ಅಧಿವೇಶನಗಳು—ಸಂತೋಷಿಸಲಿಕ್ಕಾಗಿರುವ ಸಮಯ!
1 ಯೆಹೋವನ ಸಾಕ್ಷಿಗಳ ಅಧಿವೇಶನಗಳು ಮಹಾ ಸಂತೋಷದ ಸಂದರ್ಭಗಳಾಗಿವೆ. ನೂರಕ್ಕಿಂತಲೂ ಹೆಚ್ಚು ವರ್ಷಗಳಿಂದ, ನಮ್ಮ ಸಂಸ್ಥೆಯಲ್ಲಿ ಆಗುತ್ತಿರುವಂತಹ ಅಭಿವೃದ್ಧಿಗೆ ಈ ಸಮ್ಮೇಳನಗಳು ಹೆಚ್ಚನ್ನು ಕೂಡಿಸಿವೆ. ಚಿಕ್ಕ ಪ್ರಾರಂಭಗಳಿಂದ ಆರಂಭಿಸುತ್ತಾ, ನಮ್ಮ ಲೋಕವ್ಯಾಪಕ ಕೆಲಸದ ಮೇಲೆ ಯೆಹೋವನ ಸಮೃದ್ಧವಾದ ಆಶೀರ್ವಾದಗಳನ್ನು ನಾವು ನೋಡಿದ್ದೇವೆ. 1893ರಲ್ಲಿ ಇಲಿನೊಯಿಯ ಶಿಕಾಗೋದಲ್ಲಿ ನಮ್ಮ ಆಧುನಿಕ ಸಮಯಗಳ ಮೊದಲ ಅಧಿವೇಶನವು ನಡೆಯಿತು. ಅಲ್ಲಿ, ಹಾಜರಿದ್ದ 360 ಮಂದಿಯಲ್ಲಿ 70 ಮಂದಿ ಯೆಹೋವನಿಗೆ ತಾವು ಮಾಡಿದ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಪಡೆದುಕೊಂಡರು. ಕಳೆದ ವರ್ಷದ “ದೇವರ ವಾಕ್ಯದ ಪ್ರಕಾರ ನಡೆಯುವವರು” ಜಿಲ್ಲಾ ಅಧಿವೇಶನಗಳಿಗೆ ಹಾಜರಿದ್ದವರ ಒಟ್ಟು ಸಂಖ್ಯೆ 94,54,055 ಆಗಿತ್ತು ಮತ್ತು ಅವರಲ್ಲಿ 1,29,367 ಮಂದಿ ದೀಕ್ಷಾಸ್ನಾನ ಪಡೆದುಕೊಂಡರು. ಸಂತೋಷಿಸಲಿಕ್ಕಾಗಿ ಎಂತಹ ಒಂದು ಅದ್ಭುತಕರ ಕಾರಣ!
2 ಬೈಬಲ್ ಕಾಲಗಳಿಂದ ಆರಂಭಿಸಿ, ಯೆಹೋವನಿಂದ ಉಪದೇಶವನ್ನು ಪಡೆದುಕೊಳ್ಳುವುದರಲ್ಲಿ ದೇವಜನರ ಕೂಟಗಳು ಪ್ರಮುಖ ಪಾತ್ರವನ್ನು ವಹಿಸಿವೆ. ಎಜ್ರ ಮತ್ತು ನೆಹೆಮೀಯರ ಕಾಲದಲ್ಲಿ, ಜನರು ಧರ್ಮಶಾಸ್ತ್ರದ ಓದುವಿಕೆಯನ್ನು “ಪ್ರಾತಃಕಾಲದಿಂದ ಮಧ್ಯಾಹ್ನದ ವರೆಗೂ” ಕೇಳಿಸಿಕೊಂಡರು. (ನೆಹೆ. 8:2, 3) ಆ ಸಂದರ್ಭದಲ್ಲಿ ಧರ್ಮಶಾಸ್ತ್ರದ ಹೆಚ್ಚು ಉತ್ತಮವಾದ ತಿಳುವಳಿಕೆಯನ್ನು ಪಡೆದುಕೊಂಡ ಕಾರಣ, ಜನರು “ಬಹಳವಾಗಿ ಸಂತೋಷಪಟ್ಟರು.” (ನೆಹೆ. 8:8, 12) ಯೆಹೋವನಿಂದ ಒಳ್ಳೆಯ ಉಪದೇಶವನ್ನು ಮತ್ತು ‘ಹೊತ್ತುಹೊತ್ತಿಗೆ’ ಆತ್ಮಿಕ ಆಹಾರವನ್ನು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕವಾಗಿ ಪಡೆದುಕೊಳ್ಳಲು ಅಧಿವೇಶನಗಳು ಉತ್ತಮವಾದ ಅವಕಾಶವನ್ನು ಒದಗಿಸುತ್ತವೆ ಎಂಬುದರ ಕುರಿತು ನಾವು ಸಂತೋಷಪಡುತ್ತೇವೆ. (ಮತ್ತಾ. 24:45) ಮನುಷ್ಯನು “[ಯೆಹೋವನ] ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕ”ಬೇಕು ಎಂದು ಯೇಸು ಹೇಳಿದ್ದರಿಂದ, ಅಧಿವೇಶನಗಳು ನಮ್ಮ ಆತ್ಮಿಕ ಹಿತಕ್ಕೆ ಅತ್ಯಾವಶ್ಯಕವಾಗಿವೆ.—ಮತ್ತಾ. 4:4.
3 ಹಾಜರಾಗಲು ಮಾಡುವ ಎಲ್ಲ ಪ್ರಯತ್ನಗಳು ಸಾರ್ಥಕ: ಈ ವರ್ಷದ “ದೇವರ ವಾಕ್ಯದ ಬೋಧಕರು” ಜಿಲ್ಲಾ ಅಧಿವೇಶನದ ಇಡೀ ಕಾರ್ಯಕ್ರಮಕ್ಕೆ ಹಾಜರಿರುವುದನ್ನು ನಾವೆಲ್ಲರೂ ನಮ್ಮ ವೈಯಕ್ತಿಕ ಗುರಿಯನ್ನಾಗಿ ಮಾಡಿಕೊಳ್ಳಬೇಕು. ಪ್ರತಿದಿನ ಕಾರ್ಯಕ್ರಮಕ್ಕೆ ಮುಂಚಿತವಾಗಿಯೇ ಹಾಜರಾಗುವಂತೆ ಮತ್ತು ಸಮಾಪ್ತಿಯ ಪ್ರಾರ್ಥನೆಗೆ “ಆಮೆನ್!” ಎಂದು ಹೇಳುವ ವರೆಗೂ ಅಲ್ಲಿಯೇ ಉಳಿಯುವಂತೆ ನಾವು ಯೋಜಿಸಬೇಕು. ಇದನ್ನು ಸಾಧಿಸಲು ನಮ್ಮ ಶೆಡ್ಯೂಲ್ನಲ್ಲಿ ಹೊಂದಾಣಿಕೆಗಳನ್ನು ಮಾಡಬೇಕಾಗಬಹುದು. ಅಧಿವೇಶನಕ್ಕೆ ಹಾಜರಾಗಲು ನಮ್ಮ ಉದ್ಯೋಗದಿಂದ ಬಿಡುವನ್ನು ಪಡೆದುಕೊಳ್ಳುವುದು ಒಂದುವೇಳೆ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ಆದುದರಿಂದ, ತನ್ನಷ್ಟಕ್ಕೇ ವಿಷಯಗಳು ನಡೆಯುವಂತೆ ಬಿಡದೆ, ನಾವು ದೃಢವಾದ ನಿಲುವನ್ನು ತೆಗೆದುಕೊಳ್ಳುವ ಆವಶ್ಯಕತೆಯಿದೆ. ನಮಗೆ ವಸತಿ ಸೌಕರ್ಯವನ್ನು ಅಥವಾ ಸಾರಿಗೆಯ ಆವಶ್ಯಕತೆಯಿರುವಲ್ಲಿ, ಅದಕ್ಕಾಗಿ ಮುಂಚಿತವಾಗಿಯೇ ಏರ್ಪಾಡುಗಳನ್ನು ಮಾಡಬೇಕು. ನಾವು ಮಾಡುವ ಯಾವುದೇ ಪ್ರಯತ್ನವು ಸಾರ್ಥಕವೇ ಸರಿ!
4 ಯೆಹೋವನ ಜನರು ಅಧಿವೇಶನಕ್ಕೆ ಹಾಜರಾಗುವುದರಿಂದ ಸಿಗುವ ಆಶೀರ್ವಾದಗಳನ್ನು ರೂಪಾಯಿಗಳು ಮತ್ತು ಪೈಸೆಗಳ ರೂಪದಲ್ಲಿ ಅಳೆಯುವುದಿಲ್ಲ. ನ್ಯೂ ಯಾರ್ಕ್ ಸಿಟಿಯಲ್ಲಿ ನಡೆದ 1958ರ ಯೆಹೋವನ ಸಾಕ್ಷಿಗಳ ದೈವಿಕ ಚಿತ್ತ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಹಾಜರಾಗಲು ದೃಢಚಿತ್ತದಿಂದಿದ್ದ ಕೆಲವರ ಉದಾಹರಣೆಗಳನ್ನು ಗಮನಿಸಿ. ಒಬ್ಬ ಸಹೋದರನು ಸಮ್ಮೇಳನಕ್ಕೆ ಹಾಜರಾಗಲು ಮತ್ತು ಅಲ್ಲಿ ಸ್ವಯಂ ಸೇವೆಮಾಡಲು ತನ್ನ ಕನ್ಸ್ಟ್ರಕ್ಷನ್ ಕೆಲಸವನ್ನು ಎರಡು ವಾರಗಳ ವರೆಗೆ ನಿಲ್ಲಿಸಿಬಿಟ್ಟನು. ವರ್ಜಿನ್ ಐಲೆಂಡ್ಸ್ನ ಒಬ್ಬ ಸಹೋದರನು, ಆರು ಮಂದಿಯಿಂದ ಕೂಡಿದ್ದ ತನ್ನ ಕುಟುಂಬವು ಸಮ್ಮೇಳನಕ್ಕೆ ಹಾಜರಾಗುವಂತೆ ಐದು ಎಕರೆ ಜಮೀನನ್ನು ಮಾರಿಬಿಟ್ಟನು. ಒಬ್ಬ ಯುವ ದಂಪತಿಯು, ಎರಡು ತಿಂಗಳ ಪ್ರಾಯದಿಂದ ಏಳು ವರ್ಷ ಪ್ರಾಯದ ವರೆಗಿನ ತಮ್ಮ ಮೂರು ಮಂದಿ ಮಕ್ಕಳೊಂದಿಗೆ ಸಮ್ಮೇಳನಕ್ಕೆ ಹೋಗಲಿಕ್ಕಾಗಿ ತಮ್ಮ ಮೋಟಾರ್ಬೋಟನ್ನು ಮಾರಿಬಿಟ್ಟರು. ಕ್ಯಾಲಿಫೋರ್ನಿಯದ ಮೂವರು ಒಡಹುಟ್ಟಿದ ಸಹೋದರರಿಗೆ, ಅವರು ಕೆಲಸಕ್ಕೆ ಬರದಿದ್ದಲ್ಲಿ, ಹಿಂದಿರುಗಿ ಬಂದಾಗ ಆ ಕೆಲಸಗಳು ಅವರಿಗೆ ಸಿಗುವುದಿಲ್ಲ ಎಂದು ಹೇಳಲಾಯಿತು. ಆದರೆ, ಇದು ಅವರು ಆ ಅವಿಸ್ಮರಣೀಯ ಸಮ್ಮೇಳನಕ್ಕೆ ಹೋಗುವುದರಿಂದ ಅವರನ್ನು ತಡೆಗಟ್ಟಲಿಲ್ಲ.
5 ನಮ್ಮ ಮನಃಪೂರ್ವಕ ಪ್ರಯತ್ನಕ್ಕೆ ಯೆಹೋವನು ಪ್ರತಿಫಲವನ್ನು ಕೊಡುತ್ತಾನೆ: ಯೆಹೋವನು ತನ್ನ ಜನರ ಪ್ರಯತ್ನಗಳನ್ನು ನೋಡುತ್ತಾನೆ ಮತ್ತು ಆಶೀರ್ವದಿಸುತ್ತಾನೆ. (ಇಬ್ರಿ. 6:10) ಉದಾಹರಣೆಗಾಗಿ, 1950ರ ದೇವಪ್ರಭುತ್ವದ ಅಭಿವೃದ್ಧಿ ಸಮ್ಮೇಳನಕ್ಕೆ ಹಾಜರಾದವರು, “ಹೊಸ ವಿಷಯಗಳ ವ್ಯವಸ್ಥೆಗಳು” ಎಂಬ ಮುಖ್ಯ ಭಾಷಣವನ್ನು ಕೇಳಿಸಿಕೊಂಡರು. ಸಹೋದರ ಫ್ರೆಡ್ರಿಕ್ ಫ್ರಾನ್ಸ್ ಎಲ್ಲರ ಆಸಕ್ತಿಯನ್ನು ಕೆರಳಿಸುತ್ತಾ, ಉತ್ತೇಜಿಸುತ್ತಾ ಕೇಳಿದ್ದು: “ಇವತ್ತು ರಾತ್ರಿ, ನೂತನ ಲೋಕದ ಅನೇಕ ಭಾವೀ ಪ್ರಭುಗಳು ನಮ್ಮ ಮಧ್ಯೆ ಇದ್ದಾರೆ ಎಂಬುದನ್ನು ಈ ಅಂತಾರಾಷ್ಟ್ರೀಯ ಸಮ್ಮೇಳನವು ಕೇಳಿಸಿಕೊಳ್ಳಲು ಸಂತೋಷಪಡುವುದೋ?” 50 ವರ್ಷಗಳು ಕಳೆದುಹೋಗಿವೆ, ಆದರೆ ನಾವು ಇನ್ನೂ ಕೀರ್ತನೆ 45:16ರ ಈ ಸ್ಪಷ್ಟಪಡಿಸಲ್ಪಟ್ಟ ತಿಳಿವಳಿಕೆಯಲ್ಲಿ ಆನಂದಿಸುತ್ತಿದ್ದೇವೆ.
6 ಕಳೆದ ವರ್ಷದ ಜಿಲ್ಲಾ ಅಧಿವೇಶನಕ್ಕೆ ಹಾಜರಾದ ನಂತರ, ಒಬ್ಬ ಕುಟುಂಬದ ತಲೆಯು ಈ ಮುಂದಿನ ಮಾತುಗಳನ್ನು ಬರೆಯುತ್ತಾ ತನ್ನ ಗಣ್ಯತೆಯನ್ನು ವ್ಯಕ್ತಪಡಿಸಿದನು: “ಸಹೋದರರೇ, ಈ ಅಧಿವೇಶನವು ಎಷ್ಟು ಜೀವರಕ್ಷಕವಾಗಿತ್ತು ಎಂಬುದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ನೌಕರಿಯ ಕಾರಣಗಳಿಗಾಗಿ ನನ್ನ ಕುಟುಂಬವು ಪಟ್ಟಣಕ್ಕೆ ವಲಸೆಹೋಯಿತು, ಆದರೆ ಅಲ್ಲಿ ನಮ್ಮ ಆತ್ಮಿಕತೆಯು ಕುಸಿದುಹೋಗುತ್ತಿರುವುದನ್ನು ನಾವು ಕಂಡುಕೊಂಡೆವು. . . . ನಾವು ನಮ್ಮ ಕ್ರೈಸ್ತ ಕರ್ತವ್ಯಗಳನ್ನು ಬದಿಗೊತ್ತಿದೆವು. ನಾವು ಕೂಟಗಳಿಗೆ ಹಾಜರಾಗುವುದನ್ನು ಮತ್ತು ಸೇವೆಯಲ್ಲಿ ಪಾಲ್ಗೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದ್ದೆವು. . . . ಈ ಅಧಿವೇಶನವು ನಮ್ಮನ್ನು ಪುನರುಜ್ಜೀವಿಸಿದೆ, ಹಾಗೂ ಮತ್ತೊಮ್ಮೆ ನಾವು ಆತ್ಮಿಕ ಗುರಿಗಳನ್ನು ಇಡುತ್ತಿದ್ದೇವೆ ಮತ್ತು ಅವುಗಳನ್ನು ಸಾಧಿಸಲಿಕ್ಕಾಗಿ ನಮ್ಮನ್ನೇ ಸಂಘಟಿಸಿಕೊಳ್ಳುತ್ತಿದ್ದೇವೆ.”
7 ನಮಗೆ ಅಗತ್ಯವಿರುವ ಆತ್ಮಿಕ ಆಹಾರವನ್ನು ಯೆಹೋವನು ಒದಗಿಸುತ್ತಿದ್ದಾನೆ. ಆತನು ಮೃಷ್ಟಾನ್ನ ಭೋಜನಗಳಿಂದ ಕೂಡಿದ ಒಂದು ಮೇಜನ್ನು ನಮ್ಮ ಅಧಿವೇಶನಗಳಲ್ಲಿ ಸಿದ್ಧಪಡಿಸುತ್ತಾನೆ. ಈ ಒದಗಿಸುವಿಕೆಗಾಗಿರುವ ನಮ್ಮ ಗಣ್ಯತೆಯು, ಅಪೊಸ್ತಲ ಪೇತ್ರನು ಕೊರ್ನೇಲ್ಯನನ್ನು ಸಂದರ್ಶಿಸಿದಾಗ, ಕೊರ್ನೇಲ್ಯನು ಏನು ಹೇಳಿದನೋ ಅದನ್ನೇ ಹೇಳುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡಬೇಕು: “ಕರ್ತನು [“ಯೆಹೋವನು,” NW] ನಿನಗೆ ಅಪ್ಪಣೆಕೊಟ್ಟಿರುವ ಎಲ್ಲಾ ಮಾತುಗಳನ್ನು ಕೇಳುವದಕ್ಕೆ ನಾವೆಲ್ಲರು ಈಗ ದೇವರ ಸನ್ನಿಧಾನದಲ್ಲಿ ಕೂಡಿದ್ದೇವೆ.” (ಅ. ಕೃ. 10:33) ಆದುದರಿಂದ, “ದೇವರ ಸನ್ನಿಧಾನದಲ್ಲಿ” ಕೂಡಿಬಂದು, ಈ ವರ್ಷದ “ದೇವರ ವಾಕ್ಯದ ಬೋಧಕರು” ಜಿಲ್ಲಾ ಅಧಿವೇಶನದ ಪ್ರತಿಯೊಂದು ಸೆಷನ್ಗೆ ಹಾಜರಾಗುವುದನ್ನು ನಮ್ಮ ಗುರಿಯನ್ನಾಗಿ ಮಾಡಿಕೊಳ್ಳೋಣ ಮತ್ತು ಸಂತೋಷಿಸೋಣ!