ಮುಂದಾಗಿಯೇ ಯೋಜಿಸಿರಿ!
1 ನಮ್ಮ ಎಲ್ಲ ಆತ್ಮಿಕ ಅಗತ್ಯಗಳನ್ನು ತೃಪ್ತಿಪಡಿಸಲಿಕ್ಕಾಗಿ ರಚಿಸಲ್ಪಟ್ಟಿರುವ ದೇವಪ್ರಭುತ್ವ ಚಟುವಟಿಕೆಗಳ ಒಂದು ಕ್ರಮವಾದ ಕಾರ್ಯಕ್ರಮವನ್ನು ಯೆಹೋವನ ಸಂಸ್ಥೆಯು ಒದಗಿಸುತ್ತದೆ. ಸಂಚರಣ ಮೇಲ್ವಿಚಾರಕರ ಭೇಟಿಗಳು, ಸಮ್ಮೇಳನ ಮತ್ತು ಅಧಿವೇಶನಗಳು ಮತ್ತು ಸ್ಥಳಿಕವಾಗಿ ಯೋಜಿಸಲ್ಪಟ್ಟಿರುವ ಇತರ ವಿಶೇಷ ಚಟುವಟಿಕೆಗಳಂತಹ, ಏರ್ಪಡಿಸಲಾಗುವ ಪ್ರತಿಯೊಂದು ವಿಷಯದಿಂದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲು ಗಣ್ಯತೆಯು ನಮ್ಮನ್ನು ಪ್ರಚೋದಿಸುತ್ತದೆ. (ಮತ್ತಾ. 5:3) ಆದರೆ, ಕೆಲವರು ಇತರ ಯೋಜನೆಗಳನ್ನು ಮಾಡಿರುವುದರಿಂದ ಈ ಆತ್ಮಿಕ ಒದಗಿಸುವಿಕೆಗಳ ಪ್ರಯೋಜನವನ್ನು ಪಡೆದುಕೊಳ್ಳುವುದರಲ್ಲಿ ವಿಫಲರಾಗುತ್ತಾರೆ. ಇದನ್ನು ತಪ್ಪಿಸಲು ಏನು ಮಾಡಸಾಧ್ಯವಿದೆ? “ಹೆಚ್ಚು ಪ್ರಾಮುಖ್ಯ ವಿಷಯಗಳನ್ನು” ದೇವಪ್ರಭುತ್ವವಲ್ಲದ ಚಟುವಟಿಕೆಗಳು ಅದುಮಿಹಾಕುತ್ತಿಲ್ಲ ಎಂಬುದನ್ನು ನಾವು ಹೇಗೆ ಖಾತ್ರಿಪಡಿಸಿಕೊಳ್ಳಸಾಧ್ಯವಿದೆ?—ಫಿಲಿ. 1:10, (NW).
2 ವಿವೇಕಯುತ ಯೋಜನೆಯು ಅಗತ್ಯ: ಜ್ಞಾನೋಕ್ತಿ 21:5 ಬುದ್ಧಿವಾದವನ್ನು ಕೊಡುವುದು: “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ [“ಯೋಜನೆಗಳು,” NW] ಸಮೃದ್ಧಿ [“ಪ್ರಯೋಜನ,” NW]; ಆತುರಪಡುವವರಿಗೆಲ್ಲಾ ಕೊರತೆಯೇ.” ಆತ್ಮಿಕ “ಪ್ರಯೋಜನ”ವನ್ನು ಪಡೆದುಕೊಳ್ಳಬೇಕಾದರೆ, ಏರ್ಪಡಿಸಲ್ಪಟ್ಟಿರುವ ದೇವಪ್ರಭುತ್ವ ಚಟುವಟಿಕೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು ಶ್ರದ್ಧಾಪೂರ್ವಕವಾಗಿ ಮುಂದಾಗಿಯೇ ಯೋಜಿಸುವ ಅಗತ್ಯವಿದೆ. ಆತ್ಮಿಕ ಆಶೀರ್ವಾದಗಳನ್ನು ಕೊಯ್ಯುವುದಕ್ಕಾಗಿ, ಉಪಸ್ಥಿತರಾಗಿರಲು ಅಡ್ಡಿಯಾಗದಂತಹ ಸಮಯದಲ್ಲಿ ನಾವು ನಮ್ಮ ವೈಯಕ್ತಿಕ ಚಟುವಟಿಕೆಗಳನ್ನು ಶೆಡ್ಯೂಲ್ ಮಾಡಬೇಕು. ಮುಂಬರುತ್ತಿರುವ ದೇವಪ್ರಭುತ್ವ ಘಟನೆಗಳ ಬಗ್ಗೆ ಯೋಚಿಸದೆ, ನಾವು ಮಾಡಲು ಬಯಸುವ ವೈಯಕ್ತಿಕ ವಿಷಯಗಳಿಗೆ ಆತುರದಿಂದ ಯೋಜನೆಗಳನ್ನು ಮಾಡುವಲ್ಲಿ, ನಾವು ಆತ್ಮಿಕ “ಕೊರತೆ”ಯನ್ನು ಅನುಭವಿಸುವೆವು.
3 ಅದನ್ನು ತಪ್ಪಿಸಿಕೊಳ್ಳಬೇಡಿರಿ! ರಜಾದಿನಗಳಿಗಾಗಿ, ವ್ಯಾಪಾರಿ ಸಂಚಾರಗಳು, ಸಂಬಂಧಿಕರ ಭೇಟಿ, ಮುಂತಾದವುಗಳನ್ನು ಒಳಗೊಂಡು, ನಾವೆಲ್ಲರೂ ಭವಿಷ್ಯತ್ತಿಗಾಗಿ ಯೋಜನೆಗಳನ್ನು ಮಾಡುತ್ತೇವೆ. ನೀವು ಬದ್ಧರಾಗುವ ಅಥವಾ ನಿಮ್ಮ ಯೋಜನೆಗಳನ್ನು ಸಮಾಪ್ತಿಗೊಳಿಸುವ ಮುಂಚೆ, ಮುಂಬರುತ್ತಿರುವ ಆತ್ಮಿಕ ಚಟುವಟಿಕೆಗಳ ಶೆಡ್ಯೂಲನ್ನು ನೋಡಿರಿ. ನೀವು ಪರ ಊರಿಗೆ ಹೋಗುತ್ತಿರುವ ಸಮಯದಲ್ಲಿಯೇ ಸರ್ಕಿಟ್ ಮೇಲ್ವಿಚಾರಕನ ಸಂದರ್ಶನ ಅಥವಾ ಸಮ್ಮೇಳನವಿರುವುದಾದರೆ, ಅದಕ್ಕೆ ಹಾಜರಿರುವಂತೆ ನೀವು ನಿಮ್ಮ ಕೆಲಸಗಳನ್ನು ಪುನರ್‌ಏರ್ಪಡಿಸಿಕೊಳ್ಳಲು ಕಠಿನ ಪ್ರಯತ್ನಮಾಡಿರಿ. ಮುಂಬರಲಿರುವ ಪ್ರಾಮುಖ್ಯ ಘಟನೆಗಳ ಬಗ್ಗೆ ನಮಗೆ ಸಾಕಷ್ಟು ಮುಂಚಿತವಾಗಿಯೇ ತಿಳಿಸಲಾಗುತ್ತದೆ. ಸ್ಥಳಿಕವಾಗಿ ಯಾವುದನ್ನು ಯೋಜಿಸಲಾಗಿದೆ ಎಂಬುದನ್ನು ನಿಮ್ಮ ಸಭೆಯ ಹಿರಿಯರು ನಿಮಗೆ ತಿಳಿಸಬಲ್ಲರು.
4 ಹೆಚ್ಚು ಪ್ರಾಮುಖ್ಯವಾದ ವಿಷಯಗಳಿಗಾಗಿ ದೂರದೃಷ್ಟಿಯನ್ನು ಉಪಯೋಗಿಸಿ, ಮುಂದಾಗಿಯೇ ಯೋಜಿಸುವುದರ ಮೂಲಕ, ನಾವು “ಸುನೀತಿಯೆಂಬ ಫಲದಿಂದ ತುಂಬಿದವರಾಗಿಯೂ . . . ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ” ತರುವೆವು.—ಫಿಲಿ. 1:11.