ಯುವ ಜನರೇ—ನಿಮ್ಮ ಶಾಲಾಶಿಕ್ಷಣದ ಪ್ರಯೋಜನವನ್ನು ಪಡೆದುಕೊಳ್ಳಿರಿ
1 ಬೇಸಗೆ ರಜೆಯ ನಂತರ, ಪುನಃ ಶಾಲೆಗೆ ಹೋಗಲು ನಿಮಗೆ ಹೇಗನಿಸಿತು? ಇನ್ನೊಂದು ವರ್ಷದ ಶಾಲಾಶಿಕ್ಷಣದಿಂದ ನಿಮಗೆ ಪ್ರಯೋಜನವಾಗುತ್ತಿದೆಯೊ? ನಿಮ್ಮ ಸಹಪಾಠಿಗಳು ಮತ್ತು ಶಿಕ್ಷಕರೊಂದಿಗೆ ಸತ್ಯವನ್ನು ಹಂಚಿಕೊಳ್ಳಲು ಶಾಲೆಯು ನಿಮಗೆ ಕೊಡುವ ಸಂದರ್ಭಗಳ ಪ್ರಯೋಜನವನ್ನು ಪಡೆದುಕೊಳ್ಳುವಿರೊ? ಶಾಲೆಯಲ್ಲಿ ನೀವು ನಿಮ್ಮಿಂದ ಸಾಧ್ಯವಿರುವಷ್ಟು ಅತ್ಯುತ್ತಮವಾದುದನ್ನು ಮಾಡಲು ಬಯಸುತ್ತೀರೆಂದು ನಮಗೆ ಭರವಸೆಯಿದೆ.
2 ಒಬ್ಬ ಒಳ್ಳೆಯ ವಿದ್ಯಾರ್ಥಿಯಾಗಿರಿ: ನಿಮ್ಮ ಕ್ಲಾಸ್ಗಳಿಗೆ ಹಾಜರಾಗುವಾಗ ನೀವು ಚೆನ್ನಾಗಿ ತಯಾರಿಯನ್ನು ಮಾಡಿ, ಮತ್ತು ತುಂಬ ಗಮನ ಕೊಟ್ಟು ಕೇಳಿಸಿಕೊಳ್ಳುವಲ್ಲಿ, ನೀವು ಶಾಶ್ವತವಾದ ಪ್ರಯೋಜನಗಳನ್ನು ಪಡೆಯುವಿರಿ. ನಿಮ್ಮ ಹೋಮ್ವರ್ಕನ್ನು ಶ್ರದ್ಧೆಯಿಂದ ಮಾಡಿರಿ. ಆದರೆ ನಿಮ್ಮ ಶಾಲಾಕೆಲಸವು, ದೇವಪ್ರಭುತ್ವ ಚಟುವಟಿಕೆಗಳಿಗೆ ಅಡ್ಡಬರುವಂತೆ ಬಿಡಬೇಡಿರಿ.—ಫಿಲಿ. 1:10.
3 ಯೆಹೋವನ ಸಾಕ್ಷಿಗಳು ಮತ್ತು ಶಿಕ್ಷಣ (ಇಂಗ್ಲಿಷ್) ಎಂಬ ಬ್ರೋಷರನ್ನು ಓದುವ ಮೂಲಕ ಶಾಲಾ ವರ್ಷವನ್ನು ಆರಂಭಿಸಿರಿ. ಅನಂತರ, ನೀವು ಅಥವಾ ನಿಮ್ಮ ಹೆತ್ತವರು ನಿಮ್ಮ ಶಿಕ್ಷಕರಲ್ಲಿ ಪ್ರತಿಯೊಬ್ಬರಿಗೆ ಒಂದು ಪ್ರತಿಯನ್ನು ಕೊಡಬೇಕು. ಅವರಿಗೆ ಯಾವುದಾದರೂ ಪ್ರಶ್ನೆಗಳಿರುವಲ್ಲಿ, ಅವುಗಳಿಗೆ ಉತ್ತರಗಳು ಕೊಡಲ್ಪಡುವವು ಎಂದು ಅವರಿಗೆ ಹೇಳಿರಿ. ಇದರಿಂದ, ಅವರು ನಿಮ್ಮ ಮೂಲತತ್ವಗಳನ್ನು ಮತ್ತು ನಂಬಿಕೆಗಳನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳಲು, ಮತ್ತು ನಿಮಗೆ ಕಲಿಸಲ್ಪಟ್ಟಿರುವ ವಿಷಯವನ್ನು ನೀವು ಅನ್ವಯಿಸುವಾಗ ನಿಮ್ಮೊಂದಿಗೆ ಸಹಕರಿಸಲು ಅವರಿಗೆ ಸಹಾಯವಾಗುವುದು. ನೀವು ಅಮೂಲ್ಯವಾದ ಶಿಕ್ಷಣವನ್ನು ಪಡೆದುಕೊಳ್ಳುವಂತೆ ಅವರು ನಿಮಗೆ ಸಹಾಯಮಾಡುವಾಗ, ನೀವು ಮತ್ತು ನಿಮ್ಮ ಹೆತ್ತವರು ಅವರೊಂದಿಗೆ ಸಹಕರಿಸಲು ಬಯಸುತ್ತೀರೆಂಬ ಆಶ್ವಾಸನೆಯನ್ನೂ ಇದು ಅವರಿಗೆ ಕೊಡುವುದು.
4 ಒಬ್ಬ ಒಳ್ಳೆಯ ಸಾಕ್ಷಿಯಾಗಿರಿ: ಶಾಲೆಯನ್ನು, ಅನೌಪಚಾರಿಕ ಸಾಕ್ಷಿಯನ್ನು ಕೊಡಲಿಕ್ಕಾಗಿರುವ ನಿಮ್ಮ ವೈಯಕ್ತಿಕ ಟೆರಿಟೊರಿಯಾಗಿ ಏಕೆ ಪರಿಗಣಿಸಬಾರದು? ಮುಂದಿನ ಶಾಲಾ ವರ್ಷದಲ್ಲಿ, ನಿಮಗೆ ಸಾಕ್ಷಿ ನೀಡಲು ಅಪೂರ್ವ ಸಂದರ್ಭಗಳಿರುವವು. ಇತರರೊಂದಿಗೆ ಹಂಚಿಕೊಳ್ಳಲ್ಪಡುವಾಗ, ‘ನಿಮ್ಮನ್ನೂ ನಿಮ್ಮ ಉಪದೇಶ ಕೇಳುವವರನ್ನೂ ರಕ್ಷಿಸ’ಸಾಧ್ಯವಿರುವ ಅದ್ಭುತಕರವಾದ ಆತ್ಮಿಕ ಜ್ಞಾನವು ನಿಮ್ಮ ಬಳಿ ಇದೆ. (1 ತಿಮೊ. 4:16) ಆದರ್ಶಪ್ರಾಯ ಕ್ರೈಸ್ತ ನಡತೆಯನ್ನು ಕಾಪಾಡಿಕೊಳ್ಳುವ ಮೂಲಕ ಮತ್ತು ಸೂಕ್ತವಾಗಿರುವಾಗಲೆಲ್ಲ ಸಾಕ್ಷಿನೀಡುವ ಮೂಲಕ, ಸ್ವತಃ ನಿಮಗೆ ಮತ್ತು ಇತರರಿಗೆ ಪ್ರಯೋಜನವಾಗುವುದು.
5 ಒಬ್ಬ ಯುವ ಸಹೋದರನು, ತನ್ನ ಶಾಲೆಯಲ್ಲಿದ್ದ ಜೊತೆ ವಿದ್ಯಾರ್ಥಿಗಳಿಗೆ ಅನೌಪಚಾರಿಕವಾಗಿ ಸಾಕ್ಷಿನೀಡಿದನು. ಅನುಕೂಲಕರವಾದ ಪ್ರತಿಕ್ರಿಯೆಯನ್ನು ತೋರಿಸಿದವರಲ್ಲಿ, ಒಬ್ಬ ಕ್ಯಾತೊಲಿಕನು, ದೇವರನ್ನು ನಂಬುವವರ ಅಪಹಾಸ್ಯಮಾಡುತ್ತಿದ್ದ ಒಬ್ಬ ನಾಸ್ತಿಕನು, ಮತ್ತು ಒಬ್ಬ ಅತಿಯಾದ ಧೂಮಪಾನದ ಚಟದೊಂದಿಗೆ, ಭಾರೀ ಕುಡುಕನಾಗಿದ್ದ ಒಬ್ಬ ಯೌವನಸ್ಥನು, ಸೇರಿದ್ದರು. ಈ ಯುವ ಸಹೋದರನು ಒಟ್ಟಿನಲ್ಲಿ, ತನ್ನ ಸಮಾನಸ್ಥರಲ್ಲಿ 15 ಮಂದಿ, ಸಮರ್ಪಣೆ ಮಾಡಿ ಮತ್ತು ದೀಕ್ಷಾಸ್ನಾನವನ್ನು ಪಡೆದುಕೊಳ್ಳುವಂತೆ ಸಹಾಯಮಾಡಿದನು!
6 ಹಾಗಾದರೆ, ಯುವ ಜನರೇ, ಶ್ರದ್ಧಾಪೂರ್ವಕವಾಗಿ ಕಲಿಯಿರಿ ಮತ್ತು ನಿಮ್ಮ ಅಪೂರ್ವವಾದ ಸಾಕ್ಷಿನೀಡುವ ಟೆರಿಟೊರಿಯಲ್ಲಿ ಕೆಲಸಮಾಡಿರಿ. ಆಗ ನೀವು, ಶಾಲೆಗೆ ಹೋಗುವುದರಿಂದ ಬರುವ ಅತಿ ಶ್ರೇಷ್ಠವಾದ ಪ್ರಯೋಜನದಲ್ಲಿ ಆನಂದಿಸುವಿರಿ.