ಅಸಮಾನತೆ—ದೇವರು ಅದನ್ನು ಉದ್ದೇಶಿಸಿದನೊ?
ಒಂದೇ ಮಾತಿನಲ್ಲಿ ಹೇಳುವುದಾದರೆ, ಇಲ್ಲ. ಅದಕ್ಕಿರುವ ಕಾರಣವನ್ನು ನಾವೀಗ ನೋಡೋಣ.
ಮನುಷ್ಯರೆಲ್ಲರಿಗೂ, ಜೀವನವನ್ನು ಅನುಭವಿಸಲು ಮತ್ತು ಸಂತೋಷದಿಂದಿರಲು ಸಮಾನವಾದ ಅವಕಾಶಗಳು ಸಿಗಬೇಕೆಂದು ದೇವರು ಉದ್ದೇಶಿಸಿದನು. ಮಾನವರ ಸೃಷ್ಟಿಯ ಬಗ್ಗೆ ನಾವು ಓದುವುದು: “ಆ ಮೇಲೆ ದೇವರು—ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ; ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಕೀಟಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ದೊರೆತನಮಾಡಲಿ ಅಂದನು.” ಭೂಸೃಷ್ಟಿಯು ಪೂರ್ಣಗೊಂಡ ತರುವಾಯ, “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.”—ಆದಿಕಾಂಡ 1:26, 31.
ಇಂದಿರುವ ಅಸಮಾನತೆಯ ವಿಷಾದಕರ ಸ್ಥಿತಿಯನ್ನು ನೋಡಿಯೂ, ದೇವರು ಅದನ್ನು “ಬಹು ಒಳ್ಳೇ”ದೆಂದು ಘೋಷಿಸಸಾಧ್ಯವೊ? ಖಂಡಿತವಾಗಿಯೂ ಇಲ್ಲ, ಏಕೆಂದರೆ “ದೇವರು ಪ್ರೀತಿಸ್ವರೂಪಿಯು.” (1 ಯೋಹಾನ 4:8) ಆತನು “ಭೇದವನ್ನು ಮಾಡದೆ” ಇರುವವನೆಂದೂ ಮತ್ತು “ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ” ಎಂದೂ ಹೇಳಲಾಗಿದೆ. (ಧರ್ಮೋಪದೇಶಕಾಂಡ 10:17; 32:4; ಹೋಲಿಸಿ ಯೋಬ 34:9.) ಮತ್ತು ಈ ವಿಷಯವಾಗಿ ಅಪೊಸ್ತಲ ಪೇತ್ರನು ತೀಮಾರ್ನಿಸಿದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.”—ಅ. ಕೃತ್ಯಗಳು 10:34, 35.
ದೇವರು ಪ್ರೀತಿಸ್ವರೂಪನೂ, ಭೇದವನ್ನು ಮಾಡದವನೂ, ನ್ಯಾಯವಂತನೂ, ಯಥಾರ್ಥನೂ, ನೀತಿವಂತನೂ ಆಗಿರುವಾಗ, ಸಂತೋಷವನ್ನು ಅನುಭವಿಸುವ ಹಕ್ಕಿನ ಸಂಬಂಧದಲ್ಲಿ ಅಂತರ್ಗತವಾದ ಅಸಮಾನತೆಯುಳ್ಳ ಮನುಷ್ಯರನ್ನು ಆತನು ಹೇಗೆ ಸೃಷ್ಟಿಸಿರಸಾಧ್ಯವಿದೆ? ಜನರಲ್ಲಿ ಭೇದಭಾವವನ್ನು ಅನುಮತಿಸುವುದು ಮತ್ತು ಅವರನ್ನು ಅಸಮಾನತೆಯ ಏರ್ಪಾಡಿನಲ್ಲಿ ಇಡುವುದು, ಆತನ ವ್ಯಕ್ತಿತ್ವಕ್ಕೆ ತೀರ ವ್ಯತಿರಿಕ್ತವಾಗಿದೆ. ಎಲ್ಲರೂ “ಸ್ವತಂತ್ರರಾಗಿ ಜನಿಸಿದ್ದು, ಸಮಾನವಾದ ಘನತೆ ಹಾಗೂ ಹಕ್ಕುಗಳನ್ನು ಅನುಭವಿಸ”ಬೇಕೆಂದು ಆತನು ಉದ್ದೇಶಿಸಿದನು. ಆದರೂ, ಇಂದಿನ ಸನ್ನಿವೇಶವು ನಿಶ್ಚಯವಾಗಿಯೂ ಆ ರೀತಿಯಲ್ಲಿಲ್ಲ. ಏಕೆ?
ಅಸಮಾನತೆಯ ಮೂಲ
ಮನುಷ್ಯರೆಲ್ಲರೂ ಸಮಾನರಾಗಿರಬೇಕೆಂಬ ಉದ್ದೇಶದಿಂದ ದೇವರು ಅವರನ್ನು ಸೃಷ್ಟಿಸಿದಾಗ, ಪ್ರತಿಯೊಂದು ವಿಷಯದಲ್ಲೂ ಅವರು ಸಮಾನರಾಗಿರಬೇಕೆಂದು ಆತನು ಉದ್ದೇಶಿಸಲಿಲ್ಲ. ಕೌಶಲಗಳಲ್ಲಿ, ಆಸಕ್ತಿಗಳಲ್ಲಿ, ಮತ್ತು ವ್ಯಕ್ತಿತ್ವದಲ್ಲಿ ಅವರು ಭಿನ್ನರಾಗಿರಸಾಧ್ಯವಿತ್ತು. ಅವರು ಸಾಮಾಜಿಕ ಸ್ಥಾನಮಾನದಲ್ಲಿ ಇಲ್ಲವೆ ಅಧಿಕಾರದ ದರ್ಜೆಯಲ್ಲೂ ಭಿನ್ನರಾಗಿರಸಾಧ್ಯವಿತ್ತು. ಉದಾಹರಣೆಗೆ, ಸ್ತ್ರೀಪುರುಷರು ಎಲ್ಲ ವಿಷಯಗಳಲ್ಲೂ ಸಮಾನರಾಗಿರುವುದಿಲ್ಲ. ಏಕೆಂದರೆ ದೇವರು ಸ್ತ್ರೀಯನ್ನು, ಪುರುಷನಿಗೆ “ಸರಿಬೀಳುವ ಸಹಕಾರಿ”ಯನ್ನಾಗಿ ಸೃಷ್ಟಿಸಿದನು. (ಆದಿಕಾಂಡ 2:18) ಅಧಿಕಾರದ ವಿಷಯದಲ್ಲಿ ಹೆತ್ತವರು ಮತ್ತು ಮಕ್ಕಳು ಖಂಡಿತವಾಗಿಯೂ ಭಿನ್ನರಾಗಿರುತ್ತಾರೆ. ಈ ಭಿನ್ನತೆಗಳ ಎದುರಿನಲ್ಲೂ, ಎಲ್ಲ ಸ್ತ್ರೀಪುರುಷರು ಮತ್ತು ಮಕ್ಕಳು, ಸಂತೋಷದ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ದೇವದತ್ತ ಹಕ್ಕಿನೋಪಾದಿ ಒದಗಿಸಲ್ಪಟ್ಟಿರುವ ಸಮಾನವಾದ ಅವಕಾಶಗಳನ್ನು ಅನುಭವಿಸಬೇಕಾಗಿತ್ತು. ಅವರೆಲ್ಲರೂ ದೇವರ ಮುಂದೆ ಸಮಾನವಾದ ಘನತೆ ಹಾಗೂ ನಿಲುವನ್ನು ಅನುಭವಿಸಬೇಕಿತ್ತು.
ತದ್ರೀತಿಯಲ್ಲಿ, ಮನುಷ್ಯರಿಗೆ ಮುಂಚಿತವಾಗಿ ಸೃಷ್ಟಿಸಲ್ಪಟ್ಟ ದೇವರ ಆತ್ಮ ಪುತ್ರರಿಗೆ, ಬೇರೆ ಬೇರೆ ನೇಮಕಗಳು ಹಾಗೂ ಜವಾಬ್ದಾರಿಗಳು ನೀಡಲ್ಪಟ್ಟಿದ್ದವು. (ಆದಿಕಾಂಡ 3:24; 16:7-11; ಯೆಶಾಯ 6:6; ಯೂದ 9) ಹಾಗಿದ್ದರೂ, ತಮಗೆ ನೀಡಲ್ಪಟ್ಟಿದ್ದ ಜವಾಬ್ದಾರಿಗಳ ಮೇರೆಯೊಳಗೆ, ಎಲ್ಲರೂ ಜೀವಿತಕ್ಕಾಗಿ ಹಾಗೂ ಸಂತೋಷಕ್ಕಾಗಿದ್ದ ದೈವಿಕ ಏರ್ಪಾಡುಗಳನ್ನು ಸಮಾನವಾಗಿ ಅನುಭವಿಸಸಾಧ್ಯವಿತ್ತು. ಹೀಗೆ, ಅವರು ದೇವರ ನಿಷ್ಪಕ್ಷಪಾತವನ್ನು ಅದ್ಭುತವಾದ ರೀತಿಯಲ್ಲಿ ಪ್ರತಿಬಿಂಬಿಸುವವರಾಗಿದ್ದರು.
ಆದರೆ ವಿಷಾದಕರವಾಗಿ, ದೇವರ ಈ ನಿಷ್ಪಕ್ಷಪಾತ ಏರ್ಪಾಡಿನಿಂದಾಗಿ ಆತ್ಮಜೀವಿಗಳಲ್ಲಿ ಒಬ್ಬನು ಸಂತುಷ್ಟನಾಗಿರಲಿಲ್ಲ. ದೇವರು ಅವನಿಗೆ ಕೊಟ್ಟಿದ್ದ ಜವಾಬ್ದಾರಿಗಿಂತಲೂ ಹೆಚ್ಚಿನದ್ದನ್ನು ಬಯಸಿ, ಅವನು ಇನ್ನೂ ಉನ್ನತವಾದ ಸ್ಥಾನಕ್ಕಾಗಿ ಹಾತೊರೆದನು. ಅವನು ಈ ತಪ್ಪಾದ ಬಯಕೆಯನ್ನು ಮನಸ್ಸಿನಲ್ಲಿ ಪೋಷಿಸುವ ಮೂಲಕ, ಯೋಗ್ಯವಾಗಿಯೇ ಪರಮಾಧಿಕಾರದ ಸ್ಥಾನದಲ್ಲಿರುವ ಸೃಷ್ಟಿಕರ್ತನಾದ ಯೆಹೋವನ ಪ್ರತಿಸ್ಪರ್ಧಿಯಾದನು. ತದನಂತರ, ದೇವರ ಈ ದಂಗೆಕೋರ ಆತ್ಮ ಪುತ್ರನು ಮನುಷ್ಯರನ್ನು ಪ್ರೇರಿಸಿ, ದೇವರು ಅವರಿಗೆ ಕೊಟ್ಟಿದ್ದ ವಿಷಯಗಳಿಗಿಂತಲೂ ಹೆಚ್ಚಿನದ್ದನ್ನು ಕೇಳುವಂತೆ ಒತ್ತಾಯಿಸಿದನು. (ಆದಿಕಾಂಡ 3:1-6; ಹೋಲಿಸಿ ಯೆಶಾಯ 14:12-14.) ಹೀಗೆ, ಮನುಷ್ಯರು ಜೀವನದಲ್ಲಿ ಆನಂದಿಸಿ, ಸಂತೋಷವನ್ನು ಕಂಡುಕೊಳ್ಳುವಂತೆ ಯೆಹೋವನು ಮಾಡಿದ್ದ ಏರ್ಪಾಡು ಇದ್ದಕ್ಕಿದ್ದ ಹಾಗೆ ಸಮತೋಲನವನ್ನು ಕಳೆದುಕೊಂಡಂತೆ ತೋರಿತು. ಪ್ರಕಟನೆ 20:2ರಲ್ಲಿ “ಪಿಶಾಚನೂ ಸೈತಾನನೂ” ಎಂಬುದಾಗಿ ಗುರುತಿಸಲ್ಪಟ್ಟಿರುವ ಈ ದಂಗೆಕೋರ ಆತ್ಮಜೀವಿಯು, ಮಾನವ ಅಸಮಾನತೆಯ ದುಷ್ಟ ಪ್ರೇರೇಪಕನಾದನು.
ಪರಿಸ್ಥಿತಿಯು ಎಂದಾದರೂ ಬದಲಾದೀತೆ?
ಒಂದೇ ಮಾತಿನಲ್ಲಿ ಉತ್ತರಿಸುವುದಾದರೆ, ಹೌದು!
ಆದರೆ, ನಾವು ಅಪೇಕ್ಷಿಸುವ ಬದಲಾವಣೆಗಳನ್ನು ಯಾರು ತರಬಲ್ಲರು? ಯಥಾರ್ಥವಂತರಾಗಿದ್ದ ಕೆಲವು ಮಾನವ ಮುಖಂಡರು ಇದಕ್ಕಾಗಿ ಅನೇಕ ಶತಮಾನಗಳ ವರೆಗೆ ಹೋರಾಡಿದ್ದಾರೆ. ಅವರು ಗಳಿಸಿರುವ ಯಶಸ್ಸು ಸೀಮಿತವಾಗಿರುವುದರಿಂದ, ಮಾನವ ಅಸಮಾನತೆಯ ಸಮಸ್ಯೆಯನ್ನು ಎಂದಾದರೂ ಬಗೆಹರಿಸಸಾಧ್ಯವೆಂದು ನಿರೀಕ್ಷಿಸುವುದು ತೀರ ಅವಾಸ್ತವಿಕವೆಂದು ಅನೇಕ ಜನರು ತೀರ್ಮಾನಿಸಿದ್ದಾರೆ. ಆದರೆ, ದೇವರ ದೃಷ್ಟಿಕೋನವಾದರೊ ಯೆಶಾಯ 55:10, 11ರಲ್ಲಿ ದಾಖಲಿಸಲ್ಪಟ್ಟಿದೆ: “ಮಳೆಯೂ ಹಿಮವೂ ಆಕಾಶದಿಂದ ಬಿದ್ದು ಭೂಮಿಯನ್ನು ತೋಯಿಸಿ ಹಸುರುಗೊಳಿಸಿ ಫಲಿಸುವಂತೆ ಮಾಡಿ ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಆಹಾರವನ್ನು ಒದಗಿಸಿದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವದಿಲ್ಲವೋ ಹಾಗೆಯೇ ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”
ಎಲ್ಲ ಮಾನವರ ಜೀವಿತಕ್ಕಾಗಿ ಹಾಗೂ ಸಂತೋಷಕ್ಕಾಗಿ ಸಮಾನ ಅವಕಾಶಗಳನ್ನು ಒದಗಿಸುವ ತನ್ನ ಮೂಲ ಉದ್ದೇಶವನ್ನು ಖಂಡಿತವಾಗಿಯೂ ನೆರವೇರಿಸುವೆನೆಂದು ಯೆಹೋವ ದೇವರು ಪ್ರಕಟಿಸಿರುವುದನ್ನು ತಿಳಿದುಕೊಳ್ಳುವುದು ಎಷ್ಟೊಂದು ಸಾಂತ್ವನದಾಯಕ! ಸತ್ಯದ ದೇವರೋಪಾದಿ, ತಾನು ವಾಗ್ದಾನಿಸಿರುವುದನ್ನು ನೆರವೇರಿಸುವ ಹಂಗು ಆತನಿಗಿದೆ. ಮತ್ತು ಆತನಿಗೆ ಹಾಗೆ ಮಾಡುವ ಮನಸ್ಸೂ ಇದೆ, ಶಕ್ತಿಯೂ ಇದೆ. ಆದರೆ, ದೇವರು ಇದನ್ನು ಹೇಗೆ ಸಾಧಿಸುವನು?
ಯಾವ ರಾಜ್ಯಕ್ಕಾಗಿ ಪ್ರಾರ್ಥಿಸುವಂತೆ ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆಲ್ಲ ಕಲಿಸಿದನೊ ಅದರಲ್ಲೇ ಉತ್ತರವು ಅಡಕವಾಗಿದೆ: “ಪರಲೋಕದಲ್ಲಿರುವ ನಮ್ಮ ತಂದೆಯೇ, . . . ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿ ನೆರವೇರಲಿ.” (ಮತ್ತಾಯ 6:9, 10) ಹೌದು, “ಆ ರಾಜ್ಯಗಳನ್ನೆಲ್ಲಾ [ಈಗ ಅಸ್ತಿತ್ವದಲ್ಲಿರುವವುಗಳು] ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವ” ದೇವರ ರಾಜ್ಯವನ್ನು ಯೆಹೋವನು ಉಪಯೋಗಿಸಿ, ಇದನ್ನು ಸಾಧಿಸುವನು.—ದಾನಿಯೇಲ 2:44.
ಆ ಸ್ವರ್ಗೀಯ ರಾಜ್ಯದ ಆಳ್ವಿಕೆಯ ಕೆಳಗೆ, ಒಂದು ಹೊಸ ಮಾನವ ಸಮಾಜವು ಉದಯಿಸುವುದು. ಈ ವಿಷಯವಾಗಿ, ಅಪೊಸ್ತಲ ಯೋಹಾನನು ಬೈಬಲಿನ ಕೊನೆಯ ಪುಸ್ತಕವಾದ ಪ್ರಕಟನೆಯಲ್ಲಿ ಬರೆದುದು: “ತರುವಾಯ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಕಂಡೆನು. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಇಲ್ಲದೆ ಹೋದವು.” (ಪ್ರಕಟನೆ 21:1) ಅಸಮಾನತೆಯ ವಿಕಾರ ಮುಖಗಳಾದ ಬಡತನ, ಅನಾರೋಗ್ಯ, ಅಜ್ಞಾನ, ಭೇದಭಾವ, ಮತ್ತು ಇತರ ಮಾನವ ಸಂಕಷ್ಟಗಳು ಇಲ್ಲದೆ ಹೋಗುವವು.a
ಈಗ, ಒಂದು ಶತಮಾನಕ್ಕಿಂತಲೂ ಹೆಚ್ಚಿನ ಸಮಯದಿಂದ, ಯೆಹೋವನ ಸಾಕ್ಷಿಗಳು ಜನರ ಗಮನವನ್ನು ಆ ರಾಜ್ಯದ ಕಡೆಗೆ ತಿರುಗಿಸುತ್ತಾ ಬಂದಿದ್ದಾರೆ. (ಮತ್ತಾಯ 24:14) ಮುದ್ರಿತ ಸಾಹಿತ್ಯಗಳ ಮೂಲಕ ಮತ್ತು ವೈಯಕ್ತಿಕ ಸಹಾಯದ ಮೂಲಕ, ಬೈಬಲಿನಲ್ಲಿ ದಾಖಲಾಗಿರುವ ದೇವರ ಉದ್ದೇಶದ ಜ್ಞಾನವನ್ನು ಜನರು ಪಡೆದುಕೊಳ್ಳುವಂತೆ ಸಹಾಯ ಮಾಡುವುದರಲ್ಲಿ ಅವರು ಬಹಳವಾಗಿ ಪ್ರಯಾಸಪಟ್ಟಿದ್ದಾರೆ. ಅವರ ಲೋಕವ್ಯಾಪಕ ಶೈಕ್ಷಣಿಕ ಕಾರ್ಯಕ್ರಮವು, ಜನರಿಗೆ ಭವಿಷ್ಯತ್ತಿನಲ್ಲಿ ಸಮಾನತೆ ಹಾಗೂ ಸಂತೋಷದಿಂದ ಜೀವಿಸುವ ನಿರೀಕ್ಷೆಯನ್ನು ಕೊಟ್ಟಿದೆ ಮಾತ್ರವಲ್ಲ, ಪ್ರಚಲಿತ ಸಮಯದಲ್ಲೂ ಅಸಮಾನತೆಯ ಪಿಡುಗನ್ನು ನಿಗ್ರಹಿಸುವುದರಲ್ಲಿ ಪ್ರಯೋಜನಗಳನ್ನು ತಂದಿದೆ. ಅದು ಹೇಗೆ ಎಂಬುದನ್ನು ನಾವು ನೋಡೋಣ.
[ಅಧ್ಯಯನ ಪ್ರಶ್ನೆಗಳು]
a ದೇವರ ರಾಜ್ಯವು ಬಹು ಬೇಗನೆ ಎಲ್ಲರಿಗೂ ಸಮಾನತೆಯನ್ನು ತರುವ ವಿಷಯದ ಕುರಿತಾದ ಸಂಪೂರ್ಣ ಚರ್ಚೆಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ 10ನೆಯ ಮತ್ತು 11ನೆಯ ಅಧ್ಯಾಯಗಳನ್ನು ದಯವಿಟ್ಟು ನೋಡಿರಿ.
[ಪುಟ 5 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಜೀವಿತಕ್ಕಾಗಿ ಮತ್ತು ಸಂತೋಷಕ್ಕಾಗಿ ಎಲ್ಲ ಮಾನವರು ಸಮಾನವಾದ ಅವಕಾಶಗಳನ್ನು ಹೊಂದಿರುವಂತೆ ದೇವರು ಉದ್ದೇಶಿಸಿದನು