ನಿಮ್ಮ ಸಹೋದರರ ಪರಿಚಯಮಾಡಿಕೊಳ್ಳಿರಿ
1 ಒಬ್ಬ ಸಹೋದರನಿಗಿಂತಲೂ ಆಪ್ತನಾಗಿರುವ ವ್ಯಕ್ತಿಯನ್ನು ಬೈಬಲ್ ಒಬ್ಬ ನಿಜ ಸ್ನೇಹಿತನೆಂದು ವರ್ಣಿಸುತ್ತದೆ. ಈ ಸ್ನೇಹಿತನು ಯಾವಾಗಲೂ ತನ್ನ ಪ್ರೀತಿ ಮತ್ತು ನಿಷ್ಠೆಯನ್ನು ತೋರಿಸುತ್ತಾನೆ, ಮತ್ತು ತನ್ನ ಸಂಗಡಿಗನು ಕಷ್ಟದಲ್ಲಿರುವಾಗ ಸಹಾಯಮಾಡುತ್ತಾನೆ. (ಜ್ಞಾನೋ. 17:17; 18:24) ನಾವು ಒಬ್ಬರನ್ನೊಬ್ಬರು ಪರಿಚಯಮಾಡಿಕೊಳ್ಳಲು ಮತ್ತು ಪ್ರೀತಿಸಲು ಪ್ರಯತ್ನಿಸುವುದಾದರೆ, ಸಭೆಯಲ್ಲಿ ನಮಗೆ ಅಂತಹ ಸ್ನೇಹಿತರ ಕೊರತೆಯಿರದು.—ಯೋಹಾ. 13:35.
2 ಕೂಟಗಳ ಮುಂಚೆ ಮತ್ತು ನಂತರ, ನಮ್ಮ ಸಹೋದರರೊಂದಿಗೆ ಪರಿಚಿತರಾಗುವ ಉತ್ತಮ ಅವಕಾಶಗಳು ಇರುತ್ತವೆ. ಹೃದಯೋಲ್ಲಾಸಕರ ಮತ್ತು ಲವಲವಿಕೆಯ ಸಾಹಚರ್ಯದಲ್ಲಿ ಆನಂದಿಸಲಿಕ್ಕಾಗಿ ಕೂಟಕ್ಕೆ ಬೇಗನೆ ಬಂದು, ಆಮೇಲೆ ಸ್ವಲ್ಪ ಹೆಚ್ಚು ಸಮಯ ಹಿಂದೆ ಉಳಿಯಬಾರದೇಕೆ? ವೃದ್ಧ, ಅನುಭವಿ ವ್ಯಕ್ತಿಗಳನ್ನು ಮತ್ತು ಎಳೆಯ ಅಥವಾ ನಾಚಿಕೊಳ್ಳುವ ಸ್ವಭಾವದವರನ್ನು ಸೇರಿಸಿ, ಬೇರೆ ಬೇರೆ ಸಹೋದರರೊಂದಿಗೆ ಸಂಭಾಷಿಸಿರಿ.
3 ಸಂಭಾಷಣೆಗಳನ್ನು ಆರಂಭಿಸಿರಿ: ನಿಮ್ಮ ಸಹೋದರರಿಗೆ ಕೇವಲ ನಮಸ್ಕಾರ ಎಂದು ಹೇಳುವುದಕ್ಕಿಂತಲೂ ಹೆಚ್ಚಿನದನ್ನು ಮಾಡಿರಿ. ಕ್ಷೇತ್ರ ಸೇವೆಯಲ್ಲಿ ನಿಮಗಾದ ಒಂದು ಅನುಭವ, ಇತ್ತೀಚಿನ ಪತ್ರಿಕೆಯೊಂದರಲ್ಲಿ ಕಂಡುಕೊಂಡಂತಹ ಆಸಕ್ತಿಕರ ವಿಷಯ, ಅಥವಾ ಆಗತಾನೇ ಮುಗಿದಿರುವ ಕೂಟದ ಕುರಿತಾದ ಒಂದು ಹೇಳಿಕೆಯನ್ನು ಹಂಚಿಕೊಳ್ಳುವ ಮೂಲಕ, ನೀವು ಒಂದು ಸಂಭಾಷಣೆಯನ್ನು ಆರಂಭಿಸಬಹುದು. ಒಬ್ಬ ಒಳ್ಳೆಯ ಕೇಳುಗರಾಗಿರುವ ಮೂಲಕ, ಅವರ ಅನುಭವಗಳು ಮತ್ತು ಅವರು ಕಲಿಯುತ್ತಿರುವ ವಿಷಯಗಳ ಕುರಿತು ಮಾತಾಡುವಂತೆ ಉತ್ತೇಜಿಸುವ ಮೂಲಕ, ನೀವು ನಿಮ್ಮ ಸಹೋದರರ ಕುರಿತಾಗಿ ಹೆಚ್ಚನ್ನು ತಿಳಿದುಕೊಳ್ಳಸಾಧ್ಯವಿದೆ. ಯೆಹೋವನ ಕುರಿತಾಗಿ ಅವರಿಗೆ ಹೇಗೆ ತಿಳಿದುಬಂತು ಎಂದು ಕೇಳುವುದಷ್ಟೇ ತುಂಬ ಮಾಹಿತಿಯನ್ನು ಒದಗಿಸಬಹುದು. ಕೆಲವರ ಜೀವಿತಗಳಲ್ಲಿ ನಂಬಿಕೆಯನ್ನು ಬಲಪಡಿಸುವ ಅನುಭವಗಳು ನಡೆದಿವೆ. ಇನ್ನೂ ಬೇರೆಯವರು ಊಹಿಸಲಸಾಧ್ಯವಾದಂತಹ ಪರಿಸ್ಥಿತಿಗಳನ್ನು ಈಗ ತಾಳಿಕೊಳ್ಳುತ್ತಿದ್ದಾರೆ. ಇದನ್ನು ಅರಿತುಕೊಳ್ಳುವುದು, ನಿಜ ಸ್ನೇಹಿತರೋಪಾದಿ ನಾವು ಇತರರ ಅಗತ್ಯಗಳಿಗೆ ಸೂಕ್ಷ್ಮಗ್ರಾಹಿಗಳೂ ಪ್ರತಿಕ್ರಿಯೆ ತೋರಿಸುವವರೂ ಆಗಿರುವಂತೆ ಸಹಾಯಮಾಡುವುದು.
4 ಪರಸ್ಪರ ಸ್ನೇಹಬೆಳೆಸಿರಿ: ಒಬ್ಬ ಸಹೋದರಿಗೆ, ತನ್ನ ಮಗಳ ಮರಣದ ನಂತರ, ಪುನರುತ್ಥಾನದ ಕುರಿತು ತಿಳಿಸುವ ರಾಜ್ಯ ಗೀತೆಗಳನ್ನು ಹಾಡಲು ಕಷ್ಟವಾಗುತ್ತಿತ್ತು. ಅವಳು ಜ್ಞಾಪಿಸಿಕೊಳ್ಳುವುದು: “ಒಂದು ಸಾರಿ, ಆಚೆ ಸಾಲಿನಲ್ಲಿ ಕೂತಿದ್ದ ಒಬ್ಬ ಸಹೋದರಿಯು ನಾನು ಅಳುತ್ತಿರುವುದನ್ನು ಕಂಡಳು. ಆಕೆ ಹತ್ತಿರ ಬಂದು, ನನ್ನನ್ನು ತೋಳಿನಿಂದಾವರಿಸಿ, ನನ್ನೊಂದಿಗೆ ಆ ಉಳಿದ ಸಂಗೀತವನ್ನು ಹಾಡಿದಳು. ಆ ಸಹೋದರ ಸಹೋದರಿಯರಿಗಾಗಿ ನಾನು ಪ್ರೀತಿಯಿಂದ ತುಂಬಿದವಳಾದೆ, ಮತ್ತು ನಮ್ಮ ಸಹಾಯವು ಇರುವುದು ಅಲ್ಲಿ ರಾಜ್ಯ ಸಭಾಗೃಹದಲ್ಲಿಯೇ ಎಂದು ಸ್ಪಷ್ಟವಾಗಿ ತಿಳಿಯುತ್ತಾ, ಆ ಕೂಟಗಳಿಗೆ ಹೋದದ್ದಕ್ಕಾಗಿ ನಾನು ಬಲು ಸಂತೋಷಗೊಂಡೆ.” ಅಗತ್ಯವಿರುವಾಗಲೆಲ್ಲಾ ಸಾಂತ್ವನವನ್ನು ಮತ್ತು ಎಲ್ಲ ಸಮಯದಲ್ಲೂ ಉತ್ತೇಜನವನ್ನು ನೀಡುವ ಮೂಲಕ, ನಾವು ನಮ್ಮ ಸಹೋದರರಿಗೆ ನೆರವಾಗಬೇಕು.—ಇಬ್ರಿ. 10:24, 25.
5 ಈ ಹಳೆಯ ಲೋಕವು ಹೆಚ್ಚೆಚ್ಚು ತೊಂದರೆದಾಯಕವಾಗುತ್ತಾ ಇರುವುದರಿಂದ, ನಾವು ನಮ್ಮ ಸಹೋದರರನ್ನು ಇನ್ನೂ ಹೆಚ್ಚಾಗಿ ಪರಿಚಯಮಾಡಿಕೊಳ್ಳುವ ದೃಢನಿಶ್ಚಯವನ್ನು ಮಾಡೋಣ. ನಿಷ್ಕಪಟ ಉತ್ತೇಜನದ ಈ ವಿನಿಮಯವು, ಎಲ್ಲರಿಗೂ ಒಂದು ಆಶೀರ್ವಾದವಾಗಿ ಪರಿಣಮಿಸುವುದು.—ರೋಮಾ. 1:11, 12.