ಅಸಮಾನತೆಯ ಪಿಡುಗನ್ನು ನಿಗ್ರಹಿಸುವುದು
ಮನುಷ್ಯರು ಬಹಳವಾಗಿ ಆಶಿಸುವ ಸಮಾನತೆಯನ್ನು ಸೃಷ್ಟಿಕರ್ತನು ಬೇಗನೆ ತರುವನು. ಅಷ್ಟರತನಕ, ನಮ್ಮನ್ನು ಮತ್ತು ನಮ್ಮ ಕುಟುಂಬಗಳನ್ನು ಪ್ರಭಾವಿಸುವ ಅಸಮಾನತೆಯ ಪಿಡುಗನ್ನು ಕಡಮೆ ಪಕ್ಷ ನಿಗ್ರಹಿಸಲಿಕ್ಕಾದರೂ ನಾವು ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು. ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷರಾದ ನೆಲ್ಸನ್ ಮಂಡೇಲಾ ಅವರು ಹೇಳಿದ್ದು: “ನಮ್ಮನ್ನು ಪರಸ್ಪರ ಬೇಪರ್ಡಿಸುವಂತಹದ್ದು, ನಮಗೆ ಕೊಡಲ್ಪಟ್ಟಿರುವ ವಿಷಯಗಳಲ್ಲ, ನಮ್ಮಲ್ಲಿರುವಂತಹ ವಿಷಯಗಳನ್ನು ನಾವು ಉಪಯೋಗಿಸಿಕೊಳ್ಳುವ ವಿಧವೇ ಆಗಿದೆ.”
ಇತಿಹಾಸವು ಅವರ ಮಾತುಗಳನ್ನು ನಿಜವೆಂದು ರುಜುಪಡಿಸುತ್ತದೆ. ತಾವು ಜನಿಸುವಾಗ ಕೆಲವೇ ಸೌಲಭ್ಯಗಳನ್ನು ಪಡೆದಿದ್ದ ಅನೇಕ ಸ್ತ್ರೀಪುರುಷರು, ಅವುಗಳನ್ನು ಸರಿಯಾಗಿ ಉಪಯೋಗಿಸುವ ಮೂಲಕ ಬಹಳಷ್ಟು ಯಶಸ್ಸನ್ನು ಸಾಧಿಸಿದರು. ಇದರಿಂದ, ಅವರು ತಮಗಿಂತಲೂ ಹೆಚ್ಚಿನ ಕೌಶಲಗಳಿದ್ದ ಸಮಾನಸ್ಥರಿಂದ ಬೇರೆಯಾಗಿ ಕಂಡುಬಂದರು. ಇದಕ್ಕೆ ವ್ಯತಿರಿಕ್ತವಾಗಿ, ಜನಿಸುವಾಗಲೇ ಸಾಕಷ್ಟು ಸೌಲಭ್ಯಗಳಿಂದ ಆಶೀರ್ವದಿಸಲ್ಪಟ್ಟ ವ್ಯಕ್ತಿಗಳು, ತಮ್ಮಲ್ಲಿದ್ದ ಎಲ್ಲವನ್ನು ಪೋಲುಮಾಡಿ, ತಮ್ಮ ಸಂಪೂರ್ಣ ಸಾಮರ್ಥ್ಯಕ್ಕೆ ಅನುಗುಣವಾಗಿ ಜೀವಿಸಲು ತಪ್ಪಿಹೋದರು.
ನಿಮ್ಮಲ್ಲಿರುವಂಥವುಗಳ ಸದುಪಯೋಗವನ್ನು ಮಾಡಿರಿ!
ಬೈಬಲಿನ ಅಧ್ಯಯನದ ಮೂಲಕ, ಜನರು ದೇವರ ಉದ್ದೇಶಗಳ ಜ್ಞಾನವನ್ನು ಪಡೆದುಕೊಳ್ಳುವಂತೆ ಸಹಾಯ ಮಾಡುವುದರಲ್ಲಿ ಯೆಹೋವನ ಸಾಕ್ಷಿಗಳು ತೀವ್ರ ಆಸಕ್ತಿಯುಳ್ಳವರಾಗಿದ್ದಾರೆ. ಆದರೆ, ಬೈಬಲಿನಲ್ಲಿರುವ ಮಾಹಿತಿಯಿಂದ ಸಂಪೂರ್ಣವಾಗಿ ಪ್ರಯೋಜನ ಪಡೆಯಬೇಕಾದರೆ, ಜನರು ಅಕ್ಷರಸ್ಥರಾಗಿರಬೇಕೆಂದು ಅವರು ಅಭಿಪ್ರಯಿಸುತ್ತಾರೆ. ಈ ಕಾರಣ, ಪಶ್ಚಿಮ ಆಫ್ರಿಕದ ಒಂದು ದೇಶದಲ್ಲಿರುವ 23,000 ಜನರನ್ನು ಸೇರಿಸಿ (1990ಗಳ ಮಧ್ಯಭಾಗದಲ್ಲಿ), ಹತ್ತಾರು ಸಾವಿರ ಜನರಿಗೆ ಯಹೋವನ ಸಾಕ್ಷಿಗಳು ಓದುಬರಹವನ್ನು ಕಲಿಸಿದ್ದಾರೆ. ಯೆಹೋವನ ಸಾಕ್ಷಿಗಳು ಮಾಡುವ ಈ ಗಮನಾರ್ಹವಾದ ಸಾಮಾಜಿಕ ಸೇವೆಯ ಕುರಿತು, ಸ್ಯಾನ್ ಫ್ರಾನ್ಸಿಸ್ಕೊ ಎಕ್ಸಾಮಿನರ್ ಹೇಳಿದ್ದು: “ಅವರನ್ನು ನೀವು ಆದರ್ಶ ಪೌರರಾಗಿ ಪರಿಗಣಿಸಬಹುದು. ಅವರು ಪ್ರಾಮಾಣಿಕವಾಗಿ ತೆರಿಗೆಗಳನ್ನು ಸಲ್ಲಿಸುತ್ತಾರೆ, ರೋಗಿಗಳನ್ನು ಉಪಚರಿಸುತ್ತಾರೆ, ಅನಕ್ಷರತೆಯ ವಿರುದ್ಧ ಹೋರಾಡುತ್ತಾರೆ.”
ಇದಲ್ಲದೆ, ಬಹಿರಂಗವಾಗಿ ಮಾತಾಡಲು ಸಾಧ್ಯವಾಗುವಂತೆ ನೀಡಲ್ಪಡುವ ಪ್ರಗತಿಪರವಾದ ತರಬೇತಿಯ ಮೂಲಕ, ಲಕ್ಷಾಂತರ ಜನರು ಅರ್ಹರಾದ ಭಾಷಣಕಾರರಾಗಲು ಮತ್ತು ತಮ್ಮನ್ನು ಬಹಿರಂಗವಾಗಿ ವ್ಯಕ್ತಪಡಿಸಿಕೊಳ್ಳಲು ಶಕ್ತರಾಗುವಂತೆ ಯೆಹೋವನ ಸಾಕ್ಷಿಗಳು ತರಬೇತಿ ನೀಡಿದ್ದಾರೆ. ಈ ಸಾವಿರಾರು ಜನರಲ್ಲಿ ಕೆಲವರಿಗೆ ವಾಕ್ಶಕ್ತಿಯ ಗಂಭೀರವಾದ ಸಮಸ್ಯೆಗಳಿದ್ದವು. ಹೀಗೆಂದು ಬರೆದ ದಕ್ಷಿಣ ಆಫ್ರಿಕದ ಒಬ್ಬನನ್ನು ಪರಿಗಣಿಸಿರಿ: “ನನಗಿದ್ದ ತೊದಲುವ ಸಮಸ್ಯೆ ಎಷ್ಟು ತೀವ್ರವಾಗಿತ್ತೆಂದರೆ, ಇದರಿಂದ ನಾನು ಒಬ್ಬ ಅಂತರ್ಮುಖಿಯಾಗಿ, ನನ್ನ ಪರವಾಗಿ ಮಾತಾಡಲು ಇತರರ ಮೇಲೆ ಅವಲಂಬಿಸಿದೆ. . . . ನಾನು ದೇವಪ್ರಭುತ್ವ ಶುಶ್ರೂಷಾ ಶಾಲೆಯನ್ನು ಸೇರಿ, ಒಂದು ಚಿಕ್ಕ ಗುಂಪಿನ ಎದುರು ಬೈಬಲ್ ವಾಚನವನ್ನು ಮಾಡಬೇಕಾದಾಗ . . . , ನಾನೆಷ್ಟು ತೊದಲಿದೆನೆಂದರೆ ನನ್ನ ನೇಮಕವನ್ನು ನಿಗದಿತ ಸಮಯದಲ್ಲಿ ಮುಗಿಸಲಾಗಲಿಲ್ಲ. ಕೂಟದ ನಂತರ [ಸಲಹೆಗಾರನು] ನನಗೆ ಪ್ರಾಯೋಗಿಕ ಸಲಹೆಯನ್ನು ದಯಾಪರವಾಗಿ ನೀಡಿದನು. ಗಟ್ಟಿಯಾಗಿ ಓದುವ ಅಭ್ಯಾಸವನ್ನು ಮಾಡುವಂತೆ ಅವನು ಸೂಚಿಸಿದನು. ಬೈಬಲನ್ನು ಮತ್ತು ಕಾವಲಿನಬುರುಜು ಪತ್ರಿಕೆಯನ್ನು ಪ್ರತಿದಿನವೂ ಗಟ್ಟಿಯಾಗಿ ಓದುವ ಮೂಲಕ ನಾನು ಆ ಸಲಹೆಯನ್ನು ಅನ್ವಯಿಸಿದೆ.” ಈ ವ್ಯಕ್ತಿಯು ಎಷ್ಟೊಂದು ಪ್ರಗತಿಯನ್ನು ಮಾಡಿದನೆಂದರೆ, ಈಗ ಅವನು ನೂರಾರು ಇಲ್ಲವೆ ಸಾವಿರಾರು ಜನರ ಮುಂದೆ ಬಹಿರಂಗ ಭಾಷಣಗಳನ್ನು ನೀಡುತ್ತಾನೆ.
ಸಹೋದರರ ಮಧ್ಯೆ ಸಮಾನತೆಯನ್ನು ಅನುಭವಿಸುವುದು
ಶಿಕ್ಷಣ, ಆರೋಗ್ಯದಾರೈಕೆ, ಆರ್ಥಿಕ ಹಾಗೂ ಸಾಮಾಜಿಕ ಸ್ಥಾನಮಾನದ ವಿಷಯಗಳಲ್ಲಿ, ಯೆಹೋವನ ಸಾಕ್ಷಿಗಳ ಮಧ್ಯೆಯಿರುವ ಪರಿಸ್ಥಿತಿಯು ತೀರ ಭಿನ್ನವಾಗಿರುತ್ತದೆ. ಈ ಭಿನ್ನತೆಗಳು, ನಾವು ಜೀವಿಸುತ್ತಿರುವ ಅಪರಿಪೂರ್ಣ ಲೋಕದ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುತ್ತವಷ್ಟೇ. ಆದರೆ, ಇತರ ಧಾರ್ಮಿಕ ಗುಂಪುಗಳಿಗೆ ತೀರ ವ್ಯತಿರಿಕ್ತವಾಗಿ, ಅವರಲ್ಲಿ ಕುಲಸಂಬಂಧಿತ, ಸಾಮಾಜಿಕ, ಮತ್ತು ಆರ್ಥಿಕ ಪೂರ್ವಾಗ್ರಹಗಳು ಬಹುಮಟ್ಟಿಗೆ ನಿರ್ಮೂಲಗೊಳಿಸಲ್ಪಟ್ಟಿವೆ.
ಬೈಬಲಿನಿಂದ ಕಲಿತಿರುವ ವಿಷಯಗಳನ್ನು ಕಾರ್ಯರೂಪದಲ್ಲಿ ಹಾಕಲು ತಮ್ಮಿಂದ ಸಾಧ್ಯವಾದುದನ್ನು ಮಾಡುವ ಮೂಲಕ ಅವರು ಇದನ್ನು ಸಾಧಿಸಿದ್ದಾರೆ. ಈ ಕೆಳಗೆ ಕೊಡಲ್ಪಟ್ಟಿರುವಂತಹ ಬೈಬಲ್ ತತ್ವಗಳನ್ನು ಅವರು ಮನಃಪೂರ್ವಕವಾಗಿ ಅಂಗೀಕರಿಸಿದ್ದಾರೆ: “ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.” (1 ಸಮುವೇಲ 16:7) “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.” (ಅ. ಕೃತ್ಯಗಳು 10:34, 35) “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವದು ಗೌರವಾದದ್ದೋ ಅದನ್ನೇ ಯೋಚಿಸಿ ಸಾಧಿಸಿರಿ. ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.”—ರೋಮಾಪುರ 12:17, 18; 1 ತಿಮೊಥೆಯ 6:17-19ನ್ನು ಸಹ ನೋಡಿರಿ; ಯಾಕೋಬ 2:5, 9.
ಏಕತೆಯನ್ನು ಹೆಚ್ಚಿಸುವ ಬೈಬಲ್ ತತ್ವಗಳಿಗೆ ಯೆಹೋವನ ಸಾಕ್ಷಿಗಳು ನಿಕಟವಾಗಿ ಅಂಟಿಕೊಳ್ಳುತ್ತಾ, ಕುಲಸಂಬಂಧಿತ, ಸಾಮಾಜಿಕ, ಇಲ್ಲವೆ ಆರ್ಥಿಕ ಭಿನ್ನತೆಗಳ ಆಧಾರದ ಮೇಲೆ ತಮ್ಮ ಮಧ್ಯೆ ಭೇದಭಾವವನ್ನು ಅನುಮತಿಸುವುದಿಲ್ಲ. ಕ್ರೈಸ್ತ ಸಭೆಯಲ್ಲಿ ಯಾರಿಗೆ ಸೇವಾ ಸುಯೋಗಗಳನ್ನು ನೀಡಬೇಕೆಂದು ನಿರ್ಧರಿಸುವುದರಲ್ಲಿ ಈ ಅಂಶಗಳು ಯಾವ ಪಾತ್ರವನ್ನೂ ವಹಿಸುವುದಿಲ್ಲ. ಕಲಿಸುವ ಮತ್ತು ಮೇಲ್ವಿಚಾರಣೆಯಂತಹ ಜವಾಬ್ದಾರಿಯ ಸ್ಥಾನಗಳು, ಕೇವಲ ಆತ್ಮಿಕ ಅರ್ಹತೆಗಳ ಆಧಾರದ ಮೇಲೆ ನೀಡಲ್ಪಡುತ್ತವೆ.—1 ತಿಮೊಥೆಯ 3:1-13; ತೀತ 1:5-9.
ಒಂದು ಪೂರ್ವಾಗ್ರಹಪೀಡಿತ ಲೋಕದಲ್ಲಿ ಅಸಮಾನತೆಗಳ ಕೆಳಗೆ ಬಹಳವಾಗಿ ಕಷ್ಟಾನುಭವಿಸಿರುವ ವ್ಯಕ್ತಿಗಳನ್ನು, ಇತರರು ಸೃಷ್ಟಿಕರ್ತನ ಮುಂದೆ ಸಮಾನವಾದ ನಿಲುವುಳ್ಳ ಸಹೋದರ ಸಹೋದರಿಯರಂತೆ ಉಪಚರಿಸುವಾಗ ಅದೆಷ್ಟು ಉಲ್ಲಾಸಕರವಾಗಿರುತ್ತದೆ! ಮಾರ್ಟೀನ ಇದಕ್ಕೆ ಸಾಕ್ಷ್ಯಕೊಡಬಲ್ಲಳು. ಅವಳ ತಂದೆ ಕುಟುಂಬವನ್ನು ತ್ಯಜಿಸಿಹೋದ ಮೇಲೆ, ಅವಳು ಒಂಟಿ ಹೆತ್ತವಳಾದ ತಾಯಿಯಿಂದ ಬಡತನದಲ್ಲಿ ಬೆಳೆಸಲ್ಪಟ್ಟಳು. ಅವಳು ಬಹಿಷ್ಕೃತಳಂತೆ ಉಪಚರಿಸಲ್ಪಟ್ಟ ಕಾರಣ, ಆತ್ಮವಿಶ್ವಾಸ ಇಲ್ಲದವಳಾಗಿದ್ದಳು. ಮತ್ತು ಇತರರೊಂದಿಗೆ ಹೊಂದಿಕೊಳ್ಳುವುದು ಅವಳಿಗೆ ಕಷ್ಟಕರವಾಗಿತ್ತು. ಅವಳು ಉದಾಸೀನ ಮನೋಭಾವವನ್ನು ಬೆಳೆಸಿಕೊಂಡಳು. ಆದರೆ, ಅವಳು ಬೈಬಲನ್ನು ಅಭ್ಯಾಸಿಸಿ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದಾಗ ಪರಿಸ್ಥಿತಿಯು ಬದಲಾಯಿತು. ಅವಳು ಹೇಳುವುದು: “ನಾನು ಈಗಲೂ ನಕಾರಾತ್ಮಕ ಭಾವನೆಗಳ ವಿರುದ್ಧ ಹೋರಾಡಬೇಕಾಗಿದೆ. ಆದರೂ ಈಗ ನಾನು ಈ ಸಮಸ್ಯೆಯನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಲು ಶಕ್ತಳಾಗಿದ್ದೇನೆ. ನನ್ನಲ್ಲಿರುವ ಆತ್ಮ ಗೌರವವು ಸುಧಾರಿಸಿದೆ, ಮತ್ತು ನಾನು ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಮಾತಾಡುತ್ತೇನೆ. ಸತ್ಯವು ನನ್ನಲ್ಲಿ ಹೊಣೆಗಾರಿಕೆಯ ಪ್ರಜ್ಞೆಯನ್ನು ಮೂಡಿಸಿದೆ. ಯೆಹೋವನು ನನ್ನನ್ನು ಪ್ರೀತಿಸುತ್ತಾನೆಂದು ಮತ್ತು ಜೀವಿತವು ಸಾರ್ಥಕವಾದದ್ದಾಗಿದೆ ಎಂದು ಈಗ ನನಗೆ ತಿಳಿದಿದೆ.”
ಒಂದು ಅಂತಾರಾಷ್ಟ್ರೀಯ ಕ್ರೈಸ್ತ ಗುಂಪಿನೋಪಾದಿ, 230ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿರುವ ಯೆಹೋವನ ಸಾಕ್ಷಿಗಳು ಒಂದಿಷ್ಟು ಸಮಾನತೆಯನ್ನು ಅನುಭವಿಸುತ್ತಾರೆ. ಇದು, ಇಂದಿನ ಲೋಕದಲ್ಲಿ ನಿಜವಾಗಿಯೂ ಅಪೂರ್ವವಾಗಿದೆ. ಬೇರೆ ಯಾವುದೇ ಧಾರ್ಮಿಕ ಸಂಸ್ಥೆಯು ಈ ರೀತಿಯ ಪ್ರತಿಪಾದನೆಯನ್ನು ಮಾಡಿ, ಅದನ್ನು ಪುರಾವೆಗಳಿಂದ ಸಮರ್ಥಿಸಬಲ್ಲದೊ?
ಆದರೆ, ಯೆಹೋವನ ಸಾಕ್ಷಿಗಳು ವಾಸ್ತವಿಕ ಮನೋಭಾವ ಉಳ್ಳವರಾಗಿದ್ದಾರೆ. ಅವರು ಅಪರಿಪೂರ್ಣ ಪರಿಸರದಲ್ಲಿ ಹುಟ್ಟಿಬಂದಿರುವ ಕಾರಣ, ಮಾನವ ಅಸಮಾನತೆಯನ್ನು ತೊಡೆದುಹಾಕಲು ಶತಮಾನಗಳಿಂದಲೂ ಪ್ರಯತ್ನಿಸಿ ವಿಫಲರಾದ ಇತರರಂತೆಯೇ ತಾವೂ ಅಶಕ್ತರಾಗಿದ್ದೇವೆಂದು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತಾರೆ. ಹಾಗಿದ್ದರೂ, ತಮ್ಮೊಳಗೆ ಈ ಮಾರಕವಾದ ಪಿಡುಗನ್ನು ನಿಗ್ರಹಿಸಲು ತಮ್ಮಿಂದ ಸಾಧ್ಯವಾದುದನ್ನು ಮಾಡಿರುವುದಕ್ಕೆ ಅವರು ಹರ್ಷಿಸುತ್ತಾರೆ. ಮತ್ತು ದೇವರ ವಾಗ್ದಾನದಲ್ಲಿ ಬಲವಾದ ನಂಬಿಕೆಯುಳ್ಳವರಾಗಿ, ಅವರು ನೀತಿಯ ಹೊಸ ಲೋಕಕ್ಕಾಗಿ ಎದುರುನೋಡುತ್ತಾರೆ. ಅಲ್ಲಿ ಅಸಮಾನತೆಯು ಗತಕಾಲದ ವಿಷಯವಾಗಿರುವುದು.
ಹೌದು, ಎಲ್ಲ ವಿಧೇಯ ಮಾನವರು ತಮ್ಮ ಸೃಷ್ಟಿಕರ್ತನು ಅವರಿಗಾಗಿ ಉದ್ದೇಶಿಸಿದ “ಘನತೆ ಹಾಗೂ ಹಕ್ಕುಗಳ” ಸಮಾನತೆಗೆ ಬೇಗನೆ ಪುನಸ್ಸ್ಥಾಪಿಸಲ್ಪಡುವರು. ಇದು ಎಂತಹ ಸೊಗಸಾದ ವಿಚಾರವಾಗಿದೆ! ಮತ್ತು ಈ ಬಾರಿ ಅದೊಂದು ವಾಸ್ತವಿಕ ಘಟನೆಯಾಗುವುದು!
[ಪುಟ 7 ರಲ್ಲಿರುವ ಚಿತ್ರ]
ಹತ್ತಾರು ಸಾವಿರ ಜನರಿಗೆ ಓದುಬರಹವನ್ನು ಕಲಿಸಿಕೊಡುವ ಮೂಲಕ, ಯೆಹೋವನ ಸಾಕ್ಷಿಗಳು ಅನಕ್ಷರತೆಯ ವಿರುದ್ಧ ಹೋರಾಡುತ್ತಾರೆ
[ಪುಟ 8 ರಲ್ಲಿರುವ ಚಿತ್ರ]
ಬೈಬಲ್ ಸತ್ಯವು ಕುಲಸಂಬಂಧಿತ, ಸಾಮಾಜಿಕ, ಹಾಗೂ ಆರ್ಥಿಕ ಪೂರ್ವಾಗ್ರಹಗಳನ್ನು ನಿರ್ಮೂಲಗೊಳಿಸಲು ಸಹಾಯ ಮಾಡುತ್ತದೆ