“ಮಾನಕ್ಕೆ ಮುಂಚೆ ದೈನ್ಯ”
ಒಬ್ಬಾನೊಬ್ಬ ಯೌವನಸ್ಥ ಪುರುಷನು ಸುಳ್ಳಾರೋಪದಿಂದಾಗಿ ಇಜಿಪ್ಟಿನ ಸೆರೆಮನೆಯಲ್ಲಿ ಹಾಕಲ್ಪಟ್ಟಿದ್ದನು. ಅವನು ಬಹಳ ಅಪಮಾನಕ್ಕೆ ಗುರಿಯಾಗಿದ್ದನು, ಮತ್ತು ಸೆರೆಮನೆಯಿಂದ ಮುಕ್ತನಾಗುವ ನಿರೀಕ್ಷೆ ತೋರಿಬಂದಿರಲಿಲ್ಲ. ಅನಂತರ ಫರೋಹನ ಮುಂದೆ ಹಾಜರಾಗಲು ಅವನಿಗೆ ಅಪ್ಪಣೆಯಾಯಿತು. ಸೆರೆಮನೆಯ ಕಾವಲುಗಾರರು ಅವನನ್ನು ಬೇಗನೇ ಹೊರತಂದರು. ಅವನು ಕ್ಷೌರಮಾಡಿಕೊಂಡು, ತನ್ನ ವಸ್ತ್ರ ಬದಲಾಯಿಸಿ ಫರೋಹನ ಸನ್ನಿಧಿಗೆ ಬಂದನು.
ಯೋಸೇಫನಿಗೆ ಒಂದು ಆಶ್ಚರ್ಯ ಕಾದಿತ್ತು. ಯೆಹೋವನ ಸಹಾಯದಿಂದ ಯೋಸೇಫನು ಫರೋಹನ ಎರಡು ಸ್ವಪ್ನಗಳ ಸರಿಯಾದ ಅರ್ಥವನ್ನು ತಿಳಿಸಿದನು. ಫರೋಹನು ಅಂದದ್ದು: “ನೋಡು, ಐಗುಪ್ತದ ಮೇಲೆಲ್ಲಾ ನಿನ್ನನ್ನು ಅಧಿಕಾರಿಯನ್ನಾಗಿ ಇಟ್ಟಿದ್ದೇನೆ.” (ಆದಿಕಾಂಡ 41:41) ಎಂಥಹ ನಂಬಲಾರದ ಅನುಭವ—ಸೆರೆಮನೆಯಿಂದ ಅರಮನೆಗೆ, ಎಲ್ಲಾ ಒಂದೇ ದಿನದಲ್ಲಿ! ಯೋಸೇಫನ ಅನುಭವವು, ತದನಂತರ ಅರಸ ಸೊಲೊಮೋನನು ಏನನ್ನು ಬರೆಯಲು ಪ್ರೇರಿಸಲ್ಪಟ್ಟನೋ ಅದನ್ನು ಚೆನ್ನಾಗಿ ಚಿತ್ರಿಸಬಲ್ಲದು: “ಇಂಥ ಯುವಕನೊಬ್ಬನು ರಾಜನಾಗಲು ಸೆರೆಮನೆಯಿಂದ ತರಲ್ಪಟ್ಟನು.” ತಕ್ಕದ್ದಾಗಿಯೇ ಸೊಲೊಮೋನನು, “ಮಾನಕ್ಕೆ ಮುಂಚೆ ದೈನ್ಯ” ಎಂದು ಎರಡು ಸಾರಿ ಬರೆದಿದ್ದಾನೆ.—ಪ್ರಸಂಗಿ 4:14; ಜ್ಞಾನೋಕ್ತಿ 15:33; 18:12.
ಆ ದೈವಿಕ ಸತ್ಯದಿಂದ ಪ್ರಯೋಜನ ಹೊಂದಲು, ನಿಮ್ಮನ್ನು ಹೀಗೆ ಕೇಳಿಕೊಳ್ಳಿರಿ: ಯೋಸೇಫನನ್ನು ಅವನ ಅವಮಾನಕಾರಕ ಅನುಭವದಲ್ಲಿ ಬಲಪಡಿಸಿದ್ದು ಯಾವುದು? ತನ್ನನ್ನು ಸೆರೆಮನೆಗೆ ಹಾಕಿದ್ದ ಆ ಸುಳ್ಳಾರೋಪವನ್ನು ಈ ನಂಬಿಗಸ್ತ ಯೆಹೋವನ ಸೇವಕನು ನಿಭಾಯಿಸಿದ್ದು ಹೇಗೆ? ಯೋಸೇಫನಿಗಾಗಿ ಯೆಹೋವನು ಯಾವ ಮಾನವನ್ನು ಕಾದಿಟ್ಟಿದ್ದನು? ಶತಮಾನಗಳಿಂದ, ನಂಬಿಗಸ್ತತೆಯಿಂದಲೂ ಧೈರ್ಯದಿಂದಲೂ ಹಿಂಸೆಯನ್ನು ಮತ್ತು ಅವಮಾನವನ್ನು ಸಹಿಸಿಕೊಂಡವರಿಗಾಗಿ ಯಾವ ರೀತಿಯ ಮಾನವು ಕಾದಿರುತ್ತದೆ? ಎಲ್ಲದ್ದಕ್ಕಿಂತಲೂ ಹೆಚ್ಚಾಗಿ, ಅಪಮಾನವನ್ನು ನಾವು ಸಹಿಸುವಾಗ ಸಮತೂಕದ ಮನೋಭಾವವನ್ನಿಡಲು ನಮಗೆ ಯಾವುದು ಸಹಾಯ ಮಾಡುತ್ತದೆ?
ಅವನ ಸಹೋದರರು ಮತ್ತು ಅವನ ಹೆತ್ತವರು ಸಹಾ ಅವನ ಮುಂದೆ “ಅಡ್ಡಬೀಳು”ವರೆಂದು ಸೂಚಿಸಿದ್ದ ಇದಕ್ಕೆ ಮುಂಚಿನ ಎರಡು ಪ್ರವಾದನಾ ಸ್ವಪ್ನಗಳನ್ನು ಯೋಸೇಫನು ಆಗಿಂದಾಗ್ಯೆ ಧ್ಯಾನಿಸಿದ್ದಿರಬಹುದು. ವಾಸ್ತವದಲ್ಲಿ ಅವನ ಸಹೋದರರು, ಮೊದಲನೆ ಸ್ವಪ್ನವನ್ನು ಕೇಳಿದಾಗ ಅಂದದ್ದು: “ನೀನು ನಿಜವಾಗಿಯೂ ನಮ್ಮನ್ನು ಆಳುವಿಯಾ?”—ಆದಿಕಾಂಡ 37:8-10.
ಯೋಸೇಫನ ಸಹೋದರರು ಮತ್ಸರದಿಂದ ಅವನನ್ನು ಕೊಂದೇ ಬಿಡಲಿದ್ದರು! ಆದರೆ ಯೆಹೋವನ ಮಾರ್ಗದರ್ಶನೆಯ ಕೆಳಗೆ ಈ 17 ವರ್ಷದ ಬಾಲಕನು, ಸಂಚಾರೀ ವರ್ತಕರಿಗೆ ಮಾರಲ್ಪಟ್ಟನು ಮತ್ತು ಅವರು ಅವನನ್ನು ಫರೋಹನ ಅಂಗರಕ್ಷಕರ ಮುಖ್ಯಸ್ಥನಾದ ಪೋಟೀಫರನಿಗೆ ಮಾರಿದರು.
ಕ್ರಮೇಣ ಯೋಸೇಫನು ಪೋಟೀಫರನ ಮನೆವಾರ್ತೆಯ ಪಾರುಪತ್ಯಗಾರನಾದನು. ಅವನ ಹೆಂಡತಿಯು ಈ ಸುಂದರ ಯುವಕನನ್ನು ಮೋಹಿಸಲು ಪ್ರಯತ್ನಿಸಿದಳು. ಆದರೆ ಯೋಸೇಫನು ಯೆಹೋವನಿಗೆ ನಿಷ್ಠನಾಗಿ ಉಳಿದು, ಅಲ್ಲಿಂದ ಪಾರಾದನು. ಆಗ ಆ ಕುತಂತ್ರಿ ಹೆಂಡತಿ ಯೋಸೇಫನ ಮೇಲೆ ಹಟಸಂಭೋಗದ ಸುಳ್ಳಾರೋಪ ಹಾಕಿದಳು ಮತ್ತು ಪೋಟೀಫರನು ಅವಳನ್ನು ನಂಬಿ, ಬಡ ಯೋಸೇಫನನ್ನು ಸೆರೆಮನೆಗೆ ಹಾಕಿಸಿದನು.
ಆದರೂ ಅವನು, ಯೆಹೋವನಿಗೆ ನಿಷ್ಠನಾಗಿಯೇ ಉಳಿದನು. ಈ ಮೊದಲೇ ತಿಳಿಸಿದಂತೆ, ಕನಸುಗಳ ಅರ್ಥವನ್ನು ತಿಳಿಸಲು ಅವನನ್ನು ಫರೋಹನ ಸನ್ನಿಧಿಗೆ ತರಲಾಯಿತು. ತದನಂತರ ಫರೋಹನು ಅವನನ್ನು, ಇಜಿಪ್ಟಿನ ಆಹಾರ ಸಂಗ್ರಹವನ್ನು ವ್ಯವಸ್ಥಾಪಿಸುವ ಮಹಾ ಸುಯೋಗಕ್ಕೆ ನೇಮಿಸಿದನು. ಕ್ಷಾಮವು ಕಾನಾನಿನ ತನಕವೂ ಹಬ್ಬಿದಾಗ, ಯೋಸೇಫನ ಸಹೋದರರು ಕುಟುಂಬಕ್ಕಾಗಿ ಆಹಾರ ಸಾಮಗ್ರಿಯನ್ನು ಕೊಂಡೊಯ್ಯಲಿಕ್ಕಾಗಿ ಬಂದಾಗ, ಅವನಿಗೆ ನಿಜವಾಗಿಯೂ ಅಡ್ಡ ಬಿದ್ದರು.
‘ದೈನ್ಯದಿಂದ ಮಾನಕ್ಕೆ’ ಏರಿದ ಇತರರು
“ಮಾನಕ್ಕೆ ಮುಂಚೆ ದೈನ್ಯ” ಎಂಬ ದೈವಿಕ ಸತ್ಯವನ್ನು ಯಾರ ಜೀವನ ಕ್ರಮವು ರುಜುಪಡಿಸಿತೋ ಆ ಇನ್ನೊಬ್ಬ ಯೆಹೋವನ ಸೇವಕನೇ ಮೋಶೆಯು. ಫರೋಹನ ಸಿರಿಸಂಪತ್ತಿನ ಅರಮನೆಯಲ್ಲಿ ಬೆಳೆದ ಮೋಶೆಗೆ ಒಂದು ಶ್ಲಾಘನೀಯ ಭವಿಷ್ಯತ್ತು ಕಾದಿತ್ತು. ಅನಂತರ, ಘಟನಾವಳಿಗಳು ಅಹಿತಕರವಾಗಿ ತಿರುಗುವಂತೆ ತೋರಿಬಂತು. ಮೋಶೆಯು ಯೆಹೋವನಲ್ಲಿ ನಂಬಿಕೆಯಿಂದ ಕ್ರಿಯೆಗೈದನು, ಅವನು ತನ್ನ ಜನರಿಗಾಗಿ ಪ್ರೀತಿಯ ಗಮನವನ್ನು ತೋರಿಸಿದನು. ಇದರಿಂದಾಗಿ ಫರೋಹನ ಕೋಪಕ್ಕೆ ಗುರಿಯಾಗಿ ಪ್ರಾಣರಕ್ಷಣೆಗಾಗಿ ಓಡಿಹೋಗಬೇಕಾಯಿತು. ಒಬ್ಬಂಟಿಗನಾಗಿಯೇ ಮಿದ್ಯಾನಿಗೆ ಅವನು ಪಯಣಿಸಿದನು. ಅವನ ಮಾವನಾದ ಇತ್ರೋನನ ಕೈಕೆಳಗೆ, 40 ವರ್ಷ ದೀನ ಕುರುಬನ ಜೀವನವನ್ನು ನಡಿಸುತ್ತಾ, ತನ್ನ ದೈನ್ಯತೆಯನ್ನು ತೋರಿಸಿಕೊಟ್ಟನು. ವ್ಯಕ್ತಿತ್ವ-ರೂಪಿಸಿದ ಆ ನಾಲ್ವತ್ತು ವರ್ಷಗಳು, ಅವನನ್ನು ದೀನಗೊಳಿಸಿದ ಯೆಹೋವನ ಮಾರ್ಗವನ್ನು ಧ್ಯಾನಿಸುವುದಕ್ಕೆ ಮತ್ತು, ಇನ್ನೂ ಮುಂದೆ ತನಗೇನು ಕಾದಿದೆಯೋ ಎಂದು ಆಲೋಚಿಸುವುದಕ್ಕೆ ಎಷ್ಟು ಉತ್ತೇಜಕವಾಗಿದ್ದಿರಬೇಕು!
ಅನಂತರ, ಮಾನ ಬಂತು. ಯೆಹೋವನು ತನ್ನ ಜನರನ್ನು ಐಗುಪ್ತದಿಂದ ಬಿಡಿಸುವಂತೆ ಮೋಶೆಯನ್ನು ಫರೋಹನಿಗೆ ಸಂದೇಶವಾಹಕನಾಗಿ ನೇಮಿಸಿದನು. ಹತ್ತು ಬಾಧೆಗಳಲ್ಲಿ ನೇರವಾಗಿ ಒಳಗೂಡಿದಾಗ ಮತ್ತು ಇಸ್ರಾಯೇಲ್ಯರನ್ನು ಕೆಂಪು ಸಮುದ್ರದ ಮಧ್ಯದಿಂದ ದಾಟಿಸಿದಾಗ ಎಂಥಾ ಮಹತ್ತಾದ ಸುಯೋಗವು ಮೋಶೆಗೆ ಸಿಕ್ಕಿತು! ಅನಂತರ, ಸೀನಾಯಿ ಬೆಟ್ಟದ ಮೇಲೆ ಮೋಶೆ ಯೆಹೋವನಿಂದ ಧರ್ಮಶಾಸ್ತ್ರವನ್ನು ಪಡೆದನು. ಅವನು ಕೆಳಗಿಳಿದು ಬಂದಾಗ ಜನರು, “ಮೋಶೆಯ ಮುಖಕ್ಕೆ ಬಂದ ಪ್ರಕಾಶದ ನಿಮಿತ್ತ ಅವನ ಮುಖವನ್ನು ನೋಡಲಾರದೆ ಇದ್ದರು.”—2 ಕೊರಿಂಥ 3:7.
ಪೌರಾಸ್ತ್ಯರೆಲ್ಲರಲ್ಲಿ ಅತ್ಯಂತ ಪ್ರಮುಖನಾದ ಯೋಬನನ್ನೂ ಗಮನಿಸಿರಿ. ಅವನು, “ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದನು.” (ಯೋಬ 1:2, 3, 8) ಅನಂತರ, ಫಕ್ಕನೇ, ತನ್ನ ಹತ್ತುಮಂದಿ ಮಕ್ಕಳನ್ನು ಹಾಗೂ ತನ್ನ ಸಾವಿರಾರು ಕುರಿ, ಒಂಟೆ, ಎತ್ತು ಮತ್ತು ಕತ್ತೆಗಳನ್ನು ಕಳಕೊಂಡನು.
ಅಷ್ಟು ಮಾತ್ರವೇ ಅಲ್ಲ. ಯೋಬನ ಮೈ ಮೇಲೆಲ್ಲಾ ಕೆಟ್ಟ ಹುಣ್ಣುಗಳು ಬಿದದ್ದರಿಂದ ಅವನು ದೈಹಿಕವಾಗಿ ಬಹು ಅಸಹ್ಯಕರ ಬಾಧೆಪಟ್ಟನು. ಅವನ ಸ್ವಂತ ಹೆಂಡತಿ ಸಹಾ, “ನಿನ್ನ ಯಥಾರ್ಥತ್ವವನ್ನು ಇನ್ನೂ ಬಿಡಲಿಲ್ಲವೋ? ದೇವರನ್ನು ದೂಷಿಸಿ ಸಾಯಿ” ಎಂದು ಗೇಲಿ ಮಾಡಿದಳು. (ಯೋಬ 2:9) ಯೋಬನು ಕಟುವಾದ ಪರೀಕೆಗ್ಷೆ ಮತ್ತು ಅವಮಾನಕ್ಕೆ ಗುರಿಯಾಗಿದ್ದರೂ, ಯೆಹೋವ ಮತ್ತು ಮುಖ್ಯ ದಂಗೆಖೋರ ಸೈತಾನನ ನಡುವೆ ಆಗಿದ್ದ ಸ್ವರ್ಗೀಯ ವಾಗ್ವಾದದ ಯಾವುದೇ ಅರಿವು ಅವನಿಗಿರಲಿಲ್ಲ. ಪರಿಸ್ಥಿತಿಯು ಯೋಬನ ಮೂವರು “ಸ್ನೇಹಿತ”ರೊಂದಿಗಿನ ದೀರ್ಘಚರ್ಚೆಯಿಂದ ಏನೂ ಸುಧಾರಿಸಲಿಲ್ಲ. ಆದರೂ ಯೋಬನು ತನ್ನ ಸಮಗ್ರತೆಯನ್ನು ಕಾಪಾಡಿ ಕೊಂಡನು. ತನಗಿಂತ ಎಷ್ಟೋ ಚಿಕ್ಕವನಿದ್ದ ಎಲೀಹುವಿನಿಂದಲೂ ಸುಜ್ಞ ಸಲಹೆಯನ್ನು ದೀನತೆಯಿಂದ ಸ್ವೀಕರಿಸಿದನು.—ಯೋಬ 32:4.
ಯೋಬನಿಗೆ ಪ್ರತಿಫಲವು ಸಿಕ್ಕಿತೋ? ಹೌದು. ಯೆಹೋವನು ಯೋಬನನ್ನು ಪುನ:ಸ್ಥಾಪಿಸಿದನು, ಅವನ ಮಂದೆಗಳ ಸಂಖ್ಯೆಯನ್ನು ಇಮ್ಮಡಿಗೊಳಿಸಿದನು, ಏಳು ಗಂಡು ಮಕ್ಕಳನ್ನು ಮತ್ತು ದೇಶದಲ್ಲೆಲ್ಲಾ ಪರಮ ಸುಂದರಿಯರಾದ—ಮೂರು ಹೆಣ್ಣು ಮಕ್ಕಳನ್ನು ಕೊಟ್ಟನು! ಯೋಬನ ದೈನ್ಯತೆಗೆ ಎಂತಹ ಗೌರವಯುಕ್ತ ಪ್ರತಿಫಲವು! “ಮಾನಕ್ಕೆ ಮುಂಚೆ ದೈನ್ಯ” ಎಂಬದು ಎಷ್ಟು ಸತ್ಯವಾಗಿ ರುಜುವಾಯಿತು!—ಯೋಬ 42:12-15.
ಬೇರೆ ವಿಧದ ಮಾನ
ಅನೇಕ ಬೇರೆ ಬೇರೆ ತರಹದ ಮಾನಗಳು ಅಲ್ಲಿವೆಂಬದು ವ್ಯಕ್ತ—ಸ್ತ್ರೀಯ ಕೂದಲಿನ ಗೌರವದಿಂದ ಹಿಡಿದು ಸೀನಾಯಿ ಬೆಟ್ಟದಿಂದ ಕೆಳಗಿಳಿಯುವಾಗ ಮೋಶೆಯ ಮುಖದ ಮಹಿಮೆಯ ತನಕ. (1 ಕೊರಿಂಥ 11:15; 2 ಕೊರಿಂಥ 3:7) ನಯನ ಮನೋಹರ ಸೂರ್ಯಾಸ್ತಮಾನಗಳ ವೈಭವದ ಮಹಿಮೆ ಒಂದು ವಿಧ, ನಕ್ಷತ್ರಗಳ ಮಹಿಮೆ ಇನ್ನೊಂದು ವಿಧ.—1 ಕೊರಿಂಥ 15:41.
“ಮಾನ” ಎಂಬ ಪದದ ವಿವಿಧ ರೂಪಗಳು ಬೈಬಲಿನಲ್ಲಿ ನೂರಾರು ಬಾರಿ ಉಪಯೋಗಿಸಲ್ಪಟ್ಟಿವೆ. ಈ ನಿರ್ದೇಶನೆಗಳನ್ನು ಮತ್ತು ಅವುಗಳ ಪೂರ್ವಾಪರ ಸಂಬಂಧವನ್ನು ಪರೀಕ್ಷಿಸುವಾಗ, ಸಮಸ್ತ ಮಹಿಮೆಯ ಮೂಲನು ಯೆಹೋವನು ಎಂದು ತಿಳಿದು ಬರುತ್ತದೆ. ಅವನ ನಂಬಿಗಸ್ತ ಸೇವಕರು ಮತ್ತು ಸೃಷ್ಟಿಯ ನಾಯಕಕೃತಿಗಳು ಈ ಮಹಿಮೆಯನ್ನು ಅನೇಕ ವಿಧಗಳಲ್ಲಿ ಮತ್ತು ವಿವಿಧ ಪ್ರಮಾಣದಲ್ಲಿ ಪ್ರತಿಬಿಂಬಿಸಿಯೇ ತೀರುವವು.
ನಮ್ಮ 20ನೇ ಶತಮಾನದಲ್ಲಿ, ಸ್ವರ್ಗೀಯ ಜೀವನದ ಮಹಿಮಾಭರಿತ ನಿರೀಕ್ಷೆ ಇರುವವರಿಂದ ಅನುಭವಿಸಲ್ಪಟ್ಟ ಅವಮಾನಗಳ ಬಹಳಷ್ಟು ರುಜುವಾತುಗಳು ನಮಗಿವೆ. ಒಂದನೇ ಲೋಕ ಯುದ್ಧದ ಸಮಯದಲ್ಲಿ, ನ್ಯೂ ಯೋರ್ಕ್‌ನ ಬ್ರೂಕ್‌ಲಿನ್‌ನ ವಾಚ್‌ಟವರ್ ಸೊಸೈಟಿಯ ಪ್ರಮುಖ ಸದಸ್ಯರು ಸುಳ್ಳಾರೋಪದ ಮೇಲೆ 20 ವರ್ಷಗಳ ಸೆರೆಮನೆ ಶಿಕ್ಷೆಯನ್ನು ಅನುಭವಿಸಿದರು. ಅದೇ ಸಮಯದ ಸುಮಾರಿಗೆ ಅನೇಕ ಸ್ಥಳಗಳಲ್ಲಿ ಹಿಂಸೆಯು ತಲೆದೋರಿತ್ತು. ಉದಾಹರಣೆಗೆ, ಜೆ. ಬಿ. ಸೈಬೆನ್‌ಲಿಸ್ಟ್, ವಾರಂಟ್ ರಹಿತ ಮೂರು ದಿನ ಜೈಲಿನಲಿಡ್ಲಲ್ಪಟ್ಟರು, ಮೂರು ತುಂಡು ಹಳಸು ಜೋಳದ ರೊಟ್ಟಿಯ ಹೊರತು ಊಟರಹಿತವಾಗಿದ್ದರು. ದೊಂಬಿಯು ಅವರನ್ನು ಜೈಲಿನಿಂದ ಹೊರಗೊಯ್ದು, ನಗ್ನಮಾಡಿ, ಬಿಸಿ ರಾಳ ಬಳಿದು, ತುದಿಗೆ ಸರಿಗೆ ಸುತ್ತಿದ್ದ ಗಾಡೀ ಚಾಬೂಕಿದಿಂದ ಹೊಡೆದರು. ಮೊಕದ್ದಮೆಯಲ್ಲಿ ಒಬ್ಬ ಫಿರ್ಯಾದಿ ವಕೀಲನು ಅಂದದ್ದು: “ನಿನ್ನ ಬೈಬಲ್ ಹಾಳಾಗಲಿ. ನಿನ್ನನ್ನು ಬೆನ್ನು ಮುರಿಸಿ ನರಕಕ್ಕೆ ಎಸೆಯಬೇಕು; ನೇತಾಡಿಸಬೇಕು.”
ಎರಡನೇ ಲೋಕ ಯುದ್ಧದಲ್ಲಿ ಕೆಲವು ಯೆಹೋವನ ನಂಬಿಗಸ್ತ ಸಾಕ್ಷಿಗಳು, ನಾಝೀ ಕೂಟಶಿಬಿರಗಳಲ್ಲಿ ನಂಬಲಾಗದಷ್ಟು ಕಷ್ಟವನ್ನು ಅನುಭವಿಸಿದರು. ಅವರಲ್ಲೊಬ್ಬರಾದ ಮಾರ್ಟಿನ್ ಪೊಟ್ಸಿಂಗರ್, ಯೆಹೋವನ ಸಾಕ್ಷಿಗಳ ಆಡಳಿತಾ ಮಂಡಲಿಯ ಸದಸ್ಯರಾಗಲು ಪಾರಾದರು. ಅವರು ಡಚಾವ್ ಶಿಬಿರವನ್ನು “ದೆವ್ವಗಳ ಹುಚ್ಚುಮನೆ” ಎಂದು ವರ್ಣಸಿದ್ದಾರೆ. ಮೌತ್ಯೂಸನ್ ಶಿಬಿರದಲ್ಲಿ “ಗೆಸ್ಟಪೊ ಪೋಲೀಸರು ಯೆಹೋವನಲ್ಲಿ ನಮ್ಮ ನಂಬಿಕೆ ಮುರಿಯುವಂತೆ ಪ್ರೇರಿಸಲು ಪ್ರತಿಯೊಂದು ವಿಧಾನವನ್ನು ಪ್ರಯತ್ನಿಸಿದರು. ಉಪವಾಸ ಪಥ್ಯ, ವಂಚಕ ಮಿತ್ರತ್ವಗಳು, ಕ್ರೌರ್ಯಗಳು, ಒಂದು ಚೌಕಟ್ಟಿನಲ್ಲಿ ದಿನದಿನವೂ ನಿಂತಿರುವಂತೆ ಮಾಡುವುದು, ಮಣಿಕಟ್ಟನ್ನು ಬೆನ್ನಸುತ್ತ ಮುರಿಸಿ ಕಟ್ಟಿ ಹತ್ತಡಿಯ ಕಂಭದಲ್ಲಿ ನೇತಾಡಿಸುವುದು, ಕೊರಡೆಯ ಪೆಟ್ಟುಗಳು—ಇವೆಲ್ಲಾ ಮತ್ತು ಬೇರೆ . . . ವಿಧಾನಗಳು ಪ್ರಯೋಗಿಸಲ್ಪಟ್ಟವು.”
ಈ ನಂಬಿಗಸ್ತ ಕ್ರೈಸ್ತರನ್ನು ಬಲಪಡಿಸಿದ್ದು ಯಾವುದು?
ಅಂಥ ಶೋಚನೀಯ ಮತ್ತು ಹೀನ ಪರಿಸ್ಥಿತಿಗಳ ಕೆಳಗೆ ಅವರು, ತಮಗಿರುವ ಕೊನೆಯ ಪ್ರತಿಫಲದ ನಂಬಿಕೆಯಿಂದಾಗಿ ತಾಳಿಕೊಳ್ಳಲು ಸಹಾಯ ಮಾಡಲ್ಪಟ್ಟರು, ತಮ್ಮ ಸಮಗ್ರತೆಯನ್ನು ಕಾಪಾಡಿ ಕೊಂಡವರಿಗಾಗಿ ಮಹಿಮೆಯುಳ್ಳ ಭವಿಷ್ಯತ್ತೂ ಇದರಲ್ಲಿ ಸೇರಿದೆ. ಅಭಿಷಿಕ್ತ ಉಳಿಕೆಯವರ “ಚಿಕ್ಕ ಹಿಂಡಿಗೆ” ಅದು ಒಂದು ಸ್ವರ್ಗೀಯ ಬಾಧ್ಯತೆಯಾಗಿರುವುದು. (ಲೂಕ 12:32) ಬೇರೆ ನಂಬಿಗಸ್ತ ಮಾನವರಿಗಾಗಿ ಒಂದು ವಿಶೇಷ ತರದ ಭೂ ಬಹುಮಾನವು ಇಡಲ್ಪಟ್ಟಿದೆ. ಅಂಥವರಲ್ಲಿ ಕೆಲವರು, ಯೋಸೇಫ ಮತ್ತು ಮೋಶೆ ಮುಂತಾದವರು, ಇಬ್ರಿಯರಿಗೆ 11ನೇ ಅಧ್ಯಾಯದಲ್ಲಿ ನಿರ್ದೇಶಿಸಲ್ಪಟ್ಟಿದ್ದಾರೆ. ಅದರಲ್ಲಿ 32-40ನೇ ವಚನಗಳನ್ನು ದಯವಿಟ್ಟು ಓದಿರಿ, ಈ ನಂಬಿಗಸ್ತರಲ್ಲಿ ಕೆಲವರು ತಾಳಿಕೊಂಡ ಅವಮಾನಗಳನ್ನು ಧ್ಯಾನಿಸಿರಿ. ಅಷ್ಟಲ್ಲದೆ, ಒಂದು “ಮಹಾ ಸಮೂಹವು” ಇಂದು ಯೆಹೋವನನ್ನು ಸೇವಿಸುತ್ತಾ ಇದೆ. (ಪ್ರಕಟನೆ 7:9, 15) ಅವರ ಭವಿಷ್ಯತ್ತು ಏನು?
ಒಂದು ಸಂಪನ್ನ ಭವಿಷ್ಯವು ಅವರಿಗಾಗಿ ಕಾದಿದೆ. ಯೇಸು ಕ್ರಿಸ್ತನ ಕೆಳಗಿನ ಸ್ವರ್ಗೀಯ ರಾಜ್ಯವು, ಪ್ರಕಟನೆ 20:12ರಲ್ಲಿ ಸೂಚಿತವಾದ ಸುರುಳಿಗಳಲ್ಲಿ ಬರೆಯಲ್ಪಟ್ಟ ಸೂಚನೆಗಳನ್ನು ಅನ್ವಯಿಸುವರೇ ಭೂ ಪ್ರತಿನಿಧಿಗಳನ್ನು ನೇಮಿಸುವುದು. ಅಂಥವರಿಗೂ ಮಾನಯುಕ್ತ ಸುಯೋಗಗಳು ದೊರೆಯುವುವು, ಅರಸರಾಗಿ ಅಲ್ಲ, “ಭೂಮಿಯಲ್ಲೆಲ್ಲಾ ರಾಜಪುತ್ರರಾಗಿ.” ಇವರೊಂದಿಗೆ ಅಸಂಖ್ಯಾತ ದೀನರೂ ನಂಬಿಗಸ್ತರೂ ಆದ ಮಾನವರು, ಪುನರುತ್ಥಾನವಾಗುವವರೂ ಕೂಡಾ, ಮಹಿಮೆಯುಳ್ಳ ಭೂ ಪ್ರಮೋದವನದಲ್ಲಿ ನಿತ್ಯಜೀವವನ್ನು ಪಡೆಯುವರು.—ಕೀರ್ತನೆ 45:16.
ಇಂದು ಲಕ್ಷಾಂತರ ಜನರು ಸುಳ್ಳು ಧರ್ಮವನ್ನು ತ್ಯಜಿಸುವ ಮೂಲಕ ಮತ್ತು ಯೆಹೋವನ ಸಾಕ್ಷಿಗಳ ಮನೆ ಮನೆಯ ಸಾರುವಿಕೆಯಲ್ಲಿ ಸಂತೋಷದಿಂದ ಪಾಲಿಗರಾಗುವ ತಮ್ಮ ದೈನ್ಯತೆಯನ್ನು ತೋರಿಸಿದ್ದಾರೆ. ಇವರಲ್ಲಿ ಅನೇಕರು ತಮ್ಮ ಕುಟುಂಬ ಸದಸ್ಯರಿಂದ ಮತ್ತು ಮಿತ್ರರಿಂದ ನಿಂದಿಸಲ್ಪಡುತ್ತಿದ್ದಾರೆ ಆದರೂ, ಅವರು ಸತ್ಯಾರಾಧನೆಗೆ ಬಲವಾಗಿ ಅಂಟಿರುತ್ತಾರೆ. ಸತ್ಯ ದೇವರಾದ ಯೆಹೋವನನ್ನು ಸೇವಿಸಲಿಕ್ಕಾಗಿ ತಿದ್ದುಪಾಟನ್ನು ಮತ್ತು ಶಿಸ್ತನ್ನು ಅವರು ದೀನತೆಯಿಂದ ಸ್ವೀಕರಿಸಿದ್ದಾರೆ. ಅವರ ನಿರೀಕ್ಷೆಯು ಪುನಃಸ್ಥಾಪಿತ ಪ್ರಮೋದವನದಲ್ಲಿ ಜೀವಿಸುವುದೇ. ಆಗ, “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಮಹಿಮೆಯ ಜ್ಞಾನವು ತುಂಬಿಕೊಂಡಿರುವುದು.”—ಹಬಕ್ಕೂಕ 2:14.
ಈ ದಿನಗಳು ಯೆಹೋವನ ಜನರಿಗೆ ಪರೀಕ್ಷೆಯ ದಿನಗಳಾಗಿವೆ. ಒಂದು ಪರದೇಶದಲ್ಲಿರುವ ಪರವಾಸಿಗಳೋ ಎಂಬಂತೆ ನಾವಿದ್ದೇವೆ. ಸುಳ್ಳು ಭಕ್ತಿ ಮತ್ತು ಸತ್ಯಾರಾಧನೆಯ ನಡುವಣ ಕಂದಕವು ಆಳವಾಗಿಯೂ ಅಗಲವಾಗಿಯೂ ಹೋಗುತ್ತಾ ಇದೆ. ನಾವೆಲ್ಲರೂ ಸ್ವಲ್ಪ ಪ್ರಮಾಣದಲ್ಲಿ ಅವಮಾನವನ್ನೂ ಸಹಿಸುತ್ತಿದ್ದೇವೆ. ಆದರೆ, ತನ್ನ ಮುಂದಿದ್ದ ಸಂತೋಷದ ಪ್ರತಿಫಲದಿಂದಾಗಿ ಯೇಸು ಹೇಗೆ ಸಾಂತ್ವನವನ್ನೂ ಬಲವನ್ನೂ ಹೊಂದಿದನೋ ಹಾಗೆಯೇ ನಾವು ಸಹಾ, ಕೊನೆಗೆ ಸಿಗುವ ಪ್ರತಿಫಲವನ್ನು ನೆನಸಿಕೊಂಡು ಪರೀಕ್ಷೆಗಳನ್ನು ಪರಿಹರಿಸಿಕೊಳ್ಳಬಲ್ಲೆವು.
ಬೈಬಲು ನಮಗೆ ಸೂಚಿಸುವುದು: “ಯೆಹೋವನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗಲಾತನು ನಿಮ್ಮನ್ನು ಮೇಲಕ್ಕೆ ತರುವನು.” (ಯಾಕೋಬ 4:10) ನೀವೊಂದು ಕಠಿಣವಾದ ಪರೀಕೆಗ್ಷೆ ಒಳಗಾದಾಗಲ್ಲೆಲ್ಲಾ, ಈ ಮಾತುಗಳನ್ನು ನೆನಪಿಗೆ ತನ್ನಿರಿ: “ಮಾನಕ್ಕೆ ಮುಂಚೆ ದೈನ್ಯ.” ಇದನ್ನೂ ನೆನಪಿನಲ್ಲಿಡಿರಿ ಏನೆಂದರೆ, ಯೆಹೋವನೆಂದೂ ಕೈಬಿಡಲಾರನು! (w89 6/15)