ವಾಚ್ಟವರ್ ಎಡ್ಯುಕೇಷನಲ್ ಸೆಂಟರ್ ಮಿಷನೆರಿಗಳನ್ನು ಕಳುಹಿಸುತ್ತದೆ
ದ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ ವಿವಿಧ ಸ್ಥಳಗಳಲ್ಲಿ ತರಗತಿಗಳನ್ನು ನಡೆಸಿದೆ. 1943 ಮತ್ತು 1960ರ ಮಧ್ಯೆ, ಅಮೆರಿಕದ ನ್ಯೂ ಯಾರ್ಕ್ನ ಸೌತ್ ಲ್ಯಾನ್ಸಿಂಗ್ನಲ್ಲಿರುವ ಸೌಕರ್ಯಗಳಲ್ಲಿ, 95 ದೇಶಗಳ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ 35 ತರಗತಿಗಳು ವಿಶೇಷ ತರಬೇತನ್ನು ಪಡೆದವು. ಬಳಿಕ ಆ ಶಾಲೆಯು ನ್ಯೂ ಯಾರ್ಕ್ನ, ಬ್ರೂಕ್ಲಿನ್ನಲ್ಲಿರುವ ಜಾಗತಿಕ ಮುಖ್ಯ ಕಾರ್ಯಾಲಯಕ್ಕೆ ಸ್ಥಳಾಂತರಿಸಲ್ಪಟ್ಟಿತು. ಅಲ್ಲಿ ಅದು ಸುಮಾರು 28 ವರ್ಷಗಳ ವರೆಗೆ ಕಾರ್ಯನಡೆಸಿತು. 1988ರಿಂದ ಹಿಡಿದು 1995ರ ಆದಿ ಭಾಗದ ತನಕ ಗಿಲ್ಯಡ್ ಶಾಲೆಯು ನ್ಯೂ ಯಾರ್ಕ್ನ ವಾಲ್ಕಿಲ್ನಲ್ಲಿ ತನ್ನ ತರಗತಿಗಳನ್ನು ನಡೆಸಿತು.
ಈ ವರುಷಗಳಲ್ಲಿ ಶಾಲೆಯು ತನ್ನ ಕಾರ್ಯಾಚರಣೆಗಳ ವ್ಯಾಪ್ತಿಯನ್ನು ಇನ್ನೂ ಹೆಚ್ಚಿಸಿದೆ. ಅದರ ಮಾರ್ಗದರ್ಶನೆಯಲ್ಲಿ ಒಂದು ಹತ್ತು ವಾರಗಳ ಶಿಕ್ಷಣ ಕ್ರಮವನ್ನು ಮೆಕ್ಸಿಕೊದಲ್ಲಿ ಮೂರು ತರಗತಿಗಳಿಗೆ; ಜರ್ಮನಿಯಲ್ಲಿ ಐದು ತರಗತಿಗಳಿಗೆ; ಮತ್ತು ಭಾರತದಲ್ಲಿ ಎರಡು ತರಗತಿಗಳಿಗೆ ಒದಗಿಸಲಾಯಿತು. 1987ರಿಂದ ಮಿನಿಸ್ಟೀರಿಯಲ್ ಟ್ರೇನಿಂಗ್ ಸ್ಕೂಲ್ ಎಂದು ವಿದಿತವಾಗಿರುವ ಸಹಾಯಕ ಶಾಲೆಯು, ಎಂಟು ವಾರಗಳ ಒಂದು ವಿಶೇಷ ತರಬೇತು ಪಾಠಕ್ರಮವನ್ನು ಅರ್ಹತೆಯುಳ್ಳ ಯುವಕರಿಗೆ ಒದಗಿಸುತ್ತಾ, 34 ದೇಶಗಳಲ್ಲಿ ತರಗತಿಗಳನ್ನು ನಡೆಸಿತು. ನ್ಯೂ ಯಾರ್ಕ್ನ ಪ್ಯಾಟರ್ಸನ್ನಲ್ಲಿ ಹೊಸದಾಗಿ ರಚಿಸಿದ ವಾಚ್ಟವರ್ ಎಡ್ಯುಕೇಷನಲ್ ಸೆಂಟರ್ನಲ್ಲಿ ಗಿಲ್ಯಡ್ನ 99ನೆಯ ತರಗತಿಗೆ ಕೊಡಲಾದ ಶಿಕ್ಷಣವು, 20 ವಾರಗಳ ಒಂದು ಪಾಠಕ್ರಮವಾಗಿದ್ದು ಅದರಲ್ಲಿ ಪೂರ್ತಿ ಬೈಬಲಿನ ವ್ಯಾಪಕವಾದ ಅಧ್ಯಯನ, ಯೆಹೋವನ ಸಾಕ್ಷಿಗಳ ಆಧುನಿಕ ದಿನದ ಇತಿಹಾಸ ಮತ್ತು ಸಂಸ್ಥೆಯ ಕುರಿತಾದ ಒಂದು ಚರ್ಚೆ ಹಾಗೂ ವಿದೇಶೀ ಮಿಷನೆರಿ ಕೆಲಸದ ಕುರಿತಾದ ವಿಸ್ತೃತ ಬುದ್ಧಿವಾದವು ಸೇರಿತ್ತು.
ಸೆಪ್ಟೆಂಬರ್ 2ರಂದು, 99ನೆಯ ತರಗತಿಯು ಪದವಿ ಪಡೆಯಿತು. ಪದವಿ ಪ್ರಾಪ್ತಿಯ ಮೂರು ತಾಸುಗಳ ಕಾರ್ಯಕ್ರಮವು ವಾಚ್ಟವರ್ ಎಡ್ಯುಕೇಷನಲ್ ಸೆಂಟರ್ನ ಹೊಸ ಸಭಾಗೃಹದಲ್ಲಿ ಜರುಗಿತು. ಅದು ಪೂರ್ತಿ ತುಂಬಿತ್ತು. ಪ್ಯಾಟರ್ಸನ್, ವಾಲ್ಕಿಲ್ ಮತ್ತು ಬ್ರೂಕ್ಲಿನ್ನ ಬೆತೆಲ್ ಸೌಕರ್ಯಗಳಲ್ಲಿದ್ದ ಹೆಚ್ಚಿನ ಶ್ರೋತೃ ವರ್ಗಗಳು ಇಲೆಕ್ಟಾನ್ರಿಕ್ ಸಲಕರಣೆಗಳ ಮೂಲಕ ಜೋಡಿಸಲ್ಪಟ್ಟಿದ್ದವು. ಅವರ ಸಂಬಂಧಿಕರು ಮತ್ತು ಆಪ್ತ ಮಿತ್ರರನ್ನೊಳಗೊಂಡಿದ್ದ ಪದವಿ ಪಡೆಯುತ್ತಿರುವ ತರಗತಿಯವರಿಗೆ ಮಾತ್ರವಲ್ಲ, ಸೊಗಸಾದ ಹೊಸ ಶಾಲಾ ಸೌಕರ್ಯಗಳನ್ನು ಕಟ್ಟುವುದರಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದ್ದ ನೂರಾರು ಮಂದಿಗೆ ಸಹ, ಇದೊಂದು ಸಡಗರದ ದಿವಸವಾಗಿತ್ತು.
ತಮ್ಮ ಪೀಠಿಕೆಯ ಹೇಳಿಕೆಗಳಲ್ಲಿ, ಆಡಳಿತ ಮಂಡಲಿಯ ಕ್ಯಾರಿ ಬಾರ್ಬರ್, ಏನು ನಡೆಯುತ್ತಿದೆಯೊ ಅದರ ವೈಶಿಷ್ಟ್ಯಕ್ಕೆ ಗಮನವನ್ನು ಕೇಂದ್ರೀಕರಿಸಿದರು. ಅವರು ಹೇಳಿದ್ದು: “ಭೂಮಿಯ ಮೇಲೆ ಇದುವರೆಗೆ ಮುಂದುವರಿಸಲ್ಪಟ್ಟಿರುವ ಅತ್ಯಂತ ಮಹಾ ದೈವಿಕ ಶಿಕ್ಷಣ ಚಟುವಟಿಕೆಯ ಕೇಂದ್ರಸ್ಥಾನವು ಇದಾಗಲಿದೆ.” ಸ್ತ್ರೀಯ ಸಂತಾನ ಮತ್ತು ಸರ್ಪದ ಸಂತಾನದ ಮಧ್ಯೆ ನಡೆಯುತ್ತಿರುವ ಯುದ್ಧದ ಪರಾಕಾಷ್ಠೆಯನ್ನು ನಾವು ಸಮೀಪಿಸುತ್ತಿದ್ದೇವೆಂದು ಅವರು ವಿವರಿಸಿದರು. (ಆದಿಕಾಂಡ 3:15) ಬರುತ್ತಿರುವ ಮಹಾ ಸಂಕಟದಲ್ಲಿ ಆ ಭಯಂಕರ ಮುಕಾಬಿಲೆಯನ್ನು ಪಾರಾಗುವವರು ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವಿದ್ದು ಅದಕ್ಕೆ ವಿಧೇಯರಾಗಿರುವವರು ಮಾತ್ರವೆಂದು ಅವರು ತೋರಿಸಿದರು.
“ನಮ್ಮ ಪ್ರಸಕ್ತ ಶೈಕ್ಷಣಿಕ ಕಾರ್ಯಕ್ರಮವು,” ಅವರಂದದ್ದು, “ಎಲ್ಲೆಲ್ಲಿಯೂ ಇರುವ ಯೆಹೋವನ ಜನರನ್ನು ಜ್ಞಾನೋಕ್ತಿ 1:1-4ರಲ್ಲಿ ವರ್ಣಿಸಿರುವಂತೆ, ಪ್ರೌಢತೆಯ—ವಿವೇಕ ಮತ್ತು ಶಿಸ್ತನ್ನು ತಿಳಿಯುವ, ತಿಳಿವಳಿಕೆಯನ್ನು ವಿವೇಚಿಸಲು ಶಕ್ತರಾಗುವ, ಯಾವುದು ಅಂತರ್ದೃಷ್ಟಿ, ನೀತಿ, ತೀರ್ಮಾನ ಶಕ್ತಿ, ಪ್ರಾಮಾಣಿಕತೆ ಮತ್ತು ಯೋಚನಾ ಸಾಮರ್ಥ್ಯವನ್ನು ಕೊಡುತ್ತದೊ, ಆ ಶಿಸ್ತನ್ನು ಪಡೆಯುವ—ಉತ್ತಮ ಸ್ಥಿತಿಗೆ ತರುವಂತೆ ವಿನ್ಯಾಸಿಸಲ್ಪಟ್ಟಿದೆ. ಇಂತಹ ಆತ್ಮಿಕ ಸಂಪನ್ಮೂಲಗಳನ್ನು ಹೊಂದಿರುವುದು ಎಂತಹ ಒಂದು ರಕ್ಷಣೋಪಾಯವಾಗಿದೆ!
ಪದವಿ ಪಡೆಯುತ್ತಿದ್ದ ತರಗತಿಗೆ ಸಲಹೆ
ಆ ಪೀಠಿಕಾರೂಪದ ಹೇಳಿಕೆಗಳನ್ನು ಪದವಿ ಪಡೆಯುತ್ತಿದ್ದ ತರಗತಿಗೆ ಸಂಬೋಧಿಸಿದ ಐದು ಸಂಕ್ಷೇಪವಾದ ಭಾಷಣಗಳು ಅನುಸರಿಸಿದವು. ಮಾಜಿ ಗಿಲ್ಯಡ್ ಶಿಕ್ಷಕರಾಗಿದ್ದ ಮತ್ತು ಈಗ ಬ್ರೂಕ್ಲಿನ್ನ ಮುಖ್ಯ ಕಾರ್ಯಾಲಯದ ಸಿಬ್ಬಂದಿಯ ಒಬ್ಬ ಸದಸ್ಯರಾದ ಹ್ಯಾರಲ್ಡ್ ಜ್ಯಾಕ್ಸನ್, “ನಿಮ್ಮ ದಿವ್ಯ ತೃಪ್ತಿಯನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ,” ಎಂದು ತರಗತಿಯನ್ನು ಪ್ರೋತ್ಸಾಹಿಸಿದರು. ಬಹುಕಾಲದಿಂದ ಮಿಷನೆರಿಯಾಗಿದ್ದ ಮತ್ತು ಈಗ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿರುವ ಲಾಯ್ಡ್ ಬ್ಯಾರಿ, “ಯೆಹೋವನನ್ನು ದೈನ್ಯದಿಂದ ಸೇವಿಸುವುದು,” ಎಂಬ ವಿಷಯದ ಮೇಲೆ ಮಾತಾಡಿದರು. ಈ ಗುಣವು ಪದವೀಧರರಿಗೆ, ತಮ್ಮ ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದರಲ್ಲಿ ಹಾಗೂ ಜೊತೆ ಮಿಷನೆರಿಗಳೊಂದಿಗಿನ, ತಾವು ಸೇವೆಮಾಡುವ ಸಭೆಗಳೊಂದಿಗಿನ ಮತ್ತು ಸ್ಥಳಿಕ ಜನರೊಂದಿಗಿನ ತಮ್ಮ ಸಂಬಂಧಗಳಲ್ಲಿ ಪ್ರಾಮುಖ್ಯವಾಗಿರುವುದೆಂದು ಅವರು ವಿವರಿಸಿದರು.
ಪ್ರಸ್ತುತವಾಗಿ ಗಿಲ್ಯಡ್ ಶಿಕ್ಷಣ ವಿಭಾಗದಲ್ಲಿ ಸೇವೆಮಾಡುತ್ತಿರುವ ಕಾರ್ಲ್ ಆ್ಯಡಮ್ಸ್, “ನಂಬಿಕೆಯು ಏನು ಮಾಡುವಂತೆ ನಿಮ್ಮನ್ನು ನಡೆಸುವುದು?” ಎಂಬ ಪ್ರಶ್ನೆಯ ಕುರಿತಾಗಿ ತರಗತಿಯೊಂದಿಗೆ ತರ್ಕಿಸಿದರು. ಅರಣ್ಯದಲ್ಲಿ ತಮ್ಮ ಸ್ಥಿತಿಗಳ ಕುರಿತು ಗೊಣಗಿ ತಾವು ಹಿಂದೆ ಐಗುಪ್ತದಲ್ಲಿರಲು ಹಾತೊರೆದ ಇಸ್ರಾಯೇಲ್ಯರಂತಿರದೆ, ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಕಲ್ದೀಯರ ಊರ್ ಪಟ್ಟಣಕ್ಕೆ ಹಿಂದಿರುಗದೆ ದೇವರ ರಾಜ್ಯದೆಡೆಗೆ ನೋಡಿದ ಅಬ್ರಹಾಮನಂತಿರಬೇಕೆಂದು ಅವರು ಪ್ರೋತ್ಸಾಹಿಸಿದರು. (ವಿಮೋಚನಕಾಂಡ 16:2, 3; ಇಬ್ರಿಯ 11:10, 15, 16) ಶಾಲೆಯ ರೆಜಿಸ್ಟ್ರಾರ್, ಯುಲಿಸೀಸ್ ಗ್ಲಾಸ್, ಕೀರ್ತನೆ 73ರಲ್ಲಿ ದಾಖಲಿಸಲ್ಪಟ್ಟಿರುವ ಆಸಾಫನ ಅನುಭವವನ್ನು, “ನಿಮ್ಮ ಆಶೀರ್ವಾದಗಳನ್ನು ಮತ್ತೊಮ್ಮೆ ಎಣಿಸಿರಿ,” ಎಂದು ಪದವಿ ಪಡೆಯುತ್ತಿದ್ದ ತರಗತಿಗೆ ಬುದ್ಧಿಹೇಳಲು ಉಪಯೋಗಿಸಿದರು. ಮತ್ತು ಆಡಳಿತ ಮಂಡಲಿಯ ಟೀಚಿಂಗ್ ಕಮಿಟಿಯ ಒಬ್ಬ ಸದಸ್ಯರಾದ ಆಲ್ಬರ್ಟ್ ಶ್ರೋಡರ್, “ಯೆಹೋವನು ಒದಗಿಸುತ್ತಾನೆ” ಎಂಬ ಮುಖ್ಯ ವಿಷಯದ ಮೇಲೆ ಮಾತನಾಡಿದರು. ಇಂತಹ ಮುನ್ನೇರ್ಪಾಡಿನ ಸಾಕ್ಷ್ಯವಾಗಿ ಅವರು ಸ್ವತಃ ಗಿಲ್ಯಡ್ ಶಾಲೆಯನ್ನು ಮತ್ತು ಮಹಾ ಸಾರುವ ಕಾರ್ಯವನ್ನು ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಪೂರೈಸುವುದರಲ್ಲಿನ ಅದರ ಪಾತ್ರವನ್ನು ಸೂಚಿಸಿ ಹೇಳಿದರು.
ತರುವಾಯ, ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾದ ಮಿಲ್ಟನ್ ಹೆನ್ಶೆಲ್, “ಒಬ್ಬರಿಗೊಬ್ಬರು ಸೇರಿರುವ ಸದಸ್ಯರು,” ಎಂಬುದರ ಕುರಿತು ಮಾತಾಡಿದಾಗ ಸಭಿಕರು ತೀವ್ರಾಸಕಿಯ್ತಿಂದ ಕಿವಿಗೊಟ್ಟರು. ಅವರು ರೋಮಾಪುರ 12ನೆಯ ಅಧ್ಯಾಯವನ್ನು ಓದಿ ಸವಿಸ್ತಾರವಾಗಿ ವ್ಯಾಖ್ಯಾನಿಸಿದರು. ಇತರ ವಿಷಯಗಳೊಂದಿಗೆ, ಅವರು ಹೇಳಿದ್ದು: “ಸಭೆಯಲ್ಲಿನ ನಮ್ಮ ಜೊತೆ ಸೇವಕರೊಂದಿಗೆ ನಮಗೆ ಅತ್ಯಾಪ್ತ ಸಂಬಂಧವಿದೆಯೆಂಬುದನ್ನು ನಾವು ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ.” ಅವರು ಕೂಡಿಸಿದ್ದು: “ನಾವು ಯಾವಾಗಲೂ ಒಬ್ಬರು ಇನ್ನೊಬ್ಬರನ್ನು ಯೆಹೋವನ ಸ್ವತ್ತೆಂದು ಯೋಚಿಸುವುದು ಉತ್ತಮ, ಮತ್ತು ಟೀಕಿಸುವವರಾಗಿರುವ ಬದಲಿಗೆ, ತಪ್ಪು ಹುಡುಕುವವರಾಗಿರುವ ಬದಲಿಗೆ, ನಾವು ಸದಾ ಸಹಾಯಕರಾಗಿರೋಣ. ನಾವು ಕ್ರೈಸ್ತ ಸಭೆಯ ಆತ್ಮಿಕ ಐಕ್ಯವನ್ನು ಕಾಪಾಡುವಾಗ, ನಮಗೆ ನಾವೇ ಸಹಾಯ ಮಾಡುತ್ತಿದ್ದೇವೆ.” ಮಿಷನೆರಿ ಗೃಹಗಳಲ್ಲಿ ಆಹಾರ ತಯಾರಿಸುವಾಗ, ಎಲ್ಲರೂ ಒಂದೇ ಆಹಾರವನ್ನು ತಿನ್ನಶಕ್ತರಾಗದೆ ಇರಬಹುದು ಎಂಬುದನ್ನು ಗಣನೆಗೆ ತೆಗೆದುಕೊಂಡು, ಇಂತಹ ಸಹಾಯಶೀಲತೆಯನ್ನು ಪ್ರದರ್ಶಿಸಸಾಧ್ಯವಿದೆಯೆಂದು ಅವರು ತೋರಿಸಿದರು. ಬಡವರಾದ ಜೊತೆಕ್ರೈಸ್ತರೊಂದಿಗೆ ಕ್ಷೇತ್ರಸೇವೆಯಲ್ಲಿ ಭಾಗವಹಿಸುವಾಗ ಟೀಕೆಯ ಬದಲಿಗೆ ಸಹಾಯಶೀಲತೆಯನ್ನು ಸಹ ಅವರು ಪ್ರೋತ್ಸಾಹಿಸಿದರು. ನಾವು ಒಬ್ಬರಿಗೊಬ್ಬರು ನಿಜವಾಗಿಯೂ ಸಹಾಯಕರೂ, ಭಕ್ತಿವರ್ಧಕರೂ, ಮತ್ತು ಪ್ರೋತ್ಸಾಹಕರೂ ಆಗಿರುವುದಾದರೆ, ಯೆಹೋವನು ಇದಕ್ಕಾಗಿ ನಮ್ಮನ್ನು ಪ್ರೀತಿಸುವನು,” ಎಂದು ಸಹೋದರ ಹೆನ್ಶೆಲ್ ಸೂಚಿಸಿದರು. ಯಾರು ತಾವು ಬಿಟ್ಟುಹೋಗುತ್ತಿರುವ ದೇಶಗಳಿಗಿಂತ ತೀರ ಭಿನ್ನವಾಗಿರುವ ದೇಶಗಳಲ್ಲಿ ಸೇವೆ ಮಾಡಲಿಕ್ಕಿದ್ದಾರೊ, ಆ ಮಿಷನೆರಿಗಳಿಗೆ ಎಷ್ಟು ಉತ್ಕೃಷ್ಟವಾದ ಬುದ್ಧಿವಾದವಿದು!
ತರಗತಿಯ ಹೆಚ್ಚಿನ ಪರಿಚಯ ಮಾಡಿಕೊಳ್ಳುವುದು
99ನೆಯ ತರಗತಿಯ 48 ವಿದ್ಯಾರ್ಥಿಗಳು, ಸರಾಸರಿ 32 ವರ್ಷ ಪ್ರಾಯದವರಾಗಿದ್ದು, ಪೂರ್ಣ ಸಮಯದ ಶುಶ್ರೂಷೆಗೆ ಈಗಾಗಲೇ 11ಕ್ಕೂ ಹೆಚ್ಚು ವರ್ಷಗಳನ್ನು ಅರ್ಪಿಸಿರುತ್ತಾರೆ.
ಪದವಿ ಪ್ರಾಪ್ತಿಯ ಕಾರ್ಯಕ್ರಮದ ಭಾಗವಾಗಿದ್ದ ಸಂದರ್ಶನಗಳು, ಸಭಿಕರಿಗೆ ಅವರಲ್ಲಿ ಕೆಲವರ ಪರಿಚಯವನ್ನು ಮಾಡಿಕೊಳ್ಳುವ ಸಂದರ್ಭವನ್ನು ಕೊಟ್ಟವು. ಅಮೆರಿಕದ ನಿಕಿ ಲೀಬ್ಲ್ ಮತ್ತು ಇಂಗ್ಲೆಂಡ್ನ ಸೈಮನ್ ಬೋಲ್ಟನ್ ಇವರು ತಮ್ಮ ಶಾರೀರಿಕ ಆವಶ್ಯಕತೆಗಳನ್ನು ಯೆಹೋವನು ಪೂರೈಸುವನೆಂಬ ನಂಬಿಕೆಯನ್ನು ಪರೀಕ್ಷಿಸಿದ ಪ್ರಸಂಗಗಳ ಕುರಿತು ಹೇಳಿದರು. ಅವರು ಪೂರ್ಣ ಸಮಯದ ಶುಶ್ರೂಷೆಯನ್ನು ಪ್ರಥಮ ಸ್ಥಾನದಲ್ಲಿಟ್ಟಾಗ ಯೆಹೋವನ ಪರಾಮರಿಕೆಯನ್ನು ಅನುಭವಿಸಿದ್ದರು.
ದೇಶಭಾಷೆ ಫ್ರೆಂಚ್ ಆಗಿರುವ ಈಸಾಬೆಲ್ ಕಾಸಾನ್, ತನ್ನ ಸ್ವದೇಶದಲ್ಲಿ ಆ್ಯರಬಿಕ್ ಮಾತಾಡುವ ಜನರಿಗೆ ಸಾಕ್ಷಿ ನೀಡಲಿಕ್ಕಾಗಿ ಆ್ಯರಬಿಕ್ ಭಾಷೆಯನ್ನು ಕಲಿತೆನೆಂದು ಹೇಳಿದಳು. 1987ರಲ್ಲಿ ಆಕೆ ಆರಂಭಿಸಿದಾಗ, ಪ್ಯಾರಿಸ್ನ ಒಂದು ಸಣ್ಣ ಗುಂಪಿನಲ್ಲಿ ಆಕೆ ಮತ್ತು ಭಾಷೆಯನ್ನು ಕಲಿಯುತ್ತಿದ್ದ ಇನ್ನೊಬ್ಬ ಸಹೋದರಿಗೆ ಕೂಡಿಸಲ್ಪಟ್ಟು, ಕೇವಲ ನಾಲ್ವರು ಆ್ಯರಬಿಕ್ ಮಾತಾಡುವ ಸಹೋದರರಿದ್ದರು. (ಅದು ಸುಲಭವಾಗಿರಲಿಲ್ಲ. ಹೇಳಿಕೆಗಳನ್ನು ಮಾಡಶಕ್ತರಾಗಲು ಪ್ರತಿ ವಾರ ತಮ್ಮ ಕಾವಲಿನಬುರುಜು ಪಾಠವನ್ನು ತಯಾರಿಸುವುದರಲ್ಲಿ ಎಂಟು ತಾಸುಗಳನ್ನು ಅವರು ಕಳೆಯುತ್ತಿದ್ದರು.) ಆ ಪ್ರಯತ್ನ ಉಪಯುಕ್ತವಾಗಿತ್ತೊ? ಹೌದು, ಇಂದು ಫ್ರಾನ್ಸ್ನಲ್ಲೆಲ್ಲ ಐದು ಸರ್ಕಿಟ್ಗಳಾಗಿ ಸಂಘಟಿಸಲ್ಪಟ್ಟಿರುವ ಆ್ಯರಬಿಕ್ ಮಾತಾಡುವ ಸಾಕ್ಷಿಗಳಿದ್ದಾರೆ. ತಾನು ಶಾಲೆಯಲ್ಲಿ ಕಲಿತಿದ್ದ ಫ್ರೆಂಚ್ ಭಾಷೆ, ತನ್ನ ಸ್ವದೇಶವಾದ ಫಿನ್ಲೆಂಡ್ನಲ್ಲಿನ ಆಫ್ರಿಕನ್ ನಿರಾಶ್ರಿತರಿಗೆ ಸಾರಲು ತನ್ನನ್ನು ಹೇಗೆ ಶಕ್ತನನ್ನಾಗಿ ಮಾಡಿತೆಂದು ಮತ್ತು ತನ್ನ ಮಿಷನೆರಿ ನೇಮಕ ದೇಶವಾದ ಬೆನಿನ್ನಲ್ಲಿಯೂ ಅದು ಬೆಲೆಯುಳ್ಳದ್ದಾಗಿರುವುದೆಂದು ಇನ್ನೊಬ್ಬ ವಿದ್ಯಾರ್ಥಿ, ಮೀಕೋ ಪೂರೋ ಹೇಳಿದನು. ಕೆನಡದ ಕ್ವಿಬೆಕ್ನಲ್ಲಿ ಪರಿಣಾಮಕಾರಿಯಾಗಿ ಸೇವೆ ಮಾಡಸಾಧ್ಯವಾಗುವಂತೆ, ಫ್ರೆಂಚ್ ಭಾಷೆಯನ್ನು ಸರಾಗವಾಗಿ ಮಾತಾಡಲಿಕ್ಕಾಗಿ ಮಾಡಿದ ತನ್ನ ಹೋರಾಟವನ್ನು ಬಾನೀ ಬೋಸ್ ವಿವರಿಸಿದಳು. ಮತ್ತು ಡೆನ್ಮಾರ್ಕ್ನ ಬ್ಯಾರ್ಕೀ ರಾಸ್ಮುಸನ್, ತಾನೂ ತನ್ನ ಹೆಂಡತಿಯೂ ಫೆಅರೊ ದ್ವೀಪಗಳಲ್ಲಿ ಅನೇಕ ವರ್ಷಗಳ ಸೇವೆಯಲ್ಲಿದ್ದಾಗ ತಮಗೆ ಆಗಲೇ ಆಗಿದ್ದ ಅನುಭವಗಳನ್ನು ವಿವರಿಸಿದನು. ಹೌದು, ಈ ಹೊಸ ಮಿಷನೆರಿಗಳು ಪಳಗಿದ ಪೂರ್ಣ ಸಮಯದ ಶುಶ್ರೂಷಕರಾಗಿದ್ದಾರೆ.
ಪದವೀಧರರು 19 ದೇಶ—ಆಫ್ರಿಕ, ಮಧ್ಯ ಮತ್ತು ದಕ್ಷಿಣ ಅಮೆರಿಕ, ಪೂರ್ವ ಯೂರೋಪ್ ಮತ್ತು ಪ್ರಾಚ್ಯ—ಗಳಿಗೆ ನೇಮಿಸಲ್ಪಟ್ಟಿದ್ದರು. ಹಿಂದಿನ ತರಗತಿಗಳ ಪದವೀಧರರು ಈಗಾಗಲೇ 200ಕ್ಕೂ ಹೆಚ್ಚು ದೇಶಗಳಲ್ಲಿ ಸೇವೆಮಾಡಿದ್ದಾರೆ. ಅವರಲ್ಲಿ ಅನೇಕ ಪದವೀಧರರು ತಮ್ಮ ನೇಮಕಗಳಲ್ಲಿ ಇನ್ನೂ ಕಾರ್ಯಮಗ್ನರಾಗಿದ್ದಾರೆ. ಈ ಹೊಸ ಮಿಷನೆರಿಗಳು ಈಗ, ಲೋಕದ ಕೊನೆಗಳಿಗೆ ರಾಜ್ಯ ಸಾಕ್ಷಿಯನ್ನು ಇನ್ನೂ ವಿಸ್ತರಿಸಲಿಕ್ಕಾಗಿ ಅವರ ಜೊತೆಗೂಡುತ್ತಿದ್ದಾರೆ.—ಅ. ಕೃತ್ಯಗಳು 1:8.
[ಪುಟ 25 ರಲ್ಲಿರುವ ಚಿತ್ರಗಳು]
ವಾಚ್ಟವರ್ ಎಡ್ಯುಕೇಷನಲ್ ಸೆಂಟರ್ನಲ್ಲಿ ತರಗತಿಕೋಣೆಯ ದೃಶ್ಯಗಳು
[ಪುಟ 26 ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ ಪದವಿ ಪ್ರಾಪ್ತಿಯಾಗುತ್ತಿರುವ 99ನೆಯ ತರಗತಿ
ಕೆಳಗಿನ ಪಟ್ಟಿಯಲ್ಲಿ ಸಾಲುಗಳನ್ನು ಮುಂದಿನಿಂದ ಹಿಂದಕ್ಕೆ ಲೆಕ್ಕಿಸಲಾಗಿದ್ದು, ಹೆಸರುಗಳು ಪ್ರತಿ ಸಾಲಿನಲ್ಲಿ ಎಡದಿಂದ ಬಲಕ್ಕೆ ಕೊಡಲ್ಪಟ್ಟಿವೆ.
(1) ಹೆಫಿ, ಎಸ್.; ರೈಲಿ, ಈ.; ಮಾರ್ಟನ್ಸನ್, ಡಿ.; ಆನಬ್ಲ್, ಏ.; ಬೋಲ್ಟನ್, ಜೆ.; ಪೂಲ್, ಜೆ.; ಸೀಮಸ್ ಜಿ.; ಸೋಸ, ಎಲ್. (2) ಪಾಶ್ನಿಟ್ಸ್ಕೀ, ಬಿ.; ಶೆಪರ್ಡ್, ಡಿ.; ಪಾಶ್ನಿಟ್ಸ್ಕೀ, ಡಬ್ಲ್ಯೂ.; ಯಾರ್ವಿನನ್, ಜೆ.; ಪಾಲ್ಸನ್, ಕೆ.; ರಾಸ್ಮುಸನ್, ಈ.; ಶೆವ್ವೆ, ಸಿ.; ಓಲ್ಸನ್, ಎಲ್. (3) ಪಾಲ್ಸನ್, ಈ.; ಸ್ಯಾಮ್ಸಲ್, ಟಿ.; ಬೋಸ್, ಬಿ.; ಹ್ಯಾರಿಸ್, ಈ.; ಕಾಸಾನ್, ಐ.; ಲೀಬ್ಲ್, ಎನ್.; ಸೋಸ, ಪಿ.; ಪೂರೋ, ಜೆ. (4) ಲಾಗರ್, ಕೆ.; ಲಾಗರ್, ವಿ.; ಗೋಲ್ಡನ್, ಕೆ.; ಬೋಲ್ಟನ್, ಎಸ್.; ಜಾನ್ಸನ್, ಎಮ್.; ಜಾನ್ಸನ್, ಎಸ್.; ಲೀಬ್ಲ್, ಏ.; ರಾಸ್ಮುಸನ್, ಬಿ. (5) ಹ್ಯಾರಿಸ್, ಡಿ.; ಸ್ಯಾಮ್ಸಲ್, ಡಬ್ಲ್ಯೂ.; ಶೆವ್ವೆ, ಓ.; ಹೆಫಿ, ಆರ್.; ಕಾಸಾನ್, ಎಲ್.; ರೈಲಿ, ಟಿ.; ಯಾರ್ವಿನನ್, ಓ.; ಪೂರೋ, ಎಮ್. (6) ಮಾರ್ಟನ್ಸನ್, ಡಿ.; ಗೋಲ್ಡನ್, ಆರ್.; ಆನಬ್ಲ್, ಎಲ್.; ಶೆಪರ್ಡ್, ಎಮ್.; ಬೋಸ್, ಆರ್.; ಸೀಮಸ್, ಟಿ.; ಪೂಲ್, ಈ.; ಓಲ್ಸನ್, ಜೆ.
[ಪುಟ 27 ರಲ್ಲಿರುವ ಚಿತ್ರಗಳು]
ಇನ್ನೂ ತಮ್ಮ ನೇಮಕಗಳಲ್ಲಿರುವವರು: (ಎಡಗಡೆ) ಗಿಲ್ಯಡ್ನ ಪ್ರಥಮ ಮತ್ತು ಆರನೆಯ ತರಗತಿಗಳ ಪದವೀಧರರಾದ, ಚಾರ್ಲ್ಸ್ ಲೀತ್ಕೊ ತನ್ನ ಹೆಂಡತಿಯಾದ ಫರ್ನ್ಳೊಂದಿಗೆ ಬ್ರೆಸಿಲ್ನಲ್ಲಿ; (ಕೆಳಗೆ) ಗಿಲ್ಯಡ್ನ ಏಳನೆಯ ತರಗತಿಯ ಪದವೀಧರೆಯಾದ, ಮಾರ್ಥಾ ಹೆಸ್ ಜಪಾನಿನಲ್ಲಿ