ದಾಹಪಡುತ್ತಿರುವ ಸಕಲರಿಗೆ ಒಂದು ಆಮಂತ್ರಣವನ್ನು ನೀಡಿರಿ
1 ಪ್ರವಾದಿಯಾದ ಆಮೋಸನಿಂದ ಮುಂತಿಳಿಸಲ್ಪಟ್ಟಂತೆ, ಮಾನವ ಕುಟಂಬವು ಇಂದು, “ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮ”ದಿಂದ ಕಷ್ಟಾನುಭವಿಸುತ್ತಿದೆ. (ಆಮೋ. 8:11) ಆತ್ಮಿಕವಾಗಿ ಬತ್ತಿಹೋದ ಈ ಪರಿಸ್ಥಿತಿಯಲ್ಲಿರುವ ಜನರಿಗೆ ಸಹಾಯ ಮಾಡಲು, ಪಾಪಮರಣಗಳಿಂದ ವಿಧೇಯ ಮಾನವರನ್ನು ಪುನಃ ಸಂಪಾದಿಸಲಿಕ್ಕಾಗಿರುವ ದೇವರ ಏರ್ಪಾಡುಗಳ ಕುರಿತು ನಾವು ಅವರಿಗೆ ಹೇಳುತ್ತೇವೆ. ಇವು ಪ್ರಕಟನೆಯ ಕೊನೆಯ ಅಧ್ಯಾಯದಲ್ಲಿ “ಜೀವಜಲದ ನದಿ”ಯಾಗಿ ಚಿತ್ರಿಸಲ್ಪಟ್ಟಿವೆ. ನೀತಿಗಾಗಿ ದಾಹಪಡುತ್ತಿರುವ ಪ್ರತಿಯೊಬ್ಬರಿಗೆ “ಜೀವಜಲವನ್ನು ಕ್ರಯವಿಲ್ಲದೆ ತೆಗೆದು”ಕೊಳ್ಳುವ ಆಮಂತ್ರಣವನ್ನು ನೀಡುವ ಸುಯೋಗ ನಮಗಿದೆ. (ಪ್ರಕ. 22:1, 17) ನಾವು ಇದನ್ನು ಫೆಬ್ರವರಿ ತಿಂಗಳಿನಲ್ಲಿ ಹೇಗೆ ಮಾಡಸಾಧ್ಯವಿದೆ? ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ಇಲ್ಲವೆ ಅರ್ಧ ದರ ಅಥವಾ ವಿಶೇಷ ದರದಲ್ಲಿ ನೀಡಲಿಕ್ಕಾಗಿ ಪಟ್ಟಿಮಾಡಲ್ಪಟ್ಟ ಹಳೆಯ ಪ್ರಕಾಶನಗಳಲ್ಲಿ ಯಾವುದೇ ಪ್ರಕಾಶನವನ್ನು ನೀಡುವ ಮೂಲಕವೇ. ಈ ಪುಸ್ತಕಗಳಲ್ಲಿ ಯಾವುದೇ ಪುಸ್ತಕವು ಸ್ಥಳಿಕ ಭಾಷೆಯಲ್ಲಿ ಲಭ್ಯವಿರದಿದ್ದಲ್ಲಿ, ನಿತ್ಯ ಜೀವಕ್ಕೆ ನಡೆಸುವ ಜ್ಞಾನ ಅಥವಾ ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕಗಳಲ್ಲಿ ಒಂದನ್ನು ನೀಡಬಹುದು. ಈ ಮುಂದಿನ ನಿರೂಪಣೆಗಳನ್ನು ಉಪಯೋಗಿಸಿ ನೋಡಲು ನೀವು ಬಯಸಬಹುದು:
2 ಅನೇಕ ಜನರು ಆರೋಗ್ಯದ ವಿಷಯಗಳ ಕುರಿತು ಚಿಂತಿತರಾಗಿರುವ ಕಾರಣ, ಈ ಪ್ರಸ್ತಾವನೆಯನ್ನು ನೀವು ಪರಿಣಾಮಕಾರಿಯಾಗಿ ಕಂಡುಕೊಳ್ಳಬಹುದು:
◼“ಗುಣಮಟ್ಟದ ಆರೋಗ್ಯ ಆರೈಕೆಯ ಏರುತ್ತಿರುವ ಬೆಲೆಯ ಕುರಿತು ಅನೇಕರು ಚಿಂತಿತರಾಗಿದ್ದಾರೆ. ಬಹುಶಃ ನೀವೂ ಈ ವಿಷಯದ ಕುರಿತು ಯೋಚಿಸಿದ್ದೀರಿ. [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಸಮಸ್ಯೆಗೆ ಶಾಶ್ವತವಾದ ಪರಿಹಾರವಿದೆಯೆ? [ಪ್ರತಿಕ್ರಿಯೆಗಾಗಿ ಕಾಯಿರಿ.] ಇಲ್ಲೊಂದು ಅದ್ಭುತಕರವಾದ ಪ್ರತೀಕ್ಷೆಯಿದೆ.” ಪ್ರಕಟನೆ 21:3, 4ನ್ನು ಓದಿರಿ. ಅನಂತರ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು 162ನೆಯ ಪುಟದಲ್ಲಿರುವ ದೃಷ್ಟಾಂತಕ್ಕೆ ತೆರೆದು, ಅದನ್ನು ವಿವರಿಸಲು 164ನೆಯ ಪುಟದಲ್ಲಿರುವ 17 ಮತ್ತು 18ನೆಯ ಪ್ಯಾರಗ್ರಾಫ್ಗಳನ್ನು ಉಪಯೋಗಿಸಿರಿ. ಹೀಗೆ ಹೇಳುವ ಮೂಲಕ ಸಮಾಪ್ತಿಗೊಳಿಸಿರಿ: “ಅಂತಹ ಪರಿಸ್ಥಿತಿಗಳು ಹೇಗೆ ಮತ್ತು ಯಾವಾಗ ಬರಲಿವೆ ಎಂಬುದನ್ನು ಈ ಪ್ರಕಾಶನವು ಚರ್ಚಿಸುತ್ತದೆ.” ಪುಸ್ತಕವನ್ನು ನೀಡಿ, ಹಿಂದಿರುಗುವ ಏರ್ಪಾಡುಗಳನ್ನು ಮಾಡಿರಿ.
3 ಪುನರ್ಭೇಟಿಯನ್ನು ಮಾಡುವಾಗ, ಹೀಗೆ ಹೇಳುವ ಮೂಲಕ ನೀವು ನಿಮ್ಮ ಚರ್ಚೆಯನ್ನು ಮುಂದುವರಿಸಬಹುದು:
◼“ಕಳೆದ ಬಾರಿ ನಾನಿಲ್ಲಿದ್ದಾಗ, ಆರೋಗ್ಯ ಸಮಸ್ಯೆಗಳಿಗಿರುವ ಒಂದು ಶಾಶ್ವತವಾದ ಪರಿಹಾರದ ಕುರಿತು ನಾವು ಮಾತಾಡಿದೆವು. ಯಾರೊಬ್ಬರೂ ಅಸ್ವಸ್ಥರಾಗಿರದ ಒಂದು ಸಮಯವು ಎಂದಾದರೂ ಬರುವುದೆಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಗಮನಾರ್ಹವಾದ ಹೇಳಿಕೆಯನ್ನು ಗಮನಿಸಿರಿ.” ಯೆಶಾಯ 33:24ನ್ನು ಓದಿರಿ. ತದನಂತರ ಅಪೇಕ್ಷಿಸು ಬ್ರೋಷರನ್ನು ಪಾಠ 5ಕ್ಕೆ ತೆರೆದು, 5-6ನೆಯ ಪ್ಯಾರಗ್ರಾಫ್ಗಳನ್ನು ಚರ್ಚಿಸಿರಿ. ಪಾಠದ ಆರಂಭದಲ್ಲಿರುವ ಅನುಗುಣವಾದ ಪ್ರಶ್ನೆಗಳನ್ನು ಕೇಳಿರಿ ಮತ್ತು ಉದ್ಧರಿಸಲ್ಪಟ್ಟ ವಚನಗಳಲ್ಲಿ ಕೆಲವೊಂದನ್ನು ತೆರೆದುನೋಡಿರಿ. ಅನಾರೋಗ್ಯ ಮತ್ತು ಮರಣದ ತೆಗೆದುಹಾಕುವಿಕೆಯು, ಭೂಮಿಗಾಗಿರುವ ದೇವರ ಮೂಲ ಉದ್ದೇಶದ ನೆರವೇರಿಕೆಯ ಒಂದು ಭಾಗವಾಗಿದೆ ಎಂಬುದನ್ನು ತಿಳಿಸಿರಿ. ಅದೇ ಪಾಠದಲ್ಲಿ 1-4 ಮತ್ತು 7ನೆಯ ಪ್ಯಾರಗ್ರಾಫ್ಗಳನ್ನು ಚರ್ಚಿಸಲು ಹಿಂದಿರುಗುವ ಏರ್ಪಾಡನ್ನು ಮಾಡಿರಿ.
4 ಅಕಾಲಿಕ ಮರಣವನ್ನೊಳಗೊಂಡ ಒಂದು ಪ್ರಚಲಿತ ವಾರ್ತೆಯು ಜನರ ಮನಸ್ಸಿನಲ್ಲಿರುವುದಾದರೆ, ನೀವು ಈ ಪ್ರಸ್ತಾವನೆಯನ್ನು ಉಪಯೋಗಿಸಿ ನೋಡಬಹುದು:
◼“ನೀವು [ವಾರ್ತೆಯನ್ನು ತಿಳಿಸಿ] ಇದರ ಕುರಿತು ಕೇಳಿರಬಹುದು. ಜೀವಿತಗಳು ದುರಂತಮಯವಾಗಿ ಕಡಿಮೆಗೊಳಿಸಲ್ಪಟ್ಟಾಗ, ದುರಂತಕ್ಕೆ ಬಲಿಯಾದವರ ಕುಟುಂಬಗಳಿಗೆ ಯಾವ ರೀತಿಯ ಸಾಂತ್ವನವನ್ನು ನೀಡಸಾಧ್ಯವಿದೆಯೆಂದು ಅನೇಕರು ಯೋಚಿಸುತ್ತಾರೆ. ನೀವೇನು ನೆನಸುತ್ತೀರಿ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಆಮೇಲೆ, ಜ್ಞಾನ ಪುಸ್ತಕದ 86ನೆಯ ಪುಟವನ್ನು ತೆರೆದು, ಚಿತ್ರಿಸಲ್ಪಟ್ಟಿರುವ ಪುನರುತ್ಥಾನದ ದೃಶ್ಯವನ್ನು ತೋರಿಸಿರಿ. ಹೀಗೆ ಹೇಳುತ್ತಾ ಮುಂದುವರಿಸಿ: “ಭೂಪ್ರಮೋದವನದಲ್ಲಿ ನೀತಿವಂತರೂ ಅನೀತಿವಂತರೂ ಪುನಃ ಜೀವಿತಕ್ಕೆ ತರಲ್ಪಡುವ ವಿಷಯವನ್ನು ತಿಳಿದು ಅನೇಕರು ಆಶ್ಚರ್ಯಪಡುತ್ತಾರೆ. [87ನೆಯ ಪುಟದಲ್ಲಿ, 17ನೆಯ ಪ್ಯಾರಗ್ರಾಫ್ನಲ್ಲಿ ಉಲ್ಲೇಖಿಸಲ್ಪಟ್ಟ ಅ. ಕೃತ್ಯಗಳು 24:15ನ್ನು ಓದಿ, ನಂತರ ಆ ಪ್ಯಾರಗ್ರಾಫ್ನಲ್ಲಿರುವ ವಿವರಣೆಯನ್ನು ನೀಡಿರಿ.] ಭವಿಷ್ಯತ್ತಿಗಾಗಿರುವ ದೇವರ ಉದ್ದೇಶದ ಕುರಿತಾದ ಇನ್ನೂ ಅನೇಕ ಆಸಕ್ತಿಕರ ವಿವರಗಳನ್ನು ಈ ಪುಸ್ತಕವು ಚರ್ಚಿಸುತ್ತದೆ. ಒಂದು ಪ್ರತಿಯನ್ನು ಪಡೆದು, ಓದುವಂತೆ ನಾನು ಶಿಫಾರಸ್ಸು ಮಾಡುತ್ತೇನೆ.” ವ್ಯಕ್ತಿಯ ನಿರ್ದಿಷ್ಟ ಅಭಿರುಚಿಗಳು ಮತ್ತು ಚಿಂತೆಗಳ ಟಿಪ್ಪಣಿ ಮಾಡಿಕೊಳ್ಳುತ್ತಾ, ಹಿಂದಿರುಗುವ ಏರ್ಪಾಡುಗಳನ್ನು ಮಾಡಿರಿ.
5 ನೀವು ಪುನಃ ಭೇಟಿಮಾಡುವಾಗ, ಮನೆಯವನಿಗೆ ನಿಮ್ಮ ನಿರೂಪಣೆಯನ್ನು ಸರಿಹೊಂದಿಸಿರಿ. ಬಹುಶಃ ನೀವು ಹೀಗೆ ಹೇಳಬಹುದು:
◼“ನಾವು ಕಳೆದ ಬಾರಿ ಮಾತಾಡಿದಾಗ, ಭೂಮಿಗಾಗಿರುವ ದೇವರ ಉದ್ದೇಶದ ಕುರಿತು ನೀವು ನುಡಿದ ಒಂದು ಹೇಳಿಕೆ ನನಗೆ ಇಷ್ಟವಾಯಿತು. [ಹೇಳಿಕೆಯನ್ನು ಮತ್ತೆ ಹೇಳಿರಿ.] ನಿಮಗೆ ಇಷ್ಟವಾಗಬಹುದೆಂದು ನಾನು ನೆನಸುವ ಒಂದಿಷ್ಟು ಮಾಹಿತಿಯನ್ನು ನಾನು ತಂದಿದ್ದೇನೆ.” ಅಪೇಕ್ಷಿಸು ಬ್ರೋಷರಿನ ಪಾಠ 5ನ್ನು ತೆರೆಯಿರಿ. ಆ ಪಾಠದಲ್ಲಿ ಮನೆಯವನ ಗಮನವನ್ನು ಆಕರ್ಷಿಸುವಷ್ಟು ಪ್ಯಾರಗ್ರಾಫ್ಗಳನ್ನು ಓದಿ, ಚರ್ಚಿಸಿರಿ. ಪಾಠವನ್ನು ಮುಂದುವರಿಸಲು ಹಿಂದಿರುಗುವ ಒಂದು ಸಮಯವನ್ನು ನಿಗದಿಪಡಿಸಿದ ಬಳಿಕ, ಸಭೆಯ ಕೂಟದ ಸಮಯಗಳನ್ನು ತಿಳಿಯಪಡಿಸುವ ಒಂದು ಕರಪತ್ರವನ್ನು ಮನೆಯವನಿಗೆ ಕೊಡಿರಿ. ಬಹಿರಂಗ ಕೂಟದ ಬಗ್ಗೆ ವಿವರಿಸಿ, ಹಾಜರಾಗುವಂತೆ ಅವನನ್ನು ಆಮಂತ್ರಿಸಿರಿ.
6 ಹಳೆಯ ಪುಸ್ತಕಗಳನ್ನು ನೀಡುವಾಗ, ಕಿರುಹೊತ್ತಗೆಯೊಂದನ್ನು ನೀಡುವ ಒಂದು ಸರಳ ನಿರೂಪಣೆಯನ್ನು ನೀವು ಇಷ್ಟಪಡುವುದಾದರೆ, ನೀವು ಹೀಗೆ ಹೇಳಬಹುದು:
◼“ಶಾಂತಿಭರಿತ ಹೊಸ ಲೋಕದಲ್ಲಿ ಜೀವನ” ಎಂಬ ಶೀರ್ಷಿಕೆಯ ಈ ಕಿರುಹೊತ್ತಗೆಯನ್ನು ನಿಮಗೆ ಕೊಡಲು ನಾನು ಇಷ್ಟಪಡುತ್ತೇನೆ. ಅದನ್ನು ಮನೆಯವನ ಕೈಗೆ ಕೊಟ್ಟು, ನೀವು ಮೊದಲನೆಯ ಪ್ಯಾರಗ್ರಾಫನ್ನು ಓದುವಾಗ, ನಿಮ್ಮೊಂದಿಗೆ ಓದುವಂತೆ ಅವನಲ್ಲಿ ಕೇಳಿಕೊಳ್ಳಿರಿ. ಎಬ್ಬಿಸಲ್ಪಟ್ಟ ಪ್ರಶ್ನೆಗಳಿಗೆ ಅವನು ಪ್ರತಿಕ್ರಿಯಿಸುವಂತೆ ಬಿಡಿರಿ. ಎರಡನೆಯ ಪ್ಯಾರಗ್ರಾಫನ್ನು ಓದಿ, ನೀವು ನೀಡುತ್ತಿರುವ ಯಾವುದೇ ಪುಸ್ತಕದಲ್ಲಿರುವ ಪ್ರಮೋದವನದ ಚಿತ್ರವನ್ನು ತೆರೆಯಿರಿ. ಹೀಗೆ ಹೇಳುವ ಮೂಲಕ ಮುಂದುವರಿಸಿರಿ: “ಭವಿಷ್ಯತ್ತಿಗಾಗಿರುವ ಬೈಬಲಿನ ಅದ್ಭುತಕರವಾದ ವಾಗ್ದಾನಗಳ ಕುರಿತು ಈ ಪುಸ್ತಕವು ಹೆಚ್ಚಿನ ವಿವರಗಳನ್ನು ಕೊಡುತ್ತದೆ.” ಪುಸ್ತಕವನ್ನು ನೀಡಿ, ಪುನರ್ಭೇಟಿಗಾಗಿ ಏರ್ಪಡಿಸಿರಿ.
7 ಇತರರಿಗೆ ಒಂದು ಚಿತ್ತಾಕರ್ಷಕವಾದ ಆಮಂತ್ರಣವನ್ನು ನಾವು ನೀಡುವಾಗ, ಯೆಹೋವನು ಈಗ ಲಭ್ಯಗೊಳಿಸುತ್ತಿರುವ ಜೀವಜಲದ ಬಳಿಗೆ ಅವರು ಬರುವಂತೆ ಅದು ಮಾಡಬಹುದು. ಆದುದರಿಂದ, ದಾಹಪಡುತ್ತಿರುವ ಪ್ರತಿಯೊಬ್ಬರಿಗೆ ನಾವು “ಬಾ” ಅನ್ನೋಣ.—ಪ್ರಕ. 22:17.