ನೀವೇನು ಮಾಡುವ ಅಗತ್ಯವಿದೆ?

ನಿಮ್ಮ ಸಮಾಪ್ತಿಯ ವಾಕ್ಯಗಳಲ್ಲಿ, ಸಭಿಕರು ಏನನ್ನು ಕೇಳಿಸಿಕೊಂಡಿದ್ದಾರೊ ಅದರ ವಿಷಯದಲ್ಲಿ ಕ್ರಮಕೈಕೊಳ್ಳಲಿಕ್ಕಾಗಿ ಅವರನ್ನು ಪ್ರಚೋದಿಸಲು ವಿನ್ಯಾಸಿಸಿದಂಥ ಮಾತುಗಳನ್ನಾಡಿರಿ.

ಇದು ಪ್ರಾಮುಖ್ಯವೇಕೆ?

ಸಮಾಪ್ತಿಯಲ್ಲಿ ಏನನ್ನು ಹೇಳಲಾಗುತ್ತದೋ ಅದು ಅನೇಕವೇಳೆ ದೀರ್ಘಕಾಲ ಜ್ಞಾಪಕದಲ್ಲಿ ಉಳಿಯುತ್ತದೆ. ಅದು ಇಡೀ ಭಾಷಣದ ಪರಿಣಾಮಕಾರಿತ್ವವನ್ನು ಪ್ರಭಾವಿಸುತ್ತದೆ.

ನಿಮ್ಮ ಭಾಷಣದ ಪ್ರಧಾನ ಭಾಗಕ್ಕೆ ಬೇಕಾಗಿರುವ ಮಾಹಿತಿಯನ್ನು ನೀವು ಜಾಗರೂಕತೆಯಿಂದ ಸಂಶೋಧಿಸಿ, ಸಂಘಟಿಸಿರಬಹುದು. ನೀವು ಆಸಕ್ತಿಯನ್ನು ಕೆರಳಿಸುವಂಥ ಒಂದು ಪೀಠಿಕೆಯನ್ನೂ ತಯಾರಿಸಿರಬಹುದು. ಆದರೂ ಇನ್ನೊಂದು ಸಂಗತಿ, ಅಂದರೆ ಪರಿಣಾಮಕಾರಿಯಾದ ಸಮಾಪ್ತಿಯ ಆವಶ್ಯಕತೆಯೂ ಇದೆ. ಇದರ ಮಹತ್ವವನ್ನು ಕಡೆಗಣಿಸದಿರಿ. ನೀವು ಕೊನೆಯದಾಗಿ ಏನು ಹೇಳುತ್ತೀರೊ ಅದು ಅನೇಕವೇಳೆ ದೀರ್ಘಕಾಲ ಜ್ಞಾಪಕದಲ್ಲಿರುತ್ತದೆ. ಸಮಾಪ್ತಿಯು ಶಕ್ತಿಹೀನವಾಗಿರುವುದಾದರೆ, ಅದಕ್ಕೆ ಮೊದಲಾಗಿ ಹೇಳಿರುವ ವಿಷಯಭಾಗವೂ ಅದರ ಹೆಚ್ಚಿನ ಪರಿಣಾಮಕಾರಿತ್ವವನ್ನು ಕಳೆದುಕೊಳ್ಳಬಹುದು.

ಈ ಮುಂದಿನ ವಿಷಯವನ್ನು ಪರಿಗಣಿಸಿರಿ: ಯೆಹೋಶುವನು ತನ್ನ ಜೀವಿತದ ಕೊನೆಯ ಕಾಲಾವಧಿಯಲ್ಲಿ, ಇಸ್ರಾಯೇಲ್‌ ಜನಾಂಗದ ಹಿರಿಯರಿಗೆ ಒಂದು ಸ್ಮರಣೀಯ ಭಾಷಣವನ್ನು ಕೊಟ್ಟನು. ಅಬ್ರಹಾಮನ ದಿನಗಳಿಂದ ಹಿಡಿದು ಯೆಹೋವನು ಇಸ್ರಾಯೇಲಿನೊಂದಿಗೆ ವ್ಯವಹರಿಸಿದ ವಿಷಯಗಳನ್ನು ವಿವರಿಸಿದ ಬಳಿಕ, ಯೆಹೋಶುವನು ಆ ಮಹತ್ವದ ವಿಷಯಗಳನ್ನು ಸಾರಾಂಶದ ರೀತಿಯಲ್ಲಿ ಪುನಃ ಹೇಳಿದನೊ? ಇಲ್ಲ. ಅವನು ಅತ್ಯಂತ ಭಾವಪೂರ್ಣನಾಗಿ ಜನರನ್ನು ಪ್ರಚೋದಿಸುತ್ತಾ ಹೇಳಿದ್ದು: “ನೀವು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರ್ರಿ; ಆತನನ್ನು ಪೂರ್ಣಮನಸ್ಸಿನಿಂದಲೂ ಯಥಾರ್ಥಚಿತ್ತದಿಂದಲೂ ಸೇವಿಸಿರಿ.” ಯೆಹೋಶುವ 24:14, 15 ರಲ್ಲಿ ದಾಖಲೆಯಾಗಿರುವ ಅವನ ಸಮಾಪ್ತಿಯ ಮಾತುಗಳನ್ನು ನೀವೇ ಓದಿನೋಡಿರಿ.

ಇನ್ನೊಂದು ಗಮನಾರ್ಹವಾದ ಭಾಷಣವು, ಅಪೊಸ್ತಲರ ಕೃತ್ಯಗಳು 2:14-36 ರಲ್ಲಿ ಕಂಡುಬರುತ್ತದೆ. ಇದನ್ನು ಅಪೊಸ್ತಲ ಪೇತ್ರನು ಸಾ.ಶ. 33 ರ ಪಂಚಾಶತ್ತಮ ಹಬ್ಬದ ದಿನದಂದು ಯೆರೂಸಲೇಮಿನಲ್ಲಿ ನೆರೆದು ಬಂದಿದ್ದ ಒಂದು ಜನಸಮೂಹಕ್ಕೆ ಕೊಟ್ಟನು. ಅವರು ದೇವರಾತ್ಮದ ಸುರಿಸುವಿಕೆಯ ಕುರಿತಾದ ಯೋವೇಲನ ಪ್ರವಾದನೆಯ ನೆರವೇರಿಕೆಯನ್ನು ಕಣ್ಣಾರೆ ನೋಡುತ್ತಿದ್ದಾರೆಂದು ಅವನು ಪ್ರಥಮವಾಗಿ ವಿವರಿಸಿದನು. ಅನಂತರ, ಯೇಸು ಕ್ರಿಸ್ತನ ಪುನರುತ್ಥಾನ ಮತ್ತು ದೇವರ ಬಲಗಡೆಗೆ ಅವನ ಏರಿಸುವಿಕೆಯ ಕುರಿತು ಕೀರ್ತನೆಗಳಲ್ಲಿ ತಿಳಿಸಲ್ಪಟ್ಟಿರುವ ಮೆಸ್ಸೀಯ ಸಂಬಂಧಿತ ಪ್ರವಾದನೆಗಳಿಗೆ ಇದು ಹೇಗೆ ಸಂಬಂಧಿಸಿತೆಂಬುದನ್ನು ಅವನು ತೋರಿಸಿದನು. ಬಳಿಕ, ಸಮಾಪ್ತಿಯಲ್ಲಿ, ತನ್ನ ಸಭಿಕರಲ್ಲಿ ಪ್ರತಿಯೊಬ್ಬನು ಎದುರಿಸಬೇಕಾದ ವಿವಾದಾಂಶವನ್ನು ಪೇತ್ರನು ಸ್ಪಷ್ಟವಾಗಿ ತಿಳಿಯಪಡಿಸಿದನು. ಅವನು ಹೇಳಿದ್ದು: “ನೀವು ಶಿಲುಬೆಗೆ ಹಾಕಿಸಿದ [“ವಧಾಸ್ತಂಭಕ್ಕೇರಿಸಿದ,” NW] ಈ ಯೇಸುವನ್ನೇ ದೇವರು ಒಡೆಯನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂಬದು ಇಸ್ರಾಯೇಲ್‌ ಕುಲದವರಿಗೆಲ್ಲಾ ನಿಸ್ಸಂದೇಹವಾಗಿ ತಿಳಿದಿರಲಿ.” ಆಗ ನೆರೆದಿದ್ದವರು, “ಸಹೋದರರೇ, ನಾವೇನು ಮಾಡಬೇಕು” ಎಂದು ಕೇಳಿದರು. ಪೇತ್ರನು ಅವರಿಗೆ ಉತ್ತರ ಕೊಟ್ಟದ್ದು: “ನಿಮ್ಮಲ್ಲಿ ಪ್ರತಿಯೊಬ್ಬರು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನ ಮೇಲೆ ದೀಕ್ಷಾಸ್ನಾನಮಾಡಿಸಿಕೊಳ್ಳಿರಿ.” (ಅ. ಕೃ. 2:37, 38) ಆ ದಿನ ಕೂಡಿಬಂದಿದ್ದ ಸುಮಾರು 3,000 ಜನರು, ತಾವು ಏನನ್ನು ಕೇಳಿಸಿಕೊಂಡರೋ ಅದರಿಂದ ಪ್ರಚೋದಿತರಾಗಿ, ಯೇಸು ಕ್ರಿಸ್ತನ ಕುರಿತಾದ ಸತ್ಯವನ್ನು ಸ್ವೀಕರಿಸಿದರು.

ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾದ ಅಂಶಗಳು. ನೀವು ಸಮಾಪ್ತಿಯಲ್ಲಿ ಹೇಳುವ ವಿಷಯಗಳು, ನಿಮ್ಮ ಭಾಷಣದ ಮುಖ್ಯ ವಿಷಯಕ್ಕೆ ನೇರವಾಗಿ ಸಂಬಂಧಿಸಿದವುಗಳಾಗಿರಬೇಕು. ನೀವು ವಿಕಸಿಸಿರುವ ಮುಖ್ಯಾಂಶಗಳಿಗೆ ನ್ಯಾಯಸಮ್ಮತವಾದ ಸಮಾಪ್ತಿಯೋಪಾದಿ ಅದು ಬರಬೇಕು. ನಿಮ್ಮ ಮುಖ್ಯ ವಿಷಯದಿಂದ ಕೆಲವು ಪ್ರಧಾನ ಪದಗಳನ್ನು ನೀವು ಇದರಲ್ಲಿ ಸೇರಿಸಲು ಬಯಸಬಹುದಾದರೂ, ಅದನ್ನು ನೇರವಾಗಿ ಪುನರುಚ್ಚರಿಸುವುದು ನಿಮ್ಮ ಆಯ್ಕೆಗೆ ಬಿಡಲ್ಪಟ್ಟಿದೆ.

ಸಾಧಾರಣವಾಗಿ, ಭಾಷಣ ಕೊಡುವುದರಲ್ಲಿ ನಿಮಗಿರುವ ಉದ್ದೇಶವು, ನೀವು ನೀಡುವ ಮಾಹಿತಿಯ ಆಧಾರದ ಮೇರೆಗೆ ಇತರರು ಏನಾದರೂ ಕ್ರಮಕೈಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸುವುದೇ ಆಗಿದೆ. ಸಮಾಪ್ತಿಯ ಮುಖ್ಯ ಉದ್ದೇಶಗಳಲ್ಲಿ ಒಂದು, ಅವರು ಏನು ಮಾಡಬೇಕೆಂದು ತೋರಿಸುವುದೇ ಆಗಿದೆ. ನೀವು ಮುಖ್ಯ ವಿಷಯವನ್ನು ಮತ್ತು ಮುಖ್ಯಾಂಶಗಳನ್ನು ಆರಿಸಿಕೊಂಡಾಗ, ಆ ಮಾಹಿತಿಯು ನಿಮ್ಮ ಸಭಿಕರಿಗೆ ಏಕೆ ಪ್ರಾಮುಖ್ಯವೆಂಬುದನ್ನು ಹಾಗೂ ಆ ಮಾಹಿತಿಯನ್ನು ನೀವು ಸಾದರಪಡಿಸುವುದರಲ್ಲಿ ನಿಮ್ಮ ಉದ್ದೇಶವೇನೆಂಬುದನ್ನು ನೀವು ಜಾಗರೂಕತೆಯಿಂದ ಪರಿಗಣಿಸಿದಿರೊ? ಹಾಗಿರುವಲ್ಲಿ, ಅವರು ಯಾವ ಕ್ರಮವನ್ನು ಕೈಕೊಳ್ಳುವಂತೆ ನೀವು ಬಯಸುತ್ತೀರೆಂಬುದು ನಿಮಗೆ ತಿಳಿದಿದೆ. ಈಗ, ಆ ಕ್ರಮವು ಯಾವುದೆಂಬುದನ್ನು ಮತ್ತು ಪ್ರಾಯಶಃ ಅದನ್ನು ಹೇಗೆ ಕೈಕೊಳ್ಳುವುದು ಎಂಬುದನ್ನು ನೀವು ಅವರಿಗೆ ತಿಳಿಸುವ ಅಗತ್ಯವಿದೆ.

ನಿಮ್ಮ ಸಭಿಕರು ಏನು ಮಾಡಬೇಕೆಂದು ತೋರಿಸುವುದರ ಜೊತೆಗೆ, ನಿಮ್ಮ ಸಮಾಪ್ತಿಯು ಪ್ರಚೋದನೆಯನ್ನು ಒದಗಿಸಬೇಕು. ಹಾಗೆ ವರ್ತಿಸುವುದಕ್ಕೆ ಸಪ್ರಮಾಣವಾದ ಕಾರಣಗಳು ಮತ್ತು ಪ್ರಾಯಶಃ ಹಾಗೆ ಮಾಡುವುದರಿಂದ ಸಿಗಸಾಧ್ಯವಿರುವ ಪ್ರಯೋಜನಗಳು ಕೂಡ ಅದರಲ್ಲಿ ಒಳಗೂಡಿರಬೇಕು. ಕೊನೆಯ ವಾಕ್ಯವನ್ನು ಜಾಗರೂಕತೆಯಿಂದ ಯೋಚಿಸಿ, ಉತ್ತಮವಾದ ಪದಗಳನ್ನು ಉಪಯೋಗಿಸಿ ರಚಿಸುವುದಾದರೆ, ನಿಮ್ಮ ಪೂರ್ಣ ಭಾಷಣದ ಪರಿಣಾಮಕಾರಿತ್ವವನ್ನು ಅದು ಪುಷ್ಟಿಗೊಳಿಸುವುದು.

ಭಾಷಣವು ಮುಗಿಯುತ್ತಿದೆ ಎಂಬುದನ್ನು ಮನಸ್ಸಿನಲ್ಲಿಡಿರಿ. ಮತ್ತು ನೀವು ಏನು ಹೇಳುತ್ತೀರೊ ಅದು ಅದನ್ನು ಸೂಚಿಸಬೇಕು. ನಿಮ್ಮ ಮಾತಿನ ವೇಗವು ಸಹ ಯೋಗ್ಯವಾದುದಾಗಿರಬೇಕು. ಕೊನೆಯ ತನಕ ವೇಗವಾಗಿ ಮಾತಾಡುತ್ತಾ ಹೋಗಿ, ನಂತರ ಥಟ್ಟನೆ ನಿಲ್ಲಿಸಿಬಿಡಬೇಡಿ. ಇನ್ನೊಂದು ಕಡೆ, ನಿಮ್ಮ ಸ್ವರವು ಕ್ಷೀಣಿಸುತ್ತಾ ಕೊನೆಗೆ ಕೇಳಿಸದೆ ಹೋಗುವಂತೆಯೂ ಬಿಡಬೇಡಿ. ನಿಮ್ಮ ಧ್ವನಿಯು ಸಾಕಷ್ಟು ಗಟ್ಟಿಯಾಗಿರಬೇಕು, ಆದರೆ ವಿಪರೀತವಾಗಿರಬಾರದು. ನಿಮ್ಮ ಕೊನೆಯ ಕೆಲವು ವಾಕ್ಯಗಳು ನಿರ್ಣಾಯಕ ಧ್ವನಿಯಿಂದ ಕೂಡಿದ್ದಾಗಿರಬೇಕು. ನೀವು ಅವುಗಳನ್ನು ಮನಃಪೂರ್ವಕವಾಗಿಯೂ ನಿಶ್ಚಿತಾಭಿಪ್ರಾಯದಿಂದಲೂ ಹೇಳಬೇಕು. ನಿಮ್ಮ ಭಾಷಣ ನೀಡುವಿಕೆಯನ್ನು ತಯಾರಿಸುವಾಗ, ನಿಮ್ಮ ಸಮಾಪ್ತಿಯನ್ನು ತಪ್ಪದೇ ಪ್ರ್ಯಾಕ್ಟಿಸ್‌ ಮಾಡಿರಿ.

ಸಮಾಪ್ತಿಯು ಎಷ್ಟು ದೀರ್ಘವಾಗಿರಬೇಕು? ಇದು ನಿರ್ದಿಷ್ಟ ಪ್ರಮಾಣದ ಸಮಯಾವಧಿಯಿಂದ ನಿರ್ಧರಿಸಲ್ಪಡುವಂಥ ವಿಷಯವಾಗಿರುವುದಿಲ್ಲ. ಆದರೆ ಸಮಾಪ್ತಿಯು ಬೇಸರ ಹಿಡಿಸುವಷ್ಟು ದೀರ್ಘವಾಗಿರಬಾರದು. ಅದರ ಉದ್ದದ ಸೂಕ್ತತೆಯನ್ನು, ಸಭಿಕರ ಮೇಲೆ ಅದು ಬೀರುವ ಪರಿಣಾಮದಿಂದ ನಿರ್ಧರಿಸಸಾಧ್ಯವಿದೆ. ಸರಳವೂ ನೇರವೂ ಸಕಾರಾತ್ಮಕವೂ ಆದ ಸಮಾಪ್ತಿಯು ಯಾವಾಗಲೂ ಗಣ್ಯಮಾಡಲ್ಪಡುತ್ತದೆ. ತುಸು ಹೆಚ್ಚು ದೀರ್ಘವಾಗಿದ್ದು, ಸಂಕ್ಷಿಪ್ತ ದೃಷ್ಟಾಂತವಿರುವ ಒಂದು ಸಮಾಪ್ತಿಯೂ, ಜಾಗರೂಕತೆಯಿಂದ ಯೋಜಿಸಲ್ಪಟ್ಟಿರುವಲ್ಲಿ ಪರಿಣಾಮಕಾರಿಯಾಗಿರಬಲ್ಲದು. ಪ್ರಸಂಗಿಯ ಇಡೀ ಪುಸ್ತಕಕ್ಕಾಗಿ ಪ್ರಸಂಗಿ 12:13, 14 ರಲ್ಲಿ ಕಂಡುಬರುವ ಸಂಕ್ಷಿಪ್ತ ಸಮಾಪ್ತಿಯನ್ನು, ಹೆಚ್ಚು ಚಿಕ್ಕದಾದ ಪರ್ವತ ಪ್ರಸಂಗಕ್ಕಾಗಿ ಮತ್ತಾಯ 7:24-27 ರಲ್ಲಿ ದಾಖಲಿಸಲ್ಪಟ್ಟಿರುವ ಸಮಾಪ್ತಿಯೊಂದಿಗೆ ಹೋಲಿಸಿ ನೋಡಿರಿ.

ಕ್ಷೇತ್ರ ಶುಶ್ರೂಷೆಯಲ್ಲಿ. ಕ್ಷೇತ್ರ ಶುಶ್ರೂಷೆಯಲ್ಲಿ ಸಮಾಪ್ತಿಗಳಿಗಿರುವಷ್ಟು ಆವಶ್ಯಕತೆಯನ್ನು ನೀವು ಇನ್ನೆಲ್ಲಿಯೂ ಎದುರಿಸಲಾರಿರಿ. ಆದರೆ ತಯಾರಿ ಮತ್ತು ಜನರಲ್ಲಿ ಪ್ರೀತಿಭರಿತ ಆಸಕ್ತಿಯಿರುವಲ್ಲಿ, ನೀವು ಹೆಚ್ಚು ಒಳಿತನ್ನು ಸಾಧಿಸಬಲ್ಲಿರಿ. ಹಿಂದಿನ ಪುಟಗಳಲ್ಲಿ ಕೊಡಲ್ಪಟ್ಟಿರುವ ಸಲಹೆಯನ್ನು, ಕೇವಲ ಇಬ್ಬರೇ ವ್ಯಕ್ತಿಗಳು, ಅಂದರೆ ನಿಮ್ಮ ಮತ್ತು ಮನೆಯವನ ಮಧ್ಯೆ ನಡೆಯುತ್ತಿರುವ ಸಂಭಾಷಣೆಗೂ ಪ್ರಯೋಜನಕರವಾಗಿ ಹೊಂದಿಸಿಕೊಳ್ಳಸಾಧ್ಯವಿದೆ.

ಸಂಭಾಷಣೆಯು ತೀರ ಸಂಕ್ಷಿಪ್ತವಾಗಿರಬಹುದು. ಆ ವ್ಯಕ್ತಿ ಕಾರ್ಯಮಗ್ನನಾಗಿರಬಹುದು. ನಿಮ್ಮ ಇಡೀ ಭೇಟಿಯು ಕೇವಲ ಒಂದೇ ನಿಮಿಷಕ್ಕಾಗಿರಬಹುದು. ಸೂಕ್ತವಾಗಿರುವಲ್ಲಿ, ನೀವು ಹೀಗೆ ಏನಾದರೂ ಹೇಳಬಹುದು: “ನೀವು ತುಂಬ ಕೆಲಸದಲ್ಲಿರುವಂತೆ ತೋರುತ್ತದೆ. ಆದುದರಿಂದ, ನಾನು ಒಂದೇ ಒಂದು ಪ್ರೋತ್ಸಾಹಕರವಾದ ವಿಚಾರವನ್ನು ತಿಳಿಸಿಹೋಗುತ್ತೇನೆ. ನಮ್ಮ ಸೃಷ್ಟಿಕರ್ತನಿಗೆ ಒಂದು ಅದ್ಭುತಕರವಾದ ಉದ್ದೇಶವಿದೆಯೆಂದು ಬೈಬಲು ತೋರಿಸುತ್ತದೆ. ಅದು, ಈ ಭೂಮಿಯನ್ನು ಜನರು ಸದಾಕಾಲ ಜೀವನವನ್ನು ಆನಂದದಿಂದ ಅನುಭವಿಸುವ ಸ್ಥಳವಾಗಿ ಮಾಡುವುದೇ ಆಗಿದೆ. ನಾವು ಆ ಪರದೈಸಿನಲ್ಲಿ ಇರಬಲ್ಲೆವು. ಆದರೆ ದೇವರ ಆವಶ್ಯಕತೆಗಳನ್ನು ನಾವು ಕಲಿಯುವ ಅಗತ್ಯವಿದೆ.” ಅಥವಾ, ಹೆಚ್ಚು ಅನುಕೂಲಕರವಾದ ಸಮಯದಲ್ಲಿ ನಿಮ್ಮನ್ನು ಪುನಃ ಭೇಟಿಯಾಗುತ್ತೇನೆ ಎಂದಷ್ಟೇ ನೀವು ಹೇಳಬಹುದು.

ಆದರೆ ಮನೆಯವನು ಥಟ್ಟನೆ ಮಾತುಕತೆಯನ್ನು ನಿಲ್ಲಿಸುವ ಮೂಲಕ ಅಥವಾ ಒರಟಾಗಿ ಮಾತಾಡುವ ಮೂಲಕ ನಿಮ್ಮ ಭೇಟಿಗೆ ಭಂಗವನ್ನು ತರುವುದಾದರೂ, ಆಗಲೂ ಇದರಿಂದ ಹೆಚ್ಚು ಒಳಿತನ್ನು ಸಾಧಿಸಸಾಧ್ಯವಿದೆ. ಮತ್ತಾಯ 10:12, 13 ಮತ್ತು ರೋಮಾಪುರ 12:17, 18 ರಲ್ಲಿ ಕಂಡುಬರುವ ಸಲಹೆಯನ್ನು ಮನಸ್ಸಿನಲ್ಲಿಡಿರಿ. ನಿಮ್ಮ ಸೌಮ್ಯ ಉತ್ತರವು, ಅವನಿಗೆ ಯೆಹೋವನ ಸಾಕ್ಷಿಗಳ ಕಡೆಗಿರುವ ಮನೋಭಾವವನ್ನು ಒಂದುವೇಳೆ ಬದಲಾಯಿಸಬಹುದು. ಹಾಗಾಗುವಲ್ಲಿ, ಅದೊಂದು ಉತ್ತಮ ಸಾಧನೆಯೇ ಸರಿ.

ಆದರೆ ಇನ್ನೊಂದು ಕಡೆಯಲ್ಲಿ, ನೀವು ಮನೆಯವನೊಂದಿಗೆ ತೃಪ್ತಿಕರವಾದ ಸಂಭಾಷಣೆಯನ್ನು ನಡೆಸಿರಬಹುದು. ಆಗ ಅವನು ಜ್ಞಾಪಕದಲ್ಲಿಟ್ಟುಕೊಳ್ಳುವಂತೆ ನೀವು ಬಯಸುವ ಮುಖ್ಯಾಂಶವನ್ನು ಏಕೆ ಪುನಃ ಹೇಳಬಾರದು? ಅವನು ಅದರ ಕುರಿತು ಯಾವುದಾದರೂ ಕ್ರಮವನ್ನು ಕೈಕೊಳ್ಳುವಂತೆ ಮಾಡುವ ಪ್ರಚೋದನೆಯನ್ನು ಸಹ ಒಳಗೂಡಿಸಿರಿ.

ಇನ್ನೊಂದು ಸಮಯದಲ್ಲಿ ಅವನೊಂದಿಗೆ ಇನ್ನು ಹೆಚ್ಚನ್ನು ಚರ್ಚಿಸುವ ಅವಕಾಶವಿದೆಯೆಂದು ನಿಮಗನಿಸುವುದಾದರೆ, ಅದಕ್ಕಾಗಿ ಮುನ್ನೋಡುವಂತೆ ಅವನಿಗೆ ಯಾವುದಾದರೂ ಕಾರಣವನ್ನು ಕೊಡಿರಿ. ಒಂದು ಪ್ರಶ್ನೆಯನ್ನು ಕೇಳಿರಿ; ಅದನ್ನು ಪ್ರಾಯಶಃ, ಶಾಸ್ತ್ರವಚನಗಳಿಂದ ತರ್ಕಿಸುವುದು (ಇಂಗ್ಲಿಷ್‌) ಪುಸ್ತಕದಿಂದಲೊ ಅಥವಾ ಮನೆ ಬೈಬಲ್‌ ಅಧ್ಯಯನವನ್ನು ನಡೆಸುವುದಕ್ಕಾಗಿ ರೂಪಿಸಲ್ಪಟ್ಟಿರುವಂಥ ಒಂದು ಪುಸ್ತಕದಿಂದಲೊ ತೆಗೆಯಬಹುದು. ಯೇಸು ಹೇಳಿರುವಂತೆ ಮತ್ತು ಮತ್ತಾಯ 28:19, 20 ರಲ್ಲಿ ದಾಖಲಿಸಲ್ಪಟ್ಟಿರುವಂತೆ, ನಿಮ್ಮ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ.

ನೀವು ಒಂದು ಮನೆ ಬೈಬಲ್‌ ಅಧ್ಯಯನವನ್ನು ಮುಗಿಸುತ್ತಿದ್ದೀರೊ? ಆಗ ಮುಖ್ಯ ವಿಷಯವನ್ನು ಪುನಃ ಹೇಳುವುದು, ಚರ್ಚಿಸಲ್ಪಟ್ಟ ವಿಷಯವನ್ನು ವಿದ್ಯಾರ್ಥಿಯು ಜ್ಞಾಪಕದಲ್ಲಿಟ್ಟುಕೊಳ್ಳುವಂತೆ ಸಹಾಯಮಾಡುವುದು. ಪುನರ್ವಿಮರ್ಶೆಯ ಪ್ರಶ್ನೆಗಳ ಉಪಯೋಗವು, ವಿಶೇಷವಾಗಿ ಆ ಪುನರ್ವಿಮರ್ಶೆಯು ಅವಸರದಿಂದ ಮಾಡಲ್ಪಡದಿದ್ದರೆ, ವಿದ್ಯಾರ್ಥಿಯ ಮನಸ್ಸಿನಲ್ಲಿ ಮುಖ್ಯಾಂಶಗಳನ್ನು ಅಚ್ಚೊತ್ತಿಸಲು ಸಹಾಯಮಾಡುವುದು. ಆಗ ತಾನೇ ಅಧ್ಯಯನ ಮಾಡಿದ ವಿಷಯವು ವಿದ್ಯಾರ್ಥಿಗೆ ಹೇಗೆ ಪ್ರಯೋಜನಕರವಾದೀತು ಎಂಬುದರ ಬಗ್ಗೆ ಅಥವಾ ಅವನು ಅದನ್ನು ಹೇಗೆ ಇತರರೊಂದಿಗೆ ಹಂಚಿಕೊಳ್ಳಬಹುದು ಎಂಬುದರ ಬಗ್ಗೆ ಕೇಳಲ್ಪಡುವ ಒಂದು ಪ್ರಶ್ನೆಯು, ಅವನು ಏನನ್ನು ಕಲಿತಿದ್ದಾನೋ ಅದನ್ನು ಪ್ರಾಯೋಗಿಕ ರೀತಿಯಲ್ಲಿ ಉಪಯೋಗಿಸಲು ಆಲೋಚಿಸುವಂತೆ ಅವನಿಗೆ ಸಹಾಯಮಾಡಬಲ್ಲದು.—ಜ್ಞಾನೋ. 4:7.

ಜ್ಞಾಪಕದಲ್ಲಿಡಿರಿ—ನಿಮ್ಮ ಇಡೀ ಚರ್ಚೆಯ ಪರಿಣಾಮಕಾರಿತ್ವವನ್ನು ನಿಮ್ಮ ಸಮಾಪ್ತಿಯು ಪ್ರಭಾವಿಸುತ್ತದೆ.

ಇದನ್ನು ಮಾಡುವ ವಿಧ

  • ನೀವು ಈಗಾಗಲೇ ಸಾದರಪಡಿಸಿರುವ ವಿಚಾರಗಳಿಗೆ ನಿಮ್ಮ ಸಮಾಪ್ತಿಯು ನೇರವಾಗಿ ಸಂಬಂಧಿಸಿದೆಯೆಂಬುದನ್ನು ಖಚಿತಪಡಿಸಿಕೊಳ್ಳಿರಿ.

  • ತಾವು ಕೇಳಿಸಿಕೊಂಡಿರುವ ವಿಷಯಗಳ ಸಂಬಂಧದಲ್ಲಿ ಅವರು ಏನು ಮಾಡಬೇಕೆಂಬುದನ್ನು ಸಭಿಕರಿಗೆ ತೋರಿಸಿರಿ.

  • ನೀವು ಏನು ಹೇಳುತ್ತೀರೊ ಮತ್ತು ಅದನ್ನು ಹೇಗೆ ಹೇಳುತ್ತೀರೊ ಅದರಿಂದ ನಿಮ್ಮ ಕೇಳುಗರನ್ನು ಪ್ರಚೋದಿಸಿರಿ.

ಅಭ್ಯಾಸಪಾಠ: ಕ್ಷೇತ್ರ ಶುಶ್ರೂಷೆಗಾಗಿ ಎರಡು ಸಮಾಪ್ತಿಗಳನ್ನು ತಯಾರಿಸಿರಿ: (1) ಮನೆಯವನು ಥಟ್ಟನೆ ಮಾತುಕತೆಯನ್ನು ನಿಲ್ಲಿಸುವಾಗ ಅಥವಾ ಮಾತಾಡಲು ಸಮಯವು ಕೊಂಚವೇ ಇರುವಾಗ ಏನು ಹೇಳಬೇಕು ಮತ್ತು (2) ನಿಮ್ಮ ಮುಂದಿನ ಭೇಟಿಯಲ್ಲಿ ಚರ್ಚೆಗಾಗಿ ಒಂದು ನಿಶ್ಚಿತ ಪ್ರಶ್ನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ